
ಮಹಾಮನೆಯ ಕಟ್ಟಿದ ಬಸವಣ್ಣ
ಮಾನವನ ಮೂಲಭೂತ ಅವಶ್ಯಕತೆಗಳಲ್ಲಿ ಮನೆಯೂ ಒಂದು. ಹಕ್ಕಿ-ಪಕ್ಷಿಗಳು ಸಹ ತಮ್ಮದೇ ಆದ ಮನೆ ಕಟ್ಟಿಕೊಳ್ಳುತ್ತವೆ. ಒಂದು ಗುಬ್ಬಿ ಎಲ್ಲೆಲ್ಲಿಂದಲೋ ತೆಂಗಿನ ನಾರು, ಕಡ್ಡಿ, ಗರಿಕೆ ಹುಲ್ಲು ಹೀಗೆ ಏನೇನೋ ತಂದು ಬಾವಿಯ ದಡದಲ್ಲಿರುವ ಮರದ ತುದಿಗೆ ಒಂದು ಬೆಚ್ಚನೆಯ ಸುಂದರ ಗೂಡು ಕಟ್ಟುವುದು. ಅಂಥ ಗೂಡು ಕಟ್ಟಲು ಯಾವ ತಂತ್ರಜ್ಞರಿಂದಲೂ ಸಾಧ್ಯವಾಗದು. ಹಾಗಂತ ಗುಬ್ಬಿ ಎಂಜನಿಯರಿಂಗ್ ಓದಿಲ್ಲ. ಮನೆ ಕಟ್ಟುವ ತಂತ್ರಜ್ಞಾನ ಅದಕ್ಕೆ ಗೊತ್ತಿಲ್ಲ. ಅದು ಕಟ್ಟಿದ ಗೂಡಿನಲ್ಲಿ ಮೊಟ್ಟೆಗಳನ್ನಿಟ್ಟು ಸಂರಕ್ಷಿಸುವುದು. ಮಳೆ, ಚಳಿ, ಬಿಸಿಲು ಈ ಯಾವ ಭಯವೂ ಮೊಟ್ಟೆಯಿಂದ ಹೊರಬಂದ ಮರಿಗೆ ತಟ್ಟುವುದಿಲ್ಲ. ಗುಬ್ಬಿಯೇ ಇಷ್ಟೊಂದು ಸುಂದರ ಮನೆ ಕಟ್ಟುವಾಗ ಮಾನವರಿಗೆ ಮನೆ ಬೇಡವೆಂದರೆ ಹೇಗೆ? ತಂತ್ರಜ್ಞಾನ ಬದಲಾದಂತೆ ಮನೆಯ ವಿನ್ಯಾಸಗಳೂ ಬದಲಾಗುತ್ತಲೇ ಇವೆ. ಹುಲ್ಲು, ಹಂಚು, ತಗಡು, ಮಾಳಿಗೆ ಮನೆಗಳು ಇಂದು ವಿರಳವಾಗುತ್ತಿವೆ. ಎಲ್ಲೆಡೆ ಆರ್ಸಿಸಿ, ಕಲ್ಲು ಮತ್ತಿತರ ಮನೆಗಳು ಮೈದಾಳುತ್ತಿವೆ. ಮನೆಗೆ ಮಾಡುವ ಖರ್ಚಿಗೆ ಸಹ ಮಿತಿ ಇಲ್ಲವಾಗಿದೆ. ಮನೆ ದೊಡ್ಡದೊ, ಸಣ್ಣದೊ ಎನ್ನುವುದು ಮುಖ್ಯ ಅಲ್ಲ. ಮನೆಯಲ್ಲಿರುವ ಜನರ ಮನಸ್ಸು ಹೇಗಿರಬೇಕು ಎನ್ನುವುದು ಗಮನಿಸಬೇಕಾದ ಸಂಗತಿ. ಈ ನಿಟ್ಟಿನಲ್ಲಿ ಎಂಥ ಮನೆ ಕಟ್ಟಬೇಕು?
ಬಸವಣ್ಣನವರೂ ಒಂದು ಮನೆ ಕಟ್ಟಿದ್ದರು. ಅದು ಎಂತಹ ಮನೆ!
ಕರ್ತನಟ್ಟಿದಡೆ ಮತ್ರ್ಯದಲ್ಲಿ ಮಹಾಮನೆಯ ಕಟ್ಟಿದೆ,
ಸತ್ಯಶರಣರಿಗೆ ತೊತ್ತು ಭೃತ್ಯನಾಗಿ ಸವೆದು ಬದುಕಿದೆನು.
ಕರ್ತನ ಬೆಸನು ಮತ್ತೆ ಬರಲೆಂದಟ್ಟಿದಡೆ,
ಕೂಡಲಸಂಗಮದೇವರ ನಿರೂಪಕ್ಕೆ ಮಹಾಪ್ರಸಾದವೆಂದೆನು.
ಭಗವಂತ ಎಲ್ಲರ ಹಾಗೆ ಬಸವಣ್ಣನವರನ್ನೂ ಈ ಭೂಲೋಕಕ್ಕೆ ಕಳುಹಿಸಿದ್ದರು. ಭೂಲೋಕಕ್ಕೆ ಬಂದ ಬಸವಣ್ಣನವರು ಕಟ್ಟಿದ್ದು `ಮಹಾಮನೆ’. ಆ ಮನೆಯಲ್ಲಿ ಭೃತ್ಯಾಚಾರಿಯಾಗಿ ಸೇವಕನಂತೆ ಬದುಕಿದರು. ಯಾರಿಗೆ ಸೇವಕ? ಅದಕ್ಕೆ ಅವರದೇ ಉತ್ತರ `ಸತ್ಯಶರಣರಿಗೆ’ ಎನ್ನುವುದು. ಮನುಷ್ಯ ತಲೆಬಾಗಬೇಕು. ಭೃತ್ಯಾಚಾರಿಯಾಗಿ ನಡೆದುಕೊಳ್ಳಬೇಕು. ತನ್ನೆದುರು ಇದ್ದವರು ಸತ್ಯಶರಣರ ಜೀವನ ಸಾಗಿಸುತ್ತಿದ್ದಾಗ, ಅವರಿಗೆ ತಮ್ಮ ದೇಹ, ಬುದ್ಧಿಯನ್ನೇ ಸವೆಸಿದರೂ ಸಾರ್ಥಕ ಎನ್ನುವ ಭಾವನೆ. ಅದರಿಂದ ಬದುಕು ಕಳೆಗಟ್ಟುವುದು. ಭಗವಂತ ಸಾಕು ನೀನಿನ್ನು ಬಾ ಎಂದರೆ ಈ ಮಹಾಮನೆಯನ್ನು ಬಿಟ್ಟು ಮಹಾಪ್ರಸಾದ ಎಂದು ಖುಷಿಯಿಂದ ಹೊರಟೆ ಎನ್ನುವ ಮಾತು ಪ್ರತಿಯೊಬ್ಬರಿಗೂ ಆದರ್ಶವಾಗಬೇಕಿದೆ. ಯಾರೇನು ಚಿರಂಜೀವಿಗಳಲ್ಲ. ಶಿವನ ಕರೆ ಬಂದಾಗ ಇದ್ದುದೆಲ್ಲವ ಬಿಟ್ಟು ಹೋಗಲೇಬೇಕು. ಹೋಗುವಾಗ ನಾಲ್ಕು ಮಂದಿಯ ಬಾಯಲ್ಲಿ ಇರಬೇಕು. ಅಂದರೆ ಮನುಷ್ಯ ಈ ಜಗತ್ತಿನಲ್ಲಿ ಕಮಲದೋಪಾದಿ ಜೀವನ ಸಾಗಿಸಬೇಕು. ಕಮಲ ನೀರಿನಲ್ಲೇ ಇದ್ದರೂ ನೀರಿಗೆ ಅಂಟಿಕೊಳ್ಳದ ಬದುಕು ಸಾಗಿಸುವುದು.
ಪ್ರತಿಯೊಬ್ಬರೂ ಹೇಳುವುದು `ನಿರ್ಲಿಪ್ತರಾಗಿರಬೇಕು’ ಎಂದು. ಹೀಗೆ ಹೇಳುವುದು ಸುಲಭ, ಬಾಳುವುದು ಕಷ್ಟ. ಅನೇಕ ರೀತಿಯ ಭವಬಂಧನಗಳು ಮಾನವರನ್ನು ಮುತ್ತಿಕೊಳ್ಳುವವು. ಅವುಗಳಿಂದ ಬಿಡಿಸಿಕೊಳ್ಳುವುದು ಕಷ್ಟಸಾಧ್ಯ. ಹೊನ್ನು, ಹೆಣ್ಣು, ಮಣ್ಣು ಮನುಷ್ಯನನ್ನು ಕಾಡುತ್ತಲೇ ಇರುತ್ತವೆ. ಆದರೆ ಬಸವಣ್ಣನವರಂತಹ ಮಹಾಚೇತನಗಳು ಹೇಳುವುದನ್ನು ನೋಡಿ: `ಹೊನ್ನು ಹೆಣ್ಣು ಮಣ್ಣೆಂಬ ಕರ್ಮದ ಬಲೆಯಲ್ಲಿ ಸಿಲುಕಿ, ವೃಥಾಯ ಬರುದೊರೆ ಹೋಹ ಕೆಡುಕ ಹಾರುವ ನಾನಲ್ಲ!’ ಅವರಿಗೆ ಇಂಥ ಎದೆಗಾರಿಕೆ ಬರಲು ಕಾರಣ ಸತ್ಯಶರಣರ ಒಡನಾಟದಲ್ಲಿ ಇದ್ದದ್ದು. ಮನುಷ್ಯನಿಗೆ ಸಂಗ ತುಂಬಾ ಮುಖ್ಯ. ಬಸವಣ್ಣನವರು ಸಂಗ ಎರಡುಂಟು; ಒಂದನ್ನು ಹಿಡಿಯಬೇಕು, ಒಂದನ್ನು ಬಿಡಬೇಕು ಎಂದು `ಸಾರ ಸಜ್ಜನರ ಸಂಗ ಲೇಸು ಕಂಡಯ್ಯಾ, ದೂರ ದುರ್ಜನರ ಸಂಗವದು ಭಂಗವಯ್ಯಾ’ ಎನ್ನುವರು. ಸಜ್ಜನರ ಸಂಗ ಹೆಜ್ಜೇನು ಸವಿದಂತೆ, ದುರ್ಜನರ ಸಂಗ ಬಚ್ಚಲ ನೀರ ಮಿಂದಂತೆ. ಮತ್ತೊಂದೆಡೆ ದುರ್ಜನರ ಸಂಗ ಕಾರ್ಕೋಟಕ ವಿಷ ಎನ್ನುವರು. ಅದು ಯಾರನ್ನು ಬೇಕಾದರೂ ನಾಶ ಮಾಡಬಲ್ಲುದು. ಅದೇ ಸಜ್ಜನರ ಸಂಗ ಎಂಥವರನ್ನೂ ಪರಿವರ್ತಿಸಬಲ್ಲದು. 12ನೆಯ ಶತಮಾನದಲ್ಲಿ ಬಸವಾದಿ ಶಿವಶರಣರು ಅನುಭವ ಮಂಟಪ ಮತ್ತು ಮಹಾಮನೆಯ ಮೂಲಕ ಅದ್ಭುತ ಬದಲಾವಣೆ ತಂದದ್ದು ಇತಿಹಾಸದ ಸಿಂಹಾವಲೋಕನದಿಂದ ವೇದ್ಯವಾಗುವುದು. ಸೂಳೆಯಾಗಿದ್ದ ಸಂಕವ್ವೆ, ಕಳ್ಳನಾಗಿದ್ದ ಚಿಕ್ಕಯ್ಯ, ಹೆಂಡ ಮಾರುತ್ತಿದ್ದ ಮಾರಯ್ಯ ಹೀಗೆ ಅನೇಕ ಜನರು ಅನುಭವ ಮಂಟಪದ ಸಂಪರ್ಕದಿಂದ ಶರಣತ್ವ ಮೈಗೂಡಿಸಿಕೊಂಡು ಬದುಕನ್ನು ಸಾರ್ಥಕಪಡಿಸಿಕೊಂಡರು. ಈ ದಿಶೆಯಲ್ಲಿ ಬಸವಣ್ಣನವರ ಸಂದೇಶ ಮನನೀಯವಾಗಿದೆ.
ದೂಷಕನವನೊಬ್ಬ ದೇಶವ ಕೊಟ್ಟಡೆ,
ಆಸೆಮಾಡಿ ಅವನ ಹೊರೆಯಲಿರಬೇಡ.
ಮಾದಾರ ಶಿವಭಕ್ತನಾದಡೆ,
ಆತನ ಹೊರೆಯಲು ಭೃತ್ಯನಾಗಿಪ್ಪುದು ಕರ ಲೇಸಯ್ಯಾ,
ತೊತ್ತಾಗಿಪ್ಪುದು ಕರ ಲೇಸಯ್ಯಾ.
ಕಾಡ ಸೊಪ್ಪು ತಂದು ಓಡಿನಲ್ಲಿ ಹುರಿದಿಟ್ಟು,
ಕೂಡಿಕೊಂಡಿಪ್ಪುದು ನಮ್ಮ ಕೂಡಲಸಂಗನ ಶರಣರ.
ಎಂಥವರ ಒಡನಾಟದಲ್ಲಿರಬೇಕು ಎನ್ನುವುದನ್ನೇ ಬಸವಣ್ಣನವರು ಮತ್ತೆ ಮತ್ತೆ ಪ್ರಸ್ತಾಪ ಮಾಡುವರು. ಕೆಲವರು ಇನ್ನಿಲ್ಲದ ಆಸೆ ತೋರಿಸುವುದುಂಟು. ಹಾಗೆ ಆಸೆ ತೋರಿಸುವ ವ್ಯಕ್ತಿ ಸಭ್ಯ, ಸಜ್ಜನ, ಸಾತ್ವಿಕ ಮತ್ತು ಶರಣ ಮಾರ್ಗದಲ್ಲಿ ನಡೆಯುವವನಾಗಿದ್ದರೆ ಸ್ವಾಗತಾರ್ಹ. ಅವನು ಆ ಗುಣಗಳಿಗೆ ಹೊರತಾಗಿದ್ದರೆ ಅಂಥವನು ಒಂದು ದೇಶವನ್ನೇ ಕೊಡುತ್ತೇನೆ ಎಂದರೂ ಅದಕ್ಕೆ ಆಸೆಪಡದೆ ದೂರವಿರಬೇಕು. ಅದೇ ಸಾಮಾನ್ಯರಲ್ಲಿ ಸಾಮಾನ್ಯನಾದ ಮಾದಾರ ಚೆನ್ನಯ್ಯ ಶಿವಭಕ್ತ. ಆತನ ಸಂಪರ್ಕದಲ್ಲಿದ್ದು ಅವನ ಸೇವೆ ಮಾಡಿದರೂ ಒಳಿತಾಗುವುದು. ಶರಣರು ಒತ್ತಿ ಹೇಳಿದ್ದು ಇಷ್ಟಲಿಂಗ ನಿಷ್ಠೆ, ಕಾಯಕ ತತ್ವ ಮತ್ತು ದಾಸೋಹ ಪ್ರಜ್ಞೆಯನ್ನು. ಚೆನ್ನಯ್ಯ ಇಷ್ಟಲಿಂಗನಿಷ್ಠೆಯನ್ನು ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಂಡಿದ್ದವರು. ಕಾಯಕವೆ ಕೈಲಾಸ ಎಂದು ನಂಬಿ ಅದನ್ನು ಬದುಕಿನಲ್ಲಿ ಅನುಷ್ಠಾನಕ್ಕೆ ತಂದವರು. ಅಂಬಲಿಯ ದಾಸೋಹದ ಮೂಲಕ ದಾಸೋಹ ಪ್ರಜ್ಞೆಯನ್ನು ಅಳವಡಿಸಿಕೊಂಡವರು. ಅಂಥವರ ಆಳಾಗಿ ಸೇವೆ ಮಾಡಿದರೆ ಬದುಕು ಸಾರ್ಥಕವಾಗುವುದು ಎನ್ನುವ ಭಾವನೆ ಬಸವಣ್ಣನವರದು. ಹಾಗಾಗಿ ಅವರು `ಕಾಡ ಸೊಪ್ಪು ತಂದು ಓಡಿನಲ್ಲಿ ಹುರಿದಿಟ್ಟು, ಕೂಡಿಕೊಂಡಿಪ್ಪುದು ನಮ್ಮ ಕೂಡಲಸಂಗನ ಶರಣರ’ ಎನ್ನುವರು. ಅಂದರೆ ಮತ್ತೊಬ್ಬರ ಸೊತ್ತಿಗೆ ಆಸೆಪಡದೆ ತಾನೇ ದುಡಿದು ಉಣ್ಣಬೇಕು. ಅದು ಕಾಡಿನ ಸೊಪ್ಪಾದರೂ ಚಿಂತೆಯಿಲ್ಲ ಎನ್ನುವ ಮಾತು ಕಾಯಕದ ಮಹತ್ವ ಮನಗಾಣಿಸುವುದು. ಶರಣರು ಕೇವಲ ವಿಚಾರಕ್ಕೆ ಮಾನ್ಯತೆ ನೀಡಿದವರಲ್ಲ. ಅವರು ವಿಚಾರದಂತೆ ಆಚಾರಕ್ಕೂ ಒತ್ತು ಕೊಟ್ಟವರು. ಕೆಲವರು ಶರಣರ ವಿಚಾರಗಳನ್ನು ತುಂಬಾ ಪರಿಣಾಮಕಾರಿಯಾಗಿ ಪ್ರತಿಪಾದಿಸುವರು. ಅವರು ಇಷ್ಟಲಿಂಗ, ವಿಭೂತಿ, ಸದಾಚಾರ, ಕಾಯಕ, ಭೃತ್ಯಾಚಾರ ಇತ್ಯಾದಿ ಸಂಗತಿಗಳನ್ನು ಕಂಠಸ್ಥವಾಗಿಸಿಕೊಂಡಿರುತ್ತಾರೆ. ಆದರೆ ಆ ತತ್ವಗಳು ಅವರ ಆಚರಣೆಯಲ್ಲಿರುವುದಿಲ್ಲ. ಅವರು ಇಷ್ಟಲಿಂಗ ಏಕೆ ಧರಿಸಬೇಕು ಎಂದು ಪ್ರಶ್ನಿಸುವರು. ಪಂಚಾಚಾರಗಳಿಂದ ಹೊರತಾಗಿರುವರು. ಅಂಥವರಿಗೆ ಛೀಮಾರಿ ಹಾಕುವರು ಬಸವಣ್ಣನವರು.
ಲಿಂಗಾಂಗಿಗಳಲ್ಲದವರ, ಶರಣಸಂಗವಿಲ್ಲದವರ
ಕಂಡಡೆ ನಾಚುವೆ.
ಅವರ ನುಡಿ ಎನಗೆ ಸಮನಿಸದಯ್ಯಾ ಕೂಡಲಸಂಗಮದೇವಾ,
ನೀನು ಅಲ್ಲಿ ಇಲ್ಲದ ಕಾರಣ.
ಬಸವತತ್ವ ಒಪ್ಪಿದವರು ತಮ್ಮ ಅಂಗದ ಮೇಲೆ ಇಷ್ಟಲಿಂಗವನ್ನು ಧರಿಸಿ ಅದನ್ನೇ ನಿತ್ಯ ಪೂಜಿಸಬೇಕು. ಸ್ಥಾವರ ಗುಡಿಗಳ ಹಂಗಿನಿಂದ ಮುಕ್ತರಾಗಬೇಕು. ದುರ್ಜನರಿಂದ ದೂರವಿದ್ದು ಸಜ್ಜನರ ಸಹವಾಸದಲ್ಲಿ ಕಾಲದ ಸದುಪಯೋಗ ಮಾಡಿಕೊಳ್ಳಬೇಕು. ಹಾಗಿಲ್ಲದೆ ಕೇವಲ ನುಡಿ ಜಾಣರಾಗಿದ್ದರೆ ಅಂತಹವರ ನುಡಿ ನನಗೆ ಒಪ್ಪಿಗೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸುವರು. ಕಾರಣ ಅವರ ಅಂತರಂಗದಲ್ಲಿ ಆ ಶಿವಚೈತನ್ಯವೇ ಇರುವುದಿಲ್ಲ. ಬದುಕು ಕಳಾಯುಕ್ತವಾಗಬೇಕು ಎಂದರೆ ನಡೆ ನುಡಿ ಶುದ್ಧವಾಗಿರಬೇಕು. ಅಂತರಂಗ ಬಹಿರಂಗ ಒಂದಾಗಿರಬೇಕು. ನುಡಿಯೇ ಒಂದು, ನಡೆಯೇ ಮತ್ತೊಂದು ಆಗಿದ್ದರೆ ಅದು ಆತ್ಮವಂಚನೆ, ಆತ್ಮದ್ರೋಹವಾಗುವುದು. ನುಡಿಯೊಳಗಾಗಿ ನಡೆಯುವುದು ಮುಖ್ಯ. ಹಾಗಾಗಿಯೇ ಬಸವಣ್ಣನವರು `ಭಕ್ತಿಸುಭಾಷೆಯ ನುಡಿಯ ನುಡಿಯುವೆ, ನುಡಿದಂತೆ ನಡೆಯುವೆ’ ಎನ್ನುವರು. ನನ್ನ ನಡೆ ನುಡಿಯಲ್ಲಿ ಕಿಂಚಿತ್ ವ್ಯತ್ಯಾಸ ಕಂಡರೂ ತುಳಿದುಹಾಕು ಎಂದು ದೇವರಿಗೆ ಸವಾಲೊಡ್ಡುವರು. ಬಸವಣ್ಣನವರ ಬದುಕು ಪಾರದರ್ಶಕವಾಗಿತ್ತು. ಅದರಿಂದಲೇ ಅವರು ಅಲ್ಪಾವಧಿಯಲ್ಲಿ ಕಲ್ಯಾಣದಲ್ಲಿ ಅದ್ಭುತ ಪರಿವರ್ತನೆ ತರಲು ಸಾಧ್ಯವಾಯಿತು. ಬಸವಣ್ಣನವರು ಸದಾಚಾರಿಗಳನ್ನು ಭಕ್ತರೆಂದು, ದುರಾಚಾರಿಗಳನ್ನು ಭವಿಗಳೆಂದು ಗುರುತಿಸುತ್ತಿದ್ದರು. ಭವಿಗಳನ್ನು ಸಹ ಭಕ್ತರನ್ನಾಗಿಸುವುದು ಅವರ ಕಾಯಕವಾಗಿತ್ತು. ಇಂದು ಬಸವಮಾರ್ಗ ಎಲ್ಲರ ಆದರ್ಶವಾಗಬೇಕಿದೆ. ಬಸವಣ್ಣನವರದು ಯಾವಾಗಲೂ ಬಾಗುವ ಗುಣ. `ಕಂಡ ಭಕ್ತರಿಗೆ ಕೈ ಮುಗಿಯುವಾತನೆ ಭಕ್ತ’ ಎನ್ನುವ ನಂಬಿಕೆ ಅವರಲ್ಲಿತ್ತು. `ಮೃದುವಚನವೆ ಸಕಲ ಜಪಂಗಳಯ್ಯಾ’ ಎಂದು ನಂಬಿ ಅಂಥ ಮಾತುಗಳನ್ನೇ ಆಡುತ್ತಿದ್ದರು. ಅವರಿಗೆ `ಮೃದುವಚನವೆ ಸಕಲ ತಪಂಗಳಯ್ಯಾ’ ಎನ್ನುವ ಭಾವವಿತ್ತು. `ಸದುವಿನಯವೆ ಸದಾಶಿವನ ಒಲುಮೆಯಯ್ಯಾ’ ಎಂದು ವಿನಯ, ವಿವೇಕದಿಂದ ನಡೆದುಕೊಳ್ಳುತ್ತಿದ್ದರು. ಇದೇ ದಾರಿಯಲ್ಲಿ ಇತರ ಶರಣ ಶರಣೆಯರೂ ನಡೆದುಕೊಳ್ಳುವ ವಾತಾವರಣ ಕಲ್ಪಿಸಿದ್ದರು.
ಇಂದೆನ್ನ ಮನೆಗೆ ಒಡೆಯರು ಬಂದಡೆ
ತನುವೆಂಬ ಕಳಸದಲುದಕವ ತುಂಬಿ,
ಕಂಗಳ ಸೋನೆಯೊಡನೆ ಪಾದಾರ್ಚನೆಯ ಮಾಡುವೆ.
ನಿತ್ಯ ಶಾಂತಿಯೆಂಬ ಶೈತ್ಯದೊಡನೆ ಸುಗಂಧವ ಪೂಸುವೆ.
ಅಕ್ಷಯ ಸಂಪದವೆಂದರಿದು ಅಕ್ಷತೆಯನೇರಿಸುವೆ.
ಹೃದಯಕಮಲ ಪುಷ್ಟದೊಡನೆ ಪೂಜೆಯ ಮಾಡುವೆ.
ಸದ್ಭಾವನೆಯೊಡನೆ ಧೂಪವ ಬೀಸುವೆ.
ಶಿವಜ್ಞಾನ ಪ್ರಕಾಶದೊಡನೆ ಮಂಗಳಾರತಿಯನೆತ್ತುವೆ.
ನಿತ್ಯತೃಪ್ತಿಯೊಡನೆ ನೈವೇದ್ಯವ ಕೈಕೊಳಿಸುವೆ.
ಪರಿಣಾಮದೊಡನೆ ಕರ್ಪೂರ ವೀಳೆಯವ ಕೊಡುವೆ.
ಪಂಚಬ್ರಹ್ಮದೊಡನೆ ಪಂಚಮಹಾವಾದ್ಯವ ಕೇಳಿಸುವೆ.
ಹರುಷದೊಡನೆ ನೋಡುವೆ,
ಆನಂದದೊಡನೆ ಕುಣಿಕುಣಿದಾಡುವೆ,
ಪರವಶದೊಡನೆ ಹಾಡುವೆ, ಭಕ್ತಿಯೊಡನೆ ಎರಗುವೆ.
ನಿತ್ಯದೊಡನೆ ಕೂಡಿ ಆಡುವೆ.
ಚೆನ್ನಮಲ್ಲಿಕಾಜುನಾ, ನಿಮ್ಮ ನಿಲವ ತೋರಿದ ಗುರುವಿನಡಿಯಲ್ಲಿ ಅರಗಾಗಿ ಕರಗುವೆ.
ಅಕ್ಕಮಹಾದೇವಿ ತನ್ನ ಮನೆಗೆ ಬರುವ ಒಡೆಯರನ್ನು ಹೇಗೆ ಕಾಣುವೆ ಎಂದು ವಿವರವಾಗಿ ತಿಳಿಸಿದ್ದಾರೆ. ಅಕ್ಕನ ಆದರ್ಶ ಕಲ್ಯಾಣದ ಪ್ರತಿಯೊಬ್ಬ ಶರಣ ಶರಣೆಯರ ಆದರ್ಶವಾಗಿತ್ತು. ಹಾಗಾಗಿ ಬಸವಣ್ಣನವರು ಎಂಥ ಮನೆಯನ್ನು ಕಟ್ಟಿದ್ದರು ಎನ್ನುವುದನ್ನು ಸಿದ್ಧರಾಮೇಶ್ವರರು ತಮ್ಮ ವಚನದಲ್ಲಿ ಹೇಳುತ್ತಾರೆ. `ನಿಮ್ಮ ಸಂಗನಬಸವಣ್ಣ ಬಂದು ಕಲ್ಯಾಣದಲ್ಲಿ ಮನೆಯ ಕಟ್ಟಿದಡೆ, ಮತ್ರ್ಯಲೋಕವೆಲ್ಲವು ಭಕ್ತಿಸಾಮ್ರಾಜ್ಯವಾಯಿತ್ತು. ಆ ಮನೆಗೆ ತಲೆವಾಗಿ ಹೊಕ್ಕವರೆಲ್ಲರು ನಿಜಲಿಂಗ ಫಲವ ಪಡೆದರು. ಆ ಗೃಹವ ನೋಡಬೇಕೆಂದು ನಾನು ಹಲವು ಕಾಲ ತಪಸಿದ್ದೆನು, ಕಪಿಲಸಿದ್ಧಮಲ್ಲಿನಾಥಾ, ನಿಮ್ಮ ಶರಣ ಸಂಗನಬಸವಣ್ಣನ ಮಹಾಮನೆಗೆ ನಮೊ ನಮೊ ಎಂದು ಬದುಕಿದೆನು’.
ಹೌದು ಬಸವಣ್ಣನವರು ಕಟ್ಟಿದ ಮಹಾಮನೆಗೆ ಅಂಥ ಶಕ್ತಿ ಇತ್ತು. ಹಾಗಾಗಿ ಕನ್ನಡ ನಾಡಿನ ನಾನಾ ಮೂಲೆಗಳಿಂದ ಮಾತ್ರವಲ್ಲದೆ ಹೊರರಾಜ್ಯ, ಹೊರದೇಶಗಳಿಂದಲೂ ಧರ್ಮಾಸಕ್ತರು ಕಲ್ಯಾಣಕ್ಕೆ ಧಾವಿಸಿ ಬಂದರು. ಅಲ್ಲಮರು ಹೇಳುವಂತೆ `ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು, ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ!’ ಎಂದಿದ್ದಾರೆ. ಕಲ್ಯಾಣದಲ್ಲಿ ಶಿವನ ಪ್ರಕಾಶ ಬೆಳಗಲು ಬಸವಣ್ಣನವರೇ ಬರಬೇಕಾಯ್ತು ಎನ್ನುವ ಅನುಭಾವಿ ಅಲ್ಲಮರ ನುಡಿ ಚಿಂತನಾರ್ಹವಾಗಿವೆ. ಅಂಥ ಬಸವ ಚೇತನ ಬಿಟ್ಟುಹೋಗಿರುವ ವಚನಗಳ ಬೆಳಗಿನಲ್ಲಿ ಪ್ರತಿಯೊಬ್ಬರೂ ವ್ಯಕ್ತಿಗತ ಕತ್ತಲೆಯನ್ನು ಕಳೆದುಕೊಂಡು ಬೆಳಕಿನತ್ತ ಮುಖಮಾಡಬೇಕಿದೆ.
Comments 10
Kalyani Gowda
Dec 11, 2021ಎಲ್ಲಾ ಲೇಖನಗಳನ್ನು ಓದಿದೆ… ತುಂಬಾ ಚೆನ್ನಾಗಿವೆ. ಕೆಲವಂತೂ ಮತ್ತೆ ಮತ್ತೆ ಓದುವಂತಿವೆ….. Bayalu is excellent!!
ವೀರೇಶ ಯಗಚಿ
Dec 12, 2021ಬಸವಣ್ಣನವರು ಮಹಾಮನೆ ಕಟ್ಟಿದ್ದು ಈ ಭೂಮಿಯ ಭಾಗ್ಯ. ಗುರುಗಳು ಬಹಳ ಸೊಗಸಾಗಿ ದಾಸೋಹ ಭಾವವನ್ನು ಆಚರಿಸಿದ ಶರಣರ ವಚನವನ್ನು ವಿಶ್ಲೇಷಿಸಿದ್ದಾರೆ. ಕರ್ನಾಟಕದಲ್ಲಿ ಇಷ್ಟೊಂದು ಮಠಗಳಿವೆ. ಮಹಾಮನೆಯ ಮಾದರಿಯಲ್ಲಿ ಮಠ ಕಟ್ಟಲು ಯಾರಾದರೂ ಹೀಗೆ ಪ್ರಯತ್ನಿಸಬಹುದಿತ್ತು.
Basappa Chamarajnagar
Dec 14, 2021ಗುರುಗಳೇ- ಕರ್ತನಟ್ಟಿದಡೆ ಮತ್ರ್ಯದಲ್ಲಿ ಮಹಾಮನೆಯ ಕಟ್ಟಿದೆ- ಈ ವಚನದಲ್ಲಿ ಬಸವಣ್ಣನವರು ಪುನರ್ಜನ್ಮದ ಬಗ್ಗೆ ಮಾತನಾಡುತ್ತಿದ್ದಾರೆಯೇ? ನಾನು ಅಲ್ಲಿಲ್ಲಿ ಓದಿ ತಿಳಿದ ಪ್ರಕಾರ ಶರಣರು ಪೂರ್ವಜನ್ಮ ಮತ್ತು ಪುನರ್ಜನ್ಮಗಳನ್ನು ಒಪ್ಪಿಲ್ಲ ಅಂತ. ದಯವಿಟ್ಟು ನನ್ನ ಗೊಂದಲ ಪರಿಹರಿಸಿ.
Anandkumar Mysuru
Dec 15, 2021ಇತ್ತೀಚೆಗೆ ಬಸವಕಲ್ಯಾಣಕ್ಕೆ ಹೋಗಿದ್ದೆ, ಅಲ್ಲಿ ಮಹಾಮನೆಯ ಕುರುಹುಗಳನ್ನು ಹುಡುಕಲು ಬಹಳ ಸುತ್ತಾಡಿದೆವು. ಆದರೆ ಎಲ್ಲಿಯೂ ಕಾಣದೆ ನಿರಾಸೆಯಾಯಿತು. ಸ್ಥಳೀಯರಿಗೂ ಅದರ ಮಾಹಿತಿ ಇಲ್ಲದೆ ಎಲ್ಲೂ ನಿಖರ ಉತ್ತರ ಸಿಗಲಿಲ್ಲ. ಬಸವಣ್ಣನವರ ಕಲ್ಯಾಣದಲ್ಲಿ ಮಹಾಮನೆಯನ್ನು ಉಳಿಸಿಕೊಳ್ಳಲಾಗದ ನಮ್ಮ ಇತಿಹಾಸ ಪ್ರಜ್ಞೆ ನಾಚಿಕೆ ಹುಟ್ಟಿಸುತ್ತದೆ.
Mahadevappa s
Dec 19, 2021ಸಾಣೆಹಳ್ಳಿಯ ಪೂಜ್ಯ ಶ್ರೀಗಳವರಲ್ಲಿ ನನ್ನದೊಂದು ವಿನಂತೆ- ಅಪ್ಪ ಬಸವಣ್ಣನವರಂತೆ ನಾವೂ ಯಾಕೆ ಮಹಾಮನೆ ಕಟ್ಟಬಾರದು? ತಮ್ಮ ಸನ್ನಿಧಿಯಲ್ಲಿ ಅದನ್ನು ಆರಂಭಿಸಲು ಸಾಧ್ಯವಿಲ್ಲವೇ? ಕಲ್ಯಾಣವನ್ನು ಮತ್ತೆ ಕಟ್ಟಿದ ಪುಣ್ಯ ತಮ್ಮದಾಗುತ್ತದೆ.
Gadigeppa B. L
Dec 19, 2021ಶರಣರ ವಿಚಾರಗಳನ್ನು ಕೇಳುತ್ತಿದ್ದರೆ ನಾವೆಷ್ಟು ಭಾಗ್ಯಶಾಲಿಗಳು ಎನಿಸುತ್ತದೆ. ಮಹಾಮನೆಯನ್ನು ಅವರು ಹೇಗೆ ಕಟ್ಟಿರಬಹುದೆನ್ನುವುದನ್ನು ತುಂಬಾ ಚೆನ್ನಾಗಿ ಬರೆದಿದ್ದೀರಿ.
ಚನ್ನವೀರಪ್ಪ ಕೊಲ್ಲಾಪುರ
Dec 23, 2021ಅಕ್ಕಮಹಾದೇವಿ ತಾಯಿಯವರ ವಚನ “ಇಂದೆನ್ನ ಮನೆಗೆ ಒಡೆಯರು ಬಂದಡೆ…” ವಚನವು ತುಂಬಾ ಅದ್ಭುತವಾಗಿದೆ. ಬಸವಣ್ಣನವರು ಶರಣರನ್ನು ದೇವರಿಗಿಂತ ಹೆಚ್ಚು ಪ್ರೀತಿಸುತ್ತಿದ್ದರು. ಅದಕ್ಕಾಗೇ ಅವರ ಮಹಾಮನೆಯು ಅನರ್ಘ್ಯ ರತ್ನಗಳಂತಹ ಮಹಾ ಶರಣರಿಂದ ತುಂಬಿಕೊಂಡಿತ್ತು. ಇತಿಹಾಸದ ಆ ದಿನಗಳನ್ನು ನೆನೆದರೆ ರೋಮಾಂಚನವಾಗುತ್ತದೆ.
ಕಾಂತರಾಜು ಹೊಸಕೋಟೆ
Dec 23, 2021ಸಿದ್ದಪುರುಷ ಅಲ್ಲಮಪ್ರಭುಗಳು ಅಲೆಮಾರಿಗಳು. ತಮ್ಮ ಬಹುತೇಕ ಜೀವನವನ್ನು ಅಲೆದಾಟದಲ್ಲೇ ಕಳೆದ ಅವರು ನೆಲೆನಿಂತದ್ದು ಬಸವಣ್ಣನವರ ಮಹಾಮನೆಯಲ್ಲಿ. ಬಸವಣ್ಣನವರ ಹೃದಯ ಎಷ್ಟು ಪರಿಶುಭ್ರವಾಗಿತ್ತು ಎಂಬುದಕ್ಕೆ ಇದೇ ಸಾಕ್ಷಿ. ಶರಣು ಗುರುಗಳೇ.
Umakantha
Dec 27, 2021ಬಸವಣ್ಣನವರ ವಚನಗಳಲ್ಲಿ ನೀತಿಯ ವಚನಗಳೇ ಬಹುತೇಕ ಕಂಡುಬರುತ್ತವೆ. ಅವರಿಗೆ ನೀತಿಯೇ ಧರ್ಮವಾಗಿತ್ತು ಎನಿಸುವಷ್ಟ ಮಟ್ಟಿಗೆ ನೈತಿಕ ಬೋಧನೆಗಳು ಕಂಡುಬರುತ್ತವೆ. ನೀತಿವಂತ ಮನುಷ್ಯನನ್ನೇ ಅವರು ಲಿಂಗಾಯತನೆಂದು ಕರೆದಿರಬಹುದು. ಲೇಖನದುದ್ದಕ್ಕೂ ಇಂತಹ ನೀತಿ ಮಾತುಗಳನ್ನು ಸುಂದರವಾಗಿ ಕಟ್ಟಿಕೊಡಲಾಗಿದೆ.
ಗವಿಸಿದ್ದೇಶ ಗಾಣಾಪುರ
Dec 28, 2021ಶರಣರ ಸಂಗ ದೇವರಿಗಿಂತ ದೊಡ್ಡದ್ದು! ಬಸವಣ್ಣನವರು ಶರಣರ ದೊಡ್ಡ ಬಳಗವನ್ನೇ ಕಟ್ಟಲು ಸಾಧ್ಯವಾಗಿದ್ದೇ ಹೀಗೆ ಸಮಾನ ಮನಸ್ಕರನ್ನು ಒಟ್ಟುಮಾಡಲಿಕ್ಕಾಗಿ. ಈಗ ಮಠಕ್ಕೊಂದು ಗುಂಪಾಗಿ, ಭಕ್ತರ ಹಿಂಡುಗಳಾಗಿ ಬಿಟ್ಟಿದ್ದು ನೋಡಿದರೆ ಯಾರು ಹಿತವರು ನಮಗೆ? ಎಂದು ಪ್ರಶ್ನಿಸಿಕೊಳ್ಳುವಂತಾಗುತ್ತದೆ. ಸಾರ ಸಜ್ಜನರ ಸಂಗವನ್ನು ಎಲ್ಲಿ ಹುಡುಕುವುದು ಗುರುಗಳೇ?