Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಏನ ಬೇಡಲಿ ಶಿವನೇ?
Share:
Articles August 2, 2020 ಡಾ. ಪಂಚಾಕ್ಷರಿ ಹಳೇಬೀಡು

ಏನ ಬೇಡಲಿ ಶಿವನೇ?

ಧರ್ಮ ಮತ್ತು ದೇವರು ಎಂದಾಕ್ಷಣ ಸಾಮಾನ್ಯವಾಗಿ ಅನೇಕರಲ್ಲಿ ಮೂಡುವ ಭಾವವೆಂದರೆ ಕೆಲವು ನಿರ್ದಿಷ್ಟ ಆಚರಣೆಗಳು, ಕಟ್ಟು ಕಟ್ಟಳೆಗಳು, ಮಡಿವಂತಿಕೆ ಮತ್ತು ಅತೀತ ಶಕ್ತಿಯಲ್ಲಿ ನಂಬಿಕೆ. ಮಾನವನಿಗಿಂತ ಭಿನ್ನವಾದ, ಅಗೋಚರವಾದ ಶಕ್ತಿಯನ್ನು ದೇವರೆಂದು ನಂಬುವುದು ಜಗದ ವಾಡಿಕೆ. ಅಂಥಾ ದಿವ್ಯವಾದ ಶಕ್ತಿ ನಮ್ಮೆಲ್ಲಾ ಕಷ್ಟಗಳನ್ನು ಪರಿಹರಿಸುವುದೆಂಬ ಅಚಲವಾದ ನಂಬಿಕೆ. ಆ ನಂಬಿಕೆಯಿಂದಾಗಿ ಮಾನವರು ಹಲವಾರು ರೀತಿಯ ಆಚರಣೆಗಳ ಮೂಲಕ ತಮ್ಮೆಲ್ಲಾ ದುಃಖ ನೋವು ಕಷ್ಟಗಳನ್ನು ನಿವಾರಿಸಿ ಸುಖ ನೆಮ್ಮದಿಯನ್ನು ದಯಪಾಲಿಸೆಂದು ವಿವಿಧ ರೀತಿಯಲ್ಲಿ ಅತೀತವಾದ ಶಕ್ತಿಯ ಮೊರೆಹೋಗುವುದನ್ನು ನಾವು ನಮ್ಮ ಜೀವನದಲ್ಲಿ ಪ್ರತಿನಿತ್ಯ ಕಾಣುತ್ತೇವೆ.
೧. ಎಷ್ಟೋಸಾರಿ ತಮ್ಮೆಲ್ಲಾ ಬೇಡಿಕೆಗಳ ಹೊರತಾಗಿಯೂ ಕೂಡ ದೇವರು ಏನನ್ನೂ ಕರುಣಿಸದಿದ್ದರೆ ಆಗ ದೇವರನ್ನು ಕಲ್ಲೆಂದೂ ನಿಷ್ಕರುಣಿ ಎಂದೂ ಮೂದಲಿಸುವುದುಂಟು.
೨. ಹಲವುಬಾರಿ ದೇವರನ್ನು ಏನೂ ಕೇಳದೆಯೇ ತಾನಾಗಿಯೇ ಸುಖ ಸಂಪತ್ತು ಸಂತೋಷ ಬಂದೆರಗುವುದೂ ಉಂಟು. ಅಂಥಾ ಸನ್ನಿವೇಶದಲ್ಲಿ ಕೆಲವರು ತಮ್ಮ ಸ್ವಸಾಮರ್ಥ್ಯದಿಂದ ಇದೆಲ್ಲಾ ಉಂಟಾಗಿದೆ ಎಂದು ಗರ್ವಿಸಿದರೆ ಮತ್ತೆ ಕೆಲವರು ದೇವರು ತಾನಾಗಿಯೇ ಕರುಣಿಸಿದ್ದಾನೆಂದು ದೇವರಿಗೆ ಕೃತಜ್ಞತಾಭಾವ ತೋರುವುದುಂಟು. ಒಟ್ಟಿನಲ್ಲಿ ದೇವರೆಂಬುದು ಬೇಡಿದ್ದನ್ನೆಲ್ಲಾ ನೀಡುವ ಕಾಮಧೇನು, ತಮಗೆ ಬೇಕಾದದ್ದನ್ನೆಲ್ಲಾ ಪ್ರಾರ್ಥನೆಯ ಮೂಲಕ ಪಡೆಯಬಹುದು ಎಂಬುದು ಪ್ರಾಚೀನ ಕಾಲದಿಂದ ಇಂದಿನವರೆಗೂ ಜನಮನದಲ್ಲಿ ಆಳವಾಗಿ ಬೇರೂರಿರುವ ನಂಬಿಕೆ.
೩. ಮತ್ತೂ ಕೆಲವರು ದೇವರನ್ನು ಮಾನವರ, ಪ್ರಾಣಿಗಳ ಮಟ್ಟಕ್ಕೆ ಇಳಿಸಿ ಅವುಗಳನ್ನೂ ಕಾಡಿ ಬೇಡಿ ತಮ್ಮ ಇಷ್ಟಾರ್ಥ ಸಿದ್ಧಿಗೆ ಪ್ರಯತ್ನಿಸುವುದೂ ಉಂಟು.
ಒಟ್ಟಾರೆ, ಮಾನವರು ಬೇಡುವ ಬಗೆ, ಮಾರ್ಗ ಯಾವುದೇ ಇರಲಿ, ಬೇಡುವ ಉದ್ದೇಶವಂತೂ ನಿಶ್ಚಿತವಾಗಿ ಸ್ವಾರ್ಥಕ್ಕಾಗಿ ಎಂದು ನಿಸ್ಸಂಶಯವಾಗಿ ಹೇಳಬಹುದು.
ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಹನ್ನೆರಡನೇ ಶತಮಾನದಲ್ಲಿ ನಮ್ಮ ಹೆಮ್ಮೆಯ ಕನ್ನಡ ನೆಲದಲ್ಲಿ ನಭೂತೋ ನಭವಿಷ್ಯತಿ ಎಂಬಂತೆ ಜರುಗಿದ ವಿಚಾರಕ್ರಾಂತಿ, ಆಧ್ಯಾತ್ಮಿಕಕ್ರಾಂತಿ, ವಚನಚಳುವಳಿ ಎಂದೇ ಕರೆಯಲ್ಪಡುವ ಕಾಲಘಟ್ಟದಲ್ಲಿ ಶರಣರ ಚಿಂತನೆಗಳು ನಮ್ಮಂಥಾ ಸಾಮಾನ್ಯ ಮಾನವರ ಊಹೆಗೂ ನಿಲುಕದಷ್ಟು ಮೇಲುಸ್ತರದ್ದಾಗಿವೆ. ಶರಣರೂ ದೇವರಲ್ಲಿ ಬೇಡಿದ್ದಾರೆ, ಆದರೆ ಏನನ್ನು? ಐಹಿಕ ಸುಖಭೋಗಗಳನ್ನೇ? ಕಾಣದ ಕೈಲಾಸದ ಸುಖವನ್ನೇ? ಅಥವಾ ಮುಕ್ತಿಯನ್ನೇ?

ಶರಣರ ಭಕ್ತಿಮಾರ್ಗ ಬಹಳ ವಿಶಿಷ್ಟ ಹಾಗೂ ವಿನೂತನ. ಅವರು ಹೇಳುತ್ತಾರೆ ಪುರಾತನರ ಭಕ್ತಿ ಮಾರ್ಗ ಬಹಳ ತ್ರಾಸದಾಯಕ ಹಾಗೂ ಭಯಕಾರಕ ಎಂದು. ಶಿವನೊಲುಮೆಗಾಗಿ ಮಗನನ್ನೇ ಬಲಿ ನೀಡಿದ ಸಿರಿಯಾಳನನ್ನು, ತನ್ನ ಪತ್ನಿಯನ್ನೇ ದಾನ ಮಾಡುವ ಸಿಂಧುಬಲ್ಲಾಳ ಮುಂತಾದವರನ್ನು ಉಲ್ಲೇಖಿಸಿ, ಇಂಥಾ ಭಕ್ತಿಮಾರ್ಗ ಅನುಸರಣಾ ಯೋಗ್ಯವಲ್ಲ ಎಂದು ಅಭಿಪ್ರಾಯ ಪಡುತ್ತಾರೆ. ಬಸವಣ್ಣನವರು ಅನುಸರಣಾಯೋಗ್ಯ ಭಕ್ತಿಪಥವನ್ನು ರೂಪಿಸಿ ಈ ಜಗತ್ತಿಗೆ ಕೊಟ್ಟಿದ್ದಾರೆ. ಬಸವಣ್ಣನವರ ಚಿಂತನೆಗಳನ್ನು ಅವರದೇ ವಚನಗಳನ್ನು ಸರಿಯಾಗಿ ಅರಿಯುವುದರ ಮೂಲಕ ನಾವು ನಮ್ಮ ಆಚರಣೆಗಳಲ್ಲಿ ರೂಢಿಸಿಕೊಳ್ಳಬೇಕಾಗಿದೆ. ಬಸವಣ್ಣನವರು ಹೇಳುತ್ತಾರೆ, “ಮುನ್ನಿನವರು ಹೋದ ದಾರಿ ಭಯ ಕಾಣಿರಣ್ಣಾ, ಬಲ್ಲಾಳನ ವಧುವಿನೊಡನೆ ಸರಸವನಾಡಿದಂದಿಂದ ಭಯ ಕಾಣಿರಣ್ಣಾ, ಸಿರಿಯಾಳನ ಮಗನ ಬೇಡಿದಂದಿಂದ ಭಯ ಕಾಣಿರಣ್ಣಾ. ದಾಸನ ವಸ್ತ್ರವ ಸೀಳಿದಂದಿಂದ ಭಯ ಕಾಣಿರಣ್ಣಾ. ಅಘಟಿತಘಟಿತರು, ವಿಪರೀತಚರಿತ್ರರು-ಕೂಡಲಸಂಗನ ಶರಣರು ನಡೆದ ದಾರಿ ಭಯ ಕಾಣಿರಣ್ಣಾ.” ಈ ತರಹದ ಭಕ್ತಿಪಥ ಧಾರ್ಮಿಕ ಜನರಲ್ಲಿ ಭಯವನ್ನು ಉಂಟುಮಾಡುವಂಥಾದ್ದು ಎಂದು ಸ್ಪಷ್ಟವಾಗಿ ನುಡಿಯುತ್ತಾರೆ.
ಹಾಗಾದರೆ ಬಸವಣ್ಣನವರು ಕೊಡಮಾಡಿದ ಭಕ್ತಿಪಥ ಎಂಥಾದ್ದು? ಅಲ್ಲಿಯ ಆಚಾರಗಳೇನು, ವಿಚಾರಗಳೇನು, ಆಧ್ಯಾತ್ಮಿಕ ಸಾಧಕನ ಆತ್ಯಂತಿಕ ಗುರಿ ಏನು? ಆತನ ಸಿದ್ಧಿಗಳೇನು ಮುಂತಾದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೊರಟರೆ ಅವರ ವಚನಗಳಲ್ಲಿ ವಿಶಾಲವಾದ ಆಧ್ಯಾತ್ಮಿಕ ಹೊಸ ಜಗತ್ತು ತೆರೆದುಕೊಳ್ಳುತ್ತದೆ. ಮನಸ್ಸೆಂಬ ಭೂಮಿಯನ್ನು ನಮ್ಮ ಇದುವರೆಗಿನ ಎಲ್ಲಾ ನಂಬಿಕೆ ಆಚಾರ ವಿಚಾರಗಳ ಕಳೆಗಳಿಂದ ಮುಕ್ತವಾಗಿಸಿ, ಖಾಲಿಮಾಡಿಕೊಂಡು ಬಸವಣ್ಣನವರ ಹೊಸವಿಚಾರಗಳ ಬೀಜ ಬಿತ್ತಲು ಹಸನು ಮಾಡಿಕೊಳ್ಳಬೇಕು. ಆಗಮಾತ್ರ ಬಸವಣ್ಣನವರು, ಶರಣರು ಸಾಧಿಸಿದ್ದನ್ನು ನಾವೂ ಸಾಧಿಸಲು ಶಕ್ತರಾಗುತ್ತೇವೆ. ಮನದಲ್ಲಿ ತುಂಬಿರುವ ಭ್ರಾಂತಿಯ ಬೇರನ್ನು ಅಗೆದು ತೆಗೆಯದೆ ಸುಮ್ಮನೇ ಬಸವಾದಿ ಶರಣರ ವಿಚಾರಗಳನ್ನು ಕೇಳಿದರೆ, ಅಧ್ಯಯನ ಮಾಡಿದರೆ, ಅತ್ಯುತ್ತಮ ಬೀಜಗಳನ್ನು ಹಸನಾಗದ ಪಾಳುಭೂಮಿಯಲ್ಲಿ ಬಿತ್ತಿದಂತಾಗುವುದು. ಹುಲುಸಾದ ಬೆಳೆ ಒತ್ತಟ್ಟಿಗಿರಲಿ, ಬೀಜ ಮೊಳೆತು ಮೇಲೆಬರುವುದೂ ಕೂಡ ದುಸ್ತರವಾಗುವುದು.

ಹಾಗಾದರೆ ಶರಣರು ಏನನ್ನು ಬೇಡಿದರು?
ಅವರು ತಮಗಾಗಿ, ತಮ್ಮವರಿಗಾಗಿ ಧನ ಕನಕ ಆಸ್ತಿ ಐಶ್ವರ್ಯ ಆಯಸ್ಸು ಆರೋಗ್ಯ ಏನೊಂದನ್ನೂ ಕೇಳಲಿಲ್ಲ. ದೇವರಲ್ಲಿ ಕೇಳಿದ್ದು ನನ್ನ ಭ್ರಾಂತಿಯನ್ನು ಬಿಡಿಸು, ಅಜ್ಞಾನವನ್ನು ತೊಲಗಿಸು, ಸತ್ಪಥವನ್ನು ಕರುಣಿಸು, ಸಜ್ಜನರ ಸಂಗವನ್ನೇ ದಯಪಾಲಿಸು ಇತ್ಯಾದಿಗಳನ್ನು ಬೇಡಿದರು. ಯಾವುದೇ ಕಾರ್ಯಕ್ಕೆ ತಕ್ಕ ಪ್ರತಿಫಲ ಸಿಗಲೇಬೇಕು ಇಲ್ಲದಿದ್ದರೆ ಆ ಕಾರ್ಯ ಕೇವಲ ವ್ಯರ್ಥ ಎನ್ನುವುದು ಶರಣರ ವಾದ ಕೂಡ. ಲಿಂಗಪೂಜೆ ಮಾಡಿದ ಮೇಲೆ ಏನು ಫಲ? ಅವರು ಲಿಂಗಯ್ಯನನ್ನು ನಂಬಿದ್ದು, ಆರಾಧಿಸಿದ್ದು ತಾವು ಲಿಂಗಯ್ಯನೊಡನೆ ತಾದಾತ್ಮ್ಯ ಹೊಂದಬೇಕೆಂದು. ಅದಕ್ಕೇ ಬಸವಣ್ಣನವರು ಕೇಳುತ್ತಾರೆ, “ಲಿಂಗವ ಪೂಜಿಸಿ ಫಲವೇನಯ್ಯಾ, ಸಮರತಿ ಸಮಕಳೆ ಸಮಸುಖವನರಿಯದನ್ನಕ್ಕ ಲಿಂಗವ ಪೂಜಿಸಿ ಫಲವೇನಯ್ಯಾ, ಕೂಡಲಸಂಗಮದೇವರ ಪೂಜಿಸಿ ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ” ಲಿಂಗಪೂಜೆ , ಲಿಂಗಧ್ಯಾನ ಮಾಡುವುದು ಐಹಿಕ ಸುಖಭೋಗಗಳನ್ನು ಪಡೆಯಲೋಸುಗ ಅಲ್ಲ, ಲಿಂಗದೊಡನೆ ಬೆರೆಸಿ ಬೇರಿಲ್ಲದಂತಾಗುವುದು, ಎರಡು ನದಿಗಳು ಸಮಾಗಮವಾದ ಮೇಲೆ ಹೇಗೆ ಎರಡರ ನೀರನ್ನು ಬೇರ್ಪಡಿಸಲಾಗುವುದಿಲ್ಲವೋ ಹಾಗೇ ಅಂಗನು ಲಿಂಗವಾಗುವುದೇ ಲಿಂಗಪೂಜೆಯ ಫಲ. ಅಂಗನು ಲಿಂಗವಾಗಬೇಕಾದರೆ ಆತನಲ್ಲಿ ಅಂಗದ ಸ್ವಭಾವ ಗುಣಗಳು ನಷ್ಟವಾಗಬೇಕು. ಆ ಗುಣನಷ್ಟವಾಗಬೇಕೆಂದು ದೇವರಲ್ಲಿ ಮೊರೆ ಇಡುವ ಶರಣರ ಕೆಲವು ವಚನಗಳನ್ನು ಅಭ್ಯಸಿಸುವ.
“ಎನ್ನ ಮಾಯದ ಮದವ ಮುರಿಯಯ್ಯಾ. ಎನ್ನ ಕಾಯದ ಕತ್ತಲೆಯ ಕಳೆಯಯ್ಯಾ. ಎನ್ನ ಜೀವದ ಜಂಜಡವ ಮಾಣಿಸಯ್ಯಾ. ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಾ, ಎನ್ನ ಸುತ್ತಿದ ಪ್ರಪಂಚವ ಬಿಡಿಸಾ ನಿಮ್ಮ ಧರ್ಮ”
“ಮನೆ ಮನೆದಪ್ಪದೆ ಕೈಯೊಡ್ಡಿ ಬೇಡುವಂತೆ ಮಾಡಯ್ಯ? ಬೇಡಿದಡೆ ಇಕ್ಕದಂತೆ ಮಾಡಯ್ಯ? ಇಕ್ಕಿದಡೆ ನೆಲಕ್ಕೆ ಬೀಳುವಂತೆ ಮಾಡಯ್ಯ? ನೆಲಕ್ಕೆ ಬಿದ್ದಡೆ ನಾನೆತ್ತಿಕೊಂಬುದಕ್ಕೆ ಮುನ್ನವೆ ಶುನಿಯೆತ್ತಿಕೊಂಬಂತೆ ಮಾಡಾ ಚೆನ್ನಮಲ್ಲಿಕಾರ್ಜುನಯ್ಯ”
ಅಕ್ಕಮಹಾದೇವಿ ತಾಯಿಯವರು, ಅಜ್ಞಾನದ ಮರವೆಯಿಂದ ಎನ್ನಲ್ಲಿ ತುಂಬಿರುವ ಮದವನ್ನು ಮುರಿದುಹಾಕು, ಅಜ್ಞಾನದಿಂದ ಕೂಡಿದ ಅನಾಚಾರಗಳನ್ನು ಬಿಡಿಸು, ಜೀವಕ್ಕಂಟಿದ ಅಹಂ ಮಮತೆ ಎಂಬ ಜಂಜಡಗಳಿಂದ ಪಾರುಮಾಡು ಎಂದು ಚನ್ನಮಲ್ಲಿಕಾರ್ಜುನನಲ್ಲಿ ಬೇಡುತ್ತಿದ್ದಾರೆ. ಇಷ್ಟೇ ಅಲ್ಲದೆ ನನ್ನೆಲ್ಲಾ ಮರವೆಗೆ ಕಾರಣವಾಗುವ ಸಿರಿವಂತಿಕೆಯನ್ನು ನನ್ನಿಂದ ಕಿತ್ತು ಭಿಕ್ಷೆ ಎತ್ತುವಂತೆ ಮಾಡು, ಭಿಕ್ಷೆ ಬೇಡಿದರೆ ಯಾರೂ ನೀಡದಂತೆ ಮಾಡು, ನೀಡಿದರೂ ಅದು ನನಗೆ ದಕ್ಕದಂತೆ ಮಾಡು ಎಂದು ದೇವರಲ್ಲಿ ಮೊರೆಯಿಡುತ್ತಿದ್ದಾರೆ. ಪರಮಾತ್ಮನಲ್ಲಿ ಈ ರೀತಿಯ ಬೇಡಿಕೆಗಳನ್ನು ಇಟ್ಟಿರುವ ಉದಾಹರಣೆ ನಮಗೆ ಇತಿಹಾಸದಲ್ಲಿ ಸಿಗುವುದಿಲ್ಲ. ಇಲ್ಲಿ ಅಕ್ಕ, ಆಧ್ಯಾತ್ಮ ಸಾಧಕನಿಗೆ ಅಹಂಕಾರ ಮತ್ತು ಮಮಕಾರಗಳ ನಿರಸನಗಳ ಅವಶ್ಯಕತೆಯನ್ನು ಎತ್ತಿ ತೋರಿಸಿದ್ದಾರೆ.
ಜಗಜ್ಯೋತಿ ಭಕ್ತಿಭಂಡಾರಿ ಬಸವಣ್ಣನವರೂ ಆಧ್ಯಾತ್ಮ ಸಾಧಕನಲ್ಲಿರಬೇಕಾದ ಅತ್ಯಾವಶ್ಯಕ ಗುಣಗಳು ಮತ್ತು ಅವುಗಳಿಗೆ ಆ ಮಾರ್ಗದಲ್ಲಿ ಅಡ್ಡಬರಬಹುದಾದ ಅಡಚಣೆಗಳ ನಿವಾರಣೆಗಾಗಿ ನಿವೃತ್ತಿಮಾರ್ಗದ ಸುಲಭೋಪಾಯಗಳನ್ನು ಈ ವಚನಗಳಲ್ಲಿ ಅತ್ಯಂತ ಸ್ಪಷ್ಟವಾಗಿ ತಿಳಿಯಪಡಿಸಿದ್ದಾರೆ.
“ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯಾ ತಂದೆ, ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯಾ ತಂದೆ, ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯಾ ತಂದೆ, ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ ಇರಿಸು, ಕೂಡಲಸಂಗಮದೇವಾ”
“ಎಂದೋ ಸಂಸಾರದ ದಂದುಗ ಹಿಂಗುವುದು? ಎಂದೋ ಮನದಲ್ಲಿ ಪರಿಣಾಮವಹುದೆನಗೆಂದೋ? ಎಂದೋ ಕೂಡಲಸಂಗಮದೇವಾ, ಇನ್ನೆಂದೋ ಪರಮಸಂತೋಷದಲ್ಲಿಹುದೆನಗೆಂದೋ?”
“ಆಸೆ, ಆಮಿಷ, ತಾಮಸ, ಹುಸಿ, ವಿಷಯ, ಕುಟಿಲ, ಕುಹಕ, ಕ್ರೋಧ, ಕ್ಷುದ್ರ, ಮಿಥ್ಯೆ- ಇವನೆನ್ನ ನಾಲಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ. ಅದೇಕೆಂದಡೆ, ನಿನ್ನತ್ತಲೆನ್ನ ಬರಲೀಯವು. ಇದು ಕಾರಣ, ಇವೆಲ್ಲವ ಕಳೆದು ಎನ್ನ ಪಂಚೈವರ, ಭಕ್ತರ ಮಾಡು ಕೂಡಲಸಂಗಮದೇವಾ.”
“ಬೆಳೆಯ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ ತಿಳಿಯಲೀಯದು, ಎಚ್ಚರಲೀಯದು. ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯಾ, ಲಿಂಗತಂದೆ ಸುಳಿದೆಗೆದು ಬೆಳೆವೆನು ಕೂಡಲಸಂಗಮದೇವಾ.”
ಗುರು ಬಸವಣ್ಣನವರ ಈ ವಚನಗಳಲ್ಲಿ, ಐಹಿಕ ಸುಖಭೋಗಗಳನ್ನೇನೂ ಬೇಡಿಲ್ಲ, ಬದಲಿಗೆ ಅವರು ಬೇಡಿರುವುದು ಎನ್ನ ತನು ಮನ ಪ್ರಾಣಗಳಲ್ಲಿ ತುಂಬಿರುವ ಅವಗುಣಗಳನ್ನು ಕಳೆದು ನನ್ನನ್ನು ಸಚ್ಚಾರಿತ್ರವಂತನನ್ನಾಗಿ ಮಾಡು, ನೀತಿವಂತನನ್ನಾಗಿ ಮಾಡು ಎಂದು. ನೇರದೃಷ್ಟಿ, ನೇರ ನಡೆನುಡಿಗಳು ಮಾತ್ರ ಮಾನವನನ್ನು ಶರಣನನ್ನಾಗಿ ರೂಪಿಸುತ್ತವೆ, ಅದಕ್ಕಾಗಿ ನನಗೆ ಶರಣರ ಸತ್ಪಥವಲ್ಲದೇ ಅನ್ಯವಿಷಯಕ್ಕೆ ಎಳಸದಂತೆ ಕಾಪಾಡು ಎಂದು ಕೂಡಲಸಂಗನಲ್ಲಿ ಮೊರೆಯಿಡುತ್ತಾರೆ. ಆಸೆ, ಆಮಿಷ, ತಾಮಸ, ಹುಸಿ, ವಿಷಯ, ಕುಟಿಲ, ಕುಹಕ, ಕ್ರೋಧ, ಕ್ಷುದ್ರ, ಮಿಥ್ಯೆಯಂಥಾ ಕೆಟ್ಟ ಗುಣ ನಡತೆಗಳನ್ನು ನನ್ನಿಂದ ದೂರಮಾಡು ತಂದೆ ಎಂದು ಪ್ರಾರ್ಥಿಸುತ್ತಾರೆ. ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯಾ ನಾನು ಹೊಸ ಸುಳಿಯೊಡೆದು ಬೆಳೆಯುತ್ತೇನೆ ಎನ್ನುತ್ತಾರೆ. ಅವಗುಣವೆಂಬುದು ಕಸ, ಕಳೆ ಭೂಮಿಯಲ್ಲಿ ಬೆಳೆಯನ್ನು ಸರಿಯಾಗಿ ಬೆಳೆಯಲು ಬಿಡುವುದಿಲ್ಲ, ಆದ್ದರಿಂದ ಅವಗುಣವೆಂಬ ಕಸವನ್ನು ಕಿತ್ತುಹಾಕು ಎನ್ನುತ್ತಾರೆ.
“ಕಾಗೆ ವಿಷ್ಟಿಸುವ ಹೊನ್ನಕಳಸವಹುದರಿಂದ ಒಡೆಯರು ಜೋಗೈಸುವ ಚಮ್ಮಾವುಗೆಯ ಮಾಡಯ್ಯಾ. ಅಯ್ಯಾ ನಿಮ್ಮ ಶರಣರ ಪಾದಕ್ಕೆ ಚಮ್ಮಾವುಗೆಯ ಮಾಡಯ್ಯಾ. ಕೂಡಲಸಂಗಮದೇವಾ, ನಿಮ್ಮ ಸೆರಗೊಡ್ಡಿ ಬೇಡುವುದೊಂದೇ ವರವ ಕರುಣಿಸಯ್ಯಾ.”
ಈ ವಚನವಂತೂ ಪ್ರಪಂಚದ ಯಾವ ದಾರ್ಶನಿಕನೂ ಬೇಡದ ಬೇಡಿಕೆಯಾಗಿ ತೋರುವುದು. ಇಲ್ಲಿ ಹೊಸಧರ್ಮ ಪ್ರವರ್ತಕರೇ ಬಸವಣ್ಣನವರು, ಹೊಸಚಿಂತನೆಗಳಿಗೆ ಬೀಜವಾದವರು, ಅಸಂಖ್ಯಾತ ಶರಣರನ್ನು ಸೃಷ್ಟಿಸಿದವರೇ ಅವರು, ಅಂಥಾ ಘನಮಹಿಮ ಬಸವೇಶ್ವರರು ನನ್ನನ್ನು ಶರಣರು ಮೆಟ್ಟುವ ಪಾದರಕ್ಷೆಯನ್ನಾಗಿ ಮಾಡು, ದೇವಾಲಯದ ಮೇಲಿನ ಬಂಗಾರದ ಕಳಸವಾಗಿ ಬೇಡ ಎಂದು ತಮ್ಮ ವಿನಮ್ರ ಬೇಡಿಕೆಯನ್ನು ಮಂಡಿಸುತ್ತಾರೆಂದರೆ ಅವರ ಚಿಂತನಾಲಹರಿ ಎಂಥಾದ್ದೆಂದು ನಮ್ಮಂಥ ಲೌಕಿಕರಿಗೆ ಅರಿವಾಗಲು ಸಾಧ್ಯವೇ ಇಲ್ಲ. ಅಂಥಾ ಮೇರು ವ್ಯಕ್ತಿತ್ವ ಬಸವಣ್ಣನವರದ್ದು.
“ಒಳಗೆ ಕುಟಿಲ, ಹೊರಗೆ ವಿನಯವಾಗಿ ಭಕ್ತರೆನಿಸಿಕೊಂಬವರ ಬಲ್ಲನೊಲ್ಲನಯ್ಯಾ ಲಿಂಗವು, ಅವರು ಪಥಕ್ಕೆ ಸಲ್ಲರು ಸಲ್ಲರಯ್ಯಾ. ಒಳಹೊರಗೊಂದಾಗದವರಿಗೆ ಅಳಿಯಾಸೆದೋರಿ ಬೀಸಾಡುವನವರ ಜಗದೀಶ ಕೂಡಲಸಂಗಮದೇವ.” “ಭಕ್ತಿ ಎಳ್ಳನಿತಿಲ್ಲ, ಯುಕ್ತಿಶೂನ್ಯನಯ್ಯಾ ನಾನು. ತನುವಂಚಕ, ಮನವಂಚಕ, ಧನವಂಚಕ ನಾನಯ್ಯಾ. ಕೂಡಲಸಂಗಮದೇವಾ, ಒಳಲೊಟ್ಟೆ ಎನ್ನ ಮಾತು.” ಅಂತರಂಗ ಬಹಿರಂಗ ಶುದ್ಧವಾಗಿ ಏಕವಾಗದ ಹೊರತು ಆಧ್ಯಾತ್ಮ ಪಥ ದೂರವೇ ಉಳಿಯುವುದು. ತಮ್ಮನ್ನು ತಾವು ಇಷ್ಟು ತುಚ್ಚೀಕರಿಸಿಕೊಂಡವರುಂಟೇ ಜಗದೊಳಗೆ? ಅದು ಕೇವಲ ಬಸವಣ್ಣನವರಿಗಷ್ಟೇ ಸಾಧ್ಯ! ಶರಣರು ದೇವನಿಗೆ ಸರ್ವ ಸಮರ್ಪಣಾ ಭಾವದಿಂದ ಶರಣಾದವರು. ನಮ್ಮೊಳಗಿನ ಆತ್ಮಶಕ್ತಿ ಪರಮಾತ್ಮ ಶಕ್ತಿ ಬೇರೆ ಅಲ್ಲ. ಅರಿತು ನೋಡಿದರೆ ಆತ್ಮ-ಪರಮಾತ್ಮ ಒಂದೇ! ಆತ್ಮದ ನೋವು ನಲಿವುಗಳು ಲಿಂಗದ ನೋವು ನಲಿವುಗಳೇ ಆಗಿವೆ. ಅದಕ್ಕೆಂದೇ ಬಸವಣ್ಣನವರು ಹೇಳುತ್ತಾರೆ, “ಎನ್ನ ವಾಮ-ಕ್ಷೇಮ ನಿಮ್ಮದಯ್ಯಾ, ಎನ್ನ ಹಾನಿ-ವೃದ್ಧಿ ನಿಮ್ಮದಯ್ಯಾ, ಎನ್ನ ಮಾನಾಪಮಾನವೂ ನಿಮ್ಮದಯ್ಯಾ, ಬಳ್ಳಿಗೆ ಕಾಯಿ ದಿಮ್ಮಿತ್ತೆ ಅಯ್ಯಾ, ಕೂಡಲಸಂಗಮದೇವಾ” ಎಂದು.
ದೇವನಿಗೆ ಶರಣಾಗಿ, ನಿತ್ಯ ಅನುಭಾವಿಗಳ ಸಂಗದಿಂದ ನಾನು ಪರಮಪವಿತ್ರಳಾದೆ ಎಂದು ಅಕ್ಕಮಹಾದೇವಿ ತಾಯಿಯವರು ಹೀಗೆ ಹೇಳುತ್ತಾರೆ- “ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ ಎನ್ನ ತನು ಶುದ್ಧವಾಯಿತ್ತು. ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ ಎನ್ನ ಮನ ಶುದ್ಧವಾಯಿತ್ತು. ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ ಎನ್ನ ಪ್ರಾಣ ಶುದ್ಧವಾಯಿತ್ತು. ಅಯ್ಯಾ, ನಿಮ್ಮ ಅನುಭಾವಿಗಳು ಎನ್ನ ಒರೆದೊರೆದು ಆಗುಮಾಡಿದ ಕಾರಣ ಚೆನ್ನಮಲ್ಲಿಕಾರ್ಜುನಯ್ಯಾ, ನಿಮಗಾನು ತೊಡಿಗೆಯಾದೆನು.” ನಾನು ಮಾಡುವ ಪ್ರತಿಯೊಂದು ಕ್ರಿಯೆಯೂ ಲಿಂಗದ ಕ್ರಿಯೆಗಳೇ ಆಗಿವೆ ಎನ್ನುವ ಅಕ್ಕ, “ಉಡುವೆ ನಾನು ಲಿಂಗಕ್ಕೆಂದು, ತೊಡುವೆ ನಾನು ಲಿಂಗಕ್ಕೆಂದು, ಮಾಡುವೆ ನಾನು ಲಿಂಗಕ್ಕೆಂದು, ನೋಡುವೆ ನಾನು ಲಿಂಗಕ್ಕೆಂದು, ಎನ್ನಂತರಂಗ ಬಹಿರಂಗಗಳು ಲಿಂಗಕ್ಕಾಗಿ. ಮಾಡಿಯೂ ಮಾಡದಂತಿಪ್ಪೆ ನೋಡಾ. ಆನೆನ್ನ ಚೆನ್ನಮಲ್ಲಿಕಾರ್ಜುನನೊಳಗಾಗಿ ಹತ್ತರೊಡನೆ ಹನ್ನೊಂದಾಗಿಪ್ಪುದನೇನ ಹೇಳುವೆನವ್ವಾ” ತನ್ನ ಪ್ರಸಾದಿತ್ವವನ್ನು ಇಲ್ಲಿ ದೃಢೀಕರಿಸಿದ್ದಾರೆ. “ಆವ ಕಾಯಕವಾದಡೂ ಸ್ವಕಾಯಕವ ಮಾಡಿ ಗುರು ಲಿಂಗ ಜಂಗಮದ ಮುಂದಿಟ್ಟು, ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು, ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ, ಭಾಪು ಲದ್ದೆಯ ಸೋಮಾ” ಲದ್ದೆಯ ಸೋಮ ಎಂಬ ಶರಣ ಸ್ವಾರ್ಥಕ್ಕಾಗಿ ಏನನ್ನೂ ಬೇಡುವುದನ್ನು ನಿರಾಕರಿಸುತ್ತಾರೆ.
ಒಟ್ಟಿನಲ್ಲಿ ಹೇಳುವುದಾದರೆ, ಇತರ ಲೌಕಿಕ ಜನರು ಬೇಡುವಂತೆ ಶರಣ ಪಥದಲ್ಲಿ ನಡೆಯಬಯಸುವ ಸಾಧಕರು ದೇವರನ್ನು ಬೇಡಬಾರದು. ಸ್ವತಃ ದೈವತ್ವಕ್ಕೆ ಏರುವ ಮಾರ್ಗದಲ್ಲಿ ಚರಿಸಬೇಕು. ಬೇಡುವುದು ಧರ್ಮವಲ್ಲ ನೀಡುವುದೇ ಧರ್ಮ ಎಂಬುದು ಶರಣರ ಅಭಿಮತ.

Previous post ಅಲ್ಲಮರ ಒಂದು ‘ಸ್ವವಿರೋಧ’ದ ವಚನ
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
Next post ಸವೇಜನಾಃ ಸುಖಿನೋ ಭವಂತು
ಸವೇಜನಾಃ ಸುಖಿನೋ ಭವಂತು

Related Posts

ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
Share:
Articles

ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ

February 7, 2021 ಪದ್ಮಾಲಯ ನಾಗರಾಜ್
(ಗುರು-ಶಿಷ್ಯ ಸಂವಾದ) ಶಿಷ್ಯ: ಹಿರಿಯರಿಗೆ ಹಿರಿಯಣ್ಣನೆನಿಸಿದ ಗುರು ಮಹರಾಜರ ಸನಿಹ ಸೇರಿದೆನಯ್ಯಾ… ನನ್ನನ್ನು ಪಾರುಮಾಡು ತಂದೆ! ಕೆಲವರು ಜೀವಾತ್ಮ- ಪರಮಾತ್ಮನೆನ್ನುತ್ತಾರೆ....
ಸಾವಿಲ್ಲದ ಝೆನ್ ಗುರು-2
Share:
Articles

ಸಾವಿಲ್ಲದ ಝೆನ್ ಗುರು-2

May 10, 2022 ಕೆ.ಆರ್ ಮಂಗಳಾ
“ಯುದ್ಧದ ಪ್ರತ್ಯಕ್ಷ ಅನುಭವ ಹೇಗಿರುತ್ತೆ ಗೊತ್ತಾ? ಅಲ್ಲಿ ಸಿಟ್ಟು ಇರುತ್ತೆ, ಭಯ ಇರುತ್ತೆ, ಹತಾಶೆ ಇರುತ್ತೆ… ಬೆಳಿಗ್ಗೆ ಎದ್ದವರು ಮಧ್ಯಾಹ್ನದವರೆಗೆ; ಮಧ್ಯಾಹ್ನ ಊಟ ಮಾಡಿದವರು...

Comments 11

  1. Dayashankara R
    Aug 3, 2020 Reply

    ತುಂಬಾ ಚೆನ್ನಾಗಿದೆ ಸರ್, ಶರಣರ ಬೇಡಿಕೆಗಳ ಮುಂದೆ ನಮ್ಮ ಸ್ವಾರ್ಥ ಪ್ರಾರ್ಥನೆಗಳು ಎಷ್ಟೊಂದು ಅರ್ಥಹೀನ ಅಲ್ಲವೇ?

  2. Kavyashree
    Aug 3, 2020 Reply

    ಶರಣರ ವಚನಗಳನ್ನು ತೋರಿಸಿ ನಮ್ಮನ್ನು ಎಚ್ಚರಿಸಿದ್ದಕ್ಕೆ ಧನ್ಯವಾದಗಳು ಪಂಚಾಕ್ಷರಿ ಶರಣರಿಗೆ.

  3. Jagadeesh anekal
    Aug 3, 2020 Reply

    ಐಹಿಕ ಭೋಗಗಳಿಗಾಗಿ ಎಂದಿಗೂ ಆಶಿಸದ ಶರಣರು ಎಲ್ಲಿ? ದೇವರ ಮುಂದೆ ಕಣ್ಮುಚ್ಚಿ ನಿಂತರೆ ಸಾಕು, ಬೇಡಿಕೆಗಳ ಪಟ್ಟಿಯನ್ನೇ ಮುಂದಿಡುವ ನಾವೆಲ್ಲಿ?

  4. Shubha
    Aug 4, 2020 Reply

    ಉತ್ತಮವಾದ ಲೇಖನ

  5. Jayaraj Bidar
    Aug 9, 2020 Reply

    ತಮ್ಮನ್ನು ತಿದ್ದಿಕೊಳ್ಳಲು ಶರಣರು ನಡೆಸಿದ ಪ್ರಯತ್ನವನ್ನು ಅವರ ಪ್ರಾರ್ಥನೆಗಳಲ್ಲಿ ಕಾಣುವುದು ನಿಜಕ್ಕೂ ಆಶ್ಚರ್ಯಕರ. ದೇವರನ್ನು ತಮ್ಮ ಬೇಡಿಕೆಗಳಿಂದ ಪೀಡಿಸುವವರು ಶರಣರ ವಚನಗಳನ್ನು ತಪ್ಪದೇ ಓದಬೇಕು. ಸ್ವಾಭಿಮಾನಿಗಳಾದ ಬಸವಾದಿ ಶರಣರ ಪಾದಧೂಳಿಯನ್ನು ಕಣ್ಣಿಗೊತ್ತಿಕೊಳ್ಳಬೇಕು ನಾವು.

  6. Parameshwara Tipatur
    Aug 11, 2020 Reply

    ರಜೆಯ ದಿನಗಳಲ್ಲಿ ಬಯಲು ಓದಲು ನನಗೆ ಬಹಳ ಸಂತೋಷವಾಗುತ್ತದೆ. ಎಲ್ಲಾ ಲೇಖನಗಳನ್ನು ಓದಿದೆ. ಪ್ರತಿಕ್ರಿಯೆ ಬರೆದು ನನಗೆ ಅಭ್ಯಾಸವಿಲ್ಲ. ಶರಣರ ವಿಚಾರಗಳ ಸಾರವನ್ನು ತಿಳಿಯುವ ಅವಕಾಶ ಕಲ್ಪಿಸಿದ್ದಕ್ಕಾಗಿ ಎಲ್ಲ ಲೇಖಕರಿಗೆ ಶರಣುಗಳು.

  7. Kamalesh Jevergi
    Aug 17, 2020 Reply

    ಶರಣರ ಬೇಡಿಕೆಗಳು ಅರ್ಥವಾದವು, ಹಾಗಾದರೆ ಶರಣರ ದೇವರು ಯಾರು?

  8. Harsha m patil
    Aug 20, 2020 Reply

    Very simple, apt and good article

  9. Basappa Kalguti
    Aug 23, 2020 Reply

    ಶಿವ ಹೊಗಳಿಕೆಯ ಸ್ತುತಿಗಳಿಗೆ ಒಲಿಯಲಾರ. ಶರಣರು ಸ್ತುತಿಸಲೂ ಇಲ್ಲ, ಪೂಜಿಸಲೂ ಇಲ್ಲ. ಅವರ ದೇವ ಪೂಜೆ ವಿನೂತನವಾಗಿತ್ತು, ತನ್ನನ್ನು ತಾನು ತಿಳಿಯುವ ದಾರಿಯಾಗಿತ್ತು.

  10. Subhas Baliga
    Aug 24, 2020 Reply

    ಲೇಖನ ಚೆನ್ನಾಗಿದೆ ಸರ್. ಬೇಡುವಾತ ನಾನಲ್ಲಯ್ಯಾ… ಎಂದ ಬಸವಣ್ಣನವರ ವಂಶದವರು ನಾವೆಂದು ನೆನಪುಮಾಡಿಕೊಟ್ಟಿದ್ದೀರಿ.

  11. Ganesh A.P
    Sep 1, 2020 Reply

    ಶರಣರು ಸರಳ ಸುಂದರ ಸಹಜ ಜೀವನದ ಪಯಣಿಗರಾಗಿದ್ದರು. ಅವರ ಪ್ರಾರ್ಥನೆಗಳು, ಬೇಡಿಕೆಗಳು ಎಲ್ಲ ಕಾಲಕ್ಕೂ ಅನುಕರಣೆ ಯೋಗ್ಯವಾಗಿವೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶಿವನ ಕುದುರೆ…
ಶಿವನ ಕುದುರೆ…
May 1, 2019
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
January 7, 2022
ನದಿಯನರಸುತ್ತಾ…
ನದಿಯನರಸುತ್ತಾ…
October 6, 2020
ಎಲ್ಲಿದ್ದೇನೆ ನಾನು?
ಎಲ್ಲಿದ್ದೇನೆ ನಾನು?
February 10, 2023
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
December 6, 2020
ಗೆರೆ ಎಳೆಯದೆ…
ಗೆರೆ ಎಳೆಯದೆ…
October 13, 2022
ಬಯಲಾದ ಬಸವಯೋಗಿಗಳು
ಬಯಲಾದ ಬಸವಯೋಗಿಗಳು
April 3, 2019
ನೆಲದ ನಿಧಾನ
ನೆಲದ ನಿಧಾನ
April 29, 2018
ಅರಿವು ಕಣ್ತೆರೆಯದವರಲಿ….
ಅರಿವು ಕಣ್ತೆರೆಯದವರಲಿ….
August 5, 2018
ಒಂದು ತೊಟ್ಟು ಬೆಳಕು
ಒಂದು ತೊಟ್ಟು ಬೆಳಕು
February 7, 2021
Copyright © 2023 Bayalu