Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
  ಅವಿರಳ ಅನುಭಾವಿ-3
Share:
Articles May 6, 2020 ಮಹಾದೇವ ಹಡಪದ

  ಅವಿರಳ ಅನುಭಾವಿ-3

ಇಲ್ಲಿಯವರೆಗೆ: ಏನಾದರೊಂದು ತರಲೆ ಮಾಡುತ್ತಾ ಎಲ್ಲರನ್ನೂ ಗೋಳು ಹೊಯ್ದುಕೊಳ್ಳುತ್ತಿದ್ದ ಬಾಲಕ ಚನ್ನಬಸವ ಮಹಾಮನೆಯ ಕಣ್ಮಣಿಯಾದ. ಆತನ ಪ್ರಬುದ್ಧತೆ, ಚುರುಕುತನ ಹೀಗೊಮ್ಮೆ ಮಹಾಮನೆಗೆ ಭೇಟಿ ಕೊಟ್ಟ ಬಿಜ್ಜಳ ಮಹರಾಜನ ಗಮನವನ್ನೂ ಸೆಳೆಯಿತು. ಚನ್ನಬಸವಣ್ಣನನ್ನು ತನ್ನ ಅರಮನೆಯ ಕಾವಲುಪಡೆಯ ದಂಡನಾಯಕನನ್ನಾಗಿ ನೇಮಿಸಿಕೊಳ್ಳಲು ಇಚ್ಛಿಸಿದ. ಮುಂದಕ್ಕೆ ಓದಿ-

–ಅನುಭಾವದೊಳು –

ಅಂದು ರಾತ್ರಿ ನಿದ್ದೆಯೇ ಬಾರದಾಗಿತ್ತು. ನಾಳೆ ಅರಮನೆಯತ್ತ ಹೋಗುವ ಬಗ್ಗೆ ಯೋಚಿಸುತ್ತ ಬಹಳ ಹೊತ್ತಿನವರೆಗೂ ಮನಸು ಚಡಪಡಿಸುತ್ತಿತ್ತು. ಉಳಿದೆಲ್ಲ ಶರಣರ ಹಾಗೆ ತಾನೂ ಕಾಯಕ ಮಾಡಿ ಬಂದು ದಾಸೋಹ ಮಾಡುವ ಬಗ್ಗೆ… ಬಸವಣ್ಣ ಏರಿದ ಎತ್ತರಕ್ಕೆ ತಾನೂ ಹತ್ತುವ ಬಗ್ಗೆ, ಅವ್ವ ಹೇಳುವ ಬಸವಣ್ಣನ ಬಾಲ್ಯವು ಹೇಗೆ ಅವರ ವಿಚಾರವನ್ನು, ಜ್ಞಾನಮಾರ್ಗವನ್ನೂ ಬದಲಿಸಿತೋ ಹಾಗೆ ತಾನು ವಿಚಾರದ ತುತ್ತತುದಿಯನೇರಿ ಶರಣತ್ವಕ್ಕೊಂದು ಮಾರ್ಗ ರೂಪಿಸಬೇಕೆಂಬ ವಯೋಸಹಜ ಹಂಬಲದ ಕನಸು-ಕನವರಿಕೆಗಳು ನಿದ್ದೆಯನ್ನು ಹಾರಿಸಿದ್ದವು.

ನಾಗಲಾಂಬೆಗೆ ಮಗನು ಮಲಗಿಲ್ಲವೆಂಬುದು ಉಸಿರಾಟದಿಂದ ತಿಳಿಯಿತು. ಮಹಾಮನೆಯ ದೀಪಕ್ಕೆ ಎಣ್ಣೆಹಾಕಿ ಬತ್ತಿ ಏರಿಸುವ ನೆಪದಲ್ಲಿ ಎದ್ದು ಚನ್ನಬಸವಣ್ಣನ ಪಕ್ಕದಲ್ಲೇ ಕುಳಿತಳು. ಅವನ ಹುಲುಸಾದ ಕೂದಲಿನಲ್ಲಿ ಕೈಯಾಡಿಸುತ್ತಾ..

“ನಿದ್ದೆ ಬರಲೊಲ್ಲದೇನು..?”

“ಊಂಹೂಂ…”

“ನೀನು ಬೆಳೆದು ದೊಡ್ಡವನಾದಂತೆಲ್ಲ ನನಗೆ ನನ್ನ ಮೇಲಿನ ಸಿಟ್ಟು ಕಡಿಮೆಯಾಗುತ್ತಿದೆ. ನಿನ್ನ ಒಂದೊಂದು ಮಾತು ಹರಳು ಹುರಿದಂತೆ ಚಟಪಟ ಸಿಡಿದಂತೆ ನನಗೆ ಕೇಳಿಸಿದಾಗೊಮ್ಮೆ ನನ್ನ ಮನಸ್ಸು ಪುಳಕಿತಗೊಳ್ಳುತ್ತಪ್ಪಾ…”

“ಯಾಕಬ್ಬೆ ನಿನಗೆ ನಿದ್ದೆ ಬರಲೊಲ್ಲದೆ..?”

“ಹ್ಯಾಗೆ ಬಂದೀತು. ಮಗನ ಮುಖದಲ್ಲಿ ಮಂದಹಾಸ ಮೂಡಿದಾಗ ನನ್ನ ಕನವರಿಕೆ ನಿಜವಾದ ಸಂಭ್ರಮವನ್ನು ಕಳೆದುಕೊಳ್ಳಲು ಮನಸ್ಸು ಬಿಡಲೊಲ್ಲದು. ನಿನ್ನ ಮಾವನಂತೆಯೇ ನೀನು ಆಗಬೇಕೆಂಬ ಹಠವಿತ್ತು. ಕಪ್ಪಡಿಯಲ್ಲಿ ನಿನ್ನ ತಂದೆ ಕಾಶಿಯಾತ್ರೆಗೆ ಹೊರಟು ನಿಂತರು. ಯಾರ ಮಾತು ಅವರ ಕಿವಿಗೆ ಹೋಗಲಿಲ್ಲ. ಆಗಿನ್ನು ಗರ್ಭ ಧರಿಸಿದ್ದ ನನಗೆ -ಅವರ ಆಕಾಶಮಂಡಲದ ಆಗುಹೋಗುಗಳ ಲೆಕ್ಕಾಚಾರ, ಭವಿಷ್ಯದ ಕುತೂಹಲ, ಶಾಸ್ತ್ರದ ಒಗಟುಗಳು ಅರ್ಥವಾಗಲೇ ಇಲ್ಲ. ಕಂಠಪಾಠದ ಶಾಸ್ತ್ರಗಳನ್ನು ತಿಳಿದುಕೊಳ್ಳಲು ಕಾಶಿಗೆ ಹೋಗಬೇಕೆಂಬ ಅವರ ಹಠ ಹುಚ್ಚಿನಂತಾದಾಗ ನಿಂತ ನೆಲವೇ ಕುಸಿದಂತಾಗಿತ್ತು. ಕಾಶಿಗೆ ಹೊರಡುತ್ತೇನೆ ಎಂದಾಗಲೇ ಎದೆ ಧಸಲ್ ಎಂದಿತ್ತು. ಯಾತ್ರೆಗೆ ಹೊರಡುವವರ ಗುಂಪಿನಲ್ಲಿ ಒಂದು ಗುದ್ದಲಿಯನ್ನೂ ಬುಟ್ಟಿಯನ್ನೂ ಜೊತೆಯಲ್ಲೇ ಒಯ್ಯುತ್ತಾರಲ್ಲ.. ಅದರ ಭಯವಾದದ್ದು ಸುಳ್ಳಾಗಲಿಲ್ಲ. ಅದೇ ಅಂತಿಮ ಯಾತ್ರೆಯಾಯ್ತೋ ಏನೋ.. ಇಂದಿಗೂ ಅವರ ಸುದ್ದಿ ಏನೊಂದು ಬಂದು ನಮಗೆ ತಲುಪಲಿಲ್ಲ.”

“ಅಳುವುದೊಂದು ಬಿಟ್ಟರೆ ನಿನ್ನಷ್ಟು ಗಟ್ಟಿಗಿತ್ತಿ ಮತ್ತೊಬ್ಬರಿಲ್ಲ ಅಂತ ಮೊನ್ನೆ ದೊಡ್ಡಪ್ಪ ಮಾವನ ಮುಂದೆ ಹೇಳುತ್ತಿದ್ದ ಮಾತು ಸತ್ಯ.”

“ಇದು ಬರೀ ಅಳುವಲ್ಲ ಚನ್ನಬಸವಣ್ಣಾ.. ಏನೋ ಒಂದು ಬಗೆಯ ನೆಮ್ಮದಿಯ ಕಣ್ಣೀರು. ನಾನು ಬಸವಣ್ಣನಿಗೆ ಅರ್ಥವಾದಷ್ಟು ಉಳಿದ ಯಾರಿಗೂ ಅರ್ಥವಾಗಲಿಲ್ಲ. ನನ್ನ ಕತೆ ಯಾರೂ ಕೇಳಿಸಿಕೊಳ್ಳಲಾರರು ಎಂದುಕೊಂಡಾಗಲೇ ಬಸವಣ್ಣ ಕೇಳಿಸಿಕೊಂಡ, ನನ್ನ ಮನಸ್ಸು ಯಾರಿಗೂ ಅರ್ಥವಾಗುತ್ತಿಲ್ಲ ಎಂದು ನೊಂದುಕೊಳ್ಳುವಾಗಲೇ ಅವನು ಉಡಿಯಲ್ಲಿದ್ದ ನಿನ್ನನ್ನು ನನ್ನನ್ನು ತೆಕ್ಕೆಗೆ ಹಾಕಿಕೊಂಡ. ಅವನ ಗುಣವೇ ನಿನಗೂ ಬರಲೀ, ಅವನ ಹಾದಿಯೇ ನಿನ್ನದೂ ಆಗಲೀ ಅನ್ನೋ ಬಯಕೆ ಇತ್ತು…”

“ಅಬ್ಬೆ ನಾನೀಗ ಸಣ್ಣ ಮಗುವಲ್ಲ..!”

“ಯಾರಂದವರು ಮಗು ಅಂತ.. ಹಾರಿಹೋಗಲಿ ಆ ಮಾತು. ನೀನು ಥೇಟ್ ಬಸವಣ್ಣನೇ.. ನೀನು ನಾಳೆಯಿಂದ ಅರಮನೆಯ ಕಾವಲುಪಡೆಯ ದಣ್ಣಾಯಕ ಅಂತ ಬಿಜ್ಜಳ ಮಹಾರಾಜ ಹೇಳಿದಾಗ ಬಸವಣ್ಣನ ಮುಖದಲ್ಲಿ ಗಲಿಬಿಲಿಯಾಯ್ತು ಕಂಡೆಯಾ..?”

“ಹೌದೇ..?”

“ಹೌದು. ಆ ಅರಮನೆಯ ಊಳಿಗದವರ ನಡುವೆ ನಿನ್ನ ಎಳೆ ಮನಸ್ಸು ಅರಳುವುದೋ ಬಾಡುವುದೋ ಎಂಬ ಅನುಮಾನ ಅವನ ಕಣ್ಣಮುಂದೆ ಹಾದಿರಬೇಕು. ಇಲ್ಲದ ರಾಜಕಾರಣ, ಅಧಿಕಾರ ಮೋಹದ ಕುತಂತ್ರಗಳ ನಡುವೆ ನೀನು ಎಲ್ಲಿ ಕಳೆದು ಹೋಗುತ್ತಿಯೋ ಎಂಬ ಆತಂಕವಿತ್ತು ಅವನ ಕಣ್ಣೊಳಗೆ.”

“ಆಮೇಲೆ…?”

“ಆಮೇಲೆ ಏನು. ನೆಟ್ಟಗೆ ನನ್ನ ಹತ್ತಿರ ಬಂದವನೇ ‘ಅಕ್ಕಾ ಸಾರ್ಥಕವಾದ ಸಂತೋಷವನ್ನು ಅನುಭವಿಸುತ್ತಿರುವೆಯಾ..? ಆದರೆ ಚನ್ನಬಸವ ಆ ಕೆಲಸಕ್ಕೆ ಹೋಗುವುದು ನನಗಂತೂ… ಇಷ್ಟವಿಲ್ಲ’ ಎಂದು ತಡವರಿಸಿದಾಗ ನನಗೆ ಹೊಳೆದ ಸಂಗತಿಯನ್ನು ನಿನಗೆ ಹೇಳಬೇಕೆನಿಸಿತು.”

“ಏನದು..?”

“ಬಸವಣ್ಣನಿಗೆ ನೀನು ಆ ಕಾವಲುಪಡೆಯ ದಣ್ಣಾಯಕನಾಗುವುದು ಸುತಾರಾಂ ಒಪ್ಪಿಗೆಯಿಲ್ಲ. ಆ ಕೆಲಸವನ್ನು ಶರಣರಾದ ಬೇರೆ ಯಾರಿಗೆ ಕೊಟ್ಟಿದ್ದರೂ ಬಸವಣ್ಣ ಸಂತೋಷಪಡುತ್ತಿದ್ದ. ಅದಕ್ಕಾಗಿ ಸಂಜೆ ಬಿಜ್ಜಳರಾಜನ ಜೊತೆಗೆ ಮಾತಾಡಿಯೂ ಬಂದಿದ್ದಾನೆ.”

“ಏನಂತ ಮಾತಾಡಿದ್ದಾರೆ?”

“ನನ್ನ ಅಕ್ಕನ ಮಗನೆಂಬ ಕಾರಣಕ್ಕೆ ನೀವು ಚನ್ನಬಸವಣ್ಣನನ್ನು ಅರಮನೆಯ ಕಾವಲುಪಡೆಗೆ ನೇಮಿಸುತ್ತಿರುವಿರಾದರೆ ದಯಮಾಡಿ ಈ ನೇಮಕವನ್ನು ಬಿಟ್ಟುಬಿಡಿ. ಅವನ ವಿದ್ಯೆ ಮತ್ತು ಅರಿವಿನ ಗುಣದಿಂದಲೇ ಅವನು ತನ್ನ ಕೆಲಸವನ್ನು ಸಂಪಾದಿಸುತ್ತಾನೆ. ಆ ನಂಬಿಕೆ ನನಗಿದೆ ಎಂದು ಕಟುವಾಗಿ ಹೇಳಿದರಂತೆ…”

“ಅದಕ್ಕೆ ಬಿಜ್ಜಳರಾಜರು ಏನಂದರಂತೆ…”

“ಅವರೇನಂತಾರೆ.. ಮೊದಲಿನಿಂದಲೂ ಬಸವಣ್ಣನ ನಿಷ್ಠುರ ನಿಯಮಗಳನ್ನು ಹತ್ತಿರದಿಂದ ಬಲ್ಲವರಾದ್ದರಿಂದ ‘ಅಪ್ಪಾ ಬಸವರಾಜ.. ನಿನ್ನ ಮನದ ಇಂಗಿತ ನನಗೆ ತಿಳಿಯಿತು ಮಾರಾಯ.. ಆ ಚನ್ನಬಸವಣ್ಣ ನಿನ್ನ ಅಳಿಯನೆಂಬ ಕಾರಣಕ್ಕೆ ರಾಜ್ಯಭಾರದಲ್ಲಿ ಕೆಲಸ ಕೊಡುತ್ತಿಲ್ಲವೋ ಮಾರಾಯ, ಅವನ ಶಕ್ತಿ ಸಾಮರ್ಥ್ಯವನ್ನು ನಿನ್ನ ಮಹಾಮನೆಯಲ್ಲೇ ಇರುವ ನನ್ನ ಗೂಢಚಾರರಿಂದ ತಿಳಿದುಕೊಂಡು ಅವನಂಥ ಯುವಕ ಅರಮನೆಯಲ್ಲಿರಬೇಕೆಂಬ ಆಸೆಯಿಂದ ನೇಮಿಸಿಕೊಳ್ಳುತ್ತಿದ್ದೇನೆ’ ಎಂದರಂತೆ..!”

“ಗೂಢಚಾರರು..?”

“ಹೂಂ.. ರಾಜ್ಯಭಾರವೆಂದರೆ ಸುಮ್ಮನೇ ಆದೀತೇ..? ರಾಜನಾದವನು ಎಲ್ಲರ ಮೇಲೂ ಕಣ್ಣಿಟ್ಟಿರುತ್ತಾನಪ್ಪಾ.. ಹೋಗಹೋಗತಾ ನಿನಗೂ ತಿಳಿಯುತ್ತದೆ ಅರಮನೆಯ ಕಾರಬಾರು.”

ಮಾತಾಡುತ್ತಲೇ ಆಕಳಿಕೆ ತೆಗೆದಾಗ ತೊಡೆಯ ಮೇಲಿದ್ದ ಮಗನ ತಲೆಯನ್ನು ಮತ್ತೊಮ್ಮೆ ನೇವರಿಸಿ ಮಲಗಲು ಬಿಟ್ಟು ತಾನೆದ್ದು ಹೋಗಿ ಮಲಗಿದಾಗ ಬೆಳಗಿನ ಜಾವದ ಕೋಳಿಕೂಗಿತ್ತು.

ಮಳ್ಳಾಮರುದಿನ ಆರಂಭವಾದ ಮಗನ ಕಾಯಕವು ಆತನ ಬದುಕಿನ ದೆಸೆಯನ್ನೇ ಬದಲಿಸಿತ್ತು. ತಾಳೆಗರಿಗಳ ಓದು, ಅನುಭವಮಂಟಪದ ಮಾತುಕತೆಗಳನ್ನು ಶಾಂತರಸರ ಜೊತೆ ಮತ್ತೊಮ್ಮೆ ಮಾತಾಡಿ ದಾಖಲಿಸಬೇಕಿರುವ ಅನುಭಾವದ ನುಡಿಗಟ್ಟು ಜೋಡಿಸುವುದು, ಹೊರನಾಡಿನಿಂದ ಬಂದ ಶರಣರಿಗೆ ಆಡುವ ಭಾಷೆ ಕಲಿಸುವುದು, ತನ್ನ ವಾರಿಗೆಯ ಶರಣರ ಜೊತೆ ಮಾತುಕತೆ, ಹಿರಿಯರ ಜೊತೆ ವಾಗ್ವಾದ… ಹೀಗೆ ಬಿಡುವಿಲ್ಲದ, ದಣಿವಿಲ್ಲದ ಶರಣರ ಸಂಗದೊಳಗೆ ಅನುಭಾವಿಯ ಹಾಗೆ ದಿನದಿಂದ ದಿನಕೆ ವಿಚಾರ ವಿವೇಕದ ಮಾತುಗಳ ತಿದ್ದಿ ತೀಡತೊಡಗಿದ.

ಅರಮನೆಯಲ್ಲಿ ಬಸವಣ್ಣನಿಗೆ ಕಾಯಕ ಹೆಚ್ಚಾದರೆ ಚನ್ನಬಸವಣ್ಣ ಅನುಭವಮಂಟಪದ ದೇಖರೇಕಿ ನೋಡಿಕೊಳ್ಳತೊಡಗಿದ. ಕೊಂಡೆಯರ ಕಾಟಕ್ಕೆ ಒಮ್ಮೊಮ್ಮೆ ಅರಮನೆಯ ಕಾಯಕವೇ ಹೊರೆಯಾಗಿ ಇಲ್ಲಸಲ್ಲದ ಮಾತುಗಳನ್ನು ಕೇಳಬೇಕಾಗುತ್ತಿತ್ತು. ನಿಧನಿಧಾನ ಬಸವಣ್ಣ ಹಗೂರಾಗುತ್ತ ಅರಮನೆಯಿಂದ ಬಿಡಿಸಿಕೊಂಡು ಮಹಾಮನೆಯಲ್ಲಿದ್ದುಕೊಂಡೇ ಚನ್ನಬಸವಣ್ಣನ ಮೂಲಕ ರಾಜ್ಯದ ಇತಿಮಿತಿಗೆ ತಕ್ಕಂತೆ ಕೆಲಸ ಮಾಡತೊಡಗಿದಾಗ ಮಂಚಣ್ಣನೆಂಬ ಕುಹಕವಾಡಿಗನ ಚಾಡಿ ಮಾತುಗಳು ಅರಮನೆಯ ದಿಕ್ಕನ್ನೇ ಬದಲಿಸುತ್ತಿರುವ ಅನುಭವವಾಗತೊಡಗಿತು.

ವಿರಸಕ್ಕೆ ಕಾರಣವೇ ಇಲ್ಲದ ಹೊತ್ತಲ್ಲಿ ಕಿಡಿ ಹೊತ್ತಿಕೊಳ್ಳಲಾರಂಭಿಸಿತು. ಹನ್ನೆರಡು ಗಾವುದದ ಕಲ್ಯಾಣ ಪಟ್ಟಣದ ವಿಸ್ತೀರ್ಣವು ದೊಡ್ಡದಾಗುತ್ತಾ ಮನಸ್ಸಿನ ಅಲ್ಲೋಲಕಲ್ಲೋಲವೇ ಮೇಲೆದ್ದು ಅರಿವು ಆಚಾರವಾಗಿ ಅನುಭಾವವಾಗುವ ಪಕ್ವ ಕಾಲಕ್ಕಾಗಿ ಕಾಯತೊಡಗಿದ್ದ.

ರಾಜನ ಮಗನೇ ರಾಜನ ವಿರುದ್ಧ ತಿರುಗಿಬಿದ್ದಾಗ ಎದ್ದ ಧೂಳಿನ ಕಣಗಳು ಒಂದೊಂದೇ ಶರೀರವನ್ನು ಹೊಕ್ಕು ನಂಬಬಾರದ ಸಂಗತಿಗಳನ್ನು ನಂಬಲೇಬೇಕಾದಂತೆ ಕತೆಗಳಾಗಿ ಕಲ್ಯಾಣದ ತುಂಬ ಹರಿದಾಡತೊಡಗಿದವು.

ಜೈನರ ವಿರುದ್ಧ ಪಿತೂರಿ ಮಾಡಿಸುತ್ತಿದ್ದಾನೆ ಬಸವಣ್ಣ.

ವೈದಿಕರ ನಂಬಿಕೆಯನ್ನು ಮುರಿಯಲು ಹೊರಕೇರಿ, ಕೆಳಗೇರಿ ಜನರನ್ನು ಹುರಿದುಂಬಿಸಿ ಬಿಜ್ಜಳರಾಜನನ್ನೇ ಕೆಳಗಿಳಿಸುವ ಸಂಚು ಮಾಡುತ್ತಿದ್ದಾನೆ ಬಸವಣ್ಣ,

ಕಲ್ಯಾಣದಲ್ಲಿ ಬಿಜ್ಜಳ ಒಂದು ಸಿಂಗರಿಸಿದ ರಾಜಗೊಂಬೆಯಷ್ಟೆ, ನಡೆಯುವುದೆಲ್ಲ ಬಸವಣ್ಣ ಮತ್ತವನ ಶರಣರ ಆಟವೇ ಜೋರು.

ವೈದಿಕರ ಮನೆಗಳಿಗೆ ಶರಣರು ಬೆಂಕಿ ಹಚ್ಚಿ ಸುಡುತ್ತಾರಂತೆ..

ಆ ಬಸವಣ್ಣನಿಗೆ ಮಾಯಾಮೋಡಿ ತಿಳಿದಿದ್ದರಿಂದ ರಾಜನ ಕಣ್ಣಿಗೆ ಮಣ್ಣೆರಚಿದ್ದಾನೆ…

ರಾಜ್ಯದ ಬೊಕ್ಕಸವನ್ನೆಲ್ಲ ಖಾಲಿ ಮಾಡಿ ಶರಣರ ಜೋಳಿಗೆ ತುಂಬಿಸುತ್ತಿದ್ದಾನೆ ಬಸವಣ್ಣ..

ಹೀಗೆ.. ಇಂಥವೇ ನೂರಾರು ಗಾಳಿಮಾತುಗಳನ್ನ ತೇಲಿಬಿಟ್ಟು ರಾಜ ಮತ್ತು ಬಸವಣ್ಣನ ನಡುವೆ ದೊಡ್ಡದೊಂದು ಗೋಡೆ ಕಟ್ಟಿದ್ದರು ಕೊಂಡೆಯರು. ತಿಥಿ, ಗಳಿಗೆ, ನಕ್ಷತ್ರ ನೋಡದ ಯಾವ ಭಿನ್ನ ಮತಾಚರಣೆಯ ಗೊಡವೆ ಇಲ್ಲದ, ಶರಣನ ಮಗನಿಗೆ ಮತ್ತೊಬ್ಬ ಶರಣನ ಮಗಳನ್ನು ಕೊಟ್ಟು ಮದುವೆ ಮಾಡಲಾಯ್ತು. ಅದೊಂದು ಶರಣರ ಬದುಕಿನಲ್ಲೇನು ಇಡೀ ಮಾನವಕುಲದಲ್ಲೆ ನಡೆಯಬಹುದಾದ ಕ್ರಿಯೆಯಷ್ಟೆ… ಕೊಂಡೆಯರಿಗೆ ಅವಕಾಶ ಸಿಕ್ಕಿದಂತಾಯ್ತು. ಚನ್ನಬಸವಣ್ಣನ ಕಣ್ಣೆದುರೆ ಕಸಪಯ್ಯ ಕಲ್ಯಾಣದ ದಂಡನ್ನು ತನಗೆ ಬೇಕಾದಂತೆ ಬಳಸಿಕೊಳ್ಳಲಾರಂಭಿಸಿದ. ಅಲ್ಲಮಪ್ರಭು ಗಳಗಳನೇ ತೂರಿಬಂದ ಒಂದೊಂದು ಶಬ್ದವನ್ನೂ ಬಿಡದೆ ಆಡುತ್ತಾಡುತ್ತಾ ಗಿರಿಯತ್ತ ಹೊರಟುಹೋದರು. ಬಸವಣ್ಣನ ಮನಸ್ಸು ಕ್ಷೋಭೆಗೊಂಡಿತ್ತಲ್ಲ ಕಪ್ಪಡಿಸಂಗಮದತ್ತ ಹೊರಟೇಬಿಟ್ಟರು. ಅವರು ಹೊರಡುವಾಗ ತಡೆದು ನಿಂತು ಕಡೆಯ ಮಾತೊಂದನ್ನು ಹೇಳಿದ್ದರು.

“ಜೋಳವಾಳಿಯಾನಲ್ಲ ವೇಳೆವಾಳಿಯ ನಾನಯ್ಯ..  ಚನ್ನಬಸವಣ್ಣ ಇದು ಕಟೆದು ನಿಲ್ಲಿಸಿದ ಚಿತ್ತಾರ ಮಂಟಪ. ಇಲ್ಲಿ ದೇಹಕ್ಕೆ ದಂಡನೆಯಾಗಬಹುದು, ಮನಸ್ಸು ಘಾಸಿಗೊಳ್ಳಬಹುದು ಆಡಿದ ಮಾತಿನ ವಿಚಾರ ಸೋಲಲಾರದು. ಆ ವಿಚಾರದ ನಿಲುವನ್ನ ನಿನ್ನ ಉಡಿಯಲ್ಲಿ ಹಾಕುತ್ತೇನಯ್ಯಾ…”

ಇದಿಷ್ಟೆ ಬಸವಣ್ಣ ಹೇಳಿದ್ದು.. ದುಡುದುಡು ಹೊರಟೇಬಿಟ್ಟರು. ಹಿಂದೆಹಿಂದೆ ನೂರಾರು, ಸಾವಿರಾರು ಶರಣರು ಕಲ್ಯಾಣ ನಗರದ ಪುಣ್ಯವೇ ಹೊರಟಿದೆ ನಾವಿಲ್ಲಿದ್ದು ಏನು ಮಾಡುವುದೆಂದು ಹೆಜ್ಜೆ ಹಾಕತೊಡಗಿದರು. ಆದರೆ ಬಸವಣ್ಣ ತನ್ನೊಡನೆ ಯಾರನ್ನೂ ಬರಗೊಡಲಿಲ್ಲ.

ಬಸವಣ್ಣನಿಲ್ಲದ ಕಲ್ಯಾಣದ ಗತಿ ಏನಾದೀತೆಂದು ಮೊದಲೇ ಊಹಿಸಿದ್ದ ಚನ್ನಬಸವಣ್ಣ ಆದಷ್ಟು ಬೇಗ ಹೋಗಿ ತನ್ನ ಕಾವಲುಪಡೆಯನ್ನು ಕೂಡಿಕೊಳ್ಳಬೇಕು, ಸುಳ್ಳುಸುದ್ದಿಗೆ ಕಿವಿಗೊಡದಂತೆ ಸೈನಿಕರನ್ನು ಎಚ್ಚರಿಸಬೇಕೆಂಬ ಧಾವಂತ ಅವನಲ್ಲಿತ್ತು. ಪೂಜೆಪುನಸ್ಕಾರ, ಪ್ರಸಾದ ಇತ್ಯಾದಿ ಮುಗಿಸಿ ಹೋಗುವಷ್ಟರಲ್ಲಿ ಅರಮನೆಯ ಮುಖ್ಯದ್ವಾರದ ಮೇಲಿನ ಎಚ್ಚರಿಕೆಯ ಗಂಟೆ ಢಣ್ ಎಂದು ಮೂರು ಸಲ ಬಾರಿಸಿತು. ಅದು ಆಪತ್ಕಾಲದ ಸೂಚನೆ ಎಂದು ರಾಜ್ಯಾಡಳಿತದ ಸನ್ನೇ ಹೇಳುತ್ತದೆ ಆದ್ದರಿಂದ ಲಗುಬಗೆಯಿಂದ ಅರಮನೆ ಕಡೆಗೆ ನಡೆದ ಚನ್ನಬಸವಣ್ಣ…

ಶರಣರು ಅರಮನೆಯನ್ನು ಸೂರೆಗೊಳ್ಳುತ್ತಿದ್ದಾರೆಂದು ಯಾರೋ ಕೂಗಿದರು..

ಸಲ್ಲದ ಸುದ್ದಿಗಳಿಗೆ ಕಿವಿಗೊಡುತ್ತಾ ಅರಮನೆಯ ಸುತ್ತಲೂ ನೂರಾರು, ಸಾವಿರಾರು ಜನ ಜಮಾಯಿಸಿದರು. ದೊಂದಿಯು ಭುಗಿಲೆದ್ದಿದ್ದೆ ತಡ ಕಸಪಯ್ಯನ ಮಂದಿ ಅರಮನೆಯನ್ನು ಸುತ್ತುವರಿದಿದ್ದರು. ಕಾವಲುಪಡೆಯ ದಣ್ಣಾಯಕ ಚನ್ನಬಸವಣ್ಣನಿಗೆ ಅರಮನೆಯ ಪ್ರವೇಶವನ್ನು ನಿರ್ಬಂಧಿಸಲಾಯ್ತು. ಮತ್ತಾರೋ ಶರಣರು ಬಿಜ್ಜಳನ ಕಡೆಯವರ ಮೇಲೆರಗಿ ಗಾಯಗೊಳಿಸುತ್ತಿದ್ದಾರೆಂದು ಗಾಳಿ ಸುದ್ದಿ ತೇಲಿಸಿದರು. ಗಾಯದ ಮೇಲೆ ಉಪ್ಪು ಸುರಿದಂತೆ ಸುಳ್ಳು ಕತೆಗಳು ಒಂದೊಂದಾಗಿ ಕಲ್ಯಾಣದ ಬೀದಿಯಲ್ಲಿ ಸುಳಿದಾಡತೊಡಗಿದವು.

ಕೂಡಲಚೆನ್ನಸಂಗಮಾ…!

ಚನ್ನಬಸವಣ್ಣನವರು ಹೋದ ಅವಸರದಲ್ಲೇ ಮರಳಿ ಮಹಾಮನೆಗೆ ಬಂದಾಗ ಪರಿಸ್ಥಿತಿಯು ಬಣ್ಣಬದಲಿಸಿತ್ತಲ್ಲ..! ಶರಣೆಯರು ಗುಂಪುಗುಂಪಾಗಿ ಬರತೊಡಗಿದ್ದರು. ಮುಂದೇನಾದೀತೆಂಬ ಆತಂಕದ ಗೆರೆಗಳು ಮುಖದ ಮೇಲೇರಿ ಕುಳಿತಿದ್ದವು.

ದಿನ ಕಳೆದು ದಿನ ಬೆಳಗಾಗುವುದರೊಳಗೆ ಕಲ್ಯಾಣದ ಬದುಕು ದಿನದಂತಿರಲಿಲ್ಲ. ಮಹಾಮನೆಯನ್ನು ಬಿಟ್ಟು ಕಲ್ಯಾಣದ ಬೀದಿಗಳಲ್ಲಿ ಶರಣರು ಕಾಲಿಟ್ಟರೆ ಸಾಕು ಸೈನ್ಯವು ಎಳೆದೊಯ್ಯತೊಡಗಿತ್ತು. ವಿಚಾರಣೆ ನೆಪದಲ್ಲಿ ಇಲ್ಲಸಲ್ಲದ ತಾಪತ್ರಯ ಕೊಡತೊಡಗಿದ್ದರು. ಬಿಜ್ಜಳನ ಕಡೆಯವರು ಶೀಲ ಹರಳಯ್ಯರನ್ನೂ, ಮಧುವರಸರನ್ನು ಹಿಡಿದೊಯ್ದು ಆನೆಕಾಲಿಗೆ ಕಟ್ಟಿ ಎಳೆಹೂಟೆ ಎಳೆಸಿರೆಂದು ಸೂವಿದೇವ ರಾಜಾಜ್ಞೆ ಹೊರಡಿಸಿದ ಎಂಬ ಸುದ್ದಿ ತಂದರು. ಅದೇ ರಾತ್ರಿಗೆ ಮತ್ತಾರೋ ಬಿಜ್ಜಳ ರಾಜನ ಕೊಲೆಯಾಯ್ತು… ಎಂದರು. ಶರಣರೇ ಕೊಲೆಮಾಡಿದರೆಂದು ಮತ್ತೊಂದು ಸುದ್ದಿ.

ನಿಜವಾವುದು, ಸುಳ್ಳಾವುದೆಂದು ಪ್ರಮಾಣಿಸುವಷ್ಟು ವ್ಯವಧಾನ ಕಿಂಚಿತ್ತೂ ಉಳಿದಿರಲಿಲ್ಲ. ಚನ್ನಬಸವಣ್ಣ ಯಾವ ಹಾದಿಯಲ್ಲಿ ನಡೆದು ಮಹಾಮನೆಯಿಂದ ಹೊರಟು ಅರಮನೆಯನ್ನು ತಲುಪುತ್ತಿದ್ದರೋ ಆ ಹಾದಿಯಲ್ಲಿ ಕಲ್ಲುಮುಳ್ಳುಗಳನ್ನ ಸುರಿಯತೊಡಗಿದ್ದರು. ಒಬ್ಬೊಬ್ಬ ಶರಣರ ಮನೆಯನ್ನೂ ಗುರುತಿಸಿ ಮನೆಗಳನ್ನು ಸುಡತೊಡಗಿದಾಗ ಚನ್ನಬಸವಣ್ಣನ ಮನಸ್ಸು ಮೃದುವಾಗ ತೊಡಗಿತು.

ಕರುಣೆಯ ಚಿತ್ರವೇ ಬದಲಾದಂತಿದ್ದ ಕಲ್ಯಾಣದ ಹಾದಿಗಳಲ್ಲಿ ರಕ್ತ ಮಡುವುಗಟ್ಟತೊಡಗಿದಾಗ ಶರಣರೆಲ್ಲರ ಚಿತ್ತ ಚನ್ನಬಸವಣ್ಣನ ಮೇಲೆ ನೆಟ್ಟಿತ್ತು. ಯಾವುದು ನಡೆಯಬಾರದೆಂದು ಬಸವಣ್ಣನವರು ಎಣಿಸಿದ್ದರೋ ಅದು ನಡೆಯುತ್ತಿರುವುದು ಘಾಸಿಗೊಳಿಸುತ್ತಿತ್ತು. ಶರಣರು ಅನಿವಾರ್ಯವಾಗಿ ಕೈಗೆ ಭಲ್ಲೆ-ಭರ್ಚಿ, ಕಿರುಗತ್ತಿ-ಖಡ್ಗ ಗುರಾಣಿ ಹಿಡಿಯತೊಡಗಿದಾಗ ಕಾವು ಮತ್ತಷ್ಟು ಏರತೊಡಗಿದ್ದಾಗಲೇ ಧ್ಯಾನಸ್ಥನಾಗಿದ್ದ ಚನ್ನಬಸವಣ್ಣನ ಮುಂದೆ ಅಬ್ಬೆ ಕುಳಿತಿದ್ದಳು. ಅಕ್ಕಂದಿರಾದ ನೀಲಾಂಬೆ ಗಂಗಾಂಬೆಯರೂ ಕುಳಿತಿದ್ದರು.

“ಚನ್ನಬಸವಣ್ಣ.. ಶರಣರೆಲ್ಲರ ಚಿತ್ತ ನಿನ್ನ ಮೇಲಿದೆ. ಬಸವಣ್ಣ ಹೇಳಿದುದೇ ಮಾತು, ಆ ಮಾತೇ ಜ್ಯೋತಿರ್ಲಿಂಗ ಎಂದು ನಂಬಿ ನಡೆದವರು ಶರಣರು. ಅವನಿಲ್ಲದ ಈ ಹೊತ್ತಲ್ಲಿ ನೀನಲ್ಲದೆ ಮತ್ತಾರೂ ದಿಕ್ಕಿಲ್ಲ ಶರಣರಿಗೆ.”

ನಾಗಲಾಂಬೆಯ ಕಣ್ಣುಗಳಲ್ಲಿ ನೀರು ತುಂಬಿತ್ತು. ನೆರೆದ ಶರಣಶರಣೆಯರ ಕಣ್ಗಳೂ ತೇವ ತೇವ.. ಆಳದೊಳಗೆ ಕರುಣೆಯನ್ನೇ ಧ್ಯಾನಿಸುತ್ತಿದ್ದ ಚನ್ನಬಸವಣ್ಣನ ಹೃದಯವು ಭೋರ್ಗರೆಯುತ್ತಿರುವುದು ಯಾರ ಕಣ್ಣಿಗೂ ಬೀಳಲಿಲ್ಲ. ಈ ನೋವ, ಈ ಸಾವ ಯಾರ ಮುಂದಾದರೂ ಹೇಳಿಕೊಂಡೇನೆಂದರೆ ಅಲ್ಲಿ ಬಿಜ್ಜಳನಿರಲಿಲ್ಲ ಇಲ್ಲಿ ಬಸವಣ್ಣನಿರಲಿಲ್ಲ. ಅಲ್ಲಿರುವ ಸಂಗಯ್ಯನು ಇಲ್ಲಿರಲಿಲ್ಲವೇ ಎಂದಳು ನೀಲಾಂಬೆ… ಎದೆಯೊಳಗೆ ತೆರೆತೆರೆಗಳೇಳುತ್ತಿದ್ದರೂ ಪ್ರಶಾಂತ ಸಮುದ್ರದ ಹಾಗೆ ಕುಳಿತಿದ್ದವನ ಮನಸ್ಸಿಗೆ ಏನು ತೋಚಿತೋ… ಎದ್ದವನೇ ದುಡುದುಡು ನಡೆದು ಹೋಗಿ ಮಹಾಮನೆಯ ನಡುಕಂಬದಲ್ಲಿದ್ದ ದೀಪಕ್ಕೆ ಎಣ್ಣೆ ಹಾಕಿ ಬತ್ತಿ ಏರಿಸಿದ. ಮುದುತದುಕರೆಲ್ಲ ರಕ್ತಮೆತ್ತಿದ್ದ ಮೈಕೈಗಳನ್ನು ತೊಳೆದುಕೊಂಡು ನಿಟ್ಟುಸಿರು ಬಿಡುತ್ತಲಿದ್ದರು.

ಅದೇ ರಾತ್ರಿ ಸೊನ್ನಲಿಗೆಯಿಂದ ಸಿದ್ಧರಾಮರು ಓಡೋಡಿ ಬಂದರು. ರಾತ್ರಿಯೆಲ್ಲಾ ಮಾತಾಡಿ ತಮತಮಗೆ ದಿಕ್ಕು ತೋಚಿದತ್ತ ಶರಣರು ಹೊರಟು ಇಲ್ಲಿನ ಕಲ್ಯಾಣವ ಎಲ್ಲೆಡೆಯೂ ಕಟ್ಟುವಂತಾಗಲಿ ಎಂದು ಚನ್ನಬಸವಣ್ಣ ಹೇಳಿದಾಗ.. ಕೆಲವರು ತಮ್ಮ ದಾರಿ ತಾವು ತುಳಿದರು. ಇನ್ನುಳಿದವರು ಸಿದ್ಧರಾಮರ ಜೊತೆಗೂಡಿ ಸೊನ್ನಲಿಗೆಗೆ ಹೋಗುವುದೆಂದೂ, ಬಸವಣ್ಣನವರಿಗೆ ಸುದ್ದಿ ಮುಟ್ಟಿಸುವುದೆಂದೂ ಮಾತಾಡಿಕೊಂಡರು.

ಒಂದು ಮಾತು.. ಯಾವ ಶರಣನೂ ಈ ಕಲ್ಯಾಣದಿಂದ ರಾತೋರಾತ್ರಿ ಹೊರಡಕೂಡದು. ಹಗಲು ಹೊತ್ತಿನಲ್ಲಿಯೇ ಗುಂಪುಗುಂಪಾಗಿ ಹೊರಡಬೇಕು. ಶರಣರಿಗೆ ಮರಣವೇ ಮಹಾನವಮಿ.

ಚನ್ನಬಸವಣ್ಣನ ಈ ಮಾತು ಪ್ರತಿಯೊಬ್ಬನ ನಾಲಿಗೆಯಲ್ಲೂ ಹೊರಳಾಡಿ ಇಡೀ ಕಲ್ಯಾಣವೇ ಬೆಚ್ಚಿಬೀಳುವಂಥ ಸ್ವರವೊಂದು ಮಹಾಮನೆಯಿಂದ ಹೊರಟಿತು..

ಮರಣವೇ ಮಹಾನವಮಿ..

ಮರಣವೇ ಮಹಾನವಮಿ..

ಶರಣೆಯರು ಮೃದು ಎದೆಗಳನ್ನು ಗಟ್ಟಿಮಾಡಿಕೊಂಡು ವೀರಗಚ್ಚಿಯ ತೊಟ್ಟು, ಎಡಗೈಯಲ್ಲೊಂದು ಗುರಾಣಿ ಬಲಗೈಯಲ್ಲಿ ಖಡ್ಗವ ಹಿಡಿದು, ಹೆಗಲಲ್ಲಿ ಜೋಳಿಗೆ, ಜೋಳಿಗೆಯೊಳಗೆ ತಾವು ನುಡಿದಂತೆ ನಡೆದ-ನಡೆದಂತೆ ಆಡಿದ ವಚನಗಳನ್ನು ಹೊತ್ತಿದ್ದರು.

ಸಿದ್ಧರಾಮರು ಮುಂದೆ, ಅವರ ಹಿಂದೆ ಚನ್ನಬಸವಣ್ಣ… ಮಿಕ್ಕಾದ ಪ್ರಮಥರೆಲ್ಲ ಅವರ ಹಿಂದೆಹಿಂದೆ ಬರುತ್ತಿದ್ದಂತೆಯೇ ಕಲ್ಯಾಣವೆಂಬುದು ಬರಿದೋ ಬರಿದಾಗುತ್ತಾ ಸಾಗರೋಪಾದಿಯಲ್ಲಿ ವಚನಗಳನ್ನ ಹಾಡುತ್ತಾ ಶರಣರ ದಂಡು ಹೊರಟಿತ್ತು ಸೊನ್ನಲಿಗೆಯತ್ತ.

(ಮುಂದುವರೆಯುವುದು)

 

 

 

 

 

Previous post ಅನುಪಮ ಯೋಗಿ ಅನಿಮಿಷ
ಅನುಪಮ ಯೋಗಿ ಅನಿಮಿಷ
Next post ಬಸವ ಸ್ಮರಣೆ ಇಂದಿಗೂ ಏಕೆ?
ಬಸವ ಸ್ಮರಣೆ ಇಂದಿಗೂ ಏಕೆ?

Related Posts

ಕುಂಬಾರ ಲಿಂಗಾಯತರು
Share:
Articles

ಕುಂಬಾರ ಲಿಂಗಾಯತರು

April 9, 2021 Bayalu
-ಬಸವರಾಜ ಕುಂಚೂರು ಲಿಂಗವಂತ ಕುಂಬಾರರ ಎಲ್ಲ ಆಚರಣೆಗಳೂ ಮಿಕ್ಕ ಲಿಂಗವಂತರಂತೆಯೇ ಇವೆ. ಅಂದರೆ ಹೆರಿಗೆಯಾದ ಮೇಲೆ ಬಾಣಂತಿ ಮತ್ತು ಕೂಸಿಗೆ ತಿಂಗಳೊಪ್ಪತ್ತು ಬೇವಿನ ಎಲೆ ಹಾಕಿ...
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
Share:
Articles

ಶರಣರ ದೃಷ್ಟಿಯಲ್ಲಿ ವ್ರತಾಚರಣೆ

October 2, 2018 ಸರೋಜಿನಿ ಭದ್ರಾಪುರ
ವ್ರತ ಹೋದಾಗಳೇ ಇಷ್ಟಲಿಂಗದ ಕಳೆ ನಷ್ಟವವ್ವಾ ಅವರು ಲಿಂಗವಿದ್ದ ಭವಿಗಳು! ಅದು ಹೇಗೆಂದಡೆ; ಪ್ರಾಣವಿಲ್ಲದ ದೇಹದಂತೆ ಉರಿಲಿಂಗಪೆದ್ದಿಗಳರಸ ಬಲ್ಲ ನೊಲ್ಲನವ್ವ. ಇದು ಶರಣ ಉರಿಲಿಂಗ...

Comments 9

  1. Panchakshari H v
    May 8, 2020 Reply

    ಉತ್ತಮ ಲೇಖನ. ಮುಂದಿನ ವಿಚಾರಕ್ಕಾಗಿ ಉಸಿರು ಬಿಗಿಹಿಡಿದು ಕಾಯುತ್ತಿದ್ದೇವೆ.
    ಶರಣುಶರಣಾರ್ಥಿ

  2. SIDDHALINGAIAH TUMKUR
    May 8, 2020 Reply

    ಅಕ್ಕನಾಗಮ್ಮ ಮತ್ತು ಚನ್ನಬಸವಣ್ಣ ಕಲ್ಯಾಣ ಕ್ರಾಂತಿಗೆ ಹೆಗಲು ಕೊಟ್ಟು ನಿಂತವರು. ಕತೆ ಓದುತ್ತಾ ಕಣ್ಣು ತೇವವಾಯಿತು….

  3. Prasanna Kumar
    May 11, 2020 Reply

    ಬಸವಣ್ಣನವರು ದೊಡ್ಡ ಹುದ್ದೆಯಲ್ಲಿದ್ದರು, ಎಂತೆಂತಹ ಆಪಾದನೆಗಳನ್ನು ಅವರು ಎದುರಿಸಬೇಕಾಯಿತು!! ಅವರ ಸುತ್ತ ಇದ್ದ ಕೇಡಿಗರ ಕೂಟ, ಅಲ್ಲಿ ಹುಟ್ಟುತ್ತಿದ್ದ ಪಿತೂರಿಗಳು ಬಸವಣ್ಣನವರನ್ನು ಹೇಗೆಲ್ಲಾ ಕಾಡಿರಬೇಡ!!!!

  4. Mrutyunjaya Revadi
    May 13, 2020 Reply

    ಕಲ್ಯಾಣದ ಕ್ರಾಂತಿಯ ಓದು ನಮ್ಮ ಸ್ವತಂತ್ರ ಸಂಗ್ರಾಮವನ್ನು ನೆನಪಿಸುತ್ತದೆ. ಇಲ್ಲಿ ಮರಣವೇ ಮಹಾನವಮಿ, ಅಲ್ಲಿ ಮಾಡು ಇಲ್ಲವೇ ಮಡಿ..

  5. ಕವಿತಾ ಕಲಾದಗಿ
    May 14, 2020 Reply

    ಅಬ್ಬೆ ಅಕ್ಕನಾಗಮ್ಮನ ತೊಡೆಯ ಮೇಲೆ ಚಿನ್ಮಯ ಜ್ಞಾನಿ ಚನ್ನಬಸವಣ್ಣನ ಸಂವಾದ ಹೃದಯಸ್ಪರ್ಶಿಯಾಗಿದೆ. ಎಂಥ ತಾಯಿಗೆ, ಎಂಥ ಮಗ!!! ಶರಣ ಚೇತನಗಳ ಬದುಕನ್ನು ಮನಕ್ಕೆ ಹತ್ತಿರ ತಂದು ನಿಲ್ಲಿಸಿದ ಕತೆಗಾರ ಮಹಾದೇವ ಶರಣರಿಗೆ ಶರಣುಗಳು.

  6. Mahadevappa Jevargi
    May 16, 2020 Reply

    ಚನ್ನಬಸವಣ್ಣನವರ ಕತೆ ಸುಂದರವಾಗಿ ಮೂಡಿಬಂದಿದೆ. ಮುಂದಿನ ಹೋರಾಟದ ಮತ್ತು ಉಳುವಿಯ ಕತೆಗಾಗಿ ಕಾತುರದಿಂದ ಕಾಯುತ್ತಿದ್ದೇವೆ.

  7. ಚನ್ನಪ್ಪ ಮುದೇನೂರು
    May 20, 2020 Reply

    ಅರಮನೆಯ ವ್ಯವಹಾರಗಳಲ್ಲಿ ಬೆರೆತ ವಿಷಪೂರಿತ ವಾತಾವರಣದಲ್ಲಿ ಚನ್ನಬಸವಣ್ಣ ಮತ್ತು ಬಸವಣ್ಣ ಹೇಗೆ ಸರಳ ಸಜ್ಜನಿಕೆಯಿಂದ ಬದುಕಿದ್ದಿರಬಹುದು ಎನ್ನುವ ಕಲ್ಪನೆಯೇ ರೋಮಾಂಚನಕಾರಿಯಾಗಿದೆ. ಕತೆಯಲ್ಲಿ ಅದರ ಸಣ್ಣ ಸೂಚನೆಯೊಂದು ನೀಡಿದ್ದಾರೆ. ಕತೆಯ ದಾಟಿ ಬಹಳ ಚನ್ನಾಗಿದೆ.

  8. Bharathi Chitradurga
    May 20, 2020 Reply

    ಚನ್ನಬಸವಣ್ಣನವರ ಕಾಯಕ ಏನಾಗಿತ್ತು ಎನ್ನುವ ನನ್ನ ಬಹಳ ದಿನದ ಪ್ರಶ್ನೆಗೆ ಕತೆಯಲ್ಲಿ ಉತ್ತರ ಸಿಕ್ಕಿತು.

  9. lingappa Kavile
    May 27, 2020 Reply

    ಚಿಕ್ಕ ವಯಸ್ಸಿನಲ್ಲೇ ಇಡೀ ಕ್ರಾಂತಿಗೆ ಸಾಕ್ಷಿಯಾದ ಚನ್ನಬಸವಣ್ಣನವರ ಕತೆ, ಮಹಾಕತೆ ತುಂಬಾ ಕುತೂಹಲಕಾರಿಯಾಗಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನೆಲದ ನಿಧಾನ
ನೆಲದ ನಿಧಾನ
April 29, 2018
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
March 17, 2021
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
March 12, 2022
ಪೈಗಂಬರರ ಮಾನವೀಯ ಸಂದೇಶ
ಪೈಗಂಬರರ ಮಾನವೀಯ ಸಂದೇಶ
November 7, 2020
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
December 3, 2018
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
January 7, 2019
ಹೀಗೊಂದು ತಲಪರಿಗೆ (ಭಾಗ-4)
ಹೀಗೊಂದು ತಲಪರಿಗೆ (ಭಾಗ-4)
October 5, 2021
ಛಲಬೇಕು ಶರಣಂಗೆ…
ಛಲಬೇಕು ಶರಣಂಗೆ…
April 29, 2018
ಕರ್ತಾರನ ಕಮ್ಮಟ  ಭಾಗ-6
ಕರ್ತಾರನ ಕಮ್ಮಟ ಭಾಗ-6
December 22, 2019
ಹಾಯ್ಕುಗಳು
ಹಾಯ್ಕುಗಳು
November 10, 2022
Copyright © 2023 Bayalu