Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಧೀಮಂತ ಶರಣ ಬಹುರೂಪಿ ಚೌಡಯ್ಯ
Share:
Articles April 29, 2018 ಡಾ. ಶಶಿಕಾಂತ ಪಟ್ಟಣ

ಧೀಮಂತ ಶರಣ ಬಹುರೂಪಿ ಚೌಡಯ್ಯ

ಕಲ್ಯಾಣವು 12 ನೇ ಶತಮಾನದಲ್ಲಿ ಅನೇಕ ಶರಣರ, ಸಾಧಕರ ಕೇಂದ್ರವಾಗಿತ್ತು. ಹಲವು ವೃತ್ತಿಯ ಜನರು ಕಲ್ಯಾಣಕ್ಕೆ ಬಂದು ತಮ್ಮ ಕಾಯಕ ಮಾಡಿಕೊಂಡು ಸಮತೆ, ಶಾಂತಿ, ಪ್ರೀತಿಯ ಸಹ ಬಾಳ್ವೆ ನಡೆಸಿದರು. ವರ್ಗ ವರ್ಣಗಳ ವಿರುದ್ಧ ಸಮರ ಸಾರಿದ ಶರಣರು ಜಗತ್ತಿನ ಸಮತೆಯ ಶಿಲ್ಪಿಗಳು. ಇಂತಹ ಒಂದು ಅಪೂರ್ವ ಚಳುವಳಿಯಲ್ಲಿ ಗುರುತಿಸಿಕೊಂಡ ಬಹುರೂಪಿ ಚೌಡಯ್ಯನವರು ಒಬ್ಬ ದಿಟ್ಟ ಶರಣ, ಬಸವ ಪ್ರೇಮಿ. ಇವರು ಬಹುರೂಪಿಯ ಕಾಯಕದ ಶ್ರೇಷ್ಠ ಕಲಾವಿದ. ಅತ್ಯಂತ ಸುಂದರ ಅನುಭಾವದಿಂದ ಶರಣರ ಮನವನ್ನು ಗೆದ್ದ ಧೀಮಂತ.

ಬಹುರೂಪಿ ಚೌಡಯ್ಯನವರ ಹುಟ್ಟೂರು ರೇಕಳಿಕೆ. ಬಾಲ್ಯದಿಂದಲೇ ಆಧ್ಯಾತ್ಮಿಕ ಮಾರ್ಗಕ್ಕೆ ಮನ ಸೋತ ಇವರದು, ವಿಭಿನ್ನ ವೇಷಭೂಷಣ ಮತ್ತು ಬಹು ಪಾತ್ರಾಭಿನಯದ ಮೂಲಕ ಜನರನ್ನು ರಂಜಿಸುವ ಕಾಯಕ. ಇದರ ಜೊತೆಗೆ ಜನರ ಆಪ್ತ ಮಾರ್ಗದರ್ಶಕರಾಗಿಯೂ ತಮ್ಮ ಸೇವೆಯನ್ನು ವಿಸ್ತರಿಸಿಕೊಂಡಿದ್ದರು. ಕಲ್ಯಾಣದ ಶರಣರಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಬಹುರೂಪಿ ಚೌಡಯ್ಯನವರು ‘ರೇಕಣ್ಣ ಪ್ರಿಯ ನಾಗಿನಾಥ’ ಎಂಬ ಅಂಕಿತದೊಂದಿಗೆ 66 ವಚನಗಳನ್ನು ರಚಿಸಿದ್ದಾರೆ. ಇವರ ದೀಕ್ಷಾ ಗುರು ರೇಕನಾಥ, ಜ್ಞಾನ ಗುರು ನಾಗಿನಾಥ. ಇವರಿಬ್ಬರ ನೆನಪಿಗೋಸ್ಕರ ‘ರೇಕಣ್ಣ ಪ್ರಿಯ ನಾಗಿನಾಥ’ ಎಂಬ ಅಂಕಿತವನ್ನು ಇಟ್ಟುಕೊಂಡಿದ್ದಾರೆ. ಚೌಡಯ್ಯನವರು ಪೂರ್ವಾಶ್ರಮದಲ್ಲಿ ನಾಥ ಪರಂಪರೆಯಿಂದ ಪ್ರಭಾವಿತರಾಗಿ ನಂತರದಲ್ಲಿ ಕಲ್ಯಾಣವನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡವರು.

ಗಣ ಸಹಸ್ರ ನಾಮ, ಗುರುರಾಜ ಚರಿತ್ರೆ, ವೀರಶೈವಾಮೃತ ಮಹಾಪುರಾಣ, ಭೈರವೇಶ್ವರ ಕಾವ್ಯದ ಕಥಾ ಮಣಿ ಸೂತ್ರ ರತ್ನಾಕರ ಕೃತಿಗಳಲ್ಲಿ, ಜಾನಪದ ಹಾಡು, ಹಂತಿ ಪದ, ಲಾವಣಿ ಪದ, ಸುಗ್ಗಿ ಪದಗಳಲ್ಲಿ ಶರಣ ಬಹುರೂಪಿ ಚೌಡಯ್ಯನವರ ಉಲ್ಲೇಖಗಳನ್ನು ಕಾಣುತ್ತೇವೆ. ಬಹುರೂಪಿ ವೃತ್ತಿಯು ಇವರಿಗೆ ಪೂರ್ವಜರಿಂದ ಬಂದ ಬಳುವಳಿ. ಚೌಡಯ್ಯನವರು ಈ ಸುಂದರ ಕಲೆಯನ್ನು ಬಸವ ತತ್ವಗಳನ್ನು ಹರಡಲು, ಹೊಸ ವಿಚಾರಗಳನ್ನು ಜನ ಮನಕ್ಕೆ ಮುಟ್ಟಿಸಲು ಸಮರ್ಥವಾಗಿ ಬಳಸಿಕೊಂಡರು. ಕಾಯಕ, ದಾಸೋಹ ಸಿದ್ಧಾಂತಗಳಲ್ಲಿ ಅಗಾಧ ನಂಬಿಕೆ ಶ್ರದ್ಧೆಯುಳ್ಳ ಚೌಡಯ್ಯನವರು ಅವುಗಳನ್ನು ತಮ್ಮ ಬದುಕಿನಲ್ಲಿ ರೂಢಿಸಿಕೊಂಡು, ಶರಣರ ಆಚರಣೆ, ವ್ರತ ನೇಮಗಳು ಹೇಗಿರಬೇಕು ಎಂಬುದನ್ನು ಬೇರೆ ಬೇರೆ ಪಾತ್ರಗಳಲ್ಲಿ ರಸವತ್ತಾಗಿ ಮನ ಮುಟ್ಟುವಂತೆ ತೋರುತ್ತಿದ್ದರು. ಹಾಸ್ಯ, ಶೃಂಗಾರ, ವಿಡಂಬನೆ ಮತ್ತು ಟೀಕೆಗಳ ಅಭಿನಯಗಳ ಮೂಲಕ ಜನರನ್ನು ಎಚ್ಚರಿಸುವ ದಿಟ್ಟ ಗಣಾಚಾರ ಕಾಯಕ ಇವರದಾಗಿತ್ತು.

ಗುರು ಎನ್ನ ಮುಟ್ಟಿ ಗುರು ಶುದ್ಧವಾದನಯ್ಯ.
ಲಿಂಗ ಎನ್ನ ಮುಟ್ಟಿ ಲಿಂಗ ಶುದ್ಧವಾಯಿತ್ತಯ್ಯ.
ಜಂಗಮ ಎನ್ನ ಮುಟ್ಟಿ ಜಂಗಮ ಶುದ್ಧವಾದನಯ್ಯ.
ಪ್ರಸಾದ ಎನ್ನ ಮುಟ್ಟಿ ಪ್ರಸಾದ ಶುದ್ಧವಾಯಿತ್ತಯ್ಯ.
ಈ ಚತುರ್ವಿಧ ಎನ್ನ ಮುಟ್ಟಿ ಶುದ್ಧವಾಯಿತ್ತು ಕಾಣಾ
ರೇಕಣ್ಣಪ್ರಿಯ ನಾಗಿನಾಥಾ. (ಸಮಗ್ರ ವಚನ ಸಂಪುಟ: 8 ವಚನದ ಸಂಖ್ಯೆ: 151)

ಪ್ರಾಯಶಃ ತಾನಿಲ್ಲದೆ ಗುರುವಿನ ಅಸ್ತಿತ್ವವೇ ಇಲ್ಲ, ತನ್ನತನದಿಂದ ಗುರುವು ಶುದ್ಧನಾಗುವನು ಎಂದು ಹೇಳುವ ಚೌಡಯ್ಯನವರ ದಿಟ್ಟತನ ಅಮೋಘವಾದದ್ದು. ಲಿಂಗ ಎನ್ನ ಮುಟ್ಟಿ ಲಿಂಗ ಶುದ್ಧವಾಯಿತ್ತಯ್ಯ. ಅಂದರೆ ಲಿಂಗವೆಂಬ ಸಮಷ್ಟಿ ಭಾವವು ಸಾಧಕನ ಕುರುಹಿಗೆ ತಲುಪಿ, ತನ್ಮೂಲಕ ಲಿಂಗವು ಶುದ್ಧವಾಯಿತು. ಜಂಗಮ ಅಂದರೆ ಸಮಾಜವು ಶರಣನ ವ್ಯಕ್ತಿ ತತ್ವ ನಿಷ್ಠೆಯಿಂದ ಶುದ್ಧೀಕರಣಗೊಂಡಿತ್ತು. ಪ್ರಸನ್ನ ಪ್ರಸಾದ ಭಾವವು ತನ್ನ ಆತ್ಮಕ್ಕೆ ಚುಳುಕಾಗುವುದರ ಮೂಲಕ ಪ್ರಸಾದವು ಶುದ್ಧೀಕರಣಗೊಂಡಿತ್ತು. ಹೀಗೆ, ಈ ಚತುರ್ವಿಧ ಎನ್ನ ಮುಟ್ಟಿ ಶುದ್ಧವಾಯಿತ್ತು ಕಾಣಾ ಎನ್ನುವಲ್ಲಿ ತತ್ವವೇ ನಾವಾಗುವ ಬಗೆಯನ್ನು ಸೊಗಸಾಗಿ ತಿಳಿಸುತ್ತಾರೆ. ಸತ್ಯ ಶುದ್ಧ ಕಾಯಕದಲ್ಲಿದ್ದವನ ಭಕ್ತಿಯ ಸ್ಪರ್ಶದಿಂದ ಗುರು ಲಿಂಗ ಜಂಗಮ ಪ್ರಸಾದಗಳು ಶುದ್ಧಗೊಂಡವು ಎಂದು ಅಭಿಮಾನ ವಿಧೇಯತನದಿಂದ ಹೇಳಿಕೊಳ್ಳುವ ಮೂಲಕ ಶರಣರಿಗಿರಬೇಕಾದ ಆತ್ಮವಿಶ್ವಾಸಕ್ಕೆ ನಿದರ್ಶನವಾಗುತ್ತಾರೆ ಬಹುರೂಪಿ ಚೌಡಯ್ಯ.
ಚೌಡಯ್ಯನವರ ವಚನಗಳಲ್ಲಿ ಮುಖ್ಯವಾಗಿ ಎದ್ದು ಕಾಣುವಂಥವು- ಗಣಾಚಾರ, ಲಿಂಗಾಯತ ಧರ್ಮ ತತ್ವದ ನಿಷ್ಟೆ, ಲಿಂಗಾಂಗ ಸಾಮರಸ್ಯ, ಜಂಗಮ ನಿಷ್ಟೆ, ನ್ಯಾಯ ನಿಷ್ಠುರ ನೇರ ನುಡಿಗಳು. ಬಹಳಷ್ಟು ವಚನಗಳಲ್ಲಿ ಬೆಡಗಿನ ವೈಭವವನ್ನೂ ಕಾಣಬಹುದು. ಇವರ ಬಹುತೇಕ ವಚನಗಳು ರೇಕಣ್ಣಪ್ರಿಯ ನಾಗಿನಾಥಾ, ಬಸವನಿಂದ ಬದುಕಿತೀ ಲೋಕವೆಲ್ಲಾ ಎಂದು ಕೊನೆಗೊಳ್ಳುವುದನ್ನು ಗಮನಿಸಿದರೆ, ಬಸವಣ್ಣನವರ ಬಗೆಗಿರುವ ಇವರ ಉತ್ಕಟ ಪ್ರೀತಿ, ಭಕ್ತಿ ಮತ್ತು ಅಭಿಮಾನಗಳು ವ್ಯಕ್ತವಾಗುತ್ತವೆ.

ಗಾರುಡಿಗನ ವಿಷವಡರಬಲ್ಲುದೆ?
ಸೂರ್ಯನ ಮಂಜು ಮುಸುಕಬಲ್ಲುದೆ?
ಗಾಳಿಯ ಮೊಟ್ಟೆಯ ಕಟ್ಟಬಹುದೆ?
ಅಗ್ನಿಯ ಕೈಯಿಂದ ಆಕಾಶ ಬೇಯಬಲ್ಲುದೆ?
ನಿಮ್ಮನರಿದ ನಿಜಯೋಗಿಗೆ ಕರ್ಮಪಾಶವೆಲ್ಲಿಯದೊ
ರೇಕಣ್ಣಪ್ರಿಯ ನಾಗಿನಾಥ.

ಹಾವನ್ನು ಆಡಿಸುವ ಗಾರುಡಿಗನಿಗೆ ಹಾವು ಕಚ್ಚ ಬಲ್ಲುದೇ? ಮಂಜು ಎಷ್ಟೇ ದಟ್ಟವಾಗಿದ್ದರೂ ಸೂರ್ಯ���ಿಗೆ ಮುಸುಕಾಗಬಲ್ಲುದೆ? ಗಾಳಿಯನ್ನು ಮೂಟೆಯಲ್ಲಿ ಕಟ್ಟಿ ಹಿಡಿಯಬಹುದೇ? ಅಗ್ನಿಯಿಂದ ಆಕಾಶವನ್ನು ಬೇಯಿಸಬಹುದೆ? ನಿಮ್ಮನರಿದ ನಿಜಯೋಗಿಗೆ ಕರ್ಮಪಾಶ ಎನ್ನುವುದು ಎಲ್ಲಿದೆ ಎನ್ನುತ್ತಾರೆ. ಇಲ್ಲಿ ಸಮಷ್ಟಿಯನ್ನು ಅರಿಯುವ ಪ್ರಜ್ಞೆ ಇದ್ದರೆ ಅಂಥವನನ್ನು ಯಾವ ಕರ್ಮ ಪಾಶವೂ ಕಟ್ಟಿ ಹಾಕುವುದು ಸಾಧ್ಯವಿಲ್ಲ ಎಂಬ ಮಾತು ಬಹಳ ಅರ್ಥಪೂರ್ಣವಾಗಿದೆ.

ಬಹುರೂಪಿ ಚೌಡಯ್ಯನವರ ವಚನಗಳಲ್ಲಿ ಬಸವಣ್ಣ, ಚೆನ್ನಬಸವಣ್ಣ, ಅಲ್ಲಮ, ಮಡಿವಾಳ ಮಾಚಿದೇವ ಮುಂತಾದ ಶರಣರನ್ನು ಪ್ರಾಸಂಗಿಕವಾಗಿ ನೆನೆದಿರುವುದನ್ನು ಕಾಣಬಹುದು. ಬಹುರೂಪಿ ಚೌಡಯ್ಯನವರ ವಚನಗಳಲ್ಲಿ ಬೆಡಗು ಇದ್ದರೂ ಅವುಗಳಲ್ಲಿ ಸರಳತೆಯ ಸೊಬಗು ತುಂಬಿದೆ.

ಕೈಯ ಮರದು ಕಾದುವ ಅಂಕವದೇನೊ?
ಭಾವ ಮರದು ನೋಡುವ ನೋಟವದೇನೊ?
ಭಯವ ಮರದು ಮಾಡುವ ಭಕ್ತಿಯದೇನೊ?
ರೇಕಣ್ಣಪ್ರಿಯ ನಾಗಿನಾಥನಲ್ಲಿ ಗುರುವ ಮರದು
ಲಿಂಗವನೊಲಿಸಿದೆನೆಂದಡೆ ಆ ಉಭಯ ಗುರುಲಿಂಗವೆರಡೂ ಇಲ್ಲ.

ಭಕ್ತನಾದವನು ಹೇಗಿರಬೇಕು ಎನ್ನುವುದನ್ನು ಇಲ್ಲಿ ಉದಾಹರಣೆಗಳ ಮೂಲಕ ಹೇಳುತ್ತಾರೆ. ಖಡ್ಗವಿಲ್ಲದೆ ಕಾದಾಡುವ ಸೈನಿಕನ ದಡ್ಡತನ, ಯಾವುದೇ ಭಾವವಿಲ್ಲದೆ ನೋಡುವ ಶೂನ್ಯ ನೋಟದ ಗಮ್ಯತೆಯ ನಿಷ್ಪ್ರಯೋಜಕತೆ, ಶ್ರದ್ಧೆ ನಿಷ್ಠೆಯಿಲ್ಲದೆ ಮಾಡುವ ವ್ಯರ್ಥ ಭಕ್ತಿಗಳು ನಿರರ್ಥಕ. ಹಾಗೆಯೇ ರೇಕಣ್ಣ ಪ್ರಿಯ ನಾಗನಾಥನಲ್ಲಿ ಅರಿವೆಂಬ ಗುರುವನ್ನು ಮರೆತು ಲಿಂಗವನೊಲಿಸುವೆನೆಂದು ಹೊರಟರೆ ಅಲ್ಲಿ ಗುರು ಲಿಂಗಗಳ ಅಸ್ತಿತ್ವವೇ ಇಲ್ಲ ಎಂದು ದಿಟ್ಟವಾಗಿ ಹೇಳಿದ್ದಾರೆ. ಇವರ ವಚನಗಳಲ್ಲಿನ ದಿಟ್ಟತನದಲ್ಲಿ ಸಾಮಾಜಿಕ ಕಳಕಳಿಯನ್ನು ಕಾಣಬಹುದು.

ಅಲ್ಲಿಯ ಬಹುರೂಪ ಇಲ್ಲಿಗೆ ಬಂದಿತ್ತು.
ಇಲ್ಲಿಯ ಬಹುರೂಪ ಎಲ್ಲಿ ಅಡಗಿತ್ತೋ?
ಎನ್ನ ಬಹುರೂಪ ಬಲ್ಲವರಾರೋ?
ನಾದ ಹರಿದು ಸ್ವರವು ಸೂಸಿದ ಬಳಿಕ
ಈ ಬಹುರೂಪ ಬಲ್ಲವರಾರೋ?
ರೇಕಣ್ಣಪ್ರಿಯ ನಾಗಿನಾಥನಲ್ಲಿ
ಬಸವಣ್ಣನಿಂದ ಬದುಕಿತೀ ಲೋಕವೆಲ್ಲ.

ರೇಕಳಿಕೆ ಗ್ರಾಮದ ಬಹುರೂಪಿ ಚೌಡಯ್ಯನವರ ಕುಲ ಕಸುಬು ಬಹುರೂಪದ ಪಾತ್ರ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಜಾನಪದ ಕಲೆಯ ವೃತ್ತಿ. ಇದನ್ನು ಕುರಿತು ಅತ್ಯಂತ ಸೂಕ್ಷ್ಮವಾಗಿ ಇಲ್ಲಿ ಹೇಳಿಕೊಂಡಿದ್ದಾರೆ. ಅಲ್ಲಿಯ ಬಹುರೂಪ ಇಲ್ಲಿಗೆ ಬಂದಿತ್ತು, ಅಂದರೆ ಅವರ ಪೂರ್ವಾಶ್ರಮದ ಕುಲ ಕಸಬು ಅವರೊಂದಿಗೆ ಕಲ್ಯಾಣಕ್ಕೆ ಬಂದಿತ್ತು. ಕಲ್ಯಾಣಕ್ಕೆ ಕುಲ ಕಸಬು ಬಂದ ಮೇಲೆ ಕಾಯಕದ ಜೊತೆಗೆ ಅನುಭಾವ ದಾಸೋಹಗಳು ಬೆರೆತುಕೊಂಡವು. ಇಲ್ಲಿನ ಬಹುರೂಪತನವು ಎತ್ತ ಹೋಯಿತು ಎಂಬ ಅರಿವಿಲ್ಲ ಎನ್ನುತ್ತಾರೆ. ಇನ್ನು ತಾನು ವ್ಯಕ್ತಿಗತವಾಗಿ ಮಾಡಿದ ಕ್ರಿಯೆಯ ಬಹುರೂಪದ ಲೆಕ್ಕ ಬಲ್ಲವರಾರು ಎಂದು ತಮ್ಮನ್ನು ಪ್ರಶ್ನಿಸಬೇಕೆನ್ನುವ ಅಭಿಲಾಷೆ ಚೌಡಯ್ಯನವರದು. ಆತ್ಮ ನಿವೇದನೆ ಮತ್ತು ವಿಮರ್ಶೆಗೆ ಒಳಪಡುವ ಸುಂದರ ವಿಶ್ಲೇಷಣೆಯನ್ನು ಇಲ್ಲಿ ಕಾಣಬಹುದು. ನಾದ ಹರಿದು ಸ್ವರವು ಸೂಸಿದ ಬಳಿಕ ಅಂದರೆ ಮನುಷ್ಯನು ಅಸ್ತಂಗತನಾದ ಮೇಲೆ, ತೀರಿಕೊಂಡ ಮೇಲೆ ಆತನ ಬಹುರೂಪತನವನ್ನು ಯಾರು ಅಳೆಯುವರು ಎಂದು ಕೇಳಿದ್ದಾರೆ, ನಾದ ಬಿಂದು ಕಳಾತೀತವಾದ ಈ ಜಗತ್ತು ಬಸವಣ್ಣನಿಂದ ಬದುಕುತ್ತದೆ. ಬಸವಣ್ಣನವರು ತೋರಿಸಿದ ಬದುಕಿನ ಸರಳ ಮಾರ್ಗಗಳು ಈ ಲೋಕವನ್ನೇ ಬಾಳಿಸುತ್ತವೆ ಎಂದು ಭಕ್ತಿ, ಗೌರವಗಳಿಂದ ಹೇಳುತ್ತಾರೆ.

ಕಲ್ಯಾಣ ಕ್ರಾಂತಿಯ ನಂತರದ ರಕ್ತಸಿಕ್ತ ಹೋರಾಟದಲ್ಲಿ ಚೆನ್ನಬಸವಣ್ಣನವರ ನೇತೃತ���ವದಲ್ಲಿ ಮಡಿವಾಳ ಮಾಚಿದೇವರು, ಕಕ್ಕಯ್ಯ, ಚೌಡಯ್ಯನವರು ಶರಣ ಸೇನೆಯನ್ನು ಹುರಿದುಂಬಿಸಿ ಶರಣರ ವಚನಗಳ ಕಟ್ಟನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಸೋವಿದೇವನ ಸೈನಿಕರಿಗೆ ಪ್ರತಿರೋಧ ತೋರಿಸುತ್ತಾ, ಮಾದನ ಹಿಪ್ಪರಗಿ ಮಾರ್ಗವಾಗಿ ತಮ್ಮ ಸಂಘರ್ಷ ಮುಂದುವರೆಸುತ್ತಾರೆ. ಬೆಳಗಾವಿ ಜಿಲ್ಲೆ ಕಲ್ಯಾಣ ಕ್ರಾಂತಿಯ ರಕ್ತದ ಕಲೆಗಳನ್ನು ಗುರುತಿಸುವ ಭೂ ಪ್ರದೇಶ. ಖಾನಾಪುರ, ಉಳವಿ ಇದು ಕದ೦ಬರ ಆಡಳಿತಕ್ಕೆ ಒಳಪಟ್ಟಿತ್ತು. ಕದ೦ಬರ ವಿಕ್ರಮಾದಿತ್ಯ ಕಲ್ಯಾಣ ಚಾಲುಕ್ಯ ವಂಶದ ನೂರ್ಮಡಿ ತೈಲಪ ಅರಸನ ದಾಯಾದಿಗಳು. ನೂರ್ಮಡಿ ತೈಲಪನನ್ನು ಪಲ್ಲಟಗೊಳಿಸಿ ಅರಾಜಕತೆ ಹುಟ್ಟುಹಾಕಿದ ಕಳಚೂರ್ಯರ ಮೇಲೆ ಆಕ್ರೋಶ ಹೊಂದಿದ ಕದಂಬರು ಬಿಜ್ಜಳನ ವಿರುದ್ಧ ಶರಣರಿಗೆ ಆಶ್ರಯ ನೀಡಲು ಯೋಚಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ ಬರುವ ಬಸವನ ಕುಡಚಿ, ಹಿರೆಬಾಗೇವಾಡಿ, ಚಿಕ್ಕ ಬಾಗೇವಾಡಿ, ಹುಣಶಿಕಟ್ಟಿ ತಲ್ಲೂರು (ತಲೆ ಉರುಳಿಸಿದ ಊರು), ಮುರಗೋಡ, ಕಾದ್ರೋಳಿ, ಜಗಳ ಬೆಟ್ಟ, ಲಿಂಗನಮಠ… ಇಲ್ಲಿಂದ ಮುಂದೆ ಹೆಣ ಕೊಳ್ಳ, ಕೊನೆಗೆ ಉಳವಿಗೆ ಒಂದು ತಂಡ ಹೋಯಿತು. ಇನ್ನೊಂದು ತಂಡವು ಮುರುಗೋಡದಿಂದ ಕಟಕೋಳ, ಗೊಡಚಿ, ತೊರಗಲ್ಲು, ಮುನವಳ್ಳಿ, ಸವದತ್ತಿ, ಧಾರವಾಡ ಮಾರ್ಗವಾಗಿ ಉಳವಿಯ ಕಡೆಗೆ ಹೋಯಿತು. ಮತ್ತೊಂದು ತಂಡವು ಹುಬ್ಬಳಿಯ ಮಾರ್ಗವಾಗಿ ಬೇರೆ ಬೇರೆ ಪ್ರದೇಶಕ್ಕೆ ಹೋಗಿರುವುದು ಅನೇಕರ ಅಭಿಪ್ರಾಯ ಮತ್ತು ಸಂಶೋಧನೆಗಳಿಂದ ತಿಳಿದು ಬರುತ್ತದೆ.
ಧಾರವಾಡದಲ್ಲಿ ಕೆಲ ಕಾಲ ತಂಗಿದ್ದ ಚೆನ್ನಬಸವಣ್ಣ ಮತ್ತು ಅನೇಕ ಶರಣರು ಹುಬ್ಬಳ್ಳಿಗೆ ಹೆಜ್ಜೆ ಹಾಕುತ್ತಾರೆ. ದಾರಿ ಮಧ್ಯೆ ಅಂದರೆ ಹುಬ್ಬಳ್ಳಿಗೆ ಹತ್ತು ಕಿಲೋ ಮೀಟರ್ ಅಂತರದಲ್ಲಿರುವ ಭೈರಿ ದೇವರ ಕೊಪ್ಪ (ಬಹುರೂಪಿ ದೇವರ ಕೊಪ್ಪ) ದಲ್ಲಿ ತಮ್ಮ ಕಾಯಕದ ಸಹಾಯಕರೊಂದಿಗೆ ಉಳಿದುಕೊಳ್ಳುವ ಚೌಡಯ್ಯನವರು ಹಲವು ವರ್ಷ ಅಲ್ಲಿದ್ದು, ಅಲ್ಲಿಯೇ ಐಕ್ಯರಾಗುತ್ತಾರೆ.
ಭೈರಿ ದೇವರಕೊಪ್ಪದಲ್ಲಿ ಬಹುರೂಪಿ ಚೌಡಯ್ಯನವರು ಐಕ್ಯರಾಗಿದ್ದರ ಬಗ್ಗೆ ಅನೇಕ ಐತಿಹ್ಯಗಳಿವೆ. ಅಲ್ಲಿಂದ ಕೆಲ ಅಂತರದಲ್ಲಿ ಸಾವಿರಾರು ಶರಣರು ಕೆಲ ಕಾಲ ಉಳಿದುಕೊಂಡರು. ಕಲ್ಯಾಣದ ನೆನೆಪಿಗೊಸ್ಕರ ಕೆರೆ ಕಟ್ಟಿಕೊಂಡು ಅಂದು ಶರಣರು ಉಳಿದ ಕಲ್ಯಾಣವೇ ಇಂದಿನ ಉಣಕಲ್ಲ. ಅನೇಕ ದಿನಗಳಿಂದ ನನ್ನನ್ನು ಕಾಡುತ್ತಿರುವ ಸಮಾಧಿಯ ಶೋಧನೆಗೆ ಸಹಕಾರ ನೀಡಿದವರು ಶ್ರೀ ಬಿ ಜಿ ಹೊಸಗೌಡರು. ನವನಗರದಲ್ಲಿ ವಾಸವಾಗಿರುವ ಅಪ್ಪಟ ಬಸವ ಭಕ್ತರು. ಅವರೊಂದಿಗೆ ಹಲವು ಬಾರಿ ಸಮಾಲೋಚಿಸಿದಾಗ ಅವರು ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋದರು. ಭೈರಿದೇವರ ಕೊಪ್ಪದ ಊರೊಳಗೆ ಒಂದು ಸುಂದರವಾದ ಶಾಂತ ಗವಿಯು ಕಂಡು ಬಂತು. ಅಲ್ಲಿರುವ ಅನೇಕರನ್ನು ಮತ್ತು ಪೂಜಾರಿಗಳನ್ನು ಪ್ರಶ್ನಿಸಿದಾಗ ಅವರು ಇದು ಹನ್ನೆರಡನೆಯ ಶತಮಾನದ ಶರಣರೊಬ್ಬರ ಸಮಾಧಿಯೆಂದು ಹೇಳಿದರು. ಅಲ್ಪ ಸ್ವಲ್ಪ ಓದಿದ ಅವರಿಗೆ ಚರಿತ್ರೆಯ ಮಾಹಿತಿ ಇರಲಿಲ್ಲ. ಆ ಗವಿ
ಬಸವ ಕಲ್ಯಾಣದ ಮಾದರಿಯಲ್ಲಿನ ಅರುಹಿನ ಮನೆಯಂತಿದೆ, ಒಳಗೆ ಇನ್ನೊಂದು ಪುಟ್ಟ ಗುಹೆ. ಗುಡಿಯ ಮುಂಭಾಗದಲ್ಲಿ ಒಳಕಲ್ಲಿನ ರೂಪದ ಈಶ್ವರ ಲಿಂಗವು (ರೇಕನಾಥ) ಹಾಗೂ ನಾಗ ಪ್ರತಿಮೆ (ನಾಗಿನಾಥ)ಗಳಿವೆ. ರೈಲ್ವೆ ಹಳಿಗಳನ್ನು ದಾಟಿ ಹೋದಾಗ ಅಲ್ಲಿಯೂ ಮೂರು ಅಜ್ಞಾತ ಶರಣರ ಸಮಾಧಿಗಳು ಕಂಡು ಬಂದವು. ಇವು ಬಹುರೂಪಿ ಚೌಡಯ್ಯನವರ ಸಹಚರರ ಸಮಾಧಿಗಳಿರಬಹುದು.

ನಮಗೆ ಇದು ಬಹುರೂಪಿ ಚೌಡಯ್ಯನವರ ಸಮಾಧಿ ಎನ್ನಲು ಇನ್ನೊಂದು ಪ್ರಬಲ ಸಾಕ್ಷಿ ಎಂದರೆ ಭೈರಿದೇವರಕೊಪ್ಪದಲ್ಲಿ ಬಹುರೂಪಿ ಚೌಡಯ್ಯನವರ ಸಮಾಧಿಯ ಬಳಿ ಕಾಡ ಸಿದ್ಧೇಶ್ವರರ ಫೋಟೋ ಮತ್ತು ಕಟ್ಟಿಗೆಯ ದಂಡ ಕಂಡು ಬಂತು. ಕ್ರಿಶ 1725 ರಲ್ಲಿ ಬರುವ ಸಿದ್ಧ ಪರಂಪರೆಯ ಕಾಡ ಸಿದ್ಧೇಶ್ವರರು ಸುಮಾರು 500 ವಚನಗಳನ್ನು ರಚಿಸಿದ್ದಾರೆ. ಒಂದು ಅಧ್ಯಯನದ ಪ್ರಕಾರ ಸಿದ್ಧ ಪರಂಪರೆಗೂ ನಾಥ ಪರಂಪರೆಗೂ ಸ್ವಲ್ಪ ಸಾಮ್ಯತೆ ಇದ್ದು, ಅಧ್ಯಯನ ಆಶ್ರಯ ಸಾಧನೆ ಯೋಗಗಳಲ್ಲಿ ಸಹಭಾಗಿತ್ವವು ಕಂಡು ಬರುತ್ತದೆ. ಕಾಡ ಸಿದ್ಧೇಶ್ವರರು ಮತ್ತು ಬಹುರೂಪಿ ಚೌಡಯ್ಯನವರ ವಚನಗಳ ಧ್ವನಿ, ಆಶಯಗಳ ಸಾಮ್ಯತೆ ನೋಡಿದರೆ ಕಾಡ ಸಿದ್ಧೇಶ್ವರರು ಹನ್ನೆರಡನೆಯ ಶತಮಾನದ ಬಹುರೂಪಿ ಚೌಡಯ್ಯನವರಿಂದ ಪ್ರಭಾವಿತಗೊಂಡಿದ್ದರು ಎಂದು ತಿಳಿದು ಬರುತ್ತದೆ.
ಅಷ್ಟೇ ಅಲ್ಲದೆ ಹದಿನಾರನೆಯ ಶತಮಾನದಲ್ಲಿ ಪರಿಷ್ಕರಣೆಗೊಂಡ ವಚನಗಳಲ್ಲಿನ ವೀರಶೈವ ಪದ ಬಳಕೆಯಾಗಿದ್ದನ್ನು ನೋಡಿದರೆ ಮತ್ತು ಬಹುರೂಪಿ ಚೌಡಯ್ಯನವರ ಒಂದೆರಡು ವಚನಗಳಲ್ಲಿ ವೀರಶೈವ ಪದ ನುಸುಳಿದ್ದನ್ನು ಕಂಡರೆ ಕಾಡಶಿದ್ದೇಶ್ವರ ಶರಣರು ತಮ್ಮ ವಚನಗಳ ಜೊತೆಗೆ ಬಹುರೂಪಿ ಚೌಡಯ್ಯನವರ ವಚನಗಳನ್ನು ಪಾಠಾಂತರ ಮಾಡಿರುವ ಸಾಧ್ಯತೆ ಇದೆ. ಹೀಗಾಗಿ ಈ ಗವಿಯಲ್ಲಿರುವ ಸಮಾಧಿಯು ಹನ್ನೆರಡನೆಯ ಶತಮಾನದ ಬಹುರೂಪಿ ಚೌಡಯ್ಯನವರ ಸಮಾಧಿ ಎಂದು ಹೇಳಲು ಹೆಚ್ಚು ಪುಷ್ಠಿ ಸಿಗುತ್ತದೆ.
ವೃತ್ತಿಯಲ್ಲಿ ಔಷಧಶಾಸ್ತ್ರ (M.PHARM Ph.D) ಪ್ರಾಧ್ಯಾಪಕನಾಗಿದ್ದರೂ ನನಗೆ ಬಾಲ್ಯದಿಂದಲೂ ಶರಣ ತತ್ವಗಳೊಂದಿಗೆ ಸಂಪರ್ಕ ಸಿಕ್ಕು, ಕಳೆದ ಮೂವತ್ತು ವರುಷಗಳಿಂದ ವಚನಗಳ ಅಧ್ಯಯನದಲ್ಲಿ ಸಂಪೂರ್ಣ ತೊಡಗಿಕೊಂಡಿದ್ದೇನೆ. ನನ್ನ ಅನುಭವದ ಪ್ರಕಾರ ಶರಣರ ಸಮಾಧಿ, ಕಾಲ, ಇತಿಹಾಸ ಚರಿತ್ರೆಗಳ ಆಳವಾದ ಅಧ್ಯಯನದ ಅಗತ್ಯವಿದೆ. ಸಾಧ್ಯತೆ ಸಂಭಾವ್ಯತೆಗಳ ಆಧಾರದ ಮೇಲೆ ನನ್ನ ಗ್ರಹಿಕೆಗಳನ್ನು, ಸಂಶೋಧನೆಗಳನ್ನು ಆಸಕ್ತರೊಂದಿಗೆ ಹಂಚಿಕೊಂಡಿದ್ದೇನೆ. ಪರಾಮರ್ಶೆಯ ಅಗತ್ಯವಿದ್ದಲ್ಲಿ ಸರಿಪಡಿಸಿಕೊಳ್ಳಲು ತೆರೆದ ಮನಸ್ಸಿನಿಂದ ಸಿದ್ಧನಿದ್ದೇನೆ. ಒಟ್ಟಾರೆ ಶರಣರ ಬಗ್ಗೆ ಇಂದಿನ ಜನಾಂಗಕ್ಕೆ ನಿಖರ ಮಾಹಿತಿ ಸಿಗಬೇಕು. ಶರಣರ ಸಮಾಧಿಯ ಸ್ಥಳಗಳ ಅನ್ವೇಷಣೆಯು ಒಂದು ಸುಂದರ ಯೋಜನೆ. ಈ ನೆಪದಿಂದಲಾದರೂ ನಾವೆಲ್ಲ ಶರಣರ ಚರಿತ್ರೆಯನ್ನು ಮತ್ತೆ ಮತ್ತೆ ಮೆಲುಕು ಹಾಕಲು ಸಾಧ್ಯವಾಗಬೇಕು.
ಮುಂಬರುವ ದಿನಗಳಲ್ಲಿ ಹೀಗೆ ಅನೇಕ ಶರಣರ ಸಮಾಧಿಯ ವಿಷಯವಾಗಿ ಲೇಖನ ಬರೆಯಲು ಅತ್ಯಂತ ಪ್ರೀತಿ ಆಗ್ರಹದಿಂದ ಒತ್ತಾಯ ಮಾಡಿದ ಸಂಪಾದಕರಿಗೆ ಶರಣು. ಇದನ್ನು ಓದಿ, ಉತ್ತೇಜನಗೊಂಡ ವಚನಾಸಕ್ತರು, ಸಂಶೋಧನೆಗೆ ಕಾದಿರುವ ಶರಣರ ಸಮಾಧಿಗಳು ಅಭಿಯಾನದಲ್ಲಿ ಪಾಲ್ಗೊಂಡರೆ, ಅದು ನಾವು ಶರಣರಿಗೆ ಸಲ್ಲಿಸುವ ಅಲ್ಪ ಮಟ್ಟದ ಕೃತಜ್ಞತೆ ಎಂದು ಭಾವಿಸಿದ್ದೇನೆ.

Previous post ವೀರ
ವೀರ
Next post ನೆಲದ ಮರೆಯ ನಿಧಾನದಂತೆ…
ನೆಲದ ಮರೆಯ ನಿಧಾನದಂತೆ…

Related Posts

ಮನುಷ್ಯತ್ವ ಮರೆಯಾಗದಿರಲಿ
Share:
Articles

ಮನುಷ್ಯತ್ವ ಮರೆಯಾಗದಿರಲಿ

August 6, 2022 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಮನುಷ್ಯನ ಪರಮೋದ್ದೇಶ ಇತರರಿಗೆ ತನ್ನಿಂದಾದಷ್ಟು ಒಳಿತು ಮಾಡುವುದು. ಇದು ಅನುಭಾವಿಗಳ, ಹಿರಿಯರ ಅಭಿಪ್ರಾಯ. ನೀನು ಇನ್ನೊಬ್ಬರಿಗೆ ಉಪಕಾರ ಮಾಡದಿದ್ದರೂ ಉಪದ್ರ ನೀಡಬೇಡ ಎನ್ನುವ...
ಮಹದೇವ ಭೂಪಾಲ ಮಾರಯ್ಯನಾದದ್ದು…
Share:
Articles

ಮಹದೇವ ಭೂಪಾಲ ಮಾರಯ್ಯನಾದದ್ದು…

March 5, 2019 ಮಹಾದೇವ ಹಡಪದ
ಹಿಮ ಕರಗಿ ನೀರಾಗಿ ಭೋರೆಂದು ಹರಿಯುವ ಕಾಲವದು. ಎಷ್ಟೋ ದಿವಸದ ಮೇಲೆ ಸೂರ್ಯನು ಆಕಾಶದಲ್ಲಿ ಕಾಣಿಸಿಕೊಂಡಾಗ ಇಡೀ ಮಾಂಡವ್ಯಪುರವೇ ಮೈಚಳಿಬಿಟ್ಟು ಓಡಾಡಲು ಶುರುಮಾಡಿತ್ತು. ಆಕಾಶವೇ...

Comments 1

  1. ಮಹಾದೇವ
    Jan 17, 2019 Reply

    ಸರ್ ಈ ಲೇಖನದ ಸಾರವನ್ನು ಇನ್ನಷ್ಟು ವಿಸ್ತರಿಸಿದರೆ ಬಹಳ ುಪಯುಕ್ತವಾಗುತ್ತದೆ. ಯಾಕೆಂದರೆ ಬೆಳಗಾವಿ ಹಾಗೂ ಧಾರವಾಡ ಸುತ್ತಮುತ್ತ ಸಿಕ್ಕಿರುವ ಶಾಸನಗಳು, ತಾಮ್ರಶಾಸನಗಳು, ವೀರಗಲ್ಲುಗಳಲ್ಲಿ ಬಹುಪಾಲು ಶರಣರ ಚರಿತ್ರೆ ಅಧಿಕವಾಗಿದೆ. ಈ ಸ್ಥಳ ಶೋಧದಿಂದ ಆಚೆಗೆ ಉಲ್ಲೇಖಗಳಿದ್ದರೆ ತಿಳಿಸಿರಿ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸಾವಿಲ್ಲದ ಝೆನ್ ಗುರು-2
ಸಾವಿಲ್ಲದ ಝೆನ್ ಗುರು-2
May 10, 2022
ಶಿವಾಚಾರ
ಶಿವಾಚಾರ
April 9, 2021
ವಚನ – ಚಿಂತನ
ವಚನ – ಚಿಂತನ
October 10, 2023
ಸಂತೆಯ ಸಂತ
ಸಂತೆಯ ಸಂತ
September 7, 2020
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
May 6, 2021
ಅಸ್ತಿತ್ವವಾದಿ ಬಸವಣ್ಣ
ಅಸ್ತಿತ್ವವಾದಿ ಬಸವಣ್ಣ
September 7, 2021
ಶಬ್ದದೊಳಗಣ ನಿಶ್ಶಬ್ದ…
ಶಬ್ದದೊಳಗಣ ನಿಶ್ಶಬ್ದ…
July 21, 2024
ಬೆಳಗಾವಿ ಅಧೀವೇಶನ: 1924
ಬೆಳಗಾವಿ ಅಧೀವೇಶನ: 1924
December 13, 2024
ಯೋಗಿಯಾದರೆ ಸಿದ್ಧರಾಮನಂತಾಗಬೇಕು
ಯೋಗಿಯಾದರೆ ಸಿದ್ಧರಾಮನಂತಾಗಬೇಕು
April 29, 2018
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
March 6, 2024
Copyright © 2025 Bayalu