Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಧರೆಗೆ ಸೂತಕವುಂಟೆ?
Share:
Articles August 11, 2025 ಪ್ರೊ. ಓ. ಎಲ್. ನಾಗಭೂಷಣ ಸ್ವಾಮಿ

ಧರೆಗೆ ಸೂತಕವುಂಟೆ?

ಧರೆಗೆ ಸೂತಕವುಂಟೆ ? ವಾರಿಧಿಗೆ ಹೊಲೆಯುಂಟೆ?
ಉರಿವ ಅನಲಂಗೆ ಜಾತಿಭೇದವುಂಟೆ?
ಹರಿದು ಚರಿಸುವ ಅನಿಲಂಗೆ ಸೀಮೆಯುಂಟೆ?
ಆಕಾಶಕ್ಕೆ ದಾರಿ ಮೇರೆಯುಂಟೆ?
[ಇನಿತ]ರಿಂದಲೊದಗಿದ ಘಟವನು ಆರು ಹೊಲ್ಲೆಂಬರು?
ಸಾರವು ಕರ್ಮ, ಕೂಡಲಚೆನ್ನಸಂಗಮದೇವಾ ನಿಮ್ಮ ಶರಣಂಗೆ.

[ವಾರಿಧಿ- ಸಮುದ್ರ; ಅನಲ- ಬೆಂಕಿ; ಅನಿಲ- ಗಾಳಿ; ಘಟ- ದೇಹ; ಇನಿತರಿಂದ- ಇವಿಷ್ಟರಿಂದ; ಹೊಲ್ಲೆಂಬರು- ಅಶುದ್ಧವೆನ್ನುವರು; ಸಾರವು- ಹತ್ತಿರ ಬಾರವು]
ಚನ್ನಬಸವಣ್ಣನವರ ವಚನ.

ಭೂಮಿಗೆ ಸೂತಕವಿದೆಯೇ, ಸಮುದ್ರಕ್ಕೆ ಸೂತಕವಿದೆಯೇ, ಬೆಂಕಿ ಜಾತಿಬೇಧ ಮಾಡುತ್ತದೆಯೇ, ಗಾಳಿಗೆ ಗಡಿ ರೇಖೆಗಳಿವೆಯೇ, ಆಕಾಶಕ್ಕೆ ದಾರಿಯಾಗಲೀ ಮಿತಿಯಾಗಲೀ ಇದೆಯೇ? ಭೂಮಿ, ನೀರು, ಬೆಂಕಿ, ಗಾಳಿ, ಆಕಾಶ ಅನ್ನುವ ಐದು ಮೂಲ ಸಾಮಗ್ರಿಗಳಿಗೇ ಯಾವ ಭೇದ ಭಾವವೂ ಇಲ್ಲ. ಹಾಗಿರುವಾಗ ಈ ಮೂಲ ವಸ್ತುಗಳಿಂದ ಆಗಿರುವ ಮನುಷ್ಯ ದೇಹಗಳಲ್ಲಿ ಹೊಲೆ, ಮುಟ್ಟಬಾರದು ಅನ್ನುವಂಥ ಸೂತಕ ಯಾಕೆ? ಕೂಡಲಚೆನ್ನಸಂಗಮದೇವನ ಶರಣರಿಗೆ ಯಾವ ಕರ್ಮವೂ ಇಲ್ಲ.
ಸೂತಕ, ಮೈಲಿಗೆ, ಮುಟ್ಟಬಾರದು ಅನ್ನುವಂಥ ನಿಷೇಧಗಳೆಲ್ಲ ಮನುಷ್ಯರು ಮಾಡಿಕೊಂಡದ್ದು. ಮನುಷ್ಯರೆಲ್ಲರೂ ರೂಪುಗೊಳ್ಳುವುದಕ್ಕೆ ಕಾರಣವಾದ ಮೂಲ ಸಾಮಗ್ರಿಗಳಿವೆಯಲ್ಲ ಅವು ಇಂಥ ಬೇಧ ಭಾವ ತೋರಿಸುವುದಿಲ್ಲ. ಜಾತಿಯೂ ಸೇರಿದ ಹಾಗೆ ಮೇಲು ಕೀಳು ಅನ್ನುವ ವಿಂಗಡಣೆಯೂ ನಾವೇ ಮಾಡಿಕೊಂಡುದುದೇ ಹೊರತು ಸಹಜವಲ್ಲ, ನಿಜವಲ್ಲ. ಈ ತಿಳಿವಳಿಕೆ ನಮ್ಮ ಹೃದ್ಗತ, ಮನೋಗತ, ಭಾವಗತವಾಗಿ ನಮ್ಮನ್ನೆಲ್ಲ ಆವರಿಸಿಕೊಳ್ಳುವುದನ್ನೇ ‘ಜ್ಞಾನೋದಯ’ ಎಂದು ಸಿದ್ಧರಾಮ ವಚನ ಹೇಳುತ್ತಿದೆ.

ಸುಖ ದುಃಖದ ದ್ವಂದ್ವ

ಆಕಾಶದಲ್ಲಿಯ ತಾರೆಗಳು ಕಾಣಬಾರದೆಂಬ
ಯೋಚನೆಯುಳ್ಳಡೆ ಸೂರ್ಯೋದಯಕ್ಕಯ್ಯಾ.
ಆಕಾಶದಲ್ಲಿಯ ತಾರೆಗಳು ಕಾಣಬೇಕೆಂಬ
ಯೋಚನೆಯುಳ್ಳಡೆ ಸೂರ್ಯಾಸ್ತಮಾನಕ್ಕಯ್ಯಾ!
ಕಾಣಬಾರದು ಕಾಣಬಾರದು, ಜ್ಞಾನದಲ್ಲಿ ಆನಂದ ಅನಾನಂದವ.
ಕಾಣಬಹುದು ಕಾಣಬಹುದು; ಅಜ್ಞಾನದಲ್ಲಿ
ಸುಖದುಃಖೋಭಯದ್ವಂದ್ವವ.
ಭೋ ಭೋ! ಕಪಿಲಸಿದ್ಧಮಲ್ಲಿಕಾರ್ಜುನ ಭೋ

[ಕಾಣಬಾರದು-ಕಾಣಲು ಸಾಧ್ಯವಿಲ್ಲ; ಅನಾನಂದ-ಆನಂದವಲ್ಲದ್ದು]
ಸಿದ್ಧರಾಮರ ವಚನ. ಆಕಾಶದ ನಕ್ಷತ್ರಗಳು ಕಾಣಬಾರದೆಂದು ಬಯಸಿದರೆ ಸೂರ್ಯೋದಯವಾಗಬೇಕು. ಆಕಾಶದ ನಕ್ಷತ್ರ ಕಾಣಬೇಕೆಂಬ ಯೋಚನೆ ಇದ್ದರೆ ಸೂರ್ಯ ಮುಳುಗಬೇಕು. ಜ್ಞಾನ ಹುಟ್ಟಿದರೆ ಆನಂದ, ಅನಾನಂದ ಅಥವಾ ದುಃಖ ಇರುವುದಿಲ್ಲ. ಅಜ್ಞಾನ ಇದ್ದಾಗ ಮಾತ್ರವೇ ಇದು ಸುಖ, ಇದು ದುಃಖ ಅನ್ನುವ, ಇದು ಬೇಕು ಇದು ಬೇಡ ಅನ್ನುವ ದ್ವಂದ್ವ ಇರುತ್ತದೆ. ಇಬ್ಬಂದಿತನ ಇರುತ್ತದೆ.

ನಮಗೆ ಪ್ರಿಯವಾದದ್ದು ಸುಖವಾಗಿ, ಅಪ್ರಿಯವಾದದ್ದು ದುಃಖವಾಗಿ ಕಾಣುತ್ತದೆ. ಸುಖ ಅಥವಾ ದುಃಖ ಅನ್ನುವುದು ನಮ್ಮಲ್ಲಿ ಹುಟ್ಟುವ ಭಾವನೆಯೇ ಹೊರತು ವಾಸ್ತವ ಅನ್ನುತ್ತೇವಲ್ಲ ಅದಕ್ಕೆ ಯಾವ ರುಚಿಯೂ ಬಣ್ಣವೂ ಇಲ್ಲ, ಪ್ರಿಯ ಅಪ್ರಿಯವೆನ್ನುವುದೂ ಇಲ್ಲ. ನಕ್ಷತ್ರಗಳು ಕಾಣುವ, ಕಾಣದಿರುವ ಸ್ಥಿತಿಯನ್ನು ಆನಂದ- ಅನಾನಂದಕ್ಕೂ; ಜ್ಞಾನವಿರುವ ಮತ್ತು ಇಲ್ಲದಿರುವ ಸ್ಥಿತಿಯನ್ನು ಸೂರ್ಯೋದಯ, ಸೂರ್ಯಾಸ್ತಗಳಿಗೂ ಹೋಲಿಸಲಾಗಿದೆ.

ಆತುಮ ತುಂಬಿ ಪರಮಾತುಮ ತುಂಬಿ

ಗಿಡುವಿನ ಮೇಲಣ ತುಂಬಿ ಕೂಡೆ ವಿಕಸಿತವಾಯಿತ್ತು,
ತುಂಬಿ ನೋಡಾ!
ಆತುಮ ತುಂಬಿ ತುಂಬಿ ಪರಮಾತುಮ ತುಂಬಿ ತುಂಬಿ ನೋಡಾ!
ಗುಹೇಶ್ವರನೆಂಬ ಲಿಂಗಕ್ಕೆ ಎರಗಿ ನಿಬ್ಬೆರಗಾಯಿತ್ತು
ತುಂಬಿ ನೋಡಾ!

[ತುಂಬಿ- (ನಾಮಪದ) ದುಂಬಿ. (ಕ್ರಿಯಾಪದ) ಖಾಲಿಯಾಗಿರುವ ಜಾಗವನ್ನು ತುಂಬು ಅನ್ನುವ ರೀತಿಯಲ್ಲಿ; ಆತುಮ-ಆತ್ಮ; ಪರಮಾತುಮ-ಪರಮಾತ್ಮ]
ಅಲ್ಲಮಪ್ರಭುಗಳ ವಚನ.

ಹೂವಿಗೆ ಎರಗುವ ದುಂಬಿ ಮಧುವನ್ನು ಹೀರಿ ಹಿಗ್ಗಿ, ವಿಕಾಸಗೊಳ್ಳುತ್ತದೆ. ಹಾಗೆಯೇ ಹೂವು ಕೂಡ ದುಂಬಿಯೊಡನೆ ವಿಕಾಸವನ್ನು ಹೊಂದಿತು, ಹಿಗ್ಗಿತು ಎಂದು ಈ ವಚನ ಹೇಳುತ್ತಿದೆ.
ಇಡೀ ವಚನದಲ್ಲಿ ತುಂಬಿ ಎಂಬುದನ್ನು ನಾಮಪದವಾಗಿಯೂ ಕ್ರಿಯಾಪದವಾಗಿಯೂ ಬಳಕೆ ಮಾಡಲಾಗಿದೆ. ಹೂವು ಮತ್ತು ದುಂಬಿ ಎರಡೂ ವಿಕಾಸಗೊಳ್ಳುವ ಸಾಧ್ಯತೆಯನ್ನು ಪರಮಾತ್ಮ ಮತ್ತು ಆತ್ಮಕ್ಕೆ ಹೊಂದಿಸಿ ಹೇಳುತ್ತಿದೆ. ಪರಮಾತ್ಮನು ಹೂವಾದರೆ ಭಕ್ತನೆಂಬ ದುಂಬಿ ಎರಗಿದಾಗ ಭಕ್ತನೊಂದಿಗೆ ದೇವರೂ ಅರಳುತ್ತಾನೆ ಅನ್ನುವ ಮಾತೇ ಅದ್ಭುತವಾದದ್ದು. ಜೊತೆಗೇ ದುಂಬಿಗೆ ಆದ ಬೆರಗು ಕೂಡ ಇಲ್ಲಿದೆ. ತುಂಬಿಯಂತಿರುವ ಭಕ್ತ ಗುಹೇಶ್ವರನ ಮೇಲೆರೆಗುತ್ತಾ ತನ್ನೊಳಗೇ ಪರಮಾತ್ಮ ತುಂಬಿರುವುದನ್ನು ಕಂಡು ಬೆರಗಾಗಿರುವುದು ಕೂಡ ವ್ಯಕ್ತವಾಗಿದೆ. ಆತ್ಮವು ಪರಮಾತ್ಮಕ್ಕಿಂತ ಬೇರೆಯಲ್ಲ, ಪರಮವಾದದ್ದನ್ನು ತುಂಬಿಕೊಂಡಿರುವ ಅಂಶವೇ ಹೌದು ಎಂಬ ನಿಲುವು ಇಲ್ಲಿದೆ.

ಕುರುಹಿನ ಹಾವಚೆ

ಗಿಣಿಯಿಲ್ಲದ ಪಂಜರ ಹಲವು ಮಾತನಾಡಬಲ್ಲುದೆ ?
ದೇವರಿಲ್ಲದ ದೇಗುಲಕ್ಕೆ ಮಂತ್ರ, ಅಭಿಷೇಕವುಂಟೆ ?
ಅರಿವು ನಷ್ಟವಾಗಿ ಕುರುಹಿನ ಹಾವಚೆಯ
ನಾನರಿಯೆನೆಂದನಂಬಿಗ ಚೌಡಯ್ಯ.

[ಕುರುಹು-ಗುರುತು, ಇಷ್ಟಲಿಂಗ; ಹಾವಚೆ-ಪಾಚಿ]
ಅಂಬಿಗ ಚೌಡಯ್ಯನವರ ವಚನ.
ಪಂಜರದೊಳಗಿನ ಗಿಣಿ ಮಾತಾಡಬಲ್ಲುದೇ ಹೊರತು ಪಂಜರ ಮಾತಾಡಲಾರದು. ಪೂಜೆ ಅಭಿಷೇಕ ಎಲ್ಲ ನಡೆಯುವುದು ದೇವಸ್ಥಾನದಲ್ಲಿರುವ ದೇವರಿಗೇ ಹೊರತು ದೇವಸ್ಥಾನಕ್ಕಲ್ಲ. ಅರಿವು ಇರದಿದ್ದರೆ ಕುರುಹು ಅನ್ನುವ ಗುರುತು ಕೇವಲ ಪಾಚಿ, ಕಾಲಿಟ್ಟರೆ ಜಾರುವ ಪಾಚಿ ಅಷ್ಟೇ. ಅರಿವು ಜೀವಂತ, ಕುರುಹು ನಾವು ಕೊಟ್ಟುಕೊಂಡ ಗುರುತಿನ ಅರ್ಥ.

ನಾವು ಬದುಕುತ್ತಿರುವ ಕಾಲದಲ್ಲಿ ಜಾತಿ, ಭಾಷೆ, ಧರ್ಮ ಇಂತ ಕುರುಹುಗಳೇ ಮುಖ್ಯವೆಂದು ಭಾವಿಸಿ ಸಂಕಟಕೊಡುತ್ತಾ ಸಂಕಟಪಡುತ್ತಾ ಇದ್ದೇವೆ. ಇಷ್ಟಲಿಂಗ, ಜನಿವಾರ, ಇತ್ಯಾದಿ ಯಾವುದೇ ಕುರುಹು ಇರಲಿ ಅದಕ್ಕೆ ಅರ್ಥ ಕೊಡುವವರು ನಾವೇ. ಕುರುಹು ಮುಖ್ಯವಲ್ಲ, ಅರಿವು ಮುಖ್ಯ ಅನ್ನುವ ತಿಳಿವಳಿಕೆ ಬರುವುದು ಎಷ್ಟು ಕಷ್ಟ. ಕವಿಯನ್ನು ನಿಂದಿಸದೆ ಕಾವ್ಯವನ್ನು ಟೀಕಿಸುವುದು, ವ್ಯಕ್ತಿಯನ್ನು ಹೀಗಳೆಯದೆ ವ್ಯಕ್ತಿ ಮಾಡಿದ ಕಾರ್ಯದ ಸರಿ ತಪ್ಪು ಕುರಿತು ಮಾತಾಡುವುದು ನಾವೆಲ್ಲ ಬೆಳಸಿಕೊಳ್ಳಬೇಕಾದ ಪ್ರಬುದ್ಧತೆ. ಕುರುಹನ್ನೇ ಮುಖ್ಯವೆಂದು ತಿಳಿದು ನಡೆಸುವ ರಾಜಕಾರಣದ ಮಿತಿಯನ್ನೂ ಈ ವಚನ ಹೇಳುವಂತಿದೆ.

ಬಲ್ಲವರಿಗೆ ಗೆಲುವು ಸೋಲು ಎಂಬುದಿಲ್ಲ

ಗೆಲ್ಲ ಸೋಲ ಬಲ್ಲವರಿಗೇಕೆ? ಅದು ಬೆಳ್ಳರ ಗುಣ.
ಪಥವೆಲ್ಲರಲ್ಲಿ ನಿಹಿತನಾಗಿ, ಅತಿಶಯದ ವಿಷಯದಲ್ಲಿ ಗತನಾಗದೆ,
ಸರ್ವವನರಿತು, ಗತಮಯಕ್ಕೆ ಅತೀತನಾಗು,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.

[ಬಲ್ಲವರು-ತಿಳಿದವರು; ಬೆಳ್ಳರ-ದಡ್ಡರ; ನಿಹಿತನಾಗಿ-ಒಳಗಾಗಿ, ಅತಿಶಯದ ವಿಷಯ-ಹಿರಿತನ, ಪ್ರಾಮುಖ್ಯ; ಗತನಾಗದೆ-ಕಳೆದು ಹೋಗದೆ; ಗತಮಯ-ಆಗಿ ಹೋದದ್ದು; ಅತೀತನಾಗು-ಮೀರು]
ಇದು ಇಂದಿನ ಕಲ್ಬುರ್ಗಿ ಪ್ರಾಂತ್ಯದ ಸಗರದ ಬೊಮ್ಮಣ್ಣನವರ ವಚನ.

ಗೆಲುವು ಸೋಲು ಎಂಬುದರ ಬಗ್ಗೆ ಬಲ್ಲವರು ತಲೆಕೆಡಿಸಿಕೊಳ್ಳಬಾರದು. ಹಾಗೆ ಚಿಂತೆ ಮಾಡುವುದು ಮೂರ್ಖರ (ಬೆಳ್ಳರ) ಗುಣ. ಸರಿಯಾದ ದಾರಿ ಹಿಡಿದು, ಎಲ್ಲರೊಡನೆ ಒಂದಾಗಿ ಸಾಗಬೇಕು, ಆದರೆ ಯಾವ ವಿಷಯದಲ್ಲೂ ಮುಳುಗಿ ಕಳೆದುಹೋಗಬಾರದು. ಎಲ್ಲವನ್ನೂ ಅರಿಯಬೇಕು, ಗತಕಾಲದ ಚಿಂತೆಯಲ್ಲಿ ಮುಳುಗದೆ ಅದಕ್ಕೆ ಅತೀತನಾಗಬೇಕು, ಇದು ಬದುಕುವ ದಾರಿ ಅನ್ನುತ್ತದೆ ಈ ವಚನ.

ಗೆಲುವಿನ ಆತಂಕಕ್ಕೆ ಸಿಲುಕಿರುವ, ಮಾಡಬಹುದಾಗಿದ್ದರೂ ಮಾಡದೆ ಹೋದ ಕೆಲಸಗಳ ಬಗ್ಗೆಯೇ ಚಿಂತೆಮಾಡುತ್ತ ನರಳುವವರಿಗೆ ಔಷಧದಂಥ ಮಾತು ಇಲ್ಲಿದೆ. ಈ ವಚನದಲ್ಲಿ ನಿಹಿತನಾಗಿ, ಅತಿಶಯ ವಿಷಯ, ಗತಮಯ ಅನ್ನುವ ಬಳಕೆಗಳು ಗಮನಸೆಳೆಯುತ್ತವೆ. ‘ನಿಹಿತ’ ಎಂದರೆ ‘ಇಡಲ್ಪಡು’ ಎಂದು ಅರ್ಥವಾಗುತ್ತದೆ. ನಡೆಯುವ ಬದುಕಿನ ದಾರಿಗೆ ಒಳಗಾಗಿ ಹೊಂದಿಕೊಂಡು ಹೋಗು ಅನ್ನುವ ಭಾವ ಮೂಡುತ್ತದೆ. ಗೆಲ್ಲಬೇಕೆಂದು ಹೋರಾಡುವುದು, ಸೋಲಿಗೆ ಭಯಪಡುವುದು ದಡ್ಡರ ಸ್ವಭಾವ ಅನ್ನುವ ಮಾತೂ ಇದೆ. ಅತಿಶಯ ವಿಷಯ ಅನ್ನುವ ಮಾತು ಕಾಮಾಸಕ್ತಿಯನ್ನೂ ಒಳಗೊಂಡ ಹಾಗೆ ಯಾವುದೇ ಒಂದು ವಿಷಯದ ಬಗ್ಗೆ ಅತಿಯಾಗಿ ಗೀಳಿಗೆ ಒಳಗಾಗುವ ಅನ್ನುವ ಅರ್ಥವನ್ನೂ ನೀಡುತ್ತದೆ. ಗತಕಾಲದ ನೆನಪುಗಳಿಂದ ಬಿಡಿಸಿಕೊಳ್ಳದಿದ್ದರೆ ಮನಸು, ಬುದ್ಧಿ, ವ್ಯಕ್ತಿತ್ವಗಳಿಗೆ ಬಿಡುಗಡೆ, ಸ್ವಾತಂತ್ರ್ಯ ದೊರೆಯುವುದು ಅಸಾಧ್ಯ.

ಬಸಿರ ಮಗು ತಾಯ ಕುರುಹನು ಅರಿಯದು

ತಾಯ ಗರ್ಭದ ಶಿಶು ತಾಯ ಕುರುಹನರಿಯದು.
ಆ ತಾಯಿ ಶಿಶುವಿನ ಕುರುಹನೆಂದೂ ಅರಿಯಳು.
ಮಾಯಾಮೋಹದಲ್ಲಿಪ್ಪ ಭಕ್ತರು ದೇವರನರಿಯರು.
ಆ ದೇವರು ಆ ಭಕ್ತರನೆಂದೂ ಅರಿಯನು ಕಾಣಾ! ರಾಮನಾಥ
ಜೇಡರ ದಾಸಿಮಯ್ಯನವರ ವಚನ.

ತಾಯ ಬಸಿರಿನಲ್ಲಿರುವ ಮಗು ತಾಯ ಮುಖವನ್ನು ಕಾಣಬೇಕಾದರೆ, ತಾಯಿ ಆ ಮಗುವಿನ ಮುಖ ಕಾಣಬೇಕಾದರೆ ತಾಯಿ-ಮಗು ಇಬ್ಬರೂ ಬೇರೆಬೇರೆಯಾಗುವುದು ಅನಿವಾರ್ಯ. ಮಾಯಾ ಮೋಹದಲ್ಲಿರುವ ಭಕ್ತರು ದೇವರ ಮುಖವನ್ನು ಕಾಣರು, ದೇವರು ಭಕ್ತರನ್ನು ಕಾಣ.

ಈ ವಚನದಲ್ಲಿ ತಾಯ್ತನವಿರುವುದು ಮಾಯೆಗೋ ದೇವರಿಗೋ ಅಥವಾ ಇಬ್ಬರಿಗೂ ಇದೆಯೋ? ಮಾಯೆ ತಾಯಿಯಾದರೆ ಅದರ ಬಸಿರಿಂದ ಹೊರಬಂದ ಮಗು ಮಾತ್ರ ತಾಯಿ ಎಂಬ ಮಾಯೆಯನ್ನೂ ಸತ್ಯವಾದ ದೇವರನ್ನೂ ಅರಿಯಬಲ್ಲದು. ಹಾಗೆಯೇ ದೇವರೊಳಗೆ ಒಬ್ಬನಾಗಿರುವ ಭಕ್ತ ಕೂಡ ದೇವರಿಂದ ಬೇರೆಯಾಗಿರುವಾಗ ಮಾತ್ರ ದೇವರನ್ನು ಕಾಣಬಲ್ಲ. ಒಂದೇ ಆದಮೇಲೆ ಕಾಣುವುದೇನಿದೆ?
ಭಕ್ತ, ಭಕ್ತಿ ಅನ್ನುವ ಮಾತುಗಳೇ ದ್ವಂದ್ವ, ಎರಡು, ಬೇರ್ಪಡುವಿಕೆ ಅನ್ನುವುದನ್ನು ಸೂಚಿಸುತ್ತವೆ. ಅರಿಯಬೇಕಾದ ವಸ್ತುವಿಗಿಂತ, ಸಂಗತಿಗಿಂತ ನಾನು ಬೇರೆಯಾಗಿದ್ದಾಗ ಮಾತ್ರ ಅರಿಯುವುದಕ್ಕೆ ಸಾಧ್ಯವಲ್ಲವೇ? ಅನುಭವ ಆಗಬೇಕಾದರೆ ಒಂದಾಗುವುದು ಅನಿವಾರ್ಯ. ಅರಿವು, ತಿಳಿವು ಮಾತ್ರ ಬೇಕು ಅನ್ನುವುದಾದರೆ ಬೇರೆಯಾಗಿ ನಿಂತು ನೋಡುವುದು ತೀರ ಅನಿವಾರ್ಯವಾದ ಅಗತ್ಯ.‌ ಮಾಯೆ ಅಥವ ಭ್ರಮೆ, ಮೋಹ ಅಥವಾ ಆಸೆ ಇದ್ದರೆ ಅರಿವು ಸಾಧ್ಯವಾಗದು ಅನ್ನುವ ನಿಲುವು ಕೂಡ ಇಲ್ಲಿದೆ.

ದರ್ಶನಕ್ಕೆ ಹೊಸ ವ್ಯಾಖ್ಯಾನ

ದೊರೆಕೊಂಡಂತೆ ದಣಿದಿಹ ಮನದವರ ತೋರಾ,
ದುಃಖಕ್ಕೆ ದೂರವಾಗಿಹರ ತೋರಾ
ಸದಾನಂದದಲ್ಲಿ ಸುಖಿಯಾಗಿಪ್ಪವರ ತೋರಾ.
ಸಕಳೇಶ್ವರದೇವಾ ಎನಗಿದೇ ವರವು ಕಂಡಾ, ತಂದೆ.
ಸಕಳೇಶ ಮಾದರಸರ ವಚನ. ಅವರು ಬಸವನ ಹಿರಿಯ ಸಮಕಾಲೀನರು.

ಈ ವಚನವನ್ನು ಇವತ್ತು ಓದಿದಾಗ ‘ದರ್ಶನ’ ಅನ್ನುವ ಮಾತಿನ ಇನ್ನೊಂದು ಅರ್ಥ ಹೊಳೆಯುತ್ತದೆ. ಏನು ದೊರೆಯುತ್ತದೆಯೋ ಅದರಲ್ಲೇ ತಣಿವನ್ನು, ತೃಪ್ತಿಯನ್ನು ಪಡೆದಿರುವವರನ್ನು ತೋರಿಸು. ದುಃಖಕ್ಕೆ ದೂರವಾಗಿರುವವರನ್ನು ತೋರಿಸು. ಸದಾ ಆನಂದದಲ್ಲಿ ಅಥವಾ ಸತ್ (ದೇವರು, ಸತ್ಯ) ಆನಂದದಲ್ಲಿ ಇರುವವರನ್ನು ತೋರಿಸು. ಇದೇ ನೀನು ಕೊಡಬಹುದಾದ ದೊಡ್ಡ ವರ.

ಈ ಗುಣಗಳಿರುವವರು ಅಪೂರ್ವವೇ ಅಲ್ಲವೇ! ಎಷ್ಟು ಅಪೂರ್ವವೆಂದರೆ ಸ್ವತಃ ದೇವರೇ ನಮಗೆ ವರಕೊಟ್ಟು ಅವರು ಕಾಣುವ ಹಾಗೆ ಮಾಡಬೇಕು. ಅಂಥ ಗುಣಗಳು ಇರುವವರು ಇದ್ದರೆ ಅವರೇ ದೇವರು! ದೇವರಿಗೆ ಬಯಕೆ ಇಲ್ಲ, ದುಃಖವಿಲ್ಲ, ಅವನು ಸದಾನಂದ ಅನ್ನುವ ಮಾತುಗಳು ಇವೆಯಲ್ಲ. ನಾವು, ನಮ್ಮಲ್ಲಿಲ್ಲದವನ್ನು, ಇರಬೇಕಾದವನ್ನು, ದುಃಖ ರಹಿತ, ಸದಾ ಆನಂದವಾಗಿರುವ ಗುಣಗಳನ್ನು ಒಟ್ಟಾಗಿಸಿ ದೇವರ ಕಲ್ಪನೆ ಮಾಡಿಕೊಂಡಿದ್ದೇವೆ. ಕಲ್ಪನೆಯ ದೇವರನ್ನು ಕಾಣುವುದಕ್ಕಿಂತ ಈ ಗುಣ ಇರುವ ಮನುಷ್ಯರನ್ನೇ ಕಂಡರೆ ಅದೇ ದೊಡ್ಡದು. ಜೊತೆಯಲ್ಲಿರುವ ಮನುಷ್ಯರಲ್ಲಿ ದೈವತ್ವವನ್ನು ಕಾಣುವುದೇ ದರ್ಶನ. ಹಸಿವಾದಾಗ ಊಟ, ಮಾತಾಡಿಸಬೇಕು ಅನ್ನಿಸಿದಾಗ ಗೆಳೆಯರು, ಬಿಸಿಲಲ್ಲಿ ನಡೆಯುವಾಗ ನೆರಳು, ದಣಿದಾಗ ನಿದ್ರೆ-ಬೇಕಾದಾಗ ಸಿಕ್ಕರೆ ಸಾಕು. ಬೇಕಾದದ್ದು, ಬೇಕಾದ ಹೊತ್ತಿನಲ್ಲಿ ಯಾರಿಗೆ ದೊರೆಯುವುದೋ ಅವರೇ ಶ್ರೀಮಂತರು. ಬೇಡವಾದದ್ದನ್ನೆಲ್ಲ ಬೇಕು ಅಂದುಕೊಳ್ಳುತ್ತಾ ಅವನ್ನು ಪಡೆಯುವುದಕ್ಕೆ ‘ಶ್ರೀಮಂತ’ರಾಗಲು ಹೆಣಗುತ್ತೇವಲ್ಲವೇ. ಮಾದರಸ ಹೇಳುವಂಥವರು ಕಂಡರೆ ಪುಣ್ಯ. ನಾವೇ ಹಾಗಾದರೆ ಬಲು ದೊಡ್ಡ ಭಾಗ್ಯ.

Previous post ಅರಿವಿಗೆ ಬಂದ ಆರು ಸ್ಥಲಗಳು
ಅರಿವಿಗೆ ಬಂದ ಆರು ಸ್ಥಲಗಳು
Next post ಕುವೆಂಪು ಮತ್ತು ಬ್ರೆಕ್ಟ್
ಕುವೆಂಪು ಮತ್ತು ಬ್ರೆಕ್ಟ್

Related Posts

ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
Share:
Articles

ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ

September 4, 2018 ಡಾ. ಜೆ ಎಸ್ ಪಾಟೀಲ
ಬಸವಣ್ಣನವರ ವ್ಯಕ್ತಿತ್ವ ವಿಮರ್ಶಿಸುವ ಅಳತೆಗೋಲು ಬಹುಶಃ ಇದುವರೆಗೆ ಯಾವ ಅಧುನಿಕ ಲೇಖಕ/ವಿಮರ್ಶನಿಗೂ ಲಭ್ಯವಾಗಲಿಕ್ಕಿಲ್ಲ. ಅವರ ಅಸಾಧಾರಣ ವ್ಯಕ್ತಿತ್ವ ಸೀಮಿತ ವಿಮರ್ಶೆಯ...
ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…
Share:
Articles

ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…

February 6, 2025 ಮಹಾದೇವ ಹಡಪದ
ಇಲ್ಲಿಯವರೆಗೆ: ಇತ್ತ ನಾಟ್ಯದವಳ ಮೋಹಿಗೆ ಬಿದ್ದ ಮಗ ವಸೂದೀಪ್ಯನ ಬಗೆಗೆ ಅವ್ವ ಮಹಾಲೇಖೆಗೆ ಚಿಂತೆ ಕಾಡತೊಡಗಿತು. ಮಾವ ಮತ್ತು ಅಬ್ಬೆಗೆ ತನ್ನ ಪ್ರೇಮದ ವಿಷಯ ಗೊತ್ತಾದುದಕೆ...

Comments 10

  1. ಗುರುರಾಜ್ ಜಮಖಂಡಿ
    Aug 18, 2025 Reply

    ವಚನಗಳಿಗೆ ನೀವು ಬರೆವ ಅರ್ಥ ವ್ಯಾಖ್ಯಾನ ಬಹಳ ಚೆನ್ನಾಗಿ ಬರುತ್ತಿದೆ… ಓದಿದಾಗ ಗೊತ್ತಾಗದ ವಿಚಾರಗಳು ನಿಮ್ಮ ವಿವರಣೆ ನೋಡಿದಾಗ ವಚನಗಳು ಹೊಳೆದಂತೆ ಭಾಸವಾಗುತ್ತದೆ.

  2. ಹೊಳೆಬಸವ ಧನ್ನೂರು
    Aug 22, 2025 Reply

    ಮನುಷ್ಯ ತನ್ನ ಅನುಕೂಲಕ್ಕಾಗಿ ಅಲ್ಲಾ, ಬರಿ ತನ್ನ ಸ್ವಾರ್ಥಕ್ಕಾಗಿ, ದೊಡ್ಡಸ್ಥಿಕೆಗಾಗಿ ಮಾಡಿಕೊಂಡ ಮೈಲಿಗೆ, ಮುಟ್ಟಬಾರದು, ಸೂತಕ ಅನ್ನುವಂಥ ಆಚರಣೆಗಳನ್ನು ಶರಣರು ಸ್ಪಷ್ಟವಾಗಿ ಖಂಡಿಸಿದ್ದಾರೆ. ವಚನ ವ್ಯಾಖ್ಯಾನ ತುಂಬಾನೇ ಚೆನ್ನಾಗಿದೆ.

  3. ಮನೋಹರ ಆಚಾರ್
    Aug 25, 2025 Reply

    ಅತ್ಯದ್ಭುತ ಲೇಖನ: ಪ್ರಕಟಿಸಿದ ಬಯಲುಗೆ🌹

  4. ಬಿ.ಎಸ್. ಫಾಲಾಕ್ಷ
    Aug 25, 2025 Reply

    ಲಿಂಗಾಯತರಾರೂ ವಚನಗಳನ್ನೇ ಸರಿಯಾಗಿ ಓದಿಲ್ಲಾ… ಪ್ರತಿಯೊಬ್ಬರೂ ಓದಿ- ತಿಳಿಯುವ, ತಿಳಿದು- ಬದುಕುವ ಜೀವನ ಮೌಲ್ಯಗಳ ಭಂಡಾರವನ್ನು ‘ಬಯಲು’ ನಮಗೆ ನೀಡುತ್ತಿದೆ. ಲೇಖಕರಿಗೆ ನಮನಗಳು.

  5. ಚನ್ನಪ್ಪ ಗೌಡ
    Aug 25, 2025 Reply

    ಇಡೀ ಜನಾಂಗವೇ ಸೋಲು, ಗೆಲುವುಗಳ ಗುದ್ದಾಟದಲ್ಲಿ ಒದ್ದಾಡುತ್ತಿದೆ. ‘ಗೆಲ್ಲ ಸೋಲ ಬಲ್ಲವರಿಗೇಕೆ? ಅದು ಬೆಳ್ಳರ ಗುಣ.’ ಎನ್ನುವ ಸಗರದ ಬೊಮ್ಮಣ್ಣನವರ ವಚನ ನಮಗೊಂದು ಬದುಕಿನ ಪಾಠವಾಗಬೇಕು. ಓ ಎಲ್ ಎನ್ ಶರಣರ ಲೇಖನ ಚೆನ್ನಾಗಿದೆ.

  6. Kumbi Veerappa Chandrasekhar
    Aug 25, 2025 Reply

    Nice

  7. Dr. C. A. SOMASHEKHARAPPA
    Aug 26, 2025 Reply

    Human society is a constructed reality to which we.belong, in which we live. Deconstruction of the constructed hindu what Basava and his followers did attempt to succeed partly. It is one of the greatest experiments, and as a movement, it yielded some results.
    Imagine, how long the construction of human society must have followed to remain a sustained reality. Construction and deconstruction go hand in hand, and are two faces of the same coin Nothing static, all dynamic.

  8. ದಾನೇಶ್ ಪಾಟೀಲ್
    Aug 29, 2025 Reply

    ಆತ್ಮವು ಪರಮಾತ್ಮಕ್ಕಿಂತ ಬೇರೆಯಲ್ಲ, ಪರಮವಾದದ್ದನ್ನು ತುಂಬಿಕೊಂಡಿರುವ ಅಂಶವೇ ಹೌದು…👌👌

  9. ಗಣೇಶ್ ಹರಿಹರ
    Aug 31, 2025 Reply

    “ಇಷ್ಟಲಿಂಗ, ಜನಿವಾರ, ಇತ್ಯಾದಿ ಯಾವುದೇ ಕುರುಹು ಇರಲಿ ಅದಕ್ಕೆ ಅರ್ಥ ಕೊಡುವವರು ನಾವೇ”- ಈ ಮಾತಲ್ಲಿ ಇಷ್ಟಲಿಂಗದ ಬದಲು ‘ಶಿವದಾರ, ಜನಿವಾರ…’ ಎಂದಿದ್ದರೆ ಸರಿ ಇತ್ತು😒

  10. ಮಹಾದೇವ
    Sep 12, 2025 Reply

    ಕುರುಹು ಅಲ್ಲ ಅರಿವನ್ನು ಮುಂದಿಟ್ಟುಕೊಂಡು ನಡೆನುಡಿ ಕಂಡುಕೊಂಡ ಶರಣರ ವಚನಗಳಿಗೆ ಅದ್ಭುತವಾದ ವಿಶ್ಲೇಷಣೆ ಸರ್…

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಧರ್ಮೋ ರಕ್ಷತಿ ರಕ್ಷಿತಃ
ಧರ್ಮೋ ರಕ್ಷತಿ ರಕ್ಷಿತಃ
January 7, 2019
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
February 7, 2021
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
April 29, 2018
ನನ್ನೆದುರು ನಾ…
ನನ್ನೆದುರು ನಾ…
March 6, 2024
ಅವಿರಳ ಅನುಭಾವಿ-4
ಅವಿರಳ ಅನುಭಾವಿ-4
June 17, 2020
ಪ್ರೇಮ ಮತ್ತು ದ್ವೇಷ
ಪ್ರೇಮ ಮತ್ತು ದ್ವೇಷ
July 10, 2025
ಬೆಳಕಲಿ ದೀಪ
ಬೆಳಕಲಿ ದೀಪ
December 8, 2021
ವಚನಗಳಲ್ಲಿ ಶಿವ
ವಚನಗಳಲ್ಲಿ ಶಿವ
September 4, 2018
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
April 29, 2018
ಸಹಜತೆಯೇ ನಿಜನೆಲೆ
ಸಹಜತೆಯೇ ನಿಜನೆಲೆ
February 5, 2020
Copyright © 2025 Bayalu