Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
Share:
Articles September 14, 2024 ಡಾ. ಪಂಚಾಕ್ಷರಿ ಹಳೇಬೀಡು

ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ

ವಿಶ್ವ ಕಂಡ ಸಾಕ್ಷಿಪ್ರಜ್ಞೆಯ ಸಂಕೇತ ಹನ್ನೆರಡನೇ ಶತಮಾನದ ಕನ್ನಡನಾಡಿನ ಶರಣರು. ಅವರು ತಮ್ಮೆಲ್ಲಾ ವಚನಗಳಲ್ಲಿ ಸೃಷ್ಟಿಗೆ ಕಾರಣವಾದ ಮೂಲ ಚೈತನ್ಯವನ್ನು ಪ್ರಾರ್ಥಿಸುವಂತೆ ಮೇಲ್ನೋಟಕ್ಕೆ ಭಾಸವಾಗುತ್ತದೆ. ಆ ದೈವೀ ಚೈತನ್ಯವನ್ನು ಅವಿರಳವಾಗಿ ಸ್ತುತಿಸಿದ್ದಾರೆ, ಹಾಡಿಹೊಗಳಿದ್ದಾರೆ. ಕೆಲವೊಂದು ಕಡೆ ಕಟಕಿಯಾಡಿದ್ದಾರೆ. ಆರಂಭಿಕ ಹಂತದಲ್ಲಿ ಪೂರ್ವಪೀಠಿಕಾಸ್ಥಲ, ಭಕ್ತಸ್ಥಲ ಮತ್ತು ಮಹೇಶ್ವರ ಸ್ಥಲಗಳಲ್ಲಿ ಸಾಧಕನು ತನ್ನನ್ನು ಭವ ಮುಕ್ತಗೊಳಿಸುವಂತೆ ದೇವನಲ್ಲಿ ಗೋಗರೆಯುತ್ತಾನೆ, ಅಂಗಲಾಚುತ್ತಾನೆ. ಆದರೆ ಅಂತಿಮವಾಗಿ ಐಕ್ಯಸ್ಥಲದಲ್ಲಿ ಜೀವಾತ್ಮನಿಗೆ ಕಾರುಣ್ಯಮಾಡುವ ದೈವೀ ಚೈತನ್ಯವೆಂಬುದು ಇಲ್ಲ, ಅದು ತನ್ನಿಂದ ಭಿನ್ನವಿಲ್ಲ, ವಿಶ್ವವ್ಯಾಪಿಯಾದ ಚೈತನ್ಯಶಕ್ತಿ ತನ್ನೊಳಗೇ ಅಂತರ್ಗತವಾಗಿ ಅಗೋಚರವಾಗಿದೆ, ನಮ್ಮ ಮಾಯಾ ಮರವೆಯಿಂದ ಮುಸುಕಿರುವ ಆ ಜ್ಯೋತಿಯನ್ನು ಕಾಣಲು ಮನದ ಮಲಿನತೆಯನ್ನು ಕಳೆದು ನಿರ್ಮಲನಾದಲ್ಲಿ ಅಂತರಂಗದಲ್ಲಿ ಹೊಳೆವ ಜ್ಯೋತಿಯನ್ನು ಕಾಣಬಹುದು ಎಂಬುದು ಸ್ಪಷ್ಟವಾಗುತ್ತದೆ. ಅದು ಹೊರಗಿನಿಂದ ಯಾವುದೋ ಸಾಧನೆಯಿಂದ ಒಳಗೆ ಬಂದದ್ದಲ್ಲ, ಭ್ರಮೆಯೆಂಬ ಬೂದಿಯಡಿಯಲ್ಲಿ ಬಚ್ಚಿಟ್ಟ ಧಗಧಗಿಸುವ ಪ್ರಾಜ್ವಲ್ಯಮಾನ್ಯ ಕೆಂಡ. ಹುಟ್ಟುತ್ತಲೇ ಪ್ರತಿ ಜೀವಿಯಲ್ಲೂ ಆ ಚೈತನ್ಯವಿದ್ದೇ ಇದೆ. ಆ ಅರಿವು ಉಂಟಾಗಲು ಭ್ರಮೆಯೆಂಬ ಮರವೆಯ ಬೂದಿಯನ್ನು ಝಾಡಿಸಬೇಕಷ್ಟೇ! ಶರಣರ ಪ್ರಕಾರ ಸಾಧಕ ಜೀವಿ ಸಾಧಿಸಬೇಕಾದ್ದು ಏನೆಂದರೆ ಹುಟ್ಟಿದಾಗಿನಿಂದ ನಮ್ಮನ್ನಾವರಿಸಿದ, ನಮ್ಮೊಳಗೆ ತುಂಬಿದ ಅಜ್ಞಾನದ ಅಂಧಕಾರದ ತಮವನ್ನು ನೀಗಿ ಅಲ್ಲಿ ಸುಜ್ಞಾನದ ಬೆಳಕನ್ನು ಪಸರಿಸುವಂತೆ ಮಾಡುವುದು. ಆ ಅರಿವಿನ ಬೆಳಕಲ್ಲಿ ಸಂತೃಪ್ತ, ಪ್ರಶಾಂತ ಬದುಕನ್ನು ಬದುಕುವುದು.

ತನುತ್ರಯಗಳಾದ ಸ್ಥೂಲತನು, ಸೂಕ್ಷ್ಮತನು ಮತ್ತು ಕಾರಣತನುಗಳಲ್ಲಿರುವ ಅವಗುಣಗಳನ್ನು ಕಳೆದು ಶಿವಗುಣಗಳನ್ನು (ಸದ್ಗುಣಗಳನ್ನು) ಸಂಪಾದಿಸುವುದೇ ಮಾನವ ಜೀವನದ ಪ್ರಮುಖ ಗುರಿ. ಕ್ರಮವಾಗಿ ಸ್ಥೂಲ ತನುವಿನಲ್ಲಿಯ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ಎಂಬ ಐದು ಜ್ಞಾನೇಂದ್ರಿಯಗಳ ಅವಗುಣಗಳು ಹಾಗೂ ಬಾಯಿ, ಕೈ, ಕಾಲು, ಗುದ ಮತ್ತು ಗುಹ್ಯ ಎಂಬ ಐದು ಕರ್ಮೇಂದ್ರಿಯಗಳ ಅವಗುಣಗಳನ್ನು ಸತ್ಕ್ರಿಯೆಗಳ ಮುಖದಿಂದ ಶಿವಗುಣಗಳನ್ನಾಗಿ (ಮಂಗಳಮಯ) ಪರಿವರ್ತಿಸುವುದು. ಕಣ್ಣಿನ ಮೂಲಕ ನೋಡುವ ನೋಟ ವಕ್ರನೋಟವಾಗಿರದೆ (ಅಶ್ಲೀಲದೃಷ್ಟಿ, ಕದ್ದು ನೋಡುವುದು, ಇತ್ಯಾದಿ) ನೇರನೋಟವಾಗುವತ್ತ (ಸೃಷ್ಟಿಯ) ಸಹಜ ಸೌಂದರ್ಯವನ್ನು ಆಹ್ಲಾದಿಸುವುದು, ಪ್ರಕೃತಿಯ ಎಲ್ಲದರಲ್ಲೂ, ಎಲ್ಲರಲ್ಲೂ ಶಿವನ ಚೈತನ್ಯ (ತನ್ನಲ್ಲಿನ ಪ್ರಾಣ ಚೈತನ್ಯ) ವಿರುವುದನ್ನು ಅರಿತು ಎಲ್ಲವನ್ನೂ, ಎಲ್ಲರನ್ನೂ ಶಿವಭಾವದಿಂದ ನೋಡುವುದು. ಕಿವಿಯ ಮೂಲಕ ಪರನಿಂದೆ, ಅಪಹಾಸ್ಯ, ಅವಾಚ್ಯ ಶಬ್ದ ಆಲಿಸದಿರುವುದು, ಸುಜ್ಞಾನಭರಿತ ಶಬ್ದಗಳಲ್ಲಿ ಒಲವು ಹೊಂದುವುದು. ಮೂಗಿನ ಮೂಲಕ ಅಸಹಜವಲ್ಲದ ಸಹಜ ವಾಸನೆ ಗ್ರಹಿಕೆ; ನಾಲಿಗೆಯ ಮೂಲಕ ಪ್ರಸಾದ ಭಾವದಿಂದ ರುಚಿಸ್ವೀಕಾರ ಮತ್ತು ಚರ್ಮದ ಮೂಲಕ ಹಿತ-ಅಹಿತವೆನ್ನುವ ಭಿನ್ನಭಾವವಿಲ್ಲದೆ ಶಿವಭಾವದಿಂದ ಸ್ಪರ್ಶವನ್ನು ಗ್ರಹಿಸುವುದು. ಹಾಗೇ ಎಲ್ಲಾ ಐದೂ ಕರ್ಮೇಂದ್ರಿಯಗಳೂ ಸರ್ವದರಲ್ಲೂ ಶಿವಭಾವದೊಂದಿಗೆ ವರ್ತಿಸಿದಲ್ಲಿ ಎಲ್ಲಾ ಇಂದ್ರಿಯಗಳೂ ದೈವೀಮಯವಾಗುವ ಮೂಲಕ ಲಿಂಗೇಂದ್ರಿಯಗಳೆನಿಸುತ್ತವೆ. ಇವುಗಳ ಮೂಲಕ ಒಳಬರುವ ಶಬ್ದ, ಸ್ಪರ್ಶ, ರೂಪ, ರಸ, ಗಂಧ ಎಂಬ ವಿಷಯಗಳು ಪ್ರಸಾದ ರೂಪದಲ್ಲಿ ಸ್ಥೂಲತನುವನ್ನು ಹದಗೊಳಿಸಿ ಅಲ್ಲಿಯ ಸರ್ವ ವಿಕಾರಗಳನ್ನು ನಿವೃತ್ತಿ ಮಾಡುವ ಮೂಲಕ ಸಾಧಕನ ಸ್ಥೂಲತನುವೇ ಇಷ್ಟಲಿಂಗವಾಗುವುದು. ಇಷ್ಟಲಿಂಗ ಬೇರೆಯಲ್ಲ ಸಾಧಕನ ತನು ಬೇರೆಯಲ್ಲ. ಸಾಧಕನು ತನ್ನನ್ನು ಬಿಟ್ಟು ತನ್ನಿಂದನ್ಯವಾದ ಇಷ್ಟಲಿಂಗವನ್ನು ಪೂಜಿಸಿ ಧ್ಯಾನಿಸುತ್ತಾನೆಂದರೆ ಆತನಲ್ಲಿ ಲಿಂಗ ತತ್ವದ ಅರಿವು ಇನ್ನೂ ಜಾಗೃತವಾಗಿಲ್ಲ ಎಂದೇ ಅರ್ಥ. ಇಂತಹ ಪೂಜೆಯನ್ನೂ ಕೂಡ ಶರಣರು ಅನ್ಯಲಿಂಗಾರ್ಚನೆ ಎಂದೇ ಕರೆದಿದ್ದಾರೆ!

ಸೂಕ್ಷ್ಮತನುವು, ಸ್ಥೂಲತನುವಿನ ಇಂದ್ರಿಯಗಳು ಕಾರ್ಯನಿರ್ವಹಿಸಲು ಬೇಕಾದ ಸಂವೇದನೆಗಳನ್ನು ಆಯಾ ಇಂದ್ರಿಯಗಳಿಗೆ ರವಾನಿಸುತ್ತದೆ ಮತ್ತು ಅಲ್ಲಿಂದ ಒಳಬರುವ ವಿಷಯಗಳ ಸಂಸ್ಕರಣೆ ಮಾಡುತ್ತದೆ. ಹೀಗೆ ಮಾಡುವಲ್ಲಿ ಸೂಕ್ಷ್ಮತನುವಿನಲ್ಲಿ ಚಿತ್ತ, ಬುದ್ಧಿ, ಅಹಂಕಾರ ಮತ್ತು ಮನ ಎಂಬ ನಾಲ್ಕು ಕರಣೇಂದ್ರಿಯಗಳು ಕಾರ್ಯ ತತ್ಪರವಾಗಿರುತ್ತವೆ. ಒಳ್ಳೆಯದು, ಕೆಟ್ಟದ್ದು, ಸಿಹಿ, ಕಹಿ, ಸುಂದರ, ಕುರೂಪ ಮುಂತಾದ ಇಂದ್ರಿಯ ಸಂಬಂಧಿತ ವಿಷಯಗಳನ್ನು ನಿರ್ಧರಿಸುವ ಕರಣವೇ ‘ಬುದ್ಧಿ’. ಹೀಗೆ ನಿರ್ಧರಿತವಾದ ವಿಷಯಗಳು ಶೇಖರಿಸಲ್ಪಡುವ ಕರಣವೇ ‘ಚಿತ್ತ’, ವಿಷಯಗಳ ಆಧಾರದ ಮೇಲೆ ನಮ್ಮ ವರ್ತನೆ ನಿರ್ಧರಿಸುವುದೇ ‘ಅಹಂಕಾರ’. ವಿಷಯಗಳನ್ನು ಚಿತ್ತ, ಬುದ್ದಿ ಅಹಂಕಾರ ಕರಣೇಂದ್ರಿಯಗಳಿಂದ ಜ್ಞಾನೇಂದ್ರಿಯಗಳಿಗೂ ಮತ್ತು ಜ್ಞಾನೇಂದ್ರಿಯಗಳಿಂದ ಚಿತ್ತ, ಬುದ್ದಿ ಮತ್ತು ಅಹಂಕಾರಕ್ಕೂ ರವಾನಿಸುವ ಕರಣವೇ ಮನಸ್ಸು. (ಮೊಬೈಲ್ ಭಾಷೆಯಲ್ಲಿ ಹೇಳುವುದಾದರೆ, ಹಾರ್ಡ್ ಡಿಸ್ಕ್ ರೀತಿ ಕಾರ್ಯನಿರ್ವಹಿಸುವುದು ಚಿತ್ತ, ಸಾಫ್ಟವೇರ್ ರೀತಿ ಕಾರ್ಯನಿರ್ವಹಿಸುವುದು ಬುದ್ಧಿ, ಡಿಸ್ಪ್ಲೇ ರೀತಿ ಕಾರ್ಯ ನಿರ್ವಹಿಸುವುದು ಅಹಂಕಾರ, ರ್ಯಾಮ್ ರೀತಿ ಕಾರ್ಯನಿರ್ವಹಿಸುವುದು ಮನಸ್ಸು). ಬಹಿರ್ ಇಂದ್ರಿಯಗಳು ಲಿಂಗೇಂದ್ರಿಯಗಳಾದಲ್ಲಿ ಸೂಕ್ಷ್ಮತನುವಿಗೆ ಒಳಬರುವ ವಿಷಯಗಳು ಪದಾರ್ಥ ರೂಪವನ್ನು ಕಳೆದುಕೊಂಡು ಪ್ರಸಾದ ರೂಪವಾಗಿರುತ್ತವೆ. ಇದು ಪ್ರಸಾದ ರೂಪದಲ್ಲಿ ಚಿತ್ತದಲ್ಲಿ ಶೇಖರವಾದಾಗ ಚಿತ್ತವು ಸುಚಿತ್ತವಾಗುತ್ತದೆ, ಮನವು ಸುಜ್ಞಾನಯುಕ್ತ ವಿಷಯಗಳನ್ನು ರವಾನಿಸುವುದರಿಂದ ಮನವು ಸುಮನವಾಗುತ್ತದೆ, ಬುದ್ಧಿ ಸುಬುದ್ಧಿಯಾಗಿ, ಅಹಂಕಾರವು ನಿರಹಂಕಾರವಾಗುವುದು. ಮತ್ತು ಜ್ಞಾನ ಸುಜ್ಞಾನವಾಗುವುದು. ಇಷ್ಟಾದಲ್ಲಿ ಅಂತರಂಗ ಶುದ್ಧವಾಗುವುದು, ಅಂತರಂಗ ಶುದ್ಧವಾದಲ್ಲಿ ಅದು ದೈವೀಕರಣಗೊಂಡಂತೆ. ಇವಿಷ್ಟೂ ಪ್ರಾಣದ ಆಧಾರದ ಮೇಲೆ ಕಾರ್ಯ ತತ್ಪರವಾಗಿರುವುದರಿಂದ ಸಾಧಕನು ಪ್ರಾಣಲಿಂಗಿಯೆನಿಸುವನು.

ಸೂಕ್ಷ್ಮತನುವಿನ ಕರಣಗಳು ಮತ್ತು ಸ್ಥೂಲತನುವಿನ ಇಂದ್ರಿಯಗಳು ಕಾರ್ಯನಿರ್ವಹಿಸಲು ಕಾರಣತನುವಿನ ಭಾವವೇ ನಿರ್ಣಾಯಕವಾಗಿರುತ್ತದೆ. ಭಾವ ಸದ್ಭಾವವಾದಲ್ಲಿ ಅದು ಭಾವಲಿಂಗವೆಂದಾಗುವುದು. ಹೀಗೆ ಸಾಧಕನ ಕಾರಣತನು ಭಾವಲಿಂಗವಾಗಿಯೂ, ಸೂಕ್ಷ್ಮತನು ಪ್ರಾಣಲಿಂಗವಾಗಿಯೂ ಮತ್ತು ಸ್ಥೂಲತನು ಇಷ್ಟಲಿಂಗವಾಗಿಯೂ, ಒಟ್ಟಾರೆ ಶರಣನ ಕಾಯವು ಲಿಂಗಕಾಯವಾಗಿ ಕಾಯವೇ ಕೈಲಾಸವೆನಿಸುವುದು. ಇಂತಹ ಶರಣ ನುಡಿದುದೇ ಪರತತ್ವ, ನಡೆದುದೇ ಶಿವಪಥ. ಈ ಮಾರ್ಗ ಕ್ರಮಣದಲ್ಲಿ ಸಾಧಕ ಜೀವಿಯು ತನ್ನ ನಡೆ ನುಡಿಗಳಲ್ಲಿ, ಸದಾ ಶ್ರದ್ದೆ, ನಿಷ್ಠೆ ಮತ್ತು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇದಕ್ಕಾಗಿ ಅವನಲ್ಲಿ ಸಾಧಿಸಿಯೇ ತೀರುವೆನೆಂಬ ಅಚಲವಾದ ದೃಢವಿಶ್ವಾಸವಿರಬೇಕು.

ಸಾಧಕನು ತನ್ನನ್ನು ಸರಿದಾರಿಯಲ್ಲಿ ನಡೆಸುವಂತೆ, ಅಹಂಕಾರವನ್ನು ಈಡಾಡುವಂತೆ, ಸದ್ಗುಣಗಳನ್ನು ದಯಪಾಲಿಸುವಂತೆ ದೇವರನ್ನು ಪ್ರಾರ್ಥಿಸಿರುವ ನೂರಾರು ವಚನಗಳು ಲಭ್ಯವಿವೆ. ಅದರರ್ಥ ತನ್ನಿಂದ ಭಿನ್ನವಾದ ಒಂದು ಶಕ್ತಿ ನನ್ನಲ್ಲಿ ಬದಲಾವಣೆಗಳನ್ನು ತರುತ್ತದೆ ಎಂದಲ್ಲ. ನಾನು ಈ ರೀತಿಯಾಗಿ ನಡೆದುಕೊಳ್ಳುವ ಮೂಲಕ ಕ್ರಮಿಸಬೇಕಾದ ಗುರಿಯನ್ನು ಮುಟ್ಟುತ್ತೇನೆ ಎಂಬ ಸಂಕಲ್ಪದ ದೃಢವಿಶ್ವಾಸದ ಹೇಳಿಕೆಗಳವು. ಶರಣರ ವಿಚಾರಧಾರೆ ಆಗುವಿಕೆಯೇ ಹೊರತು ಮಾಡುವಿಕೆಯಲ್ಲ. ಅಂತರಂಗದ ಅರಿವು ಗುರುವಾಗಿ, ಬಹಿರಂಗದ ಆಚಾರವೇ (ಆಗುವಿಕೆ – ಪರಿವರ್ತನೆ) ಲಿಂಗವಾಗಿ, ತತ್ಪರಿಣಾಮದ ಅನುಭಾವವೇ ಜಂಗಮವಾಗಿ ಪೂರ್ಣತೆಯನ್ನು ಸಾಧಿಸುವುದೇ ಶೂನ್ಯಸಂಪಾದನೆ. ಈ ಸಾಧನೆ ಎಲ್ಲೋ ದಟ್ಟಾರಣ್ಯದ ನಡುವಿನ ಗುಹೆಯಲ್ಲಿ ಏಕಾಂತದಲ್ಲಿ ಕುಳಿತು ಮಾಡುವ ಜಪ-ತಪವಲ್ಲ, ಲೋಕದ ಮಧ್ಯದಲ್ಲಿದ್ದು, ಲೌಕಿಕರೊಳಗೂ ಒಡನಾಡುತ್ತಾ, ವ್ಯವಹರಿಸುತ್ತಾ, ಒಳಗೆನ್ನದೆ – ಹೊರಗೆನ್ನದೆ, ಬೇಕೆನ್ನದೆ – ಬೇಡೆನ್ನದೆ ಎಲ್ಲಾ ರೀತಿಯ ದ್ವಂದ್ವಗಳನ್ನು ಅಳಿದು, ಮಾನವ ಕಲ್ಪಿತ ಸಕಲ ಭ್ರಮೆಗಳನ್ನು ಮೆಟ್ಟಿ ಪರಿಪೂರ್ಣವಾಗಿ ಸಂತೃಪ್ತ ಬದುಕನ್ನು ಬದುಕುವ ಅದ್ಭುತ ಕಲೆಯೇ ಶರಣತ್ವ.

ಶಿವಯೋಗಿ ಸಿದ್ಧರಾಮೇಶ್ವರರು ತಮ್ಮ ಒಂದು ತ್ರಿಪದಿಯಲ್ಲಿ ‘ಬಸವನಾ ಯೋಗದಿಂ ಹಸನಾಯಿತ್ತೈ ಲೋಕ’ ಎಂದಿದ್ದಾರೆಯೇ ಹೊರತು ‘ಶಿವಯೋಗದಿಂ ಹಸನಾಯಿತ್ತೈ ಲೋಕ’ ಎನ್ನಲಿಲ್ಲ. ಅಲ್ಲಮರು ಎಚ್ಚರಿಸುವವರೆಗೂ ಶಿವಯೋಗಿಯಾಗಿದ್ದ ಸಿದ್ಧರಾಮೇಶ್ವರರು ಕಲ್ಯಾಣಕ್ಕೆ ಬಂದು ಬಸವಣ್ಣನವರ ಪ್ರಭಾವದಿಂದ ಬಸವಯೋಗಿಯಾದ ಬಳಿಕ ಈ ಮಾತನ್ನು ಹೇಳುತ್ತಾರೆಂದರೆ ಶಿವಯೋಗ ಮತ್ತು ಬಸವಯೋಗಗಳೆರಡಕ್ಕೂ ಸ್ಪಷ್ಟ ವ್ಯತ್ಯಾಸವಿರಲೇಬೇಕು. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಶಿವಯೋಗಿ ಸಿದ್ಧರಾಮೇಶ್ವರರಲ್ಲಿ ಶಿವಯೋಗಿಯಾಗಿದ್ದರೂ ಕೂಡ ಕೋಪ, ದರ್ಪ, ಅಹಂಕಾರದಂತಹ ಅನೇಕ ಭ್ರಮೆಗಳು ಮೇಳೈಸಿದ್ದನ್ನು ಅಲ್ಲಮರು ಮತ್ತು ಸಿದ್ದರಾಮೇಶ್ವರರ ನಡುವಿನ ಸಂವಾದದಲ್ಲಿ ಕಾಣಬಹುದು. ಸರ್ವರೀತಿಯ ಭ್ರಮೆಗಳು, ಅಹಮಿಕೆ ಮುಂತಾದ ಎಲ್ಲ ಅಂಗ ಸಹಜ ದುರ್ಗುಣಗಳು ಬಸವಣ್ಣನವರ ಸಂಪರ್ಕಕ್ಕೆ ಬಂದ ಮೇಲೆ ಇನ್ನಿಲ್ಲದಂತಾಗಿ ಪರಿಪೂರ್ಣ ವ್ಯಕ್ತಿತ್ವವನ್ನು ಸಂಪಾದಿಸುತ್ತಾರೆ ಇದು ಬಸವಯೋಗದ ಪರಿಣಾಮವೆಂದೇ ಹೇಳಬಹುದು. ಬಸವಯೋಗವು ಸಮಗ್ರ ಯೋಗವಾಗಿದ್ದು ಇದರ ಸಾಧನಾ ಅಂಗಗಳೆಂದರೆ ಕಾಯಕ, ದಾಸೋಹ, ಭ್ರಮನಿರಸನ.

ಶರಣರ ಪ್ರಕಾರ ದೇವನೊಲುಮೆ ಎಂದರೆ ಸಾಧಕನ ನಿರಂತರ ಪ್ರಯತ್ನದಿಂದ ಆತನ ಅಂತರಂಗ ಹಾಗೂ ಬಹಿರಂಗದಲ್ಲಿ ಉಂಟಾಗುವ ಮಾನಸಿಕ ಸಂತೃಪ್ತಿ, ಸಂಮೃದ್ಧಿಯ, ಪ್ರಗತಿಯ ಸ್ಥಿತ್ಯಂತರ. ಇಲ್ಲಿ ಪ್ರಮುಖವಾಗಿ ಗುರು ಲಿಂಗ ಜಂಗಮ ಪಾದೋದಕ ಮತ್ತು ಪ್ರಸಾದ ಎಂಬ ಐದು ಘಟಕಗಳಿವೆ. ಇವೆಲ್ಲವೂ ಕೇವಲ ಭೌತಿಕ ಅಂಶಗಳಾಗಿರದೆ ತಾತ್ವಿಕ ಅಂಶಗಳಾಗಿವೆ ಎನ್ನುವುದು ಬಹಳ ಮುಖ್ಯ. ಈ ಅಂಶಗಳನ್ನು ಬಿಡಿಬಿಡಿಯಾಗಿ ನೋಡದೇ ಒಂದಾದ ಮೇಲೊಂದು ಅನುಕ್ರಮವಾಗಿ ಅಭ್ಯಸಿಸಿ ಅಳವಡಿಸಿಕೊಳ್ಳಬೇಕು. ಸಾಧಕನು ನಿರಂತರ ಪ್ರಯತ್ನದಿಂದ ತಾನೇ ಗುರು, ಲಿಂಗ, ಜಂಗಮ, ಪಾದೋದಕ ಮತ್ತು ಪ್ರಸಾದ ಸ್ವರೂಪನಾಗಬೇಕು. ಉದಾಹರಣೆಗೆ, ‘ಗುರು’ ಎಂದರೆ ಭೌತಿಕವಾಗಿ ಕಾಣಲ್ಪಡುವ ಜ್ಞಾನಿ, ಮಾರ್ಗದರ್ಶಕ, ಸೂಕ್ತ ಸನ್ನಿವೇಶ, ಪ್ರಕೃತಿ, ಜ್ಞಾನವೀವ ಪುಸ್ತಕ ಹೀಗೆ ಯಾವುದೂ ಆಗಬಹುದು. ತಾತ್ವಿಕವಾಗಿ ಗುರು ಎಂದರೆ ಅಂತರಂಗದಲ್ಲಿ ವಿಕಸಿತವಾದ ಸತ್ಯದ ಅರಿವು, ನಿತ್ಯಾನಿತ್ಯ ವಿವೇಕ, ಜಾಗೃತ ಪ್ರಜ್ಞೆಯ ಬೆಳಕು. (ಅರಿವೇ ಗುರು).
‘ಲಿಂಗ’ ಎಂದರೆ ಭೌತಿಕವಾಗಿ ಸಾಧಕನು ತನ್ನ ಅಂಗದ ಮೇಲೆ ಪ್ರಜ್ಞಾಪೂರ್ವಕವಾಗಿ ಸ್ಥಾಪ್ಯ ಮಾಡಿದ ಇಷ್ಟಲಿಂಗ. ತಾತ್ವಿಕವಾಗಿ ಲಿಂಗವೆಂದರೆ ಪ್ರಜ್ಞಾಪೂರ್ವಕವಾಗಿ ಅರಿವಿನ ನೆಲೆವಿಡಿದು, ನಿತ್ಯಾನಿತ್ಯ ವಿವೇಕದೊಡನೆ ನಡೆವ ಕ್ರಿಯೆ ಅಥವಾ ಆಚಾರ. (ಆಚಾರವೇ ಲಿಂಗ)
‘ಜಂಗಮ’ ವೆಂದರೆ ಭೌತಿಕವಾಗಿ ಸಮಾಜ, ಪ್ರಕೃತಿ. ತಾತ್ವಿಕವಾಗಿ ನಿತ್ಯಾನಿತ್ಯ ವಿವೇಕ ಪ್ರಜ್ಞೆಯಿಂದ ಮಾಡಿದ ಆಚಾರ ಅಥವಾ ಕ್ರಿಯೆಯಿಂದ ಉಂಟಾದ ಅನುಭಾವ. (ಅನುಭಾವವೇ ಜಂಗಮ)
‘ಪಾದೋದಕ’ ವೆಂದರೆ ಭೌತಿಕವಾಗಿ ಜ್ಞಾನಿಯ, ಅನುಭಾವಿಯ ಒಡನಾಟ. ತಾತ್ವಿಕವಾಗಿ ಅನುಭಾವದಿಂದ ಉಂಟಾದ ಪೂರ್ಣಜ್ಞಾನ.
‘ಪ್ರಸಾದ’ ವೆಂದರೆ ಭೌತಿಕವಾಗಿ ಲಿಂಗಕ್ಕೆ ಅರ್ಪಿಸಿದ ಬಳಿಕ ಕೊಂಡದ್ದು. ತಾತ್ವಿಕವಾಗಿ ಪೂರ್ಣಜ್ಞಾನದಿಂದ ಉಂಟಾದ ತೃಪ್ತಿ. ಇಂಥಾ ತೃಪ್ತಿಯೇ ದೇವನೊಲುಮೆ.

ತನು ಶುಚಿಯಿಲ್ಲದವನ ದೇಹಾರವೇಕೆ
ದೇವರು ಕೊಡನೆಂಬ ಭ್ರಾಂತದೇಕೆ
ಮನಕ್ಕೆ ಮನವೆ ಸಾಕ್ಷಿ, ಸಾಲದೆ ಲಿಂಗ ತಂದೆ
ಹೇಂಗೆ ಮನ ಹಾಂಗೆ ಘನ ತಪ್ಪದು,
ಕೂಡಲಸಂಗಮದೇವಾ.

Previous post ಪ್ರಭುವಿನ ಗುರು ಅನಿಮಿಷ -2
ಪ್ರಭುವಿನ ಗುರು ಅನಿಮಿಷ -2
Next post ಭಾಷೆ ಮತ್ತು ಚಿಂತನೆ
ಭಾಷೆ ಮತ್ತು ಚಿಂತನೆ

Related Posts

ಪದ, ಬಳಕೆ ಮತ್ತು ಅರ್ಥ
Share:
Articles

ಪದ, ಬಳಕೆ ಮತ್ತು ಅರ್ಥ

November 9, 2021 ಡಾ. ಎನ್.ಜಿ ಮಹಾದೇವಪ್ಪ
ನಾವು ಕೆಲವು ಪದಗಳನ್ನು ಕಾಲಕ್ಕೆ ಅಥವಾ ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ಅರ್ಥಗಳಲ್ಲಿ ಬಳಸುತ್ತೇವೆ. ಉದಾಹರಣೆಗೆ, ಗುರು, ಲಿಂಗ, ಜಂಗಮ. ಪ್ರಸಾದ, ಮುಂತಾದ ಪದಗಳ ಬಳಕೆಯನ್ನು...
ಹರನು ಮೂಲಿಗನಾಗಿ…
Share:
Articles

ಹರನು ಮೂಲಿಗನಾಗಿ…

March 5, 2019 ಕೆ.ಆರ್ ಮಂಗಳಾ
ಶಿವ ಶಿವಾ ಬಸವಾ… ನಮ್ಮಪ್ಪ ಕಾಪಾಡು ತಂದೆ… ಕರಡಿಗೆಯನ್ನು ಹಣೆಗೊತ್ತಿಕೊಳ್ಳುತ್ತಾ ಅಮ್ಮ ನೆನೆಯುತ್ತಿದ್ದ ಶಿವ-ಬಸವ ನಾಮವು ನಸುಕಿನಲ್ಲೇ ನನ್ನ ಕಿವಿಗೆ ಬೀಳುತ್ತಿದ್ದ ಮೊದಲ...

Comments 13

  1. ನಾಗಚಂದ್ರ ಬಾಳಿಗ
    Sep 19, 2024 Reply

    ದೇವನೊಲುಮೆಗಾಗಿ ಹಾತೊರೆಯುವ ವಚನಗಳಲ್ಲಿ ದೇವರ ಮತ್ತು ಸಾಂಪ್ರದಾಯಿಕ ಪೂಜಾವಿಧಿಗಳ ನಿರಾಕರಣೆ ಇರುವುದನ್ನು ಗಮನಿಸದೇ ಹೋದರೆ ಶರಣರನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವೇ ಇಲ್ಲ…

  2. ನವೀನ್ ಬೆಂಗಳೂರು
    Sep 21, 2024 Reply

    ವಚನಗಳಲ್ಲಿ ದೇವನೊಲುಮೆ… ತುಂಬಾ ಚೆನ್ನಾಗಿ ಬರೆದಿದ್ದಾರೆ. ಎಲ್ಲಾ ವಚನಗಳು ಅವರವರ ಅಂಕಿತಗಳಿಂದ ಅಂತ್ಯವಾಗುತ್ತವೆ. ಆ ಅಂಕಿತಗಳನ್ನ ಹಿಡಿದುಕೊಂಡೆ ಇದು ಶಿವನ ಕುರಿತಾದ ಆರಾಧನೆಯನ್ನು ಹೇಳುತ್ತದೆ ಎನ್ನುವವರನ್ನು ನಾನು ಕೇಳಿದ್ದೇನೆ, ನೋಡಿದ್ದೇನೆ ಅದಕ್ಕೆ ಸರಿಯಾದ ಉತ್ತರದಂತೆ ಇದೇ ಈ ಲೇಖನ. ಆದರೆ ಈ ಲೇಖನದಲ್ಲಿ ನನಗೆ ಶಿವ ಗುಣ, ಶಿವ ಚೈತನ್ಯ, ಶಿವ ಭಾವ ಅನ್ನುವುದರ ಅರ್ಥ ತಿಳಿಯಲಿಲ್ಲ…

  3. ಗುರುನಾಥ, ಹುಬ್ಬಳ್ಳಿ
    Sep 24, 2024 Reply

    ಗುರು, ಲಿಂಗ, ಜಂಗಮ, ಪಾದೋದಕ ಮತ್ತು ಪ್ರಸಾದ ಸ್ವರೂಪರಾದ ಶರಣರನ್ನು ಈ ಕಾಲದಲ್ಲಿ ಕಾಣಬಹುದೇ?

  4. Shraddhananda swamiji, Vijayapura
    Sep 28, 2024 Reply

    ಬಸವನ ಯೋಗದಿಂದ ಹಸನಾಯಿತಯ್ಯ ಲೋಕ.

  5. ಇಂದುಧರ ಧಾರವಾಡ
    Sep 29, 2024 Reply

    ಬಸವಣ್ಣ ಮತ್ತು ಇತರೆ ಶರಣರು ನಂಬಿಕೆ ಮೂಢನಂಬಿಕೆ ಆಗದಂತೆ ತಡೆದರು ಅಂತ ನನ್ನ ಅಜ್ಜ ಹೇಳುತ್ತಿದ್ದರು. ಕೈಯಲ್ಲಿನ ಲಿಂಗ ಪೂಜೆ ಸ್ಥಾವರ ಪೂಜೆಯಾಗಿ,ಮತ್ತೆ ಸಂಪ್ರದಾಯಕ್ಕೆ ಜೋತು ಬೀಳುವ ಅಪಾಯವನ್ನು ಆಗಲೇ ಗ್ರಹಿಸಿದ್ದರು ಎಂದೆಂದಿಗೂ

  6. ಮಾಲತೇಶ್ ಎಂ.ಸಿ
    Sep 30, 2024 Reply

    ಸ್ಥೂಲ, ಸೂಕ್ಷ್ಮ ಮತ್ತು ಕಾರಣ ತನುಗಳೆಂದರೆ ಏನು? ಅವು ಎಲ್ಲಿ ಇರುತ್ತವೆ? ಪ್ರತಿಯೊಂದರಲ್ಲಿ ಇರುವ ದೋಷಗಳು ಎಂಥವು ಎನ್ನುವುದು ನನಗೆ ಈವರೆಗೂ ಅರ್ಥವಾಗಿಲ್ಲಾ. ಅದನ್ನೆಲ್ಲಾ ವಿವರವಾಗಿ ಬರೆದಿದ್ದರೆ ಸ್ಪಷ್ಟತೆ ಸಿಗುತ್ತಿತ್ತು. ಉಳಿದಂತೆ ಲೇಖನದ ಪ್ರತಿಯೊಂದು ಲಾಜಿಕ್ ಸರಿಯಾಗಿದೆ. ಧನ್ಯವಾದಗಳು ಸರ್.

  7. Mahadeva Sagar
    Sep 30, 2024 Reply

    ಭ್ರಮೆಗಳನ್ನು ಬಿಟ್ಟು ಬದುಕುವುದರಿಂದ ಸಂತೃಪ್ತಿ, ನೆಮ್ಮದಿ ಸಿಗುತ್ತದೆ ಎನ್ನುವುದು ನಿಜ. ಆದರೆ ನಾವೀಗ ಎಂತಹ ಪ್ರಪಂಚದಲ್ಲಿ ಇದ್ದೇವೆ ಎಂದರೆ ಭ್ರಮೆಗಳಾವವು, ನಿಜಗಳಾವವು ಎನ್ನುವುದೇ ಗೊತ್ತಾಗದಂತಾಗಿದೆ. ಜೇಡ ತಾನು ಹೆಣೆದ ಬಲೆಯೊಳಗೆ ತಾನೇ ಸಿಲುಕುವಂತೆ ನಾವು ಹೆಣೆದುಕೊಂಡ ಬಲೆಯೊಳಗೆ ನಾವು ಬಿದ್ದಿದ್ದೇವೆ. ಕಣ್ಣು ಬಿಟ್ಟರೆ ಬಲೆಯೇ ಕಾಣಿಸುತ್ತದೆ.

  8. ಮಂಜುನಾಥ ಸ್ವಾಮಿ
    Oct 3, 2024 Reply

    ಇಷ್ಟಲಿಂಗವು ಪೂಜಿಸುವುದಕ್ಕಾಗಲಿ, ಧ್ಯಾನಿಸುವುದಕ್ಕಾಗಲಿ ಇರುವುದಲ್ಲಾ ಎಂದರೆ ಅದನ್ನ ಯಾಕೆ ಕೊರಳಲ್ಲಿ ಕಟ್ಟಿಕೊಂಡಿದ್ದೇವೆ? ನಮಗೆ ದೀಕ್ಷೆ ಕೊಟ್ಟ ಗುರುಗಳು ಅದನ್ನು ಪೂಜಿಸಲು, ಜಪಿಸಲು ಯಾಕೆ ಹೇಳಿಕೊಟ್ಟಿದ್ದಾರೆ?

  9. ಮಹಾದೇವಯ್ಯ ಮೂಲಿಮಠ
    Oct 4, 2024 Reply

    ಭೌತಿಕ ದಾರಿ, ಆಧ್ಯಾತ್ಮಿಕ ಅಥವಾ ತಾತ್ವಿಕ ದಾರಿ ಎರಡೂ ಬೇರೆಬೇರೆ ಎಂದು ಹೇಳಿರುವುದು, ಇಲ್ಲಿ ಲಿಂಗಾಯತರದು ಯಾವ ದಾರಿ?…

  10. ರವೀಂದ್ರ ಜಂಬಳಿ
    Oct 4, 2024 Reply

    ಬಸವಯೋಗವು ಸಮಗ್ರ ಯೋಗವಾಗಿದ್ದು ಇದರ ಸಾಧನಾ ಅಂಗಗಳೆಂದರೆ ಕಾಯಕ, ದಾಸೋಹ, ಭ್ರಮನಿರಸನ ಎಂದು ಹೇಳಲಾಗಿದೆ. ಕಾಯಕ, ದಾಸೋಹ ಗೊತ್ತು. ಭ್ರಮ ನಿರಸನ ಎಂದರೆ ಕೋಪ, ಅಹಂಕಾರದಂತಹ ದುರ್ಗುಣಗಳಿಂದ ಮನಸ್ಸನ್ನು ದೂರ ಇಡುವುದು… ಲೇಖನ ಚೆನ್ನಾಗಿದೆ👌👌

  11. ಶೈಲೇಂದ್ರ ಕವಲಿ
    Oct 13, 2024 Reply

    ಶರಣರ ವಿಚಾರಧಾರೆ ಆಗುವಿಕೆಯೇ ಹೊರತು ಮಾಡುವಿಕೆಯಲ್ಲ- ಎನ್ನುವದು ಅತ್ಯಂತ ಅಮೂಲ್ಯವಾದ ಮಾತು. ಭವಿ ಭಕ್ತನಾಗುವುದು, ಭಕ್ತ ಲಿಂಗವಾಗಿ ಜಂಗಮವಾಗುವುದು🙏🏻

  12. Mahesh G
    Oct 17, 2024 Reply

    ಮನಸ್ಸು ಎನ್ನುವುದು ಚಿತ್ತ, ಬುದ್ಧಿ, ಅಹಂಕಾರಗಳನ್ನು ಹೇಗೆ ಸೃಷ್ಟಿಮಾಡಿ ತನ್ನಂತೆ ಆಡಿಸುತ್ತದೆ. ಇಂದ್ರಿಯಗಳಿಂದ ಸಿಗುವ ಮಾಹಿತಿಯನ್ನು ನಾವು ನಮ್ಮ ಮೂಗಿನ ನೇರಕ್ಕೆ ಹೇಗೆ ಬದಲಾಯಿಸಿಕೊಳ್ಳುತ್ತೇವೆನ್ನುವ ವಿಚಾರ ಬಹಳ ಚೆನ್ನಾಗಿದೆ. ಮನಸ್ಸು ಬದಲಾಗದೆ ದಾರಿ ಸಿಗುವುದಿಲ್ಲ. ಲಿಂಗಪ್ಪ ಸಿಗುವುದಿಲ್ಲ. ಪೂಜೆ-ಪ್ರಾರ್ಥನೆಗಳಲ್ಲೇ ಮುಳುಗಿದವರನ್ನು ನೋಡುತ್ತಿದ್ದರೆ, ಪೂಜೆ-ಪ್ರಾರ್ಥನೆಗಳು ಮನಸ್ಸನ್ನು ಬದಲಾಯಿಸುತ್ತವೆಂದು ನನಗೆ ಅನಿಸುವುದಿಲ್ಲ.

  13. ಚನ್ನಪ್ಪ ಚೌಧಾರಿ
    Nov 17, 2024 Reply

    ಶರಣರ ವಿಚಾರಧಾರೆ ಆಗುವಿಕೆಯೇ ಹೊರತು ಮಾಡುವಿಕೆಯಲ್ಲ.

    ಲೇಖನ ತುಂಬಾ ಅದ್ಬುತವಾಗಿದೆ, ಬಹಳಷ್ಟು ವಿಚಾರಗಳನ್ನು ತಿಳಿಸಿಕೊಟ್ಟಿದ್ದೀರಿ. ಶರಣು ಶರಣಾರ್ಥಿ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹೆಸರಿಲ್ಲದಾ ಊರಿನ ಹಾಡು
ಹೆಸರಿಲ್ಲದಾ ಊರಿನ ಹಾಡು
May 6, 2020
ನಾನು ಯಾರು? ಎಂಬ ಆಳ-ನಿರಾಳ-5
ನಾನು ಯಾರು? ಎಂಬ ಆಳ-ನಿರಾಳ-5
August 2, 2020
ನಾನು ಯಾರು? ಎಂಬ ಆಳ ನಿರಾಳ-3
ನಾನು ಯಾರು? ಎಂಬ ಆಳ ನಿರಾಳ-3
May 6, 2020
ಕಾಯವೇ ಕೈಲಾಸ
ಕಾಯವೇ ಕೈಲಾಸ
April 29, 2018
ನಾ ಬರಬಾರದಿತ್ತು ಇಂಥ ಊರಿಗೆ…
ನಾ ಬರಬಾರದಿತ್ತು ಇಂಥ ಊರಿಗೆ…
July 10, 2023
ಅನಿಮಿಷ: ಚಿಗುರಿದ ಒಲುಮೆ (4)
ಅನಿಮಿಷ: ಚಿಗುರಿದ ಒಲುಮೆ (4)
December 13, 2024
ಹೀಗೊಂದು ತಲಪರಿಗೆ (ಭಾಗ- 3)
ಹೀಗೊಂದು ತಲಪರಿಗೆ (ಭಾಗ- 3)
August 8, 2021
ಅರಿವಿನ ಬಾಗಿಲು…
ಅರಿವಿನ ಬಾಗಿಲು…
October 13, 2022
ಹಾಯ್ಕುಗಳು
ಹಾಯ್ಕುಗಳು
November 10, 2022
ಸವೇಜನಾಃ ಸುಖಿನೋ ಭವಂತು
ಸವೇಜನಾಃ ಸುಖಿನೋ ಭವಂತು
August 2, 2020
Copyright © 2025 Bayalu