Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸತ್ಯದ ಬೆನ್ನು ಹತ್ತಿ…
Share:
Articles April 29, 2018 Bayalu

ಸತ್ಯದ ಬೆನ್ನು ಹತ್ತಿ…

ಸತ್ಯವನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ. ಕೆಲವು ಕಾಲ ಪ್ರಖರವಾದ ಬೆಂಕಿಯು ಬೂದಿಯೊಳಗೆ ಮುಚ್ಚಿದ್ದರೂ, ಬೂದಿಯನ್ನು ಸರಿಸಿದಾಗ ಮತ್ತೆ ಅಗ್ನಿಯು ಪ್ರಜ್ವಲಿಸುವುದು. ಹಗುರವಾದ ಬೂದಿ ಗಾಳಿಗೆ ಹಾರಲೇಬೇಕು, ಬೆಂಕಿ ಪ್ರಜ್ವಲಿಸಲೇಬೇಕು. ಅಂಥ ಸಮಯ ಈಗ ಬಂದಿದೆ. ವಚನರಾಶಿಯೊಳಗೆ ಸೇರಿರುವ ಅನಗತ್ಯ ಖೊಟ್ಟಿ ವಚನಗಳನ್ನು ಹೆಕ್ಕಿ ತೆಗೆದು ಆಚೆ ಹಾಕಿ, ಶರಣರ ಶುದ್ಧ ವಚನಗಳನ್ನು ಮಾತ್ರ ಒಂದೆಡೆ ಸೇರಿಸಿ, ಅವು ಶುದ್ಧ ವಚನಗಳೆಂದು ಜನತೆಗೆ ತಿಳಿಸುವ ಅಗತ್ಯವಿದೆ. ಅಂಥ ಪ್ರಯತ್ನಗಳು ವ್ಯಾಪಕವಾಗಿ ನಡೆಯುತ್ತಿವೆ.

ಚಿನ್ಮಯ ಜ್ಞಾನಿ, ಷಟಸ್ಥಲಬ್ರಹ್ಮಿ ಚೆನ್ನಬಸವಣ್ಣನವರು ಜಂಗಮವೆಂದರೇನು? ಜಂಗಮ ಎಂದರೆ ಯಾರು ಎಂದು ಹೀಗೆ ಸ್ಪಷ್ಟವಾಗಿ ಹೇಳುತ್ತಾರೆ: “ಕೇಶ ಕಾಷಾಂಬರವನಿಕ್ಕಿದರೇನು? ರುದ್ರಾಕ್ಷಿಯ ಮಕುಟವ ಧರಿಸಿದರೇನು? ಸಾಕಾರದಲ್ಲಿ ಸನುಮತರಲ್ಲ, ನಿರಾಕಾರದಲ್ಲಿ ನಿರುತರಲ್ಲ, ಪರಮಾರ್ಥದಲ್ಲಿ ಪರಿಣಾಮಿಗಳಲ್ಲ. ಇದು ಕಾರಣ ಕೂಡಲಚೆನ್ನಸಂಗಯ್ಯಾ ತುರುಬಾಗಲಿ, ಬೋಳಾಗಲಿ, ಅರಿವುಳ್ಳುದೆ ಜಂಗಮ.”
ದೇಹದ ಮೇಲೆ ಮೊಳದುದ್ದ, ಮಾರುದ್ದ ಕೂದಲು ಬೆಳೆಸಿಕೊಂಡು ಸುಳಿವಾತ ಜಂಗಮನೇ ಅಥವಾ ಕಾವಿ ಬಟ್ಟೆ ಧರಿಸಿದಾತ ಜಂಗಮನೇ? ಮೈತುಂಬಾ, ತಲೆಯ ಮೇಲೆಲ್ಲಾ ರುದ್ರಾಕ್ಷಿ ಮಣಿಮಾಲೆಯನ್ನು ಹೇರಿಕೊಂಡಿಪ್ಪಾತ ಜಂಗಮನೇ? ಪ್ರಾಣಿಗಳ ಮೈಮೇಲೆ ಕೂದಲು ಬೆಳೆಯುವುದಿಲ್ಲವೇ, ರುದ್ರಾಕ್ಷಿಯ ಮರ ರುದ್ರಾಕ್ಷಿಯನ್ನು ತನ್ನ ಮೇಲೇ ಹೊತ್ತಿರುವುದಿಲ್ಲವೇ? ಅವುಗಳಿಗೇನಾದರೂ ಅದರ ವಿಶೇಷತೆ ಅರಿವಾಗುವುದೇ? ಖಂಡಿತಾ ಇಲ್ಲ. ಒಬ್ಬ ವ್ಯಕ್ತಿ ಕೇವಲ ಲಾಂಛನಧಾರಿಯಾದಲ್ಲಿ ಫಲವೇನು? ಲಾಂಛನಕ್ಕೆ ತಕ್ಕ ಅರಿವು ಮತ್ತು ಅರಿವಿಗೆ ತಕ್ಕ ಗುಣಗಳು (ಆಚಾರ) ಅಳವಡದಿದ್ದರೆ ಏನು ಪ್ರಯೋಜನ? ದೇವರ ಸಾಕಾರ ರೂಪವಾದ ಈ ಜಗತ್ತನ್ನೂ ನಂಬುವುದಿಲ್ಲ, ನಿರಾಕಾರದ ಸಾಧನೆಯೂ ಇಲ್ಲ. ಕೊನೆಯಲ್ಲಿ ಇಂಥಾ ವೇಷಧಾರಿಗಳಿಗೆ ಯಾವ ಪಾರಮಾರ್ಥಿಕ ಅನುಭಾವವೂ ಉಂಟಾಗುವುದಿಲ್ಲ. ಆದ್ದರಿಂದ ಈ ವೇಷಧಾರಿಗಳಾರೂ ಜಂಗಮರಲ್ಲ! ಗಂಡಾಗಲಿ-ಹೆಣ್ಣಾಗಲಿ, ತಲೆ ತುಂಬಾ ಕೂದಲಿರಲಿ, ಜಟೆ ಹಾಕಿರಲಿ- ತಲೆ ಬೋಳಾಗಿರಲಿ ಇವಾವುವೂ ಜಂಗಮತ್ವದ ಲಕ್ಷಣಗಳಲ್ಲ. ಅರಿವುಳ್ಳವನು ಮಾತ್ರ ಜಂಗಮ ಹಾಗೂ ಇನ್ನೂ ಮುಂದೆ ಹೋಗಿ ಆ ಅರಿವೇ ಜಂಗಮ ಎಂದು ಚೆನ್ನಬಸವಣ್ಣನವರು ಇಷ್ಟು ಸ್ಪಷ್ಟವಾಗಿ ತಿಳಿಸಿದ್ದರೂ ನಾವು ಅರಿವನ್ನು ನಮ್ಮದಾಗಿಸಿಕೊಂಡು ಆ ಜಂಗಮ ತತ್ವವೇ ನಾವಾಗುವ ಬದಲು ಕೇವಲ ಜಾತಿ ಜಂಗಮರೆಂದು ಕರೆಸಿಕೊಳ್ಳುವ ವೇಷಧಾರಿಗಳನ್ನು ನಮ್ಮ ಮನೆಗಳಿಗೆ ಕರೆತಂದು ಅವರ ಪಾದಪೂಜೆ ಮಾಡಿ ಆ ಉದಕವನ್ನು ಪವಿತ್ರ ಜಲವೆಂದು ತಿಳಿದು ಮನೆ ತುಂಬಾ ಪ್ರೋಕ್ಷಿಸಿ, ಕುಡಿದು ಪಾವನವಾದೆವೆಂಬ ಭ್ರಾಂತು ಹೊಂದಿ ಅಜ್ಞಾನಿಗಳಾಗಿದ್ದೇವೆ.
ಸದಾಚಾರ ನಮ್ಮ ಉಸಿರಾಗಬೇಕು, ಜೀವನದ ಅವಿಭಾಜ್ಯ ಅಂಗವಾಗಬೇಕು. ಗುರು ಲಿಂಗ ಜಂಗಮ ಈ ಮೂರೂ ತತ್ವಗಳು ಹಿಂದೂ ಸಂಪ್ರದಾಯದಲ್ಲಿಯೂ ಆಚರಣೆಯಲ್ಲಿವೆ. ಆದರೆ ಅಲ್ಲಿನ ನಂಬಿಕೆ ಮತ್ತು ಆಚರಣೆಗಳು ಲಿಂಗಾಯತ ಧರ್ಮದಲ್ಲಿನ ಗುರು ಲಿಂಗ ಜಂಗಮದ ತತ್ವಗಳಿಗೆ ಸಂಪೂರ್ಣ ಭಿನ್ನವಾಗಿವೆ. ಚೆನ್ನಬಸವಣ್ಣನವರು ಗುರು ಲಿಂಗ ಜಂಗಮ ಪೂಜೆಯನ್ನು ಬಹಳ ಸರಳೀಕರಣಗೊಳಿಸಿ ಹೀಗೆ ತಿಳಿಸಿದ್ದಾರೆ:

“ಮಾಡುವ ಸದಾಚಾರಕ್ಕೆ ಮೊದಲನೆಯ ಲಿಂಗಪೂಜೆಯೆ ಗುರುಪೂಜೆ.
ಮಾಡುವ ಸದಾಚಾರಕ್ಕೆ ಎರಡನೆಯ ಲಿಂಗಪೂಜೆಯೆ ಲಿಂಗಪೂಜೆ.
ಮಾಡುವ ಸದಾಚಾರಕ್ಕೆ ಮೂರನೆಯ ಲಿಂಗಪೂಜೆಯೆ ಜಂಗಮಪೂಜೆ.
ಮಾಡುವ ಸದಾಚಾರಕ್ಕೆ ಮೂರು ಪೂಜೆ. ಈ ಪೂಜೆ ಅನಂತಜನ್ಮದುರಿತಧ್ವಂಸಿ ನೋಡಾ, ಕೂಡಲಚೆನ್ನಸಂಗಮದೇವ ಸಾಕ್ಷಿಯಾಗಿ.”

ಶರಣರ ವಿಚಾರಧಾರೆ ಎಷ್ಟು ಸ್ಪಷ್ಟವಿದೆ! ಗುರುಪೂಜೆ ಎಂದಾಕ್ಷಣ ಕಾವಿಧಾರಿಯೊಬ್ಬನನ್ನು ಹಿಡಿತಂದು ಆತನನ್ನು ಪೂಜಿಸು ಎಂದಲ್ಲ. ಜಂಗಮ ಪೂಜೆ ಎಂದರೆ ಸಮಾಜದ ಅಯ್ಯನೊಬ್ಬನನ್ನು ಕರೆದು ಪೂಜಿಸು ಎಂದಲ್ಲ. ಶರಣ ಸಿದ್ಧಾಂತದ ಪ್ರಕಾರ, ಗುರು ತತ್ವವೆಂದರೆ ಸ್ಥೂಲ ಶರೀರ, ಪ್ರಾಣವೇ (ಸೂಕ್ಷ್ಮ ಶರೀರ) ಲಿಂಗತತ್ವ, ಹಾಗೂ ಜಂಗಮ ತತ್ವವೇ ಅನುಭಾವ (ಕಾರಣ ಶರೀರ). ಈ ತತ್ವಗಳಿಗೆ ಕ್ರಮವಾಗಿ, ಸ್ಥೂಲ ತನುವಿಗೆ ಇಷ್ಟಲಿಂಗವೆಂದೂ, ಸೂಕ್ಷ್ಮ ತನುವಿಗೆ ಪ್ರಾಣಲಿಂಗವೆಂದೂ, ಹಾಗೂ ಕಾರಣ ತನುವಿಗೆ ಭಾವ ಲಿಂಗವೆಂದೂ ಹೆಸರಿಸಿ, ಪರಿಶುದ್ಧ ನಡೆ ನುಡಿ ಆಚಾರ ವಿಚಾರಗಳಿಂದ ಆ ತ್ರೈಲಿಂಗಗಳೂ ತೃಪ್ತಿ ಹೊಂದುವವು. ಅದಕ್ಕೇ ಚನ್ನಬಸವಣ್ಣನವರು, ಸದಾಚಾರದಿಂದ ಮಾಡುವ ಮೊದಲಪೂಜೆ ಗುರುಪೂಜೆ! ಸದಾಚಾರ ತತ್ಪರನಾದ ಭಕ್ತನು ತನ್ನ ಸದ್ಗುಣಗಳೊಡಗೂಡಿ ಸ್ಥೂಲ ತನುವಿನಿಂದ ಮಾಡುವ ಇಷ್ಟಲಿಂಗ ಪೂಜೆಯೇ ಗುರುಲಿಂಗಪೂಜೆ ಎನಿಸಿಕೊಳ್ಳುವುದು, ಮಾಡುವ ಸದಾಚಾರಕ್ಕೆ ಎರಡನೆಯ ಲಿಂಗಪೂಜೆಯೆ ಲಿಂಗಪೂಜೆ. ಪ್ರಾಣಲಿಂಗ ಪೂಜೆಯೇ ಲಿಂಗಪೂಜೆ ಹಾಗೂ ಮಾಡುವ ಸದಾಚಾರಕ್ಕೆ ಮೂರನೆಯ ಲಿಂಗಪೂಜೆಯೆ ಜಂಗಮಪೂಜೆ, ಕಾರಣ ತನುವಿನ ಮೂಲಕ ಪಡೆಯುವ ಅನುಭಾವವೇ ಜಂಗಮ ಪೂಜೆ ಎಂದು ತಿಳಿಸಿದ್ದಾರೆ. ಆದರೆ ಇಷ್ಟು ಸ್ಪಷ್ಟವಿರುವ ಶರಣ ಸಿದ್ಧಾಂತಗಳನ್ನು ಮನಗಾಣದೆ, ಅರಿಯದೆ ಖೊಟ್ಟಿ ವಚನಗಳ ಹಿಂದೆ ಬಿದ್ದು ಆ ರೀತಿ ಆಚರಣೆಗಳನ್ನು ರೂಢಿಸಿಕೊಂಡಿರುವುದು ನಿಜಕ್ಕೂ ದುರಂತ. ಅದು ಶರಣರಿಗೆ ಮಾಡುವ ದ್ರೋಹ.

ಈ ಒಂದು ಪ್ರಕ್ಷಿಪ್ತ ವಚನವನ್ನು ನೋಡಿ, “ಪಾದಪೂಜೆಯ ಮಾಡಿ, ಅಂಗುಷ್ಠವೆರಡು ಅಂಗುಲವೆಂಟು ಉಭಯಹಸ್ತದಲ್ಲಿ ಮಾಡಿಕೊಂಬುದೆ ಶಿಕ್ಷಾಪಾದೋದಕ. ಲಿಂಗಧಾರೀ ಮಹಾಯೋಗೀ ಚರಪಾದೋದಕಂ ವಿನಾದಿನೇನ ದಶಜನ್ಮಾನಿ ಮಾಸೇನ ಶತಜನ್ಮಸು ವರ್ಷೇ ಸಹಸ್ರಜನ್ಮಾನಿ ವರ್ಷಾರ್ಧೇ ಘೂಕವಾಯ¸õ್ಞದ್ವಿವರ್ಷೇ ¸õ್ಞಕರೇ ಗರ್ಭೇ ಜಾಯತೇ ನಾತ್ರ ಸಂಶಯಃ ಎಂದುದಾಗಿ ಆ ಶಿಕ್ಷಾಪಾದೋದಕವನೆ ಆ ವಿಭೂತಿಯಲ್ಲಿ ಸಮ್ಮಿಶ್ರವ ಮಾಡಿ ಲಲಾಟ ಮೊದಲಾದ ನಾಲ್ವತ್ತೆಂಟು ಸ್ಥಾನಂಗಳಲ್ಲಿ ಧಾರಣವ ಮಾಡುವುದು ಇದು ವೀರಶೈವರಿಗೆ ಸಲ್ಲುವ ನಡತೆ. ಶುದ್ಧಶೈವರಿಗೆ ಗಿಂಡಿಯಲ್ಲಿ ತುಂಬುವ ನಡತೆ. ವಿಶೇಷವೀರಶೈವರು ಗಿಂಡಿಯ ಮಾಡಲಾಗದು, ಅದೇನು ಕಾರಣವೆಂದಡೆ:ಅವರಿಗೆ ತ್ರಿವಿಧ ಪಾದೋದಕವು ನಿತ್ಯದ ಸಹಬಂಧವಾಗುವುದೆಂದು. ಇದನರಿದು ಆಚರಿಸುವಾತನೆ ನಿತ್ಯಮುಕ್ತನಯ್ಯಾ ಕೂಡಲಚೆನ್ನಸಂಗಮದೇವಾ.”

ಕಾವಿಧಾರಿಯೊಬ್ಬನ ಪಾದ ಪೂಜೆಯನ್ನು ಮಾಡಬೇಕಂತೆ, ಆಮೇಲೆ ಎರಡು ಅಂಗುಷ್ಠಗಳನ್ನು ಎಂಟು ಬೆರಳುಗಳನ್ನೂ ನಮ್ಮ ಎರಡೂ ಹಸ್ತಗಳಿಂದ ತೊಳೆದು ಬರುವ ಜಲವೇ ಶಿಕ್ಷಾ ಪಾದೋದಕವಂತೆ! ಈ ಶಿಕ್ಷಾ ಪಾದೋದಕವನ್ನು ಅನುಮಾನಿಸದೆ, ಪ್ರಶ್ನಿಸದೇ ವಿಭೂತಿಯೊಂದಿಗೆ ದೇಹದ ನಲವತ್ತೆಂಟು ಸ್ಥಾನಗಳಲ್ಲಿ ಧರಿಸಬೇಕೆಂದೂ, ಇದು ನಿಜ ವೀರಶೈವಾಚರಣೆ ಎಂದೂ ಹೇಳಿದ್ದಾರೆ. ಇದರಲ್ಲಿ ಕಿಂಚಿತ್ತು ಅನುಮಾನಿಸಿದರೂ ಸಹಸ್ರಾರು ಜನ್ಮಗಳಲ್ಲಿ ಹೀನ ರೀತಿಯಲ್ಲಿ ಜನ್ಮತಾಳಿ ಬರಬೇಕಾಗುದು ಎಂದು ಸಂಸ್ಕೃತ ಶ್ಲೋಕಗಳನ್ನು ತುರುಕಿ ಜನ ಮಾನಸದಲ್ಲಿ ಭಯ ಹುಟ್ಟಿಸಲಾಗಿದೆ. ಇದು ವೀರಶೈವರ ಆಚರಣೆಯಾದರೆ ಇನ್ನು ವಿಶೇಷ ವೀರಶೈವರ (ಜಾತಿ ಜಂಗಮರು, ಅಯ್ಯಗಳು) ಆಚರಣೆ ಹೇಗೆಂದರೆ ಅವರು-
ಗುರು ಲಿಂಗ ಜಂಗಮ ತಾವೇ ಆಗಿರುವುದರಿಂದ ಈ ಆಚರಣೆಗಳು ಅವರಿಗೆ ಅನ್ವಯಿಸುವುದಿಲ್ಲ! ಈ ರೀತಿ ಮಾಡುವವನು ನಿತ್ಯಮುಕ್ತ! ಮಾಡದವನು ಸಹಸ್ರಾರು ಜನ್ಮದಲ್ಲಿ ಹೀನ ರೀತಿಯಲ್ಲಿ ಸುತ್ತುವನು. ಇದೇ ನಿಜವಾದ ವೀರಶೈವ! ಏಕೆಂದರೆ ಜನರನ್ನು ಭ್ರಾಂತಿಗೊಳಿಸಿ, ಅಜ್ಞಾನದಲ್ಲಿಟ್ಟು ಭಯದಿಂದ ಜೀವಿಸುವಂತೆ ಮಾಡುವುದೇ ನಿಜ ವೀರಶೈವ ಎಂದು ಈ ವಚನದಲ್ಲಿ ಹೇಳಲಾಗಿದೆ.

ಶರಣರು ಪ್ರತಿಪಾದಿಸಿದ ಧರ್ಮವು ಮಾನವ-ಮಾನವರ ಮಧ್ಯೆ ಇದ್ದ ಅನೇಕ ತೆರನಾದ ಗೋಡೆಗಳನ್ನು ಕೆಡವಿ ಸಮಾನತೆ ಸೃಷ್ಟಿಸುವುದೇ ಆಗಿತ್ತು. ಶರಣರು ಜನ್ಮಾಂತರಗಳನ್ನು ಒಪ್ಪುವುದಿಲ್ಲ, ಧರ್ಮದಲ್ಲಿ ಯಾವುದೇ ರೀತಿಯ ಕರ್ಮಠತೆಯನ್ನು ಸಹಿಸುವುದಿಲ್ಲ, ಅವರದ್ದೇನಿದ್ದರೂ ಸಹಜತೆಯೊಡಗೂಡಿ ನಡೆವ ಸತ್ಪಥ. ಈ ರೀತಿಯ ಶುದ್ಧ ಕರ್ಮಠವನ್ನು ಸಾರುವ ವಚನಗಳನ್ನು ಹೊರಗಿನಿಂದ ತೂರಿಸಲ್ಪಟ್ಟು ಶುದ್ಧ ವಚನಸಾಹಿತ್ಯವನ್ನು ಮಲಿನ ಮಾಡಲು ಪ್ರಯತ್ನಿಸಲಾಗಿದೆ.

ಚೆನ್ನಬಸವಣ್ಣನವರೇ ರಚಿಸಿರುವ ಶುದ್ಧವಾದ ಈ ವಚನವನ್ನು ನೋಡಿದರೆ ಗುರುಪಾದೋದಕ ಲಿಂಗಪಾದೋದಕ ಮತ್ತು ಜಂಗಮ ಪಾದೋದಕಗಳೆಂದರೇನೆಂದು ಬಹಳ ಸರಳವಾಗಿ ಅರ್ಥವಾಗುವುದು. ಚೆನ್ನಬಸವಣ್ಣನವರ ಪ್ರಕಾರ-
“ಕರುಣಜಲವೆ ಗುರುಪಾದೋದಕ: ವಿನಯಜಲವೆ ಲಿಂಗಪಾದೋದಕ; ಸಮತಾಜಲವೆ ಜಂಗಮ ಪಾದೋದಕ. ಗುರುಪಾದೋದಕದಿಂದ ಸಂಚಿತ ಕರ್ಮನಾಸ್ತಿ. ಲಿಂಗಪಾದೋದಕದಿಂದ ಪ್ರಾರಬ್ಧಕರ್ಮನಾಸ್ತಿ.ಜಂಗಮ ಪಾದೋದಕದಿಂದ ಆಗಾಮಿ ಕರ್ಮನಾಸ್ತಿ. ಇಂತೀ ತ್ರಿವಿಧೋದಕದಲ್ಲಿ ತ್ರಿವಿಧಕರ್ಮನಾಸ್ತಿ. ಇದು ಕಾರಣ- ಕೂಡಲಚೆನ್ನಸಂಗಮದೇವಾ ತ್ರಿವಿಧೋದಕವ ನಿಮ್ಮ ಶರಣನೆ ಬಲ್ಲ”.
ಎಷ್ಟು ಸರಳವಾಗಿ ಶರಣರು ಪಾದೋದಕದ ಕುರಿತು ತಿಳಿಸಿದ್ದಾರೆ! ಸಕಲ ಜೀವಿಗಳಲ್ಲಿ ಅಹಿಂಸಾಭಾವ ಹೊಂದಿ ಕರುಣೆಯಿಂದ, ತನ್ನಂತೆ ಪರರು ಎಂದು ಅರಿತು, ವರ್ತಿಸಿ ತನ್ನ ಸ್ಥೂಲ ತನುವನ್ನು ಪರಿಶುದ್ಧವಾಗಿಟ್ಟುಕೊಳ್ಳುವುದೇ ಗುರು ಪಾದೋದಕ. ಲೋಕದಲ್ಲಿ ವ್ಯವಹರಿಸುವಾಗ ಸರ್ವರಲ್ಲಿ ವಿನಯಭಾವ ಹೊಂದಿ ಅದರಂತೆ ನಡೆ ನುಡಿ ಆಚಾರ ವಿಚಾರಗಳನ್ನು ಅಳವಡಿಸಿಕೊಳ್ಳುವುದರ ಮುಖೇನ ತನ್ನಂತರಂಗದ ಅಂತಃಕರಣಗಳಾದ ಚಿತ್ತ ಮನ ಬುದ್ಧಿ ಮತ್ತು ಅಹಂಕಾರಗಳನ್ನು ನಿರ್ಲಿಪ್ತವಾಗಿಸಿಕೊಂಡುದೇ ಲಿಂಗಪಾದೋದಕ, ಸೃಷ್ಟಿಯ ಸಕಲ ಜೀವಿಗಳಲ್ಲಿ ಯಾವುದೇ ಭೇದವೆಣಿಸದೆ ಎಲ್ಲರೂ ತನ್ನವರೆಂಬ ಭಾವವನ್ನಳವಡಿಸಿಕೊಂಡುದೇ ಜಂಗಮ ಪಾದೋದಕ. ಈ ರೀತಿ ದೈನಂದಿನ ಆಚರಣೆಗಳು ನಮ್ಮಲ್ಲಿ ನೆಲೆಗೊಂಡುದೇ ಆದರೆ ಸಂಚಿತ, ಆಗಾಮಿ ಹಾಗೂ ಪ್ರಾರಬ್ಧ ಎಂಬ ಕರ್ಮತ್ರಯಗಳು ನಾಸ್ತಿಯಾಗುವವು. ಏಕೆಂದರೆ ಅವುಗಳ ಉತ್ಪತ್ತಿಯೇ ಆಗುವುದಿಲ್ಲ, ಇನ್ನು ಅವು ನಮ್ಮನ್ನು ಬಾಧಿಸುವುದೆಂತು? ಇದು ಚೆನ್ನಬಸವಣ್ಣನವರ ನಿಜವಾದ ವಚನ ಎಂದು ನಿಸ್ಸಂಶಯವಾಗಿ ಹೇಳಬಹುದು.

ಚೆನ್ನಬಸವಣ್ಣನವರದೆಂದು ಹೇಳಲಾಗುವ ಮತ್ತೊಂದು ಖೊಟ್ಟಿ ವಚನವನ್ನು ಇಲ್ಲಿ ಪ್ರಸ್ತಾಪಿಸಲೇಬೇಕು. ಇದು ಶರಣ ಸಿದ್ಧಾಂತಕ್ಕೆ ಎಷ್ಟು ವಿರುದ್ಧವಾಗಿದೆ ಎಂದು ಅರಿಯಬೇಕು.

“ಬಸವೇಶ್ವರದೇವರು ತೃಣಪುರುಷನ ಮಾಡಿ `ಮೀಮಾಂಸಕಂಗೆ ಉತ್ತರವ ಕೊಡು ಹೋಗು’ ಎನಲು ಆ ತೃಣಪುರುಷನು ಮಹಾಪ್ರಸಾದವೆಂದು ಕೈಕೊಂಡು, ಮೀಮಾಂಸಕಂಗೆ ಉತ್ತರವ ಕೊಟ್ಟು ಶಿವವಿರಹಿತವಾದ ಕಾಳ್ಪುರಾಣವೆಲ್ಲವ ಬಯಲು ಮಾಡಿ ನುಡಿಯಲು ಆತಂಗೆ ಶಿವಜ್ಞಾನ ತಲೆದೋರಿ, ಆ ಬಸವೇಶಂಗೆ ವಂದನಂಗೈದು ಉಪದೇಶವ ಮಾಡಬೇಕೆನಲು, ಆತಂಗೆ ವೀರಶೈವ ದೀಕ್ಷೆಯ ಮಾಡಿ ಷಟ್ಸ್ಥಬಲಮಾರ್ಗ ಕ್ರೀಯ ನಿರೂಪಿಸಿ ತಿಳುಹಲು `ಎಲೆ ಬಸವೇಶ್ವರಾ ಜಂಗಮದ ಪಾದತೀರ್ಥಪ್ರಸಾದವ ಲಿಂಗಕ್ಕೆ ಕೊಟ್ಟುಕೊಳಬಹುದೆ’ ಎಂದು ಕೇಳಲು, ಕೇಳೈ ಮೀಮಾಂಸಕಾ, ಪೂರ್ವದಲ್ಲಿ ಪರಮೇಶ್ವರನು ಸಮಸ್ತ ದೇವತೆಗಳು ಒಡ್ಡೋಲಗದಲ್ಲಿರಲು ಸೂತ್ರಿಕನೆಂಬ ಶೈವಾಚಾರ್ಯನು, ‘ಎಲೆ ಪರಮೇಶ್ವರಾ ಜಂಗಮದ ಪಾದತೀರ್ಥಪ್ರಸಾದವ ಲಿಂಗಕ್ಕೆ ಕೊಡಬಹುದೆ’ ಎನಲು `ಎಲೆ ಸೂತ್ರಿಕನೆ ಕೇಳು ನಾನೆಂದಡೆಯೂ ಜಂಗಮವೆಂದಡೆಯೂ ಬೇರಿಲ್ಲ ಅದು ಕಾರಣ ಜಂಗಮವೆ ಅಧಿಕ. ನೀನಾ ಜಂಗಮಲಿಂಗದ ಪಾದತೀರ್ಥಪ್ರಸಾದವ ಲಿಂಗಕ್ಕೆ ಕೊಡಬಾರದೆಂದು ನಿಂದಿಸಿ ನುಡಿದ ವಾಗ್ದೋಷಕ್ಕೆ ಮತ್ರ್ಯಕ್ಕೆ ಹೋಗಿ ಹೊಲೆಯನ ಮನೆಯ ಸೂಕರನ ಬಸುರಲ್ಲಿ ಹುಟ್ಟಿ ಹದಿನೆಂಟು ಜಾತಿಯ ಅಶುದ್ಧವನು ನಾಲಗೆಯಲಿ ಭುಂಜಿಸಿ ನರಕಜೀವಿಯಾಗಿರು ಎಂದುದೆ ಸಾಕ್ಷಿ. ಇದನರಿದು ಮತ್ತೆ ಜಂಗಮದ ಪಾದತೀರ್ಥಪ್ರಸಾದವ ಲಿಂಗಕ್ಕೆ ಕೊಟ್ಟು ಕೊಳಲಾಗದೆಂಬ ಪಂಚಮಹಾಪಾತಕರ ಮಾತ ಕೇಳಲಾಗದು. ಅದೆಂತೆಂದಡೆ:ವೀರಾಗಮದಲ್ಲಿ, ಜಂಗಮಾನಾಮಹಂ ಪ್ರಾಣೋ ಮಮ ಪ್ರಾಣೋ ಹಿ ಜಂಗಮಃ ಜಂಗಮೇನ ತ್ವಹಂ ಪೂಜ್ಯೋ ಮಯಾ ಪೂಜ್ಯೋ ಹಿ ಜಂಗಮಃ ಪರಸ್ಪರಮಭೇದತ್ವಾಜ್ಜಂಗಮಸ್ಯ ಮಮಾಪಿ ಚ ಪಾದೋದಕಪ್ರಸಾದಾಭ್ಯಾಂ ವಿನಾ ತೃಪ್ತಿರ್ನ ಜಾಯತೇ ಇಂತೆಂಬ ಶಿವನ ವಾಕ್ಯವನರಿದು, ಜಂಗಮದ ಪಾದತೀರ್ಥವ ಲಿಂಗಕ್ಕೆ ಮಜ್ಜನಕ್ಕೆರೆದು ಪ್ರಸಾದವ ಲಿಂಗಕ್ಕೆ ನೈವೇದ್ಯವ ಸಮರ್ಪಿಸಿ ಭೋಗಿಸುವಾತನೆ ಸದ್ಭಕ್ತ, ಆತನೆ ಮಾಹೇಶ್ವರ, ಆತನೆ ಪ್ರಸಾದಿ, ಆತನೆ ಪ್ರಾಣಲಿಂಗಿ, ಆತನೆ ಶರಣ, ಆತನೆ ಐಕ್ಯನು. ಇಂತಪ್ಪ ಷಟಸ್ಥಲಬ್ರಹ್ಮಿಗೆ ನಮೋ ನಮೋ ಎಂಬೆ. ಇಂತಲ್ಲದೆ ಜಂಗಮದ ಪಾದತೀರ್ಥಪ್ರಸಾದರಹಿತನಾಗಿ ಆವನಾನೊಬ್ಬನು ತನ್ನ ಇಷ್ಟಲಿಂಗಕ್ಕೆ ಅರ್ಷವಿಧಾರ್ಚನೆ ಷೋಡಶೋಪಚಾರಕ್ರೀಯಿಂದ ಪೂಜೆಯ ಮಾಡುವಲ್ಲಿ ಅವನು ಶುದ್ಧ ಶೈವನು, ಅವನಿಗೆ ಮುಕ್ತಿಯಿಲ್ಲ ಕಾಣಾ ಕೂಡಲಚೆನ್ನಸಂಗಮದೇವಾ.”

ಪುರಾಣವೆಂಬುದು ಪುಂಡರ ಗೋಷ್ಠಿ ಎಂದು ಜರಿದ ಬಸವಣ್ಣನವರ ಹೆಸರನ್ನೇ ಈ ವಚನದಲ್ಲಿ ಪುರಾಣ ಆಗಮಗಳನ್ನು ಸಮರ್ಥಿಸಿಕೊಳ್ಳಲು ಬಳಸಿಕೊಳ್ಳಲಾಗಿದೆ, ಇದು ನಿಜಕ್ಕೂ ದುರದೃಷ್ಟಕರ. ಇಲ್ಲಿ ಜಾತಿ ಜಂಗಮದ ಸ್ಥಾನವನ್ನು ಎತ್ತಿಹಿಡಿದು ಗುರು-ಭಕ್ತ ಎಂಬ ಎರಡು ವರ್ಗವನ್ನು ಪ್ರತಿಪಾದಿಸುವ ಪ್ರಯತ್ನ ನಡೆದಿದೆ. ಭಕ್ತನು ಯಾವಾಗಲೂ ಗುರುವಿನ ಅಡಿಯಾಳಾಗಿರಬೇಕೆಂಬ ನಿಲುವೇ ಇದಕ್ಕೆ ಕಾರಣ. ಬಸವಣ್ಣನವರು ಕೈಲಾಸದಲ್ಲಿಯ ಪರಮೇಶ್ವರನನ್ನೂ, ದೇವಾನುದೇವತೆಗಳನ್ನೂ ಕುರಿತು ಮೀಮಾಂಸಕನಿಗೆ ಹೇಳಿದ್ದಾರಂತೆ! ಶರಣರು ಕೈಲಾಸದಲ್ಲಿಯ ಪರಮೇಶ್ವರನನ್ನಾಗಲೀ ದೇವತೆಗಳಾನ್ನಾಗಲೀ ವೇದಗಳನ್ನಾಗಲೀ ಆಗಮಗಳನ್ನಾಗಲೀ ಒಪ್ಪುವುದಿಲ್ಲ ಅವುಗಳನ್ನು ಖಡಾಖಂಡಿತವಾಗಿ ಖಂಡಿಸಿದ್ದಾರೆ. ಶರಣ ಮಡಿವಾಳ ಮಾಚಿದೇವರು-

“ವೇದ ವಿಪ್ರರ ಬೋಧೆ, ಶಾಸ್ತ್ರ ಸಂತೆಯ ಮಾತು. ಪುರಾಣ ಪುಂಡರ ಗೋಷ್ಠಿ, ಆಗಮ ಅನೃತದ ನುಡಿ. ತರ್ಕ ವ್ಯಾಕರಣ ಕವಿತ್ವ ಪ್ರೌಢಿಮೆ, ಇಂತಿವರಂಗದ ಮೇಲೆ ಲಿಂಗವಿಲ್ಲದ ಭಾಷೆ. ಇದು ಕಾರಣ, ತನ್ನೊಳಗನರಿದ ಅನುಭಾವಿಯಿಂದ ಘನವಿಲ್ಲೆಂದ, ಕಲಿದೇವ.”

ಆಗಮವೆಂಬುದು ಸುಳ್ಳಿನ ಕಂತೆ ಎಂದು ಜರಿದಿದ್ದಾರೆ. ಅಂಥಾ ಆಗಮವನ್ನು ಬಸವಣ್ಣನವರು ಉಲ್ಲೇಖಿಸಿದ್ದಾರೆ ಎಂದು ಮೇಲಿನ ವಚನದಲ್ಲಿ ಸೃಷ್ಟಿಸಲಾಗಿದೆ. ಮೇಲಾಗಿ ಬಸವಣ್ಣನವರು ದೇವ ಮತ್ತು ಭಕ್ತನ ನಡುವೆ ಯಾವ ಮಧ್ಯವರ್ತಿಯೂ ಬೇಕಿಲ್ಲವೆಂದು ಸಾರಿದರು. ಆದರೆ ಇಲ್ಲಿ ಜಂಗಮನ ಪಾದ ತೀರ್ಥವನ್ನು ಲಿಂಗಕ್ಕೆ ಸಮರ್ಪಿಸಿದರೆ ಮಾತ್ರ ಮುಕ್ತಿ ಸಾಧ್ಯ ಎಂದು ಬಿಂಬಿಸಲಾಗಿದೆ. ಎಂಥಾ ಘೋರ ಅನ್ಯಾಯ! ಶರಣರ ಚಿಂತನೆಗಳಿಗೆ ಕೊಡಲಿ ಪೆಟ್ಟು, ಅದೂ ಕೃತ್ರಿಮ ವಚನಗಳ ಮೂಲಕ!

ಚೆನ್ನಬಸವಣ್ಣನವರು ಎಷ್ಟು ಅರ್ಥಗರ್ಭಿತವಾಗಿ ಹೇಳಿದ್ದಾರೆ ನೋಡಿ! “ನಿತ್ಯನೆಂಬ ಭಕ್ತನ ಮನೆಗೆ ಘನಚೈತನ್ಯವೆಂಬ ಜಂಗಮ ಬಂದಡೆ, ಜಲವಿಲ್ಲದ, ಜಲದಲ್ಲಿ ಪಾದಾರ್ಚನೆಯ ಮಾಡಿದಡೆ, ಮಾಡಿದ ಆ ಪಾದೋದಕವೆ ಮಹಾಪದವಯ್ಯಾ, ಸ್ವಚ್ಛಾನಂದಜಲೇ ನಿತ್ಯಂ ಪ್ರಕ್ಷಾಲ್ಯ ಚರಪಾದುಕಾಂ ತಚ್ಚ ಪಾದೋದಕಂ ಪೀತ್ವಾ ಸ ಮುಕ್ತೋ ನಾತ್ರ ಸಂಶಯಃ ಎಂದುದಾಗಿ, ಆ ಪಾದೋದಕದಲ್ಲಿ ಪರಮಪರಿಣಾಮಿ ಕೂಡಲಚೆನ್ನಸಂಗಾ ನಿಮ್ಮ ಶರಣ.”
ಆತ್ಮನೆಂಬ ನಿತ್ಯನ ಮನೆಗೆ ಅಂದರೆ ಈ ಕಾಯದೊಳಗೆ ಘನ ಚೈತನ್ಯವೆಂಬ ಜಂಗಮ ಬಂದೊಡೆ ಮಹಾ ಅರಿವು ಎಂಬ ಚೈತನ್ಯ (ಜಂಗಮ) ಬರಲು ಅಲ್ಲಿ ಮಹಾನುಭಾವದ ಪಾದೋದಕ ಪ್ರಾಪ್ತಿ! ಅದುವೇ ಪರಮಾನಂದ ಜಲ, ಈ ಪಾದೋದಕವನ್ನು ಸ್ವಯಂ ಉಂಡ ಶರಣನೇ ಪಾವನ! ಇದು ಶರಣ ಸಿದ್ಧಾಂತ. ಇದು ನಿಜವಾಗಿಯೂ ಚೆನ್ನಬಸವಣ್ಣನವರ ವಿಚಾರ. ಅವರದೇ ವಚನ.

ದೇಶಿಕೇಂದ್ರ ಸಂಗನಬಸವಯ್ಯ ಶರಣರು ಜಾತಿ ಜಂಗಮವನ್ನು ಇನ್ನಿಲ್ಲದಂತೆ ಖಂಡಿಸಿದ್ದಾರೆ-
“ಇಷ್ಟಲಿಂಗವ ಹಿಡಿದು ಕಷ್ಟಯೋನಿಗೆ ತಿರುಗುವ ಕೆಟ್ಟ ಪಾತಕರ ನೋಡಲಾಗದು. ಜಂಗಮವೆಂದು ಮಾಡಲಾಗದು ಪೂಜೆಯ. ನಮಿಸಿಕೊಳ್ಳಲಾಗದು ಹರನೆಂದು. ಅದೇನು ಕಾರಣವೆಂದೊಡೆ : ತನುಮನಭಾವನಷ್ಟವಾದಿಷ್ಟಲಿಂಗಜಂಗಮವು ಪೂಜೆಗೆ ಯೋಗ್ಯ. ತನುಮನಭಾವವು ತ್ರಿವಿಧಮಲದಲ್ಲಿ ಮುಳುಗಿ ಮಲರೂಪಮನುಜರಿಗೆ, ಗುರುನಿರಂಜನ ಚನ್ನಬಸವಲಿಂಗವೆಂದೊಡೆ ನಾಚಿಕೆಗೊಂಡಿತ್ತು ಆಚಾರ.”
ಇಲ್ಲಿ ಜಂಗಮ ಪೂಜೆಯನ್ನು ದೇಶಿಕೇಂದ್ರ ಸಂಗನಬಸವಯ್ಯ ಶರಣರು ಅಲ್ಲಗಳೆದಿರುವುದನ್ನು ನಾವು ಕಾಣಬಹುದು.
ಹಡಪದ ಅಪ್ಪಣ್ಣನವರು ನಿಗಮ ಆಗಮ ಹಾಗೂ ಶರಣ ತತ್ವಗಳ ಭಿನ್ನತೆಯನ್ನು ಸಾರಿದ್ದಾರೆ-
“ಕಂಡುವ ಹೇಳಿಹೆನೆ? ಸಮಯಕ್ಕೆ ದೂರ, ಎನ್ನ ಇರವನರಿಯರು. ಲೆಂಡನೆಂಬರು, ಸುಮ್ಮನಿದ್ದೇನೆ. ಇವರೆನ್ನ ಆರೈದು ಕಂಡುದ ನುಡಿವರು. ಎನ್ನ ಮುಟ್ಟಿದವರ ಎನ್ನಂತೆ ಮಾಡಿಕೊಂಬೆ. ಎನ್ನ ಅರಿಯದವರ ಹಾದಿಯ ಹೋಗೆ. ಎನ್ನನರಿತ ಜಂಗಮದ ಸಂಗವ ಮಾಡುವೆ. ಜಗದ ಸಂಗವನೊಲ್ಲೆ, ನಿಗಮಾಗಮಶಾಸ್ತ್ರವನೊಲ್ಲೆ. ಅವೆಲ್ಲವು ಸ್ಥಲ ನೆಲೆ ಇಟ್ಟು ಹೇಳುವವು. ಎಮ್ಮ ಶರಣರು ನುಡಿದ ಶಾಸ್ತ್ರಕ್ಕೆ ಸ್ಥಲ ನೆಲೆ ಇಲ್ಲ. ಇಂತಿವೆಲ್ಲವ ಬಲ್ಲೆನಾಗಿ, ಎನ್ನಂಗಕ್ಕೆ ಪ್ರಾಣಕ್ಕೆ ಭವವಿಲ್ಲ, ಬಂಧನವಿಲ್ಲ. ಅದೇಕ��ಂದರೆ: ಲಿಂಗವೆಂದ ಕಾರಣ, ನಾನೆಂಬುದಿಲ್ಲ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.”
ನಿಗಮ ಆಗಮಗಳು ಕರ್ಮಠತೆಯನ್ನು ಸಾರುವುವು. ಆದರೆ ಶರಣರು ಪ್ರತಿಪಾದಿಸಿದ ಶಾಸ್ತ್ರವು ಯಾವುದೇ ಚೌಕಟ್ಟಿನೊಳಗೆ ಬಂಧಿತವಾಗುವುದಿಲ್ಲ, ಹಾಗಾಗಿ ಅದನ್ನು ಅನುಸರಿಸುವ ನನಗೆ ಭವವಿಲ್ಲ ಬಂಧನವಿಲ್ಲ ಎಂದು ಆಪ್ಪಣ್ಣನವರು ತಮ್ಮ ಅನುಭಾವವನ್ನು ಅರುಹಿದ್ದಾರೆ.
ಹೀಗೆ ಇನ್ನೂ ಅನೇಕ ಕೃತ್ರಿಮ ವಚನಗಳು ವಚನಸಾಹಿತ್ಯದಲ್ಲಿ ಬೆರೆತು ಹೋಗಿವೆ, ಅವುಗಳನ್ನು ಸೂ ಕ್ಷ್ಮವಾಗಿ ಅಧ್ಯಯನ ಮಾಡಿ ಆಚರಣೆಯಿಂದ ದೂರವಿಡುವುದು ಸೂಕ್ತ.

Previous post ಶರಣೆಯರ ಸ್ಮಾರಕಗಳು
ಶರಣೆಯರ ಸ್ಮಾರಕಗಳು
Next post ಕಾದಿ ಗೆಲಿಸಯ್ಯ ಎನ್ನನು
ಕಾದಿ ಗೆಲಿಸಯ್ಯ ಎನ್ನನು

Related Posts

ದೇಹ ದೇವಾಲಯ
Share:
Articles

ದೇಹ ದೇವಾಲಯ

June 12, 2025 ಡಾ. ಬಸವರಾಜ ಸಬರದ
ಶರಣರ ದೇವರ ಪರಿಕಲ್ಪನೆ ಹೇಗೆ ಹೊಸದೊ, ಅದೇ ರೀತಿ ಅವರ ದೇವಾಲಯ ಕಲ್ಪನೆಯೂ ಹೊಸತಾಗಿದೆ. ಹೊರಗಿನ ಮೂರ್ತಿ ದೇವರುಗಳನ್ನು ನಿರಾಕರಿಸಿದ ಮೇಲೆ ಅವರಿಗೆ ದೇವಾಲಯಗಳ ಅಗತ್ಯವೇ...
ಬೆಳಗಾವಿ ಅಧೀವೇಶನ: 1924
Share:
Articles

ಬೆಳಗಾವಿ ಅಧೀವೇಶನ: 1924

December 13, 2024 ಮಹೇಶ ನೀಲಕಂಠ ಚನ್ನಂಗಿ
“ಹನ್ನೆರಡನೆಯ ಶತಮಾನದಲ್ಲಿ ಆಗಿಹೋದ ಬಸವಣ್ಣನವರು ಈ ಕಾಲದಲ್ಲಿ ಇರುತ್ತಿದ್ದರೆ ಜಗತ್ತಿಗೇ ಪೂಜ್ಯವ್ಯಕ್ತಿಯಾಗಿ ಪರಿಣಮಿಸುತ್ತಿದ್ದರು. ಅವರು ಉಪದೇಶಿಸಿದ ತತ್ವಗಳಲ್ಲಿ...

Comments 1

  1. Prakash kashetty
    Jun 3, 2018 Reply

    ಒಳ್ಳೆಯ ವಿಚಾಗಳು ಇವೆ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮುಖ- ಮುಖವಾಡ
ಮುಖ- ಮುಖವಾಡ
February 7, 2021
ವಚನ ಸಾಹಿತ್ಯದಲ್ಲಿ ಆಯಗಾರರು
ವಚನ ಸಾಹಿತ್ಯದಲ್ಲಿ ಆಯಗಾರರು
May 10, 2023
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
December 3, 2018
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
June 17, 2020
ತೋರಲಿಲ್ಲದ ಸಿಂಹಾಸನದ ಮೇಲೆ…
ತೋರಲಿಲ್ಲದ ಸಿಂಹಾಸನದ ಮೇಲೆ…
December 22, 2019
ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
July 4, 2021
ಬಸವನಾ ಯೋಗದಿಂ…
ಬಸವನಾ ಯೋಗದಿಂ…
July 1, 2018
ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
January 7, 2022
ಅರಿವು ಕಣ್ತೆರೆಯದವರಲಿ….
ಅರಿವು ಕಣ್ತೆರೆಯದವರಲಿ….
August 5, 2018
ಕನ್ನಡ ಕವಿ ಸಂತರಲ್ಲಿ ಧರ್ಮ…
ಕನ್ನಡ ಕವಿ ಸಂತರಲ್ಲಿ ಧರ್ಮ…
May 10, 2022
Copyright © 2026 Bayalu