Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಯುವಮನಗಳೊಂದಿಗೆ ಸಂವಾದ
Share:
Articles September 13, 2025 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಯುವಮನಗಳೊಂದಿಗೆ ಸಂವಾದ

‘ಲಿಂಗಾಯತ ಮಠಾಧಿಪತಿಗಳ ಒಕ್ಕೂಟ’ ವಿನೂತನ ಚಿಂತನೆ ಮಾಡಿ 2025 ಸೆಪ್ಟೆಂಬರ್ ಒಂದರಿಂದ ಅಕ್ಟೋಬರ್ ಐದರವರೆಗೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ‘ಬಸವ ಸಂಸ್ಕೃತಿ ಅಭಿಯಾನ’ ಪ್ರಾರಂಭಿಸಿದೆ. ಈ ಅಭಿಯಾನದಲ್ಲಿ ಬಹಳ ಮುಖ್ಯವಾದದ್ದು ಪ್ರತಿದಿನ ಬೆಳಗ್ಗೆ 11 ಗಂಟೆಯಿಂದ ಮದ್ಯಾಹ್ನ ಒಂದು ಗಂಟೆಯವರೆಗೆ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗೆ ‘ವಚನ ಸಂವಾದ’ ನಡೆಸುವುದು. ಸಂವಾದದ ಮೂಲಕ ವಿದ್ಯಾರ್ಥಿಗಳ ಭಾವನೆಗಳನ್ನು ಅರ್ಥ ಮಾಡಿಕೊಂಡು ಅವರಿಗೆ ಸೂಕ್ತ ಮಾರ್ಗದರ್ಶನ ಮಾಡುವುದು. ಇವತ್ತು ನಮ್ಮ ಶಿಕ್ಷಣದಲ್ಲಿ ನೈತಿಕತೆಯ ಕೊರತೆ ಎದ್ದು ಕಾಣುತ್ತಿದೆ. ವಿದ್ಯಾರ್ಥಿಗಳಿಗೆ ‘ವಚನ ಸಂಸ್ಕೃತಿ’ಯ ಪರಿಚಯವೇ ಇಲ್ಲದಾಗಿದೆ. ಇಂದಿನ ಮಕ್ಕಳೇ ನಾಳಿನ ನಾಗರಿಕರು ಎಂದರೆ ಇಂದು ಅವರಿಗೆ ಧರ್ಮ, ನೀತಿ, ವಚನಗಳ ಮಹತ್ವ ಇತ್ಯಾದಿ ವಿಷಯಗಳನ್ನು ಮನವರಿಕೆ ಮಾಡಿಕೊಡುವುದು ತುಂಬಾ ಅಗತ್ಯ ಮತ್ತು ಅನಿವಾರ್ಯ. ವಿಷಾದದ ಸಂಗತಿ ಎಂದರೆ ಇಂದು ಅನೇಕ ವಿದ್ಯಾರ್ಥಿಗಳು ನೈತಿಕ ನೆಲೆಗಟ್ಟಿಲ್ಲದೆ ಕೇವಲ ಬುದ್ಧಿವಂತರಾಗುತ್ತಿದ್ದಾರೆ. ಬುದ್ಧಿ ಸದ್ಬುದ್ಧಿ ಇಲ್ಲವೆ ದುರ್ಬುದ್ಧಿ ಆಗಬಹುದು. ಅದು ಸದ್ಬುದ್ಧಿಯಾಗಬೇಕು ಎಂದರೆ ವಚನ ಸಂಸ್ಕೃತಿಯ ಪರಿಚಯ ಆಗಬೇಕಿದೆ. ಅದಕ್ಕಾಗಿಯೇ ಮಠಾಧಿಪತಿಗಳ ಒಕ್ಕೂಟ ತಮ್ಮ ಮಠದಿಂದ ಹೊರಬಂದು ಒಂದು ತಿಂಗಳ ಕಾಲ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಬಸವ ಸಂಸ್ಕೃತಿಯ ಬೀಜಗಳನ್ನು ಬಿತ್ತುವ ಸಂಕಲ್ಪ ಮಾಡಿದೆ.

ಸಾರ್ವಜನಿಕರಲ್ಲಿ ಮಾತ್ರವಲ್ಲದೆ ವಿದ್ಯಾರ್ಥಿಗಳಲ್ಲೂ ದುರ್ವ್ಯಸನ, ದುಶ್ಚಟಗಳು ಮುತ್ತಿಕೊಳ್ಳುತ್ತಿವೆ. ಅವರು ತಾಯಿಬೇರಿಲ್ಲದೆ ಬೆಳೆವ ಮರಗಳಂತಾಗುತ್ತಿದ್ದಾರೆ. ಶರಣರ ಕಾಯಕ ಶ್ರದ್ಧೆ, ದಾಸೋಹ ಪ್ರಜ್ಞೆ ಇತ್ಯಾದಿ ತತ್ವಗಳ ಪರಿಚಯ ವಿದ್ಯಾರ್ಥಿಗಳಿಗೆ ಆದರೆ ಮುಂದೆ ಅವರು ಭ್ರಷ್ಟಾಚಾರ, ದುರ್ವರ್ತನೆ, ದುಶ್ಚಟಗಳಿಂದ ಮುಕ್ತರಾಗಿ ಆದರ್ಶ ನಾಗರಿಕರಾಗಿ ಬಾಳಲು ಸಾಧ್ಯ. ಈ ನೆಲೆಯಲ್ಲಿ ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ ‘ಬಸವ ಸಂಸ್ಕೃತಿ ಅಭಿಯಾನ’ ಪ್ರಾರಂಭವಾಯ್ತು. ಅಂದು ಬಾಗೇವಾಡಿಯ ರಸ್ತೆಗಳಿಗೆ ಹೊಸ ಕಳೆ ಬಂದಿತ್ತು. ಪಾದಯಾತ್ರೆ ನಡೆವ ರಸ್ತೆಯಲ್ಲಿ ರಂಗೋಲೆಯ ರಂಗು ಎದ್ದು ತೋರುತ್ತಿತ್ತು. ಸಾವಿರಾರು ಮಹಿಳೆಯರು ತಮ್ಮ ತಲೆಯ ಮೇಲೆ ವಚನಗಳ ಕಟ್ಟುಗಳನ್ನಿಟ್ಟುಕೊಂಡು ವಚನಗಳನ್ನು ಹೇಳುತ್ತ ಹೆಜ್ಜೆ ಹಾಕುತ್ತಿದ್ದುದನ್ನು ನೋಡುವುದೇ ಆನಂದವಾಗಿತ್ತು. ಸಾವಿರಾರು ಪುರುಷರು ಬಸವ ಧ್ವಜ ಹಿಡಿದು ಬಸವ ಘೋಷ ವಾಕ್ಯಗಳನ್ನು ಹೇಳುತ್ತ ಉತ್ಸಾಹದಿಂದ ಕುಣಿದು ಕುಪ್ಪಳಿಸುವ ದೃಶ್ಯ ಅವರ್ಣನೀಯ. ವಿದ್ಯಾರ್ಥಿಗಳೂ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದು ವಿಶೇಷ. ಬೇರೆ ಬೇರೆ ಜಿಲ್ಲೆಯ ಬಸವಾಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಅಭಿಯಾನಕ್ಕೆ ವಿಶೇಷ ಮೆರಗು ಕೊಟ್ಟದ್ದು ಬಸವಾದಿ ಶರಣರ ಪ್ರತಿಮೆಗಳ ಅತ್ಯಂತ ಸುಂದರ ಬಸವ ರಥ. ಜೊತೆಗೆ ವಿವಿಧ ಜಾನಪದ ಕಲೆಗಳ ಪ್ರದರ್ಶನ. ವಚನ ಸಂವಾದದಲ್ಲಿ ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿ ಸೂಜಿ ಬಿದ್ದರೂ ಕೇಳುವಷ್ಟು ನಿಶ್ಯಬ್ದತೆ ಕಾಯ್ದುಕೊಂಡದ್ದು ಈ ಅಭಿಯಾನದ ಮಹತ್ವವನ್ನು ಮನಗಾಣಿಸುವಂತೆ ಇತ್ತು. ಆ ಸಂದರ್ಭದಲ್ಲಿ ನಡೆದ ಪ್ರಶ್ನೋತ್ತರಗಳು ಅರ್ಥಪೂರ್ಣವಾಗಿದ್ದವು.

ಪ್ರಶ್ನೆ: ಜಂಗಮ ಮತ್ತು ಸನ್ಯಾಸಿಗೆ ಇರುವ ವ್ಯತ್ಯಾಸವೇನು?
ನಿಜಗುಣಾನಂದ ಶ್ರೀಗಳು: ಒಂದು ಶಬ್ದ ತಾತ್ವಿಕವಾಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ನಿಮ್ಮ ಶಾಲೆಯಲ್ಲಿ ಪಾಠ ಮಾಡುವ ವ್ಯಕ್ತಿಗೆ ಗುರು ಎನ್ನುತ್ತಾರೆ. ಜ್ಞಾನಕ್ಕೆ ಗುರು ಎನ್ನುತ್ತಾರೆಯೇ ಹೊರತು ವ್ಯಕ್ತಿಗಲ್ಲ. ಹಾಗೆ ಜಂಗಮ ಎನ್ನುವ ಶಬ್ದ ವ್ಯಕ್ತಿ ಸಂಬಂಧಿತ ಜಾತಿಯ ವ್ಯವಸ್ಥೆಯಲ್ಲ. ಜನನ ಮರಣಗಳನ್ನು ಅಧೀನ ಮಾಡಿಕೊಂಡಿರುವ ವ್ಯಕ್ತಿ ಜಂಗಮ. ಅಂಥ ಜಂಗಮರು ಯಾರಾದರೂ ಆಗಬಹುದು. ಅದಕ್ಕೆ ಬಸವಣ್ಣನವರು ಜಂಗಮ ಎಂದಿದ್ದಾರೆ. ಜಂಗಮ ಎಂದರೆ ಸಮಾಜ. ಬಸವಾದಿ ಪ್ರಮಥರು ಜಂಗಮ ಶಬ್ದಕ್ಕೆ ಸೇವೆ ಎನ್ನುವ ಅರ್ಥವನ್ನೂ ನೀಡಿದ್ದಾರೆ. ಈ ಅರ್ಥವನ್ನು ಸೀಮಿತ ವ್ಯಕ್ತಿಗಳಿಗೆ ಕೊಡಲು ಸಾಧ್ಯವಿಲ್ಲ. ಹಾಗಾಗಿ ಜನನ, ಗಮನ, ಮರಣ ಅಧೀನ ಮಾಡಿಕೊಂಡಿರುವ ಶಕ್ತಿಯೇ ಜಂಗಮ. ಅರಿವು, ಆಚಾರ, ಅನುಭಾವ ಪಡೆದುಕೊಂಡವರು ಜಂಗಮ. ಬಿಳಿ ಕೋಟು ಹಾಕಿದವರೆಲ್ಲ ಡಾಕ್ಟರ್ ಅಲ್ಲ. ಕರಿ ಕೋಟು ಹಾಕಿದವರೆಲ್ಲ ವಕೀಲರಲ್ಲ. ಕಾವಿ ಹಾಕಿದವರೆಲ್ಲ ಸನ್ಯಾಸಿಗಳಲ್ಲ. ಅರಿವು, ಆಚಾರ, ಅನುಭಾವ ಇದ್ದವರು ಜಂಗಮ. ಸನ್ಯಾಸ ಎನ್ನುವ ಶಬ್ದ ಈ ದೇಶದ ಚಾತುರ್ವರ್ಣ ಪರಂಪರೆಯಲ್ಲಿ ಬರುವಂತಹುದು. ಹಾಗಾಗಿ ಸನ್ಯಾಸಕ್ಕೂ, ಜಂಗಮತ್ವಕ್ಕೂ ಬಹಳ ವ್ಯತ್ಯಾಸವಿದೆ. ಪ್ರಶ್ನೆ ಕೇಳುವವರು ಸಹ ಪ್ರಶ್ನೆ ಕೇಳುವ ಅರಿವು, ಆಚಾರ ಇಟ್ಟುಕೊಂಡಿರುವುದರಿಂದ ಅವರೂ ಜಂಗಮವೇ. ಜಂಗಮ ಸಮಾನತೆ ಸಂಕೇತ. ಸನ್ಯಾಸ ಚಾತುರ್ವರ್ಣ ಪರಂಪರೆಯಲ್ಲಿ ಕೊನೆಯ ಹಂತ. ಜಂಗಮ ಸಮಾಜವನ್ನೇ ಒಳಗೊಂಡ ಪದ. ಲಿಂಗವಂತ ಸಹ ಜಂಗಮವೇ. ಈ ಸಭೆ ಕೂಡ ಜಂಗಮದ ಸಭೆ. ಜಂಗಮ ಎಂದರೆ ಸೇವೆ ಮಾಡುವವರು. ದೀನರು, ದಲಿತರು ಪ್ರತಿಯೊಬ್ಬರ ಹೃದಯದಲ್ಲಿರುವ ಜ್ಞಾನವೇ ಜಂಗಮ.

ಪ್ರಶ್ನೆ: ‘ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ, ತಿರುಗಿ ಅವನ ಮನೆಯಲ್ಲಿ ಉಣ್ಣಬಾರದೆಂದು ಅಕ್ಕಿ ಕಣಕವ ಕೊಂಡು ಹೋಗುವ ಗುರುವಿನ ಕಂಡರೆ, ಕೆಡವಿ ಹಾಕಿ ಮೂಗನೆ ಕೊಯ್ದು ಇಟ್ಟಂಗಿಯ ಕಲ್ಲಿಲೆ ತಿಕ್ಕಿ ಸಾಸಿವೆಯ ಹಿಟ್ಟನೆ ತಳಿದು ಮೇಲೆ ಲಿಂಬಿಯ ಹುಳಿಯನೆ ಹಿಂಡಿ ಪಡುವ ಗಾಳಿಗೆ ಹಿಡಿಯೆಂದಾತ ನಮ್ಮ ಅಂಬಿಗರ ಚೌಡಯ್ಯ’ ಇದರ ಅರ್ಥವೇನು?
ಭಾಲ್ಕಿ ಶ್ರೀಗಳು: ಬಸವಾದಿ ಶರಣರು ಲಿಂಗದೀಕ್ಷೆ ಆದಮೇಲೆ ಎಲ್ಲರೂ ಸರಿಸಮಾನರು ಎಂದರು. ಒಂದು ಜ್ಯೋತಿಯಿಂದ ಇನ್ನೊಂದು ಜ್ಯೋತಿ ಹಚ್ಚಿದಾಗ ಎರಡೂ ಜ್ಯೋತಿಗಳಲ್ಲಿ ವ್ಯತ್ಯಾಸ ಇರುವುದಿಲ್ಲ. ಆ ದೃಷ್ಟಿಯಿಂದ ಕುಲಹೀನನಾಗಿದ್ದವನಿಗೆ ಲಿಂಗದೀಕ್ಷೆ ನೀಡಿದ ಮೇಲೆ ಅವನ ಮನೆಯಲ್ಲೇ ಪ್ರಸಾದ ಮಾಡಬೇಕು. ಇದು ಲಿಂಗಾಯತ ಧರ್ಮ. ಇದು ಬಸವತತ್ವ. ಅವನ ಮನೆಯಲ್ಲಿ ಉಣ್ಣದೆ, ‘ನಿನಗೆ ದೀಕ್ಷೆ ಕೊಡ್ತೇನೆ; ನಾನಿಲ್ಲಿ ಉಣ್ಣುವಂಗಿಲ್ಲ. ಸ್ವಲ್ಪ ಅಕ್ಕಿ, ಬೆಲ್ಲ, ಬ್ಯಾಳಿ ಕೊಡು, ಮಠದಲ್ಲೇ ಅಡಗಿ ಮಾಡಿಕೊಂಡು ಉಣ್ತೇನೆ’ ಎಂದು ಆ ಗುರು ಅಂದರೆ ಏನು ಮಾಡಬೇಕು ಎಂದು ಅಂಬಿಗರ ಚೌಡಯ್ಯ ಹೇಳಿದ್ದಾರೆ. ಅಂಥವರನ್ನು ಗುರು ಎಂದು ಒಪ್ಪಬಾರದು. ಅವನು ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ ಶಿವದೀಕ್ಷೆಯಾದ ಬಳಿಕ ಸಾಕ್ಷಾತ್ ಶಿವನೆಂದು ವಂದಿಸಿ, ಪೂಜಿಸಿ, ಪಾದೋದಕ ಪ್ರಸಾದ ತೆಗೆದುಕೊಳ್ಳುವುದೇ ಯೋಗ್ಯ ಎಂದು ಬಸವಣ್ಣನವರು ಹೇಳಿದ್ದಾರೆ. ಆ ದೃಷ್ಟಿಯಿಂದ ಆ ಗುರು ಅಲ್ಲೇ ಉಣಬೇಕು ಎನ್ನುವ ಸಮಾನತೆಯ ಸಿದ್ಧಾಂತ ಈ ವಚನದಲ್ಲಿದೆ.

ಪ್ರಶ್ನೆ: ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುವ ಮಕ್ಕಳನ್ನು ಹೇಗೆ ಸರಿದಾರಿಗೆ ತರಬೇಕು? ಇದರಲ್ಲಿ ಮಠಾಧೀಶರ ಪಾತ್ರವೇನು?
ಅಥಣಿ ಶ್ರೀಗಳು: ಮಾತೆತ್ತಿದರೆ ಟ್ರೋಲ್, ರೀಲ್ಸ್, ವಾಟ್ಸಪ್, ಟ್ವಿಟರ್ ಇದರದೇ ಒಂದು ಪ್ರಪಂಚ ಸೃಷ್ಟಿ ಮಾಡಿಕೊಂಡಿದೆ ನಮ್ಮ ಸಮಾಜ. ಹೊಸ ತಲೆಮಾರಿನ ಯುವಕರಿಗೆ ಪಠ್ಯಪುಸ್ತಕದ ಬದಲು ವಾಟ್ಸಪ್ ಮೂಲಕ ಶಿಕ್ಷಣ ಕಲಿಸುತ್ತಿದ್ದಾರೆ. ವಾಟ್ಸಪ್ ಮೂಲಕ ಏನು ಮಾಹಿತಿ ಬರುತ್ತೋ ಅದನ್ನೇ ಓದಲು ಶುರು ಮಾಡಿದರು. ತಂದೆ ತಾಯಂದಿರೂ ಮೊಬೈಲ್ ಗುಂಗಿನಲ್ಲೇ ಇರ್ತಾರೆ. ನಮ್ಮ ಮಕ್ಕಳೂ ಅದನ್ನೇ ಮಾಡ್ತಿರ್ತಾರೆ. ಅದು ಆಗಬಾರದು. ನಾವೆಲ್ಲ ಸೇರಿರುವ ಉದ್ದೇಶ ನೀವು ಟಿವಿ, ಮೊಬೈಲ್ ವ್ಯವಸ್ಥೆಯಲ್ಲಿ ಹಾಳಾಗಬಾರದು. ವಚನಗಳ ಕಡೆ ಮುಖ ಮಾಡಿದಾಗ ಮಾತ್ರ ಹೊಸ ಲೋಕ ಕಟ್ಟುವುದಕ್ಕೆ ಸಾಧ್ಯ ಎನ್ನುವ ಕಾರಣಕ್ಕಾಗಿ ಮಠಾಧಿಪತಿಗಳ ಒಕ್ಕೂಟ ಈ ಪ್ರಯೋಗ ಶುರುಮಾಡಿದೆ. ಈ ನಿಟ್ಟಿನಲ್ಲಿ ಮಕ್ಕಳೇ ನೀವು ಪ್ರತಿನಿತ್ಯ ವಚನಗಳನ್ನು ಓದುವುದು, ಅವುಗಳ ಮಾರ್ಗದಲ್ಲಿ ನಡೆಯುವುದು ಜಾರಿಗೆ ಬರಬೇಕು.

ಪ್ರಶ್ನೆ: ನವವಿಧ ಭಕ್ತಿಗಳನ್ನು ಶರಣರು ಹೇಳ್ತಾರೆ. ಸೂರ್ಯ ಭಕ್ತಿ, ಸೂರ್ಯಾತೀತ ಭಕ್ತಿ ಎಂದು ನಮ್ಮ ವಿರಕ್ತ ಮಠದ ಸ್ವಾಮಿಗಳು ಹೇಳಿದರು. ಸೂರ್ಯ ಭಕ್ತಿ ಮತ್ತು ಸೂರ್ಯಾತೀತ ಭಕ್ತಿ ಮಾಡುವವರು ಯಾರು?
ಭಾಲ್ಕಿ ಶ್ರೀಗಳು: ಶರಣರ ಭಕ್ತಿಯಲ್ಲಿ ಅವೆರಡೂ ಇಲ್ಲ. ನಮ್ಮಲ್ಲಿ ನವವಿಧ ಭಕ್ತಿ ಇಲ್ಲ. ಷಡ್ವಿಧ ಭಕ್ತಿಗಳಿವೆ. ಭಕ್ತಸ್ಥಲದಲ್ಲಿ ಶ್ರದ್ಧಾ ಭಕ್ತಿ, ಮಹೇಶ ಸ್ಥಲದಲ್ಲಿ ನಿಷ್ಠಾಭಕ್ತಿ, ಪ್ರಸಾದಿ ಸ್ಥಲದಲ್ಲಿ ಅವಧಾನ ಭಕ್ತಿ, ಪ್ರಾಣಲಿಂಗಿ ಸ್ಥಲದಲ್ಲಿ ಅನುಭಾವ ಭಕ್ತಿ, ಶರಣ ಸ್ಥಲದಲ್ಲಿ ಆನಂದ ಭಕ್ತಿ, ಐಕ್ಯ ಸ್ಥಲದಲ್ಲಿ ಸಮರಸ ಭಕ್ತಿ ಇದೆ. ಶ್ರದ್ಧೆಯಿಂದ ಆರಂಭವಾಗಿ ಸಮರಸದಲ್ಲಿ ಮುಕ್ತಾಯವಾಗುತ್ತದೆ. ದೇವರು, ಭಕ್ತ ಬೇರೆ ಬೇರೆ ಅಲ್ಲ; ನೀನೇ ನಾನು, ನಾನೇ ನೀನು ಭಾವ ಇರ್ತದೆ. ಅವರಲ್ಲಿ ಯಾವುದೇ ಭೇದಭಾವ ಇರುವುದಿಲ್ಲ. ಭೇದಭಾವ ಇರುವುದಿಲ್ಲ ಎನ್ನುವ ಅರಿವೂ ಇರುವುದಿಲ್ಲ. ಆ ಸ್ಥಿತಿಗೆ ಸಮರಸ ಭಕ್ತಿ ಎಂದು ಕರೆಯುತ್ತಾರೆ. ಇಂಥ ಆರು ವಿಧ ಭಕ್ತಿಯನ್ನು ಬಸವಾದಿ ಶರಣರು ನಮಗೆ ನೀಡಿದ್ದಾರೆ.

ಪ್ರಶ್ನೆ: ದೇವರು ಯಾರು? ಎಲ್ಲಿರ್ತಾನೆ?
ಪಂಡಿತಾರಾಧ್ಯ ಶ್ರೀಗಳು: ತನ್ನ ತಾನರಿತಡೆ ತಾನೇ ದೇವ. ಅಜ್ಞಾನವನ್ನು ನಿವಾರಣೆ ಮಾಡಿಕೊಂಡು, ಸದ್ಗುಣಗಳನ್ನು ಮೈಗೂಡಿಸಿಕೊಂಡು, ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ನಿಮಗಿಂತ ಮತ್ತೊಬ್ಬ ದೇವರು ಬೇರಿಲ್ಲ. ಅವನು ನಿಮ್ಮೊಳಗೇ ಇರ್ತಾನೆ.

ಕೀರ್ತಿ ಬಡಿಗೇರ: ಬಸವಣ್ಣನವರ ತತ್ವಗಳನ್ನು ನಾವು ಜೀವನಕ್ಕೆ ಹೇಗೆ ಅಳವಡಿಸಿಕೊಳ್ಳಬೇಕು?
ಪಂಡಿತಾರಾಧ್ಯ ಶ್ರೀಗಳು: ಇದುವರೆಗೂ ಉಪನ್ಯಾಸ ನೀಡಿದ್ದನ್ನು ನೀವು ಶ್ರದ್ಧೆಯಿಂದ ಕೇಳಲಿಲ್ಲ ಎನಿಸುತ್ತದೆ. ಬಸವಣ್ಣನವರ ‘ಕಳಬೇಡ, ಕೊಲಬೇಡ’ ಈ ಒಂದೇ ವಚನದ ತತ್ವಗಳನ್ನು ಪರಿಪಾಲಿಸಿದರೆ ಸಾಕು. ‘ತಂದೆ ನೀನು, ತಾಯಿ ನೀನು’, ‘ನೀನೊಲಿದಡೆ ಕೊರಡು ಕೊನರುವುದು’ ಇಂಥ ವಚನಗಳನ್ನು ನೀವು ಮತ್ತೆ ಮತ್ತೇ ಕೇಳಿದರೆ, ಓದಿದರೆ, ಅದನ್ನು ಬದುಕಿನಲ್ಲಿ ಸಾಕಾರಗೊಳಿಸಿಕೊಂಡರೆ ಸಾಕು. ಜೊತೆಗೆ ಕಾಯಕ, ದಾಸೋಹ, ಇಷ್ಟಲಿಂಗ ನಿಷ್ಟೆ ಇವುಗಳನ್ನು ಅಳವಡಿಸಿಕೊಂಡರೆ ಬಸವತತ್ವಗಳನ್ನು ಸುಲಭವಾಗಿ ಜೀವನಕ್ಕೆ ಅಳವಡಿಸಿಕೊಳ್ಳಬಹುದು.

ಮಹಾದೇವ ಪ್ಯಾಟಿ: ಇವತ್ತಿನ ಸಾಮಾಜಿಕ ವ್ಯವಸ್ಥೆಯಲ್ಲಿ ಬಸವಣ್ಣನವರ ವಚನಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಮಸ್ತ ಸಮುದಾಯ ಯಾವ ಮಾರ್ಗದಲ್ಲಿ ಹೋಗಬೇಕು?
ಸೇಗುಣಸಿ ಶ್ರೀಗಳು: ವಚನಗಳನ್ನು ಅವುಗಳ ಮೂಲ ಆಶಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಓದಬೇಕು. ಹಿರಿಯರಲ್ಲಿ ವಿನಂತಿ ಮಾಡಿಕೊಳ್ಳುವುದು- ಮುಂಜಾನೆ ತಾವೇ ವಚನ ಗ್ರಂಥ ಹಿಡಿದುಕೊಂಡು ಪಾರಾಯಣ ಮಾಡಿದರೆ ಸಣ್ಣ ಸಣ್ಣ ಮಕ್ಕಳಿಗೂ ಆ ವಚನಗಳು ಹಿಡಿಸ್ತವ. ಅವರೂ ಅವುಗಳನ್ನು ಕೇಳ್ತಾರೆ. ವಚನಗಳಲ್ಲಿರುವ ಮೂಲ ಆಶಯ ಕಾಯಕ, ದಾಸೋಹ, ಸಮಾನತೆ ಮತ್ತು ನಮ್ಮನ್ನು ನಾವು ಅರ್ಥಮಾಡಿಕೊಳ್ಳುವುದು. ನಿರಂತರವಾಗಿ ವಚನಗಳನ್ನು ಓದುವುದರಿಂದ ಅವು ಮಕ್ಕಳ ಮೇಲೂ ಪರಿಣಾಮವಾಗ್ತವೆ. ಸಂವಾದ ಮಾಡುವ ಉದ್ದೇಶ ಮಕ್ಕಳು ವಿಕಾಸವಾಗಿ ತಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು. ದುರ್ದೈವ ಎಂದರೆ ಮನಸ್ಸು ವಿಕಾಸವಾಗುವ ಬದಲು ವಿಕಾರವಾಗುತ್ತಿರುವ ಸಂದರ್ಭದಲ್ಲಿ ಮಕ್ಕಳಿಗಾಗಿಯೇ ಸಂವಾದ ಕಾರ್ಯಕ್ರಮ ಏರ್ಪಾಡು ಮಾಡಿರುವುದು. ಕಾರಣ ನಾವು ವಿಕಾಸವಾದ ಸಮಾಜವನ್ನು ನಿರ್ಮಾಣ ಮಾಡಬೇಕು ಎನ್ನುವುದು.

ನಿರ್ಮಲಾ: ವಚನಗಳ ಮೂಲ ಉದ್ದೇಶವೇನು? ಅವುಗಳನ್ನು ಯಾಕೆ ರಚನೆ ಮಾಡಿದರು?
ಗದಗ ಶ್ರೀಗಳು: ಹನ್ನೆರಡನೆಯ ಶತಮಾನದಲ್ಲಿ ಸಾಮಾಜಿಕ ಪರಿಸ್ಥಿತಿ ಬಹಳ ಹದಗೆಟ್ಟಿತ್ತು. ಸಮಾಜದಲ್ಲಿ ಅಸಮಾನತೆ ಇತ್ತು. ಅದರ ಹಿಂದೆ ಸಂಘರ್ಷ, ಅಜ್ಞಾನ, ದಾರಿದ್ರ್ಯ ಇತ್ತು. ಮೇಲ್ವರ್ಗದ ಜನ ಕೆಳವರ್ಗದ ಜನರನ್ನು ಶೋಷಣೆ ಮಾಡ್ತಿದ್ದರು. ದೇವರು, ಧರ್ಮದ ಹೆಸರಿನಲ್ಲಿ ಜನ ಮೋಸಹೋಗುತ್ತಿದ್ದರು. ಈ ಎಲ್ಲ ದುರವಸ್ಥೆಯಿಂದ ಜನರನ್ನು ಮುಕ್ತಗೊಳಿಸುವುದಕ್ಕಾಗಿ ಬಸವಾದಿ ಶರಣರು ವಚನಗಳನ್ನು ಬರೆದರು. ನಮ್ಮ ದಿನಬಳಕೆಯ ಭಾಷೆಯಲ್ಲಿ ವಚನಗಳನ್ನು ರಚಿಸುವ ಮೂಲಕ ಆದರ್ಶ ತತ್ವಗಳನ್ನು ಜನಸಾಮಾನ್ಯರಿಗೆ ತಿಳಿಸ್ತಾ ಜನರನ್ನು ಮೌಢ್ಯ, ಅಂಧಶ್ರದ್ಧೆ, ಶೋಷಣೆಯಿಂದ ಮುಕ್ತಗೊಳಿಸುವ ಕೆಲಸ ಮಾಡಿದರು. ಆ ಮೂಲಕ ಸಮಾಜದಲ್ಲಿರುವ ಶೋಷಣೆ ತಪ್ಪಿಸುವ ಕೆಲಸ ಮಾಡಿದರು. ಸಮಾಜದ ಅಭಿವೃದ್ಧಿ ಮಾಡುವ ಕೆಲಸ ಮಾಡಿದರು. ಸಮಾನತೆ ತರುವ ಕೆಲಸ ಮಾಡಿದರು. ಕಾಯಕ, ದಾಸೋಹದಂತಹ ಅಮೂಲ್ಯ ತತ್ವಗಳನ್ನು ಜನಸಾಮಾನ್ಯರಿಗೆ ತಿಳಿಸಿಕೊಟ್ಟು ಜನರು ಸಂತೃಪ್ತಿ, ಸಮೃದ್ಧಿಯಿಂದ ಬದುಕುವಂತೆ ಮಾಡಿದರು. ವಚನಗಳ ಪ್ರಯೋಜನ ಎಂದರೆ ಸಮಾಜದಲ್ಲಿ ಸಂತೃಪ್ತಿ, ಸಮೃದ್ಧಿ ತರುವಂತಹುದು.

ಮೇಲಿನವು ಬಸವನ ಬಾಗೇವಾಡಿಯಲ್ಲಿ ನಡೆದ ಕೆಲವು ಪ್ರಶ್ನೋತ್ತರಗಳು. ಸೆಪ್ಟೆಂಬರ್ 2 ರಂದು ಕಲಬುರ್ಗಿ ಮಹಾನಗರದಲ್ಲಿ ನಡೆದ ಪ್ರಶ್ನೋತ್ತರಗಳಲ್ಲಿ ಕೆಲವು ಮುಂದಿನಂತಿವೆ.

ಪ್ರಶ್ನೆ: 12ನೆಯ ಶತಮಾನದಲ್ಲಿ ಬಸವಣ್ಣನವರು ‘ಕಳಬೇಡ, ಕೊಲಬೇಡ’ ಎನ್ನುವ ಕಲ್ಯಾಣ ನಾಡನ್ನು ಕಟ್ಟಿದ್ದರು. ಅಂದಿನ ಸಮಾಜದಲ್ಲಿ ಕಳವು, ಕೊಲೆ, ಸುಳ್ಳು ಇತ್ಯಾದಿ ಇರಲಿಲ್ಲ. ಇಂದೇಕೆ ಕಲ್ಯಾಣ ನಾಡನ್ನು ಕಟ್ಟಲು ಆಗುತ್ತಿಲ್ಲ?
ಪಂಡಿತಾರಾಧ್ಯ ಶ್ರೀಗಳು: ಇವತ್ತು ಬಸವಣ್ಣನವರ ವಚನದ ಆಶಯಗಳನ್ನು ಆಚರಣೆಯಲ್ಲಿ ತರುತ್ತಿಲ್ಲ. ನಾವೆಲ್ಲರೂ ಬಸವಣ್ಣನವರ ವಚನದ ಆಶಯವನ್ನು ಅರ್ಥಮಾಡಿಕೊಂಡು ಆಚರಣೆಯಲ್ಲಿ ತರುವ ಸಂಕಲ್ಪ ಮಾಡಿದರೆ ಮತ್ತೆ ಅಂದಿನ ಕಲ್ಯಾಣ ನಾಡನ್ನು ಕಟ್ಟಲು ಸಾಧ್ಯ.

ಪ್ರಶ್ನೆ: ಭಕ್ತಿ, ಕಾಯಕ, ದಾಸೋಹ ಈ ಮೂರನ್ನೂ ನಮ್ಮ ಶಿಕ್ಷಣದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು?
ಗದಗ ಶ್ರೀಗಳು: ಕಾಯಕ, ದಾಸೋಹದ ಜೊತೆಗೆ ಸಮಾನತೆಯನ್ನೂ ಸೇರಿಸಬೇಕು. ಲಿಂಗಾಯತ ಧರ್ಮಗುರು, ವಿಶ್ವಗುರು ಬಸವಣ್ಣನವರು ಸಮಾಜಕ್ಕೆ ಕೊಟ್ಟಿರುವ ಅಮೂಲ್ಯ ತತ್ವಗಳು ಇವು. ಕಾಯಕ, ದಾಸೋಹ ಇದ್ದರೆ ಮಾತ್ರ ಯಾವುದೇ ದೇಶ ಸಮೃದ್ಧವಾಗಿ ಬೆಳಿಯಲಿಕ್ಕೆ, ಆ ದೇಶವಾಸಿಗಳು ಸಂತೃಪ್ತಿಯಿಂದ ಬದುಕ್ಲಿಕ್ಕೆ ಸಾಧ್ಯವಾಗ್ತದೆ. ಕಾಯಕ ಎಂದರೆ ಎಲ್ಲರೂ ದುಡಿದು ಊಟ ಮಾಡಬೇಕು. ಪ್ರತಿಯೊಬ್ಬ ವ್ಯಕ್ತಿಯೂ ತನಗಾಗಿ ತಾನು ದುಡಿಯಬೇಕು. ಕಾಯಕಕ್ಕೆ ಶರಣರು ದೇವತ್ವದ ಸ್ಥಾನವನ್ನು ಕಲ್ಪಿಸಿಕೊಟ್ಟರು. ಕಾಯಕ ಮಾಡುವವರೇ ನಿಜವಾದ ಭಕ್ತರು. ಮುಂಜಾನೆಯಿಂದ ಸಂಜೆಯವರೆಗೆ ದೇವರಿಗೆ ಆಡಂಬರದ ಪೂಜೆ ಮಾಡುವವರು ಭಕ್ತರಲ್ಲ. ‘ಕೃತ್ಯಕಾಯಕವಿಲ್ಲದವರು ಭಕ್ತರಲ್ಲ’ ಎಂದರು. ತಮ್ಮ ಹೊಟ್ಟೆಗಾಗಿ ದುಡಿದು ಊಟ ಮಾಡುವವರು ಎಂದೂ ಭಕ್ತರಾಗಲು ಸಾಧ್ಯವಿಲ್ಲ. ದುಡಿದು ಉಣ್ಣುವುದೇ ಕಾಯಕ. ಅದು ಸತ್ಯಶುದ್ಧವಾಗಿರಬೇಕು. ಪ್ರಾಮಾಣಿಕತೆಯಿಂದ ಕೂಡಿರಬೇಕು. ಇನ್ನೊಬ್ಬರಿಗೆ ಮೋಸ, ವಂಚನೆ ಮಾಡಿ ಗಳಿಸುವುದಲ್ಲ. ಕಾಯಕದಿಂದ ಬಂದ ಸಂಪತ್ತನ್ನು ನಮ್ಮಲ್ಲಿಟ್ಟುಕೊಳ್ಳದೆ ವಿತರಣೆ ಮಾಡಬೇಕು. ವಿತರಣೆ ಮಾಡುವುದನ್ನೇ ‘ದಾಸೋಹ’ ಎಂದರು. ದುಡಿದು ಗಳಿಸುವುದು ಎಷ್ಟು ಮಹತ್ವದ್ದೋ ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಬೇಕಾದ್ದೂ ಅಷ್ಟೇ ಮಹತ್ವದ್ದು. ಎಲ್ಲರೂ ದುಡಿಯುವುದು ಕಾಯಕ. ಅದರ ಪ್ರತಿಫಲವನ್ನು ಎಲ್ಲರೊಂದಿಗೆ ಹಂಚಿಕೊಂಡು ಊಟ ಮಾಡಬೇಕು; ಅದು ದಾಸೋಹ.

ಪ್ರಶ್ನೆ: ಬಸವಣ್ಣನವರು ಸನಾತನ ಧರ್ಮದಲ್ಲಿನ ದೋಷಗಳನ್ನು ಹೊರತೆಗೆದು ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ನಾವು ವಿಶ್ವಗುರು ಬಸವಣ್ಣ ಎಂದು ಹೇಳ್ತೇವೆ. ಅದರಂತೆ ಯಾಕೆ ಲಿಂಗಾಯತ ಧರ್ಮ ವಿಶ್ವಧರ್ಮ ಆಗಬಾರದು?
ಪಂಡಿತಾರಾಧ್ಯ ಶ್ರೀಗಳು: ನಿನ್ನೆ ಬಸವನ ಬಾಗೇವಾಡಿಯಲ್ಲಿ ಜಾಮದಾರ ಅವರು ಮಾತನಾಡ್ತಾ ಭಾರತದಲ್ಲಿ ಹುಟ್ಟಿದ ಬೌದ್ಧ ಧರ್ಮ ಭಾರತವನ್ನು ಬಿಟ್ಟು ಹೊರದೇಶಗಳಲ್ಲಿ ಇವತ್ತೂ ಪ್ರಚಾರದಲ್ಲಿದೆ. ಅದಕ್ಕೆ ಕಾರಣ ಬುದ್ಧಂ, ಸಂಘಂ, ಧಮ್ಮಂ ಶರಣು ಎನ್ನುವುದು. ಬುದ್ಧನಿಗೆ, ಸಂಘಕ್ಕೆ, ಧರ್ಮಕ್ಕೆ ಶರಣು ಎಂದು ಹೇಳಿದ್ದಷ್ಟೇ ಅಲ್ಲ; ಅದರಂತೆ ನಡೆದುಕೊಂಡದ್ದು. ಇವತ್ತು ಮಠಾಧಿಪತಿಗಳನ್ನೇ ತೆಗೆದುಕೊಂಡರೆ ಸಂಪೂರ್ಣವಾಗಿ ಬಸವ ತತ್ವದಂತೆ ನಡೆದುಕೊಳ್ಳುವ ಮನಸ್ಥಿತಿಯ ಸ್ವಾಮಿಗಳು ವಿರಳವಾಗ್ತಿದ್ದಾರೆ. ‘ಹೊತ್ತು ಬಂದಂತೆ ಕೊಡೆ ಹಿಡಿಯುವ ಪ್ರವೃತ್ತಿ ಹೆಚ್ಚಾಗ್ತಿದೆ’. ಬಸವಣ್ಣನವರು ಬೇಡವೆಂದದ್ದನ್ನೇ ಬೇಕೆಂದು ಕೆಲವು ಮಠಗಳು ಪ್ರಚಾರ ಮಾಡ್ತಿವೆ. ಮೂಢನಂಬಿಕೆಗಳನ್ನು ಬಿಡಿ ಎಂದು ಬಸವಣ್ಣ ಹೇಳಿದರು. ಆದರೆ ಅನೇಕ ಲಿಂಗಾಯತ ಮಠಗಳಲ್ಲೇ ಯಜ್ಞ ಯಾಗಗಳು ನಡೆಯುತ್ತಿವೆ. ಬಸವಣ್ಣ, ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎಂದರು. ಆದರೆ ಇವತ್ತು ಗುಡಿಗೋಪುರ ಕಟ್ಟುವವರು, ಅವುಗಳ ಕಳಸಾರೋಹಣ, ಮೂರ್ತಿ ಪ್ರತಿಷ್ಠಾಪನೆಗೆ ಹೋಗುವವರು ಬಹುತೇಕ ಲಿಂಗಾಯತ ಸ್ವಾಮಿಗಳು. ಸ್ವಾಮಿಗಳು ಸರಿಯಾದರೆ ಮತ್ತೆ ಲಿಂಗಾಯತ ಧರ್ಮವನ್ನು 12ನೆಯ ಶತಮಾನದಲ್ಲಿದ್ದಂತೆ ಜಾರಿಯಲ್ಲಿ ತರಲು ಸಾಧ್ಯ. ಕೆಲವು ಸ್ವಾಮಿಗಳು ಹೇಳುವುದನ್ನು ಕೇಳಿದ್ದೇವೆ: ‘ಏನ್ಮಾಡೋದ್ರಪ್ಪ! ನಮಗೆ ಬಸವತತ್ವದಂತೆ ನಡೆದುಕೊಳ್ಳುವ ಆಸೆ ಇದೆ. ಹಾಗೇನಾದರೂ ನಡೆದುಕೊಂಡರೆ ಭಕ್ತರು ನಮ್ಮನ್ನು ಬಿಟ್ಬಿಡ್ತಾರೆ’. ನಾವು ಅಂಥವರಿಗೆ ಹೇಳುವುದು: ಭಗವಂತ ನಮಗೆ ರಟ್ಟೆ, ನೆತ್ತಿ, ಹೊಟ್ಟೆ ಕೊಟ್ಟಿದ್ದಾನೆ. ನಮ್ಮ ಜೀವನಕ್ಕೆ ನಾವು ದುಡಿದುಣ್ಣಬಹುದು. ಅದಕ್ಕಾಗಿ ಭಕ್ತರನ್ನೇ ಅವಲಂಬಿಸಬೇಕಾಗಿಲ್ಲ. ನಮ್ಮ ತತ್ವಗಳನ್ನು ಪರಿಪಾಲನೆ ಮಾಡುವವರು ಮಾತ್ರ ನಮ್ಮ ಭಕ್ತರು. ನಾವು ಸರಿಯಾದರೆ ಸಮಾಜ ಸರಿಯಾಗುತ್ತೆ. ಈ ಹಿನ್ನೆಲೆಯಲ್ಲಿ ಮಠಗಳು ಜಾಗೃತವಾದರೆ ಸಮಾಜ ಜಾಗೃತ ಆಗುತ್ತೆ. ಆಗ ಲಿಂಗಾಯತ ಧರ್ಮ ವಿಶ್ವಧರ್ಮವಾಗುತ್ತೆ.

ಪ್ರಶ್ನೆ: ಇಂದಿನ ಯುವಪೀಳಿಗೆ ಬಸವತತ್ವ, ಶರಣ ಸಂಸ್ಕೃತಿಯನ್ನ ಯಾವ ರೀತಿಯಲ್ಲಿ ಅಳವಡಿಸಿಕೊಳ್ಳಬೇಕು?
ಭಾಲ್ಕಿ ಶ್ರೀಗಳು: ಇಂದಿನ ಮಕ್ಕಳು ಸ್ವಚ್ಛ ಪಾಟಿ ಇದ್ದಂಗ. ಬಸವ ಸಂಸ್ಕೃತಿ ಅಳವಡಿಸಿಕೊಳ್ಳಲಿಕ್ಕೆ ಮೇಲೆ ಕುಂತವರಿಗಿಂತ ಮಕ್ಕಳ ಹೃದಯ ಬಹಳ ಚಲೋ ಇದ. ಅದಕ್ಕೇ ಬೆಳಗಿನ ಗೋಷ್ಠಿಯನ್ನು ಮಕ್ಕಳ ಸಲುವಾಗಿಯೇ ಇಟ್ಟಿದ್ದೇವೆ. ನಮ್ಮದೆಲ್ಲ ಗೀಚ್ ಪಾಟಿ ಇದೆ. ನಿಮ್ಮದು ಸ್ವಚ್ಛ ಪಾಟಿ. ಏನು ಚಿತ್ರ ತೆಗಿತೇವೆ ಅದು ನಿಮ್ಮಲ್ಲಿ ಮೂಡ್ತದ. ಮಕ್ಕಳು ಯಾವ ರೀತಿ ಶರಣ ಸಂಸ್ಕೃತಿ ಅಳವಡಿಸಿಕೊಳ್ಬೇಕೆಂದರೆ ಮೊದಲು ವಚನಗಳನ್ನು ಓದಬೇಕು. ಅದರ ಅರ್ಥವನ್ನರಿತು ಅಳವಡಿಸಿಕೊಳ್ಬೇಕು. ನೀವು ಕಳಬೇಡ ಎಂದು ಬಾಯಿಪಾಠ ಮಾಡಿ ಇನ್ನೊಬ್ಬರ ಬ್ಯಾಗಿನ ಪೆನ್ನನ್ನು ತಕ್ಕೊಂಡ್ರಿ ಅಂದರೆ ಹೋಯ್ತು. ಹಾಗೆ ಮಾಡಬಾರದು. ಓದಿದ್ದನ್ನು ಅಳವಡಿಸಿಕೊಳ್ಬೇಕು. ಅಂದರೆ ವಚನ ನಿಷ್ಠೆ ಬೆಳೆಸಿಕೊಳ್ಬೇಕು. ವಚನದ ಕನೆಕ್ಷನ್ ತಗೋಬೇಕು. ವಚನಗಳ ಅರ್ಥವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ತನ್ನಿಂದ ತಾನೇ ಶರಣ ಸಂಸ್ಕೃತಿ ಅಳವಡ್ತದೆ. ಬಸವಣ್ಣ ಕೇವಲ ಲಿಂಗಾಯತರಿಗೆ ಸಂಬಂಧವಿಲ್ಲ. 2*2=4. ಇದು ಎಲ ಕಡೆ ಒಂದೇ. ಅದೇ ರೀತಿ ಬಸವಣ್ಣನವರು ಹೇಳಿರುವ ಸಂಸ್ಕøತಿ, ತತ್ವ ನೀವು, ನಾವು, ಅವರು, ಇವರು, ಅಲ್ಲಿ, ಇಲ್ಲಿ, ಎಲ್ಲ ಕಡೆಗೂ ನಿತ್ಯವಾಗಿ, ಸತ್ಯವಾಗಿ ಒಪ್ಪುವಂತವುಗಳಿವೆ. ಅದಕ್ಕೆ ನೀವೆಲ್ಲರೂ ಬಸವನಿಷ್ಠೆ ಮತ್ತು ವಚನ ನಿಷ್ಠೆ ಬೆಳೇಸಿಕೊಂಡರೆ ಬಸವ ಸಂಸ್ಕೃತಿ ತನ್ನಿಂದ ತಾನೆ ಅಳವಡುತ್ತದೆ.

ಪ್ರಶ್ನೆ: ಜನಗಣತಿಯಲ್ಲಿ ನಾವು ವೀರಶೈವ ಬರೆಸಬೇಕಾ, ಲಿಂಗಾಯತ ಬರೆಸಬೇಕಾ?
ಪಂಡಿತಾರಾಧ್ಯ ಶ್ರೀಗಳು: ಇದು ಬಹಳ ಪ್ರಮುಖ ಪ್ರಶ್ನೆ. ಎಲ್ಲ ಕಡೆ ವೀರಶೈವ ಬರೆಸಬೇಕೋ, ಲಿಂಗಾಯತ ಬರೆಸಬೇಕೋ ಅಥವಾ ವೀರಶೈವ / ಲಿಂಗಾಯತ ಎಂದು ಬರೆಸಬೇಕೋ ಎನ್ನುವ ಪ್ರಶ್ನೆ ಚಿಕ್ಕವರಿಂದ ದೊಡ್ಡವರವರೆಗೂ ಕಾಡ್ತಿದೆ. ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ತೆಗೆದುಕೊಂಡಿರುವ ನಿರ್ಣಯ: ಮುಂಬರುವ ಜನಗಣತಿಯಲ್ಲಿ ಎಲ್ಲರೂ ಧರ್ಮದ ಅಥವಾ ಇತರೆ ಎನ್ನುವ ಕಾಲಂನಲ್ಲಿ ‘ಲಿಂಗಾಯತ’ ಎಂದು ಬರೆಸಬೇಕು. ಜಾತಿಯ ಕಾಲಂನಲ್ಲಿ ಅವರವರ ಉಪಪಂಗಡಗಳ ಹೆಸರನ್ನು ಬರೆಸಬೇಕು. ನಮ್ಮ ಕರಪತ್ರ, ಆಹ್ವಾನ ಪತ್ರಿಕೆಗಳಲ್ಲೂ ಇದನ್ನೇ ನಮೂದಿಸಲಾಗಿದೆ. ಹೋದ ಸಭೆಗಳಲ್ಲೆಲ್ಲ ಇದನ್ನೇ ಹೇಳಲಾಗುತ್ತದೆ. ನಿಮಗೆ ಅನುಮಾನ ಬೇಡ; ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು, ಜಾತಿಯ ಕಾಲಂನಲ್ಲಿ ನಿಮ್ಮ ನಿಮ್ಮ ಉಪಪಂಗಡಗಳನ್ನು ಬರೆಸಿರಿ.

ಪ್ರಶ್ನೆ: ಕೆಲವು ಮಠಾಧೀಶರು ಮೂಢನಂಬಿಕೆಗಳನ್ನು ಹುಟ್ಟಿಹಾಕ್ತಾರೆ. ಬಸವತತ್ವ ಬಿಟ್ಟು ಬೇರೆ ಹೇಳ್ತಾರೆ. ಅಂಥವರಿಗೆ ಏನು ಉತ್ತರ ಕೊಡಬೇಕು?
ಪಂಡಿತಾರಾಧ್ಯ ಶ್ರೀಗಳು: ಈ ವೇದಿಕೆಯಲ್ಲಿ ಅಂಥ ಮಠಾಧಿಪತಿಗಳಿದ್ದರೆ ನೇರವಾಗಿ ಅವರನ್ನೇ ಕೇಳಬಹುದು.
ಭಾಲ್ಕಿ ಶ್ರೀಗಳು: ಈ ವೇದಿಕೆಯ ಮೇಲೆ ಅಂಥ ಮಠಾಧಿಪತಿಗಳು ಇಲ್ಲ. ಬೇರೆ ಕಡೆ ಇರಬಹುದು. ಅವರಿಗೆ ನಮ್ಮ ವಚನಗಳು ಹಿಂಗೆ ಹೇಳ್ತವ; ನೀವು ಯಾಕ ಹಿಂಗ್ ಮಾಡ್ತೀರಿ ಅಂತ ಪ್ರಶ್ನೆ ಕೇಳಿದ್ರ ಅವರೂ ಸುಧಾರಣೆ ಆಗ್ತಾರ. ಮೂಗು ಮುಚ್ಚಿದರ ಬಾಯಿ ತಾನೇ ತೆರಿತದ. ನೀವು ಜಾಗೃತ ಆದರ ಮಠಾಧಿಪತಿಗಳು ಸಹ ಜಾಗೃತರಾಗ್ತಾರ.

ಪ್ರಶ್ನೆ: ಮಠಾಧಿಪತಿಗಳ ಒಕ್ಕೂಟದವರೇ ಅಂಥವರನ್ನು ಕೇಳಬಹುದಲ್ಲ?
ಭಾಲ್ಕಿ ಶ್ರೀಗಳು: ಮಠಾಧಿಪತಿಗಳ ಒಕ್ಕೂಟ ಸ್ಥಾಪನೆಯಾದದ್ದೇ ಕನ್ನಡ ನಾಡಿನ ಎಲ್ಲ ಮಠಾಧೀಶರು ಬಸವ ಮಾರ್ಗದಲ್ಲಿ ಬರಬೇಕು ಎನ್ನುವ ದೃಷ್ಟಿಯಿಂದಲೇ. ಒಂದೇ ಸಲ ಮುಗಿಲಿಗೆ ಮುಟ್ಲಿಕ್ಕಾಗದಿಲ್ಲ. ಅವರ ಪ್ರೀತಿ ಗಳಿಸ್ಬೇಕು. ಅವರ ಮಠಕ್ಕ ಹೋಗ್ಬೇಕು. ಬರ್ರಿ ಅಂತ ಕರೆದು ತಿದ್ದಬೇಕು. ಕ್ರೈಸ್ತರು ಒಂದೇ ಸಲಕ್ಕೆ ಧರ್ಮ ಸ್ವೀಕಾರ ಮಾಡ್ರಿ ಎಂದು ಹೇಳುವುದಿಲ್ಲ. ಅವರ ಕಷ್ಟ, ಸಮಸ್ಯೆ ಕೇಳಿ ಅವರಿಗೆ ಒಂದು ಎಮ್ಮಿ ಕೊಡಿಸ್ತಾರ ಬ್ಯಾಂಕಿನಿಂದ. ಹಾಲು ಮಾರಿ ಬ್ಯಾಂಕಿನ ಸಾಲ ತುಂಬ್ತಾರೋ ಇಲ್ಲವೋ ಅಂತ ನೋಡ್ತಾರೆ. ಅವನ ಆರ್ಥಿಕ ಸ್ಥಿತಿ ಸುಧಾರಣೆ ಆದನಂತರ ನಿಮ್ಮ ಧರ್ಮದ ದೀಕ್ಷೆ ಕೊಡಿ ಅಂತ ಅವನೇ ಕೇಳ್ತಾನೆ. ಹಂಗೆ ನಾವು ಪ್ರೀತಿಯಿಂದ ಎಲ್ಲ ಮಠಾಧೀಶರನ್ನು ಕರೆದುಕೊಳ್ಳಲಿಕ್ಕಾಗಿಯೇ ಈ ಒಕ್ಕೂಟ ಸ್ಥಾಪನೆ ಆಗಿದೆ.

ಮಹಾಂತೇಶ ಕುಂಬಾರ: ಏಕರೂಪದ ಶಿವೋಪಾಸನೆ, ಏಕರೂಪದ ಬಸವಧ್ವಜ ಗೀತೆ, ಗರ್ಭದಿಂದ ಗೋರಿಯವರೆಗೆ ಒಂದೇ ರೀತಿಯ ಸಂಸ್ಕಾರ ಯಾಕೆ ಆಗ್ತಿಲ್ಲ? ಈ ನಿಟ್ಟಿನಲ್ಲಿ ತಮ್ಮೆಲ್ಲರ ಪಾತ್ರ ಏನು?
ಭಾಲ್ಕಿ ಶ್ರೀಗಳು: ಬಹುಪಾಲು ಮಠಾಧೀಶರು ಸಂಸ್ಕೃತ ಮಂತ್ರಗಳನ್ನು ಹೇಳ್ತಿದ್ದರು. ಈಗ ಬಹುತೇಕ ಮಠಗಳಲ್ಲಿ ವಚನ ಮಂತ್ರಗಳನ್ನು ಹೇಳ್ತಿದ್ದಾರೆ. ಮೊದಲು ಸಂಸ್ಕೃತಮಯ, ವೇದಮಯ ಇತ್ತು. ಈಗ ಬಸವ ತತ್ವದ ಪ್ರಕಾರ ನಡೆದಿದೆ. ವಿಧಿ ವಿಧಾನದಲ್ಲಿ ಪಂಡಿತಾರಾಧ್ಯರ ಮಠದಲ್ಲಿ, ಭಾಲ್ಕಿ ಮಠದಲ್ಲಿ ವಚನ ಬೇರೆ ಬೇರೆ ಹೇಳ್ಬಹುದು. ಇಷ್ಟಲಿಂಗ ಪೂಜಾ ಮಾಡುವಾಗ, ವಿಭೂತಿ ಧರಿಸುವಾಗ ನಾನೇ ಬೇರೆ, ಮೋಟಗಿ ಮಠದವರೇ ಬೇರೆ ವಚನ ಹೇಳ್ತಾರೆ. ವಚನಗಳ ಮುಖಾಂತರವೇ ನಡೆದಿದೆ ಎನ್ನುವುದು ಒಳ್ಳೆಯ ಬೆಳವಣಿಗೆ. ಮುಸ್ಲೀಮರಂಗ, ಕ್ರಿಶ್ಚಿಯನ್‍ರಂಗ ಒಂದೇರೀತಿ ಬರಬೇಕು. ನೀವನ್ನದು ನೂರಕ್ಕೆ ನೂರು ಸತ್ಯ. ಈಗ ಎಲ್ಲರೂ ವಚನ ಹೇಳ್ತಾರ. ಮುಂದೆ ನಾವೆಲ್ಲ ಕುಂತು ಸಮಾಲೋಚನೆ ಮಾಡಿ, ಎಲ್ಲರೂ ಒಂದೇ ರೀತಿಯಿಂದ ಮಾಡ್ಬೇಕು ಅಂತ ನಿರ್ಣಯಿಸಿದರೆ ಲಿಂಗಪೂಜೆಯಾಗಲಿ, ಗರ್ಭಲಿಂಗಧಾರಣೆಯಾಗಲಿ, ಲಿಂಗದೀಕ್ಷೆಯಾಗಲಿ, ಧ್ವಜಗೀತೆಯಾಗಲಿ ಒಂದೇ ರೀತಿ ಬರ್ತದ. ಸ್ವಲ್ಪ ಕಾಲಾವಕಾಶ ಬೇಕು.

ಸಂಜನಾ: ಇವತ್ತಿನ ಸಮಾಜದಲ್ಲಿ ಮಠಾಧೀಶರು ಮಾದರಿಯೋ, ಮಾರಕವೋ?
ಪಂಡಿತಾರಾಧ್ಯ ಶ್ರೀಗಳು: ಆ ವಿದ್ಯಾರ್ಥಿನಿ ಮಠಾಧೀಶರ ಮನಸ್ಸುಗಳನ್ನು ಅಲ್ಲಾಡಿಸುವ ಪ್ರಶ್ನೆ ಕೇಳಿದ್ದಾಳೆ. ಮಠಗಳು ಸಮಾಜಕ್ಕೆ ಮಾದರಿಯೂ ಹೌದು, ಮಾರಕವೂ ಹೌದು. ಯಾವಾಗ ಮಾದರಿಯಾಗ್ತವೆ, ಯಾವಾಗ ಮಾರಕವಾಗ್ತವೆ ಎನ್ನುವುದು ಮಠಾಧೀಶರಿಗಿಂತ ಅವರನ್ನು ಅವಲಂಬಿಸಿರುವ ನಿಮಗೆ ಗೊತ್ತಿದೆ. ಯಾವ ಮಠ ಮಾರಕ ಅನಿಸಿದೆಯೋ ಅಂಥ ಮಠ ಬಿಟ್ಬಿಡಿ. ಯಾವ ಮಠ ಮಾದರಿ ಅನಿಸಿದೆಯೋ ಅವರನ್ನು ಬೆಂಬಲಿಸಿ. ಆಗ ಸ್ವಾಮಿಗಳು ಬದಲಾವಣೆಯಾಗ್ತಾರೆ.

ಲಕ್ಷ್ಮಿ: 12ನೆಯ ಶತಮಾನದಲ್ಲಿ ಬಸವೇಶ್ವರರು ಸಮಾಜವನ್ನು ಬದಲಾವಣೆ ಮಾಡ್ಬೇಕು ಎಂದು ಅಷ್ಟೆಲ್ಲ ಪ್ರಯತ್ನಪಟ್ಟರು. ಆದರೂ ಅವರನ್ನೇ ಅಂದಿನ ಸಮಾಜ ವಿರೋಧ ಮಾಡ್ತು. ಆಧುನಿಕ ಕಾಲದಲ್ಲಿ ನಾವು ಯಾವರೀತಿ ಬಸವಣ್ಣನವರ ತತ್ವಗಳನ್ನು ಅನುಸರಿಸಿ ಸಮಾಜವನ್ನು ಬದಲಾವಣೆ ಮಾಡ್ಬೇಕು?
ಭಾಲ್ಕಿ ಸ್ವಾಮೀಜಿ: 12ನೆಯ ಶತಮಾನದಲ್ಲಿ ರಾಜ ಪ್ರತ್ಯಕ್ಷ ದೇವರು ಎನ್ನುವ ಕಾಲ ಇತ್ತು. ಅಂಥ ಕಾಲದಲ್ಲಿ ಕಾಶ್ಮೀರ, ಅಪಘಾನಿಸ್ಥಾನ ಹೀಗೆ ನಾಡಿನ ಮೂಲೆ ಮೂಲೆಯಿಂದ ಶರಣರು ಕಲ್ಯಾಣಕ್ಕೆ ಬಂದರು. ಅವರು ಬಸವತತ್ವವನ್ನು ಅರಿತು ಸಮಾನತೆಯನ್ನು ಆಚರಿಸಿದರು. ಅವತ್ತು ಯಾವ ತತ್ವವನ್ನು ವಿರೋಧಿಸಿದರೋ ಈಗ ಅದೇ ತತ್ವ ಅನುಸರಿಸಲು ಪ್ರೋತ್ಸಾಹ ಕೊಡ್ತಿದ್ದಾರೆ. ಉದಾ: ಅವತ್ತು ಅಂತರ್ಜಾತಿ ವಿವಾಹ ಮಾಡಿದ್ದರಿಂದ ಹರಳಯ್ಯ ಮಧುವರಸರಿಗೆ ಎಳೆಹೂಟೆ ಶಿಕ್ಷೆ ಕೊಟ್ಟರು. ಇವತ್ತು ಅಂತರ್ಜಾತಿ ವಿವಾಹವಾದರೆ ಸರ್ಕಾರ ಆರ್ಥಿಕ ನೆರವು ನೀಡ್ತಿದೆ. ಅದರರ್ಥ ಬಸವತತ್ವ ಜಾರಿಯಲ್ಲಿ ಬರ್ತಿದೆ. ಬಸವಣ್ಣನ ಹೆಸರಿನಲ್ಲಿ ಅದನ್ನು ನಾವು ಮಾಡಿದರೆ ಆಚರಣೆಯಲ್ಲಿ ಅಳವಡಿಸಿದಂತೆ ಆಗ್ತದ. ಈಗ ವಿರೋಧ ಮಾಡುವ ಪರಿಸ್ಥಿತಿ ಇಲ್ಲ. ಲಾಕ್‍ಡೌನ್ ಕಾಲದಲ್ಲಿ ತಿರುಪತಿ ದೇವಾಲಯ ಹಿಡಿದು ಎಲ್ಲ ದೇವಾಲಯಗಳು ಲಾಕ್ ಆದವು. ಜಳಕ ಇಲ್ಲ, ಪೂಜಾ ಇಲ್ಲ, ಆದರೆ ಬಸವಣ್ಣನವರು ಕೊಟ್ಟ ಇಷ್ಟಲಿಂಗ ಲಾಕ್ ಆಗ್ಲಿಲ್ಲ. ನಿತ್ಯ ನಾವು ಪೂಜೆ ಮಾಡ್ತಿದ್ವಿ. ಬಸವ ತತ್ವ ಯುನಿವರ್ಸಲ್ ತತ್ವ. ಅಂದು, ಇಂದು, ಮುಂದು, ಎಂದೆಂದಿಗೂ ಆಚರಿಸುವ ತತ್ವ ಬಸವತತ್ವ.

ನೀಲಮ್ಮ: ಹರಳಯ್ಯನವರು ತುಂಬಾ ಶಕ್ತಿಶಾಲಿ ಮತ್ತು ಮಹಾಪುರುಷರಾಗಿದ್ದರು. ಅವರಿಗೇ ಶಿಕ್ಷೆ ಆಯ್ತಲ್ಲ? ಯಾಕೆ?
ಅಥಣಿ ಸ್ವಾಮೀಜಿ: ಈಗಾಗಲೇ ಗುರುಗಳು ಹೇಳಿದ ಹಾಗೆ ಆಗ ಪ್ರಜಾಪ್ರಭುತ್ವ ಇರಲಿಲ್ಲ. ರಾಜಪ್ರಭುತ್ವ ಇತ್ತು. ಹಿಂದುಳಿದ ವರ್ಗದ ಬಗ್ಗೆ ಧ್ವನಿ ಎತ್ತುವವರು ಯಾರೂ ಇರಲಿಲ್ಲ. ಒಬ್ಬರೇ ಇದ್ದರು, ಅವರು ಬಸವಣ್ಣನವರು. ಅವರು ಇಷ್ಟೆಲ್ಲ ಪ್ರಯೋಗಗಳನ್ನು ಮಾಡಿದರು. ಆದರೂ ಕೊಂಡಿಮಂಚಣ್ಣಾದಿ ಪ್ರಬಲ ಶಕ್ತಿಗಳಿಂದ ತೊಂದರೆ ಆಯ್ತು, ಎಳೆಹೂಟೆ ಶಿಕ್ಷೆ ಆಯ್ತು. ಇವತ್ತು ಶರಣತತ್ವಕ್ಕೆ ರಾಜಬಳಗ ಸಿಕ್ಕಿದೆ. ಅದರ ಮುಂದುವರಿದ ಭಾಗವೇ ನೀವು ಪ್ರಶ್ನೆ ಕೇಳ್ತಿರುವುದು.
ಪಂಡಿತಾರಾಧ್ಯ ಶ್ರೀಗಳು: ಇನ್ನಷ್ಟು ಮುಂದುವರಿದು ಉತ್ತರ ಹೇಳುವುದಾದರೆ ಅವತ್ತೇನಾದರೂ ಬಸವಣ್ಣನವರು ಅಧಿಕಾರದಲ್ಲೇ ಮುಂದುವರಿದಿದ್ದರೆ ಆ ರೀತಿಯ ಶಿಕ್ಷೆ ಆಗ್ತಿರ್ಲಿಲ್ಲ. ಬಸವಣ್ಣನವರು ಅಧಿಕಾರ ತ್ಯಾಗ ಮಾಡಿದ ಕಾರಣದಿಂದಾಗಿ ದುಷ್ಟಶಕ್ತಿಗಳು ಒಂದಾಗಿ ರಾಜನನ್ನು ದುರ್ಬಳಕೆ ಮಾಡಿಕೊಂಡು ಆ ರೀತಿಯ ಅನಾಹುತಕ್ಕೆ ಕಾರಣವಾದವು.

ಶಶಾಂಕ: 12ನೆಯ ಶತಮಾನದಲ್ಲಿ ಶರಣ ಶರಣೆಯರು ವಚನ ಬರೆದರು. ಈಗ ಯಾಕೆ ಬರೆಯಲಾಗುತ್ತಿಲ್ಲ?
ಅಥಣಿ ಶ್ರೀಗಳು: ಬಹಳ ಜನರು ವಚನಗಳನ್ನು ಈಗಲೂ ಬರೆದಿದ್ದಾರೆ. ಆಧುನಿಕ ವಚನಕಾರರು ಎಂದು ಅವರಿಗೆ ಹೇಳ್ತಾರೆ. ಅವರಲ್ಲಿ ನಾನೂ ಇದ್ದೇನೆ.

ಗುರುರಾಜ: ಲಿಂಗಾಯತ ಮತ್ತು ವೀರಶೈವ ಧರ್ಮಕ್ಕಿರುವ ವ್ಯತ್ಯಾಸವೇನು?
ಗದಗ ಶ್ರೀಗಳು: ಶೈವ ಧರ್ಮ ಪ್ರಾಚೀನ ಧರ್ಮ. ಆ ಧರ್ಮವನ್ನು ಯಾರು ಸ್ಥಾಪನೆ ಮಾಡಿದರು ಗೊತ್ತಿಲ್ಲ. ಆ ಶೈವ ಧರ್ಮದ ಶಾಖೆ ವೀರಶೈವ. ಅದಕ್ಕೂ ಯಾರೂ ಸ್ಥಾಪಕರಿಲ್ಲ. ಕೆಲವರು ನಾವು ಸ್ಥಾಪಕರು ಅಂತ ಹೇಳಿಕೊಳ್ಳಬಹುದು. ಲಿಂಗಾಯತವು ವೀರಶೈವ ಧರ್ಮಕ್ಕಿಂತಲೂ ಭಿನ್ನವಾಗಿರುವಂತಹುದು. ಪ್ರಗತಿಪರ, ವೈಚಾರಿಕ ಧರ್ಮ ಲಿಂಗಾಯತ. ಇದರ ಧರ್ಮಗುರು ಬಸವಣ್ಣನವರು. ಶೈವಧರ್ಮದಲ್ಲಿದ್ದ ಕರ್ಮಕಾಂಡವನ್ನು ನಿವಾರಣೆ ಮಾಡಲು, ದೇವರು-ಧರ್ಮದ ಹೆಸರಿನಲ್ಲಿ ನಡೆಯುವ ಶೋಷಣೆಯಿಂದ ಜನರನ್ನು ಮುಕ್ತಗೊಳಿಸಲು ಬಸವಣ್ಣನವರು ಲಿಂಗಾಯತ ಎನ್ನುವ ಪ್ರಗತಿಪರ ಧರ್ಮವನ್ನು ಸ್ಥಾಪಿಸಿದರು. ವೀರಶೈವ ಮಠಗಳಲ್ಲಿ ಸ್ಥಾವರ ಪೂಜೆ ಮಾಡ್ತಾರೆ. ಬಸವಣ್ಣನವರು ‘ಸ್ಥಾವರಕ್ಕಳಿವುಂಟು, ಜಂಗಗಮಕ್ಕಳಿವಿಲ್ಲ’ ಎಂದು ಸ್ಥಾವರ ಪೂಜೆ ವಿರೋಧ ಮಾಡಿದವರು. ಇಷ್ಟಲಿಂಗ ನಿಷ್ಟೆಯನ್ನು ಹೊಂದಿರುವ ಧರ್ಮ ಲಿಂಗಾಯತ ಧರ್ಮ.

ಪಲ್ಲವಿ: ಇತ್ತೀಚಿನ ದಿನಗಳಲ್ಲಿ ತುಳಿಯುವವರ ಮಧ್ಯೆ ನಾವು ಹೇಗೆ ಬೆಳೆಯಬೇಕು?
ಪಂಡಿತಾರಾಧ್ಯ ಶ್ರೀಗಳು: ಸೆಟೆದು ನಿಲ್ಲಬೇಕು.

ಆರತಿ: ಬಸವಣ್ಣನವರ ಕಾಲದಲ್ಲಿ ಜಾತಿಯ ವ್ಯವಸ್ಥೆ ವಿರುದ್ಧ ವಚನ ಚಳುವಳಿ ನಡೆಯಿತು. ಇವತ್ತಿನ ಗುರುಗಳು ಯಾಕೆ ವಚನ ಚಳುವಳಿ ಮಾಡುತ್ತಿಲ್ಲ?
ಅಥಣಿ ಶ್ರೀಗಳು: ವಚನ ಚಳುವಳಿಯ ಒಂದು ಭಾಗವೇ ಬಸವ ಸಂಸ್ಕೃತಿ ಅಭಿಯಾನ. ಈ ಹಿಂದೆ ಪಂಡಿತಾರಾಧ್ಯ ಸ್ವಾಮೀಜಿಯವರು ‘ಮತ್ತೆ ಕಲ್ಯಾಣ’ ಎನ್ನುವ ದೊಡ್ಡ ಚಳುವಳಿ ಮಾಡಿದ್ರು. ಈಗ ಅನೇಕ ಸ್ವಾಮಿಗಳು ಅದೇ ಚಳುವಳಿಯಲ್ಲಿದ್ದಾರೆ. ಅದರ ಮುಂದುವರಿದ ಭಾಗವೇ ಈ ಅಭಿಯಾನ.

ಪ್ರಶ್ನೆ: ಈ ಚಳುವಳಿ ನಿರಂತರವಾಗಿ ಮುಂದುವರಿಯುತ್ತದೆಯೇ?
ಅಥಣಿ ಶ್ರೀಗಳು: ಖಂಡಿತಾಗಿಯೂ ಮುಂದುವರಿಯುತ್ತದೆ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ನಮಗಿರಲಿ.

ಶಟಗಾರ: 12ನೆಯ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಸಂವಿಧಾನದಲ್ಲಿ ಮಾನ್ಯತೆ ದೊರೆತಿದೆಯೇ ಹೇಗೆ? ಸ್ವತಂತ್ರ ಧರ್ಮದ ಸಲುವಾಗಿ ಹೋರಾಟ ನಡೆದಿದೆ. ಅದು ಎಲ್ಲಿಗೆ ಬಂತು?
ಗದಗಿನ ಶ್ರೀಗಳು: 12ನೆಯ ಶತಮಾನದಲ್ಲಿ ಬಸವಣ್ಣನವರು ಸ್ಥಾಪನೆ ಮಾಡಿದ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವೇ. ಅದರಲ್ಲಿ ಎರಡು ಮಾತಿಲ್ಲ. 1871ನೆಯ ಇಸ್ವಿಯವರೆಗೆ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವೇ ಆಗಿತ್ತು. 1881ರ ನಂತರ ಕೆಲವು ಜನರು ಉದ್ದೇಶಪೂರ್ವಕವಾಗಿ ಲಿಂಗಾಯತ ಧರ್ಮವನ್ನು ಹಿಂದೂ ಧರ್ಮದಲ್ಲಿ ಸೇರಿಸಿ, ಲಿಂಗಾಯತರನ್ನು ಶೂದ್ರ ವರ್ಗದಲ್ಲಿ ಪರಿಗಡಣೆ ಮಾಡ್ಲಿಕ್ಕೆ ಪ್ರಾರಂಭಿಸಿದರು. ಅಲ್ಲಿಂದ ಇಲ್ಲಿಯವರೆಗೆ ಅನೇಕ ಜನರು ಲಿಂಗಾಯತ ಸ್ವತಂತ್ರ ಧರ್ಮ ಎಂದು ಬಿಂಬಿಸುವುದಕ್ಕೆ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯಬೇಕು, ಅದು ಮೈನಾರಿಟಿ ಧರ್ಮ, ಅದಕ್ಕೆ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ಕೊಡಿಸಬೇಕು, ಅದಕ್ಕೆ ಸಂವಿಧಾನಾತ್ಮಕ ಸ್ಥಾನ ಪಡೆಯಬೇಕು ಎಂದು ಹೋರಾಟ ನಡೆದಿರುವುದು ತಮಗೆಲ್ಲ ತಿಳಿದ ವಿಷಯವೇ. ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಇದೇ ಕಲ್ಬುರ್ಗಿ ನಗರದಲ್ಲಿ ಅಂಥದೊಂದು ರ್ಯಾಲಿ ನಡೆದಿತ್ತು. ಇವತ್ತು ಕರ್ನಾಟಕ ಸರ್ಕಾರ ಲಿಂಗಾಯತ ಸ್ವತಂತ್ರ ಧರ್ಮ ಎನ್ನುವುದಕ್ಕೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ನೇತೃತ್ವದಲ್ಲಿ ಒಂದು ಸಮಿತಿ ಮಾಡಿ ಅದರಿಂದ ವರದಿಯನ್ನು ತರಿಸಿಕೊಂಡು ಲಿಂಗಾಯತ ಸ್ವತಂತ್ರ ಧರ್ಮ; ಭಾರತ ಸರ್ಕಾರ ಇದಕ್ಕೆ ಮಾನ್ಯತೆ ಕೊಡಬೇಕು ಎಂದು ಸನ್ಮಾನ್ಯ ಮುಖ್ಯಮಂತ್ರಿಗಳಾಗಿರುವ ಸಿದ್ಧರಾಮಯ್ಯನರು ಶಿಫಾರಸ್ ಮಾಡಿದ್ರು. ಅಂದೇ ಲಿಂಗಾಯತ ಅಲ್ಪಸಂಖ್ಯಾತ ಧರ್ಮವಾಗಿ ಪರಿಗಣಿತವಾಗಿದೆ. ಆದರೆ ಇದಕ್ಕೆ ಭಾರತ ಸರ್ಕಾರದ ಮನ್ನಣೆ ಪಡೆಯುವ ಕೆಲಸ ಈಗಲೂ ನಡೆದಿದೆ. ಇನ್ನು ಕೆಲವೇ ದಿನಗಳಲ್ಲಿ ಮತ್ತೆ ಅದನ್ನು ಮರುಪರಿಶೀಲನೆ ಮಾಡ್ಬೇಕು ಎಂದು ಭಾರತ ಸರ್ಕಾರಕ್ಕೆ ಕಳಿಸಿಕೊಡುವ ಯೋಜನೆಯನ್ನು ಕರ್ನಾಟಕ ಸರ್ಕಾರ ಹಾಕಿಕೊಂಡಿದೆ. ಭಾರತ ಸರ್ಕಾರ ಇಂದಿಲ್ಲ ನಾಳೆ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕೊಟ್ಟೆಕೊಡ್ತದೆ ಎನ್ನುವಲ್ಲಿ ಯಾವುದೇ ಸಂದೇಹ ಇಲ್ಲ.

ಸಂಜನಾ: ಬಸವಣ್ಣನವರ ಕಾಲದಲ್ಲಿ ಹೆಣ್ಮಕ್ಕಳಿಗೆ ವಿಶೇಷ ಮಾನ್ಯತೆ ಇತ್ತು. ಆದರೆ ಇವತ್ತಿನ ಕಾಲದಲ್ಲಿ ಹೆಣ್ಮಕ್ಕಳ ಮೇಲೆ ಅತ್ಯಾಚಾರ ನಡಿತಾ ಇದೆ. ಅದಕ್ಕೆ ಏನು ಮಾಡಬೇಕು?
ಪಂಡಿತಾರಾಧ್ಯ ಶ್ರೀಗಳು: ಮಹಿಳೆಯರು ಸಂಘಟಿತರಾಗಿ ಹೋರಾಟ ಮಾಡುವ ಎದೆಗಾರಿಕೆ ಬೆಳೆಸಿಕೊಳ್ಳಬೇಕು. ಅಕ್ಕಮಹಾದೇವಿಯವರು ಹೇಗೆ ಬದುಕಿದರು ಎನ್ನುವುದು ನಿಮಗೆಲ್ಲ ಗೊತ್ತಿದೆ. ‘ಸಾವಕೆಡುವ ಗಂಡರನೊಯ್ದು ಒಲೆಯೊಳಗಿಕ್ಕು’ ಎಂದರು. ಅಕ್ಕನಂತಹ ಗಟ್ಟಿ ನಿಷ್ಠೆ ಇದ್ದು ಎಲ್ಲಿಯಾದರೂ ಅತ್ಯಾಚಾರ, ಅನಾಚಾರ ನಡೆದರೆ ಅದರ ವಿರುದ್ಧ ಹೋರಾಟ ಮಾಡುವ ಎದೆಗಾರಿಕೆ ಮಹಿಳಾ ಸಂಘಟನೆಗಳಲ್ಲಿ ಬಂದರೆ ಅವೆಲ್ಲವೂ ತನ್ನಷ್ಟಕ್ಕೆ ತಾನೇ ನಿಂತುಹೋಗುವವು.

ಸಾಕ್ಷಿ: ದಲಿತರನ್ನು ಬೌದ್ಧ ಮತದಿಂದ ಲಿಂಗಾಯತ ಧರ್ಮಕ್ಕೆ ತರುವ ಪ್ರಯತ್ನ ಮಾಡಿಲ್ಲ; ಯಾಕೆ?
ಪಂಡಿತಾರಾಧ್ಯ ಶ್ರೀಗಳು: ಲಿಂಗಾಯತ ಧರ್ಮ ಮತಾಂತರ ಮಾಡುವುದಲ್ಲ. ಯಾರಿಗೆ ಯಾವ ಧರ್ಮದಲ್ಲಿ ಶ್ರದ್ಧೆ, ನಿಷ್ಠೆ ಇದೆಯೋ ಅವರು ಆ ಧರ್ಮವನ್ನು ಅಪ್ಪಿಕೊಳ್ಳಬಹುದು.

ಗುಂಡಮ್ಮ: ಯಾವುದೇ ಜಾತಿ ತಾರತಮ್ಯ ಮಾಡಬಾರದು ಎಂದು ಬಸವಣ್ಣನವರು ಹೇಳ್ಯಾರ. ಆದರೆ ಲಿಂಗಾಯತ, ವೀರಶೈವ ಅಂತ ಏಕೆ?
ಪಂಡಿತಾರಾಧ್ಯ ಸ್ವಾಮೀಜಿ: ಲಿಂಗಾಯತ ಜಾತಿಯಲ್ಲ, ಅದೊಂದು ತತ್ವ, ಸಿದ್ಧಾಂತ ಪ್ರತಿಪಾದನೆ ಮಾಡುವ ಧರ್ಮ.

ಮಂಜುಳ: ರುದ್ರಾಕ್ಷಿಯ ಮಹತ್ವ ಏನು?
ಭಾಲ್ಕಿ ಶ್ರೀಗಳು: ರುದ್ರಾಕ್ಷಿಯಲ್ಲಿ ಔಷಧಿ ಗುಣವಿದೆ. ಆರೋಗ್ಯ ದೃಷ್ಟಿಯಿಂದ ರುದ್ರಾಕ್ಷಿ ಧರಿಸುವುದು ಒಳ್ಳೆಯದು. ರುದ್ರ ಎಂದರೆ ಶಿವ, ಅಕ್ಷಿ ಎಂದರೆ ಕಣ್ಣು. ಶಿವನ ಕಣ್ಣು, ಅರಿವಿನ ಕಣ್ಣು. ಅರ್ಥ ತಿಳಿಯದೆ ಸಾವಿರ ರುದ್ರಾಕ್ಷಿ ಧರಿಸಿದರೂ ಪ್ರಯೋಜನವಿಲ್ಲ. ರುದ್ರಾಕ್ಷಿಯ ಸಂಕೇತ ಎಂದರೆ ಅರಿವಿನ ಕಣ್ಣನ್ನು ಜಾಗೃತಿ ಮಾಡಿಕೊ ಎಂದು. ಜ್ಞಾನದ ಕಣ್ಣನ್ನು ತೆರೆ. ಆಗ ಎಲ್ಲರ ಹೃದಯದಲ್ಲಿ ಶಿವಸ್ವರೂಪ ಕಾಣ್ತದ. ರುದ್ರಾಕ್ಷಿ ಧಾರ್ಮಿಕ ಸಂಕೇತ. ಭಸ್ಮ ಸಾತ್ವಿಕ ಕಳೆಯನ್ನು ತೋರಿಸುವಂತೆ ರುದ್ರಾಕ್ಷಿ ಅರಿವಿನ ಕಣ್ಣಿನ ಸಂಕೇತ.

ಶಿವಕಾಂತ ಕಾಟೀಲ: ಅಂದಿನ ಸಮಾಜದಲ್ಲಿ ಸಮಾನತೆಗೆ ಹೋರಾಡಿದ ಬಸವೇಶ್ವರರಿಗೆ ದುಷ್ಕರ್ಮಿಗಳು ಬದುಕ್ಲಿಕ್ಕೆ ಬಿಟ್ಟಿಲ್ಲ. ನೀವು ಸಮಾನತೆ ತರ್ಲಿಕ್ಕೆ ಹೋರಾಡ್ತಿದ್ದೀರಿ. ಇದು ಸಾಧ್ಯನಾ?
ಭಾಲ್ಕಿ ಶ್ರೀಗಳು: ಅಂದು ರಾಜಪ್ರಭುತ್ವ ಇತ್ತು. ಇಂದು ಪ್ರಜಾಪ್ರಭುತ್ವ ಇದೆ. ಅಂದಿಗಿಂತಲೂ ಇಂದು ಬಸವತತ್ವ ಜಾರಿಯಲ್ಲಿ ತರ್ಲಿಕ್ಕೆ ಎಲ್ಲ ದೃಷ್ಟಿಯಿಂದಲೂ ಒಳ್ಳೆಯ ವಾತಾವರಣ ಇದೆ.

ಸೃಷ್ಟಿ: ಜೀವನದಲ್ಲಿ ಭಕ್ತಿ ಮಾರ್ಗವನ್ನು ಹೇಗೆ ಅಳವಡಿಸಿಕೊಳ್ಳಬೇಕು?
ಅಥಣಿ ಶ್ರೀ: ಒಳ್ಳೆಯ ಮಾರ್ಗ ಅನುಸರಿಸಿಕೊಂಡು ಹೋಗುವುದೇ ಭಕ್ತಿ ಮಾರ್ಗ.

ಶಿವಶರಣಪ್ಪ: ಕಲ್ಯಾಣದಲ್ಲಿ ದಸರಾ ದರ್ಬಾರ ನಡೆಯುವುದಕ್ಕೆ ತಮ್ಮ ಅಭಿಪ್ರಾಯವೇನು?
ಭಾಲ್ಕಿ ಶ್ರೀಗಳು: ಈಗಾಗಲೇ ನಾವು ಉಗ್ರವಾಗಿ ಪ್ರತಿಭಟನೆ ಮಾಡಿರುವುದರಿಂದ ಅಡ್ಡಪಲ್ಲಕ್ಕಿಯನ್ನು ಶರಣರ ನಾಡಿನಲ್ಲಿ ಮಾಡಬಾರದು ಎಂದು ಒಪ್ಪಿದ್ದಾರೆ. ನಮ್ಮ ಸಭೆ ನಾಳೆ ಇತ್ತು. ಇವತ್ತಿನ ದಿವಸ ಅಡ್ಡಪಲ್ಲಕ್ಕಿ ಮಾಡುವುದಿಲ್ಲ, ವಾಹನದಲ್ಲೇ ಮೆರವಣಿಗೆ ಮಾಡಿಕೊಳ್ತೇವೆ ಅಂತ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಬಸವಣ್ಣನವರ ಬಗ್ಗೆ ಅಪಚಾರದ ಮಾತುಗಳನ್ನಾಡಿದರೆ ಉಗ್ರಪ್ರತಿಭಟನೆ ಮಾಡ್ತೇವೆ ಎಂದು ಹೇಳಿದ್ದೇವೆ. ನಾವು ಅಪಚಾರ ಮಾಡುವುದಿಲ್ಲ ಎಂದು ಈಗಾಗಲೇ ಅವರು ಹಾಲ್ಕೂರು ಶ್ರೀಗಳಿಗೆ ವಚನ ಕೊಟ್ಟಿದ್ದಾರೆ. ಕಲ್ಯಾಣದಲ್ಲಿ ಅಡ್ಡಪಲ್ಲಕ್ಕಿ ಇಲ್ಲ, ಬಸವಣ್ಣನವರ ಬಗ್ಗೆ ಯಾವುದೇ ಅಪಚಾರದ ಮಾತುಗಳನ್ನು ಆಡೊದಿಲ್ಲ ಅನ್ನುವುದು ಘೋಷಣೆ ಆಗಿದೆ. ಏನಾದರೂ ಆದರೆ ನಾವು ನೀವು ಕೂಡಿಯೇ ಪ್ರತಿಭಟನೆ ಮಾಡೋಣ.

ಪ್ರಶ್ನೆ: ಬೆಳಗ್ಗೆ ಟಿವಿಯಲ್ಲಿ ಜ್ಯೋತಿಷ್ಯ ಹೇಳ್ತಾರೆ. ಇದರ ಬಗ್ಗೆ ನಿಮ್ಮ ವಿಚಾರ ಏನು?
ಪಂಡಿತಾರಾಧ್ಯ ಶ್ರೀಗಳು: ಇಷ್ಟೆಲ್ಲ ಆಲೋಚನೆ ಮಾಡುವ ನೀವು ಅದನ್ನು ವಿರೋಧ ಮಾಡುವ ಮನಸ್ಥಿತಿಯನ್ನೂ ಬೆಳೆಸಿಕೊಳ್ಳಬೇಕು. ನೀವು ನೋಡ್ತಿರುವುದರಿಂದ, ಜ್ಯೋತಿಷ್ಯ ಕೇಳ್ತಿರುವುದರಿಂದ ಅವರು ಪ್ರಚಾರ ಮಾಡ್ತಾರೆ. ಅದರಲ್ಲಿ ಸತ್ಯ ಇಲ್ಲ. ಬದಲಾಗಿ ನಿಮ್ಮ ತಲೆಯನ್ನು ಬೋಳಿಸುವ ಕೆಲಸ ನಡಿತಾ ಇದೆ. ‘ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯಾ’ ಎನ್ನುವ ಹಾಗೆ ನಾವು ಜ್ಞಾನಿಗಳಾದರೆ ಅಜ್ಞಾನ ದೂರವಾಗ್ತದೆ.
ವಿದ್ಯಾರ್ಥಿಗಳು ಅರ್ಥಪೂರ್ಣ ಪ್ರಶ್ನೆಗಳನ್ನು ಕೇಳುವ ಮೂಲಕ ತಾವು ಜಾಗೃತರಾಗುವುದಲ್ಲದೆ ಸಾರ್ವಜನಿಕರನ್ನು ಮತ್ತು ಮಠಾಧಿಪತಿಗಳನ್ನು ಸಹ ಜಾಗೃತಗೊಳಿಸುವಲ್ಲಿ ಮುಂದಾಗಿರುವುದು ಗಮನಾರ್ಹ.

Previous post ಮೈಯೆಲ್ಲಾ ಕಣ್ಣಾಗಿ (10)
ಮೈಯೆಲ್ಲಾ ಕಣ್ಣಾಗಿ (10)
Next post ಕಾಲ ಮತ್ತು ದೇಶ
ಕಾಲ ಮತ್ತು ದೇಶ

Related Posts

ಶರಣರು ಕಂಡ ಸಹಜಧರ್ಮ
Share:
Articles

ಶರಣರು ಕಂಡ ಸಹಜಧರ್ಮ

April 29, 2018 ಡಾ. ಶಶಿಕಾಂತ ಪಟ್ಟಣ
‘ಧರ್ಮ’ ಎನ್ನುವ ಪದವು ಸಂಸ್ಕೃತ ಪದದಿಂದ ಬಂದದ್ದು ‘ಧಾರಣಾತ್ ಧರ್ಮಃ’ -ಅಂದರೆ ಯಾವುದನ್ನು ಧರಿಸಲು, ಆದರಿಸಲು ಸಮರ್ಥವಾಗುತ್ತದೆಯೋ ಅದು ಧರ್ಮವೆಂದಾಗುತ್ತದೆ. ಧರ್ಮ ಅಂದರೆ...
ಅಬದ್ಧ ಆರ್ಥಿಕತೆ
Share:
Articles

ಅಬದ್ಧ ಆರ್ಥಿಕತೆ

March 5, 2019 ಡಾ. ಪಂಚಾಕ್ಷರಿ ಹಳೇಬೀಡು
ಅರ್ಥವ್ಯವಸ್ಥೆ ಎಂದರೆ ಸಾಮನ್ಯ ಅರ್ಥದಲ್ಲಿ ಹಣಕಾಸು ನಿರ್ವಹಣೆ. ಒಬ್ಬ ವ್ಯಕ್ತಿಯಿಂದ ಹಿಡಿದು ಗೃಹ, ಗ್ರಾಮ, ರಾಜ್ಯ, ರಾಷ್ಟ್ರಗಳ ನಿರ್ವಹಣೆಯ ತನಕ ಅರ್ಥವ್ಯವಸ್ಥೆಯ ಜಾಡು ಹಬ್ಬಿ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹಾಯ್ಕುಗಳು
ಹಾಯ್ಕುಗಳು
November 10, 2022
ಬೆಳಕಲಿ ದೀಪ
ಬೆಳಕಲಿ ದೀಪ
December 8, 2021
ಗೆರೆ ಎಳೆಯದೆ…
ಗೆರೆ ಎಳೆಯದೆ…
October 13, 2022
ನದಿಯನರಸುತ್ತಾ…
ನದಿಯನರಸುತ್ತಾ…
October 6, 2020
ತಮ್ಮೊಳಗಿರ್ದ ಮಹಾಘನವನರಿಯರು
ತಮ್ಮೊಳಗಿರ್ದ ಮಹಾಘನವನರಿಯರು
May 8, 2024
ಪ್ರಭುವಿನ ಗುರು ಅನಿಮಿಷ -3
ಪ್ರಭುವಿನ ಗುರು ಅನಿಮಿಷ -3
October 21, 2024
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
September 5, 2019
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
April 9, 2021
ಕಾಲ- ಕಲ್ಪಿತವೇ?
ಕಾಲ- ಕಲ್ಪಿತವೇ?
April 11, 2025
ಕಡಕೋಳ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
August 10, 2023
Copyright © 2025 Bayalu