Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗುರುವಿನ ಸಂಸ್ಮರಣೆ
Share:
Articles October 6, 2020 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಗುರುವಿನ ಸಂಸ್ಮರಣೆ

ಕರ್ನಾಟಕದಲ್ಲಿ ಮಠ-ಪೀಠಗಳಿಗೆ, ಸ್ವಾಮಿಗಳಿಗೆ ಕೊರತೆ ಇಲ್ಲ. ಸಾವಿರಾರು ಮಠ-ಪೀಠಗಳು ಈ ನಾಡಿನಲ್ಲಿದ್ದರೂ ಕೆಲವು ಮಠಗಳು ಮಾತ್ರ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸೇವಾಕಾರ್ಯಗಳನ್ನು ತುಂಬಾ ನಿಸ್ಪೃಹತೆಯಿಂದ ಮಾಡಿಕೊಂಡು ಬಂದಿವೆ. ಅಂಥ ಮಠ-ಪೀಠಗಳಲ್ಲಿ ಎಲ್ಲರೂ ಗುರುತಿಸಬಹುದಾದ ಮಾದರಿಯ ಪೀಠ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ. ಈ ಪೀಠದ ಇತಿಹಾಸದ ಸಿಂಹಾವಲೋಕನ ಮಾಡಿದರೆ ಇದರ ಹುಟ್ಟೇ ರೋಮಾಂಚನಕಾರಿಯಾಗಿರುವುದು ತಿಳಿದುಬರುತ್ತದೆ. ಬಸವಾದಿ ಶಿವಶರಣರ ಹಿರಿಯ ಸಮಕಾಲೀನರಾಗಿದ್ದವರು ವಿಶ್ವಬಂಧು ಮರುಳಸಿದ್ಧರು. ಇವರೇ ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಪೀಠದ ಸಂಸ್ಥಾಪಕರು. ಹುಟ್ಟಿನಿಂದ ಮಚ್ಚೆ ಕಾಯಕದವರು. ಅಂದರೆ ಮಾದಿಗ ಜನಾಂಗಕ್ಕೆ ಸೇರಿದವರು. ತಮ್ಮ ಸಾಧನೆ, ಸಂಸ್ಕಾರ, ಜನಪರ ಕಾಳಜಿ ಮತ್ತು ಆತ್ಮಕಲ್ಯಾಣ ಇವುಗಳ ಹಿನ್ನೆಲೆಯಲ್ಲಿ `ವಿಶ್ವಬಂಧು’ ಎಂದು ಗೌರವ ಪಡೆದವರು. ಅವರು ಜನರಲ್ಲಿರುವ ಅಜ್ಞಾನ, ಮೌಢ್ಯ, ಕಂದಾಚಾರ ಇಂತಹ ಅನಿಷ್ಟಗಳನ್ನು ನಿವಾರಣೆ ಮಾಡಿ ಆದರ್ಶ ಬದುಕನ್ನು ಕಟ್ಟಿಕೊಳ್ಳುವುದು ಹೇಗೆ ಎನ್ನುವ ಅರಿವು ಮೂಡಿಸುವ ಕಾರ್ಯವನ್ನು ತುಂಬಾ ಪರಿಣಾಮಕಾರಿಯಾಗಿ ಮಾಡುತ್ತ ಬಂದರು. ತಮ್ಮ ನಂತರವೂ ಇಂಥ ಜಂಗಮ ಕಾರ್ಯ ನಿರಂತರವಾಗಿ ನಡೆಯಬೇಕೆಂದು ತಾವು ಹುಟ್ಟಿ ಬೆಳೆದ ಇಂದಿನ ಕೂಡ್ಲಿಗಿ ತಾಲ್ಲೂಕು ಉಜ್ಜಯಿನಿ ಪಕ್ಕದ ಕಗ್ಗಲ್ಲಪುರದಲ್ಲಿ ಸದ್ಧರ್ಮ ಪೀಠ ಸಂಸ್ಥಾಪಿಸಿದರು. ಕಗ್ಗಲ್ಲಪುರ ಈಗ ಬೇಚರಾಕ್ ಗ್ರಾಮ. ಅಲ್ಲಿ ಬಾಲಕ ಮರುಳಸಿದ್ಧನ ಸಾಕು ತಂದೆ-ತಾಯಿ ಆಗಿದ್ದವರು ಆ ಊರಿನ ಪ್ರಮುಖರಾಗಿದ್ದ ಸಾಧು ಜನಾಂಗದ ಬಾಚನಗೌಡ ಮತ್ತು ಮಲ್ಲಮ್ಮ ದಂಪತಿಗಳು. ಅವರು ಆ ಊರಿನ ಹಿರಿಯರೂ ಹೌದು.
ಮರುಳಸಿದ್ಧರು ತಮ್ಮ ವೃದ್ಧಾವಸ್ಥೆಯಲ್ಲಿ ಸಾಕು ತಂದೆಯಿಂದ ಸದ್ಧರ್ಮ ಪೀಠದ ಸಂಸ್ಥಾಪನೆ ಮಾಡಲು ಭೂಮಿಯನ್ನು ದಾನವಾಗಿ ಬೇಡುವರು. ನಿಮಗೆ ಬೇಕಾದ ಭೂಮಿಯನ್ನು ತೋರಿಸಿ ಎಂದು ಬಾಚನಗೌಡರು ಹೇಳಲು ಮರುಳಸಿದ್ಧರು ಒಂಬತ್ತು ಕಡೆ ಹೆಜ್ಜೆ ಗುರುತಿಟ್ಟು ತೋರಿಸುವರು. ಇವುಗಳ ನಡುವಿನ ಮಧ್ಯಭಾಗ ತಮ್ಮ ಪೀಠ ಸ್ಥಾಪನೆಗೆ ಯೋಗ್ಯವಾದುದು ಎನ್ನುವರು. ಅವರು ಒಂಬತ್ತು ಕಡೆ ಪಾದವಿಟ್ಟದ್ದರ ಸಾಕ್ಷಿಯಾಗಿ ಉಜ್ಜಯಿನಿಯನ್ನೂ ಒಳಗೊಂಡಂತೆ ಒಂಬತ್ತು ಪಾದಗಟ್ಟೆಗಳನ್ನು ನೋಡಬಹುದು. ಉಜ್ಜಯಿನಿಯಲ್ಲಿ ಸದ್ಧರ್ಮ ಪೀಠವನ್ನು ಸ್ಥಾಪನೆ ಮಾಡಿ ತಮ್ಮ ಪ್ರಿಯ ಶಿಷ್ಯ ತೆಲಗುಬಾಳಿನ ಸಿದ್ಧೇಶ್ವರರನ್ನು ಆ ಪೀಠದ ಮೇಲೆ ಕೂರಿಸಿ `ತರಳ ಬಾಳು’ ಎಂದು ಹಾರೈಸುವರು. ಅಲ್ಲಿಂದ ಈ ಪೀಠ `ತರಳಬಾಳು ಜಗದ್ಗುರು ಮಠ’ ಎನ್ನುವ ಪ್ರಸಿದ್ಧಿಯನ್ನು ಪಡೆಯುತ್ತದೆ. `ತರಳ’ ಎಂದರೆ `ಎಳೆಯರು, ಮಕ್ಕಳು’. ಈ ಲೋಕದ ಜನರೆಲ್ಲರೂ ಮಕ್ಕಳಿದ್ದ ಹಾಗೆ. ಅವರ ಬಾಳಿಗೆ ಬೆಳಕು ಲಭ್ಯವಾಗಲಿ, ಅವರ ಬಾಳು ಹಸನಾಗಲಿ ಎನ್ನುವುದು ಶ್ರೀ ಮರುಳಸಿದ್ಧರ `ತರಳಬಾಳು’ ಪಂಚಾಕ್ಷರಿಯ ಮತಿತಾರ್ಥ. ಉಜ್ಜಯಿನಿಯಲ್ಲೇ ತರಳಬಾಳು ಪೀಠ ತನ್ನ ಸೇವಾಕಾರ್ಯಗಳನ್ನು ಮುಂದುವರಿಸುವುದು. ಅಲ್ಲಿ 12ನೆಯ ಪೀಠಾಧ್ಯಕ್ಷರಾಗಿದ್ದ ಜಂಬಪ್ಪ ಒಡೆಯರವರ ಕಾಲದಲ್ಲಿ ನಡೆಯಬಾರದ ದುರಂತ ನಡೆದು ಅಲ್ಲಿಂದ ಜಂಬಪ್ಪದೇವರು ಸಿರಿಗೆರೆಗೆ ಬಂದು ನೆಲೆಸಿದರು.
ಇದುವರೆಗೆ ತರಳಬಾಳು ಜಗದ್ಗುರು ಪೀಠದಲ್ಲಿ 21 ಜನ ಜಗದ್ಗುರುಗಳಾಗಿದ್ದಾರೆ. ಈಗ ಇರುವ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು 21ನೆಯ ಪೀಠಾಧ್ಯಕ್ಷರು. ಇವರಿಗೆ `ತರಳ ಬಾಳು’ ಎಂದು ಹಾರೈಸಿ ಸದ್ಧರ್ಮ ಪೀಠದ ಮೇಲೆ ಕೂರಿಸಿ ತಮ್ಮ ಎಲ್ಲ ಜವಾಬ್ದಾರಿಯನ್ನು ಅವರಿಗೆ ವಹಿಸಿಕೊಟ್ಟವರು 20ನೆಯ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಇವರ ಬದುಕು ತುಂಬಾ ರೋಮಾಂಚನಕಾರಿಯಾದುದು. ಶ್ರೀಗಳು ಸಿರಿಗೆರೆ ಪಕ್ಕದ, ಹೊಳಲ್ಕೆರೆ ತಾಲ್ಲೂಕಿಗೆ ಸೇರಿದ ಮುತ್ತಗದೂರಿನ ಮಹಾದೇವಯ್ಯ-ಬಸಮ್ಮ ದಂಪತಿಗಳಿಗೆ ಮಗುವಾಗಿ ಈ ಭೂಮಿಗೆ ಬಂದವರು. 19ನೆಯ ತರಳಬಾಳು ಜಗದ್ಗುರು ಶ್ರೀ ಗುರುಶಾಂತರಾಜದೇಶಿಕೇಂದ್ರ ಮಹಾಸ್ವಾಮಿಗಳವರ ಕೃಪಾಶೀರ್ವಾದದಿಂದ ತಮ್ಮ ಸಂಸ್ಕೃತ ಶಿಕ್ಷಣವನ್ನು ಕಾಶಿ ಕ್ಷೇತ್ರದಲ್ಲಿ ಪೂರೈಸಿಕೊಳ್ಳುತ್ತಾರೆ. ಅವರ ಬಾಲ್ಯದ ಹೆಸರು ರೇವಣಸಿದ್ಧಯ್ಯ ಎಂದು. ಕಾಶಿಯಲ್ಲಿ ಶಿಕ್ಷಣ ಪಡೆಯುವಾಗಲೇ ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ಯಲಹಂಕ ಮಠದ ಚರಪಟ್ಟಾಧ್ಯಕ್ಷರಾಗಿ ಆಯ್ಕೆಯಾಗುವರು. 1933ರಲ್ಲಿ ಯಲಹಂಕ ಮಠದಲ್ಲಿ ಅವರಿಗೆ ಪಟ್ಟಾಭಿಷೇಕವಾಗುತ್ತದೆ. ಆಗ ಅವರ ಹೆಸರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ಎಂದು ಬದಲಾಗುತ್ತದೆ. ಆ ಸಂದರ್ಭದಲ್ಲಿ ಸಿರಿಗೆರೆ ಅಥವಾ ಯಲಹಂಕ ಮಠಗಳೆರಡೂ ಆರ್ಥಿಕವಾಗಿ ತುಂಬಾ ದುಸ್ಥಿತಿಯಲ್ಲಿದ್ದವು. ಸಾಮಾಜಿಕ ಸಂಘಟನೆ ಇರಲಿಲ್ಲ. ಸಿರಿಗೆರೆಯಲ್ಲಿದ್ದ ಶ್ರೀ ಗುರುಶಾಂತರಾಜದೇಶಿಕೇಂದ್ರ ಮಹಾಸ್ವಾಮಿಗಳು ಹೆಸರೇ ಹೇಳುವಂತೆ ತುಂಬಾ ಶಾಂತಮೂರ್ತಿಗಳು. ಸಾತ್ವಿಕ ಸ್ವಭಾವದವರು. `ಆರೇನಂದರೂ ಓರಂತಿಪ್ಪುದೇ ಸಮತೆ’ ಎನ್ನುವ ಹಾಗೆ ಸದಾ ಸಮತೆಯನ್ನು ಕಾಪಾಡಿಕೊಂಡು ಬಂದವರು. ಇಂಥ ನಿರುಪದ್ರವಿ ಗುರುವಿಗೆ ಸಿರಿಗೆರೆ ಮಠದಲ್ಲಿರುವ ಕೆಲವು ದುಷ್ಟಶಕ್ತಿಗಳು ಮಜ್ಜಿಗೆಯಲ್ಲಿ ವಿಷ ಬೆರಸಿ ಅವರು ಈ ಲೋಕವನ್ನು ದೈಹಿಕವಾಗಿ ತ್ಯಜಿಸುವಂತೆ ಮಾಡುವರು.
ಯಲಹಂಕದಲ್ಲಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳಿಗೆ ತಮ್ಮ ಪರಮಾರಾಧ್ಯ ಗುರುಗಳ ದುರ್ಮರಣ ವಾರ್ತೆ ಎಲ್ಲಿಲ್ಲದ ಆಘಾತವನ್ನುಂಟುಮಾಡುವುದು. ಅವರ ಅಂತಿಮ ಸಂಸ್ಕಾರಕ್ಕೆ ಬಂದಾಗ ಪೂಜ್ಯರ ಸಾವಿನ ಹಿಂದಿನ ವಿದ್ಯಮಾನಗಳನ್ನು ತಿಳಿದು ಮಠದಲ್ಲಿರುವ ದುಷ್ಟಶಕ್ತಿಗಳನ್ನು ಸಮಾಜಬಾಂಧವರ ಸಹಕಾರದಿಂದ ಹೊರಹಾಕುವರು. ಸಮಾಜದ ಮುಖಂಡರು ಮುಂದಿನ ಉತ್ತರಾಧಿಕಾರಿಯ ಆಯ್ಕೆ ಮಾಡಿ ಅವರ ಪಟ್ಟವಾಗುವವರೆಗೂ ಈ ಮಠದ ಜವಾಬ್ದಾರಿಯನ್ನು ತಾವೇ ನೋಡಿಕೊಳ್ಳಬೇಕು ಎಂದು ಮನವಿ ಮಾಡಿಕೊಳ್ಳುವರು. ಅವರ ಮನವಿಯ ಮೇರೆಗೆ ಸಿರಿಗೆರೆ ಮತ್ತು ಯಲಹಂಕ ಈ ಎರಡೂ ಮಠಗಳ ಜವಾಬ್ದಾರಿ ನಿರ್ವಹಿಸುವರು. ಆದರೆ ಕುತಂತ್ರಿಗಳು ಒಳಗೊಳಗೇ ಕುತಂತ್ರ ಮಾಡುತ್ತ ಶಿವಕುಮಾರ ಸ್ವಾಮಿಜಿವರನ್ನು ಆದಷ್ಟು ಬೇಗ ಸಿರಿಗೆರೆಯಿಂದ ಓಡಿಸುವ ಚಿಂತನೆ ಮಾಡುತ್ತಿರುತ್ತಾರೆ. ಗುರುಗಳು ಹೇಡಿಗಳಾಗದೆ ಧೀರೋದಾತ್ತ ನಾಯಕರ ಹಾಗೆ ಬಂದದ್ದೆಲ್ಲವನ್ನೂ ಆತ್ಮಸ್ಥೈರ್ಯದಿಂದ ಎದುರಿಸಿದರು. ಸಾಮ, ದಾನ, ಭೇದ, ದಂಡ ಹೀಗೆ ಬೇರೆ ಬೇರೆ ಪ್ರಯೋಗಗಳನ್ನು ಮಾಡುತ್ತ ಯಾರಿಗೆ ಹೇಗೆ ಬುದ್ಧಿ ಕಲಿಸಬೇಕೋ ಹಾಗೆ ಬುದ್ಧಿ ಕಲಿಸುತ್ತ ಬಂದರು. ಅವರು ಆಗ ಸದಾ ತಮ್ಮ ಬಳಿ ಒಂದು ಪಿಸ್ತೂಲನ್ನು ಇಟ್ಟುಕೊಂಡು ಓಡಾಡುತ್ತಿದ್ದರು ಎಂದರೆ ಅಂದಿನ ವಾತಾವರಣ ಎಷ್ಟು ಭಯಾನಕವಾಗಿತ್ತೆಂದು ವಿವರಿಸುವ ಅಗತ್ಯವಿಲ್ಲ. ಇವರ ದೂರದೃಷ್ಟಿ, ಸಾಮಾಜಿಕ ಕಳಕಳಿ ಮತ್ತು ವಿದ್ವತ್ತನ್ನು ಗಮನಿಸಿದ ಸಮಾಜದ ಹಿರಿಯರು ಸಿರಿಗೆರೆ ಪೀಠಕ್ಕೆ ಇವರೇ ಅರ್ಹರು ಎಂದು ನಿರ್ಣಯಿಸಿ 1940 ಮೇ 10ರ ಬಸವ ಜಯಂತಿಯಂದು ಶ್ರೀ ತರಳಬಾಳು ಜಗದ್ಗುರು ಪೀಠಕ್ಕೆ 20ನೆ ಪೀಠಾಧ್ಯಕ್ಷರನ್ನಾಗಿ ನೇಮಕ ಮಾಡುವರು.
ಒಂದು ಪೀಠದ ಜಗದ್ಗುರು ಆಗುವುದೆಂದರೆ ಯಾರಿಗಾದರೂ ಸಂತೋಷವೇ. ಏಕೆಂದರೆ ಏನೆಲ್ಲ ಸೌಲಭ್ಯಗಳಿರುತ್ತವೆ ಎಂದು. ಆದರೆ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಜಗದ್ಗುರುಗಳಾದರೂ ಸಿರಿಗೆರೆಯಲ್ಲಿ ಅವರಿಗೆ ಯಾವ ಮೂಲಭೂತ ಸೌಲಭ್ಯಗಳೂ ಇರಲಿಲ್ಲ. ಅವರಿಗೆ ಆ ಪೀಠದ ಜವಾಬ್ದಾರಿ ಹೂವಿನ ಪಲ್ಲಕ್ಕಿಯಾಗದೆ ಮುಳ್ಳಿನ ಹಾಸಿಗೆಯ ಮೇಲೆ ಮಲಗಿದಂತಾಗಿತ್ತು. ಒಂದೆಡೆ ಆಂತರಿಕ ವೈರಿಗಳು, ಮತ್ತೊಂದೆಡೆ ಬಾಹ್ಯ ಶತ್ರುಗಳು. ಮಠದಲ್ಲಿ ಯಾವುದೇ ಆರ್ಥಿಕ ಸೌಲಭ್ಯಗಳೂ ಇರಲಿಲ್ಲ. ಜನರಲ್ಲಿ ಸಂಘಟನೆಯೂ ಇರಲಿಲ್ಲ. ಶೈಕ್ಷಣಿಕವಾಗಿ ಜನರು ತುಂಬಾ ಹಿಂದುಳಿದವರು. ಇವುಗಳನ್ನೆಲ್ಲ ಹೇಗೆ ಸರಿಪಡಿಸಬೇಕು… ಸಮಾಜವನ್ನು ಯಾವ ದಾರಿಯಲ್ಲಿ ನಡೆಸಿಕೊಂಡು ಹೋಗಬೇಕು… ಎಂದು ಅವರು ತುಂಬಾ ಆಳವಾಗಿ ಚಿಂತನ-ಮಂಥನ ನಡೆಸುವರು. ಆಗ ಅವರಿಗೆ ಹೊಳೆದದ್ದು ಮೊದಲು ನಮ್ಮ ಜನರಿಗೆ ಶಿಕ್ಷಣ ನೀಡಬೇಕು ಎಂದು. ಅದು ಲೌಕಿಕ ಶಿಕ್ಷಣವೂ ಹೌದು, ಪಾರಮಾರ್ಥಿಕ ಶಿಕ್ಷಣವೂ ಹೌದು, ವ್ಯಾವಹಾರಿಕ ಶಿಕ್ಷಣವೂ ಹೌದು. ನಮ್ಮ ಮಕ್ಕಳಿಗೆ ವ್ಯಾವಹಾರಿಕ, ಔದ್ಯೋಗಿಕ, ಪಾರಮಾರ್ಥಿಕ ಶಿಕ್ಷಣ ನೀಡಬೇಕು ಎಂದು 1937ನೆಯ ದಿನಚರಿಯಲ್ಲೇ ಬರೆದದ್ದು ಅವರ ಶಿಕ್ಷಣ ಕುರಿತ ಚಿಂತನೆಯ ಪರಿಣಾಮವನ್ನು ತೋರುವುದು. ವಿದ್ಯಾರ್ಥಿಗಳಿಗೆ ವ್ಯಾವಹಾರಿಕ, ಔದ್ಯೋಗಿಕ ಮತ್ತು ಪಾರಮಾರ್ಥಿಕ ಶಿಕ್ಷಣ ದೊರೆತಾಗ ಮಾತ್ರ ಅವರು ಅರ್ಥಪೂರ್ಣ ಜೀವನ ಸಾಗಿಸಲು ಸಾಧ್ಯ ಎನ್ನುವುದು ಶ್ರೀಗಳವರ ಚಿಂತನೆಯಾಗಿತ್ತು. ಹಾಗಾಗಿ ಸಿರಿಗೆರೆಯಲ್ಲಿ 1946ರಲ್ಲೇ `ವಿವಿದೋದ್ದೇಶ ಪ್ರೌಢಶಾಲೆ’ಯನ್ನು ಪ್ರಾರಂಭ ಮಾಡಿದರು. ಆ ಶಾಲೆಯ ಮೂಲಕ ಎಲ್ಲ ರೀತಿಯ ಶಿಕ್ಷಣವನ್ನು ನೀಡುತ್ತ ಬಂದರು. ಗುರುಗಳಿಗೆ ಅಷ್ಟಕ್ಕೇ ತೃಪ್ತಿಯಾಗಲಿಲ್ಲ. ಕೇವಲ ಸಿರಿಗೆರೆಯಲ್ಲಿ ಮಾತ್ರ ಶಾಲೆ ತೆರೆದರೆ ಸಾಲದು ಎಂದು ಕರ್ನಾಟಕದ ಬೇರೆ ಬೇರೆ ಊರುಗಳಲ್ಲಿ ಪ್ರೌಢಶಾಲೆಗಳನ್ನು ಮತ್ತು ಅದಕ್ಕೆ ಹೊಂದಿಕೊಂಡಂತೆ ಉಚಿತ ಪ್ರಸಾದ ನಿಲಯಗಳನ್ನು ಪ್ರಾರಂಭಿಸಿದರು.
1962ರಲ್ಲಿ `ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ (ರಿ)’ಯನ್ನು ಅಧಿಕೃತವಾಗಿ ನೊಂದಾಯಿಸಿದರು. ಅಲ್ಲಿಂದ 1979ರವರೆಗೆ ಸುಮಾರು 150ಕ್ಕಿಂತ ಹೆಚ್ಚು ಪ್ರೌಢ ಶಾಲೆಗಳು, ಜೂನಿಯರ್ ಕಾಲೇಜುಗಳು, ಪದವಿ ಕಾಲೇಜುಗಳು ಮತ್ತು ಒಂದು ಬಿಇಡಿ ಕಾಲೇಜು ಹಾಗೂ ಪ್ರಸಾದನಿಲಯಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ತೆರೆದರು. ಸರ್ಕಾರ ಎಲ್ಲಿ ಶಾಲಾ-ಕಾಲೇಜುಗಳನ್ನು ತೆರೆದಿರಲಿಲ್ಲವೋ, ಆಧುನಿಕ ನಾಗರಿಕ ಸೌಲಭ್ಯಗಳಿರಲಿಲ್ಲವೋ ಅಂತಹ ಗ್ರಾಮೀಣ ಪ್ರದೇಶಗಳಲ್ಲಿ ಆ ಸಂಸ್ಥೆಗಳನ್ನು ತೆರೆದು ಅಲ್ಲಿಯ ಬಡಮಕ್ಕಳಿಗೆ ಅದರಲ್ಲೂ ಹೆಣ್ಣುಮಕ್ಕಳಿಗೆ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಿಕೊಟ್ಟರು. ಅವರು ಪ್ರಾರಂಭ ಮಾಡಿದ ಈ ಶಿಕ್ಷಣ ಸಂಸ್ಥೆಗಳಲ್ಲಿ ಅನೇಕ ಗ್ರಾಮೀಣ ಪ್ರತಿಭೆಗಳು ಶಿಕ್ಷಣ ಪಡೆದು ಇವತ್ತು ದೇಶ-ವಿದೇಶಗಳಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಹಾಗೆ ಈ ಸಂಸ್ಥೆಯಿಂದ ಶಿಕ್ಷಣ ಪಡೆದ ಸಹಸ್ರ ಸಹಸ್ರ ವಿದ್ಯಾರ್ಥಿಗಳಲ್ಲಿ ನಾವೂ ಒಬ್ಬರು. ಈ ಸಂಸ್ಥೆಯ ಶಾಲಾ-ಕಾಲೇಜುಗಳು ಇಲ್ಲದಿದ್ದರೆ ನಾವಾಗಲಿ, ನಮ್ಮಂತಹ ಅನೇಕ ಗ್ರಾಮೀಣ ಬಡಮಕ್ಕಳಾಗಲಿ ಓದಲು ಸಾಧ್ಯವಾಗುತ್ತಿರಲಿಲ್ಲ. ಶಿಕ್ಷಣಕ್ಕೆ ಬಹಳ ಮಹತ್ವ ಕೊಟ್ಟ ಮೊದಲ ಗುರುಗಳು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಶಿಕ್ಷಣದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಕಾಯಕ ಮಾಡುತ್ತ ಸಿರಿಗೆರೆಯ ಮಠಕ್ಕೆ ನೈತಿಕ ನೆಲೆಗಟ್ಟನ್ನು, ಆರ್ಥಿಕ ಭದ್ರತೆಯನ್ನು, ಸಾಮಾಜಿಕ ಸಂಘಟನೆಯನ್ನು ತಂದುಕೊಟ್ಟರು. ಮೊದಲೇ ಹೇಳಿದಂತೆ ಅವರು ಈ ಪೀಠಕ್ಕೆ ಬಂದಾಗ ಇದು ಅವರಿಗೆ ಹೂವಿನ ಪಲ್ಲಕ್ಕಿಯಾಗದೆ ಮುಳ್ಳಿನ ಹಾಸಿಗೆಯಾಗಿತ್ತು. ಅಲ್ಲಿಂದಲೇ ಅವರು ಛಲವನ್ನು ಮೈಗೂಡಿಸಿಕೊಂಡು ತಮ್ಮ ಹೋರಾಟ ಪ್ರಾರಂಭಿಸಿದರು. ಅವರಿಗೆ ಸಬಲವಾದ ಸಂಕಲ್ಪಶಕ್ತಿ ಮತ್ತು ಇಚ್ಛಾಶಕ್ತಿ ಇತ್ತು. ಏನಾದರೂ ಮಾಡಬೇಕು ಅಂದುಕೊಂಡರೆ ಅವರು ಅದರಲ್ಲಿ ಖಂಡಿತ ವಿಫಲರಾಗುತ್ತಿರಲಿಲ್ಲ.
ಗುರುಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರ ಸಾಧನೆ ಮಾಡಿದ್ದಾರೆಂದು ಭಾವಿಸಿಕೊಳ್ಳುವ ಅಗತ್ಯವಿಲ್ಲ. `ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ಅವರು ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಕಷ್ಟು ಪರಿವರ್ತನೆ ತಂದರು. ಜನರು ಧರ್ಮಮಾರ್ಗವನ್ನು ಬಿಟ್ಟು ಕೇವಲ ಲೌಕಿಕ ವ್ಯವಹಾರಗಳಲ್ಲೇ ಮುಳುಗಿ ತಮ್ಮ ಬದುಕನ್ನು ನರಕ ಮಾಡಿಕೊಂಡದ್ದನ್ನು ಗಮನಿಸಿದ್ದ ಗುರುಗಳು ಅಂಥವರಿಗೆ ಲಿಂಗದೀಕ್ಷೆಯನ್ನು ಕರುಣಿಸುವ ಮೂಲಕ ನೈತಿಕ ನೆಲೆಗಟ್ಟು ಕುಸಿಯಬಾರದು ಎಂದು ಎಚ್ಚರಿಸುವ ಕಾರ್ಯ ಮಾಡಿದರು. ಅದಕ್ಕಾಗಿಯೇ `ಸರ್ವಶರಣ ಸಮ್ಮೇಳನ’ ಪ್ರಾರಂಭ ಮಾಡಿದರು. ಈ ಪರಿಕಲ್ಪನೆ ಹೊಸದು. ಜನರು ಸೇರಿದಲ್ಲಿ ಶರಣರ ವಿಚಾರಗಳನ್ನು ತಿಳಿಸುವುದೇ `ಸರ್ವಶರಣ ಸಮ್ಮೇಳನ’. ಸರ್ವಶರಣರ ಸಮ್ಮೇಳನಗಳಲ್ಲದೆ ಜನರನ್ನು ಜಾಗೃತಗೊಳಿಸಲು `ಅಣ್ಣನ ಬಳಗ’, `ಅಕ್ಕನ ಬಳಗ’, `ತರಳಬಾಳು ಕಲಾಸಂಘ’ ಇಂಥ ಸಂಸ್ಥೆಗಳನ್ನು ಪ್ರಾರಂಭ ಮಾಡಿದರು.
ಅಕ್ಕನ ಬಳಗದ ಮೂಲಕ ಶರಣರ ವಚನಗಳನ್ನು ಹಾಡಿಸುವ ಪದ್ಧತಿಯನ್ನು ಜಾರಿಯಲ್ಲಿ ತಂದರು. ಅಣ್ಣನ ಬಳಗದ ಮೂಲಕ ಶರಣರ ಜಯಂತಿಗಳನ್ನು ಆಚರಿಸುವ ಹೊಸ ಪರಂಪರೆ ಪ್ರಾರಂಭಿಸಿದರು. ಕರ್ನಾಟಕದಲ್ಲಿ ವರ್ಷದುದ್ದಕ್ಕೂ ಅನೇಕ ಹಬ್ಬ ಹುಣ್ಣಿಮೆಗಳನ್ನು ಮಾಡುವುದು ಸಹಜ. ಅಂಥ ಹಬ್ಬಗಳಿಗೆ ಬೇರೆ ಬೇರೆ ಶರಣರ ಹೆಸರಿನಲ್ಲಿ ಜಯಂತಿಗಳನ್ನು ಆಚರಿಸುವ ಮೂಲಕ ಶರಣರ ಆದರ್ಶ ಬದುಕನ್ನು ಸಮಾಜಕ್ಕೆ ಪರಿಚಯಿಸುತ್ತ ಬಂದರು. ಶರಣರ ವಿಚಾರಗಳನ್ನು ಎಲ್ಲ ವರ್ಗದ ವಿದ್ಯಾವಂತ, ಅವಿದ್ಯಾವಂತ ಜನರಿಗೆ ಮುಟ್ಟಿಸುವ ಸದುದ್ದೇಶದಿಂದ ನಾಟಕಗಳನ್ನು ಪ್ರಾರಂಭಿಸಿದರು. `ಮರಣವೇ ಮಹಾನವಮಿ’, `ಶರಣಸತಿ ಲಿಂಗಪತಿ’, `ವಿಶ್ವಬಂಧು ಮರುಳಸಿದ್ಧ’, `ಶಿವಕುಲ’ ನಾಟಕಗಳನ್ನು ಅವರೇ ರಚಿಸಿ ತರಳಬಾಳು ಕಲಾಸಂಘದ ಮೂಲಕ ಅವುಗಳ ಸಾವಿರಾರು ಪ್ರದರ್ಶನಗಳನ್ನು ಕರ್ನಾಟಕದ ಒಳ-ಹೊರಗೆ ಕೊಡುವಂತೆ ಮಾಡಿದರು. ತರಳಬಾಳು ಪ್ರಕಾಶನದ ಮೂಲಕ ಶರಣರ ವಿಚಾರಗಳಿಗೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳನ್ನು ಪ್ರಕಟಣೆ ಮಾಡಿದರು. ಇಷ್ಟಕ್ಕೇ ತೃಪ್ತರಾಗದೆ ಶರಣರ ಕ್ಷೇತ್ರಗಳಿಗೆ ಪ್ರವಾಸ ಏರ್ಪಡಿಸುವ ಮೂಲಕ ಆ ಕ್ಷೇತ್ರಗಳ ಪರಿಚಯವನ್ನು ಮಾಡಿಕೊಡುತ್ತ ಬಂದರು.
ಇನ್ನು ಮಠದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿದ್ದು ಭಕ್ತರನ್ನು ದುಡಿಮೆಗಾರರನ್ನಾಗಿ ಮಾಡುವ ಮೂಲಕ. ಅವರು ಭಕ್ತರಿಗೆ ಹೇಳುತ್ತಿದ್ದುದು ನಿಮ್ಮ ಮನೆಯಲ್ಲಿ ನಾಲ್ಕು ಜನ ಮಕ್ಕಳಿದ್ದರೆ ಅವರನ್ನು ಬೇರೆ ಬೇರೆ ಕಾಯಕದಲ್ಲಿ ತೊಡಿಗಿಸಬೇಕು ಎಂದು. ನಮ್ಮಲ್ಲಿ ಹೇಗಿದೆ? ತಂದೆ ಯಾರದೋ ಮನೆಯಲ್ಲಿ ಸಂಬಳ ಇದ್ದರೆ ಮಕ್ಕಳೂ ಸಂಬಳ ಇರಬೇಕು. ತಂದೆ ವ್ಯವಸಾಯಗಾರನಾಗಿದ್ದರೆ ಮಕ್ಕಳೂ ವ್ಯವಸಾಯಗಾರರಾಗಬೇಕು. ತಂದೆ ಓದಿ ಉದ್ಯೋಗದಲ್ಲಿದ್ದರೆ ಮಕ್ಕಳೂ ಓದಿ ತಂದೆಯಂತೆ ನೌಕರಿ ಮಾಡಬೇಕು. ಗುರುಗಳು ಶಿಷ್ಯರಿಗೆ ಕರೆ ಕೊಟ್ಟದ್ದು ಒಬ್ಬ ವ್ಯವಸಾಯ ಮಾಡಲಿ. ಇನ್ನೊಬ್ಬ ಸರ್ಕಾರಿ ಉದ್ಯೋಗ ಮಾಡಲಿ. ಮತ್ತೊಬ್ಬ ವ್ಯಾಪಾರ ಮಾಡಲಿ. ಇನ್ನೊಬ್ಬ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಲಿ. ಹೀಗೆ ನಾಲ್ಕು ಜನರೂ ಬೇರೆ ಬೇರೆ ಉದ್ಯೋಗ ಮಾಡುತ್ತಿದ್ದರೆ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತದೆ. ಭಕ್ತರ ಆರ್ಥಿಕ ಸ್ಥಿತಿ ಸುಧಾರಣೆ ಆದರೆ ಪರೋಕ್ಷವಾಗಿ ಮಠದ ಆರ್ಥಿಕ ಸ್ಥಿತಿಯೂ ಸುಧಾರಣೆಯಾಗುತ್ತದೆ ಎನ್ನುವ ದೂರದೃಷ್ಟಿ ಗುರುಗಳದಾಗಿತ್ತು. ಹಾಗಾಗಿ ಭಕ್ತರಿಗೆ ಅಡಕೆ, ತೆಂಗು, ಬಾಳೆ ಮತ್ತಿತರ ತೋಟ ಮಾಡಲು; ವಿವಿಧ ರೀತಿಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ ನೀಡುತ್ತ ಬಂದರು. ರಾಜಕಾರಣದಲ್ಲಿ ಮುಂದೆ ಬರುವಂತೆ ಬೆಂಬಲಿಸಿದರು. ವ್ಯಾಪಾರ, ಸರ್ಕಾರಿ ಉದ್ಯೋಗದಲ್ಲಿ ಸಹ ತೊಡಗುವಂತೆ ಮಾಡಿದರು. ಅದರ ಪರಿಣಾಮವಾಗಿ ಶಿಷ್ಯರ ಆರ್ಥಿಕ ಸ್ಥಿತಿ ಸುಧಾರಣೆ ಆಗುವುದರೊಂದಿಗೆ ಮಠದ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಣೆಯಾಯ್ತು. ದುಗ್ಗಾಣಿ ಮಠ ಎನ್ನುವ ಅಪಖ್ಯಾತಿ ಮರೆಯಾಗಿ ದುಡಿಯುವ ಮಠವಾಯ್ತು. ಅಗೌರವದಿಂದ ಕಾಣುವಂಥವರೇ ಗುರುಗಳನ್ನು ಗೌರವದಿಂದ ಕಾಣುವ ವಾತಾವರಣವನ್ನು ನಿರ್ಮಾಣ ಮಾಡಿದರು.
ನಮ್ಮ ಗುರುಗಳಿಗೆ ಅನೇಕ ಮೂಕರ್ಜಿಗಳು ಬರುತ್ತಿದ್ದವು. ಅಂಥ ಮೂಕರ್ಜಿಗಳಲ್ಲಿ ಒಂದನ್ನು ಅವರು ಆಗಾಗ ಪ್ರಸ್ತಾಪ ಮಾಡುತ್ತಿದ್ದರು. ಒಬ್ಬ ವಿರೋಧಿ ಬರೆದಿರುವ ಪತ್ರ: ನಿನ್ನಂತಹ ಸ್ವಾಮಿ ನಮ್ಮ ಮಠಕ್ಕೇನಾದರೂ ಸಿಕ್ಕಿದ್ದರೆ ನಿನಗೆ ಒಂದು ಕೈ ತೋರಿಸ್ತಿದ್ವಿ. ಇದನ್ನೇ ಗುರುಗಳು ಭಕ್ತರಿಗೆ ಖುಷಿಯಿಂದ ತೋರಿಸುತ್ತ ನೋಡಿಲ್ಲಿ ನಮ್ಮ ವಿರೋಧಿಗಳು ನೀಡಿರುವ ಪ್ರಶಸ್ತಿ ಪತ್ರ ಎನ್ನುತ್ತಿದ್ದರು. ವೈರಿಗಳೂ ಮೆಚ್ಚುವ ರೀತಿಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡವರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಅವರಿಗೆ ಹಗಲು-ರಾತ್ರಿ ಎನ್ನುವುದೇ ಗೊತ್ತಿರಲಿಲ್ಲ. ಯಾವಾಗಲೂ ಭಕ್ತರ ಜೊತೆ ಸಮಾಲೋಚನೆ, ಸಾಮಾಜಿಕ ಸೇವಾಕಾರ್ಯಗಳು, ಪ್ರವಾಸ, ಆಡಳಿತದ ನಿರ್ವಹಣೆ, ಪಂಚಾಯತಿ, ಅಧ್ಯಯನ, ಬರವಣಿಗೆ ಇಂಥವುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಹಾಗಾಗಿ ಅವರನ್ನು ಯಾವ ಸಂದರ್ಭದಲ್ಲಿ ಬೇಕಾದರೂ ಕಾಣಲು ಅವಕಾಶವಿತ್ತು. ಅವರದು ಒಂದು ರೀತಿಯಲ್ಲಿ ಬಯಲಂಗಡಿ ವ್ಯಾಪಾರ ಇದ್ದಂತೆ. ಅವರಿರುವ ವಾಸದ, ಪೂಜೆಯ ಇಲ್ಲವೇ ಆಫೀಸಿನ ಬಾಗಿಲು ಸದಾ ತೆರೆದಿರುತ್ತಿತ್ತು. ಗುರುಗಳು ಸಿರಿಗೆರೆಯಲ್ಲಿದ್ದರೆ ಯಾವ ವೇಳೆಯಲ್ಲಾದರೂ ಜನರು ಅವರಲ್ಲಿಗೆ ಬಂದು ತಮ್ಮ ನೋವು-ನಲಿವುಗಳನ್ನು ಹಂಚಿಕೊಳ್ಳಲು ಅವಕಾಶವಿತ್ತು. ತಕ್ಷಣ ಅವರು ಅದಕ್ಕೆ ಪ್ರತಿಸ್ಪಂಧನೆ ನೀಡುತ್ತಿದ್ದರು. ಯಾರೋ ಬಂದು ಊರಲ್ಲಿ ಹೊಡೆದಾಟ ಆಗಿದೆ; ಅದಕ್ಕಾಗಿ ಪೋಲಿಸರಿಗೆ ಇಲ್ಲವೇ ರಾಜಕಾರಣಿಗಳಿಗೆ ಹೇಳಬೇಕು ಎಂದರೆ ನೋಡೋಣ, ಮಾಡೋಣ, ಹೇಳೋಣ ಎನ್ನುತ್ತಿರಲಿಲ್ಲ. ತಕ್ಷಣ ಪೋನ್ ತೆಗೆದುಕೊಂಡು ಯಾರಿಗೆ ಏನೇನು ಹೇಳಬೇಕೋ ಅದನ್ನು ಹೇಳುತ್ತಿದ್ದರು. ಸಮಸ್ಯೆಗಳನ್ನು ಆ ಕೂಡಲೇ ನಿವಾರಣೆ ಮಾಡುವ ಮನಸ್ಥಿತಿ ಅವರದಾಗಿತ್ತು. ನಾಳೆ ನಾಳೆಗೆಂದು ಯಾವುದನ್ನೂ ಮುಂದೂಡುವ ಮನಸ್ಸು ಅವರದಾಗಿರಲಿಲ್ಲ. ಹಾಗಾಗಿ ಅಲ್ಪಾವಧಿಯಲ್ಲೇ ಅದ್ಭುತ ಸಾಧನೆಯನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಅವರು ಮಾಡಲು ಸಾಧ್ಯವಾಯ್ತು.
ಗುರುಗಳ ಬದುಕು ಪಾರದರ್ಶಕವಾಗಿತ್ತು. ಅವರು ಯಾರ ಬಗ್ಗೆಯೂ ದ್ವೇಷ ಬೆಳೆಸಿಕೊಂಡವರಲ್ಲ. ಪ್ರೀತಿಯೇ ಅವರ ಬದುಕಿನ ಬಂಡವಾಳವಾಗಿತ್ತು. ತಮ್ಮನ್ನು ವಿರೋಧ ಮಾಡಿದವರನ್ನು ಸಹ ಪ್ರೀತಿಸುವ ಮೂಲಕ ಅವರ ಮನಸ್ಸಿನ ಪರಿವರ್ತನೆ ಮಾಡುತ್ತಿದ್ದರು. ಇದೇ ಇವತ್ತು ಎಲ್ಲರಿಗೂ ಬೇಕಾಗಿರುವ ತತ್ವ. ಅವರಿಗೆ ಅಪಾರ ತಾಳ್ಮೆ ಇತ್ತು. ಹಾಗಂತ ಅವರಿಗೆ ಸಿಟ್ಟು, ಕೋಪ ಬರುತ್ತಿರಲಿಲ್ಲವೇ ಎಂದರೆ ಅವರಷ್ಟು ಸಿಟ್ಟು, ಕೋಪ ಬೇರೆಯವರಿಗೆ ಬರಲಾರದು ಎನಿಸುತ್ತದೆ. ಅವರ ಮನಸ್ಸು ವಜ್ರದಷ್ಟೇ ಕಠೋರ ಮತ್ತು ಕುಸುಮದಷ್ಟೇ ಕೋಮಲ. ಈ ಕಾರಣದಿಂದಲೇ ಭಕ್ತರಿಗೆ ಆ ಗುರುಗಳ ಬಗ್ಗೆ ವಿಶೇಷ ಭಕ್ತಿ, ಪ್ರೀತಿ, ಒಲವು. ಅವರನ್ನು ಬಲ್ಲ ಯಾರನ್ನೇ ಕೇಳಿದರೂ ಗುರುಗಳು ನನ್ನನ್ನು ಪ್ರೀತಿಸಿದಷ್ಟು, ನಂಬಿದಷ್ಟು ಇನ್ನಾರನ್ನೂ ನಂಬಿರಲಿಲ್ಲ, ಪ್ರೀತಿಸುತ್ತಿರಲಿಲ್ಲ ಎಂದು ಹೇಳುವರು. ಹಾಗಂತ ಗುರುಗಳು ಅವರೊಬ್ಬರನ್ನೇ ಪ್ರೀತಿಸಿದವರಲ್ಲ. ಅವರು ಎಲ್ಲರನ್ನೂ ಪ್ರೀತಿಸುತ್ತಿದ್ದರು. ಹೇಳಿದ ಕೆಲಸಗಳನ್ನು ಮಾಡದವರ ಮೇಲೆ ಉಗ್ರ ಕೋಪ ವ್ಯಕ್ತಪಡಿಸಿ ಆ ಕೆಲಸವನ್ನು ಮಾಡುವ ಹಾಗೆ ಮಾಡುತ್ತಿದ್ದರು. ಕೆಲಸ ಆದಾಗ ತಾಯಿಯ ಹೃದಯ ತೋರಿಸಿ ಪ್ರೀತಿಸುತ್ತಿದ್ದರು. ಪ್ರೀತಿ ಮತ್ತು ಕೋಪ ಅವರಿಗೆ ಸಮಾಜವನ್ನು ಕಟ್ಟಿ ಬೆಳೆಸಲು ಸಹಾಯವಾಯ್ತು. ಅವರು ಸಮಾಜವನ್ನು ನಾವೊಬ್ಬರೇ ಕಟ್ಟಿ ಬೆಳೆಸುತ್ತೇವೆ ಎಂದುಕೊಂಡವರಲ್ಲ. ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಎಲ್ಲ ನೌಕರರೂ ಈ ಸಂಸ್ಥೆಯ ಆಧಾರ ಸ್ಥಂಭ ಎಂದು ಭಾವಿಸಿದ್ದರು. ಹಾಗಾಗಿ ನೌಕರ ಪ್ರತಿನಿಧಿಗಳೂ ವಿದ್ಯಾಸಂಸ್ಥೆಯ ಕೇಂದ್ರ ಸಮಿತಿಯ ಸದಸ್ಯರಾಗಿರುತ್ತಿದ್ದರು.
ವಿದ್ಯಾಸಂಸ್ಥೆಯ ನೌಕರರು ಮತ್ತು ಶಿಷ್ಯರು ಈ ಸಂಸ್ಥೆಯ ಮತ್ತು ಶ್ರೀಮಠದ ಬೆಳವಣಿಗೆಯಲ್ಲಿ ತುಂಬಾ ಸಹಕಾರ ನೀಡುತ್ತ ಬಂದದ್ದರಿಂದ ಮಠ ಮತ್ತು ವಿದ್ಯಾಸಂಸ್ಥೆ ಪ್ರಗತಿ ಹೊಂದಿ ಬಹು ಎತ್ತರಕ್ಕೆ ಬೆಳೆಯಲು ಕಾರಣ ಎಂದು ಭಾವಿಸಿದ್ದರು. ಪೂಜ್ಯರ ಬದುಕು ತೆರೆದಿಟ್ಟ ಪುಸ್ತಕ. ಪಾರದರ್ಶಕ. ಅವರು ಶಿಕ್ಷಣ, ಸಾಹಿತ್ಯ, ಸಂಗೀತ, ಕಲೆ, ಪ್ರವಾಸ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಒಬ್ಬ ವ್ಯಕ್ತಿ ತನ್ನ ಜೀವಮಾನದಲ್ಲಿ ಏನೇನು ಒಳಿತಿನ ಕಾರ್ಯಗಳನ್ನು ಮಾಡಬಹುದಿತ್ತೋ ಅಂಥ ಎಲ್ಲ ಕಾರ್ಯಗಳನ್ನು ತುಂಬಾ ಕಡಿಮೆ ಅವಧಿಯಲ್ಲಿ ಮಾಡಿದರು. ಅದರ ಪರಿಣಾಮವಾಗಿ ಅವರ ದೇಹ ಹಣ್ಣಾಗುತ್ತ ಬಂತು. ಅವರು ತಮ್ಮ ಕೊನೆಯ ಕಾಲದಲ್ಲಿ ಪಾರ್ಶ್ವವಾಯು ಪೀಡಿತರಾಗಿದ್ದರು. ಅದು ಅವರ ಮೆದುಳಿಗೆ ಆಗಿದ್ದ ಕಾಯಿಲೆ. ಆಗ ವೈದ್ಯರು ಹೇಳಿದ್ದು ಒಬ್ಬ ವ್ಯಕ್ತಿ ತನ್ನ ಬದುಕಿನ ಅವಧಿಯಲ್ಲಿ ಎಷ್ಟು ಮೆದುಳನ್ನು ಬಳಸಹುದಾಗಿತ್ತೋ ಅದರ ಹತ್ತು ಪಟ್ಟು ಬಳಸಿದ್ದಾರೆ. ಇವರ ಮೆದುಳೇ ಸವೆದಿರುವುದರಿಂದ ಹುಚ್ಚರಂತೆ ಬದುಕುತ್ತಾರೆ ಎನ್ನುತ್ತಿದ್ದರು. ಸುದೈವವೆನ್ನುವಂತೆ ಅವರು ಮತ್ತೆ ಚೇತರಿಸಿಕೊಂಡು ತಮ್ಮ ಬದುಕಿನ ಸಿಂಹಾವಲೋಕನ ಮಾಡುತ್ತ `ದಿಟ್ಟ ಹೆಜ್ಜೆ ಧೀರ ಕ್ರಮ’ ಎನ್ನುವ ಹೆಸರಿನಲ್ಲಿ ತಮ್ಮ ಹೋರಾಟಮಯ ಬದುಕಿನ ಘಟನೆಗಳನ್ನು ತಾವೇ ಹೇಳಿ ಬರೆಸಿದರು. ಈ ಕೃತಿ ಪೂಜ್ಯರ ಬಾಹ್ಯ ಬದುಕಿಗೆ ಹಿಡಿದ ಕನ್ನಡಿಯಾದರೆ ಅವರ ಅಂತರಂಗದ ಬದುಕಿನ ಕನ್ನಡಿ ಅವರೇ ಬರೆದ ದಿನಚರಿಯ ಸಂಗ್ರಹ `ಆತ್ಮನಿವೇದನೆ’ ಎನ್ನುವ ಕೃತಿ. ಈ ಎರಡೂ ಗುರುಗಳ ಅಂತರಂಗ ಮತ್ತು ಬಹಿರಂಗ ಬದುಕಿನ ಕನ್ನಡಿಗಳಿದ್ದ ಹಾಗೆ. ಇವೆರಡೂ ಕೃತಿಗಳನ್ನು ಸ್ವಾಮಿಗಳಾಗುವವರು ಮತ್ತು ಸ್ವಾಮಿಗಳಾದವರೂ ಓದಲೇಬೇಕು ಎಂದು ಡಾ. ಹಾ ಮಾ ನಾಯಕ ಅವರು ಬರೆದಿರುವುದರಲ್ಲಿ ಅತಿಶಯೋಕ್ತಿ ಏನಿಲ್ಲ. ಇಂತಹ ಮಹಾನ್ ಚೇತನ ಯಾವಾಗಲೂ ಸಮಾಜಕ್ಕೆ ಹೊಸ ಮಾರ್ಗವನ್ನು ಹಾಕಿಕೊಡುವ ಚಿಂತನೆ ಮಾಡುತ್ತಿದ್ದರು. ಅದು ಕಾರಣವಾಗಿ ಅವರನ್ನು ಆನೆ ಎನ್ನುವುದು. ಆನೆ ನಡೆದದ್ದೇ ದಾರಿ. ಆನೆ ನಡೆದ ಕಾಡಿನ ದಾರಿಯಲ್ಲಿ ಯಾರು ಬೇಕಾದರೂ ಸುಲಭವಾಗಿ ನಡೆಯಬಹುದು. ಹೀಗೆ ಹೊಸ ಹೊಸ ದಾರಿಗಳನ್ನು ನಿರ್ಮಿಸಿದ ಮಹಾನ್ ಚೇತನ ನಮ್ಮ ಗುರುಗಳು.
ಸಮಾಜಕ್ಕೆ, ಜನತೆಗೆ ಬೋಧನೆ ಮಾಡುವವರು ಬೇಕಾದಷ್ಟು ಜನರಿದ್ದಾರೆ. ಆದರೆ ನಮ್ಮ ಗುರುಗಳು ಕೇವಲ ಬೋಧನೆ ಮಾಡುತ್ತಿರಲಿಲ್ಲ. ಮೊದಲು ತಾವು ಸಾಧನೆ ಮಾಡಿ ನಂತರ ಬೋಧನೆ ಮಾಡುತ್ತಿದ್ದರು. ನಡೆ ನುಡಿ ಸಿದ್ಧಾಂತ ಅವರ ಬದುಕಿನ ಅವಿಭಾಜ್ಯ ಅಂಗವಾಗಿತ್ತು. ಬಸವಾದಿ ಶಿವಶರಣರ ತತ್ವಸಿದ್ಧಾಂತಗಳೇ ಅವರ ಬದುಕಿನ ತಳಹದಿಯಾಗಿದ್ದವು. ಇವತ್ತು ಯಾವುದೇ ಕ್ಷೇತ್ರದಲ್ಲಿ ನಿವೃತ್ತಿ ಎನ್ನುವುದಿಲ್ಲ; ಸರ್ಕಾರಿ ನೌಕರರನ್ನು ಹೊರತುಪಡಿಸಿ. ರಾಜಕಾರಣಿಗಳಿಗೆ, ಸ್ವಾಮಿಗಳಿಗೆ ನಿವೃತ್ತಿಯೇ ಇಲ್ಲ. ಆದರೆ ನಮ್ಮ ಗುರುಗಳು 1967ರಲ್ಲೇ ಸಮಾಜಕ್ಕೆ ಒಂದು ಕರೆಯನ್ನು ಕೊಟ್ಟಿದ್ದರು: ನಾವು ನಮ್ಮ 60ನೆಯ ವರ್ಷಕ್ಕೆ ಪೀಠತ್ಯಾಗ ಮಾಡುತ್ತೇವೆ. ಅಷ್ಟರೊಳಗೆ ಸಮಾಜಬಾಂಧವರು ಯೋಗ್ಯ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು. ಸಮಾಜದ ಮುಖಂಡರಾರೂ ಅವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಗುರುಗಳಿಗೆ ತಮ್ಮ ಸಂಕಲ್ಪ ಮರೆತಿರಲಿಲ್ಲ. ಹಾಗಾಗಿ ತಮಗೆ 1974ಕ್ಕೆ 60 ವರ್ಷ ತುಂಬುತ್ತಲೇ ಸಮಾಜದ ಸಭೆಯನ್ನು ದಾವಣಗೆರೆಯಲ್ಲಿ ಕರೆದು ತ್ಯಾಗಪತ್ರ ನೀಡಿದರು. ಬಹುಶಃ ಮಠಗಳ ಇತಿಹಾಸದಲ್ಲಿ ಹೀಗೆ ತ್ಯಾಗಪತ್ರ ಕೊಟ್ಟವರು ತುಂಬಾ ವಿರಳ. ವಿರಳವೇನು ಬಂತು! ಇಲ್ಲವೇ ಇಲ್ಲ ಎಂದರೂ ತಪ್ಪಾಗಲಾರದು. 1979ರಲ್ಲಿ ಈಗಿನ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಸದ್ಧರ್ಮ ಪೀಠದ ಮೇಲೆ ಕೂರಿಸಿ `ತರಳ ಬಾಳು’ ಎಂದು ಹಾರೈಸಿ ತಮ್ಮ ಎಲ್ಲ ಅಧಿಕಾರವನ್ನು ಹಸ್ತಾಂತರ ಮಾಡಿದ ಅಪರೂಪದ ಚೇತನ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು.
ಪೂಜ್ಯರ ದೇಹ ಮತ್ತು ಬುದ್ಧಿ ಹಣ್ಣಾಗುತ್ತ ಬಂದಿದ್ದರಿಂದ ಈ ಲೋಕದ ಆಟ ಸಾಕೆಂದು ತಮಗೆ ತಾವೇ ತೀರ್ಮಾನ ಮಾಡಿಕೊಂಡಿರಬೇಕು. 1992 ಸೆಪ್ಟೆಂಬರ್ 24ರಂದು ಅವರು ಶಿವನೊಂದಿಗೆ ಬೆರೆತರು. ದೈಹಿಕವಾಗಿ ಅವರು ನಮ್ಮನ್ನಗಲಿ 28 ವರ್ಷಗಳಾಗಿದ್ದರೂ ಭಕ್ತರ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಅವರನ್ನು ನೋಡಿದವರು, ಅವರ ಪರಿಚಯ ಇರುವವರು, ಅವರ ಬಗ್ಗೆ ಓದಿದವರು ಅವರನ್ನೆಂದೂ ಮರೆಯಲು ಸಾಧ್ಯವಿಲ್ಲ, ಹಾಗಾಗಿ ಪ್ರತಿವರ್ಷ ಸೆಪ್ಟೆಂಬರ್ 24ರಂದು ವಿನೂತನ ರೀತಿಯಲ್ಲಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯುವುದು. ಕಳೆದ 27 ವರ್ಷಗಳ ಕಾಲ ನಿರಂತರವಾಗಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆದುಕೊಂಡು ಬಂದಿದ್ದರೂ ಈ ವರ್ಷ ಕೊರೊನಾ ಮಾರಿಯ ಹಾವಳಿಯಿಂದಾಗಿ ಸಾರ್ವಜನಿಕವಾಗಿ ಜನರು ಒಂದೆಡೆ ಸೇರುವಂತಿಲ್ಲ. ಆದ್ದರಿಂದ ಅಂತರ್ಜಾಲದ ಮೂಲಕ ಕಲಾಸಂಘದ ಕಾರ್ಯಕರ್ತರ ನೆರವಿನಿಂದ ಈ ಕಾರ್ಯಕ್ರಮ ನಡೆಸಲಾಯಿತು.
ಗುರುಗಳಿಗೆ ಶರಣ ಸಾಹಿತ್ಯ, ಶರಣರ ವಿಚಾರಗಳು ಎಂದರೆ ತುಂಬಾ ಪ್ರೀತಿ. ಅದೇ ಅವರ ಕನಸು, ಮನಸು, ನನಸು. ಅವರಿಗೆ ಪ್ರಿಯವಾದ ಕೆಲಸ ಕಾರ್ಯಗಳನ್ನು ನಾವು ಮಾಡುತ್ತಲೇ ಬಂದಿದ್ದೇವೆ. ಕಳೆದ ತಿಂಗಳು ಆಗಸ್ಟ್ 1 ರಿಂದ 30 ರವರೆಗೆ ಅಂತರ್ಜಾಲದಲ್ಲಿ `ಮತ್ತೆ ಕಲ್ಯಾಣ’ ಕಾರ್ಯಕ್ರಮದ ನೆಪದಲ್ಲಿ ಶರಣರ ವಿಚಾರಗಳನ್ನು ಹೇಳುತ್ತ ಬಂದಿದ್ದು ಎಲ್ಲರಿಗೂ ಗೊತ್ತಿದೆ. 30 ದಿನಗಳ ಕಾಲ ನಾವು ನೀಡಿದ ಆಶೀರ್ವಚನದ ಮಾತುಗಳನ್ನು ಅಕ್ಷರರೂಪಕ್ಕಿಳಿಸಿ `ಶರಣ ಸಂದೇಶ’ ಎನ್ನುವ ಕೃತಿಯನ್ನು ಹೊರತಂದಿದ್ದೇವೆ. ಈ ಕೃತಿಯನ್ನು ಪ್ರೊ. ಎಸ್ ಜಿ ಸಿದ್ಧರಾಮಯ್ಯನವರು ಲೋಕಾರ್ಪಣೆಗೊಳಿಸಿದ್ದಾರೆ. ಸಾರ್ವಜನಿಕರು ಆ ಕೃತಿಯನ್ನು ಓದುವ ಮೂಲಕ ಶರಣರ ವಿಚಾರಗಳನ್ನು ಗ್ರಹಿಸಬೇಕು.
ಕಾಯಕವೆ ಕೈಲಾಸವೆಂದು
ಭಕ್ತೋದ್ಧಾರವೆ ಶಿವಪೂಜೆಯೆಂದು
ಪ್ರೀತಿಯೇ ಬದುಕಿನ ಬಂಡವಾಳವೆಂದು
ಶರಣತತ್ವಾಮೃತವೇ ಜಗದೋದ್ಧರದ ಮಂತ್ರವೆಂದು
ಭಕ್ತರ ಬದುಕಿಗೆ ಶಿವ ಬೆಳಕು ಕರುಣಿಸಿದ
ಭಕ್ತಪ್ರಿಯ ಶ್ರೀ ಶಿವಕುಮಾರ ಪ್ರಭುವನು
ನಿತ್ಯ ನೆನೆಯಲು ಮುಕ್ತಿಯಯ್ಯಾ.

Previous post ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
Next post ತತ್ವಪದಗಳ ಜಾಡು ಹಿಡಿದು…
ತತ್ವಪದಗಳ ಜಾಡು ಹಿಡಿದು…

Related Posts

ಧರ್ಮೋ ರಕ್ಷತಿ ರಕ್ಷಿತಃ
Share:
Articles

ಧರ್ಮೋ ರಕ್ಷತಿ ರಕ್ಷಿತಃ

January 7, 2019 ಡಾ. ಪಂಚಾಕ್ಷರಿ ಹಳೇಬೀಡು
ಆಗ ತಾನೇ ಹುಟ್ಟಿದ  ಮಗು ಸ್ವತಃ ದೈವೀ ಸ್ವರೂಪವೇ ತಾನಾಗಿರುವುದು. ಕಾರಣ, ಅದಕ್ಕೆ ಈ ಇಹಲೋಕದ ಯಾವ ಗುಣ ನಡತೆಗಳ ಕಲೆಯೂ ಅಂಟಿರುವುದಿಲ್ಲ. ಪರಮಾತ್ಮನ ಕಳೆಯೇ ಚಿತ್ಕಳೆಯಾಗಿ ಈ...
ಆತ್ಮಹತ್ಯೆ-ಆತ್ಮವಿಶ್ವಾಸ
Share:
Articles

ಆತ್ಮಹತ್ಯೆ-ಆತ್ಮವಿಶ್ವಾಸ

January 10, 2021 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಕಟ್ಟಬೇಕು ಮನವ, ಮೆಟ್ಟಬೇಕು ಮದವ, ಸುಟ್ಟರುಹಬೇಕು ಸಪ್ತವ್ಯಸನಂಗಳ. ಆ ತೊಟ್ಟಿಲ ಮುರಿದು, ಕಣ್ಣಿಯ ಹರಿದು, ಆ ಬಟ್ಟಬಯಲಲ್ಲಿ ನಿಂದಿರೆ, ಬಸವಪ್ರಿಯ ಕೂಡಲಚೆನ್ನಬಸವಣ್ಣ. ಮನುಷ್ಯನ...

Comments 8

  1. ಸೋಮಶೇಖರ, ಹಾಸನ
    Oct 9, 2020 Reply

    ತರಳಬಾಳು ಮಠದ ಹಿನ್ನೆಲೆ ನನಗೆ ಏನೇನೂ ಗೊತ್ತಿರಲಿಲ್ಲ. ನಿಜಕ್ಕೂ ಆಸಕ್ತಿಕರ ಕತೆ, ಹಿನ್ನೆಲೆ, ಸಾಧನೆ ಇರೋ ಮಠ.

  2. Giriappa R
    Oct 10, 2020 Reply

    ಮತ್ತೆ ಕಲ್ಯಾಣದ ಚರ್ಚಾ ವಿಷಯಗಳು ಆಕರ್ಷಕವಾಗಿದ್ದವು. ಸ್ವಾಮಿಗಳ ವಿನೂತನ ನಡೆ ಮೆಚ್ಚುವಂತಹದ್ದು.

  3. Hareesh Mysuru
    Oct 14, 2020 Reply

    ಹಿರಿಯ ಗುರುಗಳ ಮಾರ್ಗದರ್ಶನ ಪಡೆದ ನೀವೇ ಧನ್ಯರು. ಅವರ ವಿಷಯವಾಗಿ ತಿಳಿಸಿಕೊಟ್ಟಿದ್ದಕ್ಕೆ ಶರಣುಗಳು

  4. Karibasappa hanchinamani
    Oct 14, 2020 Reply

    ಪಾರದರ್ಶಕ ಬದುಕಿನ ಸ್ವಾಮಿಗಳು ಈಗ ದುರ್ಬೀನು ಹಾಕಿಕೊಂಡು ಹುಡುಕಿದರೂ ಸಿಗುವುದು ದುರ್ಲಭ. ನಡೆ-ನುಡಿ ಒಂದಾದ ಪೂಜ್ಯರ ಬಗ್ಗೆ ಓದಿ ಹೃದಯ ತುಂಬಿ ಬಂದಿತು.

  5. Archana Kani
    Oct 16, 2020 Reply

    ಹಿರಿಯ ಗುರುಗಳು ಶುರು ಮಾಡಿದ ಸರ್ವಶರಣ ಸಮ್ಮೇಳನ ನಿಜಕ್ಕೂ ವಿನೂತನ ಕಾರ್ಯಕ್ರಮ. ಈಗಲೂ ಸಿರಿಗೆರೆಯಲ್ಲಿ ಈ ಕಾರ್ಯಕ್ರಮ ಪ್ರತಿವರ್ಷ ನಡೆಯುತ್ತದೆಯೇ?

  6. ದೇವರಾಜ ಹೊಸದುರ್ಗ
    Oct 17, 2020 Reply

    ಸ್ವಾಮೀಜಿ ಪ್ರಣಾಮಗಳು, ತಾವು ಮಾತ್ರ ಈಗಲೇ ನಿವೃತ್ತರಾಗಬೇಡಿ. ನಿಮ್ಮ ಮಾರ್ಗದರ್ಶನ ಸಮಾಜಕ್ಕೆ ಅವಶ್ಯ ಬೇಕು.

  7. Manjunatha
    Oct 19, 2020 Reply

    ಶ್ರೀ ಗುರುಶಾಂತರಾಜದೇಶಿಕೇಂದ್ರ ಮಹಾಸ್ವಾಮಿಗಳು ವಿಷಪ್ರಾಸನದಿಂದ ದೇಹ ತ್ಯಾಗ ಮಾಡಿದರು ಎಂದು ಓದಿ ಬಹಳ ದುಃಖವೆನಿಸಿತು. ಮಠದಲ್ಲಿದ್ದವರೇ ಈ ಕೆಲಸ ಮಾಡಿದ್ದು ಎಂದು ತಿಳಿದು ಆಘಾತವಾಯಿತು. ಯಾವ ಜಾಗವೂ ಸುರಕ್ಷಿತವಲ್ಲವಲ್ಲಾ!

  8. Shivananda G
    Nov 5, 2020 Reply

    ಹಿರಿಯ ಶ್ರೀಗಳ ಜೀವನ ಚರಿತ್ರೆ ಓದಿ ಮೂಕವಿಸ್ಮಿತನಾದೆ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಷ್ಟವಿಧಾರ್ಚನೆ – ಷೋಡಶೋಪಚಾರ
ಅಷ್ಟವಿಧಾರ್ಚನೆ – ಷೋಡಶೋಪಚಾರ
November 1, 2018
ಲಿಂಗಾಯತ ಧರ್ಮದ ಆಕರಗಳು ಮತ್ತು ಗ್ರಂಥಕರ್ತೃಗಳು
ಲಿಂಗಾಯತ ಧರ್ಮದ ಆಕರಗಳು ಮತ್ತು ಗ್ರಂಥಕರ್ತೃಗಳು
August 10, 2023
ಪೂರ್ವಚಿಂತನೆಯಿಂದ ಕಂಡು…
ಪೂರ್ವಚಿಂತನೆಯಿಂದ ಕಂಡು…
November 7, 2020
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
March 6, 2024
ಯಾಲಪದದ ಸೊಗಡು
ಯಾಲಪದದ ಸೊಗಡು
December 13, 2024
ಆಫ್ರಿಕಾದ ಸೂರ್ಯ
ಆಫ್ರಿಕಾದ ಸೂರ್ಯ
December 13, 2024
ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…
ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…
February 6, 2025
ಭವ ರಾಟಾಳ
ಭವ ರಾಟಾಳ
September 10, 2022
ಗುರು ಶಿಷ್ಯ ಸಂಬಂಧ
ಗುರು ಶಿಷ್ಯ ಸಂಬಂಧ
April 6, 2024
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
January 7, 2022
Copyright © 2025 Bayalu