Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಆ ಬಿರುಗಾಳಿ ಹುಟ್ಟಲೊಡನೆ…
Share:
Articles January 8, 2023 ಡಾ. ಚಂದ್ರಶೇಖರ ನಂಗಲಿ

ಆ ಬಿರುಗಾಳಿ ಹುಟ್ಟಲೊಡನೆ…

೧) ನಾನೆಂಬ ಅಹಂಕಾರ ತಲೆದೋರಿದಲ್ಲಿ
ಅಟಮಟ ಕುಟಿಲ ಕುಹಕವೆಂಬ ಬಿರುಗಾಳಿ ಹುಟ್ಟಿತ್ತು!
ಆ ಬಿರುಗಾಳಿ ಹುಟ್ಟಲೊಡನೆ ಜ್ಞಾನಜ್ಯೋತಿ ಕೆಟ್ಟಿತ್ತು!
ಜ್ಞಾನಜ್ಯೋತಿ ಕೆಡಲೊಡನೆ
ನಾ ಬಲ್ಲೆ ಬಲ್ಲಿದರೆಂಬ ಅರುಹಿರಿಯರೆಲ್ಲರು
ತಾಮಸಕ್ಕೊಳಗಾಗಿ ಸೀಮೆದಪ್ಪಿ ಕೆಟ್ಟರು ಕಾಣಾ ಗುಹೇಶ್ವರ! (LB:351)

ಅಹಂಕಾರ(=ನಾನು), ಮಮಕಾರ(=ನನ್ನದು) ಎಂಬ ಏಕಸ್ವಾಮ್ಯತೆಯೇ ನಮ್ಮನ್ನು ಅಟಮಟಗೊಳಿಸಿ, ಕೆಡಹಿ ಬೀಳಿಸುವ ಕುಟಿಲ ಕುಹಕವೆಂಬ ಬಿರುಗಾಳಿ! ಈ ಬಿರುಗಾಳಿಯ ಎದುರು ಜ್ಞಾನಜ್ಯೋತಿ ಬೆಳಗಲಾರದು! ಈ ಜ್ಞಾನಜ್ಯೋತಿ ಕೆಟ್ಟುಹೋದರೆ, ನಾ ಬಲ್ಲೆ ಬಲ್ಲೆ ಎಂಬ ಎಲ್ಲ ಹಿರಿಯರು ನಿಸರ್ಗವಿವೇಕವೆಂಬ ಎಲ್ಲೆ ಮೀರಿ (=ಸೀಮೆದಪ್ಪಿ) ದಟ್ಟಕತ್ತಲೆಯ ತಾಮಸಕ್ಕೊಳಗಾಗಿ ಕೆಟ್ಟು ನಾಶವಾಗುತ್ತಾರೆ! ಇದು ತಪ್ಪದು ಗುಹೇಶ್ವರ!

ಕವಿ ಬೇಂದ್ರೆಯವರು ‘ಅಹಂಕಾರ ಎಂದರೇನು? ಇದರಿಂದ ಬಿಡುಗಡೆ ಹೇಗೆ?’ ಎಂಬುದರ ನಿರೂಪಣೆಗಾಗಿ (1) ಚಾಮರಸನ ಪ್ರಭುಲಿಂಗ ಲೀಲೆಯ ಅಲ್ಲಮಪ್ರಭು (2) ರತ್ನಾಕರವರ್ಣಿ ಭರತೇಶವೈಭವದ ಭರತಚಕ್ರಿ (3) ಲಕ್ಷ್ಮೀಶನ ಜೈಮಿನಿ ಭಾರತದ ಕೃಷ್ಣ (4) ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ನ ರಾವಣ- ಈ ನಾಲ್ಕು ಪಾತ್ರನಿರ್ಮಾಣ ಕೌಶಲ್ಯವನ್ನು ಲಕ್ಷಿಸಿ, ‘ಕನ್ನಡಸಾಹಿತ್ಯದ ನಾಲ್ಕು ನಾಯಕ ರತ್ನಗಳು’ ಎಂಬ ಅತ್ಯಪೂರ್ವ ಲೇಖನವನ್ನು ಬರೆದಿದ್ದಾರೆ. “ಅಹಂಕಾರವನ್ನು ತವಿಪುದು ಆವುದೋ ಅದೇ ವಿದ್ಯೆ! ಅಹಂಕಾರ ವರ್ಧನೆ ಮಾಡುವುದು ಅವಿದ್ಯೆ” ಎಂಬ ತತ್ವಜ್ಞಾನವನ್ನು ಬೆರಳ್ಗೆ ಕೊರಳ್ ನಾಟಕದಲ್ಲಿ ಕುವೆಂಪು ಮನಗಾಣಿಸಿದ್ದಾರೆ.

ಅಲ್ಲಮಪ್ರಭು ತನ್ನ ವಚನಗಳಲ್ಲಿ ಮತ್ತೆ ಮತ್ತೆ ಅಹಂಕಾರವೆಂಬ ಬಿರುಗಾಳಿಯಿಂದ ಆಗುವ ಆತ್ಮನಾಶವನ್ನು ಸೂಚಿಸಿದ್ದಾರೆ. ‘ಅಷ್ಟಮದಗಳು’- ಧನ, ಕುಲ, ವಿದ್ಯೆ , ರೂಪ, ಯೌವನ, ಬಲ, ಪರಿವಾರ, ಅಧಿಕಾರ ಎಂಬ ಎಂಟುವಿಧವಾದ ಮದಗಳು ಎಂಟು ದಿಕ್ಕುಗಳಿಂದ ನಮ್ಮನ್ನು ಆಕ್ರಮಿಸಿಕೊಂಡು ಆತ್ಮನಾಶಕ್ಕೆ ದೂಡುತ್ತವೆ.

೨) ನಾನು ಘನ, ತಾನು ಘನವೆಂಬ ಹಿರಿಯರುಂಟೆ ಜಗದೊಳಗೆ?
ಹಿರಿಯರ ಹಿರಿಯತನದಿಂದ ಏನಾಯಿತ್ತು?
ಹಿರಿ – ಕಿರಿದೆಂಬ ಶಬ್ದವಡಗಿದರೆ
ಆತನೆ ಶರಣ ಗುಹೇಶ್ವರ! (LB:170)

ಅಲ್ಲಮಪ್ರಭು ನಿರಹಂಕಾರ ಮತ್ತು ಸುಜ್ಞಾನಿಗೆ ಜನಿಸಿದ ಚೇತನ! ನಾವೇ ಘನಲಿಂಗಿಗಳು, ನಾವೇ ಹಿರಿಯರು ಎಂದು ಬರಿದೇ ಬೀಗುವ ಬೆಲೂನುಗಳಿಗೆ ನಿಜದ ಸೂಜಿಮೊನೆಯನ್ನು ತಾಕಿಸಿ ಎಚ್ಚರಿಸುತ್ತಾನೆ. ಜಗತ್ತಿಗಿಂತಲೂ ಹಿರಿಯರು ಯಾರಿದ್ದಾರೆ ? ಹಿರಿಯರ ಹಿರಿಯತನದಿಂದ ಏನು ತಾನೆ ಸೃಷ್ಟಿಯಾಗಿದೆ? ಹಿರಿದು – ಕಿರಿದು ಎಂಬ ಭೇದಭಾವ ಅಡಗಬೇಕು! ಇದೇ ವ್ಯಕ್ತಿತ್ವದ ವಿಕಾಸಕ್ಕೆ, ವರ್ಧಮಾನತ್ವಕ್ಕೆ ಮೂಲವಾಗುತ್ತದೆ.

೩) ವಾರಿ ಬಲಿದು ವಾರಿಕಲ್ಲಾದಂತೆ
ಶೂನ್ಯವೇ ಸ್ವಯಂಭುವಾಯಿತ್ತು!
ಆ ಸ್ವಯಂಭುಲಿಂಗದಿಂದಾಯಿತ್ತು ಮೂರ್ತಿವತ್ತು!
ಆ ಮೂರ್ತಿಯಿಂದಾಯಿತ್ತು ವಿಶ್ವೋತ್ಪತ್ತಿ!
ಆ ವಿಶ್ವೋತ್ಪತ್ತಿಯಿಂದಾಯಿತ್ತು ಸಂಸಾರ!
ಆ ಸಂಸಾರದಿಂದಾಯಿತ್ತು ಮರವೆ!
ಆ ಮರವೆಯೆಂಬ ಮಹಾಮಾಯೆ ವಿಶ್ವವ ಮುಸುಕಿದಲ್ಲಿ
ನಾ ಬಲ್ಲೆ – ಬಲ್ಲಿದರೆಂಬ ಅರುಹಿರಿಯರೆಲ್ಲ ತಾಮಸಕ್ಕೊಳಗಾಗಿ
ಮೀನಕೇತನನ ಬಲೆಗೆ ಸಿಲುಕಿ
ಮಾಯೆಯ ಬಾಯ ತುತ್ತಾದರಲ್ಲಾ ಗುಹೇಶ್ವರ? (LB:350)

ನೀರು ಬಲಿಯುತ್ತಾ ಬಲಿಯುತ್ತಾ ಘನೀಭವಿಸಿ, ವಾರಿಕಲ್ಲು ಆಗುವಂತೆಯೇ ಕಣ್ಣಿಗೆ ಕಾಣದ ಶೂನ್ಯವೇ ತನ್ನೊಳಗಿನ ಒತ್ತಡದಿಂದ ಸ್ವಯಂಭುವಾಗಿ ಕಣ್ಣಿಗೆ ಕಾಣುವ ಮೂರ್ತದ ವಿವಿಧ ರೂಪುಗಳಾಗಿ ವಿಶ್ವೋತ್ಪತ್ತಿಯಾಗುತ್ತದೆ. ಈ ವಿಶ್ವೋತ್ಪತ್ತಿಯಿಂದ ಸಂಸಾರವೆಂಬ ಪ್ರಾಪಂಚಿಕತೆ, ಈ ಪ್ರಾಪಂಚಿಕ ಸಂಸಾರದಿಂದ ಮರೆವು, ಈ ಮರೆವು ಎಂಬ ಅಜ್ಞಾನದಿಂದ ಮಹಾಮಾಯೆ ನಮ್ಮನ್ನು ಮುಸುಕಿನಂತೆ ಆವರಿಸಿಕೊಳ್ಳುತ್ತದೆ. ಈ ಮಾಯಾಮುಸುಕು ಕವಿದು ಸರ್ವಜ್ಞರೆಲ್ಲರೂ ತಾಮಸಕ್ಕೊಳಗಾಗಿ ಮನ್ಮಥನ ಬಾಣಗಳಿಗೆ ಈಡಾಗಿ ಸರ್ವನಾಶಕ್ಕೆ ಗುರಿಯಾಗುತ್ತಾರೆ.

೪) ಬಲ್ಲತನವನು ಏರಿಸಿಕೊಂಡು
ಅಲ್ಲದಾಟವನಾಡಿದರೆ,
ಬಲ್ಲತನಕ್ಕೆ ಭಂಗವಾಯಿತ್ತು!
ವ್ಯಸನದ ಇಚ್ಚೆಗೆ ಹರಿದಾಡುವರೆಲ್ಲರೂ
ಬಲ್ಲರೇ ಹೇಳಿರೇ?
ಸಮಸ್ತ ಮೇಳಾಪದ ಚಚ್ಚಗೋಷ್ಠಿಯ ಭಂಡರೆಲ್ಲರೂ
ಬಲ್ಲರೇ? ಹೇಳಿರೇ?
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದ ಇಚ್ಚೆಗೆ ಹರಿದು
ಹಂದಿಯೊಡನಾಡಿದ ಕಂದಿನಂತಾದರು!
ಇನ್ನು ಬಲ್ಲರೆ ಗುಹೇಶ್ವರ ಮಾಯಾಮುಖರು ನಿಮ್ಮುವನು? (LB:166)

ಸರ್ವಜ್ಞತನವನ್ನು ಹೇರಿಕೊಂಡು, ಅಲ್ಲಸಲ್ಲದ ಆಟಗಳನ್ನಾಡಿದರೆ ಸರ್ವಜ್ಞತನಕ್ಕೆ ಭಂಗ! ನಾನಾವಿಧವಾದ ಕಾಮದ ಇಚ್ಚೆಗೆ ಧಾವಿಸುವವರೆಲ್ಲರೂ ಸರ್ವಜ್ಞರೇನು? ನುಡಿದಂತೆ ನಡೆಯದೆ, ಸಮಸ್ತರನ್ನು ಸೇರಿಸಿ ಬರಿದೇ ಮಾತನಾಡುವ ಚರ್ಚಾಗೋಷ್ಠಿಯ ಭಂಡರೆಲ್ಲರೂ ಸರ್ವಜ್ಞರೆನಿಸುವರೇ?
ಇವರೆಲ್ಲರೂ ವಿಷಯಲೋಲುಪರೇ ಸರಿ! ಇವರನ್ನು ಕಂಡರೆ, ಹಂದಿಯೊಡನೆ ಆಡಿದ ಕಂದು (=ಎಳೆಗರು, ಬಾಳೆಯ ಅಗೆ ) ನೆನಪಾಗುವುದು! ಈ ಮಾಯಾಮುಖರು ಸತ್ಯ ದರ್ಶನವನ್ನು ಇನ್ನೆತ್ತ ಬಲ್ಲರು? ಇಂಥ ಭಂಡರನ್ನು ಅಲ್ಲಮಪ್ರಭು ಮತ್ತೆ ಮತ್ತೆ ಖಂಡಿಸಿದ್ದಾರೆ.

೫) ಧರೆಯ ಮೇಲುಳ್ಳ ಅರುಹಿರಿಯರೆಲ್ಲರೂ
ಮರುಳುಗೊಂಡು ಆಡುತ್ತಿದ್ದಾರೆ ನೋಡಾ!
ಮಂಜಿನ ಮಡಕೆಯೊಳಗೆ
ರಂಜನೆಯ ಭಂಡವ ತುಂಬಿ
ಅಂಜದೆ ಪಾಕವ ಮಾಡಿಕೊಂಡು
ಭಂಡವ ಮಾರುತ್ತಿಪ್ಪರು ನೋಡಾ!
ಸಂಜೀವಿನಿಯ ಬೇರ ಕಾಣದೆ
ಮರಣಕ್ಕೆ ಒಳಗಾದರು,
ಗುಹೇಶ್ವರನನು ಅರಿಯದ ಭವಭಾರಕರೆಲ್ಲರೂ! (LB:232)

ಧರೆಯ ಮೇಲೆ ಮೆರೆಯುತ್ತಿರುವ ಸರ್ವಜ್ಞರೆಲ್ಲ ಮರುಳುಗೊಂಡು ಹುಚ್ಚಾಟಗಳನ್ನು ಆಡುತ್ತಾ ದೇವರು ಧರ್ಮಗಳನ್ನು ಮಾರಾಟದ ಸರಕು ಮಾಡಿ ಲಾಭಕೋರರಾಗಿದ್ದಾರೆ. ಇವರಿಗೆ ದೇವರ ಭಯವೇ ಇಲ್ಲ! ಮಂಜು ತುಂಬಿದ ಮಡಕೆಯೊಳಗೆ (=ಅಜ್ಞಾನವೆಂಬ ಮಡಕೆ) ಮನರಂಜನೆಯ ಭಂಡವನ್ನು ತುಂಬಿ, ಯಾರಿಗೂ ಅಂಜದೆ ಮನದ ಪರಿಪಾಕಕ್ಕೆ ಬದಲಾಗಿ ಬರಿಯ ಪಾಕ ಮಾಡಿಕೊಂಡು, ಭಂಡವನ್ನು ಮಾರುತ್ತಾ ಇದ್ದಾರೆ! ಇಂಥವರಿಗೆ ಸಂಜೀವಿನಿಯ ಬೇರು ಸಿಗುವುದೇ? ಈ ಭವಭಾರಕರಿಗೆ ತಪ್ಪದೆ ಸಿಗುವುದು ಮರಣ ಮಾತ್ರ! ಹಿರಿಯರು ಎನಿಸಿಕೊಂಡವರಲ್ಲಿ ಹಿರಿತನವೇ ಇಲ್ಲದಿದ್ದರೇನು ಫಲ?

೬) ಹಿರಿಯರನೆಲ್ಲರ ಹುಟ್ಟಿಸಿದಾತನನು ಅರಿಯಿರೋ ಹಿರಿಯರ ಮಕ್ಕಳಿರಾ?
ಇಂದು ಎಂದೇನೋ? ನಾಳೆ ಎಂದೇನೋ?
ಎಂದೂ ಒಂದೇ ಮಕ್ಕಳಿರಾ!
ಗುಹೇಶ್ವರನೆಂಬ ಲಿಂಗಸಂಯೋಗ – ಇದ ಬೆರಸಲು ಅರಿಯಿರೋ!
ಹಿರಿಯರ ಮಕ್ಕಳಿರಾ? (LB:388)

ಸೃಷ್ಟಿಕರ್ತನಿಗಿಂತಲೂ ಮಿಗಿಲಾದ ಹಿರಿಯರು ಯಾರೂ ಇಲ್ಲ! ಧರೆಯ ಮೇಲುಳ್ಳ ಎಲ್ಲಾ ಹಿರಿಯರನ್ನು ಹುಟ್ಟಿಸಿದಾತನಾರು? ಇದನ್ನು ಮೊದಲು ಅರಿಯಿರಿ! ನಿನ್ನೆ (=ಭೂತಕಾಲ), ಇಂದು (=ವರ್ತಮಾನ ಕಾಲ ), ನಾಳೆ (=ಭವಿಷ್ಯತ್ ಕಾಲ) ಎಂಬುದು ಸುಳ್ಳುಸೃಷ್ಟಿ! ಇದು ಮಾನವನಿರ್ಮಿತ ಕಾಲದ ವಿಭಾಗಕ್ರಮ. ನಿಜವಾಗಿಯೂ ತಿಳಿಯಬೇಕಾದ್ದು ನಿತ್ಯನಿರಂತರವಾದ ಕಾಲ! ಇದು ಎಂದಿಗೂ ಒಂದೇ! ಈ ಕಾಲಪ್ರವಾಹಕ್ಕೆ ಯಾವುದೇ ವಿಭಾಗಕ್ರಮವಿಲ್ಲ! ಗುಹೇಶ್ವರ ಅಥವಾ ಸತ್ಯದೊಡನೆ ಸಂಯೋಗ ನಮಗೆ ಸಾಧ್ಯವಾಗಬೇಕು! ಈ ಲಿಂಗಸಂಯೋಗವನ್ನು ಅರಿಯಿರಿ ಹಿರಿಯರ ಮಕ್ಕಳಿರಾ!

೭) ಆದಿಯನು ಅರಿಯದೆ,
ಅನಾದಿಯಿಂದ ಅತ್ತತ್ತ ತಾನಾರು
– ಎಂಬುದ ತಿಳಿದು ವಿಚಾರಿಸದೆ
ಮಾಡಿದ ಫಲವೇನಯ್ಯ?
ಸಾವನ್ನಕ್ಕರ ಸಾಧನೆಯ ಮಾಡಿದಡೆ
ಕಾದುವ ದಿನವಾವುದಯ್ಯ ಬಸವಣ್ಣ?
ಬಾಳುವನ್ನಕ್ಕರ ಭಜನೆಯ ಮಾಡಿದಡೆ
ತಾನಹ ದಿನವಾವುದಯ್ಯ ಬಸವಣ್ಣ?
ಇದು ಕಾರಣ –
ಮಿಥ್ಯವನೇ ಹಿಡಿದು, ಮಿಥ್ಯವನೇ ಪೂಜಿಸಿ,
ಮರ್ತ್ಯಲೋಕದ ಭಕ್ತರೆಲ್ಲ ವ್ಯರ್ಥವಾದರಲ್ಲ?
ತಮ್ಮ ತಾವು(=ಠಾವು) ಕೆಟ್ಟ ಕೇಡಿಂಗೆ ಬೆರಗಾದೆ!
ಕಣ್ಣ ಕಳೆದುಕೊಂಡು, ಹೊಟ್ಟೆ ಸೀಳಿ,
ಮಗನ ಬಾಣಸವ ಮಾಡಿ,
ಕೈಲಾಸಪುರಕ್ಕೆ ಹೋದವರೆಲ್ಲ ಭಕ್ತರೇ?
ಅವರಿಗೆ ಶಿವಪಥ ಸಾಧ್ಯವಾಯಿತ್ತೆ?
ಭವ ಹಿಂಗಿತ್ತೆ?
ಅಸುರ ಕರ್ಮಿಗಳ ಮಾತಂತಿರಲಿ!
ನರಲೋಕದ ನರಕುರಿಗಳೆಲ್ಲ ನರಸಂಸಾರಕ್ಕೊಳಗಾದರು!
ಸುರಲೋಕದ ಸುರರುಗಳೆಲ್ಲ ಸುರಸಂಸಾರಕ್ಕೊಳಗಾದರು!
ರುದ್ರಲೋಕದ ರುದ್ರರುಗಳೆಲ್ಲ ರುದ್ರಸಂಸಾರಕ್ಕೊಳಗಾದರು!
ಮುನಿಜನಂಗಳೆಲ್ಲ ತಪೋಸಂಸಾರಕ್ಕೊಳಗಾದರು!
ಜಂಗಮವ ಅರ್ಚಿಸಿದವರೆಲ್ಲ ಸಾಯುಜ್ಯವೆಂಬ ಸಂಸಾರಕ್ಕೊಳಗಾದರು!
ಇಂತೀ ಸಂಸಾರಕ್ಕೊಳಗಾದವರೆಲ್ಲ ಮಾಯೆಯ ಹೊಡೆಗಿಚ್ಚ ಗೆಲಬಲ್ಲರೇ?
ಅದೆಂತೆಂದಡೆ ನಿತ್ಯ ನಿಜಾತ್ಮ ತಾನೆಂದರಿಯದೆ
ಹೊರ ಹೊರಗೆ ಬಳಸಿ ಕೆಟ್ಟರಲ್ಲಾ?
ಹಿರಿಯರು ಸತ್ತರಲ್ಲಾ ನಾಯ ಸಾವ?!
ಸತ್ತವರ ಹೆಸರ ಪತ್ರವನೋದೆ
ಎತ್ತಳ ಮುಕ್ತಿ ಕಾಣಾ, ಗುಹೇಶ್ವರ? (LB:499)

ಆದಿ ಮಧ್ಯ ಅಂತ್ಯ ರಹಿತವಾದ ಸತ್ಯವನ್ನು ತಿಳಿಯದೆ ಮಾಡಿದ ಸಾಧನೆಗಳಿಂದ ಏನು ಫಲ? ಜೀವನಪರ್ಯಂತ ಖಡ್ಗಸಾಧನೆ ಮಾಡಿದವರು ಕಾದುವ ದಿನ ಯಾವುದು? ಜೀವನಪರ್ಯಂತ ಪೂಜಾದಿಗಳನ್ನು ಮಾಡಿದವರು ತಾನೆ ಆಗುವ ದಿನ ಯಾವುದು? ಸುಳ್ಳುಸೃಷ್ಟಿಗಳನ್ನು ಹಿಡಿದು ಸುಳ್ಳುಸೃಷ್ಟಿಗಳನ್ನು ಪೂಜಿಸಿ, ಸತ್ಯದರ್ಶನ ಇಲ್ಲದೆ, ಮರ್ತ್ಯಲೋಕದ ಭಕ್ತರೆಲ್ಲರೂ ವ್ಯರ್ಥವಾಗಿ ಹೋದರು! ಆತ್ಮನಾಶದಿಂದ ಕೆಟ್ಟ ಕೇಡಿಗೆ ಬೆರಗಾದೆನು! ಕಣ್ಣಪ್ಪನಂತೆ ಕಣ್ಣು ಕೊಟ್ಟು, ರಾವಣನಂತೆ ಕರುಳು ಕಿತ್ತು , ಸಿರಿಯಾಳನಂತೆ ಮಗನನ್ನು ಕೊಯ್ದು ಅಡುಗೆ ಮಾಡಿದವರೆಲ್ಲ ಕೈಲಾಸಪುರಕ್ಕೆ ಹೋದರೇನು? ಇವರಿಗೆ ಶಿವಪಥ ಸಾಧ್ಯವಾಯಿತೇನು? ಇವರಿಗೆ ಭವನಾಶ ದಕ್ಕಿತೇನು? ರಾಕ್ಷಸಕೃತ್ಯಗಳ ಮಾತು ಬಿಡಿ! ನರಲೋಕದವರು, ಸುರಲೋಕದವರು, ರುದ್ರಲೋಕದವರು, ಮುನಿಜನಗಳೆಂಬ ತಪೋಲೋಕದವರು, ಜಂಗಮಪೂಜಕರು ಎಲ್ಲರೂ ಸಂಸಾರಚಕ್ರಕ್ಕೆ ಸಿಲುಕಿ ತಲೆಕೆಟ್ಟು ಹೋದವರೇ ಸರಿ ! ಒಳಗನ್ನು ಅರಿಯದೆ ಬರಿಯ ಹೊರಗನ್ನು ನಚ್ಚಿಕೊಂಡು ಸರ್ವಜ್ಞರೆಲ್ಲರೂ ನಾಯಿಸಾವು ಸತ್ತರಲ್ಲಾ? ಸತ್ತವರು ಬರೆದಿಟ್ಟ ತಾಳಪತ್ರದ ಅಕ್ಷರಗಳನ್ನು ಓದಿಕೊಂಡು ಮುಕ್ತರಾದವರು ಉಂಟೇನು? ಯಾವುದೇ ವಿಧವಾದ ಶಬ್ದಜ್ಞಾನವು ನಮ್ಮನ್ನು ಕೈ ಹಿಡಿಯುವುದಿಲ್ಲ! ಅಕ್ಷರಗಳು ಅಥವಾ ಶಬ್ದಗಳು ನಮಗೆ ಬಿಂಬಜ್ಞಾನವಾಗಿ ದಕ್ಕಬೇಕು! ಇದೇ ನಿಜವಾದ ಮುಕ್ತಿಮಾರ್ಗ!
ನಿಜಶರಣರು ಹೇಗಿರಬೇಕು ಎಂಬುದನ್ನು ಅಲ್ಲಮಪ್ರಭು ಮನೋಜ್ಞವಾಗಿ ಹೇಳಿದ್ದಾರೆ:

೮) ಬಿರುಗಾಳಿ ಬೀಸಿ
ಮರ ಮುರಿವಂತಹ ಸುಳಿಹ ಸುಳಿಯದೆ
ತಂಗಾಳಿ ಪರಿಮಳದೊಡಗೂಡಿ
ಸುಳಿವಂತೆ ಸುಳಿಯಬೇಕು!
ಸುಳಿದಡೆ –
ನೆಟ್ಟನೆ ಜಂಗಮವಾಗಿ ಸುಳಿಯಬೇಕು!
ನಿಂದರೆ –
ನೆಟ್ಟನೆ ಭಕ್ತನಾಗಿ ನಿಲಬೇಕು!
ಸುಳಿದು ಜಂಗಮವಾಗಲರಿಯದ
ನಿಂದು ಭಕ್ತನಾಗಲರಿಯದ
ಉಭಯಭ್ರಷ್ಟರನು ಏನೆಂಬೆ ಗುಹೇಶ್ವರ! (LB:172)

ಅಹಂಕಾರವೆಂಬ ಬಿರುಗಾಳಿ ಬೀಸಿ ಮರಗಳನ್ನು ಮುರಿದುಹಾಕುವಂತಹ ಸುಳುಹು ಸುಳಿಯಬಾರದು! ತಂಗಾಳಿ ಪರಿಮಳದ ಒಡಗೂಡಿ ಸುಳಿವಂತೆ ಸುಳಿಯಬೇಕು! ಬಿರುಗಾಳಿಯ ಸುಳುಹು ದ್ವೈತಮಾರ್ಗ! ತಂಗಾಳಿ ಪರಿಮಳದ ಒಡನಾಟ ಅದ್ವಯದ ಮಾರ್ಗ! ಬೆಳೆಯ ಭೂಮಿಯಲ್ಲಿ ನೆಟ್ಟನೆ ಮರವಾಗಿ ನಿಂದವನು ಭಕ್ತ! ನದಿಯಾಗಿ ಹರಿಯುವವನು ಜಂಗಮ! ಇವೆರಡಕ್ಕೂ ತಪ್ಪಿದ ಉಭಯಭ್ರಷ್ಟರನ್ನು ಏನೆಂದು ಕರೆಯಲಿ ಗುಹೇಶ್ವರ? ಸ್ಥಾವರ ಮತ್ತು ಜಂಗಮ ತತ್ವವನ್ನು ಮರ ಮತ್ತು ನದಿಯ ರೂಪಕ ಅದ್ಭುತವಾಗಿ ಹಿಡಿದಿಟ್ಟಿದೆ.

Previous post ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
Next post ಸೂರ್ಯ
ಸೂರ್ಯ

Related Posts

ಬಯಲಾದ ಬಸವಯೋಗಿಗಳು
Share:
Articles

ಬಯಲಾದ ಬಸವಯೋಗಿಗಳು

April 3, 2019 ಕೆ.ಆರ್ ಮಂಗಳಾ
“ಅವರು ಗುಣಮುಖರಾಗೋದು ಯಾವಾಗ?” ಮಾತಾಜಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ಕೇಳುವಾಗ ಮನಸ್ಸಿನ ಮೂಲೆಯಲ್ಲೆಲ್ಲೋ ಒಂದು ಸಣ್ಣ ಭರವಸೆ. ನನ್ನ ನೇರ...
ಅಮುಗೆ ರಾಯಮ್ಮ- ಜೀವನ ವೃತ್ತಾಂತ
Share:
Articles

ಅಮುಗೆ ರಾಯಮ್ಮ- ಜೀವನ ವೃತ್ತಾಂತ

September 10, 2022 ಡಾ. ಬಸವರಾಜ ಸಬರದ
ಶಿವಶರಣರ ಜನನ ವೃತ್ತಾಂತಗಳ ಬಗೆಗೆ ಹೆಚ್ಚಿನ ವಿವರಗಳು ಸಿಗುವುದಿಲ್ಲ, ಖಚಿತ ಮಾಹಿತಿಗಳು ದೊರೆಯುವುದಿಲ್ಲ. ಆದರೂ ದೊರೆತಿರುವ ಕೆಲವು ಮಾಹಿತಿಗಳನ್ನು ಸಂಗ್ರಹಿಸಿ ಅಮುಗೆ...

Comments 9

  1. VIJAYAKUMAR KAMMAR
    Jan 16, 2023 Reply

    ಬಯಲು ನಲ್ಲಿ ಮೌಲ್ಯಯುತ ಪ್ರಬುದ್ಧ ಲೇಖನಗಳು ಇರತಾವೆ. ನಿಧಾನಕ ಓದಬೇಕು.
    ಎದೆಯಲ್ಲಿ ಅಕ್ಷರಗಳಂತೆ ಜೋಡಿಸಿರುವ ಲೇಖನಗಳು.
    🙏🙏

  2. Chidananda M
    Jan 16, 2023 Reply

    ನಿಮ್ಮ ಲೇಖನ ವಚನಗಳನ್ನು ಹೀಗೆ ಬಿಡಿಸಿ ಹಾಗೆ ತೋರಿಸಿವೆ… ಆರಂಭದಲ್ಲಿ ತಾವು ಅಹಂಕಾರ ಎಂದರೇನು? ಎನ್ನುವ ಪ್ರಶ್ನೆ ಎತ್ತಿದ್ದೀರಿ, ಆದರೆ ಉತ್ತರ ಕೊಟ್ಟಿಲ್ಲ… ಯಾಕೆ ಗುರುಗಳೇ?!

  3. Jayaprakash Gowdar
    Jan 16, 2023 Reply

    ಸುಳ್ಳುಸೃಷ್ಟಿಗಳನ್ನು ಹಿಡಿದು ಸುಳ್ಳುಸೃಷ್ಟಿಗಳನ್ನು ಪೂಜಿಸಿ, ಸತ್ಯದರ್ಶನ ಇಲ್ಲದೆ, ಮರ್ತ್ಯಲೋಕದ ಭಕ್ತರೆಲ್ಲರೂ ವ್ಯರ್ಥವಾಗಿ ಹೋದರು!….. ಸತ್ಯವನ್ನು ಕಂಡ ಶರಣರಿಗೆ ಜಗತ್ತಿನ ಜಂಗುಳಿಯ ಮೌಢ್ಯ, ಹೊಡೆದಾಟ, ಮೆರೆದಾಟಗಳೆಲ್ಲಾ ಎಷ್ಟೊಂದು ಕ್ಷುಲ್ಲಕವಾಗಿ ಕಂಡಿರಬಹುದೆಂದು ಇಂತಹ ವಚನಗಳು ತೋರಿಸುತ್ತವೆ…. ಸತ್ಯವನರಿಯದೆ ಹೋದಿರಲ್ಲಾ- ಎನ್ನುವ ಅವರ ನಿಟ್ಟುಸಿರು ಇಂದಿಗೂ ನಿಂತಿಲ್ಲ!!

  4. ಪರಶಿವಮೂರ್ತಿ, ಮೈಸೂರು
    Jan 25, 2023 Reply

    ಕುಟಿಲ, ಕುಹಕಕ್ಕೆ ಒಳಗಾದವರೆಲ್ಲರೂ ಅಹಂಕಾರಿಗಳು. ಎಲ್ಲಿ ಅಹಂಕಾರ ಹುಟ್ಟಿತ್ತದೋ ಅಲ್ಲಿ ಜ್ಞಾನ ಜ್ಯೋತಿ ನಂದಿಹೋಗುತ್ತದೆ… ನಾನು, ನಾನು ಎನ್ನುವ ಹಿರಿಯರು ಹೇಗೆ ಕಂಗೆಟ್ಟು ಕಾಲದಲ್ಲಿ ಅಡಗಿಹೋದರು ಎಂದು ಅಲ್ಲಮಪ್ರಭುದೇವರು ಒಂದಿಷ್ಟು ಸಾಲುಗಳಲ್ಲಿ ಹೇಳಿದ್ದಾರೆ… ವಚನಗಳನ್ನಿಟ್ಟು ಒಂದು ಸೂತ್ರದಲ್ಲಿ ನೀವು ನೋಡುವ ಕ್ರಮ ಬಹಳ ಮಾರ್ಮಿಕವಾಗಿದೆ, ಧನ್ಯವಾದಗಳು ಸರ್.

  5. ರುದ್ರಪ್ಪ ವಿ.ಪಿ.
    Jan 25, 2023 Reply

    ಎಲ್ಲವನ್ನೂ ಬಲ್ಲೆವೆಂದು ತಮ್ಮ ಮನಸ್ಸನ್ನು ಮುಚ್ಚಿಕೊಂಡ ಹಿರಿಯರೆಲ್ಲರ ಪಾಡು ನಾಯಿಪಾಡೇ. ತಾವು ತಿಳಿದದ್ದೇ ನಿಜ ಎನ್ನುವ ಭ್ರಾಂತಿ ಅವರನ್ನು ಆವರಿಸಿಕೊಳ್ಳುವುದರಿಂದ ಅವರಿಗೆ ಲಿಂಗದರಿವು ಎಂದೆಂದಿಗೂ ಮೂಡಲಾರದು. ಇವತ್ತಿನ ಪರಿಸ್ಥಿತಿ ಕೂಡ ಭಿನ್ನವಾಗಿ ಇಲ್ಲ. ಹೊಸ ತಲೆಮಾರಿನವರನ್ನು ಎಲ್ಲದರಲ್ಲೂ ದಿಕ್ಕು ತಪ್ಪಿಸಿ ತಮ್ಮ ಅಲ್ಪಜ್ಞಾನವನ್ನೇ ಮಹಾಜ್ಞಾನವೆನ್ನುವಂತೆ ಬಿಂಬಿಸುವವರ ಬಗ್ಗೆ ಎಚ್ಚರವಾಗಿರಬೇಕು ಎನ್ನುತ್ತವೆ ಇಲ್ಲಿಯ ವಚನಗಳು.

  6. Vasanthkumar D, Bangalore
    Jan 25, 2023 Reply

    ಬಡಾಯಿ ಕೊಚ್ಚುವ ವಯಸ್ಸಾದವರನ್ನೆಲ್ಲಾ ಹೀನಾಮಾನವಾಗಿ ತರಾಟೆಗೆ ತೆಗೆದುಕೊಂಡ ಇಲ್ಲಿನ ಒಂದೊಂದೂ ವಚನಗಳು ಸಾರ್ವಕಾಲಿಕ ಸತ್ಯ ಹಾಗೂ ಸಮಸ್ಯೆಯನ್ನು ಹೇಳುತ್ತವೆ. ಪ್ರಭುದೇವರಿಗೆ ಇಂಥ ಮಾತಿಗರನ್ನು ಕಂಡರೆ ಕೆಂಡದಷ್ಟು ಕೋಪ ಎನ್ನುವುದು ತಿಳಿದುಬರುತ್ತದೆ.

  7. ಪ್ರದೀಪ್ ಸೋರಗಾಂವ್
    Jan 25, 2023 Reply

    ತಮ್ಮನ್ನು ತಾವು ಪೂರ್ಣಜ್ಞರೆಂದು ಕರೆದುಕೊಂಡವರು ಇವತ್ತು ಹೇಳಹೆಸರಿಲ್ಲದೆ ಹೋಗಿದ್ದಾರೆ. ಮಠಾಧೀಶರಿಗೆ ಇಂತಹ ವಚನಗಳನ್ನು ಬಾಯಿಪಾಠ ಮಾಡಿಸಬೇಕು.

  8. Shambhuminga s
    Jan 30, 2023 Reply

    ವಿಶ್ವ ಉತ್ಪತ್ತಿ ವಿಚಾರ ಅಲ್ಲಮಪ್ರಭು ಅವರ ಈ ವಚನ ವ್ಯಾಖ್ಯಾನ ಓದಿ ಬಹಳ ಆಶ್ಚರ್ಯ ಆಯಿತು… ಅವರ ವಚನ ನಿಜಕ್ಕೂ ಎಷ್ಟು ಒಳನೋಟದಿಂದ ಕೂಡಿದೆ- ನೀರು ಬಲಿಯುತ್ತಾ ಬಲಿಯುತ್ತಾ ಘನೀಭವಿಸಿ, ವಾರಿಕಲ್ಲು ಆಗುವಂತೆಯೇ ಕಣ್ಣಿಗೆ ಕಾಣದ ಶೂನ್ಯವೇ ತನ್ನೊಳಗಿನ ಒತ್ತಡದಿಂದ ಸ್ವಯಂಭುವಾಗಿ ಕಣ್ಣಿಗೆ ಕಾಣುವ ಮೂರ್ತದ ವಿವಿಧ ರೂಪುಗಳಾಗಿ ವಿಶ್ವೋತ್ಪತ್ತಿಯಾಗುತ್ತದೆ… ವಿಚಾರ ಪೂರ್ಣ ಬರಹ…

  9. ಕೈಲಾಸ ಬದಾಮಿ
    Jan 30, 2023 Reply

    ಅಹಂ ಮಮತೆ ತೊರೆದ ನಿಜವಾದ ಶರಣ ಹೇಗಿರಬೇಕೆಂದು ಪ್ರಭುದೇವರು ತಿಳಿಸಿಕೊಟ್ಟ ವಚನದಂತ ಹೋದರೆ ಅಂತಹ ಶರಣ ಯಾರ ಕಣ್ಣಿಗೆ ಬಿದ್ದರೆ ದಯವಿಟ್ಟು ತೋರಿಸಿ…

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನು ಯಾರು?
ನಾನು ಯಾರು?
December 8, 2021
ಜಗವ ಸುತ್ತಿಪ್ಪುದು ನಿನ್ನ ಮಾಯೆ…
ಜಗವ ಸುತ್ತಿಪ್ಪುದು ನಿನ್ನ ಮಾಯೆ…
April 29, 2018
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
August 2, 2020
ಶಬ್ದದೊಳಗಣ ನಿಶ್ಶಬ್ದ…
ಶಬ್ದದೊಳಗಣ ನಿಶ್ಶಬ್ದ…
July 21, 2024
ವಚನ ಸಾಹಿತ್ಯದ ಸಂಕೀರ್ಣತೆ
ವಚನ ಸಾಹಿತ್ಯದ ಸಂಕೀರ್ಣತೆ
April 29, 2018
ದೇಹ ದೇವಾಲಯ
ದೇಹ ದೇವಾಲಯ
June 12, 2025
ಕಂಡದ್ದು- ಕಾಣದ್ದು
ಕಂಡದ್ದು- ಕಾಣದ್ದು
July 10, 2025
ಅಬದ್ಧ ಆರ್ಥಿಕತೆ
ಅಬದ್ಧ ಆರ್ಥಿಕತೆ
March 5, 2019
ಜಾತಿಗಳು ಬೆರೆಯದೆ ಸುಖವಿಲ್ಲ
ಜಾತಿಗಳು ಬೆರೆಯದೆ ಸುಖವಿಲ್ಲ
September 13, 2025
ಬೆಂಕಿಯೊಳಗಣ ಬೆಳಕು
ಬೆಂಕಿಯೊಳಗಣ ಬೆಳಕು
June 12, 2025
Copyright © 2025 Bayalu