
ಸಾವಿಲ್ಲದ ಝೆನ್ ಗುರು: ಥಿಚ್ ನಾತ್ ಹಾನ್
ನಾವು ಮಾಡುವ ಪ್ರತಿಯೊಂದು ಕೆಲಸ- ಬರೆಯುವುದು, ಓದುವುದು, ಕಚೇರಿಯ ಜವಾಬ್ದಾರಿಗಳನ್ನು ನಿರ್ವಹಿಸುವುದಿರಲಿ, ಅಡಿಗೆ ಮಾಡುವಾಗಲೂ, ಚಹಾ ಕುಡಿಯುವಾಗಲೂ, ವಾಕಿಂಗ್ ಮಾಡುವಾಗಲೂ, ಪಾತ್ರೆ ತೊಳೆಯುವುದಾದರೂ ಸರಿ, ಉಸಿರಾಡುವುದೇ ಆಗಲಿ ಸಂಪೂರ್ಣವಾಗಿ ಅದರಲ್ಲಿ ತೊಡಗಿಕೊಳ್ಳಬೇಕು. ನಮ್ಮ ಕಾರ್ಯಗಳೆಲ್ಲವೂ ಅರಿವಿನಿಂದಲೇ ಕೂಡಿರಬೇಕು, ಹಾಗೆ ಪ್ರಜ್ಞಾಪೂರ್ವಕವಾಗಿರುವುದು ಹೇಗೆಂದು ತಮ್ಮ ಜೀವನುದುದ್ದಕ್ಕೂ ಪಾಲಿಸುತ್ತಾ, ಕಲಿಸುತ್ತಾ ಬಂದ ವಿಯೆಟ್ನಾಮಿನ ಝೆನ್ ಗುರು ಥಿಚ್ ನಾತ್ ಹಾನ್ ಅವರು ಈಚೆಗೆ ತಮ್ಮ 95ನೇ ವಯಸ್ಸಿನಲ್ಲಿ ನಿಧನರಾದರು. ದಿ ಮಿರಾಕಲ್ಸ್ ಆಫ್ ಮೈಂಡಫುಲನೆಸ್, ಪೀಸ್ ಈಸ್ ಎವರಿ ಸ್ಟೆಪ್, ಯೂ ಆರ್ ಹಿಯರ್- ನಂತಹ ಕ್ಲಾಸಿಕ್ ಗಳು ಸೇರಿದಂತೆ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದ ಅದ್ಭುತ ಬರಹಗಾರ, ಕವಿ ಮತ್ತು ಸಹನೆ- ಸಹಬಾಳ್ವೆಗಾಗಿ ಜೀವವನ್ನೇ ಮುಡಿಪಾಗಿಟ್ಟ ಸಾಮಾಜಿಕ ಕಾರ್ಯಕರ್ತ. ನೀತಿ- ಶಾಂತಿಯ ಕುರಿತಾಗಿ ಅವರು ನೀಡಿದ ಬೋಧನೆಗಳು ಜಗದ್ವಿಖ್ಯಾತ. ಪಾಶ್ಚಾತ್ಯರಲ್ಲಿ ಅವರು ‘ಫಾದರ್ ಆಫ್ ಮೈಂಡಫುಲನೆಸ್’ ಎಂದೇ ಖ್ಯಾತರಾಗಿದ್ದರು. ಜಗತ್ತಿನಾದ್ಯಂತ ಹರಡಿದ ಅಪಾರ ಶಿಷ್ಯ ಬಳಗ ಮತ್ತು ಭಿಕ್ಕು ಸಂಘ ಅವರನ್ನು ಪ್ರೀತಿ-ಗೌರವಗಳಿಂದ ಕರೆಯುತ್ತಿದ್ದುದು ಥಾಯ್ ಎಂದೇ. ವಿಯೆಟ್ನಾಮಿ ಭಾಷೆಯಲ್ಲಿ ಗುರುವನ್ನು ಥಾಯ್ ಎನ್ನುತ್ತಾರೆ. (ಈ ಬರಹದ ಉದ್ದಕ್ಕೂ ಅವರನ್ನು ಥಾಯ್ ಎಂದೇ ಸಂಬೋಧಿಸಲಾಗಿದೆ).
ಝೆನ್ ಎಂದರೇನೇ ಸಂಪೂರ್ಣ ಜೀವಂತಿಕೆಯಿಂದ ಬದುಕುವುದು. ಇದೊಂದು ಒಗಟಿನ, ಅರ್ಥವಾಗದ ಸಂವಾದದ, ಬಿಡಿಸಲಾಗದ ಮಂಡಿಗೆಗಳ ದಾರಿ ಎಂದು ಅನೇಕರ ಭಾವನೆ. ಆದರೆ ಇಲ್ಲಿ ರಹಸ್ಯವಾಗಿರುವಂತಹುದು ಯಾವುದೂ ಇಲ್ಲ! ಎಲ್ಲವೂ ಖುಲ್ಲಂ ಖುಲ್ಲಾ ಎನ್ನುವುದು ಝೆನ್ ಸಂತರ ದರ್ಶನ. ಯಾವುದೇ ಪೂರ್ವಾಗ್ರಹಗಳಿಲ್ಲದೆ ಜೀವಿಸುವ ಕಲೆ. ಓದಿ ತಲೆ ತುಂಬಿಕೊಂಡಿದ್ದು, ಕೇಳಿ ನಂಬಿಕೊಂಡಿದ್ದು, ಮನದಲ್ಲಿ ಭಾವಿಸಿದ್ದು, ಏನೆಲ್ಲಾ ಕಲ್ಪಿಸಿದ್ದು ಯಾವುದಕ್ಕೂ ಇಲ್ಲಿ ಬೆಲೆಯಿಲ್ಲ. ಎಲ್ಲವನ್ನೂ ಒಳಗೊಳ್ಳುತ್ತಾ, ಯಾವುದಕ್ಕೂ ಅಂಟಿಕೊಳ್ಳದೆ ಬದುಕುವ ಕುಶಲತೆ.
ಝೆನ್ ನಲ್ಲಿ ಗುರುವಿಗೆ ಬಹಳ ದೊಡ್ಡ ಸ್ಥಾನವಿದೆ. ಅಲ್ಲಿ ಗುರು ಅತ್ಯಂತ ನಿಷ್ಠುರತೆ ಮತ್ತು ಅಪಾರ ಕರುಣೆಯ ಸಂಯೋಗದಂತಿರುತ್ತಾರೆ. ಆದರೂ ಅಂತಿಮವಾಗಿ ಸ್ವಪ್ರಯತ್ನದಿಂದಲೇ ಝೆನ್ ಸಾಧನೆ ಸಾಧ್ಯ. ಮಾನಸಿಕ ಶಾಂತಿಗಾಗಿ ತಡಬಡಿಸುತ್ತಿದ್ದವರಿಗೆ ಥಾಯ್ ಅವರ ಸಾನಿಧ್ಯದಲ್ಲಿ ಸಿಗುವ ಅಭ್ಯಾಸಗಳು ಎಂತಹ ಚಂಚಲ ಮನಸ್ಸನ್ನೂ ಪಳಗಿಸುವ ಶಕ್ತಿಶಾಲಿ ಪಾಠಗಳಾಗಿದ್ದವು. ಅವರದು ಒಂದೆಡೆ ಸೌಮ್ಯ, ಸಂಕೋಚದ ಸ್ವಭಾವ- ಮತ್ತೊಂದೆಡೆ ಕಠಿಣತಮ ಎದೆಗಾರಿಕೆ; ಒಂದೆಡೆ ಸ್ಪಷ್ಟ, ನಿಷ್ಠುರ ನಡೆ, ಇನ್ನೊಂದೆಡೆ ಎಲ್ಲರನ್ನೂ- ಎಂಥವರನ್ನೂ ಪ್ರೀತಿಸುವ, ಒಳಗೊಳ್ಳುವ ಅಂತಃಕರಣ. ಒಂದೆಡೆ ಅಂತರಾಳದಲ್ಲಿಳಿದು ನಡೆವ ದಾರ್ಶನಿಕ- ಮತ್ತೊಂದೆಡೆ ಅಪ್ಪಟ ವಾಸ್ತವವಾದಿ. ಶಿಕ್ಷಣ, ವ್ಯಾಪಾರ, ತಂತ್ರಜ್ಞಾನ, ಯುದ್ಧ ಮತ್ತು ಪರಿಸರ ಬಿಕ್ಕಟ್ಟು ಸೇರಿದಂತೆ ಸಮಾಜದ ಪ್ರತಿಯೊಂದು ಸಮಸ್ಯೆಗೂ ಅವರು ಬೌದ್ಧ ಒಳನೋಟಗಳನ್ನು ಅನ್ವಯಿಸಿ ದಿಕ್ಕು ತೋರಿಸಬಲ್ಲವರಾಗಿದ್ದರು. ಪ್ರಮುಖ ಬೌದ್ಧ ಗ್ರಂಥಗಳ ಅಂಶಗಳನ್ನು ಆಧುನಿಕವಾಗಿ ಅನುವಾದಿಸಿ ಇಂದಿನ ಜನಮಾನಸಕ್ಕೆ ಮುಟ್ಟುವಂತೆ ಹೇಳಬಲ್ಲವರಾಗಿದ್ದರು. ಎರಡೂವರೆ ಸಾವಿರ ವರ್ಷಗಳ ಹಿಂದಿನ ಬುದ್ಧನನ್ನು ಆಧುನಿಕ ಜಗತ್ತು ಹೇಗೆ ಓದಿಕೊಳ್ಳುವುದು ಮತ್ತು ಹೇಗೆ ಇಂಬುಗೊಳ್ಳುವುದು ಎನ್ನುವುದನ್ನು ತಮ್ಮ ಬದುಕಿನ ಮೂಲಕವೇ ತೋರಿಸಿಕೊಟ್ಟವರು ಥಾಯ್. ಹೆಚ್ಚುಕಮ್ಮಿ ಒಂದು ಶತಮಾನದಷ್ಟು ದೀರ್ಘವಾಗಿ ಬಾಳಿದ ಅವರ ಜೀವನದ ಸಂದರ್ಭಗಳು ನಮ್ಮ ಬದುಕೇ ನಮ್ಮ ಸಂದೇಶವಾಗಬೇಕೆನ್ನುವ ಅವರ ಮಾತನ್ನು ಎತ್ತಿ ಎತ್ತಿ ತೋರಿಸುವಂತಿವೆ.
ತಮ್ಮದೇ ಹಾದಿಯಲ್ಲಿ ನಡೆದ ಥಾಯ್ ಅವರದು ಉದ್ದಕ್ಕೂ ಕ್ರಿಯಾಶೀಲ ಬದುಕು. ಹುಟ್ಟಿದ್ದು ಮಧ್ಯ ವಿಯೆಟ್ನಾಂನಲ್ಲಿ, 1926ರಲ್ಲಿ. ಆರೇಳು ವರ್ಷವಿದ್ದಾಗ, ಹುಲ್ಲುಹಾಸಿನ ಮೇಲೆ ಶಾಂತವಾಗಿ ಕುಳಿತ ಬುದ್ಧನ ಚಿತ್ರವೊಂದು ತನ್ನ ಮನಸ್ಸನ್ನು ಇನ್ನಿಲ್ಲದಂತೆ ಆಕರ್ಷಿಸಿತೆಂದೂ. ತಾನೂ ಹಾಗೇ ಆಗಬೇಕೆಂಬ ಬಯಕೆ ಹುಟ್ಟಿಕೊಂಡಿತೆಂದೂ ಥಾಯ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಹದಿನಾರನೆ ವಯಸ್ಸಿಗೆ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಅವರು ಹ್ಯೂ ನಗರದಲ್ಲಿದ್ದ ‘ತು ಹಿಯು’ ಬುದ್ಧ ಮಂದಿರವನ್ನು ಸೇರುತ್ತಾರೆ. ವಿಯೆಟ್ನಾಂ ಬೌದ್ಧಧರ್ಮವನ್ನು ನವೀಕರಿಸುವ ಚಳುವಳಿಯಲ್ಲಿ ಉತ್ಸುಕರಾಗಿ ಪಾಲ್ಗೊಳ್ಳುತ್ತಾರೆ. ನಂತರ ಆಧುನಿಕ ವಿಷಯಗಳನ್ನು ಕಲಿಸಲು ನಿರಾಕರಿಸಿದ್ದರಿಂದ ಬೌದ್ಧ ಅಕಾಡೆಮಿಯನ್ನು ತೊರೆದು, ಸೈಗಾನ್ ವಿಶ್ವವಿದ್ಯಾಲಯದಲ್ಲಿ ವಿಜ್ಞಾನವನ್ನು ಅಭ್ಯಾಸ ಮಾಡಿದರು. ಜಾತ್ಯಾತೀತ ವಿಷಯವನ್ನು ಅಧ್ಯಯನ ಮಾಡಿದ ಮೊದಲ ಭಿಕ್ಕುಗಳಲ್ಲಿ ಇವರೂ ಒಬ್ಬರು. ಮುಂದೆ ಪ್ರಿನ್ಸಟನ್ ಥಿಯಲಾಜಿಕಲ್ ಸೆಮಿನರಿಯಲ್ಲಿ ವಿದ್ಯಾರ್ಥಿ ವೇತನದ ಮೇಲೆ ತುಲನಾತ್ಮಕ ಧರ್ಮವನ್ನು ಅಧ್ಯಯನ ಮಾಡಲು ಅಮೆರಿಕಕ್ಕೆ ಹೋಗುತ್ತಾರೆ. ಮರುವರ್ಷ ಬೌದ್ಧ ಧರ್ಮವನ್ನು ಕಲಿಸಲು ಮತ್ತು ಸಂಶೋಧನೆ ಮಾಡಲು ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಬರುತ್ತಾರೆ. 1960ರ ದಶಕದ ಆರಂಭದಲ್ಲಿ ಸ್ಕೂಲ್ ಆಫ್ ಯೂತ್ ಆಂಡ್ ಸೋಷಿಯಲ್ ಸರ್ವಿಸ್- ಎನ್ನುವ ಹತ್ತು ಸಾವಿರ ಸ್ವಯಂಸೇವಕರುಳ್ಳ ಸಂಸ್ಥೆಯನ್ನು ಸ್ಥಾಪಿಸುತ್ತಾರೆ. ಬೌದ್ಧ ಧರ್ಮದ ತತ್ವಗಳಾದ ಅಹಿಂಸೆ ಮತ್ತು ಸಹಾನುಭೂತಿಯ ಆಧಾರದ ಮೇಲೆ ಈ ಸಂಸ್ಥೆ ತನ್ನ ಚಟುವಟಿಕೆಗಳನ್ನು ನಡೆಸುತ್ತದೆ. ವಿದ್ವಾಂಸರಾಗಿ, ಶಿಕ್ಷಕರಾಗಿ, ಕಾರ್ಯಕರ್ತರಾಗಿ ತಮ್ಮ ಪಾತ್ರವನ್ನು ವಿಸ್ತರಿಸಿಕೊಂಡ ಥಾಯ್, ಸೈಗಾನ್ ನಲ್ಲಿ ವ್ಯಾನ್ ಹಾನ್ ಬೌದ್ಧ ವಿಶ್ವವಿದ್ಯಾಲಯವನ್ನು, ಲಾ ಬೋಯಿ ಪ್ರಕಾಶನಾಲಯವನ್ನು ಮತ್ತು ಶಾಂತಿ ಚಳುವಳಿಯ ಪ್ರಭಾವೀ ಪತ್ರಿಕೆಯೊಂದನ್ನು ಸ್ಥಾಪಿಸುತ್ತಾರೆ.
ವಿಯೆಟ್ನಾಂನಲ್ಲಿ ಯುದ್ಧ ಆರಂಭವಾದಾಗ ಹೊರಗೆ ಬೀಳುವ ಬಾಂಬುಗಳ ಸದ್ದು ಮತ್ತು ಗಾಯಾಳುಗಳ ನೋವು ಕಿವಿಗೆ ಬೀಳುತ್ತಿದ್ದಾಗ ಮಂದಿರಗಳಲ್ಲಿದ್ದ ಭಿಕ್ಕುಗಳಲ್ಲಿ ನೈತಿಕ ಗೊಂದಲವೊಂದು ಹುಟ್ಟುತ್ತದೆ- ತಮ್ಮ ಪಾಡಿಗೆ ತಾವು ಧ್ಯಾನಾಭ್ಯಾಸ ಮುಂದುವರಿಸುವುದೇ ಅಥವಾ ಯುದ್ಧದ ಬಾಂಬ್ ಸ್ಫೋಟಗಳಲ್ಲಿ ಸಿಕ್ಕು ನರಳುತ್ತಿರುವ ಸುತ್ತಲಿನವರಿಗೆ ನೆರವಾಗುವುದೇ ಎಂದು. ಆಗ ಥಾಯ್ ಎರಡನ್ನೂ ಆಯ್ಕೆ ಮಾಡಿಕೊಳ್ಳುತ್ತಾರೆ. ಯುದ್ಧವು ತೀವ್ರಸ್ವರೂಪದಲ್ಲಿದ್ದಾಗ, ತಮ್ಮ ನಿರ್ಣಯಕ್ಕೆ ಪೂರಕವಾಗಿ ಅವರು ‘ಎಂಗೇಜ್ಡ್ ಬುದ್ಧಿಸಂ’ ಎನ್ನುವ ಹೊಸ ಆಂದೋಲನವನ್ನೇ ಹುಟ್ಟುಹಾಕುತ್ತಾರೆ. ಈ ಪದವನ್ನು ಅವರು ಮೊದಲ ಬಾರಿಗೆ ಬಳಕೆ ಮಾಡಿದ್ದು Vietnam: Lotus in a Sea of Fire ಪುಸ್ತಕದಲ್ಲಿ. ಕಠಿಣ ಪರಿಸ್ಥಿತಿಯನ್ನು ಎದುರಿಸುವಾಗ, ಅಲ್ಲಿ ದುಃಖಕ್ಕೆ ಪ್ರತಿಕ್ರಿಯಿಸುವಾಗ ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಹುಟ್ಟಿಕೊಂಡ ಪ್ರಜ್ಞೆಯ ಹೊಸ ಮಾರ್ಗವದು. ಧ್ಯಾನ ಮಾಡುವುದೆಂದರೆ ನಮ್ಮ ಸುತ್ತ ಏನು ನಡೆಯುತ್ತಿದೆ ಎನ್ನುವುದರ ಬಗೆಗೆ ತಿಳಿದಿರುವುದು… ಆ ಸಮಯದಲ್ಲಿ ಅವರನ್ನು ಸುತ್ತುವರಿದದ್ದು ಅಪಾರ ದುಃಖ-ಸಾವು-ನೋವು. ತಮ್ಮೊಳಗೂ ಹಾಗೂ ದೇಶದಲ್ಲೂ ತುಂಬಿಹೋಗಿದ್ದ ಅಶಾಂತಿಯನ್ನು, ವೇದನೆಯನ್ನು ನಿವಾರಿಸಲು ಏನನ್ನಾದರೂ ಮಾಡಲೇಬೇಕೆಂಬ ತೀವ್ರ ಪ್ರೇರಣೆಯೇ ‘ಎಂಗೇಜ್ಡ್ ಬುದ್ಧಿಸಂ’ನ ಹುಟ್ಟಿಗೆ ಕಾರಣವಾಯಿತು. ಪ್ರತ್ಯಕ್ಷ ಧ್ಯಾನದ ಸೂತ್ರವನ್ನು ಲೋಕ ವ್ಯವಹಾರದಲ್ಲಿ ಅನ್ವಯಿಸಿಕೊಳ್ಳುವುದು ಹೇಗೆಂದು ಕಲಿತ ಸಂದರ್ಭ ಅದು. ಯುದ್ಧದಲ್ಲಿ ತೀವ್ರವಾಗಿ ಗಾಯಗೊಂಡವರಿಗೆ, ಅನಾಥರಾದವರಿಗೆ, ಸೂರು ಕಳೆದುಕೊಂಡವರಿಗೆ ನೆರವಾಗಲು ತಮ್ಮ ಪ್ರಾಣದ ಹಂಗು ತೊರೆದು ಇತರೆ ಸ್ವಯಂಸೇವಕರೊಂದಿಗೆ ಹಗಲು-ರಾತ್ರಿ ಶ್ರಮಿಸುತ್ತಾರೆ. ಈ ಜನಹಿತ ಕಾರ್ಯದಲ್ಲಿ ತಮ್ಮನ್ನು ಕಳೆದುಕೊಳ್ಳುವ, ಶಕ್ತಿ ಕುಂದಿಸಿಕೊಳ್ಳುವ ಅಪಾಯವಿದ್ದುದನ್ನು ಗಮನಿಸಿ, ಅಂತರಂಗದ ಸಾಧನೆಯನ್ನು ಜೊತೆಜೊತೆಯಲ್ಲೇ ಮುಂದುವರಿಸುತ್ತಾರೆ. ಎಂತಹ ಪರಿಸ್ಥಿತಿಯಲ್ಲಿಯೂ ಮಾಡುವ ಪ್ರತಿಯೊಂದು ಕ್ರಿಯೆಯೂ ಅರಿವಿನಿಂದಲೇ ಕೂಡಿರಬೇಕೆಂಬ ಎಚ್ಚರಿಕೆ ಅಲ್ಲಿತ್ತು. ಇದರಿಂದ ತಮ್ಮನ್ನು ರಕ್ಷಿಸಿಕೊಳ್ಳುವುದು ಮಾತ್ರವೇ ಅಲ್ಲ, ಜಗತ್ತಿಗೆ ಹೆಚ್ಚು ಪರಿಣಾಮಕಾರಿಯಾಗಿ ನೆರವಾಗಲು ಸಾಧ್ಯವಾಗುತ್ತದೆಂಬ ಸತ್ಯವನ್ನು ಥಾಯ್ ಕಂಡುಕೊಂಡರು. ಅಂದಿನಿಂದ ಅವರಿಗೆ ತಮ್ಮ ಜೀವನದ ಗುರಿ ಸ್ಪಷ್ಟವಾಗುತ್ತದೆ. ವ್ಯಕ್ತಿ ಮತ್ತು ಸಮಾಜ ಎರಡಕ್ಕೂ ಪ್ರಯೋಜನಕಾರಿಯಾಗುವ ಆಂತರಿಕ ಪರಿವರ್ತನೆಯ ಕಾರ್ಯಕ್ಕಾಗಿ ತಮ್ಮ ಇಡೀ ಬದುಕನ್ನು ಸಮರ್ಪಿಸಿಕೊಳ್ಳುತ್ತಾರೆ.
ಯುದ್ಧವು ಮತ್ತೂ ಉಲ್ಬಣಗೊಂಡಾಗ, ವಿಯೆಟ್ನಾಂನಲ್ಲಿ ಯುದ್ಧದ ಹಗೆತನವನ್ನು ಕೊನೆಗಾಣಿಸಲಿಕ್ಕೆ ದೇಶದೇಶಗಳನ್ನು ಸುತ್ತಿ ಶಾಂತಿ ಮತ್ತು ಸೋದರತ್ವದ ಸಂದೇಶವನ್ನು ಹರಡತೊಡಗಿದರು. ವಿಯೆಟ್ನಾಂ ಯುದ್ಧಕ್ಕೆ ತೆರೆ ಎಳೆಯಲು ಪಾಶ್ಚಿಮಾತ್ಯ ನಾಯಕರ ಸಹಮತವನ್ನು ಬೇಡಿದರು. ಬ್ರಿಟಿಷ್, ಕೆನಡಾ ಮತ್ತು ಸ್ವೀಡಿಷ್ ಸಂಸತ್ತುಗಳನ್ನು ಉದ್ದೇಶಿಸಿ ಮಾತನಾಡಿದರು. ಪೋಪ್ ಪಾಲ್ VI ಅವರನ್ನು ಭೇಟಿ ಮಾಡಿದರು. ಆ ಸಂದರ್ಭದಲ್ಲೇ ಜೂನ್ 1, 1966ರಂದು ಅವರು ಅಮೆರಿಕದ ಗಾಂಧಿ ಎಂದೇ ಖ್ಯಾತರಾಗಿದ್ದ ಮಾರ್ಟಿನ್ ಲೂಥರ್ ಕಿಂಗ್ (ಜೂ) ಅವರನ್ನು ಚಿಕಾಗೋದಲ್ಲಿ ಭೇಟಿಯಾಗುತ್ತಾರೆ. ವಿಯೆಟ್ನಾಂನಲ್ಲಿ ಶಾಂತಿಗಾಗಿ ಕೆಲಸ ಮಾಡಲು ಮತ್ತು ಅಮೆರಿಕದಲ್ಲಿ ನಾಗರಿಕ ಹಕ್ಕುಗಳಿಗಾಗಿ ಹೋರಾಡಲು ಇಬ್ಬರೂ ತಮ್ಮ ಪ್ರಯತ್ನಗಳನ್ನು ಸಂಯೋಜಿಸಿಕೊಳ್ಳುತ್ತಾರೆ. ಥಾಯ್ ಅವರಂತೆ ಕಿಂಗ್ ಅವರಿಗೂ ಆಗ ಚಿಕ್ಕ ಪ್ರಾಯ. ಅವತ್ತಿನ ಪತ್ರಿಕಾಗೋಷ್ಠಿಯಲ್ಲಿ ಕಿಂಗ್ ಮೊದಲ ಬಾರಿಗೆ ವಿಯೆಟ್ನಾಂ ಯುದ್ಧದ ವಿರುದ್ಧ ಪ್ರಬಲವಾಗಿ ಮಾತನಾಡಿದರು. ವಿಯೆಟ್ನಾಂನಲ್ಲಿನ ಯುದ್ಧದ ಬಗೆಗಿದ್ದ ಅಮೆರಿಕಾದ ಸಾರ್ವಜನಿಕ ಅಭಿಪ್ರಾಯವನ್ನು ಬದಲಿಸುವಲ್ಲಿ ಅವರ ವಿಚಾರಗಳು ದೊಡ್ಡ ಪಾತ್ರವಹಿಸಿದವು. ಪ್ರಕ್ಷಬ್ಧ ಪರಿಸ್ಥಿತಿಯಲ್ಲಿ ಯಾವ ಪಕ್ಷದ ಪರವಾಗಿಯೂ ನಿಲ್ಲಬಾರದೆಂಬ ತಮ್ಮ ನಿರ್ಧಾರದಿಂದಾಗಿ ಉತ್ತರ ಮತ್ತು ದಕ್ಷಿಣ ವಿಯೆಟ್ನಾಂ ಎರಡರ ಶತೃತ್ವವನ್ನೂ ಥಾಯ್ ಎದುರಿಸಬೇಕಾಯಿತು. ಅವರ ಮತ್ತು ಅವರ ಪಡೆಯ ಮೇಲೆ ಮಾರಣಾಂತಿಕ ಹಲ್ಲೆಯೂ ನಡೆಯಿತು. ಇದೆಲ್ಲದರ ಪರಿಣಾಮ ಗಡೀಪಾರು ಶಿಕ್ಷೆ. ಸುಮಾರು 40 ವರ್ಷಗಳ ಕಾಲ ತಾಯ್ನಾಡ ಪ್ರವೇಶ ನಿಷೇಧಿಸಲಾಯಿತು. ಮತ್ತೆ ಥಾಯ್ ತಮ್ಮ ತಾಯ್ನೆಲ ವಿಯೆಟ್ನಾಮನ್ನು ಸ್ಪರ್ಶಿಸಿದ್ದು 2005ರಲ್ಲಿ.
ಥಾಯ್ ಅವರ ಬೋಧನೆ, ಬರವಣಿಗೆ, ಕಲಿಸುವಿಕೆ ಯಾವುದೂ ನಿಲ್ಲಲಿಲ್ಲ. ದೇಶಭ್ರಷ್ಟರಾದ ಅವರ ಕೀರ್ತಿ ವಿದೇಶಗಳಲ್ಲಿ ಬೆಳೆಯತೊಡಗಿತು. ಪಶ್ಚಿಮದಲ್ಲೇ ಅವರು ತಮ್ಮ ನೆಲೆಯನ್ನು ವಿಸ್ತರಿಸಿದರು. ಅವರ ಯುದ್ಧವಿರೋಧಿ ಕಾವ್ಯವು ಹಿಪ್ಪಿಗಳ ಸಂಗೀತಕ್ಕೆ ಸೇರಿಕೊಂಡಿತು. ಥಾಯ್ ಅವರ ಕಳಕಳಿ-ಕಾರ್ಯಕ್ಕೆ ಮಾರ್ಟಿನ್ ಲೂಥರ್ ಕಿಂಗ್ ಎಷ್ಟು ಪ್ರಭಾವಿತರಾಗಿದ್ದರೆಂದರೆ 1967ರ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಅವರನ್ನು ನಾಮನಿರ್ದೇಶನ ಮಾಡಿದರು. ಥಾಯ್ 1969ರಲ್ಲಿ ಪ್ಯಾರಿಸಿನಲ್ಲಿ ಶಾಂತಿ ಮಾತುಕತೆಗೆ ಬೌದ್ಧ ನಿಯೋಗದ ನೇತೃತ್ವ ವಹಿಸಿದರು. 1970ರ ದಶಕದ ಆರಂಭದಲ್ಲಿ ಪ್ಯಾರಿಸಿನ ಸೋಬಾರ್ನ್ ವಿಶ್ವವಿದ್ಯಾಲಯದಲ್ಲಿ ಬೌದ್ಧ ಧರ್ಮದ ಉಪನ್ಯಾಸಕ ಮತ್ತು ಸಂಶೋಧಕರಾಗಿದ್ದರು. ಅಲ್ಲೇ ಹತ್ತಿರವೇ ಸ್ವೀಟ್ ಪೊಟ್ಯಾಟೋ ಸಮುದಾಯವನ್ನು ಸ್ಥಾಪಿಸಿದರು. ಫ್ರಾನ್ಸನ ನೈರುತ್ಯದಲ್ಲಿ ದೊಡ್ಡ ಜಾಗದಲ್ಲಿ ಇದನ್ನು ಸ್ಥಳಾಂತರಿಸಿ, ಅಲ್ಲಿಯೇ ನೆಲೆನಿಂತರು, ಮುಂದೆ ಇದೇ ಪ್ಲಮ್ ವಿಲೇಜ್ ಎಂದು ಪ್ರಖ್ಯಾತವಾಯಿತು. ಹಳ್ಳಿಯ ಸಣ್ಣ ಫಾರ್ಮ್ ಸ್ಟೆಡ್ ನಿಂದ ಆರಂಭವಾದ ಇದು ಥಾಯ್ ಅವರ ನಾಯಕತ್ವದಲ್ಲಿ 200ಕ್ಕೂ ಹೆಚ್ಚು ಬೌದ್ಧ ಭಿಕ್ಕುಗಳು ನೆಲೆಸಿರುವ ಪಶ್ಚಿಮದ ಅತಿದೊಡ್ಡ ಬೌದ್ಧ ವಿಹಾರವಾಗಿ ಬೆಳೆಯಿತು. ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಆಸಕ್ತರು ಇಲ್ಲಿಗೆ ‘ದಿ ಆರ್ಟ್ ಆಫ್ ಮೈಂಡಫುಲ್ ಲಿವಿಂಗ್’ ಕಲಿಯಲು ಬರುತ್ತಾರೆ. ಮಿಸ್ಸಿಸ್ಸಿಪ್ಪಿಯಿಂದ ಥೈಲ್ಯಾಂಡವರೆಗೆ ಇದರ ಎಂಟು ಶಾಖೆಗಳು ಹುಟ್ಟಿಕೊಂಡವು. ಥಾಯ್ ಬರೆದ ಪುಸ್ತಕಗಳು ಮೂವತ್ತಕ್ಕೂ ಹೆಚ್ಚಿನ ಭಾಷೆಗಳಿಗೆ ಅನುವಾದಗೊಂಡವು. ಇಪ್ಪತ್ತನೆಯ ಶತಮಾನದ ತಿರುವಿನಲ್ಲಿ ಪಾಶ್ಚಾತ್ಯರ ಬೌದ್ಧ ಧರ್ಮದ ಬಗೆಗಿನ ಆಸಕ್ತಿ ಮತ್ತೆ ಮರುಹುಟ್ಟು ಪಡೆಯಲು ಥಾಯ್ ಮಹತ್ವದ ಪಾತ್ರವಹಿಸಿದರು.
ತಮ್ಮ ಬದುಕಿನ ಕೊನೆಯ ದಶಕದಲ್ಲೂ ಥಾಯ್ ಎಷ್ಟು ಕಾರ್ಯತತ್ಪರರಾಗಿದ್ದರೆಂದರೆ- ಕ್ಯಾಲಿಫೋರ್ನಿಯಾ, ಹಾಂಕಾಂಗ್, ಪ್ಯಾರಿಸ್, ಥೈಲ್ಯಾಂಡ್, ಮಿಸ್ಸಿಸ್ಸಿಪ್ಪಿ, ಜರ್ಮನಿ, ನ್ಯೂಯಾರ್ಕ್, ಆಸ್ಟ್ರೇಲಿಯಾ… ಹೀಗೆ ಜಗತ್ತಿನಾದ್ಯಂತ ಅನೇಕ ಕಡೆ ಅನ್ವಯಿಕ ಬೌದ್ಧ ವಿಹಾರ (Applied Buddhist Centres)ಗಳನ್ನು ತೆರೆದಿದ್ದಾರೆ. ಆಸ್ಟ್ರೇಲಿಯಾದ ಮೆಲ್ಬಾರ್ನ್ ನಲ್ಲಿ ವಿಶ್ವಧರ್ಮ ಸಂಸತ್ತನ್ನು ಮತ್ತು ಪ್ಯಾರಿಸ್ ನಲ್ಲಿ ಯೂನೆಸ್ಕೊವನ್ನು ಉದ್ದೇಶಿಸಿ ಹಿಂಸೆ, ಯುದ್ಧ ಮತ್ತು ಜಾಗತಿಕ ತಾಪಮಾನಗಳನ್ನು ಹಿಮ್ಮೆಟ್ಟಿಸಲು ತೆಗೆದುಕೊಳ್ಳಬೇಕಾದ ಜರೂರು ಕ್ರಮಗಳ ಕುರಿತು ಮಾತನಾಡಿದ್ದಾರೆ. ಗೂಗಲ್, ವರ್ಲ್ಡ್ ಬ್ಯಾಂಕ್ ಮತ್ತು ಹಾರ್ವರ್ಡ್ ಸ್ಕೂಲ್ ಆಫ್ ಮೆಡಿಸನ್ ನಲ್ಲಿ ಅರಿವಿನ ಜಾಗೃತಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.
ಎಲ್ಲಾ ವಯೋಮಾನದ ಯಾವುದೇ ಹಿನ್ನೆಲೆಯ ಆಸಕ್ತರು ‘ದಿ ಆರ್ಟ್ ಆಫ್ ಮೈಂಡಫುಲ್ ಲಿವಿಂಗ್’ ಅನ್ನು ಕಲಿಯಬಹುದು. ಇದೊಂದು ವಿಶೇಷ ಕಲಿಕೆ. ಮುಖ್ಯವಾಗಿ ಇಲ್ಲಿ ಪ್ರತ್ಯಕ್ಷ ಧ್ಯಾನವನ್ನು ಹೇಳಿಕೊಡಲಾಗುತ್ತದೆ. ಕಣ್ಮುಚ್ಚಿ ಮೆತ್ತನೆಯ ಆಸನದಲ್ಲಿ ಕುಳಿತುಕೊಳ್ಳುವುದಲ್ಲ, ಬದಲಿಗೆ ನಮ್ಮ ನಿತ್ಯದ ಕ್ರಿಯೆಗಳಲ್ಲಿ- ನಡೆಯುವಲ್ಲಿ, ಕುಳಿತುಕೊಳ್ಳುವಲ್ಲಿ, ಕೆಲಸ ಮಾಡುವಲ್ಲಿ, ಊಟ ಮಾಡುವಲ್ಲಿ, ವಿಶ್ರಾಂತಿ ತೆಗೆದುಕೊಳ್ಳುವಲ್ಲಿ ಹಾಗೂ ಉಸಿರಾಡುವಾಗಲೂ ಹೇಗೆ ಎಚ್ಚರದಿಂದ ಅರಿವಿನೊಂದಿಗೆ ಬದುಕಬೇಕೆಂಬುದನ್ನು ಕಲಿಸಿಕೊಡಲಾಗುತ್ತದೆ. ಪುರಾತನ ಬೌದ್ಧ ಆಚರಣೆಗಳಾದ ಇವುಗಳನ್ನು ಥಾಯ್ ನಮ್ಮ ಪ್ರಸ್ತುತ ಜಾಯಮಾನಕ್ಕೆ, ಸವಾಲುಗಳಿಗೆ ಹೊಂದಿಕೆಯಾಗುವಂತೆ ಸುಲಭವಾಗಿಯೂ, ಸಮರ್ಥವಾಗಿಯೂ ಅನ್ವಯಿಸಿಕೊಳ್ಳಲು ಸಾಧ್ಯವಾಗುವಂತೆ ಅಭಿವೃದ್ಧಿಪಡಿಸಿದ್ದಾರೆ. ಆಧುನಿಕ ಜಗತ್ತಿಗೆ ಹೊಂದುವಂತೆ ಬೌದ್ಧತತ್ವಗಳನ್ನು ಪರಿವರ್ತಿಸಿದ್ದಾರೆ. ಒಂದು ಅಂದಾಜಿನ ಪ್ರಕಾರ ಜಗತ್ತಿನಾದ್ಯಂತ ಪ್ರತಿ ವರ್ಷ ಸುಮಾರು ಒಂದು ಲಕ್ಷ ಜನರಿಗೆ ಪ್ಲಮ್ ವಿಲೇಜಿನ ಭಿಕ್ಕುಗಳು ಈ ತರಬೇತಿಯನ್ನು ನಡೆಸಿಕೊಡುತ್ತಾರೆ! ವ್ಯಾಪಾರಸ್ಥರು, ಶಿಕ್ಷಕರು, ಆರೋಗ್ಯ ಸೇವೆಯ ವೃತ್ತಿಪರರು, ಮಾನಸಿಕ ಚಿಕಿತ್ಸಕರು, ಕುಟುಂಬಗಳು, ರಾಜಕಾರಣಿಗಳು, ಯುವಜನರಿಗೆ ಅರಿವಿನ ಪ್ರತ್ಯಕ್ಷ ಧ್ಯಾನದ ತರಬೇತಿಗಳನ್ನು ನೀಡಲಾಗುತ್ತದೆ. ಯುವ ತಲೆಮಾರಿನವರಿಗಾಗಿ ಮೈಂಡಫುಲ್ ಲಿವಿಂಗ್ ಕಲಿಸಲಿಕ್ಕೆ ವೇಕಪ್ (Wake Up) ಎನ್ನುವ ಜಾಗತಿಕ ಚಳುವಳಿಯನ್ನು ಹುಟ್ಟುಹಾಕಿದ್ದಾರೆ.
ಬೌದ್ಧಜ್ಞಾನದಿಂದ ಪ್ರಯೋಜನ ಪಡೆಯಲು ಪರ್ವತದ ಮೇಲೆ ವರ್ಷಗಳನ್ನು ಕಳೆಯಬೇಕಿಲ್ಲ ಎನ್ನುವ ಥಾಯ್ ಪ್ರಸ್ತುತ ಕ್ಷಣದಲ್ಲಿ ಬದುಕುವ ಮಾರ್ಗವನ್ನು ತೋರಿಸಿದರು. ಉಸಿರಾಟದ ಮೂಲಕ ದೈನಂದಿನ ಚಟುವಟಿಕೆಗಳಲ್ಲಿ ಸಂತೋಷವನ್ನೂ, ಬದುಕಿನಲ್ಲಿ ಅದ್ಭುತ ಗುಣಮಟ್ಟವನ್ನೂ ಸಾಧಿಸುವುದು ಹೇಗೆಂದು ಕಲಿಸಿದರು. ಜಾಗರೂಕರಾಗಿದ್ದು ಪ್ರಜ್ಞಾ ವಲಯಕ್ಕೆ ಬಂದರೆ ಸಂಪೂರ್ಣವಾಗಿ ವಸ್ತುಸ್ಥಿತಿಯಲ್ಲಿ ಬದುಕುವುದು ಗೊತ್ತಾಗುತ್ತದೆ, ಆಗ ಆತಂಕಗಳು, ದ್ವಂದ್ವಗಳು ಕಣ್ಮರೆಯಾಗುತ್ತವೆ. ಜೀವನದಲ್ಲಿ ಸ್ಪಷ್ಟತೆ ಸಿಗುತ್ತದೆ, ಸಮಯಾತೀತತೆಯ ತೆಕ್ಕೆಗೆ ಸೇರುತ್ತೀರಿ, ಆಗ ದಯೆ ಮತ್ತು ಕರುಣೆಯಂತಹ ಅತ್ಯುನ್ನತ ಗುಣಗಳು ಹೊರಹೊಮ್ಮತೊಡಗುತ್ತವೆ… ಎನ್ನುವ ಥಾಯ್ ಮಾತುಗಳು ಧರ್ಮದ ಗೊಡವೆ ಒಲ್ಲದ ಕೇವಲ ಸತ್ಯವನ್ನರಸುವ ಪಾಶ್ಚಾತ್ಯರಿಗೆ ಹತ್ತಿರವಾದವು. ದೊಡ್ಡ ದೊಡ್ಡ ಹುದ್ದೆಯಲ್ಲಿ ಬಸವಳಿದು ಹೋಗಿದ್ದ ಕಾರ್ಯನಿರ್ವಾಹಕರುಗಳು, ಮದ್ಯ ಹಾಗೂ ಮಾದಕದ್ರವ್ಯಗಳ ವ್ಯಸನದಿಂದ ಹೊರಬರಲು ಬಯಸುವವರು ಥಾಯ್ ಅವರ ಮಾತುಗಳನ್ನು ಕೇಳಲು ಫ್ರೆಂಚ್ ಗ್ರಾಮಕ್ಕೆ ನಡೆದರು. ಅರಿವಿನ ಚಳುವಳಿಯೇ ಮೈದಳೆಯಿತು. ಅಮೆರಿಕದ ವೈದ್ಯರಾದ ಜಾನ್ ಕಬಟ್-ಜಿನ್ ಇವರ ಶಿಷ್ಯರಾಗಿದ್ದು, Mindfulness Based Stress Reduction course ನ ಸಂಸ್ಥಾಪಕರಾದರು. ಈಗ ಜಗತ್ತಿನಾದ್ಯಂತ ಆಸ್ಪತ್ರೆ ಮತ್ತು ವೈದ್ಯಕೀಯ ಕೇಂದ್ರಗಳಲ್ಲಿ ಇದರ ಸಹಾಯ ಪಡೆಯಲಾಗುತ್ತಿದೆ. ಸಮೀಕ್ಷೆಯೊಂದು ಹೇಳುವಂತೆ ಶೇಕಡಾ 35ರಷ್ಟು ಉದ್ಯಮಿಗಳು ತಮ್ಮ ಕಚೇರಿಗಳಲ್ಲಿ ಈ ಮೈಂಡಫುಲನೆಸ್ ತತ್ವವನ್ನು ಅಳವಡಿಸಿಕೊಂಡಿದ್ದಾರೆ.
ಭಾರತಕ್ಕೆ ಭೇಟಿ ಕೊಟ್ಟಾಗ-
ಭಾರತಕ್ಕೆ ಥಾಯ್ 2008ರಲ್ಲಿ ಬಂದಾಗಿನ ಒಂದು ನೆನಪು. ಅದು ಅಕ್ಟೋಬರ್ ತಿಂಗಳು. ದಿ ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆಯು ಗಾಂಧೀಜಿಯ 139ನೆಯ ಜಯಂತಿಯ ಅಂಗವಾಗಿ ಥಾಯ್ ಅವರನ್ನು ಶಾಂತಿ ಆವೃತ್ತಿಯ ವಿಶೇಷ ಅತಿಥಿ ಸಂಪಾದಕರಾಗಿ ಆಹ್ವಾನಿಸಿತ್ತು. ಅಂದು ಪ್ರಕಟವಾದ ಅಕ್ಟೋಬರ್ 2 ರ ಮುಖಪುಟದ ಲೇಖನದ ಶೀರ್ಷಿಕೆ- ಸಂಕಷ್ಟದ ಸಮಯದಲ್ಲಿ ಶಾಂತಿಗಾಗಿ ಅನ್ವೇಷಣೆ. ಅವತ್ತು ಅಗರ್ತಲಾದಲ್ಲಿ ಬಾಂಬ್ ಸ್ಫೋಟವಾಗಿ ನಾಲ್ವರು ಸಾವನ್ನಪ್ಪಿದ್ದ ಆಘಾತಕಾರಿ ಸುದ್ದಿಯ ಪಕ್ಕದಲ್ಲೇ ಈ ಲೇಖನವನ್ನು ಮುದ್ರಿಸಲಾಗಿತ್ತು…
ಹಿಂದಿನ ದಿನ, ಅಕ್ಟೋಬರ್ ಒಂದರಂದು ಮಧ್ಯಾಹ್ನ ಈ ಸುದ್ದಿ ಪತ್ರಿಕಾ ಕಚೇರಿಗೆ ಮುಟ್ಟಿದಾಗ, ಪ್ರೆಸ್ಸಿನ ಮೀಟಿಂಗ್ ರೂಮಿನಲ್ಲಿ ವಿಶೇಷ ಶಾಂತಿ ಆವೃತ್ತಿಯ ಅತಿಥಿ ಸಂಪಾದಕರಾಗಿ ಕುಳಿತಿದ್ದವರು ಥಾಯ್. ಪತ್ರಕರ್ತರೆಲ್ಲರ ಕಣ್ಣುಗಳು ಅವರತ್ತ ತಿರುಗಿದವಂತೆ, ಪತ್ರಕರ್ತರಾದ ನಾವು ಇಂತಹ ದಿನಗಳಲ್ಲಿ ಏನು ಮಾಡಬೇಕು? ಎಂದು ಪ್ರಶ್ನಿಸಿದರಂತೆ.
ವಿಯೆಟ್ನಾಮಿನಲ್ಲಿ ಬಾಂಬ್ ದಾಳಿಗೊಳಗಾದ ಹಳ್ಳಿಗಳನ್ನು ಮರುನಿರ್ಮಾಣ ಮಾಡಿದ, ಶಾಲೆಗಳು ಮತ್ತು ವೈದ್ಯಕೀಯ ಕೇಂದ್ರಗಳನ್ನು ತೆರೆದ, ನಿರಾಶ್ರಿತ ಕುಟುಂಬಗಳಿಗೆ ಪುನರ್ವಸತಿಗೆ ವ್ಯವಸ್ಥೆ ಕಲ್ಪಿಸಲು ಜೀವನವಿಡಿ ಶ್ರಮಿಸಿದ ಆ ಝೆನ್ ಗುರು ಸ್ವಲ್ಪ ಕಾಲ ಮೌನವಾಗಿ ಯೋಚಿಸಿ ಮಾತನಾಡಿದರು: ಅವರ ವಿಚಾರಗಳಲ್ಲಿ ಸ್ಪಷ್ಟತೆ ಇತ್ತು- “ಈ ಸಂದರ್ಭಗಳಲ್ಲಿ ಪತ್ರಕರತರಾದ ನೀವು ವಹಿಸುವ ಪಾತ್ರ ಬಹಳ ಮಹತ್ವವಾದದ್ದು. ಇಂತಹ ಸಂಗತಿಗಳು ಯಾಕೆ ನಡೆಯುತ್ತಿವೆ, ಕೋಪ, ಭಯ, ದ್ವೇಷ ಮತ್ತು ತಪ್ಪುಗ್ರಹಿಕೆಗಳಲ್ಲಿ ಅವರ ಬೇರುಗಳಿರುವುದರಿಂದಲ್ಲವೇ ಎಂದು ಓದುಗರು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ವರದಿ ಮಾಡಿ. ಕೋಪವು ಸಾಮೂಹಿಕ ಶಕ್ತಿಯಾಗುವುದನ್ನು ತಡೆಯಿರಿ. ಕೋಪ ಮತ್ತು ಹಿಂಸೆಗೆ ಪ್ರತಿವಿಷವೆಂದರೆ ಸಹಾನುಭೂತಿಯೇ. ಭಯೋತ್ಪಾದಕರು ಸಹ ಬಲಿಪಶುಗಳು, ಅವರು ತಪ್ಪು ತಿಳಿವಳಿಕೆಯ ಇತರೆ ಬಲಿಪಶುಗಳನ್ನು ಸೃಷ್ಟಿಸುತ್ತಾರೆ… ಪ್ರತಿ ಓದುಗನಲ್ಲಿ ಭಯ, ಕೋಪ, ಹಿಂಸೆ ಮತ್ತು ಹತಾಶೆಯ ಬೀಜಗಳಿವೆ. ಜೊತೆಗೆ ಭರವಸೆ, ಸಹಾನುಭೂತಿ, ಪ್ರೀತಿ ಮತ್ತು ಕ್ಷಮೆಯ ಬೀಜಗಳೂ ಇರುತ್ತವೆ. ಪತ್ರಕರ್ತರಾದ ನೀವು ಸರಿಯಾದ ಬೀಜಗಳನ್ನು ಗುರುತಿಸಿ ನೀರೆರೆಯಿರಿ. ತಪ್ಪು ಬೀಜಗಳಿಗೆ ನೀರೆರೆಯಬಾರದು. ನೀವು ಬರೆಯುವ ಬರಹಗಳು ಭರವಸೆಯ ಬೀಜಗಳನ್ನು ಸ್ಪರ್ಶಿಸಬೇಕು. ದ್ವೇಷದ ಬೀಜಗಳಿಗೆ ನೀರು ಹಾಕದಂತೆ ಸತ್ಯವನ್ನು ಹೇಳಲು ಪ್ರಯತ್ನಿಸಬೇಕು. ನಿಮ್ಮ ವರದಿಯಲ್ಲಿ ಏನಿದೆ ಎಂಬುದು ಮುಖ್ಯವಲ್ಲ, ಅದನ್ನು ಹೇಗೆ ಹೇಳುತ್ತೀರಿ ಎಂಬುದು ಮುಖ್ಯ.” ಅವರ ಮಾತುಗಳು ಅವರ ವಿಚಾರಗಳಷ್ಟೇ ಸ್ಪಷ್ಟವಾಗಿದ್ದವು- ನಾವು ಮೊದಲು ನಮ್ಮ ನಿಜವಾದ ಶತ್ರುವನ್ನು ಗುರುತಿಸಿಕೊಳ್ಳಬೇಕು ಮತ್ತು ಅದನ್ನು ನಿವಾರಿಸಿಕೊಳ್ಳಲು ಅಹಿಂಸಾತ್ಮಕ ಮಾರ್ಗಗಳನ್ನೇ ಕಂಡುಕೊಳ್ಳಬೇಕು. ಮನುಷ್ಯನ ನಿಜವಾದ ಶತ್ರು ಮನುಷ್ಯನಲ್ಲ. ಮನುಷ್ಯನ ಮನಸ್ಸಲ್ಲಿರುವ ಕೋಪ, ದ್ವೇಷ, ತಾರತಮ್ಯಗಳೇ ನಿಜವಾದ ಶತ್ರು ಎನ್ನುವುದು ಅವರ ಸ್ಪಷ್ಟ ಅಭಿಮತ. ಅವರ ಅನುಭಾವಿಕ ಮಾತುಗಳು ಇಂದಿಗೂ ಮಾಧ್ಯಮಗಳು ಅಳವಡಿಸಿಕೊಳ್ಳಲೇ ಬೇಕಾದ ಕಿವಿಮಾತು ಎಂಬುದರಲ್ಲಿ ಯಾವ ಅನುಮಾನಗಳೂ ಇಲ್ಲ.
ಕೊನೆಯ ವರ್ಷಗಳಲ್ಲಿ-
ಥಾಯ್ ತಮ್ಮ ಬದುಕು ಮತ್ತು ಬೋಧನೆಗಳ ಮೂಲಬೇರು ವಿಯೆಟ್ನಾಮಿನಲ್ಲಿದೆ ಎಂಬುದನ್ನು ಮರೆಯಲಿಲ್ಲ. ತಮ್ಮ 88ನೇ ವಯಸ್ಸಿನ ತರುವಾಯ ಆರೋಗ್ಯ ತೀವ್ರವಾಗಿ ಕ್ಷೀಣಿಸಿದ ಪರಿಣಾಮವಾಗಿ ಪಾರ್ಶ್ವವಾಯುವಿಗೆ ಒಳಗಾದರು. ಮಾತನಾಡಲು ಸಾಧ್ಯವಾಗದಿದ್ದರೂ ತಮ್ಮ ಪ್ರಶಾಂತ, ನಿರ್ಮಲ ಉಪಸ್ಥಿತಿಯ ಮೂಲಕ ಧರ್ಮ ಮತ್ತು ಸ್ಫೂರ್ತಿಯನ್ನು ನೀಡುತ್ತಿದ್ದರು. ಬದುಕಿನ ಕೊನೆಯ ನಾಲ್ಕು ವರ್ಷಗಳನ್ನು ಅವರು ಕಳೆದದ್ದು ಹದಿನಾರರ ಹರಯದಲ್ಲಿ ಎಲ್ಲಿ ದೀಕ್ಷೆ ಪಡೆದು ತಮ್ಮ ಬೌದ್ಧ ಬದುಕಿನ ಪಯಣವನ್ನು ಆರಂಭಿಸಿದ್ದರೋ ಅದೇ ತು ಹಿಯೊ ಮಂದಿರದಲ್ಲಿ. ಗಾಲಿಕುರ್ಚಿಯಲ್ಲಿ ಹೊರಬಂದು ಮಂದಿರದಲ್ಲಿದ್ದ ಪೂರ್ವಜರ ಸ್ತೂಪಗಳ ಶಾಂತಿಯುತ ವಾತಾವರಣದಲ್ಲಿ, ಅಲ್ಲಿದ್ದ ಕೊಳದ ಸುತ್ತ ಸಂಘದ ವಾಕಿಂಗ್ ಮೆಡಿಟೇಶನ್ ನಡೆಸಿಕೊಡುತ್ತಿದ್ದರು. ತಮ್ಮನ್ನು ಕಾಣಲು ಸಾವಿರಾರು ಸಂಖ್ಯೆಯಲ್ಲಿ ದೂರದೂರದ ದೇಶಗಳಿಂದ ಬರುವವರನ್ನು ಅದೇ ನಗುಮೊಗದಿಂದ ಭೇಟಿಯಾಗುತ್ತಿದ್ದರು. ಪ್ರಪಂಚದಾದ್ಯಂತ ಅನೇಕ ಕಡೆ ಬುದ್ಧ ವಿಹಾರಗಳನ್ನು ನಿರ್ಮಿಸಿದ್ದರೂ ಕೊನೆಗೆ ಅವರು ತಮ್ಮ ಆಧ್ಯಾತ್ಮದ ಮೂಲ ವಂಶಜರ ಬಳಿಗೆ ಬಂದದ್ದು ಅಮೂಲ್ಯವಾದ ನಿರ್ಣಯವೆಂದು ಸಂಘದ ಹಿರಿಯ ಭಿಕ್ಕುಗಳು ಪ್ರೀತಿ, ಗೌರವ, ಅಭಿಮಾನಗಳಿಂದ ಸ್ಮರಿಸಿಕೊಳ್ಳುತ್ತಾರೆ.
ದೇಹಾಂತ್ಯದ ಬಳಿಕ ತಮ್ಮ ಅಸ್ತಿಬೂದಿಗೆ ಸ್ತೂಪ ಕಟ್ಟಿ- ‘ನಮ್ಮ ಪ್ರೀತಿಯ ಗುರುಗಳು ಇಲ್ಲಿದ್ದಾರೆ’- ಎಂದು ಸ್ಮಾರಕ ಬರೆಯಲು ಇಚ್ಛಿಸಿದ ಶಿಷ್ಯರಿಗೆ ಹಾಗೆಲ್ಲಾ ಮಂದಿರದ ಜಾಗವನ್ನು ವ್ಯರ್ಥಮಾಡಬೇಡಿ ಎಂದು ಸಲಹೆ ನೀಡುತ್ತಾ- “ನನ್ನನ್ನೊಂದು ಸಣ್ಣ ಮಡಕೆಯಲ್ಲಿ ಹಾಕಿ ಅಲ್ಲಿಡಲು ಹೋಗಬೇಡಿ… ನಾನು ಆ ರೀತಿಯಾಗಿ ಮುಂದುವರಿಯಲು ಇಚ್ಛಿಸುವುದಿಲ್ಲ. ನನ್ನ ಬೂದಿಯನ್ನು ಹೊರಗಿರುವ ಗಿಡಗಳ ಬುಡಕ್ಕೆ ಹಾಕಿ, ಅವು ಬೆಳೆಯಲು ನೆರವಾಗಿ… ಹಾಗೊಮ್ಮೆ ನೀವು ಸ್ತೂಪ ಕಟ್ಟಲೇಬೇಕೆಂದು ಹಠ ಹಿಡಿಯುವುದಾದರೆ- ನೀವು ಹಾಕುವ ಫಲಕದಲ್ಲಿ “ನಾನಿಲ್ಲಿ ಇಲ್ಲ” ಎಂದೇ ಬರೆಯಿರಿ. ಜನರಿಗೆ ಅದು ಅರ್ಥವಾಗದಿದ್ದರೆ, ಎರಡನೆಯ ಫಲಕದಲ್ಲಿ- “ನಾನಲ್ಲಿ ಹೊರಗೂ ಇಲ್ಲ” ಎಂದು ಬರೆಯಿರಿ, ಆಗಲೂ ಜನರಿಗೆ ಗೊಂದಲವಾಗುವುದಾದರೆ, ಕೊನೆಯ ಫಲಕದಲ್ಲಿ- ‘ನಿಮ್ಮ ಉಸಿರಾಟ ಹಾಗೂ ನಡಿಗೆಯಲ್ಲಿ ನನ್ನ ಕಾಣಬಹುದು’ ಎಂದು ಬರೆಯಿರಿ. ಥಾಯ್ ಮತ್ತೆ ಹೇಳುತ್ತಾರೆ- ನನ್ನ ಈ ದೇಹವು ವಿಘಟಿತಗೊಂಡು ಕೊಳೆಯುತ್ತದೆ. ಆದರೆ ನನ್ನ ಕ್ರಿಯೆಗಳು ನನ್ನನ್ನು ಮುಂದುವರಿಸುತ್ತವೆ. ನನ್ನ ದಿನನಿತ್ಯದ ಬದುಕಿನಲ್ಲಿ ನಾನು ಯಾವಾಗಲೂ ನನ್ನ ಸುತ್ತಲೂ ನನ್ನ ಮುಂದುವರಿಕೆಯನ್ನು ನೋಡಲು ಅಭ್ಯಾಸ ಮಾಡುತ್ತೇನೆ. ಈ ದೇಹದ ವಿಸರ್ಜನೆಯು ಪೂರ್ತಿಯಾಗುವ ತನಕ ನಾವು ಕಾಯಬೇಕಿಲ್ಲ- ಪ್ರತಿಕ್ಷಣದಲ್ಲೂ ನಾವು ಮುಂದುವರಿಯುತ್ತೇವೆ. ಈ ದೇಹ ಮಾತ್ರ ನಾನೆಂದು ನೀವು ಭಾವಿಸಿದ್ದರೆ ನೀವು ನಿಜಕ್ಕೂ ನನ್ನನ್ನು ನೋಡಿಲ್ಲ. ನೀವು ನನ್ನ ಸ್ನೇಹಿತರನ್ನು ನೋಡಿದಾಗ, ಅಲ್ಲಿ ನೀವು ನನ್ನ ಮುಂದುವರಿಕೆಯನ್ನು ಕಾಣುತ್ತೀರಿ. ಯಾರಾದರೂ ದಯೆಯಿಂದ ನಡೆಯುವುದನ್ನು ಕಂಡಾಗ, ಅವರು ನನ್ನ ಮುಂದುವರಿಕೆಯೆಂದು ನಿಮಗೆ ತಿಳಿಯುತ್ತದೆ. ನಾನು ಸಾಯುತ್ತೇನೆ- ಎಂದೇಕೆ ಅಂದುಕೊಳ್ಳುವಿರೆಂದು ನನಗೆ ಗೊತ್ತಾಗುತ್ತಿಲ್ಲ. ನಾನಾಗಲೇ ನನ್ನನ್ನು ನಿಮ್ಮಲ್ಲಿ, ಇತರರಲ್ಲಿ, ಮತ್ತು ಮುಂದಿನ ಜನಾಂಗದಲ್ಲಿ ಕಾಣುತ್ತಿದ್ದೇನೆ. ಆಕಾಶದಲ್ಲಿ ಈಗ ಕಾಣುತ್ತಿದ್ದ ಮೋಡ ಸ್ವಲ್ಪ ಕಾಲದ ಬಳಿಕ ಅಲ್ಲಿರದಿದ್ದರೆ, ಅದೀಗ ಹಿಮವಾಗಿಯೋ, ಮಳೆಯಾಗಿಯೋ ಮುಂದುವರಿದಿರುತ್ತದೆ. ಮೋಡ ಮರಣಿಸುವುದು ಸಾಧ್ಯವೇ ಇಲ್ಲ, ಅದು ಮಳೆಯಾಗಬಹುದು ಇಲ್ಲವೇ ಮಂಜುಗಡ್ಡೆಯಾಗಬಹುದು, ಆದರೆ ಅದು ಸಂಪೂರ್ಣವಾಗಿ ಇಲ್ಲವಾಗುವುದು ಸಾಧ್ಯವೇ ಇಲ್ಲ. ಆರಂಭವೂ ಇಲ್ಲ, ಅಂತ್ಯವೂ ಇಲ್ಲ. ನಾನೆಂದಿಗೂ ಸಾಯುವುದಿಲ್ಲ, ಈ ದೇಹದ ವಿಸರ್ಜನೆ ಇರುತ್ತದೆ, ಅದು ನಾನು ಸತ್ತೆ ಎಂದರ್ಥವಲ್ಲ. ನಾನು ಯಾವಾಗಲೂ ಮುಂದುವರಿಯುತ್ತೇನೆ…
(ಮುಂದುವರಿಯುತ್ತದೆ)
Comments 7
sharan swami
Feb 13, 2022ಬೌದ್ಧ ಸನ್ಯಾಸಿ ಥಾಯ ರವರ ವ್ಯಕ್ತಿ ಚಿತ್ರಣ ಸ್ಪಷ್ಟವಾಗಿ ಸುದೀರ್ಘವಾಗಿ ತಿಳಿಯಪಡಿಸಿದ್ದಿರಿ. ಸನ್ಯಾಸಿಯಾದಾತ ಆಧ್ಯಾತ್ಮ ಬೋಧನೆಯ ಜೊತೆಗೆ ಪ್ರಸ್ತುತ ದಿನಮಾನಗಳ ಸಮಸ್ಯೆಗಳಿಗೆ ಕಿವಿಗೊಟ್ಟು ಅದಕ್ಕೆ ತನ್ನದೇ ರೀತಿಯಲ್ಲಿ ಸ್ಪಂದಿಸಿ ಶಾಂತಿ ಭಾವೈಕ್ಯತೆಗೆ ವಿಶಾಲವಾದ ಕೊಡುಗೆ ನೀಡಿದ್ದು ಎಲ್ಲಾ ಸನ್ಯಸ್ತರಿಗೆ ಹಾಗೂ ಇತರರಿಗೆ ಸ್ಫೂರ್ತಿ ನೀಡುವಂಥ್ಥದ್ದು. ತಮ್ಮ ಲೇಖನದಿಂದ ದಿವ್ಯ ವ್ಯಕ್ತಿತ್ವವೊಂದರ ಪರಿಚಯವಾಯಿತು. ಮಂಗಳ ಅಕ್ಕವರಿಗೆ ಶರಣು ಶರಣಾರ್ಥಿಗಳು
ಪಂಚಾಕ್ಷರಿ ಹಳೇಬೀಡು
Feb 16, 2022ಝೆನ್ ಗುರುವಿನ ಹೆಜ್ಜೆಗುರುತುಗಳನ್ನು ನಮ್ಮ ಹೃದಯದೊಳಗೆ ಅದ್ಬುತವಸಗಿ ಮೂಡಿಸಿದ್ದೀರಿ
ಶರಣುಶರಣಾರ್ಥಿ.
ಪೆರೂರು ಜಾರು, ಉಡುಪಿ
Feb 17, 2022ಜೆನ್ ಗುರು ಥಿಚ್‌ರ ಬದುಕು ಕಣ್ಣಿಗೆ ಕಟ್ಟುವಂತೆ ಆರಂಭ ಕಂಡಿದೆ. ಆಳುವವರು ಗಡಿಪಾರು ಮಾಡಬಲ್ಲರು. ಅಭಿಪ್ರಾಯಗಳನ್ನು ಅಮುಕಬಲ್ಲರು. ಅಂತಿಮವಾಗಿ ಸತ್ಯ ಗೆಲ್ಲುತ್ತದೆ ಎಂದು ಹೇಳಲಾಗದು. ಸತ್ಯ ಗೆಲ್ಲಲಿ ಎಂದು ಆಶಿಸಬಹುದು.
Shubha
Feb 23, 2022ತುಂಬಾ ವಿವರವಾಗಿ ಪರಿಚಯಿಸಿದೆ
ಉಮಾಕಾಂತ ಗುರಳಿ
Feb 27, 2022ಥಾಯ್ ಅಂತಹ ಗುರುವನ್ನು ಪರಿಚಯಿಸಿಕೊಟ್ಟಿದ್ದಕ್ಕೆ ಶರಣು ಅಕ್ಕಾ. ಇಂತಾ ಗುರುಗಳಿರುವುದರಿಂದಲೇ ಬುದ್ಧ ಧರ್ಮ ಇಂದಿಗೂ ವಿಶ್ವವ್ಯಾಪಿಯಾಗಿ ಹರಡಿಕೊಂಡಿದೆ.
Umapathy Beluru
Mar 1, 2022‘ಎಂಗೇಜ್ಡ್ ಬುದ್ಧಿಸಂ’, ದಿ ಆರ್ಟ್ ಆಫ್ ಮೈಂಡಫುಲ್ ಲಿವಿಂಗ್- ಕುರಿತು ಮತ್ತಷ್ಟು ವಿಷಯಗಳನ್ನು ಬರೆಯಿರಿ… ಝೆನ್ ಬುದ್ಧಿಸಂ ಇವತ್ತಿಗೂ ಆಸಕ್ತಿಕರವಾದ ಜ್ಞಾನೋದಯದ ಮಾರ್ಗ.
Padmalaya
Mar 17, 2022ಈ ಲೇಖನ ಓದಿ ನಾಚಿಕೆ ಆಯಿತು.ಏಕೆಂದರೆ ಶರಣಧರ್ಮವನ್ನ ಲಿಂಗಾತರು “ಸಮಕಾಲೀನ ಅನ್ವಯಕ ಧರ್ಮವನ್ನಾಗಿ” ರೂಪಿಸಿಕೊಳ್ಳಲೇ ಇಲ್ಲ. ಆದ್ದರಿಂದಲೇ ಬದುಕಿಗೂ ವಚನಗಳಿಗ ಸಂಬಂಧ ವಿಲ್ಲದಂತಾಗಿ,ಅವು ಬಾಯಿ ಪಠದ ಸಾಮಗ್ರಿಗಳಂತಾಗಿ ನಿಂತ ಹೋಗಿವೆ. ವಚನಗಳನ್ನ ಆಧುನಿಕ ಗೊಳಿಸಿದ್ದಲ್ಲಿ.ಅವು ಮುಖ್ಯವಾಗಿ ಮೂರು ವಿಷಯಗಳಲ್ಲಿ ಬದಲಾವಣೆ ತರಲು ಒತ್ತಾಯಿಸುತ್ತವೆ.೧ ವ್ಯಕ್ತಿ೨.ಸಮಾಜ ೩.ನಿಸರ್ಗ. ಈ ಮೂರನ್ನೂ ಬದಿಗೊತ್ತಿ ಆಧ್ಯಾತ್ಮಿಕ ಎಂಬ ಭ್ರಮೆಯಲ್ಲಿ ವಚನಗಳ ಶಕ್ತಿಯನ್ನ ನಿರ್ವೀರ್ಯಗೊಳಿಸುತ್ತಿರುವುದು ದುರಂತದ ಸಂಗತಿ..ಬಸವಣ್ಣ ಕನ್ನಡದ ತಾಯ್ ಆಗಿ ಕಾಣಲಾಗದಿದ್ದಲ್ಲಿ ನಿಮ್ಭ ಲೇಖನ ಕೇವಲ ಮಾಹಿತಿ ಸಂಗ್ರಹ ವಷ್ಟೇ ಆಗುತ್ತದೆ…