Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಯುವಕರ ಹೆಗ್ಗುರುತು: ಚನ್ನಬಸವಣ್ಣ
Share:
Articles November 10, 2022 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಯುವಕರ ಹೆಗ್ಗುರುತು: ಚನ್ನಬಸವಣ್ಣ

ಬಸವಣ್ಣ, ಅಲ್ಲಮ, ಅಕ್ಕ, ಸಿದ್ಧರಾಮೇಶ್ವರ, ಸತ್ಯಕ್ಕ, ಕಾಳವ್ವೆ, ಉರಿಲಿಂಗಪೆದ್ದಿ ಇಂಥವರೆಲ್ಲ ಲೋಕಕ್ಕೆ ಬೆಳಕು ನೀಡುವಂತಹ ಪುಣ್ಯದ ಕಾರ್ಯಗಳನ್ನು ಮಾಡಿದವರು. ಇವರ ಸಾಲಿನಲ್ಲಿ ಎದ್ದು ತೋರುವ ವ್ಯಕ್ತಿತ್ವ ಚನ್ನಬಸವಣ್ಣನವರದು. ಇದಕ್ಕೆ ಕಾರಣ ಅವರ ಅರಿವು ಮತ್ತು ಆಚಾರ, ನಡೆ ಮತ್ತು ನುಡಿಯಲ್ಲಿದ್ದ ಹೊಂದಾಣಿಕೆ. ನಡೆದಂತೆ ನುಡಿವವರನ್ನು, ನುಡಿದಂತೆ ನಡೆಯುವವರನ್ನು ಲೋಕದ ಜನರು ಮೆಚ್ಚಿಕೊಳ್ಳುವುದು ಅಷ್ಟಕ್ಕಷ್ಟೆ. ಜನರು ಮೆಚ್ಚಲಿ ಎಂದು ಅವರ ಭಾವನೆಗಳಿಗೆ ಅನುಗುಣವಾಗಿ ಬದುಕಿದವರಲ್ಲ ಶರಣರು. ಬದಲಾಗಿ ಮನ ಮೆಚ್ಚುವ, ಮನದೊಡೆಯ ಮಹಾದೇವ ಮೆಚ್ಚುವ ಹಾಗೆ ನಡೆದುಕೊಂಡವರು. ಈ ನೆಲೆಯಲ್ಲೇ ಅವರ ವಚನ ಗಮನಾರ್ಹವಾಗಿದೆ.

ಸರ್ವಸಂಗ ಪರಿತ್ಯಾಗ ಮಾಡಿದ ಶಿವಶರಣನ
ಲೋಕದ ಸಂಸಾರಿಗಳೆಂತು ಮೆಚ್ಚುವರಯ್ಯಾ?
ಊರೊಳಗಿರ್ದಡೆ ಸಂಸಾರಿ ಎಂಬರು,
ಅಡವಿಯೊಳಗಿರ್ದಡೆ ಮೃಗನೆಂಬರು,
ಹೊನ್ನ ಬಿಟ್ಟಡೆ ದರಿದ್ರನೆಂಬರು, ಹೆಣ್ಣ ಬಿಟ್ಟಡೆ ನಪುಂಸಕನೆಂಬರು,
ಮಣ್ಣ ಬಿಟ್ಟಡೆ ಪೂರ್ವಕರ್ಮಿ ಎಂಬರು, ಮಾತನಾಡದಿರ್ದಡೆ ಮೂಗನೆಂಬರು,
ಮಾತನಾಡಿದಡೆ ಜ್ಞಾನಿಗೇಕಯ್ಯಾ ಮಾತೆಂಬರು,
ನಿಜವನಾಡಿದಡೆ ನಿಷ್ಠುರಿಯೆಂಬರು, ಸಮತೆಯನಾಡಿದಡೆ ಅಂಜುವನೆಂಬರು.
ಇದು ಕಾರಣ ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣ ಲೋಕದಿಚ್ಛೆಯ ನುಡಿಯ
ಲೋಕದಿಚ್ಛೆಯ ನಡೆಯ!

ಶಿವಶರಣರು ಯಾವುದಕ್ಕೂ ಅಂಟಿಕೊಂಡವರಲ್ಲ. ಅವರು ನೀರಿನಲ್ಲಿರುವ ಕಮಲದೋಪಾದಿಯಲ್ಲಿ ಬಾಳಿದವರು. ಅಂಥವರನ್ನು ಲೋಕದ ಜನರು ಮೆಚ್ಚುವುದು ವಿರಳ. ಅವರು ಏನೇ ಮಾಡಿದರೂ ಅದಕ್ಕೊಂದು ಕೊಂಕು ನುಡಿಯದಿದ್ದರೆ ಕೆಲವರಿಗೆ ಉಂಡ ಅನ್ನ ಅರಗುವುದಿಲ್ಲ. ಹಾಗಾಗಿ ಲೇವಡಿ ಮಾಡುವಲ್ಲೇ ವಿಕೃತ ಸಂತೋಷ ಅನುಭವಿಸುವರು. ಇದು ಆ ಕಾಲಕ್ಕೂ ಸತ್ಯ, ಈ ಕಾಲಕ್ಕೂ ಸತ್ಯ. ಅದಕ್ಕೆ ಕೊನೆಯಲ್ಲಿ ಚನ್ನಬಸವಣ್ಣನವರು ಹೇಳುವುದು ಶಿವನನ್ನು ನಂಬಿದ ಶರಣ ಲೋಕದಿಚ್ಛೆಯಂತೆ ನುಡಿಯುವುದಿಲ್ಲ, ಲೋಕದಿಚ್ಛೆಯಂತೆ ನಡೆಯುವುದಿಲ್ಲ. ಅವನಿಗೆ ಮುಖ್ಯವಾದುದು ತನ್ನ ಮನಮೆಚ್ಚುವಂತೆ, ಮನದೊಡೆಯ ಮಹಾದೇವ ಮೆಚ್ಚುವಂತೆ ನಡೆಯುವುದು. ಅವರು ಲೋಕದ ಜನರಂತೆ ಮಾತನಾಡುವವರಲ್ಲ, ಲೋಕದ ಜನರಂತೆ ಬದುಕುವವರಲ್ಲ. ಅವರ ಬದುಕು ಬಹು ವಿಶಿಷ್ಟವಾದುದು. ಚನ್ನಬಸವಣ್ಣನವರು ಅನುಭವಮಂಟಪದ ಸದಸ್ಯರಲ್ಲೇ ಅತ್ಯಂತ ಕಿರಿಯರಾಗಿದ್ದವರು. ಬಹುಶಃ 20 ರಿಂದ 24 ವರ್ಷದೊಳಗಿನ ತರುಣರಿದ್ದಿರಬೇಕು. ಆದರೆ ಅರಿವು ಮತ್ತು ಅನುಭಾವದಿಂದ ಅಲ್ಲಿದ್ದ ಎಲ್ಲ ಸದಸ್ಯರಿಗಿಂತಲೂ ಹಿರಿಯರಾಗಿದ್ದರು ಚನ್ನಬಸವಣ್ಣ. ಹಾಗಾಗಿ ಅವರನ್ನು ಅವಿರಳ ಜ್ಞಾನಿ, ಜ್ಞಾನನಿಧಿ, ಜ್ಞಾನ ಚಕ್ರವರ್ತಿ, ಲಿಂಗವಂತ ಧರ್ಮದ ತಾತ್ವಿಕ ವಿಚಾರಗಳಿಗೆ ಅಧಿಕೃತ ಅಂಗೀಕಾರದ ಮುದ್ರೆಯೊತ್ತಿದ ಮಹಾನುಭಾವಿ ಎಂದು ಅಂದಿನ ಶರಣರೇ ಗುರುತಿಸಿದ್ದು ಚನ್ನಬಸವಣ್ಣನವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಎಂದು ಭಾವಿಸಬಹುದು.
ಚನ್ನಬಸವಣ್ಣನವರು ಇನ್ನಷ್ಟು ಕಾಲ ಬದುಕಿದ್ದರೆ ಕನ್ನಡ ನಾಡಿನಲ್ಲಿ, ಲಿಂಗವಂತ ಧರ್ಮದಲ್ಲಿ ಅದ್ಭುತ ಪರಿವರ್ತನೆ ತರಲು ಸಾಧ್ಯವಿತ್ತೆನಿಸುವುದು. ಕಲ್ಯಾಣದಲ್ಲಿ ಶರಣರ ಆಚಾರ, ವಿಚಾರಗಳ ನೆಲೆಯಲ್ಲಿ ಬಹುದೊಡ್ಡ ಕ್ರಾಂತಿಯಾಯ್ತು. ಕ್ರಾಂತಿ ಎರಡು ರೀತಿಯಲ್ಲಿ. ಒಂದು ಸಮಗ್ರ ಪರಿವರ್ತನೆ. ಮತ್ತೊಂದು ಆ ಪರಿವರ್ತನೆಯನ್ನು ಅರಗಿಸಿಕೊಳ್ಳದ ಪಟ್ಟಭದ್ರ ಹಿತಾಸಕ್ತರಿಂದ ನಡೆದ ಹಿಂಸಾಕೃತ್ಯ. ಕಲ್ಯಾಣದಲ್ಲಿ ಈ ಎರಡೂ ರೀತಿಯ ಕ್ರಾಂತಿಯಾಗಿದ್ದು ಇತಿಹಾಸದಲ್ಲಿ ದಾಖಲಾಗಿರುವ ಸಂಗತಿ. ಸಮಗಾರ ಹರಳಯ್ಯನವರ ಮಗ ಶೀಲವಂತ, ಬ್ರಾಹ್ಮಣ ಮಧುವರಸರ ಮಗಳು ನೀಲಾರ ನಡುವೆ ನಡೆದ ಮದುವೆಯೇ ಹಿಂಸೆಗೆ, ರಕ್ತಕ್ರಾಂತಿಗೆ ಕಾರಣವಾಯ್ತು. 21ನೆಯ ಶತಮಾನದ ಅವಧಿಯಲ್ಲೂ ಈ ರೀತಿಯ ಮದುವೆಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನು 12ನೆಯ ಶತಮಾನದಲ್ಲಿ ಅರಗಿಸಿಕೊಳ್ಳಲು ಸಾಧ್ಯವೇ? ಶರಣರು ಇಷ್ಟಲಿಂಗಧಾರಿಗಳಾಗಿ ಪೂರ್ವಜನ್ಮ ಕಳೆದುಕೊಂಡು ಪುನರ್ಜಾತರಾದವರು. ನರಜನ್ಮ ಕಳೆದುಕೊಂಡು ಹರಜನ್ಮ ಪಡೆದವರು. ತನ್ಮೂಲಕ ಜಾತ್ಯತೀತ ಮನೋಭಾವನೆಯನ್ನು ಮೈಗೂಡಿಸಿಕೊಂಡವರು. ಮನುಷ್ಯ ಮನುಷ್ಯರ ನಡುವೆ ಮದುವೆ ಆಗುವುದು ತಪ್ಪಲ್ಲ ಎಂದು ಶರಣರು ಪ್ರತಿಪಾದಿಸಿದರು. ಆದರೆ ಇದನ್ನು ಅರಗಿಸಿಕೊಳ್ಳುವ ತಾಕತ್ತು ಅಂದಿನ ಪಟ್ಟಭದ್ರ ಹಿತಾಸಕ್ತರಿಗೆ, ಪ್ರಗತಿ ವಿರೋಧಿಗಳಿಗೆ, ಪುರೋಹಿತ ಪರಂಪರೆಯವರಿಗೆ ಬರುವುದಿಲ್ಲ. ಅದರಿಂದಾಗಿ ಕಲ್ಯಾಣದಲ್ಲಿ ಶರಣರು ಬದುಕುವುದೇ ಕಷ್ಟವಾಯಿತು. ಅನೇಕ ಶರಣರ ಕಗ್ಗೊಲೆಯಾಯ್ತು. ಕೆಲವು ಶರಣರು ತಮ್ಮ ಜೀವನಾಡಿಯಂತಿದ್ದ ವಚನದ ಕಟ್ಟುಗಳನ್ನು ತಮ್ಮ ಬೆನ್ನಿಗೆ ಕಟ್ಟಿಕೊಂಡು ಕತ್ತಲನ್ನು ಮೈಮೇಲೆ ಹಾಕಿಕೊಂಡು ರಾತ್ರೋ ರಾತ್ರಿ ಕಲ್ಯಾಣದಿಂದ ಬೇರೆ ಬೇರೆ ದಿಕ್ಕಿನತ್ತ ನಡೆದರು. ಹಾಗೆ ನಡೆದ ಗುಂಪಿನಲ್ಲಿ ಚನ್ನಬಸವಣ್ಣನವರೂ ಒಬ್ಬರು. ಅವರು ಕೇವಲ ಜ್ಞಾನನಿಧಿಯಷ್ಟೇ ಆಗಿರಲಿಲ್ಲ, ಸಂದರ್ಭ ಬಂದರೆ ಹೋರಾಟ ಮಾಡುವ ಕೆಚ್ಚು ಸಹ ಅವರಲ್ಲಿದ್ದಂತೆ ತೋರುವುದು. ಅಂಥ ಹೋರಾಟವನ್ನೂ ಮಾಡಿರಬಹುದು.

ಶರಣರ ಒಂದು ಗುಂಪು ಚನ್ನಬಸವಣ್ಣ, ಅವರ ತಾಯಿ ಅಕ್ಕನಾಗಮ್ಮ ಮತ್ತಿತರರು ಸೇರಿ ಉತ್ತರ ಕನ್ನಡ ಜಿಲ್ಲೆಯ ಉಳವಿಯತ್ತ ಧಾವಿಸಿ ಬರುವರು. ಆ ಕಾಲದಲ್ಲಿ ಉಳವಿ ಬಹದೊಡ್ಡ ಕಾಡು. ಅಲ್ಲಿ ಕಾಡುಪ್ರಾಣಿಗಳೂ ಸಾಕಷ್ಟಿರಬಹುದು. ಜೊತೆಗೆ ಜಿಗಳಿಯ ಕಾಟ ಬೇರೆ. ವಿಪರೀತ ಚಳಿ. ಇದರ ಮೇಲೆ ಯುದ್ಧದಲ್ಲಿ ಚನ್ನಬಸವಣ್ಣನವರಿಗೆ ಪೆಟ್ಟಾಗಿರಬಹುದು. ಹಾಗಾಗಿ ಅವರು ಹೆಚ್ಚುಕಾಲ ಬದುಕಲಾಗದೆ ಉಳವಿಯಲ್ಲೇ ತಮ್ಮ ಉಸಿರನ್ನು ನಿಲ್ಲಿಸುವರು. ಅವರು ದೈಹಿಕವಾಗಿ ಸತ್ತರೂ ಅವರ ಸಾಧನೆ ಮತ್ತು ವಚನಗಳ ಮೂಲಕ ಅಮರರಾಗಿದ್ದಾರೆ. ಅವರ ವಚನಗಳು 1763. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ವಚನಗಳನ್ನು ಬರೆದಿದ್ದಾರೆ ಎಂದರೆ ನಂಬಲು ಆಗುವುದಿಲ್ಲ. ಈ ವಚನಗಳಲ್ಲಿ ಲಿಂಗಾಯತ ಧರ್ಮದ ತತ್ವಸಿದ್ಧಾಂತಗಳು ಅಡಕವಾಗಿವೆ. ಅವರು ವಿಭೂತಿಯನ್ನು ಕುರಿತು ಹೇಳುವ ವಚನ ಗಮನಾರ್ಹ.

ಅಯ್ಯಾ ಎನಗೆ ವಿಭೂತಿಯೆ ಕುಲದೈವ;
ಅಯ್ಯಾ ಎನಗೆ ವಿಭೂತಿಯೆ ಮನೆದೈವ;
ಅಯ್ಯಾ ಎನಗೆ ವಿಭೂತಿಯೆ ಸರ್ವಕಾರಣ;
ಅಯ್ಯಾ ಎನಗೆ ವಿಭೂತಿಯೆ ಸರ್ವಸಿದ್ಧಿ;
ಅಯ್ಯಾ ಎನಗೆ ವಿಭೂತಿಯೆ ಸರ್ವವಶ್ಯ;
ಅಯ್ಯಾ ಕೂಡಲಚೆನ್ನಸಂಗಮದೇವಾ
ಶ್ರೀವಿಭೂತಿಯೆಂಬ ಪರಂಜ್ಯೋತಿ ನೀವಾದಿರಾಗಿ,
ಎನಗೆ ವಿಭೂತಿಯೆ ಸರ್ವಸಾಧನ.

ಲಿಂಗಾಯತ ಧರ್ಮದ ಅಷ್ಟಾವರಣಗಳಲ್ಲಿ ವಿಭೂತಿಯೂ ಒಂದು. ಹಾಗಾಗಿಯೇ ಹಿರಿಯರು ಬೆಳಗ್ಗೆ ಎದ್ದಕೂಡಲೆ ಮುಖ ತೊಳೆದು ಹಣೆಗೆ ವಿಭೂತಿ ಧರಿಸಿಕೊಂಡು ಮುಂದಿನ ಕಾಯಕ ಮಾಡಬೇಕು ಎನ್ನುವರು. ಅನೇಕ ಜನರು, ವಿದ್ಯಾರ್ಥಿಗಳು ಈ ವಚನವನ್ನು ತುಂಬಾ ಮಧುರವಾಗಿ ಹಾಡುವರು. ಹಾಡುವುದಷ್ಟೇ ಮುಖ್ಯವಾಗದೆ ವಿಭೂತಿಯ ಮಹಿಮೆಯನ್ನರಿತು ಅದನ್ನು ನಿತ್ಯ ಧರಿಸುವ ಸಂಕಲ್ಪ ಮಾಡಬೇಕು. ಏಕೆಂದರೆ ಎಷ್ಟೋ ಜನರಿಗೆ ಕುಲದೈವ ಬೇರೆ, ಮನೆ ದೈವ ಬೇರೆ. ತಮ್ಮ ಬೆಳವಣಿಗೆಗೆ, ಸಾಧನೆಗೆ ಮತ್ತೇನೋ ಕಾರಣ ಎನ್ನುವರು. ಆದರೆ ಚನ್ನಬಸವಣ್ಣನವರು ಹಾಗೆ ಮನೆದೈವ, ಕುಲದೈವ ಎಂದು ಹಲವು ದೇವರುಗಳನ್ನು ನಂಬಿದವರಲ್ಲ. ಅವರ ಬದುಕಿನ ಸರ್ವಸಿದ್ಧಿಗೆ ವಿಭೂತಿಯೇ ಕಾರಣ ಎನ್ನುವುದನ್ನು ಇಲ್ಲಿ ಪ್ರತಿಪಾದಿಸಿದ್ದಾರೆ. ದೇವರೇ ವಿಭೂತಿ ಎನ್ನುವ ಪರಂಜ್ಯೋತಿ ಆದರು ಎನ್ನುವ ವಿಶ್ವಾಸ ಅವರಿಗೆ. ಹಾಗಾಗಿ ಎನಗೆ ವಿಭೂತಿಯೇ ಸರ್ವಸಾಧನ ಎನ್ನುವುದನ್ನು ನಂಬಿ ಅದರಂತೆ ವಿಭೂತಿಯನ್ನು ಧರಿಸುವ ಮೂಲಕ ತಮ್ಮ ಬದುಕಿನ ಭವ್ಯತೆಯನ್ನು ಹೆಚ್ಚಿಸಿಕೊಂಡವರು. ಏನೆಲ್ಲವನ್ನೂ ಕರುಣಿಸುವ ಶಕ್ತಿ ಶ್ರೀವಿಭೂತಿಗೆ ಇದೆ. ಹಾಗಾಗಿ ವಿಭೂತಿಯನ್ನು ಜ್ಞಾನ, ಸಂಪತ್ತು ಎಂದು ಹೇಳುವುದು. ಹಣೆಯ ಮೇಲೆ ವಿಭೂತಿ ಧರಿಸುವ ಉದ್ದೇಶ ನಾವು ಜ್ಞಾನಿಗಳಾಗಬೇಕು, ಜ್ಞಾನಿಗಳಾಗಿದ್ದೇವೆ ಎನ್ನುವುದರ ಸಂಕೇತ. ವಿಭೂತಿಯ ಕಾರಣದಿಂದಲೇ ವಿಭೂತಿಪುರುಷರಾಗಲು ಸಾಧ್ಯ. ಶರಣರನ್ನು ವಿಭೂತಿ ಪುರುಷರು ಎನ್ನಲಾಗುವುದು. ಎಲ್ಲ ಶರಣರೂ ಜ್ಞಾನ ಮತ್ತು ಕ್ರಿಯೆಗೆ ವಿಶೇಷ ಒತ್ತು ಕೊಟ್ಟವರು. ಈ ವಿಚಾರವಾಗಿ ಚನ್ನಬಸವಣ್ಣನವರ ವಚನ ಅಜ್ಞಾನದ ಕಣ್ಣು ತೆರೆಸಿ ಅರಿವನ್ನು ಮೂಡಿಸುವಂತಿದೆ.

ಕ್ರಿಯೆಯೆ ಜ್ಞಾನ, ಆ ಜ್ಞಾನವೆ ಕ್ರಿಯೆ.
ಜ್ಞಾನವೆಂದಡೆ ತಿಳಿಯುವುದು.
ಕ್ರಿಯೆಯೆಂದಡೆ ತಿಳಿದಂತೆ ಮಾಡುವುದು.
ಪರಸ್ತ್ರೀಯ ಭೋಗಿಸಬಾರದೆಂಬುದೆ ಜ್ಞಾನ;
ಅದರಂತೆ ಆಚರಿಸುವುದೆ ಕ್ರಿಯೆ.
ಅಂತು ಆಚರಿಸದಿದ್ದಡೆ ಅದೆ ಅಜ್ಞಾನ ನೋಡಾ,
ಕೂಡಲಚೆನ್ನಸಂಗಮದೇವಾ.

ಜ್ಞಾನ ಮತ್ತು ಕ್ರಿಯೆಗಳ ಸಾಮರಸ್ಯವನ್ನು ತುಂಬಾ ಮನೋಜ್ಞವಾಗಿ ತಿಳಿಸಿಕೊಟ್ಟಿದ್ದಾರೆ. ಜ್ಞಾನವೆಂದರೆ ತಿಳಿಯುವುದು. ಏನನ್ನೋ ತಿಳಿಯುವುದಲ್ಲ. ಸದಾಚಾರ, ಸದ್ವಿಚಾರಗಳನ್ನು ತಿಳಿಯುವುದು. ಸತ್ಯವನ್ನೇ ನುಡಿಯಬೇಕು, ಅಹಿಂಸೆಯನ್ನು ಮಾಡಬಾರದು, ಪರೋಪಕಾರ ಬುದ್ಧಿ ಇರಬೇಕು, ಕಾಯಕ ಶ್ರದ್ಧೆ ಬೆಳೆಸಿಕೊಳ್ಳಬೇಕು, ಯಾರಿಗೂ ಕೇಡು ಬಯಸಬಾರದು ಹೀಗೆ ಹೇಳುವುದು ನಿಜವಾದ ಜ್ಞಾನ. ಈ ಜ್ಞಾನಕ್ಕನುಗುಣವಾಗಿ ನಡೆದುಕೊಳ್ಳುವುದೇ ಕ್ರಿಯೆ. ಜ್ಞಾನವೇ ಬೇರೆ, ಕ್ರಿಯೆಯೇ ಬೇರೆ ಆಗಿದ್ದರೆ ಅದೇ ಅಜ್ಞಾನ. ಚನ್ನಬಸವಣ್ಣನವರು ಕೊಡುವ ನಿದರ್ಶನ ಪರಸ್ತ್ರೀಯರನ್ನು ಹೆತ್ತ ತಾಯಿಯಂತೆ ನೋಡಬೇಕೆನ್ನುವುದು ಜ್ಞಾನ. ಇದರಂತೆ ನೋಡದೆ ಅವಳ ಬಗ್ಗೆ ಕಾಮುಕ ಭಾವನೆ ಬೆಳೆಸಿಕೊಂಡರೆ ಅದೇ ಅಜ್ಞಾನ ಎನ್ನುವರು. ಪ್ರತಿಯೊಬ್ಬರೂ ಜ್ಞಾನಿಗಳಾಗಬೇಕೇ ಕೊರತು ಅಜ್ಞಾನಿಗಳಾಗಬಾರದು. ಆದರೆ ಮಾನವನ ಮನಸ್ಸು ಕಪಿ ಇದ್ದಂತೆ. ಏನೇನೋ ಚೇಷ್ಟೆಗಳನ್ನು ಮಾಡುವುದು. ಮನಸ್ಸನ್ನು ಹತೋಟಿಯಲ್ಲಿಡಬೇಕು. ಹತೋಟಿ ಸಾಧಿಸಿದ ವ್ಯಕ್ತಿ ಅದ್ಭುತ ಪ್ರಗತಿಯನ್ನು ಸಾಧಿಸುವನು. ಮನಸ್ಸಿನ ಮೇಲೆ ಹತೋಟಿ ಸಾಧಿಸದವರು ಜೀವನದಲ್ಲಿ ಯಾವ ಸಾಧನೆಯನ್ನೂ ಮಾಡಲು ಆಗುವುದಿಲ್ಲ. ಚನ್ನಬಸವಣ್ಣನವರ ಇಂಥ ವಚನಗಳನ್ನು ಓದುತ್ತಿದ್ದರೆ ಉತ್ತಮ ಸಂಸ್ಕಾರಗಳು ಅಳವಡಲು, ವ್ಯಕ್ತಿತ್ವ ಅರಳಲು ಸಾಧ್ಯವಾಗುವುದು.

ಅಜಕೋಟಿ ಕಲ್ಪ ವರ್ಷದವರೆಲ್ಲರು ಹಿರಿಯರೆ?
ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರು ಹಿರಿಯರೆ?
ನಡುಮುರಿದು ಗುಡುಗೂರಿ ತಲೆ ನಡುಗಿ ನೆರೆತೆರೆ ಹೆಚ್ಚಿ, ಮತಿಗೆಟ್ಟು
ಒಂದನಾಡಹೋಗಿ ಒಂಬತ್ತನಾಡುವ ಅಜ್ಞಾನಿಗಳೆಲ್ಲರು ಹಿರಿಯರೆ?
ಅನುವನರಿದು ಘನವ ಬೆರಸಿ ಹಿರಿದು ಕಿರಿದೆಂಬ ಭೇದವ ಮರೆದು
ಕೂಡಲಚೆನ್ನಸಂಗಯ್ಯನಲ್ಲಿ ಬೆರಸಿ ಬೇರಿಲ್ಲದಿಪ್ಪ ಹಿರಿಯತನ
ನಮ್ಮ ಮಹಾದೇವಿಯಕ್ಕಂಗಾಯಿತ್ತು.

ನಮ್ಮಲ್ಲಿ ಯಾರು ಹಿರಿಯರು ಎಂದರೆ ವಯಸ್ಸಾದವರ ಕಡೆಗೆ ಬೆರಳು ತೋರಿಸುವ ಪದ್ಧತಿ ಇದೆ. ಗವಿಗಳಲ್ಲೋ, ಕಾಡಿನಲ್ಲೋ ತಪಸ್ಸು ಮಾಡುತ್ತ ಉದ್ದನೆಯ ದಾಡಿ ಬೆಳೆಸಿಕೊಂಡವರು, ಅವರ ಸುತ್ತ ಹುತ್ತ ಸೃಷ್ಟಿಯಾಗಿ ಬಿದಿರು ಮತ್ತೇನೋ ಬೆಳೆದಿದ್ದರೆ ಅಂಥವರನ್ನು ಹಿರಿಯರು ಎನ್ನುವುದುಂಟು. ವಯಸ್ಸಾಗಿ, ಸೊಂಟ ಬಾಗಿ, ಮೈ-ಮುಖದ ಚರ್ಮವೆಲ್ಲ ಸುಕ್ಕುಗಟ್ಟಿ, ಕೂದಲೆಲ್ಲ ಬೆಳ್ಳಗಾಗಿ, ಬುದ್ಧಿಯ ಸ್ಥಿಮಿತ ಕಳೆದುಕೊಂಡು ಏನೋ ಹೇಳುವ ಬದಲು ಮತ್ತೇನನ್ನೋ ಹೇಳುವ, ಒಂದು ಮಾತಿಗೆ ಒಂಬತ್ತು ಮಾತನಾಡುವ ಅಜ್ಞಾನಿಗಳನ್ನು ಸಹ ಹಿರಿಯರು ಎನ್ನಬಹುದು. ಇಂಥವರೆಲ್ಲ ಹಿರಿಯರಲ್ಲ ಎಂದು ಚನ್ನಬಸವಣ್ಣನವರು ಸ್ಪಷ್ಟಪಡಿಸುವರು. ಮತ್ತೆ ಯಾರು ಹಿರಿಯರು ಎಂದರೆ ಲಿಂಗಾಂಗ ಸಾಮರಸ್ಯದ ರಹಸ್ಯವನ್ನು ತಿಳಿದು, ಲಿಂಗೈಕ್ಯ ಸ್ಥಿತಿಯನ್ನು ಪಡೆದು ಹಿರಿದು, ಕಿರಿದು ಎನ್ನುವ ಭೇದವನ್ನು ಮರೆತವರು ಹಿರಿಯರು. ಅಂತಹ ಹಿರಿಯತನ ಮಹಾದೇವಿಯಕ್ಕನದು ಎನ್ನುವರು. ವಯಸ್ಸಿನಲ್ಲಿ ಚನ್ನಬಸವಣ್ಣನವರಿಗಿಂತ ಮಹಾದೇವಿಯಕ್ಕ ಕಿರಿಯಳಾಗಿರಬಹುದು. ಆದರೆ ಅವಳು ಚನ್ನಬಸವಣ್ಣನವರಂತೆ ಅರಿವು, ಆಚಾರ ಸಂಪಾದಿಸಿ ಅನುಭಾವಿಯಾದವಳು. ಹಾಗಾಗಿ ಪ್ರಭುದೇವರಂತಹ ವಯೋವೃದ್ಧ, ಜ್ಞಾನವೃದ್ಧ ಅನುಭಾವಿಗಳೂ ಅಕ್ಕನ ಶ್ರೀಪಾದಕ್ಕೆ ನಮೋ ನಮೋ ಎನ್ನುವರು. ವಿದ್ಯೆ, ವಯಸ್ಸು, ಅಧಿಕಾರ, ಸಂಪತ್ತು ಇಂಥವುಗಳಿಂದ ಮಾತ್ರ ವ್ಯಕ್ತಿ ಹಿರಿಯನಾಗುವುದಿಲ್ಲ. ಬದಲಾಗಿ ಅವರು ಅರಿವು, ಆಚಾರ, ಅನುಭಾವಗಳ ಸಂಗಮವಾಗಿದ್ದರೆ ಹಿರಿಯತನ ತನ್ನಿಂದ ತಾನೇ ಬರುವುದು ಎನ್ನುವ ಅಭಿಪ್ರಾಯ ಚನ್ನಬಸವಣ್ಣನವರದು. ಅವರ ಮತ್ತೊಂದು ವಚನ ಸೊಗಸಾಗಿದೆ.

ನಿಷ್ಠೆಯುಳ್ಳಾತಂಗೆ ನಿತ್ಯನೇಮದ ಹಂಗೇಕೆ?
ಸತ್ಯವುಳ್ಳಾತಂಗೆ ತತ್ವವಿಚಾರದ ಹಂಗೇಕೆ?
ಅರಿವುಳ್ಳಾತಂಗೆ ಅಗ್ಘವಣಿಯ ಹಂಗೇಕೆ?
ಮನಶುದ್ಧವುಳ್ಳವಂಗೆ ಮಂತ್ರದ ಹಂಗೇಕೆ?
ಭಾವ ಶುದ್ಧವುಳ್ಳವಂಗೆ ಹೂವಿನ ಹಂಗೇಕೆ?
ಕೂಡಲಚೆನ್ನಸಂಗಯ್ಯಾ,
ನಿಮ್ಮನರಿದಾತಂಗೆ ನಿಮ್ಮ ಹಂಗೇಕೆ?

ನಿತ್ಯನೇಮಗಳನ್ನು ಆಚರಿಸುವುದು, ತತ್ವಗಳನ್ನು ಕೇಳುವುದು, ದೇವರಿಗೆ ಮಜ್ಜನಕ್ಕೆರೆಯುವುದು, ಮಂತ್ರಪಠಣ ಮಾಡುವುದು, ಹೂಪತ್ರೆ ಧರಿಸುವುದು ಇತ್ಯಾದಿ ಕ್ರಿಯೆಗಳು ವ್ಯಕ್ತಿ ಸಂಸ್ಕಾರವಂತನಾಗಿ ತನ್ನಲ್ಲಿರುವ ಅವಗುಣಗಳನ್ನು ಕಳೆದುಕೊಂಡು ಸಾತ್ವಿಕ ಬದುಕು ಸಾಗಿಸಬೇಕೆನ್ನುವುದು. ಮನುಷ್ಯ ಅನೇಕ ರೀತಿಯ ಹಂಗಿಗೆ ಒಳಗಾಗಿ ಅದಕ್ಕಾಗಿ ಏನೆಲ್ಲ ಕ್ರಿಯಾಚರಣೆಗಳನ್ನು ಮಾಡುತ್ತಿದ್ದಾನೆ. ದೀಪಾವಳಿ ಸಂದರ್ಭದಲ್ಲಿ ಎಲ್ಲರಂತೆ ಸಾಂಪ್ರದಾಯಿಕವಾದ ಧಾರ್ಮಿಕ ಕ್ರಿಯಾಚರಣೆಗಳನ್ನು ಮಾಡದಿದ್ದರೆ, ಪಟಾಕಿ ಸುಡದಿದ್ದರೆ, ಹೊಸ ಬಟ್ಟೆಗಳನ್ನು ತೊಡದಿದ್ದರೆ, ಹೋಳಿಗೆ ಊಟ ಮಾಡದಿದ್ದರೆ ಎಂದೆಲ್ಲ ಯೋಚಿಸಿ ಅವುಗಳಿಗೆ ಅಂಟಿಕೊಳ್ಳುವರು. ಇವೇ ಒಂದು ರೀತಿಯ ಹಂಗು. ಇವುಗಳಿಂದ ಹೊರಬಂದವರು ಶರಣರು. ಅವರಿಗೆ ಮಾಡುವ ಕಾಯಕದಲ್ಲಿ ನಿಷ್ಠೆ ಇತ್ತು. ಈ ನೆಲೆಯಲ್ಲಿ ಪ್ರತಿದಿನ ಶರಣರ ಒಂದು ವಚನವನ್ನಾದರೂ ಓದಿ, ಅರ್ಥಮಾಡಿಕೊಂಡು, ಅದರಂತೆ ಬಾಳನ್ನು ರೂಪಿಸಿಕೊಳ್ಳುತ್ತೇನೆ ಎನ್ನುವ ನಿಯಮಗಳನ್ನು ವ್ಯಕ್ತಿ ತನಗೆ ತಾನೇ ಹಾಕಿಕೊಳ್ಳಬೇಕು. ಸತ್ಯದ ದಾರಿಯಲ್ಲೇ ನಡೆಯುತ್ತೇನೆ, ಎಂತಹ ಸಂದರ್ಭ ಬಂದರೂ ಸುಳ್ಳು ಹೇಳುವುದಿಲ್ಲ ಎನ್ನುವ ಸಂಕಲ್ಪವೇ ತತ್ವವಿಚಾರ ಕೇಳಿದ್ದಕ್ಕಿಂತ ಹೆಚ್ಚು ಪರಿಣಾಮಕಾರಿ. ಇಂಥವುಗಳ ಮೂಲಕ ಅರಿವನ್ನು ಹೆಚ್ಚಿಸಿಕೊಳ್ಳುವುದೇ ದೇವರಿಗೆ ಮಜ್ಜನಕ್ಕೆರೆದಂತೆ ಎನ್ನುವ ಭಾವನೆಯನ್ನು ಬೆಳೆಸಿಕೊಳ್ಳಬೇಕು. ಮನಸ್ಸು ಶುದ್ಧಿಯಾಗಿದ್ದರೆ ಯಾವ ಮಂತ್ರಗಳನ್ನೂ ಪಠಿಸುವ ಅಗತ್ಯ ಇರುವುದಿಲ್ಲ. ವ್ಯಕ್ತಿಯ ಮನಸ್ಸು ಮತ್ತು ಭಾವನೆಗಳು ಶುದ್ಧವಾದಾಗ ಹೂ ಪತ್ರೆಗಳ ಹಂಗೂ ಬೇಕಾಗುವುದಿಲ್ಲ. ಕೊನೆಯಲ್ಲಿ ಚನ್ನಬಸವಣ್ಣನವರು ಹೇಳುವುದು ಇಂಥ ಕ್ರಿಯಾಚರಣೆಗಳ ಮೂಲಕ ದೇವರನ್ನು ಅರ್ಥ ಮಾಡಿಕೊಂಡರೆ ಆ ದೇವರ ಹಂಗೂ ಬೇಕಿಲ್ಲ ಎನ್ನುವರು. ವಚನಗಳನ್ನು ಅರ್ಥೈಸಿಕೊಂಡು, ಅನುಷ್ಟಾನದಲ್ಲಿ ತರುವವರು ಮಾತ್ರ ದೇವರ ಹಂಗಿನಿಂದಲೂ ಮುಕ್ತರಾಗಿ ವ್ಯಕ್ತಿತ್ವದ ವಿಕಾಸ ಮಾಡಿಕೊಳ್ಳಬಹುದು. ಆದರೆ ಮನುಷ್ಯನ ಸ್ವಭಾವವೇ ವಿಚಿತ್ರ. ಅದರ ಕಪಿಯಾಟದ ಗುಣ ಮತ್ತೆ ಮತ್ತೆ ಕಾಣಿಸಿಕೊಳ್ಳುವುದು. ಕಪಿಯಂತಿರುವ ಮನಸ್ಸನ್ನು ಕಟ್ಟಿಹಾಕಿದ್ದರಿಂದಲೇ ಚನ್ನಬಸವಣ್ಣನವರನ್ನು ಇಂದಿಗೂ ನೆನಪಿಸಿಕೊಳ್ಳಲು, ಅವರ ಬಗ್ಗೆ ಗೌರವ ಸೂಚಿಸಲು, ಸ್ಪೂರ್ತಿ ಪಡೆಯಲು ಸಾಧ್ಯವಾಗಿರುವುದು. ಅವರೇನಾದರೂ ಸನ್ಮಾರ್ಗದಲ್ಲಿ ಸಾಗದಿದ್ದರೆ ಅವರನ್ನು ಸಹ ಕಪಿ ಎಂದು ಮರೆತುಬಿಡುವ ಸಾಧ್ಯತೆ ಇತ್ತು. 900 ವರ್ಷಗಳ ನಂತರವೂ ಚನ್ನಬಸವಣ್ಣನವರನ್ನು ನೆನಪಿಸಿಕೊಳ್ಳಲು, ವಯಸ್ಸಿನಿಂದ ಅತ್ಯಂತ ಕಿರಿಯರಾಗಿದ್ದರೂ ಗೌರವಿಸಲು ಕಾರಣ ಅವರ ದಿವ್ಯ, ಭವ್ಯ ವ್ಯಕ್ತಿತ್ವ ಎನ್ನುವುದನ್ನು ಮರೆಯಲಾಗದು.

ಉದಯಾಸ್ತಮಾನವೆಂಬ ಕೊಳಗದಲ್ಲಿ, ಆಯುಷ್ಯವೆಂಬ ರಾಸಿಯನಳೆವರು
ರಾಸಿ ತೀರದ ಮುನ್ನ ಸಟೆಯ ಸಡಗರ ಬಿಟ್ಟು
ಶಿವಲಿಂಗಾರ್ಚನೆಯ ಮಾಡುವುದು.
ಕೂಡಲಚೆನ್ನಸಂಗಯ್ಯಾ, ಇದ ಮಾಡದಿರ್ದಡೆ
ನಾಯಕನರಕ.

ಮನುಷ್ಯ ಹುಟ್ಟಿ ಸಾಯುವ ಮುನ್ನ ಏನು ಮಾಡಬೇಕೆಂಬ ನಿರ್ದೇಶನ ನೀಡುವರು ಚನ್ನಬಸವಣ್ಣ. ಸೂರ್ಯೋದಯ, ಸೂರ್ಯಾಸ್ತಮಾನಗಳ ಅರಿವು ಬಹುತೇಕ ಜನರಿಗಿದೆ. ಅದನ್ನೇ ಇಲ್ಲಿ ಮಾನವನ ಹುಟ್ಟು ಸೂರ್ಯೋದಯ ಇದ್ದಂತೆ. ಅವನ ಸಾವು ಸೂರ್ಯಾಸ್ತಮಾನವಾದಂತೆ. ಹುಟ್ಟು, ಸಾವೆಂಬ ಕೊಳಗದಿಂದ ಆಯುಷ್ಯ ಎನ್ನುವ ರಾಸಿಯನ್ನು ಅಳೆಯುವುದು ಲೋಕಾರೂಢಿ. ಅವನು ಹುಟ್ಟಿ ಇಷ್ಟು ವರ್ಷಗಳಾದವು ಎನ್ನುವರು. ಆದರೆ ಮನುಷ್ಯ ಸಾಯುವ ಮುನ್ನ ಏನು ಸಾಧನೆ ಮಾಡಬೇಕು ಎನ್ನುವುದು ಮುಖ್ಯ. ಅದಕ್ಕಾಗಿ ಆತ ಸಟೆಯ ಸಡಗರ ಬಿಡಬೇಕು. ಇವತ್ತು ಸುಳ್ಳನ್ನೇ ವಿಜೃಂಭಿಸಿ ಬಾಳುವವರು ಸಾಕಷ್ಟು ಜನರು. ಅವರು ಅಂಥ ಸುಳ್ಳಿನ ಸಂಭ್ರಮ, ಸಡಗರ ಬಿಟ್ಟು ಗುರುವಿನ ಮೂಲಕ ಇಷ್ಟಲಿಂಗ ದೀಕ್ಷೆಯನ್ನು ಪಡೆದು ನಿತ್ಯವೂ ಲಿಂಗಾರ್ಚನೆ, ಅರ್ಪಣೆ, ಅನುಸಂಧಾನ ಮಾಡುತ್ತಿರಬೇಕು. ಇದೇ ಹುಟ್ಟಿಗೆ ಗಟ್ಟಿತನ ತಂದುಕೊಡುವ ಅಂಶ. ಹೀಗೆ ಮಾಡದಿದ್ದಡೆ ಆ ವ್ಯಕ್ತಿ ನರಕ ಅನುಭವಿಸುವನು. ಇಲ್ಲಿ ನರಕ ಎಂದರೆ ಪೌರಾಣಿಕ ಅರ್ಥದಲ್ಲಿ ಅಲ್ಲ. ಶರಣರು ಪೌರಾಣಿಕ ಸ್ವರ್ಗ, ನರಕಗಳನ್ನು ನಂಬಿದವರಲ್ಲ. ಈ ಲೋಕದಲ್ಲಿ ಸತ್ಕಾರ್ಯಗಳನ್ನು ಮಾಡಿದರೆ ಸಂತೋಷವಾಗುವುದು. ಆ ಸಂತೋಷವೇ ಸ್ವರ್ಗ. ಮಾಡಬಾರದ ಅನಾಚಾರ, ದುರಾಚಾರ, ದುಷ್ಕೃತ್ಯಗಳನ್ನು ಮಾಡಿದರೆ ಅದರಿಂದ ಏನೆಲ್ಲ ಯಾತನೆ ಅನುಭವಿಸಬೇಕಾಗುವುದು. ಆ ಯಾತನೆ, ಸಂಕಟದ ಸಂದರ್ಭಗಳೇ ನರಕ. ಸಂತೋಷ, ಯಾತನೆ ಇವೆರಡೂ ಮುಖ್ಯವಲ್ಲ. ಬದಲಾಗಿ ಲಿಂಗಾರ್ಚನೆ ಮಾಡುತ್ತ ಕಾಯಕದಲ್ಲಿ ಕೈಲಾಸ ಕಾಣುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎನ್ನುವ ಸದಾಶಯ ಚನ್ನಬಸವಣ್ಣ ಮತ್ತಿತರ ಶರಣರದಾಗಿದೆ.

ಚನ್ನಬಸವಣ್ಣನವರು ಅಲ್ಲಮಪ್ರಭುದೇವರ ನಂತರ ಅನುಭವಮಂಟಪದ ಅಧ್ಯಕ್ಷರಾಗಿ ಅನುಭಾವ ಗೋಷ್ಠಿಗಳಿಗೆ ಚೈತನ್ಯ ತುಂಬಿದವರು. ಕಿರಿಯ ವಯಸ್ಸಿನಲ್ಲೇ ಹಿರಿಯ ಸ್ಥಾನವನ್ನು ತುಂಬಿದ್ದು ಅವರ ಸಾಧನೆಯ ಸತ್ಫಲ. ಅರಿವಿಗೆ ಹಿರಿದು ಕಿರಿದು ಎನ್ನುವ ಅಂತರ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟವರು ಶರಣರು. ಚನ್ನಬಸವಣ್ಣನವರು ವಯಸ್ಸಿನಿಂದ ಶಿವಯೋಗಿ ಸಿದ್ಧರಾಮೇಶ್ವರರಿಗಿಂತ ಕಿರಿಯರಾಗಿದ್ದರೂ ಸಿದ್ಧರಾಮೇಶ್ವರರಿಗೆ ಇಷ್ಟಲಿಂಗ ದೀಕ್ಷೆಯನ್ನು ಕರುಣಿಸಿ ಅಂಥ ಶಿವಯೋಗಿಗಳಿಗೂ ಗುರುವಾಗಿದ್ದರು ಎನ್ನುವುದು ಗಮನಾರ್ಹ ಸಂಗತಿ. ಗುರುತ್ವ ವಯಸ್ಸನ್ನು ಅವಲಂಬಿಸಿಲ್ಲ ಎನ್ನುವುದಕ್ಕೆ ಅವರೇ ಸಾಕ್ಷಿಯಾಗಿದ್ದಾರೆ. ಒಂದರ್ಥದಲ್ಲಿ ಇಂದು ನಮ್ಮ ಯುವ ಪೀಳಿಗೆಗೆ ಮಾತ್ರವಲ್ಲ; ಎಲ್ಲ ವರ್ಗದ, ಎಲ್ಲ ವಯಸ್ಸಿನ ಜನರಿಗೆ ಚನ್ನಬಸವಣ್ಣನವರ ಬದುಕು ಮತ್ತು ವಚನಗಳು ಹೆಗ್ಗುರುತು ಆಗಬೇಕಿದೆ. ಚನ್ನಬಸವಣ್ಣನವರು ತನ್ನ ಸೋದರ ಮಾವ ಬಸವಣ್ಣನವರ ವ್ಯಕ್ತಿತ್ವದ ಪ್ರಭಾವ ಮತ್ತು ತಾಯಿ ಅಕ್ಕನಾಗಮ್ಮನವರ ಮಾತೃತ್ವದ ಅಮೃತಧಾರೆಯನ್ನುಂಡು ಅವರನ್ನೇ ಮೀರಿಸುವಂತೆ ತಮ್ಮ ಬದುಕನ್ನು ಕಟ್ಟಿಕೊಂಡವರು. ಅಕ್ಕಮಹಾದೇವಿಯಂತಹ ಮಹಾನ್ ಚೇತನದ ಪರಿಚಯವನ್ನು ಅನುಭವಮಂಟಪದ ಸದಸ್ಯರಿಗೆ ಮಾಡಿದವರೇ ಚನ್ನಬಸವಣ್ಣ. ಅಷ್ಟೇ ಅಲ್ಲ; ಬಸವಣ್ಣನವರಿಗೂ ಕೆಲವು ವಿಚಾರಗಳಲ್ಲಿ ಗುರುವಿನಂತಿದ್ದವರು. ಅಂಥವರ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ, ಸಂಶೋಧನೆ ಆಗಬೇಕಿದೆ. ಕಾರಣ ಅವರದು ಆಧ್ಯಾತ್ಮಿಕವಾಗಿ ಅದ್ವಿತೀಯ ಸಾಧನೆ. ಬೆಳೆಯುವ ಸಿರಿಯನ್ನು ಮೊಳಕೆಯಲ್ಲೇ ನೋಡು ಎನ್ನುವಂತೆ ಬಾಲ್ಯದಲ್ಲೇ ಉತ್ತಮ ಸಂಸ್ಕಾರದಲ್ಲಿ ಬದುಕನ್ನು ಅರಳಿಸಿಕೊಂಡವರು ಚನ್ನಬಸವಣ್ಣ.
ದೀಪಾವಳಿ ಹಬ್ಬ ಕನ್ನಡ ನಾಡಿನಲ್ಲಿ ಬಹುದೊಡ್ಡದು. ನಾವು ಚಿಕ್ಕಮಕ್ಕಳಾಗಿದ್ದಾಗ ಅತ್ಯಂತ ಸಂಭ್ರಮದಿಂದ ಈ ಹಬ್ಬವನ್ನು ಆಚರಿಸಿದ ಸ್ಮರಣೆ ಇನ್ನೂ ಮನದಲ್ಲಿ ಹಸಿರಾಗಿ ಉಳಿದಿದೆ. ನಮ್ಮ ದೀಕ್ಷಾಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಸಂಪರ್ಕಕ್ಕೆ ಬಂದಮೇಲೆ ದೀಪಾವಳಿ ಎಂದರೆ ಬೆಳಕಿನ ಹಬ್ಬ, ಅದು ಜ್ಞಾನದ ಬೆಳಕು, ಅರಿವಿನ ಬೆಳಕು ಎನ್ನುವುದು ಅರ್ಥವಾಯಿತು. ಶರಣರ ಜಯಂತಿಗಳನ್ನು ನಮ್ಮ ಗುರುಗಳು ಒಂದೊಂದು ಹಬ್ಬಗಳಿಗೆ ಜೋಡಿಸಿ ಆ ಹಬ್ಬದಲ್ಲಿ ಶರಣರ ವಿಚಾರಗಳನ್ನೇ ಪ್ರಸಾರ ಮಾಡುತ್ತಿದ್ದರು. ಅದರಂತೆ ಚನ್ನಬಸವಣ್ಣನವರು ಜ್ಞಾನನಿಧಿ ಆಗಿದ್ದರಿಂದ ಅವರ ಜಯಂತಿಯ ಮೂಲಕ ಆ ಶರಣರ ಜೀವನ, ಸಾಧನೆ, ಸಂದೇಶ ಅರಿಯುವುದೇ ನಿಜವಾದ ದೀಪಾವಳಿ ಎಂದು ತಮ್ಮ ಪರಿಸರದಲ್ಲಿರುವವರಿಗೆ ಮನದಟ್ಟು ಮಾಡುತ್ತಿದ್ದರು. ಅದು ನಮ್ಮ ಮೇಲೆ ಗಾಢ ಪರಿಣಾಮ ಬೀರಿದ್ದರಿಂದ ನಾವು ಆಯಾ ಹಬ್ಬದಂದು ಆಯಾ ಶರಣರ ವಿಚಾರಗಳನ್ನು ಅರಿಯುವ ಪ್ರಯತ್ನ ಮಾಡುತ್ತ ಬಂದಿದ್ದೇವೆ. ಅಷ್ಟೇ ಅಲ್ಲ; ನಮ್ಮ ಹಾಸ್ಟಲ್ ವಿದ್ಯಾರ್ಥಿಗಳು ಮತ್ತು ನಮ್ಮ ಒಡನಾಡಿಗಳಿಗೆ ಆ ವಿಚಾರಗಳ ಅರಿವು ಮಾಡಿಕೊಡುವಲ್ಲೇ ಹಬ್ಬದ ಮೆರಗನ್ನು ಹೆಚ್ಚಿಸುವ ಕಾರ್ಯವನ್ನು ಸಂತೋಷದಿಂದ ಮಾಡುತ್ತ ಬಂದಿದ್ದೇವೆ. ದೀಪಾವಳಿ ಅರಿವಿನ ಹಬ್ಬವಾಗಬೇಕು ಎಂದರೆ ಚನ್ನಬಸವಣ್ಣನವರ ಕೆಲವು ವಚನಗಳನ್ನಾದರೂ ನಮ್ಮ ಜನರು ಓದುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು.

ಅನುಭಾವ ಅನುಭಾವವೆಂದೆಂಬರು
ಅನುಭಾವವೆಂಬುದು ನೆಲದ ಮರೆಯ ನಿಧಾನ ಕಾಣಿರೋ
ಅನುಭಾವವೆಂಬುದು ಅಂತರಂಗದ ಶುದ್ಧಿ ಕಾಣಿರೋ.
ಅನುಭಾವವೆಂಬುದು ರಚ್ಚೆಯ ಮಾತೆ?
ಅನುಭಾವವೆಂಬುದು ಸಂತೆಯ ಸುದ್ದಿಯೆ?
ಅನುಭಾವವೆಂಬುದು ಬೀದಿಯ ಪಸರವೆ?
ಏನೆಂಬೆ ಹೇಳಾ ಮಹಾಘನವ!
ಆನೆಯ ಮಾನದೊಗಿಕ್ಕಿದರಡಗೂದೆ ದರ್ಪಣದೊಳಗಡಗೂದಲ್ಲದೆ?
ಕಂಡ ಕಂಡಲ್ಲಿ ಗೋಷ್ಠಿ, ನಿಂದ ನಿಂದಲ್ಲಿ ಅನುಭಾವ,
ಬಂದ ಬಂದಲ್ಲಿ ಪ್ರಸಂಗವ ಮಾಡುವ ನಿರ್ಬುದ್ಧಿ ನೀಚರ ಮೆಚ್ಚ
ಕೂಡಲಚೆನ್ನಸಂಗಮದೇವ.

Previous post ಅಮುಗೆ ರಾಯಮ್ಮ (ಭಾಗ-3)
ಅಮುಗೆ ರಾಯಮ್ಮ (ಭಾಗ-3)
Next post ಮನ ಉಂಟೇ ಮರುಳೇ, ಶಿವಯೋಗಿಗೆ?
ಮನ ಉಂಟೇ ಮರುಳೇ, ಶಿವಯೋಗಿಗೆ?

Related Posts

ಆ ಬಿರುಗಾಳಿ ಹುಟ್ಟಲೊಡನೆ…
Share:
Articles

ಆ ಬಿರುಗಾಳಿ ಹುಟ್ಟಲೊಡನೆ…

January 8, 2023 ಡಾ. ಚಂದ್ರಶೇಖರ ನಂಗಲಿ
೧) ನಾನೆಂಬ ಅಹಂಕಾರ ತಲೆದೋರಿದಲ್ಲಿ ಅಟಮಟ ಕುಟಿಲ ಕುಹಕವೆಂಬ ಬಿರುಗಾಳಿ ಹುಟ್ಟಿತ್ತು! ಆ ಬಿರುಗಾಳಿ ಹುಟ್ಟಲೊಡನೆ ಜ್ಞಾನಜ್ಯೋತಿ ಕೆಟ್ಟಿತ್ತು! ಜ್ಞಾನಜ್ಯೋತಿ ಕೆಡಲೊಡನೆ ನಾ...
ಸ್ತ್ರೀ ಸ್ವಾತಂತ್ರ್ಯ ಕುರಿತು…
Share:
Articles

ಸ್ತ್ರೀ ಸ್ವಾತಂತ್ರ್ಯ ಕುರಿತು…

April 29, 2018 ಡಾ. ಎಸ್.ಎಮ್ ಜಾಮದಾರ
ಲಿಂಗಾಯತ ಧರ್ಮವು ಸ್ವತಂತ್ರವಾದರೆ ಮದುವೆಯಾದ ಹೆಣ್ಣುಮಕ್ಕಳು “ಕುಂಕುಮ ಹಚ್ಚಬಾರದು, ಮಂಗಳಸೂತ್ರ ಕಟ್ಟಬಾರದು, ಕಾಲುಂಗುರ ಹಾಕಿಕೊಳ್ಳಬಾರದು” ಎಂದು...

Comments 9

  1. J.K. Paramesh
    Nov 13, 2022 Reply

    ಚಿಕ್ಕ ದಂಡಾನಾಯಕರಾಗಿದ್ದ ಚೆನ್ನಬಸವಣ್ಣನವರ ವ್ಯಕ್ತಿತ್ವ ನಿಜಕ್ಕೂ ಆದರ್ಶಪ್ರಾಯವಾದದ್ದು ಹಾಗೂ ಆಕರ್ಷಕವಾದದ್ದು.

  2. Vijaya M
    Nov 13, 2022 Reply

    ದೀಪಾವಳಿಯ ದಿನವೇ ಚನ್ನಬಸವಣ್ಣನವರ ಜಯಂತಿ ಬಂದಿರುವುದು ಅರ್ಥಪೂರ್ಣವಾಗಿದೆ. ಚಿಕ್ಕವಯಸ್ಸಿನ ಚನ್ನಬಸವಣ್ಣನವರು ಅಗಾಧ ಜ್ಞಾನಪಡೆದಿದ್ದ ಬಾಲಪ್ರತಿಭೆ.

  3. ಗಂಗಾಧರಯ್ಯ ಜಾಲಹಳ್ಳಿ
    Nov 14, 2022 Reply

    ಗುರುಗಳಿಗೆ ಶರಣುಗಳು. ಕೆಲವೊಮ್ಮೆ ಚನ್ನಬಸವಣ್ಣನವರ ವಚನಗಳು ತೀರಾ ಧಾರ್ಮಿಕ ಎನಿಸಿಬಿಡುತ್ತವೆ, ಚಿಕ್ಕವಯದ ಚನ್ನಬಸವಣ್ಣನವರಲ್ಲಿ ಧಾರ್ಮಿಕ ಮನೋಭಾವ ಗಾಢವಾಗಿದ್ದುದು ನಿಜಕ್ಕೂ ಆಶ್ಚರ್ಯಕರ.

  4. Devika Huliyal
    Nov 20, 2022 Reply

    ಉಳುವಿಯತ್ತ ಹೆಜ್ಜೆ ಹಾಕಿದ ಚನ್ನಬಸವಣ್ಣನವರ ತಂಡವು ನಾವು ಕಲ್ಪನೆ ಕೂಡಾ ಮಾಡಲಾಗದಷ್ಟು ಕಷ್ಟಗಳನ್ನು ಅನುಭವಿಸಿದ್ದರೆಂದು ನನ್ನ ಅಜ್ಜಾ ಕತೆ ಮಾಡಿ ಹೇಳುತ್ತಿದ್ದರು. ಆ ಕಾಡಿನ ವಾತಾವರಣದಲ್ಲಿ ಈಗಲೂ ಮಳೆಗಾಲ ಭಯಾನಕ, ಸುಡುಬೇಸಿಗೆ ಮತ್ತೊಂದು ರೀತಿಯಲ್ಲಿ ಭಯಂಕರ, ಚಳಗಾಲವಂತೂ ತಡೆಯಲಿಕ್ಕಾಗದ ನಡುಕ… ನನಗೆ ಅವರ ತ್ಯಾಗದ ಕತೆ ಕೇಳುತ್ತಾ ಕಣ್ಣೀರು ಹರಿಯುತ್ತಿತ್ತು. ತಮ್ಮ ಲೇಖನ ನನ್ನ ಬಾಲ್ಯದ ಆ ಅನುಭವವನ್ನು ನೆನಪಿಗೆ ತಂದಿತು.

  5. ಸೋಮಶೇಖರ ಮಸಗಿ
    Nov 23, 2022 Reply

    ಇಂದಿನ ಯುವಕರಿಗೆ ನಮ್ಮ ಚೆನ್ನಬಸವಣ್ಣನ ಮಹಿಮೆ ಗೊತ್ತಾಗುವುದಕ್ಕೆ ಸಾಧ್ಯವೇ ಗುರುಗಳೇ? ಇವತ್ತಿನ ಯುವಜನಾಂಗ ಎತ್ತ ಹೊರಟಿದೆ, ಒಂದು ಕಡೆ ಆಧುನಿಕತೆಯ ಎಳೆತ, ಇನ್ನೊಂದು ಕಡೆ ಧರ್ಮಾಂಧತೆಯಲ್ಲಿ ಮುಳುಗಿಸುವ ಸೆಳೆತ. ನಮ್ಮ ಚೆನ್ನಣ್ಣ ಇವರ ಮತೆಗೆ ನಿಲುಕಲು ಸಾಧ್ಯವಾದರೂ ಆದೀತೇ?

  6. Parvathi Patil
    Nov 24, 2022 Reply

    ಬಸವಣ್ಣನವರ ಸೋದರಳಿಯ ಚನ್ನಬಸವಣ್ಣ ಎನ್ನುವುದು ಸಂಬಂಧದ ವಿಚಾರ, ಸೋದರಳಿಯನೇ ಮಾವ ಬಸವಣ್ಣನವರಿಗೆ ಕೆಲವಾರು ವಿಚಾರಗಳಲ್ಲಿ ಗುರುವಾಗಿದ್ದರು ಎಂಬುದು ನಿಜಕ್ಕೂ ಸೋಜಿಗವೇ! ಯುವಜನತೆಗೆ ಚೆನ್ನಣ್ಣ ನಿಜಕ್ಕೂ ಮಾದರಿಯಾಗಬಲ್ಲ ಯುವಕ, ನಮ್ಮ ಮಠಾಧೀಶರು ಇದನ್ನು ತಮ್ಮ ಪ್ರತಿ ಭಾಷಣದಲ್ಲೂ ಪ್ರಚಾರ ಮಾಡಿದರೆ ಲಿಂಗಾಯತ ಯುವಕ/ ಯುವತಿಯರಿಗೆ ಸ್ವಲ್ಪವಾದರೂ ತಲೆಗೆ ಹೋಗಬಹುದು.

  7. Rudresh Davangere
    Nov 25, 2022 Reply

    ಏಕಕಾಲಕ್ಕೆ ಅನುಭಾವಿಯೂ, ವೀರನೂ ಆಗಿದ್ದ ಚೆನ್ನಬಸವಣ್ಣನವರೂ ನಿಸ್ಸಂದೇಹವಾಗಿ ಯುವಕರಿಗೆ ಅತ್ಯುತ್ತಮ ಮಾದರಿ, ಗುರುಗಳ ಪಾದಗಳಿಗೆ ವಂದನೆಗಳು.

  8. Channabasava K
    Dec 10, 2022 Reply

    Wonderful post! Keep up the great writing swamiji…

  9. Vandana Soragavi
    Dec 10, 2022 Reply

    I am grateful to the holder of this site, who has taken enormous effort to share such beautiful thoughts…

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಗೆರೆ ಎಳೆಯದೆ…
ಗೆರೆ ಎಳೆಯದೆ…
October 13, 2022
ಇದ್ದಷ್ಟೇ…
ಇದ್ದಷ್ಟೇ…
January 10, 2021
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
November 7, 2020
ಒಂದು ತೊಟ್ಟು ಬೆಳಕು
ಒಂದು ತೊಟ್ಟು ಬೆಳಕು
February 7, 2021
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
June 17, 2020
ಗುರುವೆ ಸುಜ್ಞಾನವೇ…
ಗುರುವೆ ಸುಜ್ಞಾನವೇ…
September 7, 2021
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
January 7, 2022
ಗುರುವಂದನೆ
ಗುರುವಂದನೆ
October 13, 2022
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
January 4, 2020
ಒಳಗನರಿವ ಬೆಡಗು
ಒಳಗನರಿವ ಬೆಡಗು
September 10, 2022
Copyright © 2023 Bayalu