Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗಣಾಚಾರ
Share:
Articles August 8, 2021 ಡಾ. ಪಂಚಾಕ್ಷರಿ ಹಳೇಬೀಡು

ಗಣಾಚಾರ

ಬಸವಾದಿ ಶರಣರು ಆಚರಿಸಿ, ಬೋಧಿಸಿದ ಆಚಾರಗಳಲ್ಲಿ ಒಂದಾದುದು ಗಣಾಚಾರವೆಂಬ ಆಚಾರ. ಆಚಾರವೆಂದರೆ ಸಮಾಜದೊಂದಿಗೆ ನಾವು ನಡೆದುಕೊಳ್ಳುವ ರೀತಿ ನೀತಿ. ಗಣ ಎಂದರೆ ಸಮೂಹ ಅಥವಾ ಸಮಾಜ ಎಂಬರ್ಥ! ವ್ಯಕ್ತಿಯೊಬ್ಬ ತಾನು ಜೀವಿಸುತ್ತಿರುವ ಸಮಾಜದ ಶ್ರೇಯೋಭಿವೃದ್ಧಿಗಾಗಿ ಸತ್ಯಶುದ್ಧಕಾಯಕದ ಮೂಲಕ ದುಡಿದು ದಾಸೋಹ ಮಾಡುವುದು ಸದಾಚಾರವಾದರೆ ಸಮಾಜಕ್ಕೆ ಕೆಡುಕುಂಟುಮಾಡುವ, ಕಳಂಕ ತರುವ, ಸಮಾಜದ ಮೇಲೆ ದುಷ್ಪರಿಣಾಮ ಬೀರುವ ದುಷ್ಟಶಕ್ತಿಗಳ ವಿರುದ್ಧ ನೈತಿಕವಾಗಿ ಹೋರಾಡುವುದು ಗಣಾಚಾರ! ಒಂದು ಪ್ರಾಣಿಯನ್ನೇ ಆಗಲಿ, ಮಗುವನ್ನೇ ಆಗಲೀ ಪ್ರೋತ್ಸಾಹಿಸಿದಾಗ ಅಥವಾ ಕೆಣಕಿದಾಗ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದು ಸಹಜ ಸ್ವಭಾವ. ಯಾವಾಗ ಹೊರಗಿನ ಕ್ರಿಯೆ ನಮ್ಮ ಮೇಲೆ ಋಣಾತ್ಮಕ ಪರಿಣಾಮ ಬೀರಬಲ್ಲುದೆಂದು ಅರಿವಾಗುವುದೋ ತಕ್ಷಣವೇ ರಕ್ಷಣಾತ್ಮಕ ಪ್ರತಿಕ್ರಿಯೆ ಪ್ರತಿಯೊಂದು ಜೀವಿಯಿಂದ ವ್ಯಕ್ತವಾಗುವುದು, ಇದು ಗಣಾಚಾರದ ಕ್ರಿಯೆಯೇ ಆಗಿದೆ.
ಸರಳವಾಗಿ ಹೇಳಬೇಕೆಂದರೆ ಗಣಾಚಾರವು ಪ್ರತಿಯೊಂದು ಜೀವಿಯಲ್ಲಿಯೂ ಯಾವುದೇ ಬಾಹ್ಯ ಕ್ರಿಯೆಗೆ ಇರಬಹುದಾದ ಅಥವಾ ಇರಲೇಬೇಕಾದ ಸ್ವಾಭಾವಿಕ ಪ್ರತಿಕ್ರಿಯೆ. ಬಸವಣ್ಣನವರನ್ನು ಅವರ ಸಮಕಾಲೀನ ಶರಣರು ಬಹಳವಾಗಿ ಹೊಗಳುತ್ತಾರೆ ಅಂಥಾ ಹೊಗಳಿಕೆಗೆ ಬಸವಣ್ಣನವರು ಕೊಡುವ ಪ್ರತಿಕ್ರಿಯೆ ನೋಡೋಣ!
ಸಿದ್ಧರಾಮೇಶ್ವರ ಶರಣರು ಬಸವಣ್ಣನವರನ್ನು ಕುರಿತು “ಪಾವನವಾದೆನು ಬಸವಣ್ಣಾ, ನಿಮ್ಮ ಪಾವನಮೂರ್ತಿಯ ಕಂಡು. ಪರತತ್ವವನೈದಿದೆ ಬಸವಣ್ಣಾ, ನಿಮ್ಮ ಪರಮಸೀಮೆಯ ಕಂಡು. ಪದ ನಾಲ್ಕು ಮೀರಿದೆ ಬಸವಣ್ಣಾ, ನಿಮ್ಮ ಪರುಷಪಾದವ ಕಂಡು ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿದೆ; ಬಸವಣ್ಣಾ, ಬಸವಣ್ಣಾ, ಬಸವಣ್ಣಾ, ನೀನು ಗುರುವಾದೆಯಾಗಿ” ಎಂದು ಮನತುಂಬಿ ಹಾಡಿಹೊಗಳುತ್ತಾರೆ. ಅದಕ್ಕೆ ಬಸವಣ್ಣನವರ ಪ್ರತಿಕ್ರಿಯೆ ಹೀಗಿದೆ- “ಎನ್ನವರೊಲಿದು ಹೊನ್ನ ಶೂಲದಲ್ಲಿಕ್ಕಿದರೆನ್ನ ಹೊಗಳಿ, ಹೊಗಳಿ, ಎನ್ನ ಹೊಗಳತೆ ಎನ್ನನಿಮ್ಮೈಗೊಂಡಿತ್ತಲ್ಲಾ- ಅಯ್ಯೋ, ನೊಂದೆನು, ಸೈರಿಸಲಾರೆನು! ಅಯ್ಯಾ, ನಿಮ್ಮ ಮನ್ನಣೆಯೆ ಮಸೆದಲಗಾಗಿ ತಾಗಿತ್ತಲ್ಲಾ- ಅಯ್ಯೋ ನೊಂದೆನು, ಸೈರಿಸಲಾರೆನು. ಕೂಡಲಸಂಗಮದೇವಾ, ನೀನೆನಗೆ ಒಳ್ಳಿದನಾದಡೆ ಎನ್ನ ಹೊಗಳತೆಗಡ್ಡ ಬಾರಾ, ಧರ್ಮೀ” ಅನ್ಯರ ಹೊಗಳಿಕೆಯು ಮುಂದೆ ನನ್ನಲ್ಲಿ ಅಹಂಕಾರ ಮೈದೋರಲು ಕಾರಣವಾಗಬಹುದು ಎಂದೆಣಿಸಿದ ಬಸವಣ್ಣನವರು ನನ್ನನ್ನು ದಯವಿಟ್ಟು ಯಾರೂ ಹೊಗಳಬೇಡಿ ಎಂದು ಭಿನ್ನವಿಸಿಕೊಳ್ಳುತ್ತಾರೆ. ಇದೂ ಗಣಾಚಾರದ ಒಂದು ರೂಪವೇ ಆಗಿದೆ.
ಕೆಲವರು ಕುಚೇಷ್ಟೆಗಾಗಿ ಶರಣರನ್ನು ಮೂದಲಿಸಲು ಮುಂದಾಗಿ ಕೇಳುತ್ತಾರೆ- ನಿಮ್ಮದು ಯಾವ ಗೋತ್ರ, ನಿಮ್ಮ ಗೋತ್ರನಾಮವನ್ನು ಹೇಳಿ ಎನ್ನುವ ಮೂಲಕ ಶರಣರನ್ನು ಕೆಣಕುತ್ತಾರೆ, ಹಾಗೆ ಅಪಮಾನಗೊಂಡ ಶರಣರು ಬಸವಣ್ಣನವರಿಗೆ ವಿಚಾರ ಮುಟ್ಟಿಸಿದಾಗ ಅದಕ್ಕೆ ಬಸವಣ್ಣನವರು ಕೊಡುವ ಗಣಾಚಾರದ ಉತ್ತರ ಹೀಗಿದೆ: “ಗೋತ್ರನಾಮವ ಬೆಸಗೊಂಡಡೆ ಮಾತು ನೂಕದೆ ಸುಮ್ಮನಿದ್ದಿರಿದೇನಯ್ಯಾ, ತಲೆಯ ಕುತ್ತಿ ನೆಲನ ಬರೆವುತ್ತಿದ್ದಿರಿದೇನಯ್ಯಾ ಗೋತ್ರನಾಮ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯನೆಂಬುದೇನು, ಕೂಡಲಸಂಗಯ್ಯಾ.” ಧೈರ್ಯವಾಗಿ ಹೇಳಿ ನಮ್ಮದು ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯನವರ ಗೋತ್ರವೆಂದು, ಅದುಬಿಟ್ಟು ಅವಮಾನಿತರಾಗಿ ತಲೆತಗ್ಗಿಸಿ ಕಾಲ್ಬೆರಳಿನಿಂದ ನೆಲದ ಮೇಲೆ ಬರೆಯುತ್ತಿದ್ದಿರಲ್ಲಾ ಎಂದು ಮಾನಸಿಕವಾಗಿ ಧೈರ್ಯ ತುಂಬುವ ಕೆಲಸವನ್ನು ಗುರು ಬಸವಣ್ಣನವರು ಮಾಡುತ್ತಾರೆ ಮತ್ತು ಎದುರಾಳಿಗಳಿಗೆ ತಕ್ಕ ಪ್ರತ್ಯುತ್ತರವನ್ನು ಕೊಡಲು ಅವರಲ್ಲಿ ಮಾನಸಿಕ ಬಲ ತುಂಬುತ್ತಾರೆ.

ಗಣಾಚಾರದ ವಚನಗಳ ಅತ್ಯಂತ ಸಣ್ಣ ಸಂಗ್ರಹವನ್ನು ಇಲ್ಲಿ ಕೊಡಲಾಗಿದೆ. ವಚನಗಳು ಬಹಳ ಸರಳವಾಗಿ ಅರ್ಥವಾಗುವುದರಿಂದ ವಚನಗಳ ವಿವರಣೆ ಕೊಡುವ ಪ್ರಯತ್ನ ಮಾಡಲಾಗಿಲ್ಲ.

“ಲಿಂಗಮುಖದಿಂದ ಬಂದ ಪ್ರಸಾದವಲ್ಲದೆ ಕೊಂಡೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ. ಲಿಂಗಾರ್ಪಿತವಲ್ಲದೆ ಉದಕವ ಮುಕ್ಕುಳಿಸಿದಡೆ ಸಲ್ಲೆನು ನಿಮ್ಮ ಗಣಾಚಾರಕ್ಕಯ್ಯಾ. ಲಿಂಗಾರ್ಪಿತವಲ್ಲದೆ ಹಲ್ಲುಕಡ್ಡಿಯ ಕೊಂಡಡೆ ಬಲ್ಲೆ, ಮುಂದೆ ಭವ ಘೋರನರಕವೆಂಬುದ. ನಿಮಗೆತ್ತಿದ ಕರದಲ್ಲಿ ಮತ್ತೊಂದಕ್ಕೆ ಕೈಯಾನೆನು. ಅಳವರಿಯದೆ ನುಡಿದೆನು. ಕಡೆ ಮುಟ್ಟಿ ಸಲೆಸದಿದ್ದಡೆ ತಲೆದಂಡ, ತಲೆದಂಡ, ಕೂಡಲಸಂಗಮದೇವಾ” – ಬಸವಣ್ಣ

“ಲಿಂಗಾಚಾರ ಸದಾಚಾರ ಶಿವಾಚಾರ ಗಣಾಚಾರ ಭೃತ್ಯಾಚಾರವೆಂಬ ಪಂಚಾಚಾರದ ಆಚರಣೆಯೆಂತೆಂದಡೆ: ಲಿಂಗವಲ್ಲದೆ ಅನ್ಯವನರಿಯದಿಹುದೆ ಲಿಂಗಾಚಾರ. ಸಜ್ಜನ ಕಾಯಕದಲ್ಲಿ ತಂದು ಗುರು-ಲಿಂಗ-ಜಂಗಮಕ್ಕೆ ನೀಡಿ ಸತ್ಯಶುದ್ಧನಾಗಿಹುದೆ ಸದಾಚಾರ. ಶಿವಭಕ್ತರಲ್ಲಿ ಕುಲ ಗೋತ್ರ ಜಾತಿ ವರ್ಣಾಶ್ರಮವನರಸದೆ ಅವರೊಕ್ಕುದ ಕೊಂಬುದೆ ಶಿವಚಾರ. ಶಿವಚಾರದ ನಿಂದೆಯ ಕೇಳದಿಹುದೆ ಗಣಾಚಾರ. ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ ಭಯಭಕ್ತಿಯಿಂದ ಆಚರಿಸುವುದೆ ಭೃತ್ಯಾಚಾರ ಇಂತೀ ಪಂಚಾಚಾರವುಳ್ಳ ಪರಮಸದ್ಭಕ್ತರ ಒಕ್ಕುದನಿಕ್ಕಿ ಸಲಹಯ್ಯಾ ಪ್ರಭುವೆ, ಕೂಡಲಚೆನ್ನಸಂಗಮದೇವಾ” – ಚನ್ನಬಸವಣ್ಣ

“ಗುರುಲಿಂಗಜಂಗಮ ಪಾದೋದಕ ಪ್ರಸಾದ ರುದ್ರಾಕ್ಷಿ ಮಂತ್ರಗಳೆಂಬಷ್ಟಾವರಣಂಗಳು ತನ್ನ ಪ್ರಾಣಸ್ವರೂಪವಾಗಿ ಅವುಗಳ ನಿಂದೆಯನ್ನು ಕೇಳಿ ಸೈರಿಸದೆ ಶಿಕ್ಷಿಸುವೆನೆಂಬ ನಿಷ್ಠೆಗೊಂಡುದೇ ಗಣಾಚಾರ ನೋಡಯ್ಯ”- ಅಕ್ಕಮಹಾದೇವಿ
“ಅಪ್ಪುವಿನಂಶವನಳಿದು ಚಿದಪ್ಪುವೇ ಅಂಗವಾದುದೇ ಗಣಾಚಾರ” – ದೇಶಿಕೇಂದ್ರ ಸಂಗನಬಸವಯ್ಯ
“ಶಿವನಿಂದೆಯ ಕೇಳದಿಹುದೆ ಗಣಾಚಾರ”- ಚನ್ನಬಸವಣ್ಣ
“ಅಷ್ಟಾವರಂಣಗಳ ಮೇಲೆ ಅನ್ಯರಿಂದ ಕುಂದು ನಿಂದೆಗಳು ಬಂದು ತಟ್ಟಿದಲ್ಲಿ ಗಣಸಮೂಹವನೊಡಗೂಡಿ ಆ ಸ್ಥಲವ ತ್ಯಜಿಸುವುದೆ ಗಣಾಚಾರವೆಂಬೆನಯ್ಯಾ” – ಚನ್ನಬಸವಣ್ಣ

ಶರಣರು ಆಚರಿಸಿ ಬೋಧಿಸಿದ ಆಚಾರಗಳು ಯಾವರೀತಿ ನಮ್ಮನ್ನು ಪರಿಪೂರ್ಣದೆಡೆಗೆ ಕೊಂಡೊಯ್ಯಬಲ್ಲವು ಎಂದು ಶರಣ ಗುರುಸಿದ್ಧದೇವರು ತಮ್ಮ ಈ ವಚನದಲ್ಲಿ ಸ್ಪಷ್ಟವಾಗಿ ತಿಳಿಸುತ್ತಾರೆ. ಹಲವರು ವಿದ್ವಾಂಸರು ಅರಿವು ಜಾಗೃತವಾದರೆ ಸಾಕು ಆಚಾರವೇಕೆಬೇಕು ಎಂದು ತಮ್ಮ ವಿದ್ವತ್ತು ಪ್ರದರ್ಶಿಸುವುದನ್ನು ನಾವೆಲ್ಲಾ ನೋಡಿರುತ್ತೇವೆ. ಅರಿವಿಲ್ಲದ ಆಚಾರ ಕಂದಾಚಾರವಾದರೆ, ಆಚಾರವಿಲ್ಲದ ಅರಿವು ಶುಷ್ಕಜ್ಞಾನವಾಗುವುದಷ್ಟೇ! ಎರಡೂ ನಿಷ್ಪ್ರಯೋಜಕ! ಈ ಹಿನ್ನೆಲೆಯಲ್ಲಿ ಶರಣ ಗುರುಸಿದ್ಧದೇವರ ಈ ವಚನ ಬಹಳ ಮಹತ್ವಪೂರ್ಣವಾದುದು.
“ಹರಹರ ಶಿವಶಿವ ಜಯಜಯ ಹರಗಣಂಗಳಾಚರಿಸಿದ ಸತ್ಕಾಯಕದಿಂದ ಬಹುಜನ್ಮದ ದೋಷ ತೊಲಗುವುದಯ್ಯ. ಸತ್ಕಿøಯದಿಂದ ಕಾಲಕಾಮರ ಭಯ ಹರಿವುದಯ್ಯ. ಸಮ್ಯಜ್ಞಾನದಿಂದ ಮಾಯಾಪಾಶ ಹಿಂದಾಗುವುದಯ್ಯ. ಸದ್ಭಕ್ತಿಯಿಂದ ಪಾವನಸ್ವರೂಪರಾಗುವರಯ್ಯ. ಲಿಂಗಾಚಾರದಿಂದ ತನು ಶುದ್ಧವಾಗುವುದಯ್ಯ. ಸದಾಚಾರದಿಂದ ಮನ ಸಿದ್ಧವಾಗುವುದಯ್ಯ. ಶಿವಾಚಾರದಿಂದ ಧನ ಪ್ರಸಿದ್ಧವಾಗುವುದಯ್ಯ. ಗಣಾಚಾರದಿಂದ ನಡೆ ಪರುಷವಾಗುವುದಯ್ಯ. ಭೃತ್ಯಾಚಾರದಿಂದ ನುಡಿ ಪರುಷವಾಗುವುದಯ್ಯ. ಕ್ರಿಯಾಚಾರದಿಂದ ಕರ್ಮೇಂದ್ರಿಯಂಗಳು ಪವಿತ್ರವಾಗುವವಯ್ಯ. ಜ್ಞಾನಾಚಾರದಿಂದ ಜ್ಞಾನೇಂದ್ರಿಯಂಗಳು ಪಾವನವಾಗುವವಯ್ಯ. ಭಾವಾಚಾರದಿಂದ ಕರಣಂಗಳು ನಿಜಸ್ವರೂಪವಾಗುವವಯ್ಯ. ಸತ್ಯಾಚಾರದಿಂದ ವಿಷಯಂಗಳು ಲಿಂಗಮುಖವಾಗುವವಯ್ಯ. ನಿತ್ಯಾಚಾರದಿಂದ ವಾಯುಗಳು ಮಹಾಪ್ರಸಾದವಾಗುವವಯ್ಯ. ಧರ್ಮಾಚಾರದಿಂದ ಲಿಂಗಾಂಗ ಏಕವಾಗುವುದಯ್ಯ. ಸರ್ವಾಚಾರದಿಂದ ಸರ್ವಾಂಗ ಜ್ಞಾನಜ್ಯೋತಿಯಪ್ಪುದು ತಪ್ಪದು ನೋಡ. ಸತ್ಕಾಯಕ ಮೊದಲಾದ ಷೋಡಶ ಕಲೆನೆಲೆಗಳೆ ಸದ್ಗುರುಮುಖದಿಂ ಚಿದಂಗವ ಮಾಡಿಕೊಂಡು, ಷೋಡಶವರ್ಣವೆ ಸದ್ಗುರುಮುಖದಿಂ ಚಿದ್ಘನಲಿಂಗವ ಮಾಡಿಕೊಂಡು ಸದ್ಗುರುಮುಖದಿಂ ಎರಡಳಿದು ಏಕಸ್ವರೂಪದಿಂದ ಜ್ಯೋತಿಜ್ಯೋತಿ ಬೆರದಂತೆ ಬಸವ ಮೊದಲಾದ ಪ್ರಮಥಗಣಂಗಳೆಲ್ಲ ಬಯಲೊಳಗೆ ಮಹಾಬಯಲಾದರು ನೋಡ, ಸಂಗನಬಸವೇಶ್ವರ.”

Previous post ದೂಷಕರ ಧೂಮಕೇತು
ದೂಷಕರ ಧೂಮಕೇತು
Next post ಗುರು-ಶಿಷ್ಯ ಸಂಬಂಧ
ಗುರು-ಶಿಷ್ಯ ಸಂಬಂಧ

Related Posts

ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
Share:
Articles

ಪಾದಪೂಜೆ- ಪಾದೋದಕಗಳ ಪ್ರಸ್ತುತತೆ

April 29, 2018 ಡಾ. ಪಂಚಾಕ್ಷರಿ ಹಳೇಬೀಡು
ಹನ್ನೆರಡನೇ ಶತಮಾನವು ಭಾರತದ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳರಿಯದಂಥ ಮಹತ್ತರ ಬದಲಾವಣೆಗೆ ಸಾಕ್ಷಿಯಾಯಿತು. ಈ ಬದಲಾವಣೆಯ ನೆಲ ಇಂದಿನ ಉತ್ತರ ಕರ್ನಾಟಕ ಮತ್ತು ಬದಲಾವಣೆಯ...
ಪೂರ್ವಚಿಂತನೆಯಿಂದ ಕಂಡು…
Share:
Articles

ಪೂರ್ವಚಿಂತನೆಯಿಂದ ಕಂಡು…

November 7, 2020 ಡಾ. ವಿಜಯಕುಮಾರ್ ಬೋರಟ್ಟಿ
ಪೂರ್ವಚಿಂತನೆಯಿಂದ ಕಂಡು… ಉತ್ತರ ಚಿಂತನೆಯಿಂದ ಖಂಡಿಸಿ… (ಆಧುನಿಕ ಕಾಲದ ವಚನ ಪ್ರಕಟಣೆಯ ಸಂಕ್ಷಿಪ್ತ ಇತಿಹಾಸ) ನಮಗ್ಯಾರಿಗೂ ಹೆಚ್ಚು ಗೊತ್ತಿಲ್ಲದ ಒಂದು ವಿಷಯದಿಂದ...

Comments 9

  1. Tippesh Hiriyur
    Aug 10, 2021 Reply

    ಸೌಮ್ಯವಾದಿಗಳಾದ ಶರಣರು ಗಣಾಚಾರಿಗಳೂ ಆಗಿದ್ದರು. ಕೇವಲ ದೈಹಿಕವಾಗಿ ಅಲ್ಲ, ಮಾನಸಿಕ ಕಲಿಗಳವರು. ಪಂಚಾಚಾರಗಳ ಕುರಿತ ಲೇಖನ ಮಾಲೆ ಚೆನ್ನಾಗಿ ಮೂಡಿಬಂದಿತು. ಈಗಿನ ನಮ್ಮ ಸಂದರ್ಭಕ್ಕೆ ಅನ್ವಯಿಸಿ ಪಂಚಾಚಾರಗಳ ಅಗತ್ಯವನ್ನು ತಿಳಿಸಿದ್ದರೆ ಲೇಖನ ಸಮಗ್ರವಾಗಿರುತ್ತಿತ್ತು.

  2. R.D. Patil
    Aug 14, 2021 Reply

    ಶರಣರು ಕಲಿಗಳು. ಲಿಂಗಾಯತ ಧರ್ಮದ ಅನೇಕರು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ್ದಾರೆ. ಗಣಾಚಾರ ಅವರಲ್ಲಿ ರಕ್ತಗತವಾಗಿ ಬಂದಿದೆ.

  3. Veeranna Madiwalar
    Aug 14, 2021 Reply

    ಅಣ್ಣಾ, ಗಣಾಚಾರ ತತ್ವವನ್ನು ವಿಸ್ತರಿಸಿ ತಿಳಿಸಿದ್ದಕ್ಕೆ ಧನ್ಯವಾದಗಳು. ಕೊನೆಯಲ್ಲಿ ಕೊಟ್ಟ ವಚನಗಳನ್ನು ಬಿಡಿಸಿ ಹೇಳಿದ್ದರೆ ಚೆನ್ನಾಗಿತ್ತು.

  4. Uday J.K
    Aug 14, 2021 Reply

    Nice post. I used to be checking continuously this blog and I’m impressed!

  5. Jeevan koppad
    Aug 19, 2021 Reply

    ಗಣಾಚಾರವು ಹೇಗೆ ಧಾರ್ಮಿಕ ಅಂಧಾನುಕರಣೆಯಲ್ಲ ಹಾಗೂ ಇವತ್ತು ಎಲ್ಲಕಡೆ ಕಾಣುತ್ತಿರುವ ರಿಲಿಜಿಯಸ್ ಸುಪ್ರಿಮಸಿ ಅಲ್ಲ ಎನ್ನುವುದನ್ನು ತೌಲನಾತ್ಮಕವಾಗಿ ನೋಡಿದ್ದರೆ ಗಣಾಚಾರ ತತ್ವವು ಹೆಚ್ಚು ಮನದಟ್ಟಾಗುತ್ತಿತ್ತು.

  6. Rajeshwari Kovi
    Aug 21, 2021 Reply

    ಶರಣರು ಆಚರಿಸಿ ಬೋಧಿಸಿದ ಪಂಚಾಚಾರ ತತ್ವಗಳು ನಮ್ಮನ್ನು ಪರಿಪೂರ್ಣದೆಡೆಗೆ ಒಯ್ಯುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸದಭಿಮಾನವೇ ಗಣಾಚಾರ ನಡೆ. ಅಭಿಮಾನ ಶೂನ್ಯತೆಯಿಂದಾಗಲಿ, ದುರಭಿಮಾನದಿಂದಾಗಲಿ ಬದುಕುವುದು ಸರಿಯಲ್ಲ ಎನ್ನುವ ಮಹತ್ವವನ್ನು ಗಣಾಚಾರ ತಿಳಿಸಿಕೊಡುತ್ತದೆ.

  7. ನಾಗರಾಜು ಚಿತ್ರದುರ್ಗ
    Aug 24, 2021 Reply

    ಗೋತ್ರನಾಮವ ಬೆಸಗೊಂಡಡೆ ಮಾತು ನೂಕದೆ ಸುಮ್ಮನಿದ್ದಿರಿದೇನಯ್ಯಾ- ಬಸವಣ್ಣನವರ ಈ ವಚನವು ಅವತ್ತು ಶರಣರು ಎದುರಿಸಿರಬಹುದಾದ ಅವಮಾನ ಮತ್ತು ಅಸಹಾಯಕತೆಯ ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ. ಶರಣದಲ್ಲಿ ಧೈರ್ಯ ತುಂಬುವ ವಚನವು ದಿಟ್ಟ ಮನೋಭಾವದ ಸಂಕೇತವಾಗಿ ಮನಸ್ಸಲ್ಲಿ ನಿಲ್ಲುತ್ತದೆ.

  8. Jagannatha Patil
    Aug 30, 2021 Reply

    ದೇವರಿಗೆ, “ ನೀನೆನಗೆ ಒಳ್ಳಿದನಾದಡೆ ಎನ್ನ ಹೊಗಳತೆಗಡ್ಡ ಬಾರಾ…” ಎಂದು ಯಾರಾದರೂ ಈ ಜಗತ್ತಲ್ಲಿ ಹೇಳಿದ್ದರೆ ಅದು ಬಸವಣ್ಣನವರೇ ಇರಬೇಕು. ಎಲ್ಲರೂ ಕೀರ್ತಿಗಾಗಿ ಹಪಹಪಿಸುವವರೇ ಈ ಲೋಕದಲ್ಲಿ ತುಂಬಿದ್ದಾರೆ. ಬಸವಣ್ಣನವರ ವ್ಯಕ್ತಿತ್ವವನ್ನು ನೆನೆದಷ್ಟೂ ಆಶ್ಚರ್ಯ, ಆನಂದವಾಗುತ್ತದೆ. ಈ ವಚನವನ್ನು ನೆನಪಿಸಿದ್ದಕ್ಕೆ ಶರಣು ಸರ್.

  9. Kumaraswamy Nagamangala
    Sep 4, 2021 Reply

    ಬಸವಾದಿ ಶರಣರು ಗಣಾಚಾರಿಗಳಾಗಿದ್ದರಿಂದಲೇ ಇಷ್ಟಾದರು ವಚನಗಳನ್ನು ಆ ದುಷ್ಟರಿಂದ ರಕ್ಷಿಸಲು ಸಾಧ್ಯವಾಯಿತು. ಅವರ ಅನುಯಾಯಿಗಳಾದ ನಮ್ಮ ಮೇಲೆ ಆ ವಚನಗಳನ್ನು ಮುಂದಿನ ಕಾಲಕ್ಕೆ ತಲುಪಿಸುವ ಜವಾಬ್ದಾರಿ ಇದೆ. ಅದೇ ಇಂದಿನ ನಮ್ಮ ಗಣಾಚಾರವೆಂದು ನನ್ನ ಅಭಿಪ್ರಾಯ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶರಣ- ಎಂದರೆ…
ಶರಣ- ಎಂದರೆ…
March 6, 2020
ದೂಷಕರ ಧೂಮಕೇತು
ದೂಷಕರ ಧೂಮಕೇತು
August 8, 2021
ನಾನು ಯಾರು? ಎಂಬ ಆಳ ನಿರಾಳ-3
ನಾನು ಯಾರು? ಎಂಬ ಆಳ ನಿರಾಳ-3
May 6, 2020
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
March 12, 2022
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
January 7, 2019
ವಚನ ಸಾಹಿತ್ಯದ ಸಂಕೀರ್ಣತೆ
ವಚನ ಸಾಹಿತ್ಯದ ಸಂಕೀರ್ಣತೆ
April 29, 2018
ಬಿಂಬ-ಪ್ರತಿಬಿಂಬ
ಬಿಂಬ-ಪ್ರತಿಬಿಂಬ
February 5, 2020
ಅಪ್ಪನಿಲ್ಲದ ಮನೆ
ಅಪ್ಪನಿಲ್ಲದ ಮನೆ
January 10, 2021
ಸಾವಿಲ್ಲದ ಝೆನ್ ಗುರು: ಥಿಚ್ ನಾತ್ ಹಾನ್
ಸಾವಿಲ್ಲದ ಝೆನ್ ಗುರು: ಥಿಚ್ ನಾತ್ ಹಾನ್
February 11, 2022
ಮನಸ್ಸು
ಮನಸ್ಸು
September 7, 2020
Copyright © 2023 Bayalu