Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕರ್ತಾರನ ಕಮ್ಮಟ
Share:
Articles August 2, 2019 ಮಹಾದೇವ ಹಡಪದ

ಕರ್ತಾರನ ಕಮ್ಮಟ

‘ನಿನ್ನ ಪರ್ವ ಮುಗಿಯಿತು ನೀನೀಗ ಸಿದ್ಧನಾದೆ ಸಿದ್ಧರಾಮ’ಎಂದು ಎಚ್ಚರಿಸಿದಾಗ ಧೂಳಯ್ಯನೆಂಬೋ ಸೊನ್ನಲಿಗೆಯ ಆ ಪುಟ್ಟ ಬಾಲಕನ ಆಕಾರವೂ ಬದಲಾಗಿತ್ತು. ಹಣೆಯ ಮೇಲೆ ಬರೆದಿದ್ದ ವಿಭೂತಿಯೂ, ತಲೆಯ ಮೇಲಿನ ಜಟೆಯೂ, ಎದೆಯುದ್ದ ಬೆಳೆದಿದ್ದ ಗಡ್ಡವೂ ಆತನ ಅಜಾನುಬಾಹು ದೇಹಕ್ಕೆ ಹೇಳಿಮಾಡಿಸಿದಂತೆ ಒಪ್ಪಿತವಾಗಿದ್ದವು. ಹನ್ನೆರಡು ವರ್ಷಗಳ ಪರ್ಯಂತ ಆ ಮಲ್ಲಯ್ಯನ ಜೊತೆಗೂಡಿ ಕೊಳ್ಳದ ಏಕಾಂತದ ಜೀರುಂಡೆಯ ಧ್ಯಾನದಲ್ಲಿ ಓಂಕಾರ ನಾದವೂ ಸೇರಿಕೊಂಡಿತ್ತು.

ಆ ದಿನ ಬೆಳಗಾಗುತ್ತಲೇ ಶ್ರೀಗಿರಿಯ ನೆತ್ತಿಯ ಮೇಲೆ ಕೆಂಪನೆಯ ಕೆಂಬೆಳಗು ಒಡಮೂಡಿ ಆಕಾಶದ ಒಡಲೆಲ್ಲ ಕೆಂಪಾಗುತ್ತಿರಲು ಆಹೋರಾತ್ರಿ ವಜ್ರಾಸನದಲ್ಲಿ ಕುಳಿತು ಧ್ಯಾನಾಸಕ್ತರಾಗಿದ್ದ ಮಲ್ಲಯ್ಯನಿಗಾಗಿ ಬೇವಿನ ರಸ ಸಿದ್ಧಪಡಿಸಲು ಸಿದ್ಧರಾಮರು ನಸುಕಿನಲ್ಲಿಯೇ ಗುಹೆಯ ಮತ್ತೊಂದು ಬದಿಯ ಬಯಲಿನತ್ತ ನಡೆದರು. ಗಿಡದ ಪೊದೆಯಲ್ಲಿ ಯಾವುದೋ ಪ್ರಾಣಿ ಮಿಸುಕಾಡಿದಂತೆ ಭಾಸವಾಗಲು ಒಂದು ಚಣ ತಡೆದು ನಿಂತರು. ಯಾವ ಪ್ರಾಣಿಯಾದರೇನು ಸಿದ್ಧರ ಸ್ವರೂಪಿಯೇ ಆಗಿದ್ದ ಇವರ ಮನಸ್ಸಿನಲ್ಲಿ ಯಾವ ಭಯವೂ ಆಗಲಿಲ್ಲ.  ಪೊದೆಯ ಮರೆಯಲ್ಲಿರುವ ಪ್ರಾಣಿಯು ಜೀವಭಯದಿಂದ ಬೆದರುವ ಸದ್ದನ್ನು ಕೇಳಿದವರೇ ಗಿಡಗಂಟೆ ಸರಿಸಿ ನೋಡಿದರು. ಅಲ್ಲೊಂದು ಜಿಂಕೆ ಯಾವುದೋ ಮೃಗದ ಬೇಟೆಯಾಗಿ ಸಾವನ್ನು ಕಾಣಬೇಕಿದ್ದುದು ಬದುಕಿಕೊಳ್ಳಲು ಅವಿತುಕೊಂಡಿತ್ತು. ಅಯ್ಯೋ ಮಲ್ಲಿನಾಥ ಎಂದವರೇ.. ಆ ಜಿಂಕೆಯನ್ನ ಅನಾಮತ್ತ ಎರಡೂ ಕೈಗಳಲ್ಲಿ ಎತ್ತಿಕೊಂಡು ಗುಹೆಯ ಮುಂಭಾಗದ ಬೆಂಕಿಕೊಂಡದ ಮುಂದೆ ತಂದಿಳುಹಿದರು.

ಅಲ್ಲಿಯೇ ಧರೆಯ ಮೇಲೆ ಹೂ ಬಿಟ್ಟು ನಳನಳಿಸುತ್ತಿದ್ದ ನಂದಿಬಟ್ಟಲ ಗಿಡದ ಬೇರಿನ ತೊಗಟೆಯನ್ನು ತೆಗೆದು ಅರೆದು ಜಿಂಕೆಯ ಹಿಂಗಾಲಿನ ಮೇಲ್ಭಾಗದ ತೊಡೆಯ ಮೇಲಿನ ಹಸಿಗಾಯಕ್ಕೆ ಮೆತ್ತಿದರು. ಜಿಂಕೆಯ ಮರಿಯ ಕಣ್ಣೊಳಗೆ ಅಸಹಾಯಕತೆಯ ಜೊತೆಜೊತೆಯಲ್ಲಿಯೇ ಕಣ್ಗೂಡಿಸಿ, ತಲೆಕೆಳಗೆ ಹಾಕಿದಾಗ ನವಸಾಗರದ ಪುಡಿಯನ್ನು ತಂದು ಸುಣ್ಣದೊಟ್ಟಿಗೆ ಕೊಂಚ ತಿಕ್ಕಿ ಮೂಗಿಗೆ ಹಿಡಿದಾಗ ಜಿಂಕೆಮರಿ ಚಂಗನೆಂದು ಮುಖ ಮೇಲಕ್ಕೆ ಎತ್ತಿತು. ಮಲ್ಲಯ್ಯ ಧ್ಯಾನದಿಂದ ಆಗಷ್ಟೇ ಕಣ್ಣುಬಿಟ್ಟು ಸಿದ್ಧರಾಮರ ಚಟುವಟಿಕೆಯನ್ನು ಗಮನಿಸುತ್ತಿದ್ದರು. ಮತ್ತಷ್ಟು ನಂದಿಬಟ್ಟಲ ಬೇರಿನ ತೊಗಟೆಯನ್ನು ಗಾಯಕ್ಕೆ ಸವರಿಯಾದ ಮೇಲೆ ಗುರುವಿಗೆ ಬೇವಿನ ರಸ ಸಿದ್ದಪಡಿಸಬೇಕೆಂಬ ಕಾಯಕ ನೆನಪಾಗಿ, ಆ ಜಿಂಕೆಯನ್ನು ಅಲ್ಲಿಯೇ ಮಲಗಲು ಬಿಟ್ಟು ಬೇವಿನಗಿಡದತ್ತ ಹೆಜ್ಜೆಹಾಕಿದರು. ಮಡಕೆಯ ತುಂಬಾ ಬೇವಿನ ರಸ ಅರೆದು ಗುರುವಿನ ಮುಂದಿಡುವಷ್ಟರಲ್ಲಿ ಬೆಳಕಿನ ಕಿರಣಗಳು ಹೊಳೆಯ ನೀರಲ್ಲಿ ಪ್ರತಿಫಲಿಸಿ ಗುಹೆಯ ಮುಂಭಾಗದ ಕಲ್ಲುಬಂಡೆಯ ಮೇಲೆ ಬೆಳಕು ಚಲ್ಲಿದವು. ಈ ಹನ್ನೆರಡು ವರ್ಷಗಳಲ್ಲಿ ಇಂದೇ ತಡವಾಯ್ತೆಂಬ ಆತಂಕ ಮನಸೊಳಗಿದ್ದರೂ ತೋರಗೊಡದಂತೆ ಎದ್ದು ಹೋಗಿ ಮಿಂದು ಬಂದು ತಮ್ಮ ಯೋಗಾಭ್ಯಾಸದಲ್ಲಿ ತಾವು ನಿರತರಾದರು.

ಅಂದು ಸಂಜೆಯ ಹೊತ್ತಿಗೆ ಜಿಂಕೆಯ ಮರಿ ಎದ್ದು ನಿಂತಿತು, ಮಾರನೇ ದಿನಕ್ಕೆ ಮೈಜಾಡಿಸಿತು, ವಾರವೊಂದು ಕಳೆಯುವದರಲ್ಲಿ ಒಂದು ಹೆಜ್ಜೆ ಮುಂದಿಟ್ಟಿತು. ತಿಂಗಳೊಳಗೆ ಯಾವುದೋ ದುಷ್ಟ ಪ್ರಾಣಿಯ ಹಲ್ಲಿನ ನಂಜು ಮಾಯವಾಗಿ ಆ ಜಿಂಕೆ ಮರಿ ಸಿದ್ಧರಾಮರ ಒಡನಾಡಿಯೇ ಆಯ್ತು. ಕದಳಿ ವನ ಹೊಕ್ಕು ಬಾಳೆಯ ಗೊನೆಯೊಂದನ್ನು ಹೊತ್ತು ತರುತ್ತಿದ್ದ ಸಿದ್ಧರಾಮರ ಹಿಂದೆ ಮುಂದೆ ಆ ಜಿಂಕೆ ಪುಟನೆಗೆದಾಡುವುದನ್ನು ದೂರ ನಿಂತು ಗಮನಿಸುತ್ತಿದ್ದ ಗುರುಗಳು.. ಆ ದಿನ ಸಂಜೆಯ ವಿರಾಮದಲ್ಲಿ ‘ನಿನ್ನ ಪರ್ವ ಮುಗಿಯಿತು ನೀನೀಗ ಸಿದ್ಧನಾದೆ ಸಿದ್ಧರಾಮ ಹೊರಡು ನಿನ್ನೂರಿಗೆ, ಗುಡ್ಡರ ಜಡ್ಡು ಜಾಪತ್ರೆ ಆದಿಯಾಗಿ ಹಸು-ಕರುಗಳ ಆರೈಕೆ ಮಾಡು, ಮಲ್ಲಿನಾಥನನ್ನು ನೀನಿರುವಲ್ಲೇ ಕಂಡುಕೋ ಸಿದ್ಧರಾಮ’ ಎಂದು ಹೇಳಿದರು.

ಅಂದಿನಿಂದ ಮೊದಲಾಗಿ ಗಿರಿಯ ಕಾರಣಿಕ ಮುಗಿಯುವವರೆಗೂ ಅಲ್ಲಿದ್ದು, ಅಲ್ಲಿನ ಬೆಲೆಯುಳ್ಳ ಸಸ್ಯ ರಾಶಿಯ ಬೀಜ, ನಾರು, ಬೇರು ಸಂಗ್ರಹಿಸಿ ಸೌರಾಷ್ಟ್ರದತ್ತ ಹೊರಟಿದ್ದ ವ್ಯಾಪಾರಿಯೊಬ್ಬನ ಖಾಲಿಬಂಡಿಯಲ್ಲಿ ಹೇರಿಕೊಂಡು ಹೊರಟರು. ವಾರೊಪ್ಪತ್ತಿನಲ್ಲಿ ಸೊನ್ನಲಿಗೆಗೆ ಬಂದಾಗ ಅಲ್ಲೇನಿದೆ ನೋಡಲು, ಭಿಕೋ ಎನ್ನುವ ಬೆಂಗಾಡು, ರಣಹೊಡೆಯುವ ಬಿಸಿಲು, ಗುಟುಕು ನೀರಿಗೂ ತತ್ವಾರ ಪಡುವ ಬದುಕು ಅಲ್ಲಿತ್ತು. ಮಳೆ ಹೋಗಿ ಹನ್ನೆರಡು ವರ್ಷಗಳು ಸಂದಿರಲು ಯಾವ ಜೀವಗಳಲ್ಲೂ ಚೈತನ್ಯ ಇದ್ದಿರಲಿಲ್ಲ. ಊರಹೊರಗೆ ಕಟ್ಟಿಸಿದ್ದ ಧರ್ಮಛತ್ರದಲ್ಲಿ ತನ್ನೆಲ್ಲ ನಾರುಬೇರಿನ ಮೂಟೆಗಳನ್ನಿಳಿಸಿಕೊಂಡು, ಆಯಾಸಕ್ಕೆ ಬಾಯಾರಿ ಬಂದವನಿಗೆ ಕುಡಿಯಲು ಹನಿ ನೀರಿಲ್ಲದಿರುವುದನ್ನು ಕಂಡು ಮನಸ್ಸು ಮಮ್ಮಲ ಮರುಗಿತು. ಯಾರೋ ಪುಣ್ಯಾತ್ಮ ಬಂಡಿಯ ಮೇಲೆ ಹೋಗಿ ದೂರದ ನದಿಯ ಒರತೆಯಿಂದ ನೀರು ತಂದು ಅರವಟ್ಟಿಗೆ ತುಂಬಿಸುತ್ತಿದ್ದ.

“ಅಯ್ಯಾ ನೀರು ಕುಡಿಯಲೇ?”

“ಅಯ್ಯೋ ಕುಡಿಯಿರಿ ಸ್ವಾಮಿ, ಈ ಧರ್ಮಛತ್ರಕ್ಕಾಗಿಯೇ ತಂದಿರುವ ನೀರಿದು”

ಎಂದೆನ್ನುತಾ ಆ ವ್ಯಕ್ತಿ ಬಾಗಿ ಪುಟ್ಟ ಬಿಂದಿಗೆಯಲ್ಲಿ ನೀರು ತಂದುಕೊಟ್ಟ…

“ಇದು ನಮ್ಮ ತಂದೆಯವರು ಕಟ್ಟಿಸಿದ ಧರ್ಮಛತ್ರ ಸ್ವಾಮಿ, ಈ ದಾರಿಯಲ್ಲಿ ಶ್ರೀಗಿರಿಗೆ ಹೋಗುವ ಭಕ್ತರು ಬಹಳಾ ಜನ… ಅವರಿಗೆ ಆಸರಾಗಲಿ ಎಂದು ಇದನ್ನು ಕಟ್ಟಿಸಿದರು. ನಿಮ್ಮದು ಯಾವೂರಾಯ್ತು ಸ್ವಾಮಿ..?”

ಸಿದ್ಧರಾಮನ ಮುಖದಲ್ಲಿ ಸಣ್ಣದೊಂದು ನಗೆಯಾಡಿತು. ನೀರು ಕೊಟ್ಟಾತ ಬೇರಾರೂ ಅಲ್ಲ ಅಣ್ಣ ಬೊಮ್ಮಣ್ಣ ಎನ್ನುವ ಗುರುತು ಸಿಕ್ಕಿದರೂ ತನ್ನ ಗುರುತು ಅವನಿಗೆ ಸಿಕ್ಕಿಲ್ಲವೆಂಬುದನ್ನು ಖಾತ್ರಿಪಡಿಸಿಕೊಂಡ.

“ಇದು ಸೊನ್ನಲಿಗೆಪುರ ಅಲ್ಲವೇ..?”

“ಹೌದು”

“ಇಲ್ಲಿನ ಗುಡ್ಡರ ಕುಲದ ಗೊಂಡ ಮುದ್ದುಗೌಡರ ಪರಿಚಯ ನಿಮಗಿದೆಯೇ…”

“ಅಯ್ಯೋ ಸ್ವಾಮಿ ಅವರು ನನ್ನ ತಂದೆ”

“ಹಾಗಿದ್ದರೆ ಆ ಸುಗ್ಗವ್ವೆ-ಮುದ್ದುಗೌಡರು ನನಗೂ ತಂದೆತಾಯಿಗಳೇ…”

“ಏನೆಂದಿರಿ..!”

ಬೊಮ್ಮಣ್ಣ ಬಿಟ್ಟಕಣ್ಣು ಬಿಟ್ಟಂತೆ ನಿಶ್ಚಲ ದೃಷ್ಟಿಯಲ್ಲಿ ಆ ಮನುಷ್ಯನನ್ನು ನೋಡತೊಡಗಿದ. ಇವರು ಇರಲಿಕ್ಕಿಲ್ಲ, ನನ್ನ ತಮ್ಮನಿಗೆ ಮಾತೇ ಆಡಲು ಬರುತ್ತಿರಲಿಲ್ಲ.. ಆದರೆ ಮುಖದ ಹೋಲಿಕೆಯಲ್ಲಿ ಥೇಟ್ ಅಪ್ಪನದೆ ಗಂಭೀರತೆ ಇರುವುದಲ್ಲಾ.. ಬೊಮ್ಮಣ್ಣನ ಮುಖದಲ್ಲಿ ನಗೆಯಾಡಿತು. ತಮ್ಮಾ ಎಂದು ಹೋಗಿ ಬಿಗಿದಪ್ಪಿಕೊಳ್ಳಬೇಕೆನಿಸಿದರೂ.. ಈಗ ಅವನು ಸಜ್ಜನ ಸಾಧುವಿನ ಹಾಗಿದ್ದಾನೆ. ಉದ್ದುದ್ದ ಗಡ್ಡ, ಹಣೆಯ ಮೇಲೆ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ, ತಲೆ ಮೇಲೆ ಸಣ್ಣಕೆ ಜಟೆ ಸುತ್ತಿದ್ದಾನಲ್ಲಾ. ಅಯ್ಯೋ ಈಗ ಇವನನ್ನು ತಮ್ಮಾ ಎಂದು ಮಾತಾಡಿಸಬೇಕೆ… ಅಥವಾ ಸ್ವಾಮಿ ಅನ್ನಬೇಕೆ.. ಇತ್ಯಾದಿ ಗೊಂದಲಗಳು ತಲೆಯಲ್ಲಿ ಹಾದದ್ದೆ ತಡ ಅವಸರ ಮಾಡಿ ಮನೆಯ ಕಡೆ ಹೆಜ್ಜೆಹಾಕಿದ.

ತಂದೆ-ತಾಯಿಗೆ ನಂಬಲಾಗಲಿಲ್ಲ. ಈಗ ಅವನು ಯೋಗಿಯಾಗಿದ್ದಾನೆ.. ಎಂಬ ಅಳುಕಿನಲ್ಲೇ ಮುದ್ದುಗೌಡ ಸುಗ್ಗವ್ವೆಯರು ಛತ್ರಕ್ಕೆ ದೌಡಾಯಿಸಿ ಬಂದರು. ಮಗನೆಂಬ ಮಮತೆಯ ಒಡಲಲ್ಲಿ ತಾಯಿ ಓಡಿ ಬಂದವಳೆ ಮಗನೇ ಎಂದಳು. ಹೌದು ತಾಯೇ ನಾನೇ.. ಆದರೀಗ ನಾನು ಸಿದ್ಧರಾಮ ಶಿವಯೋಗಿಯಾಗಿದ್ದೇನೆ. ಬರಗಾಲದಲ್ಲಿ ಮಳೆಬಂದಂತೆ ಖುಷಿಗೊಂಡವರ ಮುಖದಲ್ಲಿ ಚಿಂತೆ ಮೂಡಿತು. ಮುಗಿಲಲ್ಲಿ ಹೆಪ್ಪುಗಟ್ಟಿದ್ದ ಮೋಡಗಳು ದಟ್ಟೈಯಿಸಿದರೂ ಬಾಯ್ದೆರೆದ ಭೂಮಿಗೆ ನಾಲ್ಕು ಮಳೆ ಹನಿಯನ್ನೂ ಉದುರಿಸಲಾರದೆ ಹೋದಂತೆ ಅವನ ಮಾತುಗಳು ಮುದ್ದುಗೌಡನ ಎದೆಗೆ ತಾಕಿದವು. ಮನೆಗೆ ಬರುವುದಿಲ್ಲವೆಂದೂ.. ಈಗ ನಾನು ಲೋಕದ ಮಗನಾಗಿದ್ದೇನೆ ಲೌಕಿಕದ ಸುಳುಹು ಎನಗೆ ಬೇಡ. ಅಲೌಕಿಕದಲ್ಲಿ ಸಾಕ್ಷಾತ್ ಕಪಿಲಸಿದ್ಧ ಮಲ್ಲಿನಾಥನ ಮಗ ನಾನು ಎಂದದ್ದೆ ತಾಯಿ ಸುಗ್ಗವ್ವೆಯ ಎದೆಯಲ್ಲಿ ಛಟೀರೆಂದು ಸಿಡಿಲು ಹೊಡೆದ ಅನುಭವವಾಯ್ತು.

                  ****  ****  ****

ಮೊರಡಿಯ ಮುದ್ದುಗೌಡರ ಮಗ ಶ್ರೀಗಿರಿಯಿಂದ ಶಿವಯೋಗಿಯಾಗಿ ಬಂದಿದ್ದಾನೆ ಎಂಬ ಸುದ್ದಿ ಆ ಊರಲ್ಲಿ ಹರಿದಾಡಿದ್ದೆ ತಡ ಜನಗಳು ಒಬ್ಬೊಬ್ಬರಾಗಿ ಬಂದು ಮಾತಾಡಿಸಿ ಹೋಗತೊಡಗಿದರು. ತೀರ ವಯಸ್ಸಾದ ಹಣ್ಣುಹಣ್ಣು ಮುದುಕಿಯೊಬ್ಬಳು ಬಾಗಿರುವ ಸೊಂಟವನ್ನು ಹಿಡಿದುಕೊಂಡು, ಕೆಮ್ಮುತ್ತ ಛತ್ರದ ಕಡೆ ಧಾವಿಸಿ ಬಂದಳು. ಹಾಗೆ ಕೆಮ್ಮಿಕೆಮ್ಮಿ ಸುಸ್ತಾಗಿ ಧಮ್ಮು ತಿನ್ನಲು ಹೊರಗೆ ಕುಳಿತಳು. ಆ ಬರಗಾಲದ ದಿನಗಳಲ್ಲಿ ದನಕರು ಜನಜಾನುವಾರಗಳಿಗೆಲ್ಲ ಒಂದಿಲ್ಲೊಂದು ಖಾಯಿಲೆ ಕಸಾರಿಕೆಯೇ ಮೈಗಂಟಿಕೊಂಡು ಇಡೀ ಊರು ರೋಗಿಷ್ಟವಾಗಿತ್ತು. ಅಯ್ಯಾ ಧೂಳಯ್ಯಾ ನಾನು ಬಂದಿದ್ದೀನಪ್ಪಾ ಸೂಲಗಿತ್ತಿ ಸಂಗವ್ವಾ.. ಎಂದು ಹೊರಗಿನಿಂದಲೇ ಕೆಮ್ಮುತ್ತಾ ಕೆಮ್ಮಿದ ಕಫವನ್ನು ಉಗುಳುತ್ತಾ ಕೂಗಿದಳು ಆ ಮುದುಕಿ. ಸಣ್ಣದೊಂದು ಲ್ಯಾವಿಗಂಟನ್ನು ಹಿಡಿದುಕೊಂಡು ಹೊರಗೆ ಬಂದ ಸಿದ್ಧರಾಮರು ಆ ಮುದುಕಿಯ ಮೈದಡವಿ ಮೇಲೆತ್ತಿ ಕಟ್ಟೆಯ ಮೇಲೆ ಕೂರಿಸಿದರು.

‘ಅಯ್ಯಾ ನನ್ನಪ್ಪಾ.. ನೀನು ಹುಟ್ಟಿದಾಗ ನಾನೇ ನಿಮ್ಮವ್ವನ ಬಾಣಂತನ ಮಾಡಿದ್ದು. ನಿನ್ನ ತಾಯ್ತಂದೆ ಮುಖ ನೋಡೋದಕ್ಕೂ ಮೊದಲು ನನ್ನ ಮುಖವಾ ನೀನು ಕಂಡಿಯಾ ನನ್ನಪ್ಪಾ’ ಎಂದು ಲಟಿಗೆ ಮುರಿದಳು ಮುದುಕಿ. ಸಿದ್ಧರಾಮರು ಲ್ಯಾವಿ ಗಂಟಿನೊಳಗಿನ ನಾರೊಂದನ್ನು ತೆಗೆದು ನೀರೊಳಗೆ ನೆನೆಹಾಕಿ, ಬೇರೊಂದನ್ನು ತೇದು ಆ ಮುದುಕಿಯ ನಾಲಗೆಗೆ ವರೆಸಿದರು… ಎದೆಯೊಳಗೆ ಗೂಡುಗಟ್ಟಿದ್ದ ಕಫಕರಗಿ ನೀರಾದಂತೆ ಭಾಸವಾಯ್ತವಳಿಗೆ, ಉಸಿರಾಟವೂ ಸಹಜವಾದದ್ದೆ ಮುದುಕಿ ಬಿಟ್ಟಕಣ್ಣಬಿಟ್ಟಂತೆ ಅವನನ್ನೇ ನೋಡಿದಳು. ‘ಆಹಾ ಸ್ವಸ್ತವಾದೆನೆ ನಾನು, ನನ್ನೊಳಗೆ ಅದೇನು ಉಸಿರಿನ ಸರಾಗ ತುಂಬಿದೆ ನನ್ನಪ್ಪಾ, ನಿನ್ನ ಎಳೆದು ಭೂಮಿಗೆ ತಂದ ಋಣ ತೀರಿಸಿದೆಯಾ ನನ್ನಪ್ಪಾ’ ಎಂದೆನ್ನುತಾ ಕೈಮುಗಿದಳು. ಅದೇ ಮಂದಹಾಸದಲ್ಲಿ ‘ತಾಯೇ ಋಣ ತೀರಿಸಲು ಬಂದವನಲ್ಲ ನಾನು, ಸೇವೆ ಮಾಡಲು ಆ ಕಪಿಲಸಿದ್ಧ ಮಲ್ಲಿಕಾರ್ಜುನ ನನ್ನನ್ನು ಇಲ್ಲಿಗೆ ಕಳಿಸಿದ್ದಾನೆ’ ಎಂದು ಹೇಳಿದರು. ಮುದುಕಿ ಎದ್ದು ನಿಲ್ಲಲು ನೋಡಿದರೆ ಬೆನ್ನು ಬಾಗಿದೆ ಸೊಂಟ ಉಳುಕಿದೆ ಎಂಬುದು ತಿಳಿಯಿತು. ಮೆಲ್ಲಗೆ ಆಕೆಯ ಕೈಹಿಡಿದು ಛತ್ರದ ಮುಂಭಾಗದಲ್ಲಿರುವ ಕಲ್ಲುಬಂಡೆಯ ಮೇಲೆ ಕೂರಿಸಿದರು. ಅದೇನು ಚಾಕ್‍ಚಕ್ಯತೆ.. ಛತ್ರದ ಒಳಗೋಡಿ ಚರ್ಮದ ಚೀಲದಲ್ಲಿ ಕಟ್ಟಿದ್ದ ಪಾವು ಎಣ್ಣೆಯನ್ನು ತಂದು ಆಕೆಯ ಸೊಂಟಕ್ಕೆ ಹಚ್ಚಿ ಹದವಾಗಿ ನೀವಿದಾಗ ಆ ಮುದುಕಿಯ ಸೊಂಟದ ಉಳುಕು ಕೊಂಚ ಹಗುರಾದಂತೆ ಆಯ್ತು.

‘ತಾಯೇ ನಿಮ್ಮ ಸೊಂಟದ ಉಳುಕು ನೋವು ತಿಂದಿದೆ, ಬಹಳ ದಿನದ ಉಳುಕು ಇದಾದ್ದರಿಂದ ನೀವು ದಿನವೂ ಇಲ್ಲಿಗೆ ಬಂದು ಉಳುಕು ತಿಕ್ಕಿಸಿಕೊಂಡು ಹೋದರೆ ವಾರೊಪ್ಪತ್ತಿನಲ್ಲಿ ನೀವು ಮೊದಲಿನಂತೆ ನಡೆದಾಡುವಿರಿ’

‘ಅಯ್ಯಾ ನನ್ನಪ್ಪಾ ಅದೇನು ನಿನ್ನ ಕೈಗುಣವೋ.. ಕೊಂಚ ನಿರಾಳವಾಯ್ತು ಜೀವ’

ಮುದುಕಿಯ ಕಂಗಳಲ್ಲಿ ನೀರಾಡುತ್ತಿತ್ತು. ನಾನು ಹೆರಿಗೆ ಮಾಡಿಸಿದ ಕೂಸು ನನ್ನ ನೋವು ಮಾಯಮಾಡಿತಲ್ಲ ಎಂದೆನ್ನುತಾ ಬಾಗಿ ಆ ಶಿವಯೋಗಿಯ ಕಾಲಿಗೆರಗಿದಳು. ಆ ದಿವಸ ಸೊನ್ನಲಿಗೆಯ ಮೇಲೆ ಕರೀಮೋಡಗಳು ದಟ್ಟೈಯಿಸಿ ಪ್ರವಾಹದೋಪಾದಿಯಲ್ಲಿ ಮಳೆ ಸುರಿಯಲು ಇಡೀ ಊರಿಗೆ ಜೀವಚೈತನ್ಯ, ಕೈಕಾಲುಗಳು ಚಿಗುರೊಡೆದವು.

ಸಿದ್ಧರಾಮರು ಊರಿಗೆ ಬಂದದ್ದರಿಂದಲೇ ಮಳೆಯಾಯ್ತೆಂದು ನಂಬಿದ ಊರ ಜನರು ಮರುದಿನ ಅವರ ವಾಸಕ್ಕಾಗಿಯೇ ಛತ್ರ ಕಟ್ಟಿದರು. ಊರೊಳಗಿನ ರೋಗಗಳಿಗೆಲ್ಲ ಔಷಧಿ ನೀಡುವ ಸಿದ್ಧರಾಮರು ಆ ಗುಡ್ಡರ ಕಣ್ಣಲ್ಲಿ ಸಾಕ್ಷಾತ ಶಿವಸ್ವರೂಪಿಯಾದ ಪವಾಡಪುರುಷರಾದರು.

ದಿನಕಳೆದಂತೆ ಸೊನ್ನಲಿಗೆ ಸಿದ್ಧರಾಮರ ಔಷಧೋಪಚಾರದ ಮಹಿಮೆ ಸುತ್ತಲ ಹತ್ತಾರು ಹಳ್ಳಿಗಳಿಗೆ ಮುಟ್ಟಲು, ರೋಗಿಗಳು, ಮುದು-ತದುಕರು, ಕೈಕಾಲುಳುಕಿನವರು ನೂರಾರು ಜನ ಬರತೊಡಗಿದರು. ಬರುವವರ ಅನುಕೂಲಕ್ಕಾಗಿ ಚೌಕಗಳನ್ನು ಕಟ್ಟಿಸಿದರು. ಛತ್ರಗಳನ್ನು ಕಟ್ಟಿಸಿದರು. ಗುಡ್ಡರ ದೈವಕ್ಕೆ ದೇವರಾಗಿ ಬಂದ ಸಿದ್ಧರಾಮರು ಒಂದು ದಿನ ಊರಿನ ಸಮಸ್ತರನ್ನೂ ಸಭೆ ಕರೆದು ಊರಿಗಾಗಿ ಕೆರೆಕಟ್ಟುವ ಯೋಚನೆ ಹೇಳಿದರು. ಶಿವಸ್ವರೂಪಿಯಾದ ಶಿವಯೋಗಿ ಹೇಳಿದರೆ ಆ ಜನ ಕೇಳಲಾರರೇ.. ಎಷ್ಟೋ ಜನರ ಜೀವ ಉಳಿಸಿದ ಪವಾಡ ಪುರುಷ ಸಿದ್ಧರಾಮಶಿವಯೋಗಿಯ ಮಾತು ಮೀರುವವರಾರು ಆ ಊರಿನಲ್ಲಿ..? ಮರುದಿನ ಮನೆಗೊಂದಾಳು ಕೆರೆಕಟ್ಟೆ ಕಟ್ಟುವುದಕ್ಕಾಗಿ ಸಿದ್ದರಾಮರ ಆಶ್ರಮಕ್ಕೆ ಬಂದರು. ಎರಡು ಗುಡ್ಡಗಳಿಂದ  ಬರುವ ನೀರು ಹರಿದು ಹಳ್ಳಕ್ಕೆ ಹೋಗುವ ಜಾಗೆಯಲ್ಲಿ ಕೆರೆ ಕಟ್ಟಲಾರಂಭಿಸಿದರು. ನಿಧನಿಧಾನಕ್ಕೆ ಕಲ್ಲುಬಂಡೆಗಳನ್ನು ಒಡೆಯುತ್ತಾ ಕೆರೆಯ ಆಕಾರದಲ್ಲಿ ಅಂಗಳ ತಯಾರಾದದ್ದೆ ಮಳೆಗಾಲಹೋಗಿ ಮತ್ತೊಂದು ಮಳೆಗಾಲ ಬಂದಿತು. ಧೋ ಎನ್ನುವ ಮಳೆ ಭೋರ್ಯಾಡಿ ಹೊಡೆಯಲು ಆ ಬಟ್ಟಂಬಯಲಿನಲ್ಲಿ ಸಣ್ಣದೊಂದು ಸಮುದ್ರದ ಹಾಗೆ ನೀರು ನಿಂತಿತು. ಗುಡ್ಡರ ಕಂಗಳಲ್ಲಿ ಸಾರ್ಥಕತೆಯ ಶ್ರಮ ಕಾಣಿಸಿತು.

ಇದೆಲ್ಲದರ ನಡುವೆ ಸುಗ್ಗವ್ವೆ ಮಗನು ಮನೆಗಾಗಲಿಲ್ಲ, ಶಿವನ ಗೂಳಿಯಾದನಲ್ಲ ಎಂದು ಕೊರಗುತ್ತಲೇ ಕೊನೆಯುಸಿರೆಳೆದಳು. ಆಗೀಗ ಮನೆಗೆ ಹೋಗಿ ಬರುತ್ತಿದ್ದ ಸಿದ್ಧರಾಮರು ಎಷ್ಟು ತಿಳಿಹೇಳಿದರು ಮಮತೆಯ ಆ ಮಡಿಲಿಗೆ ಮಗನು ಊರಲ್ಲಿದ್ದೂ ಮನೆಗೆ ಬಾರದಿರುವ ಸಂಕಟವೇ ಹೆಚ್ಚಾಗಿತ್ತು. ಬೊಮ್ಮಣ್ಣ ಸಿದ್ಧರಾಮನು ಬರೀ ತಮ್ಮ ಮನೆಗೆ ಸೀಮಿತನಲ್ಲ ಲೋಕಕ್ಕೆ ಬೆಳಕಾಗುವ ದೇವರಾಗಿದ್ದಾನೆ ಎಂದೇ ಭಾವಿಸಿದ್ದನು. ಹೆಂಡತಿ ಸತ್ತ ಆರೇಳು ತಿಂಗಳಿನಲ್ಲಿ ಮುದ್ದುಗೌಡರೂ ಬದುಕಿನ ಯಾತ್ರೆ ಮುಗಿಸಿದ್ದರು. ಬೊಮ್ಮಣ್ಣನ ಮೈ ಕಸುವು ಮೊದಲಿನಂತಿಲ್ಲದಿದ್ದರೂ ಊರಿನ ಗೌಡಿಕೆಯ ಜೊತೆಜೊತೆಗೆ ಸಿದ್ಧರಾಮದೇವರ ಮಾತುಗಳನ್ನು ಚಾಚೂ ತಪ್ಪದೆ ನಡೆಸುತ್ತಿದ್ದನು.

ಶಿವಯೋಗಿಯು ವರ್ಷಕ್ಕೊಮ್ಮೆ ಗಿರಿಯ ಪರಿಷೆಗೆ ಹೋಗುವುದು ಔಷಧಿಯ ನಾರುಬೇರು ತರುವುದು, ಅದು ಖಾಲಿಯಾದ್ದೆ ಮತ್ತೆ ಹೋಗುವುದು ಬರುವುದು ನಿರಂತರ ನಡೆದಿರಲು ಒಂದು ದಿನ ಆ ಶ್ರೀಗಿರಿಯ ವಾಸಿ ಮಲ್ಲಿಕಾರ್ಜುನ ದೇವರನ್ನೇ ಸೊನ್ನಲಿಗೆಗೆ ತರುವ ಸಂಕಲ್ಪ ಮಾಡಿದರು. ಗುಡ್ಡರ ಜೊತೆಮಾಡಿಕೊಂಡು ಗುಡಿಕಟ್ಟಿದರು, ಕಳಶವಿಟ್ಟರು. ಮಲ್ಲಿನಾಥನನ್ನೇ ಹೋಲುವ ಶಿವಲಿಂಗ ತಂದು ಪ್ರತಿಷ್ಠಾಪಿಸಿದರೂ ಕೂಡ.. ಆದರೆ ಮನದ ಮೂಲೆಯಲ್ಲಿ ಯಾವುದೊ ಕೊರತೆಯೊಂದು ಎದ್ದು ಕಾಡುತ್ತಿತ್ತು. ಭಕ್ತಿಗೆ ಕಡಿಮೆಯಿಲ್ಲ, ಶಿವಯೋಗಕ್ಕೆ ಕಡಿಮೆಯಿಲ್ಲ, ಆ ಶಿವನ ಆಳುಮಕ್ಕಳ ಸೇವೆಯನ್ನೂ ಕಡಿಮೆ ಮಾಡದ ಸಿದ್ಧರಾಮರ ಮನಸ್ಸಿನಲ್ಲಿ ತಾನು ಮಾಡುವ ಭಕ್ತಿ ಸಾಲದಾಯ್ತು ಎನಿಸಿತೇನೋ.. ಮತ್ತೊಮ್ಮೆ ಶ್ರೀಗಿರಿಗೆ ಹೋಗಿ ಅಪ್ಪಟ ಮಲ್ಲಿಕಾರ್ಜುನನ ಮತ್ತೊಂದು ಲಿಂಗವನ್ನು ತಂದು ಲಿಂಗದ ಮೇಲೆ ಲಿಂಗವಿಟ್ಟು ಪೂಜಿಸಿದರೂ ಮನಸ್ಸಿನ ಮೂಲೆಯಲ್ಲಿನ ಚಿಂತೆ ಸಾಯಲಿಲ್ಲ.

ಅದೊಂದು ದಿನ ಮಧ್ಯಾಹ್ನದ ಸರುಹೊತ್ತಿನಲ್ಲಿ ಪ್ರಸಾದ ಸೇವಿಸಿ ಬೇವಿನ ಗಿಡದ ಕೆಳಗೆ ಅಲ್ಲಿ-ಇಲ್ಲಿ ಮಲಗಿದ್ದ ರೋಗಿಗಳ ದೇಹಸ್ಥಿತಿ ವಿಚಾರಿಸುತ್ತಾ ಆಶ್ರಮದ ಮುಂಬಾಗಿಲ ಬಳಿಬಂದರು. ಅಲ್ಲೊಬ್ಬ ಮಟ್ಟಸವಾದ ಮನುಷ್ಯ ನಗುನಗುತ್ತ ಅವರ ಮುಂದೆ ಬಂದು ನಿಂತ. ಉದ್ದ ತೋಳಿನ ಅಂಗಿ, ಬಿಳೇ ಧೋತರಾ, ಮುಖದ ಮೇಲೆ ಗುರುತಿನ ನಗೆ, ಹಣೆಯ ಮೇಲೆ ವಿಭೂತಿ, ತಲೆಯ ಮೇಲೆ ಪಟಗಾ, ಹೆಗಲ ಮೇಲೆ ವಸ್ತ್ರ ಹಾಕಿದ್ದ ಆ ಮುಖವನ್ನು ಎಲ್ಲೋ ನೋಡಿದ್ದ ಹಾಗಿದ್ದರೂ ಯಾರೆಂಬುದು ತಿಳಿಯದೇ ಸಿದ್ದರಾಮದೇವರು ಹುಬ್ಬೇರಿಸಿದರು.

ಶಿವಯೋಗಿ ನಾನು ಯಾರೆಂಬುದು ತಿಳಿಯಲಿಲ್ಲವೇ..!

ಮೌನದಿಂದ ಆ ಮುಖವನ್ನು ಧ್ಯಾನಿಸುತ್ತಾ ನೆನಪಿನ ಪದರುಗಳಲ್ಲಿ ಯಾರೀತ ಎಂಬ ಗೊಂದಲದಲ್ಲಿದ್ದ ಸಿದ್ಧರಾಮರಿಗೆ ಆ ಮಹಾಶಯನ ಗುರುತು ಹತ್ತಿತು.

ಕಲ್ಲಯ್ಯಾ..!

ನಾನೇ ಗುರುವೇ, ಹಾವಿನಾಳ ಕಲ್ಲಯ್ಯಾ..

ಇಬ್ಬರೂ ನಗೆಯಾಡಿದರು. ಬಹಳ ಸಣ್ಣವರಿದ್ದಾಗ ಜೊತೆಯಾಗಿ ಶ್ರೀಗಿರಿಗೆ ಹೋಗಿದ್ದರು. ಆಗಾಗ ಕಲ್ಲಯ್ಯ ಶ್ರೀಗಿರಿಗೆ ಬಂದು ಹೋಗುತ್ತಿದ್ದರಾದರೂ ಇತ್ತೀಚೆಗೆ ಬರುವುದು ಕಡಿಮೆಯಾಗಿತ್ತು. ಅದಕ್ಕೆ ಕಾರಣ ತಂದೆಯವರ ಅಕಾಲ ಮರಣದಿಂದ ಕಲ್ಲಯ್ಯನ ಮೇಲೆ ಮನೆಯ ಜವಾಬ್ದಾರಿಯೂ ಬಂದಿತ್ತು. ಬಹಳ ಹೊತ್ತಿನವರೆಗೂ ಮಾತಾಡಿದರು.

****  ****  ****

ಹೆಂಗಸರು ಮಕ್ಕಳು ನೀರು ತರಲೆಂದು ದೂರದ ಕೆರೆಗೆ ಹೋಗುವುದು ಬೇಡವೆನಿಸಿ ಊರನಡುವೆಯೇ ಬಾವಿ ತೋಡಿಸಿದರು. ಅಷ್ಟೊತ್ತಿಗೆ ಸಿದ್ಧರಾಮರ ಕೈಗುಣ ರಾಜ್ಯರಾಜ್ಯಗಳಲ್ಲಿ ಸುದ್ದಿಯಾಗಿ ಎಷ್ಟೋ ರಾಜಮನೆತನಗಳ ರಾಜವೈದ್ಯರೂ ಆಗಿ ಪ್ರಸಿದ್ಧಿ ಪಡೆದಿದ್ದರು. ಚಾಲುಕ್ಯ ತೈಲಪ ಚಕ್ರವರ್ತಿಗಳ ಸಂಬಂಧಿಯೊಬ್ಬರಿಗೆ ಆಮಶಂಕೆಯಾದಾಗ ಸ್ವತಃ ಸಿದ್ಧರಾಮರೇ ಮುಂದಾಗಿ ಔಷಧೋಪಚಾರ ಮಾಡಿ ಗುಣಪಡಿಸಿದ್ದರು. ಅಂದು ಸಾಯಂಕಾಲ ಹಾವಿನಾಳ ಕಲ್ಲಯ್ಯನವರು ಒಳಕಲ್ಲು ಮುಂದೆ ಕುಳಿತು ಅರೆಯುತ್ತಿರಲು, ಸಿದ್ಧರಾಮರು ನಾರು ಬೇರುಗಳನ್ನು ತೊಲೆಯಾಕಾರದಲ್ಲಿ ತೂಗಿ ಅದರೊಳಗೆ ಬೆರೆಸುತ್ತಾ, ಅರೆದ ದ್ರವವನ್ನು ಮಡಕೆಯೊಂದಕ್ಕೆ ತುಂಬುತ್ತಿದ್ದರು.  ಇನ್ನೇನು ಬಾನೆಲ್ಲಾ ಕೆಂಪಾಗಿ ಸೂರ್ಯನು ಆಕಾಶದಿಂದ ನಿರ್ಗಮಿಸಲು ತಯಾರಾಗುತ್ತಿದ್ದ. ಆ ಹೊತ್ತಿನಲ್ಲಿ ಪಡುವಣದಿಂದ ನಾಲ್ಕಾರು ಕಾಲಾಳುಗಳು ಮೇಣೆಯೊಂದನ್ನು ಹೊತ್ತುಕೊಂಡು ಸಿದ್ಧರಾಮರ ಆಶ್ರಮಕ್ಕೆ ಬಂದರು. ಬಂದವರು ಕೊಂಕಣ ಸೀಮೆಯ ಕದಂಬ ರಾಜರ ದೂತರು. ಯಾಕಾಗಿ ಇಷ್ಟು ದೂರ ಬಂದೀರಿ ಎಂದು ವಿಚಾರಿಸಲಾಗಿ ಕದಂಬರ ಜಯಕೇಶಿ ಮಹಾರಾಜರ ಆರೊಗ್ಯವು ಏರುಪೇರಾಗಿದ್ದು, ಜ್ವರದ ಗಡ್ಡೆ ವಿಷಮಕ್ಕೇರಿ ಸಾಯುವ ಸ್ಥಿತಿಯಲ್ಲಿದ್ದಾರೆ.. ದಯಮಾಡಿ ಸಿದ್ಧರಾಮ ಶಿವಯೋಗಿಗಳು ಆಗಮಿಸಿ ಔಷಧೋಪಚಾರ ಮಾಡಬೇಕೆಂದು ರಾಣಿ ಮೈಲಾಳದೇವಿಯ ಬಿನ್ನಹದ ಓಲೆಯೊಂದನ್ನು ತಂದಿದ್ದರು.

ಜ್ವರದಗಡ್ಡೆ ವಿಷಮ ಸ್ಥಿತಿ ತಲುಪಿರುವುದು ಎಂಬುದಾಗಿ ಸ್ಥಳೀಯ ವೈದ್ಯರು ಹೇಳಿದ್ದಾರೆಂದರೆ ತಾನು ಈ ಕೂಡಲೇ ಕದಂಬ ದೊರೆಯ ಆರೈಕೆಗೆ ಹೋಗಬೇಕೆಂದು ನಿರ್ಧರಿಸಿದ ಸಿದ್ಧರಾಮರು ಅದೇ ರಾತ್ರಿಯೇ ಮೇಣೆಯಲ್ಲಿ ಕುಳಿತು ಕದಂಬ ರಾಜ್ಯದತ್ತ ಪ್ರಯಾಣ ಬೆಳೆಸಿದರು. ರಾತ್ರಿಗಳೆರಡು ಕಳೆದು ಮೂರನೆ ಹಗಲಿಗೆ ಸಿದ್ಧರಾಮರು ಸೊಗಲವನ್ನು ದಾಟಿ ಅಂದಿನ ಕದಂಬ ರಾಜ್ಯದ ಈ ತುದಿಯ ಮುಳಗುಂದವೆಂಬ ಸಾಮಂತ ನಾಡಗೌಡರ ಊರಿಗೆ ಬಂದರು. ಸಮುದ್ರದಂಡೆಯ ಅರಗಾವು ಜ್ವರಕ್ಕೆ ಮತ್ತಷ್ಟು ಮಾರಕ ಎಂಬುದಾಗಿ ಹಿರಿಯರು ಹೇಳಿದ್ದರಿಂದ ರಾಣಿ ಮೈಲಾಳದೇವಿಯು ಆರೋಗ್ಯ ಸುಧಾರಿಸುವವರೆಗೆ ಮುಳುಗುಂದದಲ್ಲಿ ಠಿಕಾಣಿ ಹೂಡಿದ್ದರು.

ಮೇಣೆಯಿಂದಿಳಿದು ಬಂದ ಸಿದ್ಧರಾಮರು ನೆಟ್ಟಗೆ ನಾಡಗೌಡರ ವಾಡೆಯನ್ನು ಹೊಕ್ಕು ಜಯಕೇಶಿ ರಾಜರನ್ನು ಮಲಗಿಸಿದ್ದ ಮಂಚದ ಬಳಿ ಬಂದು ನಿಂತರು. ಕಣ್ಣಿನ ರೆಪ್ಪೆ ಬಿಡಿಸಿ ನೋಡಿದರು. ಕಳಾಹೀನವಾಗಿದ್ದ ಕಣ್ಣಗುಡ್ಡೆಗಳು ಸೋತು ಹೋಗಿದ್ದವು. ಕಾದ ಭೂಮಿಯಂತೆ ನಿಗಿನಿಗಿ ಕೆಂಡವಾಗಿದ್ದ ಅವರ ಮೈ ಯಾವ ಕ್ಷಣದಲ್ಲಿ ತಣ್ಣಗಾಗುವುದೋ ಎಂಬ ಆತಂಕದಲ್ಲಿಯೇ ತಮ್ಮ ಜೋಳಿಗೆಗೆ ಕೈಹಾಕಿ ಕರೇ ಮೆಣಸಂಗಿ ಗಡ್ಡೆ, ಮರಗೆಸುವಿನ ಗಡ್ಡೆ, ಕೂಮನಗಡ್ಡೆ, ಶುಂಠಿ, ಕಾಳಮೆಣಸು, ಹಿಪ್ಪಿ ಇವೆಲ್ಲವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಚೂರ್ಣ ಮಾಡಿದರು. ಬೆಲ್ಲದುಂಡೆಯನ್ನು ಹದವಾಗಿ ಜಜ್ಜಿ ಮಿಶ್ರಣ ಮಾಡಿ ಜೇನುತುಪ್ಪದಲ್ಲಿ ಕಲಿಸಿ ರಾಜರ ಬಾಯೊಳಗಿಟ್ಟು ನೆಕ್ಕಲು ಹೇಳಿದರು.

ಬಿಳೆಮದ್ಯಾಹ್ನ ಮಲ್ಲಿಗೆಯ ಗಡ್ಡೆ ತರಿಸಿ, ಮೆಣಸಿನ ಕಾಳು, ಜೀರಿಗೆಯನ್ನು ಬೆಣ್ಣೆಯಲ್ಲಿ ಹುರಿದು, ಮಜ್ಜಿಗೆಯಲ್ಲಿ ತಂಬಳೀ ಮಾಡಿ ಕುಡಿಯಲು ಕೊಟ್ಟರು. ಸತತ ಇಪ್ಪತ್ತೊಂದು ದಿನ ಏಕಾಗ್ರ ಮನಸ್ಸಿನಲ್ಲಿ ಜಯಕೇಶಿರಾಜರ ಆರೈಕೆ ಮಾಡಲು, ದಿನದಿನಕ್ಕೆ ರಾಜರ ಆರೊಗ್ಯದಲ್ಲಿ ಸುಧಾರಣೆ ಕಂಡು ಜೀವದಲ್ಲಿ ಚೈತನ್ಯ ತುಂಬಿಕೊಂಡಿತು. ರಾಣಿ ಮೈಲಾಳದೇವಿಗೆ ಹೋದ ಜೀವ ಬಂದಂತಾಗಿತ್ತು. ಮೂರು ವಾರ ಕಳೆದ ಮೇಲೆ ಸಿದ್ಧರಾಮರು ಹೊರಟು ನಿಂತಾಗ ಕದಂಬ ರಾಜ್ಯದ ಕುರುಹಾಗಿ ಪರಾತಿನ ತುಂಬ ನಗನಾಣ್ಯ ಕೊಟ್ಟು, ಜೀವ ಉಳಿಸಿ ರಾಜ್ಯ ಕಾಪಾಡಿದ ಶಿವಯೋಗಿಯ ಪಾದಕ್ಕೆರಗಿ ಜಯಕೇಶಿ ರಾಜರು ಬೀಳ್ಕೊಟ್ಟರು.

ಮರಳಿ ಸೊನ್ನಲಿಗೆಗೆ ಬಂದಾಗ ತಾನು ಬೆಳೆಸಿದ್ದ ಗಿಡಮರಗಳು ಬಾನೆತ್ತರಕ್ಕೆ ಬೆಳೆಯುತ್ತಿದ್ದವು. ನೂರಾರು ಸಾವಿರಾರು ಜನ ಔಷಧೋಪಚಾರಕ್ಕಾಗಿ ಶಿವಯೋಗಿಯ ಬರುವಿಕೆಯನ್ನು ಕಾಯುತ್ತ ಕುಳಿತಿದ್ದರು. ಮತ್ತದೇ ಬಿಡುವಿಲ್ಲದ ಶಿವಧ್ಯಾನ, ಶಿವಚಿಂತನೆ, ಔಷಧೋಪಚಾರದಲ್ಲಿ ಮುಳುಗಿದರು.

                ****   ****   ****

ಹೀಗೆ ಸೊನ್ನಲಿಗೆ ಎಂಬುದು ನಂದನವನವಾಗಿರಲು ಒಂದು ದಿನ ಅಡ್ಡನಾಡಿ ಸನ್ಯಾಸಿಯೊಬ್ಬ ಗುಡ್ಡದ ಮೇಲೆ ನಿಂತು ಗಹಗಹಿಸಿ ನಗುವುದನ್ನ ಕಂಡ ಗುಡ್ಡರು ಅವನೊಂದಿಗೆ ಜಗಳಕ್ಕೆ ಬಿದ್ದಿದ್ದರು. ಆತನೋ ಮಹಾ ವಾಚಾಳಿ, ಯಾರ ಮಾತಿಗೂ ಯಾರ ಹಂಗಿಗೂ ಸಿಕ್ಕಲಾರದ ಆ ಮುದುಕನ ಪ್ರಶ್ನೆಗಳು ಗುಡ್ಡರಿಗೆಲ್ಲ ತಲೆತಿರುಕನ ಮಾತಿನಂತೆನಿಸಿದವು. ಸಿದ್ಧರಾಮದೇವರನ್ನು, ತಾವು ದೈವವೇ ಎಂದು ಪೂಜಿಸುವ ಶಿವಯೋಗಿಯನ್ನು ಆತ ವಡ್ಡನೆಂದು ಜರಿದಾಗ ಗುಡ್ಡರ ಮೈಯ ರೋಮಗಳು ನೆಟ್ಟಗಾಗಿದ್ದವು. ಇನ್ನೇನು ಹೊಡೆದೇಬಿಟ್ಟರು ಎನ್ನುವಾಗ, ಸಿದ್ಧರಾಮಶಿವಯೋಗಿಗಳು ಅಡ್ಡಬಂದು ಬಿಡಿಸಿದರು. ಆತನು ಮತ್ತಾರು ಅಲ್ಲ ಗಾಳಿಯಂತೆ ಗಾಳಿಯಾಗಿದ್ದ, ನೀರಿನಂತೆ ನೀರಾಗಿದ್ದ ಪಂಚಮಹಾಭೂತಗಳನ್ನೊಳಗೊಂಡ ಅಲ್ಲಮನಾಗಿದ್ದ.

ಸಿದ್ಧರಾಮ-ಅಲ್ಲಮರ ನಡುವೆ ಮಾತಿಗೆ ಮಾತು ಬೆಳೆಯಿತು. ವಾದಕ್ಕೆ ವಾದ. ಯಾವ ನಿಲುವು ಸರಿ, ಯಾವುದು ತಪ್ಪೆಂದು ನಿಂತಲ್ಲಿಯೇ ಎಷ್ಟೋ ಹೊತ್ತು ತಮ್ಮ ಮಾತುಗಳನ್ನು ತಾವಿಬ್ಬರೂ ಸಮರ್ಥಿಸಿಕೊಳ್ಳುವ ಪರಿಯನ್ನು ಕಂಡ ಆ ಗುಡ್ಡರು ಇವರಿಬ್ಬರೂ ದೇವರೇ ಹೌದು… ಮೂಕರಾಗಿ ಅವರ ಮಾತುಗಳನ್ನು ಕೇಳಿಸಿಕೊಂಡರು. ಅದು ತಾತ್ವಿಕತೆಯ ಯುದ್ಧ, ಅಂತರಂಗ-ಬಹಿರಂಗಗಳ ನಡುವಿನ ತೆಳುಗೆರೆಯನ್ನು ಅರ್ಥಮಾಡಿಕೊಳ್ಳುವ ನಂಬುಗೆಯ ಯುದ್ಧವದು. ಬಹಳ ಹೊತ್ತಿನ ಮೇಲೆ ಸಿದ್ಧರಾಮರು ಅವರನ್ನು ಆಶ್ರಮಕ್ಕೆ ಆಹ್ವಾನಿಸಿದರು.

ಲಿಂಗದ ಮೇಲೆ ಲಿಂಗವಿಟ್ಟು ಪೂಜಿಸುವ ಸಿದ್ಧರಾಮರ ಡಂಭಾಚಾರವ ಕಂಡು ಅಲ್ಲಮರು ಮತ್ತಷ್ಟು ನಗೆಯಾಡಿದರು. ಅವರ ಒಂದೊಂದು ಮಾತು, ಬಿಡುವ ಒಂದೊಂದು ಉಸಿರಲ್ಲೂ ಆಧ್ಯಾತ್ಮದ ಪರಿಮಳವೇ ತುಂಬಿದೆಯೇನೋ ಎನಿಸಿದರೂ ಮನಸಿನ ಪ್ರಶ್ನೆಗಳನ್ನು ಕೇಳುತ್ತಲೇ ಸಿದ್ಧರಾಮರು ಅಲ್ಲಮನನ್ನು ಅರಿಯುತ್ತಲೇ ಹೊರಟರು. ಕಡೆಯದಾಗಿ ಲಿಂಗದ ಮೇಲೆ ಲಿಂಗವಿಟ್ಟ ಮಲ್ಲಿಕಾರ್ಜುನನ ಗುಡಿಯ ಮುಂಭಾಗದಲ್ಲಿ ಕುಳಿತಾಗ ಅಲ್ಲಮ ಹೇಳಿದರು:

‘ಇದು ಅರಿವಿನ ಮಾರ್ಗವಲ್ಲ ಸಿದ್ಧರಾಮ, ಅರಿವು ಎಂಬುದು ಜ್ಯೋತಿಯ ಹಾಗೆ ಬೆಳಕು ಚೆಲ್ಲುತ್ತದೆ. ನಿನ್ನ ಬೈದಾಗ ನಿನ್ನ ಗುಡ್ಡರು ನನ್ನನ್ನು ಹೊಡೆಯಲು ಬಂದರು. ನನಗೆ ಆಗಲೇ ತಿಳಿಯಿತು ನಿನ್ನ ಶಿವಪಥವು ಕಟ್ಟುವ ಧಾವಂತದಲ್ಲಿ ಅರಿವು ಮತ್ತು ಇರುವನ್ನು ಮೀರಿದ ಜಡತ್ವವನ್ನು ಕಟ್ಟುತ್ತಿದೆ. ಇದು ನಿಜವಲ್ಲವೇ..’

‘ನಿಜ, ಪ್ರಭುದೇವ ಈ ಅರಿವಿನ ಬೆಳಕನ್ನು ಬಿತ್ತುವುದು ಸಾಧ್ಯವೇ.. ಬಹಿರಂಗ ಶುದ್ಧಿಯಿಂದಲ್ಲವೇ ಅರಿವಿನ ಪ್ರವೇಶ..? ಈಗ ಈ ಬಹಿರಂಗದ ನಿಲುವನ್ನು ಗಟ್ಟಿಗೊಳಿಸಿದ್ದೇನೆ. ಬಹುಶಃ ಇನ್ನುಮುಂದೆ ಅರಿವಿನ ಬಗ್ಗೆ ಕೆಲಸ ಮಾಡುತ್ತೇನೆ. ನನ್ನ ಮನಸ್ಸಿನಲ್ಲಿ ಏನೋ ಅರಕಳಿಯಾಗಿದೆ ಎಂದು ಯಾವತ್ತಿನಿಂದಲೂ ಅನಿಸುತ್ತಿತ್ತು. ಆ ಅರಕಳಿಯಾಗಿರುವ ಭಾವವನ್ನು ಇಂದು ನೀವು ನನಗೆ ತೋರಿದ್ದೀರಿ…’

‘ಸಿದ್ಧರಾಮ, ಆ ಬಹಿರಂಗ ಮತ್ತು ಅಂತರಂಗವೆಂಬ ಎರಡೆಳೆಯನ್ನು ನೇಯ್ದು ಕಲ್ಯಾಣವೆಂಬ ನೂಲನ್ನು ಈಗಾಗಲೇ ಒಬ್ಬ ಮಹಾತ್ಮ ತೆಗೆಯುತ್ತಿದ್ದಾನೆ. ಅವನ ಬಗ್ಗೆ ಕೇಳಿದ್ದೆಯಾ..?’

‘ಅಂಥ ಕೆಲಸವು ಈಗಾಗಲೇ ನಡೆದಿದೆಯೇ..?’

‘ನಡೆದಿದೆ. ಅರಿವೆ ಗುರು ಎಂದು ಕೆಲಸ ಆರಂಭಿಸಿದ  ಮಹಾನುಭಾವನೊಬ್ಬ ನಿನ್ನ ಹತ್ತಿರದ ಊರಿನಲ್ಲಿಯೇ ಇದ್ದಾನೆ’

‘ಯಾರು ಪ್ರಭುದೇವ ಆ ಮಹಾತ್ಮ’

‘ಅವನೇ ಬಸವಣ್ಣ’

‘ಬಸವಣ್ಣ..? ಯಾರಾತ..?’

ಪ್ರಭುದೇವರು ಪ್ರಶ್ನಾರ್ಥಕವಾಗಿ ಸಿದ್ಧರಾಮರ ಮುಖ ನೋಡಿದಾಗ ಅವರ ಮುಖದಲ್ಲಿ ಯಾವ ಕೃತಕತೆಯೂ ಇದ್ದಿರಲಿಲ್ಲ. ಕಲ್ಯಾಣಕ್ಕೆ ಇಷ್ಟು ಹತ್ತಿರದಲ್ಲಿ ಸೊನ್ನಲಿಗೆ ಇದ್ದರೂ ಆ ಹೂವಿನ ಪರಿಮಳ ಇವನ ಮೂಗಿಗೆ ತಾಗಲಿಲ್ಲವೇ ಎಂಬ ಪ್ರಶ್ನೆ ಮೂಡಿತು. ಕಲ್ಯಾಣದ ಬಸವರಸರ ಕತೆಯನ್ನು ಸವಿಸ್ತಾರವಾಗಿ ಸಿದ್ಧರಾಮರಿಗೆ ಹೇಳಿದರು.

ಕಲ್ಯಾಣದಲ್ಲಿ ಈಗಾಗಲೇ ಅರಿವಿನ ಬೆಳಕು ಮೂಡಿ ಸಹಸ್ರಾರು ಅಮರಗಣಂಗಳು ಕಾಯಕ ನಿರತರಾಗಿ ಗುರು-ಲಿಂಗ-ಜಂಗಮ-ಪಾದೋದಕ ದಾಸೋಹಾದಿ ಕೆಲಸಕಾರ್ಯಗಳಲ್ಲಿ ತೊಡಗಿರುವುದನ್ನು ಕೇಳಿದಾಗ ಅಂತಹ ಸುಕ್ಷೇತ್ರವನ್ನು ಕಣ್ಣಾರೆ ನಾ ಕಾಣಬೇಕೆಂಬ ಮನಸಾಯಿತು ಸಿದ್ಧರಾಮರಿಗೆ.

‘ಪ್ರಭುವೇ, ನಾನು ನಿಮ್ಮೊಂದಿಗೆ ಕಲ್ಯಾಣಕ್ಕೆ ಬರಲೇ.. ಆ ಬಸವಣ್ಣ ನಾವಿರುವಲ್ಲಿಯೇ, ನಮ್ಮ ಅಂಗದ ಮೇಲೆಯೇ ಕಪಿಲಸಿದ್ಧಮಲ್ಲಿಕಾರ್ಜುನನ್ನ ಕಾಣಿಸುವುದಾದರೆ…. ನಾನು ಆ ಶರಣ ಗಣಂಗಳಲ್ಲಿ ಒಬ್ಬನಾಗಬೇಕು’

ಹೀಗೆ ಸಿದ್ಧರಾಮರು ಪ್ರಭುದೇವರಲ್ಲಿ ಬಿನ್ನೈಸಿಕೊಳ್ಳಲು.. ಗುಹೇಶ್ವರನೊಲಮೆ ಇದ್ದಂತೆ ನಡೆಯಲಿ ಎಂಬುದಾಗಿ ಅಲ್ಲಮರೂ ಸಿದ್ಧರಾಮರ ಮಾತಿಗೆ ಸಮ್ಮತಿಸಿದರು. ಆ ದಿನ ಅಲ್ಲಿಯೇ ಕಳೆದಿದ್ದು, ಮರುದಿನ ಮುಂಜಾನೆಯ ಕೋಳಿಕೂಗಿಗೆ ಅಲ್ಲಮ-ಸಿದ್ಧರಾಮರಿಬ್ಬರೂ ಕಲ್ಯಾಣದತ್ತ ಪ್ರಯಾಣ ಬೆಳೆಸಿದರು ಎಂಬಲ್ಲಿಗೆ ಶಿವಯೋಗಿ ವೃತ್ತಾಂತದ ಮಧ್ಯಭಾಗದ ಕಥನವು ಮುಗಿದುದು.

 

Previous post ಸಕಾರವೋ… ನಕಾರವೋ…
ಸಕಾರವೋ… ನಕಾರವೋ…
Next post ಲಿಂಗಾಂಗ ಸಮರಸವೆಂಬ ಮಹಾಪ್ರಸಾದ
ಲಿಂಗಾಂಗ ಸಮರಸವೆಂಬ ಮಹಾಪ್ರಸಾದ

Related Posts

ಲಿಂಗ ಕೂಡಲ ಸಂಗಮ
Share:
Articles

ಲಿಂಗ ಕೂಡಲ ಸಂಗಮ

April 29, 2018 ಕೆ.ಆರ್ ಮಂಗಳಾ
ವಚನಗಳು ಓದುಗನನ್ನು ಒಂದು ಧ್ಯಾನಸ್ಥ ಸ್ಥಿತಿಗೆ ಕರೆದೊಯ್ಯುತ್ತವೆ. ಆ ಮಟ್ಟವನ್ನು ಮನಸ್ಸು ಮುಟ್ಟದ ಹೊರತು ಅದರ ಒಳಪದರುಗಳು ಬಿಚ್ಚಿಕೊಳ್ಳಲಾರವು. ಇಲ್ಲಿ ಕಾಣಿಸುವ ಭಕ್ತ,...
ಸವೇಜನಾಃ ಸುಖಿನೋ ಭವಂತು
Share:
Articles

ಸವೇಜನಾಃ ಸುಖಿನೋ ಭವಂತು

August 2, 2020 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ನ್ಯಾಯನಿಷ್ಠುರಿ, ದಾಕ್ಷಿಣ್ಯಪರ ನಾನಲ್ಲ. ಲೋಕವಿರೋಧಿ ಶರಣನಾರಿಗಂಜುವನಲ್ಲ. ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ. ಬಸವಣ್ಣನವರ ಈ ವಚನದ ಆಶಯಕ್ಕನುಗುಣವಾಗಿ ತಮ್ಮ ಬದುಕನ್ನು...

Comments 16

  1. ಭದ್ರಪ್ಪ ಚಿಟಗುಪ್ಪಿ
    Aug 4, 2019 Reply

    ಚಿಕ್ಕವನಿದ್ದಾಗ ಶಿವಯೋಗಿ ಸಿದ್ಧರಾಮರ ಪುರಾಣ ಕೇಳಿದ್ದೆ, ಅದು ಮರೆಯಲಾಗದ ನೆನಪು. ನಿಮ್ಮ ಕತೆ ಮತ್ತೊಮ್ಮೆ ಎಲ್ಲವನ್ನೂ ನೆನಪಿಸಿತು.

  2. ಪ್ರವೀಣ್ ಕುಮಾರ್ ಎಸ್ ಎಲ್
    Aug 7, 2019 Reply

    ಅಣ್ಣಾ, ಶಿವಯೋಗಿ ಸಿದ್ಧರಾಮೇಶ್ವರರ ಕತೆಯನ್ನು ರಂಗದ ಮೇಲೆ ತರಬೇಕು. ನೀವು ಅವರ ಪಾತ್ರವನ್ನು ಅಭಿನಯಿಸಬೇಕು. ಕಣ್ಣಿಗೆ ಕಟ್ಟುವಂತೆ ಕತೆ ಬರೆದಿದ್ದೀರಿ.

  3. ರವೀಂದ್ರ ಕಡೂರು
    Aug 7, 2019 Reply

    ಸಿದ್ಧರಾಮೇಶ್ವರರು ವೈದ್ಯರೂ ಆಗಿದ್ದರೆಂಬ ವಿಷಯ ನನಗೆ ಗೊತ್ತಿರಲಿಲ್ಲ. ಅವರು ಕಲ್ಯಾಣದಲ್ಲಿ ಅದೇ ಕಾಯಕ ಮುಂದುವರಿಸಿದರೆ? ವಿವರಣೆಗಳು ಸುತ್ತಣ ಪರಿಸರವನ್ನು ಸೊಗಸಾಗಿ ತೋರಿಸುವಂತೀದೆ. ಕತೆಗಾರ ಮಹಾದೇವ ಶರಣರಿಗೆ ಶರಣಾರ್ಥಿ.

  4. SHARADAdevi Bellary
    Aug 9, 2019 Reply

    ಸಿದ್ಧರಾಮರನ್ನು ಅಲ್ಲಮಪ್ರಭುದೇವರು ಹುಡುಕಿ ಕಲ್ಯಾಣಕ್ಕೆ ಕರೆತರದೇ ಹೋಗಿದ್ದರೆ ಬಸವಾದಿ ಶರಣರ ಬಗ್ಗೆ ಅನೇಕ ವಿಷಯಗಳು ಗೊತಾಗುತ್ತಿರಲಿಲ್ಲ. ಕಥೆ ಸೂಪರ್ .

  5. ಅರವಿಂದ. ಬಿ.ಕೆ
    Aug 10, 2019 Reply

    ಸಿದ್ಧರಾಮೇಶ್ವರರ ಯೋಗಾಂಗ ತ್ರಿವಿಧಗಳನ್ನು ದಿನವೂ ಕೇಳುವ ನನಗೆ ಅವರ ಜೀವನ ಚರಿತ್ರೆ ಬಗ್ಗೆ ತುಂಬಾ ಕುತೂಹಲ ಇತ್ತು. ಬಯಲು ನನ್ನ ಆಸೆ ಈಡೇರಿಸಿದೆ. ಮಹಾದೇವ ಶರಣರು ಉತ್ತಮ ಕತೆಗಾರರು. ನಿರೂಪಣೆಯಲ್ಲಿ ತಾವೂ ತೇಲುತ್ತಾ ನಮ್ಮನ್ನೂ ತೇಲಿಸುತ್ತಾರೆ.

  6. ದೇವು ಧನ್ನೂರು
    Aug 10, 2019 Reply

    ಎಂದಿನಂತೆ ಸೂಪರ್, ನನ್ನ ಪ್ರೀತಿಯ ಕಥಾ ಅಂಕಣ.

  7. sharada A.M
    Aug 13, 2019 Reply

    ಕಲ್ಯಾಣದತ್ತ ಪಯಣ ಬೆಳೆಸಿದ ಅಲ್ಲಮ ಮತ್ತು ಸಿದ್ಧರಾಮರ ಜೊತೆಗೆ ನಾವೂ ಹೊರಟ ಅನುಭವ. ಕಥಾ ನಿರೂಪಣೆ ಬಹಳ ಚೆನ್ನಾಗಿದೆ.

  8. Jahnavi Naik
    Aug 15, 2019 Reply

    ಕದಂಬ ದೊರೆಯನ್ನು ಆರೈಕೆ ಮಾಡಿದ ಸಿದ್ಧರಾಮಯ್ಯನವರಿಗೆ ರಾಜರ ಸಂಪರ್ಕವಿತ್ತು ಎನ್ನುವ ಚಾರಿತ್ರಿಕ ಅಂಶವನ್ನು ಓದಿ ಖುಷಿಯಾಯಿರು. ಕಥೆ wonderful.

  9. Dr. Nandeesh Hiregowdar
    Aug 17, 2019 Reply

    ಸಿದ್ಧರಾಮೇಶ್ವರರು ಕಲ್ಯಾಣಕ್ಕೆ ಹೊರಟಿದ್ದು ಶರಣರ ಇತಿಹಾಸದ ಓದಿಗೆ ಒಂದು ಮಹತ್ವದ ದಾಖಲೆ ಕೊಡಲು ಸಾಧ್ಯವಾಯಿತು. ಅವರ ಬರವಣಿಗೆಯ ಶಕ್ತಿ ಅಗಾಧವಾಗಿತ್ತು. ಕಲ್ಯಾಣ ಪಟ್ಟಣದ ಮತ್ತು ಶರಣರ ಕುರಿತಾದ ಅನೇಕ ದಾಖಲೆಗಳನ್ನು ಅಲ್ಲಿ ಕಾಣಬಹುದು.

  10. ಕಮಲಾ ಹೊನ್ನಾವರ
    Aug 18, 2019 Reply

    ಸಿದ್ಧರಾಮ- ಅಲ್ಲಮರ ನಡುವಿನ ಮಾತಿನ ಚಕಮುಕಿಯನ್ನು ಇನ್ನಷ್ಟು ಬರೆಯಬೇಕಿತ್ತು. ನನಗೆ ಸ್ವಲ್ಪ ನಿರಾಶೆಯಾಯಿತು. ಯೋಗಿ ಸಿದ್ಧರಾಮರನ್ನು ಮಣಿಸಿ, ಕಲ್ಯಾಣಕ್ಕೆ ಕರೆದೊಯ್ಯುವುದು ಸುಲಭವಾಗಿರಲಿಕ್ಕಿಲ್ಲ. ಉಳಿದಂತೆ ಪ್ರತಿಯೊಂದು ಸಣ್ಣಸಣ್ಣ ವಿವರಣೆಗಳು ಕಣ್ಣಿಗೆ ಕಟ್ಟುವಂತಿವೆ. ಕತೆಗಾರರಿಗೆ ವಂದನೆಗಳು.

  11. Kamalesh Jevergi
    Aug 19, 2019 Reply

    ಶರಣರ ಕತೆಗಳನ್ನು ನೀವು ಬರೆಯುವ ಶೈಲಿ ಚೇತೋಹಾರಿಯಾಗಿದೆ. ಶರಣು ಕತೆಗಾರರಿಗೆ.

  12. jeevan koppad
    Aug 20, 2019 Reply

    ಹಾವಿನಾಳ ಕಲ್ಲಯ್ಯ ಮತ್ತು ಸಿದ್ಧರಾಮರು ಬಾಲ್ಯದ ಗೆಳೆಯರೆ? ನನಗೆ ತಿಳಿದಿರಲಿಲ್ಲ. ಇತಿಹಾಸದ ಸಮ್ಮಿಳನದಲ್ಲಿ ಶರಣರ ಕತೆಯನ್ನು ಅತಿ ಸುಂದರವಾಗಿ ಕಟ್ಟುತ್ತಿರುವ ಮಹಾದೇವ ಹಡಪದ ಶರಣರಿಗೂ, ಬಯಲು ಬ್ಲಾಗಿಗೂ ನನ್ನ ನಮಸ್ಕಾರಗಳು.

  13. Kotturappa Bellari
    Aug 21, 2019 Reply

    ಶ್ರೀಗಿರಿಯಲ್ಲಿ ಸಿದ್ಧರಾಮರು ಶಿವನ ಪೂಜಕರಾಗಿದ್ದರೆ? ಅವರ ವಚನಗಳ ಮೇಲೆ ನಾಥ ಪಂಥದ ಪ್ರಭಾವವನ್ನು ಗುರುತಿಸುತ್ತಾರೆ. ಕತೆಗಾರರು ಅವರ ಗುರುಕುಲದ ಹಿನ್ನೆಲೆ ನೀಡಬೇಕಿತ್ತು. ಅವರು ಮದುವೆಯಾಗುವ ಸಂದರ್ಭವೇ ಬರಲಿಲ್ಲವೇ? ಅವರ ಜೀವನದಲ್ಲಿ ಯಾವ ಹೆಣ್ಣಿನ ಬಗೆಗೂ ಮಾಹಿತಿ ಇಲ್ಲ.

  14. ಉಮಾಶಂಕರ್, ಮೈಸೂರು
    Aug 24, 2019 Reply

    ಚೋರ ಚಿಕ್ಕನಿಂದ ಹಿಡಿದು ನೀವು ಬಯಲಿನಲ್ಲಿ ಬರೆದ ಎಲ್ಲ ಕತೆಗಳನ್ನೂ ಓದಿದ್ದೇನೆ. ಚೆನ್ನಾಗಿವೆ ಸರ್. ವಂದನೆಗಳು.

  15. SIDDHALINGAIAH TUMKUR
    Aug 25, 2019 Reply

    ಶಿವಯೋಗಿಗಳ ಮನದಲ್ಲಿನ ಕೊರಗು ಅಲ್ಲಮರ ಕಣ್ಣಿಗೆ ಬಿದ್ದಿರಬೇಕು. ಅದಕ್ಕೆ ಅವರನ್ನು ಕಲ್ಯಾಣಕ್ಕೆ ಕರೆದೊಯ್ದರು. ಸೊನ್ನಲಿಗೆಯಲ್ಲಿದ್ದ ಸಿದ್ದರಾಮರಿಗೆ ತಮ್ಮ ಸಾಮಾಜಿಕ ಸೇವೆಗಳ ಬಗ್ಗೆ ಅಹಂಕಾರವಿತ್ತು. ಸುಲಭವಾಗಿ ಅವರು ಅಲ್ಲಮರೊಂದಿಗೆ ಕಲ್ಯಾಣಕ್ಕೆ ಹೋಗಲು ಸಿದ್ದರಿರಲಿಲ್ಲ. ಅವರ ನಡುವೆ ವಾಗ್ವಾದಗಳು ನಡೆದವು ಎಂದು ಓದಿದ ನೆನಪು. ಅವನ್ನೆಲ್ಲ ಇಲ್ಲಿ ನಿರೀಕ್ಷೆ ಮಾಡಿದ್ದೆ.

  16. Kusuma Shivamogga
    Aug 26, 2019 Reply

    ಮಗಳೊಂದಿಗೆ ಕತೆ ಓದಿದೆ. ಚೆನ್ನಾಗಿದೆ. ಶರಣರ ಕತೆಗಳನ್ನು ಮಕ್ಕಳಿಗೆ ಹೇಳಲು ಸೊಗಸಾಗಿದೆ. ಥ್ಯಾಂಕ್ಸ್.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸಹಜತೆಯೇ ನಿಜನೆಲೆ
ಸಹಜತೆಯೇ ನಿಜನೆಲೆ
February 5, 2020
ನೆಮ್ಮದಿ
ನೆಮ್ಮದಿ
April 6, 2020
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
March 17, 2021
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
April 29, 2018
ಆ ಬಿರುಗಾಳಿ ಹುಟ್ಟಲೊಡನೆ…
ಆ ಬಿರುಗಾಳಿ ಹುಟ್ಟಲೊಡನೆ…
January 8, 2023
ಗಾಳಿ ಬುರುಡೆ
ಗಾಳಿ ಬುರುಡೆ
June 17, 2020
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
March 12, 2022
ನನ್ನ ಬುದ್ಧ ಮಹಾಗುರು
ನನ್ನ ಬುದ್ಧ ಮಹಾಗುರು
January 4, 2020
ಶರಣರು ಕಂಡ ಸಮಸಮಾಜ
ಶರಣರು ಕಂಡ ಸಮಸಮಾಜ
July 4, 2022
ಈ ಕ್ಷಣದ ಸತ್ಯ
ಈ ಕ್ಷಣದ ಸತ್ಯ
March 12, 2022
Copyright © 2023 Bayalu