ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
ಸಂಪಾದನೆ – ಓದಿನ ರಾಜಕಾರಣ:
ಸಂಪಾದನೆ ಪದ ಅನೇಕ ಆಯಾಮಗಳನ್ನು ಹೊಂದಿದೆ. ಎಡಿಟ್ ಎನ್ನುವ ಸಂವಾದಿ ಪದಕ್ಕೆ ಇಷ್ಟು ಆಯಾಮಗಳಿವೆ ಎಂದು ಅನ್ನಿಸುವುದಿಲ್ಲ. ಏಕೆಂದರೆ ಸಂಪಾದನೆ ಎನ್ನುವುದು ಒಂದು ಸಂಪ್ರದಾಯ, ಪರಂಪರೆಯನ್ನು ಸೂಚಿಸುವ ಪದ ಕೂಡ ಹೌದು. ಟೀಕಿನ ಪರಂಪರೆ, ಸಂಪಾದನೆಯ ಪರಂಪರೆ ಕೇವಲ ವ್ಯಾಖ್ಯಾನ ಪರಂಪರೆಯಲ್ಲ. ಅದರಲ್ಲಿಯೂ ವಚನದ ಸಂದರ್ಭದಲ್ಲಿ ಸಂಪಾದನೆ ಪದ ಅನೇಕ ಸಂಗತಿಗಳನ್ನು ಮುಂದಿಡುತ್ತದೆ. ಮೊದಲನೆಯದಾಗಿ ವಚನಗಳು ನೇರವಾಗಿ ವಚನಕಾರರಿಂದಲೇ ಬರೆಯಲ್ಪಟ್ಟಿರಲಿಕ್ಕಿಲ್ಲ. ಅವು ಅನುಭಾವ ಗೋಷ್ಠಿಗಳಲ್ಲಿ ಮಂಡಿತವಾಗುತ್ತಿದ್ದ ತಾತ್ವಿಕತೆ/ದರ್ಶನದ ಒಂದು ಭಾಷಾರೂಪ. ಅವುಗಳನ್ನು ಯಾರು ಯಾವಾಗ ದಾಖಲಿಸಿಕೊಂಡರು? ಅವು ಮೌಖಿಕವಾಗಿ ಉಳಿದು ಬಂದಿದ್ದವೆ? ಎನ್ನುವ ಪ್ರಶ್ನೆಗಳಿಗೆ ಸರಳ ಉತ್ತರಗಳಿಲ್ಲ. ಸಾಮಾನ್ಯವಾಗಿ ಮೌಖಿಕ ಪರಂಪರೆಯಲ್ಲಿ ಉಳಿಯಬೇಕು ಅಂದರೆ ಒಂದೋ ಅವು ಹಾಡಿನ ರೂಪದಲ್ಲಿರಬೇಕು ಅಥವಾ ಕಥನ ರೂಪದಲ್ಲಿರಬೇಕು. ನೇರವಾಗಿ ದರ್ಶನವೆಂದು ಕರೆಯಬಹುದಾದ ವಚನಗಳು ಮೌಖಿಕವಾಗಿ ಉಳಿದಿರಲಾರವು. ಈಗಲೂ ನಮಗೆ ಸಿಗುವ ಹೊಸ ವಚನಗಳು ಸಾಮಾನ್ಯವಾಗಿ ಶರಣರ ಸೂಳ್ನುಡಿಗಳು ಎಂಬ ತಲೆಬರಹದಡಿ ಸಿಗುತ್ತಿವೆ. ಅವುಗಳನ್ನು ವಚನದ ಕಟ್ಟುಗಳಾಗಿ ಸಂಪಾದಿಸಿ ಬರೆದಿಡಲಾಗಿದೆ. ಬರೆದಿಟ್ಟಿರುವವರು ವಚನಕಾರರಂತೂ ಅಲ್ಲ.
ಹಾಗಾದರೆ ಅವುಗಳನ್ನು ಓದಿ ಕೊಟ್ಟವರಾರು? ಓದಿಕೊಡುವುದು ಎಂದರೆ ಸುಮ್ಮನೆ ಸಂಗ್ರಹಿಸಿ ಕೊಡುವುದಲ್ಲ. ಅದನ್ನು ತಮ್ಮ ನಿಲುವಿಗನುಗುಣವಾಗಿ ‘ಸಂಪಾದಿಸಿಕೊಡುವುದು’. ಒಬ್ಬರ ಓದು ಇನ್ನೊಬ್ಬರದಂತಿರುವುದಿಲ್ಲ ಎನ್ನುವುದಾದರೆ ಇದೀಗ ಓದು ಕೇಂದ್ರಕ್ಕೆ ಬರುತ್ತಿದೆ. ಓದಿನ ರಾಜಕಾರಣವನ್ನು ನಾವು ಇದಿರಾಗಿಲ್ಲ. ಓದು ಒಂದು ತಟಸ್ಥಕ್ರಿಯೆ ಎಂದೇ ನಂಬಲಾಗಿದೆ. ಆದರೆ ಅದು ಹಾಗಿಲ್ಲ. ಪಾಂಥಿಕ ಬೇಲಿಯನ್ನು ಹಾಕಿಕೊಂಡವರು ಪಠ್ಯಗಳನ್ನು ತಾವು ಓದಿಕೊಟ್ಟ ರೀತಿಯಲ್ಲಿಯೇ ಓದುವಂತೆ ಒತ್ತಾಯಿಸುತ್ತಾರೆ. ಈ ದೃಷ್ಟಿಯಿಂದ ಶೂನ್ಯ ಸಂಪಾದನೆಗಳು ಎಂದರೆ ವಚನಗಳನ್ನು ಸಂಗ್ರಹಿಸಿ ತಮಗೆ ಬೇಕಾದ ಹಾಗೆ ಓದಿ ಉಳಿಸಿಹೋಗಿದ್ದೂ ಹೌದು, ಅನ್ಯ ಓದುಗಳಿಗೆ ಒಳಗಾಗದಂತೆ ವಚನಗಳನ್ನು ಕಳೆದುಕೊಂಡದ್ದೂ ಹೌದು. ಉಳಿಸಿದ್ದಕ್ಕೆ ಕೃತಜ್ಞತೆ; ಕಳೆದುಕೊಂಡದ್ದಕ್ಕೆ ಸಂಕಟ. ಈ ಓದಿನ ಸಾಂಸ್ಕೃತಿಕ ರಾಜಕಾರಣವನ್ನು ನಾವು ಇನ್ನುಮೇಲಾದರೂ ನಿರ್ವಹಿಸಬೇಕಾಗಿದೆ. ಇದೊಂದು ರೀತಿಯಲ್ಲಿ ಪಠ್ಯಗಳನ್ನು ರೀಕ್ಲೇಮ್ ಮಾಡುವ, ಪ್ರಕ್ರಿಯೆ ಕೂಡ ಹೌದು. ಅದರ ಅರ್ಥವೆಂದರೆ ಈಗ ಪಠ್ಯಗಳು ನಮ್ಮ ಕೈ ಜಾರಿಹೋಗಿವೆ. ಓದಿನ ರಾಜಕಾರಣಕ್ಕೆ ಸಿಲುಕಿ ಕೈಜಾರಿ ಹೋಗಿರುವ ವಚನ, ಜೈನ, ಬೌದ್ಧ, ನಾಥ ಪಂಥದ ಪಠ್ಯಗಳನ್ನು ನಾವೀಗ ಪುನಃ ಹಿಂಪಡೆದುಕೊಳ್ಳಬೇಕಿದೆ. ವಚನ ಚಳವಳಿಯನ್ನು ಹೀಗೆ ಹಿಂಪಡೆಯುವ ಕೆಲವು ಪ್ರಯತ್ನಗಳು ನಮ್ಮ ನಡುವೆ ಆಶ್ಚರ್ಯಕರ ರೀತಿಯಲ್ಲಿ ನಡೆದಿವೆ. ಕೊಡೇಕಲ್ ಪರಂಪರೆ ಮತ್ತು ಮಂಟೇಸ್ವಾಮಿ ಪರಂಪರೆಗಳು ವಚನದೊಳಗೇ ಕಳಕೊಂಡ ತಮ್ಮ ಪಾಲನ್ನು ಪಡೆಯುವ ಪ್ರಯತ್ನಗಳು. ಆದರೆ ಅವುಗಳನ್ನು ಓದಿನ ಸಾಂಸ್ಕೃತಿಕ ರಾಜಕಾರಣದ ಮೂಲಕ ಅಡಗಿಸಲಾಗಿತ್ತು. ಅವುಗಳಲ್ಲಿ ಮಂಟೇಸ್ವಾಮಿ ಬೇರೆ ಬೇರೆ ಕಾರಣಕ್ಕೆ ಮುನ್ನೆಲೆಗೆ ಬಂದರೆ ಕೊಡೇಕಲ್ ಪರಂಪರೆ ಇನ್ನೂ ಅಜ್ಞಾತವಾಸ ಅನುಭವಿಸುತ್ತಲೇ ಇದೆ.
ವಚನಗಳನ್ನು ಯಾರೇ ಸಂಪಾದಿಸಿರಲಿ, ಸಂಪಾದನೆಯ ದೃಷ್ಟಿಕೋನವೊಂದು ಅಲ್ಲಿ ಕೆಲಸ ಮಾಡಿರಲೇಬೇಕು. ವಚನಗಳನ್ನು ಅವಿರುವಂತೆಯೇ ಸಂಪಾದಿಸಿರಲು ಸಾಧ್ಯವೆ? ಏಕೆಂದರೆ ಸಂಪಾದನೆ ಪದವೆ ಕೇವಲ ದಾಖಲಲ್ಲ ನಿರ್ದಿಷ್ಟ ಕ್ರಮದ ದಾಖಲೆ ಎನ್ನುವುದನ್ನು ಸೂಚಿಸುತ್ತದೆ. ಏಕೆಂದರೆ ಓದು ಎನ್ನುವುದು ಒಂದು ಪ್ರಕ್ರಿಯೆ. ಓದಬೇಕಾದ ಪಠ್ಯ, ಓದುಗ ಮತ್ತು ಓದಿನ ಸನ್ನಿವೇಶಕ್ಕೆ ತಕ್ಕ ಹಾಗೆ ಓದಿದ ಪಠ್ಯವೊಂದು ದೊರಕುತ್ತದೆ. ಶೂನ್ಯ ಸಂಪಾದನಾಕಾರರಿಗೆ ಪಾಂಥಿಕ ನಿಷ್ಠೆಯೊಂದು ಅವರ ಸಂಪಾದನೆಯನ್ನು ನಿರ್ದೇಶಿಸುತ್ತಿತ್ತು. ಅವರ ಸಂಪಾದನೆಯನ್ನು ನಿರ್ದೇಶಿಸಿದ ತಾತ್ವಿಕತೆಯ ಸ್ವರೂಪವೇನು ಎನ್ನುವುದರ ಚರ್ಚೆಯೇ ಈ ಲೇಖನದ ಉದ್ದೇಶ.
ವಚನಗಳನ್ನು ಏಕೆ ಓದುತ್ತಿದ್ದೇವೆ ಮತ್ತು ಹೇಗೆ ಓದುತ್ತಿದ್ದೇವೆ?
ವಚನಗಳನ್ನು, ವಚನ ಚಳವಳಿಯನ್ನು ಓದುವ ಪರಿಭಾವಿಸುವ ಅನೇಕ ಮಾದರಿಗಳು ನಮ್ಮ ನಡುವೆ ಇವೆ. ವಚನಗಳನ್ನು ಓದಿ ವ್ಯಾಖ್ಯಾನಿಸುವ ಒಂದು ದೀರ್ಘವಾದ ಸಂಪ್ರದಾಯವೇ ಇದೆ. ಈ ಹೊತ್ತಿನ ಸಾಂಸ್ಕೃತಿಕ ಸಾಮಾಜಿಕ ಮತ್ತು ತಾತ್ವಿಕ ತುರ್ತುಗಳಿಗೆ, ದಂದುಗಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಓದಬೇಡಿ ಅಂದಿನ ಸಂದರ್ಭದಲ್ಲಿಯೇ ಇಟ್ಟು ಓದಿ ಎನ್ನುವ ಒತ್ತಾಯಗಳೂ ಇವೆ. ಆದರೆ ನನಗೆ ವಚನ ಮತ್ತು ವಚನ ಚಳವಳಿ ಒಂದು ಸಾಂಸ್ಕೃತಿಕ ವಸಾಹತುಶಾಹಿಯ ವಿರುದ್ಧ ನಡೆದ ಸ್ವಾತಂತ್ರ್ಯ ಚಳವಳಿಯಂತೆ ಕೂಡ ಕಾಣಿಸುತ್ತದೆ. ಏಕೆಂದರೆ ಅದೇ ಸಾಂಸ್ಕೃತಿಕ ವಸಾಹತುಶಾಹಿಯ ಅಡಿಯಲ್ಲಿ ಇಂದಿಗೂ ಈ ನೆಲ ನಲುಗುತ್ತಲೇ ಇರುವುದರಿಂದ ವಚನಗಳು ಮತ್ತು ಆ ಚಳವಳಿ ಈ ಹೊತ್ತಿನ ಅಗತ್ಯವಾಗಿಯೂ ನಮ್ಮ ಕಣ್ಣೆದುರಿಗೆ ಇದೆ.
ನಾಲ್ಕು ಶೂನ್ಯ ಸಂಪಾದನೆಗಳು: ಅವುಗಳ ಸ್ವರೂಪ:
ನಮ್ಮ ನಡುವೆ ನಾಲ್ಕು ಶೂನ್ಯ ಸಂಪಾದನೆಗಳಿವೆ.
1. ಶಿವಗಣಪ್ರಸಾದಿ ಮಹದೇವಯ್ಯನ ಪ್ರಭುದೇವರ ಶೂನ್ಯಸಂಪಾದನೆ
2. ಹಲಗೆಯಾರ್ಯನ ಶೂನ್ಯ ಸಂಪಾದನೆ
3. ಗುಮ್ಮಳಾಪುರದ ಸಿದ್ಧಲಿಂಗ ಯತಿಯ ಶೂನ್ಯ ಸಂಪಾದನೆ
4. ಗೂಳೂರು ಸಿದ್ಧವೀರಣ್ಣೊಡೆಯನ ಶೂನ್ಯ ಸಂಪಾದನೆ.
ವಚನಗಳನ್ನು ಕೇವಲ ಗ್ರಾಂಥಿಕ ಎಂದಾಗಲೀ ಮೌಖಿಕ ಎಂದಾಗಲೀ ವರ್ಗೀಕರಣ ಮಾಡಿ ನೋಡಲಾಗದು. ಕನ್ನಡ ಸಾಹಿತ್ಯದಲ್ಲಿ ಇವೆರಡರ ಹೊರತಾಗಿ ಮತ್ತೊಂದು ವರ್ಗೀಕರಣವಿದೆ. ಅದನ್ನು ಸಾಧಕ ಪಠ್ಯ ಎಂದು ಬೇಕಾದರೆ ಕರೆಯಬಹುದು. ತತ್ವಪದಗಳೂ ಅಂತಹ ಸಾಧಕ ಪಠ್ಯಗಳು. ಇವು ನಿರ್ದಿಷ್ಟವಾದ ಅನುಭಾವೀ ಸಾಧನಾ ಮಾರ್ಗದ ಉಪ ಉತ್ಪಾದನೆಗಳು. ಇವು ಮೌಖಿಕವಾಗಿಯೂ ಇರಬಹುದು, ಗ್ರಾಂಥಿಕ ರೂಪದಲ್ಲಿಯೂ ಇರಬಹುದು. ಅವುಗಳ ಪ್ರಮುಖ ಲಕ್ಷಣವೆಂದರೆ ಅವು ಆಚರಣಾರೂಪದಲ್ಲಿರಬೇಕು. ಇಂತಹ ಆಚರಣಾರೂಪದ ವಚನಗಳನ್ನು ಸಂಗ್ರಹಿಸುವ ಮತ್ತು ಅದನ್ನು ಬದುಕಿನ ಕ್ರಮವನ್ನಾಗಿಸುವ ಚಟುವಟಿಕೆಗಳೂ ವಚನಯುಗದಲ್ಲಿ ಮತ್ತು ವಚನೋತ್ತರ ಯುಗದಲ್ಲಿ ನಡೆದವು. ಹೀಗೆ ವಚನಗಳನ್ನು ಸಂಪಾದಿಸಿ ಸಮೂಹಕ್ಕೆ ನೀಡಲೆಂದೇ ಅನೇಕ ಮಠಗಳು ಇದ್ದವು. ಇವುಗಳನ್ನು ಸಂಪಾದನೆಯ ಮಠಗಳು ಎಂದು ಗುರುತಿಸುತ್ತಿದ್ದರು. ಹದಿನಾಲ್ಕನೆಯ ಶತಮಾನದ ಕೊನೆಯ ಭಾಗದಲ್ಲಿ ಆರಂಭಗೊಂಡ ಸಂಪಾದನಾಯುಗ ಹದಿನಾರನೆಯ ಶತಮಾನದವರೆಗೆ ಮುಂದುವರಿಯಿತು. ಈಗಲೂ ಹೊಸ ಹೊಸದಾಗಿ ವಚನಗಳು ಇಂತಹ ಮಠಗಳಲ್ಲಿ ವಚನ ಕಟ್ಟುಗಳ ರೂಪದಲ್ಲಿ ದೊರಕುತ್ತಿವೆ ಎನ್ನುವುದು ಅವುಗಳ ಸಂಪಾದನೆಯಿನ್ನೂ ಮುಗಿದಿಲ್ಲ ಎನ್ನುವುದನ್ನು ಸೂಚಿಸುತ್ತದೆ.
ಶೂನ್ಯ ಸಂಪಾದನಾಕಾರರು ವಚನಗಳನ್ನು ಒಂದು ಕ್ರಮವಿಡಿದು ಸಂಪಾದಿಸಿಕೊಟ್ಟಿದ್ದಾರೆ. ಅಲ್ಲಮಪ್ರಭುವನ್ನು ಕೆಂದ್ರದಲ್ಲಿಟ್ಟು, ಅವನೊಡನೆ ಎಲ್ಲ ವಚನಕಾರರು ನಡೆಸಿದ ಸಂವಾದದ ರೂಪದಲ್ಲಿ ವಚನಗಳನ್ನು ಜೋಡಿಸಿದ್ದಾರೆ. ಹಾಗಾಗಿ ವಚನಗಳು ಸಂದರ್ಭಬಂಧಿಯೇ ಹೊರತು ಸಂದರ್ಭಮುಕ್ತವಲ್ಲ. ಈ ಕ್ರಮ ಶ್ರಮಣಧಾರೆಗಳು ತಮ್ಮ ತಾತ್ವಿಕತೆಯನ್ನು ಮುಂದಿಡುವ ಕ್ರಮವೂ ಹೌದು. ವಾರ್ತಿಕವೆಂದು ಕರೆಯುವ ಈ ಮಾದರಿಯಲ್ಲಿಯೇ ಬುದ್ಧನೂ ತನ್ನ ತಾತ್ವಿಕತೆಯನ್ನು ನೀಡಿದ್ದಾನೆ. ಎಲ್ಲವೂ ಪ್ರಶ್ನೋತ್ತರ ರೂಪದಲ್ಲಿ ದಾಖಲಾಗಿದೆ.
ಶಿವಗಣಪ್ರಸಾದಿಯ ಪ್ರಭುದೇವರ ಶೂನ್ಯ ಸಂಪಾದನೆ
ಇದರ ಆರಂಭ ಹೀಗಿದೆ: (ಸ್ವಲ್ಪ ದೀರ್ಘವಾದರೂ ಸಹಿಸಿಕೊಳ್ಳಿ)
‘ಶ್ರೀಮತ್ಪರಮತತ್ವ, ಪರಮಾನಂದ, ಪರಂಜ್ಯೋತಿ, ಪರಮೇಶ್ವರ, ಅಗಮ್ಯ, ಅಗೋಚರ, ಅಪ್ರಮೇಯ, ಅನಾಮಯ, ಅನುಪಮ, ಅಪ್ರತಕ್ರ್ಯ, ಮಹಾಜ್ಞಾನ ಪ್ರಭಾಮಯ, ಯಮ-ನಿಯಮಾಸನ-ಪ್ರತ್ಯಾಹಾರ-ಧ್ಯಾನ-ಧಾರಣ-ಸಮಾಧೃಷ್ಟಾಂಗಯೋಗೀಶ್ವರ, ದೇಹೇಂದ್ರಿಯ ಮನಃಪ್ರಾಣಾಹಂಕಾರಾದಿ ಗುಣಧರ್ಮಕರ್ಮ ನಿರ್ಲೇಪನ, ಸಕಲಭುವನ ಭವನಾಂತರಂಗ, ನಿತ್ಯ ನಿರ್ಮಲ ಸ್ವರೂಪ, ಶಿವಶರಣ ಹೃತ್ಕಮಲ ಕರ್ನಿಕಾವಾಸ ಮತ್ತ ಮಧುಕರಾಯಮಾನ ಇಷ್ಟಲಿಂಗ ಪ್ರಾಣಲಿಂಗ ತೃಪ್ತಿಲಿಂಗಾಲಿಂಗಿತಾಂಗಲೇಪ, ಗುರುಲಿಂಗ-ಜಂಗಮ ಪ್ರಸಾದ ಪಾದೋದಕಾದಿ ಪಂಚಾಚಾರ ಪ್ರತಿಷ್ಠಾಪನಾಚಾರ್ಯ, ಭಕ್ತ-ಮಾಹೇಶ್ವರ-ಪ್ರಸಾದಿ-ಪ್ರಾಣಲಿಂಗಿ ಶರಣೈಕ್ಯಾದಿ ಷಟ್ಸ್ಥಲ ಚಕ್ರವರ್ತಿ, ಬಸವ-ಚೆನ್ನಬಸವರಾಜ ಪ್ರಾಣನಾಯಕ, ಶ್ರೀ ವೀರ ಶಿವಾಚಾರ ಶಿರೋರತ್ನ, ಶ್ರೀ ವೀರ ಶಿವಾಚಾರ ಪ್ರಥಮನಾಯಕ, ಶ್ರೀ ವೀರಶಿವಾಚಾರ ಶಿವಾಚಾರ್ಯ, ಮತ್ರ್ಯಲೋಕಪಾವನ ಕಾರಣಾವತಾರ, ಅನಿಮಿಷ ಶ್ರೀ ಚರಣಾಂಭೋಜಾತ ಕರ್ಣಿಕಾವಾಸ, ಗುಹೇಶ್ವರ ನಾಮಾಮೃತ ಸ್ವೀಕಾರ ಸಂತುಷ್ಟ, ಶ್ರೀಮತ್ಸಕಲ ಜಗದಾಚಾರ್ಯರುಮಪ್ಪ ಅಲ್ಲಮಪ್ರಭುದೇವರು: ಬಸವರಾಜ ದೇವರು ಚೆನ್ನಬಸವರಾಜದೇವರು ಮುಖ್ಯವಾದ ಅಸಂಖ್ಯಾತ ಮಹಾಗಣಂಗಳೊಡನೆ ಮಹಾನುಭಾವ ಪ್ರಸಂಗಮಂ ಮಾಡಿದ ಸರ್ವಕರಣ ಶೂನ್ಯ ಸಂಪಾದನೆಯ ಸದ್ಗೋಷ್ಟಿ ಕಥಾಪ್ರಸಂಗವು’
ಇದರಲ್ಲಿ ಯಾವುವು ಅಲ್ಲಮನನ್ನು ಸ್ತುತಿಸಲು ಮಾಡಿದ ಗುಣವಿಶೇಷಗಳು, ಮತ್ಯಾವುವು ವೀರಶೈವವನ್ನು ಸ್ಥಾಪಿಸಲು ಮಾಡಿದ ಗುಣವಿಶೇಷಗಳು ಎನ್ನುವುದನ್ನು ಗಮನಿಸದೆ ಮುಂದೆ ಹೋಗಲಾಗದು. ಗುರುಲಿಂಗ ಜಂಗಮ ಪ್ರಸಾದ ಪಾದೋದಕಾದಿ ಪಂಚಾಚಾರ ಪ್ರತಿಷ್ಠಾಪನಾಚಾರ್ಯ, ಷಟ್ಸ್ಥಲ ಚಕ್ರವರ್ತಿ, ಶ್ರೀ ವೀರಶೈವ ಶಿರೋರತ್ನ, ಶ್ರೀ ವೀರಶೈವ ಪ್ರಥಮನಾಯಕ, ಶ್ರೀ ವೀರಶೈವ ಶಿವಾಚಾರ್ಯ – ಇವೆಲ್ಲ ಅಲ್ಲಮನಿಗೆ ಒಪ್ಪುವ ವಿಶೇಷಣಗಳೇ?
ಶೂನ್ಯ ಸಂಪಾದನೆಯ ಉದ್ದೇಶವನ್ನು ಮಹಾದೇವಯ್ಯ ಆರಂಭದಲ್ಲಿಯೇ ಸ್ಪಷ್ಟಪಡಿಸುತ್ತಾನೆ. ಶ್ರೀಮತ್ಪರಮತತ್ವ, ಪರಮಾನಂದ ಪರಂಜ್ಯೋತಿ ಮುಂತಾಗಿ ಸುಮಾರು 46 ಗುಣವಾಚಕಗಳ ಮೂಲಕ ಅಲ್ಲಮಪ್ರಭುವನ್ನು ಸ್ತುತಿಸಿ ಅವನು ಬಸವ ಚೆನ್ನಬಸವಾದಿಗಳ ಜೊತೆಗೆ ಮಾಡಿದ ಸದ್ಗೋಷ್ಠಿ ಕಥಾಪ್ರಸಂಗವನ್ನು ಉತ್ತರ-ಪ್ರತ್ಯುತ್ತರ ಸಂಬಂಧವಾಗಿ ಸೇರಿಸಿ ಸಮರ್ಪಿಸಿದ ಶೂನ್ಯಸಂಪಾದನೆ ಎನ್ನುತ್ತಾನೆ. ವಿಶೇಷವೆಂದರೆ ಅಲ್ಲಮನನ್ನು ವೀರಶೈವ ಧರ್ಮದ ಸಂಸ್ಥಾಪಕನೋ ಎನ್ನುವಂತೆ ಸ್ತುತಿಸುತ್ತಾನೆ. ಆದರೆ ಅಲ್ಲಮನ ವಚನಗಳು ಅವನನ್ನು ವೀರಶೈವ ಆವರಣಕ್ಕೆ ಇಡಲು ಒಪ್ಪಿಗೆ ನೀಡಿದಂತಿಲ್ಲ. ಇನ್ನು ಶಿವಗಣಪ್ರಸಾದಿಯ ಪಾಲಿಗೆ ಅಲ್ಲಮನೇ ಸರ್ವಸ್ವ. ಆದರೆ ಈ ಕೃತಿಯನ್ನು ಸಂಪಾದಿಸಿ ಪ್ರಕಟಿಸಿದ ಎಲ್ ಬಸವರಾಜು ಅವರಿಗೆ ಬಸವಣ್ಣ ಮತ್ತು ಅಲ್ಲಮರಿಬ್ಬರೂ ಸರ್ವಸ್ವವೆನ್ನಿಸಿದೆ. ಇದು ಒಂದು ರೀತಿಯಲ್ಲಿ ಸರಿಯೂ ಇರಬಹುದು. ಆದರೆ ಬಸವಣ್ಣನನ್ನು ಕೇಂದ್ರದಲ್ಲಿಟ್ಟು ನೋಡುವ ಹಟವನ್ನು ಗಮನಿಸದಿರಲು ಸಾಧ್ಯವಿಲ್ಲ.
ಇದೀಗ ಶೂನ್ಯ ಸಂಪಾದನೆಯ ಸಂಪಾದನಾ ಸಾಂಸ್ಕೃತಿಕ ರಾಜಕಾರಣ. ವಚನಗಳನ್ನು ಸಂಪಾದಿಸಿ ಉಳಿಸಿಕೊಟ್ಟಿದ್ದಕ್ಕೆ ಮೊದಲಿಗೆ ಸಂಪದನಾಕಾರರಿಗೆ ಲೋಕ ಋಣಿಯಾಗಿದೆ. ಮಹಾದೇವಯ್ಯನ ನಂತರ ಬಂದ ಸಂಪಾದನೆಗಳಲ್ಲಿ ಆದ ಸೇರ್ಪಡೆ ಬೇರ್ಪಡೆಗಳು ಸಂಪಾದನಾಕಾರರ ಸಾಂಸ್ಕೃತಿಕ ರಾಜಕಾರಣವನ್ನು ಸ್ಪಷ್ಟಗೊಳಿಸುತ್ತವೆ. ಮೊದಲನೆಯ ಶಿವಗಣಪ್ರಸಾದಿಯ ಸಂಪಾದನೆಯಲ್ಲಿ ಇಲ್ಲದ ಯಾವ ಯಾವ ಸಂಗತಿಗಳು ಮುಂದಿನ ಸಂಪಾದನೆಗೆ ಕಾರಣಗಳಾಗಿವೆ ಎಂಬುದು ಆಯಾ ಸಂಪಾದನೆಯ ಪೀಠಿಕಾ ಪ್ರಕರಣದಲ್ಲಿ ಉಕ್ತಗೊಂಡಿವೆ.
ಎರಡನೆಯದಾದ ಹಲಗೆಯಾರ್ಯನ ಸಂಪಾದನೆಗೆ ಮುಖ್ಯ ಕಾರಣ ಸಿದ್ಧರಾಮನಿಗೆ ಲಿಂಗದೀಕ್ಷೆ ಆಗಿರಲಿಲ್ಲ ಎನ್ನುವ ನಿಲುವು. ಇದು ಶೂನ್ಯಸಂಪಾದನೆಯನ್ನು ವೀರಶೈವ ಧರ್ಮದ ಕೈಪಿಡಿ ಮಾಡಲು ಹೊರಟ ಹಲಗೆಯಾರ್ಯನಿಗೆ ದೊಡ್ಡ ಕೊರತೆಯಾಗಿ ಕಾಣಬಂದಿತು. ಹಾಗಾಗಿ ಮೊದಲು ತನ್ನ ಸಂಪಾದನೆಯಲ್ಲಿ ಸಿದ್ಧರಾಮನಿಗೆ ಲಿಂಗದೀಕ್ಷೆ ಆಗಿತ್ತು ಎನ್ನುವುದನ್ನು ನಿರೂಪಿಸಿ ನಂತರ ಅದೊಂದೇ ಆದರೆ ಸಾಲದು ಎಂದೆನಿಸಿಯೋ ಏನೋ ನುಲಿಯ ಚಂದಯ್ಯನ ಪ್ರಸಂಗವೊಂದನ್ನು ಸೇರಿಸಿದ್ದಾನೆ. ಇನ್ನು ನಂತರದ ಶೂನ್ಯ ಸಂಪಾದನೆಗಳು ಅಲ್ಲಮ ಮಾಯೆಗೆ ಸೋಲಲೇ ಇಲ್ಲ, ಕಾಮಲತೆಯೊಡನೆ ಒಂದಾಗಲಿಲ್ಲ ಎಂಬ ಬದಲಾವಣೆಗಳನ್ನು ಮಾಡಿದ್ದಲ್ಲದೆ ಅಜಗಣ್ಣ, ಸಿದ್ಧರಾಮ, ಬಸವಣ್ಣ, ಚೆನ್ನಬಸವಣ್ಣ, ನುಲಿಯ ಚಂದಯ್ಯ, ಘಟ್ಟಿವಾಳಯ್ಯ ಮುಂತಾದವರ ಬಗೆಗಿನ ಪ್ರಸಂಗಗಳನ್ನು ಸೇರ್ಪಡೆ ಮಾಡಿದವು. ಈ ಸೇರ್ಪಡೆ ಬೇರ್ಪಡೆಗಳಿಗಿಂತ ಕೂಟ ವಚನಗಳ ಉದ್ಯೋಗವೇ ಇಲ್ಲಿ ಆರಂಭವಾದಂತಿದೆ. ಇದ್ದ ವಚನಗಳನ್ನು ತಿರುಚುವ ಜೊತೆಗೆ ಹೊಸ ಕೂಟ ವಚನಗಳ ಸೇರ್ಪಡೆಯೂ ನಡೆಯಲು ಆರಂಭವಾದದ್ದು ಇಲ್ಲಿಯೇ ಎನ್ನಲಡ್ಡಿಯಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಶೂನ್ಯ ಸಂಪಾದನೆಯನ್ನು ವೀರಶೈವರ ಕೈಪಿಡಿಯನ್ನಾಗಿಸಿದವರು ಈ ಕೊನೆಯ ಸಂಪಾದನಾಕಾರರು. ಶಿವಗಣಪ್ರಸಾದಿಯ ನಿಲುವೂ ಬಹುಪಾಲು ಇದಕ್ಕೆ ಪೂರಕವಾಗಿತ್ತು ಎನ್ನಲಡ್ಡಿಯಿಲ್ಲ.
ಎರಡು ಸಂಗತಿಗಳು ನಂತರದವರನ್ನು ತುಂಬಾ ಕಾಡಿವೆ. ಮೊದಲನೆಯದು ಸಿದ್ಧರಾಮನಿಗೆ ಲಿಂಗದೀಕ್ಷೆ ಆಗಿರಲಿಲ್ಲ ಎನ್ನುವುದು, ಎರಡನೆಯದು ಮಾಯಾ ಕೋಲಾಹಲನಾದ ಅಲ್ಲಮನು ಮಾಯೆಗೆ ಸೋತನೆಂಬುದು. ಇವೆರಡೂ ವೀರಶೈವ ಪಾಂಥಿಕರಿಗೆ ಸಹಿಸಲಸಾಧ್ಯವಾದ ಸಂಗತಿಗಳಾಗಿವೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಪ್ರೊ. ಎಲ್. ಬಿ. ಯವರೇ ನೊಂದು ನುಡಿಯುವಂತೆ ‘ಶಿವಗಣಪ್ರಸಾದಿಯ ಶೂನ್ಯ ಸಂಪಾದನೆಯನ್ನು ಅವನ ಪ್ರಾರ್ಥನೆಯ ಮೇರೆಗೇ ಆದರೂ ಅವನ ಇಂಗಿತವನ್ನು ಅರಿಯದೆ, ತಮ್ಮ ಮತೀಯತೆಯನ್ನೇ ಮುಂದುಮಾಡಿ ಪರಿಷ್ಕರಿಸುವಲ್ಲಿ, ಮೂಲಕೃತಿಯ ಮತ್ತು ಅದರ ಕರ್ತೃವಿನ ಬಂಧಕ್ಕೆ ಮತ್ತು ಒಪ್ಪಂದಕ್ಕೆ ಅಪಚಾರ ಮಾಡಿರುವವರು– ಆಮೇಲೆ ಬಂದ ಮೂವರು ಸಂಪಾದನಾಕಾರರು. ಎಲ್ಲಕ್ಕಿಂತ ಹೆಚ್ಚು ಶೋಚನೀಯ ವಿಚಾರವೆಂದರೆ ಇಡಿಯಾಗಿ ಶೂನ್ಯ ಸಂಪಾದನಾಕಾರರು ವಚನಗಳ ಪಾಠದ ಪಾವಿತ್ರ್ಯವನ್ನು ಕಾಪಾಡಿಕೊಂಡು ಬರಲಿಲ್ಲ. ವಚನಗಳನ್ನು ಸಂಭಾಷಣೆಗೆ ಹೊಂದಿಸುವಲ್ಲಿ ಅಲ್ಪಾಂಶದಲ್ಲಿ ಇದು ಅನಿವಾರ್ಯವೆಂದು ಒಪ್ಪಬಹುದಾದರೂ ಶರಣರ ವಚನಗಳನ್ನು ಸ್ವೇಚ್ಛೆಯಾಗಿ ತಿರುಚುವುದೊಂದು ಪಾಪಕಾರ್ಯ. ಈ ಮಾತು ಶಿವಗಣಪ್ರಸಾದಿಗೆ ಅಷ್ಟಾಗಿ ಅನ್ವಯಿಸದಿದ್ದರೂ ಹಲಗೆಯಾರ್ಯನಿಗೆ ಏನೇನು ಸಾಲದು’ ಎನ್ನುತ್ತಾರೆ.
ಶೂನ್ಯ ಸಂಪಾದನೆಗಳಿಗೆ ಪ್ರತಿರೋಧ
ಶೂನ್ಯ ಸಂಪಾದನೆಗಳ ಈ ತಿರುಚುವಿಕೆ, ಪಾಂಥಿಕತೆ, ಮತ್ತು ಕೈಪಿಡಿಯನ್ನಾಗಿಸುವ ಉದ್ಯೋಗಕ್ಕೆ ಪ್ರತಿಕ್ರಿಯೆ, ಪ್ರತಿಭಟನೆಗಳು ಇರಲಿಲ್ಲವೆ? ಇದಕ್ಕೆ ಅನೇಕ ಉತ್ತರಗಳಿವೆ. ಗುರುಮಾರ್ಗವಾದ ವಚನ ಚಳವಳಿಯನ್ನು ದೈವಮಾರ್ಗಿಯನ್ನಾಗಿಸಿದ್ದು ಶೂನ್ಯ ಸಂಪಾದನಾಕಾರರು. ಈ ಸಂಪಾದನೆಯ ಉದ್ಯೋಗಕ್ಕೆ ತಕ್ಷಣದ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಕೊಡೇಕಲ್ ಸಂಪ್ರದಾಯದಲ್ಲಿ ಮತ್ತು ನಂತರದ ಮಂಟೇಸ್ವಾಮಿ ಸಂಪ್ರದಾಯದಲ್ಲಿ. ಗಮನಿಸಿ ಶೂನ್ಯ ಸಂಪಾದನೆಯಲ್ಲಿ ಕೈಲಾಸದ ನಿರ್ಮಾಯನೆಂಬ ಗಣೇಶ್ವರನು ಶಿವ ಪಾರ್ವತಿಯರಿಂದ ನಿಯೋಜಿತನಾಗಿ ಅಲ್ಲಮನಾಗಿ ಜನ್ಮ ತಾಳಿದರೆ, ಮಂಟೇಸ್ವಾಮಿ ಪರಂಪರೆಯಲ್ಲಿ ಪರಂಜ್ಯೋತಿ ಸ್ವರೂಪನಾದ ಮಂಟೇದಲ್ಲಮನು ಬೆಳಕಿನ ಹುಳುವಿನ ರೂಪದಲ್ಲಿ ಲೋಕದಲ್ಲಿ ಅವತರಿಸಿ ಮೂರು ಲೋಕಗಳನ್ನು ತಾನೇ ಸೃಷ್ಟಿಮಾಡಿ ಅವುಗಳನ್ನು ನಿರ್ವಹಿಸಲು ತಾನೇ ತ್ರಿಮೂರ್ತಿಗಳನ್ನು ಸೃಷ್ಟಿ ಮಾಡುತ್ತಾನೆ. ಅವರಿಗೆ ಲೋಕ ನಿರ್ವಹಣೆಯ ಜವಾಬ್ದಾರಿ ವಹಿಸಿ ತಾನು ಧರೆಗೆ ದೊಡ್ಡವನಾಗುತ್ತಾನೆ. ಅವನಿಗೆ ಯಾವ ದೈವದ ಮತ್ಯಾವ ಅತಿರಿಕ್ತ ಶಕ್ತಿಯ ಹಂಗಿಲ್ಲದಂತೆ ಮಾಡಿಕೊಳ್ಳುತ್ತಾನೆ. ಇನ್ನು ಕಲ್ಯಾಣದ ಬಾಗಿಲಿನಲ್ಲಿ ನಡೆದದ್ದನ್ನು ಶೂನ್ಯ ಸಂಪಾದನೆಗಳು ತುಂಬಾ ಎಚ್ಚರದಿಂದ ಅದನ್ನು ತಗ್ಗಿದ ದನಿಯಲ್ಲಿ ದಾಖಲಿಸಿದರೆ, ಮಂಟೇಸ್ವಾಮಿ ಕಾವ್ಯವು ತನ್ನ ಕೇಂದ್ರ ಘಟನೆಯನ್ನಾಗಿ ದಾಖಲಿಸುತ್ತದೆ. ಹೊರಗೆ ನಿಂತವರನ್ನೆಲ್ಲ ಕರೆದು ಮಾತನಾಡಿಸಿದ್ದು ನಿಜವಾಗಿ ವಚನ ಚಳವಳಿಯ ಘನತೆಯ ಪ್ರತೀಕ. ಆದರೆ ಶೂನ್ಯ ಸಂಪಾದನೆಗಳು ಅಲ್ಲಮನನ್ನೂ ಕಲ್ಯಾಣದ ಹೊರಗೆ ನಿಲ್ಲಿಸುತ್ತವೆ. ಶೂನ್ಯ ಸಿಂಹಾಸನದ ಆಧ್ಯಕ್ಷನಾದರೂ ಇಲ್ಲೂ ಒಳಗಿನವರು ಹೊರಗಿನವರೆಂಬ ವಿಭಜನೆ ಇರಲಿಲ್ಲವೆ? ಎನ್ನುವ ಪ್ರಶ್ನೆಗೆ ಅನೇಕ ಉತ್ತರಗಳಿವೆ. ಶೂನ್ಯ ಸಂಪಾದನೆಯಲ್ಲಿಯೂ ಕಲ್ಯಾಣದ ಬಾಗಿಲಲ್ಲಿ ಪ್ರಭು ಕಾಯಬೇಕಾಗುತ್ತದೆ. ಅಲ್ಲಮಪ್ರಭುಗಳು ಬಂದಿರುವ ಸಂಗತಿ ಗೊತ್ತಾದರೂ ಬಸವಣ್ಣ ತಾನೇ ಬಂದು ಸ್ವಾಗತಿಸುವುದೂ ಇಲ್ಲ, ಗೌರವಿಸುವುದೂ ಇಲ್ಲ. ಬದಲಿಗೆ ಸೇವಕರನ್ನು ಕಳಿಸಿ ಕರೆದುಕೊಂಡು ಬನ್ನಿ ಎನ್ನುತ್ತಾನೆ. ತಾನೇ ಬರದೆ ಸೇವಕರನ್ನು ಕಳಿಸಿದ್ದಕ್ಕೆ ಅಲ್ಲಮ ತಿರಸ್ಕರಿಸಿ ಕಳಿಸಿದರೆ ಬಸವಣ್ಣ ಅವನ ಶಿರಹರಿದು ತನ್ನಿ ಎಂದು ಮತ್ತೆ ಸೇವಕರನ್ನು ಕಳಿಸಲು, ಅವರು ಹೊಯ್ದ ಶಸ್ತ್ರ ಅಲ್ಲಮನನ್ನು ಭೇದಿಸುವ ಬದಲು ಗಾಳಿಯಲ್ಲಿ ಹೊಯ್ದಂತೆ ಆಗುತ್ತದೆ. ನಂತರ ಮತ್ತೂ ಅವನನ್ನು ಭಾವಶಸ್ತ್ರದಿಂದ ಬಂಧಿಸಿ ಕರೆತರಲು ಕಳಿಸಲು ಭಾವರಹಿತನಾದ ಅಲ್ಲಮನನ್ನು ಕರೆತರಲು ಆಗಲೂ ಸಾಧ್ಯವಾಗದಿರಲು ಚೆನ್ನಬಸವಣ್ಣ, ಸಿದ್ಧರಾಮಾದಿಗಳು ಬಸವಣ್ಣನನ್ನು ತಾನೇ ಬರುವಂತೆ ಓಲೈಸಿದಾಗ ಸ್ವತಃ ಬಸವಣ್ಣ ಬರುತ್ತಾನೆ. ಇಷ್ಟು ಹೊತ್ತಿಗೆ ಅಪಮಾನದಿಂದ ನೊಂದಿದ್ದ ಅಲ್ಲಮ ಒಳಬರಲು ಒಪ್ಪದಿದ್ದಾಗ ಕಾಲಿಗೆ ಬಿದ್ದು ಕರೆಯುತ್ತಾನೆ. ನಂತರ ಅಲ್ಲಮ ಒಳಹೋಗುತ್ತಾನೆ. ಬಸವಣ್ಣ ಬರುವವರೆಗಿನ ದೀರ್ಘ ಕಾಲದ ಕಾಯುವಿಕೆಗೆ ಸಂಪಾದನೆಗಳಲ್ಲಿ ಸಮರ್ಥನೆಗಳಿಲ್ಲ. ಕೆಳಸ್ತರದ ವಚನಕಾರರು ಹೀಗೆ ಕಾದು ಕಾದು ನೊಂದು ಅಪಮಾನಕ್ಕೆ ಅಲ್ಲಿಯೂ ಒಳಗಾಗಿ ನಂತರ ಪ್ರವೇಶ ಪಡೆದಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರು ಪ್ರತಿಪಾದಿಸಿದ ತಾತ್ವಿಕ ನಿಲುವುಗಳಿಗೂ ಮಾನ್ಯತೆ ದೊರಕಿತೆ? ಎನ್ನುವುದು ಕೂಡ ಅಷ್ಟೇ ಗಂಭೀರವಾಗಿ ಚರ್ಚಿಸಬೇಕಾದ ಸಂಗತಿ. ಸಂಪಾದನಾಕಾರರು ಅಲ್ಲಮನನ್ನು ಕೇಂದ್ರದಲ್ಲಿರಿಸಿಕೊಂಡು ಸಂಪಾದನೆಯ ಓದನ್ನು ನಡೆಸಿದರೂ ನಂತರದಲ್ಲಿ ಲಿಂಗಾಯಿತ ನಡೆಯಲ್ಲಿ ಆಚಾರದಲ್ಲಿ ಉಳಿದ ಶರಣರೆಂದರೆ ಬಸವಣ್ಣ, ಚೆನ್ನಬಸವಣ್ಣ ಮತ್ತು ಸಿದ್ಧರಾಮ ಮಾತ್ರ. ಅಲ್ಲಮನಾಗಲೀ, ಅಕ್ಕನಾಗಲೀ, ಮಾದಾರ ಧೂಳಯ್ಯನಾಗಲೀ, ಹಡಪದ ಅಪ್ಪಣ್ಣನಾಗಲೀ ಆಚಾರದಲ್ಲಿ ಇಲ್ಲ, ವಿಚಾರದಲ್ಲಿ ಇದ್ದಾರೆ ಎನ್ನಲಡ್ಡಿಯಿಲ್ಲ. ಹಾಗೆಯೇ ಮಾದಾರ ಚೆನ್ನಯ್ಯ, ಹೊಲೇರ ಹೊನ್ನಪ್ಪ, ಅಂಬಿಗರ ಚೌಡಯ್ಯ, ವಡ್ಡರ ಸಿದ್ಧರಾಮ, ಒಕ್ಕಲಿಗರ ಮುದ್ದಣ್ಣ, ಹಡಪದ ಅಪ್ಪಣ್ಣ, ಮಡಿವಾಳ ಮಾಚಯ್ಯ, ಕುಂಬಾರ ಗುಂಡಯ್ಯ, ಗಾಣಿಗರ ದಾಸಯ್ಯ, ಕುರುಬರ ಬೀರಯ್ಯ, ದೊಂಬರ ಕ್ಯಾತಯ್ಯ, ಹಗ್ಗ ನುಲಿಯೋ ಚಂದಯ್ಯ, ಹೆಂಡದ ಮಾರಿತಂದೆ, ಕನ್ನದ ಮಾರಿತಂದೆ ಇವರ ತಾತ್ವಿಕತೆಗೆ ಕಲ್ಯಾಣದೊಳಕ್ಕೆ ಪ್ರವೇಶ ಸಿಕ್ಕಿತೆ? ಸಿಕ್ಕಿದ್ದರೆ ಮಂಟೇದಲ್ಲಮ ಗುರುವು ಮಂಟೇಸ್ವಾಮಿ ಕಾವ್ಯದಲ್ಲಿ ಕಲ್ಯಾಣದ ಒಳಕ್ಕೆ ಹೋಗದೆ ಮಾದರ ಕೇರಿಗೆ ತಾನೂ ಹೋದುದಲ್ಲದೆ, ಬಸವಣ್ಣ ನೀಲಾಂಬಿಕೆಯರನ್ನು ಕರೆತರಬೇಕಿತ್ತೆ? ತನ್ನ ದೇಹವನ್ನು ಚೂರು ಚೂರಾಗಿ ವಿಸರ್ಜಿಸಿಕೊಳ್ಳಬೇಕಿತ್ತೆ? ಈಗಲಾದರೂ ಈ ಹೊರನಿಲ್ಲಿಸುವ ನಿಲುವಿನಲ್ಲಿ ಏನಾದರೂ ವ್ಯತ್ಯಾಸವಾಗಿದೆಯೆ? ಈ ಕೆಳಜಾತಿಯ ವಚನಕಾರರನ್ನು ತತ್ವಶಾಸ್ತ್ರದ ಪ್ರಧಾನಧಾರೆಗಳಾಗಲೀ ಕಿರುಧಾರೆಗಳಾಗಲೀ ಅಷ್ಟೇ ಏಕೆ ಸ್ವತಃ ವಚನ ಪಂಥಿಗಳೇ ತಿರುಗಿ ನೋಡುವುದಿಲ್ಲ.
ಶೂನ್ಯ ಸಂಪಾದನೆಗಳು ಚರಿತ್ರೆಯನ್ನು ಪುರಾಣವನ್ನಾಗಿಸುವ ಪ್ರಯತ್ನ ಮಾಡುತ್ತವೆ. ನೇರವಾಗಿ ಕೈಲಾಸದಿಂದ ಬಂದ ನಿರ್ಮಾಯನೆಂಬ ಗಣೇಶ್ವರನೆ ಅಲ್ಲಮನೆಂಬ ಪುರಾಣ ಸಂಬಂಧವನ್ನು ಬೆಸೆದುಕೊಂಡೇ ಮೊದಲಡಿಯಿಡುತ್ತದೆ. ಬಸವಣ್ಣ, ಅಲ್ಲಮ, ಚೆನ್ನಬಸವಣ್ಣ ಮುಂತಾದ ಶರಣರೆಲ್ಲ ಕೈಲಾಸದಿಂದ ನಿಯೋಜಿತರಾಗಿ ಬಂದ ಶಿವಗಣಗಳಾಗಿ ಪರಿವರ್ತಿತರಾಗುತ್ತಾರೆ. ಹೀಗೆ ತಮ್ಮ ಧಾರ್ಮಿಕ ನಾಯಕರನ್ನು ದೈವೀಕರಿಸುವುದು ತಮ್ಮ ತಮ್ಮ ಪಂಥವನ್ನು ವ್ಯಾಖ್ಯಾನ ವಿಮರ್ಶೆಗಳಿಂದ ಮುಕ್ತಗೊಳಿಸಿ ಪ್ರಮಾಣಗಳನ್ನಾಗಿ ಸ್ಥಾಪಿಸುವ ಉದ್ದೇಶವನ್ನು ಕಾಣಿಸಿಕೊಡುತ್ತದೆ.
ಶೂನ್ಯ ಸಂಪಾದನೆ ಲಿಂಗ ಸಂಕೇತದ ಬಗೆಗೆ ಕಠಿಣ ನಿಲುವನ್ನು ತಳೆದಿದೆ. ಮೊದಲನೆಯ ಶಿವಗಣ ಪ್ರಸಾದಿಯ ಸಂಪಾದನೆ ಶೈವನಾದ ಸಿದ್ಧರಾಮನನ್ನು ಒಪ್ಪಿಕೊಂಡರೆ ನಂತರದ ಸಂಪಾದನೆಗಳು ಅವನನ್ನು ವೀರಶೈವನನ್ನಾಗಿಸಿಕೊಳ್ಳುತ್ತವೆ. ಹರಿಹರನ ಬಸವರಾಜದೇವರ ರಗಳೆಯಲ್ಲಿ ‘ಕರ್ಮಲತೆಯಂತಿದ್ದ ಜನಿವಾರವನ್ನು ಕಿತ್ತೆಸೆಯುವ’ ಸಂಕೇತ ನಿರಾಕರಣೆಯಿದೆ. ಆದರೆ ಈ ಗುರುತಿನ ರಾಜಕಾರಣ ಕೇವಲ ವೈದಿಕಕ್ಕಷ್ಟೇ ಸೀಮಿತವಲ್ಲ. ಬಯಲನ್ನೇ ಧ್ಯಾನಿಸಿದ ಶರಣ ಚಳುವಳಿಯೂ ಈ ಸಂಕೇತ ರಾಜಕಾರಣಕ್ಕೆ ತುತ್ತಾದುದು ಚಾರಿತ್ರಿಕ ಸತ್ಯ. ಆದರೆ ಸಂಕೇತಗಳ ನಿರಾಕರಣವು ಕನ್ನಡ ವಿವೇಕದ ಸಹಜ ಉದ್ಯೋಗ. ಹಾಗಾಗಿ ಅದು ಇದನ್ನೂ ಸಮರ್ಥವಾಗಿಯೇ ಎದುರಾಗಿದೆ. ಉದಾಹರಣೆಗೆ ವಚನಕಾರರ ಮುಂದುವರಿಕೆಯಂತೆ ಕಂಡೂ ತಾತ್ವಿಕವಾಗಿ ಅದರ ಮುಂದುವರಿಕೆ ಎನಿಸದ ಕೊಡೇಕಲ್ ಬಸವಣ್ಣನ ಪರಂಪರೆಯು “ಮಠೀಯವಾಗುತ್ತಾ, ಮತೀಯವಾಗುತ್ತಾ ಹೋದ ವೀರಶೈವಕ್ಕೆ ಅನುಭಾವಿಗಳು ಕೊಟ್ಟ ಉತ್ತರದಂತೆ”( ರಹಮತ್ ತರೀಕೆರೆ: ಕರ್ನಾಟಕದ ಸೂಫಿಗಳು, ಪು.85) ಲಿಂಗಧಾರಣ ಆಚರಣೆಯನ್ನೇ ನಿಷ್ಠುರ ವಿಮರ್ಶೆಗೆ ಒಳಪಡಿಸುತ್ತದೆ. ಕೊಡೇಕಲ್ ಸಂಪ್ರದಾಯವೇ ಬೋಳು ಜಂಗಮ ನಿಲುವನ್ನು ಮುಂದಿಡುವುದರ ಮೂಲಕ ಲಿಂಗಧಾರಣೆಯ ನಿರಾಕರಣೆಯ ನಿಲುವನ್ನು ಪ್ರಕಟಿಸುತ್ತದೆ. ಮಂಟೇಸ್ವಾಮಿ ಕಾವ್ಯದಲ್ಲಂತೂ ಈ ಸಂಕೇತ ನಿರಾಕರಣೆ ಇನ್ನೂ ನಿಷ್ಠುರವಾಗಿದೆ. ಅಲ್ಲಿ ಧರೆಗೆ ದೊಡ್ಡೋರಾದ ಮಂಟೇದಲ್ಲಮನ ಕಲ್ಯಾಣ ಪ್ರವೇಶವೇ, ‘ಏನೀ ಬಸವಣ್ಣ, ಕೋಳೀಗ್ ಲಿಂಗ, ಕೋತೀಗ್ ಲಿಂಗ, ನಾಯಿಗೆ ಲಿಂಗ, ನರೀಗ್ ಲಿಂಗ. ಸಿಕ್ಕಸಿಕ್ಕದವ್ರಿಗೆಲ್ಲಾ ಲಿಂಗ ಕಟ್ಕೊಂಡ್ ಕಲ್ಯಾಣ ಅಂತ ಮಾಡ್ಕೊಂಡಿದಾನಲ್ಲಾ ಇದನ್ ನೋಡ್ಬೇಕು ಅಂತ”(ಕೃಪೆ, ನೀಲಗಾರ ಗುರುರಾಜಮೈಸೂರು ಹಾಡಿದ ಮಂಟೇಸ್ವಾಮಿ ಪಠ್ಯ) ಬಂದ ಮಂಟೇದಲ್ಲಮ ಬಸವಣ್ಣನ ಕಲ್ಯಾಣಕ್ಕೆ ಕೊರಳಲ್ಲಿ ಲಿಂಗ ಇದ್ದವರಿಗಷ್ಟೇ ಪ್ರವೇಶ ಅನ್ನೋ ಸುದ್ದಿ ಕೇಳಿದ್ದೇ ನಿಂತ ಜಾಗದಲ್ಲೇ ಶರೀರವಾದ ಶರೀರವೇ ಗತನಾತ ಹೊಡೆಯುವ ನೊಣಸೊಳ್ಳೆ ಸೊಂಯ್ಯೋ ಅಂತ ಕಿರುಚ್ತಾ ಇರೋ ಹಂಗೆ, ಕುಷ್ಟ್ರೋಗ ಹಿಡ್ದು ಕೀವುರಕ್ತ ಸೋರುವ ಶರೀರವಾಗಿ ನಿಲ್ಲುತ್ತಾನೆ!’. ಲಿಂಗ ಕಟ್ಟೋ ಶರೀರವೇ ಗತನಾತ ಹೊಡೆಯುವ ಶರೀರವಾಗುವ ಈ ಚಿತ್ರಕ್ಕೇ ನಿಲ್ಲದೆ, ಕಾವ್ಯದಲ್ಲಿ ಮಂಟೇದಲ್ಲಮಪ್ರಭೂ ಕಲ್ಯಾಣದಲ್ಲಿ ಮಾಡಿದ ಘನಕಾರ್ಯಗಳೂ ಪ್ರಸ್ತಾಪಿತವಾಗುತ್ತವೆ. ಮುಖ್ಯವಾಗಿ ಕಟ್ಟಿದ್ದ ಲಿಂಗಗಳನ್ನು ಕಳಚಿಸುವುದು, ಲಿಂಗವನ್ನು ಮಾದಿಗರ ಹರಳಯ್ಯನ ಮನೆ ಮುಂದಿದ್ದ ಚರ್ಮಹದಮಾಡುವ ಉಗುನಿ ಗುಂಡಿಯಲ್ಲಿ ತೊಳೆದು ಶುದ್ಧಿ ಮಾಡಿದ್ದು ಮತ್ತು ಕಲ್ಯಾಣದ ಕಲ್ಯಾಣಿಯಲ್ಲಿದ್ದ ಅದೆಷ್ಟೋ ವರ್ಷಗಳ ಕೊಚ್ಚೆ ನೀರನ್ನು ರಂಡುಪುಂಡು ಜಂಗಮರ ಕೈಲಿ ಖಾಲಿ ಮಾಡಿಸಿ ಹೊಸ ಪನ್ನೀರು ಬರುವಂತೆ ಮಾಡಿದ್ದು ಸೇರ್ಪಡೆಯಾಗಿವೆ. ಅದರ ಜೊತೆಗೆ ಕಲ್ಯಾಣಕ್ಕಾಗಮಿಸಿದ ಅಲ್ಲಮಪ್ರಭುವಿನ ಚಿತ್ರವೂ ಶೂನ್ಯಸಂಪಾದನೆಗಿಂತ ಭಿನ್ನವಾಗುತ್ತದೆ. ಶೂನ್ಯಸಂಪಾದನೆಯಲ್ಲಿ ಪ್ರಭು ಕಲ್ಯಾಣಕ್ಕೆ ಬಂದಾಗ ಇದ್ದ ನಿಜ ಶರಣರೆಂದರೆ ಬಸವರಾಜ ದೇವರು, ಹಡಪದಪ್ಪಣ್ಣ, ಸಿದ್ಧರಾಮಯ್ಯದೇವರು, ಚಿಕ್ಕದಣ್ಣಾಯಕ ಚೆನ್ನಬಸವಣ್ಣನವರು, ಸೊಡ್ಡಳ ಬಾಚರಸ, ಕಿನ್ನರ ಬೊಮ್ಮಣ್ಣ ಮುಂತಾದವರು. ಆದರೆ ಮಂಟೇಸ್ವಾಮಿ ಕಾವ್ಯದಲ್ಲಿ ಪರಂಜ್ಯೋತಿ ಮಂಟೇದಲ್ಲಯ್ಯ ಕಲ್ಯಾಣ ಪಟ್ಟಣಕ್ಕೆ ಬಂದಾಗ ನಿಜ ಶರಣರಾದ ಭಗುತಿವುಳ್ಳ ಬಸವಣ್ಣ, ಹೊಲಿಯರ ಹೊನ್ನಪ್ಪ, ಮಾದಿಗರ ಚೆನ್ನಯ್ಯ, ಮಡಿವಾಳ ಮಾಚಪ್ಪ, ಕುಂಬಾರ ಗುಂಡಯ್ಯ, ಗಾಣಿಗರ ದಾಸಯ್ಯ, ಕುರುಬರ ಬೀರಪ್ಪ, ದೊಂಬರ ಕ್ಯಾತಯ್ಯ, ತುರುಕರ ಬೀರಯ್ಯ, ಅಂಬಿಗರ ಚೌಡಯ್ಯ ಹಾಗೂ ಅವರ ಜೊತೆ ಅಂಗಾಲ ಜಡೆಯವರು ಮುಂಗಾಲ ಜಡೆಯವರು, ರಂಡು ಪುಂಡು ಜಂಗಮರು ಪಿತಿಪಿತಿ ಅನ್ನುತ್ತಿದ್ದರು ಎನ್ನುವ ಮೂಲಕ ಅದು ಅಧಿಕಾರದ ಮುದ್ರೆಯಿರದ ನೆಲ ಮೂಲದ ಕುಲಗಳನ್ನೆಲ್ಲಾ ಒಂದು ತೆಕ್ಕೆಯಲ್ಲಿ ತಂದುಕೊಳ್ಳುತ್ತದೆ. ಎಂದೂ ಅಧಿಕಾರದ ಜೊತೆಗಿರದ, ಸಂಕೇತದ ಕಷ್ಟವಿರದ, ಆದರೆ ದೇಹಶ್ರಮದ ದಟ್ಟಕ್ರಿಯಾಶೀಲತೆಯ ಸಮೂಹವನ್ನು ಕೂಡಿಕೊಳ್ಳುತ್ತದೆ.
ವಚನದ ಇಂತಹ ಓದುಗಳು ಮತ್ತೆ ಮುನ್ನೆಲೆಗೆ ಬರಲು ಸಾಧ್ಯವೆ?
ಎಲ್ಲ ವಚನಕಾರರೂ ವೀರಶೈವ ಸಿದ್ಧಾಂತಿಗಳಲ್ಲ, ಷಟ್ಸ್ಥಲಿಗಳಲ್ಲ, ಇಷ್ಟಲಿಂಗ ಪ್ರತಿಪಾದಕರಲ್ಲ. ಸಂಕೇತ ನಿರಾಕರಣೆ ಮತ್ತು ಅದರ ಸ್ಥಿರೀಕರಣೆ ಈ ಎರಡನ್ನೂ ಪ್ರತಿಪಾದಿಸುವ ವಚನಗಳಿವೆ. ಇದು ವಚನದ ಒಳಗೇ ನಡೆದ ಗಂಭೀರವಾದ ಸಂಘರ್ಷ. ‘ಕೊಡೇಕಲ್ಲು ಮತ್ತು ಮಂಟೇಸ್ವಾಮಿ ಸಂಪ್ರದಾಯದವರು ಶರಣಸಂಸ್ಕೃತಿಯಲ್ಲಿ ಬಂಡಾಯದ ದನಿಯೆತ್ತಿ ಹೊರ ಹೋದಂತೆ ತೋರುತ್ತಿದ್ದು ತಮ್ಮ ಲಿಖಿತ ಮತ್ತು ಮೌಖಿಕ ಸಾಹಿತ್ಯದಲ್ಲಿ ಕಲ್ಯಾಣ ಶರಣರ ಪಂಥದಿಂದ ಅಗಲಿದ ನೋವು ಸಿಟ್ಟುಗಳನ್ನು ಆಳವಾಗಿ ತೋಡಿಕೊಂಡಿದ್ದಾರೆ. ಈ ಮಂಟೇಸ್ವಾಮಿ ಪರಂಪರೆಯವರ ಹಾಡುಗಳಲ್ಲಿ ಕಲ್ಯಾಣ ಬಸವಣ್ಣನನ್ನು ‘ಗುರು ಮುಟ್ಟದ ಗುಡ್ಡ’ ಎಂದು ಪ್ರಶಂಸಿಸಿದ್ದಾರೆ. ಬಸವಣ್ಣನ ಲಿಂಗಾಯತವನ್ನು ಶೋಷಣೆಯ ಮಾಧ್ಯಮ ಮಾಡಿಕೊಂಡ ಆಚಾರ್ಯರ ಬಗ್ಗೆ, ಕೊರಳಲ್ಲಿ ಲಿಂಗವಿದ್ದೂ ತತ್ವವಿಮುಖರಾಗಿ ಬದುಕುವ ಭಕ್ತರ ಬಗ್ಗೆ ಈ ಕೊಡೆಕಲ್ಲ ಬಸವಣ್ಣ, ಮಂಟೇಸ್ವಾಮಿ ಸಾಹಿತ್ಯದಲ್ಲಿ ದೊಡ್ಡ ತಿರಸ್ಕಾರವಿದೆ. “ಹಂಗು ಹರಿ ಲಿಂಗದ”ಎನ್ನುತ್ತಾನೆ, ಕೊಡೆಕಲ್ಲು ಬಸವಣ್ಣ. ಮಂಟೇಸ್ವಾಮಿಯು ಅಂದಿನ ಭ್ರಷ್ಟ ಆಚಾರ್ಯರನ್ನೂ, ಭಕ್ತರನ್ನೂ ಕಂಡು ಹೇಸಿ,
ಕುರುಬರ ಬೀರಯ್ಯ ಲಿಂಗ
ಮಡಿವಳ ಮಾಚಯ್ಯ ಲಿಂಗ
ಹೊಲ್ಯಾರ ಹೊನ್ನಯ್ಯ ಲಿಂಗ
ಹಡಪದ ಅಪ್ಪಣ್ಣ ಲಿಂಗ
ಕುಂಬಾರ ಗುಂಡಯ್ಯ ಲಿಂಗ
ಮಾದರ ಚೆನ್ನಯ್ಯ ಲಿಂಗ
ದೇವಾಂಗ ದಾಸಯ್ಯ ಲಿಂಗ
ಮೇಲುಸಕ್ಕರಿ ಶೆಟ್ಟಿ ಲಿಂಗ
ಗಂಗಡಿಕಾರ ಗೌಡ ಲಿಂಗ
ಜಗತ್ತಿನಲ್ಲಿ ಒಂಬತ್ತೇ ಲಿಂಗ
ಮಿಕ್ಕಾದ ಲಿಂಗವಂತರೆಲ್ಲ ಕಲ್ಲುವಡ್ಡರಾಗಿರಿ
ಎಂದು ಶಾಪ ಕೊಟ್ಟನೆಂಬ ಮಾತು ಬರುತ್ತದೆ. ಅಂದರೆ ಕುರುಬ, ಮಡಿವಾಳ, ಹೊಲೆಯ ಇತ್ಯಾದಿ ಒಂಬತ್ತು ಕೆಳವರ್ಗದ ಸಮಾಜಗಳ ಜನ ಮಾತ್ರ ನಿಜಲಿಂಗ. ಮಿಕ್ಕ ಆಚಾರ್ಯರು-ಆಚಾರವಿಹೀನ ಭಕ್ತರು ಲಿಂಗವಂತರೇ ಅಲ್ಲ ಎಂದು ಮಂಟೇಸ್ವಾಮಿ ಶಾಪ ನೀಡಬೇಕಾದರೆ ಅವನ ಕಾಲವಾದ 15ನೆಯ ಶತಮಾನದ ಹೊತ್ತಿಗೆ ಲಿಂಗಾಯತದ ಅಂತರಂಗ ಮಲಿನವಾಗಿದ್ದಿತೆಂದು ಸ್ಪಷ್ಟವಾಗುತ್ತದೆ. ಲಿಂಗಾಯತದಿಂದ ಅದರ ಪ್ರಾಣವಾದ ದಲಿತ ಸಮುದಾಯ ಹೊರಗೆ ಹೋಯಿತು; ಅಲಂಕಾರಿಕ ದೇಹವೆಂಬಂತೆ ಆಚಾರ್ಯಪೀಠ ಒಳಗೆ ಉಳಿಯಿತು. ಹೀಗೆ ದೇಹ ಒಂದು ಕಡೆ ಪ್ರಾಣ ಒಂದು ಕಡೆಯಾಗುತ್ತಲೇ ಅದರ ಆತ್ಮ ಅನಾಥವಾಯಿತು.’ (ಎಂ ಎಂ ಕಲಬುರ್ಗಿ: ಮಾರ್ಗ)
ಶಿವಗಣಪ್ರಸಾದಿಯ ಶೂನ್ಯ ಸಂಪಾದನೆಯನ್ನು ಸಂಪಾದಿಸಿರುವ ಪ್ರೊ. ಎಲ್ ಬಸವರಾಜು ಅವರು ಶೂನ್ಯ ಸಂಪಾದನೆಯು ‘ವೀರಶೈವ ಧರ್ಮದ ಮಹಾಪ್ರಸ್ಥಾನ. ಅದೇ ನಮ್ಮ ಪರಿಷ್ಕೃತ ಬೈಬಲ್ಲು ಮತ್ತು ಖುರಾನು’ ಎನ್ನುತ್ತಾರೆ. ವೀರಶೈವರಿಗೆ/ಲಿಂಗಾಯಿತರಿಗೆ ಇದು ಬೈಬಲ್ಲು ಖುರಾನು ಎನ್ನುವುದು ಸರಿಯಿರಬಹುದು. ಆದರೆ ಇದು ಎಲ್ಲ ಕಟ್ಟುಗಳನ್ನು ಹರಿದು ಬಯಲಿಗೆ ಬರುವ ಸ್ವಾತಂತ್ರ್ಯವನ್ನು, ಬಿಡುಗಡೆಯನ್ನು ಮುಂದಿಟ್ಟ ವಚನಕಾರರಿಗೆ ಅನ್ವಯಿಸುವ ಮಾತಲ್ಲ.
Comments 16
Amarnath J.K
Mar 15, 2022ಶೂನ್ಯ ಸಂಪಾದನೆಗಳು ಶರಣರ ಆಶಯಗಳಿಗೆ ವಿರುದ್ಧವಾಗಿವೆ ಎಂಬುದು ನಿಜಕ್ಕೂ ಆಘಾತಕಾರಿ ವಿಷಯ. ನಾನು ಯಾವ ಶೂನ್ಯ ಸಂಪಾದನೆಯನ್ನೂ ಓದಿಲ್ಲ, ಆದರೆ ಅವು ವಚನಗಳ ಕ್ರಮಯುಕ್ತ ಜೋಡಣೆ ಎಂದು ಇಲ್ಲಿಯತನಕ ನಂಬಿಕೊಂಡಿದ್ದೆ…. ನಿಮ್ಮ ವಿಚಾರಗಳು ಸ್ಪಷ್ಟವಾಗಿ ಅರ್ಥವಾಗಲು ಲೇಖನವನ್ನು ಮತ್ತೊಮ್ಮೆ ಓದಬೇಕೆನಿಸುತ್ತದೆ ಸರ್.
ಮಂಜುನಾಥ್, ಚಿಕ್ಕೂರು
Mar 15, 2022ಸಂಪಾದನೆಯ ಬಗ್ಗೆ ಸಂಪಾದಕರು ಹೇಳುವ ಮಾತುಗಳು ಯಾವಾಗಲೂ ಬಹಳ ಮೌಲ್ಯವಾಗಿರುತ್ತವೆ. ಶೂನ್ಯ ಸಂಪಾದನೆಗಳ ಕುರಿತು ಅನೇಕ ಒಳನೋಟಗಳನ್ನು ನೀಡುವ ಲೇಖನ ಬಹಳ ಚೆನ್ನಾಗಿದೆ.
Veeranna Madiwalar
Mar 15, 2022ಬಸವಣ್ಣನ ಧರ್ಮದಲ್ಲಿ ಮತ್ತೆ ಸನಾತನ ಗಲೀಜು ತುಂಬುತ್ತಿರುವುದನ್ನು ನೋಡಿ ಸಿಡಿದೆದ್ದವರು ಕೊಡೇಕಲ್ ಮತ್ತು ಮಂಟೇಸ್ವಾಮಿ ಸಂಪ್ರದಾಯಗಳು ಎನ್ನುವುದು ಅನೇಕರಿಗೆ ತಿಳಿದಿಲ್ಲ. ಇತಿಹಾಸದ ಈ ಪ್ರಮುಖ ಮಗ್ಗಲುಗಳು ಯಾಕೆ ನೇಪಥ್ಯಕ್ಕೆ ಸರಿದುಹೋದವು? ಈ ಸೂಕ್ಷ್ಮತೆಗಳನ್ನು ಅರಿತಿದ್ದರೆ ಇವತ್ತು ಕ್ರಾಂತಿಕಾರಿ ವಿಚಾರಗಳನ್ನೇ ತುಂಬಿಕೊಂಡ ವಚನ ಧರ್ಮ ಜಗತ್ತಿನ ತುಂಬ ಹರಡಿರುತ್ತಿತ್ತು. ಉತ್ತಮ ಮಾಹಿತಿಗಾಗಿ ಶರಣುಗಳು.
ಪಂಚಾಕ್ಷರಿ ಹಳೇಬೀಡು
Mar 16, 2022ಸಂವಾದ ರೂಪದ ವಚನಗಳನ್ನು ನೇರವಾಗಿ ಶರಣರೆ ಬರೆದಿರಲು ಸಾಧ್ಯವಿಲ್ಲ. ಇಂಥಾ ವಚನಗಳು ಮೂರನೇ ವ್ಯಕ್ತಿಯಿಂದ ಸೃಷ್ಟಿಯಾಗಿರಬೇಕು ಎಂಬ ನನ್ನ ನಿಲುವಿಗೆ ಈ ಲೇಖನ ಸ್ವಷ್ಟತೆ ಒದಗಿಸಿತು.
ಶರಣಾರ್ಥಿ
Jayaraj Bidar
Mar 16, 2022ಶೂನ್ಯ ಸಂಪಾದನೆಗಳು ಎಂದರೆ ವಚನಗಳನ್ನು ಸಂಗ್ರಹಿಸಿ ತಮಗೆ ಬೇಕಾದ ಹಾಗೆ ಓದಿ ಉಳಿಸಿಹೋಗಿದ್ದೂ ಹೌದು, ಅನ್ಯ ಓದುಗಳಿಗೆ ಒಳಗಾಗದಂತೆ ವಚನಗಳನ್ನು ಕಳೆದುಕೊಂಡದ್ದೂ ಹೌದು. ಉಳಿಸಿದ್ದಕ್ಕೆ ಕೃತಜ್ಞತೆ; ಕಳೆದುಕೊಂಡದ್ದಕ್ಕೆ ಸಂಕಟ. ಓದಲೇ ಬೇಕಾದ ವಿಚಾರಗಳನ್ನು ತಿಳಿಸಿದ್ದಕ್ಕೆ ಧನ್ಯವಾದ.
ಆನಂದಯ್ಯ ಡಂಬಳಗಿ
Mar 18, 2022ವಿದ್ವತ್ಪೂರ್ಣ ಲೇಖನ, ಮನ ಮುಟ್ಟುವ ವಿಚಾರಗಳು… ಶರಣು.
Kiran Varad
Mar 20, 2022ಕೆಲವೇ ಕೆಲವಾದರೂ ವಚನಗಳು ಆ ಕಾಲದಿಂದ ಇಲ್ಲಿಯವರೆಗೆ ಬಂದುದಕ್ಕೆ ಕಾಲಕಾಲಕ್ಕೆ ಅವುಗಳನ್ನು ಸಂಗ್ರಹಿಸಿ ಕೊಟ್ಟ ಮಹನೀಯರ ಹೃದಯವಂತಿಕೆ, ಪರಿಶ್ರಮ ಕಾರಣವೆನ್ನಬಹುದು. ಶೂನ್ಯ ಸಂಪಾದನೆಗಳ ಹೊರತಾಗಿಯೂ ಕೇವಲ ಕಟ್ಟುಗಳ ರೂಪದಲ್ಲಿ ಸಿಕ್ಕ ವಚನ ಸಂಗ್ರಹ ಬಹಳ ದೊಡ್ಡದು. ಫ.ಗು.ಹಳಕಟ್ಟಿಯವರ ನಿಸ್ವಾರ್ಥ ಸೇವೆಯಿಂದ ನಮಗೆ ಇಷ್ಟಾದರೂ ವಚನಗಳು ದಕ್ಕಿವೆ. ಸಂಗ್ರಹಯೋಗ್ಯ ಲೇಖನಕ್ಕೆ ವಂದನೆಗಳು.
Lalithamma Beluru
Mar 20, 2022ವಚನಗಳನ್ನು ಬರೆದಿಟ್ಟು, ಅವುಗಳನ್ನು ಪ್ರತಿ ಮಾಡಿ ಹಂಚುವ ವ್ಯವಸ್ಥೆ ಕಲ್ಯಾಣದಲ್ಲಿತ್ತು ಎಂದು ಅನೇಕ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಕ್ಷಿಪ್ರ ಕ್ರಾಂತಿಯಿಂದಾಗಿ ಹಲವಾರು ವಚನಗಳು ಹಾಳಾಗಿದ್ದು, ಕೇವಲ ಪಳೆಯುಳಿಕೆಯಂತೆ ಇಷ್ಟಾದರೂ ನಮಗೆ ದೊರೆಯುವಂತಾದದ್ದು ನಂತರದಲ್ಲಿ ಬಂದ ಮಠಗಳಲ್ಲಿನ ವ್ಯವಸ್ಥೆಗಳಿಂದ ಹಾಗೂ ಓದಿನ ರಾಜಕಾರಣಕ್ಕೆ ಅನೇಕ ವಚನಗಳು ತುತ್ತಾಗಿರುವ ಸಾಧ್ಯತೆ ಇದೆ ಎನ್ನುವುದನ್ನು ಸವಿವರವಾಗಿ ತಿಳಿಸಿಕೊಟ್ಟ ಬಗೆ ತುಂಬಾ ಚನ್ನಾಗಿ ಮೂಡಿಬಂದಿದೆ.
B.S.Patil
Mar 23, 2022ವಚನಗಳನ್ನು ನೋಡುವ ಬಗ್ಗೆ, ಓದುವ ಬಗ್ಗೆ, ಅವುಗಳನ್ನು ಅರ್ಥಮಾಡಿಕೊಳ್ಳುವ ಬಗ್ಗೆ ಲೇಖನದಲ್ಲಿ ವ್ಯಕ್ತವಾದ ಹಲವಾರು ಸೂಕ್ಷ್ಮ ವಿಚಾರಗಳು ನನ್ನ ತಿಳುವಳಿಕೆಯನ್ನು ಹಿಗ್ಗಿಸಿದವು. ಅದೇ ರೀತಿ ಶೂನ್ಯ ಸಂಪಾದನೆಗಳನ್ನು ಹೇಗೆ ನೋಡಬೇಕೆನ್ನುವುದೂ ಬಹಳ ಮುಖ್ಯವಾದ ವಿಷಯ. ಇತಿಹಾಸದ ಗ್ರಾಫಿನ ಹಿನ್ನೆಲೆಯಲ್ಲಿ ನೋಡಿದಾಗ ಮಾತ್ರ ನಮಗೆ ಸ್ಪಷ್ಟತೆ ಸಿಗುತ್ತಾ ಹೋಗುವ ಅವಕಾಶವಿದೆ. ಉತ್ತಮ ಮಾರ್ಗದರ್ಶನಕ್ಕಾಗಿ ಶರಣರಾದ ನಟರಾಜ್ ಬೂದಾಳು ಅವರಿಗೆ ಅನಂತ ಶರಣುಗಳು.
ಚಂದ್ರಣ್ಣ ರಬಕವಿ
Mar 23, 2022ಸಾಂಸ್ಕೃತಿಕ ರಾಜಕಾರಣ ಎನ್ನುವ ಪದವನ್ನು ಕೆಲವೆಡೆ ಬಳಸಲಾಗಿದೆ, ಆ ಕುರಿತು ಅಷ್ಟಿಷ್ಟು ಮಾಹಿತಿ ನನಗಿದೆ. ವಚನಗಳು ಹಾಗೆ ಸಾಂಸ್ಕೃತಿಕ ರಾಜಕಾರಣಕ್ಕೆ ಚರಿತ್ರೆಯುದ್ದಕ್ಕೂ ಒಳಗಾಗಿವೆ ಎಂದು ನನ್ನ ಅಭಿಪ್ರಾಯ, ಅದಕ್ಕಾಗೇ ಇವತ್ತು ಇಂತಹ ವಿನೂತನ ಕ್ರಾಂತಿಕಾರಿ ಕನ್ನಡದ ಧರ್ಮದಲ್ಲಿ ವೀರಶೈವರ ಹೆಸರಲ್ಲಿ ಅಲ್ಲಿನ ವಿಚಾರಗಳು-ಆಚಾರಗಳು ಕಲುಷಿತಗೊಂಡಿವೆ ಎಂದುಕೊಳ್ಳುತ್ತೇನೆ.
Basavaraju Hubli
Mar 28, 2022ವಚನಗಳನ್ನು ಅವು ಇರುವಂತೆಯೇ ಸಂಪಾದಿಸಿಲ್ಲವೇ? ಯಾಕೋ ಈ ಪ್ರಶ್ನೆ ತುಂಬಾ ಭಾರವಾಗಿ ನನ್ನ ಕಾಡತೊಡಗಿದೆ. ಇತಿಹಾಸದ ದಾರಿಗಳಲ್ಲಿ ಸತ್ಯದ ದರ್ಶನಗಳು ಮರೆಯಾಗುವುದೆಂದರೆ ಅದಕ್ಕಿಂತ ನೋವಿನ ಸಂಗತಿ ಮತ್ತೊಂದಿಲ್ಲ. ಶರಣರ ಬದುಕು ವಚನಗಳಲ್ಲಿದೆ, ಅವು ತೋರಿಸುವ ದಿಕ್ಕಿನಲ್ಲಿದೆ ಎಂದು ನಂಬಿಕೊಂಡು ಬಂದವನು ನಾನು. ಕೆಲ ಮಟ್ಟಿಗೆ ವಿಚಾರಗಳು ಕಲುಷಿತವಾಗಿರಬಹುದು, ಆದರೆ ಒಟ್ಟಾರೆ ಶರಣರ ಆಶಯವನ್ನು ಕಂಡುಕೊಳ್ಳುವಷ್ಟು ವಚನಗಳ ನೈಜತೆ ಉಳಿದುಬಂದಿದೆ ಎನ್ನುವುದು ನನ್ನ ನಂಬಿಕೆ ಸರ್.
ಜಯಪ್ರಕಾಶ್ ಬಾಗೂರು
Mar 30, 2022ಅಲ್ಲಮಪ್ರಭುದೇವರನ್ನು ಹೊಗಳುವ ಭರದಲ್ಲಿ ಶೂನ್ಯಸಂಪಾದನಾಕಾರರು ಅವರ ವ್ಯಕ್ತಿತ್ವಕ್ಕೆ ಹೊಂದದ ವಿಶೇಷಣಗಳನ್ನು ಬಳಸಿರುವುದನ್ನು ನೋಡಿದರೆ ವಚನ ಚಳುವಳಿಯನ್ನು, ಶರಣರನ್ನು ಅವರು ನೋಡಿದ ರೀತಿಯೇ ವಿಭಿನ್ನವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ಬಯಲನ್ನು ಮಡಿಕೆಯಲ್ಲಿಡುವ ಪ್ರಯತ್ನದಂತೆ ಈ ಕೃತಿಗಳು ಕಾಣುತ್ತವೆ. ಉತ್ತಮ ಲೇಖನ ನೀಡಿದ ಬೂದಾಳು ಶರಣರಿಗೆ ಶರಣಾರ್ಥಿಗಳು.
Vijayakumar Jakkoor
Mar 30, 2022ಮಂಟೆಸ್ವಾಮಿಯ ಕಠೋರ ಮಾತುಗಳ ಹಿನ್ನೆಲೆ ಈ ಲೇಖನ ಓದಿದ ಬಳಿಕ ನನಗೆ ಸ್ಪಷ್ಟವಾಯಿತು. ಹಿಂದುಳಿದ ಜನಾಂಗದವರ ಆಶಾಕಿರಣದಂತೆ ಕಾಣಿಸಿಕೊಂಡ ಶರಣ ಕ್ರಾಂತಿಯು ಮತ್ತೆ ಸಂಪ್ರದಾಯದ ಹೊಲಸನ್ನು ಮೆತ್ತಿಕೊಂಡಿದ್ದಕ್ಕೆ ತೀವ್ರ ನಿರಾಸೆಯಾಗಿ, ಆ ನಿರಾಸೆ ನೋವಾಗಿ, ನೋವು ಸಿಟ್ಟಾಗಿ ಖಾರದ ಮಾತುಗಳಲ್ಲಿ ವ್ಯಕ್ತವಾದದ್ದು ಸಹಜವೇ ಎನಿಸಿತು.
Pradeep r
Mar 30, 2022Love your Blog, very nice colors, theme and powerful thoughts.
ಡಾ.ಎಸ್.ಎಂ. ಜಾಮದಾರ್
Apr 3, 2022ಲೇಖನ ಬಹಳ ಚೆನ್ನಾಗಿದೆ, ವಿಶ್ಲೇಷಣೆ ತುಂಬಾ ಚೆನ್ನಾಗಿ ಮೂಡಿಬಂದಿದೆ.
Venkatesh Machakanur
May 1, 2023ಸಂಪಾದನೆ ಕುರಿತು ಏನೇ ಚರ್ಚೆ ಇರಲಿ, ವಚನಗಳನ್ನು ಸಾಂದರ್ಭಿಕವಾಗಿ ಅರ್ಥೈಸಿಕೊಳ್ಳಲು ಶೂನ್ಯ ಸಂಪಾದನೆಗಳು ಬಹಳ ಮಹತ್ವದ ಕೃತಿಗಳೆನಿಸುತ್ತವೆ. ಶೂನ್ಯ ಸಂಪಾದನೆಯನ್ನು ಆನಂತರ ಸಂಪಾದಿಸಿದ ಎಲ್ಲ ಮಹನೀಯರಿಗೂ ಅನಂತ ನಮನಗಳು.