
ಶಿವಮಯ-ಶಿವೇತರ ಗುಣಗಳು
ಲಿಂಗದೇವನೆ ಕರ್ತ, ಶಿವಭಕ್ತನೆ ಶ್ರೇಷ್ಠ.
ಕೊಲ್ಲದಿರ್ಪುದೆ ಧರ್ಮ.
ಅಧರ್ಮದಿಂದ ಬಂದುದನೊಲ್ಲದಿರ್ಪುದೆ ನೇಮ.
ಅಳುಪಿಲ್ಲದಿರ್ಪುದೆ ವ್ರತ.
ಇದೇ ಸತ್ಪಥ, ಉಳಿದುದೆಲ್ಲ ಮಿಥ್ಯವೆಂದೆ ಕಾಣಾ,
ದೇವರಾಯ ಸೊಡ್ಡಳಾ.
ಸೊಡ್ಡಳ ಬಾಚರಸರು 12ನೆಯ ಶತಮಾನದಲ್ಲಿದ್ದ ಶರಣರು. ಅವರು ದೇವರು ಯಾರು, ಯಾವ ವ್ಯಕ್ತಿ ಶ್ರೇಷ್ಠ, ಧರ್ಮ ಎಂದರೆ ಏನು, ನೇಮ-ವ್ರತಗಳ ಪರಿ, ಸತ್ಪಥ ಇವುಗಳ ವಿವರಣೆಯನ್ನು ಅತ್ಯಂತ ಸರಳವಾಗಿ ನಿರೂಪಿಸಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ `ಶಿವ’ಮಯ ಗುಣಗಳಿರುವಂತೆ `ಶಿವೇತರ’ ಗುಣಗಳೂ ಇವೆ. ಯಾವ ಗುಣಗಳಿಂದ ವ್ಯಕ್ತಿಯ ವ್ಯಕ್ತಿತ್ವ ವಿಕಾಸ, ಸಾಮಾಜಿಕ ಸ್ವಾಸ್ಥ್ಯ ಸಾಧ್ಯ ಎನ್ನುವ ಅರಿವು ಮುಖ್ಯ. ಶಿವಮಯ ಗುಣಗಳು ಎಂದರೆ ಸದ್ಗುಣಗಳು. ಶಿವೇತರ ಗುಣಗಳು ಎಂದರೆ ದುರ್ಗುಣಗಳು. ಶಿವಮಯ ಗುಣಗಳನ್ನು ಬೆಳೆಸಲು ಬೇಕಾದಷ್ಟು ದಾರಿಗಳಿವೆ. ಅವುಗಳಲ್ಲಿ ರಂಗಭೂಮಿಯೂ ಒಂದು. ಅದು ಮನುಷ್ಯರನ್ನು ಶಿವಮಯ ಗುಣಗಳತ್ತ ಕರೆದೊಯ್ಯುವಂತಹುದು. ಸಾಣೇಹಳ್ಳಿಯ `ಶಿವಸಂಚಾರ’ದ ಕಲಾವಿದರು ಅಭಿನಯಿಸುವ ನಾಟಕಗಳು ಜನರನ್ನು ಜಾಗೃತಗೊಳಿಸಿ ಶಿವಮಯ ಗುಣಗಳನ್ನು ಬೆಳೆಸುವ ಕಾಯಕವನ್ನು ನಿರಂತರವಾಗಿ 22 ವರ್ಷಗಳಿಂದ ಮಾಡುತ್ತ ಬಂದಿವೆ. ಅವು ಜನರ ಭಾವನೆಗಳನ್ನು ಕೆರಳಿಸದೆ ಅರಳಿಸುತ್ತ ಬಂದಿವೆ. ಭಾವನೆಗಳು ಕೆರಳಿದರೆ ಬದುಕು ಮೂರಾಬಟ್ಟೆಯಾಗುವುದು. ಭಾವನೆಗಳು ಅರಳಿದರೆ ಬದುಕು ಆನಂದಮಯವಾಗುವುದು. ನಾಟಕಗಳ ಉದ್ದೇಶವೇ ಬದುಕನ್ನು ಆನಂದಮಯಗೊಳಿಸುವುದು. ನಾಟಕಗಳು ಪ್ರೇಕ್ಷಕರ ಮುಖಕ್ಕೆ ಹಿಡಿದ ಕನ್ನಡಿ. ನಮ್ಮೂರಲ್ಲೂ ಆ ಸ್ವಭಾವದ ಪುರುಷರೂ ಇದ್ದಾರೆ, ಮಹಿಳೆಯವರೂ ಇದ್ದಾರೆ. ಅವರು ದುಷ್ಟರು, ಇವರು ಒಳ್ಳೆಯವರು ಎಂದು ಪ್ರೇಕ್ಷಕ ನಾಟಕ ನೋಡುತ್ತಲೇ ಅಳತೆ ಮಾಡುವನು. ವ್ಯಕ್ತಿಗಳ ಗುಣಾವಗುಣಗಳ ವಿಮರ್ಶೆ ಪ್ರಾರಂಭವಾಗುವುದು. ತನ್ಮೂಲಕ ಆತ್ಮಾವಲೋಕನಕ್ಕೂ ಪ್ರೇರಕವಾಗುವುದು.
ಭೂಮಿಯ ಮೇಲೆ ಬಾಳುತ್ತಿರುವ ಪ್ರತಿಯೊಬ್ಬರೂ ಒಂದಿಲ್ಲೊಂದು ರೀತಿಯ ನಟರೇ. ಅವರು ಹೇಗೆ ತಮ್ಮ ಪಾತ್ರ ನಿರ್ವಹಿಸುವರೆನ್ನುವುದು ಮುಖ್ಯ. ಇಂಥದೇ ಪಾತ್ರ ಬೇಕೆನ್ನುವುದಕ್ಕಿಂತ ದೇವರ ಕೃಪೆಗೆ ಪಾತ್ರರಾಗುವಂತೆ ಅಭಿನಯಿಸಬೇಕು. ಈ ಅರಿವನ್ನು ಮೂಡಿಸುವ ಕಾಯಕವನ್ನು ರಂಗಭೂಮಿಯ ಮೂಲಕ ಶಿವಸಂಚಾರ ಯಶಸ್ವಿಯಾಗಿ ಮಾಡುತ್ತ ಬಂದಿದೆ. ಹಾಗೆ ನೋಡಿದರೆ ವಿಶ್ವವೇ ಒಂದು ರಂಗಭೂಮಿ. ಇಲ್ಲಿರುವ ಜನರೇ ನಟ ನಟಿಯರು. ಅವರು ತಮ್ಮ ಪಾತ್ರಕ್ಕೆ ಚ್ಯುತಿ ತಂದುಕೊಳ್ಳದಂತೆ ಅಭಿನಯಿಸಬೇಕು. ವಿಶ್ವರಂಗಭೂಮಿಯಲ್ಲೂ ರೈತ, ರಾಜಕಾರಣಿ, ಸ್ವಾಮಿ, ವ್ಯಾಪಾರಿ, ಕಾರ್ಮಿಕ, ಶಿಕ್ಷಕ, ಅಧಿಕಾರಿ, ಸೈನಿಕ ಹೀಗೆ ಲೆಕ್ಕವಿಲ್ಲದಷ್ಟು ಪಾತ್ರಗಳಿವೆ. ಆದರೆ ಇವರು ರಂಗಭೂಮಿಯ ಮೇಲೆ ಬಣ್ಣ ಹಾಕಿಕೊಂಡು ಅಭಿನಯಿಸುವುದಿಲ್ಲ. ಇವರಿಗೆ ನಿಗದಿತ ರಂಗಕೃತಿ, ನಿರ್ದೇಶಕ, ವಸ್ತು, ಬಣ್ಣ, ಬೆಳಕು, ಧ್ವನಿವರ್ಧಕ, ವೇಷ-ಭೂಷಣ ಇತ್ಯಾದಿ ಪರಿಕರಗಳಿರುವುದಿಲ್ಲ. ಈ ಕಲಾವಿದರಿಗೆ ರಂಗಮಂಚವೇ ಬೇಕಿಲ್ಲ. ಆದರೆ ರಂಗಭೂಮಿಯ ಕಲಾವಿದರಿಗೆ ಇವೆಲ್ಲ ಬೇಕೇ ಬೇಕು. ರಂಗಮಂಚದ ಮೇಲೆ ಅಭಿನಯಿಸುವ ನಟ-ನಟಿಯರು ಸಮಾಜವನ್ನು ಪ್ರತಿಬಿಂಬಿಸುವರು. ತಮ್ಮ ಪಾತ್ರದ ಮೂಲಕ ಸಮಾಜಕ್ಕೆ ಸರಿಯಾದ ದಿಕ್ಕನ್ನು ತೋರಿಸುವ ಪ್ರಯತ್ನ ಮಾಡುವರು. ವಿಶ್ವರಂಗಭೂಮಿಯ ಮೇಲಿನ ಪಾತ್ರಗಳು ವ್ಯಕ್ತಿಗತ ಬದುಕಿನ ಉನ್ನತಿಗಾಗಲಿ, ಸಾಮಾಜಿಕ ಪರಿವರ್ತನೆಗಾಗಲಿ ಪ್ರೇರಕರಾಗುತ್ತಿಲ್ಲ. ಬದಲಾಗಿ ಬಹುತೇಕ ಜನರು ತಾವೂ ದಿಕ್ಕುತಪ್ಪಿ, ಸಮಾಜವನ್ನೂ ದಿಕ್ಕುತಪ್ಪಿಸುವ ಕಾರ್ಯ ಮಾಡುವರು.
ವ್ಯಕ್ತಿ ಸರಿಯಾದ ದಿಕ್ಕಿನಲ್ಲಿ ಸಾಗಬೇಕೆಂದರೆ ಆತನಿಗೆ ಉತ್ತಮ ಸಂಸ್ಕಾರಗಳ ಅಗತ್ಯವಿದೆ. ಈ ಸಂಸ್ಕಾರ ಹೊರಗಿನಿಂದ ಬರುವಂತಹುದಲ್ಲ. ಮನೆ, ಮಠಗಳಿಂದಲೇ ಪ್ರಾರಂಭವಾಗಬೇಕು. ಮನೆಯಲ್ಲಿ ಬೆಳಗ್ಗೆ ಎದ್ದಕೂಡಲೇ ಮುಖ ತೊಳೆಯುವ, ಹಣೆಗೆ ವಿಭೂತಿ ಧರಿಸುವ, ಇಷ್ಟಲಿಂಗ ಪೂಜೆ ಮಾಡುತ್ತ ವಚನಗಳನ್ನು ಹೇಳುವ, ಗುರು ಹಿರಿಯರನ್ನು ಗೌರವಿಸುವ ಕ್ರಿಯೆಗಳು ನಡೆಯಬೇಕು. ಇವೇ ಶಿವಮಯ ಗುಣಗಳಿಗೆ ಕಾರಣವಾಗುವ ಸಂಸ್ಕಾರಗಳು. ಇಂಥ ಸಂಸ್ಕಾರಗಳು ಅನೇಕರಿಗೆ ಅವರ ಬಾಲ್ಯದಲ್ಲಿ ಹಿಂದೆ ದೊರೆಯುತ್ತಿದ್ದವು. ಇವತ್ತು ಇಂಥ ಸಂಸ್ಕಾರಗಳಿಗಿಂತ ಮಕ್ಕಳನ್ನು ಬೇಗ ಹಾಸಿಗೆಯಿಂದೆಬ್ಬಿಸಿ ಸಮವಸ್ತ್ರಗಳನ್ನು ತೊಡಿಸಿ, ಕೈಯಲ್ಲೊಂದು ತಿಂಡಿಯ ಡಬ್ಬಿಯನ್ನು ಕೊಟ್ಟು, ಮನೆಯ ಮುಂದೆ ನಿಂತಿರುವ ವಾಹನಕ್ಕೆ ಕೋಳಿ ತುಂಬಿದಂತೆ ತುಂಬಿ ಕಾನ್ವೆಂಟುಗಳಿಗೆ ಕಳಿಸುವುದೇ ದೊಡ್ಡ ಕಾರ್ಯವಾಗಿದೆ. ಇದರಿಂದ ಮಕ್ಕಳಿಗೆ ಸಿಗಬೇಕಾದ ಸಂಸ್ಕಾರಗಳು ಸಿಗದಂತಾದವು. ಮಕ್ಕಳನ್ನು ಒಳ್ಳೆಯ ಶಾಲೆಗಳಿಗೆ ಸೇರಿಸಬೇಕು ನಿಜ. ಹಾಗೆ ಸೇರಿಸುವ ಮುನ್ನ ಮನೆಯೇ ಒಂದು ಪಾಠಶಾಲೆಯಾಗಿ ತಾಯಿಯೇ ಮೊದಲ ಗುರುವಾಗಬೇಕು. ಮನೆಯಲ್ಲಿರುವ ಅಜ್ಜ, ಅಜ್ಜಿ ಹೀಗೆ ಪ್ರತಿಯೊಬ್ಬರೂ ಗುರುಗಳಾಗಿ ಮಕ್ಕಳಿಗೆ ಬೊಧನೆ ಮಾಡುತ್ತಿದ್ದರೆ ಅವರಿಗೆ ಗೊತ್ತಿಲ್ಲದೆಯೇ ಉತ್ತಮ ಸಂಸ್ಕಾರಗಳು ಬೆಳೆಯುವವು. ಆದರೆ ಇಂದು ಅಂಥ ಸಂಸ್ಕಾರ ಕೊಡಲು ಅವಕಾಶವೇ ಸಿಗದಂತಾಗಿದೆ. ಕಾರಣ ಅವರನ್ನು ವಸತಿಯುತ ಶಾಲೆ ಇಲ್ಲವೇ ಕಾನ್ವೆಂಟುಗಳಿಗೆ ಕಳಿಸುವುದು. ಆ ಮಕ್ಕಳಿಗೆ ತಂದೆ-ತಾಯಿ, ಅಜ್ಜ-ಅಜ್ಜಿ ಇಲ್ಲವೇ ಮನೆಯ ಇತರ ಸದಸ್ಯರ ಸಂಕರ್ಪ ಅಷ್ಟಕ್ಕಷ್ಟೇ.
ಮಕ್ಕಳು ಶಿಕ್ಷಣ ಮುಗಿಸಿ ಉದ್ಯೋಗಕ್ಕೆ ಸೇರಿದ ಕೆಲವಾರು ವರ್ಷಗಳಲ್ಲೇ ತಂದೆ ತಾಯಿ ಇಬ್ಬರೂ ವೃದ್ಧರಾಗಬಹುದು. ಆಗ ಅವರನ್ನು ಸಾಕಲು ಮನೆಯಲ್ಲಿ ಮಕ್ಕಳಿರುವುದಿಲ್ಲ. ಮಕ್ಕಳಿದ್ದಲ್ಲಿಗೆ ಇವರು ಹೋಗಲಾಗುವುದಿಲ್ಲ. ಅಂಥ ಸಂದರ್ಭದಲ್ಲಿ ವೃದ್ಧ ತಂದೆ-ತಾಯಿಯರನ್ನು ಮಕ್ಕಳು ಮನಸ್ಸು ಮಾಡಿ ಸುಸಜ್ಜಿತ ವೃದ್ಧಾಶ್ಯಮಕ್ಕೆ ಸೇರಿಸಬಹುದು. ನೀವು ನಮ್ಮನ್ನು ಹಾಸ್ಟಲ್‍ಗೆ ಸೇರಿಸಿ ಉತ್ತಮ ಶಿಕ್ಷಣ ಕೊಡಿಸಿದಂತೆ ನಾವು ಸಹ ನಿಮ್ಮನ್ನು ಅನಾದರಣೆ ಮಾಡದೆ ವೃದ್ಧಾಶ್ರಮಕ್ಕೆ ಸೇರಿಸುತ್ತೇವೆ ಎಂದರೆ ಬೇಡ ಎನ್ನುವುದಾದರೂ ಹೇಗೆ? ತಂದೆ-ತಾಯಿ ಮಕ್ಕಳನ್ನು ಮನೆಯಲ್ಲಿಟ್ಟುಕೊಂಡೇ ಉತ್ತಮ ಸಂಸ್ಕಾರ ಮತ್ತು ಶಿಕ್ಷಣ ಕೊಡಿಸಿದ್ದರೆ ಈಗ ಅವರಿಗೆ ಈ ಸ್ಥಿತಿ ಬರುತ್ತಿರಲಿಲ್ಲ. ಈ ಬಗ್ಗೆ ಜನರು ಗಂಭೀರವಾಗಿ ಯೋಚಿಸಬೇಕು. ಮನುಷ್ಯನಿಗೆ ಶಿಕ್ಷಣ, ಉದ್ಯೋಗ, ಆದಾಯ ಇಷ್ಟೇ ಮುಖ್ಯವಲ್ಲ. ಇವುಗಳ ಜೊತೆಗೆ ಉತ್ತಮ ಸಂಸ್ಕಾರ ಸಹ ಬೇಕು. ಪ್ರತಿನಿತ್ಯ ಅನೇಕ ಅಘಟಿತ ಘಟನೆಗಳನ್ನು ನೋಡುತ್ತಲಿದ್ದೇವೆ. ವೈದ್ಯ ವಿದ್ಯಾರ್ಥಿನಿಯ ಇಲ್ಲವೇ ಡಾಕ್ಟರ್ ಮೇಲೆ ಅತ್ಯಾಚಾರವೆಸಗಿ ಸುಟ್ಟು ಹಾಕಿದ್ದು, ಪುಂಡರ ಅಟ್ಟಹಾಸ, ಕೊಲೆ, ಸುಲಿಗೆ, ಮಾನಭಂಗ ಒಂದೇ? ಎರಡೇ? ಲೆಕ್ಕವಿಲ್ಲ. ಇನ್ನು ಲೋಕಸಭೆ, ವಿಧಾನ ಸಭೆಗಳಲ್ಲಿ ಏನೇನು ನಡೆಯುತ್ತಿದೆ ಎಂದು ವರ್ಣಿಸುವ ಅಗತ್ಯವಿಲ್ಲ. ಭಾರತ ಅತ್ಯಾಚಾರಿಗಳ ದೇಶವಾಗುತ್ತಿದೆ ಎನ್ನುವ ಮಾತುಗಳೇ ಸಂಸತ್ ಭವನದ ಮೂಲಕ ಪ್ರಚಾರವಾಗುತ್ತಿವೆ.
ದೊಡ್ಡ ದೊಡ್ಡ ಸ್ಥಾನದಲ್ಲಿರುವವರು ಕೇಡಿನ ಬಗ್ಗೆ ಚಿಂತಿಸದೆ, ಎಲ್ಲವೂ ಕೆಟ್ಟಿದೆ ಎನ್ನುವುದಕ್ಕಿಂತ ಒಳಿತಿನ ಕಾರ್ಯಗಳತ್ತ ಒತ್ತು ಕೊಡಬೇಕು. ಸಮಾಜದಲ್ಲಿ ಏನೆಲ್ಲ ಅವಾಂತರಗಳಾಗುತ್ತಿವೆ, ಜನರು ಕೆಟ್ಟಿದ್ದಾರೆ ನಿಜ. ಹಾಗೆ ಹೇಳುವುದನ್ನೇ ಒಂದು ದಂದೆಯಾಗಿಸಿಕೊಂಡರೆ ಸುಧಾರಣೆ ಮಾಡುವವರು ಯಾರು? ಸುಧಾರಣೆಯ ಕಡೆಗೆ ಗಮನ ಇರಬೇಕೇ ಹೊರತು ಕೆಟ್ಟಿದೆ ಎಂದು ಪ್ರಚಾರ ಮಾಡುವುದಲ್ಲ. ಈ ನೆಲೆಯಲ್ಲಿ ಶಿವಸಂಚಾರದ ನಾಟಕಗಳು ಶಿವೇತರ ಗುಣಗಳನ್ನು ದೂರ ತಳ್ಳಿ ಶಿವಮಯ ಗುಣಗಳನ್ನು ಬೆಳೆಸುವ, ತನ್ಮೂಲಕ ಜನರಲ್ಲಿ ವಿಚಾರ ಕ್ರಾಂತಿ, ನೈತಿಕ ಪ್ರಜ್ಞೆ, ಧಾರ್ಮಿಕ ಒಲವನ್ನು ಮೂಡಿಸುವ ಕಾರ್ಯ ಮಾಡುತ್ತ ಬಂದಿವೆ. ಹಾಗಂದಾಕ್ಷಣ ಜನರಲ್ಲಿ ಜಾಗೃತಿ ಇಲ್ಲ, ಧರ್ಮ ಪ್ರಜ್ಞೆ ಇಲ್ಲ, ನೈತಿಕತೆ ಇಲ್ಲ ಎಂದಲ್ಲ. ಅವು ಶಿವಮಯ ಆಗುತ್ತಿಲ್ಲ. ಶಿವೇತರ ಆಗುತ್ತಿವೆ. ಈ ವರ್ಷದ ಶಿವಸಂಚಾರದ ಮೂರೂ ನಾಟಕಗಳು ಶಿವಗುಣಗಳನ್ನು ಬೆಳೆಸುವಂತಿವೆ.
`ಮೋಳಿಗೆ ಮಾರಯ್ಯ’ ನಾವೇ ಬರೆದಿರುವ ನಾಟಕ. ಮಾರಯ್ಯ ಕಾಶ್ಮೀರದಲ್ಲಿ ರಾಜನಾಗಿದ್ದವ. ಶರಣರ ತತ್ವಗಳಿಂದ ಪ್ರೇರಿತರಾಗಿ ಲಿಂಗದೀಕ್ಷೆ ಪಡೆಯುವರು. ಕಲ್ಯಾಣದ ಆಕರ್ಷಣೆಯ ಫಲವಾಗಿ ರಾಜ್ಯಪದವಿ ತೊರೆದು ಸಾಮಾನ್ಯ ವ್ಯಕ್ತಿಯಂತೆ ತನ್ನ ಧರ್ಮಪತ್ನಿ ಮಹಾದೇವಮ್ಮನ ಜೊತೆ ಕಲ್ಯಾಣಕ್ಕೆ ಬರುವರು. ಒಂದು ಗುಡಿಸಲಲ್ಲಿ ವಾಸ ಮಾಡುವರು. ಜೀವನಕ್ಕಾಗಿ ಕಟ್ಟಿಗೆ ಕಡಿದು ಮಾರುವ ಕಾಯಕ ಸ್ವೀಕರಿಸುವರು. ತಮ್ಮ ಕಾಯಕದಿಂದ ಬಂದ ಆದಾಯದಿಂದಲೇ ಶರಣರಿಗೆ ಅಂಬಲಿಯ ದಾಸೋಹ ಮಾಡುವರು. ಇಂಥ ಗುಣಗಳು ಇಂದಿನವರಿಗೆ ದಾರಿದೀವಿಗೆ ಆಗಬೇಕಾಗಿದೆ. ಇಂಥ ಪರಂಪರೆ ಭಾರತೀಯರಲ್ಲಿ ಮೊದಲಿನಿಂದಲೂ ಇತ್ತು. ಪ್ರಸ್ತುತ ದಿನಮಾನಗಳಲ್ಲಿ ನಾಗರಿಕ ಪ್ರಜ್ಞೆ ಹೆಚ್ಚಿ ಕಾಯಕ ಮತ್ತು ದಾಸೋಹ ಪ್ರಜ್ಞೆ ಮರೆಯಾಗಿದೆ. ಈಗ ನಾಗರಿಕ ಪ್ರಜ್ಞೆಯನ್ನು ಹಿಂದೆ ಸರಿಸಿ ಕಾಯಕ, ದಾಸೋಹ, ಸಂಸ್ಕೃತಿ ಇತ್ಯಾದಿ ಶಿವಮಯ ಪ್ರಜ್ಞೆಯನ್ನು ಬೆಳೆಸಬೇಕಾಗಿದೆ. ಇದು ಸಾಧ್ಯವಾದಾಗ ಮಾತ್ರ ಕಲ್ಯಾಣದಲ್ಲಿ 12ನೆಯ ಶತಮಾನದಲ್ಲಿ ಬಸವಾದಿ ಶಿವಶರಣರು ಮಾಡಿದ ಪರಿವರ್ತನೆಯನ್ನು ಇಂದೂ ಜಾರಿಯಲ್ಲಿ ತರಲು ಸಾಧ್ಯ. ಈ ಸಂದೇಶವನ್ನು ಸಾರುವಂತಹುದು `ಮೋಳಿಗೆ ಮಾರಯ್ಯ’ ನಾಟಕ.
ಮತ್ತೊಂದು ನಟರಾಜ ಹುಳಿಯಾರ ಅವರು ರಚಿಸಿರುವ `ಮುಂದಣ ಕಥನ’ ನಾಟಕ. ಇದು ಶರಣರ ಬದುಕನ್ನು ಕೇಂದ್ರವಾಗಿಸಿಕೊಂಡು ಇಂದಿನ ಸಮಾಜದ ವಾಸ್ತವ ಸಂಗತಿಗಳಿಗೆ ಕನ್ನಡಿ ಹಿಡಿಯುವ ಕೆಲಸ ಮಾಡುವುದು. ಅಲ್ಲಿ ಧರ್ಮ, ರಾಜಕೀಯ, ಸಾಹಿತ್ಯ, ಸಮಾಜ ಎಲ್ಲವೂ ಇದೆ. ಅದನ್ನು ನೋಡುವ ಮನಸ್ಸು ಬದಲಾಗಬೇಕಾಗಿದೆ. ಹೇಗೆ ಸಾಹಿತ್ಯ ಮತ್ತು ಧರ್ಮವನ್ನು ತಿರುಚುವ ಕಾರ್ಯ ನಡೆದಿದೆ ಎನ್ನುವ ವಾಸ್ತವವನ್ನು ಹಾಸ್ಯ, ಬಂಡಾಯ, ಜಾನಪದ ಇತ್ಯಾದಿ ಕಲಾಪ್ರಕಾರಗಳ ಮೂಲಕ ಬಿಚ್ಚಿಡುವ ಕಾರ್ಯ ನಡೆದಿದೆ. ಮೂರನೆಯ ನಾಟಕ ಜಿ ಬಿ ಜೋಷಿಯವರ `ಕದಡಿದ ನೀರು’. ಕದಡಿದ ನೀರು ಮಲಿನವಾಗುವಂತೆ ಮನುಷ್ಯರ ಮನಸ್ಸುಗಳು ಸಹ ಮಲಿನವಾಗುವುದು ಸಹಜ. ಅಂಥ ಮಾಲಿನ್ಯವನ್ನು ನಿವಾರಿಸಿ ಮನಸ್ಸಿನ ಸಮತೋಲನ ಕಾಯ್ದುಕೊಳ್ಳುವ ಪರಿಯನ್ನು ಪರಿಣಾಮಕಾರಿಯಾಗಿ ಈ ನಾಟಕ ತಿಳಿಸುವುದು. ಕಲಾವಿದರು ತಮ್ಮ ಪ್ರಬುದ್ಧ ಮಾತುಗಾರಿಕೆ ಅಭಿನಯದ ಮೂಲಕ ಜನರನ್ನು ಅರಿವಿನ ಕಡೆ ಕರೆದೊಯ್ಯುವ ಕಾರ್ಯ ಮಾಡುವರು. ಹೀಗೆ ಶಿವಗುಣಗಳನ್ನು ಎಲ್ಲೆಡೆ ಅನಾವರಣಗೊಳಿಸಿ ಶಿವೇತರ ಗುಣಗಳ ದಮನ ಮಾಡುವ ಕಾರ್ಯ ಮನೆಯಲ್ಲಿ, ಮಠದಲ್ಲಿ ನಿತ್ಯವೂ ನಡೆಯಬೇಕಾಗಿದೆ. ಮನೆ, ಮಠ ಸುಧಾರಣೆಯಾದರೆ ಸಮಾಜ ಸುಧಾರಣೆ ಸುಲಭವಾಗುವುದು.
ಶರಣರು `ಪಂಚಾಚಾರ’ಗಳ ಮೂಲಕ ಶಿವಮಯ ಗುಣಗಳನ್ನು ಬೆಳೆಸುವ ಕಾರ್ಯವನ್ನು ಬಹು ಯಶಸ್ವಿಯಾಗಿ ನಿರ್ವಹಿಸಿದ್ದರು. ಅವರ ಪರಿಭಾಷೆಯಲ್ಲೇ ಶಿವ, ಅಶಿವಕ್ಕೆ ಪರ್ಯಾಯವಾಗಿ ಭಕ್ತ, ಭವಿ ಎಂದು ಹೇಳಬಹುದು. ಭವಿಯನ್ನು ಭಕ್ತನನ್ನಾಗಿ ಮಾಡಲು ಶರಣರು ಜಾರಿಯಲ್ಲಿ ತಂದದ್ದೇ ಪಂಚಾಚಾರಗಳನ್ನು. ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ, ಭೃತ್ಯಾಚಾರ ಎನ್ನುವ ಈ ಆಚಾರಗಳು ಪ್ರತಿಪಾದಿಸುವುದು ಏಕದೇವ ನಿಷ್ಠೆ, ಕಾಯಕ ಶ್ರದ್ಧೆ, ಜಾತ್ಯತೀತ ಮನೋಭಾವ, ಅನ್ಯಾಯದ ವಿರುದ್ಧ ಪ್ರತಿಭಟನೆ, ಅಹಂಕಾರ ನಿರಶನ ಮತ್ತಿತರ ಗುಣಗಳನ್ನು. ಮನುಷ್ಯನ ಎಲ್ಲ ಅವನತಿಗೆ ಮೊದಲ ಕಾರಣವೇ ಹಲವು ದೇವರುಗಳ ನಂಬಿಕೆ. ದೇವರ ಮೂಲಕವೇ ಧಾರ್ಮಿಕ ದಬ್ಬಾಳಿಕೆ, ಸುಲಿಗೆ, ಮೌಢ್ಯಗಳು ಗರಿ ಬಿಚ್ಚಿಕೊಳ್ಳುವವು. ಅದಕ್ಕೆ ಕಾರಣೀಭೂತರು ಪೂಜಾರಿ-ಪುರೋಹಿತರು. ಇವರು ಎಲ್ಲ ಧರ್ಮಗಳಲ್ಲೂ ಇದ್ದಾರೆ. ಹೆಸರು ಬೇರೆ ಬೇರೆ ಇರಬಹುದು. ಅವರು ಜನರನ್ನು ಸನ್ಮಾರ್ಗದತ್ತ ಕರೆದೊಯ್ಯುವರೆಂದು ಹೇಳಲಾಗದು. ದೇವರು, ಧರ್ಮದ ಹೆಸರಿನಲ್ಲಿ ದಿಕ್ಕುತಪ್ಪಿಸುವ ಕಾರ್ಯವನ್ನು ಬಹು ಜಾಣ್ಮೆಯಿಂದ ಮಾಡುವರು. ಅದೇ ಅವರ ಸುಖ ಜೀವನದ ಸುಮಾರ್ಗ. ಇವರ ಕಪಟವನ್ನು ಅರಿಯದ ಜನರು ಕುರಿಯಂತೆ ಅವರನ್ನೇ ಹಿಂಬಾಲಿಸಿ ತಮ್ಮ ಸಂತೋಷದ ಬದುಕಿಗೆ ತಾವೇ ಚಪ್ಪಡಿ ಎಳೆದುಕೊಳ್ಳುವರು. ಇದನ್ನು ಮನಗಂಡ ಶರಣರು `ದೇವನೊಬ್ಬ ನಾಮ ಹಲವು’, `ಪರಮಪತಿವ್ರತೆಗೆ ಗಂಡನೊಬ್ಬ, ಮತ್ತೊಂದಕ್ಕೆರಗಿದಡೆ ಕಿವಿ ಮೂಗ ಕೊಯ್ವ’, `ದಯವೇ ಧರ್ಮದ ಮೂಲ’ ಎಂದು ಎಚ್ಚರಿಸಿ ಹಲವು ದೇವರ ಪೂಜೆ ತಪ್ಪಿಸಿ ಇಷ್ಟಲಿಂಗ ನಿಷ್ಠೆಯನ್ನು ಎತ್ತಿಹಿಡಿದರು. `ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎನ್ನುವ ಸತ್ಯವನ್ನು ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಟ್ಟರು. `ದೇಹವೇ ದೇವಾಲಯ’ ಎನ್ನುವ ಪ್ರಜ್ಞೆ ಮೂಡಿಸಿದರು. ಶಿವಗುಣಗಳು ಅರಳಲು `ಲಿಂಗಾಚಾರ’ ಇಂದು ಬೆಳೆದುಬರಬೇಕಾಗಿದೆ.
ಮಾನವ ದಾನವನಂತೆ ವರ್ತಿಸಲು ಕಾರಣವೇ ಜಾತಿಯ ಭೂತದ ನರ್ತನ. ಶ್ರೇಷ್ಠ ಜಾತಿ, ಕನಿಷ್ಠ ಜಾತಿ ಎನ್ನುವ ಕೊಳೆಯೇ ಏನೆಲ್ಲ ಅನರ್ಥಕ್ಕೆ ಕಾರಣ. ಬ್ರಾಹ್ಮಣ ಶ್ರೇಷ್ಠ ಕುಲಜ, ಶೂದ್ರ ಕನಿಷ್ಠ ಕುಲಜ ಎನ್ನುತ್ತ ಶ್ರೇಷ್ಠರು ಕನಿಷ್ಠರ ಮೇಲೆ ಸವಾರಿ ಮಾಡಲಾರಂಭಿಸಿದರು. ಆದರೆ ಪ್ರತಿಯೊಬ್ಬರ ಹುಟ್ಟಿನ ಗುಟ್ಟು ಒಂದೇ, ಅದನ್ನೇ ಬಸವಣ್ಣನವರು `ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ, ಕರ್ಣದಲ್ಲಿ ಜನಿಸಿದವರುಂಟೆ ಜಗದಲ್ಲಿ’ ಎಂದದ್ದು. ಧರ್ಮದ ಗುತ್ತಿಗೆ ಹಿಡಿದಂತೆ ವರ್ತಿಸುವ ಪಟ್ಟಭದ್ರರು ಇಂಥ ವಾಸ್ತವ ಸತ್ಯವನ್ನು ಮುಚ್ಚಿಟ್ಟು ಮೇಲು, ಕೀಳು ಎನ್ನುವ ವಿಷ ಬೀಜವನ್ನು ಬಿತ್ತಿದರು. ನೆಮ್ಮದಿಯ ಬದುಕಿನ ಹಕ್ಕನ್ನೇ ಕಿತ್ತುಕೊಂಡರು. ಅಸಮಾನತೆಯ ಬೆಳೆಯನ್ನು ಹುಲುಸಾಗಿ ಬೆಳೆಸಿದರು. ಮೇಲು, ಕೀಳು ಎನ್ನುವ ವಿಷ ಬೀಜವನ್ನೇ ಸುಟ್ಟುಹಾಕುವ ಪ್ರಯತ್ನ ಬಸವಾದಿ ಶಿವಶರಣರಿಂದ ನಡೆಯಿತು. ಭೂಮಿಗೆ, ಗಾಳಿಗೆ, ಬೆಂಕಿಗೆ, ನೀರಿಗೆ, ಸೂರ್ಯ ಚಂದ್ರರಿಗೆ ಜಾತಿ ಇಲ್ಲದಿರುವಾಗ ಮಾನವರಲ್ಲೇಕೆ ಈ ಜಾತಿಯ ಕೊಳೆ ತುಂಬಿದೆ ಎನ್ನುವ ಪ್ರಶ್ನೆ ಎತ್ತಿ ಜನರ ಅಜ್ಞಾನದ ಕಣ್ಣು ತೆರೆಸಿದರು.
ಶ್ರೇಷ್ಠತೆ, ಕನಿಷ್ಠತೆ ಬರುವುದು ಹುಟ್ಟಿನಿಂದಲ್ಲ, ಮಾಡುವ ಕ್ರಿಯೆಗಳಿಂದ ಎಂದು ಸ್ಪಷ್ಟಪಡಿಸಿದರು. ಕೊಲ್ಲುವ, ಹೊಲಸು ತಿನ್ನುವ ವ್ಯಕ್ತಿಯೇ ಕನಿಷ್ಠ ಎಂದು ಮನದಟ್ಟು ಮಾಡಿದರು. ಕೊಲ್ಲುವುದು, ಹೊಲಸು ತಿನ್ನುವುದು ಎಂದರೆ ತಮ್ಮ ಬುದ್ಧಿಯ ಬಲದಿಂದ ಮತ್ತೊಬ್ಬರ ಬದುಕಿನ ಅವಕಾಶಗಳನ್ನೇ ಕಿತ್ತುಕೊಳ್ಳುವುದು, ಭ್ರಷ್ಠತೆಯಿಂದ ತಮ್ಮ ಬಂಡವಾಳ ಹೆಚ್ಚಿಸಿಕೊಳ್ಳುವುದು. ಸಕಲ ಜೀವಾತ್ಮರಿಗೆ ಒಳಿತು ಬಯಸುವುದು ಶ್ರೇಷ್ಠತೆಯ ಲಕ್ಷಣ. ಇನ್ನೊಬ್ಬರಿಗೆ ಕಿರುಕುಳ ನೀಡುತ್ತ ತನ್ನ ಸಂಪತ್ತು ಹೆಚ್ಚಿಸಿಕೊಳ್ಳುವುದು, ಅಧಿಕಾರ ಭದ್ರಪಡಿಸಿಕೊಳ್ಳುವುದು ನೀಚಾತಿ ನೀಚ ಗುಣ. ಅವನೇ ಕೀಳು ಕುಲಜ. ಶ್ರೇಷ್ಠ ಎನ್ನುವ ವ್ಯಕ್ತಿಗೆ ಎರಡು ತಲೆ, ನಾಲ್ಕು ಕೈ, ನಾಲ್ಕು ಕಣ್ಣು, ನಾಲ್ಕು ಕಾಲು, ನಾಲ್ಕು ಹೊಟ್ಟೆ ಇತ್ಯಾದಿ ಇಲ್ಲ. ಎಲ್ಲರಿಗೂ ಇರುವುದು ಒಂದೇ ತಲೆ, ಎರಡೇ ಕೈ, ಎರಡೇ ಕಾಲು, ಎರಡೇ ಕಣ್ಣು, ಎರಡೇ ಕಿವಿಗಳು. ದೈಹಿಕವಾಗಿ ವ್ಯತ್ಯಾಸ ಇಲ್ಲದಿರುವಾಗ ಜಾತಿಯ ಹೆಸರಿನಲ್ಲಿ ಜನರನ್ನು ಛಿದ್ರಗೊಳಿಸುವುದು, ಅವರ ಬೆಳವಣಿಗೆಗೆ ಕಲ್ಲು ಹಾಕುವುದು ಯಾವ ಧರ್ಮ? ಈ ಸತ್ಯವನ್ನು ಅರಿತರೆ ಎಲ್ಲರೂ ಸಮಾನತೆಯಿಂದ, ಸೌಹಾರ್ದತೆಯಿಂದ ಸುಂದರ ಜೀವನ ನಡೆಸಲು ಸಾಧ್ಯ. ಇದೇ ಶಿವ ಗುಣ. ಇದಕ್ಕೆ ವಿರುದ್ಧವಾಗಿ ಬಾಳಿದರೆ ಅದೇ ಶಿವೇತರ ಗುಣ. ಈ ವಿಚಾರಗಳನ್ನು ತಿಳಿಸುವುದು `ಶಿವಾಚಾರ’.
ಮನುಷ್ಯ ಸುಂದರ ಬದುಕು ಸಾಗಿಸಲು ದೇಹ, ಮನಸ್ಸು, ಬುದ್ಧಿಯ ಸದ್ಬಳಕೆ ಮಾಡಿಕೊಂಡು ದುಡಿಯಬೇಕು. ಇಂಥವರು ಇಂಥ ಕೆಲಸವನ್ನೇ ಮಾಡಬೇಕೆಂಬ ಕಾನೂನೇನಿಲ್ಲ. ಆದರೆ ಕೆಲಸದ ಮೂಲಕವೇ ಜಾತಿಯ ವಿಷ ಬೀಜವನ್ನು ಬಿತ್ತುತ್ತ ಬಂದಿದ್ದಾರೆ ಜಾಣ ಜನರು. ಶರಣರು ಇಂಥ ಭಾವನೆಯನ್ನು ಬದಲಾಯಿಸಿ `ಕಾಯಕ’ ತತ್ವವನ್ನು ಜಾರಿಯಲ್ಲಿ ತಂದರು. ಕಾಯಕ ಎಂದರೆ ಉದ್ಯೋಗ, ಕೆಲಸ ಎಂದೇ ಅರ್ಥ. ಕಾಯಕ ಎನ್ನುವ ಭಾವನೆ ಬಂದಾಗ ಯಾವ ಕೆಲಸವೂ ಕೀಳಲ್ಲ, ಮೇಲಲ್ಲ. ಅಲ್ಲಿ ಪ್ರಾಮಾಣಿಕತೆ, ನೈತಿಕತೆ, ಶ್ರಮ, ಸಂತೋಷ ಮುಖ್ಯ. ಯಾವುದೇ ಕೆಲಸ ಮಾಡುವಲ್ಲಿ ಮೋಸ, ವಂಚನೆ ಇರಬಾರದು. ಸೋಮಾರಿಯಾಗದೆ ಶ್ರಮವಹಿಸಿ ದುಡಿಯಬೇಕು. ದುಡಿಮೆಯಲ್ಲಿ ಸಂತೋಷ ಅನುಭವಿಸಬೇಕು. ಶ್ರಮಕ್ಕೆ ತಕ್ಕ ಆದಾಯವನ್ನೂ ಪಡೆಯಬೇಕು. ಕಾಯಕದಿಂದ ಬಂದ ಆದಾಯವನ್ನು ಕಾಯಕಜೀವಿ ತಾನೊಬ್ಬನೇ ಬಳಸದೆ, ಕೂಡಿಡದೆ ಸಮಾಜದ ಒಳಿತಿನ ಕಾರ್ಯಗಳಿಗೂ ನೀಡಬೇಕು. ಅದೇ ದಾಸೋಹ. ಕಾಯಕ ಮತ್ತು ದಾಸೋಹ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಬೆಳೆದುಬಂದರೆ ಜಾತಿ, ಬಡತನ ಇತ್ಯಾದಿ ಅನಿಷ್ಠಗಳು ತಾವಾಗಿ ನಿವಾರಣೆಯಾಗಿ ಎಲ್ಲರೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುವುದು. ಇಂಥ ತತ್ವವನ್ನು ಸಾರುವಂತಹುದು `ಸದಾಚಾರ’.
ವ್ಯಕ್ತಿ ನಿಷ್ಠೆಗೆ ಬದಲಾಗಿ ಸಮಷ್ಠಿ ಪ್ರಜ್ಞೆ ಮತ್ತು ನೈತಿಕ ಪ್ರಜ್ಞೆ ಜಾಗೃತಗೊಳ್ಳಬೇಕು. ಅಂದರೆ ಮೋಸ, ವಂಚನೆ, ಸುಲಿಗೆ, ಕೊಲೆ, ಅನ್ಯಾಯ, ದ್ರೋಹ ಇತ್ಯಾದಿ ಶಿವೇತರ ಗುಣಗಳು ನೆಲೆಗೊಳ್ಳದಂತೆ ಎಚ್ಚರದಿಂದ ಬದುಕು ಸಾಗಿಸಬೇಕು. ಯಾರಾದರೂ ಶಿವೇತರ ಗುಣಗಳನ್ನು ಬೆಳೆಸಿಕೊಂಡು ವ್ಯಕ್ತಿಗತ ಇಲ್ಲವೇ ಸಾಮಾಜಿಕ ಅನಾರೋಗ್ಯಕ್ಕೆ ಕಾರಣರಾದರೆ ಅವರನ್ನು ಸಹಿಸಿಕೊಳ್ಳದೆ ಪ್ರತಿಭಟಿಸಬೇಕು. ಅದನ್ನೇ `ಗಣಾಚಾರ’ ಹೇಳುವುದು. ಗಣಾಚಾರ ಪ್ರಜ್ಞೆಯಲ್ಲಿ ಬಂಡಾಯದ ಗುಣವಿದೆ. ಆದರೆ ಇಂದಿನ ದಿನಮಾನಗಳಲ್ಲಿ ಬಂಡಾಯ ಪ್ರಜ್ಞೆಯೇ ಮರೆಯಾಗಿದೆ. ಧರ್ಮಬಾಹಿರ ಕೃತ್ಯಗಳು ನಡೆದರೆ ನಾನೇಕೆ ಅದರಲ್ಲಿ ಮೂಗು ತೂರಿಸಲೆಂದು ಪಲಾಯನವಾದಿಗಳಾದರೆ ಅದು ಧರ್ಮದ್ರೋಹ. ಆದರೆ ಇಂದು ಯಾರು ಏನಾದರೂ ಮಾಡಿಕೊಳ್ಳಲಿ. ಅವರ ಗೊಡವೆ ನಮಗೇಕೆ? ಕಂಡೂ ಕಂಡೂ ಹೊಲಸಿನ ಮೇಲೆ ಕಲ್ಲು ಹಾಕಿ ಮುಖಕ್ಕೆ ಸಿಡಿಸಿಕೊಳ್ಳಬೇಕೇ ಎಂದು ಕೇಳುವವರೂ ಇದ್ದಾರೆ. ಇಂಥವರು ಶಿವೇತರ ಗುಣಗಳಿಗೆ ಪ್ರೋತ್ಸಾಹ ನೀಡಿದಂತೆ. ಶಿವಮಯ ಗುಣಗಳನ್ನು ಬೆಳೆಸಬೇಕೆಂಬ ಕಳಕಳಿ ಇದ್ದರೆ ಅನ್ಯಾಯದ ವಿರುದ್ಧ ಧ್ವನಿಯನ್ನಾದರೂ ಎತ್ತುವ ಗಟ್ಟಿತನ ತೋರಬೇಕು. ವಿಷಾದದ ಸಂಗತಿ ಎಂದರೆ ಹಾಗೆ ಧ್ವನಿ ಎತ್ತುವವರೇ ಅಪರಾಧಿಗಳು, ಅಯೋಗ್ಯರು, ಬದುಕಲು ಗೊತ್ತಿಲ್ಲದ ಮೂರ್ಖರು ಎನ್ನುವ ಪಟ್ಟ ಕಟ್ಟುವ ಜಾಣರೂ ಇದ್ದಾರೆ. ಹಾಗಾಗಿಯೇ ಶಿವೇತರ ಗುಣಗಳು ಎಲ್ಲೆಡೆ ಹುಲುಸಾಗಿ ಬೆಳೆದು ವ್ಯಕ್ತಿಯ ಮತ್ತು ಸಮಾಜದ ಆರೋಗ್ಯವನ್ನು ಕೆಡಿಸುತ್ತಲಿವೆ. ಇಲ್ಲಿ ಬೇಕಾಗಿರುವುದು ದಾಕ್ಷಿಣ್ಯ ಅಲ್ಲ, ನ್ಯಾಯನಿಷ್ಠೆ. ಅನ್ಯಾಯವನ್ನು ಪ್ರತಿಭಟಿಸುವ ಛಲ. ಆಗ ಮಾತ್ರ ಶಿವಮಯ ಗುಣಗಳು ಸಮಾಜದಲ್ಲಿ ಹೆಚ್ಚಲು ಸಾಧ್ಯ.
ಶಿವ ಗುಣಗಳ ಮತ್ತೊಂದು ಲಕ್ಷಣ ವಿನಯ. ನಾನು, ನಾನು ಎನ್ನುವ ಅಹಂಕಾರವೇ ಎಲ್ಲ ಅಪಾಯಗಳಿಗೂ ತಳಹದಿ. ಅಹಂಕಾರ ಯಾವ ರೂಪದಲ್ಲಿ ವ್ಯಕ್ತಿಯ ಬದುಕನ್ನು ಆವರಿಸಿಕೊಳ್ಳುತ್ತದೆ ಎಂದು ಹೇಳಲಾಗದು. ಅದನ್ನು ಮದ ಎಂದೂ ಹೇಳಬಹುದು. ಅರ್ಥ ಮದ, ಅಧಿಕಾರ ಮದ, ತಾರುಣ್ಯ ಮದ, ರೂಪ ಮದ, ಬುದ್ಧಿ ಮದ ಹೀಗೆ ಇವುಗಳ ಪಟ್ಟಿ ಬೆಳೆಯುತ್ತಲೇ ಹೋಗುವುದು. ಈ ಮದಗಳಿಂದ ಮನುಷ್ಯ ಮುಕ್ತನಾಗದಿದ್ದರೆ ಅವನಲ್ಲಿ ಅಶಿವ ಗುಣಗಳು ಹೆಚ್ಚುತ್ತ ಹೋಗುವವು. ಅವನಲ್ಲಿ ವಿನಯದ ಬದಲು ದರ್ಪ ಹೆಡೆಯಾಡುವುದು. ವಿವೇಕ ಮರೆಯಾಗಿ ಅವಿವೇಕದ ಕಾರ್ಯಗಳಿಗೆ ಕೈ ಹಾಕುವನು. ಇಲ್ಲಿ ಬೇಕಾದ್ದು `ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎನ್ನುವ `ಭೃತ್ಯಾಚಾರ’ ಮನೋಭಾವ. ಜನರಲ್ಲಿ ಪಂಚಾಚಾರ ಪ್ರಜ್ಞೆ ಮೂಡಿ ಅವುಗಳನ್ನು ವ್ಯಕ್ತಿಗತ ಬದುಕಿನಲ್ಲಿ ಅಳವಡಿಸಿಕೊಂಡರೆ ಶಿವಮಯ ಗುಣಗಳು ಎಲ್ಲೆಡೆ ಹೆಚ್ಚುವವು.
ವಾರವೇಳು ಕುಲ ಹದಿನೆಂಟು ಎಂಬರಯ್ಯಾ
ಅದ ನಾವು ಅಲ್ಲವೆಂಬೆವು.
ಇರುಳೊಂದು ವಾರ ಹಗಲೊಂದು ವಾರ.
ಭವಿಯೊಂದು ಕುಲ, ಭಕ್ತನೊಂದು ಕುಲ.
ನಾವು ಬಲ್ಲುದು ಕಾಣಾ ಕೂಡಲಚೆನ್ನಸಂಗಮದೇವಾ.
ಚೆನ್ನಬಸವಣ್ಣನವರು ಹೇಳುವಂತೆ ಭವಿಯೊಂದು ಕುಲ, ಭಕ್ತನೊಂದು ಕುಲ. ಭವಿ ಕುಲವನ್ನು ಭಕ್ತ ಕುಲವನ್ನಾಗಿ ಮಾಡಲೋಸುಗವೇ ಶರಣರು `ಅನುಭವಮಂಟಪ’ವನ್ನು ಜಾರಿಯಲ್ಲಿ ತಂದರು. ಜನರ ಭವಿಗುಣಗಳನ್ನು ಅಳಿಸಿ ಭಕ್ತಗುಣಗಳನ್ನು ಬೆಳೆಸಿದರು. ಅದರಿಂದಾಗಿ ಕಲ್ಯಾಣ ಒಳಗೂ ಕಲ್ಯಾಣವಾಯ್ತು, ಹೊರಗೂ ಕಲ್ಯಾಣವಾಯ್ತು. ಕಲ್ಯಾಣವೆಂದರೆ ಅಕ್ಕಮಹಾದೇವಿಯವರು ಹೇಳುವಂತೆ ಆಸೆ ಆಮಿಷಗಳನ್ನು ಅಳಿಯುವುದು, ಒಳ ಹೊರಗು ಶುದ್ಧವಾಗುವುದು. ನೀ ನಾನೆಂಬ ಭಾವ ನಿರ್ಭಾವವಾಗುವುದು.
Comments 17
Kamalesh Jevergi
Jan 6, 2020ಶ್ರೀಗಳ ಶಿವಸಂಚಾರದ ನಾಟಕಗಳನ್ನು ನಾನು ನೋಡಿದ್ದೇನೆ. ಶರಣರ ತತ್ವಗಳನ್ನು ಪಾತ್ರಗಳ ಮೂಲಕ ವೇದಿಕೆಯ ಮೇಲೆ ಅನಾವರಣಗೊಳ್ಳುವ ಬಗೆ ನನಗೆ ಬಹಳ ಹಿಡಿಸಿತು. ಈ ಕಲಾ ಮಾಧ್ಯಮದಲ್ಲಿ ಶ್ರೀಗಳ ವಿಶೇಷ ಆಸಕ್ತಿ ಮೆಚ್ಚುವಂತಹದ್ದು.
Gayathri.N.C
Jan 6, 2020ಸದ್ಗಣವಾದ ಶಿವಮಯ ಗುಣಗಳ ಮಹತ್ವವನ್ನು ಸಾಮಾನ್ಯರೂ ಅರ್ಥಮಾಡಿಕೊಳ್ಳುವಂತೆ ಉದಾಹರಣೆಗಳ ಮೂಲಕ ವಿವರಿಸಿದ ಪೂಜ್ಯರಿಗೆ ಶರಣು.
Veerabhadrappa, Bangalore
Jan 7, 2020ಮಕ್ಕಳ ಪಾಲನೆ ಪೋಷಣೆಯ ಹಿಂದಿನ ಜವಾಬ್ದಾರಿಯನ್ನು ಶ್ರೀಗಳು ಬಹಳ ಚನ್ನಾಗಿ ಉಪದೇಶಿಸಿದ್ದಾರೆ. ಹಿರಿಯರು ಹಿಂದೆ ಮಾಡಿದ ತಪ್ಪಿಗೆ ಇಂದು ಪಶ್ಚಾತ್ತಾಪ ಪಡುವ ಸ್ಥಿತಿ ಬಹುತೇಕ ಪ್ರತಿಯೊಬ್ಬರ ಮನೆಯ ಕತೆಯೂ ಆಗಿದೆ.
Ganga Hiramath
Jan 8, 2020ಪಂಚಾಚಾರಗಳ ಬಗೆಗೆ ವಿಸ್ತೃತವಾಗಿ ತಿಳಿಸಿಕೊಟ್ಟ ಸ್ವಾಮೀಜಿಯವರ ಲೇಖನ ಮನನ ಯೋಗ್ಯವಾಗಿದೆ. ಹೊಸ ತಲೆಮಾರಿನ ಸಂದರ್ಭದಲ್ಲಿ ಪಂಚಾಚಾರಗಳನ್ನು ಇನ್ನಷ್ಟು ಭಿನ್ನವಾಗಿ ಹೇಳುವ ಅಗತ್ಯವಿದೆ ಎನಿಸುತ್ತದೆ. ದಯವಿಟ್ಟು ಸ್ವಾಮೀಜಿ ಈ ಕಾರ್ಯ ಮಾಡಬೇಕು.
Tippeswamy
Jan 8, 2020ವ್ಯಕ್ತಿಗತ ಬದುಕಿನಲ್ಲಿ ಪಂಚಾಚಾರಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಈ ಪಂಚಾಚಾರಗಳಿಗೂ, ಪಂಚಾಚಾರ್ಯರಿಗೂ ಏನಾದರೂ ಸಂಬಂಧವಿದೆಯೇ?
Jayakumar Vijaypur
Jan 9, 2020ತಮ್ಮ ಲೇಖನಗಳನ್ನು ತಪ್ಪದೆ ಓದುತ್ತೇನೆ ಮತ್ತು ಭಾಷಣದ ತುಣುಕುಗಳನ್ನು ತಪ್ಪದೇ ಕೇಳುತ್ತೇನೆ. ನೇರ ಮಾತುಗಳಿಂದ, ನೇರ ವಿಚಾರಗಳಿಂದ ನನಗೆ ನಿಮ್ಮನ್ನು ಕಂಡರೆ ಅಪಾರ ಗೌರವ. ನಾಟಕ ಪ್ರದರ್ಶನಗಳ ಮೂಲಕ ನೀವು ಶರಣ ಧರ್ಮ ಪ್ರಚಾರ ಮಾಡುತ್ತಿರುವುದು ಹೆಮ್ಮೆಯ ವಿಷಯ. ತಮ್ಮಲ್ಲಿ ನನ್ನದೊಂದು ಪ್ರಾರ್ಥನೆ. ಇದೇ ಬಯಲು ಬ್ಲಾಗಿನಲ್ಲಿ ಪ್ರಕಟವಾದ ಸಿದ್ದರಾಮೇಶ್ವರರ ಕತೆ ತುಂಬಾ ಚನ್ನಾಗಿದೆ, ಅದನ್ನು ನಿಮ್ಮ ರಂಗತಂಡ ನಾಟಕವಾಗಿಸಿದಲ್ಲಿ ಅದು ಪ್ರತಿಯೊಬ್ಬರನ್ನೂ ಮುಟ್ಟುತ್ತದೆಂಬುದು ನನ್ನ ಅನಿಸಿಕೆ.
Thimmanagoyda
Jan 10, 2020How to upload to bayalu
Contact no
Address
ನಾಗರಾಜ್ ಕವಳಿ
Jan 12, 2020ಪಂಚಾಚಾರಗಳ ಸಂಕ್ಷಿಪ್ತ ವಿವರಣೆ ನೀಡುವುದಕ್ಕಿಂತ ಅವುಗಳನ್ನು ವಿಸ್ತಾರವಾಗಿ ಬರೆದರೆ ಅನುಕೂಲವಾಗುತ್ತದೆ. ಈಗಿನ ಯುಗಕ್ಕೂ ಪಂಚಾಚಾರಗಳನ್ನು ಹೇಗೆ ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಬಹುದೆಂಬುದನ್ನು ದಯವಿಟ್ಟು ಸ್ವಾಮಿಗಳು ವಿವರಿಸಬೇಕು. ಹಾಗೆಯೇ ಷಟಸ್ಥಲದ ಅನುಭಾವವನ್ನೂ ತಮ್ಮಿಂದ ನಿರೀಕ್ಷಿಸಬಹುದೇ?
Manjunatha Shimoga
Jan 14, 2020ಭವಿಗಳನ್ನು ಭಕ್ತರನ್ನಾಗಿ ಮಾಡಲೆಂದೇ ಶರಣರು ಬಂದದ್ದು ಎನ್ನುವುದು ನಿಜವಾದ ಮಾತು. ಭವಿ ಭಕ್ತನಾಗಲು ಪಂಚಾಚಾರಗಳು ಹೇಗೆ ಅವಶ್ಯಕ ಎನ್ನುವುದನ್ನು ಶ್ರೀಗಳು ಸರಳವಾಗಿ ಮನಮುಟ್ಟುವಂತೆ ವಿವರಿಸಿದ್ದಾರೆ. ವ್ಯಕ್ತಿಯೊಬ್ಬನನ್ನು ಪರಿಪೂರ್ಣವಾಗಿ ರೂಪಿಸಲು ಪಂಚಾಚಾರಗಳು ಬೇಕೇ ಬೇಕು. ಹಾಗಾದರೆ ವ್ಯಕ್ತಿತ್ವ ವಿಕಸನದಲ್ಲಿ ಷಟಸ್ಥಲಗಳ ಪಾತ್ರವೇನು? ಎರಡಕ್ಕೂ ಅಂತರವೇನು, ದಯವಿಟ್ಟು ಮಾರ್ಗದರ್ಶನ ಮಾಡಿ.
Karibasappa hanchinamani
Jan 16, 2020ನಾವೆಲ್ಲರೂ ನಟರೇ ನಿಜ. ಬದುಕಿರುವವರೆಗೆ ವಿವಿಧ ಪಾತ್ರಗಳನ್ನು ಅಭಿನಯಿಸುತ್ತಿರುತ್ತೇವೆ. ಶಿವಮಯ ಗುಣಗಳು ಅಳವಟ್ಟರೆ ಬದುಕು ಬಂಗಾರವಾಗುತ್ತದೆ. ಸ್ವಾಮೀಜಿಯವರ ಬಹುಮುಖ ವ್ಯಕ್ತಿತ್ವಕ್ಕೆ ನಮೋನಮಃ.
Channappa Vali
Jan 20, 2020ಪಂಚಾಚಾರಗಳ ಮೂಲಕ ಶಿವಮಯ ಗುಣಗಳನ್ನು ತಿಳಿಸಿಕೊಟ್ಟ ಉತ್ತಮ ಲೇಖನ. ಶ್ರೀಗಳ ಆಶೀರ್ವಚನ ಕೇಳಿದಂತೆ ಇತ್ತು.
gangadharaiah H.S
Jan 20, 2020ಸಾಣೆಹಳ್ಳಿ ಮಠದ ನಾಟಕ ತಂಡದ ನಾಟಕಗಳನ್ನು ನೋಡಿದ್ದೇನೆ. ಶ್ರೀಗಳ ಕಲಾ ಕಾಳಜಿಯನ್ನು ಇಲ್ಲಿ ಗಮನಿಸಬಹುದು. ರಂಗ ಪ್ರಯೋಗದಿಂದ ಬೆಳ್ಳಿತೆರೆಗೆ ಹೋದರೆ ಇನ್ನೂ ಬಹಳಷ್ಟು ಜನರನ್ನು ಶರಣರ ಕತೆಗಳು ಆಕರ್ಷಿಸಬಹುದು. ಸ್ವಾಮಿಗಳು ಇತ್ತ ಗಮನಹರಿಸಬೇಕಾಗಿ ನನ್ನ ಸವಿನಯ ಪ್ರಾರ್ಥನೆ.
ಈರಣ್ಣ ಗಾಣಾಪುರ
Jan 20, 2020ಇಡೀ ತಿಂಗಳು ಪೂರ್ತಿ ಓದಬಹುದಾದಷ್ಟು ಸಮೃದ್ಧ ಮಾಹಿತಿಯನ್ನು ಬಯಲಿನಲ್ಲಿ ಕಂಡೆ. ಇಲ್ಲಿಯ ಪ್ರತಿಯೊಂದು ಲೇಖನವನ್ನು ನಿಧಾನವಾಗಿ ಓದಬೇಕು. ನೂರಾರು ಚುಟುಕು ಮಾಹಿತಿಗಳನ್ನು ಓದುವುದಕ್ಕಿಂತ ಇಂತಹ ಮಹತ್ವಪೂರ್ಣ ಬರಹಗಳನ್ನು ಓದುವುದರಿಂದ ಜ್ಞಾನ ವೃದ್ದಿಯಾಗುತ್ತದೆ. ಸರಿಯಾದ ಚಿಂತನೆಗೆ ಹಚ್ಚುವ ಓದು ಯಾವತ್ತಿಗೂ ಮೌಲಿಕವಾದದ್ದು. ಇಲ್ಲಿಯ ಬರಹಗಾರರು ಪ್ರತಿ ತಿಂಗಳು ಹೊಸ ಹೊಸ ವಿಚಾರಗಳನ್ನು ಉಣಬಡಿಸುತ್ತಾರೆ.
Vinay Bengaluru
Jan 22, 2020ಸ್ವಾಮಿಗಳ ನೇತೃತ್ವದಲ್ಲಿ ತಯಾರಾದ ನಾಟಕಗಳನ್ನು ನೋಡಬೇಕೆನಿಸುತ್ತಿದೆ. ಅವುಗಳ ಸಿಡಿ (CD) ಏನಾದರೂ ಸಿಗುತ್ತವೆಯೇ, ದಯಮಾಡಿ ತಿಳಿಸಿ. ಸಾಣೆಹಳ್ಳಿ ಶ್ರೀಗಳ ಸಾಮಾಜಿಕ ಕಳಕಳಿ ಅವರ ಮತ್ತೆ ಕಲ್ಯಾಣ ಕಾರ್ಯಕ್ರಮದಿಂದಾಗಿ ರಾಜ್ಯದ ಸಮಸ್ತ ಜನರಿಗೆ ಪರಿಚಯವಾಯಿತು. ಅವರ ಲೇಖನ ಬಹಳ ಚನ್ನಾಗಿದೆ.
Shankarappa
Jan 23, 2020ಶಿವೇತರ ಗುಣಗಳೇ ತುಂಬಿ ತುಳುಕುತ್ತಿರುವ ನಮ್ಮ ಸಮಾಜಕ್ಕೆ ಭವಿಷ್ಯ ಇದೆಯೇ?
Basavannegowda Hiriyur
Jan 28, 2020ಉತ್ತಮ ಸಂಸ್ಕಾರಗಳು ಹೇಗೆ ಬರುತ್ತವೆ? ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡುವುದಷ್ಟೇ ಅಲ್ಲ, ಅವರನ್ನು ಮುಖ್ಯವಾಗಿ ಸುಸಂಸ್ಕೃತರನ್ನಾಗಿ ಮಾಡಬೇಕೆನ್ನುವ ಆಶಯ ಬಹಳ ಮುಖ್ಯವಾಗಿದೆ. ಇಂದಿನ ಸಮಾಜ ಉತ್ತಮ ನಡವಳಿಕೆಯ ಕೊರತೆಯಿಂದ ತೀವ್ರವವಾಗಿ ಬಳಲುತ್ತಿದೆ. ಶಿವಮಯ ಗುಣಗಳನ್ನು ಬೆಳೆಸುವ ಕೆಲಸ ಮನೆ ಮತ್ತು ಶಾಲೆಗಳಿಂದ ಆರಂಬವಾಗಬೇಕು.
ಸಾವಿತ್ರಿ ಕನಕಾಪುರ
Jan 28, 2020ಸ್ವಾಮಿಗಳವರ ರಂಗತಂಡದಿಂದ ಇನ್ನಷ್ಟು ಶರಣರ ನಾಟಕಗಳು ಬರಲಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಪ್ರದರ್ಶನಗೊಳ್ಳಲಿ.