ಶಾಸ್ತ್ರ ಘನವೆಂಬೆನೆ?
Share:

ಶಾಸ್ತ್ರ ಘನವೆಂಬೆನೆ?

ಪತ್ರಕರ್ತಳಾದ ಆರಂಭದ ದಿನಗಳು. ಎಲ್ಲದರಲ್ಲೂ ಉತ್ಸಾಹ. ತಕ್ಕಮಟ್ಟಿನ ಬರವಣಿಗೆ ಬಿಟ್ಟರೆ ಪತ್ರಿಕೋದ್ಯಮದ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ದಿನದಿನವೂ ಹೊಸತು, ವಿಭಿನ್ನ ಜನರೊಂದಿಗೆ ಒಡನಾಟ, ವಿವಿಧ ಕ್ಷೇತ್ರಗಳ ಪರಿಚಯ, ಅಪರಿಚಿತ ವಿಷಯಗಳನ್ನು ತಿಳಿದುಕೊಳ್ಳುವ ಸನ್ನಿವೇಶಗಳು, ಗಣ್ಯರೊಂದಿಗೆ, ಸಾಮಾನ್ಯರೊಂದಿಗೆ ಮುಖಾಮುಖಿಯಾಗುವ ಅವಕಾಶ. ಆಗ ಕಲಿತ ಮೊದಲ ಪಾಠ- ಪ್ರಶ್ನಿಸುವುದು. ರಾಜ್ಯಶಾಹಿಯನ್ನು, ಅಧಿಕಾರವನ್ನು ಹಿಂಜರಿಕೆಯಿಲ್ಲದೆ ಪ್ರಶ್ನಿಸುವ ವೇದಿಕೆಯನ್ನು ಪತ್ರಿಕೋದ್ಯಮ ಕಲ್ಪಿಸಿ ಕೊಡುತ್ತದೆ. ಎಲ್ಲಿ, ಹೇಗೆ, ಏನು, ಯಾಕೆ ಎನ್ನುವ ಎರಡಕ್ಷರಗಳು ಎಲ್ಲ ಸಂಭಾಷಣೆಗಳೊಂದಿಗೆ ಸಹಜವೆಂಬಂತೆ ಅಂಟಿಕೊಂಡಿರುತ್ತಿದ್ದವು. ಹಾಗೆ ಎದ್ದ ಪ್ರಶ್ನೆಗಳು ಬಹು ದೂರಕ್ಕೆ ಕರೆದೊಯ್ಯುತ್ತಿದ್ದವು…

ಸಂದರ್ಭಗಳಿಗೆ ತಕ್ಕಂತೆ ವಿಭಿನ್ನ ಮಾದರಿಯ ಪ್ರಶ್ನೆಗಳಿರುತ್ತವೆ. ಕೆಲವಕ್ಕೆ ವಿಷಯ ತಿಳಿಯುವ ಕುತೂಹಲ; ಕೆಲವಕ್ಕೆ ಉತ್ತರ ಕಂಡುಕೊಳ್ಳುವ ಹಂಬಲ, ಕೆಲವಕ್ಕೆ ಅನ್ಯಾಯಗಳಿಗೆ ಮುಖಾಮುಖಿಯಾಗುವ ದಿಟ್ಟತನ. ಕುತೂಹಲದ ಪ್ರಶ್ನೆಗಳು ವಿಶ್ವವನ್ನು ತಡಕಾಡಿವೆ, ತಾರೆಗಳತ್ತ ಕರೆದೊಯ್ದಿವೆ, ವಿಜ್ಞಾನ, ತಂತ್ರಜ್ಞಾನಗಳನ್ನು ವಿಸ್ತರಿಸಿವೆ. ಯಥಾಸ್ಥಿತಿಗೆ ಸವಾಲೊಡ್ಡಿವೆ, ಜಟಿಲ ಸಮಸ್ಯೆಗಳಿಗೆ ಹೊಸ ರೂಪು ನೀಡಿವೆ, ಕ್ರಾಂತಿಕಾರಿ ವಿಚಾರಗಳಿಗೆ ಜನ್ಮಕೊಟ್ಟಿವೆ.

ವಿಜ್ಞಾನ ಮತ್ತು ತತ್ವಜ್ಞಾನಗಳು ಮಾನವನ ಇತಿಹಾಸದುದ್ದಕ್ಕೂ ಒಂದರೊಳಗೊಂದು ಹೆಣೆದುಕೊಂಡಂತೆ ಬೆಳೆದು ಬಂದದ್ದೇ ಕುತೂಹಲದ ಪ್ರಶ್ನೆಗಳೊಂದಿಗೆ. ವಿಜ್ಞಾನವು ನೈಸರ್ಗಿಕ ಜಗತ್ತನ್ನು ಅನ್ವೇಷಿಸುತ್ತಾ ಸಾಗಿದರೆ, ತತ್ವಜ್ಞಾನವು ಲೋಕದ ಪರಿಯನ್ನು ವಿವರಿಸುತ್ತಾ ಬಂದಿದೆ. ಅದೇ ರೀತಿ ಧರ್ಮ ಮತ್ತು ವಿಜ್ಞಾನಗಳು ವಿರೋಧಿಗಳಲ್ಲ. ಹಾಗೆಯೇ ಪ್ರಶ್ನಾತೀತವೂ ಅಲ್ಲ. ಚರ್ಚ್ ನಂಬಿಕೆಗಳಿಗೆ ವಿರುದ್ಧವಾಗಿದ್ದರೂ ಆಧುನಿಕ ವಿಜ್ಞಾನದ ಪಿತಾಮಹನೆಂದೇ ಖ್ಯಾತನಾದ ಗೆಲಿಲಿಯೋ ಭೂಕೇಂದ್ರಿತ ವಿಶ್ವವನ್ನು ಪ್ರಶ್ನಿಸಿ ಸೂರ್ಯ ಕೇಂದ್ರಿತ ಸೌರವ್ಯೂಹವನ್ನು ಪ್ರಯೋಗದ ಮೂಲಕ ತೋರಿಸಿಕೊಟ್ಟ. ಇಲ್ಲವಾದರೆ ಮತ್ತೆ ಅದೆಷ್ಟು ಕಾಲ ಸೌರವ್ಯೂಹದ ಬಗ್ಗೆ ಅದೇ ತಪ್ಪು ತಿಳಿವಳಿಕೆಯಲ್ಲಿರುತ್ತಿದ್ದೆವೊ ಏನೋ! ಸತ್ಯ ಹೇಳಿದ ಗೆಲಿಲಿಯೊ ಜೈಲು ಸೇರಿದ. ಆದರೆ ಅಂದು ಆತ ತೋರಿದ ಧೈರ್ಯ ನಾಗರಿಕತೆಯ ಬೆಳವಣಿಗೆಯಲ್ಲಿ ಹೊಸ ದಿಶೆ ತೋರಿಸಿತು.

ನಿನ್ನೆ ಮೊನ್ನೆಯ ತನಕ ಬಿಗ್ ಬ್ಯಾಂಗ್ ಸಿದ್ಧಾಂತದಿಂದ ವಿಶ್ವ ರಚನೆಯಾಗಿದೆ ಎಂದು ನಂಬಿದ್ದ ವಿಜ್ಞಾನವು ಈಗ ಬಿಗ್ ಬೌನ್ಸ್ ಬಗ್ಗೆ ಯೋಚಿಸುತ್ತಿದೆ; ವಿಶ್ವದ ಅನಂತತೆಯ (universe) ಬಗ್ಗೆ ಮಾತನಾಡುತ್ತಿದ್ದ ವಿಜ್ಞಾನಿಗಳು ಅನಂತಾನಂತ ವಿಶ್ವಗಳ (multiverse) ನೈಸರ್ಗಿಕ ಆಯ್ಕೆಯ ಕುರಿತಾಗಿ ಯೋಚಿಸುತ್ತಿದ್ದಾರೆ. ಪ್ರಶ್ನೆಗಳಿಗೆ ಮೈಯೊಡ್ಡದ, ಸುಧಾರಣೆಗೆ ತೆರೆದುಕೊಳ್ಳದ ಯಾವ ದೊಡ್ಡ ಸಂಶೋಧನೆಗಳೂ ಇಲ್ಲ. ವೈಜ್ಞಾನಿಕ ಕ್ಷೇತ್ರದಲ್ಲಿ ಪ್ರಶ್ನಿಸುವುದು ಹಿಂದಿನಷ್ಟು ಇಂದು  ಅಪಾಯಕಾರಿಯಲ್ಲದಿದ್ದರೂ ಅದೇ ಬೆಳವಣಿಗೆಯನ್ನು ಧರ್ಮ, ದೇವರು, ರೂಢಿಗತ ವ್ಯವಸ್ಥೆ, ನಂಬಿಕೆಗಳ ವಿಷಯದಲ್ಲಿ ವಿಸ್ತರಿಸುವುದು ಸಾಧ್ಯವಿಲ್ಲ.

ಪ್ರಪಂಚವು ಸಾಂಪ್ರದಾಯಿಕ ನಂಬಿಕೆಗಳಿಂದ ತುಂಬಿತುಳುಕುತ್ತಿದೆ. ಧರ್ಮದ ಭಾಗವಾಗಿರುವ ಸಂಪ್ರದಾಯಗಳು ಬದುಕಿನಲ್ಲಿ ಮೇಲುಗೈ ಸಾಧಿಸಿವೆ. ನಮ್ಮ ಮೇಲೆ ಹೇರಲ್ಪಟ್ಟ ಇಂಥ ನಂಬಿಕೆಗಳು, ಚಿಂತನೆಗಳು ನಮ್ಮನ್ನು ರೂಪಿಸುತ್ತವೆ. ಯಾವ ದುರುದ್ದೇಶವಿಲ್ಲದೆ ಹೋದರೂ ಇವೆಲ್ಲವೂ ನಮ್ಮಲ್ಲಿ ಬೇರು ಬಿಟ್ಟು ಕುರುಡಾಗಿಸುತ್ತವೆ. ನಾವು ನಂಬಿದ್ದೇ ಸರಿ ಎನ್ನುವ ಷಡತ್ವಕ್ಕೆ ಸಿಲುಕಿಸುತ್ತವೆ. ಆದರೆ ನಾವು ಸತ್ಯವೆಂದು ನಂಬಿಕೊಂಡ ಸಂಗತಿಗಳು ನಿಜಕ್ಕೂ ಸತ್ಯವಾಗಿವೆಯೇ? ಇರಬಹುದು, ಅಥವಾ ಇರಲಿಕ್ಕಿಲ್ಲ. ಆದರೆ ನಮ್ಮ ಬದುಕಿಗೆ ಸಾಗ ಹಾಕಿದವುಗಳನ್ನೆಲ್ಲ ತಲೆಯ ಮೇಲೆ ಹೊತ್ತುಕೊಂಡು ಹೋಗುತ್ತಿರುವುದು ಸರಿಯೇ? ಯಾವ ಧರ್ಮ ಅಥವಾ ತತ್ವಸಿದ್ಧಾಂತವನ್ನೇ ಆಗಲಿ, ಯಾವ ಸಂತ, ಮಹಾತ್ಮರೇ ಇರಲಿ ಪರಿಶೀಲಿಸದೆ, ಪ್ರಶ್ನಿಸದೇ ಒಪ್ಪುವುದು ಸಾಧುವಲ್ಲ. ಆರಂಭಿಕ ಉಪನಿಷತ್ ಎಂದೇ ಹೆಸರಾದ ಪ್ರಶ್ನಾ-ಉಪನಿಷತ್, ಪ್ರಶ್ನೆ ಉತ್ತರಗಳ ರೂಪದಲ್ಲಿದೆ. ಬುದ್ಧ ಕೂಡ ತನ್ನ ಅನುಯಾಯಿಗಳಿಗೆ ಪ್ರಶ್ನಿಸದೆ ಏನನ್ನೂ, ಯಾರನ್ನೂ ಒಪ್ಪಬೇಡಿ, ನನ್ನನ್ನು ಕೂಡ ಎಂದು ಹೇಳುತ್ತಿದ್ದ. ಟಿಬೆಟನಲ್ಲಿರುವ ಬುದ್ಧ ಸನ್ಯಾಸಿಗಳು ಈಗಲೂ ಈ ಅಭ್ಯಾಸ ಇಟ್ಟುಕೊಂಡಿದ್ದಾರೆ.

ಆಶ್ಚರ್ಯವೆಂದರೆ ಪ್ರಶ್ನೆಗಳ ಬಗ್ಗೆ ಕೆಲವರಿಗೆ ಅಲಕ್ಷ್ಯ, ಮತ್ತೆ ಕೆಲವರಿಗೆ ಹಿಂಜರಿಕೆ, ಬಹುತೇಕರಿಗೆ ಭಯ. ಪ್ರಶ್ನೆಗಳಿಗೆ ಮುಖಾಮುಖಿಯಾಗುವ ಆತಂಕಕ್ಕಿಂತ ಅದು ತಂದೊಡ್ಡಬಹುದಾದ ಬದಲಾವಣೆಗಳಿಗೆ ಸಿದ್ಧವಿಲ್ಲದ ಮನಸ್ಥಿತಿ. ಸಂಪ್ರದಾಯಗಳ ವಿಷಯ ಬಂದರೆ ಸಾಕು ಜನರು ಮನಸ್ಸುಗಳನ್ನು ಮುಚ್ಚಿಕೊಳ್ಳುತ್ತಾರೆ. ಹೇಗೋ ಇದ್ದುದರಲ್ಲಿ ಹೊಂದಿಕೊಂಡು ಚೆನ್ನಾಗಿದ್ದೇವೆ, ಯಾಕೆ ಇಲ್ಲದ ಉಸಾಬರಿ ಎನ್ನುವ ಜಾಯಮಾನ. ಮುಖ್ಯವಾಗಿ ತಾವು ಇದುವರೆಗೆ ಅಂದುಕೊಂಡ, ನಂಬಿಕೊಂಡ ಭಾವನೆಗಳಿಗೆ ಧಕ್ಕೆಯಾಗಬಹುದೇ ಎನ್ನುವ ಭಯ. ಅವುಗಳನ್ನು ತರ್ಕದಿಂದ, ವೈಜ್ಞಾನಿಕ ಮನೋಭಾವದಿಂದ ಎದುರಾಗಲು ಆತಂಕ. ಆದರೆ ಪ್ರವಾಹದ ವಿರುದ್ಧ ಈಜುವವನಿಗೆ ಮಾತ್ರ ನಿಸರ್ಗ ತನ್ನ ರಹಸ್ಯಗಳನ್ನು ಬಿಟ್ಟುಕೊಡುತ್ತದಂತೆ.

“ಶೋಧನೆಗೆ ಒಳಪಡದ ಜೀವನ ಜೀವಿಸಲು ಯೋಗ್ಯವಾದುದಲ್ಲ”

ಪ್ರಶ್ನೆಗಳ ಮೂಲಕ ಯುವಜನರನ್ನು ದಾರಿ ತಪ್ಪಿಸುತ್ತಿದ್ದಾನೆಂಬ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಗ್ರೀಕ್ ತತ್ವಜ್ಞಾನಿ ಸಾಕ್ರಟಿಸ್, ತನ್ನ ವಿಚಾರಣೆಯ ಕೊನೆಯಲ್ಲಿ ಹೇಳುವ ಮಾತಿದು. ಇದನ್ನು ಪ್ಲೇಟೊ ‘ದಿ ಅಪಾಲಜಿ’ ಎನ್ನುವ ಕೃತಿಯಲ್ಲಿ ದಾಖಲಿಸಿದ್ದಾನೆ. ತನ್ನ ಯಥಾರ್ಥವಾದದಿಂದ ಯುವ ಮನಸ್ಸುಗಳನ್ನು ಭ್ರಷ್ಟಗೊಳಿಸುತ್ತಿದ್ದಾನೆಂಬ ಆಪಾದನೆಯನ್ನು ಸಾಕ್ರಟಿಸ್ ಎದುರಿಸಬೇಕಾಯಿತು. ಅದಕ್ಕಾಗಿ ವಿಷ ಸೇವಿಸಬೇಕಾಗಿ ಬಂದರೂ ಆತ ಹಿಮ್ಮೆಟ್ಟಲಿಲ್ಲ. ಆತನ ವೈಚಾರಿಕ ಪ್ರಶ್ನಾವಳಿಯ ಪ್ರಭಾವ ಪ್ಲೇಟೊ ಮತ್ತು ಅರಿಸ್ಟಾಟಲ್ ರಂತಹ ದೊಡ್ಡ ವಿಚಾರವಾದಿ ತತ್ವಜ್ಞಾನಿಗಳ ಪರಂಪರೆಗೆ ಕಾರಣವಾಯಿತು.

ಕ್ರಾಂತಿಗಳಾಗುವುದು ಪ್ರಶ್ನೆಗಳ ಮೂಲಕವೇ. ಹಾಗೆಯೇ ಪ್ರಶ್ನೆಗಳ ಗುಣಮಟ್ಟ ಜೀವನಮಟ್ಟವನ್ನು ನಿರ್ಧರಿಸುತ್ತದೆ. ಇಂಗ್ಲಿಷ್ ಕವಿ, ಸಾಂಸ್ಕೃತಿಕ ಚಿಂತಕ ಮ್ಯಾಥ್ಯೂ ಆರ್ನಾಲ್ಡ್,  ವ್ಯವಹಾರಗಳ ಚಾಣಾಕ್ಷತೆಗೆ ಹೆಸರಾದ ಇಂಗ್ಲೆಂಡನ್ನು ಮತ್ತು ತಾತ್ವಿಕ ಪರವಶತೆಯ ಫ್ರಾನ್ಸನ್ನೂ ಹೋಲಿಸುತ್ತಾ ಹೀಗೆ ಹೇಳುತ್ತಾರೆ: “ಇಂಗ್ಲೆಂಡಿನಲ್ಲೂ ಕ್ರಾಂತಿಯಾಯಿತು, ಆ ಕ್ರಾಂತಿ ತನ್ನ ನಾಡಿಗೆ ಕೇಳಿದ ಪ್ರಶ್ನೆ “ಇದು ಕಾನೂನು ಬದ್ಧವೆ?” ಎಂದು. ಫ್ರಾನ್ಸನಲ್ಲೂ ಕ್ರಾಂತಿಯಾಯಿತು. ಆದರೆ ಫ್ರಾನ್ಸನ ಕ್ರಾಂತಿ ಮೂಲಭೂತ ಪ್ರಶ್ನೆ ಕೇಳಿತು, “ದೇಶದ ವ್ಯವಸ್ಥೆ ವೈಚಾರಿಕವಾಗಿ ಸಮರ್ಪಕವೆ?” ಎಂದು. ಹೀಗೆ ಕೇಳುವ ಮೂಲಕ ಎಲ್ಲ ದೇಶಗಳಿಗೂ, ಕಾಲಗಳಿಗೂ ಮಾದರಿಯಾಗುವ ಬದಲಾವಣೆಗೆ ಕಾರಣವಾಯಿತು. ಅಂದಿನ ಕ್ರಾಂತಿಯ ಫಲವಾಗಿ ಇಂದಿಗೂ ಫ್ರಾನ್ಸ್ ಇಂಗ್ಲೆಂಡಿಗಿಂತ ಹೆಚ್ಚು ಜೀವಂತ ರಾಷ್ಟ್ರವಾಗಿದೆ. (ಯು.ಆರ್.ಅನಂತಮೂರ್ತಿಯವರು ತಮ್ಮ ಪೂರ್ವಾಪರ ಪುಸ್ತಕದಲ್ಲಿ ಇದನ್ನು ದಾಖಲಿಸಿದ್ದಾರೆ).

ಮೇಲಿನ ಸಂದರ್ಭಗಳನ್ನು ಭಾರತದ ಇತಿಹಾಸದೊಂದಿಗೆ ಹೋಲಿಸಿ. ಇಲ್ಲಿ ಏನಾಗಿತ್ತು? ದೇವರು-ಧರ್ಮಗಳ ಹೆಸರಿನಲ್ಲಿ ಮನುಷ್ಯನ ಬದುಕು ಛಿದ್ರಗೊಂಡಿತ್ತು. ವೈಚಾರಿಕತೆ ಸತ್ತು ಹೋಗಿತ್ತು. ವೇದ ಕಾಲದ ಕೊನೆಯಲ್ಲಿ ವರ್ಣಾಶ್ರಮ ವ್ಯವಸ್ಥೆ ಭಾರತೀಯ ಸಮಾಜದ ಮೇಲೆ ಭದ್ರ ಹಿಡಿತ ಸಾಧಿಸತೊಡಗಿತ್ತು. ಜಾತಿ ವ್ಯವಸ್ಥೆಯ ಕರಿನೆರಳು ಎಲ್ಲೆಡೆ ಚಾಚಿಕೊಳ್ಳುತ್ತಿತ್ತು. ಮೊದಲು ಇದನ್ನು ಪ್ರಶ್ನಿಸಿದವರು ಚಾರ್ವಾಕರು, ಸುಮಾರು ಕ್ರಿ.ಪೂ7-8ನೇ ಶತಮಾನದಲ್ಲಿ.ಆದರೆ ಅವರನ್ನು ಅಧರ್ಮಿಗಳೆಂದು, ನಾಸ್ತಿಕರೆಂದು ಅವರತ್ತ ಸಾಮಾನ್ಯ ಜನ ಕಿವಿಗೊಡದಂತೆ ನೋಡಿಕೊಳ್ಳಲಾಯಿತು. ನಂತರದಲ್ಲಿ ಕಾಣಿಸಿಕೊಂಡವ ಬುದ್ಧ ಗುರು. ಕಪೋಲ ಕಲ್ಪಿತ ದೈವಗಳ ತೆಕ್ಕೆಯಿಂದ ಮನುಷ್ಯನನ್ನು ಬಿಡಿಸಿ ಸತ್ಯದ ಹಾದಿಗೆ ಹಚ್ಚಿದ. ಬುದ್ಧನ ನಂತರ ನಮ್ಮ ಭೂಪಟದಲ್ಲಿ ನಿರ್ಭಯವಾಗಿ ಮಾತನಾಡಿದವರು ಬಸವಾದಿ ಶರಣರು. ಸಮಾಜದ 90 ಕ್ಕೂ ಹೆಚ್ಚು ಭಾಗವಾಗಿದ್ದ ದೀನರು, ದಲಿತರು, ಮಹಿಳೆಯರು, ತಮ್ಮನ್ನು ತುಳಿತಕ್ಕೊಳಗಾಗುವಂತೆ ಮಾಡಿದ್ದ ವ್ಯವಸ್ಥೆಯನ್ನು ಕಟಕಟೆಯಲ್ಲಿ ನಿಲ್ಲಿಸಿದರು. ಅವಮಾನಿತ ಜನ ಸ್ವಾಭಿಮಾನಿಯಾಗಿ ಎದೆ  ಸೆಟೆದು ಪ್ರಶ್ನಿಸ ತೊಡಗಿದಾಗ ಸಮಾಜದಲ್ಲಿ ಹೊಸ ಚೇತನದ ಉದಯವಾದಂತಾಯಿತು. ದಾಸ್ಯತ್ವವನ್ನು ಪ್ರಶ್ನಿಸುವ ಚಿಂತನಶೀಲ ಸಮುದಾಯವೊಂದು ಸಮಾಜದ ಕೆಳಸ್ತರದಲ್ಲಿ ಉದ್ಭವಿಸಿತು. ಇದರ ಪರಿಣಾಮವೆಂಬಂತೆ ದಲಿತ ದನಿಗಳು, ಮೂಲಭೂತವಾದಿಗಳನ್ನು ಮೂಲೋತ್ಪಾಟನೆ ಮಾಡುವ ಚಿಂತನೆಗಳು, ಸ್ತ್ರೀವಾದಿ ಆಲೋಚನೆಗಳು, ಆಧ್ಯಾತ್ಮದ ಹೊಸ ಹೊಳಹುಗಳು ವಚನಗಳಲ್ಲಿ ಕಾಣಿಸಿಕೊಂಡವು.

ಮುಕ್ತಿರಾಮೇಶ್ವರ ಶರಣರ ವಚನ ನೋಡಿ:
ಸತ್ಯವನು ಅಸತ್ಯವನು ಪ್ರತ್ಯಕ್ಷ ಪ್ರಮಾಣಿಸಿದಲ್ಲದೆ
ನಿಶ್ಚಯವನರಿಯಬಾರದು,
ಗುರುವಾದಡೂ ಲಿಂಗವಾದಡೂ ಜಂಗಮವಾದಡೂ
ಪರೀಕ್ಷಿಸಿ ಹಿಡಿಯದವನ ಭಕ್ತಿ, ವಿರಕ್ತಿ,
ತೂತಕುಂಭದಲ್ಲಿಯ ನೀರು, ಸೂತ್ರ ತಪ್ಪಿದ ಬೊಂಬೆ, ನಿಜನೇತ್ರ ತಪ್ಪಿದ
ದೃಷ್ಟಿ…

ಕುರುಡು ನಂಬಿಕೆಗಳು ಬದುಕನ್ನು ಕಟ್ಟಲಾರವು. ಆಧ್ಯಾತ್ಮದ ದಾಹ ಹಿಂಗಿಸಲಾರವು. ಸ್ವಲ್ಪ ಹೊತ್ತಿನಲ್ಲೇ ಬರಿದಾಗಲಿರುವ ತೂತ ಕುಂಭದಲ್ಲಿರುವ ಸೋರಿ ಹೋಗುವ ನೀರು ಬಾಳಿನುದ್ದಕೂ ಹೇಗೆ ದಾಹ ತಣಿಸೀತು? ಸ್ವತಂತ್ರ ವಿಚಾರಶೀಲರಾದ ಶರಣರು ಹೀಗೆ ಯಾವುದನ್ನೂ ಒರೆಗೆ ಹಚ್ಚದೆ ಒಪ್ಪಿದವರಲ್ಲ.

“ಕುಲ ಅಕುಲಂಗಳುಂಟೆ? ವರ್ಣಾವರ್ಣಂಗಳುಂಟೆ?, ಆತ್ಮಂಗೆ ಆವ ಕುಲವುಂಟು ಹೇಳಿರೋ?…” ಎಂದು ಕುಲ, ವರ್ಣ, ಮತ ಗೋತ್ರಗಳನ್ನು ಜಾಲಾಡಿದರು. ಹುಟ್ಟಿನಿಂದಲೇ ಶ್ರೇಷ್ಠತೆಯ ಪಟ್ಟ ಕಟ್ಟಿಕೊಳ್ಳುವವರನ್ನು ಮೈಗಳ್ಳರೆಂದು, ಸಮಾಜವನ್ನು ಛಿದ್ರ ಮಾಡುವ ಧೂರ್ತರೆಂದೂ ಛೇಡಿಸಿದರು:

ಹೊಲೆಯ ಹೊಲೆಯ ಎಂದಡೆ ಹೊಲೆಯರೆಂತಪ್ಪರಯ್ಯಾ?
ಹೊರಕೇರಿಯಲ್ಲಿರುವ ಹೊಲೆಯ ಊರೊಳಗಿಲ್ಲವೆ?
ತಾಯಿಗೆ ಬೈದವನೇ ಹೊಲೆಯ, ತಂದೆಗೆ ಉತ್ತರ ಕೊಟ್ಟವನೇ ಹೊಲೆಯ…
(ಅಂಬಿಗರ ಚೌಡಯ್ಯ)

ಬ್ರಾಹ್ಮಣರಾಗಿದ್ದೂ ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಪ್ರಶ್ನಿಸುವ ಮೂಲಕ ಬಸವಣ್ಣನವರು ಸಮಾಜದಲ್ಲಿ ವಿಚಾರಗಳ ತರಂಗಗಳನ್ನೆಬ್ಬಿಸಿದರು. ಆ ಮೂಲಕ ಇಡೀ ಸಮಾಜವನ್ನು ಆತ್ಮಶೋಧನೆಗೆ ಒಡ್ಡಿದರು.

ಏನಯ್ಯಾ ವಿಪ್ರರು ನುಡಿದಂತೆ ನಡೆಯರು, ಇದೆಂತಯ್ಯಾ
ತಮಗೊಂದು ಬಟ್ಟೆ, ಶಾಸ್ತ್ರಕೊಂದು ಬಟ್ಟೆ !

ವೇದಶಾಸ್ತ್ರದವರ ಹಿರಿಯರೆನ್ನೆ,ಮಾಯಾಭ್ರಾಂತಿ ಕವಿದ ಗೀತಜ್ಞರ ಹಿರಿಯರೆನ್ನೆ!ಇವರು ಹಿರಿಯರುಗಳೇ?…. ಎಂದು ಪ್ರಶ್ನಿಸಿದರು.

ಜನಸಾಮಾನ್ಯರ ಬದುಕಿನ ಮೇಲೆ ಶಾಸ್ತ್ರ- ಸಂಪ್ರದಾಯಗಳನ್ನು ಉರುಳಿಸುತ್ತಾ ಬಂದವರಿಗೆ ಹಾಕಿದ ನೇರ ಪ್ರಶ್ನೆ ಇದು. ಆದರ್ಶಗಳನ್ನು ಹೇಳುವವರು ಆಚರಣೆಯಲ್ಲಿ ತದ್ವಿರುದ್ಧವಾಗಿ ನಡೆದುಕೊಂಡರೆ ಅವರನ್ನು ಹೇಗೆ ಸಹಿಸುವುದು? ಧರ್ಮ-ಕರ್ಮಗಳ ಹೆಸರಿನಲ್ಲಿ ಭಯ-ಭೀತಿಗಳನ್ನು ಬಿತ್ತಿ ಮಾನಸಿಕ ಗುಲಾಮರನ್ನಾಗಿ ಮಾಡಿಕೊಂಡಿದ್ದ ಸನಾತನಿಗಳು ಬಹುಶಃ ಆ ತನಕ ಇಂಥ ನೇರ ಮುಖಾಮುಖಿ ಎದುರಿಸಿರಲಿಕ್ಕಿಲ್ಲ.

ಆ ದಿನಗಳಲ್ಲಿ ವೇದಗಳ ಪಾರಮ್ಯ ಅಧಿಕವಾಗಿತ್ತು. ಸಂಪ್ರದಾಯಸ್ಥರು ಅದನ್ನು ಜ್ಞಾನದ ಆಕರವಾಗಿಯೂ, ಅಧಿಕಾರದ ಮೂಲವಾಗಿಯೂ ಬಳಸಿಕೊಳ್ಳುತ್ತಿದ್ದರು. ವೇದಕ್ಕೆ ಇತಿಹಾಸವಿಲ್ಲ, ಅದು ಅಪೌರುಷೇಯ ಎನ್ನುವಲ್ಲಿ ಅವು ಪ್ರಶ್ನಾತೀತ ಎನ್ನುವ ಧೋರಣೆ ಎಲ್ಲೆಡೆ ಪ್ರಚಲಿತವಾಗಿತ್ತು. ಆದರೆ ಪುರಾತನ ಗ್ರಂಥಗಳಲ್ಲಿದೆ ಎಂದ ಮಾತ್ರಕ್ಕೆ ಯಾವುದೇ ವಿಷಯ ಪ್ರಶ್ನಾತೀತವಾಗುವುದಿಲ್ಲ ಎಂದರು ಬಸವಣ್ಣನವರು.

ಶಾಸ್ತ್ರ ಘನವೆಂಬೆನೆ? ಕರ್ಮವ ಭಜಿಸುತ್ತಿಹುದು!
ವೇದ ಘನವೆಂಬೆನೆ? ಪ್ರಾಣಿವಧೆಯ ಹೇಳುತ್ತಿದೆ!
ಶ್ರುತಿ ಘನವೆಂಬೆನೆ? ಮುಂದಿಟ್ಟು ಅರಸುತ್ತಲಿದೆ!
ಅಲ್ಲೆಲ್ಲಿಯೂ ನೀವಿಲ್ಲದ ಕಾರಣ, ತ್ರಿವಿಧ ದಾಸೋಹದಲ್ಲಲ್ಲದೆ
ಕಾಣಬಾರದು, ಕೂಡಲಸಂಗಮದೇವಾ.

ಸತ್ಯದ ಸ್ವರೂಪ ಜ್ಞಾನ ವೇದಾದಿಗಳಿಗೆ ನಿಲುಕುವಂತಹುದಲ್ಲ. ಇನ್ನು ಘನವೆಂದು ಇವುಗಳನ್ನು ಮೆರೆಸುವುದು ಯಾತಕ್ಕಾಗಿ? ಹಿಂಸೆ, ಕರ್ಮಕಾಂಡ ಮತ್ತು ಭವಿಷ್ಯದ ಫಲದಾಸೆಗಳನ್ನು ಹೇಳುವ ಇವುಗಳ ಅಗತ್ಯ ಜೀವಕ್ಕೆ ಖಂಡಿತವಾಗಿಯೂ ಇಲ್ಲ. ಅದಕ್ಕೆ ಉರಿಲಿಂಗಪೆದ್ದಿ ಶರಣರು, “ವೇದಂಗಳು ದೈವವೆಂಬ ವಿಪ್ರರಂತಹ ಮರುಳರುಂಟೇ ತ್ರಿಜಗದಲ್ಲಿ?” ಎಂದು ಕೇಳುತ್ತಾರೆ.

ಸಂಪ್ರದಾಯಗಳನ್ನು ನಿಷ್ಠುರವಾಗಿ ಪ್ರಶ್ನಿಸದೇ ಬೇರೆ ದಾರಿಯಿಲ್ಲ. ಸ್ವರ್ಗ- ನರಕ-ಮೋಕ್ಷಗಳ ಕಲ್ಪನೆ ಬಿತ್ತಿ, ದೇವರನ್ನು ಗುತ್ತಿಗೆಗೆ ತೆಗೆದುಕೊಂಡವರಂತೆ ಪೌರೋಹಿತ್ಯ-ಪೂಜಾರಿಕೆ ನಡೆಸುತ್ತಿದ್ದ ಪದ್ಧತಿಯೇ ಧಾರ್ಮಿಕ ಶೋಷಣೆಗೆ ಮೂಲ ಕಾರಣ.

ತನ್ನಾಶ್ರಯದ ರತಿಸುಖವನುತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೇ?
ತನ್ನ ಲಿಂಗಕ್ಕೆ ಮಾಡುವ ನಿತ್ಯ ನೇಮವ ತಾ ಮಾಡಬೇಕಲ್ಲದೆ
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೇ?

ಎಂಥ ಗಹನ ಅರ್ಥ ಕೊಡುವ ಎಷ್ಟು ಸರಳ ಪ್ರಶ್ನೆಗಳು! ‘ಕೆಮ್ಮನೆ ಉಪಚಾರಕ್ಕೆ’ ಅಂದರೆ ಕೇವಲ ತೋರಿಕೆಗಾಗಿ ಮಾಡಿಸುವ ಇಂಥ ಪೂಜೆಗಳಿಗೆ ಯಾವುದೇ ಹುರುಳಿಲ್ಲ. ಇದಕ್ಕೆ ಪರ್ಯಾಯವಾಗಿ ಅವರು ಕೊಟ್ಟ ಇಷ್ಟಲಿಂಗವು ಬೇರೊಬ್ಬರಿಂದ ಮಾಡಿಸಲಾಗದ ಪೂಜೆ. ತನ್ನ ವಿಕಾಸಕ್ಕೆ ತಾನೇ ಮಾಡಿಕೊಳ್ಳುವ ಪೂಜೆ.

“ನೀನು ಸಂಪಾದಿಸಿದ ಸತ್ಯವನ್ನು ಕಾಣುವ ಅಧಿಕಾರ ನನಗಿಲ್ಲವೇ?”

ಸಾಕು ತಾಯಿ ಮಹಾಪ್ರಜಾಪತಿ ಗೋತಮಿಯ ಪ್ರಶ್ನೆ ಬುದ್ಧನು ಮಹಿಳೆಯರಿಗೆ ತನ್ನ ಧರ್ಮದ ಬಾಗಿಲು ತೆರೆಯುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಧರ್ಮಶಾಸ್ತ್ರಗಳಲ್ಲಿ ಹೊನ್ನು, ಹೆಣ್ಣು, ಮಣ್ಣುಗಳಿಗೆ ಮಾಯೆಯ ಪಟ್ಟ. ದೈಹಿಕ ಕಾರಣದಿಂದ (ಮುಟ್ಟಾಗುವುದರಿಂದ) ಸಾಮಾಜಿಕವಾಗಿ ಶೂದ್ರಳಾಗಿಯೂ, ಮನಸ್ಸಿನ ಸ್ವಾಸ್ಥ್ಯವನ್ನು ಕೆಡಿಸುವುದರಿಂದ ಆಧ್ಯಾತ್ಮಿಕವಾಗಿ ಮಾಯೆಯಾಗಿಯೂ ಹೆಣ್ಣನ್ನು ನಿಕೃಷ್ಟವಾಗಿ ಕಾಣಲಾಗಿತ್ತು. ತನ್ನ ದೌರ್ಬಲ್ಯವನ್ನು ಪುರುಷ ಸಮಾಜವು ಇವುಗಳ ಹಣೆಗೆ ಕಟ್ಟಿ, ವ್ಯಕ್ತಿಯ ದುರ್ದೆಸೆಗೆ ಈ ಮೂರು ಮಾಯೆಗಳೇ ಕಾರಣವೆಂದು ಪರಂಪರಾಗತವಾಗಿ ನಂಬಿಸುತ್ತಾ ಬಂದಿದೆ. ಈ ಮೋಸದ ಬಲೆಗೆ ಯುಗಯುಗಗಳೂ ತಲೆ ಕೊಡುತ್ತಿವೆ. ಆಧುನಿಕ ಮನಸ್ಸುಗಳು ಕೂಡ ಇಂದಿಗೂ ಅದೇ ಭ್ರಮೆಯಲ್ಲಿವೆ. ಶಬರಿಮಲೈ ದೇವಸ್ಥಾನಕ್ಕೆ ಮಹಿಳೆಯ ಪ್ರವೇಶ ನಿರಾಕರಿಸುವ ಇವತ್ತಿನ ಸಮಾಜದ ಮನಸ್ಥಿತಿ ಇದಕ್ಕೆ ತಾಜಾ ಉದಾಹರಣೆ.

ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು, 
ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ? 
ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು, 
ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ? 
ಮಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು, 
ಮಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ? 
ಅಂಗವ ಬಿಟ್ಟು ಲಿಂಗವನೊಲಿಸಬೇಕೆಂಬರು, 
ಅಂಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ ? 
ಇಂದ್ರಿಯಂಗಳ ಬಿಟ್ಟು ಲಿಂಗವನೊಲಿಸಬೇಕೆಂಬರು, 
ಇಂದ್ರಿಯಂಗಳಿಗೆಯೂ ಲಿಂಗಕ್ಕೆಯೂ ವಿರುದ್ಧವೆ ? 
ಜಗವ ಬಿಟ್ಟು ಲಿಂಗವನೊಲಿಸಬೇಕೆಂಬರು, 
ಜಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ ? 

ದೇವರನ್ನೊಲಿಸಲು ನಡೆಸುವ ಎಲ್ಲ ಬಗೆಯ ದೊಂಬರಾಟಗಳನ್ನು ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ ಎಷ್ಟು ಸ್ಪಷ್ಟವಾಗಿ ಪ್ರಶ್ನಿಸಿ, ನಿರಾಕರಿಸಿದ್ದಾರೆ! ಹೆಂಗಸರು ಧರ್ಮಕ್ಕೆ ವಿನಾಶಕಾರಿಯೇ? ಹೆಣ್ಣು- ಗಂಡಿನ ಆಕರ್ಷಣೆಯಿಂದ ಹೆಚ್ಚೆಂದರೆ ಅವರಿಬ್ಬರ ಬ್ರಹ್ಮಚರ್ಯ ಹೋಗಬಹುದೇ ವಿನಃ ಧರ್ಮ ನಾಶವಾಗುತ್ತದೆಯೇ?

ಅಸ್ಪೃಶ್ಯತೆ, ಜಾತಿಪದ್ಧತಿ, ಸಾಮಾಜಿಕ ಅಸಮಾನತೆ, ಲಿಂಗ ಬೇಧ, ವರ್ಗಬೇಧ, ಪುರೋಹಿತಶಾಹಿಯ ಅಟ್ಟಹಾಸ, ಯಜ್ಞ-ಯಾಗಗಳ ಪಾರಮ್ಯ, ಪುರುಷ ಪ್ರಧಾನ ವ್ಯವಸ್ಥೆಯ ಅಹಂಕಾರ, ಗುಡಿ ಸಂಸ್ಕೃತಿ, ಮೂಢನಂಬಿಕೆಗಳ ಬೂಟಾಟಿಕೆ, … ಹೀಗೆ ಕಣ್ಣಿಗೆ ಕಂಡ ಎಲ್ಲವನ್ನೂ ಶರಣರು ಪ್ರಶ್ನಿಸಿದರು. ತಾವು ಹುಟ್ಟುಹಾಕಿದ ಹೊಸ ಮಾರ್ಗದಲ್ಲಿ ತಪ್ಪುಗಳು ನುಸುಳಿದಾಗಲೂ ಅವರು ಪ್ರಶ್ನಿಸುವುದನ್ನು ನಿಲ್ಲಿಸಲಿಲ್ಲ. ಸಮಾನತೆಯ ಕುರುಹಾದ ಇಷ್ಟಲಿಂಗವನ್ನು ಧರಿಸಿಯೂ ತಮ್ಮ ಹಿಂದಿನ ಬುದ್ಧಿ ಬಿಡದಿದ್ದರೆ ಏನು ಪ್ರಯೋಜನ? ಜಾತಿ, ಮತ, ಕುಲಗಳನ್ನು ಮೀರುವುದು ಅಷ್ಟು ಸುಲಭವಲ್ಲ. ಶಿವಭಕ್ತರಾದವರ ನಡುವೆ ಉಂಡರೆ, ಉಟ್ಟರೆ ಆಚಾರ ಕೆಡುತ್ತದೆ; ವಿವಾಹ ಸಂಬಂಧ ಬೆಳೆಸಿದರೆ ಕುಲ ಕೆಡುತ್ತದೆ ಎಂದರೆ ಸಮಾನತೆ ಸಾಧ್ಯವೇ?

ಉಂಬಲ್ಲಿ [ಊ]ಡುವಲ್ಲಿ ಕ್ರೀಯಳಿಯಿತ್ತೆಂಬರು,
ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರು,
ಎಂತಯ್ಯಾ ಅವರ ಭಕ್ತರೆಂಬೆ
ಎಂತಯ್ಯಾ ಅವರ ಯುಕ್ತರೆಂಬೆ….

ಕೇವಲ ಬೌದ್ಧಿಕ ತರ್ಕ-ಜಿಜ್ಞಾಸೆಗಳಲ್ಲಿ ನಿಲ್ಲದೆ ಶರಣರು ತಮ್ಮ ಒಳಗನ್ನೂ ಪ್ರಶ್ನಿಸಿಕೊಂಡರು. ವಿಚಾರಗಳು ಸಾರ್ಥಕವಾಗುವುದು ಅವು ಆಚಾರವಾದಾಗ ಮಾತ್ರ. ಅನುಭಾವದ ಪ್ರತಿ ಹಂತದಲ್ಲೂ ಅವರಲ್ಲಿ ಪ್ರಶ್ನೆಗಳಿದ್ದವು ಎಂಬುದಕ್ಕೆ ಅನೇಕ ವಚನಗಳೇ ಸಾಕ್ಷಿ.

ಪ್ರಶ್ನೆಗಳ ಜಾಯಮಾನವೇ ಹಾಗೆ. ಮುಕ್ತ ಮನಸ್ಸನ್ನು ಬೆಳೆಸುತ್ತವೆ, ಮಾಹಿತಿ ನೀಡುತ್ತವೆ, ಅರಿವು ಮೂಡಿಸುತ್ತವೆ, ಸಮಸ್ಯೆಯನ್ನು ಬಿಡಿಸುತ್ತವೆ. ಬದುಕುಗಳನ್ನು ಪರಿವರ್ತಿಸುತ್ತವೆ, ವಿಭಿನ್ನ ವಿಚಾರಗಳಿಗೆ ಸೇತುವೆಯಾಗುತ್ತವೆ, ಮುಚ್ಚಿಟ್ಟ ಸತ್ಯಗಳನ್ನು ಬಯಲಿಗೆಳೆಯುತ್ತವೆ, ಕಂಗೆಟ್ಟ ಸಂದರ್ಭದಲ್ಲಿ ಬೆಳಕಾಗುತ್ತವೆ, ಹೊಸ ದಾರಿಯತ್ತ ಮುನ್ನಡೆಸುತ್ತವೆ.

ಇದು 19ನೇ ಶತಮಾನದಲ್ಲಿಅಮೆರಿಕದಲ್ಲಿ ನಡೆದ ಘಟನೆ. ಅಮೆರಿಕದ ದಾರ್ಶನಿಕ ಎಂದೇ ಹೆಸರಾದ ಹೆನ್ರಿ ಡೆವಿಡ್ ಥೋರೊ ಖ್ಯಾತ ಬರಹಗಾರ ಮತ್ತು ಮಹಾಚಿಂತಕನಾದ ರಾಲ್ಫ್ ವಾಲ್ಡೋಎಮರ್ಸನ್ ನ ಶಿಷ್ಯ ಮತ್ತು ಕಿರಿಯ ಮಿತ್ರ. ಥೋರೊ ಒಮ್ಮೆ ತನ್ನ ಮನಸ್ಸೊಪ್ಪದ ಮುನಿಸಿಪಾಲಿಟಿ ಹಾಕುತ್ತಿದ್ದ ತಲೆಗಂದಾಯ (ಪೋಲ್ ಟ್ಯಾಕ್ಸ್) ಕೊಡಲು ಒಪ್ಪದೆ ಜೈಲು ಸೇರಿದ. ಅಲ್ಲಿಗೆ ಧಾವಿಸಿ ಬಂದ ಎಮರ್ಸನ್, “ಹೆನ್ರಿ, ಒಳಗಿದ್ದು ಅದೇನು ಮಾಡುತ್ತಿದ್ದೀಯಾ?” “Henry, what are you doing in there?”  ಎಂದು ಕೇಳುತ್ತಾನೆ. ಅದಕ್ಕೆ ಥೋರೊ, “ವಾಲ್ಡೋ, ಪ್ರಶ್ನೆ ಏನೆಂದರೆ ನೀ ಹೊರಗೇಕೆ ಇದ್ದೀಯಾ?” , “Waldo, the question is what are you doing out there?”  ಎನ್ನುತ್ತಾನೆ. ಎಲ್ಲ ಕಾಲಕ್ಕೂ, ಎಲ್ಲ ಬಗೆಯ ಹೋರಾಟದ ಸಂದರ್ಭಗಳಲ್ಲೂ ಸವಾಲೆನಿಸುವಂತೆ ಮಾರ್ದನಿಸುವ ಪ್ರಶ್ನೆ ಇದೆಂದು ಖ್ಯಾತವಾಗಿದೆ. ಸಿದ್ಧಾಂತಕ್ಕೆ ನಡೆಯ ರೂಪ ನೀಡಿದ್ದ ಥೋರೊ. ಆತ ಜೈಲು ಸೇರಿದ ಆ ಅನುಭವ ಕುರಿತು ಸಿವಿಲ್ ಡಿಸೊಬಿಡಿಯನ್ಸ್ ಎಂಬ ಪುಸ್ತಕ ಬರೆಯುತ್ತಾನೆ, ಗಾಂಧೀಜಿಯ ಸತ್ಯಾಗ್ರಹ ಚಳುವಳಿಗೆ ಅದೇ ಪ್ರೇರಣೆ ನೀಡುತ್ತದೆ.

ನಾವು ಬಯಸಿದಂತೆ ವಾಸ್ತವವನ್ನು ಬದಲಿಸಲಾಗುವುದಿಲ್ಲ, ನಿಜ. ಆದರೆ ಹಾಗೊಂದು ಪ್ರಾಮಾಣಿಕ ಪ್ರಯತ್ನವನ್ನೇ ಮಾಡದೆ ಹೋದರೆ ವಸ್ತುಸ್ಥಿತಿ ಹಾಗೆಯೇ ಮುಂದುವರಿಯುತ್ತದೆ. ಬಸವಾದಿ ಶರಣರು ಅಂದು ಪ್ರಶ್ನೆಗಳನ್ನು ಎತ್ತದೇ ಹೋಗಿದ್ದರೆ ಅಸಮಾನತೆ ಕೊಬ್ಬುತ್ತಿತ್ತು, ಧಾರ್ಮಿಕ ದೌರ್ಜನ್ಯ ಮತ್ತಷ್ಟು ಕ್ರೂರವಾಗುತ್ತಿತ್ತು. ಆದರೂ ಬಹುತ್ವದ ಪರಂಪರೆಗಳನ್ನು ತನ್ನೊಳಗೆ ಇಟ್ಟುಕೊಂಡ ಲಿಂಗಾಯತ ಧರ್ಮಕ್ಕೆ ಅವುಗಳ ಅಸ್ತಿತ್ವವನ್ನು ಸಮಾನತೆಯ ಆಧಾರದ ಮೇಲೆ ಕಾಪಾಡಿಕೊಂಡು ಬರಲು ಸಾಧ್ಯವಾಗದೇ ಹೋದದ್ದು ಇತಿಹಾಸದ ಚೋದ್ಯ. ಕಾಲವನ್ನು ಗುಣಾತ್ಮಕವಾಗಿ ಬದಲಿಸಿ ಹೋದ ಶರಣರಿಗೆ ನ್ಯಾಯ ಸಲ್ಲಿಸಬೇಕೆಂದರೆ ಅವರು ಎತ್ತಿದ ಪ್ರಶ್ನೆಗಳನ್ನು ನಾವು ಮುಂದುವರಿಸಬೇಕು, ಅಂತರಂಗದಲ್ಲೂ ಮತ್ತು ಬಹಿರಂಗದಲ್ಲೂ.

ಚಿಂತನೆಯ ದಾರಿ ತಪ್ಪಿಸುವ ಹುನ್ನಾರಗಳು ನಡೆಯುತ್ತಲೇ ಇವೆ. ಭ್ರಮೆಗಳು, ಮಿಥ್ಯಗಳು ತುಂಬಾ ಸುಂದರವಾಗಿರುತ್ತವೆ, ಅವುಗಳದು ಆಕರ್ಷಕ ಬಣ್ಣ, ಮೈಯೆಲ್ಲ ರೆಕ್ಕೆ, ಹಾರುತ್ತಾ ಹಾರುತ್ತಾ ಮತ್ತಷ್ಟು ಪುಕ್ಕಗಳು ಅಂಟಿಕೊಳ್ಳುತ್ತವೆ. ಭಾರತದಂಥ ದೇಶದಲ್ಲಿ ಬೀದಿಗೆ ನಾಲ್ಕು ಗುಡಿಗುಂಡಾರಗಳು, ಒಂದೊಂದು ಚಾನೆಲ್ಲುಗಳಿಗೆ ಹತ್ತಾರು ಭವಿಷ್ಯಕಾರರು ಇವುಗಳ ದಂಧೆ ನಡೆಸುತ್ತಿರುತ್ತಾರೆ. ತತ್ವದರ್ಶನಗಳ ಮೇಲಾಟಗಳಲ್ಲಿ ಸತ್ಯ ದರ್ಶನವೇ ಮರೆಯಾಗಿದೆ. ಇದನ್ನು ಕಂಡೇ ನಾಡಿನ ಹಿರಿಯ ಚಿಂತಕರಾದ ದೇವನೂರು ಮಹದೇವಯ್ಯ ಹೇಳುತ್ತಾರೆ: “ಭಾರತ ಗಾಯಗೊಂಡು ಬಿದ್ದಿದೆ. ಅದರ ಗಾಯ ಅದಕ್ಕೆ ಗಾಯ ಅನಿಸುತ್ತಿಲ್ಲ. ಅಸ್ಪೃಶ್ಯತೆ, ಜಾತಿ, ಮತೀಯತೆ ಎಂಬ ಗಾಯ ನಂಜಾಗಿ, ಮಿದುಳಿಗೇರಿ ಭಾರತ ಹುಚ್ಚಾಗಿದೆ. ಈ ಗಾಯವನ್ನೇ, ಈ ಹುಚ್ಚನ್ನೇ ಸಮಾಜದಲ್ಲಿ ಸಂಸ್ಕೃತಿ, ಪರಂಪರೆ ಅಂತ ಬಿಂಬಿಸಿ ಜನರನ್ನು ನಂಬಿಸಲಾಗಿದೆ”- ಸಾಮಾನ್ಯ ಚರ್ಚೆಗೂ ಸಿದ್ಧವಿಲ್ಲದ ಅಸಹನೀಯ ಸ್ಥಿತಿ ಇಂದು ನಿರ್ಮಾಣವಾಗಿದೆ. ಪ್ರಶ್ನೆ ಎತ್ತಿದವ ನಾಸ್ತಿಕನಾಗುತ್ತಾನೆ, ವೈಚಾರಿಕವಾಗಿ ಮಾತನಾಡಿದರೆ ಎಡಪಂಥೀಯನಾಗುತ್ತಾನೆ. ಇತಿಹಾಸ ತೋರಿಸಿದರೆ ದೇಶದ್ರೋಹಿಯಾಗುತ್ತಾನೆ.

“ಪವಿತ್ರವಾದ ಕುತೂಹಲವನ್ನು ಕಳೆದುಕೊಳ್ಳಬೇಡಿ, ಮುಖ್ಯವಾಗಿ ಪ್ರಶ್ನಿಸುವುದನ್ನು ನಿಲ್ಲಿಸಬೇಡಿ.” ಎನ್ನುತ್ತಾರೆ ಆಲ್ಬರ್ಟ್ ಐನಸ್ಟೈನ್. ಪ್ರಶ್ನೆ ಮತ್ತು ಕುತೂಹಲಗಳು ಕಲಿಕೆಯ ಎರಡು ಕಿಂಡಿಗಳು. ಪ್ರಶ್ನೆಗಳಿಂದಲೇ ಮಹತ್ತರ ಪರಿವರ್ತನೆಗಳನ್ನು ಜಗತ್ತು ಕಂಡುಕೊಂಡಿದೆ.  ಮನದ ಪ್ರಶ್ನೆಗಳಿಗೆ, ಜಗದ ವಿಸ್ಮಯಗಳಿಗೆ ಉತ್ತರ ಹುಡುಕುತ್ತಾ ಹೋಗುವುದೇ ಅರ್ಥಪೂರ್ಣ ಬದುಕು. ನಾವು ಒಪ್ಪಲಿ, ಬಿಡಲಿ ಪ್ರಶ್ನೆಗಳು ಹುಟ್ಟೇ ಹುಟ್ಟುತ್ತವೆ, ಯಾರಲ್ಲಾದರೂ ಸರಿ. ಹುಡುಕಾಟಕ್ಕೆ ಹಾದಿಯಾಗುತ್ತವೆ, ಸತ್ಯಕ್ಕಾಗಿ ಒತ್ತಾಯಿಸುತ್ತವೆ, ಉತ್ತರಕ್ಕಾಗಿ ಕಾಯುತ್ತವೆ. ಪ್ರಶ್ನಿಸುವಲ್ಲಿ ವಿಶ್ವಾಸ, ವಿಮರ್ಶೆಯನ್ನು ಸ್ವೀಕರಿಸುವಲ್ಲಿ ವಿನಮ್ರತೆ ಇದ್ದಲ್ಲಿ ಸುಂದರ, ಸದೃಢ, ಸುಶೀಲ ಸಮಾಜ ನಮ್ಮದಾಗುತ್ತದೆ, ಅಲ್ಲವೇ?

Comments 10

 1. D P Prakash
  Dec 3, 2018 Reply

  ಸು೦ದರ ಲೇಖನ. ಶರಣರ ಆ೦ದೋಲನವನ್ನು ಜಾಗತಿಕ ಮಟ್ಟದಲ್ಲಿ ನೋಡಿದಾಗಲೇ ಅದರ ಮಹತ್ತು ಅರಿವಾಗುವುದು. ಕ್ರಾ೦ತಿಹುಟ್ಟುವಿಕೆ ಹಾಗೂ ಅನ್ವೇಶಣೆಯ ಪ್ರಾರ೦ಭಿಕವು ಮನುಷ್ಯನ ಕುತೂಹಲ ಹಾಗೂ ಪ್ರಶ್ನಿಸುವ ಗುಣದ ಮೇಲೆ ಅವಲ೦ಬಿತವಾಗಿದೆ ಎ೦ಬುದನ್ನು ಅತ್ಯ೦ತ ಸೊಗಸಾಗಿ ಲೇಖನ ತನ್ನ ಉದ್ದೇಶದ ಮೂಲಕ ಸಾಧಿಸಿದೆ. ‘ಹೇಳಿದ್ದೇ ಹೇಳು ಕಿಸಬಾಯಿ ದಾಸ’ದ ಸ೦ಪ್ರದಾಯಕ್ಕೆ ಸ೦ಪೂರ್ಣ ಹೊರತಾದ ಈ ಲೇಖನ, ಶರಣರ ನಿಲುವಿನ ನಾನ ಮಜಲುಗಳ ‘ನೋಡುವಿಕೆ’ ಯನ್ನು ನಮಗೆ ಕಲಿಸುತ್ತದೆ.

 2. ಬಸವರಾಜ ಹಂಡಿ
  Dec 5, 2018 Reply

  ಈ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

 3. Dr. Panchakshari hv
  Dec 5, 2018 Reply

  ಪ್ರಶ್ನಿಸದೆ ಏನನ್ನೂ ಒಪ್ಪಬೇಡ ಎಂದು ಹಿಂದಿನಿಂದಲೂ ಚಿಂತನಶೀಲರು ಹೇಳುತ್ತಾ ಬಂದಿದ್ದರೂ ಕೂಡ ಇಂಥಾ ವೈಜ್ಞಾನಿಕ ಯುಗದಲ್ಲೂ ಧಾರ್ಮಿಕ ವಿಚಾರಗಳಲ್ಲಿ ಪ್ರಶ್ನಿಸಲು ಹಿಂದೇಟು ಹಾಕುವುದು ನೋಡಿದರೆ ಧರ್ಮ/ ದೇವರ ಕುರಿತು ಜನರಲ್ಲಿ ಆವರಿಸಿರುವ ಭಯ ಎಂಥಾದ್ದೆಂದು ಊಹಿಸಬಹುದು. ಈ ನಿಟ್ಟಿನಲ್ಲಿ ತಮ್ಮ ಲೇಖನವು ಅಂಥಾ ಮನಸ್ಸುಗಳಿಗೆ ಪ್ರಶ್ನಿಸುವ ಪ್ರಜ್ಞಾವಂತಿಕೆಯನ್ನು ಅರಳಿಸುವುದೆಂಬ ಆಶಯ ನನ್ನದು.

 4. ಡಾ. ನಟರಾಜ ಬೂದಾಳು
  Dec 8, 2018 Reply

  ಲೇಖನ ಓದಿದೆ. ವಚನಕಾರರ ಪ್ರಮುಖ ನಿಲುವುಗಳಲ್ಲಿ ಒಂದು ಶಾಸ್ತ್ರ ನಿರಾಕರಣೆ. ಇದರಲ್ಲಿ ಮತ್ತೆ ಮೂರು ಸಂಗತಿಗಳನ್ನು ಗುರುತಿಸಬಹುದು- ಪ್ರಮಾಣ ನಿರಾಕರಣೆ, ಅಂಧಾಚರಣೆಗಳ ನಿರಾಕರಣೆ, ಜ್ಞಾನ ಮಾಧ್ಯಮವಾಗಿ ಶಾಸ್ತ್ರ ನಿರಾಕರಣೆ. ಲೇಖನ ಇಷ್ಟವಾಯಿತು.

 5. ಶುಭಾ
  Dec 8, 2018 Reply

  ವಾಸ್ತವತೆಗೆ ಕನ್ನಡಿ ಹಿಡಿದ ಲೇಖನ. ಪ್ರಸ್ತುತ ಪರಿಸ್ಥಿತಿಯಲ್ಲಿ ಏನೂ ಮಾಡಲಾಗದ ಅಸಹಾಯಕತೆ. ದೇಶದ ಪರಿಸ್ಥಿತಿ ಮುಂದೆ ಹೇಗೆ ಎಂದು ನೆನೆದರೆ ಮನಸ್ಸಿಗೆ ನೋವು.

 6. Karibasappa hanchinamani
  Dec 10, 2018 Reply

  ಶೋಧನೆಗೆ ಒಳಪಡದ ಜೀವನ ಜೀವನವಲ್ಲ… ಮನಸ್ಸು ಅರಳಿತು ಲೇಖನ ಓದಿ.

 7. Mariswamy Gowdar
  Dec 12, 2018 Reply

  ಸಾಮಾನ್ಯ ಚರ್ಚೆಗೂ ಸಿದ್ಧವಿಲ್ಲದ ಅಸಹನೀಯ ಸ್ಥತಿ ಇಂದು ನಿರ್ಮಾಣವಾಗಿದೆ…. ವಿಚಾರಗಳು ಅರ್ಥಪೂರ್ಣವಾಗಿದ್ದು ಮುತ್ತು ಪೋಣಿಸಿದಂತೆ ತಲೆಯೊಳಗೆ ಇಳಿಯುತ್ತವೆ. ಸಂಪ್ರದಾಯವನ್ನೇ ಸಂಸ್ಕೃತಿ ಎಂದು ಪ್ರಚಾರ ಮಾಡುವ ಇವತ್ತಿನ ದಿನಗಳಲ್ಲಿ ಅತ್ಯಂತ ಪ್ರಸ್ತುತವಾಗಿದೆ ಲೇಖನ.

 8. K S MALLESH
  Dec 15, 2018 Reply

  ಶ್ರೀಮತಿ ಮಂಗಳಾರವರೇ
  ನಿಮ್ಮ ಲೇಖನ ಬಹಳ ಹಿಂದಿನಿಂದಲೂ ಜೀವಂತವಾಗಿರುವ ಸಮಸ್ಯೆಯೊಂದಕ್ಕೆ ಹೊಸ ಬೆಳಕನ್ನು ಚೆಲ್ಲುವ ಪ್ರಯತ್ನ ಮಾಡಿದೆ. ಪ್ರಶ್ನಿಸದೆ ಸುಮ್ಮನೆ ಒಪ್ಪಿಕೊಳ್ಳುವ ಅಂತೆಯೇ ನಡೆಯುವ ಜನರಿದ್ದಾರೆ. ಸ್ವಾರ್ಥಕ್ಕಾಗಿ ಇಂತಹ ಪ್ರವೃತ್ತಿಯನ್ನು ಜನ ಮಾನಸದಲ್ಲಿ ಬಿತ್ತುವ ವರ್ಗಗಳೂ ಇವೆ. ಇವು ಸಂಪ್ರದಾಯ ಮತ್ತು ಧರ್ಮಗಳನ್ನು ಬಳಸಿಕೊಂಡು ಹಲವು ಸುಳ್ಳುಗಳನ್ನು ಹೇರುತ್ತ ಇನ್ನಿತರ ವರ್ಗಗಳ ಮೇಲೆ ತಮ್ಮ ಹಿಡಿತವನ್ನು ಬಿಗಿಗೊಳಿಸಿಕೊಂಡಿವೆ. ಇಂತಹ ಅಂಧಾನುಕರಣೆ ಮಾಡುವವರನ್ನು ಮಾಡಿಸುವವರನ್ನು ನೇರವಾಗಿ ಎದುರಿಗೆ ನಿಲ್ಲಿಸಿಕೊಂಡು ಕಟು ಮಾತುಗಳಲ್ಲಿ ಎಚ್ಚರಿಸಿದ್ದೀರಿ. ಶರಣರು ಅದೆಷ್ಟು ಪ್ರಖರವಾಗಿ ಈ ಮೌಢ್ಯವನ್ನು ಟೀಕಿಸಿ ತಿರಸ್ಕರಿಸಿದ್ದರು ಎನ್ನುವುದನ್ನು ಸೋದಾಹರಣವಾಗಿ ವಿವರಿಸಿದ್ದೀರಿ.

  ವ್ಯಷ್ಟಿ ಮತ್ತು ಸಮಷ್ಟಿಯಿಂದ ಸನ್ನಡತೆಯ ಅರ್ಥಪೂರ್ಣ ಬದುಕನ್ನು ಆಶಿಸುವ ಮನಸ್ಸು ಹೇಗೆ ತನ್ನ ವಿಚಾರಗಳನ್ನು ಉತ್ಸಾಹ ಮತ್ತು ಕಳಕಳಿಯಿಂದ ಮುಂದಿಡುತ್ತದೆ ಎನ್ನುವುದಕ್ಕೆ ನಿಮ್ಮ ಲೇಖನ ಸಾಕ್ಷಿ. ನಿಮ್ಮ ಲೇಖನಿ ಹೀಗೆ ಹರಿತವಾಗಿರಲಿ, ಅರಿವಿನೆಡೆಗಿರಲಿ
  ವಂದನೆಗಳು
  ಕೆ ಎಸ್ ಮಲ್ಲೇಶ್

 9. mahadev hadapad natuvara
  Dec 21, 2018 Reply

  ಲೇಖನ ಚನ್ನಾಗಿದೆ.

 10. ಬಸವರಾಜ ಹಂಡಿ
  Jan 2, 2019 Reply

  ಪ್ರಶ್ನೆಗಳ ಬಗ್ಗೆ ಬರೆದ ಈ ಲೇಖನವನ್ನು ಪ್ರಶ್ನೆಗೆ ಒಳಪಡಿಸದೆ ಇರುವದು ದೊಡ್ಡ ದುರಂತ. ಲೇಖಕಿ ಮಂಗಳಾ ಶರಣಿಯರು ವಚನಗಳ ಹಾಗು ಶರಣರ ಪ್ರಭಾವಕ್ಕೆ ಒಳಗಾಗಿ ಈ ಲೇಖನಕ್ಕೆ ಕೊಟ್ಟ ಶೀರ್ಷಿಕೆಯನ್ನು ಪ್ರಶ್ನೆ ಮಾಡದೆ ಕೊಟ್ಟಿದ್ದಾರೆ.

  ಈ ಲೇಖನದ ಶೀರ್ಷಿಕೆ ” ಶಾಸ್ತ್ರ ಘನವೆಂಬೆನೆ?”
  ಈ ಪ್ರಶ್ನೆಯನ್ನು ನನಗೆ ನಾನೆ ಹಾಕಿಕೊಂಡರೆ, ನನಗೆ ಸಿಗುವ ಮೊದಲ ಉತ್ತರ “ಶಾಸ್ತ್ರ ಘನವಾದುದಲ್ಲ ಶಾಸ್ತ್ರಕಿಂತ ಬೆರೆಯದು ಘನವಾದುದ್ದು ಅಂತ. ಈ ಉತ್ತರ ಈ ಲೇಖನದಲ್ಲಿ ಬರೆದ ವಿಷಯಕ್ಕೆ ಸಮಂಜಸವಾದುದಲ್ಲ.
  ನಾನು ಇದೆ ಪ್ರಶ್ನೆಯನ್ನು ಲೇಖಕಿಗೆ ಕೇಳುತ್ತಿದ್ದೇನೆ. ನೋಡನ ಅವರ ಉತ್ತರ.
  ಈ ಮೇಲಿನ ಉದಾಹರಣೆ ಮುಖಾಂತರ ಪ್ರಶ್ನೆ ಅಂದರೆ ಎಷ್ಟು ಪ್ರಬಲವಾಗಿರುತ್ತೆ ಅನ್ನುವ ಕಲ್ಪನೆ ಮೂಡುತ್ತದೆ.

  ಎಲ್ಲದಕ್ಕು ಮೂಲ – ಪ್ರಶ್ನೆ… ಪ್ರಶ್ನೆ … ಪ್ರಶ್ನೆ.
  ಸಂಶೋಧನೆ ಎಂಬ ಬೀಜ ಮೊಳಕೆಯೊಡೆವದು ಪ್ರಶ್ನೆಗಳ ಮುಖಾಂತರ.

  ಪ್ರಶ್ನೆಗಳು ಪ್ರಖರವಾದ ಬೆಳಕು ಇದ್ದ ಹಾಗೆ ಮೂಢನಂಬಿಕೆಯ ಮಂಜಿನ ಮೇಲೆ ಬಿದ್ದರೆ ಮಂಜು ಕರಗಿ ಹೋಗುತ್ತದೆ.

  ಬಹಿರಂಗವಾಗಿ ಪ್ರಶ್ನೆಸುವಕ್ಕಿಂತ ಅಂತರಂಗವಾಗಿ ನಮ್ಮನ್ನು ನಾವೆ ಪ್ರಶ್ನೆಸಿಕೊಳ್ಳಬೇಕು. ಕೆಲವಂದು ಸಲ ನಮಗೆ ಗೊತ್ತು ಇರಲಾರದೆ, ನಮ್ಮ ಭಾವನೆಗಳು ಹಾಗು ಮಕ್ಕಳನ ಮೇಲಿ ಪ್ರೀತಿ ಮೂಢನಂಬಿಕೆಗಳಿಂದ ಹಾಗು ಭಯದಿಂದ ಕೂಡಿರುತ್ತದೆ.

  ಚಾರ್ವಾಕರು, ಬುದ್ಧ, ಬಸವಣ್ಣ ಹಾಗು ಬಸವಾದಿ ಶರಣರು ಪ್ರಶ್ನೆ ಮಾಡುವುದರಲ್ಲಿ ಎತ್ತಿದ ಕೈ.

  ಅನುಭವ ಮಂಟಪದ ಬುನಾದಿ – ಪ್ರಶ್ನೆಗಳು.
  ಸಿದ್ದಾರ್ಥ ರಾಜಕುಮಾರ ಬುದ್ಧ ಆಗಲಿಕ್ಕೆ ಸಹ ಪ್ರಶ್ನೆ ” ದುಃಖ ಯಾಕೆ” ಕಾರಣ.

  ಲೇಖನದ ಶೀರ್ಷಿಕೆ ಒಂದನ್ನು ಬಿಟ್ಟರೆ ಈ ಲೇಖನದ ಬಗ್ಗೆ ಪ್ರಶ್ನೆ ಮಾಡುವ ಹಾಗೆ ಇಲ್ಲ. ಅಷ್ಟು ಸುಂದರ ಹಾಗು ಪರಿಣಾಮಕಾರಿಯಾಗಿ ಮೂಡಿ ಬಂದಿದೆ.

  ಬರೆಯುವ ಶೈಲಿ, ವಚನಗಳ ಆಯ್ಕೆ ಮತ್ತು ಉಪಯೋಗಿಸಿದ ಸಂದರ್ಭ ಹಾಗು ಇತಿಹಾಸದ ಘಟನೆಗಳು ಎಲ್ಲವು ಪ್ರಶ್ನಾತೀತ.

  ಲೇಖನ ಓದುವಾಗ ಲೇಖಕಿಯರು ಬರೆಯುವ ಶೈಲಿ ನೋಡಿದರೆ ನಮಗೆ ಇವರ ಮೇಲೆ ಅಸೂಯೆ ಉಂಟಾಗುತ್ತದೆ. ಅಸೂಯೆಗೆ ಕಾರಣ ನಮಗೆ ಸ್ವಲ್ಪ ಸಹ ಬರೆಯಲಿಕ್ಕೆ ಬರಲ್ಲ. ನಿಮ್ಮ 1% ಸಹ ನಮಗೆ ಬರಲ್ಲ.

  ಮಂಗಳಾ ಶರಣಿಯರಗೆ ನಮ್ಮೆಲ್ಲರಿಂದ ಶರಣು ಶರಣಾರ್ಥಿಗಳು ???

Leave A Comment

Your email address will not be published. Required fields are marked *