
ಶಾಂತಿ
ಪಯಣದ ಉಬ್ಬುತಗ್ಗು ಹಾದಿಯಲಿ,
ಗಂಧದ ಕಣವಾಗು ಬಯಲಲಿ,
ಸುಮದ ದಳವಾಗು ವನದಲಿ,
ಓ ಮನವೇ,
ಕಂದನ ಮುಗ್ದ ನಗುವಾಗು.| ೧ |
ಹರುಷ ದುಗುಡಗಳ ಮೇಳದಲಿ,
ಮಧುರ ನೆನಪುಗಳ ಹೊಳೆಯಾಗು,
ಹಾಡಾಗು ಕಾಡುವ ನೋವಿಗೆ,
ಓ ಮನವೇ,
ಬಾನಲಿ ಹಾರುವ ಹಕ್ಕಿಯಾಗು. | ೨ |
ಕಷ್ಟಸುಖಗಳು ಬೆರೆತ ಬದುಕಿನಲಿ,
ಚಿಂತನೆಯ ಮುನಿಯಾಗು ಗದ್ದಲದಲಿ,
ಹರಿವ ನದಿಯಾಗು ಹರುಷದಲಿ
ಓ ಮನವೇ,
ಕರುಣೆ ಮಮತೆಗಳ ಸೆಲೆಯಾಗು. | ೩ |
ನೇಸರನ ದಿಗಂತದಂಚಿನ ಪಥದಲಿ,
ಮುಪ್ಪುದೇಹ ಕೊನೆ ಕೋರಿದಂದು,
ಮುಕ್ತನಾಗು ತುಂಬು ಹೃದಯದಲಿ,
ಓ ಮನವೇ,
ಪರಮ ಶಾಂತಿಯ ನೆಲೆಯಾಗು. | ೪ |
-ಅಂಬಳೆ ನಾಗ
(ರವೀಂದ್ರನಾಥ್ ಟಾಗೋರ್ ಅವರ ಕವಿತೆಯಿಂದ ಸ್ಫೂರ್ತಿ ಪಡೆದು)
Comments 3
Raviraju A
Apr 20, 2025ಮುಕ್ತವಾಗಲಿ ಮನವು ಎಲ್ಲಾ ಕ್ಲೀಷೆಗಳಿಂದ… ಶಾಂತ ಲಹರಿಯಂತಿದೆ ಭಾವನೆ.
ಕೀರ್ತಿ ಎನ್, ಗುಂಡ್ಲುಪೇಟೆ
Apr 28, 2025ಪಯಣದ ಉಬ್ಬುತಗ್ಗು ಹಾದಿಯಲಿ, ಗಂಧದ ಕಣವಾಗು ಬಯಲಲಿ- ಮಾರ್ಮಿಕವಾದ ಸಾಲುಗಳು. ಗಂಧದ ಕಣವಾಗುವುದು!
ಉಮಾದೇವಿ ಶಂಕರಪ್ಪ
May 1, 2025ಬಯಲು ಕವನಗಳು ಮತ್ತೆ ಮತ್ತೆ ಓದುವಂತಿವೆ✌️