ವ್ಯೋಮದೊಳಗಿನ ಆತ್ಮ
ಸಾರಾನಾಥದ ಸ್ತೂಪದ ಹೂದೋಟದಲ್ಲಿ,
ದಮ್ಮನ ಪರಿಮಳ.
ಜಗವ ಕಂಡರಿಯದ ಧನ್ಯತೆ,
ಕಾಲಿರಿಸಿದ ನೆಲದಲ್ಲೆಲ್ಲ ಪುಳಕ.
ಯಾರದೋ ಧ್ವನಿ ನಿಶ್ಶಬ್ದದೊಳಗೆ,
ಹೊರಳಿದೆ, ಹುಡುಕಿದೆ, ಬೆಚ್ಚಿದೆ.
ಅದು ಬಯಲೊಳಗಿನ ಆತ್ಮ.
ಜ್ಞಾನ ಭ್ರೂಣ ಹೊತ್ತ ಅದಕ್ಕೆ
ನನ್ನೊಳಗೆ ಗರ್ಭೀಕರಿಸಿಕೊಳ್ಳುವ ಧಾವಂತ.
ಓ ಇದು ವ್ಯೋಮದ ಆತ್ಮವೇ?
ಹಾ ಇವನು ಬುದ್ಧನೇ ಬದ್ಧನೇ ಸಿದ್ಧನೆ…
ಕರುಣೆ, ಪ್ರೀತಿ, ಮಮತೆಗಳಿರುವಲ್ಲಿ
ಮತ್ತೆ ಹುಟ್ಟಬೇಕೆಂಬ ಅವನ ಛಲ ಮೆಚ್ಚಿದೆ.
ನಾನೀಗ ಗರ್ಭವತಿ,
ಸಂಗಮದಲ್ಲಿ ನನ್ನ ಜೋಳಿಗೆ ಜೀಕುತ್ತಿದೆ.
ಪ್ರಸವಿಸುವ ವೇದನೆ ಇಲ್ಲ, ಭಯವಿಲ್ಲ,
ಅದು ತಾನೇ ಹುಟ್ಟ ಬಯಸಿದ ಭ್ರೂಣ
ಆ ಕೂಸು ಯೋನಿಜವೂ ಅಲ್ಲ.
ಈಗ ಜೋಗುಳದ ಗಾನ ಬಯಲ ತುಂಬ.
ತೊಟ್ಟಿಲು ಸದಾ ತೂಗುತ್ತಲೇ ಇದೆ. ಶತಶತಮಾನಗಳಿಂದಲೂ
ಬುದ್ಧ ಬಸವರಿಗೆ ಬಾಣಂತಿಯರು
ಹಾಲುಣಿಸುತ್ತಲೇ ಇದ್ದಾರೆ.
Comments 2
ಪೆರೂರು ಜಾರು, ಉಡುಪಿ
Jun 14, 2023ಹಾಲುಣಿಸಿದ್ದು ಸರಿ
ಹಾಲಿಗೆ ವೈದಿಕ ನಂಜು ಬೆರೆತಿರೆ
ಬುದ್ಧ ಬಸವರು ಬಲಿ
ಇಲ್ಲಿದೆ ಹೆಸರಿನ ಬಸಿರ ಬರೆ
Gavisiddappa S
Jun 20, 2023ಬಸವ ಬುದ್ಧನ ಹುಟ್ಟು, ಬಯಲ ಬೆರಗಿನ ಸೊಬಗು..
ಸುಂದರ ಕವನ