ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
ಬಸವಣ್ಣನವರ ಕ್ರಾಂತಿಗೆ ಅಂದಿನ ಸಾಮಾಜಿಕ, ಧಾರ್ಮಿಕ, ರಾಜಕೀಯ ಮತ್ತು ಮುಂತಾದ ಕ್ಷೇತ್ರಗಳಲ್ಲಿ ಉಂಟಾಗಿದ್ದ ಕಲುಷಿತ ಪರಿಸ್ಥಿತಿಯೇ ಕಾರಣ. ಸಾಮಾಜಿಕ ಕ್ಷೇತ್ರದಲ್ಲಿ ಅಸ್ಪೃಶ್ಯರ ಸ್ಥಿತಿಯು ನೊಣ-ನೊರಜು, ನಾಯಿ-ಹಂದಿಗಳಿಗಿಂತಲೂ ಕೀಳಾಗಿತ್ತು. ಉಚ್ಚ ವರ್ಗದವರ ಮಲ-ಮೂತ್ರ ಹೊತ್ತೊಯ್ಯುವ, ಸತ್ತ ಪ್ರಾಣಿಗಳನ್ನು ಎತ್ತಿ ಹಾಕುವುದು ಅವರ ಮುಖ್ಯ ಉದ್ಯೋಗವಾಗಿತ್ತು. ಅವರ ಸ್ವಚ್ಚಗೊಳಿಸುವ ಈ ಕಾರ್ಯಕ್ಕೆ ಉಚ್ಚ ವರ್ಗದವರು ತಾವು ಉಂಡು ಉಳಿದ ಹಳಸಿದ ಬೋನವನ್ನು ಪ್ರತಿಫಲವೆಂದು ನೀಡುತ್ತಿದ್ದರು. ಸ್ಮಶಾನದಲ್ಲಿ ಚೆಲ್ಲಿದ ಬೋಕಿಗಳನ್ನು, ಹೆಣದ ಮೇಲಿನ ಬಟ್ಟೆಗಳನ್ನು ಮಾತ್ರ ಉಪಯೋಗಿಸುವ ಹಕ್ಕು ಪಡೆದಿದ್ದರು. ಅವರಿಗೆ ಹೊಲ ಕೊಳ್ಳುವ, ಮನೆ ಕಟ್ಟಿಸಿಕೊಳ್ಳುವ, ಓದು- ಬರಹ ಕಲಿಯುವ ಯಾವ ಹಕ್ಕೂ ಇರಲಿಲ್ಲ. ಮೇಲು ವರ್ಗದವರ ಮಲವನ್ನು ಹೊತ್ತೊಯ್ಯಲು ಊರಲ್ಲಿ ಪ್ರವೇಶಿಸುವಾಗ ರಸ್ತೆಯಲ್ಲಿ ಉಗುಳುವಂತಿರಲಿಲ್ಲ. ಮಲದ ದುರ್ವಾಸನೆಯಿಂದ ಉಗುಳುವ ಪ್ರಸಂಗ ಬಂದಾಗ ತಾವೇ ತಮ್ಮ ಕೊರಳಲ್ಲಿ ಕಟ್ಟಿಕೊಂಡು ಬಂದ ಕುಡಿಕೆಯಲ್ಲಿ ಉಗುಳಿಟ್ಟುಕೊಂಡು ಹೋಗಬೇಕೆಂಬುದು ಆಜ್ಞೆ. ಅವರು ಹಾದಿಯಲ್ಲಿ ಬರುವಾಗ ಅವರ ಹೆಜ್ಜೆಗಳು ನೆಲದ ಮೇಲೆ ಮೂಡಕೂಡದು. ಹೆಜ್ಜೆ ಗುರುತುಗಳ ಮೇಲೆ ಉಚ್ಚ ವರ್ಗದವರು ಕಾಲಿಟ್ಟು ಸ್ಪರ್ಶಿಸಿದರೆ ಮೈಲಿಗೆ ಉಂಟಾಗಿ, ಅದನ್ನು ತೊಳೆದುಕೊಂಡು ಶುಚಿರ್ಭೂತರಾಗಲು ಸ್ನಾನ ಮಾಡಬೇಕಾಗುತ್ತಿತ್ತು. ಹೀಗೆ ಹೆಜ್ಜೆ ಮೂಡಿಸಿ ಹೋದ ಆ ಪಂಚಮನಿಗೆ ಕ್ರೂರ ಶಿಕ್ಷೆ ವಿಧಿಸಲಾಗುತ್ತಿತ್ತು. ಶಿಕ್ಷೆ ತಪ್ಪಿಸಿಕೊಳ್ಳಬೇಕಾದರೆ ಅವನು ತನ್ನ ಬೆನ್ನಿಗೊಂದು ಮುಳ್ಳಿನ ಟೊಂಗೆಯನ್ನು ಇಳಿಬಿಟ್ಟು ಕಟ್ಟಿಕೊಂಡು ಬರಬೇಕು. ಇವನು ಮುಂದೆ ಮುಂದೆ ನಡೆದಂತೆ ಅದು ಹಿಂದಿನಿಂದ ಹೆಜ್ಜೆ ಗುರುತುಗಳನ್ನು ಅಳಿಸಿ ಹಾಕುತ್ತಾ ಬರಬೇಕು…. ಹೀಗೆಂದು ನಾನು ಊಹಿಸಿ ಹೇಳಿದ್ದಲ್ಲ, ಬಸವೇಶ್ವರರ ಕಾಲದಲ್ಲಿ ರೂಢಿಯಲ್ಲಿದ್ದ ಈ ಕೀಳು ಸ್ಥಿತಿಯ ವರ್ಣರಂಜಿತ ವಿವರಣೆಯನ್ನು ಇಂದಿಗೂ ಹಿಂದೂ ಧರ್ಮಶಾಸ್ತ್ರಗಳಲ್ಲಿ ನೋಡಬಹುದು.
ಅಸ್ಪೃಶ್ಯರ ಗತಿ ಇಂತಿದ್ದರೆ ಸ್ತ್ರೀಯರ ಗತಿ ಇನ್ನೂ ಅಧೋಗತಿಯಲ್ಲಿತ್ತು. ತಾಯಿ, ಸತಿ, ಸಹೋದರಿ, ತನುಜೆಯರೆಂದು ಕರೆಯಿಸಿಕೊಳ್ಳುವ ಸ್ತ್ರೀಯರಿಗೆ ದಾಸ್ಯ ಬಿಟ್ಟರೆ ಬೇರೆ ಗತಿಯಿರಲಿಲ್ಲ. ಅಜ್ಞ ಬಾಲೆಯರಿಗೆ ಮದುವೆ ಮಾಡುತ್ತಿದ್ದರು. ಆಕೆಯ ಪತಿ ಕುಂಟ, ಕುರುಡ, ಹುಚ್ಚ ಮುದುಕನಿರಬಹುದು. ಬಾಲಕಿ ಯೌವನಕ್ಕೆ ಕಾಲಿಡುವ ಪೂರ್ವದಲ್ಲಿ ಪತಿ ಮರಣವನ್ನಪ್ಪಿದರೆ ಅವನ ಚಿತೆಯಲ್ಲಿ ಈ ಮುಗ್ಧ ಬಾಲೆಯನ್ನು ತೂರಿ ಒಗೆದು ಸುಡುತ್ತಿದ್ದರು. ಆಕೆಗೆ ವಿದ್ಯೆ ಕಲಿಯುವುದಾಗಲಿ, ಆಸ್ತಿಯ ಹಕ್ಕಾಗಲಿ ಇರಲಿಲ್ಲ. ಬಾಲ್ಯದಲ್ಲಿ ತಂದೆಯ ಅಧೀನದಲ್ಲಿ, ಯೌವನದಲ್ಲಿ ಗಂಡನ ಅಧೀನದಲ್ಲಿ, ಮುಪ್ಪಿನಲ್ಲಿ ಮಗನ ಅಧೀನದಲ್ಲಿ (ದಾಸಿಯಾಗಿ) ಜೀವಾಂತ್ಯದವರೆಗೆ ಇರಬೇಕಾಗಿತ್ತು. ಅಂತೆಯೇ ಮನುಧರ್ಮದಲ್ಲಿ “ನ ಸ್ತ್ರೀ ಸ್ವಾತಂತ್ರ್ಯಮರ್ಹತಿ” (ಸ್ತ್ರೀ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ) ಎಂದು ಹೇಳಿದೆ. ಹೀಗೆ ಇಡೀ ಹಿಂದೂ ಸಮಾಜದ ಪ್ರತಿಶತ 95 ರಷ್ಟು ಇದ್ದ ಬಹುಸಂಖ್ಯಾತ ಜನರ ಸಾಮಾಜಿಕ ಸ್ಥಿತಿ ಅತ್ಯಂತ ಹೀನಾಯಮಾನವಾಗಿತ್ತು, ಕೇವಲ ನೂರರಲ್ಲಿ 5 ರಷ್ಟಿದ್ದ ಮೇಲು ವರ್ಗದ ಜನರ ಕಪಿಮುಷ್ಠಿಯಲ್ಲಿ ಅವರೆಲ್ಲ ಬದುಕುತ್ತಿದ್ದರು. ಅಂದರೆ ಶ್ರೇಷ್ಟರೆಂದೆನಿಕೊಳ್ಳುವ, ವಿದ್ಯಾವಂತರೆನಿಸಿಕೊಳ್ಳುವ ಅಲ್ಪಸಂಖ್ಯಾತ ಹಿಂದುಗಳು ಬಹುಸಂಖ್ಯಾತರಾದ ತಮ್ಮ ಸಹೋದರರಾದ ಹಿಂದುಗಳ ಮೇಲೆ ನಡೆಯಿಸಿದ ದೌರ್ಜನ್ಯದಿಂದಾಗಿ ಭಾರತದೇಶ ಅಂದು ಶಕ್ತಿಹೀನವಾಗಿತ್ತು. ಛಿಧ್ರವಿಚಿದ್ರವಾಗಿತ್ತು. ಸಾವಿರಾರು ಜಾತಿಗಳಾಗಿ ಒಡೆದ ಕನ್ನಡಿಯಾಗಿತ್ತು. ಸ್ವಾಮಿ ಧರ್ಮತೀರ್ಥರು ತಮ್ಮ ‘ಹಿಂದೂ ಸಾಮ್ರಾಜ್ಯ ಶಾಹಿಯ ಇತಿಹಾಸ’ ಎಂಬ ವೈಚಾರಿಕ ಗ್ರಂಥದಲ್ಲಿ ಹೇಳಿರುವ ಮಾತುಗಳು ಇಲ್ಲಿ ಗಮನಾರ್ಹವಾಗಿವೆ:
“ಉನ್ನತ ಜಾತಿಯ ಹಿಂದುಗಳಾದ ನಾವು ಗೌರವದಿಂದ ಬಾಗಿದವರ ತಲೆಯನ್ನು ತುಳಿದಿದ್ದೇವೆ. ನಮ್ಮ ಆಶೀರ್ವಾದ ಬಯಸಿ ಬಂದ ಸರಳ ನಂಬಿಗಸ್ಥ ಜನಪದರನ್ನು ಮನಸ್ಸಿನಲ್ಲಿಯೇ ಬೈದಿದ್ದೇವೆ. ನಮ್ಮನ್ನು ದೇವರೆಂದು ಸ್ವಾಗತಿಸಿದ ಮನೆಗಳಿಗೆ ಅಜ್ಞಾನ ಮತ್ತು ಪಾಪಗಳನ್ನು ಕೊಟ್ಟಿದ್ದೇವೆ. ಆಶೀರ್ವದಿಸುವುದಕ್ಕೆ ಬದಲಾಗಿ ಶಪಿಸಿದ್ದೇವೆ. ಸಹಾಯ ಮಾಡುವುದಕ್ಕೆ ಬದಲಾಗಿ ಹಿಂಸಿಸಿದ್ದೇವೆ.ವಿದ್ಯಾವಂತರನ್ನಾಗಿ ಮಾಡುವುದಕ್ಕೆ ಬದಲಾಗಿ ಅವರ ಕಲಿಯುವ ಸಾಮಥ್ಯವನ್ನೇ ಧ್ವಂಸ ಮಾಡಿದ್ದೇವೆ, ಕೊಡುವುದಕ್ಕೆ ಬದಲಾಗಿ ಕಿತ್ತುಕೊಂಡಿದ್ದೇವೆ. ಮೇಲೆತ್ತುವುದಕ್ಕೆ ಬದಲಾಗಿ ಮೇಲೇಳುವ ಅವರ ಎಲ್ಲ ಪ್ರಯತ್ನಗಳನ್ನು ತುಳಿದಿದ್ದೇವೆ. ಕೂಡಿಸುವುದಕ್ಕೆ ಬದಲಾಗಿ ಒಡೆದಿದ್ದೇವೆ. ಬಿಡುಗಡೆ ಮಾಡುವುದಕ್ಕೆ ಬದಲಾಗಿ ಅವರಿಗೆ ದ್ರೋಹ ಬಗೆದಿದ್ದೇವೆ. ವಿಮೋಚನೆಗಾಗಿ ದುಡಿಯುವ ಬದಲು ಗುಲಾಮಗಿರಿಯ ಸಂಕೋಲೆಗಳನ್ನು ತೊಡಿಸಿದ್ದೇವೆ.” [Swami Dharma Teerth: History of Hindu Imperialism]
12ನೇ ಶತಮಾನದಲ್ಲಿ ಇಂಥ ಪುರೋಹಿತಶಾಹಿ ಜನರ ಅಧಿಕಾರ, ದೌರ್ಜನ್ಯ, ಕಂದಾಚಾರ, ಮೂಢನಂಬಿಕೆ ಇವುಗಳಿಗೆ ಜನಸಾಮಾನ್ಯರೆಲ್ಲ ಪಕ್ಕಾಗಿದ್ದರು; ಜರ್ಜರಿತರಾಗಿ ಹೋಗಿದ್ದರು, ನಾಶದ ಅಂಚಿನಲ್ಲಿದ್ದರು. ಆಗ ಅವರ ಆಶಾಕಿರಣವಾಗಿ, ಭಾಗ್ಯಸೂರ್ಯನಾಗಿ, ಶಾಂತಿದೂತನಾಗಿ ಬಸವೇಶ್ವರರು ಹುಟ್ಟಿಬಂದರು. ಅವರ ಸರ್ವತೋಮುಖ ಏಳಿಗೆಗಾಗಿ ತನ್ನ ಕೊನೆಯ ಉಸಿರಿನವರೆಗೆ ದಿಟ್ಟತನದಿಂದ ಧೈರ್ಯದಿಂದ ಹೋರಾಡಿದರು. ಅವರ ಹೋರಾಟದಲ್ಲಿ ಅಸ್ಪೃಶ್ಯರು, ಹಿಂದುಳಿದವರು, ಬಿದ್ದವರು ವಿಚಾರವಂತ ಕ್ಷತ್ರಿಯರು, ಪ್ರಜ್ಞಾವಂತ ಬ್ರಾಹ್ಮಣರು ಬೃಹತ್ ಸಂಖ್ಯೆಯಲ್ಲಿ ಪಾಲುಗೊಂಡರು. ಸಮಗ್ರ ಸಮಾಜದ ಸರ್ವೋದಯ ಕಾರ್ಯದಲ್ಲಿ ಮನಃಪೂರ್ವಕ ಭಾಗವಹಿಸಿದರು. ಬಸವೇಶ್ವರರ ಸಮರ್ಥ ನೇತೃತ್ವದಲ್ಲಿ ಬೃಹತ್ ಸಂಖ್ಯೆಯ ಶರಣರು ಹೊಸ ಸಮಾಜ ನಿರ್ಮಾಣ ಮಾಡಿದರು. ಇದೇ ಸಮಯಕ್ಕೆ ಅನೇಕ ಸನಾತನಿಗಳು, ಪುರೋಹಿತರು ತಮ್ಮ ಸ್ವಾರ್ಥ ಸಾಧನೆಗೆ ಇದು ಅಡ್ಡಿ –ಆತಂಕ ಒಡ್ಡುತ್ತದೆಯೆಂದು ಬಗೆದು ಶರಣ ಸಮಾಜಕ್ಕೆ ವಿರೋಧಿಗಳಾಗಿ ನಿಂತರು. ಅಂದಿನಿಂದ ಇಂದಿನವರೆಗೂ ಈ ವಿರೋಧ ನಿರಂತರವಾಗಿ ನಡೆದುಕೊಂಡು ಬಂದಿದೆ.
ಬಸವ ಕ್ರಾಂತಿ
ಬಸವಣ್ಣನವರ ತಾತ್ವಿಕ, ಸಾಮಾಜಿಕ, ಧಾರ್ಮಿಕ ವಿಚಾರಗಳಿಗೆ ಒಪ್ಪದ ಅಂದಿನ ಜಾತಿವಾದಿಗಳು ಅವರ ವಿರುದ್ಧ ಸಮರವನ್ನೇ ಸಾರಿದರು. ಪೂರ್ವಾಶ್ರಮದಲ್ಲಿ ಬ್ರಾಹ್ಮಣರಾಗಿದ್ದ ಮಧುವರಸರ ಮಗಳನ್ನು ಪೂರ್ವಾಶ್ರಮದಲ್ಲಿ ಅಸ್ಪೃಶ್ಯರಾಗಿದ್ದ ಹರಳಯ್ಯನವರ ಮಗನಿಗೆ ಲಿಂಗಾಯತ ದೀಕ್ಷೆ ಕೊಟ್ಟು ಮದುವೆ ಮಾಡಿದ ಘಟನೆಯನ್ನೇ ಮೂಲ ಕಾರಣವನ್ನಾಗಿ ಮುಂದಿಟ್ಟುಕೊಂಡು ಅರಸ ಬಿಜ್ಜಳ ರಾಯನಲ್ಲಿ ಮೊರೆಯಿಟ್ಟರು. ವಿಲೋಮ ಪದ್ಧತಿಯ ಈ ಮದುವೆಯು ಹಿಂದೂ ಧರ್ಮದ ಮೂಲತತ್ವಕ್ಕೆ ವಿರೋಧವಾಗಿದೆಯೆಂದೂ, ಇದರಿಂದ ದೇಶಕ್ಕೆ ಅನಾಹುತ ತಪ್ಪಿದ್ದಲ್ಲವೆಂದೂ ಹೇಳಿ ಅರಸನ ಮನಸ್ಸನ್ನು ಕಲುಷಿತಗೊಳಿಸಿದರು. ಮನುಧರ್ಮ ಶಾಸ್ತ್ರದಲ್ಲಿ ನಿರೂಪಿಸಿದಂತೆ ಮಧುವರಸ ಮತ್ತು ಹರಳಯ್ಯನವರಿಗೆ ಮರಣ ದಂಡನೆ ಕೊಡಬೇಕೆಂದು ಒತ್ತಾಯಿಸಿದರು. ಸನಾತನಿಗಳ ಒತ್ತಾಯಕ್ಕೆ ರಾಜ ಮಣಿದನು. ಇದರಿಂದ ಕಲ್ಯಾಣದಲ್ಲಿ ಕ್ಷೋಭೆ ಉಂಟಾಯಿತು. ಸೈನಿಕರಿಂದ ಅಗಣಿತ ಶರಣರ ಹತ್ಯೆಯಾಯಿತು. ಅಳಿದುಳಿದ ಶರಣರು ತಮ್ಮ ಹೊಸ ಸಮಾಜ ರಚನೆಗೆ ಕಾರಣವಾಗಿದ್ದ ವಚನಗಳನ್ನು ಜೊತೆಗೆ ತೆಗೆದುಕೊಂಡು ಚದುರಿ ಹೋದರು.
ಸಮಾಜದಲ್ಲಿ ಪ್ರೀತಿ, ಸಹೋದರತೆ, ಸಮಾನತೆಗಳನ್ನು ಬಿತ್ತರಿಸುವ ಈ ಶರಣ ಸಾಹಿತ್ಯ ಗುಪ್ತವಾಗಿ ಇಡಲ್ಪಟ್ಟಿತು. ಮುಂದೆ ಸುಮಾರು ಮುನ್ನೂರು ವರ್ಷಗಳ ನಂತರ ವಿಜಯನಗರ ಅರಸರ ಕಾಲಕ್ಕೆ ನೂರೊಂದು ವಿರಕ್ತರೂ, ತೋಂಟದ ಸಿದ್ಧಲಿಂಗ ಯತಿಗಳ ಶಿಷ್ಯಪ್ರಶಿಷ್ಯರೂ ಗುಪ್ತನಿಧಿಯಾಗಿದ್ದ ವಚನ ವಾಗ್ಮಯವನ್ನು ಹೊರತೆಗೆದು ಸಂಗ್ರಹಿಸಿದರು; ವಿವಿಧ ವಿನ್ಯಾಸಗಳಲ್ಲಿ ಜೋಡಿಸಿದರು. ಅವುಗಳಿಗೆ ಟೀಕೆ-ಟಿಪ್ಪಣಿಗಳನ್ನು ಬರೆದರು. ಪ್ರಚಾರ ಮಾಡಿದರು. ಈ ಪ್ರಚಾರ ಕಾರ್ಯಕ್ಕೂ ಅನೇಕ ಅಡ್ಡಿ ಆತಂಕಗಳುಂಟಾದವು. ಪುನಃ ವಚನ ಗ್ರಂಥಗಳು ಭೂಗತವಾದವು. ಸುಮಾರು ಕ್ರಿ.ಶ 1600 ರಿಂದ 1920ರ ವರೆಗೆ ಅಂದರೆ 300 ವರ್ಷಗಳ ದೀರ್ಘಾವಧಿಯಲ್ಲಿ ಅವು ಅಜ್ಞಾತವಾಸದಲ್ಲಿ ಉಳಿಯಬೇಕಾಯಿತು. ಇದಲ್ಲದೆ 1685ರಲ್ಲಿ ಮೈಸೂರಿನ ಚಿಕ್ಕದೇವರಾಯ ಒಡೆಯರು ಲಿಂಗಾಯತರ ಮೇಲೆ ನಡೆಸಿದ ಹತ್ಯಾಕಾಂಡವು ಸಹ ವಚನ ವಾಗ್ಮಯವನ್ನು ಸಾರ್ವಜನಿಕರಿಂದ ಬಚ್ಚಿಡಲು ಕಾರಣವಾಯಿತೆಂದು ಹೇಳಬಹುದು. ನಂಜನಗೂಡಿನಲ್ಲಿ ನಡೆದ ಈ ಹತ್ಯೆಯಲ್ಲಿ 400 ಲಿಂಗಾಯತ ಮಠಾಧಿಪತಿಗಳು ಪ್ರಾಣ ತೆತ್ತರು. 700 ಮಠಗಳು ನೆಲಸಮಗೊಂಡವು. ಲಕ್ಷಾವಧಿ ಲಿಂಗಾಯತರ ಕೊಲೆಯಾಯಿತು.
[Wilks (Mark); Historical Sketches of the South of India: In an attempt to trace the History of Mysoor from the origin of the Hindu Government of that state. To the extinction of the Mohammedan Dynasty in 1799. Founded chiefly on Indian Authorities. Edited with notes by Murray Hammick in two volumes- Vol. 1 Mysore, 1930, P.214-222]
ಡಾ.ಫ. ಗು. ಹಳಕಟ್ಟಿ:
ವಚನ ವಾಗ್ಮಯದ ಜೀವರಸವಾಗಿದ್ದ ಬಸವ ಚರಿತ್ರೆಯೂ ಕಾಲಗರ್ಭದಲ್ಲಿ ಮರೆಯಾಗಿ ಹೋಯಿತು. ಇದರ ಪರಿಣಾಮವಾಗಿ ಲಿಂಗಾಯತ ಸಮಾಜದಲ್ಲಿ ಪುನಃ ವೈದಿಕ ಆಚರಣೆಗಳು ಪ್ರಚಾರದಲ್ಲಿ ಬರುವಂತಾಯಿತು. ವೇದ, ಆಗಮ, ಉಪನಿಷತ್ತು, ಶ್ರುತಿ, ಸ್ಮೃತಿ ಮುಂತಾದ ವೈದಿಕ ಧರ್ಮಗ್ರಂಥಗಳೇ ಲಿಂಗಾಯತರ ಧರ್ಮಗ್ರಂಥಗಳೆಂಬ ನಂಬುಗೆಯು ಸಮಾಜದ ಧುರೀಣರಲ್ಲಿ, ಪಂಡಿತರಲ್ಲಿ, ಸ್ವಾಮಿಗಳಲ್ಲಿ, ಶಾಸ್ತ್ರಿಗಳಲ್ಲಿ ಬಲವಾಗಿ ಬೇರೂರುವಂತಾಯಿತು. ಲಿಂಗಾಯತರ ಸಮಾಜ ಸಂಘಟನೆಗಾಗಿ ಇವರೆಲ್ಲಾ ನೆರೆದು ಹಾನಗಲ್ಲ ಶ್ರೀ ಕುಮಾರಸ್ವಾಮಿಗಳ ನೇತೃತ್ವದಲ್ಲಿ 1904ರಲ್ಲಿ ‘ಅಖಿಲ ಭಾರತ ವೀರಶೈವ ಮಹಾಸಭೆ’ ಸ್ಥಾಪಿಸಲ್ಪಟ್ಟಿತು. ಮಹಾಸಭೆಯಲ್ಲಿ ಲಿಂಗಾಯತ ಧರ್ಮದ ಮೂಲಪುರುಷನ ಬಗೆಗೆ, ಧರ್ಮಗ್ರಂಥಗಳ ಬಗೆಗೆ ಚರ್ಚೆ ನಡೆಯಿತು. ಈ ಚರ್ಚೆಯು ತದನಂತರದ ವರುಷಗಳಲ್ಲಿ ಜರುಗಿದ ವೀರಶೈವ ಮಹಾಸಭೆಯ ಅನೇಕ ಅಧಿವೇಶನಗಳಲ್ಲೆಲ್ಲಾ ಮುಂದುವರಿಯಿತೆಂದು ಆಯಾ ವರುಷಗಳ ಅಧಿವೇಶನಗಳಲ್ಲಿ ಪ್ರಕಟವಾದ ವರದಿಗಳಿಂದ ಕಂಡುಬರುತ್ತದೆ.
ಇಂಥ ಅಜ್ಞಾನಾವಸ್ಥೆಯಲ್ಲಿದ್ದ ಲಿಂಗಾಯತರ ದುಃಸ್ಥಿತಿಯನ್ನು ಕುರಿತು ‘ವಚನ ಪಿತಾಮಹ’ ಫ.ಗು.ಹಳಕಟ್ಟಿಯವರು ಮನ ನಾಟುವಂತೆ ಚಿತ್ರಿಸಿದ್ದಾರೆ:
“ 1890 ರಿಂದ 1896ರ ವರೆಗೆ ನಾನು ಮಾಧ್ಯಮಿಕ ಶಾಲೆ ಎಂದರೆ ಹಾಯಸ್ಕೂಲಿನಲ್ಲಿ ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗ್ಗೆ ಇದ್ದ ಪರಿಸ್ಥಿತಿಯನ್ನು ಇಲ್ಲಿ ಹೇಳುವುದು ಅವಶ್ಯವೆನಿಸುತ್ತದೆ. ಆಗ ಜನರಿಗೆ ವೀರಶೈವ ಸಂಸ್ಕೃತಿ, ಅದರ ವಾಗ್ಮಯ ಮತ್ತು ಅದರ ಇತಿಹಾಸ ಇವುಗಳ ನಿಜಸ್ಥಿತಿಯ ಪರಿಚಯವು ಏನೂ ಇರಲಿಲ್ಲ. ವಾಚನ ಪುಸ್ತಕಗಳಲ್ಲಿ ಸೋಮೇಶ್ವರ ಕವಿ, ಸರ್ವಜ್ಞ ಕವಿ, ಸರ್ಪಭೂಷಣ ಕವಿ, ಷಡಕ್ಷರ ಕವಿ, ನಿಜಲಿಂಗ ಕವಿ ಈ ಮೊದಲಾದ ಪದ್ಯಗಳು ಉದಹರಿಸಲ್ಪಟ್ಟಿದ್ದರೂ ಅವರು ಯಾರು, ಎಲ್ಲಿಯವರು, ಅವರು ಬರೆದ ಗ್ರಂಥಗಳಾವುವು, ಎಂಬುದರ ವಿವೇಚನೆಯು ಈ ಪುಸ್ತಕಗಳಲ್ಲಿ ಎಷ್ಟು ಮಾತ್ರವೂ ಇರುತ್ತಿದ್ದಿಲ್ಲ. ಶಿಕ್ಷಕರಿಗೂ ಈ ತರದ ತಿಳುವಳಿಕೆಯು ಇರದ್ದರಿಂದ ಅವರೂ ವಿದ್ಯಾರ್ಥಿಗಳಿಗೆ ಇವುಗಳ ಜ್ಞಾನವನ್ನು ಮಾಡಿಕೊಡುತ್ತಿದ್ದಿಲ್ಲ. ಆದರೆ ಒಂದು ಸಮಾಜದ ಇತಿಹಾಸ ಮತ್ತು ಅದರ ವಾಗ್ಮಯ ಇವುಗಳ ಪರಿಚಯವು ವಿದ್ಯಾರ್ಥಿಗಳಿಗೆ ಇಲ್ಲದೆ ಹೋದರೆ ಸಮಾಜಕ್ಕೋಸ್ಕರ ಆದರ ಭಾವವು ಅವರಲ್ಲಿ ಹುಟ್ಟುವುದು ಹೇಗೆ? ಅದರಿಂದ ಈ ಕಾಲದಲ್ಲಿ ವೀರಶೈವ ಸಮಾಜದ ವಿಷಯವಾಗಿ ವಿಪರೀತ ಭಾವನೆಗಳು ವಿದ್ಯಾರ್ಥಿಗಳಲ್ಲಿ ಮಾತ್ರವಷ್ಟೇ ಅಲ್ಲ, ನಾಡಿನಲ್ಲಿಯೂ ಉಂಟಾಗಿದ್ದುದು ಕಂಡುಬರುತ್ತದೆ.
“ಕರ್ನಾಟಕದಲ್ಲಿ ವೀರಶೈವ ಮತ್ತು ಬ್ರಾಹ್ಮಣ ಈ ಸಮಾಜಗಳಲ್ಲಿ ಪರಸ್ಪರ ಏರಾಟಗಳು ಯಾವಾಗಲೂ ಇದ್ದದ್ದು ಕಂಡುಬರುತ್ತದೆ, ಈ ಸ್ಥಿತಿಯು ಶಾಲಾ ಶಿಕ್ಷಕರಲ್ಲಿಯೂ ಇದ್ದುದು ತಿಳಿಯುತ್ತದೆ. ನಮ್ಮ ಕ್ಲಾಸಿಗೆ ಬರುತ್ತಿದ್ದ ಒಬ್ಬ ಶಿಕ್ಷಕರು ತಮ್ಮ ಶಿಕ್ಷಣ ಕಾರ್ಯ ನಡೆಸುತ್ತಾ ಮಧ್ಯದಲ್ಲಿಯೇ ವೀರಶೈವ ಸಮಾಜದ ಮೇಲೆ ಟೀಕೆಗಳ ಸುರಿಮಳೆಯನ್ನು ಸುರಿಸುತ್ತಿದ್ದರು. ಅವರು ವೀರಶೈವ ಸಮಾಜದಲ್ಲಿ ಪಂಡಿತರಾರೂ ಆಗಿಹೋಗಿಲ್ಲ, ವೀರಶೈವ ಸಮಾಜಕ್ಕೆ ವಾಗ್ಮಯವಿಲ್ಲ, ಅದರಲ್ಲಿ ಹಲ ಕೆಲ ಗ್ರಂಥಕಾರರು ಇದ್ದುದು ಕಂಡುಬಂದರೂ ಅವರು ಮೊದಲು ಬ್ರಾಹ್ಮಣರಿದ್ದು ಹಿಂದುಗಡೆ ಅವರು ವೀರಶೈವರಾದರು. ವೀರಶೈವರು ಮರಾಠರಂತೆ ಶೂರರಲ್ಲ, ರಾಜಕಾರಣಿಗಳಲ್ಲ, ಅವರಲ್ಲಿ ರಾಜರಾಗಿಲ್ಲ ಎಂದು ಮೊದಲಾಗಿ ಬಹುವೇಳೆ ಹೇಳುವುದರಲ್ಲಿ ವೇಳೆಗಳೆಯುತ್ತಿದ್ದರು. ಆಗ ವೀರಶೈವ ಇತಿಹಾಸದ ಅರಿವು ನಾಡಿನಲ್ಲಿ ಪ್ರಸಾರವಾಗದ್ದರಿಂದ ವಿದ್ಯಾರ್ಥಿಗಳಾದ ನಾವು ಮೇಲ್ಕಂಡ ಶಿಕ್ಷಕರು ಹೇಳಿದ್ದನ್ನು ಸುಮ್ಮನೇ ಕೇಳಿಕೊಂಡು ಇರಬೇಕಾಗುತ್ತಿತ್ತು. ಈ ಸ್ಥಿತಿಯು 1896ರ ವರೆಗೂ ಇದ್ದಿತು.”
ಇವು ಫ.ಗು. ಹಳಕಟ್ಟಿಯವರ ಮಾತುಗಳು. ಅವರು 1896 ರಿಂದ 1921ರ ವರೆಗಿನ 25 ವರ್ಷಗಳ ಅವಧಿಯಲ್ಲಿ ಬಸವಾದಿ ಶರಣರ ವಚನ ಗ್ರಂಥಗಳ ಸಂಶೋಧನೆ ಮಾಡಿದರು. ಅವರು ತಮ್ಮ ಸಂಶೋಧನಾ ಕಾರ್ಯದ ಪ್ರಥಮದಲ್ಲಿ ನಡೆದ ಒಂದು ಘಟನೆಯನ್ನು ಮನಂಬುಗುವಂತೆ ವಿವರಿಸಿರುವರು:
“1901 ಮತ್ತು 1902 ಈ ಎರಡು ವರ್ಷಗಳಲ್ಲಿ ಧಾರವಾಡದಲ್ಲಿ ಪ್ಲೇಗ್ ಬೇನೆಯು ಬಹು ತೀವ್ರ ಸ್ಥಿತಿಯಲ್ಲಿ ಇದ್ದುದರಿಂದ ನಾನು ಆಗ ಕೆಲವು ಕಾಲ ಜಮಖಂಡಿ ಸಂಸ್ಥಾನದಲ್ಲಿರುವ ಬನಹಟ್ಟಿ ಗ್ರಾಮದಲ್ಲಿ ನನ್ನ ಮಾವಂದಿರಾದ ಕೈ.ವಾ. ತಮ್ಮಣ್ಣಪ್ಪ ಚಿಕ್ಕೋಡಿ ಇವರಲ್ಲಿ ಹೋಗಿ ಉಳಿಯಬೇಕಾಯಿತು. ಇದೇ ಕಾಲಕ್ಕೆ ಈಗಿನ ನಿವೃತ್ತಿ ನ್ಯಾಯಾಧೀಶರಾದ ಶ್ರೀಯುತ ವೀರಭದ್ರಪ್ಪ ಹಾಲಭಾವಿ ಬಿ.ಎ. ಎಲ್ಎಲ್.ಬಿ, ಇವರು ರಬಕವಿಯಲ್ಲಿಯ ತಮ್ಮ ಆಪ್ತರ ಕಡೆಗೆ ಬರುತ್ತಿದ್ದರು. ನಾವು ಉಭಯತರು ಕಾಲೇಜಿನಲ್ಲಿ ಕೇವಲ ಮಿತ್ರತ್ವದಿಂದ ಇರುತ್ತಿದ್ದು, ಇಲ್ಲಿಯಾದರೂ ಕೂಡಿಯೇ ಕಾಲಕಳೆಯುತ್ತಿದ್ದೆವು. ಶ್ರೀಯುತ ವೀರಭದ್ರಪ್ಪನವರು ಜಮಖಂಡಿ ಸಂಸ್ಥಾನದಲ್ಲಿರುವ ಗೋಠೆ ಎಂಬ ಗ್ರಾಮದಲ್ಲಿ ತಮ್ಮ ಬಂಧುಗಳ ಮನೆಯಲ್ಲಿ ಕೆಲವು ಪುರಾತನ ಗ್ರಂಥಗಳಿದ್ದು ಅವುಗಳನ್ನು ಅವರು ರಬಕವಿಗೆ ತಂದು ನನಗೆ ತೋರಿಸಿದರು. ಅವುಗಳಲ್ಲಿ ಪ್ರಭುಲಿಂಗ ಲೀಲೆ ಮತ್ತು ಗಣಭಾಷ್ಯ ರತ್ನಮಾಲೆ ಎಂಬ ಗ್ರಂಥಗಳಿದ್ದು ಅವುಗಳನ್ನು ನಾನು ಸಮಗ್ರವಾಗಿ ಓದಿ ಅವುಗಳಲ್ಲಿರುವ ಅನೇಕ ವಿಷಯಗಳ ಬಗ್ಗೆ ಟಿಪ್ಪಣಿಗಳನ್ನು ಮಾಡಿಕೊಂಡೆನು.”
ಮೇಲಿನ ಅವತರಣಿಕೆಗಳಿಂದ ಹತ್ತೊಂಬತ್ತನೆಯ ಶತಮಾನ ಮತ್ತು ಇಪ್ಪತ್ತನೆಯ ಶತಮಾನದ ಆದಿ ಭಾಗದಲ್ಲಿ ಲಿಂಗಾಯತ ಸಮಾಜದ ಸ್ಥಿತಿ ಅತ್ಯಂತ ಶೋಚನೀಯವಾಗಿತ್ತೆಂಬುದು ಸ್ಪಷ್ಟವಾಗುತ್ತದೆ. ಫ.ಗು. ಹಳಕಟ್ಟಿಯವರ ಪರಿಶ್ರಮದ ಫಲವಾಗಿ ‘ವಚನ ಶಾಸ್ತ್ರ ಸಾರ’ ಗ್ರಂಥಗಳು ಪ್ರಕಟವಾದವು. ಅವುಗಳಿಂದ ಲಿಂಗಾಯತ ವಿದ್ವಾಂಸರಲ್ಲಿ ಒಂದು ಬಗೆಯ ಹೊಸ ವಿಚಾರಗಳು ಹುಟ್ಟಿಕೊಂಡವು. ಹಳಕಟ್ಟಿಯವರೇ 1926ರಲ್ಲಿ ಬಸವಾದಿ ಶರಣರ ವಚನ ವಾಗ್ಮಯ ಪ್ರಕಟಣೆ ಪ್ರಸಾರಕ್ಕೆ ‘ಶಿವಾನುಭವ’ ಪತ್ರಿಕೆಯನ್ನು ಪ್ರಕಟಿಸಲು ಪ್ರಾರಂಭಿಸಿದರು. ಈ ಮಾಸಿಕ ಪತ್ರಿಕೆಯು 1961ರ ವರೆಗೆ ಅಂದರೆ 35 ವರ್ಷಗಳಷ್ಟು ಕಾಲ ನಡೆದು ಬಂದಿತು. ಕರ್ನಾಟಕದ ಲಿಂಗಾಯತ ಮತ್ತು ಲಿಂಗಾಯತೇತರ ಸಂಶೋಧಕರ, ಪಂಡಿತರ, ಜಿಜ್ಞಾಸುಗಳ ವಿಚಾರ ಓಘವನ್ನೇ ಬದಲಿಸುವಲ್ಲಿ ‘ಶಿವಾನುಭವ’ ಪ್ರಮುಖ ಪಾತ್ರ ವಹಿಸಿತೆಂದು ಹೇಳಬಹುದು. ವಚನ ವಾಗ್ಮಯದ ಅಸ್ತಿತ್ವ ಮತ್ತು ಮಹತ್ವಗಳನ್ನು ‘ವೀರಶೈವ ಮಹಾಸಭೆ’ ಹಾಗೂ ‘ಶಿವಯೋಗ ಮಂದಿರ’ಗಳ ಸಂಸ್ಥಾಪಕರಾದ ಹಾನಗಲ್ಲ ಶ್ರೀ ಕುಮಾರಸ್ವಾಮಿಗಳ ಗಮನಕ್ಕೆ ಮೊಟ್ಟ ಮೊದಲು ತಂದವರೇ ಹಳಕಟ್ಟಿಯವರು. ಶ್ರೀ ಕುಮಾರ ಸ್ವಾಮಿಗಳಿಗೆ 1921ರ ವರೆಗೆ ಬಸವಾದಿ ಶರಣರ ವಚನಗಳ ಅಸ್ತಿತ್ವದ ಬಗೆಗೆ ಪೂರ್ಣ ಮಾಹಿತಿ ಇರಲಿಲ್ಲವೆಂದು ತಿಳಿದುಬರುತ್ತದೆ.
ಹಾನಗಲ್ಲ ಶ್ರೀ ಕುಮಾರಸ್ವಾಮಿಗಳು:
ಹಳಕಟ್ಟಿಯವರು ‘ವಚನಶಾಸ್ತ್ರ ಸಾರ ಭಾಗ-1’ ಈ ಗ್ರಂಥವನ್ನು ರಚಿಸುವಾಗ ಕುಮಾರಸ್ವಾಮಿಗಳನ್ನು ಭೇಟಿಯಾದ ಪ್ರಸಂಗದ ಬಗೆಗೆ ತಮ್ಮ ವರದಿಯಲ್ಲಿ ಹೀಗೆ ಉಲ್ಲೇಖಿಸಿದ್ದಾರೆ:
“ಈ ಗ್ರಂಥವು ಪೂರ್ತಿಯಾಗುವ ಕಾಲದಲ್ಲಿ ಅಂದರೆ 1921 ಜೂನ್ ತಿಂಗಳಲ್ಲಿ ನಾನು ವಿಷಮಜ್ವರದಿಂದ ಪೀಡಿತನಾಗಿದ್ದೆನೆಂಬುದನ್ನು ತಿಳಿದು ನನ್ನ ಮಾವಂದಿರಾದ ಕೈ.ವಾ.ತಮ್ಮಣ್ಣಪ್ಪನವರು ನನ್ನನ್ನು ಕಾಣಲಿಕ್ಕೆ ಬಂದಿದ್ದರು. ಅವರು ಈ ಗ್ರಂಥದಲ್ಲಿ ಸಂಗ್ರಹವಾದ ಉಕ್ತಿಗಳನ್ನು ನೋಡಿ ವಿಸ್ಮಯಪಟ್ಟರು. ಅವರು ಇಂಥ ವಾಗ್ಮಯವನ್ನು ತಾವು ಎಲ್ಲಿಯೂ ನೋಡಿದ್ದಿಲ್ಲವೆಂಬುದನ್ನು ಪಟ್ಟಣದಲ್ಲಿ ಅನೇಕರಿಗೆ ತಿಳಿಸಿದರು. ಅವರಲ್ಲಿ ಕೆಲವರು ನನ್ನೆಡೆಗೆ ಬರಲಾಗಿ ಅವರಿಗೆ ನಾನು ಈ ಗ್ರಂಥದ ಭಾಗಗಳನ್ನು ಓದಿ ತೋರಿಸಹತ್ತಿದೆನು. ಈ ಗ್ರಂಥದ ವಿಚಾರವು ಕರ್ಣೋಪಕರಣವಾಗಿ ಶ್ರೀ ಹಾನಗಲ್ಲ ಕುಮಾರಸ್ವಾಮಿಗಳಿಗೆ ತಿಳಿಯಲಾಗಿ ಅವರು ಕೂಡಲೇ ಬಾಗಲಕೋಟೆಯ ಶ್ರೀ ಮುರಿಗಯ್ಯ ಜಂಗಿನ, ವೇ.ಮೂ. ಬುದ್ಧಯ್ಯಸ್ವಾಮಿ, ಪುರಾಣಿಕ ಮಠ ಮತ್ತು ರೇವಣಸಿದ್ಧ ಶಾಸ್ತ್ರಿಗಳು ಇಷ್ಟು ಜನರು ಕೂಡಿಕೊಂಡು ವಿಜಾಪುರಕ್ಕೆ ಬಂದರು. ಅವರು ನಾನಿದ್ದ ಮನೆಗೆ ಸಮೀಪವಾಗಿ ಸೊನ್ನ ಗ್ರಾಮದ ದೇಸಾಯರಾದ ಕೈ.ವಾ.ಗಂಗಪ್ಪ ದೇಸಾಯಿ ಇವರು ಕಟ್ಟಿಸಿದ ವಿಶಾಲವಾದ ಗೃಹವಿದ್ದು ಅಲ್ಲಿಗೆ ಬಂದು ಇರಹತ್ತಿದರು. ಅವರು ಬಂದ ಕಾಲಕ್ಕೆ ನನಗೆ ಇನ್ನೂ ಚನ್ನಾಗಿ ಕುಳ್ಳಿರಲಿಕ್ಕೆ ಬರುತ್ತಿದ್ದಿಲ್ಲ. ಹೆಚ್ಚಿಗೆ ಕುಳಿತರೆ ಕರುಳಿನಲ್ಲಿ ನೋವು ಉಂಟಾಗುತ್ತಿತ್ತು. ಆದರೂ ನಾನು ಸಂಗ್ರಹಿಸಿದ ಈ ಗ್ರಂಥದಲ್ಲಿಯ ವಚನಗಳನ್ನು ಅವರಿಗೆ ಓದಿ ತೋರಿಸುತ್ತಾ ಬಂದೆನು. ಶ್ರೀ ಸ್ವಾಮಿಗಳವರಿಗೆ ಇಂಥ ವಾಗ್ಮಯವು ವೀರಶೈವರಲ್ಲಿದ್ದದ್ದು ಏನೂ ಗೊತ್ತಿರಲಿಲ್ಲ. ನಾನು ಸಂಗ್ರಹಿದ ವಚನಗಳಲ್ಲಿಯ ಸುಂದರಾವಾದ ಉಚ್ಚ ವಿಚಾರಗಳನ್ನು ಸ್ವಾಮಿಗಳವರು ನೋಡಿ, ಹರುಷಿತರಾಗಿ ಇದನ್ನು ಅಚ್ಚು ಹಾಕಿಸುವುದು ಅವಶ್ಯವೆಂದು ನನಗೆ ತಿಳಿಸಿದರು. ಹೀಗೆ ಶ್ರೀ ಸ್ವಾಮಿಗಳೂ, ಅವರ ಕೂಡ ಬಂದ ಮಹನೀಯರೂ ಮೂರು ನಾಲ್ಕು ದಿವಸ ವಿಜಾಪುರದಲ್ಲಿ ಗ್ರಂಥ ಭಾಗಗಳನ್ನು ಪರಿಶೀಲನೆ ಮಾಡುತ್ತಾ ಇದ್ದು ಆಮೇಲೆ ತಿರುಗಿ ಹೋದರು. [ಹಳಕಟ್ಟಿ (ಫ.ಗು): ಶಿವಾನುಭವ; 25 ವರ್ಷಗಳ ವರದಿ, ಸಂಪುಟ 25, ಸಂಚಿಕೆ 12; ಡಿಸೆಂಬರ್ 1951:ಪುಟ 428-429]
ಹಳಕಟ್ಟಿಯವರ ಪ್ರಯತ್ನದ ಫಲವಾಗಿ ವಚನ ಸಾಹಿತ್ಯ ಬೆಳಕಿಗೆ ಬಂದಿತು. ವಚನಗಳ ಪ್ರಕಟಣೆಯೊಂದಿಗೆ ಬಸವಣ್ಣನವರ ವರ್ಣಮಯ ಜೀವನ ಚರಿತ್ರೆಯ ಮೇಲೆ ದೇಶ-ವಿದೇಶಗಳ ಸಂಶೋಧಕರು ಹೊಸ ಹೊಸ ವಿಚಾರಗಳನ್ನು ವ್ಯಕ್ತಪಡಿಸಿ ಅನೇಕ ಗ್ರಂಥಗಳನ್ನು ಇಪ್ಪತ್ತನೆಯ ಶತಮಾನದಲ್ಲಿ ಪ್ರಕಟಿಸಿರುವರು.
-ಡಾ.ಎಸ್.ಆರ್.ಗುಂಜಾಳ
(ಮುಂದುವರೆಯುವುದು)
Comments 8
ತಮ್ಮಣ್ಣ ಬಿರಾದಾರ
Oct 9, 2020ಹಾನಗಲ್ಲ ಕುಮಾರಸ್ವಾಮಿಗಳು ಬಸವಾದಿ ಶರಣರ ವಚನಗಳನ್ನು ಕಂಡು ಪ್ರತಿಕ್ರಿಯಿಸಿದ ರೀತಿ ನೋಡಿದಾಗ ಅವರ ಬಗೆಗಿನ ನನ್ನ ಅನೇಕ ಅನುಮಾನಗಳು ದೂರವಾದವು.
Mahadevi Kollapur
Oct 9, 2020ಸಮಯ ಎಂದರೇನು… wonderful explanation, very interesting article… do we have such well known gurus in today’s world?
Tippeswamy
Oct 14, 2020ಸ್ವಾಮಿ ಧರ್ಮತೀರ್ಥರು ತಮ್ಮ ‘ಹಿಂದೂ ಸಾಮ್ರಾಜ್ಯ ಶಾಹಿಯ ಇತಿಹಾಸ’ ಎಂಬ ವೈಚಾರಿಕ ಗ್ರಂಥದಲ್ಲಿ ಹೇಳಿರುವ ಮಾತುಗಳು ನಿಜಕ್ಕೂ ಅದ್ಭುತವಾಗಿವೆ. ಹಿರಿಯರಾದ ಗುಂಜಾಳ ಶರಣರ ಲೇಖನ ಪ್ರಕಟಿಸಿದ್ದಕ್ಕೆ ಧನ್ಯವಾದಗಳು
Mariswamy Gowdar
Oct 14, 2020ಡಾ.ಫಗು.ಹಳಕಟ್ಟಿಯವರಿಗೆ ವಚನಗಳ ಸಿಕ್ಕಿದ್ದು ನಮ್ಮ ಭಾಗ್ಯ. ಆ ತ್ಯಾಗ ಜೀವಿಗೆ ಸಮಾಜವು ಎಂದೆಂದಿಗೂ ಋಣಿಯಾಗಿರುತ್ತದೆ.
Padmalaya
Oct 15, 2020ಕನ್ನಡದ ಬಹುಮುಖ್ಯವಾದ ಸಾಂಸ್ಕೃತಿಕ ಚೆರಿತ್ರೆಯೊಂದನ್ನ ಬಿಚ್ಚಿಡಲು ಸೊಗಸಾಗಿ ಪ್ರಯತ್ನಿಸಿದ್ದೀರಿ.ನಿಮ್ಮ ಲೇಖನ ಓದಿದ ಮೇಲೆ ನನ್ನಲ್ಲಿ ಅನೇಕ ನಿರೀಕ್ಷೆಗಳು ಚಿಗುರೊಡೆಯುತ್ತಿವೆ.ಬ್ರಾಹ್ಮಣ ಸಿದ್ದಾಂತಗಳ ಕೂಪಕ್ಕೆ ಬಸವ ಮಾರ್ಗವನ್ನ ಆಪೋಷಣೆಗೊಳಪಡಿಸಿರುವ ವೈಚಾರಿಕ ಹಾದರತನವನ್ನ ನಿಮ್ಮ ಲೇಖನಗಳು ಬಹಿರಂಗಪಡಿಸುವಂತಾಗಲಿ…
Basappa Kalguti
Oct 16, 2020ಫ.ಗು.ಹಳಕಟ್ಟಿಯವರ ಮತ್ತು ಹಾನಗಲ್ಲ ಕುಮಾರಸ್ವಾಮಿಗಳ ವಿಚಾರಗಳ ಮೂಲಕ ಆಗಿನ ಕಾಲದ ಲಿಂಗಾಯತ ಧರ್ಮದ ಪರಿಸ್ಥಿತಿಯನ್ನು ಕಣ್ಣಿಗೆ ಕಾಣುವಂತೆ ಚಿತ್ರಿಸಿದ ಶರಣರಾದ ಗುಂಜಾಳರಿಗೆ ಶರಣಾರ್ಥಿ.
Shambhu B
Oct 19, 2020Thank you for valuable information sir.
Channappa Vali
Nov 5, 2020ಚಾರಿತ್ರಿಕ ಮಾಹಿತಿಯನ್ನು, ಸಂಗ್ರಹಯೋಗ್ಯ ವಿಷಯಗಳನ್ನು ತಿಳಿಸಿದ್ದಕ್ಕೆ ಶರಣು