ವಚನಗಳಲ್ಲಿ ವೈಜ್ಞಾನಿಕ ಚಿಂತನೆ
ಶರಣರು ಎಂದರೆ ಅರಿವು ಮತ್ತು ಆಚಾರ ಒಂದಾದವರು. ಅವರೇ 12ನೆಯ ಶತಮಾನದಲ್ಲಿ ಕಲ್ಯಾಣದಲ್ಲಿದ್ದ ಬಸವಾದಿ ಶಿವಶರಣರು. ಅವರ ಮುಕ್ತ ಅಭಿವ್ಯಕ್ತಿಯ ನುಡಿಮುತ್ತುಗಳೇ ವಚನಗಳು. ವಚನಗಳನ್ನು ಮೊದಲಿಗೆ ವಚನ ಶಾಸ್ತ್ರವೆಂದು, ನಂತರ ವಚನ ಧರ್ಮವೆಂದು, ಮುಂದೆ ವಚನ ಸಾಹಿತ್ಯವೆಂದು ಗುರುತಿಸಲಾಗಿದೆ. 33 ಮಹಿಳೆಯರ, 200ಕ್ಕಿಂತ ಹೆಚ್ಚು ಪುರುಷರ ಸುಮಾರು 22 ಸಾವಿರ ವಚನಗಳು ದೊರೆತಿವೆ. ವಚನ ಸಾಹಿತ್ಯ ಗದ್ಯವೂ ಹೌದು, ಪದ್ಯವೂ ಹೌದು. ವಚನಗಳನ್ನು ಅನುಭವ ಮತ್ತು ಅನುಭಾವ ಸಾಹಿತ್ಯವೆಂದು ಪರಿಗಣಿಸಬಹುದು. ಅನುಭವ ಎಂದರೆ ಮಾನವನ ಪಂಚೇಂದ್ರಿಯಗಳ ಅನುಭವಕ್ಕೆ ಬಂದದ್ದು. ಈ ಅನುಭವ ವ್ಯಕ್ತಿನಿಷ್ಠವಾಗಿರುವಂತೆ ಸಾರ್ವತ್ರಿಕವಾದುದೂ ಹೌದು. ಅನುಭವ ಸಾಹಿತ್ಯ ವಾಸ್ತವಿಕತೆ ಮತ್ತು ಸತ್ಯವನ್ನು ಆಧರಿಸಿದ್ದು. ಅನುಭಾವ ಸಾಹಿತ್ಯ ಆತ್ಮಕ್ಕೆ ಸಂಬಂಧಿಸಿದ್ದು ಹಾಗೂ ವ್ಯಕ್ತಿವಿಶೇಷವಾದದ್ದು. ಅನುಭಾವದಲ್ಲಿ ಅನುಭವ ಮತ್ತು ಅನುಭಾವಗಳ ಸಮ್ಮಿಲನವಿದೆ. ಇಲ್ಲಿ ಲೋಕಾನುಭವದ ಜೊತೆಗೆ ಆತ್ಮಾನುಭವವೂ ಅಡಕವಾಗಿರುತ್ತದೆ.
21ನೆಯ ಶತಮಾನ ವೈಚಾರಿಕ, ವೈಜ್ಞಾನಿಕ ಚಿಂತನೆಗೆ ಹೆಸರಾದದ್ದು. ಇವತ್ತು ವಿಜ್ಞಾನದ ಜೊತೆಗೆ ತಂತ್ರಜ್ಞಾನವೂ ಸೇರಿದೆ. ಸತ್ಯಾನ್ವೇಷಣೆಗೆ ಎರಡು ಪ್ರಮುಖ ಮಾರ್ಗಗಳಿವೆ. ಒಂದು ಅಧ್ಯಾತ್ಮ, ಮತ್ತೊಂದು ವಿಜ್ಞಾನ. ವಿಜ್ಞಾನ ಪ್ರಯೋಗ, ಪರಿಶೀಲನೆ, ಶೋಧನೆಯ ಮೂಲಕ ಸತ್ಯದ ಹುಡುಕಾಟ ಮಾಡುವುದು. ಅದು ಪ್ರಾಕೃತಿಕ ಸತ್ಯಶೋಧನೆಯಲ್ಲಿ ವಿಶೇಷ ಒಲವು ತೋರುತ್ತದೆ. ಶರಣರು ವಾಸ್ತವವಾದಿಗಳಾಗಿರುವಂತೆ ವಿಜ್ಞಾನಿಗಳೂ ಹೌದು. ಹಾಗಾಗಿ ಅವರು ವೇದ, ಶಾಸ್ತ್ರ, ಪುರಾಣ, ಆಗಮಗಳಿಂದ ದೂರವಿದ್ದವರು. ಶರಣರ ಇಂದ್ರಿಯ, ಮನಸ್ಸು, ಬುದ್ಧಿಯ ಚಿಂತನ ಮಂಥನದ ನಿಕಷಕ್ಕೆ ಒಳಪಟ್ಟು ಹೊರಬಂದ ಅಮೃತ ನುಡಿಗಳೇ ವಚನಗಳು. ವಚನಕಾರರಲ್ಲಿ ಬಹುಮುಖ್ಯವಾಗಿ ಪರಿಗಣಿಸುವ ಬಸವಣ್ಣನವರು ವೇದ, ಶಾಸ್ತ್ರಗಳನ್ನು ಕುರಿತು ಹೇಳಿರುವ ವಚನ ಚಿಂತನಾರ್ಹವಾಗಿದೆ.
ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,
ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ, ನೋಡಯ್ಯಾ.
ಮಹಾದಾನಿ ಕೂಡಲಸಂಗಮದೇವಾ,
ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ.
ವಿಜ್ಞಾನ ಎಲ್ಲಿ, ಏನು, ಹೇಗೆ, ಏಕೆ, ಯಾವಾಗ ಎನ್ನುವ ಪ್ರಶ್ನೆಗಳ ಮೂಲಕವೇ ಸತ್ಯಶೋಧನೆಗೆ ಮುಂದಾಗುವುದು. ಈಗ ದೊರೆತಿರುವ 22 ಸಾವಿರ ವಚನಗಳಲ್ಲಿ ಪ್ರಶ್ನಾರ್ಥಕ ಚಿನ್ಹೆಗಳಿರುವ ವಚನಗಳು ಸಾಕಷ್ಟಿವೆ. ಬಹುತೇಕ ವಚನಗಳು ವೈಜ್ಞಾನಿಕ ಚಿಂತನೆಯನ್ನು ಒಳಗೊಂಡಿವೆ. ಪ್ರಶ್ನಿಸುವ ಮೂಲಕ ಸತ್ಯವನ್ನು ಶೋಧಿಸುವ ವಿಜ್ಞಾನದ ಪ್ರಯೋಗವೇ ವಚನಗಳಲ್ಲೂ ಕಂಡುಬರುವುದು. ಭೌತಶಾಸ್ತ್ರ, ರಸಾಯನಶಾಸ್ತ್ರ, ಖಗೋಳಶಾಸ್ತ್ರ, ಮನಶಾಸ್ತ್ರ, ಸಮಾಜಶಾಸ್ತ್ರ ಹೀಗೆ ಹಲವು ಶಾಖೆಗಳನ್ನು ವಿಜ್ಞಾನ ಹೊಂದಿದೆ. ವೈಜ್ಞಾನಿಕ ಮನೋಭಾವ ವಚನ ಸಾಹಿತ್ಯದಲ್ಲೂ ಇದೆ. ಹಾಗಾಗಿ ವಚನ ಸಾಹಿತ್ಯವನ್ನು ವೈಜ್ಞಾನಿಕ ಸಾಹಿತ್ಯವೆಂದು ಕರೆದರೆ ತಪ್ಪೇನಿಲ್ಲ. ಪ್ರಸ್ತುತ ದಿನಮಾನಗಳಲ್ಲಿ ವ್ಯಕ್ತಿಯ ಅಂತರಂಗ ಮತ್ತು ಬಹಿರಂಗ ಬೇರೆ ಬೇರೆಯಾಗಿರುವ ಕಾರಣದಿಂದಲೇ ವ್ಯಕ್ತಿ ಮತ್ತು ಸಮಾಜ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿರುವುದು. ಅಂತರಂಗ ಮತ್ತು ಬಹಿರಂಗವನ್ನು ಒಂದಾಗಿಸುವುದೇ ವಚನ ಸಾಹಿತ್ಯದ ಮೂಲ ಉದ್ದೇಶ. ಮನಸ್ಸನ್ನು ನಿಕಷಕ್ಕೆ ಒಡ್ಡುವ ಮೂಲಕ ವ್ಯಕ್ತಿಯನ್ನು ಸಂಕಷ್ಟಗಳಿಂದ ಪಾರುಮಾಡುವ ತತ್ವ ಸಿದ್ಧಾಂತಗಳು ವಚನ ಸಾಹಿತ್ಯದಲ್ಲಿವೆ. ಇದಕ್ಕೆ ಉದಾಹರಣೆಯಾಗಿ ಬಸವಣ್ಣನವರ `ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಎನ್ನುವ ವಚನವನ್ನು ನೋಡಬಹುದು. ಇದರಲ್ಲಿ ಅಂತರಂಗ, ಬಹಿರಂಗ ಶುದ್ಧಿಗೆ ಏಳು ಸೂತ್ರಗಳನ್ನು ಹೇಳಲಾಗಿದೆ. ಈ ಸೂತ್ರಗಳಂತೆ ಬಾಳಿದರೆ ಅಂತರಂಗ, ಬಹಿರಂಗ ಎರಡೂ ಶುದ್ಧವಾಗುವವು. ಈ ಶುದ್ಧಿಯೇ ದೇವರನ್ನು ಒಲಿಸುವ ಸಾಧನ. ಇಲ್ಲಿ ನೈತಿಕ, ಸಾಮಾಜಿಕ ವಿಜ್ಞಾನವಿದೆ. ವಚನಕಾರರು ಪ್ರಕೃತಿಯಲ್ಲೇ ಪರಮಾತ್ಮನನ್ನು ಕಾಣುವರು. ಇದಕ್ಕೆ ಮಹಾದೇವಿಯಕ್ಕನವರ ವಚನ ಸಾಕ್ಷಿಯಾಗಿದೆ.
ವನವೆಲ್ಲಾ ನೀನೆ, ವನದೊಳಗಣ ದೇವತರುವೆಲ್ಲಾ ನೀನೆ,
ತರುವಿನೊಳಗಾಡುವ ಖಗಮೃಗವೆಲ್ಲಾ ನೀನೆ,
ಚೆನ್ನಮಲ್ಲಿಕಾರ್ಜುನಾ
ಸರ್ವಭರಿತನಾಗಿ ಎನಗೇಕೆ ಮುಖದೋರೆ?
ಪ್ರಕೃತಿಯ ಗಿಡ-ಮರ, ಖಗ-ಮೃಗಗಳಲ್ಲೆಲ್ಲ ಇರುವ ದೇವರು ನನಗೇಕೆ ಮುಖ ತೋರುತ್ತಿಲ್ಲ ಎಂದು ಪ್ರಶ್ನಿಸುವ ಪರಿ ಮಹಾದೇವಿಯಕ್ಕನ ವೈಜ್ಞಾನಿಕ ಮನೋಭಾವವನ್ನು ತೋರುವುದು. ಪ್ರಕೃತಿಪೂಜೆಯ ವಿಧಾನವನ್ನು ಅಲ್ಲಮಪ್ರಭುದೇವರು ತುಂಬಾ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ.
ಗಗನವೆ ಗುಂಡಿಗೆ ಆಕಾಶವೆ ಅಗ್ಘವಣಿ,
ಚಂದ್ರ, ಸೂರ್ಯರಿಬ್ಬರು ಪುಷ್ಪ, ಬ್ರಹ್ಮ ಧೂಪ, ವಿಷ್ಣು ದೀಪ,
ರುದ್ರನೋಗರ!-ಸಯಧಾನ ನೋಡಾ!
ಗುಹೇಶ್ವರಲಿಂಗಕ್ಕೆ ಪೂಜೆ ನೋಡಾ!
ಸಮಾನ ಗುಣಧರ್ಮಗಳುಳ್ಳ ಗೆಳೆಯರು ಪರಸ್ಪರ ಭೇಟಿಯಾದಾಗ ಆಗುವ ಅನುಭವವನ್ನು ಬಸವಣ್ಣನವರು ವೈಜ್ಞಾನಿಕವಾಗಿಯೇ ನಿರೂಪಿಸಿದ್ದಾರೆ:
ಸೂರ್ಯನ ಉದಯ ತಾವರೆಗೆ ಜೀವಾಳ,
ಚಂದ್ರಮನುದಯ ನೆಯ್ದಿಲೆಗೆ ಜೀವಾಳ,
ಕೂಪರ ಠಾವಿನಲ್ಲಿ ಕೂಟ ಜೀವಾಳವಯ್ಯಾ,
ಒಲಿದ ಠಾವಿನಲ್ಲಿ ನೋಟ ಜೀವಾಳವಯ್ಯಾ.
ಕೂಡಲಸಂಗನ ಶರಣರ
ಬರವೆನಗೆ ಪ್ರಾಣ ಜೀವಾಳವಯ್ಯಾ.
ಸೂರ್ಯ ಉದಯಿಸುತ್ತಲೇ ತಾವರೆಗೆ ಜೀವ ಬಂದಂತಾಗಿ ಅರಳುವುದು. ಅದೇ ರೀತಿ ಚಂದ್ರೋದಯವಾದಾಗ ನೈದಿಲೆ ಜೀವತಳೆದು ಅರಳುವುದು. ಈ ಉದಾಹರಣೆಗಳ ಮೂಲಕ ಪ್ರೇಮಿಗಳ ಬಳಿ ಬರುವರು ಬಸವಣ್ಣನವರು. ಪರಸ್ಪರ ಪ್ರೀತಿಸಿದವರು ಒಂದೆಡೆ ಸೇರಿದರೆ ಅವರಿಗೆ ಜೀವ ಬಂದಂತಾಗುವುದು. ಅವರ ಕಣ್ಣೋಟವೇ ಜೀವದ್ರವ್ಯವನ್ನು ಸೂಸುವುದು. ಇಲ್ಲಿ ಮುಖ್ಯವಾಗಿ ಅವರು ಹೇಳುವುದು ಶರಣರ ಬರವೇ ಎನಗೆ ಪ್ರಾಣ ಜೀವಾಳ ಎಂದು. ಶರಣರ ಸಂಗದ ಮಹತ್ವವನ್ನು ಇಲ್ಲಿ ಮನಗಾಣಿಸಿದ್ದಾರೆ. ಈ ವಚನದಲ್ಲಿ ಖಗೋಳ ವಿಜ್ಞಾನ, ಸಮಾಜ ವಿಜ್ಞಾನ, ಪರಿಸರ ವಿಜ್ಞಾನವೂ ಇದೆ.
ಸಮಾಜ ಹಲವು ವ್ಯಕ್ತಿಗಳ ಸಮೂಹ. ಅಲ್ಲಿ ವೈವಿಧ್ಯತೆಯಲ್ಲೂ ಏಕತೆ ಇರುವುದನ್ನು ನೋಡಬಹುದು. ಅದೇ ಜೀವಂತಿಕೆಯ ಲಕ್ಷಣ. ಸಮಾಜವನ್ನು ಜಾತಿಯ ವ್ಯವಸ್ಥೆಯಿಂದ ವಿಂಗಡಿಸುವ ಪ್ರಯತ್ನ ಸಮಾಜ ವಿಜ್ಞಾನಿಗಳಿಂದಲೇ ನಡೆಯುತ್ತಿದೆ. ಅದಕ್ಕೆ ಬದಲಾಗಿ ಸಮಾಜವನ್ನು ಮಾನವ ಕೇಂದ್ರಿತವಾಗಿ ಸಂಘಟಿಸಬೇಕು ಎನ್ನುವುದು ವಚನಕಾರರ ಸದಾಶಯ.
ನೆಲನೊಂದೆ: ಹೊಲಗೇರಿ ಶಿವಾಲಯಕ್ಕೆ,
ಜಲವೊಂದೆ: ಶೌಚಾಚಮನಕ್ಕೆ,
ಕುಲವೊಂದೆ: ತನ್ನ ತಾನರಿದವಂಗೆ,
ಫಲವೊಂದೆ: ಷಡುದರುಶನ ಮುಕ್ತಿಗೆ,
ನಿಲವೊಂದೆ: ಕೂಡಲಸಂಗಮದೇವಾ, ನಿಮ್ಮನರಿದವಂಗೆ.
ಸೆಟ್ಟಿಯೆಂದೆನೆ ಸಿರಿಯಾಳನ?
ಮಡಿವಾಳನೆಂಬೆನೆ ಮಾಚಯ್ಯನ?
ಡೋಹರನೆಂಬೆನೆ ಕಕ್ಕಯ್ಯನ?
ಮಾದಾರನೆಂಬೆನೆ ಚೆನ್ನಯ್ಯನ?
ಆನು ಹಾರುವನೆಂದಡೆ ಕೂಡಲಸಂಗಯ್ಯ ನಗುವನಯ್ಯಾ.
ಈ ವಚನಗಳು ಜಾತ್ಯತೀತ ಮನೋಭಾವನೆಗೆ ಹಿಡಿದ ಕನ್ನಡಿ. ಜಾತಿಯ ನೆಲೆಯಲ್ಲಿ ವ್ಯಕ್ತಿಯನ್ನು ನೋಡದೆ ಮಾನವೀಯ ನೆಲೆಯಲ್ಲಿ ನೋಡುವಂತೆ ಮಾನವ ಪ್ರಜ್ಞೆಯನ್ನು ಎಚ್ಚರಿಸುವವು. ಇವನಾರವ, ಇವನಾರವ, ಇವನಾರವ ಎನ್ನದೆ ಇವ ನಮ್ಮವ, ಇವ ನಮ್ಮವ, ಇವ ನಮ್ಮವ ಎಂದು ಪ್ರತಿಯೊಬ್ಬರನ್ನೂ ತನ್ನಂತೆ ಪರಿಭಾವಿಸುವ ಸಂದೇಶ ವಚನಗಳಲ್ಲಿದೆ. ವಚನಗಳು ಸಕಲ ಜೀವಾತ್ಮರ ಒಳಿತನ್ನೇ ಬಯಸುವವು. ವಚನಗಳಲ್ಲಿ ಅರ್ಥಶಾಸ್ತ್ರವಿದೆ. `ಕಾಯಕವೇ ಕೈಲಾಸ’ ಎನ್ನುವ ತತ್ವದಲ್ಲಿ ಇದನ್ನು ನೋಡಬಹುದು. ಹಾಗಾಗಿ `ಕೃಷಿಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ’ ಎಂದು ವಚನಗಳು ಸ್ಪಷ್ಟಪಡಿಸುವವು. ಕಾಯಕದ ಜೊತೆಗೆ ದಾಸೋಹ ತತ್ವವೂ ಮಿಳಿತವಾಗಿದೆ. ಮನುಷ್ಯ ದುಡಿಯಬೇಕು. ದುಡಿದದ್ದನ್ನು ಸಂಗ್ರಹಿಸಿಡದೆ ಅಥವಾ ತಾನೊಬ್ಬನೇ ಬಳಸದೆ ಸಮಾಜದ ಸತ್ಕಾರ್ಯಗಳಿಗೂ ಮೀಸಲಿಡಬೇಕು ಎನ್ನುವುದನ್ನು ಒತ್ತಿ ಹೇಳುವುದು ದಾಸೋಹ ತತ್ವ.
ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ
ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ
ಕೂಡಲಸಂಗಮದೇವಾ.
ಕಾಯಕದಿಂದ ಬಂದದ್ದನ್ನು ಹೇಗೆ ವಿನಿಯೋಗಿಸಬೇಕು ಎನ್ನುವ ಅಸಂಗ್ರಹ ತತ್ವ ಈ ವಚನದಲ್ಲಿದೆ. ಇದಕ್ಕೆ ಪೂರಕವಾಗಿ ಮತ್ತೊಂದು ವಚನವನ್ನು ನೋಡಬಹುದು.
ಹಡೆದೊಡವೆ ವಸ್ತುವನು ಮೃಡಭಕ್ತರಿಗಲ್ಲದೆ
ಕಡಬಡ್ಡಿಯ ಕೊಡಲಾಗದು.
ಬಂದಡೊಂದು ಲೇಸು, ಬಾರದಿದ್ದಡೆರಡು ಲೇಸು.
ಅಲ್ಲಿದ್ದಡೆಯೂ ಲಿಂಗಕ್ಕೆ ಬೋನ. ಇಲ್ಲಿದ್ದಡೆಯೂ ಲಿಂಗಕ್ಕೆ ಬೋನ.
ಲಿಂಗದೊಡವೆ ಲಿಂಗಕ್ಕೆ ಸಾರಿತ್ತಾಗಿ
ಬಂದಿತ್ತೆಂಬ ಪರಿಣಾಮವಿಲ್ಲ, ಬಾರದೆಂಬ ದುಃಖವಿಲ್ಲ.
ಇದು ಕಾರಣ ಕೂಡಲಸಂಗಮದೇವಾ,
ನಿಮ್ಮ ಶರಣರಿಗಲ್ಲದೆ, ಕಡಬಡ್ಡಿಯ ಕೊಡಲಾಗದು.
ಸಂಪತ್ತನ್ನು ಹೆಚ್ಚಿಸುವ ದುರಾಸೆಯಿಂದ ಕಡ ಇಲ್ಲವೇ ಬಡ್ಡಿಗೆ ಕೊಡದೆ ಸದ್ಭಕ್ತರಿಗೆ ದಾಸೋಹ ರೂಪದಲ್ಲಿ ನೀಡಬೇಕು ಎನ್ನುವ ಸಂದೇಶ ಈ ವಚನದಲ್ಲಿದೆ. ಶರಣರ ಕಾಯಕ ಮತ್ತು ದಾಸೋಹ ಪ್ರಜ್ಞೆ ಬಹುದೊಡ್ಡ ವಿಜ್ಞಾನ. ಇದು ಎಲ್ಲ ಕಾಲದ ಜನರಿಗೆ ಕೊಟ್ಟಿರುವ ಮಹತ್ವದ ಸಂದೇಶ. ಕಾಯಕ ಮತ್ತು ದಾಸೋಹ ತತ್ವದಲ್ಲಿ ಸಮಾನ ದುಡಿಮೆ, ಸಮಾನ ವಿತರಣೆ ಅಡಕವಾಗಿದೆ. ದುಡಿದದ್ದನ್ನು ಹೇಗೆ ವಿತರಿಸಬೇಕು ಎನ್ನುವುದಕ್ಕೆ ಬಸವಣ್ಣನವರು ಕಾಗೆ, ಕೋಳಿಯ ನಿದರ್ಶನ ನೀಡಿದ್ದಾರೆ.
ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು?
ಕೋಳಿ ಒಂದು ಕುಟುಕ ಕಂಡಡೆ ಕೂಗಿ ಕರೆಯದೆ ತನ್ನ ಕುಲವನೆಲ್ಲವ?
ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ ಕಾಗೆ ಕೋಳಿಯಿಂದ ಕರಕಷ್ಟ
ಕೂಡಲಸಂಗಮದೇವಾ.
ಮಹಾದೇವಿಯಕ್ಕ ವ್ಯಕ್ತಿಗತ ಶುದ್ಧಿಯ ಪರಿಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾಳೆ. ಇದಕ್ಕೆ ಮುಂದಿನ ವಚನವನ್ನು ನೋಡಬಹುದು. ಇಲ್ಲಿ ಶ್ರೀಗಂಧ, ಚಿನ್ನ, ಕಬ್ಬುಗಳ ವೈಜ್ಞಾನಿಕ ನಿದರ್ಶನದ ಮೂಲಕ ಮನುಷ್ಯ ಹೇಗೆ ತನ್ನ ಅವಗುಣಗಳನ್ನು ಕಳೆದುಕೊಂಡು ಸದ್ಗುಣಿಯಾಗಬೇಕೆಂದು ತಿಳಿಸಿದ್ದಾಳೆ.
ಚಂದನವ ಕಡಿದು ಕೊರೆದು ತೇದಡೆ ನೊಂದೆನೆಂದು ಕಂಪ ಬಿಟ್ಟಿತ್ತೆ?
ತಂದು ಸುವರ್ಣವ ಕಡಿದೊರೆದಡೆ ಬೆಂದು ಕಳಂಕ ಹಿಡಿಯಿತ್ತೆ?
ಸಂದು ಸಂದು ಕಡಿದ ಕಬ್ಬನು ತಂದು ಗಾಣದಲ್ಲಿಕ್ಕಿ ಅರೆದಡೆ,
ಬೆಂದು ಪಾಕಗುಡದೆ ಸಕ್ಕರೆಯಾಗಿ ನೊಂದೆನೆಂದು ಸಿಹಿಯ ಬಿಟ್ಟಿತ್ತೆ?
ನಾ ಹಿಂದೆ ಮಾಡಿದ ಹೀನಂಗಳೆಲ್ಲವ ತಂದು ಮುಂದಿಳುಹಲು ನಿಮಗೆ ಹಾನಿ.
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಾ,
ನೀ ಕೊಂದಡೆಯೂ ಶರಣೆಂಬುದ ಮಾಣೆ.
ಶರಣರ ವಚನಗಳಲ್ಲಿ ಸಸ್ಯ ವಿಜ್ಞಾನ, ಮಾನವೀಯ ವಿಜ್ಞಾನ, ನೈತಿಕ ವಿಜ್ಞಾನ, ಸಮಾಜ ವಿಜ್ಞಾನ, ಅರ್ಥಶಾಸ್ತ್ರ, ಮನೋವಿಜ್ಞಾನ, ಪ್ರಾಕೃತಿಕ ವಿಜ್ಞಾನ ಹೀಗೆ ಏನೆಲ್ಲವೂ ಮೇಳೈಸಿವೆ. ಶರಣರು ವಿಜ್ಞಾನದ ಜ್ಞಾನದ ಜೊತೆಗೆ ಇನ್ನೂ ಮಹತ್ವದ ಜ್ಞಾನವನ್ನು ಹೇಳಿದ್ದಾರೆ. ಇದಕ್ಕೆ ಅರಿವಿನ ಮಾರಿತಂದೆಯ ಒಂದು ವಚನವನ್ನು ನೋಡಬಹುದು:
ಕಾಯವಿದ್ದು ಕಾಬುದು ವಿಜ್ಞಾನ.
ಜೀವವಿದ್ದು ಕಾಬುದು ಸುಜ್ಞಾನ.
ಎರಡಳಿದು ತೋರಿಕೆಯಲ್ಲಿ ಕಾಬುದು ಪರಂಜ್ಯೋತಿಜ್ಞಾನ.
ಇಂತೀ ಮೂರು ಮುಖವ ಏಕವ ಮಾಡಿ
ಬೇರೊಂದು ಕಾಬುದು ಪರಮಪ್ರಕಾಶಜ್ಞಾನ.
ಇಂತೀ ಅಂತರ ಪಟಂತರದಲ್ಲಿ ನಿಂದು ನೋಡುವ ಸಂದೇಹವ ಹರಿದ ಸಂದಿನಲ್ಲಿ
ಕುಂದದ ಬೆಳಗು ತೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.
ವಚನಗಳು ಬೆಲೆ ಕಟ್ಟಲಾಗದ ಮುತ್ತುರತ್ನಗಳಿದ್ದಂತೆ. ಅವು ಎಲ್ಲ ಕಾಲಕ್ಕೂ ಸಲ್ಲುವಂತಹುಗಳಾಗಿವೆ. ಅವುಗಳಲ್ಲಿ ಏನಿಲ್ಲ ಎಂದರೆ ಎಲ್ಲವೂ ಇದೆ ಎಂದೇ ಹೇಳಬಹುದು. ಶರಣರ ವಚನಗಳಲ್ಲಿ ಎಲ್ಲ ರೀತಿಯ ವಿಜ್ಞಾನವೂ ಇರುವುದು ವಚನಗಳ ಸಿಂಹಾವಲೋಕನದಿಂದ ತಿಳಿದುಬರುವುದು. ಈ ನೆಲೆಯಲ್ಲಿ ಸಕಲೇಶ ಮಾದರಸರ ವಚನದ ಮೂಲಕ ಹೇಗೆ ವಚನಗಳಲ್ಲಿ ವಿಜ್ಞಾನ ವ್ಯಕ್ತವಾಗಿದೆ ಎನ್ನುವುದನ್ನು ನೋಡಬಹುದು:
ಜ್ಯೋತಿ ಸೋಂಕಿದ ಬತ್ತಿಯೆಲ್ಲ ಜ್ಯೋತಿಯಪ್ಪವಯ್ಯಾ.
ಸಾಗರವ ಮುಟ್ಟಿದ ನದಿಗಳೆಲ್ಲ ಸಾಗರವಪ್ಪವಯ್ಯಾ.
ಪ್ರಸಾದವ ಮುಟ್ಟಿದ ಪದಾರ್ಥಂಗಳೆಲ್ಲ ಪ್ರಸಾದವಪ್ಪವಯ್ಯಾ.
ಲಿಂಗವ ಮುಟ್ಟಿದ ಅಂಗವೆಲ್ಲ ಲಿಂಗಾಂಗವಪ್ಪವಯ್ಯಾ.
ಸಕಳೇಶ್ವರದೇವಯ್ಯಾ, ನಿಮ್ಮ ಮುಟ್ಟಿದವರೆಲ್ಲ ನಿಮ್ಮಂತೆ ಅಪ್ಪರಯ್ಯಾ.
Comments 5
ಭಾರತಿ ರುದ್ರಪ್ಪ ಗಳೇದ
Mar 11, 2024ಸಹಜ, ಸರಳ ವಚನಗಳು ವಿಜ್ಞಾನವಲ್ಲದೆ, ಮೂಢನಂಬಿಕೆಗಳಲ್ಲವೇ ಅಲ್ಲ. ಆ ಅಮೂಲ್ಯ ಸಂಪತ್ತನ್ನು ನಾವು ನಮ್ಮ ಲೆವಲ್ಲಿಗೆ ಇಳಿಸಿಕೊಂಡು ಮೌಢ್ಯ ಬಿತ್ತುತ್ತಿದ್ದೇವೆ.
Omakarappa D
Mar 12, 2024ಕಾಯವಿದ್ದು ಕಾಬುದು ವಿಜ್ಞಾನ.
ಜೀವವಿದ್ದು ಕಾಬುದು ಸುಜ್ಞಾನ.
ಎರಡಳಿದು ತೋರಿಕೆಯಲ್ಲಿ ಕಾಬುದು ಪರಂಜ್ಯೋತಿಜ್ಞಾನ.
ಈ ವಚನವನ್ನು ಬಿಡಿಸಿ ಹೇಳಿ ಗುರುಗಳೇ. ಅದೊಂದು ಅಧ್ಯಯನವಾಗಿ ಇಲ್ಲದ ಆ ಕಾಲದಲ್ಲಿ ವಿಜ್ಞಾನವನ್ನು ಶರಣರು ಹೇಗೆ ಪರಿಭಾವಿಸಿದ್ದರು?
Siddanagowda Patil
Mar 14, 2024ಕರ್ನಾಟಕ ಸರ್ಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನೆಂದು ಅಧಿಕೃತವಾಗಿ ಘೋಷಣೆ ಮಾಡಿದ್ದಕ್ಕೂ, ಶಾಲೆಯ ಮೇಲೆ ಪ್ರಶ್ನಿಸದೇ ಏನನ್ನೂ ಒಪ್ಪಬೇಡವೆಂದು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕೆಂಬ ಆಶಯಕ್ಕೂ ಕಾರಣ ವಚನಗಳು ಆಧುನಿಕ ಹಾಗೂ ವೈಜ್ಞಾನಿಕ ಎನ್ನುವ ಕಾರಣಕ್ಕಾಗಿಯೇ. ಈ ಹಿನ್ನೆಲೆಯಲ್ಲಿ ಗುರುಗಳ ಮಾತುಗಳು ಮನನೀಯವಾಗಿವೆ.
Vani Chandrashekhar
Mar 14, 2024ಈಗಿನ ವಿಜ್ಞಾನದ ಅರ್ಥಕ್ಕೂ ಶರಣರ ಕಾಲದಲ್ಲಿ ಬಂದ ವಿಜ್ಞಾನ ಎನ್ನುವ ಶಬ್ದಾರ್ಥಕ್ಕೂ ಬೇರೆ ಬೇರೆ ಹಿನ್ನೆಲೆಗಳಿವೆ, ಬೇರೆ-ಬೇರೆ ಅರ್ಥಗಳಿವೆ. ಅದನ್ನು ಲೇಖನದಲ್ಲಿ ಹುಡುಕಿದೆ. ಆಗಿನ ವಿಜ್ಞಾನದ ವ್ಯಾಖ್ಯಾನ ಏನಿತ್ತು ಎನ್ನುವ ಕುತೂಹಲ ನನಗೆ. ಸ್ವಾಮಿಗಳು ಇದರ ಬಗ್ಗೆ ಬೆಳಕು ಹರಿಸಬೇಕು.
ಲಿಂಗರಾಜ ಬೇವಿನಕಟ್ಟಿ
Mar 19, 2024ವಚನಗಳು ಹೇಳಿದ್ದಕ್ಕೆ ವಿರುದ್ಧವಾಗಿಯೇ ನಡೆಯುತ್ತಿರುವ ಲಿಂಗಾಯತರು ಬಸವಣ್ಣ ಮತ್ತು ಶರಣರನ್ನ ಕೇವಲ ಜಾತಿಯ ಹೆಮ್ಮೆಗಾಗಿ ಇಟ್ಟುಕೊಂಡಿದ್ದಾರೆ. ಶ್ರೀಗಳು ತಮ್ಮ ಬರಹ ಮತ್ತು ಮಾತುಗಳಲ್ಲಿ ಎಚ್ಚರಿಸುತ್ತಲೇ ಇದ್ದರೂ ಯಾಕೆ ಭಕ್ತರು ಬದಲಾಗುವುದಿಲ್ಲ. ಇದು ಅತ್ಯಂತ ನೋವಿನ ಸಂಗತಿ.