ಲಿಂಗಾಯತ ಧರ್ಮ – ಪ್ರಗತಿಪರ
ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರಿಂದ ರೂಪುಗೊಂಡುದೇ ಲಿಂಗಾಯತ ಧರ್ಮ. ಈ ನೆಲದಲ್ಲಿ ಆ ಹಿಂದೆ ಅವ್ಯಾಹತವಾಗಿ ಚಾಲ್ತಿಯಲ್ಲಿದ್ದ ವರ್ಗತಾರತಮ್ಯ, ವರ್ಣತಾರತಮ್ಯ, ಲಿಂಗ ತಾರತಮ್ಯ, ದೇವರು, ಧರ್ಮ, ಕರ್ಮಗಳ ಕುರಿತಾದ ಅಜ್ಞಾನ ಮತ್ತು ಮೌಢ್ಯಗಳ ನಿವಾರಣೆಗಾಗಿ ಈ ಧರ್ಮ ಗುರು ಬಸವಣ್ಣನವರಿಂದ ಪ್ರಸ್ತಾಪಿಸಲ್ಪಟ್ಟು ಅಸಂಖ್ಯಾತ ಶರಣರಿಂದ ರೂಪುಗೊಂಡಿತು. ಆಗ ಘಟಿಸಿದ ಕಲ್ಯಾಣಕ್ರಾಂತಿಯ ತರುವಾಯ ಸ್ವಲ್ಪ ಕಾಲ ಗುಪ್ತಗಾಮಿನಿಯಾಗಿ ಸುಮಾರು 15ನೇ ಶತಮಾನದ ವೇಳೆಗೆ ಎಡೆಯೂರು ಸಿದ್ಧಲಿಂಗೇಶ್ವರರ ಕಾಲದಲ್ಲಿ ಹೆಚ್ಚು ಪ್ರಚಲಿತಕ್ಕೆ ಬಂದಿತು. ಗುರು ಬಸವಣ್ಣನವರು ರೂಪಿಸ ಬಯಸಿದ ಹೊಸವ್ಯವಸ್ಥೆಯು ಪ್ರಚಲಿತದಲ್ಲಿದ್ದ ಕಂದಾಚಾರಗಳು, ಅವಾಸ್ತವ, ಅವೈಜ್ಞಾನಿಕ ಕಟ್ಟುಪಾಡುಗಳು, ನೆಲೆಯಿಲ್ಲದ, ನಂಬಿಕೆಗೆ ಅರ್ಹವಲ್ಲದ ಆಚಾರ ಹಾಗೂ ವಿಚಾರಗಳ ಜಾಗದಲ್ಲಿ ವೈಚಾರಿಕತೆ ಹಾಗೂ ವೈಜ್ಞಾನಿಕತೆಯ ತಳಹದಿಯ ಮೇಲೆ ಹೊಸ ನಂಬಿಕೆ ಹೊಸ ವಿಚಾರ –ಆಚಾರ, ಹೊಸ ರೀತಿನೀತಿಗಳನ್ನು ಜನರ ಬದುಕನ್ನು ಸರಳೀಕರಿಸುವ, ಅರ್ಥಪೂರ್ಣವಾಗಿಸುವ ಮತ್ತು ಸಾರ್ಥಕಗೊಳಿಸುವ ಮಹತ್ತರ ಜವಾಬ್ದಾರಿಯೊಂದಿಗೆ ಚಾಲ್ತಿಗೆ ತಂದರು.
ಬಸವಣ್ಣನವರ ಹೊಸವ್ಯವಸ್ಥೆಯಲ್ಲಿ ಗೊಡ್ಡುಸಂಪ್ರದಾಯಗಳಿಗೆ ಕವಡೆಕಾಸಿನ ಕಿಮ್ಮತ್ತೂ ಇಲ್ಲವಾದ್ದರಿಂದ ಮೂಲಭೂತವಾದಿಗಳ ಅತ್ಯಂತ ಸುಗಮವಾದ ಆದಾಯದ ಮೂಲಕ್ಕೇ ಕೊಳ್ಳಿ ಬಿದ್ದಿತ್ತು. ಇದು ಸುಖಾಸುಮ್ಮನೇ ಯಾವ ಸಾಧನೆ ಇಲ್ಲದೆ ಸಮಾಜದಲ್ಲಿ ಉನ್ನತ ವರ್ಗದವರೆಂದು ಕೀರ್ತಿ ಪ್ರತಿಷ್ಠೆಯೊಂದಿಗೆ ಮೆರೆಯುತ್ತಿದ್ದವರ ಕಣ್ಣನ್ನು ಕೆಂಪಾಗಿಸಿತು, ಸೂಕ್ತಸಮಯಕ್ಕಾಗಿ ಕಾದುಕೂತು ಜಾತಿಸಂಕರ ವಿವಾಹದ ಹೆಸರಿನಲ್ಲಿ ಜನರನ್ನು ದಂಗೆ ಎಬ್ಬಿಸಿ ಕಲ್ಯಾಣಕ್ರಾಂತಿಗೆ ಕಾರಣರಾದರು. ಅಸಂಖ್ಯಾತ ಶರಣರನ್ನು ಕೊಂದು ರಕ್ತದಾಹ ತೀರಿಸಿಕೊಂಡರು. ಅನುಭವಮಂಟಪದಲ್ಲಿ ಸೇರಿ ರಚಿಸಿದ ಅನುಭಾವದ ವಚನಗಳನ್ನು ಮುಂದಿನ ತಲೆಮಾರುಗಳಿಗೆ ತಲುಪಿಸುವ ಸದುದ್ದೇಶದಿಂದ ಕ್ರಾಂತಿಯ ಸಮಯದಲ್ಲಿ ಶರಣರು ಚೆದುರಿಹೋಗಿ ಅಮೂಲ್ಯವಾದ ವಚನ ಸಂಪತ್ತನ್ನು ರಕ್ಷಿಸಿದರು. ಕ್ರಾಂತಿಯ ಬಳಿಕ ಮೂಲಭೂತವಾದಿಗಳು ವಚನಗಳ ಮೂಲಆಶಯಕ್ಕೆ ಕೊಳ್ಳಿ ಇಡುವ ಕಾರ್ಯದಲ್ಲಿ ನಿರತರಾದರು. ಶರಣರ ಅನುಭಾವ ಅವರ ವಚನಗಳಲ್ಲಿ ಸ್ಫುಟವಾಗಿತ್ತು, ಮತ್ತು ಮುಂದಿನ ಜನಾಂಗ ಈ ವಚನಗಳನ್ನೇ ಆಧಾರವಾಗಿಟ್ಟುಕೊಂಡು ತಮ್ಮ ಬದುಕನ್ನು ಕಟ್ಟಿಕೊಳ್ಳುವ ಸಾಧ್ಯತೆ ನಿಚ್ಚಳವಾಗಿತ್ತು. ಇದನ್ನರಿತ ಮೂಲಭೂತವಾದಿಗಳು ಯಾರ ಗಮನಕ್ಕೂ ಬಾರದಂತೆ ವಚನಗಳನ್ನು ವಿರೂಪಗೊಳಿಸುವ ಹೀನಕೃತ್ಯಕ್ಕೆ ಕೈಹಾಕಿದರು. ಇದನ್ನು ಮೂರು ರೀತಿ ಕಾರ್ಯರೂಪಕ್ಕೆ ತರಲಾಯಿತು.
1) ವಚನದ ಸಾಲುಗಳ ಮಧ್ಯೆ ಕೆಲವು ಸಾಲುಗಳನ್ನು ಅಥವಾ ಕೆಲವು ಪದಗಳನ್ನು ಕೃತ್ರಿಮವಾಗಿ ತಾವೇ ಬರೆದು ತಮಗೆ ಸೂಕ್ತವಾಗಿ ಅನುಕೂಲವಾಗುವ ರೀತಿ ಸೇರಿಸಿದರು. ಶರಣರೇ ಹೀಗೆ ಹೇಳಿದ್ದಾರೆ ಎಂದು ನಂಬಿಸುವ ಹುನ್ನಾರ ನಡೆಯಿತು.
2) ವಚನಗಳು ಸಂಸ್ಕೃತ ಶ್ಲೋಕಗಳ ಭಾಷಾಂತರವಷ್ಟೇ, ಅವು ಶರಣರ ಸ್ವಯಂಕೃಷಿಯಲ್ಲವೆಂದು ಮುಂದಿನ ತಲೆಮಾರುಗಳಿಗೆ ತಪ್ಪು ಸಂದೇಶ ರವಾನಿಸುವ ಹಾಗೂ ಶರಣರ ಮೇಲಿನ ಗೌರವವನ್ನು ನಿಕೃಷ್ಟಗೊಳಿಸುವ ಹುನ್ನಾರದಿಂದ ವಚನಗಳ ಮಧ್ಯೆ ಸಂಸ್ಕೃತ ಶ್ಲೋಕಗಳನ್ನು ಯಥೇಚ್ಚವಾಗಿ ಸೇರಿಸಲಾಯಿತು.
3) ಕೆಲವೊಂದು ವಚನಗಳನ್ನು ಶರಣರ ವಚನಗಳೆನ್ನುವ ರೀತಿ ಶರಣರ ಆಶಯಕ್ಕೆ ವಿರುದ್ಧವಾಗಿ ಇಡೀ ವಚನವನ್ನು ಕೃತ್ರಿಮವಾಗಿ ತಾವೇ ಸೃಷ್ಟಿಸಿ ಶರಣರ ಅಂಕಿತನಾಮವನ್ನು ಹಾಕಿದರು.
ಈ ಎಲ್ಲದರುಗಳಿಂದ, ಇಂದು ನಮಗೆ ಲಭ್ಯವಿರುವ ಎಲ್ಲಾ ವಚನಗಳೂ ಶರಣರ ಆಶಯಕ್ಕೆ ಪೂರಕವಾಗಿವೆ ಎಂದು ಹೇಳಲಾಗದು. ಅನೇಕ ವಚನಗಳು ನಮ್ಮನ್ನು ಶರಣ ಸಿದ್ಧಾಂತದಿಂದ ವಿಮುಖವಾಗಿಸಿ ಪುನಃ ಮೂಢನಂಬಿಕೆ ಕಂದಾಚಾರಗಳೆಡೆಗೆ ಕೊಂಡೊಯ್ಯುತ್ತವೆ. ಹೀಗಿದ್ದಾಗ ಶರಣ ತತ್ವ ಚಿಂತಕರು, ಅನುಯಾಯಿಗಳು ವಚನಗಳನ್ನು ಯಥಾವತ್ತಾಗಿ ಅರಿಯುವ ಮೊದಲು ಶರಣರ ಮೂಲ ಆಶಯಗಳೇನು ಎಂದರಿಯಬೇಕು. ಆಗ ಮಾತ್ರ ಸರಿಯಾದ ಶರಣಪಥದ ಬಾಗಿಲು ತೆರೆದುಕೊಳ್ಳಲು ಸಾಧ್ಯ, ಇಲ್ಲವಾದಲ್ಲಿ ಇನ್ಯಾವುದೋ ಬಾಗಿಲು ಹೊಕ್ಕು ಇದೇ ಶರಣ ಸಿದ್ಧಾಂತ ಎಂದು ಹೇಳುವಂತಾಗುತ್ತದೆ. ಶರಣ ಚಿಂತನೆಗಳು ಯಾವತ್ತೂ ಪ್ರಗತಿಪರ ಸ್ವರೂಪದ್ದಾಗಿದ್ದವು, ಈ ಹಿನ್ನೆಲೆಯಿಂದ ಪ್ರಗತಿಪರ ಧರ್ಮವಾದ ಲಿಂಗಾಯತಧರ್ಮದಲ್ಲಿ ಶರಣರು ಆಚರಿಸಿ ಬೋಧಿಸಿದ ವಿಚಾರ- ಆಚಾರಗಳು ಯಾವುವು ಎಂದು ಸ್ಥೂಲವಾಗಿ ಅರಿಯುವ ಉದ್ದೇಶ ಈ ಲೇಖನದ್ದಾಗಿದೆ:
ಈಗಿರುವ ವಚನಗಳ ಆಧಾರದಲ್ಲಿ ಲಿಂಗಾಯತವು ಎರಡು ಬಗೆಯಾಗುತ್ತದೆ: 1) ಸಾಂಪ್ರದಾಯಿಕ ಲಿಂಗಾಯತ ಮತ್ತು 2) ಪ್ರಗತಿಪರ ಲಿಂಗಾಯತ
ಸಾಂಪ್ರದಾಯಿಕ ಲಿಂಗಾಯತ: ಇದು ಇಂದು ಲಭ್ಯವಿರುವ ಎಲ್ಲಾ ವಚನಗಳನ್ನು ಹೇಗಿವೆಯೋ ಹಾಗೆ (ಖೊಟ್ಟಿ ವಚನಗಳೂ ಸೇರಿ) ಅರ್ಥ ಮಾಡಿಕೊಳ್ಳುವುದು ಮತ್ತು ಅದರಂತೆ ನಡೆಯುವುದು.
ಪ್ರಗತಿಪರ ಲಿಂಗಾಯತ: ವಚನಗಳಲ್ಲಿ ಕಲ್ಯಾಣಕ್ರಾಂತಿಯ ನಂತರ ಶರಣರ ಆಶಯಗಳಿಗೆ ವಿರುದ್ಧವಾಗಿ ಹೊಸದಾಗಿ ಸೇರಿಸಿ ವಿರೂಪಗೊಳಿಸಿರುವ ವಿಚಾರಗಳನ್ನು/ವಚನಗಳನ್ನು ಹೆಕ್ಕಿ ತೆಗೆದು ಶರಣರ ಮೂಲಆಶಯಗಳಿಗೆ ಅನುಗುಣವಾಗಿರುವ ವಿಚಾರಗಳನ್ನು/ವಚನಗಳನ್ನು ಮಾತ್ರ ಪರಿಗಣಿಸಿ ಅದರಂತೆ ನಂಬಿ ಆಚರಿಸುವುದು.
ಪ್ರಗತಿಪರ: ವಿಚಾರ ಮತ್ತು ಆಚಾರಗಳು
1) ಶರಣರ ದೇವರು ಕಾಲ್ಪನಿಕವಲ್ಲ, ಅದು ಅನುಭಾವಿಕ:
ಜಗದಗಲ ಮುಗಿಲಗಲ ಪಾತಾಳದಿಂದತ್ತತ್ತ ಪಾದ. ಬ್ರಹ್ಮಾಂಡದಿಂದತ್ತತ್ತ ಮಕುಟ ವಿಶ್ವ ಬ್ರಹ್ಮಾಂಡವನು, ತನ್ನ ಕುಕ್ಷಿಯೊಳು ನಿಕ್ಷೇಪವ ಮಾಡಿಕೊಂಡಿಪ್ಪ ದೇವನೀಗ ಎನ್ನದೇವ. ಆ ದೇವನೊಳಗೆ ನಾನಡಕ, ನನ್ನೊಳಗೆ ಆ ದೇವನಡಕ. ಇಂತಪ್ಪ ದೇವನ ನಂಬಿ, ನಾ ಕೆಟ್ಟು ಬಟ್ಟ ಬಯಲಾದೆ. ಈ ದೇವನರಿಯದೆ ಜಗವೆಲ್ಲ ಕಲ್ಲದೇವರು, ಮಣ್ಣದೇವರು, ಮರದೇವರು ಎಂದು ಇವನಾರಾಧಿಸಿ ಕೆಟ್ಟರಲ್ಲ. ಸ್ವರ್ಗ ಮರ್ತ್ಯ ಪಾತಾಳದವರೆಲ್ಲರು ಎನ್ನ ದೇವನನರಿದು ಅರ್ಚಿಸಲಿಲ್ಲ, ಪೂಜಿಸಲಿಲ್ಲ, ಭಾವಿಸಲಿಲ್ಲ. ಇದು ಕಾರಣ, ಆವ ಲೋಕದವರಾದರೂ ಆಗಲಿ, ಎನ್ನ ದೇವನನರಿದರೆ, ಭವವಿಲ್ಲ ಬಂಧನವಿಲ್ಲ. ನೆರೆ ನಂಬಿರೆ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನ.
2) ಸ್ವರ್ಗ ನರಕಗಳು ಬೇರೆ ಇಲ್ಲ:
ಪುಣ್ಯವೆಂದರಿಯೆ, ಪಾಪವೆಂದರಿಯೆ, ಸ್ವರ್ಗವೆಂದರಿಯೆ ನರಕವೆಂದರಿಯೆ, ಹರಹರ ಮಹಾದೇವ ಶಿವಶರಣೆಂದು ಶುದ್ಧ ನೋಡಯ್ಯಾ, ಹರಹರ ಮಹಾದೇವ ಶಿವಶರಣೆಂದು ಧನ್ಯ ನೋಡಯ್ಯಾ. ಕೂಡಲಸಂಗಮದೇವಯ್ಯಾ, ನಿಮ್ಮನರ್ಚಿಸಿ, ಪೂಜಿಸಿ ನಿಶ್ಚಿಂತನಾದೆ.
ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೋ! ಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮರ್ತ್ಯಲೋಕ. ಆಚಾರವೆ ಸ್ವರ್ಗ, ಅನಾಚಾರವೆ ನರಕ. ಕೂಡಲಸಂಗಮದೇವಾ, ನೀವೆ ಪ್ರಮಾಣು.
3) ಕರ್ಮಸಿದ್ಧಾಂತದಲ್ಲಿ ನಂಬಿಕೆಯಿಲ್ಲ:
ಪ್ರತಿ ಜೀವಿಗೂ ಇರುವುದೊಂದೇ ಜನ್ಮ, ಪುನರಪಿ ಜನನ, ಪುನರಪಿ ಮರಣ ಎಂಬ ನಂಬಿಕೆಗಿಲ್ಲಿ ಸ್ಥಾನವಿಲ್ಲ ಹಾಗೂ ಪೂರ್ವಜನ್ಮದ ಕರ್ಮದ ಆಧಾರದ ಮೇಲೆ ಈ ಜನ್ಮ ನಿರ್ಧಾರವಾಗಿದೆ ಎಂಬುದು ಶರಣ ಸಿದ್ಧಾಂತಕ್ಕೆ ದೂರ. ಹುಟ್ಟಿನೊಡನೆ ಆರಂಭವಾಗುವ ಜೀವನ ಚಕ್ರ ಸಾವಿನೊಡನೆ ಮುಕ್ತಾಯವಾಗುತ್ತದೆ. ನಂತರ ಕರ್ಮಗಳು ಮುಂದಿನ ಜನ್ಮಕ್ಕೆ ಒಯ್ಯಲ್ಪಡುತ್ತವೆಂಬುದಕ್ಕೆ ಜಾಗವಿಲ್ಲ. ಆದರೆ ಸಾಂಪ್ರದಾಯಿಕ ಲಿಂಗಾಯತರು ಪುನರ್ಜನ್ಮ ಮತ್ತು ಕರ್ಮಸಿದ್ಧಾಂತವನ್ನು ಶರಣರು ಪ್ರತಿಪಾದಿಸಿದ್ದಾರೆ ಎಂದು ನಂಬುತ್ತಾರೆ.
“ಪುಣ್ಯಪಾಪವೆಂಬ ಉಭಯಕರ್ಮವನಾರು ಬಲ್ಲರಯ್ಯಾ ಇವನಾರುಂಬರು, ಕಾಯ ತಾನುಂಬಡೆ ಕಾಯ ತಾ ಮಣ್ಣು, ಜೀವ ತಾನುಂಬಡೆ ಜೀವ ತಾ ಬಯಲು, ಈ ಉಭಯನಿರ್ಣಯವ ಕೂಡಲಸಂಗಮದೇವಾ, ನಿಮ್ಮ ಶರಣ ಬಲ್ಲ.”
“ನಾನಾ ಭವದುಃಖದಲ್ಲಿ ಹುಟ್ಟಿದ ಪ್ರಾಣಿಯಲ್ಲ ತಂದೆ; ಇನ್ನು ಹುಟ್ಟಲಾರೆನು, ಹೊಂದಲಾರೆನು, ಜನನ ಮರಣವೆಂಬೆರಡಕ್ಕೆ ಹೊರಗಾದೆನಯ್ಯಾ. ನೀವು ಹೇಳಿದ ಮಣಿಹವ ಮಾಡಿದೆ, ಇನ್ನು ಕೂಡಿಕೊಳ್ಳಾ ಕೂಡಲಸಂಗಮದೇವಾ.”
4) ಗುರು ಮತ್ತು ಜಂಗಮವಾಗಲು ಸಂನ್ಯಾಸಿ (ಬ್ರಹ್ಮಚಾರಿ)ಯಾಗುವ ಅವಶ್ಯಕತೆ ಇಲ್ಲ ಹಾಗೂ ಕಾವಿಧರಿಸುವ ಅಗತ್ಯವಿಲ್ಲ:
ಧರ್ಮಪಿತ ಗುರುಬಸವಣ್ಣನವರೇ ಆದಿಯಾಗಿ ಬಹುತೇಕ ಶರಣರು ವಿವಾಹಿತರಾಗಿದ್ದರು ಎಂಬುದೇ ಸಾಕ್ಷಿ ಮತ್ತು ಅವರಾರೂ ಕಾವಿ ವಸ್ತ್ರಸಂಹಿತೆ ಹೊಂದಿದವರಾಗಿರಲಿಲ್ಲ. ಬಾಹ್ಯದ ವಸ್ತ್ರಕ್ಕಿಂತ ಅಂತರಂಗ ಶುದ್ಧಿಗೆ ಮಹತ್ವಕೊಟ್ಟರು. ವಿವಾಹಿತರೂ ಗುರು, ಜಂಗಮವಾಗಲು ಅರ್ಹರು. ಆದರೆ ಶರಣ ಸಿದ್ಧಾಂತದಂತೆ ಆಚಾರವಂತರಾಗಿರಬೇಕಷ್ಟೇ.
5) ಗುರು-ಶಿಷ್ಯರಲ್ಲಿ ಮೇಲು ಕೀಳುಗಳಿಲ್ಲ:
ಈ ಧರ್ಮದಲ್ಲಿ ದೀಕ್ಷೆ ಕೊಟ್ಟಾತ ಶಾಶ್ವತವಾಗಿ ಗುರು, ದೀಕ್ಷೆ ಪಡೆದಾತನು ಶಾಶ್ವತ ಶಿಷ್ಯ ಎಂಬುದಿಲ್ಲ. ಪ್ರಜ್ವಲಿಸುವ ಒಂದು ಜ್ಯೋತಿ ಮತ್ತೊಂದು ದೀಪವನ್ನು ಹತ್ತಿಸಿದಾಗ ಎರಡೂ ಜ್ಯೋತಿಗಳ ನಡುವೆ ವ್ಯತ್ಯಾಸವಿರದು. ಲಿಂಗಾಯತದಲ್ಲಿರುವುದು ಇದೇ ಸಿದ್ಧಾಂತ. ಬಸವಣ್ಣನವರಿಂದ ದೀಕ್ಷಿತರಾದರೂ ಚನ್ನಬಸವಣ್ಣ ಶಿಷ್ಯ ಬಸವಣ್ಣ ಗುರು ಎಂಬ ಭಿನ್ನಭಾವ ಅಳಿದುಹೋಗಿರುತ್ತದೆ. ಎಷ್ಟೋ ವಿಚಾರಗಳಲ್ಲಿ ಚನ್ನಬಸವಣ್ಣನವರೇ ಬಸವಣ್ಣನವರಿಗೆ ಗುರುವಾಗಿರುವುದನ್ನು ವಚನಗಳಲ್ಲಿ ಕಾಣುತ್ತೇವೆ. ಗುರು ಎಂಬುದು ಸ್ವಯಲಿಂಗವಾದ ಸ್ಥಿತಿ ಅಂತಹ ಗುರುವಿನಿಂದ ಲಿಂಗ ಪಡೆದುಕೊಳ್ಳುವುದು ಶಿಷ್ಯನ ಸೌಭಾಗ್ಯವೇ ಸರಿ. ಆದರೆ ವಾಸ್ತವದಲ್ಲಿ ಇದು ದುರ್ಲಭವಾದ ಕಾರಣ ಲಿಂಗದೀಕ್ಷೆ ಪಡೆದ ಯಾರೇ ಆಗಲಿ ಶರಣಪಥದಲ್ಲಿ ನಿಷ್ಠೆಯುಳ್ಳವರಾಗಿದ್ದರೆ ಅಂಥವರಿಂದ ದೀಕ್ಷೆ ಪಡೆಯಬಹುದು. ಆದರೆ ಸಾಂಪ್ರದಾಯಿಕ ಲಿಂಗಾಯತರು ಗುರು ಮತ್ತು ಶಿಷ್ಯರನ್ನು ಸದಾಕಾಲ ಭಿನ್ನವಾಗಿಯೇ ನೋಡುತ್ತಾರೆ. ಅಲ್ಲಿ ಭಕ್ತ ಎಂದೂ ಗುರುವಾಗುವುದಿಲ್ಲ. ಅನೇಕ ಬಾರಿ ಕೇವಲ ಹೊರಗಿನ ವೇಷದಿಂದ ಗುರುವೆಂದು ಗುರುತಿಸಲ್ಪಟ್ಟರೂ ಆತನನ್ನು ಸಾಂಪ್ರದಾಯಿಕ ಸಮಾಜ ಗುರುವೆಂದು ಸದಾ ಗೌರವಿಸುತ್ತದೆ.
“ಗುರುಶಿಷ್ಯಸಂಬಂಧವನೇನೆಂದುಪಮಿಸುವೆ? ಜ್ಯೋತಿಯಲೊದಗಿದ ಜ್ಯೋತಿಯಂತಿರಬೇಕು ದರ್ಪಣದೊಳಡಗಿದ ಪ್ರತಿಬಿಂಬದಂತಿರಬೇಕು, ಸ್ಫಟಿಕದೊಳಗಿರಿಸಿದ ರತ್ನದಂತಿರಬೇಕು, ರೂಪಿನ ನೆಳಲಿನ ಅಂತರಂಗದಂತಿರಬೇಕು. ಇದು ಕಾರಣ, ಕೂಡಲಚೆನ್ನಸಂಗಯ್ಯಾ ದರ್ಪಣವ ದರ್ಪಣಕ್ಕೆ ತೋರಿದಂತಿರಬೇಕು”
“ತಾವು ಗುರುವೆಂದು ಮುಂದಣವರಿಗನುಗ್ರಹವ ಮಾಡುವರಯ್ಯಾ, ತಾವು ಗುರುವೆಂತಾದರೊ! ಎಲ್ಲರಿಗೆಯೂ ಒಂದೇ ದೇಹ. ‘ಸಪ್ತಧಾತುಸಮಂ ಪಿಂಡಂ ಸಮಯೋನಿಸಮುದ್ಭವಂ ಆತ್ಮಾಕಾಯ ಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ’ ಎಂದುದಾಗಿ, ಗುರುವೆಂಬುದು ತಾನು ಪರುಷವು ಆ ಪರುಷವು ಮುಟ್ಟಲೊಡನೆ ಉಳಿದ ಲೋಹಂಗಳು ಸುವರ್ಣವಾದುವಲ್ಲದೆ, ಆ ಪರುಷವೆ ಆಗಲರಿಯವು… ಅದು ಗುರುಸ್ಥಲವಲ್ಲ ನಿಲ್ಲು ಮಾಣು. ಗುರುವೆಂಬುದು ತಾನು ಸ್ವಯಂ ಜ್ಯೋತಿ ಪ್ರಕಾಶವು, ಅಂತಪ್ಪ ಸ್ವಯಂಜ್ಯೋತಿ ಪ್ರಕಾಶವ ತಂದು ಪರಂಜ್ಯೋತಿಯ ಹೊತ್ತಿಸಿದಡೆ, ಆ ಜ್ಯೋತಿ ತನ್ನಂತೆ ಮಾಡಿತ್ತು. ಅದಾವ ಜ್ಯೋತಿಯೆಂದಡೆ ಪಶ್ಚಿಮಜ್ಯೋತಿ. ಆ ಪಶ್ಚಿಮಜ್ಯೋತಿಯ ಬೆಳಗಿನಿಂದ ಪ್ರಾಣಲಿಂಗವ ಕಂಡು ಸುಖಿಯಾದೆನು. ನಾಲ್ಕು ವೇದಾರ್ಥ:ಅಜಪಗಾಯತ್ರಿ. ಅಜಪಗಾಯತ್ರಿಯರ್ಥ: ಪ್ರಾಣಾಯಾಮ. ಪ್ರಾಣಾಯಾಮದಿಂದ ಪ್ರಾಣಲಿಂಗ ಸಂಬಂಧವ ಮಾಡೂದು. ಇಷ್ಟರಲ್ಲಿ ತಾನು ಸ್ವತಂತ್ರನಾದಡೆ, ಇಷ್ಟಲಿಂಗವನಾರಿಗಾದರೂ ಕೊಡುವುದು. ಇಲ್ಲದಿದ್ದರೆ ಅಂಧಕನ ಕೈಯ ಹೆಳವ ಹಿಡಿದಂತೆ ಕಾಣಾ ಕೂಡಲಚೆನ್ನಸಂಗಮದೇವಯ್ಯಾ”
“ಆದಿಲಿಂಗ, ಅನಾದಿ ಶರಣನೆಂಬುದು ತಪ್ಪದು; ಆದಿ ಗುರು, ಅನಾದಿ ಶಿಷ್ಯನೆಂಬುದು ತಪ್ಪದು. ಗುರುವಿಂಗೆ ಶಿಷ್ಯಂಗೆ ಏನು ದೂರ ದೇವಾ? ಮುಳ್ಳುಗುತ್ತುವಡೆ ತೆರಹಿಲ್ಲದ ಪರಿಪೂರ್ಣ ಘನವು. ಒಬ್ಬರಲ್ಲಿ ಒಂದು ಭಾವವುಂಟೆ? ಎನ್ನೊಳಗೆ ಬೆಳಗುವ ಜ್ಞಾನ, ನಿನ್ನ ಹೃದಯಕಮಲದೊಳಗಣ ಆವ್ಯಕ್ತ ಲಿಂಗ. ನಿನ್ನೊಳು ತೊಳಗಿ ಬೆಳಗುವ ಜ್ಯೋತಿರ್ಲಿಂಗ ಎನ್ನಂತರಂಗದ ಸುಜ್ಞಾನಲಿಂಗ. ಒಂದರಲ್ಲಿ ಒಂದು ಬಿಚ್ಚಿ ಬೇರೆ ಮಾಡಬಾರದಾಗಿ, ಪ್ರಾಣಲಿಂಗ ಒಂದೆ, ಉಪದೇಶ ಒಂದೆ, ಕ್ರಿಯಾಕರ್ಮ ಒಂದೆ. ನೀವಿನ್ನಾವುದ ಬೇರೆ ಮಾಡಿ ನುಡಿವಿರಯ್ಯಾ? ಕಾರ್ಯದಲ್ಲಿ ಗುರುವಾಗಿ, ಅಂತರಂಗಕ್ಕೆ ಸುಜ್ಞಾನೋಪದೇಶವ ಮುನ್ನವೆ ಮಾಡಿದ ಬಳಿಕ ಕ್ರೀಯಿಂದ ಮಾಡಲಮ್ಮೆನೆಂದಡೆ ಹೋಹುದೆ? ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ ಎನಗೆ ನೀವು ಉಪದೇಶವ ಮಾಡಿದಡೆ ಮರ್ತಲೋಕದ ಮಹಾಗಣಂಗಳ ಕೈಯಲ್ಲಿ ಅಹುದಹುದೆನಿಸುವೆ ಕಾಣಾ ಸಂಗನಬಸವಣ್ಣ”
6) ಲಿಂಗಾಯತದಲ್ಲಿ ಮಠಗಳು ಇಲ್ಲ:
ವಾಸ್ತವದಲ್ಲಿ ಹನ್ನೆರಡನೇ ಶತಮಾನದಲ್ಲಿ ಕಾವೀಧಾರೀ ಲಿಂಗಾಯತ ಮಠಗಳು ಅಸ್ತಿತ್ವದಲ್ಲಿರಲಿಲ್ಲ. ಪ್ರತಿ ಲಿಂಗಾಯತನ ಮನೆಯೂ ಮಠವೇ ಆಗಿದ್ದವು. ವೀರಶೈವರ ಮಠಗಳು ಅಂದು ಇದ್ದವು ಆದರೆ ಅವು ಸ್ವಾರ್ಥದ ಕೇಂದ್ರಗಳಾಗಿದ್ದವು. ಇದನ್ನು ಮಡಿವಾಳ ಮಾಚಿದೇವರ ವಚನದಲ್ಲಿ ಕಾಣಬಹುದು. ಕಲ್ಯಾಣಕ್ರಾಂತಿಯ ನಂತರ ವಿರಕ್ತಮಠಗಳು ಅಸ್ತಿತ್ವಕ್ಕೆ ಬಂದವು.
“ನಿಟಿಲತಟದಲ್ಲಿ ಮಠವ ಮಾಡಿಕೊಂಡು, ಘಟವ ಸಟೆಮಾಡಿ, ದಿಟವ ಪಿಡಿದು ನಟಿಸಿ ನಿರಂಜನ ಲಿಂಗದಲ್ಲಿ ಘಟೋತ್ತರವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.”
“ಅರುಹಿನ ಕುರುಹ ಕಾಣದೆ ಗಿರಿ ಕೋಡಗಲ್ಲ ಮೇಲೆ ತಲೆಕೆಳಗೆ ಮಾಡಿ ತಪವ ಮಾಡಿದಡಿಲ್ಲ, ಕಾಲಕರ್ಮಂಗಳ ದಂಡಿಸಿದಡಿಲ್ಲ, ಪೃಥ್ವಿ ತಿರುಗಿ, ತೀರ್ಥಂಗಳ ಮಿಂದು, ನಿತ್ಯನೇಮಂಗಳ ಮಾಡಿದಡಿಲ್ಲ. ಜಲಸಮಾಧಿಯಲ್ಲಿ ಕುಳಿತಡಿಲ್ಲ, ಸುತ್ತಿಸುಳಿವ ಮನವನು ಚಿತ್ತದಲ್ಲಿರಿಸಿ ನಿಶ್ಚಿಂತವಾದಡೆ ನಿತ್ಯಪ್ರಕಾಶ ಗುರು ಗುಹೇಶ್ವರಲಿಂಗವು ಮತ್ತೆ ಅರಸಲುಂಟೇನಯ್ಯಾ? ಮಠವ್ಯಾಕೊ, ಪರ್ವತವ್ಯಾಕೊ, ಜನವ್ಯಾಕೋ, ನಿರ್ಜನವ್ಯಾಕೊ ಚಿತ್ತ ಸಮಾಧಾನವುಳ್ಳ ಪುರುಷಂಗೆ? ಹೊರಗಣ ಧ್ಯಾನ ಮೌನ ಜಪತಪ ನಿತ್ಯನೇಮಂಗಳ್ಯಾಕೊ ತನ್ನ ತಾನರಿದ ಶರಣಂಗೆ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
“ಕೇಳು ನೀನೆಲೊ ಮಾನವಾ, ಸೋಮವಾರ ಅಮಾವಾಸ್ಯೆ ಹುಣ್ಣಿಮೆ ಎಂಬ ದೊಡ್ಡ ಹಬ್ಬಗಳು ಬಂದಿಹವೆಂದು ಮನೆಯ ಸಾರಿಸಿ, ರಂಗವೋಲೆಯನಿಕ್ಕಿ, ಆಸನವ ಬಲಿದು, ಪತ್ರೆ ಪುಷ್ಪ ಮೊದಲಾದ ಅನಂತ ತರುರಂಭವ ಸವರಿಸಿ ವಿರಕ್ತನ ಕರೆತಂದು ಪೂಜೆಯ ಮಾಡುವುದಕ್ಕಿಂತಲೂ ಹೊರೆಯಲ್ಲಿ ಚರಿಸಾಡುವ ಕಾಳ ಶುನಕನ ತಂದು ಆ ಗದ್ದುಗೆಯಲ್ಲಿ ಪೂಜೆ ಮಾಡುವುದು ಮಹಾಲೇಸಯ್ಯಾ. ಅದೇನು ಕಾರಣವೆಂದರೆ, ಆಣವಮಲ ಮಾಯಾಮಲ ಕಾರ್ಮಿಕ ಮಲಕ್ಕೆ ಹೊರತೆಂದು, ಅಷ್ಟಮದ ವಿರಹಿತನೆಂದು, ಷಡ್ಗುಣವ ಸಂಹರಿಸಿದವನೆಂದು, ಶಾಸ್ತ್ರದಲ್ಲಿ ಸಂಪನ್ನನೆಂದು, ಕ್ರಿಯೆಯಲ್ಲಿ ವೀರಶೈವ ನೆಂದು, ನಿರಾಭಾರಿಯೆಂದು, ಬಾಯಿಲೆ ಬೊಗಳಿ ಲೌಕಿಕದಲ್ಲಿ ಮಠವ ಮಾಡಿಕೊಂಡು, ಮಾನ್ಯವ ಸಂಪಾದಿಸಿಕೊಂಡು, ಅಶನಕ್ಕಾಶ್ರಯನಾಗಿ, ವ್ಯಸನಕ್ಕೆ ಹರಿದಾಡಿ, ವಿಷಯದಲ್ಲಿ ಕೂಡಿ, ಸರ್ವವು ಎನಗೆ ಬೇಕೆಂದು ತಮೋಗುಣದಿಂದ ದ್ರವ್ಯವ ಕೂಡಿಸಿ ವಿರತಿಸ್ಥಲವು ಹೆಚ್ಚೆಂದು ಕಾವಿ ಹೊದೆದು, ಕೌಪೀನವ ಕಟ್ಟಿ, ವೇಷ ಡಂಭಕದಿಂದ ತಿರುಗುವ ಭ್ರಷ್ಟರ ಮುಖವ ನೋಡಲಾಗದು. ಇಂತಪ್ಪ ವಿರತರ ಪೂಜೆಯ ಮಾಡುವುದಕ್ಕಿಂತಲೂ ಕರೇನಾಯಿಯ ತಂದು ಪೂಜೆಯ ಮಾಡುವುದು ಮಹ ಲೇಸು ಕಂಡಯ್ಯ. ಪಂಚಾಮೃತವ ಮುಂದಿಟ್ಟರೆ ಕಣ್ಣು ನೋಡುವುದು, ದ್ರವ್ಯ ಮುಂದಿಟ್ಟರೆ ಕೈಯು ಮುಟ್ಟುವುದು, ಎಂದು ಪೇಳುವ ವಿರತರ ನಾಲಗೆಯು ಆ ನಾಯ ಬಾಲಕ್ಕಿಂತಲು ಕರ ಕಷ್ಟವು. ಇಂತಹ ವಿರತರ ಪೂಜೆಯ ಮಾಡುವಾತನು, ಆ ಜಂಗಮವು ಉಭಯತರ ಮೂಗು ಸವರಿ ಕತ್ತೆಯನೇರಿಸಿ ಪಡಿಹಾರಿಕೆಗಳ ಪಾದುಕೆಯಿಂದ ಪಡಪಡ ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.”
7) ಅಷ್ಟವಿಧಾರ್ಚನೆ ಷೋಡಷೋಪಚಾರ:
ಅಷ್ಟವಿಧಾರ್ಚನೆ ಷೋಡಷೋಪಚಾರಗಳನ್ನು ಶರಣರು ತಿರಸ್ಕರಿಸಿದ್ದಾರೆ. ಮಾಡುವ ಪ್ರತಿಯೊಂದು ಸತ್ಕ್ರಿಯೆಯೂ ಪೂಜೆ ಧ್ಯಾನವೇ ಆಗಿರಬೇಕೆಂಬುದು ಶರಣ ಸಿದ್ಧಾಂತ. ಇಲ್ಲಿ ಪೂಜೆ ಎಂಬುದು ಮಾಡಿ ಬಿಟ್ಟು ಮಾಡುವುದಲ್ಲ. ಅದು ನಿತ್ಯ ನಿರಂತರ ಆಚಾರ, ಅವಿರಳ ಹಾಗೂ ಅನವರತ.
“ಅಷ್ಟವಿಧಾರ್ಚನೆ ಅರಸರಿಯದ ಬಿಟ್ಟಿ ಕಾಣಿರೇ, ಸಗುಣ ನಿರ್ಗುಣ ಸ್ಥೂಲ ಸೂಕ್ಷ್ಮ, ಅವು ನಿಜವನರಿವವೆ ಅವು ತಮ್ಮ ತಾವರಿಯವು. ಅವ ಭಿನ್ನವೆಂದರಸಲುಂಟೆ ಕೂಡಲಸಂಗಮದೇವಾ.”
“ಶ್ರೀಗುರು ತನ್ನ ಲಿಂಗವನೆ ಅಂಗದ ಮೇಲೆ ಬಿಜಯಂಗೆಯ್ಸಿದನಾಗಿ, ಆ ಲಿಂಗಕ್ಕೆ ಅಷ್ಟ ವಿಧಾರ್ಚನೆ, ಷೋಡಶೋಪಚಾರಗಳ ಮಾಡಿ, ಚತುರ್ವಿಧಫಲಪದ ಪುರುಷಾರ್ಥವ ಪಡೆದು, ಆ ಪರಿಭವಕ್ಕೆ ಬರಲೊಲ್ಲದೆ, ನಾನು ನಿಷ್ಕಳವೆಂಬ ಹೊಲದಲ್ಲಿ ಒಂದು ನಿಧಾನವ ಕಂಡೆ. ಆ ನಿಧಾನದ ಹೆಸರಾವುದೆಂದಡೆ; ತ್ರೈಲಿಂಗದ ಆದಿಮೂಲಾಂಕುರವೊಂದಾದ ಚರಲಿಂಗವೆಂದು. ಆ ಚರಲಿಂಗದ ಪಾದಾಂಬುವ ತಂದೆನ್ನ ಇಷ್ಟಲಿಂಗದ ಚತುರ್ವಿಧಫಲಪದಪುರುಷಾರ್ಥವೆಂಬ ಕರಂಗಳಂ ತೊಳೆವೆ. ಆ ಚರಲಿಂಗದ ಪ್ರಸಾದವ ತಂದೆನ್ನ ಇಷ್ಟಲಿಂಗದ ಜೀವಕಳೆಯ ಮಾಡುವೆ, ಆ ಲಿಂಗವೆ ಅಂಗ, ಅಂಗವೆ ಲಿಂಗ, ಆ ಲಿಂಗವೆ ಪ್ರಾಣ, ಆ ಪ್ರಾಣ ಲಿಂಗವಾದುದು. ಇದು ಚತುರ್ವಿಧಫಲಪದಪುರುಷಾರ್ಥವ ಮೀರಿದ ಘನವು. ಕೂಡಲಸಂಗಮದೇವಯ್ಯಾ. ಈ ದ್ವಯದ ಪರಿಯ ನಿಮ್ಮ ಶರಣನೆ ಬಲ್ಲ.”
8) ಗುರು-ಜಂಗಮದ ಪಾದಪೂಜೆ ಸಲ್ಲದು:
“ಗುರು ಜಂಗಮ ಯಾರೇ ಮನೆಗೆ ಆಗಮಿಸಿದರೂ ಅಂಗದ ಮೇಲೆ ಇಷ್ಟಲಿಂಗವ ಧರಿಸಿ ಪೂಜೋಪಚಾರವ ಮಾಡುವವರು ಲಿಂಗಪ್ರಾಣಿಗಳಲ್ಲ. ಎನ್ನ ಗುರುವೆಂದು ಭಾವಿಸಿ ಶರಣೆಂದು ನಮಸ್ಕಾರ ಮಾಡುವವರು ಲಿಂಗಪ್ರಾಣಿಗಳಲ್ಲ. ಜಂಗಮವೆಂದು ನಂಬಿ, ವಿಶ್ವಾಸ ಬಲಿದು, ಪಾದಪೂಜೆಯ ಮಾಡಿ ಪಾದೋದಕ ಪ್ರಸಾದವ ಕೊಂಬುವವರು ಲಿಂಗಪ್ರಾಣಿಗಳಲ್ಲ. ಇಂತೀ ತ್ರಿಮೂರ್ತಿಗಳ ಪೂಜೆಯನ್ನು ಬಿಟ್ಟು ಬಿಡದೆ ಪಿಡಿದು ಪೂಜಿಸುವವರು ಪ್ರಾಣಲಿಂಗಿಗಳೆಂಬೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.”
“ಕರಿಯ ಕಂಬಳಿಯ ಮೇಲೆ ಬಿಳಿಯ ಪಾವಡವ ಹಾಕಿ, ಮಲತ್ರಯಯುಕ್ತವಾದ ಒಬ್ಬ ಹೊಲಸು ಪೃಷ್ಟದ ನರಮನುಜನ ಜಂಗಮನೆಂದು ಕರತಂದು ಗದ್ದುಗೆಯ ಮೇಲೆ ಕುಳ್ಳಿರಿಸಿ, ಅವರ ಎದುರಿಗೆ ತಪ್ಪು ತಡಿಯ ಮಾಡಿದ ಪಾತಕರ ಅಡ್ಡಗೆಡವಿ ಮೂಗಿನ ದಾರಿ ತೆಗೆವರಂತೆ, ಹೊಟ್ಟೆಗಿಲ್ಲದೆ ಒಬ್ಬ ಬಡವನು ಧನಿಕನ ಮುಂದೆ ಅಡ್ಡಬಿದ್ದು ಬೇಡಿಕೊಳ್ಳುವಂತೆ, ಇಂತೀ ದೃಷ್ಟಾಂತದಂತೆ ಆಶೆ ಆಮಿಷ ತಾಮಸದಿಂದ ಮಗ್ನರಾದ ಭೂತದೇಹಿಗಳ ಮುಂದೆ ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧಮಲವ ಕಚ್ಚಿ, ಸಂಸಾರವಿಷಯದಲ್ಲಿ ಮಗ್ನರಾದ ಪಾತಕ ಮನುಜರು ಅಡ್ಡಬಿದ್ದು ಪಾದಪೂಜೆಯ ಮಾಡಿ ಪಾದೋದಕಪ್ರಸಾದ ಕೊಂಬುವರು. ಇವರು ಭಕ್ತರಲ್ಲ, ಅವನು ಜಂಗಮನಲ್ಲ. ಇಂತವರು ಕೊಂಬುವದು ಪಾದೋದಕಪ್ರಸಾದವಲ್ಲ. ಇಂತಪ್ಪ ದೇವಭಕ್ತರ ಆಚರಣೆ ನಡತೆಯೆಂತಾಯಿತೆಂದೊಡೆ ದೃಷ್ಟಾಂತ: ಒಬ್ಬ ಜಾರಸ್ತ್ರಿ ತನ್ನ ಉದರಪೋಷಣಕ್ಕೆ ಆಶೆಯ ಮಾಡಿ, ಒಬ್ಬ ವಿಟಪುರುಷನ ಸಂಗವಮಾಡಿದರೆ ಅವನು ಪರುಷನಾಗಲರಿಯನು, ಅವಳು ಸತಿಯಾಗಲರಿಯಳು. ಅದೇನು ಕಾರಣವೆಂದೊಡೆ ಹೊನ್ನಿಗಲ್ಲದೆ. ಮತ್ತಂ, ಆವನೊಬ್ಬ ಜಾತಿಹಾಸ್ಯಗಾರನು ರಾಜರ ಮುಂದೆ ತನ್ನ ಜಾತಿಆಟದ ಸೋಗನ್ನೆಲ್ಲ ತೋರಿ ಆ ರಾಜರ ಮುಂದೆ ನಿಂತು ಮಜುರೆಯ ಮಾಡಿ ಮಹಾರಾಜಾ ಎನ್ನೊಡೆಯ ಎನ್ನ ತಂದೆಯೇ ಎಂದು ಹೊಗಳಿ ನಿಮ್ಮ ಹೆಸರು ತಕ್ಕೊಂಡು ದೇಶದಮೇಲೆ ಕೊಂಡಾಡೇನೆಂದು ಬೇಡಿಕೊಂಡು ಹೋಗುವನಲ್ಲದೆ ಅವನು ತಂದೆಯಾಗಲರಿಯನು, ಇವನು ಮಗನಾಗಲರಿಯನು. ಅದೇನು ಕಾರಣವೆಂದೊಡೆ: ಒಡಲಕಿಚ್ಚಿಗೆ ಬೇಡಿಕೊಳ್ಳುವನಲ್ಲದೆ. ಇಂತೀ ದೃಷ್ಟಾಂತದಂತೆ ಒಡಲ ಉಪಾಧಿಗೆ ಪೂಜೆಗೊಂಬರು ವ್ರತನಿಯಮನಿತ್ಯಕ್ಕೆ ಪೂಜೆಯ ಮಾಡುವರು ಅವರು ದೇವರಲ್ಲ, ಇವರು ಭಕ್ತರಲ್ಲ. ಅದೇನು ಕಾರಣವೆಂದೊಡೆ- ಉಪಾಧಿ ನಿಮಿತ್ಯಕಲ್ಲದೆ. ಇಂತಪ್ಪ ವೇಷಧಾರಿಗಳಾದ ಭಿನ್ನ ಭಾವದ ಜೀವಾತ್ಮರ ಪ್ರಸಾದವೆಂತಾಯಿತೆಂದಡೆ ತುರುಕ ಅಂತ್ಯಜರೊಂದುಗೂಡಿ ಸರ್ವರೂ ಒಂದೇ ಆಗಿ ತೋಳ ಬೆಕ್ಕು ನಾಯಿಗಳ ತಿಂದ ಹಾಗೆ, ಸರ್ವರೂ ತಿಂದು ಹೋದಂತೆ ಆಯಿತಯ್ಯ. ಇಂತಪ್ಪವರಿಗೆ ಭವಹಿಂಗದು ಮುಕ್ತಿದೋರದು. ಮತ್ತಂ, ಅದೆಂತೆಂದೊಡೆ: ತನುವೆಂಬ ಭೂಮಿಯ ಮೇಲೆ ಮನವೆಂಬ ಕರಿಕಂಬಳಿಯ ಗದ್ದುಗೆಯ ಹಾಕಿ, ಅದರ ಮೇಲೆ ಪರಮಶಾಂತಿ ಜ್ಞಾನವೆಂಬ ಮೇಲುಗದ್ದುಗೆಯನಿಕ್ಕಿ, ಅಂತಪ್ಪ ಪರಮಶಾಂತಿಯೆಂಬ ಮೇಲುಗದ್ದಿಗೆಯ ಮೇಲೆ ಸತ್ತುಚಿತ್ತಾನಂದ ನಿತ್ಯಪರಿಪೂರ್ಣಭರಿತವಾದ ಪರಮನಿರಂಜನವೆಂಬ ಜಂಗಮವ ಮೂರ್ತವ ಮಾಡಿಸಿ, ಪಾದಪೂಜೆಯ ಮಾಡಿ ಪಾದೋದಕ ಪ್ರಸಾದವ ಕೊಳ್ಳಬಲ್ಲರೆ ಆತ ಆನಾದಿ ಭಕ್ತ. ಇಂತೀ ಭೇದವ ತಿಳಿದು ಕೊಡಬಲ್ಲರೆ ಆತ ಅನಾದಿ ಜಂಗಮ. ಇಂತಪ್ಪವರಿಗೆ ಭವಬಂಧನವಿಲ್ಲ, ಮುಕ್ತಿಯೆಂಬುದು ಕರತಳಾಮಳಕವಾಗಿ ತೋರುವದು. ಇಂತಪ್ಪ ವಿಚಾರವನು ಸ್ವಾನುಭಾವಜ್ಞಾನದಿಂ ತಿಳಿಯದೆ ಅಜ್ಞಾನದಿಂದ ಮಾಡುವ ಮಾಟವೆಲ್ಲ ಜೊಳ್ಳು ಕುಟ್ಟಿ ಹೊಳ್ಳು ಗಾಳಿಗೆ ತೂರಿದಂತೆ ಆಯಿತ್ತು ನೋಡೆಂದ ನಿಮ್ಮ ಶರಣ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.”
9) ಮಧ್ಯವರ್ತಿಗಳ ಅವಲಂಬನೆಗೆ ಅವಕಾಶವಿಲ್ಲ:
ಧಾರ್ಮಿಕ ಕಾರ್ಯಗಳಾದ ನಾಮಕರಣ, ಮದುವೆ ಮಾಡಿಸುವುದು, ಮೃತದೇಹ ಸಂಸ್ಕಾರ ಇತ್ಯಾದಿ ಯಾವುದೇ ಕಾರ್ಯಗಳಿರಲಿ, ಬಂಧುಗಳು, ಮಿತ್ರರು ಸೇರಿ ಆ ಕಾರ್ಯವನ್ನು ಬಹಳ ಸರಳವಾಗಿ ಮತ್ತು ಸುಸೂತ್ರವಾಗಿ ಮಾಡುವುದು. ನಮಗೆ ವಿಧಾನ ಹಾಗೂ ಮಂತ್ರ ಗೊತ್ತಿಲ್ಲವಲ್ಲ ಹೇಗೆ ಮಾಡುವುದು ಎಂಬುದು ಮುಂದಿನ ಪ್ರಶ್ನೆ. ಎಲ್ಲಾ ಕಾರ್ಯಕ್ರಮಗಳಿಗೂ ಎರಡೇ ಮಂತ್ರ ಸಾಕು 1) ಶ್ರೀಗುರುಬಸವಲಿಂಗಾಯನಮಃ 2) ನಮಃಶಿವಾಯ. ಬೇರಾವ ಮಂತ್ರದ ಅವಶ್ಯಕತೆಯೂ ಇಲ್ಲ. ಇನ್ನು ವಿಧಾನ- ಬಸವಣ್ಣನವರೇ ಹೇಳಿದ್ದಾರೆ- ಆನು ಒಲಿದಂತೆ ಹಾಡುವೆನಯ್ಯಾ ಎಂದು. ಯಾವ ಕಾರ್ಯಕ್ಕೂ ಇದೇ ವಿಧಾನ ಎಂಬುದೇನೂ ಇಲ್ಲ. ಎಲ್ಲಾ ವಿಧಾನಗಳೂ ಮಾನವ ಕಲ್ಪಿತವೇ! ಇದು ಪರಿಪೂರ್ಣ ಮತ್ತೊಂದು ಅಪೂರ್ಣ ಎಂಬುದೆಲ್ಲಾ ಕೇವಲ ಭ್ರಮೆ.
10) ಇಷ್ಟಲಿಂಗದೀಕ್ಷೆ:
ಕೇವಲ ಪ್ರಾಣಲಿಂಗವನರುಹುವ ಅವಿರಳ ಜ್ಞಾನಿಗುರುವಿನಿಂದ ಮಾತ್ರ ಲಿಂಗ ದೀಕ್ಷೆ ಪಡೆಯುವುದು. ಅದು ಸಾಧ್ಯವಿರದಿದ್ದಲ್ಲಿ ಸಾಧನಾಪಥಕ್ಕೋಸ್ಕರ ಲಭ್ಯವಿರುವ ಉತ್ತಮ ಗುರುವನ್ನು (ಗುರು, ಸಂನ್ಯಾಸಿ ಅಥವಾ ವಿವಾಹಿತ ಯಾರಾದರೂ ಸರಿ) ಆಯ್ಕೆಮಾಡಿಕೊಂಡು ಅವರಿಂದ ಬೋಧೆ ಪಡೆಯುವುದು ಮತ್ತು ಗುರುಬಸವಣ್ಣನವರು ಹಾಕಿಕೊಟ್ಟ ಸಾಧನಾ ಪಥದಲ್ಲಿ ನಡೆದು ತನ್ನ ಇಹದ ತನ್ಮೂಲಕ ಪರದ ಬದುಕನ್ನು ಸಾರ್ಥಕಪಡಿಸಿಕೊಳ್ಳುವುದು.
“ಕ್ರಿಯಾಚಾರವಿಲ್ಲದ ಗುರುವಿನ ಕೈಯಿಂದ ದೀಕ್ಷೆ, ಉಪದೇಶವ ಕೊಳ್ಳಲಾಗದು. ಕ್ರಿಯಾಚಾರವಿಲ್ಲದ ಶಿಲೆಯ ಲಿಂಗವೆಂದು ಪೂಜಿಸಲಾಗದು. ಕ್ರಿಯಾಚಾರವಿಲ್ಲದ ಭೂತಪ್ರಾಣಿಗಳಲ್ಲಿ ಜಂಗಮವೆಂದು ಪಾದೋದಕ ಪ್ರಸಾದ ಕೊಳಲಾಗದು. ಇಂತಪ್ಪ ಆಚಾರವಿಲ್ಲದ, ಅನಾಚಾರವ ಬಳಸುವ ದುರಾಚಾರಿಗಳಲ್ಲಿ ಉಪದೇಶವ ಹಡೆದು, ಪಾದೋದಕ ಪ್ರಸಾದವ ಕೊಂಡವಂಗೆ ಅಘನಾಸ್ತಿಯಾಗದು, ಮುಂದೆ ಅಘೋರ ನರಕ ತಪ್ಪದು ಕಾಣಾ, ಕೂಡಲಸಂಗಮದೇವಾ.”
“ಮಣ್ಣ ಬೆಲ್ಲವ ಮಾಡಿ, ಮಗುವಿನ ಕೈಯಲ್ಲಿ ಕೊಟ್ಟು, ಊರ ತಿರುಗುವ ತುಡುಗುಣಿಯಂತೆ. ಪ್ರಾಣಲಿಂಗವನರುಹುವ ಜ್ಞಾನಗುರುವಿನ ಕೈಯ ದೀಕ್ಷೆಯ ಪಡೆಯಲರಿಯದೆ, ಇಷ್ಟಲಿಂಗವನೊಬ್ಬ ಭ್ರಷ್ಟನ ಕೈಯಲೀಸಿಕೊಂಡು, ಅಲ್ಲಿ ಭಜಿಸಿ ಭ್ರಾಂತುಗೊಂಬ ಮಿಟ್ಟಿಯ ಭಂಡರನೇನೆಂಬೆ ಹೇಳಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.”
11) ಸಾಧನೆ: ಶರಣರು ಆಚರಿಸಿ ಬೋಧಿಸಿದ ಲಿಂಗಾಂಗ ಸಾಮರಸ್ಯ:
ಮರೆವಿನಿಂದ ಮಾನವನಾದ ಜೀವಿಯು ಅರಿವುಳ್ಳ ಶರಣನಾಗಿ ಬದಲಾಗುವುದೇ ಲಿಂಗಾಂಗ ಸಾಮರಸ್ಯ. ಇದರ ಸಾಧನೆಯೇ ಪ್ರತಿಯೊಬ್ಬರ ಗುರಿಯಾಗಬೇಕು ಎಂಬುದು ಶರಣರ ಅಭಿಲಾಷೆ. ಈ ಮಹತ್ತರ ಸಾಧನೆ ಲೋಕದ ಜನರಿಗೆ ಸುಲಭ ಸಾಧ್ಯವಾಗಲೆಂದು ಶರಣರು ಆರು ಹಂತಗಳ ಭಕ್ತಿ ಮಾರ್ಗವನ್ನು ಕರುಣಿಸಿದ್ದಾರೆ. ಅವೇ- ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ ಎಂಬ ಷಟ್ಸ್ಥಲಗಳು. ಲಿಂಗಾಂಗಿಯು ತನ್ನ ಅಂಗವನ್ನೇ ಲಿಂಗವನ್ನಾಗಿ ಮಾಡಿಕೊಳ್ಳುವನಲ್ಲದೇ ಲಿಂಗವನ್ನು ಮತ್ತೆಲ್ಲೂ ಹುಡುಕುವುದಿಲ್ಲ, ಆರಾಧಿಸುವುದಿಲ್ಲ.
“ತನುಗುಣವಳಿದಾತನಲ್ಲದೆ ಭಕ್ತನಲ್ಲ, ಮನೋಗುಣವಳಿದಾತನಲ್ಲದೆ ಮಹೇಶ್ವರನಲ್ಲ ಪ್ರಕೃತಿಗುಣ ರಹಿತನಾದಾತನಲ್ಲದೆ ಪ್ರಸಾದಿಯಲ್ಲ, ಪ್ರಾಣಗುಣವನಳಿದಾತನಲ್ಲದೆ ಪ್ರಾಣಲಿಂಗಿಯಲ್ಲ ಶಬ್ದದುದ್ದೇಶವಳಿದಾತನಲ್ಲದೆ ಶರಣನಲ್ಲ, ಆತ್ಮನ ನೆಲೆಯನರಿದಾತನಲ್ಲದೆ ಐಕ್ಯನಲ್ಲ. ಇಂತೀ ಷಡಂಗಕ್ಕೆ ಅತೀತವಾದಲ್ಲದೆ ಸೌರಾಷ್ಟ್ರ ಸೋಮೇಶ್ವರಲಿಂಗ ಸನ್ನಹಿತನಲ್ಲ.” ಮರೆವಿನ ಮಾನವನಿಂದ ಅರಿವುಳ್ಳ ಶರಣನಾಗುವ ಪಥವನ್ನು ಆದಯ್ಯನವರ ವಚನದಲ್ಲಿ ಕಾಣಬಹುದು.
ಬಹಳ ಸರಳವಾಗಿ ಹೇಳುವುದಾದರೆ ಲಿಂಗಾಂಗ ಸಾಮರಸ್ಯವೆಂದರೆ ಲಿಂಗವು ಪ್ರಾಣದ ಆಧಾರದಲ್ಲಿ ನೆಲೆಗೊಂಡ ಶುದ್ಧ ಅಂತಃಪ್ರಜ್ಞೆ, ಅಂಗವು ಸ್ಥೂಲ ಸೂಕ್ಷ್ಮ ಹಾಗೂ ಕಾರಣ ತನುಗಳನ್ನೊಳಗೊಂಡ ತನು. ಅಂಗದಲ್ಲಿ ಶುದ್ಧ ಅಂತಃಪ್ರಜ್ಞೆಯು ಸದಾ ಜಾಗೃತವಾಗಿದ್ದು ಅಂಗದ ಆಚಾರವಾಗಿ ಅಭಿವ್ಯಕ್ತವಾಗುವುದು. ಇವೆರಡರ ತದ್ಗತ ಸಂಬಂಧವು ಅರಿವಿನ ನೆಲೆಯ ಅನುಭಾವದಲ್ಲಿ ಪರಿಣಾಮಿಸುವುದು. ಇದೇ ಶರಣರು ತಿಳಿಸಿದ ಲಿಂಗಾಂಗ ಸಾಮರಸ್ಯ.
ಈ ಲೇಖನದಲ್ಲಿ ಕೆಲವೇ ಕೆಲವು ಅತಿಮುಖ್ಯ ವಿಚಾರಗಳನ್ನು ಕುರಿತು ಚರ್ಚಿಸಲಾಗಿದೆ, ಪ್ರಮುಖವಾಗಿ ಲಿಂಗಾಯತನಾದವನು ಅಪ್ಪ ಬೆಕ್ಕು ಕಟ್ಟಿ ಪೂಜಿಸುತ್ತಿದ್ದ ಕಾರಣಕ್ಕೆ ತಾನೂ ಬೆಕ್ಕು ಕಟ್ಟಿ ಪೂಜಿಸದೆ ವಿಚಾರವನ್ನು ಅರಿತು ಅದರಂತೆ ಆಚಾರವಂತನಾಗಬೇಕು ಎಂಬುದು ಇಲ್ಲಿಯ ಉದ್ದೇಶ.
Comments 10
Gangadhara Murthy
Dec 12, 2021ಇತ್ತೀಚೆಗೆ ಮೊಟ್ಟೆ ವಿಷಯದಲ್ಲಿ ಲಿಂಗಾಯತ ಸ್ವಾಮಿಗಳು ನಡೆದುಕೊಂಡ ಸಂಕುಚಿತ ವರ್ತನೆ ನೋಡಿದರೆ ಇವತ್ತು ಲಿಂಗಾಯತ ಧರ್ಮವು ಸಂಪೂರ್ಣವಾಗಿ ಪ್ರಗತಿಪರ ದಾರಿಯಿಂದ ವಿಮುಖವಾಗುತ್ತಿದೆ ಎಂಬುದು ಗೊತ್ತಾಗುತ್ತದೆ. ಲೇಖನವು ಆ ದಿಸೆಯಲ್ಲಿ ಎಚ್ಚರಿಸುವಂತಿದೆ.
Shivaleela Patil
Dec 12, 2021ಲೇಖನದಲ್ಲಿ ವಚನಗಳ ಸಾಕ್ಷಿ ಸಮೇತ ತೋರಿಸಿದಂತೆ ಬಸವಣ್ಣನವರ ವಿಚಾರಗಳಲ್ಲಿ ಕೆಲವನ್ನಾದರೂ ಇವತ್ತಿನ ಲಿಂಗಾಯತರು ಆಚರಿಸಿದ್ದರೆ ಕರ್ನಾಟಕದ ಚಿತ್ರಣವೇ ಬೇರೆಯಾಗಿರುತ್ತಿತ್ತು. ಲಿಂಗಾಯತರು ಮೇಲ್ಜಾತಿಯವರಂತೆ ಖಂಡಿತ ಮೆರೆಯುತ್ತಿರಲಿಲ್ಲ, ಗುಡಿಗುಂಡಾರಗಳಿಗೆ ಅಲೆಯುತ್ತಿರಲಿಲ್ಲ. ತಮ್ಮ ಮಕ್ಕಳ ಜಾತಕಗಳನ್ನು ಹಿಡಿದುಕೊಂಡು ಪುರೋಹಿತರ ಮನೆಬಾಗಿಲನ್ನು ತಟ್ಟುತ್ತಿರಲಿಲ್ಲ.
ಶೈಲೇಶ್ ಬಿದರಕುಂದಿ
Dec 12, 2021ಶರಣರು ದಯಪಾಲಿಸಿದ ಲಿಂಗಾಯತ ಧರ್ಮದ ವೈಚಾರಿಕ ಅಂಶಗಳನ್ನು ವಿಭಜಿಸಿ ನೋಡಿ ಕೊಟ್ಟ ಕ್ರಮ ಸೂಕ್ತವಾಗಿದೆ. ಜನಸಾಮಾನ್ಯರು ಮಾತ್ರವಲ್ಲದೆ ಸ್ವಾಮಿಗಳು, ಮಠಗಳು ಕೂಡ ಇವುಗಳನ್ನು ಪಾಲಿಸುತ್ತಿಲ್ಲ. ಮುಖ್ಯವಾಗಿ ಗುರುಗಳೆನಿಸಿಕೊಂಡವರೇ ಭಕ್ತರನ್ನು ದಾರಿತಪ್ಪಿಸುತ್ತಿದ್ದಾರೆ. ಇದಕ್ಕೆ ಪರಿಹಾರವೇನು ಅಣ್ಣಾ?
Indudhar
Dec 14, 2021ಲಿಂಗಾಯತವೆಂದರೆ ಇದು, ಶರಣರೆಂದರೆ ಇವರು ಎಂದು ದಿಟ್ಟವಾಗಿ ಹೇಳಬಲ್ಲ ಹಾಗೂ ಹೇಳಿದಂತೆ ಧರ್ಮಾಚರಣೆಗಳನ್ನು ನಡೆಸುವವರು ಬಂದರೆ ನಿಮ್ಮ ಪ್ರಯತ್ನಕ್ಕೆ ಸಾರ್ಥಕ. ವೈಚಾರಿಕ ವಿಚಾರಗಳನ್ನು ನೇರವಾಗಿ ಪ್ರತಿಪಾದಿಸಿದ ಲೇಖನ.
Renuka G. Mugadi
Dec 14, 2021ಪ್ರಗತಿಪರ ವಿಷಯಗಳನ್ನು ಪಟ್ಟಿ ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ಇದನ್ನೊಂದು ಕರಪತ್ರವನ್ನಾಗಿ ಮಾಡಿ ಎಲ್ಲ ಕಡೆ ಹಂಚಲು ಸಾಧ್ಯವಾದರೆ ಚನ್ನಾಗಿರುತ್ತದೆ. ಮುಖ್ಯವಾಗಿ ಮಠಗಳಿಗೆ ಇವುಗಳನ್ನು ಕಳಿಸಿಕೊಡಬೇಕು.
ದೇವೀರಪ್ಪ ಜಮಖಂಡಿ
Dec 19, 2021ಪ್ರಗತಿಪರ ಲಿಂಗಾಯತ ಧರ್ಮದಲ್ಲಿ ಮೊಟ್ಟೆ ಸೇವಿಸುವವರಿಗೆ ಜಾಗವಿಲ್ಲವೇ? ನಾವು ಹುಟ್ಟಾ ಲಿಂಗಾಯತರು. ನನ್ನ ಅಪ್ಪ ಪೂಜ್ಯ ಲಿಂಗಾನಂದ ಸ್ವಾಮಿಗಳಿಂದ ದೀಕ್ಷೆ ಪಡೆದವರು. ನಿತ್ಯ ಲಿಂಗಾರ್ಚಕರು. ನಮಗೆ ಚಿಕ್ಕವರಿದ್ದಾಗಿನಿಂದಲೂ ಮೊಟ್ಟೆ ತಿನಿಸಿದ್ದಾರೆ. ನಾವೂ ನಮ್ಮ ಮಕ್ಕಳಿಗೆ ಮೊಟ್ಟೆ ಬೇಯಿಸಿ ಕೊಡುತ್ತೇವೆ. ನನಗಂತೂ ಇದರಲ್ಲಿ ಯಾವ ತಪ್ಪೂ ಕಾಣುತ್ತಿಲ್ಲ. ಈ ಸ್ವಾಮಿಗಳೇಕೆ ಸನಾತನಿಗಳಂತೆ ವರ್ತಿಸುತ್ತಿದ್ದಾರೆ?
Jagannatha Patil
Dec 27, 2021ನೀವು ಸೂಚಿಸಿದ ಸಾಂಪ್ರದಾಯಿಕ ಲಿಂಗಾಯತರು ಕೇವಲ ಹೆಸರಿಗೆ ಮಾತ್ರ ಲಿಂಗಾಯತರು, ಅವರಿಗೆ ನಿಜವಾದ ಧರ್ಮ ಬೇಕಾಗಿಲ್ಲ. ಶರಣರ ಆಶಯಗಳನ್ನು ತಿಳಿದುಕೊಳ್ಳಬೇಕೆನ್ನುವ ತುಡಿತವೂ ಅವರಿಗೆ ಇರುವುದಿಲ್ಲ. ಪ್ರತಿಯೊಂದು ಧರ್ಮದಲ್ಲೂ ಧರ್ಮಾಂಧರು ಇರುವಂತೆ ಇಂಥವರೇ ಲಿಂಗಾಯತರಲ್ಲಿರುವ ಧರ್ಮಾಂಧರು. ಇವತ್ತು ಸಮಾಜದಲ್ಲಿ ಇವರ ಸಂಖ್ಯೆಯೇ ಅತ್ಯಧಿಕವಾಗಿರುವುದು ನಿಜಕ್ಕೂ ದುಖದ ಸಂಗತಿಯಾಗಿದೆ.
ವಿಜಯ್ ಉಳ್ಳಾಗಡ್ಡಿ
Dec 27, 2021ವಚನಗಳ ಆಧಾರದ ಮೇಲೆ ಲಿಂಗಾಯತವು ಪ್ರಗತಿಪರ ಧರ್ಮ ಹೇಗೆಂಬುದನ್ನು ಚಿಕ್ಕದಾಗಿ ಸ್ಪಷ್ಟವಾಗಿ ತೋರಿಸಿಕೊಟ್ಟ ಲೇಖನ.
ಗವಿಸಿದ್ದಪ್ಪ, ಗಾಣಾಪುರ
Dec 28, 2021ಪ್ರಗತಿಪರ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗದೆ, ಸೂಕ್ತ ಅನುಯಾಯಿಗಳಿಲ್ಲದೆ ಗ್ರಹಣ ಬಡಿದಂತಾಗಿದೆ!!!
Girish Mysuru
Jan 4, 2022ಇವತ್ತಿನ ಲಿಂಗಾಯತ ಧರ್ಮವು ಜಾತಿಯ ಕೂಪವಾಗಿ ಕೆಟ್ಟ ವಾಸನೆ ಹೊಡೆಯುತ್ತಿದೆ. ಪ್ರಗತಿಪರ ಅಂಶಗಳೆಲ್ಲವೂ ಪುಸ್ತಕದಲ್ಲಿ, ವಚನಗಳಲ್ಲಿ ಹುಳು ಹತ್ತಿ ಕೂತಿವೆ.