
ಮೀನಿನ ಬಯಕೆ
ಒಮ್ಮೆ ಒಂದು ಪುಟ್ಟ ಮೀನು
ಈಜಿ ದಡದ ಬಳಿಗೆ ಬಂದು
ಕೆರೆಯ ಪಕ್ಕ ಮನುಜನೊಬ್ಬನನ್ನು ಕಂಡಿತು
ಬಟ್ಟಲಂತ ಕಣ್ಣ ತೆರೆದು
ಪುಟ್ಟ ಮೀನು ನಗೆಯ ಸೂಸಿ
ಗೆಳೆಯನಾಗು ನನಗೆ ಎನುತ ಅಂಗಲಾಚಿತು
ನನ್ನ ಸ್ನೇಹ ಏಕೆ ಬೇಕು
ನಿನ್ನ ಮನದ ಆಸೆ ಏನು
ಎನಲು ಮನುಜ ಮೀನು ತನ್ನ ಬಯಕೆ ತಿಳಿಸಿತು
ಹುಟ್ಟಿದಾಗಿನಿಂದ ನನಗೆ
ಇದೇ ಕೆರೆಯ ಅದೇ ನೀರು
ಹಗಲು ರಾತ್ರಿ ಒಂದೆ ಬದುಕು ಸಹಿಸೆನೆಂದಿತು
ಗೆಳೆಯ ನೀನು ನಡೆವ ನೆಲವು
ಎಂಥ ಚಂದ ಎಂಥ ಅಂದ
ನನಗು ನೆಲದ ಮೇಲೆ ನಡೆವ ಆಸೆಯೆಂದಿತು
ಮಣ್ಣು ಚೆನ್ನ ಹಣ್ಣು ಚೆನ್ನ
ಹೂವು ಚೆನ್ನ ಎಲೆಯು ಚೆನ್ನ
ನೀರಿಗಿಂತ ನೆಲವೆ ಚೆನ್ನವೆನುತ ನಲಿಯಿತು
ಮೀನಿನಾಸೆ ಕೇಳಿ ಮನುಜ
ಒಳಗೊಳಗೇ ದಿಗಿಲುಗೊಂಡ
ತೋರಗೊಡದೆ ನೆಲದ ಬದುಕ ಕಲಿಸಲೊಪ್ಪಿದ
ಒಂದು ಗಳಿಗೆ ನೆಲದಿ ತವೆಸಿ
ಮತ್ತೆ ನೀರಿನೊಳಗೆ ಇಳಿಸಿ
ಹಂತ ಹಂತವಾಗಿ ನೆಲದ ನಡೆಯ ಕಲಿಸಿದ
ನೀರ ಮರೆತು ನೆಲದ ಸಂಗ
ಬಯಸಿ ಬಂದ ಪುಟ್ಟ ಮೀನು
ಹರುಷದಿಂದ ನೆಲದ ಮೇಲೆ ಕುಣಿದು ನಲಿಯಿತು
ಓಣಿ ಮಕ್ಕಳೊಡನೆ ಆಡಿ
ಊರನೆಲ್ಲ ಸುತ್ತಿ ಬಳಸಿ
ಬೆಟ್ಟ ಹತ್ತಿ ಹಳ್ಳ ದಾಟಿ ಬೆಳೆಯತೊಡಗಿತು
ಒಮ್ಮೆ ನಸುಕಿನಲ್ಲಿ ಎದ್ದು
ದೂರ ಪಯಣಕೆಂದು ಮೀನು
ತಿನಿಸ ಗಂಟಿನೊಡನೆ ಊರ ಗಡಿಯ ದಾಟಿತು
ಇದ್ದಕಿದ್ದ ಹಾಗೆ ಮೋಡ
ಕವಿದು ಬಾನ ತುಂಬ ತುಂಬಿ
ಗುಡುಗು ಸಿಡಿಲಿನೊಡನೆ ಮೋಡ ಮಳೆಯ ಸುರಿಸಿತು
ಎಂದೂ ಬಾರದಂತ ಮಳೆಯು
ಬಿಡದೆ ಸುರಿಯತೊಡಗಿದಂತೆ
ನೆಲಕೆಲ್ಲವು ನೀರು ಸೇರಿ ಮಡುವೆ ಆಯಿತು
ಸುತ್ತ ಮುತ್ತ ನೀರೆ ತುಂಬಿ
ನೆಲದ ಗುರುತೆ ಇಲ್ಲವಾಗಿ
ಮೀನು ಮಳೆಯ ನೀರಿನೊಳಗೆ ಮುಳುಗಿಹೋಯಿತು
(ಬಯಕೆ ನಿರೀಕ್ಷೆ ಆಕಾಂಕ್ಷೆಗಳು ರೆಕ್ಕೆಗಳಂತೆ. ಅವುಗಳನ್ನು ಕಟ್ಟಿಕೊಂಡು ನಿಂತ ನೆಲವನ್ನೇ ಬಿಟ್ಟು ಹಾರತೊಡಗಿದರೆ ಕ್ಷಣಕಾಲ ಮಿರುಗು ಬಣ್ಣದ ಮಾಯಾಲೋಕವೊಂದು ನಮ್ಮನ್ನು ಸೆಳೆಯಬಲ್ಲದು. ಅವಘಡವೊಂದಕ್ಕೆ ಸಿಕ್ಕಿ ದಿಕ್ಕುತಪ್ಪಿ ಬಿದ್ದರೆ ನಿಂತ ನೆಲವೂ ಸಿಗದೆ ಬದುಕು ದುರಂತಮಯವಾಗಬಹುದು.)
(/ತಿರುಕನೋರ್ವನೂರಾ ಮುಂದೆ… ರಾಗದಲ್ಲಿ ಓದಿಕೊಳ್ಳಿ)
Comments 7
Prabhudeva
Jun 15, 2023ನೈಜತೆಯಿಂದ ಕೂಡಿದ ಕವನ
ಕುಮುದಿನಿ, ತಿಪಟೂರು
Jun 15, 2023ವಾವ್… ಕವನ ಹೃದಯಸ್ಪರ್ಶಿಯಾಗಿದೆ.
ಸುನಂದಾ ರಾಚಣ್ಣ, ಡಾವಣಗೆರೆ
Jun 16, 2023ಮೀನಿನ ಬಯಕೆ- ಮಲ್ಲೇಶ ಅವರ ಈ ಕವನವು ನಾನು ನಾಲ್ಕನೆಯ ಕ್ಲಾಸಿನಲ್ಲಿ ಓದಿದ ತಿರುಕನ ಕನಸು ಕವನವನ್ನು ನೆನಪಿಸಿತು. ಮೀನು ಕೂಡಾ ಮಾನವನಂತೆ ಕನಸು ಕಂಡಿರಬೇಕು. ಮನದ ಆಸೆ ತೀರಿಸಿಕೊಳ್ಳಲು ಮಣ್ಣು, ಹಣ್ಣು, ಹೂವು, ಎಲೆ ಚಂದವಾಗಿ ನೀರಿಗಿಂತ ನೆಲವೇ ಚಂದವೆಂದು ಆನಂದಿಸಿ, ತಿರುಕನಂತೆ ರಾಜ ವೈಭವದಿಂದ ಮೆರೆದು ನಂತರ ನೆರೆ ರಾಜ್ಯ ಯುದ್ಧಕ್ಕೆ ಬಂದಾಗ ಹೆದರಿ ಕಣ್ತೆರೆದಾಗ ಕನಸೆಂದು ನಿರಾಸೆಯಾಯಿತು. ಅಂತೆಯೇ ಮೀನು ಎಲ್ಲಾ ಆಸೆಗಳನ್ನು ಬೆನ್ನು ಹತ್ತಿ ಹೋಗುವಾಗ ಮಳೆಗೆ ಸಿಕ್ಕು ಮುಳುಗಿಹೋಯಿತು. ಕವನ ತುಂಬಾ ಚೆನ್ನಾಗಿದೆ, ಓದಿ ಖುಷಿಯಾಯಿತು.
Kalavathi
Jun 16, 2023ಈ ಕವಿತೆಯು ಬೇರೆ ಯಾವುದೇ ಸ್ಥಳದಲ್ಲಿ ಅಥವಾ ಯಾವುದೇ ಸ್ಥಾನದಲ್ಲಿರುವ ಸಂತೋಷವನ್ನು ಕಂಡುಹಿಡಿಯಲು ಬಯಸುವ ಮಾನವನಿಗೆ ತುಂಬಾ ಸಂಬಂಧಿಸಿದೆ. ಆದರೆ ನಿಜವಾದ ಸತ್ಯವೆಂದರೆ ನೀವು ಇರುವ ಸ್ಥಳದಲ್ಲಿ ನೀವು ಸಂತೋಷವಾಗಿರಬೇಕು.ಕವನ ತು೦ಬಾ ಚೆನ್ನಾಗಿದೆ.
Sheela
Jun 17, 2023It is indeed nice poem
Kavana
Jun 18, 2023ಈ ಕವಿತೆ ಎಲ್ಲೋ ನಿಮ್ಮ ಸಂತೋಷವನ್ನು ಹುಡುಕುವ ಬದಲು ನಿಮ್ಮಲ್ಲಿ ಸಂತೋಷವನ್ನು ಕಂಡುಕೊಳ್ಳಬೇಕೆಂದು ಹೇಳುತ್ತದೆ. ಕವಿತೆ ಚೆನ್ನಾಗಿ ಬರೆಯಲಾಗಿದೆ.
ಕೆ. ಎಸ್. ಮಲ್ಲೇಶ್
Jun 18, 2023ಬಯಲು ಬಳಗದ ಸಹೃದಯ ಓದುಗರೇ
ನನ್ನ ಕವನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಓದಿ ಸಂತಸವೂ ತೃಪ್ತಿಯೂ ಉಂಟಾದವು. ನಿಮ್ಮಲ್ಲೇ ಮೂಡಬಹುದಾದ ಭಾವನೆಗಳಿಗೆ ನಾನು ಅಕ್ಷರ ರೂಪ ಕೊಟ್ಟಿದ್ದೇನೆ ಅಷ್ಟೇ. ನಿಮಗೂ, ಬರೆಯಿರೆಂದು ಪ್ರೋತ್ಸಾಹಿಸುವ ಶ್ರೀಮತಿ ಮಂಗಳಾ ಅವರಿಗೂ ನನ್ನ ನಮನಗಳು.