Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮನಕ್ಕೆ ಮನ ಸಾಕ್ಷಿಯಾಗಿ…
Share:
Articles October 2, 2018 ಕೆ.ಆರ್ ಮಂಗಳಾ

ಮನಕ್ಕೆ ಮನ ಸಾಕ್ಷಿಯಾಗಿ…

ಬುದ್ಧನ ನಂತರದ ಶ್ರೇಷ್ಠ ಭಾರತೀಯ ಗಾಂಧೀ ಎಂದು ಖ್ಯಾತ ಇತಿಹಾಸಕಾರರಾದ ರಾಮಚಂದ್ರ ಗುಹಾ ಅಭಿಪ್ರಾಯಪಡುತ್ತಾರೆ. ಆದರೆ ಇವರಿಬ್ಬರ ನಡುವೆ ಭಾರತ ದೇಶ ಅತ್ಯಂತ ಹೆಮ್ಮೆಯಿಂದ ಎದೆ ತಟ್ಟಿ ಹೇಳಿಕೊಳ್ಳಬೇಕಾದ ಮಹಾನ್ ವ್ಯಕ್ತಿ ಇದ್ದಾರೆ- ಅವರೇ ಬಸವಣ್ಣ.

ಇತಿಹಾಸದ ವಿಭಿನ್ನ ಕಾಲಘಟ್ಟಗಳಲ್ಲಿ ಕಾಣಿಸಿಕೊಂಡ ಬುದ್ಧ, ಬಸವಣ್ಣ ಮತ್ತು ಗಾಂಧೀಜಿಯ ನಡುವೆ ಸಮಾನ ಮನಸ್ಸಿನ ನಂಟಿದೆ. ತೆರೆದ ಆಗಸದಂತೆ ಬದುಕಿದ ಬುದ್ಧ ಕಂಡದ್ದನ್ನು ಕಂಡ ಹಾಗೆ ಹೇಳಿದ. ಸತ್ಯಕ್ಕೆ ಯಾವ ಉಪಾಧಿಗಳನ್ನೂ ಅಂಟಿಸದೆ ಪ್ರತಿಯೊಬ್ಬನೂ ಬುದ್ಧನಾಗಬಲ್ಲ ಹಾದಿಯನ್ನು ತೋರಿಸಿದ. ಮನದ ಕಳವಳ ಕಳೆದು ದುಃಖ ರಹಿತ ಜೀವನಕ್ಕೆ ಬೇಕಾಗುವ ಸೂತ್ರಗಳನ್ನು ತೋರಿಸಿ ಕೊಟ್ಟ. ತನ್ನ ಬೋಧನೆಗಳನ್ನು ದಾಖಲಿಸಿ ಇಡದೇ ಅವುಗಳನ್ನು ಬದುಕಬಲ್ಲ ಸಾವಿರಾರು ಭಿಕ್ಕುಗಳನ್ನು ತಯಾರು ಮಾಡಿದ. ತಲೆಮಾರಿನಿಂದ ತಲೆಮಾರಿಗೆ ಬುದ್ಧ ಬೋಧೆಗಳು ಇಂದಿಗೂ ಉಳಿದು ಬಂದಿವೆ. ಕಾಲದ ಮಾಪನದಲ್ಲಿ ಬುದ್ಧ ಇವತ್ತಿನ ಅತ್ಯಾಧುನಿಕ ಮನಸ್ಸಿನ ಹತ್ತಿರವೂ ನಿಲ್ಲಬಲ್ಲ, ಸಂಭಾಷಣೆ ನಡೆಸಬಲ್ಲ.

ಜನಮಾನಸದಲ್ಲಿ ಬಸವಣ್ಣನವರು ಸುಲಭವಾಗಿ ಹೇಳಲಾಗದ ಯಾವುದೋ ಆಳವಾದ ಕಾರಣಕ್ಕೆ ಇಂದಿಗೂ ಜೀವಂತವಾಗಿದ್ದಾರೆ. ಎಲ್ಲಾ ಕೆಳವರ್ಗದ ಸಮುದಾಯದ ಮನೆಮನೆಗಳಲ್ಲಿ, ಜನಪದ, ಸುಗ್ಗಿ ಪದ, ಒಕ್ಕಲು ಪದಗಳಲ್ಲಿ ತಲೆ ತಲೆಮಾರುಗಳಿಂದ ಸಾಗಿ ಬಂದಿದ್ದಾರೆ. ಪುರಾಣ, ಕೀರ್ತನೆ, ಅವತಾರಗಳಲ್ಲಿ ಮುಚ್ಚಿ ಹಾಕಿದ್ದ ಅವರ ನೈಜ ಬದುಕನ್ನು ಇತಿಹಾಸದ ಬೆಳಕಲ್ಲಿ, ವಚನಗಳ ಅನುಭಾವದಲ್ಲಿ ನೋಡುವ ಸದವಕಾಶ ಸಿಕ್ಕಿದ್ದು ಇಪ್ಪತ್ತನೇ ಶತಮಾನದ ಸೌಭಾಗ್ಯ. ಭಾರತ ದೇಶಕ್ಕೂ ವಿಶ್ವ ಇತಿಹಾಸಕ್ಕೂ ಹೊಸ ದಿಕ್ಕು ತೋರಿದ ಯುಗಪುರುಷ ಗಾಂಧೀಜಿ ಹುಟ್ಟಿದ್ದು ಇಪ್ಪತ್ತನೇ ಶತಮಾನದಲ್ಲಿ. ಸತ್ಯ ಮತ್ತು ಅಹಿಂಸೆಗಳು ಗಾಂಧೀಜಿ ಬದುಕಿನ ಜೀವದ್ರವ್ಯವಾದರೆ ಅಂತರಂಗ ಬಹಿರಂಗಗಳೆರಡರಲ್ಲೂ ಶುದ್ಧಿ ತರುವ ಪ್ರಕ್ರಿಯೆಯು ಬಸವಣ್ಣನವರಿಗೆ ಅಂಗ ಲಿಂಗವಾಗುವ ಸಾಧನೆಯಾಗಿತ್ತು.

ಸತ್ಯದ ಬೆಳಕಲ್ಲಿ ತೆರೆದುಕೊಳ್ಳುವ ಮನಸ್ಸುಗಳು ಶುಭ್ರವಾಗಿರುತ್ತವೆ. ತಮ್ಮನ್ನು ಅಡಿಗಡಿಗೂ ಅಳೆದು ತೂಗಿ ನೋಡುವ, ವಿಮರ್ಶೆಯ ನಿಕಷಕ್ಕೊಡ್ಡಿ ಪರೀಕ್ಷಿಸಿಕೊಳ್ಳುವ ಅಪರೂಪದ ಗುಣವನ್ನು ಬಸವಣ್ಣ ಮತ್ತು ಗಾಂಧೀಜಿ ಇಬ್ಬರಲ್ಲೂ ನಿಚ್ಚಳವಾಗಿ ಕಾಣಬಹುದು. ಆತ್ಮಪ್ರಜ್ಞೆಯ ಅರಿವಿದ್ದವ ಮಾತ್ರ ಉತ್ತಮ ನಾಯಕನಾಗಬಲ್ಲ. ತನ್ನನ್ನು ನೋಡಿಕೊಳ್ಳಬಲ್ಲವನು ಪರರ ಭಾವನೆಗಳಿಗೆ ಕಿವಿಯಾಗಬಲ್ಲ. ಸಮಸ್ಯೆಯ ಆಳಕ್ಕಿಳಿದು ಪರಿಹಾರ ಹುಡುಕಬಲ್ಲ. ನಿರಂತರವಾಗಿ ತಮ್ಮನ್ನು ಪ್ರಶ್ನಿಸಿಕೊಳ್ಳುವವರಲ್ಲಿ ಅಹಂ ಹುತ್ತ ಕಟ್ಟಲಾರದು. ನಾನೇ ಸರಿ ಎನ್ನುವ ಧೋರಣೆಯೂ ಹತ್ತಿರ ಸುಳಿಯದು. ಯೋಚಿಸುವ ಮಾರ್ಗದಲ್ಲಿ ನೂರು ಸಾಧ್ಯತೆಗಳನ್ನು ಕಾಣಬಲ್ಲ ಪ್ರಾಂಜಲ ಮನಸ್ಸು ಅವರಲ್ಲಿರುತ್ತದೆ. ಜೀವನದ ಆಗುಹೋಗುಗಳನ್ನು ಸಮಚಿತ್ತದಿಂದ ಪರಿಭಾವಿಸುವ ಸ್ಥಿತಪ್ರಜ್ಞ ಭಾವವು ಅವರನ್ನು ಹಿಮ್ಮೆಟ್ಟದಂತೆ ಮುನ್ನಡೆಸುತ್ತದೆ. ಕಲ್ಯಾಣ ಕ್ರಾಂತಿಯ ನಾಯಕರಾದ ಬಸವಣ್ಣ, ಭಾರತ ಸ್ವಾತಂತ್ರ್ಯ ಚಳುವಳಿಯ ನೇತಾರರಾದ ಗಾಂಧೀಜಿ ಇಬ್ಬರ ಸಾಧನೆಯ ಮೂಲ ಶಕ್ತಿ ಅವರಲ್ಲಿದ್ದ ಆತ್ಮ ಪರಿಶೋಧನೆಯ ಪ್ರಜ್ಞೆ.

ಓದಲೇ ಬೇಕಾದ ಆತ್ಮಕತೆಗಳಲ್ಲಿ ಗಾಂಧೀಜಿಯ ‘ನನ್ನ ಸತ್ಯಾನ್ವೇಷಣೆ’ (ಮೈ ಎಕ್ಸಪೆರಿಮೆಂಟ್ಸ್ ವಿತ್ ಟ್ರೂಥ್) ಇಂದಿಗೂ ಮುಂಚೂಣಿಯಲ್ಲಿರುವ ಪುಸ್ತಕ. ಆತ್ಮವಿಶ್ಲೇಷಣೆಯೊಂದಿಗೆ ನಡೆಯುವ ಅವರ ಜೀವನ ಶೋಧನೆಯು ಅನೇಕರ ಜೀವನದ ಮೇಲೆ ಪ್ರಭಾವ ಬೀರಿದೆ. ಬಸವಣ್ಣನವರ ವಚನಗಳನ್ನು ಓದುವಾಗಲೂ ಇಂಥದೇ ಆಪ್ತತೆಯ ಅನುಭವ. ಅವರ ವಚನಗಳ ಅಂತರಾಳದಲ್ಲಿ ಪ್ರತಿಬಿಂಬಿತವಾದದ್ದು ಸತ್ಯದ ಪ್ರಾಮಾಣಿಕ ಮುಖಗಳೇ. ಇವರೀರ್ವರ ಮಾತುಗಳು ಎಲ್ಲಿಯೂ ಬೋಧನೆ ಎಂದೆನಿಸುವುದಿಲ್ಲ. ಅವು ಯಾವುದೇ ಒಂದು ಕಾಲಕ್ಕೂ, ಪ್ರದೇಶಕ್ಕೂ, ವ್ಯಕ್ತಿಗೂ ಸೀಮಿತ ಎನಿಸುವುದಿಲ್ಲ. ಅಲ್ಲಿ ಕಾಣುವ ಮನೋವ್ಯಾಪಾರಗಳು ಎಲ್ಲರ ಎದೆಯಾಳದಲ್ಲೂ ನಡೆಯುವ ನಿತ್ಯ ಹೋರಾಟಗಳು. ಸಾರ್ವರ್ತಿಕ ಸತ್ಯವಾದ ತಲ್ಲಣಗಳು.

ಲೋಕದ ಲೋಲುಪತೆಯ ಸೆಳೆತಗಳು ಒಂದಲ್ಲ ಒಂದು ರೂಪದಲ್ಲಿ ಕಾಡುತ್ತವೆ. ಭಾವನೆಗಳ ಸಂಘರ್ಷದಲ್ಲಿ ಜೀವನು ಅಡಿಗಡಿಗೂ ಎಡತಾಕಬೇಕಾಗುತ್ತದೆ. ಯಾವ ಹಿಂಜರಿಕೆಯೂ ಇಲ್ಲದಂತೆ ಬಸವಣ್ಣನವರು ಮುಕ್ತವಾಗಿ ತಮ್ಮ ಅಂತರಂಗವನ್ನು ವಚನಗಳಲ್ಲಿ ಬಿಚ್ಚಿಡುತ್ತಾರೆ. ಅಧೋಮುಖವಾಗಿ ಹರಿಯುವ ಮನದ ವರ್ತನೆಗಳನ್ನು ಊರ್ಧ್ವಮುಖಿಯಾಗಿಸುವ ಕಠಿಣತಮ ಹಾದಿಯನ್ನು ಅವರ ವಚನಗಳು ಪರಿಣಾಮಕಾರಿಯಾಗಿ ಚಿತ್ರಿಸುತ್ತವೆ. ಸ್ವಾರ್ಥತೆಯಿಂದ ಮುಕ್ತವಾಗಿ ಸಮಷ್ಟಿ ಪ್ರಜ್ಞೆಯತ್ತ ತಿರುಗುವುದು ಸುಲಭವಲ್ಲ. ಅಲ್ಪತೆಯನ್ನು ಬಿಡಿಸಿಕೊಂಡು ಮನಸ್ಸು ಸಂಪೂರ್ಣವಾಗಿ ಮಹತ್ತಿನತ್ತ ಹರಿಯುವ ಹಾದಿ ದುರ್ಗಮವಾದದ್ದು.

ಕೊಂಬಿನ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು
ನಿಂದಲ್ಲಿ ನಿಲಲೀಯದೆನ್ನ ಮನವು
ಹೊಂದಿದಲ್ಲಿ ಹೊಂದಲೀಯದೆನ್ನ ಮನವು!

ಮರವನೇರಿದ ಮರ್ಕಟನಂತೆ
ಹಲವು ಕೊಂಬಿಂಗೆ ಹಾಯುತ್ತಲಿದೆ;
ಬೆಂದ ಮನವ ನಾನೆಂತು ನಂಬುವೆನಯ್ಯಾ?
ಎಂತು ನಚ್ಚುವೆನಯ್ಯಾ?
ಎನ್ನ ತಂದೆ ಕೂಡಲಸಂಗಮದೇವನಲ್ಲಿಗೆ
ಹೋಗಲೀಯದಯ್ಯಾ!

ಬೆದಕದಿರು ಬೆದಕದಿರು ಬೆದಕಿದಡೆ ಹುರುಳಿಲ್ಲ!
ಚಿತ್ತ ರಟ್ಟೆಯ ಕಾಯಲ್ಲಿ ಮತ್ತೇನನರಸುವುರಯ್ಯಾ?
ನಿಮ್ಮ ಉತ್ತಮಿಕೆಯ ಪೂರೈಸುವುದು ಕೂಡಲಸಂಗಮದೇವಾ.

ತನ್ನ ವಿಚಾರಿಸಲೊಲ್ಲದು; ಇದಿರ ವಿಚಾರಿಸಹೋಹುದೀ ಮನವು!
ಏನು ಮಾಡುವೆನೀ ಮನವನು, ಎಂತು ಮಾಡುವೆನೀ ಮನವನು!

ತನ್ನಿಚ್ಚೆಯ ನುಡಿದಡೆ ಮಚ್ಚುವುದೀ ಮನವು
ಇದಿರಿಚ್ಚೆಯ ನುಡಿದಡೆ ಮಚ್ಚದೀ ಮನವು
ಕೂಡಲಸಂಗಮದೇವನ ಶರಣರ
ನಚ್ಚದ ಮಚ್ಚದ ಮನವನು, ಕಿಚ್ಚಿನೊಳಗಿಕ್ಕು!

ಸುಡಲೀ ಮನವೆನ್ನನುಡುಹನ ಮಾಡಿತ್ತು,
ನಡೆವಲ್ಲಿ ನುಡಿವಲ್ಲಿ ಅಧಿಕನೆಂದೆನಿಸಿತ್ತು…

ಇಂದ್ರಿಯಗಳೆಂಬ ಕೊಂಬೆಗಳ ಮೇಲೆ ಸುತ್ತುತ್ತಿರುವ ಮನಸ್ಸನ್ನು ಒಂದೆಡೆ ನಿಲ್ಲಿಸುವುದು ಹೇಗೆ? ಚಂಚಲ ಚಿತ್ತದ ಮೇಲೆ ವಿಶ್ವಾಸ ಇಡುವುದು ಎಂತು? ಒಳಗೆ ತಿರುಳಿಲ್ಲದ ರಟ್ಟೆ ಕಾಯಿಯಂಥ ಸತ್ವವಿಲ್ಲದ ಮನಸ್ಸನ್ನು ಇಟ್ಟುಕೊಂಡು ಅಪರಿಮಿತವಾದುದನ್ನು ಸಾಧಿಸುವುದು ಸಾಧ್ಯವೇ?… ಹೀಗೆ ತನ್ನನ್ನು ಮಹತ್ ಕಾರ್ಯಕ್ಕಾಗಿ ಸಿದ್ಧಪಡಿಸಿಕೊಳ್ಳುವ ಸಾಧಕನಿಗೆ ಬಾಹ್ಯ ತೊಡರುಗಳಿಗಿಂತ ಮಾನಸಿಕ ದೌರ್ಬಲ್ಯಗಳೇ ಹೆಚ್ಚು ಹೈರಾಣು ಮಾಡುತ್ತವೆ. ಅವುಗಳನ್ನು ಸಂಭಾಳಿಸಿಕೊಂಡು, ನಿಭಾಯಿಸಿಕೊಂಡು ಮುನ್ನಡೆಯಲು ಅದಮ್ಯ ಆತ್ಮಬಲ ಬೇಕು. ದೌರ್ಬಲ್ಯಗಳೊಂದಿಗೆ ಸೆಣಸಾಡಿ ಒಳಗನ್ನು ಸಿದ್ಧಮಾಡಿಕೊಳ್ಳುವ ಅದ್ಭುತ ವಚನಗಳಿವು.

ನಾನಾ ವೇಷ ಧರಿಸುವ ಮನಸ್ಸಿನ ಕುರಿತು ಬಸವಣ್ಣನವರು ಎಳೆಎಳೆಯಾಗಿ ಶೋಧಿಸುತ್ತಾರೆ, ಅದರ ಸೂಕ್ಷ್ಮಾತಿ ಸೂಕ್ಷ್ಮ ರೂಪಗಳನ್ನು ಬಯಲಿಗೆಳೆಯುತ್ತಾರೆ. ತನ್ನ ದೋಷಗಳನ್ನು, ದೌರ್ಬಲ್ಯಗಳನ್ನು ಗಮನಿಸದೆ ಇನ್ನೊಬ್ಬರ ತಪ್ಪುಗಳತ್ತಲೇ ದೃಷ್ಟಿ ನೆಡುವ ಮನಸ್ಸನ್ನು ಸರಿದಾರಿಗೆ ತರುವುದು ಹೇಗೆ? ತನ್ನ ಇಚ್ಛೆಯನ್ನು ಮೆಚ್ಚುವವರನ್ನು ಹತ್ತಿರಕ್ಕೆ ಸೇರಿಸಿಕೊಂಡು, ತನಗೆ ವಿರುದ್ಧವಾಗಿ ಮಾತಾಡುವವರನ್ನು  ಕಂಡರೆ ಸಿಡಿದೇಳುವ ಮನಸ್ಸಿಗೆ ಸಮಾಧಾನದ ಪಾಠ ಕಲಿಸುವುದು ಹೇಗೆ? ಶ್ರೇಷ್ಠತೆಯ ಕಾಯಿಲೆಗೆ ಬೀಳದಂತೆ ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳುವ ದಾರಿ ಯಾವುದು? ಅಂತರಂಗದ ಕೂಲಂಕಷವಾದ ಅವಲೋಕನದಿಂದ ಮಾತ್ರ ಅಹಂಕಾರದ ನೆಲೆಗಳನ್ನು ಸಂಪೂರ್ಣವಾಗಿ ಸುಟ್ಟು ಹಾಕಬಹುದು.

ಮನಸ್ಸಿನಲ್ಲಿ ವಿವಿಧ ರೂಪಗಳಲ್ಲಿ ಪ್ರಕಟಗೊಳ್ಳುವ ಭಾವನೆಗಳನ್ನು ಸಾಕ್ಷೀಪ್ರಜ್ಞೆಯಿಂದ ನೋಡುವುದು ಅರಿವಿನ ಮೊದಲ ಹೆಜ್ಜೆ. ಬಸವಣ್ಣನವರು ಅಂತರಂಗವನ್ನು ಬದುಕಿನ ಆತ್ಯಂತಿಕ ಪ್ರಮಾಣವನ್ನಾಗಿ ಸ್ವೀಕರಿಸಿದವರು. ಅವರಿಗೆ ಅದೇ ದೈವವಾಗಿತ್ತು. ಸತ್ಯವನ್ನೇ ದೇವರೆಂದು ಭಾವಿಸಿದ್ದ ಗಾಂಧೀಜಿಗೆ, ಅದನ್ನು ಕಂಡುಕೊಳ್ಳಲು ಅಹಿಂಸೆಯೇ ಸೂಕ್ತವಾದ ಮಾರ್ಗವಾಗಿತ್ತು. “ಸತ್ಯದ ಶೋಧಕ ದೂಳಿಗಿಂತಲೂ ಹೆಚ್ಚು ವಿಧೇಯಕನಾಗಿರಬೇಕು. ಜಗತ್ತು ಧೂಳನ್ನು ತನ್ನ ಕಾಲ ಕೆಳಗೆ ಹೊಸಕಿ ಹಾಕುತ್ತದೆ. ಆದರೆ ಸತ್ಯದ ಬೆನ್ನು ಹತ್ತಿದವನನ್ನು ಧೂಳೂ ತುಳಿಯಬಹುದು. ಸತ್ಯದ ದರ್ಶನವಾಗುವುದು ಆಗಲೇ, ಅದಕ್ಕೂ ಮೊದಲು ಸಾಧ್ಯವೇ ಇಲ್ಲ” ಎನ್ನುತ್ತಾರೆ.

ಆತ್ಮಶೋಧನೆಯು ತಪ್ಪನ್ನು ತಿದ್ದಿಕೊಳ್ಳುವ ವಿಶೇಷ ಗುಣ, ಸ್ವ ಸುಧಾರಣೆಗೆ ಮೆಟ್ಟಿಲು.

ವಿಕಳನಾದೆನು ಪಂಚೇಂದ್ರಿಯ ಧಾತುವಿನಿಂದ
ಮತಿಗೆಟ್ಟೆನು ಮನದ ವಿಕಾರದಿಂದ;
ಧೃತಿಗೆಟ್ಟೆನು ಕಾಯ ವಿಕಾರದಿಂದ;
ಶರಣುವೊಕ್ಕೆನು ಕೂಡಲಸಂಗಮದೇವಯ್ಯಾ.

ವಚನದ ಹುಸಿ ನುಸುಳೆಂತು ಮಾಬುದೆನ್ನ
ಮನದ ಮರ್ಕಟತನವೆಂತು ಮಾಬುದೆನ್ನ
ಹೃದಯದ ಕಲ್ಮಷವೆಂತು ಮಾಬುದೆನ್ನ
ಕಾಯವಿಕಾರಕ್ಕೆ ತರಿಸಲುವೋದೆನು,
ಎನಗಿದು ವಿಧಿಯೇ, ಕೂಡಲಸಂಗಮದೇವಾ.

ಸಪ್ತಧಾತುವಿನಿಂದಾದ, ಪಂಚೇಂದ್ರಿಯಗಳಿಂದ ಕೂಡಿದ ಈ ದೇಹ, ಮನಗಳ ಸ್ವರೂಪವೇ ಹಾಗಿದೆ. ಹಸಿವು, ತೃಷೆ, ಕಾಮ, ಮೊದಲಾದವು ಕಾಯವಿಕಾರಗಳು. ಮೋಹ, ಲೋಭ, ಮದ, ಮತ್ಸರಾದಿಗಳು ಮನೋವಿಕಾರಗಳು. ಇವುಗಳ ಒಳಸುಳಿಗಳಲ್ಲಿ ದೇಹ ಮನಗಳು ಸಿಲುಕಿಕೊಂಡರೆ ಅಲ್ಲಿಂದ ಬಿಡುಗಡೆಯೇ ಇಲ್ಲ. ಈ ಬಾಧೆಗಳಿಂದ ಹೊರಬರುವ ಮಾರ್ಗವನ್ನು ಕಾಣಲು ಚಡಪಡಿಸುತ್ತದೆ ಸಾಧಕ ಜೀವ. ಮನದ ನಾನಾ ವಿಕಾರಗಳ ತಳಮಳವನ್ನು ಇಷ್ಟು ಪರಿಣಾಮಕಾರಿಯಾಗಿ ಯಾರೂ ಅಭಿವ್ಯಕ್ತಿಸಿರಲಿಕ್ಕಿಲ್ಲ.

ಮಾತಿನಲ್ಲಿ ಹೇಗೋ ನಮಗೇ ತಿಳಿಯದಂತೆ ಸುಳ್ಳು ನುಸುಳಿಕೊಂಡು ಬರುತ್ತದೆ. ಚಂಚಲತೆಯಿಂದ ಹೊರಬರಲು ಸಾಧ್ಯವೇ ಇಲ್ಲವೆನ್ನುವಷ್ಟು ಮನಸ್ಸು ಮೋಸ ಮಾಡುತ್ತದೆ. ಕಪಟ, ವಂಚನೆಗಳಿಂದ, ರಾಗ ದ್ವೇಷಾದಿಗಳಿಂದ ಹೃದಯ ರಾಡಿ ಎದ್ದಿದೆ. ಅಂತರಂಗದ ಕುತ್ಸಿತ ಭಾವನೆಗಳಿಂದ ಹೊರ ಬರದೇ ಸಾಧನೆ ಮುಂದುವರಿಯಲಾರದು. ಸಾಧಕನ ತೀವ್ರ ತಳಮಳ ಇಲ್ಲಿ ಮಡುಗಟ್ಟಿ ನಿಂತಿದೆ. ಇದರಿಂದ ಬಿಡುಗಡೆ ಪಡೆಯುವ ಹಾದಿಯ ನಿರಂತರ ಹುಡುಕಾಟದಲ್ಲಿ ಮನ ತಲ್ಲೀನವಾಗಿದೆ.

ಗಾಂಧೀಜಿ ಅವರು ಸದಾ ಬಿಚ್ಚು ಮನಸ್ಸಿನ ಸ್ವವಿಮರ್ಶೆಗೆ ಮತ್ತು ಆತ್ಮಾವಲೋಕನಕ್ಕೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದರು. ಅಂತೆಯೇ ಯಾವುದೇ ಟೀಕೆಯನ್ನು ನಗುನಗುತ್ತಾ ಎದುರಿಸುವ ಆತ್ಮಸ್ಥೈರ್ಯ ಅವರಿಗಿತ್ತು. “ವಿಮರ್ಶೆ ಎನ್ನುವುದು ಅವರಿಗೆ ತಮ್ಮನ್ನು ಸುಧಾರಿಸಿಕೊಳ್ಳುವ ಹಾದಿಯಾಗಿತ್ತು” ಎನ್ನುತ್ತಾರೆ ಸರೋಜಿನಿ ನಾಯ್ಡು. ದೋಷಾರೋಪಣೆ ಮತ್ತು ನಿಂದನೆಗೆ ಯಾರೂ ಅತೀತರಾದವರಲ್ಲ ಎಂಬುದು ಅವರ ದೃಢ ನಿಲುವಾಗಿತ್ತು. ತಮ್ಮಲ್ಲಿ ಅರ್ಹತೆಗಳಿಗಿಂತ ನ್ಯೂನತೆಗಳೇ ಹೆಚ್ಚಿವೆ ಎಂದು ಹೇಳಿಕೊಳ್ಳುತ್ತಿದ್ದರು. ಗಾಂಧೀಜಿಯ ಇಂಥ ಪಾರದರ್ಶಕ ಗುಣವೇ ಇತರರಿಂದ ಅವರನ್ನು ವಿಶಿಷ್ಟ ನಾಯಕರನ್ನಾಗಿ ರೂಪಿಸಿದ್ದು. “ನನ್ನ ಬದುಕೊಂದು ತೆರೆದ ಪುಸ್ತಕ, ಇಲ್ಲಿ ನಾನೇನೂ ಅಡಗಿಸಿಡಬೇಕಿಲ್ಲ” ಎಂಬುದು ಅವರ ಅಚಲತೆ. ಕೊನೆಯವರೆಗೂ ಅವರು ಈ ಮಾತಿಗೆ ಬದ್ಧರಾಗಿದ್ದರು. ಅವರ ಆತ್ಮಚರಿತ್ರೆಯಲ್ಲಿರುವುದು ನಿಷ್ಠುರ ನಿಷ್ಕಪಟತೆ. ಕೊನೆಯುಸಿರಿನ ತನಕ ಅವರು ಪ್ರಾಂಜಲ ಮನಸ್ಸನ್ನು ಉಳಿಸಿಕೊಂಡಿದ್ದರು. ಅದಕ್ಕೆ “ಯೂರೋಪಿನ ಕ್ರೌರ್ಯವನ್ನು ಸರಳ ಮನುಷ್ಯನ ಘನತೆಯೊಂದಿಗೆ ಎದುರಿಸಲು ಸಾಧ್ಯವೆಂದು ತೋರಿಸಿದ ಗಾಂಧಿ ಎಲ್ಲ ಕಾಲಕ್ಕೂ ಶ್ರೇಷ್ಠ ವ್ಯಕ್ತಿ” ಎಂದಿದ್ದರು ಐನಸ್ಟಿನ್.

“ಗಾಂಧೀಜಿ ಹತ್ತಿರ ಮಾತ್ರ ಮುಕ್ತ ಮನಸ್ಸಿನ ಚರ್ಚೆ ಸಾಧ್ಯವಾಗುತ್ತಿತ್ತು” ಎನ್ನುತ್ತಾರೆ ರಾಮ ಮನೋಹರ ಲೋಹಿಯಾ. ಸ್ವಾತಂತ್ರ್ಯದ ಸಂದರ್ಭದಲ್ಲಿನ ಗಾಂಧೀಜಿಯ ನಿರ್ಧಾರಗಳನ್ನು ಧೈರ್ಯವಾಗಿ ಪ್ರಶ್ನಿಸುತ್ತಾ, ಸರಿ ಎನಿಸದಿದ್ದರೆ  ಟೀಕಿಸುತ್ತಿದ್ದ ಲೋಹಿಯಾ ಅವರು ಗಾಂಧೀಜಿಯ ಪರಮಾಪ್ತರಾಗಿದ್ದರು. ಅವರ ನಡುವೆ ಪ್ರಚಂಡ ವಾದಗಳಾಗುತ್ತಿದ್ದವು, ಲೋಹಿಯಾ ಅವರ ವೈಚಾರಿಕ ನಿಲುವನ್ನು ಗಾಂಧೀಜಿ ಮನಃಪೂರ್ವಕವಾಗಿ ಸ್ವೀಕರಿಸುತ್ತಿದ್ದರಂತೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೂ ಗಾಢವಾದ, ಗೌರವಯುತವಾದ ಸಂಬಂಧ ಸಾಧ್ಯ ಎಂಬುದಕ್ಕೆ ಲೋಹಿಯಾ ಮತ್ತು ಗಾಂಧೀಜಿ ನಡುವಿನ ಬಾಂಧವ್ಯವೇ ಸಾಕ್ಷಿ.

ಬಸವಣ್ಣ ಮತ್ತು ಗಾಂಧೀಜಿ ನೇರವಾಗಿ ಹೃದಯಗಳೊಂದಿಗೆ ಸಂವಾದಕ್ಕೆ ಇಳಿಯುತ್ತಾರೆ. ಮನಪರಿವರ್ತನೆಯೊಂದಿಗೆ ದೇಶದ ಬದಲಾವಣೆ ಸಾಧ್ಯವೆಂದು ನಂಬುತ್ತಾರೆ. ಕಾನೂನು-ಕಾಯ್ದೆಗಳಿಗಿಂತ ಹೃದಯ ಪರಿವರ್ತನೆಗೆ ಒತ್ತು ಕೊಡುತ್ತಾರೆ. ಅವರ ಆಶಯಗಳನ್ನು ಒಪ್ಪಿಕೊಂಡವರು ಜಾತಿವಾದಿ ಆಗಲಾರರು, ಭ್ರಷ್ಟತೆಗೆ ಕೈ ಹಾಕಲಾರರು, ನಂಬಿದ ತತ್ವಗಳಿಗಾಗಿ ಜೀವನ ಪರ್ಯಂತ ನಿಷ್ಠರಾಗಿರಬಲ್ಲರು.

ಹೀಗೆ ವಸ್ತುನಿಷ್ಠತೆಯಲ್ಲಿ ಮುಳುಗಿ ಹೋಗದಂತೆ ಆತ್ಮನಿಷ್ಠತೆಯ ಎಚ್ಚರದಲ್ಲಿ ಜಗತ್ತನ್ನು ಕಾಣುವ, ಬದುಕನ್ನು ಪರಿಭಾವಿಸುವ ಕಲೆಯನ್ನು ತೋರಿಸಿಕೊಟ್ಟರು ಬಸವಣ್ಣ ಮತ್ತು ಗಾಂಧೀಜಿ. ಹಾಗೆ ಶೋಧಿಸಿ ಶುದ್ಧಿಸಿಕೊಳ್ಳುವ ಮೂಲಕ ಅಂತರಂಗ ಬಹಿರಂಗಗಳ ಗಡಿಯನ್ನು ದಾಟಿದರು. ತಾವೇನು ನೇರವಾಗಿ ಆಕಾಶದಿಂದ ಧುಮುಕಿದವರಲ್ಲ. ತಪ್ಪುಗಳು, ದೋಷಗಳು ಇರುವ, ವಿಫಲತೆಗಳನ್ನು ಅನುಭವಿಸಿದ ಮರ್ತ್ಯಜೀವಿ ಎಂಬುದನ್ನು ಮುಕ್ತವಾಗಿ ಹೇಳಿಕೊಂಡರು. ಮಹಾತ್ಮರ ಜೀವನ ಕೀರ್ತನೆ, ಪುರಾಣಗಳ ಜಾಡು ಹಿಡಿಯಬೇಕಿಲ್ಲ. ವಿಮರ್ಶೆಯ ಬರಹಗಳ ಮಧ್ಯೆಯೂ ಅವರ ದೊಡ್ಡತನ ಪ್ರಕಾಶಿಸಬಲ್ಲುದು. ಮಾನವತೆಯ ಮಿತಿಯಲ್ಲೂ ಪ್ರಕಾಶಮಾನವಾಗಿ ಮಿನುಗಬಲ್ಲರು.

ಇದು ಗಾಂಧೀಜಿಯ 150ನೆಯ ಜನ್ಮಶತಮಾನೋತ್ಸವದ ವರ್ಷ. ಇಂಡಿಯಾ ಬಿಫೋರ್ ಗಾಂಧಿ, ಇಂಡಿಯಾ ಆಫ್ಟರ್ ಗಾಂಧಿಯಂತಹ ಉತ್ಕೃಷ್ಟ ಪುಸ್ತಕಗಳನ್ನು ಬರೆದ ರಾಮಚಂದ್ರಗುಹಾ ಅವರು ಕೆಲವೇ ದಿನಗಳ ಹಿಂದೆ ಮತ್ತೊಂದು ಗಮನಾರ್ಹ ಪುಸ್ತಕ ಬಿಡುಗಡೆ ಮಾಡಿದರು: ಗಾಂಧಿ: ದಿ ಇಯರ್ಸ್ ದಟ್ ಚೇಂಜ್ಡ್ ದಿ ವರ್ಲ್ಡ್ (1919-1948). ಗಾಂಧೀಜಿಯನ್ನು ಆಳವಾಗಿ ಬಲ್ಲ ಗುಹಾ ಅವರಿಗೆ ವಚನ ಚಳುವಳಿಯ ಬಗ್ಗೆ, ಬಸವಣ್ಣನವರ ಬಗ್ಗೆ ನಿಖರ ಮಾಹಿತಿ ಇರಲಿಕ್ಕಿಲ್ಲ. ವಚನಗಳನ್ನು, ಶರಣರ ಕ್ರಾಂತಿಯನ್ನು ಕನ್ನಡದಿಂದಾಚೆಗೆ ಸಶಕ್ತವಾಗಿ ದಾಟಿಸಿದ್ದರೆ ಗುಹಾ ಅವರು “ಬಸವ: ದಿ ಇಯರ್ಸ್ ದಟ್ ಚೇಂಜ್ಡ್ ದಿ ಮ್ಯಾನಕೈಂಡ್” ಎಂಬ ಪುಸ್ತಕವನ್ನು ಖಂಡಿತ ಬರೆಯುತ್ತಿದ್ದರು.

Previous post ಧರ್ಮವನ್ನು ಒಡೆಯುವುದು – ಹಾಗೆಂದರೇನು?
ಧರ್ಮವನ್ನು ಒಡೆಯುವುದು – ಹಾಗೆಂದರೇನು?
Next post ವಚನ – ಸಾಂಸ್ಕೃತಿಕ ತಲ್ಲಣಗಳು
ವಚನ – ಸಾಂಸ್ಕೃತಿಕ ತಲ್ಲಣಗಳು

Related Posts

ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
Share:
Articles

ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು

January 4, 2020 ಡಾ. ನಟರಾಜ ಬೂದಾಳು
ವಚನಕಾರರ, ತತ್ವಪದಕಾರರ, ಸೂಫಿಗಳ ತಾತ್ವಿಕತೆಯ ನೆಲೆಗಳ ಹುಡುಕಾಟದ ಹಿಂದೆ  ಕನ್ನಡಕ್ಕೆ ತನ್ನದೇ ಆದ ಕಾವ್ಯ ಮೀಮಾಂಸೆಯೊಂದರ ಶೋಧನೆಯ ಒತ್ತಾಯವಿದೆ. ಈ ನೆಲದ ಕಾವ್ಯವನ್ನು,...
ಕನ್ನಗತ್ತಿಯ ಮಾರಯ್ಯ
Share:
Articles

ಕನ್ನಗತ್ತಿಯ ಮಾರಯ್ಯ

April 3, 2019 ಮಹಾದೇವ ಹಡಪದ
ವ್ಯಾಪಾರಿಗಳ ಮನೆಗಳಿಗೆ ದುಃಸ್ವಪ್ನವಾಗಿದ್ದ ಕನ್ನದ ಮಾರ ಹೇಳಿಕೇಳಿ ಕದಿಯುವ ಚಾಣಾಕ್ಷ ಕಳ್ಳ. ಇಂಥ ದಿನ ಇಷ್ಟು ಹೊತ್ತಿಗೆ ಸರಿಯಾಗಿ ನಿಮ್ಮ ಮನೆಗೆ ಕನ್ನ ಹಾಕತೇನೆ ಅಂತ...

Comments 15

  1. D P Prakash
    Oct 2, 2018 Reply

    ಜಗತ್ತು ಕ೦ಡ ಎರಡು ಮೇರು ವ್ಯಕ್ತಿತ್ವಗಳ ತೌಲನಿಕ ಅಧ್ಯಯನ ಒ೦ದು ರೋಚಕ ಪಯಣ. ಎರಡು ಕಾಲಘಟ್ಟಗಳಲ್ಲಿ ಬದು ಹೋಗುವಈ ಯುಗಪುರುಷರ ಸಾಧನೆಯ ಅರಿವಿನ ದೀಪ ಬೆಳಗುವ ಪ್ರಯತ್ನ ಮಾಡಿರುವ ಮ೦ಗಳ ಅವರ ಲೇಖನ ಅತ್ಯ೦ತ ಸೊಗಸಾಗಿದೆ. ಬಯಲು ಹೊಸ ಮಜಲು ಏರುತ್ತಿರುವುದು ನೋಡಿ ಸ೦ತಸ ಎನಿಸಿದೆ.

  2. Prakash K Patil
    Oct 2, 2018 Reply

    ಮತ್ತೊಬ್ಬರ ಮಾತಿಗೆ ಕಿವಿ ಆಗುವ ಲಕ್ಷಣ ಗಾಂಧಿ ಮತ್ತು ಬಸವಣ್ಣ ಇಬ್ಬರಲ್ಲೂ ಇತ್ತು, ಅನ್ನುವ ಈ ಹೊಸ ಪರಿಕಲ್ಪನೆ ತಮ್ಮ ಈ ಬರಹದಲ್ಲಿ ಕಂಡೆ. ಚೆನ್ನಾಗಿ ಅರ್ಥೈಸಿಕೊಂಡಿದ್ದಿರಿ ಮಾನವತಾವಾದಿ ಬಸವ ಮತ್ತು ಅಹಿಂಸಾವಾದಿ ಗಾಂಧಿ ಇಬ್ಬರನ್ನು.
    ಶರಣು ಶರಣಾರ್ತಿಗಳು ?

  3. K S MALLESH
    Oct 2, 2018 Reply

    ಈ ಸಾರಿಯ ನಿಮ್ಮ ಲೇಖನ ಚೆನ್ನಾಗಿ ಮೂಡಿಬಂದಿದೆ. ಇಬ್ಬರು ಮಹಾನ್ ವ್ಯಕ್ತಿಗಳು ತಮ್ಮ ಅಂತರಂಗ ಶುದ್ಧಿಗಾಗಿ ಸದಾ ಪಾರದರ್ಶಕ ರೀತಿಯಲ್ಲಿ ಕಾರ್ಯೋನ್ಮುಖರಾಗುತ್ತಿದ್ದರು. ಅವರು ಸಮಾಜದಲ್ಲಿ ಮಹಾನ್ ವ್ಯಕ್ತಿಗಳಾಗಲು ಅವರ ಈ ಗುಣವೂ
    ಒಂದು ಕಾರಣವಾಯಿತು ಎನ್ನುವುದನ್ನು ಮನಮುಟ್ಟುವಂತೆ ಅರುಹಿದ್ದೀರಿ. ಬಸವಣ್ಣನವರ ಬದುಕು ಸಾಧನೆ ಕೊಡುಗೆಗಳ ಬಗ್ಗೆ ಗುಹಾರವರಿಗೆ ತಿಳಿಸಿ, ಸಮಾಲೋಚಿಸಿ, ಅವರೊಡನೆ ನೀವೂ ಸಹಲೇಖಕರಾಗಿ
    “ಬಸವ: ದಿ ಇಯರ್ಸ್ ದಟ್ ಚೇಂಜ್ಡ್ ದಿ ಮ್ಯಾನಕೈಂಡ್”
    ಎನ್ನುವ ಗ್ರಂಥ ಬೇಗ ಬರಲಿ ಎಂಬುದು ನನ್ನ ಬಯಕೆ ಮತ್ತು ಹಾರೈಕೆ.
    – ಕೆ. ಎಸ್. ಮಲ್ಲೇಶ್

  4. shobhadevi
    Oct 2, 2018 Reply

    ಬಯಲು ನನ್ನ ನೆಚ್ಚಿನ ಬ್ಲಾಗ್. ಇವತ್ತು ರಜೆ ಇದ್ದುದಕ್ಕೆ ಒಂದೇ ಸಲಕ್ಕೆ ಮೂರೂ ಲೇಖನಗಳನ್ನ ಓದಿ ಮುಗಿಸಿದೆ. ಬೇರೆ ಬೇರೆ ವಿಷಯಗಳ ಮೂರೂ ನನಗೆ ಹಿಡಿಸಿದವು. ಗಾಂಧೀಜಿ- ಬಸವಣ್ಣನವರ ಬರಹ ವಂಡರಫುಲ್.

  5. ಡಾ.ಪಂಚಾಕ್ಷರಿ ಹಳೇಬೀಡು
    Oct 3, 2018 Reply

    ನಿರಂತರವಾಗಿ ತಮ್ಮನ್ನು ಪ್ರಶ್ನಿಸಿಕೊಳ್ಳುವವರಲ್ಲಿ ಅಹಂ ಹುತ್ತ ಕಟ್ಟಲಾರದು. ನಾನೇ ಸರಿ ಎನ್ನುವ ಧೋರಣೆಯೂ ಹತ್ತಿರ ಸುಳಿಯದು. ಯೋಚಿಸುವ ಮಾರ್ಗದಲ್ಲಿ ನೂರು ಸಾಧ್ಯತೆಗಳನ್ನು ಕಾಣಬಲ್ಲ ಪ್ರಾಂಜಲ ಮನಸ್ಸು ಅವರಲ್ಲಿರುತ್ತದೆ.

    ಬುದ್ಧ ಬಸವ ಗಾಂಧಿ ನಡುವಿನ ಸಮತೋಲಿತ ಲೇಖನ ಸಕಾಲಿಕ ಮತ್ತು ಅರ್ಥಪೂರ್ಣ.

    ಶರಣುಶರಣಾರ್ಥಿ.

  6. kavitha hiremat
    Oct 3, 2018 Reply

    ಗಾಂಧಿ ಮತ್ತು ಬಸವಣ್ಣನವರ ಲೇಖನ ಚೆನ್ನಾಗಿದೆ. ಮೂರು ಸಲ ಓದಿದೆ, ನಿಮಗೆ ಫೋನ್ ಮಾಡಿದೆ, ಸಂಪರ್ಕ ಸಿಗಲಿಲ್ಲ. ಆತ್ಮ ಶೋದನೆಯಂಥ ವಿಚಾರವಾಗಿ ಮನೋಜ್ಞ ಬರವಣಿಗೆ. ಇದನ್ನು ಪತ್ರಿಕೆಗೆ ಕಳಿಸಿ, ಎಲ್ಲರೂ ಓದಬೇಕು.

  7. sadashivaiah JP
    Oct 5, 2018 Reply

    ಗಾಂಧಿ ಮತ್ತು ಬಸವಣ್ಣ ಸತ್ಯದ ಬೆಳಕಲ್ಲಿ ತೆರೆದುಕೊಂಡ ಶುಭ್ರ ಮನಸ್ಸುಗಳು. ಇಬ್ಬರ ಬಗ್ಗೆ ಎಷ್ಟು ಹೇಳಿದರೂ ಕಡಿಮೆ, ಅಚ್ಚುಕಟ್ಟಾಗಿದೆ ಲೇಖನ. ನಿಮ್ಮ ಮಾತಲ್ಲೇ ಹೇಳೋದಾದ್ರೆ ಆಪ್ತವೆನಿಸುತ್ತದೆ.

  8. jyotilingappa
    Oct 5, 2018 Reply

    ಬಸವಣ್ಣ ಬಸವಣ್ಣನೇ, ಗಾಂಧಿ ಗಾಂಧಿಯೇ… ನನ್ನ ದೃಷ್ಟಿಯಲ್ಲಿ. ಅತ್ಯಲ್ಪ ಕಾಲಾವಧಿಯಲ್ಲಿ ಬಸವನ ಸಾಧನೆ ಅಸಾಮಾನ್ಯ. ಚೆನ್ನಾಗಿದೆ ಲೇಖನ, ಇರುವ ಅವಕಾಶದಲ್ಲಿ ಚೆನ್ನಾಗಿ ಬಂದಿದೆ.

  9. Ningaraj Malawad
    Oct 12, 2018 Reply

    Thank you for the great article madam

  10. Shubha
    Oct 13, 2018 Reply

    Well written Mangala Mam, Can we expect more detailed articles on individuals.
    Thanks

  11. jeevan koppad
    Oct 13, 2018 Reply

    Madam, I have sent your article to Mr.Ramchandra Guha. You have given great information on two marvellous personalities.

  12. Jahnavi Naik
    Oct 15, 2018 Reply

    ಆತ್ಮಪರಿಶೋಧನೆಯಿಂದ ಮಾತ್ರ ಅಹಂಕಾರದ ನೆಲೆಗಳನ್ನು ಸುಟ್ಟುಹಾಕಬಹುದು ಎನ್ನುವಂಥ ಮಾತುಗಳು ಮನಸ್ಸಿಗೆ ಬಹಳ ಹಿಡಿಸಿದವು. ಇಡೀ ಲೇಖನವನ್ನು ಎರಡು ಮೂರು ಸಲ ಓದಿದೆ. ಇಬ್ಬರು ಮಹಾ ವ್ಯಕ್ತಿಗಳ ಜೀವನದ ಸಾರವನ್ನು ತುಂಬ ಚನ್ನಾಗಿ ಬರೆದಿದ್ದೀರಿ.

  13. navya patil
    Oct 16, 2018 Reply

    ಎಲ್ಲಿ ನಾನು, ನನ್ನಿಂದಲೇ, ನನ್ನದು ಎಂಬ ವಾಸನೆಗಳು ಇರುತ್ತವೆಯೋ ಅಲ್ಲಿ ಜ್ಞಾನೋದಯ ಸಾಧ್ಯವೇ ಇಲ್ಲ ಎನ್ನುವ ಸಂಗತಿ ನಿಜ, ಪೂರ್ತಿ ನಿಜ, ನಮ್ಮ ನಡುವೆ ಅಂಥವರು ತುಂಬಿ ಹೋಗಿದ್ದಾರೆ. ಇವರಿಂದ ದೂರ ಇದ್ದಷ್ಟೂ ಒಳ್ಳೆಯದು. ಗಾಂಧಿ, ಬಸವಣ್ಣನವರ ಜೀವನಗಳಲ್ಲಿ ಇಂಥ ವಾಸನೆಯ ಒಂದೇ ಒಂದು ಮಾತುಗಳಿಲ್ಲ, ಎಷ್ಟು ಸಾಧಿಸಿದರು ಅವರು, ಎಷ್ಟು ತ್ಯಾಗ ಮಾಡಿದರು, ಎಷ್ಟು ದಣಿದರು…….. ಆದರೆ ಎಲ್ಲಿಯೂ ಹೇಳಿಕೊಳ್ಳಲಿಲ್ಲ, ಲೇಖನ ಚಂದ ಇದೆ.
    ಕಲಬುರ್ಗಿಯವರ ನೆನಪು, ಸಾಧನೆಗಳನ್ನು ಎತ್ತಿ ಹಿಡಿದ ಲೇಖನವೂ ಬಹಳ ಚನ್ನಾಗಿತ್ತು. ಹೃದಯ ತಟ್ಟುವಂತಿತ್ತು. ಕಾಲ ಕೆಳಗಿನ ಬೆಂಕಿಯ ಬಗ್ಗೆ ಮಾರ್ಮಿಕವಾಗಿ ಬರೆದ ಬರಹ ಸೂಪರಾಗಿತ್ತು.

  14. RaMESHA GOWDA M.Y.
    Nov 2, 2018 Reply

    ಕೆ. ಆರ್.ಮಂಗಳ ಅವರೇ
    ನಮಸ್ಕಾರ
    ಬೆಳಕಿನ ಬಗ್ಗೆ ನಿಮ್ಮ ಲೇಖನ ಹಾಗು ಬುದ್ಧ ಗಾಂಧೀಜಿ ನಡುವಿನ ಬಸವಣ್ಣ ಬಗ್ಗೆ ನೀವು ಬರೆದಿರುವ ಲೇಖನ ತುಂಬ ಗಹನವಾದ ವಿಚಾರಗಳ ಮೂಲಕ ಆಳವಾದ ಅಧ್ಯಯನಾದಿಂದ ಮಂಡನೆ ಮಾಡಿದ ಪ್ರಬುದ್ಧ ಲೇಖನಗಳಾಗಿವೆ, ನನಗೆ ತುಂಬ ಹೆಮ್ಮೆ ಅನ್ನಿಸುತದೆ. ಧನ್ಯವಾದಗಳು
    ರಮೇಶ ಗೌಡ ಎಂ. ವೈ.
    ಚಾರ್ಟರ್ಡ್ ಅಕೌಂಟೆಂಟ್
    ಮೈಸೂರು

  15. Prasanna Hosur Lingayath
    Jun 5, 2019 Reply

    Bayalu.co.in
    is the best becoz the articles found in this website are the solutions for the upcoming generation & civilization 12th reverse is 21st century . they say history repeats so as if now sharana paramprae is being reinstalled in 21st century by spreading the knowledge of 12th century Sharanas & the vachana sahitya throught the world . the people who learn or live according to sharnas routes will be 100% despecible or immortal
    Sharanu sharanarthi for sharing all types of articles

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನೀರಬೊಂಬೆಗೆ ನಿರಾಳದ ಗೆಜ್ಜೆ
ನೀರಬೊಂಬೆಗೆ ನಿರಾಳದ ಗೆಜ್ಜೆ
April 29, 2018
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
October 10, 2023
ದಾಸೋಹ ತತ್ವ
ದಾಸೋಹ ತತ್ವ
January 10, 2021
ಪ್ರಕೃತಿಯೊಂದಿಗೆ ಬಾಳಿದವರು…
ಪ್ರಕೃತಿಯೊಂದಿಗೆ ಬಾಳಿದವರು…
June 14, 2024
ಗುರು ಶಿಷ್ಯ ಸಂಬಂಧ
ಗುರು ಶಿಷ್ಯ ಸಂಬಂಧ
April 6, 2024
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
January 7, 2022
ತಮ್ಮೊಳಗಿರ್ದ ಮಹಾಘನವನರಿಯರು
ತಮ್ಮೊಳಗಿರ್ದ ಮಹಾಘನವನರಿಯರು
May 8, 2024
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
January 4, 2020
ಲಿಂಗಾಯತ ಮಠಗಳು ಮತ್ತು ಬಸವತತ್ವ
ಲಿಂಗಾಯತ ಮಠಗಳು ಮತ್ತು ಬಸವತತ್ವ
July 21, 2024
ಈ ಕ್ಷಣದ ಸತ್ಯ
ಈ ಕ್ಷಣದ ಸತ್ಯ
March 12, 2022
Copyright © 2025 Bayalu