ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
ಗುರುಬಸವಣ್ಣನವರು ಭಾರತ ದೇಶದಲ್ಲಿ ಅದರಲ್ಲೂ ನಮ್ಮ ಕನ್ನಡನಾಡಿನಲ್ಲಿ ಹನ್ನೆರಡನೇ ಶತಮಾನದಲ್ಲಿ ಪ್ರಜ್ವಲಿಸಿದ ಮಹಾನ್ ಚೇತನ ಎಂಬುದು ನಮಗೆಲ್ಲಾ ಬಹಳ ಹೆಮ್ಮೆಯ ವಿಷಯ. ಮಾನವ ಜೀವನದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದವರು ಅವರು. ಮಾನವನ ಸರ್ವತೋಮುಖ ಅಭಿವೃದ್ಧಿ ಎಂದೊಡನೆ ಪ್ರಮುಖವಾಗಿ ಮುನ್ನೆಲೆಗೆ ಬರುವುದೇ ವ್ಯಕ್ತಿ ಶಿಕ್ಷಣ. ಒಬ್ಬ ವ್ಯಕ್ತಿ ಯಾವರೀತಿ ಶಿಕ್ಷಣ ಪಡೆದುಕೊಂಡಾಗ ಆತನಲ್ಲಿ ಆಮೂಲಾಗ್ರ ಪರಿವರ್ತನೆ ಸಾಧ್ಯ ಎಂಬುದನ್ನು ಬಸವಣ್ಣನವರು ಬಲ್ಲವರಾಗಿದ್ದರು, ಆದ್ದರಿಂದ ಅವರಲ್ಲಿ ಒಬ್ಬ ಅತ್ಯಮೂಲ್ಯ ಶಿಕ್ಷಣತಜ್ಞ ಹುದುಗಿದ್ದುದನ್ನು ನಾವು ಕಾಣಬಹುದು. ಸಾಧಾರಣ ವಿದ್ಯಾರ್ಥಿಯೂ ಅಸಾಧಾರಣ ಸಾಧನೆ ಮಾಡಬಹುದೆಂದು ಅವರು ತಮ್ಮ ಅನುಭವ ಮಂಟಪವೆಂಬ ಕಾರ್ಯಾಗಾರದಲ್ಲಿ ನಿರೂಪಿಸಿ ತೋರಿದ್ದಾರೆ. ಏಕೆಂದರೆ ಅಂದು ಅಕ್ಷರವನ್ನೇ ಕಾಣದ ಸಮಾಜದಲ್ಲಿ ತುಳಿತಕ್ಕೊಳಗಾದ ಅತ್ಯಂತ ನಿಮ್ನವರ್ಗದ ಜನರೂ ಬಸವಣ್ಣನವರ ಸಂಪರ್ಕಕ್ಕೆ ಬಂದು ಉತ್ತಮ ಜೀವನವನ್ನು ರೂಪಿಸಿಕೊಂಡುದಲ್ಲದೇ ಅತಿ ಉನ್ನತ ನಿಲುವಿನ ಸಾಧನೆಯ ಶಿಖರದ ತುಟ್ಟತುದಿಯ ವಚನಗಳನ್ನು ರಚಿಸಿರುವುದೇ ಇದಕ್ಕೆ ಸಾಕ್ಷಿ. ಶರಣರಾದ ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಉರಿಲಿಂಗಪೆದ್ದಿ ಮುಂತಾದ ಅಸಂಖ್ಯಾತ ಸಾಮಾನ್ಯ ಜನರು ಬಸವಣ್ಣನವರಿಂದಾಗಿ, ಅವರು ಕಲಿಸಿದ ವಿದ್ಯೆಯಿಂದಾಗಿ ಶರಣ ಸಮೂಹದಲ್ಲಿ ಮೇರುಶಿಖರವಾಗಿ ತಮ್ಮ ಅನುಭಾವದ ವಚನಗಳನ್ನು ರಚಿಸಿದ್ದಾರೆ. ಈ ವಚನಗಳು ಇಂದಿನ ವಿದ್ವಾಂಸರು ಡಾಕ್ಟರೇಟ್ ಪದವಿ ಪಡೆಯಲು ಬೆಳಕಾಗಿವೆ ಎಂದರೆ ಅವರ ಶಿಕ್ಷಣ ಮಟ್ಟ, ವಿಧಾನ ಎಂತಹುದಾಗಿತ್ತು ಮತ್ತು ಅದರ ಹಿಂದಿನ ಕರ್ತೃತ್ವ ಶಕ್ತಿ ಎಂತಹುದು ಎಂಬುದನ್ನು ನಾವು ಅರಿಯಬೇಕು.
ಇಂದಿನ ಶಿಕ್ಷಣಸಂಸ್ಥೆಗಳು ಶೇ 95ಕ್ಕೂ ಮೇಲ್ಪಟ್ಟ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಆಯ್ದುಕೊಂಡು ಅವರಿಗೆ ಶಿಕ್ಷಣ ನೀಡಿ ತಮ್ಮ ಸಂಸ್ಥೆ ಶೇ 99ರಷ್ಟು ಫಲಿತಾಂಶ ನೀಡಿದೆ ಎಂದು ಬೀಗುವುದನ್ನು ನೋಡುತ್ತಿದ್ದೇವೆ. ಹೀಗೆ ಅಂಕ ಗಳಿಕೆಯನ್ನೇ ಗುರಿಯಾಗಿಸಿಕೊಂಡು ಶೇ 95ಕ್ಕೂ ಅಧಿಕ ಅಂಕಗಳನ್ನು ಪಡೆದು ಉತ್ತೀರ್ಣರಾದ ಅನೇಕ ವಿದ್ಯಾರ್ಥಿಗಳು ತಮ್ಮ ನಿಜ ಜೀವನದಲ್ಲಿ ವಿಫಲರಾಗಿರುವುದನ್ನು ನಾವು ನೋಡಿದ್ದೇವೆ, ಇದು ಶಿಕ್ಷಣದ ವೈಫಲ್ಯ. ಇದನ್ನು ಮನಗಂಡೇ ಅಂದು ಬಸವಣ್ಣನವರು ಪರಿಣಾಮಕಾರಿಯಾದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿ ತನ್ಮೂಲಕ ಇಡೀ ಸಮಾಜದ ಅನಕ್ಷರಸ್ಥರೂ ಅರ್ಥಪೂರ್ಣವಾಗಿ ಬದುಕುವಲ್ಲಿ ಹಾಗೂ ತಮ್ಮ ಆಚಾರ-ವಿಚಾರ-ಕಾಯಕಗಳಲ್ಲಿ ಅತ್ಯಂತ ಪ್ರಾವೀಣ್ಯತೆಯನ್ನು ಗಳಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು, ಅನುಭಾವ ಸಾಹಿತ್ಯದ ಕೃಷಿಯನ್ನು ತಾವು ಮಾಡಿದರು ಹಾಗೂ ಮಾಡಿಸಿದರು.
ಮನಶಾಸ್ತ್ರಜ್ಞ ಬೆಂಜಮಿನ್ ಬ್ಲೂಮ್ 1913ರಲ್ಲಿ ಅಮೇರಿಕಾದ ಪೆನ್ಸಿಲ್ವೇನಿಯಾದಲ್ಲಿ ಜನಿಸಿದ ಶಿಕ್ಷಣ ತಜ್ಞ. ಇವರು ಸುದೀರ್ಘ ಅಧ್ಯಯನ ಮತ್ತು ಅನುಭವದ ಮುಖೇನ ಶೈಕ್ಷಣಿಕ ಕ್ಷೇತ್ರಕ್ಕೆ ಹಲವಾರು ಮಹತ್ತರ ಕೊಡುಗೆಗಳನ್ನು ಕೊಟ್ಟಿದ್ದಾರೆ. ಇಸ್ರೇಲ್, ಭಾರತ ಹಾಗೂ ಇನ್ನಿತರ ದೇಶಗಳಲ್ಲಿ ಶೈಕ್ಷಣಿಕ ಸಲಹಾಗಾರರಾಗಿ ಅಲ್ಲಿನ ಶೈಕ್ಷಣಿಕ ಗುಣಮಟ್ಟವನ್ನು ಮೇಲ್ದರ್ಜೆಗೇರಿಸಲು ದುಡಿದಿದ್ದಾರೆ. 1957ರಲ್ಲಿ ಇವರು ಫೋರ್ಡ್ ಪ್ರಾಯೋಜಕತ್ವದೊಂದಿಗೆ ಭಾರತದಲ್ಲಿ ಶೈಕ್ಷಣಿಕ ಮೌಲ್ಯಮಾಪನ ಕುರಿತು ಅನೇಕ ಕಾರ್ಯಾಗಾರಗಳನ್ನು ನಡೆಸಿಕೊಟ್ಟಿರುತ್ತಾರೆ. ಇವರು ಆರು ಹಂತದ ಕಲಿಕಾ ವಿಧಾನದಿಂದ ಅತ್ಯಂತ ಪರಿಣಾಮಕಾರಿ ಶೈಕ್ಷಣಿಕ ತರಬೇತಿಯನ್ನು ರೂಪಿಸಿದ್ದಾರೆ. ಇವರ ಈ ಮಾದರಿಗೆ “ನಿರ್ಣಾಯಕ ಆಲೋಚನಾ ಮಾದರಿ” (ಕ್ರಿಟಿಕಲ್ ಥಿಂಕಿಂಗ್ ಮಾಡೆಲ್) ಎನ್ನುವರು. ಇಪ್ಪತ್ತನೇ ಶತಮಾನದ ಅಮೇರಿಕಾದ ಬೆಂಜಮಿನ್ ಬ್ಲೂಮ್ ಅವರ ಈ ಕಲಿಕಾ ಮಾದರಿಯನ್ನು ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಹಾಕಿಕೊಟ್ಟ ಷಟಸ್ಥಲ ಮಾದರಿಗೆ ಹೋಲಿಸಿ ನೋಡಿದಾಗ ಇವು ಒಂದಕ್ಕೊಂದು ಪರಸ್ಪರ ಪೂರಕವಾಗಿರುವುದನ್ನು ನಾವು ಗಮನಿಸಬಹುದು.
ಬ್ಲೂಮ್ ಪಿರಮಿಡ್ ಎಂದೇ ಪ್ರಖ್ಯಾತವಾದ ಕಲಿಕಾ ಮಾದರಿಯನ್ನು ಈ ಕೆಳಗಿನ ಚಿತ್ರದಲ್ಲಿ ನೋಡಬಹುದು, ಈ ಕಲಿಕಾ ವ್ಯವಸ್ಥೆಯನ್ನು ಇಂದು ವಿಶ್ವಾದ್ಯಂತ ಅಳವಡಿಸಿಕೊಳ್ಳಲಾಗುತ್ತಿದೆ.
ಪರಿವೀಕ್ಷಣೆಗಾಗಿ ಹಾಗೂ ಸುಲಭ ಗ್ರಾಹ್ಯಕ್ಕಾಗಿ ಈ ಕೆಳಗಿನ ತುಲನಾತ್ಮಕ ಕೋಷ್ಠಕವನ್ನು ತಯಾರಿಸಲಾಗಿದೆ.
ಈ ಮಾದರಿಯು ಪ್ರಮುಖವಾಗಿ ವಿದ್ಯಾರ್ಥಿಯ ಕಲಿಕೆಯ ಅರಿವಿನ ಪ್ರಜ್ಞೆಯ ಸ್ತರವನ್ನು ಸೂಚಿಸುತ್ತದೆ. 1956ರಲ್ಲಿ ಬೆಂಜಮಿನ್ ಬ್ಲೂಮ್ ಪ್ರಕಟಿಸಿದ “ಟ್ಯಾಕ್ಸಾನಮಿ ಆಫ್ ಎಜುಕೇಷನಲ್ ಆಬ್ಜೆಕ್ಟಿವ್ಸ್ ಹ್ಯಾಂಡ್ ಬುಕ್” ಎಂಬ ಪುಸ್ತಕದಿಂದ ಈ ವಿಚಾರಗಳನ್ನು ಆಯ್ದುಕೊಳ್ಳಲಾಗಿದೆ.
1. ಆರಂಭದ ಕಲಿಕೆಯಲ್ಲಿ ವಿದ್ಯಾರ್ಥಿಯು ಪುಸ್ತಕದಲ್ಲಿರುವ ವಿಚಾರಗಳನ್ನು ಓದಿ ಕಂಠಪಾಠ ಮಾಡಿ ನೆನಪಿನಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಾನೆ. (The taxonomy begins by defining knowledge as remembering previously learned material. According to Bloom, knowledge represents the lowest level of learning outcomes in the cognitive domain)
2. ಕಲಿಕೆಯ ಎರಡನೇ ಹಂತದಲ್ಲಿ ಪುಸ್ತಕದಿಂದ ಓದಿ ಕಲಿತ ವಿಚಾರಗಳನ್ನು ಮನನ ಮಾಡಿಕೊಂಡು ಅದರ ಆಂತರ್ಯವನ್ನು ಅರಿಯಲು ಪ್ರಯತ್ನಿಸುತ್ತಾನೆ ಹಾಗೂ ಅರಿಯುತ್ತಾನೆ. (Knowledge is followed by comprehension, or the ability to grasp the meaning of material. This goes just beyond the knowledge level. Comprehension is the lowest level of understanding)
3. ಮೂರನೇ ಹಂತದಲ್ಲಿ ಅಭ್ಯಾಸಿಯು ನೆನಪಿಟ್ಟು, ಅರಿತುಕೊಂಡ ವಿಷಯಗಳನ್ನು ಅಳವಡಿಸಿಕೊಳ್ಳಲು ಆರಂಭಿಸುತ್ತಾನೆ. (Application is the next area in the hierarchy. It refers to the ability to use learned material in new and concrete principles and theories. Application requires a higher level of understanding than comprehension)
4. ನಾಲ್ಕನೇ ಹಂತದ ಕಲಿಕೆಯಲ್ಲಿ ವಿದ್ಯಾರ್ಥಿಯು ಹಲವಾರು ವಿಚಾರಗಳ ಕುರಿತು ತುಲನಾತ್ಮಕವಾಗಿ ಚಿಂತಿಸುವ ಮತ್ತು ವಿಶ್ಲೇಷಿಸುವ ಸಾಮರ್ಥ್ಯವನ್ನು ಪಡೆಯುತ್ತಾನೆ. (Analysis is the next area of the taxonomy in which the learning outcomes require an understanding of both the content and the structural form of material)
5. ಐದನೇ ಕಲಿಕಾ ಹಂತದಲ್ಲಿ ವಿದ್ಯಾರ್ಥಿಯು ಹಲವಾರು ವಿಚಾರಗಳನ್ನು ಸೂಕ್ತವಾಗಿ ಮೌಲ್ಯಮಾಪನ ಮಾಡುವ ಸಾಮರ್ಥ್ಯವನ್ನು ಕರಗತ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ. (Next is evaluation, which concerns the ability to judge the value of material for a given purpose)
6. ಆರನೇ ಕಲಿಕಾ ಹಂತದಲ್ಲಿ ವಿದ್ಯಾರ್ಥಿಯು ತಾನು ಹಿಂದೆ ಕಲಿತ ಎಲ್ಲಾ ವಿಚಾರಗಳನ್ನು ಒಟ್ಟುಗೂಡಿಸಿ ಹಾಗೂ ತನ್ನ ಸ್ವಯಂಜ್ಞಾನವನ್ನು ಪ್ರಯೋಗಿಸಿ ನೂತನ ಆವಿಷ್ಕಾರಗಳನ್ನು ಮಾಡುವ ಮೂಲಕ ಹೊಸದನ್ನು ಸೃಷ್ಟಿಸುವ ಮೂಲಕ ಅತ್ಯಂತ ಕ್ರಿಯಾಶೀಲನಾಗಿ ಸೃಜನಶೀಲತೆಯನ್ನು ಸಾದರಪಡಿಸುವಲ್ಲಿ ಯಶಸ್ವಿಯಾಗುತ್ತಾನೆ. (Next is synthesis, which refers to the ability to put parts together to form a new whole. Learning outcomes at this level stress creative behaviors with a major emphasis on the formulation of new patterns or structures)
ಬಸವಣ್ಣನವರ ಷಟಸ್ಥಲ ಮಾದರಿ
ಬಸವಣ್ಣನವರು ಸುಮಾರು 900 ವರ್ಷಗಳಷ್ಟು ಹಿಂದೆಯೇ ಅತ್ಯಂತ ಸಮರ್ಪಕವಾಗಿ ಆರು ಹಂತಗಳ ಸಮಗ್ರ ಕಲಿಕಾ ವಿಧಾನವನ್ನು ಬಸವಕಲ್ಯಾಣದಲ್ಲಿ ಪ್ರಯೋಗಿಸಿ ಅತ್ಯಂತ ಯಶಸ್ಸನ್ನು ಕಂಡಿದ್ದರು. ಅತ್ಯಂತ ಸಾಮಾನ್ಯ ಜನರು ಅಸಾಮಾನ್ಯ ಶರಣರೆನಿಸಿ ಉತ್ಕೃಷ್ಟ ಮಟ್ಟದ ವಚನಗಳನ್ನು ಸೃಷ್ಟಿಸಿರುವುದೇ ಇದಕ್ಕೆ ಸಾಕ್ಷಿ. ಇಂದಿನ ಮಹಾ ವಿದ್ವಾಂಸರಿಗೂ ಅವರ ರಚನೆಗಳು ಅರಿಯಲು ಭಾವಿಸಲು ನಿಲುಕದಿರುವುದು ಅವರ ಪ್ರತಿಭೆಯನ್ನು ಒರೆಗೆ ಹಚ್ಚುತ್ತದೆ. ಬಸವಣ್ಣನವರ ಆರುಹಂತದ ಕಲಿಕಾ ಮಾದರಿ ಬಹಳ ವಿಶೇಷವಾಗಿದ್ದು ಸಾಧಕನನ್ನು ಅತ್ಯಂತ ಮೇರುಸ್ಥಲದಲ್ಲಿ ನಿಲಿಸುತ್ತದೆ. ಬಸವಣ್ಣನವರ ಈ ಕಲಿಕಾ ಮಾದರಿಯನ್ನು ಅರಿಯಲು ಪ್ರಯತ್ನಿಸೋಣ.
ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ- ಷಟಸ್ಥಲದ ಆರು ಹಂತಗಳು. ಈ ಆರು ಹಂತಗಳಲ್ಲಿ ಶ್ರದ್ಧೆ, ನಿಷ್ಠೆ, ಅವಧಾನ, ಅನುಭಾವ, ಆನಂದ ಮತ್ತು ಸಮರಸ ಎಂಬ ಆರು ಕಲಿಕಾ ವಿಧಾನಗಳು ಅಡಕವಾಗಿವೆ, ಅವುಗಳ ವಿವರ ಹೀಗಿದೆ-
1. ಭಕ್ತಸ್ಥಲ: ಇದು ವಿದ್ಯಾರ್ಥಿಯ ಕಲಿಕೆಯ ಆರಂಭಿಕ ಘಟ್ಟ, ವಿದ್ಯಾರ್ಥಿಯು ಅತ್ಯಂತ ಶ್ರದ್ಧೆಯುಳ್ಳವನಾಗಿರಬೇಕಾಗಿದ್ದು ಈ ಹಂತದ ಲಕ್ಷಣ. ಇಲ್ಲಿ ವಿದ್ಯಾರ್ಥಿಯ ಶ್ರದ್ಧೆ ವಹಿಸಿ ಓದುವ, ಕೇಳುವ, ನೋಡುವ ಪ್ರವೃತ್ತಿಯಿಂದ ಆತನು ಓದಿದ್ದನ್ನು ಕೇಳಿದ್ದನ್ನು ನೋಡಿದ್ದನ್ನು ನೆನೆಪಿನಲ್ಲಿಟ್ಟುಕೊಳ್ಳುತ್ತಾನೆ. ಇದು ಬ್ಲೂಮ್ ನ ಮೊದಲನೇ ಕಲಿಕಾ ಹಂತಕ್ಕೆ ಸಮಾನಾಂತರವಾಗಿದೆ.
2. ಮಹೇಶ್ವರಸ್ಥಲ: ಈ ಕಲಿಕಾಹಂತದಲ್ಲಿ ವಿದ್ಯಾರ್ಥಿಯ ಶ್ರದ್ಧೆ ಇನ್ನಷ್ಟು ಗಟ್ಟಿಯಾಗಿ ಅದು ನಿಷ್ಠೆಯಾಗಿ ಪರಿವರ್ತನೆಗೊಂಡು ಈ ಹಿಂದೆ ಕಲಿತ ವಿಚಾರಗಳನ್ನು ಹೆಚ್ಚು ಆಳವಾಗಿ ಮನನ ಮಾಡಿ ವಿಚಾರದ ಅಂತರಾರ್ಥವನ್ನು ಅರಿಯುತ್ತಾನೆ. ಬ್ಲೂಮನ ಎರಡನೇ ಕಲಿಕಾ ಹಂತಕ್ಕೆ ಇದು ಸಮಾನಾಂತರವಾಗಿದೆ.
3. ಪ್ರಸಾದಿಸ್ಥಲ: ಕಲಿಕೆಯ ಈ ಹಂತದಲ್ಲಿ ಹಿಂದಿನ ಶ್ರದ್ಧೆ ಮತ್ತು ನಿಷ್ಠೆ ಇನ್ನಷ್ಟು ಘನೀಕೃತಗೊಂಡು ಅವಧಾನವೆಂಬ ಸ್ಥಿತಿ ನಿರ್ಮಿಸಲ್ಪಡುತ್ತದೆ. ಈ ಕಲಿಕಾವಿಧಾನದಿಂದ ವಿದ್ಯಾರ್ಥಿಯು, ತನ್ನ ಸುತ್ತೆಲ್ಲಾ ಕಾಣುವ ಕೇಳುವ ವಿಚಾರಗಳನ್ನು ಸ್ವಯಂಸ್ಫೂರ್ತಿಯಿಂದ ಅಳವಡಿಕೆಯಲ್ಲಿ ತೊಡಗಿಸಿಕೊಳ್ಳುತ್ತಾನೆ. ಇದು ಬ್ಲೂಮ್ ನ ಮೂರನೇ ಕಲಿಕಾ ಹಂತಕ್ಕೆ ಸಮಾನಾಂತರವಾಗಿದೆ.
4. ಪ್ರಾಣಲಿಂಗಿಸ್ಥಲ: ವಸ್ತುಸ್ಥಿತಿಯ ಸಂಪೂರ್ಣ ಅರಿವು ಈ ಹಂತದಲ್ಲಿ ವಿದ್ಯಾರ್ಥಿಗೆ ಪ್ರಾಪ್ತವಾಗುತ್ತದೆ. ತನ್ನನ್ನು ತಾನು ಮೈಮರೆತು ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಾನೆ. ವಿವಿಧ ದೃಷ್ಟಿಕೋನಗಳಿಂದ ವಿಚಾರ ವಿಮರ್ಶೆ ಮಾಡುವಲ್ಲಿ ಸಾಫಲ್ಯತೆಯನ್ನು ಕಾಣುತ್ತಾನೆ. ಇದು ಬ್ಲೂಮ್ ನ ನಾಲ್ಕನೇ ಕಲಿಕಾ ಹಂತಕ್ಕೆ ಸಮಾನಾಂತರವಾಗಿದೆ.
5. ಶರಣಸ್ಥಲ: ಇದು ಐದನೇ ಹಂತದ ಕಲಿಕೆ. ವಿದ್ಯಾರ್ಥಿಯು ಕಲಿಕೆಯಿಂದ ಅತ್ಯಂತ ಉತ್ಕಟವಾದ ಆನಂದವನ್ನು ತನ್ನೊಳಗೇ ಅನುಭವಿಸುತ್ತಾನೆ, ಅಷ್ಟು ಗಾಢತನ್ಮಯತೆ ಆವರಿಸಿರುತ್ತದೆ. ಈ ಹಂತದಲ್ಲಿ ವಿದ್ಯಾರ್ಥಿಯು ಅನೇಕ ಹೊಸ ವಿಷಯಗಳ ಕುರಿತು ಮೌಲ್ಯಮಾಪನ ಮಾಡುವಷ್ಟು ಸಾಮರ್ಥ್ಯವನ್ನು ಗಳಿಸಿಕೊಳ್ಳುತ್ತಾನೆ. ಇದು ಬ್ಲೂಮನ ಐದನೇ ಕಲಿಕಾ ಹಂತಕ್ಕೆ ಸಮಾನಾಂತರವಾಗಿದೆ.
6. ಐಕ್ಯಸ್ಥಲ: ಆರನೇ ಕಲಿಕಾಹಂತವಾದ ಇಲ್ಲಿ ವಿದ್ಯಾರ್ಥಿಯು ಕಲಿಕೆಯಲ್ಲಿ ಸಮರಸವನ್ನು ಹೊಂದುತ್ತಾನೆ. ಅಂದರೆ ಅರಿಯಲ್ಪಡುವ ಜ್ಞಾನವೇ ತಾನೆನಿಸುವಷ್ಟು ಕಲಿಕೆಯಲ್ಲಿ ಒಂದಾಗುತ್ತಾನೆ. ಈ ಹಂತದಲ್ಲಿ ತನ್ನೆಲ್ಲಾ ಬುದ್ಧಿಮತ್ತೆಯನ್ನು ಉಪಯೋಗಿಸಿ ಸೃಜನಶೀಲತೆಯನ್ನು ಮೈಗೂಡಿಸಿಕೊಂಡು ಹೊಸ ಆವಿಷ್ಕಾರಗಳನ್ನು ಮಾಡುವಷ್ಟರ ಮಟ್ಟಿಗೆ ನೈಪುಣ್ಯತೆಯನ್ನು ಸಾಧಿಸಿದವನಾಗುತ್ತಾನೆ. ಇದು ಬ್ಲೂಮ್ ನ ಆರನೇ ಕಲಿಕಾಹಂತಕ್ಕೆ ಸಮಾನಾಂತರವಾಗಿದೆ.
ಬೆಂಜಮಿನ್ ಬ್ಲೂಮ್ ಮತ್ತು ಬಸವಣ್ಣನವರ ಕಲಿಕಾ ಸಿದ್ಧಾಂತ ಮಾದರಿಗಳಲ್ಲಿರುವ ಸೂಕ್ಷ್ಮ ವ್ಯತ್ಯಾಸವೆಂದರೆ: ಬ್ಲೂಮ್ ಮಾದರಿಯಲ್ಲಿ ಆಯಾ ಹಂತಗಳಲ್ಲಿ ಆಯಾ ಮಟ್ಟದ ಅರಿವನ್ನು ಪಡೆಯುವುದಾದರೆ ಬಸವಣ್ಣನವರ ಮಾದರಿಯಲ್ಲಿ ಪ್ರತಿಯೊಂದು ಹಂತದಲ್ಲಿಯೂ ಎಲ್ಲಾ ಹಂತಗಳ ನಿಷ್ಣಾತೆಯನ್ನು ಸೂಕ್ಷ್ಮವಾಗಿ ವಿದ್ಯಾರ್ಥಿಯು ಹೊಂದಬೇಕಾಗುತ್ತದೆ. ಉದಾಹರಣೆಗೆ ಮೊದಲನೇ ಹಂತದಲ್ಲಿ ಶ್ರದ್ಧೆಯಿಂದ ಕಲಿಯುವಾಗ ಆತ ನಿಷ್ಠೆಯನ್ನೂ, ಆ ಹಂತಕ್ಕೆ ಸೂಕ್ತವೆನಿಸುವ ವಿಮರ್ಶಾತ್ಮಕ ಶಕ್ತಿಯನ್ನೂ, ಮೌಲ್ಯಮಾಪನದ ಕಲೆಯನ್ನೂ, ನಾವೀನ್ಯತೆಯನ್ನೂ ಹಾಗೂ ಸೂಕ್ತವೆನಿಸುವ ಸೃಜನಶಿಲತೆಯನ್ನೂ ಒಟ್ಟಿಗೇ ಹೊಂದುವುದು ಬಸವಣ್ಣನವರ ಮಾದರಿಯ ವಿಶೇಷ. ಆಶ್ಚರ್ಯವೆಂದರೆ ಇಂಥಾ ಒಂದು ಪರಿಪೂರ್ಣ ವಿಧಾನವನ್ನು ಹನ್ನೆರಡನೇ ಶತಮಾನದಲ್ಲೇ ನಮಗೆ ಕೊಟ್ಟಿದ್ದರೂ ಜಗತ್ತು ಇನ್ನೂ ಅದನ್ನು ಗುರುತಿಸಿ ಅಳವಡಿಸಿಕೊಳ್ಳದಿರುವುದು ವಿಪರ್ಯಾಸವೇ ಸರಿ. ನಾವು ಭಾರತೀಯರು ಬ್ಲೂಮ್ ಸಿದ್ಧಾಂತದ ಬೆನ್ನುಹತ್ತಿದ್ದೇವೆ ಆದರೆ ಇದೇ ದೇಶದ ಬಸವ ಸಿದ್ಧಾಂತವನ್ನು ಅರಿಯಲು ವಿಫಲರಾಗಿದ್ದೇವೆ ಎನ್ನುವುದು ಖೇದಕರ ಸಂಗತಿಯಾಗಿದೆ.
ಷಟಸ್ಥಲದಲ್ಲಿ ಕಲಿಕಾ ಮಾದರಿಯ ಒಂದಂಶವನ್ನಷ್ಟೇ ಇಲ್ಲಿ ಹೋಲಿಕೆ ಮಾಡಲಾಗಿದೆ. ಇದರ ಏಣಿ ಹಿಡಿದು ಅಲ್ಲಿ ಸಾಗುವ ದಾರಿ ಉದಾತ್ತವಾಗಿದೆ. ಆದರ್ಶ ಸಮಾಜಕ್ಕೆ ಆದರ್ಶ ವ್ಯಕ್ತಿಯೇ ಅಡಿಗಲ್ಲು. ಅಂತಹ ಒಬ್ಬ ಆದರ್ಶ ವ್ಯಕ್ತಿಯನ್ನು ರೂಪಿಸುವ ಈ ದಾರಿಯಲ್ಲಿ ಅಳವಡಿಸಿದ ತಂತ್ರವು ಇಂದಿಗೂ ಹಾಗೂ ಎಂದೆಂದಿಗೂ ಅತ್ಯಗತ್ಯವಾಗಿ ಎಲ್ಲಾ ದೇಶಗಳಿಗೂ ಬೇಕಾಗುತ್ತದೆ.
Comments 11
VIJAYAKUMAR KAMMAR
Jan 7, 2022Classic article ….. A new breeze of thought process. Very much appreciable.
Extend my congratularions to the author of this article.
🙏🙏🙏🙏🙏
ಬಸವರಾಜ ಹಂಡಿ
Jan 10, 2022ಡಾ. ಪಂಚಾಕ್ಷರಿ ಹಳೇಬೀಡು ಶರಣರು ಷಟಸ್ಥಲದ 6 ಹಂತಗಳನ್ನು ಬಹಳ ಚೆನ್ನಾಗಿ ಅಧ್ಯಯನ ಮಾಡಿ, ವಿವಿಧ ಹಂತಗಳಲ್ಲಿ ಅಡಗಿರುವ ಜ್ಞಾನವನ್ನು ಚೆನ್ನಾಗಿ ಗ್ರಹಿಸಿಕೊಂಡು ಮತ್ತು ಸೂಕ್ಷ್ಮತೆಗಳನ್ನು ತಿಳಿದುಕೊಂಡು ಈ ಲೇಖನ ಬರೆದಿದ್ದಾರೆ. ಒಂದು ಆಯಾಮದಿಂದ ನೋಡಿದಾಗ ಷಟಸ್ಥಲ ಮಾದರಿಯನ್ನು ಶಿಕ್ಷಣ ತಜ್ಞ ಬ್ಲೂಮ್ ಅವರ ಕಲಿಕಾ ಮಾದರಿಯ ಜೊತೆ ಹೋಲಿಕೆ ಮಾಡಿದ್ದು ಬಹಳ ಸರಿ ಅನಿಸುತ್ತೆ. ಪ್ರತಿಯೊಂದು ಷಟಸ್ಥಲದ ಸ್ಥಲ ಕಲಿಕಾ ಮಾದರಿಯ ಹಂತಕ್ಕೆ ಹೊಂದಾಣಿಕೆ ಆಗುತ್ತದೆ.
ಇನ್ನೊಂದು ಆಯಾಮದಿಂದ ನೋಡಿದಾಗ ಷಟಸ್ಥಲ ಮಾದರಿ ತನ್ನನು ತಾನು ಅರಿಯಲು ಉಪಯೋಗಿಸುವ ಮಾದರಿ ಆಗಿದೆ. ಈ ಅಪರೂಪದ ಜ್ಞಾನ ದಾಸೋಹಕ್ಕೆ ಪಂಚಾಕ್ಷರಿ ಶರಣರಗೆ ಧನ್ಯವಾದಗಳು ಮತ್ತು ಶರಣು ಶರಣಾರ್ಥಿಗಳು.
ನಾಗೇಶ್ ತಿಪಟೂರು
Jan 10, 2022ಬಸವಣ್ಣನವರು ಶ್ರೇಷ್ಠ ಶಿಕ್ಷಣ ತಜ್ಞರು ಎನ್ನುವುದರಲ್ಲಿ ಎರಡು ಮಾತಿಲ್ಲ.
ಗಾಯತ್ರಿ ಗಿರೀಶ್, ಭದ್ರಾವತಿ
Jan 13, 2022ಷಟಸ್ಥಲಗಳಲ್ಲಿ ಕಲಿಕಾ ವಿಧಾನವನ್ನು ತೋರಿಸಕೊಟ್ಟ ವಿನೂತನ ಬರಹಕ್ಕೆ ಧನ್ಯವಾದಗಳು. ನಾನೂ ಶಾಲಾ ಶಿಕ್ಷಕಿ, ಲೇಖನ ಹೊಸ ವಿಚಾರಗಳನ್ನು ಮಾತ್ರವಲ್ಲ, ಹೊಸ ಬಗೆಯ ಆಲೋಚನಾ ವಿಧಾನವನ್ನೂ ತೋರಿಸಿಕೊಟ್ಟಿದೆ.
Uday J.K
Jan 13, 2022ಯಾವುದೇ ಕಲಿಕೆಗೂ ಈ ವಿಧಾನಗಳು ವೈಜ್ಞಾನಿಕ ಹಾದಿಯನ್ನು ತೋರಿಸಿಕೊಡುತ್ತವೆ.
Ravi H
Jan 13, 2022IT IS NOT MY FIRST TIME TO PAY A QUICK VISIT THIS WEBSITE, I AM BROWSING IT OFTEN AND OBTAIN VALUABLE INFORMATION, THANKS.
Murugendrappa S
Jan 18, 2022ಷಟಸ್ಥಲಗಳು ಶಿವಯೋಗದ ಮೆಟ್ಟಿಲುಗಳು. ಅದೊಂದು ಆಧ್ಯಾತ್ಮದ ರಾಜಮಾರ್ಗ. ಅದನ್ನೊಂದು ಶಿಕ್ಷಣ ಕಲಿಕೆಗೆ ಹೋಲಿಸಿದ್ದು ನೋಡಿ ಬಹಳ ಆಘಾತವಾಯಿತು, ಬೇಸರವಾಯಿತು.
Gurupadappa Utri
Jan 23, 2022ಲೇಖನದಲ್ಲಿ ಪ್ರಸ್ತಾಪಿಸಲಾದ ಷಟಸ್ಥಲದ ಕಲಿಕಾ ಮಾರ್ಗವನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳಬಹುದು. ಧಾರ್ಮಿಕ ಆಯಾಮಕ್ಕೆ ಮಾತ್ರ ಇಂತಹ ಸೂತ್ರವನ್ನು ಮೀಸಲಿರಿಸಿಕೊಳ್ಳುವುದು ಸರಿಯಲ್ಲ. ಈ ಶತಮಾನಕ್ಕೆ ತಕ್ಕಂತೆ ಷಟಸ್ಥಲಗಳನ್ನು ವಿದ್ಯಾರ್ಥಿಗಳಿಗೆ, ಹಾಗೂ ಆಧ್ಯಾತ್ಮ ಸಾಧಕರಿಗೆ ತಿಳಿಪಡಿಸುವ ರೀತಿ ಅರ್ಥಪೂರ್ಣವಾಗಿದೆ.
Mahadeva S
Jan 23, 2022ಅಣ್ಣಾ, ಲೇಖನ ಚೆನ್ನಾಗಿದೆ. ಅಷ್ಟಾವರಣಗಳಿಗೂ ಸರಳ ವ್ಯಾಖ್ಯಾನ ನೀಡಬಹುದೇ?
Vinay Bengaluru
Jan 26, 2022ಮನಶಾಸ್ತ್ರಜ್ಞ ಬೆಂಜಮಿನ್ ಬ್ಲೂಮ್ರ ಕ್ರಿಟಿಕಲ್ ಥಿಂಕಿಂಗ್ ಮಾಡೆಲ್ ಗೂ ಷಟಸ್ಥಲಕ್ಕೂ ನೀವು ತೋರಿಸಿದ ಸಾಮ್ಯ ನಿಜಕ್ಕು ಚಿಂತನಾರ್ಹವಾಗಿದೆ.
Akshay B.R
Feb 1, 2022ಶಿಕ್ಷಣ ವ್ಯವಸ್ಥೆಯಲ್ಲಿ ಅಂಕ ಗಳಿಕೆಯ ಸ್ಪರ್ಧೆಯಲ್ಲಿ ಇಡೀ ಕಲಿಕಾ ಹಾದಿಯೇ ದಾರಿ ತಪ್ಪಿಹೋಗಿದೆ. ವಿದ್ಯಾರ್ಥಿಯಲ್ಲಿ ಬೆಳೆಸಬೇಕಾದ ಅಮೂಲ್ಯ ಗುಣಗಳನ್ನು ಪರೀಕ್ಷೆಗಳು ಗಮನಿಸದೇ ಹೋಗುವಷ್ಟು ಯಾಂತ್ರಿಕವಾಗಿವೆ. ಷಟಸ್ಥಲ ಕಲಿಕಾ ಹಾದಿ ನಿಜಕ್ಕೂ ಉತ್ತಮ ಸಲಹೆಯೆಂದು ನನ್ನ ಅಭಿಪ್ರಾಯ.