ಪೂರ್ವಚಿಂತನೆಯಿಂದ ಕಂಡು…
ಪೂರ್ವಚಿಂತನೆಯಿಂದ ಕಂಡು… ಉತ್ತರ ಚಿಂತನೆಯಿಂದ ಖಂಡಿಸಿ…
(ಆಧುನಿಕ ಕಾಲದ ವಚನ ಪ್ರಕಟಣೆಯ ಸಂಕ್ಷಿಪ್ತ ಇತಿಹಾಸ)
ನಮಗ್ಯಾರಿಗೂ ಹೆಚ್ಚು ಗೊತ್ತಿಲ್ಲದ ಒಂದು ವಿಷಯದಿಂದ ಈ ಲೇಖನವನ್ನು ಪ್ರಾರಂಭಿಸುತ್ತೇನೆ. 12ನೇ ಶತಮಾನದ ವಚನಗಳನ್ನು ಪ್ರಪ್ರಥಮವಾಗಿ ಪ್ರಕಟಿಸಿ, ಅವುಗಳನ್ನು ತಮ್ಮ ಉದ್ದೇಶಕ್ಕಾಗಿ ಬಳಸಿಕೊಂಡವರು ಲಿಂಗಾಯತರಲ್ಲ, ಕ್ರಿಶ್ಚಿಯನ್ ಪಾದ್ರಿಗಳು! ಬಾಸೆಲ್ ಮಿಶಿನ್ ಪಾದ್ರಿಗಳು!! ಮತಾಂತರದ ಉದ್ದೇಶಕ್ಕಾಗಿ!!!(-1)
ಸಾಮಾನ್ಯವಾಗಿ 20ನೇ ಶತಮಾನದಲ್ಲಿ ನಡೆದ ವಚನ-ಅಧ್ಯಯನಕ್ಕೆ ಫ.ಗು. ಹಳಕಟ್ಟಿಯವರನ್ನು ನೆನೆಯಲಾಗುತ್ತದೆ. ಆದರೆ ಇವರ ಪೂರ್ವ ಕಾಲದಲ್ಲಿ ಲಭ್ಯವಿದ್ದ ವಚನಗಳಾಗಲಿ ಅಥವಾ ವಚನಗಳ ಸಂಕಲನಗಳಾಗಲಿ ಅನೇಕರ ಗಮನಕ್ಕೆ ಬಂದಿಲ್ಲ. ಎಮ್.ಎಮ್. ಕಲಬುರ್ಗಿಯವರ ಕೆಲವೊಂದು ವಿವರಗಳು ಇದಕ್ಕೆ ಅಪವಾದ(-2). ನಮಗೆ ಆಧುನಿಕ ಕಾಲಘಟ್ಟದ ವಚನ ಇತಿಹಾಸವನ್ನು ಅರಿಯಲು ಅವರ ಅಧ್ಯಯನ ಸಹಾಯಕವಾಗಿದೆ. ಆದರೆ ಆಧುನಿಕ ಕಾಲಘಟ್ಟದಲ್ಲಿ ಉಂಟಾದ ವಚನಗಳ ಪ್ರಕಟನೆ ಹಾಗು ಅದರ ಉದ್ದೇಶವನ್ನು ಅರಿಯಲು ನಾವು ಮತ್ತಷ್ಟು ಇತಿಹಾಸವನ್ನು ಬಗೆದು ನೋಡುವ ಅವಶ್ಯಕತೆ ಇದೆ. ವಚನಗಳ ಆಧುನಿಕ ಇತಿಹಾಸದ ಬಗ್ಗೆ ಇರುವ lacunaವನ್ನು ತುಂಬುವ ಪ್ರಯತ್ನ ಪ್ರಸ್ತುತ ಲೇಖನದಲ್ಲಿ ಕಾಣಬಹುದು.
ಆಧುನಿಕ ವಚನ ಅಧ್ಯಯನ ಇತಿಹಾಸದಲ್ಲಿ ದಾಖಲೆಗೊಂಡಿರುವ ಮೊದಲ ವಚನ ಸಂಕಲನ ಬಾಲ ಸಂಗಯ್ಯನ ಶಿಖಾರತ್ನ ಪ್ರಕಾಶ. ಆದರೆ ನನಗೆ ಲಂಡನ್ನಿನ ಬ್ರಿಟಿಷ್ ಲೈಬ್ರರಿಯಲ್ಲಿ ಸಿಕ್ಕ ವಚನಗಳು ಇದಕ್ಕೆ ಮೊದಲೇ ಪ್ರಕಟಗೊಂಡ, ಪ್ರಪ್ರಥಮ ವಚನಗಳು. ಈ ವಚನಗಳು 1874ರಲ್ಲಿ Christian Tracts ಎಂಬ ಸರಣಿ ಪುಸ್ತಕಗಳಲ್ಲಿ ಒಂದಾದ Lingaitism Examined (ಲಿಂಗಾಯತ ಮತ ವಿಚಾರ)ದಲ್ಲಿ ಕಾಣಸಿಗುತ್ತವೆ. ಇವನ್ನು ಕ್ಯಾನರೀಸ್ Mission Press (ಮಂಗಳೂರು) ರವರು ಪ್ರಕಟಿಸಿದರು.
ಅನೇಕರ ಗಮನಕ್ಕೆ ಇನ್ನೂ ಬಾರದ ಈ ಪುಸ್ತಕದಲ್ಲಿ ಬಸವಣ್ಣ, ಷಣ್ಮುಖಪ್ಪ, ಚೆನ್ನಮಲ್ಲಿಕಾರ್ಜುನ ಮತ್ತು ಅಂಬಿಗರ ಚೌಡಯ್ಯನವರ ಒಟ್ಟು ಹನ್ನೊಂದು ವಚನಗಳನ್ನು ಆಧುನಿಕ, ಪಾಶ್ಚಾತ್ಯ ಕಾವ್ಯ ಮಾದರಿಯಲ್ಲಿ ಪ್ರಕಟಿಸಲಾಗಿದೆ. ಈ ಪುಸ್ತಕದ ಉದ್ದೇಶ ಕ್ರಿಶ್ಚಿಯಾನಿಟಿ ಧರ್ಮವನ್ನು ಸ್ಥಳೀಯರಲ್ಲಿ ಪ್ರಚಾರ ಮಾಡುವದಾಗಿದ್ದು, ಪ್ರಸ್ತುತ ಪುಸ್ತಕದಲ್ಲಿ ಒಬ್ಬ ಲಿಂಗಾಯತ ವಿದ್ವಾಂಸ ಮತ್ತು ಪೌಲಪ್ಪ ಎನ್ನುವ ಕ್ರಿಶ್ಚಿಯನ್ ಪಾದ್ರಿಯ ನಡುವೆ ನಡೆಯುವ ಕಾಲ್ಪನಿಕ ಸಂಭಾಷಣೆಯ ಮೂಲಕ ಲಿಂಗಾಯತ ಮತ ಮತ್ತು ಕ್ರಿಶ್ಚಿಯಾನಿಟಿಯ ಬಗ್ಗೆ ಚರ್ಚಿಸಲಾಗಿದೆ. ಇದೇ ಸಂದರ್ಭದಲ್ಲಿ ಪೌಲಪ್ಪ ಅನೇಕ ವಚನಗಳನ್ನು ತನ್ನ ವಿಚಾರಗಳಿಗೆ ಸಂವಾದಿಯಾಗಿ ಬಳಸಿಕೊಂಡಿದ್ದಾನೆ.
ಲಿಂಗಾಯತ ಮತ ವಿಚಾರ ಮತ್ತು ಕ್ರಿಶ್ಚಿಯಾನಿಟಿ
ಲಿಂಗಾಯತ ಮತ ವಿಚಾರವನ್ನು ರಚಿಸಿದ್ದು ಚಿನ್ನಪ್ಪ ಎಂಬ ಸ್ಥಳೀಯ ಕ್ರೈಸ್ತ. ಐ.ಮಾ. ಮುತ್ತಣ್ಣನವರ ಪ್ರಕಾರ ‘ಲಿಂಗಾಯತ ಮತ ವಿಚಾರ’ ಎಂಬುದಾಗಿ 1874ರಲ್ಲಿ ಪ್ರಕಟವಾದ ಚಿಕ್ಕ ಪುಸ್ತಕದಲ್ಲಿ “ಆಗ ತಾನೆ ಮತಾಂತರಗೊಂಡ ಓರ್ವ ದೇಶೀಯನ ಮನೋದ್ವೇಗಯೇನೆಂಬುದನ್ನು ಸ್ವಾರಸ್ಯವಾಗಿ ಚಿತ್ರಿಸಿದ್ದಾರೆ”.(1992: 184) (3). ಆದರೆ ಈ ಪುಸ್ತಕದಲ್ಲಿರುವ ವಚನಗಳ ಬಗ್ಗೆ ಅವರು ಗಮನ ಸೆಳೆಯುವುದಿಲ್ಲ. ಪ್ರಾಯಶಃ ವಚನಗಳ ಬಗ್ಗೆ ಅಧ್ಯಯನ ಮಾಡುವ ಉದ್ದೇಶ ಅವರಿಗೆ ಇರಲಿಲ್ಲ ಅಂತ ಅನಿಸುತ್ತದೆ. ಈ ಪುಸ್ತಕದಲ್ಲಿರುವ ಸಂಭಾಷಣೆಕಾರರಲ್ಲಿ ಒಬ್ಬ ಲಿಂಗಾಯತ ಮತಕ್ಕೆ ಸೇರಿದವನು (ಚರಂತಪ್ಪ ಎಂಬುವವನು. ಪ್ರಾಯಶಃ ಚರಮೂರ್ತಿ ಎಂಬ ಮೂಲದಿಂದ ಬಂದಿರಬಹುದಾದ ಹೆಸರು) ಮತ್ತೊಬ್ಬ ಕ್ರೈಸ್ತ ಧರ್ಮಕ್ಕೆ ಸೇರಿದವನು (ಪೌಲಪ್ಪ ಎಂಬ ಪಾದ್ರಿ). ‘ದಕ್ಷಿಣ ಕಾಶಿ’ ಯೆನಿಸಿಕೊಂಡ ಹಂಪಿ ಕಡೆ ತೀರ್ಥ ಯಾತ್ರೆಗೆ ಹೊರಟಿದ್ದ ಚರಂತಪ್ಪ ಆಕಸ್ಮಿಕವಾಗಿ ಪೌಲಪ್ಪನನ್ನು ದಾರಿಯಲ್ಲಿ ಸಂಧಿಸುತ್ತಾನೆ. ಬಿಸಿಲಿನಲ್ಲಿ ಸುಸ್ತಾದವನಂತೆ ಕಂಡ ಚರಂತಪ್ಪನಿಗೆ ಕೆಲ ಸಮಯ ವಿಶ್ರಾಂತಿ ತೆಗೆದುಕೊಂಡು, ಪ್ರಯಾಣ ಬೆಳೆಸಬಹುದಲ್ಲ ಎಂದು ಪಾದ್ರಿ ಸೂಚಿಸುತ್ತಾನೆ. ಹಾಗಾಗಿ ಚರಂತಪ್ಪ ಪಾದ್ರಿಯ ಬಳಿ ಕೆಲ ಸಮಯ ಇರುತ್ತಾನೆ. ಈ ಸಮಯದಲ್ಲಿ ಅವರಿಬ್ಬರ ನಡುವೆ ಸಂಭಾಷಣೆ ನಡೆಯುತ್ತದೆ. ಈ ಸಂಭಾಷಣೆಯಲ್ಲಿ ಲಿಂಗಾಯತ ಮತದ ಉಗಮ, ದೈವ, ನಂಬಿಕೆ, ಮತದ ವಿಸ್ತಾರ ಮತ್ತು ಗ್ರಂಥಗಳ ಬಗ್ಗೆ ಪಾದ್ರಿ ಕೇಳುವ ಪ್ರಶ್ನೆಗಳಿಗೆ ಚರಂತಪ್ಪನು ಉತ್ತರಿಸುತ್ತಾ ಹೋಗುತ್ತಾನೆ. ಮೊದಮೊದಲು ಲಿಂಗಾಯತರ ಬಗ್ಗೆ ಹೊರಗಿನವರಿಗೆ (ಭವಿಗಳಿಗೆ) ಏನನ್ನೂ ಹೇಳುವುದಿಲ್ಲ ಎಂದು ಚರಂತಪ್ಪ ಹೇಳಿದರೂ, ನಂತರದಲ್ಲಿ ಲಿಂಗಾಯತ ಧರ್ಮದ ಬಗ್ಗೆ ವಿಸ್ತಾರವಾಗಿ ವಿವರಿಸುತ್ತಾ ಹೋಗುತ್ತಾನೆ.
ಚರಂತಪ್ಪ ವಿವರಿಸುವ ಹಾಗೆ ಲಿಂಗಾಯತ ಮತವನ್ನು ಸ್ಥಾಪಿಸಿದವನು ಬಸವಣ್ಣ. ಬಸವಣ್ಣ ಮತ್ತು ಬಿಜ್ಜಳ ಶಿವನ ಅಂಶಗಳು. ಬಸವಣ್ಣ ಭೂಮಿಯಲ್ಲಿ ಜನಿಸಿದುದರ ಉದ್ದೇಶ ಶಿವಧರ್ಮವನ್ನು ಮರುಸ್ಥಾಪಿಸಿ, ಅದಕ್ಕೆ ತೊಂದರೆ ಕೊಡುತ್ತಿದ್ದ ಜೈನ ಧರ್ಮವನ್ನು ಅಳಿಸಿ ಹಾಕುವುದಕ್ಕೆ. ಲಿಂಗಾಯತನ ಜೀವನದಲ್ಲಿ ಅಷ್ಟಾವರಣ ಮತ್ತು ಷಟ್ಸ್ಥಲಗಳು ಬಹಳ ಮುಖ್ಯವಾದ ಆಚರಣೆ-ವಿಚಾರಗಳು. ಲಿಂಗಾಯತರಿಗೆ ಬಸವ ಪುರಾಣ ಮತ್ತು ಚೆನ್ನಬಸವ ಪುರಾಣಗಳು ಬಲು ಮುಖ್ಯ ಗ್ರಂಥಗಳು. ಗುರು ಮತ್ತು ವಿರಕ್ತರ ನಡುವೆ ಇರುವ ತಾತ್ವಿಕ ಭೇದಗಳ ಬಗ್ಗೆ ಚರಂತಪ್ಪ ಕೆಲವೊಂದು ಮಾಹಿತಿಗಳನ್ನು ನೀಡುತ್ತಾನೆ. ನಂತರ ಜಂಗಮರ ಮೂಲದ ಬಗ್ಗೆ ಮಾತನಾಡುತ್ತಾನೆ. ಅದಾದ ಮೇಲೆ ಪಂಚಾಚಾರ್ಯ ಮತ್ತು ವಿರಕ್ತ ಮಠಗಳ ಬಗ್ಗೆ ಚಿತ್ರಣವನ್ನು ನೀಡುತ್ತಾನೆ.
ಚರಂತಪ್ಪನ ಸಂಭಾಷಣೆ ಮುಗಿದ ನಂತರ ಪಾದ್ರಿಯು ಮಾತನಾಡುವುದಕ್ಕೆ ಶುರು ಮಾಡುತ್ತಾನೆ. ಅವನು ಚರಂತಪ್ಪನ ಅನೇಕ ಮಾಹಿತಿಗಳನ್ನು ಅನುಮಾನದಿಂದ ಕಾಣುತ್ತಾನೆ. ತನ್ನ ಕ್ರಿಶ್ಚಿಯನ್ ವೈಚಾರಿಕ ಧೋರಣೆಯನ್ನು ಒರೆಗೆ ಹಚ್ಚುತ್ತಾನೆ. ಲಿಂಗಾಯತದ ಉಗಮದ ಬಗ್ಗೆ ಲೇವಡಿ ಮಾಡಿ, ಖಂಡಿಸುತ್ತಾನೆ. ಲಿಂಗಾಯತರಲ್ಲಿರುವ ಮೂರ್ತಿ ಪೂಜೆಯ ಆಚಾರವನ್ನು ಅವೈಚಾರಿಕ ಎಂದು ತೆಗಳುತ್ತಾನೆ. ಬಸವಣ್ಣ ಮತ್ತು ಬಿಜ್ಜಳರಿಬ್ಬರು ಶಿವನ ಅಂಶಗಳಾಗಿದ್ದರೆ, ಭೂಲೋಕದಲ್ಲಿ ಅವರಿಬ್ಬರ ನಡುವೆ ಜಗಳಗಳೇಕಾದವು ಎಂಬ ಪ್ರಶ್ನೆಯನ್ನು ಚರಂತಪ್ಪನಿಗೆ ಒಡ್ಡುತ್ತಾನೆ. ಲಿಂಗಾಯತರ ಅಷ್ಟಾವರಣ ಮತ್ತು ಪಾದೋದಕ ಆಚಾರ-ವಿಚಾರಗಳಲ್ಲಿ ಕಾಣುವ ಪೊಳ್ಳುತನವನ್ನು ಎತ್ತಿ ತೋರಿಸುತ್ತಾನೆ. ಈ ವಿಚಾರವನ್ನು ಪೌಲಪ್ಪ ಈ ರೀತಿ ಮೂದಲಿಸುತ್ತಾನೆ-
ವಿಚಾರಿಸಿ ನೋಡಿದ್ದಲ್ಲಿ ಇವುಗಳೊಳಗೆ [ಅಷ್ಟಾವರಣ, ದಶವಿಧ ಪಾದೋದಕ, ಏಕಾದಶ ಪ್ರಸಾದ, ಷೋಡಶೋಪಚಾರ, ಇತ್ಯಾದಿ] ನನಗೇನೂ ಹುರುಳು ಕಾಣುವುದಿಲ್ಲ; ಮತ್ತೀವೇನು ಹೊಸ ಬೋಧನೆಗಳಲ್ಲ. ಇವು ಪೂರ್ವದಾರಭ್ಯ ಬ್ರಾಹ್ಮಣ ಕ್ಷತ್ರಿಯ ಮುಂತಾದ ಜಾತಿಗಳಲ್ಲಿ ನಡೆದು ಬಂದ ಆರಾಧನೆಗಳೇ. . . . ಇವುಗಳಲ್ಲಿ ಲಿಂಗಾಯತ ಧರ್ಮಾಧಿಕಾರಿಗಳು ಒಂದುವರೆ ಆಚಾರಗಳನ್ನು ಬದಲಿಸಿ, ಒಂದುವರೆ ಆಚಾರಗಳನ್ನು ಹೆಚ್ಚಿಸಿದರೆಂತ ಕಾಣುತ್ತದೆ (1874:32).
ಲಿಂಗಾಯತ ಪುರಾಣಗಳಲ್ಲಿ ಕಾಣುವ ಸುಳ್ಳಿನ ವಿಷಯಗಳನ್ನು ಬಯಲು ಮಾಡಲು ಪಾದ್ರಿ ಬಸವಣ್ಣ, ಷಣ್ಮುಖ ಸ್ವಾಮಿ, ಅಂಬಿಗರ ಚೌಡಯ್ಯರ ಅನೇಕ ವಚನಗಳನ್ನು ಉಲ್ಲೇಖಿಸುತ್ತಾನೆ. ಈ ವಚನಗಳನ್ನು ಉಲ್ಲೇಖಿಸುವ ಉದ್ದೇಶವನ್ನು ಅವನು ಹೀಗೆ ಹೇಳುತ್ತಾನೆ-
ಈ ಖಂಡನೆಯ ಮಾತುಗಳನ್ನು ನಾನು ಹೇಳಿದರೆ ನಿಮಗೆ ದೂಷಣೆ ಅಂತ ಕಂಡೀತು. ಕಾರಣ ನೀವು ಮಾನ್ಯ ಮಾಡುವ ನಿಮ್ಮ ಜನರು ನಿಮ್ಮ ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಕ್ಷೇತ್ರ ಮುಂತಾದವುಗಳ ವಿಷಯದಲ್ಲಿ ಹೇಳಿರುವ ಕೆಲವು ವಚನಗಳನ್ನು ಇಲ್ಲಿ ಹೇಳಿದರೆ ತೀರಲಿಲ್ಲವೇ? ನನ್ನ ಪದರಿನ ಖಂಡನೆಯಾದರೆ ಯಾಕೆ ಬೇಕು? ಮತ್ತು ನೀವು ಮಾನ್ಯ ಮಾಡುವ ನಿಮ್ಮ ಜನರ ವಚನಗಳನ್ನಾದರೂ ಕೇಳಿ. ನಿಮ್ಮ ವ್ಯರ್ಥವಾದ ನಡತೆಯನ್ನು ಬಿಟ್ಟು, ಸತ್ಯ ಮಾರ್ಗವನ್ನು ಹುಡುಕಲಿಕ್ಕೆ ಹತ್ರಿ (1874: 36)
ಎಂದು ಉಪದೇಶಿಸುತ್ತಾನೆ. ಗುರು-ಲಿಂಗ-ಜಂಗಮ, ಪಾದೋದಕ ಮತ್ತು ಮೂರ್ತಿ ಪೂಜೆಗಳ ಬಗ್ಗೆ ಇರುವ ಟೀಕೆಯನ್ನು ಪಾದ್ರಿಯು ಈ ಕೆಳಗಿನ ವಚನಗಳ ಮೂಲಕ ಅವಲೋಕಿಸಲು ಪ್ರಯತ್ನಿಸುತ್ತಾನೆ-
ಗುರುಲಿಂಗಜಂಗಮ ವಿಷಯ:-
ಗುರುವು ನರರಂದಂಗೆ
ಲಿಂಗ ಶಿಲೆ ಎಂದಂತೆ, ಜಂಗಮ ರೂಪು ಎಂದಂಗೆ ಇಹವಿಲ್ಲ.
ಪರವಿಲ್ಲ ಪಾಷಾಂಡಿ ಪುಂಜಿಗೆ ವರನಿರಾದೆಯೇ ಗುರುವು, ಪರ
ಮೇಶ್ವರಾಧೀನಂ ಮೂಲಿಂಗ ಸ್ಥಿರ ಸರ್ವದಿನಂ ಜಂಗಮ ವಿರಹಿತ
ಸರ್ವಜನವಿರೋಧ ನಿರುತವಿಂತು ತ್ರಿಯುಗ ಗುರು ಲಿಂಗ ಜಂಗಮ
ಸುರರಾದಿ ಸಕಲರಿಗೆ ಅಸಾಧ್ಯಾ ಕಾಣಾ, ಎಲೇ ನಮ್ಮ ಕೂಡಲ
ಸಂಗಮದೇವಯ್ಯಾ! (ಪು. 36)
ಲಿಂಗಪೂಜೆಯಿಂದಾಗುವ ಕೇಡು:-
ಆದಿಯಲ್ಲಿ ಲಿಂಗಾರ್ಚನೆಯ ಮಾಡಿದ ತಾರಜ ತಂಡಜ ರೋಮಜರಿಗೆ ಪ್ರಳಯ
ವಾಯಿತು; ಆದಿಯಲ್ಲಿ ಲಿಂಗಾರ್ಚನೆಯ ಮಾಡಿದ ನವಕೋಟಿ ಬ್ರಹ್ಮರಿಗೆ
ಪ್ರಳಯವಾಯಿತು; ಆದಿಯಲ್ಲಿ ಲಿಂಗಾರ್ಚನೆಯ
ಮಾಡಿದ ದಶಕೋಟಿ ನಾರಾಯಣರಿಗೆ ಪ್ರಳಯವಾಯಿತು; ಆದಿ
ಯಲ್ಲಿ ಲಿಂಗಾರ್ಚನೆಯ ಮಾಡಿದ ಅನಂತಕೋಟಿ ರುದ್ರರಿಗೆ
ಪ್ರಳಯವಾಯಿತು ಅದು ಕಾರಣ ಲಿಂಗಾರ್ಚನೆ ಪ್ರಳಯಕ್ಕೊಳಗು
ನೋಡಾ ಅಖಂಡೇಶ್ವರಾ! (ಪು. 38)
ಪಾದೋದಕ ಪ್ರಸಾದಗಳ ವಿಷಯದಲ್ಲಿ:-
ಪಾದದಲ್ಲಿ ತೀರ್ಥ, ಜಿಹ್ವೆಯಲ್ಲಿ ಪ್ರಸಾದ ಉಂಟೆಂದು, ರೂಪಕ್ಕೆ ಮೆರವ ಅಣ್ಣ
ಗಳಿರಾ, ಕೇಳಿರಯ್ಯಾ! ಪಾದತೀರ್ಥವ ಕೊಡುವುದು ಯೋಗ್ಯ
ವೆಂದು ಕೊಡುವರಿಗೆ ಉಂಟೇ? ಕೊಡುವಂಗೆ ಹಾದಿ ತಪ್ಪಿ ಅಡ
ವಿಯ ಕೂಡಿತು, ಸ್ವಾದವಂ ಬಿಟ್ಟು ಹಿಪಿಗೆ ಹರಿಯಿತು, ಉದರ
ಪೋಷಣಕ್ಕಾಗಿ ಯುಗಕಲ್ಪನೆಯ ಮರೆತು ಜಗದಂತೆ ಅಳಿಯಿತು
ಕಾಣಾ ಎಲೇ ನಮ್ಮ ಕೂಡಲಸಂಗಮದೇವಾ! (1874: 38)
ಲಿಂಗ ಕಟ್ಟುವವನಿಗೂ ಕಟ್ಟಿಸಿಕೊಳ್ಳುವವನಿಗೂ:-
ಲಿಂಗ ಬಿತ್ತು ಬಿತ್ತು ಎಂದೆಡೆ, ಬೀಳ ಬಲ್ಲದೆ? ಭೂಮಿ ತಾಳ ಬಲ್ಲದೆ?
ಕಂಚುಗಾರಣ್ಣ ಕಟದು ಮಾಡಿದ ಲಿಂಗ, ಭೋಗಾರಣ್ಣ ಬೆಸದು
ಮಾಡಿದ ಲಿಂಗ, ಸಂತ್ಯಾಗಿಟ್ಟು ಮಾರುವುದೇ ಲಿಂಗ. ಆರು ಕಾಸನು
ಕೊಟ್ಟು ವಸ್ತ್ರವನು ತಂದು, ಮೂರು ಕಾಸನು ಕೊಟ್ಟು ಲಿಂಗವನು
ತಂದು, ಹಾದಿ ಹೋಗುವವನ ಕರದು, ಅದಕ್ಕೆ ಪಾದತೀರ್ಥಪ್ರಸಾದ
ವನರ್ಪಿಸಿ, ನೀನೆ ಗುರುವು ನಾನೇ ಶಿಷ್ಯನೆಂದು ಕಟ್ಟಿಸಿ ಕೊಳ್ಳುವವ
ನೊಬ್ಬ ಕಳ್ಳನಾಯಿ, ಕಟ್ಟುವವನೊಬ್ಬ ಮೂಳನಾಯಿ. ಈ
ಇಬ್ಬರನ್ನ ಮೂಡಲ ಮುಖವಾಗಿ ನಿಲ್ಲಿಸಿ ಉದ್ದನವೆರಡು . . . ತಕ್ಕೊಂಡು
ಶುದ್ಧವಾಗಿ ಹೊಡಿ ಎಂದಾ ನಮ್ಮ ಅಂಬಿಗರ ಚೌಡಯ್ಯ(1874: 37).
(ಪ್ರಕಟಗೊಂಡ ವಚನಗಳ ಮಾದರಿ) (4)
ಈ ವಚನಗಳಲ್ಲಿ ಕಾಣುವ ಲಿಂಗ-ಪೂಜೆಯ ಖಂಡನೆಯನ್ನು ಪಾದ್ರಿ ಗಮನಿಸಿ, ಚರಂತಪ್ಪನಿಗೆ ತಿಳಿ ಹೇಳುತ್ತಾನೆ. ಪಾದೋದಕ-ಪ್ರಸಾದಗಳ ಬಗ್ಗೆ ಹಾಸ್ಯ ಮಾಡುತ್ತಾನೆ. ಲಿಂಗ ಕಟ್ಟಿಕೊಂಡು ತಿರುಗಾಡುವವರ ಬಗ್ಗೆ ವ್ಯಂಗ್ಯ ಮಾಡುತ್ತಾನೆ. ಗುರು, ಲಿಂಗ, ಜಂಗಮರಿಗೆ ಕೊಡುವ ಪ್ರಾಮುಖ್ಯತೆಯ ಬಗ್ಗೆ ಅನುಮಾನ ವ್ಯಕ್ತ ಪಡಿಸುತ್ತಾನೆ. ಈ ಅಂಶಗಳನ್ನು ಒಂದಾದ ಮೇಲೆ ಒಂದು ಉಲ್ಲೇಖಿಸುತ್ತಾ ಪಾದ್ರಿ ಕಟ್ಟ ಕಡೆಯದಾಗಿ ಚರಂತಪ್ಪನಿಗೆ ಬುದ್ಧಿವಾದ ಹೇಳುತ್ತಾನೆ.
“ಇನ್ನೂ ಇವುಗಳಂತೆ ಕುಲಶೀಲ ಜನ್ಮಾಂತರ ಜಪ ಮುಂತಾದವುಗಳನ್ನು ಕಿತ್ತಾಕಿದ ಅನೇಕ ವಚನಗಳುಂಟು. ಅವುಗಳನ್ನೆಲ್ಲಾ ಹೇಳುವದಕ್ಕೆ ಈಗ ಹೊತ್ತು ಸಾಲದು. ಉದಾಹರಣೆಗಾಗಿ ಹೇಳಿದ ಇಷ್ಟು ವಚನಗಳು ಸಾಕೆಂತ ನೆನಸುತ್ತೇನೆ. ನೋಡಿ, ಈ ನಿಮ್ಮ ಜನರು ನಿಮಗೆ ಲಿಂಗ ಜಂಗಮ ಪಾದೋದಕ ಪ್ರಸಾದ ಮುಂತಾದವುಗಳಿಂದ ಮೋಕ್ಷದ ಲೇಸು ತಟ್ಟದೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾದರೆ ನೀವು ಅವುಗಳನ್ನು ಬಿಟ್ಟು ಸತ್ಯವನ್ನು ಹುಡುಕುವುದಕ್ಕೆ ಅಡ್ಡಿಯೇನು?” (1874: 40).
“ನಿಮ್ಮ ಜನರು” ಎಂದು ಹೇಳುತ್ತಾ ತನಗೂ ಮತ್ತು ಚರಂತಪ್ಪನಿಗೂ ಇರುವ ಅಂತರವನ್ನು ಸೂಚಿಸುವುದರ ಜೊತೆಗೆ, ಚರಂತಪ್ಪನ ಮೇಲೆ ಭಾವನಾತ್ಮಕ ಪ್ರಭಾವ ಬೀರಲು ಪ್ರಯತ್ನಿಸುತ್ತಾನೆ. ಇದಕ್ಕೆ ಮೊದಲು ಸಾಕಷ್ಟು ಉದಾಹರಣೆಗಳ ಮೂಲಕ ಕ್ರಿಸ್ತುವಿನ ಮಹತ್ವವನ್ನು ಚರಂತಪ್ಪನಿಗೆ ತಿಳಿ ಹೇಳುತ್ತಾನೆ. ಏಕದೇವೋಪಾಸನೆಯ ಮಹತ್ವವನ್ನು ಉಪದೇಶಿಸುತ್ತಾನೆ. ಪಾದ್ರಿಯ ಮಾತುಗಳನ್ನು ಮತ್ತು ಅವನ ವೈಚಾರಿಕತೆಯನ್ನು ಕೇಳಿ ಚರಂತಪ್ಪನು ಒಪ್ಪಿಕೊಳ್ಳುತ್ತಾ ನಿಮ್ಮಿಂದ ನನ್ನ ಕಣ್ಣು ತೆರೆಯಿತೆಂದು, ಇನ್ನು ಮುಂದೆ ಲಿಂಗಾಯತ ಮತದ ಬಗ್ಗೆ ನಾನು ಮತ್ತೊಮ್ಮೆ ಯೋಚಿಸುತ್ತೇನೆಂದು ಹೇಳುತ್ತಾನೆ. ಇವನ ಮಾತುಗಳೊಂದಿಗೆ ಇವರಿಬ್ಬರ ಸಂಭಾಷಣೆ ಕೂಡ ಮುಗಿಯುತ್ತದೆ.
ಮೇಲೆ ಉಲ್ಲೇಖಿಸಲ್ಪಟ್ಟ ವಚನಗಳಲ್ಲಿ ಪ್ರಾಯಶಃ ಪಾದ್ರಿಯು ಕ್ರಿಶ್ಚಿಯನ್ ಧರ್ಮ ಮತ್ತು ವಚನಕಾರರ ನಡುವೆ ಇರುವ ಸಾಮ್ಯತೆಗಳಿಂದ ಪ್ರಭಾವಗೊಂಡು, ಲಿಂಗಾಯತ ಪುರಾಣಗಳನ್ನು ಟೀಕಿಸಲು ವಚನಗಳನ್ನು ಬಳಸಿರುವುದು ಸ್ಪಷ್ಟ. ವಚನಗಳು ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಷಯಗಳನ್ನು ಒಳಗೊಂಡಿರುವ ಅಂಶ ಸಹಜವಾಗಿಯೇ ಕ್ರಿಶ್ಚಿಯನ್ ಪಾದ್ರಿಗಳ ಗಮನ ಸೆಳೆದಿದೆ. ಇದರ ಜೊತೆಗೆ ಲಿಂಗಾಯತರಿಂದ ಮಾನ್ಯಗೊಳ್ಳಲ್ಪಟ್ಟ ಪುರಾಣಗಳು ಮತ್ತು ವಚನಗಳಲ್ಲಿ ಕಾಣುವ ಅಂಶಗಳಿಗೂ ತಾತ್ವಿಕ ವ್ಯತ್ಯಾಸಗಳಿರುವುದನ್ನು ಗಮನಿಸಿ, ಅವನ್ನು ಮತಾಂತರದ ಉದ್ದೇಶಕ್ಕೆ ಬಳಸಿಕೊಂಡಿರುವುದು ವಿಶೇಷವೆನಿಸುತ್ತದೆ. ಅಂದರೆ ಲಿಂಗಾಯತರಿಗೆ ಕ್ರಿಶ್ಚಿಯನ್ ಧರ್ಮದ ಮಹತ್ವವನ್ನು ತಿಳಿಸಿ ಹೇಳಲು ಬೈಬಲ್ಲಿನ ವಿಷಯಗಳನ್ನು ಹೆಚ್ಚು ಬಳಸದೇ ಸ್ಥಳೀಯವಾದ ವಚನಗಳ ಮೂಲಕ ಉದ್ದೇಶ ಸಾಧನೆ ಮಾಡಲು ಹೊರಟಿರುವುದನ್ನು ಗಮನಿಸಬೇಕು. ಯಾಕೆ ಈ ರೀತಿಯ ವಿಧಾನವನ್ನು ಬಳಸಿದರೆಂಬ ವಿಷಯವನ್ನು ನಾವು ಮತ್ತಷ್ಟು ತಿಳಿದುಕೊಳ್ಳುವ ಅವಶ್ಯಕತೆ ಇದೆ.(5) ಇದರ ಜೊತೆಗೆ ಮತ್ತೊಂದು ಅಂಶವನ್ನು ನಾವು ಗಮನಿಸಬೇಕು. “ಇನ್ನೂ ಇವುಗಳಂತೆ ಕುಲಶೀಲ ಜನ್ಮಾಂತರ ಜಪ ಮುಂತಾದವುಗಳನ್ನು ಕಿತ್ತಾಕಿದ ಅನೇಕ ವಚನಗಳುಂಟು. ಅವುಗಳನ್ನೆಲ್ಲಾ ಹೇಳುವಕ್ಕೆ ಈಗ ಹೊತ್ತು ಸಾಲದು”ಎಂದು ಪೌಲಪ್ಪ ಹೇಳುವ ಮಾತಿನಲ್ಲಿ ಒಂದು ಅಂಶ ಸ್ಪಷ್ಟವಾಗುತ್ತದೆ. ಅದೇನೆಂದರೆ 12ನೇ ಶತಮಾನದ ಶಿವಶರಣರ ವಚನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಗ್ರಹಿಸಿರುವ ಸಂಗತಿ. ಆದರೆ ಎಲ್ಲಾ ವಚನಗಳನ್ನು ಅವರು ಪ್ರಕಟಿಸಿದರೊ, ಇಲ್ಲವೋ ನಮಗೆ ಇನ್ನು ತಿಳಿದಿಲ್ಲ.
ಆಧುನಿಕ ವಚನ-ಅಧ್ಯಯನಕ್ಕೆ ಪೀಠಿಕೆಯಾಗಿ ಲಿಂಗಾಯತ ಮತ ವಿಚಾರ:
ಈ ಪುಸ್ತಕದಲ್ಲಿ ಪ್ರಕಟಿಸಲ್ಪಟ್ಟ ಈ ವಚನಗಳ ವಿನ್ಯಾಸ, ಶೈಲಿಗಳನ್ನು ಗಮನವಿಟ್ಟು ವೀಕ್ಷಿಸಿದಾಗ ನಮಗೆ ಕೆಲವೊಂದು ವಿಷಯಗಳು ಸ್ಪಷ್ಟವಾಗುತ್ತವೆ. 1860-70ರ ಸುಮಾರಿಗೆ ವಚನಗಳ ಅಸ್ತಿತ್ವದ ಬಗ್ಗೆ ಪಾಶ್ಚಾತ್ಯರಿಗೆ ಅರಿವಿತ್ತು. ಅವುಗಳನ್ನು ಆಧುನಿಕ ಮಾದರಿಯಲ್ಲಿ ಅಧ್ಯಯನ ಮಾಡಿರುವ ಸಾಧ್ಯತೆಗಳು ದಟ್ಟವಾಗಿ ಕಾಣಿಸುತ್ತವೆ. ಏಕೆಂದರೆ ಈ ವಚನಗಳನ್ನು ಗಮನಿಸಿದಾಗ ಸಮಕಾಲೀನ ವಚನ ಸಂಕಲನಗಳ ಜೊತೆ ಅನೇಕ ಹೋಲಿಕೆ ಹೊಂದಿವೆ. ಆಧುನಿಕ, ಪಾಶ್ಚಾತ್ಯ ಚಿಹ್ನೆಗಳನ್ನು ಧಾರಾಳವಾಗಿ ಬಳಸಿರುವುದು, ಪುರಾತನ ಶೈಲಿಯ ಕನ್ನಡವನ್ನು ಸಣ್ಣ, ಸಣ್ಣ ಸಾಲುಗಳನ್ನಾಗಿ ಒಡೆದು, ಪಾಶ್ಚಾತ್ಯ ಕವನದ ಮಾದರಿಯ ಹಾಗೆ ಜೋಡಿಸಿರುವುದನ್ನು ನೋಡಿದರೆ ಪ್ರಾಯಶಃ ವಚನಗಳನ್ನು ಆಧುನಿಕ ಮಾದರಿಯಲ್ಲಿ ಅಧ್ಯಯನ ಮಾಡಿದವರಲ್ಲಿ ಕ್ರಿಶ್ಚಿಯನ್ ಪಾದ್ರಿಗಳು ಮೊದಲಿಗರು ಎಂಬ ಸತ್ಯ ತಿಳಿದು ಬರುತ್ತದೆ (ಪ್ರಸ್ತುತ ಪುಸ್ತಕದ ಪ್ರಕಾರ ಸ್ಥಳೀಯ ಕ್ರಿಶ್ಚಿಯನ್ ಪಾದ್ರಿ!). ಈ ವಚನಗಳನ್ನು ಯಾವ ಲಿಂಗಾಯತ ಗ್ರಂಥದಿಂದ/ತಾಳೆಗರಿಯಿಂದ ಆಯ್ಕೆ ಮಾಡಿದ್ದಾರೆಂದು ತಿಳಿಯದಿದ್ದರೂ, ಮತ್ತು ಈ ವಚನಗಳ ಹಸ್ತಪ್ರತಿ/ ತಾಳೆಗರಿಯ ಕತೃ ಯಾರೆಂದು ಹೇಳಲಾಗದಿದ್ದರೂ ಅವುಗಳು ಲಿಂಗಾಯತರ ಸಾಹಿತ್ಯದ ಅಂಗವೆಂದು ಪಾಶ್ಚಾತ್ಯರ ಅರಿವಿಗೆ ಬಂದಿರುವುದು ಮುಖ್ಯ ವಿಷಯ. 1874ರ ಸುಮಾರಿಗೆ ಮತ್ತೊಬ್ಬ ಪಾಶ್ಚಾತ್ಯ ಪಾದ್ರಿ ಮತ್ತು ವಿದ್ವಾಂಸರಾದ ಕಿಟೆಲ್ರು ಅಖಂಡೇಶ್ವರ ವಚನಗಳ ಅಸ್ತಿತ್ವದ ಬಗ್ಗೆ ಕೆಲವೊಂದು ಸೂಚ್ಯವಾದ ಮಾತುಗಳನ್ನು ಆಡಿದ್ದಾರೆ.(6) ಆದರೆ ಅವರು ಈ ಗ್ರಂಥದಲ್ಲಿರುವ ಹಾಗೆ ವಚನಗಳನ್ನು ಕಲೆ ಹಾಕಿರುವ ಮಾಹಿತಿಗಳು ನನ್ನ ಗಮನಕ್ಕೆ ಬಂದಿಲ್ಲ.
ವಚನಗಳನ್ನೇ ಬಳಸಿಕೊಂಡು ಚರಂತಪ್ಪನನ್ನು ಓಲೈಸಿಕೊಳ್ಳುವ ಅವಶ್ಯಕತೆ ಏನಿತ್ತು? ವಚನಗಳನ್ನು ಬಹಿರಂಗವಾಗಿ ಮತ್ತು ಸಾರ್ವಜನಿಕವಾಗಿ ಬಳಸಿಕೊಂಡು ಲಿಂಗಾಯತರನ್ನು ಓಲೈಸಿಕೊಂಡಿರುವ ಉದಾಹರಣೆಗಳು ಇವೆಯೇ? ಪಾಶ್ಚಾತ್ಯ ವಿಚಾರಧಾರೆಗಳಾದ ವೈಚಾರಿಕತೆ, ವೈಜ್ಞಾನಿಕತೆ, ಕ್ರಿಶ್ಚಿಯನ್ ಜಾತ್ಯಾತೀತ ನೈತಿಕತೆ ಮತ್ತು ಆಧುನಿಕತೆ ಸ್ಥಳೀಯರನ್ನು ಮನವೊಲಿಸಲು ಸಾಧ್ಯವಾಗಲಿಲ್ಲವೇ? ಅಥವಾ ಈ ವಿಚಾರಧಾರೆಗಳ ಜೊತೆಗೆ ಸ್ಥಳೀಯ ಸಾಹಿತ್ಯ-ಸಂಸ್ಕೃತಿಗಳನ್ನು ಬೆರೆಸಿ ಕ್ರಿಶ್ಚಿಯನ್ ಧರ್ಮದ ಮಹತ್ವವನ್ನು ತಿಳಿಸುವ ಸಾಹಸವೇ? ಪಾಶ್ಚಾತ್ಯ-ಸ್ಥಳೀಯ ಸಾಹಿತ್ಯ-ಸಂಸ್ಕೃತಿಗಳನ್ನು ಒಗ್ಗೂಡಿಸಿ ಮತಾಂತರದ ಉದ್ದೇಶವನ್ನು ಈಡೇರಿಸುವ ಪ್ರಯತ್ನಗಳು ಮೊದಲಿಂದಲೂ ಇತ್ತೇ ಅಥವಾ ಕೆಲವೊಂದು ಐತಿಹಾಸಿಕ ಕಾರಣಗಳಿಂದ ಕ್ರಿಶ್ಚಿಯನ್ ಧರ್ಮದ ಪ್ರಚಾರದ ಮಾದರಿಯಲ್ಲಿ ಬದಲಾವಣೆಗಳಾದವೇ? ಈ ಬದಲಾವಣೆಗಳಲ್ಲಿ ಕ್ರಿಶ್ಚಿಯನ್ ಪಾದ್ರಿಗಳು (ಪಾಶ್ಚಾತ್ಯ ಪಾದ್ರಿಗಳು ಮತ್ತು ಸ್ಥಳೀಯ ಕ್ರಿಶ್ಚಿಯನ್ ಮತಾಂತರಿಗಳು) ಸ್ಥಳೀಯ ಸಾಹಿತ್ಯ-ಸಂಸ್ಕೃತಿಗಳ ಮೇಲೆ ಯಾವ ರೀತಿಯ ಪ್ರಭಾವಗಳನ್ನು ಬೀರಿದರು? ಮೇಲಿನ ವಚನಗಳನ್ನು ಗಮನಿಸಿದರೆ ಅವುಗಳನ್ನು ವೈಚಾರಿಕತೆಗೆ ಸಂವಾದಿಯಾಗಿ ಬಿಂಬಿಸಲಾಗಿದೆ. ಅಂದರೆ ಮೂಢನಂಬಿಕೆ, ಪವಾಡಗಳು ಮತ್ತು ಗೊಡ್ಡು ಸಂಪ್ರದಾಯಗಳನ್ನು ಟೀಕಿಸುವ ಬಂಡುಕೋರರಾಗಿ ಈ ವಚನಗಳು ಪಾದ್ರಿಗೆ ಗೋಚರಿಸುತ್ತವೆ. ಕ್ರಿಶ್ಚಿಯನ್ ಧರ್ಮದ ವೈಚಾರಿಕತೆಯ ಹಾಗೆ ವಚನಗಳಲ್ಲಿಯೂ ಮೂರ್ತಿ ಭಂಜಕ ಮತ್ತು ವೈಚಾರಿಕ ಅಂಶಗಳಿವೆ ಎಂದು ಮೊದಲ ಬಾರಿಗೆ ಪರಿಚಯಿಸುವ ಹಾಗೆ ಈ ಪುಸ್ತಕವು ನಮಗೆ ಗೋಚರಿಸುತ್ತದೆ. ಬಸವಣ್ಣನ ಅವತಾರ, ಕೈಲಾಸದ ಕಲ್ಪನೆ, ಇತ್ಯಾದಿಗಳನ್ನು ಲೇವಡಿ ಮಾಡುತ್ತಾ ಇವುಗಳ ಬಗ್ಗೆ “ನಿಮ್ಮ ಪುರಾಣಗಳೊಳಗೆ ಹೇಳಿರುವ ಕಥೆಗಳು ಸಹ ಸುಳ್ಳು ಕಥೆಗಳೇ” (ಪು.34) ಎಂದು ಮೂದಲಿಸುವ ಪಾದ್ರಿಯು ಚರಂತಪ್ಪನಿಗೆ ವೈಚಾರಿಕವಾಗಿ ಯೋಚಿಸುವ ಬುದ್ಧಿವಾದ ಹೇಳುತ್ತಾನೆ. ಈಗಾಗಲೇ ಲಿಂಗಾಯತ ಪುರಾಣಗಳನ್ನು ಅಧ್ಯಯನ ಮಾಡಿ, ಅವುಗಳಲ್ಲಿ ಕಾಣುವ ಪೊಳ್ಳುತನವನ್ನು ಬಯಲು ಮಾಡುವ ಪ್ರಯತ್ನವನ್ನು ವುರ್ಥರಂತಹ ಪಾದ್ರಿಗಳು ನಡೆಸಿದ್ದರು. ಅಂದರೆ ಮೇಲೆ ಉಲ್ಲೇಖಿಸಲ್ಪಟ್ಟ ಪಾದ್ರಿಗೆ ಮಾದರಿಯಾಗಿ ವುರ್ಥನಂತವರು ಇದ್ದರು.(7) ಆದರೆ ಲಿಂಗಾಯತ ಸಾಹಿತ್ಯವನ್ನು ಟೀಕಿಸಲು ಆಗ ಕ್ರಿಶ್ಚಿಯನ್/ಪಾಶ್ಚಾತ್ಯ ವಿಚಾರಧಾರೆಗಳನ್ನು ಮಾತ್ರ ಬಳಸಲಾಗಿತ್ತು. ಅಲ್ಲಿ ವಚನಗಳ ಉಲ್ಲೇಖ ಎಲ್ಲೂ ಕಾಣಿಸುವುದಿಲ್ಲ. ಪ್ರಾಯಶಃ ವಚನಗಳ ಅಸ್ತಿತ್ವ ಅವರ ಗಮನಕ್ಕೆ ಬಂದಿದ್ದಿಲ್ಲವೋ ಏನೋ? ಅಥವಾ ನಮ್ಮ ಗಮನಕ್ಕೆ ಇನ್ನೂ ಬಂದಿಲ್ಲವೋ ಏನೋ? ಇದರ ಬಗ್ಗೆ ನಾವು ಮತ್ತಷ್ಟು ಸಂಶೋಧನೆ ಮಾಡಬೇಕಾಗಿದೆ.(8)
ಈ ಪಾದ್ರಿಯ ವಚನಗಳ ನಂತರ ಬಾಸೆಲ್ ಮಿಷಿನರಿಯವರು ವಚನಗಳನ್ನು ಪ್ರತ್ಯೇಕವಾಗಿ ಮತ್ತು ಇಡಿಯಾಗಿ ಪ್ರಕಟಿಸಿದ ಉದಾಹರಣೆಗಳು ಇಲ್ಲ.(9) ವಚನಗಳನ್ನು ಅವರು ಮತ್ತೆ ಯಾಕೆ ಪ್ರಕಟಿಸಲಿಲ್ಲ ಎಂಬ ಪ್ರಶ್ನೆ ನಮ್ಮನ್ನು ಬಲವಾಗಿ ಕಾಡುತ್ತದೆ. ಆದಾಗ್ಯು ನಂತರದ ದಿನಗಳಲ್ಲಿ (19ನೇ ಶತಮಾನದ ಕಡೆಯ ದಶಕಗಳಲ್ಲಿ) ಸಾಕಷ್ಟು ವಚನ-ಪ್ರಕಟಣೆಗಳು ಆದವು. ಆದರೆ ಅವುಗಳನ್ನು ಪ್ರಕಟಿಸಿದವರು ಸ್ಥಳೀಯ ವ್ಯಾಪಾರಿ ಮೂಲದವರಾಗಿದ್ದರು. ಬಾಲ ಸಂಗಯ್ಯನ ಶಿಖಾರತ್ನ ಪ್ರಕಾಶ (1882)ದಲ್ಲಿನ ವಚನಗಳು ಇವರ ಮೊದಲ ಪ್ರಕಟನೆಗಳು. ನಂತರ ತೋಂಟದ ಸಿದ್ಧಲಿಂಗೇಶ್ಜರ, ಅಖಂಡೇಶ್ವರ, ಮೌನೇಶ್ವರ (ಎಲ್ಲವೂ 1887), ಬಸವಣ್ಣ (1887 ಮತ್ತು 1889), ಅಂಬಿಗರ ಚೌಡಯ್ಯ (ಎರಡನೆ ಸಂಚಿಕೆ 1905), ಅಂಬಿಗರ ಚೌಡಯ್ಯ ವಚನ ಶಾಸ್ತ್ರವು (1914) ಮತ್ತು ಚೆನ್ನಮಲ್ಲಿಕಾರ್ಜುನನವರ ವಚನಗಳು (1914) ಬೆಳಕಿಗೆ ಬಂದವು. ಈ ಸಂಕಲನಗಳ ವಿಶೇಷವೇನೆಂದರೆ ವಚನಗಳನ್ನು ‘ಹಿಂದು ಧರ್ಮ’ ದ ಸಾರವೆಂಬಂತೆ ಬಿಂಬಿಸಲಾಗಿದೆ. ಉದಾಹರಣೆಗೆ, ಬಸವಣ್ಣನ ವಚನಗಳು (1889) ಎಂಬ ಕೃತಿಯ ಮುಖಪುಟದಲ್ಲಿ ಹಿಂದು ಧರ್ಮ ಮತ್ತು ಭಕ್ತಿಯ ಬಗ್ಗೆ ಹೆಚ್ಚಿನ ಮಹತ್ವ ಕೊಡಲಾಗಿದೆ. ಇಲ್ಲಿನ ವಚನಗಳು ನಿಗಮ, ಆಗಮ, ಉಪನಿಷದ್, ಸ್ಮೃತಿಗಳು, ಶಿವಪುರಾಣ, ಶಾಸ್ತ್ರ ಹಾಗು ವೀರಮಾಹೇಶ್ವರ ಶಾಸ್ತ್ರದ ರಹಸ್ಯಗಳ ಸಾರವನ್ನು ಹೊಂದಿದೆ ಎಂದು ವಿವರಿಸಲಾಗಿದೆ. ಷಟಸ್ಥಲದ ತತ್ವದ ಬಗ್ಗೆ ಇರುವ ನಂಬಿಕೆಯನ್ನು ವರ್ಣಿಸುತ್ತಾ, ಎಲ್ಲಾ ವಚನಗಳನ್ನು ಅದರ ತತ್ವಾನುಸಾರ ವಿಂಗಡಿಸಲಾಗಿದೆ. ಎಲ್ಲಿಯೂ ವಚನಗಳನ್ನು ಪಾಶ್ಚಾತ್ಯರ ಮಾದರಿಯಲ್ಲಿ ಅಥವಾ ಮೇಲೆ ಚರ್ಚಿಸಲ್ಪಟ್ಟ ಸ್ಥಳೀಯ ಪಾದ್ರಿಯ ರೀತಿಯಲ್ಲಿ ಅರ್ಥಮಾಡಿಕೊಂಡಿರುವ ಸಾಕ್ಷಿಗಳು ಸಿಗುವುದಿಲ್ಲ. ವಚನಗಳನ್ನು ಆಧುನಿಕ ಮಾದರಿಯಲ್ಲಿ ಪ್ರಕಟಿಸಿದ್ದರೂ, ಅವು ವಚನಗಳನ್ನು ವಸಾಹತು-ಪೂರ್ವ ಸಾಹಿತ್ಯ ಪ್ರಕಾರದಲ್ಲಿಯೇ ಒಳಗೊಂಡಿವೆ. ಇಲ್ಲಿ ವೈಜ್ಞಾನಿಕವಾಗಿ ವಚನಗಳನ್ನು ವಿಂಗಡಿಸಿ, ಕ್ರಮಬದ್ಧವಾಗಿ ಜೋಡಿಸಿ, ಆಧುನಿಕ ವ್ಯಾಖ್ಯಾನಗಳನ್ನು ನೀಡಿರುವ (ಪ್ರಸ್ತುತ ಲಭ್ಯವಿರುವ ವಚನಗಳ ಮಾದರಿಯಲ್ಲಿ) ಶ್ರಮ ಕಾಣುವುದಿಲ್ಲ. ಅಂಬಿಗರ ಚೌಡಯ್ಯ ವಚನ ಶಾಸ್ತ್ರದಲ್ಲಿ (1914) ಅವನ ವಚನಗಳ ಜೊತೆಗೆ ಇತರ ವಚನಕಾರರ ವಚನಗಳನ್ನು ಸೇರಿಸಿ ಸಂಕಲನದ ಕಲಸು-ಮೇಲೋಗರವನ್ನು ಮಾಡಲಾಗಿದೆ. ಈ ವಚನ ಗ್ರಂಥಗಳನ್ನು ಮಾರುತ್ತಿದ್ದ ಬಳ್ಳಾರಿಯ ಕರ್ನಾಟಕ ಬುಕ್ ಡಿಪೊದವರು ಇನ್ನಿತರ ವಚನ ಗ್ರಂಥಗಳನ್ನು ಮಾರಾಟಕ್ಕೆ ಇಟ್ಟಿದ್ದ ಅಂಶ ಬೆಳಕಿಗೆ ಬಂದಿದೆ.(10) ಈ ವಚನ ಗ್ರಂಥಗಳನ್ನು ಒಮ್ಮೆ ಗಮನಿಸಿದರೆ ಅವುಗಳ್ಯಾವುವು ಮೇಲೆ ಉಲ್ಲೇಖಿಸಲ್ಪಟ್ಟ ವಚನಗಳ ಹಾಗೆ ಆಗಲಿ ಅಥವಾ ಮುಂದೆ ಬರುವ ಹಳಕಟ್ಟಿಯವರ ಸಂಕಲನಗಳ ಹಾಗೆ ಕಾಣುವುದಿಲ್ಲ. ಜೊತೆಗೆ ಪೂರ್ವದ ಪಾಶ್ಚಾತ್ಯರ ‘ಜಾತ್ಯಾತೀತ’ ಚೌಕಟ್ಟು ಕೂಡ ನಮ್ಮ ಗಮನಕ್ಕೆ ಬರುವುದಿಲ್ಲ. ಈ ಸಂಕಲನಗಳನ್ನು ಕೈಗೊಂಡಾಗ ‘ಜಾತ್ಯಾತೀತ’ ಚೌಕಟ್ಟು ಅಥವಾ ರಾಷ್ಟ್ರೀಯತೆಯ ವಿಚಾರಧಾರೆ ಇನ್ನೂ ಲಿಂಗಾಯತ ವಿದ್ವಾಂಸರನ್ನು ಆವರಿಸಿರಲಿಲ್ಲ. ಅವರಿಗೆ ವಚನಗಳು ಲಿಂಗಾಯತ ಮತದವರ ಸಾಹಿತ್ಯ/ಸಂಸ್ಕೃತಿಯ ಪರಂಪರೆಯಾಗಿ ಮಾತ್ರ ಗೋಚರಿಸಿತು. ಮತ್ತು ಅಂದಿನ ಲಿಂಗಾಯತ ಸಾಹಿತ್ಯದ ಅನೇಕ ಪ್ರಕಟನೆಗಳಲ್ಲಿ ವಚನಗಳು ಒಂದು ಎಂಬಂತೆ ಪ್ರಸರಿಸಲಾಯಿತು. ಆಧುನಿಕ ಅರ್ಥವುಳ್ಳ ಆಧ್ಯಾತ್ಮಿಕತೆಯ ಬಗ್ಗೆಯೂ ಇಲ್ಲಿ ಉಲ್ಲೇಖವಿಲ್ಲ. ಪಾರಮಾರ್ಥಿಕ ಎಂಬ ಅಂಶದ ಬಗ್ಗೆ ಇಲ್ಲಿ ಹೆಚ್ಚು ಕಾಳಜಿ ಇದೆ. ಫ.ಗು. ಹಳಕಟ್ಟಿಯವರ ರಂಗಪ್ರವೇಶದವರೆಗೂ ಈ ಚಿತ್ರಣವಿತ್ತು. ಅವರ ಪ್ರವೇಶದಿಂದ ಆದ ಬದಲಾವಣೆಗಳು (ವಚನ ಸಾಹಿತ್ಯವನ್ನು ಅರ್ಥೈಸುವ ರೀತಿ) ನಿಮಗೆಲ್ಲರಿಗು ಗೊತ್ತಿರುವ ವಿಷಯವೇ!
—————————————————————-
1.ಪ್ರಸ್ತುತ ಲೇಖನ ಈಗಾಗಲೇ ಪ್ರಕಟವಾಗಿರುವ ಲೇಖನದ ಸಂಕುಚಿತ ಮತ್ತು ಪರಿಶ್ಕøತ ರೂಪ. ಮೂಲ ಲೇಖನವನ್ನು ತುಮಕೂರು ವಿಶ್ಡವಿದ್ಯಾಲಯದ ಲೋಕಜ್ಞಾನ, ಸಂ. 2, ಸಂಚಿಕೆ 1, 2014 (ಪು. 40-50)ರಲ್ಲಿ ನೋಡಬಹುದು.
2.ಮತ್ತಷ್ಟು ವಿವರಗಳಿಗಾಗಿ ನೋಡಿ ಎಮ್. ಎಮ್. ಕಲಬುರ್ಗಿಯವರ “ವಚನ ಸಾಹಿತ್ಯ ಪ್ರಕಟನೆಯ ಇತಿಹಾಸ” (1990).
3.“10ನೇ ಅಧ್ಯಾಯ”, 19ನೇ ಶತಮಾನದಲ್ಲಿ ಪಾಶ್ಚಾತ್ಯ ವಿದ್ವಾಂಸರ ಕನ್ನಡ ಸೇವೆ, ಭಾಗ-2, 1992.
4.ಈ ವಚನಗಳನ್ನು ಲಿಂಗಾಯತ ಮತ ವಿಚಾರ ಪುಸ್ತಕದಲ್ಲಿ ಪ್ರಕಟವಾಗಿರುವಂತೆ ಇಲ್ಲಿ ಕೊಡಲಾಗಿದೆ.
5.ಮಿಶಿನರಿಗಳ ರಿಪೋರ್ಟಗಳನ್ನು (ಮತಾಂತರಕ್ಕೆ ಸಂಬಂದಿಸಿದ್ದು) ನಾವು ಪರಿಶೀಲಿಸಿದರೆ ಅವರಿಗೆ ಎದುರಾದ ಸವಾಲುಗಳು, ಕಷ್ಟ-ನಷ್ಟಗಳ ಅರಿವು ನಮಗೆ ತಿಳಿಯುತ್ತದೆ. ಸ್ಥಳೀಯ ಅನುಭವಗಳಿಂದ ಅನೇಕ ವಿಷಯಗಳನ್ನು ಕಲಿತ ಕ್ರಿಶ್ಚಿಯನ್ ವಿಶಿನರಿಗಳು ಅನೇಕ ಬಾರಿ ಸ್ಥಳೀಯ ಸಾಹಿತ್ಯ-ಸಂಸ್ಕ್ರತಿ ಮತ್ತು ಆಚಾರಗಳ ಮೂಲಕ ಕ್ರಿಶ್ಚಿಯಾನಿಟಿಯ ಬಗ್ಗೆ ಪ್ರಚಾರ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ. ಇಷ್ಟೇ ಅಲ್ಲ, ಮುಂದೆ ಚರ್ಚಿಸುವ ಹಾಗೆ ಸ್ಠಳೀಯರ ಸಹಾಯದಿಂದ ಮತ ಪ್ರಚಾರ ಮಾಡಿರುವ ಉದಾಹರಣೆಗಳೂ ಸಹ ಇವೆ. ಕ್ರಿಶ್ಚಿಯಾನಿಟಿ ಪ್ರಚಾರದಲ್ಲಿ ಸ್ಥಳೀಯರ ಪಾತ್ರದ ಬಗ್ಗೆ ಅಧ್ಯಯನ ಮಾಡುವ ಅವಶ್ಯಕತೆ ಇದೆ.
6.ಮತ್ತಷ್ಟು ಮಾಹಿತಿಗಾಗಿ “Old Canarese Literature” in The Indian Evangelical Review, ಸಂಪುಟ 1, ಪು. 73.
7.ಇದರ ಬಗ್ಗೆ ನನ್ನ ಕನ್ನಡ ಲೇಖನ “ಪೌರಾತ್ಯವಾದದ ಮರು-ಚಿಂತನೆ: ಮಿಷಿನರಿಗಳು, ಆಡಳಿತಗಾರರು ಮತ್ತು ಲಿಂಗಾಯತ ಸಾಹಿತ್ಯ” (ಹಿರಿಯರ ಹಿರಿತನ ಹಿಂದೇನಾಯಿತು, ಕನ್ನಡ ವಿಶ್ವವಿದ್ಯಾಲಯ, 2010)ನ್ನು ನೋಡಿ. ಇದಕ್ಕೆ ತದ್ವಿರುದ್ಧವಾಗಿ ಸಿ.ಪಿ.ಬ್ರೌನ್ನಂತವರು ಲಿಂಗಾಯತ ಪುರಾಣಗಳ ಆಧಾರದ ಮೇಲೆ (ವಿಶೇಷವಾಗಿ ಪಾಲ್ಕುರಿಕೆ ಸೋಮನಾಥನ ಬಸವ ಪುರಾಣ) ಲಿಂಗಾಯತ ಮತವನ್ನು ಹಿಂದು ಧರ್ಮದ “ಪ್ರೊಟೆಸ್ಟಂಟ್’ ಮತವೆಂದು ಬಣ್ಣಿಸಿರುವ ಉದಾಹರಣೆಯೂ ಇದೆ. ಬ್ರೌನ್ ಆಂಧ್ರಪ್ರದೇಶದಲ್ಲಿ ತನ್ನ ಅಧ್ಯಯನವನ್ನು ಕೈಗೊಂಡಿದ್ದರಿಂದ ವಚನಗಳ ಬಗ್ಗೆ ಮಾಹಿತಿ ಆತನಿಗೆ ಸಿಕ್ಕಿದ್ದಿಲ್ಲವೆನ್ನಬಹುದು.
8.ಪ್ರಾಯಶಃ ಬಾಸೆಲ್ ಮಿಶಿನರಿಗಳು ವಚನ ಸಾಹಿತ್ಯದ ಬಗ್ಗೆ ಇದೇ ಕಾಲಘಟ್ಟದಲ್ಲಿ ಇಂಗ್ಲಿಷೇತರ ಭಾಷೆಗಳಲ್ಲಿ (ಪ್ರಮುಖವಾಗಿ ಜರ್ಮನ್) ಅಧ್ಯಯನ ಕೈಗೊಂಡಿರುವ ಸಾಧ್ಯತೆಗಳಿವೆ. ಈ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಮತ್ತಷ್ಟು ಸಂಶೋಧನೆ ಮಾಡುವ ಜರೂರತ್ತು ಇದೆ.
9.ಆದರೆ ಮಂಗಳೂರಿನ ಬಾಸೆಲ್ ಮಿಷಿನರಿಯವರ ಕರ್ನಾಟಕ ಥಿಯಾಲಾಜಿಕಲ್ ಗ್ರಂಥಾಲಯದಲ್ಲಿ ಸಿಕ್ಕ ಮಾಹಿತಿಗಳ ಪ್ರಕಾರ ಪ್ರಸ್ತುತ ಲೇಖನವು ಎಂಟು ಬಾರಿ ಪ್ರಕಟಗೊಂಡಿದೆ. ಎಂಟನೇ ಎಡಿಷನ್ನ್ನು 1926ರಲ್ಲಿ Canarese Mission Press and Book Depot, ಮಂಗಳೂರು,ರವರು ಪ್ರಕಟಿಸಿದ್ದಾರೆ. ಎಂಟು ಬಾರಿ ಪ್ರಕಟಗೊಳ್ಳುವಷ್ಟು ಜನಪ್ರಿಯತೆಯನ್ನು ಈ ಪುಸ್ತಕವು ಪಡೆದಿತ್ತೆ? ಇದರ ಬಗ್ಗೆ ಹಳಕಟ್ಟಿಯಂತವರಿಗೆ ತಿಳಿದಿತ್ತೆ? ಇದರ ಬಗ್ಗೆ ನಾವು ಮತ್ತಷ್ಟು ಬೆಳಕು ಚೆಲ್ಲಬೇಕಾಗಿದೆ.
10.ಇವುಗಳಲ್ಲಿ ಪ್ರಮುಖವಾಗಿ ಕಾಣುವುದು ನಿಜಗುಣ ವಚನ, ಟೀಕು ನಿಜಗುಣ ವಚನ, ಸರ್ವಜ್ಞ ಮೂರ್ತಿ ವಚನ, ಟೀಕು ಸರ್ವಜ್ಞ ಮೂರ್ತಿ ವಚನ, ಮೌನೇಶ್ವರ ವಚನ, ಷಡಾಕ್ಷರಯ್ಯ ವಚನ, ಇತ್ಯಾದಿಗಳು.
Comments 14
Ramalinga Jawali
Nov 10, 2020ಲಂಡನ್ನಿನಲ್ಲಿದ್ದ ಅತ್ಯಂತ ಹಳೆಯ ವಚನಗಳ ಪುಸ್ತಕವನ್ನು ಅದರ ಹಿನ್ನೆಲೆ ಸಹಿತ ವಿವರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು
Archana Kani
Nov 10, 2020ನಮ್ಮ ಆಚರಣೆಗಳಿಗೂ, ನಾವಿರುವುದಕ್ಕೂ ಎಷ್ಟು ಅಂತರವಿದೆ ಎನ್ನುವುದನ್ನು ಕ್ರಿಸ್ತ ಪಾದ್ರಿಗಳು ವಚನಗಳ ಆಧಾರ ಸಹಿತ ನಮಗೇ ತಿರುಮಂತ್ರ ಹಾಕಿದ್ದನ್ನು ಓದಿ ಆಶ್ಚರ್ಯವಾಯ್ತು.
Jyothi Hulyal
Nov 11, 2020ಇತಿಹಾಸವನ್ನು ಹೆಕ್ಕಿ ಹೊಸ ಮಾಹಿತಿಯನ್ನು ಒದಗಿಸಿಕೊಟ್ಟ ವಿಜಯಕುಮಾರ್ ಸರಗೆ ಶರಣು.
siddaramappa Lamani
Nov 11, 2020ಬಸವಣ್ಣನ ವಚನಗಳು (1889) ಎಂಬ ಕೃತಿಯ ಮುಖಪುಟದಲ್ಲಿ ಹಿಂದು ಧರ್ಮ ಮತ್ತು ಭಕ್ತಿಯ ಬಗ್ಗೆ ಹೆಚ್ಚಿನ ಮಹತ್ವ ಕೊಡಲಾಗಿದೆ. ಇಲ್ಲಿನ ವಚನಗಳು ನಿಗಮ, ಆಗಮ, ಉಪನಿಷದ್, ಸ್ಮೃತಿಗಳು, ಶಿವಪುರಾಣ, ಶಾಸ್ತ್ರ ಹಾಗು ವೀರಮಾಹೇಶ್ವರ ಶಾಸ್ತ್ರದ ರಹಸ್ಯಗಳ ಸಾರವನ್ನು ಹೊಂದಿದೆ ಎಂದು ವಿವರಿಸಲಾಗಿದೆ….- ಇದು ನನ್ನ ಪ್ರಕಾರ ಅತ್ಯಂತ ಮುಖ್ಯವಾದ ಮಾಹಿತಿ, ವಚನಗಳ ಕ್ರಾಂತಿಕಾರಿ ಹೆಜ್ಜೆಗಳನ್ನು ಅರಿಯುವಲ್ಲಿ ಮೊದಲಿನಿಂದಲೇ ದಾರಿ ತಪ್ಪಲಾಗಿದೆ. ಹಿಂದೂ ಧರ್ಮದೊಂದಿಗೆ ತಳುಕು ಹಾಕಿ ನೋಡುವ ಅಭ್ಯಾಸ ಈಗಲೂ ಮುಂದುವರೆದುಕೊಂಡು ಬಂದಿರುವುದು ಲಿಂಗಾಯತ ಧರ್ಮದ ದುರಂತವೆನ್ನಬಹುದು.
Basavaprabhu Shimoga
Nov 12, 2020ಆಧುನಿಕ ಕಾಲದ ವಚನ ಪ್ರಕಟಣೆಯ ಸಂಕ್ಷಿಪ್ತ ಇತಿಹಾಸ ತುಂಬಾ ಕುತೂಹಲಕಾರಿಯಾಗಿದೆ. ತಮ್ಮ ಇತಿಹಾಸದ ಲವಲೇಶವೂ ಗೊತ್ತಿಲ್ಲದ ಲಿಂಗಾಯತರ ಆಗಿನ ಪರಿಸ್ಥಿತಿ ಶೋಚನೀಯವಾಗಿದ್ದಂತೆ ತೋರುತ್ತದೆ.
Akshay B.R
Nov 16, 2020ವಚನಗಳ ಪ್ರಕಟಣೆಯ ಕತೆ ರೋಚಕವಾಗಿದೆ. ಕೇವಲ 15 ವಚನಗಳು ಎಷ್ಟು ಜನರ ತಲೆ ಕೆಡಿಸಿದ್ದವು! ವಚನಗಳ ಪ್ರಗತಿಪರ ದನಿ ಎಂಥವರನ್ನೂ ಚಕಿತರನ್ನಾಗಿಸುತ್ತದೆ ಎನ್ನುವುದಕ್ಕೆ ಈ ಲೇಖನವೇ ಸಾಕ್ಷಿ.
Veerabhadrappa, Bangalore
Nov 18, 20201874ರಲ್ಲಿ Christian Tracts ಎಂಬ ಸರಣಿ ಪುಸ್ತಕಗಳಲ್ಲಿ ಒಂದಾದ Lingaitism Examined (ಲಿಂಗಾಯತ ಮತ ವಿಚಾರ) ಬರಹದ ಮಾಹಿತಿ ಓದಿ ನಮಗೆ ಬಹಳ ಸಂತೋಷವಾಯಿತು. ನಿಜಕ್ಕೂ ಇದೊಂದು ಅಪೂರ್ವ ವಿಷಯ. ವಿಜಯಕುಮಾರ್ ಅವರಿಗೆ ವಂದನೆಗಳು
Jeevan koppad
Nov 19, 20201874ರಲ್ಲಿ ಪ್ರಕಟವಾದ ಲಿಂಗಾಯತ ಮತ ವಿಚಾರ ಪುಸ್ತಕದ ಪ್ರತಿಯನ್ನು ನೋಡಿ ಬಹಳ ಆಶ್ಚರ್ಯ ಮತ್ತು ಆನಂದವಾಯಿತು. ಬೆರಳೆಣಿಕೆಯಷ್ಟು ವಚನಗಳು ಹೇಗೆ ವಿಚಾರಗಳನ್ನು ಪ್ರಚೋದಿಸಬಲ್ಲವು ಎನ್ನುವುದಕ್ಕೆ ಅತ್ಯುತ್ತಮ ಐತಿಹಾಸಿಕ ಉದಾಹರಣೆ ಇದು.
Lakshman Kollur
Nov 19, 2020ವಚನಗಳ ಪ್ರಕಟಣೆಯ ಆಧುನಿಕ ಇತಿಹಾಸವನ್ನು ತೋರಿಸಿದ ಲೇಖನ ಮರೆತು ಹೋದ ದಿನಗಳಲ್ಲಿ ಹೂತು ಹೋದ ಮಹತ್ವದ ಸತ್ಯವನ್ನು ಬಿಚ್ಚಿಟ್ಟಿದೆ. Wonderful!
Prasanna Kumar
Nov 22, 2020ಚರಂತಪ್ಪ ಮತ್ತು ಪೌಲಪ್ಪ- ಇವರ ನಡುವೆ ನಡೆಯುವ ಸಂಭಾಷಣೆಯಲ್ಲಿ ವಚನಗಳು ಮುಖ್ಯ ಪಾತ್ರವಹಿಸಿದ ಚಿತ್ರಣ ಕಣ್ಣಿಗೆ ಕಟ್ಟುವಂತಿದೆ. ನಿಜಕ್ಕೂ ಇದು ಅಚ್ಚರಿಯ ತುಣುಕು. ವಚನಗಳನ್ನು ತನ್ನ ಮತಾಂತರಕ್ಕೆ ಪೂರಕವಾಗಿ ಬಳಸಿಕೊಳ್ಳುವ ರೀತಿ ನೋಡಿ ಆಶ್ಚರ್ಯವಾಯಿತು. ಮುಖ್ಯ ಮಾಹಿತಿ ನೀಡಿದ ಲೇಖಕರಿಗೆ ಧನ್ಯವಾದಗಳು.
ಚಂದ್ರಶೇಖರ ಹೂಗಾರ
Nov 22, 2020ಮೊದಮೊದಲು ಲಿಂಗಾಯತ ಧರ್ಮದ ಬಗ್ಗೆ ಏನನ್ನೂ ಹೇಳಲು ಇಚ್ಛಿಸದ ಚರಂತಪ್ಪ ಕೊನೆಯಲ್ಲಿ ಪಾದ್ರಿಯ ಮಾತುಗಳನ್ನು ಕೇಳುತ್ತಾ ಕೇಳುತ್ತಾ ಭಾವನಾತ್ಮಕವಾಗಿ ಅವರ ಪ್ರಭಾವಕ್ಕೆ ಒಳಗಾಗಲು ವಚನಗಳೇ ಕಾರಣವಾದದ್ದು ಕುಚೋದ್ಯವೇ ಸರಿ! ಇದುವರೆಗೆ ತಾನು ತಿಳಿದ ಲಿಂಗಾಯತಕ್ಕೂ ವಚನಗಳಲ್ಲಿನ ಲಿಂಗಾಯತ ಸಂಪ್ರದಾಯಕ್ಕೂ ಇರುವ ಅಂತರ ಕಂಡು ಚರಂತಪ್ಪ ಕಂಗಾಲಾಗುವುದು ಇಡೀ ಲಿಂಗಾಯತ ಸಮುದಾಯ ಕಂಗಾಲಾಗುವುದೂ ಒಂದೇ ಆಗಿದೆ.
Kavyashree
Nov 22, 2020ವಚನಗಳನ್ನು ವೈಚಾರಿಕತೆಗೆ ಸಂವಾದಿಯಾಗಿ ಬಳಸಿಕೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಮೂಢನಂಬಿಕೆ, ಪವಾಡಗಳು ಮತ್ತು ಗೊಡ್ಡು ಸಂಪ್ರದಾಯಗಳನ್ನು ಟೀಕಿಸುವ ಪ್ರಗತಿಪರ ಬಂಡುಕೋರರಾಗಿ ಶರಣರನ್ನು ಆ ಪಾದ್ರಿ ನೋಡಿದ್ದು ನನಗಂತೂ ಬಹಳ ಸಂತೋಷ ತಂದಿತು. ಲಿಂಗಾಯತರಿಗೆ ಅವರ ವಚನಗಳ ಕ್ರಾಂತಿಕಾರಿ ಸತ್ವವೇ ತಿಳಿಯದೇ ಹೋದದ್ದು ಈ ಕಾಲದ ದುರಂತವೆನ್ನಬಹುದು.
Vijayashree S
Nov 23, 2020ಸಂಶೋಧನಾತ್ಮಕ ಲೇಖನ. ಪಾದ್ರಿಯೊಬ್ಬರಿಗೆ ಗೊತ್ತಾಗುವ ವಚನಗಳ ಮರ್ಮ ಆ ಸಂದರ್ಭದಲ್ಲಿ ಲಿಂಗಾಯತನಿಗೂ ಗೊತ್ತಾಗಲಿಲ್ಲವಲ್ಲ!! ಈಗಲೂ ವಚನಗಳನ್ನ, ಶರಣರನ್ನ ತಿಳ್ಕೊಂಡಿದೀವಿ ಅಂತ ನನಗೆ ಅನಸ್ತಾ ಇಲ್ಲ ವಿಜಯಕುಮಾರ್ ಸರ್.
ಶ್ರೀಶೈಲಪ್ಪ ಜುಳುಕಿ
Nov 26, 2020ಲಿಂಗ ಪೂಜೆಯ ಖಂಡನೆ, ಪಾದೋದಕ-ಪ್ರಸಾದಗಳ ಬಗೆಗಿನ ಅಪಹಾಸ್ಯ ಚರಂತಪ್ಪನನ್ನು ಎಚ್ಚರಿಸದೇ ಚಿಂತೆಗೀಡು ಮಾಡಿದ್ದು ಆ ಕಾಲದ ಮಾತ್ರವಲ್ಲ ಇಂದಿನ ಲಿಂಗಾಯತನ ಪರಿಸ್ಥಿತಿಯೂ ಆಗಿದೆ.