ನೆಲದ ಮರೆಯ ನಿಧಾನದಂತೆ…
ಜಗತ್ತಿನ ಎಲ್ಲ ನಾಗರಿಕತೆಗಳೂ ವಿಧವಿಧ ಬಗೆಯಲ್ಲಿ ಜಗದ ನಿಯಾಮಕನನ್ನು ಕುರಿತು ಯೋಚಿಸಿವೆ. ಈ ಸೃಷ್ಟಿಯ ಒಡೆಯ ಯಾರು? ಸೃಷ್ಟಿಕರ್ತ ಇದ್ದಾನೆಯೇ/ ಇಲ್ಲವೇ? ಇದ್ದರೆ, ಯಾವ ರೂಪದಲ್ಲಿದ್ದಾನೆ? ಎಲ್ಲಿದ್ದಾನೆ?… ಇವು ಅನಾದಿ ಕಾಲದಿಂದಲೂ ಮನುಷ್ಯನನ್ನು ಬೆನ್ನುಹತ್ತಿರುವ ಪ್ರಶ್ನೆಗಳು. ಆದರೆ ಜೀವಜಾಲದ ವಿಕಾಸ ಪ್ರಕ್ರಿಯೆಯಲ್ಲಿ ಮನುಷ್ಯನ ಭೌತಿಕ ವಿಕಸನದ ಪರಿಣಾಮವಾಗಿ ದೇವರ ಹುಡುಕಾಟವು ಹೊಸ ಹೊಸ ನೆಲೆಗಳಿಗೆ ತೆರೆದುಕೊಂಡಿತು. ಸೃಷ್ಟಿಯ ಮೂಲಸತ್ಯಕ್ಕಾಗಿ ವೈಜ್ಞಾನಿಕವಾಗಿ, ಆಧ್ಯಾತ್ಮಿಕವಾಗಿ ಸಾಕಷ್ಟು ಸಂಶೋಧನೆಗಳು, ಚಿಂತನೆಗಳು ನಡೆದಿವೆ. ಅನೇಕ ಸಿದ್ಧಾಂತಗಳು, ವಾದಗಳು ಹುಟ್ಟಿಕೊಂಡಿವೆ. ಎಲ್ಲ ದರ್ಶನಗಳೂ ಈ ಕುರಿತು ಸುದೀರ್ಘವಾಗಿ ಚಿಂತಿಸಿವೆ. ದೇವರ ಬಗ್ಗೆ ತಲೆಕೆಡಿಸಿಕೊಳ್ಳದ ತಲೆಮಾರುಗಳಿಲ್ಲ, ಸಂಸ್ಕೃತಿ- ಪರಂಪರೆಗಳಿಲ್ಲ.
ವಿಶ್ವದ ವಿಕಾಸಕ್ಕೆ ಕಾರಣವಾದ ಮೂಲತತ್ವವು ಸಜೀವವೇ, ಜಡವೇ ಎನ್ನುವ ಜಿಜ್ಞಾಸೆಗಳು ನಡೆದಿವೆ. ಅರ್ನೆಸ್ಟ್ ಹೇಕಲ್ ನ ‘ದಿ ರಿಡಲ್ ಆಫ್ ಯೂನಿವರ್ಸ್’ ಮತ್ತು ಹೈಮಾನ್ ಲೆವಿಯ ‘ದಿ ಯೂನಿವರ್ಸ್ ಆಫ್ ಸೈನ್ಸ್’ –ದೇವರನ್ನು ಮಾತ್ರವಲ್ಲ, ಆತ್ಮವನ್ನೂ ನಂಬುವುದಿಲ್ಲ. ಇರುವುದು ಮನುಷ್ಯನ ಮನಸ್ಸು ಮಾತ್ರ ಎಂದು ವಾದಿಸುತ್ತವೆ. ಹನ್ನೊಂದನೆಯ ಶತಮಾನದ ಆರಂಭದಲ್ಲಿ ಬರುವ ಕ್ಯಾಂಟರ್ಬರಿಯ ಸೇಂಟ್ ಆನ್ಸೆಮ್ ಎನ್ನುವ ಸಂತ, ಮೂಲತತ್ವ ವಿಚಾರವಾದ (Ontological Arguement) ವನ್ನು ಮಂಡಿಸುತ್ತಾನೆ. ಆತನ ಪ್ರಕಾರ, “ದೇವರು ಎಂಬ ಭಾವನೆಯಲ್ಲೇ ಅವನ ಅಸ್ತಿತ್ವವೂ ಅಡಗಿದೆ. ಅಸ್ತಿತ್ವವಿಲ್ಲದೇ ದೇವರು ಇರಲಾರ. ಆದರೆ ಆತನ ಸ್ವರೂಪವನ್ನು ಬುದ್ಧಿಯಿಂದ ಗ್ರಹಿಸುವುದು ಸಾಧ್ಯವಿಲ್ಲ.” ಹೀಗೆ ತತ್ವಜ್ಞಾನಿಗಳು, ವಿಜ್ಞಾನಿಗಳು, ಆಧ್ಯಾತ್ಮಜೀವಿಗಳು… ತಮ್ಮದೇ ಆದ ನೆಲೆಯಲ್ಲಿ ಅಂದಿನಿಂದಲೂ ಈ ‘ರಹಸ್ಯ’ದ ಅನ್ವೇಷಣೆಯಲ್ಲಿದ್ದಾರೆ.
ದೇವರ ವಿಚಾರ ದೇವರಷ್ಟೇ ಸಂಕೀರ್ಣ!
ಆಧುನಿಕ ಭೌತಿಕ ನಿಯಮಗಳು ಈ ಬ್ರಹ್ಮಾಂಡ (universe)ವನ್ನು ಹೇಗೆ ವ್ಯಾಖ್ಯಾನಿಸುತ್ತವೆಯೋ ಹಾಗೆ ದೇವರನ್ನು 17ನೇ ಶತಮಾನದಲ್ಲಿ ವ್ಯಾಖ್ಯಾನಿಸಿದ ಡಚ್ ತತ್ವಜ್ಞಾನಿ ಬರೂಚ್ ಸ್ಪಿನೋಜಾ. ಆತನ ಪ್ರಕಾರ, “ಇಡೀ ಸೃಷ್ಟಿಯೇ ದೇವರು, ಇಲ್ಲೊಂದು ಕ್ರಮವಿದೆ. ನಮ್ಮ ತರ್ಕಕ್ಕೆ ಅತೀತವಾದ ಈ ಕ್ರಮಬದ್ಧತೆಯಲ್ಲಿಯೇ ದೇವರು ಅಂತಸ್ಥನಾಗಿದ್ದಾನೆ. ನಾವು ಸೃಷ್ಟಿಯ ಅಭಿವ್ಯಕ್ತಿಯೇ ಹೊರತು ಪ್ರತ್ಯೇಕವಾದ ಅಸ್ತಿತ್ವ ನಮಗಿಲ್ಲ.” ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್ ಕೂಡ ಈ ಗ್ರಹಿಕೆಯನ್ನು ಬೆಂಬಲಿಸುತ್ತಾರೆ. “ಬ್ರಹ್ಮಾಂಡದಲ್ಲಿರುವ ಕ್ರಮಬದ್ಧ ಸಾಮರಸ್ಯದ ಮೂಲಕ ವ್ಯಕ್ತವಾಗುವ ಸ್ಪಿನೋಜಾ ಹೇಳುವ ದೇವರನ್ನು ನಾನು ನಂಬುತ್ತೇನೆ” ಎಂದು ಹೇಳಿದ್ದಾರೆ.
ಅನಂತ ಆಕಾಶ, ಅಸಂಖ್ಯಾತ ನಕ್ಷತ್ರ ಪುಂಜಗಳು, ಕೋಟ್ಯಾಂತರ ಆಕಾಶಕಾಯಗಳು… ವಿಶ್ವದ ನಿಲುವು ಕಲ್ಪನಾತೀತ. ಹನ್ನೆರಡನೆಯ ಶತಮಾನದಲ್ಲಿಯೇ ಶರಣರು ದೇವರನ್ನು ಪರಿಭಾವಿಸಿದ ರೀತಿ ಈ ವಿಚಾರಗಳೊಂದಿಗೆ ಬಹಳಷ್ಟು ಸಾಮ್ಯತೆ ಪಡೆಯುತ್ತದೆ. ಅವರ ಗ್ರಹಿಕೆಯಲ್ಲಿ ಇಡೀ ಬ್ರಹ್ಮಾಂಡ ಅಥವಾ ಸೃಷ್ಟಿ ತತ್ವವೇ ಪರಶಿವ. ಷಣ್ಮುಖಸ್ವಾಮಿಗಳು ಹೇಳುತ್ತಾರೆ:
ವಿಶ್ವದೊಳಗೆಲ್ಲ ನೀನೇ ದೇವ
ವಿಶ್ವಭರಿತನೂ ನೀನೇ ದೇವ
ವಿಶ್ವರೂಪನೂ ನೀನೇ ದೇವ
ಸೃಷ್ಟಿತತ್ವದಲ್ಲಿ ಅಡಕವಾಗಿರುವ ಶಕ್ತಿಯು ಕ್ರಿಯಾಶೀಲ ಹಾಗೂ ಚಲನಶೀಲ. “ವನವೆಲ್ಲಾ ನೀನೇ, ವನದೊಳಗಣ ದೇವತರುವೆಲ್ಲಾ ನೀನೇ’’ ಎಂದು ಪ್ರಕೃತಿಯನ್ನು ಪ್ರೀತಿಯಿಂದ ಸವರುತ್ತಾಳೆ ಅಕ್ಕ. ಹಾಗೆ ಹೇಳುವಾಗ ಆಕೆಯಲ್ಲಿನ ಪ್ರೀತಿ ಇಡೀ ವನವನ್ನೇ ಆವರಿಸಿಕೊಂಡಂತೆ ಭಾಸವಾಗುತ್ತದೆ. ಸೃಷ್ಟಿಯ ಪ್ರಕ್ರಿಯೆಯಲ್ಲಿ ಜಗತ್ತಾಗಿ ವಿಕಾಸಗೊಳ್ಳುವ ಚೇತನವೇ ಈ ಸೃಷ್ಟಿಯನ್ನು ‘ಸುಸ್ಥಿತಿ’ಯಲ್ಲಿಟ್ಟು ನಡೆಸುವ ಶಕ್ತಿಯೂ ಹೌದು. ಪ್ಲೇಟೋ ಸಹ ಸೃಷ್ಟಿ ಎಂದರೆ ದೇವರು ಅಥವಾ ವಿಕಾಸ ಎನ್ನುತ್ತಾನೆ.
ಸೃಷ್ಟಿ ಮತ್ತು ದೇವರು ಬೇರೆ ಬೇರೆಯಲ್ಲ. ಆದರೆ ಕಣ್ಣಿಗೆ ಕಾಣುವ, ಕಾಣದೇ ಇರುವ ಈ ಅಗಾಧ, ಅಖಂಡ ಬ್ರಹ್ಮಾಂಡದಲ್ಲಿ ದೈವ ಶಕ್ತಿ ಎನ್ನುವುದು ಎಲ್ಲಿದೆ? ದೇವರು ಸೃಷ್ಟಿಯೇ ಆಗಿದ್ದರೂ ಸೃಷ್ಟಿಯು ದೇವರಂತೆ ಕಾಣುವುದಿಲ್ಲ ಯಾಕೆ?… ಹೀಗೆ ಸಾಲು ಸಾಲು ಪ್ರಶ್ನೆಗಳು ಮೂಡುವುದು ಸಹಜ. ತನ್ನದೇ ಆದ ಪ್ರಕಟಿತ ರೂಪದಲ್ಲಿ ದೇವರು ಅವ್ಯಕ್ತವಾಗಿ ಅಡಗಿದ್ದಾನೆ ಎನ್ನುವ ಶರಣರು ಇವುಗಳಿಗೆ ಸಮರ್ಪಕ ಉತ್ತರ ನೀಡಬಲ್ಲರು. ಬ್ರಹ್ಮಾಂಡದೊಳಗಿನ ಶಕ್ತಿ ಬ್ರಹ್ಮಾಂಡದಂತೆಯೇ ನಿರವಯ. ಅಂತೆಯೇ ದೇವರನ್ನು ಶರಣರು ಅಗಮ್ಯ, ಅಗೋಚರ, ಅಪ್ರತಿಮ, ಅದೃಶ್ಯ, ಅವ್ಯಕ್ತ, ಅನಂತ, ಅಶರೀರಿ, ಅತೀತ, ಅಖಂಡ… ಹೀಗೆ ವಿಶಿಷ್ಟ ಪದಗಳಲ್ಲಿ ಸಂಬೋಧಿಸಿದ್ದಾರೆ. ಶರಣರ ಪಿಂಡಸ್ಥಲದ ವಚನಗಳು ನಿಸರ್ಗದ ಸಹಜ ಕ್ರಿಯೆಗಳಲ್ಲಿ ದೇವರನ್ನು ಕಾಣುವ ರೀತಿ ಕುತೂಹಲಕರವಾಗಿದೆ.
ನೆಲದ ಮರೆಯ ನಿಧಾನದಂತೆ
ಫಲದ ಮರೆಯ ರುಚಿಯಂತೆ
ಶಿಲೆಯ ಮರೆಯ ಹೇಮದಂತೆ
ತಿಲದ ಮರೆಯ ತೈಲದಂತೆ
ಮರದ ಮರೆಯ ತೇಜದಂತೆ
ಭಾವದ ಮರೆಯ ಬ್ರಹ್ಮವಾಗಿಪ್ಪ ಚೆನ್ನಮಲ್ಲಿಕಾರ್ಜುನನ ನಿಲವನರಿಯಬಾರದು.
ಸಿರಿ-ಸಂಪತ್ತಿನ ಖಜಾನೆಯೇ ಭೂಮಿಯೊಳಗೆ ಅಡಗಿದೆ. ತೈಲ ಸಂಪತ್ತು, ಜಲ ಸಂಪನ್ಮೂಲ, ಚಿನ್ನ- ವಜ್ರದ ನಿಕ್ಷೇಪಗಳು ನೆಲದ ಒಳಗರ್ಭದಲ್ಲೆಲ್ಲೋ ಹುದುಗಿ ಹೋಗಿವೆ. ಮಣ್ಣಿನ ಮೇಲ್ಪದರಿನಲ್ಲಿ ಒಳಗಿನ ಈ ಅಗಾಧ ನಿಧಿ ಗೋಚರಿಸದು. ಹಣ್ಣಿನಲ್ಲಿರುವ ಮಧುರ ರುಚಿಯನ್ನೂ, ಎಳ್ಳಿನಲ್ಲಿರುವ ಎಣ್ಣೆಯನ್ನೂ, ಮರದೊಳಗಿನ ಬೆಂಕಿಯನ್ನೂ ಹೇಗೆ ಇಂದ್ರಿಯಗಳು ಗುರುತಿಸಲಾರವೋ ಭಾವದ ಮರೆಯಲ್ಲಿ ಪಂಚೇಂದ್ರಿಯಗಳ ಅನುಭವಕ್ಕೆ ಅತೀತವಾದ ದೇವರು ಅಡಕವಾಗಿದ್ದಾನೆ. ಇಂಥ ಅವ್ಯಕ್ತ ಸ್ವರೂಪಿಯ ನಿಲುವನ್ನು ಪ್ರಜ್ಞೆಯೂ ಗ್ರಹಿಸಲಾರದು ಎನ್ನುತ್ತಾಳೆ ಅಕ್ಕ.
ಬ್ರಹ್ಮಾಂಡವೇ ದೇವರ ಪ್ರಕಟಿತ ರೂಪ. ಇಲ್ಲಿ ಸೃಷ್ಟಿ ಚೈತನ್ಯದ ಇರುವನ್ನು ಕುತೂಹಲದಿಂದ ದಿಟ್ಟಿಸುವ ಶರಣರು, ವ್ಯಕ್ತ ರೂಪದಲ್ಲೇ ಅವ್ಯಕ್ತವಾಗಿ ಅಡಕವಾಗಿರುವ ಅದರ ರೀತಿ ಕಂಡು ವಿಸ್ಮಿತರಾಗುತ್ತಾರೆ. ಅಲ್ಲಮರೂ ದೇವರ ನಿಲುವನ್ನು ಇದೇ ಧಾಟಿಯಲ್ಲಿ ಪರಿಭಾವಿಸಿದ್ದಾರೆ:
ನೆಲದ ಮರೆಯಲಡಗಿದ ನಿಧಾನದಂತೆ,
ಮುಗಿಲ ಮರೆಯಲಡಗಿದ ಮಿಂಚಿನಂತೆ,
ಬಯಲ ಮರೆಯಲಡಗಿದ ಮರೀಚನಂತೆ (ಮರೀಚಿಯಂತೆ?)
ಕಂಗಳ ಮರೆಯಲಡಗಿದ ಬೆಳಗಿನಂತೆ_ಗುಹೇಶ್ವರಾ ನಿಮ್ಮ ನಿಲವು!
ನೆಲದಡಿಯಲ್ಲಿ ಸಂಪತ್ತು, ಕಾರ್ಮೋಡಗಳ ಮರೆಯಲ್ಲಿ ಮಿಂಚು, ಬಯಲಿನ ಮರೆಯಲ್ಲಿ ಬಿಸಿಲ್ಗುದುರೆ ಅಥವಾ ಮರೀಚಿಕೆ ಅಡಕವಾಗಿರುವಂತೆ, ಜೀವಂತಿಕೆಯ ಅಥವಾ ಪ್ರಾಣದ ಸಂಕೇತವಾಗಿರುವ ಬೆಳಕು ಕಣ್ಣಿನ ಮರೆಯಲ್ಲಿ ಅಡಗಿದೆ. ಆ ಬೆಳಕು ಮಾಯವಾದರೆ ಈ ದೇಹ ತಣ್ಣಗಾಗುವುದು. ಆ ಬೆಳಕೇ ಜೀವ, ಅದು ದೈವ ರೂಪ. ಹೀಗೆ ಬಾಹ್ಯ ಮತ್ತು ಅಂತರಂಗದ ಯಾವ ಇಂದ್ರಿಯಗಳಿಗೂ ಕಾಣದಂತೆ ಪರಮಾತ್ಮನ ನಿಲುವು ಇಡೀ ವಿಶ್ವದಲ್ಲಿ ಓತಪ್ರೋತವಾಗಿ ತುಂಬಿಕೊಂಡಿದೆ.
ಒಮ್ಮೆ ಝೆನ್ ಗುರು ಹುಯತಾಂಗ್ ನ ಬಳಿ ಒಬ್ಬ ಕವಿ ಬಂದು, “ದೇವರ ರಹಸ್ಯವೇನು?” ಎಂದು ಪ್ರಶ್ನಿಸಿದ. ಗುರು ನಕ್ಕು, “ನನ್ನಲ್ಲಿ ಮುಚ್ಚಿಡುವುದು ಏನೂ ಇಲ್ಲ” ಎಂದ. ಕವಿ ಗೊಂದಲಕ್ಕೆ ಬಿದ್ದ. ಸಂಜೆಯ ತಿರುಗಾಟಕ್ಕೆ ಗುರು ನಡೆದಾಗ ಕವಿಯೂ ಜೊತೆಗೆ ಹೆಜ್ಜೆ ಹಾಕಿದ. ದಾರಿಯಲ್ಲಿ ಪಕ್ಕದ ಪೊದೆಯಿಂದ ಆಗಷ್ಟೇ ಅರಳಿದ ಹೂವಿನ ಪರಿಮಳ ತೇಲಿ ಬರುತ್ತಿತ್ತು. ಗುರು ಹೇಳಿದ, “ನನ್ನಲ್ಲಿ ಮುಚ್ಚಿಡುವುದು ಏನೂ ಇಲ್ಲ, ಕಾಣಿಸಿತೇ?” ಬ್ರಹ್ಮಾಂಡವೇ ತೆರೆದ ಪುಸ್ತಕ. ಆದರೂ ದೇವರು ರಹಸ್ಯಮಯವೇಕೆ ಎಂಬ ಪ್ರಶ್ನೆಗೆ ಝೆನ್ ಗುರು ಸೂಕ್ಷ್ಮದ ನೆಲೆಯಲ್ಲಿಯೇ ಉತ್ತರ ದಾಟಿಸಿದ್ದ.
ಇದೇ ಮಾದರಿಯ ಚೆನ್ನಬಸವಣ್ಣನವರ ವಚನ ನೋಡಿ:
ಫಲದೊಳಗಣ ಮಧುರ ಗೋಪ್ಯದಂತಿದ್ದಿತ್ತು
ಚಂದ್ರಕಾಂತದ ಉದಕದ ತೆರನಂತಿದ್ದಿತ್ತು.
ಮಯೂರನ ತತ್ತಿಯ ಚಿತ್ರದಂತಿದ್ದಿತ್ತು.
ಶಿಶುಕಂಡ ಕನಸಿನ ಪರಿಯಂತಿದ್ದಿತ್ತು.
ಕೂಡಲಚೆನ್ನಸಂಗಯ್ಯ
ಸದ್ಗುರು ಚಿತ್ತದ ಪದದಂತಿದ್ದಿತ್ತು.
ಇಲ್ಲಿ ಶಿಶು ಕಂಡ ಕನಸು ಮತ್ತು ಸದ್ಗುರು ಚಿತ್ತದ ಪದ ಎನ್ನುವ ಹೋಲಿಕೆಗಳು ಗಮನ ಸೆಳೆಯುತ್ತವೆ. ನಿದ್ದೆಯಲ್ಲಿರುವ ಹಸುಗೂಸುಗಳನ್ನೊಮ್ಮೆ ನೆನೆಸಿಕೊಳ್ಳಿ. ಸುಮ್ಮನೆ ನಗುತ್ತವೆ, ಬಿಕ್ಕುತ್ತವೆ, ಮತ್ತೆ ಕೆಲವೊಮ್ಮೆ ಬೆಚ್ಚಿ ಬೀಳುತ್ತವೆ. ಯಾವ ಕನಸುಗಳು ಅವುಗಳ ಮನದ ಭಿತ್ತಿಯಲ್ಲಿ ಓಡಾಡುತ್ತಿರಬಹುದು! ಬಲ್ಲವರಾರು? ಶಿಶು ಕಂಡ ಕನಸು ಎಂದರೆ ಅದು ವ್ಯಕ್ತಪಡಿಸಲು ಸಾಧ್ಯವೇ ಇಲ್ಲದ ಭಾವ. ಮಾತೇ ಬಾರದ ಮಗು ಹೇಗೆ ತಾನೇ ತನ್ನ ಕನಸನ್ನು ವರ್ಣಿಸೀತು? ನಾವೇ ಹಸುಗೂಸಾಗಿದ್ದಾಗಿನ ಸ್ಥಿತಿಯು ನಮ್ಮ ನೆನಪಿನ ಭಿತ್ತಿಯಲ್ಲಿ ದಾಖಲಾಗೇ ಉಳಿದಿಲ್ಲ. ಶಿಶುವಿನ ಕನಸನ್ನು ಯಾವ ಮನವೂ ಗ್ರಹಿಸಲಾಗದು, ಯಾವ ಸಂಜ್ಞೆಯೂ ಹಿಡಿದಿಡಲಾಗದು. ದೇವರು ಹೀಗೆ ಅಗ್ರಾಹ್ಯ. ಸದ್ಗುರು ಚಿತ್ತದ ಪದ- ಎನ್ನುವುದೂ ಇಂಥದೇ ಸೂಕ್ಷ್ಮ ಅವಲೋಕನ. ಅರಿವೇ ಗುರು ಎಂದವರು ಶರಣರು. ಇಲ್ಲಿ ‘ಸದ್ಗುರು ಚಿತ್ತ’ ಎಂದರೆ ‘ಅರಿವು’. ಅರಿವು ಎನ್ನುವ ಪದಕ್ಕೆ ಅದೇ ಹೋಲಿಕೆ. ಪ್ರತಿಯೊಬ್ಬರಲ್ಲೂ ಗುರುವಾಗಿ ಮುನ್ನಡೆಸಬಲ್ಲ ಈ ಪ್ರಜ್ಞೆಯ ಪದಕ್ಕೆ ಸಾಕಾರ ರೂಪ ಕೊಡಲು ಸಾಧ್ಯವೇ ಇಲ್ಲ. ನನ್ನಲ್ಲಿ ಅರಿವುಂಟಾಗಿದೆ ಎಂದು ಹೇಳುವುದೂ ಅಶಕ್ಯ. ಹೃದಯ ತೆರೆದು ತೋರಿಸುವುದೂ ಸಾಧ್ಯವಿಲ್ಲ. ಅದೊಂದು ಅನುಭಾವದ ಮೌನಸ್ಥಿತಿ. ಮನಸ್ಸಿನ ಅನುಪಮ ಸ್ಥಿತಿ.
ಬಸವಣ್ಣನವರು, “ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು” ಎಂದೂ, ಜೇಡರ ದಾಸೀಮಯ್ಯನವರು, “ಮರದೊಳಗಣ ಮಂದಾಗ್ನಿಯ ಉರಿಯದಂತಿರಿಸಿದೆ” ಎನ್ನುವಲ್ಲಿ ಸೃಷ್ಟಿಯ ಮತ್ತೊಂದು ಮಜಲನ್ನು ಕಾಣಬಹುದು. ನೀರಿನಲ್ಲಿ ಕಿಚ್ಚು ಇದೆ, ಕಣ್ಣಿಗೆ ಕಾಣದಂತೆ. ಅದೇ ರೀತಿ ಮರದಲ್ಲಿ ಅಗ್ನಿಯು ಅಡಗಿದೆ, ಗೊತ್ತಾಗದಂತೆ, ನಿರಾಕಾರವಾಗಿ. ಬೆಂಕಿ ನೀರಲ್ಲಿದ್ದರೂ, ಮರದಲ್ಲಿದ್ದರೂ ನೀರನ್ನಾಗಲೀ, ಮರವನ್ನಾಗಲೀ ಸುಡಲಾರದು. ಅದೇ ರೀತಿ ಅಗ್ನಿಯು ತನ್ನ ಸುಡುವ ಗುಣವನ್ನು ನೀರಿನಲ್ಲಿದ್ದೂ, ಮರದೊಳಗಿದ್ದೂ ಬಿಟ್ಟುಕೊಡಲಾರದು. ನೀರು ಉರಿಯನ್ನು ಧರಿಸಿಕೊಂಡು ಹರಿಯಬಲ್ಲುದು. ಬೆಂಕಿ ನೀರಿನೊಳಗೆ ಜುಳು- ಜುಳುಸುತ್ತಲೇ ತನ್ನ ಕಿಚ್ಚನ್ನು ಉಳಿಸಿಕೊಳ್ಳಬಹುದು! ಅಗ್ನಿಯನ್ನು ಒಡಲಲ್ಲಿ ಹೊತ್ತುಕೊಂಡೇ ಬೆಳೆಯುವ ಮರದಲ್ಲಿ ಹಸಿರು ನಳನಳಿಸಬಹುದು! ಉರಿದು ಭಸ್ಮವಾಗಿಸುವ ತನ್ನ ಗುಣವನ್ನು ಬೆಂಕಿಯು ಗೌಪ್ಯವಾಗಿಡಬಲ್ಲುದು, ಇದೆಂಥ ಅಚ್ಚರಿ! ಈ ಸೃಷ್ಟಿಯಲ್ಲೇ ಅಂತರ್ಗತವಾಗಿರುವ ವೈರುಧ್ಯಗಳಲ್ಲಿನ ಸಾಮರಸ್ಯದಲ್ಲಿ ದೈವವು ಬೆರೆತ ಬಗೆ ನಿಜಕ್ಕೂ ವಿಸ್ಮಯ!!
“ದೇವರ ಅಥವಾ ಸೃಷ್ಟಿಯ ಬಗ್ಗೆ ನಮಗೆ ಏನೇನೂ ಗೊತ್ತಿಲ್ಲವೆಂದೇ ಹೇಳಬಹುದು. ನಮಗಿರುವ ಬುದ್ಧಿಮಟ್ಟ ಶಾಲಾ ಮಕ್ಕಳದ್ದು. ನಾಲ್ಕು ಆಯಾಮ (dimensions)ಗಳನ್ನು ಗ್ರಹಿಸುವುದೂ ನಮ್ಮಿಂದಾಗದು. ಹೀಗಿರುವಾಗ ಬಹು ಆಯಾಮಗಳ ದೇವರನ್ನು ಗ್ರಹಿಸಬಹುದೇ? ಅತ್ಯಂತ ತೀಕ್ಷ್ಣ ಬುದ್ಧಿಮತ್ತೆಗೂ ಇದು ನಿಲುಕಲಾರದು. ಅದ್ಭುತವಾದ ರೀತಿಯಲ್ಲಿ ಸುವ್ಯವಸ್ಥಿತವಾಗಿರುವ ಈ ವಿಶ್ವ ಕೆಲವು ನಿಯಮಗಳ ಮೇಲೆ ನಡೆಯುತ್ತಿದೆ. ಆ ನಿಯಮಗಳು ನಮಗೆ ತೀರಾ ಅಸ್ಪಷ್ಟವಾಗಿ ಗೊತ್ತು” ಎನ್ನುತ್ತಾರೆ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್.
ದಾರ್ಶನಿಕ ಕವಿ ಎಂದೇ ಹೆಸರಾದ ಬ್ಲೇಕ್ ತನ್ನ ಕವನವೊಂದರಲ್ಲಿ ಮನುಷ್ಯನ ಈ ಮಿತಿಯನ್ನು ಬಹಳ ಸೊಗಸಾಗಿ ಪ್ರಶ್ನಿಸುತ್ತಾನೆ:
How do you know but every Bird that cuts the airy way,
Is an immense world of Delight, clos’d by your senses five?
ಅಂದರೆ- ಪಂಚೇಂದ್ರಿಯಗಳಲ್ಲಿ ಅಡಗಿರುವ ನೀನು ಹೇಗೆ ತಿಳಿದೀಯ?
ವಾಯು ಮಾರ್ಗವನ್ನು ಬಗೆದು ಹಾರುವ ಪ್ರತಿ ಹಕ್ಕಿಯೂ ಅಗಾಧ ಹರ್ಷದ ಜಗವಾಗಿರುತ್ತದೆ.
ಇಂದ್ರಿಯಗಳಿಗೆ ಗೋಚರಿಸುವ ವಿಶ್ವದಲ್ಲಿ ಇಂದ್ರಿಯಾತೀತ ಕಾರಣವಡಗಿದೆ. ಯಾವುದೋ ಇಲ್ಲದ್ದನ್ನು ಕಲ್ಪಿಸಿಕೊಳ್ಳುವುದಲ್ಲ, ಇರುವುದನ್ನು ಅದರ ನಿಜವಾದ ಬೆಳಕಿನಲ್ಲಿ ಗ್ರಹಿಸುವುದು. ವಿಲಿಯಂ ಬ್ಲೇಕ್ ಪ್ರಕಾರ ಇಂಥದೊಂದು ಗ್ರಹಿಕೆ ಅಥವಾ ಕಾಣ್ಕೆಯೇ ದೇವರು.
ನನ್ನ ದೇಹದಲ್ಲಿರುವ ‘ನಾನು’ ಎಲ್ಲಿದ್ದೇನೆ, ಹೇಗಿದ್ದೇನೆ ಎನ್ನುವಷ್ಟೇ ನಿಗೂಢ, ಬ್ರಹ್ಮಾಂಡದಲ್ಲಿರುವ ‘ಬ್ರಹ್ಮ’ನನ್ನು ಬೆದಕುವುದು. ನನ್ನ ಪ್ರಶ್ನೆಗಳು, ನನ್ನ ವಿಚಾರಗಳು, ನನ್ನ ತರ್ಕಗಳು, ನನ್ನನ್ನು ನನಗೆ ಹುಡುಕಿ ತೋರಿಸುವಲ್ಲಿ ಏದುಸಿರು ಬಿಡುತ್ತವೆ.
ಅನಂತ ಕಾಲ ಎನ್ನ ಒಡಲ ಮರೆಯೊಳಗೆ ಅಡಗಿರ್ದು
ಎನಗೆ ಕಾಣಿಸದೆ ಇದ್ದುದು ಇದೇನು ನಿಮ್ಮ ಗಾರುಡವಯ್ಯಾ –ಎಂದು ಅಚ್ಚರಿಪಡುತ್ತಾರೆ ಷಣ್ಮುಖಸ್ವಾಮಿಗಳು. ನನ್ನೊಳಗೇ ಇದ್ದು ನಿರಾಕಾರವಾಗಿರುವುದು, ನನ್ನ ಗಮನಕ್ಕೆ ಬರದೇ ‘ಅದು ನಾನೇ ಆಗಿರುವುದು’ ಎಂಥ ಚಮತ್ಕಾರವೋ ನಾನರಿಯೇ ಎಂದು ದಿಗ್ಭ್ರಮೆ ವ್ಯಕ್ತಪಡಿಸುತ್ತಾರೆ.
ಇನ್ನು ಸೃಷ್ಟಿ-ಸೃಷ್ಟಿಕರ್ತ, ಜೀವ-ಜಗತ್ತು… ಇವುಗಳ ನಡುವಣ ಪರಸ್ಪರ ಸಂಬಂಧ ಎಂಥದು? ಆ ಕುರಿತು ಶರಣರಲ್ಲಿ ಅತಿ ಸೂಕ್ಷ್ಮವಾದ ಮತ್ತು ಅನುಭಾವಿಕ ವಚನಗಳಿವೆ.
ಶಿಲೆಯೊಳಗಣ ಪಾವಕದಂತೆ;
ಉದಕದೊಳಗಣ ಪ್ರತಿಬಿಂಬದಂತೆ;
ಬೀಜದೊಳಗಣ ವೃಕ್ಷದಂತೆ,
ಶಬ್ದದೊಳಗಣ ನಿಶ್ಶಬ್ದದಂತೆ,
ಗುಹೇಶ್ವರಾ, ನಿಮ್ಮ ಶರಣ ಸಂಬಂಧ.
ಇಲ್ಲಿ ‘ಶರಣ’ ಎನ್ನುವ ಪದವು ಸಕಲ ಜೀವ ಸಂಕುಲವನ್ನು ಸೂಚಿಸುತ್ತದೆ. ಕಲ್ಲಿನಲ್ಲಿ ಬೆಂಕಿಯು ಕಣ್ಣಿಗೆ ಗೋಚರಿಸದಂತೆ ಅದೃಶ್ಯವಾಗಿದೆ. ಜಡವಾಗಿ ತೋರುವ ಜಗತ್ತಿನಲ್ಲಿ ದೇವರು ನಿಗೂಢವಾಗಿ ನೆಲೆಸಿರುತ್ತಾನೆ. ನೀರಿನಲ್ಲಿ ಪ್ರತಿಬಿಂಬವಿದೆ ಆದರೆ ಅದು ನೀರಿನಲ್ಲಿ ಅಂಟಿಕೊಂಡಿರುವುದಿಲ್ಲ. ಹಾಗೆ ನೀರಿನಂತೆ ಚಲನಶೀಲವಾದ ಪ್ರಪಂಚದಲ್ಲಿರುವ ಪರಮಾತ್ಮನಿಗೆ ಸೃಷ್ಟಿಯ ಗುಣದೋಷಗಳು ಅಂಟಲಾರವು. ಸೃಷ್ಟಿತತ್ವವು ಅಷ್ಟು ನಿರ್ಲಿಪ್ತ. ಬೀಜದಲ್ಲಿ ಬೃಹತ್ತಾದ ವೃಕ್ಷವೇ ಅಡಗಿದೆ. ಹಾಗೆ ನಿಸರ್ಗದ ಜೀವತಂತುವಿನಲ್ಲಿ ‘ವಿರಾಟ್ ರೂಪಿ’ ದೇವರು ಅವ್ಯಕ್ತವಾಗಿದ್ದಾನೆ. ಶಬ್ದದೊಳಗಣ ನಿಶ್ಶಬ್ದ- ಇದೊಂದು ಅಸಾಧಾರಣ ಗ್ರಹಿಕೆ. ಮೌನ ಮುರಿದು ಹೊರಬರುವ ಶಬ್ದದ ಒಡಲಲ್ಲಿ ನಿಶ್ಯಬ್ದದ ಮಹಾಸಾಗರವೇ ಅಡಗಿದೆ. ನೂರಾರು ಅರ್ಥಗಳನ್ನು ಹೊತ್ತು ತರುವ ಶಬ್ದ ಕೇವಲ ಮೇಲಿನ ಕವಚ. ಶಬ್ದವನ್ನು ಸೀಳಿ, ಅದರ ಅರ್ಥಗಳು ನಮ್ಮ ಮನಕ್ಕೆ ವೇದ್ಯವಾಗುತ್ತವೆ. ಶಬ್ದದಿಂದ ಭಾವವನ್ನು, ಅರ್ಥವನ್ನು ಭೇದಿಸುವುದು ಅಶಕ್ಯ. ಹಾಗೆ ಶಬ್ದದಿಂದ ಹೊರಹೊಮ್ಮುವ ಭಾವ ನಿಶ್ಯಬ್ದವಾದುದು. ನಮ್ಮ ಸುತ್ತ ನಿರಂತರವಾಗಿ ಹರಿದಾಡುವ ನಾನಾ ಬಗೆಯ ಶಬ್ದ ತರಂಗಗಳಲ್ಲಿ ನಿಶ್ಯಬ್ದ ಅರ್ಥಗಳ ಭಾವಾತೀತ ಪ್ರಪಂಚವೇ ಹರಡಿಕೊಂಡಿದೆ. ದೇವರು ಅಂಥ ನಿಶ್ಯಬ್ದ. ಬರಿಗಿವಿಗೆ ಕೇಳಲಾಗದ, ಮನಸ್ಸಿಗೂ ಗ್ರಹಿಸಲಾಗದ ನಿಶ್ಯಬ್ದ, ಮಹಾಮೌನ. ವಿಶ್ವಕ್ಕೂ, ವಿಶ್ವನಿಯಾಮಕನಿಗೂ ಇರುವುದು ಇಂಥ ಅವಿನಾಭಾವ ಸಂಬಂಧ. ಈ ವಿಶ್ವವು ಪರಶಿವನ ಅನುವರ್ತಿತ ರೂಪ. ಪ್ರತಿಯೊಂದೂ ಅವನದೇ ಅಭಿವ್ಯಕ್ತಿ.
ದೇವರ ಪರಿಕಲ್ಪನೆ ನಮ್ಮ ಮನಸ್ಸಿನ ಗ್ರಹಿಕೆಗಳಿಗೆ, ತರ್ಕ-ಚಿಂತನೆಗಳಿಗೆ ಸಿಕ್ಕಿಕೊಳ್ಳುವಂಥದ್ದಲ್ಲ. ದೈವವನ್ನು ಕಣ್ಣುಗಳಲ್ಲಿ, ತರ್ಕಗಳಲ್ಲಿ, ಭಾವಗಳಲ್ಲಿ, ಶಬ್ದಗಳಲ್ಲಿ ಹಿಡಿದಿಡುವ ವ್ಯರ್ಥ ಪ್ರಯತ್ನ ಮಾಡದೆ, ಅವುಗಳ ಇರುವನ್ನು ಅಲ್ಲಲ್ಲಿಯೇ ಕಂಡು, ಹಾಗೇ ಪುಟ್ಟ ಮಗುವಂತೆ ಆನಂದಿಸಿ, ಬೆರಗನ್ನು ಬೆಳಕಾಗಿಸಿಕೊಳ್ಳುವ ಒಂದು ಬಗೆಯ ಅನನ್ಯತೆಯನ್ನು ವಚನಗಳಲ್ಲಿ ಕಾಣಬಹುದು. ಶರಣರು ಹೆಚ್ಚು ಆಧುನಿಕ ಎನ್ನಿಸಿಕೊಳ್ಳುವುದು ಇದೇ ಕಾರಣಕ್ಕೆ. ಅವರು ಈ ದೇಹವನ್ನು ಹುಸಿ ಎನ್ನಲಿಲ್ಲ. ಕಾಣುವ ಸೃಷ್ಟಿಯನ್ನು ಕನಸೆನ್ನಲಿಲ್ಲ. ಇವೆರಡೂ ವಾಸ್ತವ, ಸತ್ಯವೆಂದರು. ಆದರೆ ಕಣ್ಣಿಗೆ ಗೋಚರಿಸುವ ತೋರಿಕೆಯ ಸತ್ಯವೇ ಪರಮಸತ್ಯ ಎಂದು ಅವರು ಪರಿಗಣಿಸಲಿಲ್ಲ. ಬದಲಿಗೆ ಬ್ರಹ್ಮಾಂಡದ ಅಂತರಂಗವನ್ನು ಹೊಕ್ಕರು. ಅಲ್ಲಿನ ಒಳಪದರುಗಳಲ್ಲಿ ಅವರಿಗೆ ಬಯಲಿನ ದರ್ಶನವಾಗಿರಬೇಕು! ಆಧ್ಯಾತ್ಮಿಕ ಸಾಧನೆಯ ಮಹೋನ್ನತ ನಿಲುವಿನಲ್ಲಿ ಅವರು ಏನೆಲ್ಲಾ ಕಂಡಿರಬಹುದು! ಯಾವ ಯಾವ ನೆಲೆಗಳಿಗೆ ಅವರ ಅರಿವು ವಿಸ್ತರಿಸಿರಬಹುದು!!
ಸೃಷ್ಟಿಯ ಸೂಕ್ಷ್ಮತೆಯಲ್ಲಿ ಸೃಷ್ಟಿಕರ್ತನನ್ನು ಮುಖಾಮುಖಿಯಾಗಿ ಕಾಣಲು ಮಾನವ ಅನಾದಿ ಕಾಲದಿಂದಲೂ ತಹತಹಿಸುತ್ತಿದ್ದಾನೆ. ಆದರೆ ಸೃಷ್ಟಿ ತನ್ನ ಬೆರಗನ್ನು ವಿಸ್ತರಿಸಿಕೊಳ್ಳುತ್ತಾ ರಹಸ್ಯವನ್ನು ಆಳಕ್ಕಿಸಿಕೊಳ್ಳುತ್ತಲೇ ಇದೆ. ಅಲೌಕಿಕ ನಿಗೂಢತೆಯ ಗುಣ ಸೃಷ್ಟಿಯ ವೈಶಿಷ್ಟ್ಯ. ಆ ನಿಗೂಢತೆಯಲ್ಲೇ ಅದರ ಸ್ವಾರಸ್ಯವೂ ಅಡಗಿದೆ. ಹೀಗಾಗಿ ಮನುಷ್ಯನ ಹುಡುಕಾಟ ನಿರಂತರ. ಈ ಅನ್ವೇಷಣೆಯು ಜೀವದ ಒಂದು ಮಹಾಪಯಣ.
Comments 1
Saki
Jan 12, 2019Mangala akka your findings of God concept is amazing….anupama and anuhya!