ನೂರನೋದಿ ನೂರಕೇಳಿ…
“ನ್ಯೂ ಇಯರ್, ನ್ಯೂ ಮಿ”- ಹೊಸ ವರುಷದ ಉತ್ಸಾಹದಲ್ಲಿ ಬಹುತೇಕ ನಾವೆಲ್ಲರು ಮಾಡಿಕೊಳ್ಳುವ ಒಂದು ಸಾರ್ವಕಾಲಿಕ ಸಂಕಲ್ಪ. ಹಾಗೆ ಬದಲಾಗುವೆನೆಂಬ ಸ್ವಪ್ರತಿಜ್ಞೆ ಮಾತ್ರ ಮೊದಲ ತಿಂಗಳಲ್ಲೇ ಮಾಯ. ಯಾಕೆ? ಬದಲಾವಣೆ ಎನ್ನುವುದು ಅಷ್ಟು ಕಷ್ಟತಮವಾದದ್ದೇ? ಅಥವಾ ಅಸಾಧ್ಯವಾದದ್ದೇ? ಎಷ್ಟೆಲ್ಲಾ ಧರ್ಮಗ್ರಂಥಗಳನ್ನು, ವ್ಯಕ್ತಿತ್ವ ವಿಕಸನದ ಪುಸ್ತಕಗಳನ್ನು, ವೈಚಾರಿಕ ಸಾಹಿತ್ಯವನ್ನು, ವಚನಗಳನ್ನು ಓದಿದರೂ, ಏನೆಲ್ಲಾ ಪಾರಾಯಣ ಮಾಡಿದರೂ, ಎಷ್ಟೇ ಪುರಾಣ, ಪುಣ್ಯಕಥೆ, ಪ್ರವಚನ ಅಥವಾ ವಿದ್ವತ್ಪೂರ್ಣ ಭಾಷಣಗಳನ್ನು, ಸಲಹೆಗಳನ್ನು ಕೇಳಿದರೂ ಮನುಷ್ಯ ಯಾಕೆ ಬದಲಾಗುವುದಿಲ್ಲ?
ಕಲಿತದ್ದನ್ನು, ಕೇಳಿದ್ದನ್ನು ಹೃದಯಕ್ಕೆ ಇಳಿಸಿಕೊಳ್ಳುವುದು, ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳುವುದು ಸುಲಭದ ಮಾತಲ್ಲ. ಮನುಷ್ಯನ ಒಳ ಮನಸೊಂದು ಬದಲಾವಣೆಯನ್ನು ಸದಾ ತಡೆಯುತ್ತಿರುತ್ತದಂತೆ. ತನ್ನ ಬದಲಾವಣೆಗೆ ತಾನೇ ಮುಳ್ಳಾಗುತ್ತಿರುತ್ತದೆ. ಅಂದರೆ ನಮಗೆ ನಾವೇ ಅಡ್ಡಗಾಲು ಹಾಕುತ್ತಿರುತ್ತೇವೆ. ಪ್ರಜ್ಞಾಪೂರ್ವಕವಾಗಿ ಆಂತರಿಕ ಬದಲಾವಣೆಗೆ ನಾವು ಮನಸ್ಸು ಮಾಡಿದರೂ ಅದು ಸುಲಭವಾಗಿ ಸಾಧ್ಯವಾಗದಿರಲು ಸೂಕ್ಷ್ಮ ಕಾರಣಗಳಿವೆ. ಹೊರನೋಟಕ್ಕೆ ತೋರುವಂತೆ ನಾವು ಒಳಗಿರುವುದಿಲ್ಲ. ಅಂತರಂಗದ ‘ನಾನು’, ಮೇಲೆ ತೋರಿಸಿಕೊಳ್ಳುವಷ್ಟು ಸಹಜವಾಗಿಯೂ ಇರುವುದಿಲ್ಲ. ಒಳಗಣ ಆ ಮುಖವನ್ನು ಎದುರಿಸುವುದು ಸರಳವಲ್ಲ. ಅಂತರಂಗದೆದುರು ನಿಲ್ಲುವುದೆಂದರೆ ನೈಜತೆಗೆ ಮುಖಾಮುಖಿಯಾಗುವುದು. ಹಾಗೆ ನಗ್ನವಾಗಿ ನಿಲ್ಲಲು ಆತ್ಮಸ್ಥೈರ್ಯ ಬೇಕು. ಏಕೆಂದರೆ ಹೊರಗೆ ನಾವು ಮುಖವಾಡಗಳಲ್ಲಿ ಬದುಕುತ್ತಿರುತ್ತೇವೆ. ದೇಶಾರಾಮಿ ಮಾತುಗಳನ್ನಾಡುತ್ತೇವೆ. ಹೊರ ಮುಖ ನಾವೇ ಕಟ್ಟಿಕೊಂಡ ಭ್ರಮಾಲೋಕ. ಅಲ್ಲಿ ನಾನೇ ಸರಿ, ನನ್ನದೇ ನಿಜ ಎನ್ನುವ ಧೋರಣೆಗಳು ಆಳುತ್ತಿರುತ್ತವೆ. ಆದರೆ ಸಣ್ಣತನಗಳು, ಕುರೂಪಗಳು, ದ್ವಂದ್ವಗಳು, ಗೊಂದಲಗಳು, ದೌರ್ಬಲ್ಯಗಳು ಒಳಗೆ ಹುತ್ತ ಕಟ್ಟಿರುತ್ತವೆ. ಈ ಹೊರ- ಒಳಗಿನ ಅಂತರಗಳು ನಮ್ಮನ್ನು ಕಂಗೆಡಿಸಬಹುದು. ನಮ್ಮ ಕಣ್ಣಲ್ಲೇ ನಾವು ಅಪರಿಚಿತವೆನಿಸಬಹುದು. ಆ ಕಾರಣಕ್ಕೆ “ಪ್ರತಿಯೊಬ್ಬರೂ ತನ್ನಿಂದ ತಾನು ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ” ಎಂದು ಹೇಳುತ್ತಾರೆ ಮನಃಶಾಸ್ತ್ರಜ್ಞರು.
ಸುಂದರವಾದ ಹೊರ ಮುಖವಾಡಗಳು ಎಲ್ಲ ಅಹಂಗಳನ್ನು ತಣಿಸುವುದರಿಂದ ಅವುಗಳನ್ನು ಸರಿಸಿ ಒಳಗಡೆ ಇಣುಕಲು ಮನಸ್ಸು ಸಿದ್ಧವಿರುವುದಿಲ್ಲ. ಏಕೆಂದರೆ ಮನಸ್ಸು ಸದಾ ಜಗ್ಗುವುದು ಸುಲಭದ ಹಾದಿಯತ್ತಲೇ. ಅಪಾರ ಜ್ಞಾನ ಸಂಪಾದಿಸಿಯೂ. ಗೋಷ್ಠಿಗಳಲ್ಲಿ ಮೊದಲ ಸಾಲಲ್ಲಿ ಕುಳಿತು ತಲೆಯಾಡಿಸಿಯೂ ತಮ್ಮ ಜೀವನದ ಸಂದರ್ಭದಲ್ಲಿ ಏನನ್ನೂ ಪಾಲಿಸದ ಇಂಥ ಜನರನ್ನು ಕಂಡು ಸ್ವತಂತ್ರ ಸಿದ್ಧಲಿಂಗ ಶರಣರು ಹೇಳುವ ವಚನ-
ಆಯುಧವೈನೂರಿದ್ದರೇನು,
ರಣರಂಗದಲ್ಲಿ ಹಗೆಯ ಗೆಲುವುದು ಒಂದೇ ಅಲಗು.
ಏನನೋದಿ ಏನಕೇಳಿದರೇನು, ತಾನಾರೆಂಬುದನರಿಯದನ್ನಕ್ಕ?
ಓದಿನಿಂದ ಸಂಪಾದಿ ಜ್ಞಾನವೆಂದರೆ ಉಗ್ರಾಣದಲ್ಲಿನ ಆಯುಧಗಳಿದ್ದಂತೆ. ಆದರೆ ರಣರಂಗದಲ್ಲಿ ವೈರಿಯನ್ನು ಗೆಲ್ಲಲಿಕ್ಕೆ ಕೈಯಲ್ಲಿರುವ ಒಂದೇ ಖಡ್ಗ ಸಾಕು. ಬದುಕಿನಲ್ಲಿ ಯಶಸ್ವಿಯಾಗಲು ನಾನಾರು ಎನ್ನುವ ತಿಳಿವಳಿಕೆ ಬೇಕು. ಆಗ ನೀನು, ನಾನು ಎನ್ನುವ ಭಾವ ಭೇದಕ್ಕೆ ಜಾಗವೇ ಇರುವುದಿಲ್ಲ. ಅದೊಂದೇ ತಿಳಿವಳಿಕೆ ನಮ್ಮ ದೃಷ್ಟಿಕೋನವನ್ನೇ ಬದಲಿಸಿಬಿಡುತ್ತದೆ. ಅಂಥ ಜ್ಞಾನವೇ ನಿಜವಾದ ಅರಿವು. ಅದು ಬುದ್ಧಿವಂತಿಕೆಯಿಂದ, ಓದಿನಿಂದ, ಯಾರದೋ ಮಾತುಗಳಿಂದ ಕಡ ಪಡೆದದ್ದಲ್ಲ. ಮನದಲ್ಲಿಯೇ ಸಿದ್ಧವಾಗುವ ಸ್ವಯಂಪಾಕ. ಅಂತರಂಗದ ಪರಿವರ್ತನಾ ಶಕ್ತಿ.
ಜೀವನದ ಸ್ಪಷ್ಟತೆ ಗೋಚರಿಸುವುದು ಮಾಹಿತಿಗಳನ್ನು ತುಂಬಿಕೊಂಡ ಮನಸ್ಸಿನಲ್ಲಲ್ಲ. ವಿಷಯಗಳನ್ನು ಹೊತ್ತ ಹೃದಯದಲ್ಲಲ್ಲ. ಸರಿ ತಪ್ಪುಗಳ ತೀರ್ಪುಗಳಿಗೆ ಬಂದ ಭಾವದಲ್ಲಲ್ಲ. ರೂಪ ಕುರೂಪಗಳ ಜಿಜ್ಞಾಸೆಯುಳ್ಳ ಜ್ಞಾನದಲ್ಲೂ ಅಲ್ಲ. ಶಬ್ದಗಳ ಸದ್ದಿಲ್ಲದ, ತರ್ಕಗಳ ಬಡಿದಾಟವಿಲ್ಲದ ಮನಸ್ಸಿನಲ್ಲಿ ಅರಿವು ತಂತಾನೇ ಮೂಡಬಲ್ಲುದು. ಮಾತಿನಂತೆ ಮನವಿದ್ದರೆ ಮಾತ್ರವೇ ಬೆಳಕಿನ ಪ್ರತಿಫಲನ.
ನೂರನೋದಿ, ನೂರ ಕೇಳಿ ಏನು
ಆಸೆ ಬಿಡದು, ರೋಷ ಪರಿಯದು.
ಮಜ್ಜನಕ್ಕೆರೆದು ಫಲವೇನು
ಮಾತಿನಂತೆ ಮನವಿಲ್ಲದ ಜಾತಿ [ಡಂ]ಬರ ನೋಡಿ
ನಗುವ ನಮ್ಮ ಕೂಡಲಸಂಗಮದೇವ.
ನಾವು ಸಮಸ್ಯೆಗಳನ್ನು, ತಪ್ಪುಗಳನ್ನು ಜಗತ್ತಿನಲ್ಲಿ ಕಾಣಬಯಸುತ್ತೇವೆ. ನಮ್ಮೊಳಗೆ ನೋಡುವುದಿಲ್ಲ. ನಾವು ಬದಲಾದರೆ ಸುತ್ತಣ ಜಗತ್ತೂ ಬದಲಾಗುತ್ತದೆಂದು ತಿಳಿಯುವುದಿಲ್ಲ. ಬಾಹ್ಯಸತ್ಯವನ್ನು ಮಾತ್ರ ನಂಬುವವರು ಸಿಕ್ಕ ಮಾಹಿತಿಗಳತ್ತಲೇ ಗಮನ ಕೊಡುತ್ತಾರೆ. ಕಾಣುವುದು ಮಾತ್ರ ಅವರಿಗೆ ಸತ್ಯ. ಕಾಣುವವನ ಕುರಿತು ಯೋಚಿಸುವುದಿಲ್ಲ. ಕಾಣುವವನತ್ತ ಗಮನ ಹರಿದರೆ ಅದು ಒಳ ಪಯಣ. ಆ ಹಾದಿಯ ಮೊದಲ ಹೆಜ್ಜೆಯೇ ಅಹಂ ನಿರಸನ. ಆಸೆ, ರೋಷಗಳ ಪಲಾಯನ. ತಾವು ಬದಲಾಗದೇ ಕೇವಲ ಧಾರ್ಮಿಕ ಆಚರಣೆಗಳಲ್ಲಿಳಿದು ಆಯುಷ್ಯ ಕಳೆಯುವವರನ್ನು ಕಂಡು ಇಡೀ ಜಗತ್ತೇ ನಗುತ್ತದೆಂದು ಮಾರ್ಮಿಕವಾಗಿ ಎಚ್ಚರಿಸಿದ್ದಾರೆ ಬಸವಣ್ಣನವರು.
ನಮ್ಮನ್ನು ನಾವು ನೋಡಿಕೊಳ್ಳಲು ಕಲಿತರೆ ಪರಿವರ್ತನೆಯ ಪರ್ವ ಆರಂಭವಾದಂತೆ. ಕೇವಲ ಎರಡು ವಿಧದ ಜನರಲ್ಲಿ ಮಾತ್ರ ಇದು ಸಾಧ್ಯ. ಯಾರ ಓದು, ಕಲಿಕೆ ಅವರ ವ್ಯಕ್ತಿತ್ವ ವಿಕಸನಕ್ಕೆ ತಡೆಯಾಗುವುದಿಲ್ಲವೋ ಅಂದರೆ ಯಾರ ಮನಸ್ಸು ಅನ್ಯ ಮೂಲಗಳಿಂದ ಎರವಲು ಪಡೆದ ವಿಚಾರಗಳಿಂದಲೇ ತುಂಬಿ ಹೋಗಿರುವುದಿಲ್ಲವೋ ಅವರು ಈ ಹಾದಿ ತುಳಿಯಬಲ್ಲರು. ಇನ್ನು ಯಾರು ಗ್ರಂಥಗಳನ್ನು, ವಿಜ್ಞಾನವನ್ನು ಅಧ್ಯಯನ ಮಾಡಿಯೂ ತಮಗೆ ಏನೂ ಗೊತ್ತಿಲ್ಲವೆಂದು ಅಂದುಕೊಂಡಿರುವರೋ ಅವರಿಂದಲೂ ಬದಲಾವಣೆಯ ನಡಿಗೆ ಸಾಧ್ಯ. ಅದಕ್ಕಾಗಿ ವಿಶೇಷ ಪ್ರಯತ್ನ, ಕಠಿಣ ಪರಿಶ್ರಮವೇನೂ ಬೇಕಿಲ್ಲ. ಹೂ ಅರಳಿದಂತೆ, ನಕ್ಷತ್ರಗಳು ಹೊಳೆವಂತೆ, ಮೋಡ ನೀರಾದಂತೆ… ನಿಸರ್ಗ ಸಹಜ ವಿದ್ಯಮಾನಗಳ ಹಾಗೆ ಪರಿವರ್ತನೆ ತಂತಾನೇ ಸಂಭವಿಸುತ್ತದೆ. ತೋಂಟದ ಸಿದ್ಧಲಿಂಗ ಯತಿಗಳು ಹೇಳುತ್ತಾರೆ:
ಏನನೋದಿದರೇನಯ್ಯಾ?
ಏನಕೇಳಿದರೇನಯ್ಯಾ?
ಏನಹಾಡಿದರೇನಯ್ಯಾ?
`ಓದಿ ಮರುಳಾದೆಯೋ ಕೂಚಿಭಟ್ಟ’ರೇ! ಎಂದು.
ಗಿಣಿಯೋದಿ ತನ್ನ ಹೇಲ ತಾ ತಿಂದಂತೆ,
ಏಕಲಿಂಗನಿಷ್ಠಾಚಾರ ಸ್ವಾನುಭವವಿವೇಕ
ಸಿದ್ಧಾಂತ ನಿರ್ಣಯವಿಲ್ಲದೆ,
ಮಾತಿಗೆ ಮಾತುಕಲಿತು ನುಡಿಗೆ ನುಡಿಯ ಕಲಿತು
ತರ್ಕಮರ್ಕಟರಂತೆ ಹೋರುವ
ಬಯಲಸಂಭ್ರಮದ ತರ್ಕಿಗಳ ಕಂಡರೆ,
ಮಾಗಿಯ ಕೋಗಿಲೆಯಂತೆ
ಮುಖ ಮುನಿಸಾಗಿರಿಸಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
ಅತ್ಯಂತ ಸುಂದರ ಮಾರ್ಮಿಕ ವಚನವಿದು. ಓದಿದ್ದನ್ನು, ಕೇಳಿದ್ದನ್ನು ಪಾಲಿಸದವರನ್ನು, ಅದನ್ನು ಹಾಗೇ ಹೊರಗೆ ದಾಟಿಸುವವರನ್ನು ಕಂಡು ಗೇಲಿಮಾಡಿದ್ದಾರೆ ತೋಂಟದ ಸಿದ್ಧಲಿಂಗ ಯತಿಗಳು. ಕೇವಲ ಓದಿಗೆ ಮರುಳಾದವರನ್ನು ಅವಿವೇಕಿಗಳೆನ್ನುತ್ತಾರೆ. ಮಾತಿಗೆ ಮಾತು, ನುಡಿಗೆ ನುಡಿ ಕಲಿತು ಸರಾಗವಾಗಿ ಅವುಗಳನ್ನು ಉದ್ಧರಿಸುವವರು ತರ್ಕದ ಕೋತಿಗಳೆಂದೂ, ಬಯಲ ಸಂಭ್ರಮದ ತರ್ಕಿಗಳೆಂದೂ ಹೀಗಳೆಯುತ್ತಾರೆ. ಸ್ವಾನುಭವ ವಿವೇಕವಿಲ್ಲದ ಇಂಥ ಹೀನರ ಸಂಗದಿಂದ ದೂರವಿರುವುದೇ ಲೇಸು ಎಂಬ ಅಭಿಪ್ರಾಯಕ್ಕೆ ಬರುತ್ತಾರೆ.
ಶಬ್ದಗಳು ಸದ್ದು ಮಾಡುತ್ತವೆ, ಮಾತುಗಳು ಗದ್ದಲ ಎಬ್ಬಿಸುತ್ತವೆ. ಅಲ್ಲಿ ಇಲ್ಲಿ ಕೇಳಿದ್ದು, ಓದಿದ್ದು… ಹೀಗೆ ಎಷ್ಟೆಲ್ಲ ಮಾಹಿತಿಗಳನ್ನು ಹೊತ್ತುಕೊಂಡಿದ್ದೇವೆಂದರೆ ನಿರುಮ್ಮಳವಾಗಿ ಕೈಬೀಸುತ್ತಾ ಬಯಲಲ್ಲಿ ಹಗುರ ಹೆಜ್ಜೆಯನ್ನೂ ಹಾಕಲಾರೆವು. ಆಕಾಶದಲ್ಲಿ ಹಾರಲೂ ಆಗದಷ್ಟು ರೆಕ್ಕೆಗಳು ಭಾರವಾಗಿರುತ್ತವೆ. ನಾವು ಜೋತು ಬಿದ್ದ ನಂಬಿಕೆಗಳು, ಆಚರಣೆಗಳು, ವಿಷಯಗಳು ನಮಗೇ ಸೆರೆಮನೆಯಾಗುವುದೆಂದರೆ ಇದೇ ಇರಬೇಕು. ಯಾಕೆಂದರೆ ಅವುಗಳನ್ನು ಅಮೂಲ್ಯವೆಂದು ಎದೆಗವುಚಿಕೊಂಡಿರುತ್ತೇವೆ. ಆದರೆ ವಾಸ್ತವದಲ್ಲಿ ಅವು ನಿಷ್ಪ್ರಯೋಜಕ ಮಾತ್ರವಲ್ಲ ಅಪಾಯಕಾರಿ ಕೂಡ. ಇನ್ನೊಂದು ಕಡೆ ಸ್ವತಂತ್ರ ಸಿದ್ಧಲಿಂಗೇಶ್ವರ ಶರಣರು ಹೇಳುತ್ತಾರೆ:
ಏನನೋದಿ ಏನ ಕೇಳಿ ಏನ ಹೇಳಿದಡೆ ಏನು ಫಲ
ತನ್ನಲ್ಲಿದ್ದ ವಸ್ತುವ ತಾನರಿಯದನ್ನಕ್ಕ?
ಚಿನ್ನದ ತೊಡಹದ ತಾಮ್ರದಂತೆ ಒಳಗೆ ಕಾಳಿಕೆ ಬಿಡದು.
ನುಣ್ಣಗೆ ಬಣ್ಣಗೆ ನುಡಿವ ಅಣ್ಣಗಳೆಲ್ಲರು
ಕಣ್ಣು ಕಾಣದೇ ಕಾಡಬಿದ್ದರು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮನರಿಯದ ಅಂಧಕರೆಲ್ಲರು.
ತನ್ನ ಸ್ವರೂಪವನ್ನು ಅರಿಯದವರು, ತನ್ನನ್ನು ತಾನರ್ಥ ಮಾಡಿಕೊಳ್ಳದವರು ಕಣ್ಣಿದ್ದೂ ಕುರುಡರಂತೆ. ಚಿನ್ನದ ಗಿಲೀಟು ಇರುವ ತಾಮ್ರ ಹೇಗೆ ಒಳಗೆ ದೋಷದಿಂದ ತುಂಬಿರುತ್ತದೋ ಹಾಗೆ ನಯವಾಗಿ, ಬಣ್ಣಬಣ್ಣದ ಮಾತುಗಳನ್ನಾಡುವವರು ನಿಜದ ಹಾದಿ ಕಾಣದ ಕುರುಡರಂತೆ ಕಾಡಲ್ಲಿ ಕಳೆದು ಹೋಗಿರುತ್ತಾರೆ.
ಓದಿನ ಜ್ಞಾನವು ಬದುಕಿನ ಬಗೆಗೆ ನಾವು ಅದಾಗಲೇ ಬಂದುಬಿಟ್ಟಿರುವ ತೀರ್ಮಾನ. ಅದೊಂದು ಬಗೆಯ ಸಂಗ್ರಹ ಜ್ಞಾನ. ಅಂದರೆ ಅದಾಗಲೇ ನಮ್ಮೊಳಗೆ ಪೂರ್ವಾಗ್ರಹಗಳನ್ನು ಹೆಣೆದು ಬಿಟ್ಟಿರುತ್ತದೆ. ನಮ್ಮೊಳಗಿನ ಸಹಜತೆಗೆ ತೆರೆ ಎಳೆದು ಬಿಟ್ಟಿರುತ್ತದೆ. ಮನಸ್ಸು ಅದನ್ನೇ ನಚ್ಚಿಕೊಳ್ಳುವುದರಿಂದ ಹೊಸ ದೃಷ್ಟಿಕೋನದ ಎಲ್ಲ ಸಾಧ್ಯತೆಗಳಿಗೆ ಬಾಗಿಲು ಮುಚ್ಚಿ ಹೋಗುತ್ತವೆ. ಇಂಥ ಮನಸ್ಥಿತಿ ಹೊಸದನ್ನು ಅನುಭವಿಸಲು ಆಸ್ಪದವನ್ನೇ ಕೊಡುವುದಿಲ್ಲ. ಜೀವನ ನಿರ್ವಹಣೆಗೆ ಈ ಜ್ಞಾನ ಅಗತ್ಯವಾಗಿ ಬೇಕು. ಆದರೆ ಅರಿವು ಅದರಾಚೆಗಿನದು. ಬದುಕಿನ ಬಗ್ಗೆ ಸಮಗ್ರ ದೃಷ್ಟಿಕೋನ ನೀಡುವಂಥದು. ಶಬ್ದಗಳು, ಧರ್ಮಗ್ರಂಥಗಳು, ಓದಿನ ಜ್ಞಾನ, ಸಿದ್ಧಾಂತಗಳು… ಒಳಅರಿವಿನ ಸ್ಪಷ್ಟತೆ ನೀಡಲಾರವು. ಅದನ್ನು ನಾವೇ ಕಂಡುಕೊಳ್ಳಬೇಕು. ಅದು ನಮ್ಮದೇ ಪಥ. ಆಗಲೇ ಜಗತ್ತು ತಾನಿದ್ದಂತೆ ಕಾಣುತ್ತದೆ. ಹೊಸ ಗ್ರಹಿಕೆಗಳು ದಕ್ಕುತ್ತವೆ. ಗೌತಮ ಬುದ್ಧನಿಂದ ಹಿಡಿದು ಅಥೆನ್ಸ್ ದೇಶದ ತತ್ವಜ್ಞಾನಿ ಸಾಕ್ರಟಿಸ್ ನನ್ನು ಒಳಗೊಂಡಂತೆ ಜಗತ್ತಿನ ಎಲ್ಲ ದಾರ್ಶನಿಕರು ಮನುಷ್ಯನಿಗೆ ಹೇಳಿ ಹೋದ ಒಂದು ಕಿವಿಮಾತು “ನಿನ್ನ ನೀನು ತಿಳಿ.” ಶರಣರು ತಮ್ಮ ಅನುಭಾವದಿಂದ ಜಗತ್ತನ್ನು ಇಂಥ ಶುದ್ಧ ನೋಟದಲ್ಲಿ ಗ್ರಹಿಸಿದರು. ಬಸವಣ್ಣನವರು ಈ ವಚನ ಬರೆದ ಹಿನ್ನೆಲೆ ಗಮನಿಸಿ-
ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ
ಜಲ-ಬಿಂದುವಿನ ವ್ಯವಹಾರ ಒಂದೇ,
ಆಶೆಯಾಮಿಷರೋಷಹರುಷ ವಿಷಯಾದಿಗಳೆಲ್ಲಾ ಒಂದೇ.
ಏನನೋದಿ, ಏನ ಕೇಳಿ, ಏನು ಫಲ
ಕುಲಜನೆಂಬುದಕ್ಕೆ ಆವುದು ದೃಷ್ಟ
ಸಪ್ತಧಾತುಸಮಂ ಪಿಂಡಂ ಸಮಯೋನಿಸಮದ್ಭವಂ
ಆತ್ಮಜೀವಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ ಎಂದುದಾಗಿ,
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ,
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ.
ಕರ್ಣದಲ್ಲಿ ಜನಿಸಿದರುಂಟೆ ಜಗದೊಳಗೆ
ಇದು ಕಾರಣ ಕೂಡಲಸಂಗಮದೇವಾ,
ಲಿಂಗಸ್ಥಲವನರಿದವನೆ ಕುಲಜನು.
ವೇದದ ಓದು ಪ್ರಾಚೀನ ಭಾರತದಲ್ಲಿ ಅತ್ಯಧಿಕ ಮಾನ್ಯತೆ ಪಡೆದಿತ್ತು. ಹನ್ನೆರಡನೆ ಶತಮಾನದಲ್ಲಿ ಬ್ರಾಹ್ಮಣ್ಯದ ಮೂಲಪಠ್ಯವಾಗಿ ವೇದಗಳು ಧಾರ್ಮಿಕ ಲೋಕದಲ್ಲಿ ಪ್ರತಿಷ್ಟಿತ ಸ್ಥಾನ ಪಡೆದಿದ್ದವು. ಸಂಪ್ರದಾಯವಾದಿಗಳ ಅಧಿಕಾರದ ನೆಲೆಯಾಗಿದ್ದವು. ಅಪೌರುಷೇಯ, ಪ್ರಶ್ನಾತೀತ ಎಂಬ ಹೆಗ್ಗಳಿಕೆ ಪಡೆದ ಅವುಗಳ ಪ್ರಾಮಾಣ್ಯವನ್ನು ಪ್ರಶ್ನಿಸುವಂತೆಯೇ ಇರಲಿಲ್ಲ. ಇತಿಹಾಸಕ್ಕೆ ಅವು ಅತೀತವೆಂಬ ನಂಬಿಕೆಯನ್ನು ಗಟ್ಟಿಗೊಳಿಸಲಾಗಿತ್ತು. ವೇದ ವಾಕ್ಯ ಎಂದರೆ ಅದೇ ಅಂತಿಮ. ಹೀಗಾಗಿ ಸಹಜವಾಗಿಯೇ ವೇದ ವ್ಯಾಖ್ಯಾನಗಳ ಪರಿಣಿತರಿಗೆ ಅಪಾರ ಗೌರವವಿತ್ತು. ರಾಜ ಮನ್ನಣೆಯಿತ್ತು. ವೇದ ಬಲ್ಲಿದರ ಶಾಸ್ತ್ರದ ಮಾತುಗಳು ಅಕ್ಷರಶಃ ಕಾನೂನಿನ ಅಸ್ತ್ರಗಳೂ ಆಗುತ್ತಿದ್ದವು. ಬಸವಣ್ಣನವರು ವೇದದ ಈ ಎಲ್ಲ ಪಾರಮ್ಯಗಳನ್ನೂ ಅಲ್ಲಗಳೆದರು. ಸಮಾಜವನ್ನು ವಿಂಗಡಿಸುವ, ಅಸಮತೆಯನ್ನು ಸೃಷ್ಟಿಸುವ ಇಂಥ ಓದುಗಳಿಂದ ಪ್ರಯೋಜನವೇನೆಂದು ನೇರವಾಗಿ ಪ್ರಶ್ನಿಸಿದರು. ಮನುಷ್ಯನ ಶ್ರೇಷ್ಠತೆಯನ್ನು ಹುಟ್ಟಿನಿಂದಲೇ ಅಳೆಯುವ ಶಾಸ್ತ್ರಗಳನ್ನೆಲ್ಲ ಧಿಕ್ಕರಿಸಿದರು. ಈ ವಚನದಲ್ಲಿ ಬಸವಣ್ಣನವರು ದುಡಿಮೆಯಿಂದ ಹೆಸರಾಗುವ ಕುಲಗಳಿಗೆ ಉಚ್ಛ, ನೀಚ ಪಟ್ಟ ಕಟ್ಟುವವರನ್ನು ತಾರ್ಕಿಕವಾಗಿ ಖಂಡಿಸುತ್ತಾರೆ. ಲಿಂಗಸ್ಥಲವನ್ನು ಅನುಭಾವದಿಂದ ಅರಿತವನೇ ನಿಜವಾದ ಕುಲಜ ಎನ್ನುತ್ತಾರೆ.
ಬಹಿರ್ಮುಖಿಗೆ ಜಗತ್ತು ಮಾತ್ರವೇ ಸತ್ಯ, ಆತ್ಮದರಿವು ಎನ್ನುವುದೆಲ್ಲ ಮಿಥ್ಯ. ಅಂತರ್ಮುಖಿಗೆ ಜಗತ್ತು ಮಾಯೆ, ಆತ್ಮವಿದ್ಯೆಯೇ ನೈಜಸತ್ಯ. ಬಹಿರ್ಮುಖಿಗೆ ಒಳಪಯಣದ ಹಾದಿ ಎಂದರೆ ಅಜ್ಞಾತ ಲೋಕದಲ್ಲಿ ಕಳೆದು ಹೋಗುವ ಭಯ. ಒಳಗಿಳಿಯುವುದೆಂದರೆ ತಳವೇ ಕಾಣದ ಕಂದಕಕ್ಕೆ ಧುಮುಕಿದಂತೆ ಎಂಬ ಆತಂಕ. ಅಂತರ್ಮುಖಿಗೆ ಹೊರಜಗತ್ತಿನ ಬಗ್ಗೆ ಅಸಡ್ಡೆ. ಪ್ರಾಪಂಚಿಕ ಸುಖ, ಆಸೆ- ಆಮಿಷಗಳಿಗೆ, ಆಕರ್ಷಣೆಗಳಿಗೆ ಬಲಿಯಾಗಬಹುದೆಂಬ ಭಯ, ಹಿಂಜರಿಕೆ. ಶರಣರು, ಅನುಭಾವಿಗಳು ಈ ಇಬ್ಬರಿಗಿಂತಲೂ ಭಿನ್ನ. ಲೌಕಿಕ ಮತ್ತು ಪಾರಲೌಕಿಕ ಎರಡರ ಸತ್ಯಾಸತ್ಯತೆಗಳನ್ನು ತಮ್ಮ ಬದುಕಿನ ಮೂಲಕವೇ ಅರಿಯಬಲ್ಲರು. ಒಳ-ಹೊರಗು ಎರಡರ ಕೂಟದಲ್ಲಿ ಸಮನ್ವಯತೆಯನ್ನು ಸಾಧಿಸಬಲ್ಲರು. ನಾವು ನಮ್ಮನ್ನು ಆಳವಾಗಿ ಅರ್ಥಮಾಡಿಕೊಂಡಷ್ಟು ಹೊರಗನ್ನು ಹೆಚ್ಚು ಸ್ಪಷ್ಟವಾಗಿ, ತಾಳ್ಮೆ ಮತ್ತು ಸಹಾನುಭೂತಿಯಿಂದ ಕಾಣುತ್ತೇವೆ.
“…ಆವ ಸಿದ್ಧಿಗಳಿಂದಲೂ ಫಲವಿಲ್ಲ,
ಏನನೋದಿ ಏನ ಕೇಳಿ ಏನ ಹೇಳಿಯೂ ಫಲವಿಲ್ಲ,
ಇವು ಭಕ್ತಿಯೊಳಗಲ್ಲ, ಮುಕ್ತಿಗೆ ಸಲ್ಲವು.
ಇದನರಿದು ಆವನಾನೊಬ್ಬನು ಲಿಂಗವರಿತು ಲಿಂಗಾರ್ಚನೆಯಂ ಮಾಡಿ,
ಗುರುಲಿಂಗಜಂಗಮಕ್ಕೆ ತನುಮನಧನವ ಸವೆಸಿದಡೆ
ಅದೇ ಚಲ್ವ ಭಕ್ತಿ, ಅದೇ ಚಲ್ವ ಮುಕ್ತಿ, ಅದೇ ಸರ್ವಸಿದ್ಧಿ.
ಅದೇ ಸರ್ವಕಾರಣವಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
ಸಮಾಜಮುಖಿಯಲ್ಲದ, ಆತ್ಮದರಿವು ಮೂಡಿಸದ ಎಂಥದೇ ಸಿದ್ಧಿಗಳೂ ಪ್ರಯೋಜನವಿಲ್ಲ. ತಾನು ಲಿಂಗಸ್ವರೂಪಿ ಎಂಬುದನ್ನು ಕಂಡುಕೊಂಡ ಅನುಭಾವಿಯೊಬ್ಬ ಗುರುಲಿಂಗಜಂಗಮಕ್ಕೆ ತನುಮನಧನಗಳನ್ನು ಸವೆಸಿದರೆ ಅದೇ ಸರ್ವ ಸಿದ್ಧಿ ಎಂದು ಕೊಂಡಾಡುತ್ತಾರೆ ಉರಿಲಿಂಗಪೆದ್ದಿ ಶರಣರು. ಅಂತರಂಗ- ಬಹಿರಂಗಗಳ ಹದವರಿತ ಸಮಾಗಮವೇ ಪರಮ ಸಿದ್ಧಿ. ಓದಿ ಸಂಪಾದಿಸಿಕೊಳ್ಳುವ ಜ್ಞಾನವು ಅನುಭಾವದ ಮೂಸೆಯಲ್ಲಿಳಿದು ಬದುಕಿನಲ್ಲಿ ಕರಗಬೇಕು. ಆಗಲೇ ಜ್ಞಾನವು ಬಾಯಿ ಮಾತಿನ ಬಡಾಯಿಯಾಗದೆ, ಬುದ್ಧಿಯ ಆಡಂಬರವಾಗದೆ ವ್ಯಕ್ತಿತ್ವದಲ್ಲಿ ಬೆರೆತು ಜ್ಞಾನಕ್ಕೆ ಲಕ್ಷಣ ಪ್ರಾಪ್ತವಾಗುತ್ತದೆ. ಇದನ್ನೇ ಸ್ವತಂತ್ರ ಸಿದ್ಧಲಿಂಗ ಶರಣರು ಹೇಳುತ್ತಾರೆ-
ಅಂಧಕನ ಮುಂದೆ ನೃತ್ಯ ಬಹುರೂಪವನಾಡಿದಡೇನು
ಕಂಡು ಪರಿಣಾಮಿಸಬಲ್ಲನೆ ಹೇಳಾ?
ಬಧಿರನ ಮುಂದೆ ಸಂಗೀತ ಸಾಹಿತ್ಯವನೋದಿದಡೇನು
ಕೇಳಿ ತಿಳಿದು ಪರಿಣಾಮಿಸಬಲ್ಲನೆ ಹೇಳಾ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನರಿಯದವರ ಓದು ಕೇಳಿಕೆ,
ಬಧಿರಾಂಧಕರ ಕೇಳಿಕೆ ನೋಟದಂತಾಗಿತ್ತು.
ಕುರುಡನ ಮುಂದೆ ಎಂಥ ಅದ್ಭುತ ನೃತ್ಯ ಮಾಡಿದರೇನು, ಕಿವುಡನೆದುರು ಎಷ್ಟು ಸುಶ್ರಾವ್ಯದ ಸಂಗೀತ ಹಾಡಿದರೇನು ಇಬ್ಬರೂ ಅವುಗಳನ್ನು ಆನಂದಿಸಲಾರರು. ತನ್ನೊಳಗಿನ ಜೀವ ಚೈತನ್ಯವನ್ನು ಅರಿಯದೆ ಬರಿಯ ಓದು, ಕೇಳಿಕೆಗಳಲ್ಲಿ ತಲ್ಲೀನರಾದವರ ಜೀವನ ಕೂಡ ಇದೇ ರೀತಿ ವ್ಯರ್ಥ. ಮನುಷ್ಯ ತನ್ನ ಸ್ವಭಾವಗಳ ಸೀಮಿತ ಮಿತಿಯನ್ನು ದಾಟದೆ ಹೋದರೆ ವ್ಯಕ್ತಿತ್ವ ಅರಳುವುದಿಲ್ಲ.
ಸಿದ್ಧ ವಿಚಾರಗಳಿಗೆ ಸಿಕ್ಕಿಕೊಳ್ಳುವ ಮನಸ್ಸು ಗುಲಾಮಗಿರಿಯನ್ನು ತಂತಾನೇ ತಲೆಯ ಮೇಲೆ ಹೊತ್ತುಕೊಂಡಿರುತ್ತದೆ. ಸಿದ್ಧಪ್ರತಿಗಳಿಗೆ ಅಚ್ಚಾಗುವ ಮನಸ್ಸುಗಳಲ್ಲಿ ನೈಜ ಬದಲಾವಣೆ ಸಾಧ್ಯವಾಗಲಾರದು, ಸೃಜನಶೀಲತೆ ಹುಟ್ಟಲಾರದು.. ವಿನೂತನವಾದ ಆಲೋಚನೆಗಳು ಕುಡಿಯೊಡೆಯಲಾರವು. ಸ್ವಂತಿಕೆಯಿಲ್ಲದ, ಅರಿವು ಗೋಚರಿಸದ ಮನಸ್ಸುಗಳು ದಾಸ್ಯತ್ವಕ್ಕೆ ಸುಲಭವಾಗಿ ಬೀಳುತ್ತವೆ. ಇಂಥ ಸಾಂಪ್ರದಾಯಿಕ ಹಾದಿ ಶರಣರದಾಗಿರಲಿಲ್ಲ. ಆದ್ದರಿಂದ ವೇದ, ಶಾಸ್ತ್ರ, ಪುರಾಣಗಳ ಓದಿಗೆ ಮನಸ್ಸು ಕೊಡಲಿಲ್ಲ. ಅವರ ಸಾಧನೆ, ಬದುಕುಗಳು ವಿಭಿನ್ನವಾಗಿದ್ದವು, ವಿಶಿಷ್ಟವಾಗಿದ್ದವು. ಅಲ್ಲಿಯೂ ಯಾರೊಬ್ಬರೂ ಮತ್ತೊಬ್ಬರ ಪಡಿಯಚ್ಚಾಗಿರಲಿಲ್ಲ. ಪುಸ್ತಕದ ಓದಾಗಲಿ, ಮತ್ತೊಬ್ಬರ ಅನುಭವದ ಮಾತುಗಳಾಗಲಿ ನಮ್ಮ ದಾರಿಯಲ್ಲಿ ಬೆಳಕು ನೀಡಬಲ್ಲವೇ ಹೊರತು ಅವೇ ನಮ್ಮ ಕಾಣ್ಕೆಗಳಾಗಲಾರವು.