ಅಲ್ಲಮಪ್ರಭು ಮತ್ತು ಮಾಯೆ
ಅಲ್ಲಮಪ್ರಭು ತನ್ನ ವಚನಗಳಲ್ಲಿ ಮಾಯೆ ಎಂಬ ಪದವನ್ನು ಆಗಾಗ್ಗೆ ಬಳಸುತ್ತಾರೆ ಎಂಬುದು ಅವರ ವಚನಗಳನ್ನು ಓದಿದವರಿಗೆಲ್ಲಾ ಗೊತ್ತು. ಇದು ಕೆಲವರನ್ನು ‘ಅಲ್ಲಮ ಒಬ್ಬ ಶಂಕರಾಚಾರ್ಯರಂಥ ಅದ್ವೈತಿ’ ಎಂದು ತೀರ್ಮಾನಿಸಲು ಪ್ರಚೋದಿಸಿದೆ; ಮತ್ತೆ ಕೆಲವರನ್ನು ಅಲ್ಲಮ ದಾರ್ಶನಿಕವಾಗಿ ಇತರ ವಚನಕಾರರಿಗಿಂತ ಭಿನ್ನ ಎಂದೂ, ಮತ್ತೆ ಕೆಲವರು ಅವರನ್ನು ಲಿಂಗಾಯತ ಅಥವಾ ಮತ್ತಾವುದೇ ದಾರ್ಶನಿಕ ಪಂಥದ ಚೌಕಟ್ಟಿನೊಳಗಿಡಲು ಸಾಧ್ಯವಿಲ್ಲ ಎಂದೂ ತೀರ್ಮಾನಿಸುವಂತೆ ಪ್ರಚೋದಿಸಿದೆ. ಅಲ್ಲಮರ ವಚನಗಳನ್ನು ವಿಶ್ಲೇಷಿಸಿ ಇವುಗಳಿಗಿಂತ ಬೇರೊಂದು ರೀತಿಯ ತೀರ್ಮಾನಕ್ಕೆ ಬರಲು ಸಾಧ್ಯವೇ ಎಂಬುದನ್ನು ಪರೀಕ್ಷಿಸುವುದು ಈ ಲೇಖನದ ಉದ್ದೇಶ.
ಶಂಕರರ ಪ್ರಕಾರ ಅನಂತವಾದ ನಿರ್ಗುಣ ನಿರಾಕಾರ ಬ್ರಹ್ಮ ಮಾತ್ರ ಸತ್ಯ. ಗಿಡಮರಗಳನ್ನೂ ಮನುಷ್ಯ ಪ್ರಾಣಿಗಳನ್ನೂ ಒಳಗೊಂಡ ಜಡಜಗತ್ತು ಅವರ ಪ್ರಕಾರ ಮಾಯೆ. ಮಾಯೆ ಎಂಬ ಪದವನ್ನು ಶಂಕರರು ಅನೇಕ ಅರ್ಥಗಳಲ್ಲಿ ಬಳಸುತ್ತಾರೆ. 1. ಸಾಂಖ್ಯರು ಪ್ರಕೃತಿ ಎಂಬ ಪದವನ್ನು ಯಾವ ಅರ್ಥದಲ್ಲಿ ಬಳಸುತ್ತಾರೋ ಆ ಅರ್ಥದಲ್ಲಿಯೇ ಶಂಕರರು ಮಾಯೆ ಎಂಬ ಪದವನ್ನು ಬಳಸುತ್ತಾರೆ. ಸಾಂಖ್ಯರ ಪ್ರಕಾರ ಪ್ರಕೃತಿಯು ಜಗತ್ತಿನ ಮೂಲ ಕಾರಣ. ಅದರಿಂದಲೇ ಜಡ ವಸ್ತುಗಳೂ ಪ್ರಾಣಿಗಳ ದೇಹೇಂದ್ರಿಯಾದಿಗಳೂ ಉತ್ಪತ್ತಿಯಾಗುತ್ತವೆ. ಅಂದರೆ ಶಂಕರರಿಗೆ ಜಗತ್ತಿಗೆ ಮಾಯೆಯೇ ಮೂಲ ಕಾರಣ. 2. ಮಾಯೆ (ಜಗತ್ತು) ಶಂಕರರ ಪ್ರಕಾರ ಸತ್ಯವೂ ಅಲ್ಲ, ಅಸತ್ಯವೂ ಅಲ್ಲ, ಮಿಥ್ಯೆ. ಬಂಜೆಯ ಮಗ, ಗಗನ ಕುಸುಮ ಯಾವತ್ತೂ ಅಸ್ತಿತ್ವದಲ್ಲಿಲ್ಲ. ಅವು ಕೇವಲ ಅಭಾವರೂಪದ ಕಲ್ಪನೆಗಳು. ಆದುದರಿಂದ ಅವು ಅಸತ್ಯ. ಆದರೆ ಜಗತ್ತು ಭಾವರೂಪದ ಮಾಯೆ. ಅದಕ್ಕೆ ಅಸ್ತಿತ್ವವಿದೆ. ಜಗತ್ತಿನಲ್ಲಿಯೇ ಇದ್ದು, ಅದರೊಡನೆ ನಿತ್ಯವೂ ವ್ಯವಹರಿಸುವುದರಿಂದ ನಾವು ಅದನ್ನು ಅಸತ್ಯ ಎಂದು ಪರಿಗಣಿಸಲು ಬರುವುದಿಲ್ಲ. ಆದರೆ ಅದು ಸತ್ಯವೂ ಅಲ್ಲ. ಬ್ರಹ್ಮ ಮಾತ್ರ ಸತ್ಯ. ಜಡ ಜಗತ್ತೂ ಸತ್ಯ ಎಂದರೆ ಬ್ರಹ್ಮನಲ್ಲದೆ ಮತ್ತೊಂದು ಸತ್ಯವಿದೆ ಎಂದಾಗುತ್ತದೆ. ಆಗ ಅದ್ವೈತಕ್ಕೆ ಧಕ್ಕೆಯಾಗುತ್ತದೆ. ಹೀಗೆ, ಮಾಯೆ (ಪ್ರಕೃತಿ ಅಥವಾ ಪ್ರಕೃತಿಯಿಂದಾದ ಜಗತ್ತು) ಸತ್ಯವೂ ಅಲ್ಲದ, ಅಸತ್ಯವೂ ಅಲ್ಲದ ಒಂದು ವಿಲಕ್ಷಣವಾದ, ಏನೆಂದು ನಿರ್ಣಯಿಸಲಾಗದ ವಸ್ತು (ಸದಸದ್ವಿಲಕ್ಷಣ, ಅನಿರ್ವಚನೀಯ). ಇದನ್ನು ವರ್ಣಿಸಲು ಶಂಕರರು ಮಿಥ್ಯೆ ಎಂಬ ಪದ ಬಳಸುತ್ತಾರೆ. 3. ಸಾಂಖ್ಯರು ಪ್ರಕೃತಿಯನ್ನು ಒಂದು ಸ್ವತಂತ್ರ ಅಸ್ತಿತ್ವವುಳ್ಳ ಸತ್ತೆ ಎಂದು ಪರಿಭಾವಿಸಿದರೆ, ಶಂಕರರು ಅದು ಸ್ವತಂತ್ರ ಅಸ್ತಿತ್ವವಿಲ್ಲದ ವ್ಯಾವಹಾರಿಕ ಸತ್ತೆ ಎಂದು ಪರಿಭಾವಿಸುತ್ತಾರೆ. ಬ್ರಹ್ಮ ಮಾತ್ರ ಸತ್ಯ, ಜಗತ್ತು ಮಿಥ್ಯೆಯಾದರೂ, ಅದು ಕಲ್ಪನೆಯಲ್ಲ. ಹಗ್ಗವು ಕತ್ತಲೆಯಲ್ಲಿ ಅಥವಾ ದೃಷ್ಟಿದೋಷದಿಂದಾಗಿ ಹಾವಿನಂತೆ ಕಾಣುತ್ತದೆ. ಆದರೆ ಹಾವು ನಮ್ಮ ಸೃಷ್ಟಿಯಲ್ಲ. ಅದಕ್ಕೆ ಹಗ್ಗ ಎಂಬ ಆಶ್ರಯ ಅಥವಾ ಅಧಿಷ್ಠಾನವಿದೆ. ಹಗ್ಗವೇ ಇಲ್ಲದಿದ್ದರೆ, ಹಾವು ಎಂಬ ಭ್ರಮೆಯೂ ಇರುವುದಿಲ್ಲ. ಹಾಗೆಯೇ ಅವಿದ್ಯೆಯಿಂದಾಗಿ ಬ್ರಹ್ಮನು ಜಗತ್ತಿನಂತೆ ತೋರುತ್ತಾನೆ. ಈ ತೋರಿಕೆ ನಮ್ಮ ಇಚ್ಛಾಪೂರ್ವಕ ಸೃಷ್ಟಿಯಲ್ಲ; ಕನಸಿನ ವಸ್ತುವಿನಂತೆಯೂ ಅಲ್ಲ. ಕನಸಿನ ವಸ್ತುಗಳಿಗೆ ಆಶ್ರಯ ಅಥವಾ ಅಧಿಷ್ಠಾನವಿಲ್ಲ. ಆದರೆ ಬ್ರಹ್ಮನೇ ಜಗತ್ತು ಎಂಬ ತೋರಿಕೆಗೆ ಅಧಿಷ್ಠಾನ. ಬ್ರಹ್ಮ ಇಲ್ಲದಿದ್ದರೆ ಜಗತ್ತು ಎಂಬ ವಿವರ್ತವೂ (ತೋರಿಕೆಯೂ) ಇರುವುದಿಲ್ಲ. ಅಂದರೆ ಮಾಯೆಗೆ (ಪ್ರಕೃತಿಗೆ) ಸ್ವತಂತ್ರ ಅಸ್ತಿತ್ವವಿಲ್ಲ. ನಾವು ಹಾವನ್ನು ಸೃಷ್ಟಿಸಲಿಲ್ಲ, ಅದು ವಾಸ್ತವವಾಗಿ ಅಲ್ಲಿ ಇರಲೇ ಇಲ್ಲ. ಅದೇ ರೀತಿ, ಜಗತ್ತನ್ನು ಬ್ರಹ್ಮನು ಸೃಷ್ಟಿಸಲಿಲ್ಲ. ಅದು ಇರಲೇ ಇಲ್ಲ, ಕೇವಲ ಇರುವಂತೆ ಭಾಸವಾಯಿತು, ಅಷ್ಟೇ. ಇಲ್ಲದ ಜಗತ್ತು ಇರುವಂತೆ ಕಾಣುವುದು ಕೇವಲ ತೋರಿಕೆ, ಸತ್ಯವಾದುದಲ್ಲ. ಬ್ರಹ್ಮನು ನಿರ್ಗುಣನಾದುದರಿಂದ ಜಗತ್ತನ್ನು ಸೃಷ್ಟಿಸುವ ಗುಣವೂ ಸೃಷ್ಟಿಸಬೇಕೆಂಬ ಇಚ್ಛೆಯೂ ಅವನಲ್ಲಿರಲಿಲ್ಲ. 4. ಹತ್ತಿರದಿಂದ ನೋಡಿದಾಗ ನಾವು ಯಾವುದನ್ನು ಹಾವು ಎಂದು ತಿಳಿದುಕೊಂಡಿದ್ದೆವೋ ಅದು ಹಗ್ಗ ಎಂಬುದು ಗೊತ್ತಾಗುತ್ತದೆ. ಅದೇ ರೀತಿ, ಅನಾದಿಯಾದ ಅವಿದ್ಯೆಯಿಂದಾಗಿ ಜಡವಲ್ಲದ, ಕೇವಲ ಚಿನ್ಮಯನಾದ ಬ್ರಹ್ಮನು ಜಡಜಗತ್ತಿನಂತೆ ಕಾಣುತ್ತಾನೆ. ಆದರೆ ಅವಿದ್ಯೆಯನ್ನು ಕಳೆದುಕೊಂಡು ಬ್ರಹ್ಮಜ್ಞಾನ ಪಡೆದಾಗ ನಮಗೆ ಚಿನ್ಮಯನಾದ ಬ್ರಹ್ಮ ಮಾತ್ರ ಕಾಣುತ್ತದೆ, ಮಾಯೆ (ಜಡಜಗತ್ತು) ಕಾಣುವುದಿಲ್ಲ. ಬ್ರಹ್ಮಜ್ಞಾನ ಉಂಟಾದವರಿಗೆ ಜಗತ್ತು ಇಲ್ಲವಾಗುತ್ತದೆ. ಈ ಪರಿಶೀಲನೆಯಿಂದ, ಶಂಕರರು ಮಾಯೆ, ಜಗತ್ತು, ಪ್ರಕೃತಿ, ಅವಿದ್ಯೆ, ಅಜ್ಞಾನ, ಆಭಾಸ, ಅಧ್ಯಾಸ, ಮುಂತಾದ ಪದಗಳನ್ನು ಸಮಾನಾಂತರವಾಗಿ ಬಳಸುತ್ತಿದ್ದಾರೆ ಎಂದು ಖಚಿತವಾಗುತ್ತದೆ.
ಜಗತ್ತಿನ ಬಗೆಗಿನ ಈ ಅಭಿಪ್ರಾಯ ಅಲ್ಲಮರಲ್ಲೂ ಇದ್ದರೆ ಅವನು ಶಾಂಕರ ಅದ್ವೈತಿ, ಅಲ್ಲದಿದ್ದರೆ ಅಲ್ಲ. ವಾಸ್ತವ ಏನೆಂದರೆ, ಅವರೇ ತನ್ನ ವಚನವೊಂದರಲ್ಲಿ (2/85) ಅದ್ವೈತವನ್ನೂ, ಬ್ರಹ್ಮವನ್ನೂ ನುಡಿದು ಭ್ರಮಿತನಾದೆ, ಬಸವಣ್ಣನಿಂದಾಗಿ ಭಕ್ತನಾದೆ, ಎನ್ನುತ್ತಾರೆ. ಆದುದರಿಂದ, ಅಲ್ಲಮರ ವಚನಗಳಲ್ಲಿ ಪದೇ ಪದೇ ಬಳಸಲಾಗಿರುವ ಮಾಯೆ, ಅದ್ವಯ, ಅದ್ವೈತ ಎಂಬ ಪದಗಳನ್ನು ನಾವು ಎಚ್ಚರಿಕೆಯಿಂದ ವಿಶೇಷಿಸಿದರೆ ಅವು ಶಾಂಕರ ಅದ್ವೈತದ ರೀತಿಯಲ್ಲಿ ಬಳಕೆಯಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಜೊತೆಗೆ ಅವರ ಜಗತ್ತಿನ ಪರಿಕಲ್ಪನೆಯನ್ನೂ ಇತರ ವಚನಕಾರರ ಜಗತ್ತಿನ ಪರಿಕಲ್ಪನೆಯನ್ನೂ ಹೋಲಿಸಿದರೆ ಅಲ್ಲಿ ಶಾಂಕರ ಮಾಯಾವಾದಕ್ಕೆ ಸ್ಥಾನವಿಲ್ಲ ಎಂಬುದೂ ಸ್ಪಷ್ಟವಾಗುತ್ತದೆ.
ವಚನಕಾರರ ಪ್ರಕಾರ ಮೊದಲು ಲಿಂಗ ಒಂದೇ ಇತ್ತು; ಅದು ನಿರ್ಗುಣ, ನಿರಾಕಾರವಾಗಿತ್ತು; ಅದು ಏನನ್ನೂ ಕುರಿತು ಚಿಂತಿಸುವಂತಿರಲಿಲ್ಲ, ಏಕೆಂದರೆ ಚಿಂತಿಸಲ್ಪಡಲು ಏನೂ ಇರಲಿಲ್ಲ. ಅದಕ್ಕೆ ಸ್ವಪ್ರಜ್ಞೆ ಸಹಾ ಇರಲಿಲ್ಲ. ಅಂಥ ಸ್ಥಿತಿಯ ಲಿಂಗಕ್ಕೆ ವಚನಕಾರರು ಶೂನ್ಯ, ಬಯಲು, ಮುಂತಾದ ಹೆಸರುಗಳನ್ನು ಕೊಟ್ಟಿದ್ದಾರೆ. ಇಷ್ಟರವರೆಗೆ ಈ ಪರಿಕಲ್ಪನೆ ಶಂಕರರ ನಿರ್ಗುಣ, ನಿರಾಕಾರ ಬ್ರಹ್ಮನ ಪರಿಕಲ್ಪನೆಯನ್ನೇ ಹೋಲುತ್ತದೆ. ಶಂಕರರ ನಿರ್ಗುಣ ಬ್ರಹ್ಮನಲ್ಲಿ ಸೃಷ್ಟಿಸಬೇಕೆಂಬ ಇಚ್ಛೆ ಹುಟ್ಟುವುದೆ ಇಲ್ಲ. ಆದರೆ ಅಲ್ಲಮರ ಶೂನ್ಯಲಿಂಗದಲ್ಲಿ ಸೃಷ್ಟಿಸಬೇಕೆಂಬ ಇಚ್ಛೆಯುಂಟಾಗುತ್ತದೆ. ಆಗ ಅದರಲ್ಲಿಯೇ ಇದ್ದ ಶಕ್ತಿಯಲ್ಲಿ ಚಲನೆ ಉಂಟಾಗಿ ಅದು ಜಗತ್ತಿನ ನಾನಾ ವಸ್ತುಗಳಾಗಿ ರೂಪಾಂತರಗೊಳ್ಳುತ್ತದೆ. ಅಲ್ಲಮ ಒಂದು ಉಪಮೆಯ ಮೂಲಕ ಇದನ್ನು ಸ್ಪಷ್ಟಪಡಿಸುತ್ತಾರೆ: ಮರಗಳು ಹೇಗೆ ನಿರ್ದಿಷ್ಟ ಋತುವಿನಲ್ಲಿ ಪಲ್ಲವಿಸಿ, ಹೂ ಹಣ್ಣು ಇತ್ಯಾದಿಗಳಾಗುತ್ತವೆಯೋ ಹಾಗೆ, ಹರನ ಇಚ್ಛೆಯ ಪ್ರಕಾರ ಶಕ್ತಿಯು ಜಗತ್ತಿನ ನಾನಾ ವಸ್ತುಗಳಾಗಿ ರೂಪಾಂತರಗೊಳ್ಳುತ್ತದೆ (ವ.145). ಹೀಗೆ ಹರನೇ (ಲಿಂಗನೇ) ತನ್ನ ಇಚ್ಛೆಯಿಂದ ಸೃಷ್ಟಿಸಿರುವ ಜಗತ್ತು ಮಾಯೆ ಅಥವಾ ಮಿಥ್ಯೆ ಆಗಿರದೆ ಸತ್ಯವೇ ಆಗಿದೆ. ಅದು ಪ್ರಳಯಕ್ಕೆ ಒಳಗಾಗುವ ತನಕವಾದರೂ ಇರುತ್ತದೆ; ಎಂದಿಗೂ ಕೇವಲ ತೋರಿಕೆಯಲ್ಲ. ಹೀಗೆಂದು ಇತರ ವಚನಕಾರರೂ ನಂಬುತ್ತಾರೆ.
ಶಿವಶಕ್ತಿಯ ವಿಕಾಸವಾದ ಜಗತ್ತು ಲಿಂಗದಿಂದ ಹೊರಗಿಲ್ಲ, ಅದು ಲಿಂಗದಲ್ಲಿಯೇ ಅಂತಸ್ಥವಾಗಿದೆ ಹಾಗೂ ಲಿಂಗ ಜಗತ್ತಿನಲ್ಲಿ ಪೂರ್ಣವಾಗಿ ವ್ಯಾಪಿಸಿಕೊಂಡಿದೆ. ಇದನ್ನೆ ವಚನಕಾರರು ‘ಲಿಂಗಮಧ್ಯೇ ಜಗತ್ ಸರ್ವಂ’ ಎಂದಿದ್ದಾರೆ. ಇದನ್ನು ಒಂದು ಉಪಮೆಯೊಂದಿಗೆ ವಿವರಿಸಬಹುದು: ಒಂದು ಕೊಡವನ್ನು ಸಮುದ್ರದಲ್ಲಿ ಮುಳುಗಿಸಿದಾಗ ಅದು ಸಮುದ್ರದಲ್ಲಿರುತ್ತದೆ ಹಾಗೂ ಸಮುದ್ರದ ನೀರು ಅದರೊಳಗಿರುತ್ತದೆ. ಅದೇ ರೀತಿ ಜಗತ್ತು ಲಿಂಗದಲ್ಲಿಯೂ ಲಿಂಗವು ಆ ಜಗತ್ತಿನಲ್ಲಿಯೂ ಇರುತ್ತವೆ. ನಾವು ಜಗತ್ತನ್ನು ನಮ್ಮ ಹೊರಗಿರುವಂತೆ, ನಮ್ಮ ಆಲೋಚನೆ, ಕೋಪತಾಪ, ಮುಂತಾದ ಮಾನಸಿಕ ಸ್ಥಿತಿಗಳು ನಮ್ಮ ಒಳಗಿರುವಂತೆ ಕಾಣುತ್ತೇವೆ. ಜಗತ್ತು ಲಿಂಗದ ಒಳಗೇ ಇರುವುದರಿಂದ, ಲಿಂಗವು ಜಗತ್ತನ್ನು ತನ್ನ ಒಳಗಿರುವಂತೆ ವೀಕ್ಷಿಸುತ್ತದೆ.
ಒಬ್ಬ ವ್ಯಕ್ತಿ ಅನುಭಾವಿಯಾದರೆ, ವಚನಕಾರರ ಪ್ರಕಾರ ಅವನು ತನ್ನನ್ನು ಲಿಂಗದೊಂದಿಗೆ ತಾದಾತ್ಮ್ಯ ಮಾಡಿಕೊಳ್ಳುತ್ತಾನೆ. ಮೊದಲಿದ್ದ ಅವನ ಮರೆವು ಇಲ್ಲವಾಗಿ, ಅವನಲ್ಲಿ ತಾನು ಪ್ರತ್ಯೇಕ ವ್ಯಕ್ತಿಯಲ್ಲ, ತನಗೂ ಲಿಂಗಕ್ಕೂ ಭೇದವಿಲ್ಲ, ತಾನೇ ಲಿಂಗ ಎಂಬ ಅನುಭೂತಿ ಉಂಟಾಗುತ್ತದೆ. ಶಾಂಕರ ಅದ್ವೈತಿಗೆ ಅನುಭಾವ ಉಂಟಾದರೆ ಅವನು ಜಗತ್ತನ್ನು ಕಾಣದೆ, ಕೇವಲ ನಿರ್ಗುಣ ಬ್ರಹ್ಮನನ್ನು ಕಂಡರೆ, ಲಿಂಗಾಯತ ಅನುಭಾವಿಯು ಜಗತ್ತನ್ನೂ ಕಾಣುತ್ತಾನೆ, ಅದರಲ್ಲಿರುವ ಲಿಂಗವನ್ನೂ ಕಾಣುತ್ತಾನೆ. ಲಿಂಗಾಯತ ಅನುಭಾವಿಗೆ ತಾನು ಮತ್ತು ಲಿಂಗ ಎಂಬ ಭೇದ ಇಲ್ಲವಾದಂತೆ, ತಾನು ಮತ್ತು ಜಗತ್ತು ಎಂಬ ಭೇದವೂ ಇಲ್ಲವಾಗುತ್ತದೆ. ಅವನ ಪ್ರಕಾರ ತಾನು, ಲಿಂಗ, ಜಗತ್ತು – ಇವು ಮೂರೂ ಭೇದವಿಲ್ಲದ ಒಂದು.
ಈಗ, “ಲಿಂಗದೊಂದಿಗೆ ತನ್ನನ್ನು ಏಕೀಕರಿಸಿಕೊಳ್ಳುವ ಅನುಭಾವಿಯು ಮತ್ತೊಬ್ಬ ಸೃಷ್ಟಿಕರ್ತ, ಲಯಕರ್ತ, ಇತ್ಯಾದಿ ಆಗುತ್ತಾನೆಯೆ?” ಎಂದು ಕೆಲವರು ಆಕ್ಷೇಪಿಸಬಹುದು. ಇದಕ್ಕೆ ಅನುಭಾವಿಯು ಈ ಉತ್ತರ ಕೊಡಬಲ್ಲ: ಅನುಭಾವಿಯು ಮತ್ತೊಬ್ಬ ಸೃಷ್ಟಿಕರ್ತನಾದ ಲಿಂಗ ಆಗುವುದಿಲ್ಲ; ಅದು ಅಸಾಧ್ಯ ಮತ್ತು ಅಚಿಂತ್ಯ ಕೂಡ. ಅವನು ತಾನೆಂಬ ಪ್ರತ್ಯೇಕತಾ (ಅಂಗ) ಭಾವವನ್ನು ಕಳೆದುಕೊಂಡು ತಾನೇ ಲಿಂಗ ಎಂದು ಭಾವಿಸಿಕೊಂಡಾಗ ಲಿಂಗನು ಹೇಗೆ ಜಗತ್ತು ತನ್ನ ಒಳಗೆ ಇದೆ ಎಂದು ಪರಿಭಾವಿಸುತ್ತಾನೋ ಹಾಗೆ ಲಿಂಗವೇ ಆದ ಅನುಭಾವಿಯು ಜಗತ್ತು ತನ್ನ ಒಳಗೇ ಇದೆ ಎಂದು ಪರಿಭಾವಿಸುತ್ತಾನೆ. ಇದಕ್ಕೆ ಅಲ್ಲಮರ ಕೆಲವು ವಚನಗಳು ಸಾಕ್ಷಿ. ಪರಿಕಲ್ಪನೆಯು ಒಂದು ಆಕ್ಷೇಪಣೆಗೆ ಉತ್ತರವಾಗಬಲ್ಲುದು.
1. ಹದಿನಾಲ್ಕು ಭುವನ ಒಬ್ಬ ಶರಣನ ಕುಕ್ಷಿಯೊಳಗು . . . (2/369)
2. ಇಹಲೋಕ ಪರಲೋಕ ತಾನಿರ್ದಲ್ಲಿ . . . (2/370).
3. ಅಹಂಕಾರವನೆ ಮರೆದು, ದೇಹಗುಣಂಗಳನೆ ಜರೆದು,
ಇಹ ಪರವು ತಾನೆಂದರಿದ ಕಾರಣ,
ಸೋಹಂ ಭಾವ ಸ್ಥಿರವಾಯಿತ್ತು . . . (2/401)
4. ದ್ರವ್ಯ ನೀನು ದ್ರವ್ಯಾರ್ಥ ನೀನು; ಪದ ನೀನು ಪದಾರ್ಥ ನೀನು.
ಸಕಲ ನೀನು ನಿಷ್ಕಲ ನೀನು.
ಸಕಲ ನಿಷ್ಕಲಾತ್ಮಕ ಪರಿಪೂರ್ಣ ಶಿವನಲ್ಲದೆ ಅನ್ಯ ಭಿನ್ನಭಾವ ಉಂಟೆ?
ಸಕಲ ನಿಷ್ಕಲ ತತ್ವಂಗಳು ನಿಮ್ಮೊಳಗೆ ಸಮಾಸವನೆಯ್ದುವೆವೆಂದು
ತಮ್ಮ ತಮ್ಮ ಅಂಗದ ಮೇಲೆ ಸರ್ವಪದಾರ್ಥಂಗಳ ಹೆಸರಿಟ್ಟು
ಹೊತ್ತುಕೊಂಡೈದಾವೆ ನೋಡಾ! . . . (2/1253)
ಶರಣ ತನ್ನಲ್ಲಿ ಲಿಂಗವನ್ನೂ ಆ ಲಿಂಗದಲ್ಲಿ ಜಗತ್ತನ್ನೂ ಕಾಣುತ್ತಾನೆ ಎಂಬ ಪರಿಕಲ್ಪನೆ ಅಲ್ಲಮರಿಗೆ ಮಾತ್ರ ಸೀಮಿತವಾದುದಲ್ಲ. ಚೆನ್ನಬಸವಣ್ಣ (3/1266) ‘ತಾನೆ ಜಗ, ಜಗವೆಲ್ಲ ತಾನೆಂದರಿದ ಘನವಭೇದ್ಯನಭೇದರೂಪನಾಗಿ, ಅನ್ಯವಿಲ್ಲದನ್ಯವನರಿಯಲೆಲ್ಲಿಯದೊ?’ ಎಂದು ಕೇಳುವಾಗ, ಅನುಭಾವಿ ತಾನು, ಜಗತ್ತು, ಲಿಂಗ ಮೂರೂ ಒಂದೇ ಎಂದು ಪರಿಭಾವಿಸುತ್ತಾನೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾನೆ. ಅದೇ ರೀತಿ, ಆದಯ್ಯನವರು (6/1016) ಶರಣನಲ್ಲೇ ಲಿಂಗವೂ, ಲಿಂಗದಲ್ಲಿ ಜಗತ್ತೂ ಇದೆ ಎಂಬುದನ್ನು ಹೇಳುತ್ತಿದ್ದಾರೆಂಬುದು ಸ್ಪಷ್ಟವಾಗುತ್ತದೆ. ಹಾಗೆಯೇ ಬಾಲಸಂಗಯ್ಯ ಎಂಬ ವಚನಕಾರರೂ ಈ ಅಭಿಪ್ರಾಯವನ್ನು ಎತ್ತಿ ಹಿಡಿಯುತ್ತಾರೆ (13/580, 581, 585-87).
ಇಲ್ಲಿ, ಜಗತ್ತು ಸೃಷ್ಟಿಪೂರ್ವದಲ್ಲಿಯೂ (ಅವ್ಯಕ್ತವಾಗಿ) ಶರಣನಲ್ಲೇ ಇತ್ತು ಎಂಬ ಅಲ್ಲಮ (2/5, 6) ಮತ್ತು ಚೆನ್ನಬಸವಣ್ಣನವರ (3/2-6) ಅಭಿಪ್ರಾಯವನ್ನೂ ನೆನೆಪಿಸಿಕೊಳ್ಳಬೇಕು. ಅದೇ ರೀತಿ, ಎರಡನೆಯ ಅಲ್ಲಮ ಎಂದು ಪ್ರಸಿದ್ಧವಾಗಿರುವ ತೋಂಟದ ಸಿದ್ಧಲಿಂಗ ಶಿವಯೋಗಿಗಳ “. . . ಆ ನಿಃಕಲಲಿಂಗದಿಂದ ಜ್ಞಾನಚಿತ್ತು ಉದಯವಾಗಿ, ಆ ಜ್ಞಾನಚಿತ್ತುವೇ ಶರಣ ರೂಪಾಗಿ . . .” (11/38), “. . . ಪರಿಪೂರ್ಣ ಪ್ರಕಾಶ . . . ಸಮ್ಯಗ್ಜ್ಞಾನದಲ್ಲಿ ಶರಣನುತ್ಪತ್ತಿ, ಶರಣನ ಸ್ಥಿತಿ ಶರಣನ ಲಯ ಕಾಣಿಭೋ. ಆ ಸದಮಲಾನಂದ ಚಿದ್ಬ್ರಹ್ಮಾಂಡಾತ್ಮಕ ತಾನೆಂಬುದನು ಶ್ರೀ ಗುರುವಿನ ಶ್ರೀಮುಖದಿಂದ ಅರಿದು . . . ತಾನೆ ಮುಕ್ತನು… ಶರಣನು” (11/44) ಎಂಬ ಮಾತುಗಳನ್ನೂ ನೆನೆಪಿಸಿಕೊಳ್ಳಬೇಕು (ಅಲ್ಲದೆ, ನೋಡಿ: 11/47, 48, 53). ಆಧ್ಯಾತ್ಮಿಕ ಸಾಧನೆಯಿಂದಾಗಿ ಅನುಭಾವಿಯಾದ ಶರಣನಲ್ಲಿ ಜಗತ್ತು ಇರುವಂತೆ, ಇನ್ನೂ ಬಂಧನಕ್ಕೊಳಗಾಗದ (ಶುದ್ಧವಾದ) ಶರಣನಲ್ಲಿಯೂ ಅವ್ಯಕ್ತ ರೂಪದ ಜಗತ್ತು ಇದೆ ಎಂಬುದು ಇದರ ಅರ್ಥ.
ಇಲ್ಲಿ ಕೆಲವರು, “ಮನುಷ್ಯನಲ್ಲಿ ಇಡೀ ಜಗತ್ತು ಇದೆ ಎಂಬುದು ವಾಸ್ತವವಲ್ಲ, ಕೇವಲ ಕಲ್ಪನೆ ಅಥವಾ ಭ್ರಮೆ ಅಲ್ಲವೆ?” ಎಂದು ಆಕ್ಷೇಪಿಸಬಹುದು. ಇದಕ್ಕೆ ಅನುಭಾವಿ ಎರಡು ಉತ್ತರ ಕೊಡಬಹುದು: 1. ಮನುಷ್ಯನಲ್ಲಿ ಜಗತ್ತು ಇದೆ ಎನ್ನುವುದು ಭ್ರಮೆಯಾದರೆ, ಅವನಲ್ಲಿ ಜಗತ್ತನ್ನೊಳಗೊಂಡ ಲಿಂಗವಿದೆ ಎನ್ನುವುದೂ ಭ್ರಮೆಯೇ. ಕರಿಯು ಕನ್ನಡಿಯೊಳು ಅಡಗಿದಂತೆ ಮಾನವನಲ್ಲಿ ಲಿಂಗ ದೇವ ಅಡಗುತ್ತಾನೆ, ಎನ್ನುವುದು ಎಲ್ಲ ಶರಣರ ಅಭಿಮತ. ಆದುದರಿಂದ, ಇದು ಭ್ರಮೆಯಲ್ಲ. ಇದು ಭ್ರಮೆಯಲ್ಲ ಎನ್ನುವುದಾದರೆ ಲಿಂಗವಾಗುವುದು ಎಂದರೇನರ್ಥ? ಲಿಂಗವಾಗುವುದು ಎಂದರೆ ಲಿಂಗದಂತೆ ಆಗುವುದು ಎಂದಲ್ಲ. ಮಾನವ ಲಿಂಗದಂತೆ ಆಗುತ್ತಾನೆ ಎಂದರೆ ಲಿಂಗ ಮತ್ತು ಲಿಂಗದಂತೆ ಆದ ಅನುಭಾವಿ ಇಬ್ಬರೂ ಇರುವುದು ಎಂದರ್ಥ. ಇದು ಸಾಧ್ಯವಿಲ್ಲ. ಅನುಭಾವದಲ್ಲಿ ದ್ವೈತ ಇರುವುದಿಲ್ಲ. ಲಿಂಗವಾಗುವುದು ಎಂದರೆ ತಾನು ಎಂಬ ಪ್ರತ್ಯೇಕತಾ ಭಾವವನ್ನು ಕಳೆದುಕೊಳ್ಳುವುದು ಮತ್ತು ತಾನು ಮತ್ತು ಲಿಂಗ ಒಂದೇ ಎಂದು ತಿಳಿಯುವುದು. 2. ಉಪನಿಷತ್ಕಾರರು ಮತ್ತು ಇತರ ಭಾರತೀಯ ದಾರ್ಶನಿಕರ ಪ್ರಕಾರ ಅನುಭಾವದಲ್ಲಿ (ತುರೀಯಾವಸ್ಥೆಯಲ್ಲಿ) ಅರಿತುದು ವಿದ್ಯೆ ಅಥವಾ ಜ್ಞಾನ (ಅಥವಾ ಪರಾವಿದ್ಯೆ). ಅಂದರೆ, ಅನುಭಾವದಲ್ಲಿ ಇಂದ್ರಿಯ ಮತ್ತು ಅಂತಃಕರಣಗಳು ಆತ್ಮದೊಂದಿಗೆ ಸಂಬಂಧವನ್ನು ತಾತ್ಕಾಲಿಕವಾಗಿ ಕಡಿದುಕೊಂಡಿರುವಾಗ ಆತ್ಮ ತಾನೊಂದೆ ಉಳಿಯುತ್ತದೆ. ಆ ಶುದ್ಧ ಆತ್ಮವೇ ಪರಮಾತ್ಮ, ಬ್ರಹ್ಮ, ಜ್ಞಾನ ಅಥವಾ ವಿದ್ಯೆ. ಅಲ್ಲಮಪ್ರಭು ಸೇರಿ ಎಲ್ಲ ವಚನಕಾರರು ಇದನ್ನೆ ಅರಿವು ಅಥವಾ ಲಿಂಗ ಎನ್ನುತ್ತಾರೆ. ಇದನ್ನು ಅನುಭವಿಸಿದವನು ಲಿಂಗಾನುಭಾವಿ ಅಥವಾ ಶರಣ. ಜಾಗ್ರತಾವಸ್ಥೆಯಲ್ಲಿ ಉಂಟಾಗುವ ಜ್ಞಾನದಲ್ಲಿ ಜ್ಞಾತೃ ಮತ್ತು ಜ್ಞೇಯಗಳ ದ್ವೈತವಿರುವುದರಿಂದ ಅದು ಎರಡನೆ ದರ್ಜೆಯದು. ಅದು ಅವಿದ್ಯೆ ಅಥವಾ ಅಜ್ಞಾನ. ಅದು ವ್ಯಾವಹಾರಿಕವಾಗಿ ಸತ್ಯವಿರಬಹುದು, ಆದರೆ ಅದು ಮೋಕ್ಷಕಾರಕ ಅಲ್ಲ. ಆದುದರಿಂದ ಅದು ಅವಿದ್ಯೆ. ವೇದ ಮುಂತಾದವುಗಳ ಜ್ಞಾನ ಸಹ ಈ ಅರ್ಥದಲ್ಲಿ ಅವಿದ್ಯೆಯೆ. ಇದು ಎಲ್ಲ ಅನುಭಾವಿಗಳ ಅಭಿಪ್ರಾಯ. ಆದುದರಿಂದ ಇದು ಭ್ರಮೆ ಎನ್ನಲು ಅವಕಾಶವಿಲ್ಲ.
ಅನುಭಾವಿಯು ಅನುಭಾವದಲ್ಲಿ ಲಿಂಗವನ್ನು ಅನುಭವಿಸುವುದರಿಂದ ಮತ್ತು ಅದು ತನ್ನಲ್ಲಿಯೆ ಇದೆ (ಅಥವಾ ತಾನು ಲಿಂಗವೇ ಆಗಿದ್ದೇನೆ) ಎಂದು ತಿಳಿಯುವುದರಿಂದ ಅವನಿಗೆ ಅದು ಸಂದೇಹಾತೀತ ಸತ್ಯ. ಅನುಭಾವದಲ್ಲಿ ಯಾವ ವಿಷಯವನ್ನೂ – ದೇವರು ಇದ್ದಾನೆ ಅಥವಾ ಅವನು ಜಗತ್ತನ್ನು ಸೃಷ್ಟಿಸುತ್ತಾನೆ ಮುಂತಾದ ವಿಷಯವನ್ನೂ – ಅರಿಯಲು ಸಾಧ್ಯವಿಲ್ಲ. ಅದೇನಿದ್ದರೂ ಜಾಗ್ರತಾವಸ್ಥೆಯಲ್ಲಿ ಮಾತ್ರ. ಲಿಂಗದಲ್ಲಿ ಜಗತ್ತು ಅಡಗಿದೆ ಎನ್ನುವುದು ಕೇವಲ ತರ್ಕದ ಮಾತೇ ಹೊರತು ಅನುಭಾವದಲ್ಲಿ ಅರಿಯುವ ವಿಷಯವಲ್ಲ. ಆದರೆ ಅನುಭಾವಿಯು ಅನೇಕ ಸಾರಿ ಲಿಂಗದೊಂದಿಗೆ ಸಾಮರಸ್ಯವನ್ನು ಅನುಭವಿಸಿರುವುದರಿಂದ, ಜಾಗ್ರತಾವಸ್ಥೆಗೆ ಬಂದ ನಂತರವೂ ಅವನು ಜಗತ್ತಿನಲ್ಲಿ ಲಿಂಗವನ್ನೇ ಕಾಣತೊಡಗುತ್ತಾನೆ. ಆದುದರಿಂದ ಲಿಂಗ ಮತ್ತು ಅಂಗ ಒಂದೇ ಎಂಬುದು ಅಸತ್ಯವಲ್ಲದಿದ್ದರೆ, ಲಿಂಗ ಮತ್ತು ಜಗತ್ತೂ, ಅಂಗ ಮತ್ತು ಜಗತ್ತೂ ಒಂದೇ ಎಂಬುದೂ ಅಸತ್ಯವಲ್ಲ.
ಶಂಕರರು ಸತ್ತೆಯನ್ನು ಪಾರಮಾರ್ಥಿಕ, ವ್ಯಾವಹಾರಿಕ ಮತ್ತು ಪ್ರಾತಿಭಾಸಿಕ ಎಂದು ಮೂರು ಸ್ತರಗಳಾಗಿ ವಿಂಗಡಿಸುತ್ತಾರೆ. ಪ್ರಾತಿಭಾಸಿಕ ಸತ್ತೆಯೆಂದರೆ ಭ್ರಮಾತ್ಮಕ ಅಥವಾ ಕನಸಿನ ವಸ್ತುಗಳ ಇರುವಿಕೆ. ಸ್ವಪ್ನಾವಸ್ಥೆಯಿಂದ ಜಾಗ್ರತಾವಸ್ಥೆಗೆ ಬಂದಾಗ ಕನಸಿನ ವಸ್ತುಗಳು ಸತ್ಯವಲ್ಲ ಎಂಬ ಸತ್ಯ ಗೊತ್ತಾಗುತ್ತದೆ. ಅದೇ ರೀತಿ, ಹತ್ತಿರದಿಂದ ನೋಡಿದಾಗ ಹಾವು ಕಾಣದೆ, ಹಗ್ಗ ಎಂಬ ಸತ್ಯ ಕಾಣುತ್ತದೆ; ಬ್ರಹ್ಮಜ್ಞಾನ ಉಂಟಾದವನಿಗೆ ವ್ಯಾವಹಾರಿಕವಾಗಿ ಸತ್ಯ ಎಂದು ಕಾಣುತ್ತಿದ್ದ ಜಗತ್ತು ಇಲ್ಲವಾಗುತ್ತದೆ. ಬ್ರಹ್ಮ ಮಾತ್ರ ಪಾರಮಾರ್ಥಿಕ ಸತ್ತೆ. ಯಾವಾಗಲೂ ಇರುವಂಥಾದ್ದು. ಬ್ರಹ್ಮಜ್ಞಾನ ಅಬಾಧಿತ. ಜಗತ್ತು ನಶ್ವರ ಮಾತ್ರವಲ್ಲ, ಅದು ಮಿಥ್ಯೆ. ಅಲ್ಲಮನ ಪ್ರಕಾರ ಸತ್ತೆಗಳಲ್ಲಿ ತಾರತಮ್ಯವಿಲ್ಲ. ನಾಗಾರ್ಜುನ ಹೇಳಿದಂತೆ ಸಂಸಾರವೂ ಒಂದೆ, ನಿರ್ವಾಣವೂ ಒಂದೇ [ಬಸವಣ್ಣ ಸಹಾ “ಸ್ವಯಲಿಂಗದನುಭಾವ ತನಗೆ ದೊರೆಕೊಂಡ ಬಳಿಕ ದೇವಲೋಕವೆಂಬುದೇನೋ? ಮತ್ರ್ಯಲೋಕವೆಂಬುದೇನೋ? ಆವುದರಲ್ಲಿಯೂ ಭೇದವೇನಯ್ಯಾ” (1/947) ಎನ್ನುತ್ತಾರೆ]. ಶಂಕರ ಬ್ರಹ್ಮ-ಜಗತ್ತುಗಳ ಜೋಡಿಯಲ್ಲಿ ಬ್ರಹ್ಮ ಮಾತ್ರ ಸತ್ಯ, ಜಗತ್ತು ಮಿಥ್ಯೆ ಎಂದರೆ, ಅಲ್ಲಮ ಈ ಜೋಡಿಗಳಲ್ಲಿ ಎರಡೂ ಸತ್ಯ ಅಥವಾ ಎರಡೂ ಮಿಥ್ಯೆ ಎನ್ನುತ್ತಾರೆ. ಇದನ್ನು ಒಂದು ಉಪಮೆಯೊಂದಿಗೆ ವಿವರಿಸಬಹುದು. ಜಾಗ್ರತಾವಸ್ಥೆಯಲ್ಲಿ ನಮಗೆ ಎಚ್ಚರ ಮತ್ತು ನಿದ್ದೆಗಳ ವ್ಯತ್ಯಾಸ ಗೊತ್ತಾಗುತ್ತದೆ; ಆದರೆ ನಿದ್ದೆಯಲ್ಲಿ ಈ ವ್ಯತ್ಯಾಸ ಗೊತ್ತಾಗುವುದಿಲ್ಲ; ಆ ವ್ಯತ್ಯಾಸ ಗೊತ್ತಾದರೆ ನಮಗೆ ನಿದ್ದೆ ಬಂದಿಲ್ಲ ಎಂದರ್ಥ. ಅದೇ ರೀತಿ, ಸಂಸಾರದಲ್ಲಿರುವವನಿಗೆ ಸಂಸಾರ ಮತ್ತು ನಿರ್ವಾಣಗಳ ವ್ಯತ್ಯಾಸ ಗೊತ್ತು. ಆದರೆ ಅನುಭಾವಿಗೆ (ಮುಕ್ತನಿಗೆ) ಆ ವ್ಯತ್ಯಾಸವಿಲ್ಲವಾಗುತ್ತದೆ. ಏಕೆಂದರೆ ಎರಡಿಲ್ಲದ (ಅ-ದ್ವೈತ) ಎಂಬ ಸ್ಥಿತಿಯನ್ನು ಅವನು ತಲುಪಿದ್ದಾನೆ. ‘ನಾನು, ನೀನು (ಲಿಂಗ), ಜಗತ್ತುಗಳಿಗೆ ಭಿನ್ನತೆ ಇಲ್ಲ’ ಎಂಬ ಅನುಭಾವಿಯಾದ ಅಲ್ಲಮರ ಹೇಳಿಕೆಗೆ ಲಿಂಗನಿಂದ ಭಿನ್ನವಾದ ನಾನು/ಜಗತ್ತು ಮಿಥ್ಯೆಯಾಗಿರುವಂತೆ, ನಾನು/ಜಗತ್ತಿನಿಂದ ಭಿನ್ನವಾದ ಲಿಂಗವೂ ಮಿಥ್ಯೆ ಎಂಬ ಅರ್ಥವಿರುವುದನ್ನು ಗಮನಿಸಬೇಕು. ಎಲ್ಲವೂ ಇದೆ, ನಾವು ನೋಡುವ ನೋಟದಲ್ಲಿ ದೋಷವಿದೆ.
ಮತ್ತೆ ನಮ್ಮ ಮೂಲ ಪ್ರಶ್ನೆಗೆ ಬರೋಣ: ಅಲ್ಲಮರ ಪ್ರಕಾರ ಜಗತ್ತು ಮಾಯೆಯಲ್ಲದಿದ್ದರೆ ಅವರು ಪದೇ ಪದೇ ಬಳಸುವ ಮಾಯೆ ಎಂಬ ಪದಕ್ಕೆ ಯಾವ ಅರ್ಥವಿದೆ? ಚಾಮರಸನು ಅಲ್ಲಮ ಮಾಯೆಯನ್ನು ಗೆದ್ದವ ಎಂದು ಯಾವ ಅರ್ಥದಲ್ಲಿ ಹೇಳುತ್ತಿದ್ದಾನೆ?
(ಮುಂದುವರಿಯುವುದು)
Comments 11
Girish Mysuru
Jan 10, 2022ಲೇಖನ ಬಹಳ ಚೆನ್ನಾಗಿದೆ. ಅಲ್ಲಮರ ವಚನಗಳಲ್ಲಿ ಕಾಣುವ ಮಾಯೆ ನಿಜಕ್ಕೂ ರಹಸ್ಯಾತ್ಮಕವಾದುದು. ಅದನ್ನು ಪ್ರೊಫೆಸರ್ ಮಹಾದೇವಪ್ಪನವರು ಬಿಡಿಸುತ್ತಿರುವ ರೀತಿ ಅನೇಕ ಮಹತ್ವಪೂರ್ಣ ಮಾಹಿತಿಗಳನ್ನು ನೀಡಿದೆ. ವಂದನೆಗಳು.
Veerabhadraiah B
Jan 10, 2022ಶಂಕರಾಚಾರ್ಯರ ಮಾಯೆಯ ಪರಿಕಲ್ಪನೆಗೂ ಪ್ರಭುದೇವರ ಮಾಯಾ ಕೋಲಾಹಲಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ತತ್ವಜ್ಞಾನದ ಪರಿಭಾಷೆಯಲ್ಲಿ ಅದನ್ನು ಜಿಜ್ಞಾಸೆಗೆ ಒಳಪಡಿಸಿದ ರೀತಿ ಚೆನ್ನಾಗಿ ಮೂಡಿಬಂದಿದೆ.
Nagabhushana Baragundi
Jan 13, 2022ಶಂಕರಾಚಾರ್ಯರ ಅದ್ವೈತವನ್ನು ನನ್ನಂತವರಿಗೂ ಓದಿ ಅರ್ಥವಾಗುವಂತೆ ಬರೆದದ್ದಕ್ಕೆ ಧನ್ಯವಾದಗಳು ಸರ್. ನನ್ನ ತಂದೆಯವರ ಕೆಲವು ಸ್ನೇಹಿತರು ಅವರೊಂದಿಗೆ ಅಲ್ಲಮನನ್ನು ಕಾಡಿದ ಮಾಯೆ, ಶಂಕರರು ಹೇಳುವ ಮಾಯೆ ಒಂದೇ ಎಂದು ಮಾತನಾಡುತ್ತಿದ್ದುದನ್ನು ಕೇಳಿದ್ದೆ. ನನ್ನಲ್ಲಿಯೂ ಇಂತಹ ಸಂದೇಹಗಳಿದ್ದವು. ಮುಂದಿನ ಕಂತಿನಲ್ಲಿ ಅವು ಬಗೆಹರಿಯುತ್ತವೆಂದು ಭಾವಿಸಿದ್ದೇನೆ.
Jagannatha Patil
Jan 13, 2022ಶಂಕರರು ಸತ್ತೆಯನ್ನು ಅಂದರೆ ಸತ್ಯವನ್ನು ಮೂರು ಭಾಗವಾಗಿ ಹೇಳುತ್ತಾರೆ. ಆದರೆ ಅವೆಲ್ಲವೂ ಸತ್ಯ ಎಂದು ಕಾಣುವುದಿಲ್ಲ. ಹಾಗಾದರೆ ಅವರಿಗೆ ಸತ್ಯವನ್ನೇ ತಿಳಿಯಲಾಗಲಿಲ್ಲವೇ? ಅಥವಾ ಯಾವುದೋ ಸಂವಾದಕ್ಕೆ ಕುಳಿತಂತೆ ಸವಾಲು- ಉತ್ತರ ರೂಪದಲ್ಲಿ ಪರಮಾರ್ಥವನ್ನು ಹೇಳಿದ್ದಾರೆಯೇ?…
ಚಂದ್ರಶೇಖರ ಉಪಲಿ
Jan 13, 2022ಶಾಂಕರ ಮಾಯಾವಾದವನ್ನು ಶರಣರು ಒಪ್ಪಿಲ್ಲ. ಅಲ್ಲಮರ ಅನೇಕ ವಚನಗಳು ಗೌಪ್ಯ ಭಾಷೆಯ ಶೈಲಿಯಲ್ಲಿರುವುದರಿಂದ ಸಾಮಾನ್ಯವಾಗಿ ಬಹುತೇಕರಿಗೆ ಅರ್ಥವಾಗುವುದಿಲ್ಲ. ಆದ್ದರಿಂದ ಅವರನ್ನು ವೇದಾಂತಿಗಳು ಎನ್ನುವ ಅನೇಕರು ನಮ್ಮ ನಡುವೆ ಇದ್ದಾರೆ. ಆದರೆ ಅಂತಹ ತಿಳುವಳಿಕೆಗಳು ನಮ್ಮನ್ನೂ ಮತ್ತು ಓದುಗರನ್ನೂ ದಾರಿ ತಪ್ಪಿಸುತ್ತವೆ.
H.M. Patil
Jan 13, 2022I know this website presents quality depending content. I liked all the articles. Is there any other site which gives insights like this? Pl educate me.
ಉಮಾಮಹೇಶ್ವರ
Jan 18, 2022ಮಾಯೆ ಎಂದರೇನು? ಈ ಜಗತ್ತು, ಇಲ್ಲಿರುವ ಸರ್ವಸ್ವವೂ ಮಾಯೆಯೇ ಅಲ್ಲವೇ? ವೇದಾಂತದಲ್ಲೂ ಮಾಯೆ ಇದೆ. ಶರಣರೂ ಇದೆಲ್ಲ ನಚ್ಚಿ ಕೆಡಬೇಡ ಎಂದರಲ್ಲವೇ? ಅಂದರೆ ಮಾಯೆ ಎಂದೇ ಅರ್ಥಮಾಡಿಕೊಳ್ಳಬಹುದೇ?
ಲಿಂಗಣ್ಣ ಬಾಳೆಕಾಯಿ
Jan 23, 2022ಶಂಕರಾಚಾರ್ಯರು ಮಾಯಾವಾದವನ್ನು ಮುಂದಿಟ್ಟು ವಿತಂಡವಾದಕ್ಕೆ ಅಡಿಪಾಯಹಾಕಿದಂತೆ ಭಾಸವಾಗುತ್ತದೆ. ಆ ಶಿವನಾದರೂ ಯಾಕೆ ಮಾಯಾ ಜಗತ್ತನ್ನು ಸೃಷ್ಟಿಸಿ ಜೀವಿಗಳಿಗೆ ಇಂತಹ ದ್ರೋಹ ಮಾಡಿದ ಎಂದು ಪ್ರಶ್ನೆ ಏಳುತ್ತದೆ. ಹಾಗೆ ಮಾಯೆಯನ್ನು ಸೃಷ್ಟಿಸಿದ ಪರಶಿವನನ್ನು ಸ್ತುತಿಸಿ ಈ ಮಾಯೆಯಿಂದ ಪಾರಾಗುವ ಮಾರ್ಗವೇ ಅತ್ಯಂತ ದೋಷದಿಂದ ಕೂಡಿದ್ದು, ಇದನ್ನು ವಿದ್ವಾಂಸರಾರೂ ಪ್ರಶ್ನಿಸುವುದಿಲ್ಲವೇ?
Basavaprabhu Shimoga
Jan 23, 2022ಲಿಂಗವೇ ತಾನಾಗುವ ಅನುಭಾವಿಗೆ ಯಾವುದೂ ಮಾಯೆಯಲ್ಲ. ಜಗತ್ತು ಆತನೊಳಗೇ ಇರುವುದು. ಮಾಯೆಯ ಕಲ್ಪನೆಯನ್ನೇ ಶರಣರು ಬುಡಬಹಿತ ಕಿತ್ತೊಗೆದರು ಎನ್ನುವುದನ್ನು ಮಾರ್ಮಿಕವಾಗಿ ಲೇಖನದಲ್ಲಿ ವಿಸ್ತರಿಸಲಾಗಿದೆ.
Veerabasappa Bagaluru
Jan 26, 2022ಸಾಂಖ್ಯರು ಪ್ರಕೃತಿಯನ್ನು ಒಂದು ಸ್ವತಂತ್ರ ಅಸ್ತಿತ್ವವುಳ್ಳ ಸತ್ತೆ ಎಂದು ಪರಿಭಾವಿಸಿದರೆ, ಶಂಕರರು ಅದು ಸ್ವತಂತ್ರ ಅಸ್ತಿತ್ವವಿಲ್ಲದ ವ್ಯಾವಹಾರಿಕ ಸತ್ತೆ ಎಂದು ಪರಿಭಾವಿಸುತ್ತಾರೆ.- ಸಾಂಖ್ಯರು ಪ್ರಕೃತಿ ಆರಾಧಕರಾಗಿದ್ದರೆಂದು ಕೇಳಿದ್ದೇನೆ. ನಮ್ಮನ್ನು ಸಾಕಿ ಸಲಹುವ ಪ್ರಕೃತಿ ನಿಜವಲ್ಲದೆ ಮಾಯೆ ಎನ್ನುವುದು ಅದನ್ನು ಸಿದ್ದಾಂತವಾಗಿ ರೂಪಿಸುವುದು ಜನರನ್ನು ದಿಕ್ಕು ತಪ್ಪಿಸುವ ಹಾದಿಯಲ್ಲವೇ ಸರ್?
Dinesh P
Feb 1, 2022ನಿಜ ಸರ್, ಶಾಂಕರರ ಮಾಯಾವಾದಕ್ಕೂ, ಅಲ್ಲಮಪ್ರಭುಗಳ ಮಾಯೆಯ ಪರಿಕಲ್ಪನೆಗೂ ಏನೇನೂ ಸಂಬಂಧವೇ ಇಲ್ಲ.