ಅಮುಗೆ ರಾಯಮ್ಮ- ಜೀವನ ವೃತ್ತಾಂತ
ಶಿವಶರಣರ ಜನನ ವೃತ್ತಾಂತಗಳ ಬಗೆಗೆ ಹೆಚ್ಚಿನ ವಿವರಗಳು ಸಿಗುವುದಿಲ್ಲ, ಖಚಿತ ಮಾಹಿತಿಗಳು ದೊರೆಯುವುದಿಲ್ಲ. ಆದರೂ ದೊರೆತಿರುವ ಕೆಲವು ಮಾಹಿತಿಗಳನ್ನು ಸಂಗ್ರಹಿಸಿ ಅಮುಗೆ ರಾಯಮ್ಮನವರ ಜನನ ವೃತ್ತಾಂತವನ್ನು ಇಲ್ಲಿ ಸಂಕ್ಷಿಪ್ತವಾಗಿ ಹೇಳಲಾಗಿದೆ. ಅಮುಗೆ ರಾಯಮ್ಮನವರ ಜನನ ವೃತ್ತಾಂತದ ಸಂಗತಿಗಳನ್ನು ಕೆಲವು ಆಕರಗಳಿಂದ ಪಡೆದುಕೊಂಡಿದ್ದೇನೆ. ಅವುಗಳಲ್ಲಿ ಶಾಸನಗಳು, ನಡುಗನ್ನಡ ಕಾವ್ಯ ಕೃತಿಗಳು, ಜನಪದ ತ್ರಿಪದಿಗಳು ಮುಖ್ಯವಾಗಿವೆ.
ರಾಯಮ್ಮ ಎಂಬ ಹೆಸರಿನ ಇಬ್ಬರು ಶರಣೆಯರಿದ್ದಾರೆ. ರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ರಾಯಮ್ಮ ಒಬ್ಬರಾದರೆ, ಅಮುಗೆ ದೇವಯ್ಯಗಳ ಪುಣ್ಯಸ್ತ್ರೀ ರಾಯಮ್ಮ ಮತ್ತೊಬ್ಬರು. ‘ಅಮುಗೆ ದೇವಯ್ಯ ಸಾಂಗತ್ಯ’- ಎಂಬ ಕೃತಿಯಲ್ಲಿ ಈಕೆ ಅಮುಗೆ ದೇವಯ್ಯನ ಪತ್ನಿ ಎಂದು ಸ್ಪಷ್ಟಪಡಿಸಲಾಗಿದೆ. ರಾಯಸದ ಮಂಚಣ್ಣನ ಪುಣ್ಯಸ್ತ್ರೀಯಾಗಿದ್ದ ರಾಯಮ್ಮ ಒಂದು ವಚನ ರಚಿಸಿದ್ದಾರೆ. ಅಮುಗೆ ದೇವಯ್ಯಗಳ ಪುಣ್ಯಸ್ತ್ರೀರಾಯಮ್ಮನವರ 116 ವಚನಗಳು ಪ್ರಕಟವಾಗಿವೆ. ಅಮುಗೆ ದೇವಯ್ಯನವರ ಪುಣ್ಯಸ್ತ್ರೀ ಬಗೆಗೆ ನಾನಿಲ್ಲಿ ಬರೆಯುತ್ತಿರುವುದರಿಂದ ಅಮುಗೆ ದೇವಯ್ಯನವರ ಬಗೆಗೂ ಪ್ರಸ್ತಾಪಿಸಬೇಕಾಗುತ್ತದೆ. ಶಾಸನಗಳಲ್ಲಿ ಅಮುಗೆ ದೇವಯ್ಯನವರ ಬಗೆಗೆ ಉಲ್ಲೇಖಿಸಲಾಗಿದೆ.
ದೇವಗಿರಿಯ ಯಾದವರ ಅರಸ ಸಿಂಘಣನು ಪುಳಜೆ ಪ್ರದೇಶವನ್ನು ಆಳುತ್ತಿದ್ದನೆಂಬ ವಿಷಯವು ಚರಿತ್ರೆಯಿಂದ ತಿಳಿದುಬರುತ್ತದೆ. ಅರಸನು ಅಮುಗೆಯ್ಯನ ಸತ್ಯನಿಷ್ಠೆಯನ್ನು ಕೇಳಿ, ಆತನನ್ನು ಕಾಣಲು ಬಯಸಿ, ಆತ ವಾಸವಾಗಿದ್ದ ಪುಳಜೆ ಗ್ರಾಮಕ್ಕೆ ಬರುತ್ತಾನೆ. ಅಲ್ಲಿ ಅಮುಗೆಯ್ಯನ ಸಾಧನೆಯನ್ನು ಕಂಡು ಸಂತೋಷಗೊಳ್ಳುತ್ತಾನೆ. ಅಮುಗೆಯ್ಯನವರಿಗೆ ‘ಇಥ್ಥೆ’ ಎಂಬ ಗ್ರಾಮವನ್ನು ಉಂಬಳಿಯಾಗಿ ಕೊಟ್ಟು ಅಮುಗೆಯ್ಯನು ಸನ್ಮಾನಿಸುತ್ತಾನೆ. ಪುಳಜೆಯ ಪಶ್ಚಿಮಕ್ಕೆ ಮೂರು ಕಿಲೋಮೀಟರ್ ‘ಇಥ್ಥೆ’ ಎಂಬ ಗ್ರಾಮವಿರುವುದು ಪುಳಜೆಯ ಶಾಸನದಿಂದ ತಿಳಿದುಬರುತ್ತದೆ. ಪುಳಜೆ ಗ್ರಾಮವು ಪಂಢರಪುರ ತಾಲೂಕಿನ ಸೊಲ್ಲಾಪುರ ಜಿಲ್ಲೆಯಿದೆ. ಸೊಲ್ಲಾಪುರದಿಂದ 42ಕಿ.ಮೀ ದೂರದಲ್ಲಿದೆ. ಈ ಶಾಸನದ ಕಾಲ ಕ್ರಿ.ಶ 1199 ಎಂದು ತಿಳಿದುಬರುತ್ತದೆ.
“ಶ್ರೀ ಸ್ವಯಂಭು ಸಿದ್ಧಸೋಮನಾಥ ದೇವರ್ಗೆಂದಾಯಿಥ್ಥೆಯವನು ಸರ್ವನಮಶಯವಾಗಿ ಅಮ್ಮುಗಿ ದೇವರಸರ್ಗೆ ಅಕರ ಪರಿಹಾರವಾಗಿ ಧಾರಾಪೂರ್ವಕಂ ಮಾಡಿಕೊಟ್ಟರು…” (ಪುಳಜೆಯ ಶಾಸನ, ಕ್ರಿ.ಶ. 1199). ಈ ಶಾಸನದ ಕಾಲವನ್ನು ಆಧಾರವಾಗಿಟ್ಟುಕೊಂಡು, ಅಮುಗೆ ರಾಯಮ್ಮ- ಅಮುಗೆ ದೇವಯ್ಯ, ಈ ದಂಪತಿ ಕಲ್ಯಾಣ ಕ್ರಾಂತಿಯ ನಂತರವೂ ಬದುಕಿದ್ದರೆಂದು ಡಾ. ಕಲಬುರ್ಗಿಯವರು ಹೇಳಿದ್ದಾರೆ. (ನೋಡಿ- ಶಾಸನಗಳಲ್ಲಿ ಶಿವಶರಣರು, ಪು-99, ಡಾ.ಎಂ.ಎಂ.ಕಲಬುರ್ಗಿ) ಈ ದಂಪತಿಗಳು ಕಲ್ಯಾಣ ಕ್ರಾಂತಿಯ ನಂತರ ಮೂವತ್ತು ವರ್ಷಗಳವರೆಗೆ ಜೀವಿಸಿದ್ದಿರಬಹುದೆಂದು ಫ.ಗು. ಹಳಕಟ್ಟಿಯವರು ಹೇಳಿದ್ದಾರೆ. (ನೋಡಿ- ‘ಶಿವಶರಣ ಚರಿತೆ’) ಪುಳಜೆ ಗ್ರಾಮಕ್ಕೆ ಹೂಳಜೆ ಎಂದು ಜನಪದ ಕಾವ್ಯದಲ್ಲಿ ಕರೆಯಲಾಗಿದೆ. ಕಲ್ಯಾಣ ಕ್ರಾಂತಿಯ ನಂತರ ಈ ಶರಣ ದಂಪತಿ ಪುಳಜೆ ಗ್ರಾಮಕ್ಕೆ ಬಂದು ನೆಲೆಸಿ ಇಲ್ಲಿ ಶರಣರ ವಿಚಾರಗಳನ್ನು ಪ್ರಚಾರ ಮಾಡುತ್ತಿದ್ದರೆಂದು ಶಾಸನವೊಂದು ಹೇಳುತ್ತದೆ.
ನಡುಗನ್ನಡ ಕಾವ್ಯ ಕೃತಿಗಳಲ್ಲಿಯೂ ಇವರ ಬಗೆಗೆ ಉಲ್ಲೇಖಗಳಿವೆ. ‘ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ’, ‘ಸಿದ್ಧರಾಮ ಚಾರಿತ್ರ್ಯ’, ‘ರಾಘವಾಂಕ ಚರಿತ್ರೆ’, ‘ಅಮುಗಿದೇವಯ್ಯಗಳ ಸಾಂಗತ್ಯ’ ಕೃತಿಗಳಲ್ಲಿ ಅಮುಗೆ ರಾಯಮ್ಮನವರ ಬಗೆಗೆ ಹೀಗೆ ಹೇಳಲಾಗಿದೆ-
“ಸೊನ್ನಲಿಗೆಯೆಂಬ ಪುರವಾಪುರದೊಳೊಪ್ಪುವಂ
ಸನ್ನುತ ಸದಾನಂದ ಶಿವಸುಖವನಪ್ಪುವಂ | ಅಮುಗೆ
ದೇವಯ್ಯಗಳೆಂಬ ಸತ್ಯ ಸಮ್ಯಜ್ಞಾ ನಿ
ತನಗೆ ಸತಿ ವರದಾನಿ ಎಂಬ ಪೆಸರಾಗಿರಲು” -(ಪು149)
ಹೀಗೆ ರಾಯಮ್ಮನವರಿಗೆ ‘ವರದಾನಿ’ ಎಂಬ ಹೆಸರಿದ್ದಿತೆಂದೂ ಈ ಕೃತಿಯಿಂದ ಸ್ಷಷ್ಟವಾಗುತ್ತದೆ. ಚಿಕ್ಕನಂಜೇಶನ ‘ರಾಘವಾಂಕ ಚರಿತ್ರೆ’ಯಲ್ಲಿ ಸಿದ್ಧರಾಮನ ಕಥಾನಕವಿದೆ. ಇದೇ ಕಥಾನಕವು ಜನಪದ ಕಾವ್ಯದಲ್ಲಿಯೂ ಇದೆ. ವಚನಕಾರರಾದ ಶಿವಯೋಗಿ ಸಿದ್ಧರಾಮನವರು ಮಲ್ಲಿನಾಥನ ಆರಾಧನೆಗಾಗಿ ಊರವರಿಗೆಲ್ಲಾ ಊಟ ಹಾಕಬೇಕೆಂದು ಭತ್ತವನ್ನು ಕುಟ್ಟಿ ಕೊಡಲು ಊರಲ್ಲೆಲ್ಲಾ ಕೊಟ್ಟಣ ಹಾಕಿಸುತ್ತಾರೆ. ಅಮುಗೆಯ್ಯನವರ ಮನೆಗೂ ಭತ್ತ ಕಳಿಸುತ್ತಾರೆ. ಇಷ್ಠಲಿಂಗ ನಿಷ್ಠೆಯುಳ್ಳವರಾಗಿದ್ದ ಈ ದಂಪತಿ ಅಂಗದ ಮೇಲೆ ಲಿಂಗವಿಲ್ಲದ ಸಿದ್ಧರಾಮನವರನ್ನು ಭವಿಯೆಂದು ಕರೆದು, ಆತನು ಕೊಟ್ಟ ಭತ್ತವನ್ನು ಕುಟ್ಟಿ ಕೊಡಲು ಒಪ್ಪದೆ ಮರಳಿ ಕಳಿಸುತ್ತಾರೆ. ಆಗ ಸಿದ್ಧರಾಮನವರಿಗೆ ಸಿಟ್ಟು ಬರುತ್ತದೆ. ಅವರು ಊರು ಬಿಟ್ಟು ಹೋಗಬೇಕೆಂದು ಆಜ್ಞಾಪಿಸುತ್ತಾರೆ. ತಾವು ಸೊನ್ನಲಿಗೆಯಲ್ಲಿರುವುದು ಭಾವಿಸಿ ದಂಪತಿಗಳು ಸೊನ್ನಲಿಗೆಯನ್ನು ಬಿಟ್ಟು ಕಲ್ಯಾಣಕ್ಕೆ ಬರುತ್ತಾರೆ. ಇಲ್ಲಿ ಪವಾಡ ಕಥೆಯೊಂದು ಬರುತ್ತದೆ. ಸ್ವತಃ ಕಪಿಲ ಸಿದ್ಧ ಮಲ್ಲಯ್ಯನೇ ಈ ದಂಪತಿಗಳ ಸಾಮಾನುಗಳ ಹೊರೆ ಹೊತ್ತು ಒಯ್ಯುತ್ತಾನೆ. ಆಗ ಸಿದ್ಧರಾಮನವರು ಈ ದಂಪತಿಗಳನ್ನು ಮತ್ತೆ ಸೊನ್ನಲಿಗೆಗೆ ಬರಲು ವಿನಂತಿಸುತ್ತಾರೆ. ಆದರೆ ಅವರು ಸಿದ್ಧರಾಮನವರ ಕೋರಿಕೆ ಮನ್ನಿಸದೆ ಕಲ್ಯಾಣಕ್ಕೆ ಹೋಗುತ್ತಾರೆ. ಈ ಕಥಾನಕವು ಶಿವಲಿಂಗ ಕವಿಯ ‘ಅಮುಗಿದೇವಯ್ಯಗಳ ಸಾಂಗತ್ಯ’ ಮತ್ತು ‘ಜನಪದ ಕಾವ್ಯ’ದಲ್ಲಿ ಪ್ರಕಟವಾಗಿದೆ. ‘ನಿಷ್ಠಾ ಮಹೇಶ್ವರನೆನಿಪ ಅಮುಗಿದೇವಯ್ಯಗಳಿಂದ ಪ್ರಭುದೇವರೆಂಬ ಅನಾದಿ ಜಂಗಮವ ಕಂಡೆ…” ಎಂದು ಹೇಳಿರುವ ಸಿದ್ಧರಾಮಯ್ಯನವರ ವಚನವನ್ನು ಪರಿಶೀಲಿಸಿದಾಗ, ಅಮುಗಿ ದೇವಯ್ಯನವರ ನಿಷ್ಠಾಭಕ್ತಿ ಸ್ಪಷ್ಟವಾಗುತ್ತದೆ. ಅಮುಗೆ ರಾಯಮ್ಮನಿಗೆ `ವರದಾನಿಯಮ್ಮ’ ಎಂಬ ಇನ್ನೊಂದು ಹೆಸರು ಇತ್ತೆಂದು ‘ನೇಗಿಯ ಅಮುಗಯ್ಯ’ ಎಂಬ ಜನಪದ ಕಾವ್ಯದಿಂದ ತಿಳಿದು ಬರುತ್ತದೆ. ಶಿವಲಿಂಗ ಕವಿಯ ‘ಅಮುಗೆ ದೇವಯ್ಯಗಳ ಸಾಂಗತ್ಯ’ ಕೃತಿಯಲ್ಲಿ ಅಮುಗೆ ದೇವಯ್ಯನವರ ಮಡದಿ ‘ರುದ್ರಾಣಿ’ ಎಂದು ಉಲ್ಲೇಖಿಸಲಾಗಿದೆ. ರುದ್ರಾಣಿಯಮ್ಮನೇ ರಾಯಮ್ಮನವರಾಗಿದ್ದರೆಂದೂ, ಆಕೆಯನ್ನೇ ವರದಾನಿಯಮ್ಮನೆಂದು ಕರೆಯುತ್ತಿದ್ದರೆಂದು ಸ್ಪಷ್ಟವಾಗುತ್ತದೆ. ರಾಯಮ್ಮ ಅಮುಗೆ ದೇವಯ್ಯನವರ ಹೆಂಡತಿಯೆಂದು ಸಿದ್ಧರಾಮ ಚಾರಿತ್ರದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ರಾಯಮ್ಮನವರ ಕಾಲವನ್ನು ಕ್ರಿ.ಶ 1160 ಎಂದು ಈ ಕಾವ್ಯ ಕೃತಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗೆ ಶಾಸನಗಳಿಂದ, ನಡುಗನ್ನಡ ಕವಿಗಳ ಕಾವ್ಯ ಕೃತಿಗಳಿಂದ, ಜನಪದ ಕಾವ್ಯದಿಂದ ಅಮುಗೆ ರಾಯಮ್ಮನವರ ಜನನ ವೃತ್ತಾಂತವನ್ನು ಕಟ್ಟಿಕೊಳ್ಳಬಹುದಾಗಿದೆ. ಇತ್ತೀಚೆಗೆ ಪ್ರಕಟವಾಗಿರುವ ಡಾ. ವಿಜಯಶ್ರೀ ಸಬರದ ಅವರ ‘ಶಿವಶರಣೆಯರ ಸಾಹಿತ್ಯ ಚರಿತ್ರೆ’ಯಲ್ಲಿ ಪ್ರಕಟವಾಗಿರುವ ರಾಯಮ್ಮನವರ ಇತಿವೃತ್ತವು ಮಹತ್ವದ್ದಾಗಿದೆ. ಇವೆಲ್ಲ ಆಕರಗಳನ್ನು ಗಮನದಲ್ಲಿಟ್ಟುಕೊಂಡು ರಾಯಮ್ಮನವರ ಜೀವನ ಚರಿತ್ರೆಯನ್ನು ಇಲ್ಲಿ ಕಟ್ಟಿ ಕೊಡಲಾಗಿದೆ.
ಸೊನ್ನಲಿಗೆಯಿಂದ, ಕಲ್ಯಾಣಕ್ಕೆ ಹೋದ ನಂತರ ಈ ದಂಪತಿ ಕಲ್ಯಾಣದಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಶಿವಪುರದ ಕೆರೆಯ ದಂಡೆಯ ಮೇಲಿರುವ ಶಿವಲಿಂಗ ದೇವಸ್ಥಾನದಲ್ಲಿ ಉಳಿದುಕೊಂಡಿದ್ದರೆಂದು ತಿಳಿದುಬರುತ್ತದೆ. ಅಲ್ಲಿಯೇ ಇದ್ದು ಅವರು ನೇಯ್ಗೆಯ ಕಾಯಕ ಮಾಡುತ್ತಿದ್ದರೆಂಬುದು ಗೊತ್ತಾಗುತ್ತದೆ. ರಾಯಮ್ಮ, ತನ್ನ ಪತಿ ಅಮುಗೆ ದೇವಯ್ಯನವರ ಜತೆಗೂಡಿ ನೇಯ್ಗೆ ಕಾಯಕ ಮಾಡುತ್ತಿದ್ದ ವಿಷಯ ತಿಳಿದುಬರುತ್ತದೆ. ರಾಯಮ್ಮ ಇಷ್ಟಲಿಂಗ ನಿಷ್ಟೆಯ ಶರಣೆಯಾಗಿದ್ದರು. ಯಾವುದೇ ಆಸೆ- ಆಮಿಶಗಳಿಗೆ ಒಳಗಾಗದೇ ಶರಣ ಸಿದ್ದಾಂತಕ್ಕೆ ಬದ್ಧರಾಗಿ ಬದುಕುತ್ತಿದ್ದರು. ಇವರ 116 ವಚನಗಳು ಪ್ರಕಟವಾಗಿವೆ. ಇವರ ವಚನಾಂಕಿತ ‘ಅಮುಗೇಶ್ವರ ಲಿಂಗ’. ಹೆಚ್ಚಿನ ವಚನಗಳನ್ನು ರಚಿಸಿರುವ ಕೆಲವೇ ಕೆಲವು ವಚನಕಾರ್ತಿಯರಲ್ಲಿ ಅಮುಗೆ ರಾಯಮ್ಮ ಕೂಡ ಒಬ್ಬರು.
ಜನಪದ ಕಾವ್ಯದಲ್ಲಿ ರಾಯಮ್ಮ:
ಡಾ. ಬಿ.ಎಸ್. ಗದ್ದಗಿಮಠ ಅವರ ‘ಕನ್ನಡ ಜಾನಪದ ಗೀತೆಗಳು’; ಮಹಾಪ್ರಬಂಧದ ಅನುಬಂಧದಲ್ಲಿ ‘ನೇಗಿಯ ಅಮುಗಯ್ಯ’; ಎಂಬ ಶಿರೋನಾಮೆಯಲ್ಲಿ 108 ತ್ರಿಪದಿಗಳು ಪ್ರಕಟವಾಗಿವೆ. ಈ ತ್ರಿಪದಿಗಳನ್ನು ಅಧ್ಯಯನ ಮಾಡಿದಾಗ, ರಾಯಮ್ಮನವರ ಮಹಾವ್ಯಕ್ತಿತ್ವ ಗೊತ್ತಾಗುತ್ತದೆ. ಜನಪದ ಕವಿಗಳು ರಾಯಮ್ಮ ಮತ್ತು ಅಮುಗೆಯ್ಯನವರ ಕಥಾನಕವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಈ ದಂಪತಿ ಸಿದ್ಧರಾಮನೊಂದಿಗೆ ಮುಖಾಮುಖಿಯಾದ ಪ್ರಸಂಗವು ಈ ಜನಪದ ಕಾವ್ಯದಲ್ಲಿ ವಿವರವಾಗಿ ಬಂದಿದೆ.
“ನೇಗಿಯದೆ ಕಾಯಕವ ಚಾಗಿ ಅಮುಗನು ಮಾಡಿ
ಯೋಗ ಹೊಂದಿದನು ಹೊಳಜೆಯ |ಜನ
ಭಜಿಸಿ ತೂಗಿ ದಾಸೋಹ ತೇರೆಳೆದು (ಪು-295)
ಪ್ರಾರಂಭದಲ್ಲಿ ಬರುವ ಈ ಸೂಚಕ ಪದ್ಯವು ನೇಗಿ ಕಾಯಕದ ಮಹತ್ವವನ್ನು ಹೇಳುತ್ತ, ದಾಸೋಹದ ತೇರನೆಳೆದರೆಂಬ ಅದ್ಭುತವಾದ ಕಾವ್ಯಪ್ರತಿಮೆಯೊಂದನ್ನು ಕಟ್ಟಿಕೊಡುತ್ತದೆ. ಅಮುಗೆ ದೇವಯ್ಯ ಮಹಾ ವ್ಯಕ್ತಿತ್ವವನ್ನು ಹೊಂದಿದ್ದರು, ತ್ಯಾಗಜೀವಿಯಾಗಿದ್ದರು, ಮಹಾಶರಣರಾಗಿದ್ದರೆಂಬುದು ಈ ತ್ರಿಪದಿಯಿಂದ ತಿಳಿದು ಬರುತ್ತದೆ. ಅಮುಗೆಯ್ಯನವರಿಗೆ ತಕ್ಕ ಸತಿಯಾಗಿ ರಾಯಮ್ಮ ಇದ್ದರೆಂದು ಮುಂದಿನ ತ್ರಿಪದಿಗಳಲ್ಲಿ ವಿವರಿಸಲಾಗಿದೆ:
“ಜೋಡು ಹಣಗೆಯು ಕಾಣೊ, ಜೋಡು ಕಣ್ಣಿನ ನೋಟ ಜೋಡಾಗಿ
ಮಡದಿ ಕಾರ್ಯಕೆ | ಕೈಗೂಡೆ
ಮೂಡಿ ಶಿವಭಕ್ತಿ ಹೂಬಿಟ್ಟು” (ಪು-296)
ಎರಡೂ ಕಣ್ಣುಗಳಿಂದ ನೋಡಿದಾಗಲೇ ಪೂರ್ಣ ದೃಷ್ಟಿ ಸಾಧ್ಯವಾಗುವಂತೆ, ಅಮುಗೆ ದಂಪತಿಗಳ ಭಕ್ತಿ ಪರಿಪೂರ್ಣವಾಗಿತ್ತು. ಶಿವಭಕ್ತರಾಗಿ, ಇಷ್ಟಲಿಂಗ ಪೂಜಾ ನಿಷ್ಠರಾಗಿ ಬಾಳುತ್ತಿದ್ದರು. ಈ ಶರಣರ ಮನೆಯು ಮಹಾಮನೆಯಾಗಿತ್ತು. ಅಲ್ಲಿ ನಿತ್ಯ ಶಿವಭಕ್ತಿಯ ಹೂಗಳು ಅರಳುತ್ತಿದ್ದುವೆಂದು ಜನಪದ ಕವಿ ವರ್ಣಿಸುತ್ತಾನೆ:
“ಮಗ್ಗದೊಳಗಿನ ಹಲಗಿ ಸಗ್ಗದೊಳಗಿನ ನಂದಿ
ಜಗ್ಗಿನೇದಿಟ್ಟ ಹೊಸಮತವು |ಜಗದೊಳಗೆ
ಸುಗ್ಗಿಯಾ ಜೇನು ಪರಮತಕೆ- (ಪು-296)
ಈ ತ್ರಿಪದಿಯಲ್ಲಿ ನೇಗೆ ಕಾಯಕದ ಮೂಲಕ, ಶಿವಶರಣರ ಹೊಸಮತದ ಪರಿಚಯವಾಗುತ್ತದೆ. ಮಗ್ಗದೊಳಗಿನ ಹಲಗಿ ತುಂಬಾ ಮಹತ್ವದ್ದಾಗಿದೆ. ನೂಲನ್ನು ತೆಗೆಯಲು ಈ ಹಲಗಿ ಬೇಕೇಬೇಕು. ಮಗ್ಗದೊಳಗಿನ ಹಲಗಿಯನ್ನು ಸ್ವರ್ಗದೊಳಗಿನ ನಂದಿಗೆ ಹೋಲಿಸಲಾಗಿದೆ. ನೇಯ್ಗೆಯ ಪ್ರತಿಮೆಯ ಮೂಲಕ ಇಲ್ಲಿ ಶಿವಮತದ ಶರಣ ಸಿದ್ಧಾಂತವು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಶರಣ ಪಥವು ಶ್ರೇಷ್ಠ ಮತವಾಗಿದ್ದು ಜಗದಲ್ಲಿ ಸುಗ್ಗಿಯಾ ಜೇನು ಬಿಟ್ಟಿದೆಯೆಂದು ಹೇಳಿರುವಲ್ಲಿ ಕಾವ್ಯದ ಅನನ್ಯತೆಯನ್ನು ಕಾಣಬಹುದಾಗಿದೆ.
ದಂಪತಿಗಳಿಬ್ಬರೂ ಸತ್ಯಶುದ್ಧ ಕಾಯಕ ಮಾಡುತ್ತ, ಸೊನ್ನಲಿಗೆಯ ಪೇಟೆಯಲ್ಲಿ ನೇದ ನೂಲನ್ನು ಮಾರುತ್ತ, ದಾಸೋಹದಲ್ಲಿ ಭಾಗವಹಿಸುತ್ತಿದ್ದುದನ್ನು ಮುಂದಿನ ತ್ರಿಪದಿಗಳಲ್ಲಿ ಹೇಳಲಾಗಿದೆ. ಹೀಗೆ ಆದರ್ಶದ ಬದುಕನ್ನು ಬದುಕುತ್ತಿದ್ದ ಈ ದಂಪತಿಗೆ ಊರನ್ನೇ ಬಿಟ್ಟು ಹೋಗಬೇಕಾದ ಕಹಿ ಘಟನೆಯೊಂದು ನಡೆಯುತ್ತದೆ. ಸೊನ್ನಲಿಗೆಯ ಮುಖಂಡರಾಗಿದ್ದ ಸಿದ್ಧರಾಮರು, ಶ್ರೀಶೈಲದ ಮಲ್ಲಯ್ಯನನ್ನು ಮೆಚ್ಚಿಸಲು ಹಬ್ಬ ಮಾಡಬೇಕೆಂದು ನಿಶ್ಚಯಿಸಿ, ಭತ್ತ ಕುಟ್ಟಿ ಕೊಡಬೇಕೆಂದು ಊರಿನ ಜನರಿಗೆಲ್ಲಾ ತಿಳಿಸುತ್ತಾರೆ. ಆಗ ಕುಟ್ಟುವ, ಬೀಸುವ ಕ್ರಿಯೆಗಳು ಭರದಿಂದ ಸಾಗುತ್ತವೆ. ಸಿದ್ಧರಾಮರು ಕಳಿಸಿದ ಭತ್ತವು ಈ ದಂಪತಿಯ ಮನೆಗೆ ಬಂದಾಗ ಇವರು ಭತ್ತ ಕುಟ್ಟಿಕೊಡಲು ನಿರಾಕರಿಸುತ್ತಾರೆ. ಲಿಂಗವಿಲ್ಲದ ಸಿದ್ಧರಾಮ ಭವಿಯೆಂದು ಹೇಳಿದ ಈ ದಂಪತಿ, ಕೊಟ್ಟಣದ ಕಾರ್ಯವನ್ನು ನಿರಾಕರಿಸುತ್ತಾರೆ. ಆಗ ಸಿಟ್ಟಿಗೆದ್ದ ಸಿದ್ಧರಾಮರು ಹುಟ್ಟಲಿಂಗ, ಕೊಟ್ಟಲಿಂಗ, ಇಷ್ಟಲಿಂಗ ಬೇರೆಬೇರೆಯಲ್ಲ, ನನ್ನ ಮೈತುಂಬಾ ಲಿಂಗವಿದೆಯೆಂದು ಹೇಳುತ್ತಾ, ತನ್ನನ್ನು ಭವಿಯೆಂದು ಕರೆದ ದಂಪತಿಯ ಮೇಲೆ ಸಿಟ್ಟಿಗೇಳುತ್ತ, ಹೀಗೆ ಹೇಳುತ್ತಾರೆ:
“ಹುಟ್ಟ ಲಿಂಗಿಗೆ ಏಕೆ ಕಟ್ಟಿದಾ ಲಿಂಗೆಂದು
ಬಟ್ಟಿಟ್ಟು ಅಮುಗ ಭವಿಯೆಂದು |ಕರೆದೆನಗೆ
ಬಿಟ್ಟು ಹೋಗುವ ನಮ್ಮೂರ” (ಪುಟ -298)
ಸೊನ್ನಲಿಗೆಯನ್ನು ಬಿಟ್ಟು ಹೋಗಬೇಕೆಂದು ಸಿದ್ಧರಾಮರು ಆದೇಶ ಕೊಟ್ಟಾಗ, ಅಮುಗೆಯ್ಯನವರು ಹೆಂಡತಿಗೆ ವಿಷಯ ತಿಳಿಸುತ್ತಾರೆ. ಇಂತಹ ಭವಿಗಳಿರುವ ಊರಲ್ಲಿರುವುದು ಬೇಡವೆಂದು ರಾಯಮ್ಮ ಹೇಳುತ್ತಾರೆ. ಆಗ ಸಂಜೆಯೊಳಗಾಗಿ ಊರು ಬಿಡಬೇಕೆಂದು ನಿಶ್ಚಯಿಸಿ, ತಮ್ಮ ಮನೆಯ ಸಾಮಾನು-ಸರಂಜಾಮಗಳನ್ನೆಲ್ಲ ಮೂರು ಗಂಟುಗಳಲ್ಲಿ ಕಟ್ಟುತ್ತಾರೆ. ದಂಪತಿಗಳಿಬ್ಬರು ಒಂದೊಂದು ಗಂಟನ್ನು ಹೊತ್ತುಕೊಂಡು ಹೋಗುತ್ತಾರೆ. ಇವರ ನಿಷ್ಠಾಭಕ್ತಿಗೆ ಮೆಚ್ಚಿದ ಮುಕ್ಕಣ್ಣನೇ ಅಲ್ಲಿಗೆ ಬಂದು ಮೂರನೇ ಗಂಟನ್ನು ಹೊತ್ತುಕೊಂಡು ಹೋಗುತ್ತಾನೆ. ಈ ಶರಣ ದಂಪತಿ ಕಲ್ಯಾಣದ ಹತ್ತಿರವಿರುವ ಶಿವಪುರದಲ್ಲಿ ವಾಸಿಸುತ್ತಾರೆ. ಇತ್ತ ಸಿದ್ಧರಾಮರು ಜನರನ್ನೆಲ್ಲಾ ಕೂಡಿಸಿ ಅಭಿಷೇಕ ಮಾಡುವಾಗ ಲಿಂಗವು ತನಗೆ ನೆತ್ತಿ ನೋವೆಂದು ಹೇಳುತ್ತದೆ. ನಿನ್ನೆ ಆ ದಂಪತಿಯ ಗಂಟು ಹೊತ್ತುಕೊಂಡಿದ್ದರಿಂದ ತನ್ನ ನೆತ್ತಿನೊಯ್ಯುತ್ತಿದೆಯೆಂದು ಲಿಂಗ ಹೇಳುತ್ತದೆ. ಆಗ ಸಿದ್ಧರಾಮನವರಿಗೆ ತನ್ನ ತಪ್ಪಿನ ಅರಿವಾಗುತ್ತದೆ.
“ತಪ್ಪು ಮಾಡಿದೆ ದೇವ ಒಪ್ಪಿದೆನು ನಿನ್ಮುಂದೆ
ಅಪ್ಪಿ ಕ್ಷಮಿಸೆನ್ನ ಅಮುಗನಿಗೆ |ಕರೆತರುವೆ
ಉಪ್ಪರಗಿ ಶರಣ ಶಿವಮತಕೆ” (ಪು-300)
ತಾನು ತಪ್ಪು ಮಾಡಿದೆನೆಂದು ಪಶ್ಚಾತ್ತಾಪ ಪಟ್ಟ ಸಿದ್ಧರಾಮರು ಈ ದಂಪತಿಯನ್ನು ಹುಡುಕುತ್ತಾ ಶಿವಪುರಕ್ಕೆ ಬಂದು ಅಮುಗೆ ದೇವಯ್ಯನವರನ್ನು ಕಂಡು ಹೀಗೆ ಹೇಳುತ್ತಾರೆ:
“ನನ್ನಿಂದ ತಪ್ಪಾಯ್ತು ಸನ್ನುತದ ಶಿವಶರಣ
ಹೊನ್ನಗಡಲುಕ್ಕಿ ಇಳಿಯದುದೆ |ಜಗದೊಳಗೆ
ತನ್ನೆದೆಯ ಉಬ್ಬು ಕುಗ್ಗದುದೆ. (ಪು-300)
ಎನ್ನುತ್ತಾ ಶರಣ ಅಮುಗೆಯ್ಯನವರ ಅಡಿಗೆ ಎರಗುತ್ತಾರೆ. ನೀವು ಮರಳಿ ಬರಬೇಕು. ನೀವಿಲ್ಲದೆ ಹಬ್ಬ ನಡೆದಿಲ್ಲವೆಂದು ಕೇಳಿಕೊಳ್ಳುತ್ತಾರೆ. ಆಗ ಅಮುಗೆ ದೇವಯ್ಯ ಮತ್ತು ರಾಯಮ್ಮ ದಂಪತಿ ಸಿದ್ಧರಾಮರ ಕೋರಿಕೆಯನ್ನು ನಿರಾಕರಿಸಿ, ತಾವು ಕಲ್ಯಾಣದಲ್ಲಿದ್ದೇ ಕಾಯಕ- ದಾಸೋಹಗಳನ್ನು ಮಾಡುವುದಾಗಿ ಹೇಳುತ್ತಾರೆ. ಇಂತಹ ದಂಪತಿಯ ಬರುವಿಕೆಯಿಂದ ಕಲ್ಯಾಣವು ಕಳೆಗಟ್ಟಿತೆಂದು ಜನಪದ ಕವಿ ಹಂತಿಯ ಹಾಡುಗಳಲ್ಲಿ ಹೇಳಿದ್ದಾನೆ. ಈ ಹಂತಿಯ ಹಾಡಿನಲ್ಲಿ ಅಮುಗೆ ದೇವಯ್ಯನವರ ಕಥಾನಕವೇ ಪ್ರಧಾನವಾದರೂ, ವಚನ ಚಳುವಳಿಯ ಬೆಳವಣಿಗೆಗಳೆಲ್ಲಾ ಇಲ್ಲಿ ವ್ಯಕ್ತವಾಗಿವೆ. ಶರಣರು ನಡೆಸಿದ ಹೋರಾಟ ಹೇಗೆ ವಿಫಲವಾಯಿತು, ಪುರೋಹಿತಶಾಹಿಯ ಕೈ ಹೇಗೆ ಮೇಲಾಯಿತೆಂಬುದನ್ನು ಇಲ್ಲಿ ವಿವರಿಸಲಾಗಿದೆ. ಜಾತಿಸಂಕರ ಮಾಡಿದ ಬಸವಣ್ಣನವರ ಹೆಸರೂ ಇದರಲ್ಲಿ ಪ್ರಸ್ತಾಪಿಸಲ್ಪಟ್ಟಿದೆ.
“ಕುಲಗೆಡಿಸಿ ಬಸವೇಶ ಕಲಕುಮಾಡಿದ ನಾಡು
ಚಿಲಕ ಮುರಿದಂತೆ ಬಾಗಿಲಕೆ |ಅರಮನೆಯ
ಮಲಕು ಮುರಿದಂತೆ ಅರಸಿದ್ದು”- (ಪು-302)
ಬಸವಕ್ರಾಂತಿಯಿಂದ ಬಿಜ್ಜಳನ ಅರಸೊತ್ತಿಗೆಯೂ ಮುಗಿದುಹೋಯಿತು. ಸೋವಿದೇವ ಪಟ್ಟಕ್ಕೆ ಬಂದ ನಂತರ, ಬಿಜ್ಜಳನ ವಧೆಯಾಯಿತು, ಶರಣರೆಲ್ಲಾ ದಿಕ್ಕಾ ಪಾಲಾದರು ಎಂಬಂತಹ ವಿಷಯಗಳನ್ನೆಲ್ಲಾ ಈ ಹಂತಿ ಹಾಡಿನಲ್ಲಿ ಹೇಳಲಾಗಿದೆ. ಅಮುಗೆ ರಾಯಮ್ಮ ಹೇಗೆ ನಿಷ್ಠಾ ಭಕ್ತಿಯಿಂದ ಶರಣ ಚಳುವಳಿಯಲ್ಲಿ ಭಾಗವಹಿಸಿದ್ದರೆಂಬುದನ್ನು ತಿಳಿಸಲಾಗಿದೆ. ಕಲ್ಯಾಣಕ್ರಾಂತಿಯ ನಂತರ ಈ ದಂಪತಿ ಕಲ್ಯಾಣವನ್ನು ತೊರೆದು ಪುಳಜೆಗೆ ಬಂದು ನೆಲೆಸುತ್ತಾರೆ. ಇವರಿಂದ ಪುಳಜೆಯಲ್ಲಿ ಶಿವಗೋಷ್ಠಿಗಳು ಪ್ರಾರಂಭವಾಗುತ್ತವೆಂಬ ಸಂಗತಿಯನ್ನು ಈ ತ್ರಿಪದಿಗಳಲ್ಲಿ ಹೇಳಲಾಗಿದೆ.
“ಶಿವಕೂಟ ಕೂಡಿಸುತ ಶಿವಗೋಷ್ಠಿ ನಡೆಸಿದನು
ಶಿವಶರಣ ಅಮುಗ ಗುರುವೆಂದು | ಜನಬರಲು
ಶಿವಮಂತ್ರ ಊದಿ ನಿತ್ಯದಲಿ” – (ಪು- 303)
ಹೀಗೆ ಪುಳಜೆಯ ಸುತ್ತಮುತ್ತ ಶರಣ ಸಂಕುಲವೇ ಬೆಳೆದು ನಿಲ್ಲುತ್ತದೆ. ಅಮುಗೆ ದೇವಯ್ಯ ಇವರಿಗೆಲ್ಲಾ ಗುರುವಾಗುತ್ತಾರೆ. ರಾಯಮ್ಮ ಪತಿಯೊಂದಿಗೆ ಕೂಡಿಕೊಂಡು ಶರಣ ಸಂಸ್ಕೃತಿಯನ್ನು ಪಸರಿಸುತ್ತಾರೆ. ಸಿಂಘಣ ರಾಜನು ಇವರ ಕಾರ್ಯವನ್ನು ಮೆಚ್ಚಿಕೊಂಡು ‘ಇಥ್ಥೆ’ ಎಂಬ ಗ್ರಾಮವನ್ನು ಉಂಬಳಿ ನೀಡಿದ ವಿಷಯವೂ ಈ ತ್ರಿಪದಿಗಳಲ್ಲಿದೆ. ಅಮುಗೆ ದಂಪತಿಯ ಜೀವನಗಾಥೆ ಈ ಹಂತಿ ಹಾಡಿನಲ್ಲಿ ಸುಂದರವಾಗಿ ಮೂಡಿಬಂದಿದೆ.
Comments 11
ಪೆರೂರು ಜಾರು, ಉಡುಪಿ
Sep 13, 2022ಅಮ್ಮುಗೆ ರಾಯಮ್ಮನ ಹುಡುಕಿದ ಬಸವರಾಜ ಸಬರದ ಅವರಿಗೆ ಶರಣು.
ವಿಜಯಕುಮಾರ, ಶಿವಮೊಗ್ಗ
Sep 13, 2022ಅಮುಗೆ ರಾಯಮ್ಮನವರ ಕತೆ ಬಹಳ ಆಸಕ್ತಿಕರವಾಗಿದೆ. ಕಾವ್ಯಗಳಲ್ಲಿ ಅಡಗಿದ ಸತ್ಯವನ್ನು ಹುಡುಕಿ ತೋರಿಸಿದರೆ ಶರಣರ ಬಗೆಗೆ ಮತ್ತಷ್ಟು ಸ್ಪಷ್ಟತೆ ಸಿಗುತ್ತದೆ ಎನ್ನುವುದು ನನ್ನ ಭಾವನೆ. ಲೇಖನ ಚೆನ್ನಾಗಿದೆ.
ದೇವಯ್ಯಾ ಹಂಚಿನಾಳ
Sep 14, 2022ರಾಯಮ್ಮನವರು 116 ವಚನಗಳನ್ನು ಬರೆದಿರುವುದನ್ನು ಕೇಳಿ ಬಹಳ ಸಂತೋಷವಾಯಿತು. ಸ್ವತಂತ್ರ ವ್ಯಕ್ತಿತ್ವದ ಶರಣರ ಜೀವನದ ಬಗೆಗೆ ತಿಳಿಯುವುದೇ ಒಂದು ದಿವ್ಯ ಅನುಭೂತಿ. ಅಮುಗೆ ರಾಯಮ್ಮ ದಂಪತಿಗಳ ಸ್ವತಂತ್ರ ವ್ಯಕ್ತಿತ್ವ ನಿಜಕ್ಕೂ ಕುತೂಹಲ ಮೂಡಿಸುವಂತಿದೆ.
SIDDHESH GAJENDRAGAD
Sep 14, 2022ಶಾಸನಗಳಿಂದ, ನಡುಗನ್ನಡದ ಸಾಹಿತ್ಯಗಳಿಂದ, ಹಂತಿ ಹಾಡುಗಳಿಂದ ಅಮುಗೆ ಶರಣ ದಂಪತಿಗಳ ಜೀವನ ಚರಿತ್ರೆ ಕಟ್ಟಿಕೊಡುವ ಪ್ರಯತ್ನ ಶ್ಲಾಘನೀಯ.
Rajeeva K.B
Sep 18, 2022ಸಿದ್ಧರಾಮರಂತಹ ಪ್ರಭಾವೀ ವ್ಯಕ್ತಿಯನ್ನು ಎದುರುಹಾಕಿಕೊಂಡು ಪಟ್ಟಣ ತೊರೆದು ಹೊರಟ ದಂಪತಿಗಳ ನಿಷ್ಠೆ ಮತ್ತು ಸ್ವಾಭಿಮಾನ ಮನಸ್ಸಿಗೆ ತಟ್ಟಿತು. ಅಮ್ಮುಗೆ ದಂಪತಿಗಳ ವಿಚಾರಗಳನ್ನು ಬೆಳಕಿಗೆ ತಂದುಕೊಟ್ಟ ಸುಂದರ ಲೇಖನ.
Veeranna Kamathagi
Sep 23, 2022ಜನಪದ ಕಾವ್ಯಗಳಲ್ಲಿ ಶರಣರ ಚರಿತೆಯನ್ನು ಹೆಕ್ಕಿ ತೆಗೆಯುವ ಕೆಲಸ ಆಗಲೇ ಬೇಕು. ‘ಕನ್ನಡ ಜಾನಪದ ಗೀತೆಗಳು’; ಮಹಾಪ್ರಬಂಧದ ಅನುಬಂಧದಲ್ಲಿ ‘ನೇಗಿಯ ಅಮುಗಯ್ಯ’; ಎಂಬ ಶಿರೋನಾಮೆಯಲ್ಲಿ 108 ತ್ರಿಪದಿಗಳು ಪ್ರಕಟವಾದ ಮಾಹಿತಿಗೆ ಧನ್ಯವಾದಗಳು ಸರ್.
ಹರೀಶ್ ವಾರದ್
Sep 23, 2022ಉಪಯುಕ್ತ ಲೇಖನ. ಅಮುಗೆ ದೇವಯ್ಯ ಮತ್ತು ರಾಯಮ್ಮ ಶರಣ ಕ್ರಾಂತಿಯ ನಂತರ ಶರಣ ಸಂಸ್ಕೃತಿಯನ್ನು ಪಸರಿಸಿದರು ಎನ್ನುವುದು ಎಷ್ಟೊಂದು ಅಮೂಲ್ಯವಾದ ನಡವಳಿಕೆ. ಶರಣ ದಂಪತಿಗಳ ಸರಳತೆ, ನಿಸ್ವಾರ್ಥತೆ ತುಂಬು ನಮನಗಳು.
ಚಿಕ್ಕರಾಜಣ್ಣ ಮೂಲಿ
Sep 26, 2022ಸಿದ್ಧರಾಮಯ್ಯನವರು ಕಲ್ಯಾಣಕ್ಕೆ ಬಂದಾಗ ಅಮ್ಮುಗೆ ರಾಯಮ್ಮ ದಂಪತಿಗಳನ್ನು ಭೇಟಿಯಾಗುವ ಸಂದರ್ಭ ಖಂಡಿತವಾಗಿಯೂ ಎದುರಾಗಿರುತ್ತದೆ, ಆ ಕುರಿತು ಏನಾದರೂ ಮಾಹಿತಿ ಇದೆಯೇ? ಅಥವಾ ಅವರಿಬ್ಬರ ವಚನಗಳಲ್ಲಿ ಪರಸ್ಪರರ ಕುರಿತಾಗಿ ಏನಾದರೂ ಉಲ್ಲೇಖವಿದೆಯೇ?
Guruprasad Bellary
Sep 26, 2022ಈಗಿನ ಮಹಾರಾಷ್ಟ್ರಕ್ಕೆ ಸೇರಿದ ಪುಳಜೆ ಗ್ರಾಮದ ಅಮುಗೆ ದೇವಯ್ಯ ಮತ್ತು ರಾಯಮ್ಮಾ ಅವರ ಜೀವನ ಚರಿತ್ರೆ ನಿಜಕ್ಕೂ ಬಹಳ ಆಸಕ್ತಿಕರವಾಗಿದೆ. ಅವರಿಗೆ ಸಂತಾನವಿರಲಿಲ್ಲವೇ? ಅಂದರೆ ಅವರ ವಂಶಜರು ಯಾರಾದರೂ ಆ ಊರಲ್ಲಿ ಸಿಗಬಹುದಾ?
ರಾಜಶೇಖರ ಗುರುಮಠ
Sep 26, 2022ಸಿಂಘಣ ರಾಜನು ಅಮುಗೆ ದೇವಯ್ಯಾ ಮತ್ತು ರಾಯಮ್ಮನವರ ಕಾರ್ಯವನ್ನು ಮೆಚ್ಚಿಕೊಂಡು ‘ಇಥ್ಥೆ’ ಎಂಬ ಗ್ರಾಮವನ್ನು ಉಂಬಳಿ ನೀಡಿದ ವಿಷಯ ಬಹಳ ಹೆಮ್ಮೆಪಡುವಂತಹದ್ದು. ಶರಣರ ಕಾಯಕ ದಾಸೋಕದ ಶಕ್ತಿ ಅದು. ಸತಿ-ಪತಿಗಳಿಂದ ಒಂದಾದ ಭಕ್ತಿಯೇ ಶ್ರೇಷ್ಟವಾದ್ದು.
Raveesh P
Oct 13, 2022Greetings I am so grateful I found your site, I really found you
by mistake, while I was researching on vachanas, Anyhow I am here now and would just like to say kudos for a fantastic post and a all round thrilling blog (I also love the theme/design).