ಲೋಕವೆಲ್ಲ ಕಾಯಕದೊಳಗು…
Share:

ಲೋಕವೆಲ್ಲ ಕಾಯಕದೊಳಗು…

ಮೇ- ಅಂದಾಕ್ಷಣ ನಮಗೆ ಕಾರ್ಮಿಕರ ನೆನಪಾಗುತ್ತದೆ, ಕಾರ್ಲ್ ಮಾರ್ಕ್ಸ್, ಏಂಗೇಲ್ಸ್, ಲೆನಿನ್, ಇತ್ಯಾದಿ ಸಮಾಜವಾದಿ ಮತ್ತು ಕಮ್ಯೂನಿಸ್ಟರ ಹೆಸರುಗಳು ಮಸುಕುಮಸುಕಾಗಿ ಮನಸ್ಸಿನಲ್ಲಿ ಮೂಡುತ್ತವೆ. ಮೇ ಡೇ- ಎಂದು ಅಲ್ಲಲ್ಲಿ ಭಾಷಣಗಳಾಗುತ್ತವೆ, ಅಲ್ಲಿಗೆ ಮುಗಿಯಿತು…

ಹಾಗೊಂದು ದುಡಿಯುವ, ಕಠಿಣ ಕೆಲಸಗಳ ಶ್ರಮಿಕ ವರ್ಗವನ್ನು ಸೃಷ್ಟಿಸಿದ ಸಮಾಜದ ಭಾಗವಾಗಿ ನಾವು ಎಂದಾದರೂ ಕಾರ್ಮಿಕರ ಹಕ್ಕು ಬಾಧ್ಯತೆಗಳ ಬಗ್ಗೆ, ಅವರ ಹಿತಾಸಕ್ತಿಗಳ ಬಗ್ಗೆ ಗಮನ ಹರಿಸಿದ್ದೇವೆಯೇ? ಹೋಗಲಿ, ಅವರ ಸಾಮಾಜಿಕ ಬದುಕಿನತ್ತ ಏನಾದರೂ ಆಸಕ್ತಿ ತೋರಿದ್ದೇವೆಯೇ? ಹೊಸ ಆರ್ಥಿಕ ವ್ಯವಸ್ಥೆಯ ಗುಂಗಿನಲ್ಲಿರುವ ನಮಗೆ ಕೇವಲ ನಮ್ಮ ಬಗ್ಗೆ ಮಾತ್ರ ಯೋಚನೆ. ಎಲ್ಲದಕ್ಕೂ ಕಾಯ್ದೆ ಕಾನೂನುಗಳಲ್ಲಿ ಪರಿಹಾರ ಕಂಡುಕೊಳ್ಳುವ ಅಭ್ಯಾಸ. ಯಾವುದೇ ಶೋಷಣೆಗೆ ವ್ಯವಸ್ಥೆಯೇ ಕಾರಣ ಎನ್ನುವ ಧೋರಣೆ. ನಮಗೂ ಅದಕ್ಕೂ ಸಂಬಂಧ ಇಲ್ಲ ಎನ್ನುವ ಉಡಾಫೆ.

ಬಂಡವಾಳಶಾಹಿಗಳ ಅಮಾನವೀಯ ನಡೆ, ಅಮಾನುಷ ವರ್ತನೆಯ ವಿರುದ್ಧ ಜಗತ್ತಿನಾದ್ಯಂತ ಅನೇಕ ಕಡೆ ಕಾರ್ಮಿಕ ಸಂಘಟನೆಗಳು ರೂಪುತಳೆದಿವೆ. ಕಾರ್ಮಿಕನೊಬ್ಬನ ರಕ್ತದಲ್ಲಿ ತೊಯ್ದ ಅಂಗಿಯನ್ನೇ ಕೆಂಪು ಬಾವುಟವಾಗಿಸಿ ಮುನ್ನಡೆದ ಕಾರ್ಮಿಕರ ಹೋರಾಟ, ಚಳವಳಿಗೆ ಅಮೆರಿಕ ಸಾಕ್ಷಿಯಾದದ್ದು 19ನೇ ಶತಮಾನದಲ್ಲಿ. ಜಗತ್ತಿನ ಮೊದಲ ಸಮಾಜವಾದಿ ದೇಶ ಸೋವಿಯತ್ ಒಕ್ಕೂಟವು he who does not work neither shall he eat (‘ದುಡಿಯಲಾರದವ ತಿನ್ನಲಿಕ್ಕೂ ಅರ್ಹನಲ್ಲ’) ಎಂಬ ಧ್ಯೇಯ ವಾಕ್ಯವನ್ನಿಟ್ಟುಕೊಂಡು ಸಂವಿಧಾನ ರಚಿಸಿತು. ಕಮ್ಯೂನಿಸ್ಟ್ ರಾಷ್ಟ್ರಗಳಿಂದ ಹಿಡಿದು ಎಲ್ಲಾ ಸಿದ್ಧಾಂತಗಳ ರಾಜ್ಯಾಡಳಿತಗಳು ಕಾರ್ಮಿಕರ ಹಿತಾಸಕ್ತಿಗಾಗಿ ಅನೇಕ ಕಾನೂನುಗಳನ್ನು ರಚಿಸಿವೆ. ಹೊಸ ನಿಯಮಗಳನ್ನು ಹುಟ್ಟುಹಾಕಿವೆ. ಆದರೆ ದುಡಿವ ಜನರಿಗೆ ಆರ್ಥಿಕ ನ್ಯಾಯ ಒದಗಿಸಲು, ಸಾಮಾಜಿಕ ಗೌರವ ತಂದುಕೊಡಲು ಗಣನೀಯವಾಗಿ ವಿಫಲವಾಗಿವೆ!

ನಾಗರಿಕತೆ ಬೆಳೆದಂತೆಲ್ಲ ದುಡಿಯುವ, ದುಡಿಸಿಕೊಳ್ಳುವ ಎರಡು ವರ್ಗಗಳು ಸೃಷ್ಟಿಯಾದದ್ದು, ನಮ್ಮ ದೇಶದಲ್ಲಿದು ಜಾತಿ ವ್ಯವಸ್ಥೆಯ ಕರಾಳ ರೂಪಕ್ಕೆ ನಾಂದಿ ಹಾಡಿದ್ದು, ಪೀಳಿಗೆಯಿಂದ ಪೀಳಿಗೆಗೆ ಇದರ ಬೇರುಗಳು ಇನ್ನಷ್ಟು ಮತ್ತಷ್ಟು ಭದ್ರವಾಗುತ್ತಿರುವುದು… ಎಲ್ಲವೂ ವಿಷವರ್ತುಲದಂತೆ ಬದುಕನ್ನು ವಿಚ್ಛಿದ್ರಗೊಳಿಸಿವೆ. ಮಾಡುವ ಉದ್ಯೋಗದ ಆಧಾರದ ಮೇಲೆಯೇ ಮೇಲು-ಕೀಳು ಎಂದು ಸಮಾಜವನ್ನು ವಿಭಜಿಸುವ ಭಾರತದ ಮನಸ್ಥಿತಿಗೆ ಮದ್ದೇನು? ಈ ದೇಶದ ನಿಟ್ಟುಸಿರಿಗೆ ಕಾರಣವಾದ ವರ್ಣಾಶ್ರಮ ವ್ಯವಸ್ಥೆಯ ಹಿಂದಿನ ದುರುದ್ದೇಶವನ್ನು ಸದೆಬಡೆಯುವುದು ಹೇಗೆ?

ದುಡಿಯುವ ಶ್ರಮಜೀವಿಗಳು ಒಂದು ಕಡೆ, ದುಡಿಸಿಕೊಳ್ಳುವ ವಿಲಾಸಿಗಳು, ಅಧಿಕಾರ ವರ್ಗದವರು ಇನ್ನೊಂದು ಕಡೆ. ದುಡಿವ ಜನ ಟೊಂಕ ಬಗ್ಗಿಸಿಯೇ ಬಾಳಬೇಕು, ದುಡಿಸಿಕೊಳ್ಳುವವರ ಅಡಿಯಾಳಾಗಿ, ಅವರಿಂದ ಅವಮಾನಕ್ಕೊಳಗಾಗಿ ಜೀವನ ಸವೆಸಬೇಕು. ಬಡವ ಕಡುಬಡವನಾಗುತ್ತಾ, ಹಣವಂತ

ಕೋಟ್ಯಾಧೀಶನಾಗುತ್ತಾ ಸಾಗುವ ಆರ್ಥಿಕ ಏರುಪೇರನ್ನು, ಸಮಾಜದ ನೈತಿಕ ಅಸಮತೋಲನವನ್ನು ಸರಿಪಡಿಸುವುದು ಹೇಗೆ? ದುಡಿವ ವರ್ಗದ ಅದ್ಭುತ ಸಂಘಟನೆಯೊಂದು ಬಸವಣ್ಣನವರ ಕಲ್ಯಾಣ ರಾಜ್ಯದಲ್ಲಿ ರೂಪು ತಳೆದು ಈ ಎಲ್ಲ ಸಮಸ್ಯೆಗಳಿಗೆ ಪರಿಣಾಮಕಾರಿಯಾದ ಪರಿಹಾರವನ್ನು ಕಂಡುಹಿಡಿದಿತ್ತು.

ಅದೇ ಕಾಯಕ ತತ್ವ.

ವ್ಯಕ್ತಿ ಮತ್ತು ಸಮಾಜಕ್ಕೆ ಕಾಯಕದ ಮೂಲಕ ಬೆಸುಗೆ ಹಾಕಿದರು ಬಸವಣ್ಣನವರು. ಇಂದು ಉದ್ಯೋಗ ಅಥವಾ ವರ್ಕ್ ಎನ್ನುವುದಕ್ಕೆ ಪರ್ಯಾಯವಾಗಿ ಬಳಸಲಾಗುವ ಕಾಯಕ ಎಂಬ ಶಬ್ದಕ್ಕೆ ವಿಭಿನ್ನ ಆಯಾಮಗಳಿವೆ. ವಿಭಿನ್ನ ಅರ್ಥ ಪರಂಪರೆಗಳಿವೆ. ಉದ್ಯೋಗಕ್ಕೂ ಮತ್ತು ಶರಣರು ಬಳಸಿದ ಕಾಯಕಕ್ಕೂ ಅಗಾಧವಾದ ಅಂತರವಿದೆ. ಉದರ ಪೋಷಣೆಗಾಗಿ, ತನ್ನ ಸಂಸಾರಕ್ಕಾಗಿ ದುಡಿಯುವುದು ಉದ್ಯೋಗವಾದರೆ, ತನ್ನ ಹಿತಾಸಕ್ತಿಯ ಜೊತೆಗೆ ಸಮಷ್ಟಿಯ ಹಿತವನ್ನು ಬಯಸುವ ದಾಸೋಹ ಮನೋಭಾವದಿಂದ ದುಡಿಯುವುದು, ಆತ್ಮೋದ್ಧಾರದ ಜೊತೆಗೆ ಸಮಾಜೋದ್ಧಾರವನ್ನು ಸಾಧಿಸುವ ಉದ್ಯೋಗವೇ ಕಾಯಕ. ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕ ವಲಯಗಳನ್ನು ಒಂದು ಕಟ್ಟಿನಲ್ಲಿ ಸುಭದ್ರವಾಗಿ ಕಟ್ಟಬಲ್ಲ ತತ್ವ ಇದು.

ಬಸವಣ್ಣನವರು ಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದರು. ಸಮಾಜವಾದಿ ಚಿಂತಕರಾಗಿದ್ದರು. ಅವರ ವಿಚಾರಗಳಲ್ಲಿ ಸಮಗ್ರ ಸಮಾಜದ ದೃಷ್ಟಿಕೋನವಿರುತ್ತಿತ್ತು. ಕಲ್ಯಾಣವು ಸಮೃದ್ಧಿಯ ಬೀಡಾಗಲು ಕಾರಣವಾದದ್ದು ಕಾಯಕಜೀವಿಗಳೇ. ಕಾಯಕದ ತುಡಿತ ಸ್ವಾವಲಂಬಿ ಸಮಾಜ ನಿರ್ಮಾಣ. ಹೊಟ್ಟೆಪಾಡಿಗಾಗಿ ಅಥವಾ ಕುಟುಂಬದ ಪೋಷಣೆಗಾಗಿ ಕೈಗೊಳ್ಳುವ ದುಡಿಮೆ ಕಾಯಕವಾಗಲಾರದು. ಅದೇ ರೀತಿ ಕೀರ್ತಿ- ಪ್ರತಿಷ್ಠೆಗಳಿಗಾಗಿ ಮಾಡುವ ಜನಕಲ್ಯಾಣ ಕಾರ್ಯವೂ ಕಾಯಕವಾಗಲಾರದು. “ಎನ್ನೊಡಲ ಅವಸರಕ್ಕೆ ಕುದಿದೆನಾದಡೆ ತಲೆದಂಡ” ಎನ್ನುತ್ತಾರೆ ಬಸವಣ್ಣನವರು. ಹೀಗೆ ನಮ್ಮ ಹಿತದೊಂದಿಗೆ ಸಮಷ್ಟಿಯ ಹಿತವನ್ನೂ ಕಾಯುವ ಶಕ್ತಿ ಕಾಯಕದ್ದು. ಸತ್ಯ ಶುದ್ಧದಿಂದ ಗಳಿಸಿದ ಆದಾಯದಲ್ಲಿ ಒಂದು ಪಾಲು ದಾಸೋಹ ರೂಪದಲ್ಲಿ ಸಮಾಜಕ್ಕೂ, ಇನ್ನೊಂದು ಪಾಲು ತೆರಿಗೆಯ ರೂಪದಲ್ಲಿ ರಾಜ್ಯಕ್ಕೂ ಸಂದಾಯವಾಗಬೇಕು. ಇದು ಸಮಷ್ಟಿಯ ಏಳ್ಗೆಯಲ್ಲಿ ತನ್ನ ಅಭಿವೃದ್ಧಿಯನ್ನೂ, ಸಮಷ್ಟಿಯ ಹಿತದಲ್ಲಿ ತನ್ನ ಹಿತವನ್ನೂ ಕಾಣುವ ಶರಣರ ಕಾಯಕದ ನಡೆ.

ಸಮಾಜವು ದುಡಿಮೆಯ ಆಧಾರದ ಮೇಲೆ ವಿಭಜಿತವಾಗಿದ್ದ ಕಾಲಘಟ್ಟ ಅದು. ಅಂದು ಕುಲದ ಕುದಿ ವಾತಾವರಣವನ್ನು ಉಸಿರುಗಟ್ಟಿಸಿತ್ತು. ಹುಟ್ಟಿನಿಂದಲೇ ಅಂಟಿಕೊಂಡು ಬರುವ ಕೆಲಸಕ್ಕೆ ಕಣ್ಮುಚ್ಚಿ ಒಗ್ಗಿಕೊಳ್ಳಬೇಕಿತ್ತು. ಮೇಲು-ಕೀಳಿನ ಧೋರಣೆಗೆ ಬಲಿಯಾಗಬೇಕಿತ್ತು. ಅದರಲ್ಲೂ ಕಠಿಣ ಶ್ರಮದ ಕೆಲಸಗಳನ್ನು ಮಾಡುವವರನ್ನು, ಶ್ರಮಿಕರನ್ನು ನಿಕೃಷ್ಟವಾಗಿ ಕಾಣಲಾಗುತ್ತಿತ್ತು. ಅಂಥ ಸಂದರ್ಭದಲ್ಲಿ ದುಡಿಮೆಯ ಪದಕ್ಕೆ ವಿಶೇಷ ವ್ಯಾಖ್ಯಾನ ನೀಡಿ, ಅವರ ಶ್ರಮವನ್ನು ಅತ್ಯಂತ ಪೂಜ್ಯ ಭಾವದಿಂದ ಕಾಣುವ ವಾತಾವರಣ ನಿರ್ಮಿಸಿದರು ಬಸವಣ್ಣ.

“ಆವ ಕಾಯಕವ ಮಾಡಿದಡೂ ಒಂದೇ ಕಾಯಕವಯ್ಯ” ಎನ್ನುತ್ತಾರೆ ಶರಣೆ ಗಂಗಮ್ಮ. ಸಮಾಜ ಸುವ್ಯವಸ್ಥಿತವಾಗಿ ಸಾಗಲು ಎಲ್ಲ ಬಗೆಯ ಕೆಲಸಗಳೂ ಅತ್ಯವಶ್ಯಕ. ಕಾಯಕದಲ್ಲಿ ಭೇದ-ಭಾವವಿಲ್ಲ, ಮೇಲು-ಕೀಳುಗಳಿಲ್ಲ, ಶ್ರೇಷ್ಠ-ಕನಿಷ್ಠಗಳ ತರತಮ ಭಾವವಿಲ್ಲ. “ದೇವ ಸಹಿತ ಭಕ್ತ ಮನೆಗೆ ಬಂದಡೆ ಕಾಯಕವಾವುದೆಂದು ಬೆಸಗೊಂಡಡೆ ಆಣೆ ನಿಮ್ಮಾಣೆ” ಎನ್ನುವ ಬಸವಣ್ಣನವರು ಎಲ್ಲ ಕಾಯಕಗಳಿಗೂ ಸಮಾನ ಗೌರವ ನೀಡಬೇಕೆನ್ನುತ್ತಾರೆ. “ಅವಾವ ಕಾಯಕದಲ್ಲಿ ಬಂದಡೂ ಭಾವಶುದ್ಧವಾಗಿ ಗುರು-ಲಿಂಗ- ಜಂಗಮಕ್ಕೆ ಮಾಡುವುದೇ ಶಿವಪೂಜೆ.” ಎನ್ನುವ ಭಾವ ಸಮಾಜದಲ್ಲಿ ಗಟ್ಟಿಯಾಯಿತು.

ಧರ್ಮ, ದೇವರ ಹೆಸರಿನಲ್ಲಿ ಇಹದ ಬದುಕಿಗೆ ವಿಮುಖವಾಗುವುದನ್ನು ಶರಣರು ಮನ್ನಿಸಲಿಲ್ಲ. ಅದರಲ್ಲೂ ದೈಹಿಕ ಶ್ರಮಕ್ಕೆ ಮನ್ನಣೆ. ಬೆವರು ಸುರಿಸದೆ ಅನ್ನ ಪಡೆಯುವುದು ಪಾಪವೆಂದರು. ಶರೀರ ಶ್ರಮವಿಲ್ಲದವನಿಗೆ ಬದುಕುವ ಹಕ್ಕಿಲ್ಲವೆಂದರು. ಪರಮಾತ್ಮನಿಗಾಗಿ ಮಾಡುವ ಕಾಯಕವು ದೇಹದಿಂದ ಮಾಡುವ ಪ್ರಾರ್ಥನೆಯಾಗಿದೆ (ಟು ವರ್ಕ್ ಫಾರ್ ದಿ ಡಿವೈನ್ ಈಸ್ ಟು ಪ್ರೇ ವಿತ್ ದಿ ಬಾಡಿ) ಎನ್ನುತ್ತಿದ್ದರು ಅರವಿಂದರು. ಬಸವಣ್ಣನವರ ತತ್ವಗಳಿಗೆ ಒಲಿದು ಬಂದ ರಾಜ ಮಹರಾಜರುಗಳು, ಸಿರಿವಂತರು, ಸಾಮಂತರು ಎಲ್ಲರಿಗೂ ಯಾವ ಭೇದ ಭಾವವಿಲ್ಲದಂತೆ ಕಲ್ಯಾಣದಲ್ಲಿ ಕಾಯಕ ಕಡ್ಡಾಯವಾಗಿತ್ತು. ಶರಣರ ಪ್ರಕಾರ ಕಾಯಕಕ್ಕಿಂತ ಮಿಗಿಲಾದದ್ದು ಯಾವುದೂ ಇರಲಿಲ್ಲ. ಗುರುವಾದರೂ ಸರಿ, ಲಿಂಗವಾದರೂ ಸರಿ, ಜಂಗಮವಾದರೂ ಸರಿ ಕಾಯಕದಿಂದಲೇ ಮುಕ್ತಿ ಎಂದು ಸಾರುವ ಮೂಲಕ ಶ್ರಮದ ದುಡಿಮೆಯ ಘನತೆಯನ್ನು ಎತ್ತಿಹಿಡಿದರು.

ದೇಹಶ್ರಮದ ಕಾಯಕಕ್ಕೆ ದೇಹವನ್ನೂ, ದೇವರನ್ನೂ ಸಂತೃಪ್ತಿಗೊಳಿಸುವ ಮಾಂತ್ರಿಕ ಶಕ್ತಿ ಇದೆ. ತನು ಮನ ಬಳಲಿಸಿ ತಂದು ದಾಸೋಹವ ಮಾಡುವ ಸದ್ಭಕ್ತನ ತೋರಯ್ಯ… ಎನ್ನುತ್ತಾರೆ ಬಸವಣ್ಣನವರು.

ಸತ್ತಿಗೆ ಕಾಯಕದ ಮಾರಯ್ಯನವರ ವಚನ ನೋಡಿ-
“ಕೂಲಿಯ ಮಾಡಿ ತಂದು ಸಂದುದೇ ಕಾಯಕದೊಳಗು,

ಎನ್ನಂಗದ ಸತ್ತಿಗೆಯ ಕಾಯಕ.
ಸಂಗನಬಸವಣ್ಣಂಗೆ ನೆಳಲು ಹಿಂಗಿದಾಗವೇ ಕಾಯಕ…”

ಗುರು, ಲಿಂಗ ಮತ್ತು ಜಂಗಮರು ಕೂಡ ಕಾಯಕಕ್ಕೆ ಅತೀತರಾದವರಲ್ಲ.  ನುಲಿಯ ಚಂದಯ್ಯನ ಪ್ರಕಾರ ಕಾಯಕವು ಲಿಂಗಕ್ಕಿಂತಲೂ ಶ್ರೇಷ್ಠ.
ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ
ಲಿಂಗವಾದರೂ ಕಾಯಕದಿಂದಲೇ ಲಿಂಗದ ಶಿಲೆಯ ಕುಲ ಹರಿಯುವುದು
ಜಂಗಮವಾದರೂ ಕಾಯಕದಿಂದಲೇ ವೇಷದ ಪಾಶ ಹರಿಯುವುದು
ಗುರುವಾದರೂ ಚರಸೇವೆಯ ಮಾಡಬೇಕು
ಲಿಂಗವಾದರೂ ಚರಸೇವೆಯ ಮಾಡಬೇಕು
ಜಂಗಮವಾದರೂ ಚರಸೇವೆಯ ಮಾಡಬೇಕು.
ಇದು ಚಂದೇಶ್ವರ ಲಿಂಗದ ಅರಿವು ಕೇಳಾ ಪ್ರಭುವೇ.

ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಕೊನೆಯುಸಿರಿನ ತನಕ ನಿರಂತರವಾಗಿ ಗಾಂಧೀಜಿಯ ಜೀವನವನ್ನೊಮ್ಮೆ ಕಣ್ಮುಂದೆ ತಂದುಕೊಳ್ಳಿ. ಎಂದಾದರೂ ಅವರು ಖಾಲಿ ಕುಳಿತಿದ್ದರೆ? ಶ್ರಮಸಂಸ್ಕೃತಿಯ ಬಗ್ಗೆ ಗಾಂಧೀಜಿಯವರ ಗಮನ ಸೆಳೆಯಲು ನೆರವಾದದ್ದು ರಸ್ಕಿನ್ ಅವರ ಅನ್ ಟು ದಿ ಲಾಸ್ಟ್ ಕೃತಿ. ಜೈಲಿನಲ್ಲಿದ್ದಾಗಲೂ ಅಷ್ಟೇ. ಗಾಂಧೀಜಿಯವರ ಕೈ ಸದಾ ಚರಕದಿಂದ ನೂಲು ತೆಗೆಯುತ್ತಿತ್ತು. ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ಜೈಲಿನಲ್ಲಿದ್ದ ವೇಳೆಯಲ್ಲಿ ಪಾದರಕ್ಷೆಗಳನ್ನು ಮಾಡುವುದ ಕಲಿತು ತಮ್ಮ ವಿರುದ್ಧ ತೊಡೆ ತಟ್ಟಿದ್ದ ಜನರಲ್ ಸ್ಮಟ್ಸ್ ಅವರಿಗೆ ಒಂದು ಜೊತೆ ಸುಂದರವಾದ ಪಾದುಕೆಗಳನ್ನು ಮಾಡಿ ಕೊಡುತ್ತಾರೆ. ಸ್ಮಟ್ಸ್ ಜೀವನದಲ್ಲಿ ಅದೊಂದು ಮರೆಯಲಾಗದ ಘಟನೆಯಾಗಿ ಉಳಿದುಬಿಡುತ್ತದೆ.

ಜಗತ್ತು ಹಣದ ಬೆನ್ನ ಹಿಂದೆ ಬಿದ್ದಿದೆ. ನಿಜ, ಮನುಷ್ಯನಿಗೆ ಜೀವನ ನಿರ್ವಹಿಸಲು ಅತ್ಯಗತ್ಯವಾಗಿ ಹಣ ಬೇಕು. ಹಣವಿಲ್ಲದ ಬದುಕು ದುಸ್ತರ. ನಿಷ್ಕಾಮ ಕರ್ಮಸಿದ್ಧಾಂತವನ್ನು ಶರಣರು ಒಪ್ಪುವುದಿಲ್ಲ. ಕಾಯಕಕ್ಕೆ ತಕ್ಕ ಫಲವನ್ನು ಆಶಿಸುವುದು ಮನುಷ್ಯನ ಸಹಜ ಗುಣ. ಶರಣರ ಪ್ರಕಾರ ಅದು ಸಾಧುವೂ ಹೌದು, ನ್ಯಾಯವೂ ಹೌದು. ಆದರೆ ಆ ಫಲ ತನ್ನೊಬ್ಬನದು ಮಾತ್ರವೇ ಅಲ್ಲ, ಸಮಾಜದ ಪಾಲೂ ಅದರಲ್ಲಿದೆ. “ಲಿಂಗಕ್ಕೆಂದೇ ಕಾಮಿಸುವೆನು ನಿಃಕಾಮಿಯಾಗಿ” ಎಂದರೆ ಸಮಷ್ಟಿಯ ಪಾಲೂ ಇದರೊಳಗಿದೆ ಎಂಬರ್ಥ ಅಡಕವಾಗಿದೆ.  ಕಾಯಕ ತತ್ವದಲ್ಲಿ ನಿಃಕಾಮಿಯಾಗಿ ಕಾಮಿಸುವ ಭಾವ ಅಡಕವಾಗಿದೆ. ಸತ್ಯ ಶುದ್ಧ ಕಾಯಕದಿಂದ ಬರುವ ಗಳಿಕೆ ಪವಿತ್ರವಾದುದು. ತನ್ನ ಬದುಕಿನೊಂದಿಗೆ ಸಮಾಜಕ್ಕೂ ಅದರಲ್ಲಿ ಪಾಲಿದೆ. ಆದ್ದರಿಂದಲೇ ಕಾಯಕದ ಜೊತೆಜೊತೆಗೇ ದಾಸೋಹವನ್ನು ಒತ್ತಿ ಹೇಳುತ್ತಾರೆ. ನಮ್ಮ ಪರಿಶ್ರಮದ ಗಳಿಕೆಯಲ್ಲಿ ಪರರ ಹಿತಕ್ಕೂ ಪಾಲಿದೆ ಎಂಬ ಭಾವನೆಯಲ್ಲೇ ಸ್ವಾರ್ಥವನ್ನು ಮೀರುವ ಹಂಬಲವಿದೆ.

ಕಾಯಕದ ಪ್ರತಿಫಲವನ್ನು ಹಕ್ಕಿನ ಹಾಗೆ ಸ್ವೀಕರಿಸಿದ ಶರಣರು ಹೆಚ್ಚಿನ ಆದಾಯವನ್ನು ವಿಷವೆಂದು ಬಗೆದರು. ಅತ್ತ ಚಿತ್ತ ಹಾಕದಂತೆ ಮನಸ್ಸಿಗೆ ಸಂಸ್ಕಾರ ಕೊಟ್ಟರು. ಅಕ್ಷರಶಃ ಮನದ ಮುಂದಣ ಆಸೆಯನ್ನು ಗೆಲ್ಲುವ ಹಾದಿ ತೋರಿದರು. ಆದ್ದರಿಂದ ಅತ್ಯಾಸೆಯ ಭಾವ ಅವರ ಹತ್ತಿರವೂ ಸುಳಿಯಲಿಲ್ಲ. “ಒಮ್ಮನವ ಮೀರಿ ಇಮ್ಮನದಲ್ಲಿ ತಂದ” ಗಳಿಕೆಯನ್ನು ಮರಳಿ ಕೊಡುವ ದಿಟ್ಟ ಮಾರ್ಗದರ್ಶನವನ್ನು ಗಂಡನಿಗೆ ನೀಡಬಲ್ಲ ಶರಣೆ ಆಯ್ದಕ್ಕಿ ಲಕ್ಕಮ್ಮ ಕಾಯಕದ ಬಗ್ಗೆ ಇಂಥ ಸ್ಪಷ್ಟ ತಿಳಿವಳಿಕೆ ನೀಡುತ್ತಾಳೆ. “ಕಾಯಕ ನಿಂದಿತ್ತು ಹೋಗಯ್ಯಾ ಎನ್ನಾಳ್ದನೇ… ಬೇಗ ಹೋಗು ಮಾರಯ್ಯಾ” ಎಂದು ಅವಸರಿಸುವ ಮೂಲಕ ಕಾಯಕದೊಂದಿಗೆ ಇರಬೇಕಾದ ಸಮಯಪ್ರಜ್ಞೆಯತ್ತಲೂ ಬೆರಳು ತೋರುತ್ತಾರೆ ಲಕ್ಕಮ್ಮ. ಕಾಯಕದ ಬಗ್ಗೆ ಅಸಡ್ಡೆ ತೋರಬಾರದು, ಕೆಲಸದ ಸಮಯವನ್ನು ಮಾತು ಹರಟೆಗಳಲ್ಲಿ ವ್ಯರ್ಥ ಮಾಡಬಾರದು. ಏಕ ನಿಷ್ಠೆಯಿಂದ ಕಾಯಕದಲ್ಲಿ ತೊಡಗಿಕೊಳ್ಳಬೇಕೆಂಬ ಎಚ್ಚರಿಕೆಯೂ ಇಲ್ಲಿದೆ. ಅದೇ ರೀತಿ “ಕಾಯಕ ತಪ್ಪಿದಡೆ ಸೈರಿಸಬಾರದು” ಎಂದು ಕಾಯಕದ ಮಹತ್ವವನ್ನು ಎತ್ತಿ ಹಿಡಿಯುತ್ತಾರೆ ಪುಣ್ಯಸ್ತ್ರೀ ಕಾಳವ್ವೆ.

ನಮ್ಮ ದುಡಿಮೆ ನಮ್ಮ ಬದುಕಿನ ಅಗತ್ಯಗಳನ್ನು ಪೂರೈಸುವ ಜೊತೆಗೆ ಸಮಾಜಕ್ಕೂ ನೆರವಾಗುವಂತಿರಬೇಕು. ಆದರೆ ಅದನ್ನು ಗಳಿಸುವ ಮಾರ್ಗ ಎಂಥದಿರಬೇಕು? ಪೂಜೆ, ಪುನಸ್ಕಾರಗಳಿಂದ ಹಣದ ದೇವತೆ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಬೆನ್ನು ಹತ್ತುವ ಜನರನ್ನು ಕಂಡು “ಚಿತ್ತ ಶುದ್ಧದಲ್ಲಿ ಕಾಯಕಬಳಿ ವ ಮಾಡುವ ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು”ಎಂದು ಹಣ ಗಳಿಕೆಯ ನಿಜವಾದ ಹಾದಿಯನ್ನು ತೋರಿಸುತ್ತಾರೆ ಲಕ್ಕಮ್ಮ.

ಶರಣ ಚಂದಯ್ಯನವರು ಪ್ರತಿಪಾದಿಸುವ ಕೂಲಿಯ ತತ್ವ ಗಮನಾರ್ಹವಾದುದು.
ಸತ್ಯ ಶುದ್ಧ ಕಾಯಕದಿಂದ ಬಂದ ದ್ರವ್ಯದಲ್ಲಿ
ಚಿತ್ತ ವಿಚ್ಛಂದವಾಗದಿರಬೇಕು.
ನೇಮದ ಕೂಲಿಯಂದಿನ ನಿತ್ಯ ನೇಮದಲ್ಲಿ ಸಂದಿಲ್ಲದಿರಬೇಕು.
ನೇಮದ ಕೂಲಿಯ ಬಿಟ್ಟು
ಹೇಮದಾಸೆಗೆ ಕಾಮಿಸಿ ದ್ರವ್ಯವ ಹಿಡಿದಡೆ
ತಾ ಮಾಡುವ ಸೇವೆ ನಷ್ಟವಯ್ಯಾ

ಸತ್ಯ ಶುದ್ಧ ಕಾಯಕದಿಂದ ಗಳಿಸಿದ್ದು ಆತ್ಮ ಸಂತೋಷ ನೀಡುತ್ತದೆ. ಬುದ್ಧಿ ಶುದ್ಧವಾಗಿರುತ್ತದೆ. ಮತ್ತೊಬ್ಬರ ಜೇಬಿಗೆ ಕೈ ಹಾಕುವ ದುರಾಸೆ ಅಲ್ಲಿರುವುದಿಲ್ಲ. ಅತಿಯಾಸೆಯ ಭೂತವು ಬಡಿದುಕೊಳ್ಳುವುದಿಲ್ಲ. ತನು ಕರಗಿ ಮನ ಬಳಲಿ ಬಂದ ದುಡಿಮೆಯ ಪ್ರತಿಫಲಕ್ಕೆ ಸಮಾನವಾದುದು ಯಾವುದೂ ಇಲ್ಲ. ತನ್ನ ಕಾಯಕಕ್ಕೆ  ನ್ಯಾಯಯುತವಾಗಿ ಸಿಗಬೇಕಾದ ಕೂಲಿ ಸಿಗಲೇ ಬೇಕು. ಅದಕ್ಕಿಂತ ಕಡಿಮೆಯಾಗಲಿ, ಹೆಚ್ಚಾಗಲಿ ಎರಡನ್ನೂ ಸಹಿಸಲಾಗದು. ನೇಮಕ್ಕೆ ತಕ್ಕಂತೆ ನಿಷ್ಠೆಯ ದುಡಿಮೆ. ದುಡಿಮೆಗೆ ತಕ್ಕಂತೆ ದುಡ್ಡು. ಆಯಾ ದಿನದ ಕೂಲಿ ಆಯಾ ದಿನದ ನೇಮಗಳಿಗೆ ಸಲ್ಲಬೇಕು. ಬಸವಣ್ಣನವರ ವಿಚಾರವನ್ನು ಸ್ಪಷ್ಟವಾಗಿ ಗ್ರಹಿಸಿಕೊಂಡು ತತ್ವನಿಷ್ಠರಾಗಿ ಬದುಕಿದ ಶರಣರ ದೊಡ್ಡ ದಂಡೇ ಕಲ್ಯಾಣದಲ್ಲಿ ನೆಲೆಸಿತ್ತು. ಯಾವ ಕೆಲಸಕ್ಕಾಗಿ ಅವಮಾನವನ್ನೂ, ಮುಜುಗರವನ್ನೂ ಅನುಭವಿಸುತ್ತಿದ್ದರೋ ಆ ಕೆಲಸವನ್ನೇ ಪವಿತ್ರವೆಂದು, ಪೂಜೆಯೆಂದು ಕಣ್ಣಿಗೆ ಒತ್ತಿಕೊಂಡು ಸ್ವಾಭಿಮಾನದಿಂದ ತಲೆ ಎತ್ತಿ ಬದುಕಲು ಸಾಧ್ಯವಾಯಿತು. ಕಾಯಕವು ಸ್ವಾಭಿಮಾನದ ಸಂಕೇತವಾಗಿ ಶರಣರು ತಮ್ಮ ಹೆಸರಿಗೆ ಮುನ್ನ ದೇವರೆಂದು ಭಾವಿಸಿದ ತಮ್ಮ ದುಡಿಮೆಯ ಹೆಸರನ್ನು ಹೆಮ್ಮೆಯಿಂದ ಸೇರಿಸಿಕೊಂಡರು. ಮಾಡುವ ಕಾಯಕದಲ್ಲಿ ವ್ಯಕ್ತಿಯನ್ನು ಅಳೆಯುವ ಧೋರಣೆಗೆ ಸೆಡ್ಡು ಹೊಡೆದು ನಿಂತರು. ಅಂಬಿಗರ ಚೌಡಯ್ಯ, ನುಲಿಯ ಚಂದಯ್ಯ, ಡೋಹರ ಕಕ್ಕಯ್ಯ, ದನಗಾಹಿ ರಾಮಣ್ಣ, ಮೇದಾರ ಕೇತಯ್ಯ, ಕಿನ್ನರಿ ಬೊಮ್ಮಯ್ಯ, ಆಯ್ದಕ್ಕಿ ಲಕ್ಕಮ್ಮ, ಮೋಳಿಗೆ ಮಾರಯ್ಯ,… ಹೀಗೆ ಒಬ್ಬೊಬ್ಬರೂ ಕಾಯಕ ಯೋಗಿಗಳಾಗಿದ್ದರು. ಕಾಯಕವೇ ಕೈಲಾಸ ಎಂಬ ಹೊಸ ನಾಣ್ಣುಡಿಗೆ ನಾಂದಿ ಹಾಡಿದರು. ಬೇಡುವವರಿಲ್ಲದ, ಎಲ್ಲರೂ ನೀಡಲು ಉತ್ಸುಕರಾಗಿರುವ ಸಮಾಜ ನಿರ್ಮಾಣಗೊಂಡಿತು. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಆದರ್ಶವನ್ನು ಬದುಕಿ ತೋರಿಸಲು ಶರಣರಿಗೆ ಸಾಧ್ಯವಾಗಿದ್ದು ಇಂಥ ಕಾಯಕ ನಿಷ್ಠೆಯಿಂದ.

ಸತ್ಯಶುದ್ಧ ಹಾದಿಯಲ್ಲಿ ದುಡಿಯುವುದರಿಂದ ಆರಂಭವಾಗಿ ದಾಸೋಹವ ಮಾಡುವಲ್ಲಿ ಕಾಯಕದ ಅರ್ಥ ಪೂರ್ಣವಾಗುವುದು. ದಾಸೋಹದಲ್ಲಿ ಕೊಡುವವನ ಕೈ ಮೇಲಾಗಿರುವುದಿಲ್ಲ; ಪಡೆಯುವವನ ಕೈ ಕೀಳಾಗಿರುವುದಿಲ್ಲ. ಅದೊಂದು ಸಾಮಾಜಿಕ ಜವಾಬ್ದಾರಿಯ ಕಾರ್ಯ. ಹೀಗೆ ‘ಕಾಯಕ’ ಪದಕ್ಕೆ ಪರ್ಯಾಯವೇ ಇಲ್ಲವೆನಿಸುವಷ್ಟು ಅದರ ಅರ್ಥ ವಿಶಾಲವಾಗಿದೆ. “ಅಂದಂದಿನ ಕಾಯಕ ಅಂದಂದು ಮಾಡಿ ಶುದ್ಧವಾಗಿರಬೇಕು” ಎಂದ ಶರಣರು ಅಂತೆಯೇ ನಿಶ್ಚಿಂತವಾಗಿ ಬದುಕಿ ತೋರಿದರು. ಮಾಡುವ ಕೆಲಸಕ್ಕೆ ಕರ್ಮವಾದವನ್ನು ಹಚ್ಚಿ ಶೋಷಣೆ ಮಾಡುತ್ತಿದ್ದವರಿಗೆ ಈ ನಡೆ ಅನಿರೀಕ್ಷಿತ ಆಘಾತ ತಂದಿತ್ತು. ಕಾಯಕದೊಂದಿಗೆ ಅಸಂಗ್ರಹ ಗುಣವನ್ನೂ, ದಾಸೋಹ ಭಾವವನ್ನೂ ಜೊತೆ ಮಾಡಿದ ಬಗೆ ಅಸಾಧಾರಣ ಬದಲಾವಣೆಗೆ ನಾಂದಿ ಹಾಡಿತು. ಕಾಯಕದಲ್ಲಿ ಸತ್ಯಶುದ್ಧ ಮನಸ್ಸಿನ ಜೊತೆಯಿದೆ. ಪ್ರಾಮಾಣಿಕತೆ ಮೇಳೈಸಿದೆ. ಸಂಗ್ರಹ ಮನೋಭಾವದ ವಾಸನೆಯಿಲ್ಲ. ಚಿತ್ತ ಚಾಂಚಲ್ಯಕ್ಕೆ ಜಾಗವಿಲ್ಲ.

ಇಹ-ಪರಗಳ ಉನ್ನತಿಯನ್ನು ಸಾಧಿಸಬಲ್ಲ ಸಾಮರ್ಥ್ಯವಿದೆ. ಕಾಯಕ ತತ್ವವು ಶರಣರು ಜಗತ್ತಿಗೆ ನೀಡಿದ ಬಹುದೊಡ್ಡ ಕೊಡುಗೆ.

ಮೇ ಡೇಯ ಸಂದರ್ಭದಲ್ಲಿ ಕಲ್ಯಾಣದ ಕಾಯಕ ಯೋಗಿಗಳ ಬಗ್ಗೆ ನೆನೆದುಕೊಳ್ಳುವುದು, ಆ ಮೂಲಕ ನಮ್ಮ ಪ್ರಸ್ತುತ ಸನ್ನಿವೇಶಗಳಿಗೆ ಪರಿಹಾರ ಹುಡುಕಿಕೊಳ್ಳುವುದು ಅನಿವಾರ್ಯ.

Comments 6

  1. Krishna G.M
    May 4, 2018 Reply

    ಕೆಲಸ ಕಾಯಕವಾಗಲು ಏನು ಮಾಡಬೇಕೆಂದು ಗೊತ್ತಾಯಿತು. ಇದೆಲ್ಲ ನಿಜಕ್ಕೂ ಸಾಧ್ಯವೇ? ಆದರ್ಶಗಳು ಆಚರಣೆಗೆ ಬರುವುದು ಸಾಧ್ಯವೇ? ಶರಣರಂತೆ ನಾವು ಬದುಕಲು ಆಗುತ್ತದೆಯೇ? ಕಾಯಕದ ಯೋಚನೆ ಬಸವಣ್ಣನವರಿಗೆ ಹೊಳೆದದ್ದು ಹೇಗೆ? ಲೇಖನ ಹೊಸ ವಿಚಾರಗಳನ್ನು ನೀಡುತ್ತದೆ.

  2. ಡಾ.ಪಂಚಾಕ್ಷರಿ ಹಳೇಬೀಡು
    May 8, 2018 Reply

    ಕಾಯಕದ ಮಹತ್ವವನ್ನು ಸಾರುವ ಒಂದು ಉತ್ತಮ ಲೇಖನ.
    ಶರಣುಶರಣಾರ್ಥಿ.

  3. ಬಸವರಾಜ ಹಂಡಿ
    May 8, 2018 Reply

    ಲೇಖನ ಬಹಳ ಸುಂದರವಾಗಿ ಹಾಗು ಅದ್ಭುತವಾಗಿ ಮೂಡಿ ಬಂದಿದೆ. ಪ್ರತಿಯೊಂದು ವಾಕ್ಯವು ಸಹ ಬಹಳ ಅಧ್ಯಯನದಿಂದ ಬರೆದಿದ್ದಾರೆ ಮಂಗಳಾ ಶರಣಿಯರು.

    ದುಡಿಮೆ ಕಾಯಕವಲ್ಲ. ಕೆಲಸ ಕಾಯಕವಲ್ಲ ಕೂಲಿ ಕಾಯಕವಲ್ಲ ಆದರೆ ಇವೆಲ್ಲವೂ ಕಾಯಕವಾಗಬಲ್ಲುವು ಕಾಯಕ ತತ್ವದಿಂದ.

    ಸಾಮಾನ್ಯ ಉದ್ಯೋಗ ಈ ಕೇಳಗಿನವಗಳ ಮುಖಾಂತರ ಕಾಯಕವಾಗಿ ಮಾರ್ಪಾಡುಗೊಳ್ಳುತ್ತದೆ.

    1: ನಾವು ಮಾಡುವ ಕೆಲಸ ನೇರವಾಗಿ ಸಮಾಜದ ಅಭಿವೃದ್ಧಿಗೆ ಸಹಾಯ ಆಗಲ್ಲ ಆದರೆ ಈ ಕೆಲಸದಿಂದ ಬಂದ ಫಲವನ್ನು(ದುಡ್ಡು) ಸರಳವಾದ ಜೀವನವನ್ನು ನಡೆಸಲು ಬೇಕಾಗುವ ಅಷ್ಟು ಇಟ್ಟಕೊಂಡು ಊಳಿದ ದುಡ್ಡುನ್ನು ಸಮಾಜ ಕೆಲಸಕ್ಕೆ ಉಪಯೋಗ ಮಾಡುವದು. ಇಲ್ಲಿ ಸ್ವಲ್ಪ ಪ್ರಮಾಣದ ಕಾಯಕ ತತ್ವ ಅಡಗಿಕೊಂಡಿದೆ. ಮೊದಲನೆಯ ಹೆಜ್ಜೆ ಅಂತ ಹೇಳಬಹುದು.

    2: ನಾವು ಮಾಡುವ ಕೆಲಸ ನೇರವಾಗಿ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಸಮಾಜದ ಅಭಿವೃದ್ಧಿಗೆ ನೆರವಾಗುತ್ತದೆ.
    ಈ ಕೆಲಸದಿಂದ ಬರುವ ಸಂಪತ್ತನ್ನು ನಮ್ಮ ಜೀವನಕ್ಕೆ ಎಷ್ಟು ಬೇಕು ಅಷ್ಟು ಇಟ್ಟಕೊಂಡು ಊಳಿದ ಸಂಪತ್ತನ್ನು ಸಮಾಜಕ್ಕೆ ವಿನೊಯೋಗಿಸವದು. ಇಲ್ಲಿ ತಕ್ಕ ಮಟ್ಟಿಕೆ ಕಾಯಕ ತತ್ವ ಅನ್ವಯವಾಗುತ್ತದೆ. 2ನೆಯ ಹೆಜ್ಜೆ ಅಂತ ಹೇಳಬಹುದು.

    3: ನಾವು ಮಾಡುವ ಕೆಲಸ ಸತ್ಯ ಶುದ್ದವಾಗಿರಬೇಕು. ಈ ಕೆಲಸವೇ ದೇವರು ಅಂತ ತಿಳಿದುಕೊಂಡು ಭಕ್ತಿಯಿಂದ ಮಾಡಬೇಕು. ಅಂಗಕ್ರಿಯ ಲಿಂಗಕ್ರಿಯ ಆಗಬೇಕು. ನಾವು ಮಾಡುವ ಕೆಲಸ ಬಹಳ ನೇರವಾಗಿ ಸಮಾಜದ ಮೇಲೆ ಒಳ್ಳೆಯ ಪರಿಣಾಮ ಬಿರಬೇಕು. ಕೇವಲ ಸಮಾಜದ ಹಿತವನ್ನು ಗಮದಲ್ಲಿ ಇಟ್ಟಕೊಂಡು ಕೆಲಸ ಮಾಡಬೇಕು. ಇಂತ ಕೆಲಸದಿಂದ ದೊರೆತ ಸಂಪತ್ತನ್ನು ಸಂಗ್ರಹ ಮಾಡಲಾರದೆ ಸರಳ ಜೀವನವನ್ನು ನಡೆಸಲು ಉಪಯೋಗಿಸಬೇಕು. ಇಲ್ಲಿ ಸಂಪೂರ್ಣ ಕಾಯಕ ತತ್ವ ಅಡಗಿದೆ. ಇಂತ ಕಾಯಕದಿಂದ ನಾವು ಲಿಂಗೈಕ್ಯವನ್ನು ಸಾಧಿಸಬಹುದು.

    ಈ ಕೆಳಗಿನ ವಾಕ್ಯವನ್ನು ಈ ಲೇಖನದಲ್ಲಿ ಬರೆಯಲಾಗಿದೆ.

    “ದೇಹಶ್ರಮದ ಕಾಯಕಕ್ಕೆ ದೇಹವನ್ನೂ, ದೇವರನ್ನೂ ಸಂತೃಪ್ತಿಗೊಳಿಸುವ ಮಾಂತ್ರಿಕ ಶಕ್ತಿ ಇದೆ”

    ಮಾಂತ್ರಿಕ ಶಬ್ದವನ್ನು ಹಾಗು ಮೂಡ ನಂಬಿಕೆಗಳನ್ನು ಸೂಚಿಸುವ ಶಬ್ದಗಳನ್ನು ಶರಣರ ಹಾಗು ವಚನಗಳ ಬಗ್ಗೆ ಬರೆಯುವಾಗ ಉಪಯೋಗಿಸಬಾರದು.

    ನೋಡಿ ನಮ್ಮ ಶರಣರ ದೊರಣೆ/ವಿಚಾರ ಹೇಗಿತ್ತು
    “ಕಾಯಕದ ಪ್ರತಿಫಲವನ್ನು ಹಕ್ಕಿನ ಹಾಗೆ ಸ್ವೀಕರಿಸಿದ ಶರಣರು ಹೆಚ್ಚಿನ ಆದಾಯವನ್ನು ವಿಷವೆಂದು ಬಗೆದರು”
    ಕಾಯಕದಲ್ಲಿ ಮುಕ್ತಿಯನ್ನು ಕಾಣುವ ಬಗೆ. ಪ್ರತಿಯೊಂದರಲ್ಲಿ ಬಯಲನ್ನು ಕಾಣುವ ರೀತಿ.

    ಕಾಯಕದ ಬಗ್ಗೆ ಲಕ್ಕಮ್ಮ, ಕಾಳವೇ ಹಾಗು ಇತರ ಶರಣಗಳ ವಚನಗಳನ್ನು ಓದುವಾಗ ದಿಗ್ರ್ಮಗೆ ಒಳಗಾಗುತ್ತೇವೆ. ಏನಿದು ಎಂತ ಅದ್ಭುತವಾದ ಜೀವನವನ್ನು ಜೀವಿಸಿದರು ನಮ್ಮ ಶರಣರು.

    ಸಂದರ್ಭಕ್ಕೆ ತಕ್ಕಂತೆ ವಚನಗಳ ಆಯ್ಕೆ ಉತ್ತ್ಕೃಷ್ಠ(ಅತ್ತ್ಯುತಮ)ವಾದದ್ದು.

    ಮಂಗಳಾ ಶರಣಿಯರಗೆ ಹಾಗು ಬಯಲು ತಂಡಕ್ಕೆ ಶರಣು ಶರನಾರ್ತ್ರಿಗಳು.

  4. kavitha hiremat
    May 8, 2018 Reply

    kayaka is a wonderful concept given by sharanas. the whole world should know about it.

  5. Siddappa Mulge
    Aug 9, 2018 Reply

    ಒಳ್ಳೆಯ ಲೇಖನ.

  6. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ.ಮಂಡ್ಯ ಜಿಲ್ಲೆ.
    Sep 20, 2021 Reply

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ

Leave a Reply to ಬಸವರಾಜ ಹಂಡಿ Cancel reply

Your email address will not be published. Required fields are marked *