ಮನವೇ ಮನವೇ…
ಭವ ಸಂಸಾರದ ಸವಿಯನು ನಂಬಿ ಸವೆಯದಿರು ಮನವೇ
ಶಿವಜ್ಞಾನಿಗಳ ತವಕದಿ ಬೆರಸು ಸವಿಯುಂಟಲೆ ಮನವೇ //ಪ//
ಎಲುವನು ಕಡಿದ ಸೊಣಗನು ಕಂಡ ಫಲದಂತೆ ಮನವೇ
ವಿಲವಿಲ ಎನ್ನುತ ನಲುಗಿದೆ ನೀನು ನಲಿವಿಲ್ಲ ಮನವೇ
ಒಲವಿಂದಲೆ ನೀ ಬಲೆ ಮೂರಕ್ಕೆ ಬಲಿಯಾದೆ ಮನವೇ
ನೆಲೆ ತಾನರಿಯದೆ ಅಲೆಯುವ ಸೊಣಗ ಅಲೆದಂತೆ ಮನವೇ //1//
ಹರಿಯುವ ನೀರಿಗೆ ಬೆರಳಿಟ್ಟುಂಡರೆ ಹಿರಿದುಂಟೇ ಮನವೇ
ಕರಿ ಕುನ್ನಿಯು ತಾ ಕೆರ ಕಚ್ಚಾಡಲು ಸಿರಿಯುಂಟೇ ಮನವೇ
ಉರಗನ ಬಾಯಲಿ ಇರುತಿಹ ಕಪ್ಪೆಯ ಪರಿನೀನೆಲೆ ಮನವೇ
ಮರಣದ ಬಾಧೆ ಬರುತಿದೆ ಮುಂದೆ ಮೆರೆಯದಿರು ಮನವೇ //2//
ಸಿರಿ ಸುಖವೆಲ್ಲ ಹಿರಿ ಸಂತೆಯು ತಾ ಕರಗುವ ಪರಿಮನವೇ
ಮರುತಗೆ ಇದಿರು ಉರಿಯುವ ಜ್ಯೋತಿ ಇರಲುಂಟೇ ಮನವೇ
ಹಿರಿಹಿರಿ ನಂಬಿದೆ ಕರಗುವ ಸಿರಿಯನೆ ಮರುಳಾದೆಲೆ ಮನವೇ
ಗುರಿಯನು ಕಾಣದೆ ಧರೆ ಸಿರಿಯೊಳಗೆ ಚರಿಸದಿರು ಮನವೇ //3//
ಇಳೆಯಲ್ಲಾಡುತ ಒಳಬೆಳಗನ್ನು ಕಳೆದೆ ಎಲೆ ಮನವೇ
ಒಳ ಸೇರುತ ನೀ ಕಳೆಬೆಳಗಿನೊಳು ಮುಳುಗುತಲಿರು ಮನವೇ
ಇಳೆಯನು ಬೆಳಗುವ ಇನಶಶಿ ಎಲ್ಲ ಒಳಗಿವೆ ತಿಳಿ ಮನವೇ
ಅಳಿಯದ ಬೆಳಗು ಒಳಗಿದೆ ತಿಳಿದು ತಿಳಿಯಾಗಲೆ ಮನವೇ //4//
ಸನ್ನುತ ಶರಣರ ಬೆನ್ನಿಗೆ ಬೀಳು ಉನ್ನತಿ ಎಲೆ ಮನವೇ
ಬನ್ನವ ಅಳಿಸಿ ರನ್ನವ ತಿಳಿಸುವರಿನ್ನಾರೆಲೆ ಮನವೇ
ಅನ್ಯವ ತೊರೆಸಿ ಭಿನ್ನವ ಕಳೆಯುವರಿನ್ನಾರೆಲೆ ಮನವೇ
ಮುನ್ನಿನ ನಿರವಯಲುನ್ನತ ನಿನ್ನೊಳು ತೋರುವರೆಲೆ ಮನವೇ //5//
-ಮಹಾಲಿಂಗ ಶಿವಯೋಗಿಗಳು
Comments 2
B.S.Patil
May 14, 2020ಮನವೇ ತತ್ವಪದ ಓದುತ್ತಾ ಹೋದಂತಡ ಹಾಡಿಸಿಕೊಳ್ಳತೊಡಗಿತು. ಒಂದೊಂದು ಸಾಲೂ ಬಹಳ ಹಿಡಿಸಿದವು. ಶ್ರೀಗಳಿಗೆ ಶರಣು.
Channappa Vali
May 14, 2020ಮನವೇ ಮನವೇ… ಮತ್ತು ಹೆಸರಿಲ್ಲದಾ ಊರಿನ ಹಾಡು ಎರಡೂ ಬಹಳ ಚನ್ನಾಗಿವೆ. ಸ್ವರ ವಚನಗಳನ್ನು ಓದಿದಂತೆ ಭಾಸವಾಯಿತು. ಎರಡಕ್ಕೂ ರಾಗ ಹಾಕಿ ಹಾಡುವಂತಿವೆ. ಪ್ರತಿ ಸಾಲುಗಳೂ ಮನನಯೋಗ್ಯವಾಗಿವೆ.