ಬಸವನಾ ಯೋಗದಿಂ…
Share:

ಬಸವನಾ ಯೋಗದಿಂ…

ನಮ್ಮ ಕಿವಿಯ ಮೇಲೆ ಪ್ರತಿನಿತ್ಯ ಯೋಗ ಎಂಬ ಶಬ್ದ ಹಲವಾರು ಬಾರಿ  ಅಪ್ಪಳಿಸುತ್ತದೆ. ಲಕ್ಷಾಂತರ ಯೋಗ ತರಬೇತಿ ಶಾಲೆಗಳು ಜಗತ್ತಿನಾದ್ಯಂತ ಮೈಚಾಚಿಕೊಂಡಿವೆ, ಯೋಗ ಈಗ ಒಂದು ಹುಲುಸಾದ ಉದ್ಯಮವಾಗಿ ಬೆಳೆದಿದೆ. ಬಂಡವಾಳವಿಲ್ಲದ, ನಷ್ಟವಿಲ್ಲದ ವ್ಯಾಪಾರದ ಸರಕಾಗಿದೆ. ಜೂನ್ ೨೧ನ್ನು ವಿಶ್ವಯೋಗದಿನವನ್ನಾಗಿ ಜಗತ್ತಿನಾದ್ಯಂತ ೨೦೧೫ನೇ ಇಸವಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಇದರ ನಿಮಿತ್ತ ಯೋಗ ಕುರಿತಂತೆ ಭಾರತದ ವಿವಿಧ ಧರ್ಮಗಳ ಆಚರಣೆಗಳತ್ತ ಒಂದು ಒಳನೋಟವೇ ಈ ಕಿರು ಲೇಖನ.

ಈ ಸೃಷ್ಟಿಯಲ್ಲಿ ಹೊಸದೊಂದು ಉತ್ಪತ್ತಿಯಾಗಬೇಕಾದರೆ ಅಲ್ಲಿ ಎರಡರ ಸಮಾಗಮವಿರಬೇಕು ಆಗಲೇ ಮೂರನೆಯದರ ಉಗಮ ಸಾಧ್ಯ ಎಂದು ವಿಜ್ಞಾನಿಗಳಾದಿಯಾಗಿ ಸಂತರು ಶರಣರು  ಪ್ರವಾದಿಗಳು ಸಾರಿದ್ದಾರೆ ಹಾಗೂ ಅದು ಎಲ್ಲರ ಅನುಭವ ವೇದ್ಯ ಕೂಡ. ಯೋಗ ಎಂದರೆ ಒಂದನ್ನೊಂದು ಕೂಡುವುದು,  ಇದಕ್ಕೆ ಸಾಮಾಜಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಯಾಮಗಳಿವೆ. ಸಾಮಾಜಿಕ ಆಯಾಮದಲ್ಲಿ ಪರಸ್ಪರ ಸಹಬಾಳ್ವೆಯೇ ಯೋಗವೆನಿಸಿದರೆ ಸಮಾಜದಲ್ಲಿ ನೆಲೆಗೊಂಡ ಸಂತೃಪ್ತಿ, ಸಮಾಧಾನ, ಸೈರಣೆ ಮುಂತಾದುವುಗಳು ಅದರ ಫಲಿತಗಳು. ಧಾರ್ಮಿಕ ಆಯಾಮದಲ್ಲಿ ದೇವರು ಮತ್ತು ಭಕ್ತನ ನಡುವೆ ಉಂಟಾಗುವ ಸಂಬಂಧವು ಯೋಗವೆನಿಸುವುದು. ಈ ಸಂಬಂಧದಿಂದ ಭಕ್ತನಲ್ಲಿ  ಧೈರ್ಯ, ದೇವರ ಮೇಲೆ ವಿಶ್ವಾಸ ವೃದ್ಧಿಸುವವು. ಇದು ಭಕ್ತಿಯಫಲ, ಇಲ್ಲಿ ಭಕ್ತನು ದೇವರಿಂದ ಸದಾ ಒಂದಿಲ್ಲೊಂದು ಬೇಡಿಕೆಯನ್ನು  ಪೂರೈಸುವಂತೆ ಮನವಿ ಸಲ್ಲಿಸುತ್ತಲೇ ಇರುತ್ತಾನೆ. ತನ್ನ ಪ್ರತಿ ಆಗುಹೋಗುಗಳಿಗೂ ಭಕ್ತನು ದೇವರನ್ನು ಸದಾ ಆಶ್ರಯಿಸಿಯೇ ಇರುತ್ತಾನೆ. ಆಧ್ಯಾತ್ಮಿಕ ಆಯಾಮದಲ್ಲಿ ಭಕ್ತ-ದೇವರ ಸಂಬಂಧ ಬೇರೆಯೇ ಆಗಿರುವುದು. ಈ ಸಂಬಂಧವು  ಧಾರ್ಮಿಕತೆಯಲ್ಲಿ ಕಂಡುಬರುವ ದೇವ-ಭಕ್ತ ಸಂಬಂಧಗಳಿಗಿಂತ ಸಂಪೂರ್ಣ ವಿಭಿನ್ನ ನೆಲೆಯಲ್ಲಿ ನಿಲ್ಲುವುದು. ಇಲ್ಲಿ ಭಕ್ತನು ದೇವನನ್ನು ಯಾವ ಆಶೋತ್ತರಗಳನ್ನು ಪೂರೈಸುವಂತೆ ಬೇಡಿಕೆ ಸಲ್ಲಿಸುವುದಿಲ್ಲ. ದೇವರನ್ನು ತನ್ನಿಂದ ಭಿನ್ನವಾಗಿ ಹೊರಗಡೆ ಇದ್ದಾನೆಂದು ಭಾವಿಸುವುದಿಲ್ಲ. ದೇವರೆಂಬ ಅಖಂಡ ಚೈತನ್ಯವಸ್ತು ತನ್ನೊಳಗೇ ಇದ್ದು ಸದಾ ತನ್ನನ್ನು ಸತ್ಪಥದಲ್ಲಿ ಮುನ್ನಡೆಸುವುದು ಎಂಬ ಅಭಿನ್ನ ಭಾವ ಭಕ್ತನಲ್ಲಿ ನೆಲೆಗೊಡಿರುವುದರಿಂದ ಆತನು ದೇವರನ್ನು ಏನನ್ನೂ ಬೇಡುವುದಿಲ್ಲ ಬದಲಿಗೆ ದೇವರ ಸ್ವರೂಪವೇ ತಾನಾಗಬಯಸುತ್ತಾನೆ. ಇಂಥಾ ದೇವ-ಭಕ್ತ ಸಂಬಂಧದಿಂದ ಭಕ್ತನಲ್ಲಿ ಆತ್ಮವಿಶ್ವಾಸ, ಮನೋ ನಿಶ್ಚಲತೆ ವೃದ್ಧಿಸುವುದರ ಜೊತೆಗೆ ಮನೋ ನಿಷ್ಪತ್ತಿಯಾಗುವುದು.

ಆಯಸ್ಕಾಂತ ಮತ್ತು ತಾಮ್ರದ ಸುರುಳಿಗಳ ಸಂಗಮದಿಂದ ವಿದ್ಯುತ್ ಉತ್ಪತ್ತಿಯಾಗುವುದು. ಹೀಗೆ ಉತ್ಪತ್ತಿಯಾದ ವಿದ್ಯುತ್ ತನ್ನಿಂದ ತಾನೇ ಯಾವ ಪ್ರಯೋಜನಕ್ಕೂ ಬಾರದು. ಆ ವಿದ್ಯುತ್ ವಾಹಕವನ್ನು ಬಲ್ಬ್ ಗೆ ಸಂಪರ್ಕಿಸಿದಾಗ ಬೆಳಕು ಪ್ರಜ್ವಲಿಸುವುದು, ಅದೇ ವಿದ್ಯುತ್ ನೀರಿನ ಪಂಪ್ ಗೆ ಸಂಪರ್ಕಿಸಿದಾಗ ಅದು ನೀರನ್ನು ಮೇಲೆತ್ತುವುದು ಹೀಗೆ ಅನೇಕ ರೀತಿಯಲ್ಲಿ  ನಮಗೆ ಬೇಕಾದ ಹಾಗೆ  ವಿದ್ಯುತ್ತನ್ನು ಬಳಸಿಕೊಳ್ಳಬಹುದು. ಬಹುಮುಖ್ಯವಾಗಿ ವಿದ್ಯುತ್ ಮತ್ತು ಉಪಕರಣವನ್ನು ಜೋಡಿಸಬೇಕು. ಹಾಗೇ ಭಾರತೀಯ ಪರಂಪರೆಯಲ್ಲಿ ಯೋಗವನ್ನು ಆತ್ಮ ಮತ್ತು ಪರಮಾತ್ಮರ ಜೋಡಣೆಯ ಕೊಂಡಿಯಾಗಿ ಬಳಸಲಾಗಿದೆ. ಭಾರತೀಯ ಜನ್ಯ  ಬೇರೆ ಬೇರೆ ಧರ್ಮಗಳು  ಯೋಗವನ್ನು ತಮ್ಮದೇ ಆದ ರೀತಿಯಲ್ಲಿ ಅನುಷ್ಠಾನಿಸಿವೆ.

ಪತಂಜಲಿ ಯೋಗಸೂತ್ರವು ಸುಮಾರು ೧೯೬ ಪುರಾತನ  ಸೂತ್ರಗಳ ಕ್ರೋಢೀಕರಣದ ಸಮುಚ್ಛಯ. ಸುಮಾರು ಕ್ರಿ.ಪೂ ೪೦೦ ವರ್ಷಗಳಷ್ಟು ಹಿಂದೆ ಮಹರ್ಷಿ ಪತಂಜಲಿ ಬಿಡಿಬಿಡಿಯಾಗಿದ್ದ  ಈ ಯೋಗ ಸೂತ್ರಗಳನ್ನು ಕ್ರಮಬದ್ಧವಾಗಿ ಜೋಡಿಸಿದರು. ಕ್ರಮೇಣ ಭಾರತದಲ್ಲಿ  ಹಠಯೋಗ, ಪಾಶುಪತ ಶೈವಯೋಗ ಇನ್ನಿತರ ಯೋಗಗಳೂ ಪ್ರಚಲಿತಕ್ಕೆ ಬಂದವು. ಪತಂಜಲಿಯ ಯೋಗಸೂತ್ರದಲ್ಲಿ ಯೋಗದ ಆಶಯವು ಚಿತ್ತದ ವೃತ್ತಿಯನ್ನು ನಿವೃತ್ತಿ ಮಾಡುವುದೇ ಆಗಿದೆ ಎಂದು ತಿಳಿಸಲಾಗಿದೆ. ಅಂದರೆ ಮನಸ್ಸನ್ನು ನಿಯಂತ್ರಣದಲ್ಲಿರಿಸುವ ಮೂಲಕ ದೇಹದ ಆರೋಗ್ಯವನ್ನೂ ಸ್ವಾಸ್ಥ್ಯದಲ್ಲಿಡಬಹುದಾಗಿದೆ. ತನ್ಮೂಲಕ ಆಧ್ಯಾತ್ಮ ಸಾಧನೆಯ ಮೆಟ್ಟಿಲುಗಳನ್ನು ಏರುವುದರೊಂದಿಗೆ ಪರಮಶಾಂತಿಯನ್ನು ಪಡೆಯಬಹುದಾಗಿದೆ. ಪತಂಜಲಿ ಯೋಗ ಸೂತ್ರವನ್ನು ಅಷ್ಟಾಂಗ ಯೋಗವೆಂದು ಕರೆಯುವರು. ಕಾರಣ, ಇದು ಎಂಟು ಅಂಗಗಳಿಂದ ಕೂಡಿದ್ದು ಅವು ಕ್ರಮವಾಗಿ ಯಮ,  ನಿಯಮ,  ಆಸನ,  ಪ್ರಾಣಾಯಾಮ,  ಪ್ರತ್ಯಾಹಾರ,  ಧ್ಯಾನ,  ಧಾರಣ ಮತ್ತು ಸಮಾಧಿ.  ಭಗವದ್ಗೀತೆಯ ಉಲ್ಲೇಖದ ಪ್ರಕಾರ ಮೂರು ಪ್ರಕಾರದ ಯೋಗಮಾರ್ಗಗಳನ್ನು ಗುರುತಿಸಬಹುದು, ಅವು- ೧) ಜ್ಞಾನಮಾರ್ಗ ೨) ಭಕ್ತಿಮಾರ್ಗ ಮತ್ತು ೩) ಕರ್ಮಮಾರ್ಗ. ಈ ಯೋಗಗಳ ಪ್ರಕಾರ ಮಾನವನು ಪರಮಾತ್ಮನೊಡನೆ ಬೆರೆತು ಬೇರಿಲ್ಲದಂತಾಗಲು ಈ ಮೇಲಿನ ಯಾವುದಾದರೂ ಮಾರ್ಗದಲ್ಲಿ ಸಾಗಿ ಗುರಿಮುಟ್ಟಬಹುದು.

ಇತಿಹಾಸಕಾರರ ಪ್ರಕಾರ ಪತಂಜಲಿ ಯೋಗಸೂತ್ರಗಳ ಮೇಲೆ  ಬೌದ್ಧ ಹಾಗೂ ಜೈನ ಧರ್ಮಗಳ ಪ್ರಭಾವ ಗಾಢವಾಗಿದೆ. ಬೌದ್ಧಧರ್ಮದಲ್ಲಿ ಬರುವ ವಿಪಶ್ಯನ ಧ್ಯಾನವು ಮಾನವನನ್ನು ಒಳನೋಟದ ಮೂಲಕ ಪರಿಶುದ್ಧಗೊಳಿಸುವುದು,  ಇದು ಪತಂಜಲಿ ಸೂತ್ರಗಳಲ್ಲಿ ಪ್ರಮುಖಸ್ಥಾನ ಪಡೆದಿದೆ. ಶಾಂತವಾದ ಕ್ರಮಬದ್ಧ ಉಸಿರಾಟದ ಮೂಲಕ ವಿಪಶ್ಯನ ಧ್ಯಾನವನ್ನು ಮಾಡಬೇಕು. ನಮ್ಮಲ್ಲಿರುವ ನಕಾರಾತ್ಮಕ ಗುಣಗಳನ್ನು ದೂರಮಾಡಿಕೊಳ್ಳುವುದೇ  ಧ್ಯಾನದ ಪ್ರಮುಖ ಲಕ್ಷಣ.

ಸಿಖ್ ಧರ್ಮವು, ದೇವರನ್ನು ನಮ್ಮ ದೈನಂದಿನ ಎಲ್ಲಾ ಕಾರ್ಯಗಳಲ್ಲೂ, ಎಲ್ಲಾ ಸಮಯದಲ್ಲೂ ಬಿಡದೆ ಅನವರತ ಮನದಲ್ಲಿ  ನೆನೆಯುತ್ತಾ ಮಾಡುವುದೇ ಸರ್ವಶ್ರೇಷ್ಠವೆಂದು ಸಾರುತ್ತದೆ. ಇದರಿಂದ ಮಾನವನು ಸಚ್ಚಾರಿತ್ರ್ಯವಂತನಾಗುತ್ತಾನೆ.

ಸಿಖ್ ಧರ್ಮದ ಪ್ರಕಾರ ಯೋಗವೆಂದರೆ ದೇವರೊಡನೆ ಜೀವನು ಒಂದಾಗುವುದು. ಹಾಗೆಂದರೆ ಕೇವಲ ಯೋಗದ ಕೆಲವು ಭಂಗಿಗಳನ್ನು ಅಭ್ಯಾಸ ಮಾಡುವುದರಿಂದ ದೇವರೊಡನೆ ಕೂಡುವುದು ಸಾಧ್ಯವಿಲ್ಲ. ಸಮಾಜದೆಡೆಗೆ ಶುದ್ಧಾಂತಃಕರಣದಿಂದ  ತನು ಮನ ಧನ ಸವೆಸಿ ಮಾಡುವ ಸೇವೆಯೇ ನಿಜವಾದ ಯೋಗ ಎಂದಿರುವರು. ಮನಸ್ಸು  ಮೃದುವಾಗದೇ ಕಲ್ಲಾಗಿದ್ದರೆ ಕೇವಲ ಉಪವಾಸ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂಬುದು ಸಿಖ್ಖರ ನಂಬಿಕೆ.

ಇನ್ನು ಶರಣರ  ಯೋಗಸೂತ್ರವು ಸಂಪೂರ್ಣ ವಿಭಿನ್ನ ನೆಲೆಯಲ್ಲಿ ನಿಲ್ಲುವುದು. ಇದು ಬೆಳಗಿನ ಜಾವ, ಅಥವಾ ಸಂಜೆ ಸಮಯಕ್ಕನುಗುಣವಾಗಿ ಮಾಡುವ ಯೋಗವಲ್ಲ, ಅಥವಾ ಪೂಜಾ ಸಮಯದಲ್ಲಿ ಮಾತ್ರ ಮಾಡುವ ಯೋಗವೂ ಅಲ್ಲ, ಕೇವಲ ಆರೋಗ್ಯ ವೃದ್ಧಿಗಾಗಿ, ಅಂಗ ಸೌಷ್ಠವಕ್ಕಾಗಿ ಮಾಡುವ ಯೋಗವಂತೂ ಅಲ್ಲವೇ ಅಲ್ಲ. ಹಾಗಾದರೆ ಈ ಯೋಗಸೂತ್ರ ಯಾವುದು? ಇದರ ನಿರ್ಮಾತೃ/ ಪ್ರತಿಪಾದಕರು ಯಾರು?

ಶರಣರು ಪ್ರತಿಪಾದಿಸಿದ ಯೋಗವು ಶೂನ್ಯ ಸಿದ್ಧಾಂತದ ಮೇಲೆ ನಿಂತಿದೆ. ಶೂನ್ಯವೆಂದರೆ ಎಲ್ಲವನ್ನೂ ಒಳಗೊಂಡ ಪರಿಪೂರ್ಣತೆ. ಅಂಥಾ ಪರಿಪೂರ್ಣತೆಯ ಸಂಪಾದನೆಯೇ ಶೂನ್ಯಸಂಪಾದನೆ. ಇದರ ಪ್ರತಿಪಾದಕರು ಮಹಾಮಾನವತಾವಾದಿ, ಹನ್ನೆರಡನೇ ಶತಮಾನದಲ್ಲಿ ಕನ್ನಡನಾಡಿನಲ್ಲಿ ಸಾಮಾಜಿಕ ಧಾರ್ಮಿಕ ಆರ್ಥಿಕ ಕ್ರಾಂತಿಗಳನ್ನು ಮಾಡಿದ ವಿಶ್ವಗುರು ಬಸವೇಶ್ವರರು.  ಪರಿಪೂರ್ಣತೆಯನ್ನು ಸಾಧಿಸುವುದೇ ಪ್ರತಿಯೊಬ್ಬರ ಜೀವನದ  ಗುರಿಯಾಗಬೇಕೆಂಬುದು ಬಸವಣ್ಣನವರ  ಬಯಕೆಯಾಗಿತ್ತು. ಜೀವನದ ಪರಿಪೂರ್ಣತೆಯೇ ಯೋಗ.  ಅದು ಪ್ರತಿ ಉಸಿರಿನಲ್ಲೂ ಮಿಳಿತವಾಗಬೇಕು. ಪರಿಪೂರ್ಣತೆ ಎಂಬುದು ಯಾವುದೋ ಒಂದು ನಿರ್ದಿಷ್ಟ ಮಗ್ಗುಲಿನ ಬಲದಿಂದ ಸಾಧ್ಯವಾಗುವುದಲ್ಲ, ಮಾನವನ ಕಾಯದ ಪ್ರತಿ ಅಂಗವೂ ಪ್ರತಿ ಕ್ಷಣವೂ ಅದಕ್ಕಾಗಿ ತುಡಿಯಬೇಕು. ಇದಕ್ಕಾಗಿ ಅನೇಕ ಧರ್ಮಗಳು ಪ್ರಾಪಂಚಿಕ ವಿಮುಖತೆಯನ್ನು ಬೋಧಿಸಿದವು. ಇದನ್ನು ಬಸವಾದಿ ಶರಣರು ಅಲ್ಲಗಳೆದರು.  ಜೀವಿಯು ಜೀವನದಿಂದ ವಿಮುಖವಾಗಬಾರದು, ಜೀವನವನ್ನು ಅದ್ಭುತವಾಗಿ ಜೀವಿಸಬೇಕು, ಸಮಾಜ ಜೀವನದಿಂದ ವಿಮುಖವಾಗಿ  ಅರಣ್ಯ ಸೇರಿಕೊಂಡು ಯೋಗ ಸಾಧಿಸುವುದನ್ನು ಶರಣರು ಒಪ್ಪುವುದಿಲ್ಲ. ದೇವರ ಈ ಸೃಷ್ಟಿ ಅತೀ ಅದ್ಭುತ, ಆ ಅದ್ಭುತವನ್ನು ಸೃಷ್ಟಿನಿಯಮದಂತೆ ಸೃಷ್ಟಿಯ ಭಾಗವೇ ಆದ ಮಾನವನು ಅನುಭವಿಸಬೇಕು. ಹಾಗೆ ಅನುಭವಿಸುವಾಗ ಸೃಷ್ಟಿಯ ಪ್ರತಿಕಣದಲ್ಲೂ ದೈವೀ ಶಕ್ತಿಯ ಇರುವಿಕೆಯನ್ನು ಗುರುತಿಸಿ ಅದರ ಪ್ರಭೆಯೊಳಗೆ ಒಂದಾಗಬೇಕು.

ಜೀವನದಲ್ಲಿ ಪ್ರತಿಯೊಬ್ಬರೂ ಪರಿಪೂರ್ಣತೆ ಹೊಂದಲು ಬಸವಣ್ಣನವರು ಷಟ್ಸ್ಥಲವೆಂಬ ಮಾರ್ಗಸೂಚಿಯನ್ನು ಕೊಟ್ಟಿದ್ದಾರೆ. ಆ ಮಾರ್ಗದಲ್ಲಿ ಕ್ರಮಿಸುವಾತನ ಸಾಧನೆಗೆ ಅನುಕೂಲವಾಗಲೆಂದು ಆರು ಮೈಲುಗಲ್ಲುಗಳನ್ನು ನೆಡಲಾಗಿದೆ. ಅವೇ ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಮತ್ತು ಐಕ್ಯವೆಂಬ ಆರು ಸ್ಥಲಗಳು. ಪತಂಜಲಿ ಮಹರ್ಷಿಯ ಯೋಗಸೂತ್ರದಲ್ಲಿ ಎಂಟು ಹಂತದ ಯೋಗಭ್ಯಾಸಗಳುಂಟು. ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಮತ್ತು ಸಮಾಧಿ ಎಂಬ ಎಂಟು ಯೋಗಾಭ್ಯಾಸಗಳನ್ನು ಬಸವಣ್ಣನವರು ಕೊಟ್ಟಿರುವ ಷಟ್ಸ್ಥಲಗಳೊಂದಿಗೆ ಹೋಲಿಕೆ ಮಾಡುವುದಾದರೆ,

  1. ಭಕ್ತಸ್ಥಲ- ಯಮ ಮತ್ತು ನಿಯಮ : (ಈ ಹಂತದಲ್ಲಿ ಸಾಧಕನು ಭಕ್ತಿ ಮತ್ತು ಶ್ರದ್ಧೆಗಳನ್ನು ಅಳವಡಿಸಿಕೊಳ್ಳುತ್ತಾನೆ.)
  2. ಮಹೇಶ್ವರಸ್ಥಲ- ನಿಯಮ ಮತ್ತು ಆಸನ : (ಈ ಹಂತದಲ್ಲಿ ಸಾಧಕನಲ್ಲಿ ತತ್ವ ನಿಷ್ಠೆ ಅಳವಟ್ಟು ಗಟ್ಟಿಗೊಳ್ಳುವುದು.)
  3. ಪ್ರಸಾದಿಸ್ಥಲ- ಪ್ರತ್ಯಾಹಾರ : (ಈ ಹಂತದಲ್ಲಿ  ಸಾಧಕನು ಜೀವನವನ್ನು ದೇವರಿತ್ತ ಪ್ರಸಾದ, ಜಗತ್ತೆಲ್ಲವೂ ಪ್ರಸಾದವೆಂದು ಭಾವಿಸಿ ಅನುಭವಿಸುತ್ತಾನೆ.)
  4. ಪ್ರಾಣಲಿಂಗಿಸ್ಥಲ- ಪ್ರಾಣಾಯಾಮ ಮತ್ತು ಧ್ಯಾನ : (ಈ ಹಂತದಲ್ಲಿ  ಸಾಧಕನು ಪ್ರಾಣದಲ್ಲಿ ದೇವರನ್ನು ಕಾಣುವನು, ಅಂತಃಕರಣಗಳು ಪರಿಶುದ್ಧಗೊಂಡು ದೈವೀಮಯವಾಗುವ ಸ್ಥಿತಿ.)
  5. ಶರಣಸ್ಥಲ- ಧಾರಣ : (ದೇವರು ತನ್ನೊಳಗೇ ಇದ್ದಾನೆ, ಅಖಂಡ ಸೃಷ್ಟಿಯಲ್ಲೂ ಇದ್ದಾನೆ ಹಾಗಾಗಿ ಜಗತ್ತು ಬೇರೆಯಲ್ಲ ನಾನು ಬೇರೆಯಲ್ಲ ಎಂಬ ಭಾವ ಬಲಿಯುವುದು.)
  6. ಐಕ್ಯಸ್ಥಲ- ಸಮಾಧಿ :  (ನಿಶ್ಚಿಂತ ನಿಜವನ್ನು ಒಡಗೂಡುವ ಸ್ಥಿತಿಯೇ ಐಕ್ಯ)

ಎಂದು ಸಮೀಕರಿಸಬಹುದು. ಇದಕ್ಕೆ ಬಸವಣ್ಣನವರು ಲಿಂಗಾಂಗ ಯೋಗ, ಅಂಗ-ಲಿಂಗ ಸಮರಸ ಎಂದೂ ಕರೆದಿದ್ದಾರೆ. ಶಿವಯೋಗಿ ಸಿದ್ಧರಾಮೇಶ್ವರರು ತಮ್ಮ ಒಂದು ವಚನದಲ್ಲಿ ಹೇಳುತ್ತಾರೆ:

“ಬಸವನ ಯೋಗದಿಂ ಹಸನಾಯಿತ್ತೈ ಲೋಕ” ಎಂದು. ಇತರೆ ಎಲ್ಲಾ ಯೋಗಗಳು ಯಾವುದೋ ಒಂದು  ಸಿದ್ದಿಗಾಗಿ ಮಾಡುವುದಾದರೆ ಬಸವನ ಯೋಗವು ಎಲ್ಲಾ ಸಿದ್ಧಿಗಳನ್ನು ಮೀರಿದ ಘನವನ್ನು  ಪಡೆಯುವ ಮಹಾಮಾರ್ಗ. ಶ್ರೇಷ್ಠ ತತ್ವಜ್ಞಾನಿ ಅಲ್ಲಮಪ್ರಭುದೇವರು ಯೋಗದಲ್ಲಿರುವ ಎರಡು ಬಗೆಯನ್ನು ಹೀಗೆ ಹೇಳುತ್ತಾರೆ “ಅಳಿದು ಕೂಡುವುದೊಂದು ಯೋಗ, ಅಳಿಯದೇ ಕೂಡುವುದೊಂದು ಯೋಗ, ಅಳಿಯದೇ ಕೂಡುವ ಯೋಗವದು ಘನ”.

ಪರಮಾತ್ಮನೆಂಬ ಮಹಾಘನವನ್ನು ಬೆರೆಯಲು ಎರಡು ಮಾರ್ಗಗಳಿವೆ ಒಂದು ಅಳಿದು ಕೂಡುವುದು ಅಂದರೆ ಜೀವನದಲ್ಲಿ ಏನೂ ಸಾರವಿಲ್ಲೆಂದು ಬಗೆದು,  ಜೀವನವನ್ನು ನಕಾರಾತ್ಮಕವಾಗಿ  ಭಾವಿಸಿ, ದೇವರನ್ನು ಹುಡುಕಿ ಗುಡ್ಡ, ಗವಿ ಸೇರಿ ಅಲ್ಲಿ ಧ್ಯಾನಾಸಕ್ತನಾಗಿ ಕುಳಿತು ಅಂತರ್ಮುಖಿಯಾಗಿ ಯೋಗಿಯಾಗುವುದು.  ಅಳಿಯದೇ ಕೂಡುವುದು ಎಂದರೆ  ಜೀವನವನ್ನು ಸಕಾರಾತ್ಮಕವಾಗಿ ಗಣಿಸಿ,  ಈ ಜೀವನವು ಪರಮಾತ್ಮನಿಂದ ದೊರೆತ ಪ್ರಸಾದ, ಇದನ್ನು ಕೆಡಿಸಬಾರದು, ಹಾಗೂ ಈ ಜೀವನದಿಂದ ಸಮಾಜದ ಉನ್ನತಿಗಾಗಿ ಸಾಧ್ಯವಾದಷ್ಟೂ ದುಡಿಯುವ ಮೂಲಕ ಸಮಾಜದ ಋಣ ತೀರಿಸವತ್ತ ಚಿತ್ತ ಹರಿಸುವುದು. ಇದೇ ಅಳಿಯದೇ ಕೂಡುವ ಯೋಗ. ಪರಮಾತ್ಮನನ್ನು ಕೂಡುವುದು ಎಂದರೆ ಕಾಣದ ಪರಮಾತ್ಮನನ್ನು ಕಾಣುವುದು ಎಂತಲ್ಲ.  ಕಾಣುವ ಪರಮಾತ್ಮನೇ ಈ ಸಮಾಜ. ಸೃಷ್ಟಿಯನ್ನು ಬಿಟ್ಟು ದೇವರಿಲ್ಲ ಹಾಗೇ ದೇವರನ್ನು ಬಿಟ್ಟು ಸೃಷ್ಟಿಯಿಲ್ಲ. ಅಖಂಡ ಸೃಷ್ಟಿಯೇ ಪರಮಾತ್ಮನ ಒಡಲು, ಅದರ ಒಡಲೊಳಗೇ ಜೀವಾತ್ಮ ಮತ್ತು ಸಮಾಜ, ಇವೆರಡೂ ಒಂದರೊಳಗೊಂದು ಬೇರಾಗದಂತೆ ಬೆರೆತಿವೆ,  ಹಾಸುಹೊಕ್ಕಾಗಿವೆ. ಪರಮಾತ್ಮ ಮತ್ತು ಜೀವಾತ್ಮರ ನೆಲೆ ಹೀಗಿರುವಾಗ ಪರಮಾತ್ಮನನ್ನು ಎಲ್ಲೋ ಅರಸುತ್ತೇನೆ, ಯಾವುದೋ ಯೋಗದಿಂದ ಕೂಡುತ್ತೇನೆ ಎಂಬುದು ಎಷ್ಟು ಹಾಸ್ಯಾಸ್ಪದ ಅಲ್ಲವೇ! ಅದಕ್ಕೇ ಬಸವಣ್ಣನವರು “ದೇವಲೋಕ ಮರ್ತ್ಯಲೋಕವೆಂಬುವು ಬೇರಿಲ್ಲ ಕಾಣಿರೋ ಸತ್ಯವ ನುಡಿವುದೇ ದೇವಲೋಕ ಮಿಥ್ಯವ ನುಡಿವುದೇ ಮರ್ತ್ಯಲೋಕ” ಎಂದು ಸಾರಿದರು.

ಸದಾ ಸತ್ಯವಂತನಾಗಿರುವುದೇ ಯೋಗ,  ಸತ್ಯ ಶುದ್ಧ ಕಾಯಕ ನಿರತನಾಗಿರುವುದೇ ಯೋಗ.  ನಿರಪೇಕ್ಷಿತನಾಗಿ ದಾಸೋಹವ ಮಾಡುವುದೇ ಯೋಗ, ಅಮಂಗಳವನಾಡದಿರುವುದೇ ಯೋಗ. ವಿಷಯಲಂಪಟನಾಗದಿರುವುದೇ ಯೋಗ,  ವಿಕಾರಿಸುವ ಮನವ ಉದಾತ್ತೀಕರಿಸುವುದೇ ಯೋಗ, ಇದಕ್ಕಾಗಿ ಕಾಡಿಗೆ ಹೋಗಬೇಕಿಲ್ಲ, ದೇಹವನ್ನು ಅನಗತ್ಯವಾಗಿ ಉಪವಾಸ ವ್ರತಗಳಿಂದ ಬಳಲಿಸಬೇಕಾಗಿಲ್ಲ, ನಿಸರ್ಗ ನಿಯಮಿತ ಸಹಜ ಬದುಕೇ ಒಂದು ಯೋಗ. ಇಂಥಾ ಯೋಗದಿಂದ ಲೋಕ ಹಸನಾಗಿತ್ತು ಎಂದು ಸಿದ್ಧರಾಮೇಶ್ವರರು ಹೇಳಿರುವುದರಲ್ಲಿ ಎಷ್ಟು ಅರ್ಥವಿದೆಯಲ್ಲವೇ! ಲೋಕವನ್ನು ಬಿಟ್ಟು ಅಡವಿ ಸೇರಿದವನು ತಾನೊಬ್ಬನೇ ಮನಶ್ಯಾಂತಿ ಕಂಡುಕೊಂಡರೆ ಬಸವಣ್ಣನವರ ಯೋಗದಿಂದ  ಇಡೀ ಲೋಕ  ಶಾಂತಿ ನೆಮ್ಮದಿಯಿಂದ ಬದುಕಬಲ್ಲುದು. ಅಲ್ಲಿ ಪರಮಾತ್ಮನ ನಲೆಯಿದೆ, ಆತ್ಮ ತೃಪ್ತಿಯಿದೆ, ಆತ್ಮ ತೃಪ್ತಿಯಿದ್ದಲ್ಲಿ ಪರಮಾತ್ಮ ತೃಪ್ತನು. ಇದೇ ಶಿವ-ಜೀವರ ಐಕ್ಯ. ಜೀವನು ದೇವನೊಳಗೂ ದೇವನು ಜೀವನೊಳಗೂ ಅವಿನಾಭಾವವಾಗಿ ಬೆರೆತು ಬೇರಿಲ್ಲದಂತೆ ಆಗುವುದೇ ನಿಜವಾದ ಯೋಗ. ಅದೇ ಬಸವಯೋಗ. ಬಸವಯೋಗ ಪ್ರತಿಯೊಬ್ಬ ಮಾನವನ ಅವಿಭಾಜ್ಯ ಅಂಗ, ಇದು ಮುಂಜಾನೆ ಸಂಧ್ಯಾಕಾಲ ಪೂಜಾಸಮಯ ಮತ್ತೊಂದು ಕಾಲವೆಂದು ಮಾಡಿ – ಬಿಟ್ಟು – ಮಾಡುವ ಯೋಗವಲ್ಲ, ಈ ಯೋಗ ನಿತ್ಯ ನಿರಂತರ, ಉಸಿರಾಟದ ಆರಂಭದಿಂದ ಉಸಿರು ನಿಲ್ಲುವವರೆಗೂ ಎಡೆಬಿಡದೆ ಮಾಡಬೇಕಾದ ಯೋಗ-  ಬಸವಯೋಗ.

Comments 12

  1. sharada A.M
    Jul 2, 2018 Reply

    ಲೇಖನ ವಿಸ್ತ್ಋತವಾಗಿದೆ. ಮಾಹಿತಿಪೂರ್ಣವಾಗಿದೆ. ದೈಹಿಕ ಯೋಗದ ಬಗ್ಗೆ ಶರಣರು ಏನೂ ಹೇಳಿಲ್ಲವೇ ಅಥವಾ ಬಸವನ ಯೋಗ ಎಂದರೆ ಕಾಯಕವೇ? ಶರೀರ ಶ್ರಮವೇ? ಆಧ್ಯಾತ್ಮಿಕ ಸಾಧನೆಯೇ? ಕೆಲವು ಪ್ರಶ್ನೆಗಳು ಉಳಿದಿವೆ.

  2. kavitha hiremat
    Jul 3, 2018 Reply

    ಬಸವಣ್ಣನವರ ಯೋಗವನ್ನು ಎಲ್ಲಿ ಕಲಿಸಿಕೊಡಲಾಗುತ್ತದೆ? ಯಾವ ಮಠಗಳಲ್ಲಿ, ಯಾವ ಗುರುಗಳು ಕಲಿಸುತ್ತಾರೆ, ದಯವಿಟ್ಟು ತಿಳಿಸುವಿರಾ?

  3. akkamma katagere
    Jul 4, 2018 Reply

    ಜೀವನದ ಪರಿಪೂರ್ಣತೆಯೇ ಬಸವ ಯೋಗ ಎಂಬುದು ನಿಜ. ಆ ಪರಿಪೂರ್ಣತೆಯ ಹಾದಿ ಯಾವುದು? ಷಟಸ್ಥಲವನ್ನು ಕಲಿತುಕೊಳ್ಳುವುದು ಎಲ್ಲಿ, ಯಾರಿಂದ, ಮಾರ್ಗದರ್ಶನ ಮಾಡಿ.
    -ಅಕ್ಕಮ್ಮ ಕಟಗೇರಿ, ನವಲಗುಂದ

  4. praveen rajashekhar
    Jul 5, 2018 Reply

    I am happy to know about basava yoga, bayalu is giving wonderful insights to the topics which are relevant today.

  5. udaykumar b.n, bangalore
    Jul 5, 2018 Reply

    the last para of the article gives complete picture of basavayoga. good article

  6. r.p.jagadeesh
    Jul 6, 2018 Reply

    ನನಗೆ ಇದು ಹೊಸ ವಿಷಯ. ಬಸವನ ಯೋಗ ಅಂದರೇನು ಎಂದು ಅರ್ಥಮಾಡಿಸಿರುವಿರಿ. ಬಯಲು ಬ್ಲಾಗಿನ ಚಿತ್ರಗಳು super

  7. r.p.jagadeesh
    Jul 6, 2018 Reply

    ಎರಡು ಕೈ ತಟ್ಟಿದರೆ ಮಾತ್ರ ಚಪ್ಪಾಳೆ. ಟೀಂ ಸ್ಪಿರಿಟ್, ಯೂನಿಟಿ… ಎಂದೆಲ್ಲಾ ಕೇಳಿದ್ದೇವೆ. ಆದರೆ ದೊಡ್ಡ ಚಳುವಳಿಯೊಂದನ್ನು ಸಾಮೂಹಿಕ ನಾಯಕತ್ವದಲ್ಲಿ ನಡೆಸಿದ ಅತ್ಯುತ್ತಮ ಉದಾಹರಣೆ ಬಸವಣ್ಣನವರ, ಶರಣರ ಗುಂಪು. ಏನಾದರೂ ಹೊಸದನ್ನು ಸಾಧಿಸಲು ಹೊರಡುವವರಿಗೆ ಇದು ಉತ್ತಮ ಮಾರ್ಗದರ್ಶನ ನೀಡುತ್ತದೆ. excellent article

  8. gangadhara Navale
    Jul 9, 2018 Reply

    Patanjali yoga sutra is the basic of yoga according to my knowledge. did sharanas follow it or they mentioned about it any where in their vachanas?

  9. Shashikala vali
    Jul 10, 2018 Reply

    ಇವತ್ತಿನ ಯೋಗ ವ್ಯವಹಾರಕ್ಕಿಳಿದಿದೆ. ದೊಡ್ಡ ದೊಡ್ಡ ಯೋಗ ಸಂಸ್ಥೆಗಳು ವ್ಯಾಪಾರ ಮಾಡುತ್ತಿವೆ. ಲಿಂಗಾಯತ ಮಠಗಳು ಷಟಸ್ಥಲ ಮರೆತಿವೆ. ಇನ್ನೆಲ್ಲಿದೆ ಬಸವ ಯೋಗ?

  10. Karibasappa hanchinamani
    Jul 11, 2018 Reply

    ಶರಣರು ಪ್ರತಿಪಾದಿಸಿದ ಯೋಗವು ಶೂನ್ಯ ಸಿದ್ಧಾಂತದ ಮೇಲೆ ನಿಂತಿದೆ. ಶೂನ್ಯವೆಂದರೆ ಎಲ್ಲವನ್ನೂ ಒಳಗೊಂಡ ಪರಿಪೂರ್ಣತೆ. ಅಂಥಾ ಪರಿಪೂರ್ಣತೆಯ ಸಂಪಾದನೆಯೇ ಶೂನ್ಯಸಂಪಾದನೆ. ಬುದ್ಧನ ಯೋಗ ಸಾಧನೆಗೂ ಬಸವ ಯೋಗ ಸಾಧನೆಗೂ ಸಾಮ್ಯತೆ ಇದೆ.

  11. shobhadevi
    Jul 16, 2018 Reply

    ಬಸವನಾ ಯೋಗ ಕಾಯಕ ಯೋಗ, ಸಾತ್ವಿಕ ಯೋಗ, ಅಂಗ-ಲಿಂಗಗಳನ್ನು ಒಂದು ಮಾಡುವ ಯೋಗ.

  12. sunanda rachanna
    Jul 22, 2018 Reply

    ಬಸವನಾ ಯೋಗದಿಂ ವಚನ ಹೇಳುತ್ತಲೇ ಏಳುತ್ತೇವೆ. ಆ ಯೋಗ ಯಾವುದು ಎನ್ನುವ ನಿಮ್ಮ ವಿವರಣೆ ಚೆನ್ನಾಗಿದೆ.

Leave A Comment

Your email address will not be published. Required fields are marked *