ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
Share:

ಗುರು ತತ್ತ್ವವೇ ಅಥವಾ ವ್ಯಕ್ತಿಯೆ?

ಗುರುವು ತತ್ತ್ವವೋ ಅಥವಾ ವ್ಯಕ್ತಿಯೋ ಎಂಬುದು ಅಲ್ಲಮಪ್ರಭುವಿನ ವಚನಗಳನ್ನೂ ಶೂನ್ಯ ಸಂಪಾದನೆಯನ್ನೂ ಓದುವವರಿಗೆ ಬಹಳ ಮುಖ್ಯವಾದ ಪ್ರಶ್ನೆಯಾಗುತ್ತದೆ. ಈ ಪ್ರಶ್ನೆಗೆ ಅವರ ವಚನಗಳಲ್ಲೂ ಶೂನ್ಯ ಸಂಪಾದನೆಯಲ್ಲೂ ನಾವು ಮೂರು ಉತ್ತರಗಳನ್ನು ಕಾಣಬಹುದು.

  1.  ಅರಿವೇ ಗುರು
  2. ನಿರ್ಧಾರವೇ ಗುರು
  3. ಗುರು ಒಬ್ಬ ವ್ಯಕ್ತಿ
1. ಅರಿವೇ ಗುರು

ಅರಿವೇ ಗುರು ಎಂದರೇನು? ಇದಕ್ಕೆ ಉತ್ತರ ಕೊಡುವ ಮೊದಲು ಅರಿವು ಎಂದರೇನು? ಗುರು ಎಂದರೆ ಏನು? ಯಾರಾದರೂ ಏಕೆ ಶಿಷ್ಯನಾಗಬೇಕು? ಎಂಬ ಮೂರು ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ಅರಿವು ಎಂಬ ಪದಕ್ಕೆ ವಚನಗಳಲ್ಲಿ ಕನಿಷ್ಠ ಮೂರು ಅರ್ಥಗಳಿವೆ.

ನಾವು ಶಾಲಾಕಾಲೇಜುಗಳಲ್ಲಿ ಪಡೆಯುವ ಭೌತಶಾಸ್ತ್ರ, ಗಣಿತಶಾಸ್ತ್ರ, ತತ್ತ್ವಶಾಸ್ತ್ರ ಮುಂತಾದ ಶಾಸ್ತ್ರಗಳ ಅರಿವು. ಈ ಅರಿವನ್ನು ಇಂದ್ರಿಯಗಳ ಮೂಲಕ, ಗ್ರಂಥ ಅಥವಾ ಗುರುಬೋಧೆಯ ಮೂಲಕ ಪಡೆಯಬಹುದು. ತರ್ಕ ಅಥವಾ ಅನುಮಾನದ ಮೂಲಕ ಪಡೆಯುವ ಅರಿವೂ ಈ ಗುಂಪಿಗೇ ಸೇರುತ್ತದೆ.

ನಾವು ಎಚ್ಚರವಿದ್ದಾಗ ವಸ್ತುಗಳನ್ನು ತಿಳಿದುಕೊಳ್ಳುವಾಗ, ಕೆಲಸ ಮಾಡುವಾಗ ಮತ್ತು ಸುಖದುಃಖಗಳನ್ನು ಅನುಭವಿಸುವಾಗ ನಾನು ಎಂಬ ಪರೋಕ್ಷ ಅರಿವು ಇರುತ್ತದೆ (ವಸ್ತುಗಳ ಅರಿವು ಪರಪ್ರಜ್ಞೆಯಾದರೆ, ತಿಳಿದುಕೊಳ್ಳುವ, ಮಾಡುವ, ಅನುಭವಿಸುವ ವ್ಯಕ್ತಿಯ ಅರಿವು ಸ್ವಪ್ರಜ್ಞೆ ಎನಿಸಿಕೊಳ್ಳುತ್ತದೆ. ಉದಾಹರಣೆಗೆ, ‘ಇದು ಪುಸ್ತಕ’ ಎನ್ನುವಲ್ಲಿ, ಪುಸ್ತಕದ ಬಗೆಗಿನ ಅರಿವು ಪರಪ್ರಜ್ಞೆಯಾದರೆ ಆ ಅರಿವನ್ನು ಪಡೆಯುವ ನನ್ನ ಬಗೆಗಿನ ಪರೋಕ್ಷ ಅರಿವು ಸ್ವಪ್ರಜ್ಞೆಯೆನಿಸಿಕೊಳ್ಳುತ್ತದೆ. ಸ್ವಪ್ರಜ್ಞೆಯಿಲ್ಲದೆ ಪರಪ್ರಜ್ಞೆ ಇಲ್ಲ).

ಅನುಭಾವ (ಧ್ಯಾನ) ಸ್ಥಿತಿಯಲ್ಲಿ ಸ್ವಪ್ರಜ್ಞೆಯೂ ಇರುವುದಿಲ್ಲ, ಪರಪ್ರಜ್ಞೆಯೂ ಇರುವುದಿಲ್ಲ (ನಾನೂ ಇಲ್ಲ, ನೀನೂ ಇಲ್ಲ ಏನೇನೂ ಇಲ್ಲ ಎಂಬ ವಚನಗಳನ್ನು ನೆನೆಸಿಕೊಳ್ಳಿ). ಇದು ಅತೀಂದ್ರಿಯ ಮತ್ತು ಅತಿಬೌದ್ಧಿಕ ಅರಿವು. ಈ ವಿಶೇಷ ರೀತಿಯ ಅರಿವು ಎಲ್ಲರಿಗೂ ಆಗದೆ ಕೇವಲ ಯೋಗಿಗಳಿಗೆ ಆಗುತ್ತದೆ. ಆ ಅರಿವನ್ನೇ ಅನುಭಾವಿಗಳು ಬ್ರಹ್ಮ, ಚಿತ್ತು, ಸಂವಿತ್, ಶಿವ, ಶೂನ್ಯ, ಬಯಲು ಮುಂತಾಗಿ ಕರೆಯುತ್ತಾರೆ.ಇಷ್ಟಲಿಂಗ ಈ ಅರಿವಿನ ಕುರುಹು. ಈ ಅರಿವನ್ನು ಪಡೆದವನು ಮುಕ್ತ, ಲಿಂಗೈಕ್ಯ, ಶಿವೈಕ್ಯ, ತನ್ನ ತಾನರಿದವನು, ಭಾವನಿರ್ಭಾವವಿಲ್ಲದವನು. ಈ ಅವಿರಳ ಅಖಂಡ ಚೇತನದ ಅರಿವಾದವನಿಗೆ ಜಗತ್ತಿನ ಎಲ್ಲ
ವಸ್ತುಗಳೂ ಅದರ ವಿವಿಧ ರೂಪಗಳು ಎಂಬ ಜ್ಞಾನವುಂಟಾಗುತ್ತದೆ.

ಗುರು ಎಂದರೆ, ವಚನಗಳ ಪ್ರಕಾರ ಈ (ಮೂರನೆಯ ಅರ್ಥದ) ಅರಿವನ್ನು ಪಡೆದವನು, ತನ್ನ ತಾನರಿದವನು, ಅಥವಾ ಆ ಅರಿವೇ ಗುರು. ಅವನು ಯಾವ ಜಾತಿಗೆ ಬೇಕಾದರೂ ಸೇರಿದವನಾಗಿರಬಹುದು. ಅವನಿಗೆ ಮಾತ್ರ ಇತರರಿಗೆ ಬೋಧಿಸುವ ಅಧಿಕಾರವಿದೆ.

ಬಸವೇಶ್ವರರಿಗಿಂತ ಹಿಂದೆ ಇದ್ದ ಶೈವರ ಮತ್ತು ಈಗಲೂ ಲಿಂಗಾಯತ/ವೀರಶೈವರಲ್ಲಿ ಇರುವ ಸಂಪ್ರದಾಯದ ಪ್ರಕಾರ ಗುರು ಜಾತಿಯಿಂದ ಆಗುತ್ತಾನೆಯೇ ಹೊರತು, ಅರ್ಹತೆಯಿಂದ ಅಲ್ಲ. ಇದನ್ನು ಅಲ್ಲಗಳೆದ ಬಸವೇಶ್ವರರು ಅರಿವನ್ನು ಪಡೆದವರಿಗೆ ಮಾತ್ರ ಗುರು ಆಗುವ ಅರ್ಹತೆ ಇದೆ ಎಂದರು. ಈ ಅರಿವು ಮಾದಾರ ಚೆನ್ನಯ್ಯ, ಕಿನ್ನರಿ ಬೊಮ್ಮಯ್ಯ, ಮುಂತಾದವರಿಗೆ ಇದ್ದುದರಿಂದ ಬಸವೇಶ್ವರರು ಅವರನ್ನೆಲ್ಲ ತಮ್ಮ ಗುರು ಎಂದು ಧೈರ್ಯವಾಗಿ ಒಪ್ಪಿಕೊಂಡರು. ಅಂಬಿಗರ ಚೌಡಯ್ಯನವರಂತೂ ಒಂದು ಹೆಜ್ಜೆ ಮುಂದು ಹೋಗಿ, ‘ಅರ್ಹತೆಯಿಲ್ಲದೆ, ಕೇವಲ ಜಾತಿಯಿಂದ ಗುರುವಾದವನು ಮತ್ತೊಬ್ಬನಿಗೆ ಮಾರ್ಗದರ್ಶನ ಮಾಡುವುದು ಅಂಧಕನ ಕೈಯ ಅಂಧಕ ಹಿಡಿದು ನಡೆಸಿದಂತೆ’ ಎಂದೂ ‘ಮುಳುಗುತ್ತಿರುವವರನ್ನು ಈಜು ಬಾರದವ ರಕ್ಷಿಸಲು ಹೋದಂತೆ’ ಎಂದೂ ವ್ಯಂಗ್ಯವಾಡಿದ್ದಾರೆ.

ತನ್ನ ತಾನರಿದ ಗುರು ತನ್ನ ಶಿಷ್ಯನನ್ನು ಗುರುವನ್ನಾಗಿ ಮಾಡಬೇಕು. ಈ ವಿಚಾರವಾಗಿ ಶೈವಧರ್ಮಕ್ಕೂ ಲಿಂಗಾಯತಧರ್ಮಕ್ಕೂ ಒಂದು ಸ್ಪಷ್ಟ ವ್ಯತ್ಯಾಸವಿದೆ. ಶೈವಧರ್ಮದ ಪ್ರಕಾರ, ಒಮ್ಮೆ ಗುರುವಾದವನು ತನ್ನ ಶಿಷ್ಯರಿಗೆ ಯಾವಾಗಲೂ ಗುರು. ತನ್ನ ಶಿಷ್ಯರಿಗೆ ವಿಶೇಷ ಅನುಭೂತಿಯಾದರೂ (ಶಿಷ್ಯರು ತಮ್ಮನ್ನು ತಾವರಿದರೂ) ಅವನಿಗೆ ಅವರು ಯಾವಾಗಲೂ ಶಿಷ್ಯರೇ. ಲಿಂಗಾಯತಧರ್ಮದಲ್ಲಿ ಗುರು ಶಿಷ್ಯನನ್ನು ಮತ್ತೊಬ್ಬ ಗುರುವನ್ನಾಗಿ ಮಾಡುತ್ತಾನೆ, ಜ್ಯೋತಿ ಜ್ಯೋತಿಯನ್ನು ಮುಟ್ಟಿಸಿದಂತೆ. ಆಗ ಅವರಿಬ್ಬರಲ್ಲಿ ಸಮಾನತೆ ಉಂಟಾಗುತ್ತದೆ ಹಾಗೂ ಗುರು, ಶಿಷ್ಯ ಎಂದು ಭೇದ ಮಾಡುವುದು ತಪ್ಪಾಗುತ್ತದೆ.

ಗುರು ಎಂಬ ಪದ ಸಾಪೇಕ್ಷ ಪದ. ಅಂದರೆ, ಶಿಷ್ಯನಿದ್ದವನು ಮಾತ್ರ ಗುರು. ಹಾಗೆಯೇ ಗುರುವಿದ್ದವನು ಮಾತ್ರ ಶಿಷ್ಯ. ಆದುದರಿಂದ ಶಿಷ್ಯ ಶಬ್ದವೂ ಸಾಪೇಕ್ಷ ಪದ. ಕೆಲವು ಗುರುಗಳು (ವಿತ್ತಾಪಹಾರಿಗಳು) ಭಕ್ತರು ಕೊಡುವ ದಕ್ಷಿಣೆ, ಇತ್ಯಾದಿಗಳ ಆಸೆಯಿಂದ ಯಾರಾರಿಗೋ ಲಿಂಗದೀಕ್ಷೆ ಕೊಡುತ್ತಾರೆ. ಅವರು ಅವನಿಗೆ ಶಿಷ್ಯರಾಗದಿರಬಹುದು. ಆಗ ಅವನು ಅವರಿಗೆ ಗುರುವಲ್ಲ. ಅಂಥವರನ್ನು ಚೆನ್ನಬಸವಣ್ಣ ಖಂಡಿಸುತ್ತಾನೆ. ಕೆಲವರು ತಮ್ಮ ಕೈಂಕರ್ಯಕ್ಕೆ ಅನೇಕ ಆಳುಗಳನ್ನು ಇಟ್ಟುಕೊಂಡು, ಅವರನ್ನು ಶಿಷ್ಯರೆಂದು ಕರೆಯುತ್ತಾರೆ. ಇದು ಶುದ್ಧ ತಪ್ಪು. ಏಕೆಂದರೆ, ಕೈಂಕರ್ಯ ಮಾಡುವವರು ಆಳುಗಳೇ ಹೊರತು, ಖಂಡಿತಾ ಶಿಷ್ಯರಲ್ಲ. ಅವರು ತಮ್ಮ ಗುರುಗಳಿಂದ ಲಿಂಗಾಯತ ಧರ್ಮದ ಬಗ್ಗೆ ಅಥವಾ ಶಿವಯೋಗದ ಬಗ್ಗೆ ಒಂದಕ್ಷರವನ್ನೂ ಕಲಿಯುವುದಿಲ್ಲ, ಕಲಿಯುವ ಬಯಕೆಯನ್ನೂ ಹೊಂದಿರುವುದಿಲ್ಲ. ಅದೇ ರೀತಿ, ಕೈಂಕರ್ಯ ಮಾಡಿಸಿಕೊಳ್ಳುವವರು ಅವರಿಗೆ ಗುರುಗಳಲ್ಲ. ಏಕೆಂದರೆ, ಅವರಿಗೆ ಧರ್ಮ ಅಥವಾ ಆಧ್ಯಾತ್ಮದ ಬಗ್ಗೆ ಕರುಣೆಯಿಂದ ಒಂದಕ್ಷರವನ್ನೂ ಬೋಧಿಸುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆಯೆಂದರೆ, ಸೊನ್ನಲಿಗೆಯಲ್ಲಿದ್ದ ಸಿದ್ಧರಾಮ ಮತ್ತು ಅವರ ‘ಶಿಷ್ಯರು’. ಸಿದ್ಧರಾಮ ಸೊಲ್ಲಾಪುರದಲ್ಲಿದ್ದಾಗ ತನ್ನ ಶಿಷ್ಯರನ್ನು ಬಾವಿ, ಕೆರೆ, ಗುಡಿಗಳನ್ನು ಕಟ್ಟಲು ಬಳಸಿಕೊಳ್ಳುತ್ತಿದ್ದ ಉಲ್ಲೇಖವಿದೆ. ಹೀಗೆ ನೋಡಿದಾಗ ಅವನು ಮತ್ತು ಅವರಲ್ಲಿದ್ದ ಸಂಬಂಧ ಸ್ವಾಮಿ-ಭೃತ್ಯರ ಸಂಬಂಧವೇ ಹೊರತು, ಗುರು-ಶಿಷ್ಯರ ಸಂಬಂಧ ಖಂಡಿತ ಅಲ್ಲ. ವಚನಕಾರರ ಪ್ರಕಾರ ಶಿಷ್ಯನು ಸಾಧನೆಯ ಗುರಿ ಮುಟ್ಟಿದಾಗ ಮೊದಲು ಲಿಂಗವಾಗುತ್ತಾನೆ. ಅನಂತರ ಗುರು, ಜಂಗಮವಾಗುತ್ತಾನೆ.

ಕೇವಲ ಶಿಷ್ಯರಾದರೆ ಮುಕ್ತಿ ಸಿಕ್ಕುವುದಿಲ್ಲ. ಶಿಷ್ಯನು ಗುರುವಚನವನ್ನು ಶ್ರದ್ಧೆಯಿಂದ (ವಚನಕಾರರು ಹೇಳುವಂತೆ, ಶ್ರದ್ಧಾಭಕ್ತಿ ಅಥವಾ ವಿಶ್ವಾಸಭಕ್ತಿಯಿಂದ) ನಂಬಬೇಕು ಮತ್ತು ಅದರಂತೆ ನಡೆಯಬೇಕು. ಈ ಅರ್ಥದಲ್ಲಿ ಗುರು ವ್ಯಕ್ತಿಯಲ್ಲ, ಅರಿವು ಅಥವಾ ಅರಿವಿನ ವಚನ. ಗುರು ಎಂಬ ವ್ಯಕ್ತಿಯನ್ನು ನಾವು ನೋಡದೆಯೇ, ಅವನೊಂದಿಗೆ ಮಾತನಾಡದೆಯೆ, ಅವನಿಂದ ದೀಕ್ಷೆ ಪಡೆಯದೆಯೆ ನಾವು ಅವನಿಗೆ ಶಿಷ್ಯರಾಗಬಹುದು; ಅಂದರೆ, ಅವನ ವಚನ(ಬೋಧೆ)ವೇ ನಮಗೆ ಗುರುವಾಗುತ್ತದೆ. ಕೃಷ್ಣ ಸತ್ತು ಎಷ್ಟೋ ವರ್ಷಗಳ ನಂತರವೂ ಗಾಂಧಿ ಭಗವದ್ಗೀತೆಯನ್ನು ಗುರುವನ್ನಾಗಿ ಮಾಡಿಕೊಂಡದ್ದು, ಅದರ ಬೋಧನೆಯ ಮಹತ್ವದಿಂದಾಗಿ. ಹಾಗೆಯೇ, ಬಸವಣ್ಣನವರ ವಚನವನ್ನು ಓದಿದ ಇಂದಿನ ಅನೇಕರು ಬಸವಣ್ಣನವರ ಶಿಷ್ಯರೆನಿಸಿಕೊಳ್ಳುತ್ತಾರೆ.

“ಗುರು ಎಂಬುದು ತತ್ತ್ವ, ವ್ಯಕ್ತಿಯಲ್ಲ” ಎಂದರೇನು?

ಈ ಪ್ರಶ್ನೆ ಶೂನ್ಯಸಂಪಾದನೆಯ, ‘ಮುಕ್ತಾಯಕ್ಕಗಳ ಸಂಪಾದನೆ’ಯಲ್ಲಿ ಬರುತ್ತದೆ. ಮುಕ್ತಾಯಕ್ಕ ಹೇಳುತ್ತಾಳೆ: ‘ನನಗೆ ಅಜಗಣ್ಣ ಆಧ್ಯಾತ್ಮಿಕ ಗುರು ಆಗಿದ್ದ. ಗುರುವಚನದಿಂದಲ್ಲದೆ, ಗುರು, ಲಿಂಗ, ಜಂಗಮ, ಪ್ರಸಾದವನ್ನು ಅರಿಯಲಾಗದು, ಗುರುವಿನ ಮಾರ್ಗದರ್ಶನದಿಂದಲ್ಲದೆ ತನ್ನನ್ನು ತಾನು ಅರಿಯಲಾಗದು. ಒಂದು ವೇಳೆ ಈ ಜನ್ಮದಲ್ಲಿ ಗುರುವಿಲ್ಲದೆ ಜ್ಞಾನೋದಯವಾದರೆ ಹಿಂದಿನ ಜನ್ಮದಲ್ಲಿ ಗುರುವಿನ ಉಪದೇಶವಾಗಿತ್ತು ಎಂಬ ಕಾರಣದಿಂದ ಎನ್ನಬೇಕೇ ಹೊರತು, ಗುರುವಿಲ್ಲದೆ ಜ್ಞಾನೋದಯವಾಯಿತು ಎನ್ನಲಾಗದು.’

ಇದಕ್ಕೆ ಉತ್ತರವಾಗಿ ಪ್ರಭುದೇವರು, ‘ನಿನ್ನ ಅರಿವು ಗುರುವೇ ಹೊರತು, ವ್ಯಕ್ತಿಯಲ್ಲ’ ಎನ್ನುತ್ತಾರೆ. ಗುರುವು ಲಿಂಗದ ಅರಿವನ್ನು ಕೊಡಲಾರ, “ಗುಹೇಶ್ವರಲಿಂಗವು ತಾನೆ ಎಂಬುದನ್ನು ನಿನ್ನಿಂದ ನೀನೆ ಅರಿಯಬೇಕು” ಎನ್ನುತ್ತಾರೆ (ವ. 24).

ಅಲ್ಲಮ ಒಬ್ಬ ಪರಿಪೂರ್ಣ ಅದ್ವೈತಿ. ಅವರ ಪ್ರಕಾರ, ಭಕ್ತ-ಲಿಂಗ, ಲಿಂಗ-ಜಗತ್ತು, ಗುರು-ಶಿಷ್ಯ ಬೇರೆ ಬೇರೆ ಅಲ್ಲ. ಏಕೆಂದರೆ ‘ಗುರುವೇ ಶಿಷ್ಯನಾದ ತನ್ನ ವಿನೋದಕ್ಕೆ, ಶಿಷ್ಯನೇ ಗುರುವಾದ ತನ್ನ ವಿನೋದಕ್ಕೆ’ (ವ. 102). ಹೀಗೆ ಗುರುಶಿಷ್ಯರಲ್ಲಿ ಭೇದವಿಲ್ಲದ್ದರಿಂದ “ಗುರುವೆಂಬುದು ಶಿಷ್ಯನೆಂದಲ್ಲಿಯೇ ಹೋಯಿತ್ತು, ಶಿಷ್ಯನೆಂಬುದು ಗುರುವೆಂದಲ್ಲಿಯೇ ಹೋಯಿತ್ತು” (ವ. 104). ಅಂದರೆ ಗುರು, ಶಿಷ್ಯ ಎಂದು ಭೇದ ಮಾಡುವುದು ಅಜ್ಞಾನ.

ಇಲ್ಲಿ, ಗುರು-ಶಿಷ್ಯರಿಗೆ ಭೇದವಿಲ್ಲ ಎಂಬ ಅಲ್ಲಮರ ವಾದವನ್ನು ಒಪ್ಪಿಕೊಂಡರೆ, ಗುರು ಎಂಬುದು ವ್ಯಕ್ತಿಯಲ್ಲ, ಒಂದು ತತ್ತ್ವ ಎಂಬುದನ್ನೂ ಒಪ್ಪಿಕೊಳ್ಳಬಹುದು. ಆದರೆ ಅಲ್ಲಮರ ವಾದವನ್ನು ನಾವು ಯಾವ ಆಧಾರದ ಮೇಲೆ ಒಪ್ಪಿಕೊಳ್ಳಬೇಕು? ಎಂಬುದೇ ಮುಖ್ಯ ಪ್ರಶ್ನೆ. ಇದಕ್ಕೆ ಉತ್ತರ ಅವರ ಮತ್ತೊಂದು ವಚನದಲ್ಲಿದೆ. “ಗುರುಶಿಷ್ಯರ ಸಂಬಂಧವನರಸಲು ಹೋದರೆ ತಾನೆ ಗುರುವಾದ ತಾನೆ ಶಿಷ್ಯನಾದ, ತಾನೆ ಲಿಂಗವಾದ” ಎಂಬ ವಚನದ ಪ್ರಕಾರ ಪರವಸ್ತುವು ತಾನೆ ಗುರು, ಶಿಷ್ಯ, ಇಷ್ಟಲಿಂಗ, ಪ್ರಸಾದ (ಜಗತ್ತು) ವಾಗುತ್ತದೆ. ಅಂದರೆ, ಗುರು, ಶಿಷ್ಯ, ಲಿಂಗ, ಪ್ರಸಾದಗಳಲ್ಲಿ ಏಕಪ್ರಕಾರವಾಗಿ ಅಂತಸ್ಥವಾಗಿರುವ ತತ್ತ್ವ ಒಂದೇ, ಅದು ಅರಿವು ಅಥವಾ ಪರವಸ್ತು. ಈ ತತ್ತ್ವದ ಸಾಕ್ಷಾತ್ಕಾರವಾಗುವವರೆಗೂ ಮಾನವನಲ್ಲಿ ಮರೆವು ಇರುತ್ತದೆ. ಅದರಿಂದಾಗಿ ಅವನು ಗುರು, ಶಿಷ್ಯ, ಲಿಂಗ, ಪ್ರಸಾದ ಬೇರೆ ಬೇರೆ ಎಂದು ತಿಳಿಯುತ್ತಾನೆ; ಲಿಂಗ ಸಾಕ್ಷಾತ್ಕಾರವಾದ ಕೂಡಲೆ “ಒಂದೆಂಬೆನೆ? ಎರಡಾಗಿದೆ. ಎರಡೆಂಬೆನೆ? ಒಂದಾಗಿದೆ. . . ಗುರು-ಶಿಷ್ಯರೆಂಬ ಭಾವಕ್ಕೆ ಭೇದವುಂಟೆ?” ಎಂದು ಕೇಳುತ್ತಾನೆ. ಹೊರಗಿನ ರೂಪ ಅಥವಾ ಕ್ರಿಯೆಗಳ ಆಧಾರದ ಮೇಲೆ ನಾವು, ಇವನು ಶಿಷ್ಯ, ಅವನು ಗುರು, ಇದು ಕುದುರೆ ಎಂದು ಹೇಳುತ್ತೇವೆ. ಆದರೆ ಅವುಗಳೆಲ್ಲದರ ಒಳಗಿರುವ ತತ್ತ್ವ ಒಂದೇ – ಅರಿವು, ಎಂಬುದನ್ನು ಮರೆಯುತ್ತೇವೆ.

2. ನಿರ್ಧಾರವೇ ಗುರು

ಅಲ್ಲಮ ಪ್ರಭು (ಶೂನ್ಯಸಂಪಾದನೆ, ಪು. 12) ಗುರು ವ್ಯಕ್ತಿಯಲ್ಲ, ನಿರ್ಧಾರ ಎಂಬ ಮತ್ತೊಂದು ವಿಚಿತ್ರ ಸಿದ್ಧಾಂತವನ್ನು ಪ್ರತಿಪಾದಿಸುತ್ತಾರೆ. ಅದನ್ನು ‘ಗುರುವಿಗಿಂತ ಮುನ್ನವೆ ಶಿಷ್ಯನು ಗುರು’ ಎಂಬ ಶಿವಾದ್ವೈತ ವಾಕ್ಯದ ಮೂಲಕ ಪ್ರತಿಪಾದಿಸುತ್ತಾರೆ. ಗುರುವಿಗಿಂತ ಮುನ್ನವೆ ಶಿಷ್ಯನು ಗುರು ಎಂಬ ಅಲ್ಲಮರ ಈ ನಿಲವನ್ನು ಹೇಗೆ ಅರ್ಥೈಸಬೇಕು?

  1. ಸೃಷ್ಟಿಪೂರ್ವದಲ್ಲಿ ಗುರುಶಿಷ್ಯರು ಲಿಂಗದಲ್ಲಿ ಏಕವಾಗಿದ್ದರು. ಆಗ ಅವರಲ್ಲಿ ವ್ಯತ್ಯಾಸವಿರಲಿಲ್ಲ. ಆದುದರಿಂದ ಅಂಥ ಸಮಯದಲ್ಲಿ ಒಬ್ಬ ಮೊದಲು, ಇನ್ನೊಬ್ಬ ಆಮೇಲೆ ಎಂದು ಹೇಳುವ ಪ್ರಮೇಯವೇ ಬರುವುದಿಲ್ಲ.
  2. ಸೃಷ್ಟಿಯ ಸಮಯದಲ್ಲಿ ಶಿಷ್ಯ ಮೊದಲು ಹುಟ್ಟಿದ, ಗುರು ಆಮೇಲೆ ಹುಟ್ಟಿದ ಎನ್ನುವುದಕ್ಕೂ ಯಾವ ಆಧಾರವೂ ಇಲ್ಲ. 3. ಶಿಕ್ಷಾಗುರುವೂ ಶಿಷ್ಯನೂ ಸಾಧನಾಮಾರ್ಗದಲ್ಲಿದ್ದಾಗ ಶಿಷ್ಯನೇ ಮೊದಲು ಸಿದ್ಧಿಯನ್ನು ಪಡೆದ, ಎಂದೂ ಇದನ್ನು ಅರ್ಥೈಸಬಾರದು. ಹಾಗಾದರೆ, ಶಿಷ್ಯನು ಗುರುವಿಗಿಂತ ಮೊದಲೇ ಗುರುವಾಗಿದ್ದ ಎಂದರೇನು?

ಅಲ್ಲಮರು ಮೋಕ್ಷಾರ್ಥಿಯಾಗಿ ಅಲೆಯುತ್ತಿದ್ದಾಗ, ತನ್ನ ಅಂತರ್ಬೋಧೆಯಿಂದ (‘ಮೂಲಜ್ಞಾನದಿಂದ’) ತಾನು ಕುಳಿತ ಭೂಮಿಯ ಕೆಳಗೆ ಶಿವದೇವಾಲಯ ಇರುವುದೆಂದೂ, ಅದರಲ್ಲಿ ಅನಿಮಿಷ ಎಂಬ ವ್ಯಕ್ತಿ ಧ್ಯಾನಸ್ಥನಾಗಿದ್ದಾನೆಂದೂ ಅವನೇ ತನ್ನ ಗುರು ಎಂದೂ ತಿಳಿದುಕೊಳ್ಳುತ್ತಾರೆ. ವಾಸ್ತವವಾಗಿ, ಆ ಗುಡಿಯಲ್ಲಿ ಅನಿಮಿಷನು ತಾನು-ಇದಿರು (ಜ್ಞಾತೃ-ಜ್ಞೇಯ) ಎಂಬ ಭೇದವನರಿಯದೆ, ಲಿಂಗದಲ್ಲಿ ತನ್ನ ನೋಟವನ್ನು ನೆಟ್ಟು ಸಮಾಧಿ ಸ್ಥಿತಿಯಲ್ಲಿ ಕುಳಿತಿರುತ್ತಾನೆ. ಆದರೆ ಅನಿಮಿಷನು ಯಾರಿಗೂ ದೀಕ್ಷೆಯನ್ನಾಗಲಿ, ಬೋಧೆಯನ್ನಾಗಲಿ ಕೊಡುವ ಸ್ಥಿತಿಯಲ್ಲಿ ಇರುವುದಿಲ್ಲ. ಆಗ ಅಲ್ಲಮರು, ‘ಎನಗೆ ನಾನೇ ಗುರು ಉಪದೇಶವ ಪಡೆಯಬೇಕೆ’ಂದು ನಿರ್ಧರಿಸುತ್ತಾರೆ (ಪು.14). ಮತ್ತು, ಅನಿಮಿಷನನ್ನು ಕುರಿತು ಹೀಗೆ ಹೇಳುತ್ತಾರೆ: “ಆದಿಯಂದತ್ತಲೆನಗೆ ನೀನೆ ಗುರುವಯ್ಯಾ, ಅನಾದಿಯಂದತ್ತಲೆನಗೆ ನೀನೆ ಗುರುವಯ್ಯಾ” (ವ. 39). ಇನ್ನೂ ಮುಂದುವರಿದು “ಜ್ಯೋತಿಯೊಳಗಿರುವ ಕರ್ಪೂರ, ನೀರಿನಲ್ಲಿರುವ ಉಪ್ಪು, ಗುರುವಿನೊಳಗಿರುವ ಶಿಷ್ಯ, ಇವರಿಗೆ ಭೇದವಿಲ್ಲ” (ವ. 40) ಎನ್ನುತ್ತಾ, ಅನಿಮಿಷನ ಕೈಯಲ್ಲಿದ್ದ ಲಿಂಗವನ್ನು ಎತ್ತಿಕೊಳ್ಳುತ್ತಾರೆ. ತಕ್ಷಣವೇ ಅನಿಮಿಷನ ದೇಹ ನೆಲಕ್ಕುರುಳುತ್ತದೆ.

ಆಗ ತನ್ನಿಂದ ಗುರುಹತ್ಯೆಯಾಯಿತೆಂದು ಅಲ್ಲಮರಿಗೆ ಪಾಪಪ್ರಜ್ಞೆ ಕಾಡುತ್ತದೆ. ಆಗ ತಾನು ಮಾಡಿದುದು ಹತ್ಯೆಯಲ್ಲ ಎಂಬುದನ್ನು ಸಮರ್ಥಿಸಿಕೊಳ್ಳಲು ಈ ಮುಂದಿನ ತರ್ಕವನ್ನು ಹೂಡುತ್ತಾರೆ: ಮಲತ್ರಯಗಳನ್ನೂ ಕಳಚಿಕೊಂಡ ಶಿಷ್ಯನಿಗೂ ಕಾಯಾಜೀವಗಳ ಭ್ರಾಂತನ್ನು ಗೆದ್ದ ಗುರುವಿಗೂ ಭೇದವಿಲ್ಲ (ವ. 41). ಅನಿಮಿಷನ ಚೈತನ್ಯ ಅವನ ಇಷ್ಟಲಿಂಗದಲ್ಲಿತ್ತು, ಆ ಲಿಂಗ ಈಗ ನನ್ನ ಕರಸ್ಥಲದಲ್ಲಿದೆ, ಅದನ್ನು ದೃಷ್ಟಿಯೋಗದ ಮೂಲಕ ಮನಸ್ಸಿನಲ್ಲಿ ತುಂಬಿಕೊಳ್ಳುತ್ತೇನೆ. ಆದುದರಿಂದ ಗುರುವು ನನ್ನ ಕರಸ್ಥಲಕ್ಕೆ ಬಂದು, ನನ್ನ ಮನದಲ್ಲಿ ನೆಲೆಸಿದ್ದಾನೆ, ಆದುದರಿಂದ ನನಗೆ ನಾನು-ಜಗತ್ತು, ನಾನು-ಗುರು, ನಾನು-ಲಿಂಗ ಎಂಬ ಭೇದವಿಲ್ಲ. ಆದುದರಿಂದ ಅನಿಮಿಷ ಮರಣಿಸಿದ ಎಂದು ರೋಧಿಸುವುದು ತಪ್ಪು (ವ. 43). ಇದನ್ನೆ ಬೇರೆ ರೀತಿಯಲ್ಲಿ ಹೇಳಬೇಕೆಂದರೆ: ಘನವಸ್ತು ‘ತಾನೆ ಗುರುವಾದ, ತಾನೆ ಲಿಂಗವಾದ, ತಾನೆ ಜಂಗಮವಾದ, ತಾನೆ ಪ್ರಸಾದವಾದ’ (ವ.44). ಅಂಥ ಘನವಸ್ತುವಿನ ಅನುಭಾವವನ್ನು ಪಡೆದರೆ ಮುಕ್ತಿ ಉಂಟಾಗುತ್ತದೆ ಎಂಬ ಅರಿವು ಅಥವಾ ಅಂಥ ಅನುಭಾವವನ್ನು ಪಡೆಯಬೇಕು ಎಂಬ ನಿರ್ಧಾರ ಅವನನ್ನು ಗುರುವನ್ನಾಗಿ ಮಾಡುತ್ತದೆ. ಈ ನಿರ್ಧಾರ ಗುರು. ಏಕೆಂದರೆ, ಈ ನಿರ್ಧಾರ, ಗುರುವಿನಂತೆ ಆಧ್ಯಾತ್ಮಿಕ ಪಥವನ್ನು ಹಿಡಿಯಲು ಪ್ರೇರಣೆ ನೀಡುತ್ತದೆ. ಆಧ್ಯಾತ್ಮಿಕ ಭವಿತನವು ದುಃಖಕ್ಕೆ ಮೂಲ, ಅರಿವು ಮುಕ್ತಿಗೆ ಮೂಲ ಎಂಬ ಅರಿವು ಅವನಿಗೆ ಗುರುವಾಗುತ್ತದೆ.

ಇಲ್ಲಿ ನಿರ್ಧಾರವೇ ಗುರು ಎಂದರೆ, ವಿಶ್ವಾಸಭಕ್ತಿ ಇಲ್ಲದಿದ್ದರೆ ಎಲ್ಲ ರೀತಿಯ ಭಕ್ತಿಯೂ ವ್ಯರ್ಥ ಎಂದರ್ಥ. ಇದನ್ನೆ ಅಲ್ಲಮರು, ‘ಗುರುವಿದೆ, ಲಿಂಗವಿದೆ, ಶಿಷ್ಯನ ಜ್ಞಾನೋದಯವಾಗದನ್ನಕ್ಕರ ಭಕ್ತಿಯೆಲ್ಲಿಯದೊ?’ ಎಂಬ ಪ್ರಶ್ನೆಯ ಮೂಲಕ ವ್ಯಕ್ತ ಪಡಿಸುತ್ತಾರೆ (ಸಮಗ್ರ ವಚನ ಸಂಪುಟ, 2/78). ನಾವು ದೇಹದ ಘನವಾದ ಚಿತ್ರವನ್ನು ಬರೆಯಬಹುದು. ಆದರೆ ಅದಕ್ಕೆ ಪ್ರಾಣ ತುಂಬಲಾರೆವು. ಅದೇ ರೀತಿ ನಾವು ಆಗಮಗಳ ಪ್ರಕಾರ ಲಿಂಗದೀಕ್ಷೆ ಪಡೆಯಬಹುದು. ಆದರೆ ಭಕ್ತಿಯನ್ನು ಉಂಟುಮಾಡುವ ಯಾವ ವಿಧಿಯನ್ನೂ ಆಗಮ ಬೋಧಿಸುವುದಿಲ್ಲ (ಅದರಲ್ಲೆ, ವ. 79). ಭಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂಬ ನಿರ್ಧಾರ ಭಕ್ತನ ಮನಸ್ಸಿನಲ್ಲಿ ಹುಟ್ಟಬೇಕು. ಆ ನಿರ್ಧಾರವೇ ಗುರು. ಗುರು ಎಂಬ ವ್ಯಕ್ತಿ, ಭಕ್ತಿಯನ್ನು ಯಾರ ಮನಸ್ಸಿನಲ್ಲೂ ಹುಟ್ಟಿಸಲಾರ. ಆದರೆ ಈಗಾಗಲೆ ಇರುವ ಭಕ್ತಿಯನ್ನು ಹೆಚ್ಚಿಸಿಕೊಳ್ಳುವ ವಿಧಾನವನ್ನು ಅವನು ತಿಳಿಸಿಕೊಡುತ್ತಾನೆ.

3. ಗುರು ಒಬ್ಬ ವ್ಯಕ್ತಿ

ಗುರು ವ್ಯಕ್ತಿ ಎಂಬುದು ಶೂನ್ಯಸಂಪಾದನೆಯ ಪಾತ್ರಗಳಲ್ಲಿ ಒಂದಾದ ಮುಕ್ತಾಯಕ್ಕನ ನಿಲವು. ಅಲ್ಲಮ ಪ್ರಭು, “ಗುರು ಬೋಧಿಸುವ ಮುನ್ನವೇ ಶಿಷ್ಯನು ಸಂಸಾರವನ್ನು ತೊಲಗಿಸಿ ಲಿಂಗದಲ್ಲಿ ಲೀನವಾಬೇಕು ಎಂದು ನಿರ್ಧರಿಸಬೇಕು” (ಪು.38) ಎಂದಾಗ, ಆಕೆ ಗುರು, ಲಿಂಗ, ಜಂಗಮಗಳನ್ನು ಅರಿಯಲು ಗುರು, ಗುರುವಚನ ಬೇಕೇ ಬೇಕು ಎಂದು ವಾದಿಸುತ್ತಾಳೆ. ಗುರುವಿಲ್ಲದೆ ಇಂದು ನಮಗೆ ಜ್ಞಾನೋದಯ ಆಗಬಹುದು, ಆದರೆ, ಅದು ಸಾಧ್ಯವಾಗಬೇಕಾದರೆ ಹಿಂದಿನ ಜನ್ಮದಲ್ಲಾದರೂ ಗುರುಬೋಧೆಯಾಗಿರಲೇ ಬೇಕು, ಎಂಬುದು ಆಕೆಯ ನಿಲವು (ವ. 101). ಇದಕ್ಕೆ ಉತ್ತರವಾಗಿ ಅಲ್ಲಮರು, “ಗುರು, ಶಿಷ್ಯರು ಭಿನ್ನರಲ್ಲ, ಕೇವಲ ಕರ್ಮ ಮತ್ತು ಮರವೆ(ಅಜ್ಞಾನ)ಯಿಂದಾಗಿ ಅವರನ್ನು ಭಿನ್ನ ಎಂದು ಭ್ರಮಿಸುತ್ತೇವೆ. ನಾನೇ ಪರವಸ್ತು ಎಂಬುದನ್ನು ಜ್ಞಾನದ ಮೂಲಕ ತಿಳಿದುಕೊಂಡರೆ, ನಿನಗೆ ನೀನೇ ಗುರುವಾಗುತ್ತೀ, ನಿನಗಿಂತ ಬೇರೆ ಗುರು ಬೇಕಾಗುವುದಿಲ್ಲ” ಎನ್ನುತ್ತಾರೆ (ವ.102). ಇದರ ಅರ್ಥ: ಒಬ್ಬ ಸಮರ್ಥ ಗುರು ಸಿಕ್ಕಿದರೂ ನಮ್ಮಲ್ಲಿ ಅವನು ಅರಿವನ್ನು (ಪಾರಮಾರ್ಥಿಕ ಜ್ಞಾನವನ್ನು) ಉಂಟು ಮಾಡಲಾರ. ಆ ಜ್ಞಾನವನ್ನು ನಾವು ಸ್ವಪ್ರಯತ್ನದಿಂದಲೇ ಸಂಪಾದಿಸಬೇಕು. ಸ್ವಪ್ರಯತ್ನದಿಂದ ಯಾರು ಅರಿವನ್ನು ಪಡೆಯುತ್ತರೋ ಅವರು ತಮಗೆ ತಾವೇ ಗುರುವಾಗುತ್ತಾರೆ.

ತನ್ನ ತಾನರಿದವನಿಗೆ ಅರಿವೇ ಗುರು ಎಂಬ ಸಿದ್ಧಾಂತವನ್ನು ಮುಕ್ತಾಯಿ ಒಪ್ಪಿಕೊಂಡರೂ, ಅಂಥ ಗುರುವಿಗೂ ಮಾರ್ಗದರ್ಶನ ನೀಡಲು ಗುರು ಎಂಬ ವ್ಯಕ್ತಿ ಬೇಕು ಎಂಬುದು ಅವಳ ವಾದ (ವ.103). ಇದಕ್ಕೆ ಸಮ್ಮತಿಸಿದ ಪ್ರಭುದೇವರು, ಮಾರ್ಗದರ್ಶನಕ್ಕೆ ಗುರು ಬೇಕು, ಆದರೆ ನೀನು ಗುರುವಾಗುವುದು ಮಾತ್ರ ನಿನ್ನ ಸ್ವಪ್ರಯತ್ನದಿಂದ ಪಡೆದ ಅರಿವಿನಿಂದಾಗಿ, ಎಂಬುದನ್ನು ಮರೆಯಬೇಡ, ಎನ್ನುತ್ತಾರೆ. ಅಲ್ಲಮರು ಆಕೆಯ ಮಾತನ್ನು ಒಪ್ಪಿಕೊಂಡದ್ದು ಸೋಲಿನಿಂದಲ್ಲ, ಅಥವಾ ಆಕೆಯೊಡನೆ ವಾದವೇಕೆ ಎಂಬ ಉದಾಸೀನದಿಂದಲೂ ಅಲ್ಲ. ಆತ ಅರಿವನ್ನು ಪಡೆಯುವ ಸಲುವಾಗಿ ತಾನೇ ಅನಿಮಿಷ ಎಂಬ (ವ್ಯಕ್ತಿಯ) ಗುರುವನ್ನು ಹುಡುಕುತ್ತಿದ್ದ, ಎಂಬ ಕಾರಣದಿಂದ.

ಒಂದರ್ಥದಲ್ಲಿ ಮುಕ್ತಾಯಿ ಹೇಳುವುದು ಸರಿ ಎಂದು ನಮಗೂ ಅನಿಸುತ್ತದೆ. ಕೇವಲ ಲಿಂಗದೀಕ್ಷೆ ಕೊಡಲು, ಮದುವೆ ಮುಂತಾದ ಸಂಸ್ಕಾರಗಳನ್ನು (ಇತ್ಯಾದಿ) ಮಾಡಲು ಒಬ್ಬ ಗುರು (ದೀಕ್ಷಾಗುರು) ಸಾಕು ಎನ್ನುವವರಿಗೆ ಮುಕ್ತಿ ಪಡೆಯಲು ಗುರುವಿನ ಮಾರ್ಗದರ್ಶನ ಬೇಕಿಲ್ಲ. ಆದರೆ ಭವಿತನಕ್ಕೆ ಹೇಸಿ ಭಕ್ತನಾಗಿ ಮೋಕ್ಷ ಪಡೆಯಬೇಕೆನ್ನುವವರಿಗೆ ಲಿಂಗಾಯತ ಧರ್ಮದ ಸಿದ್ಧಾಂತಗಳನ್ನೂ ಆಚರಣೆಗಳನ್ನೂ ಬೋಧಿಸುವ ಗುರು (ಶಿಕ್ಷಾಗುರು) ಬೇಕಾಗುತ್ತದೆ. ಅವನು ಐಹಿಕ ಸುಖದ ಕ್ಷಣಿಕತೆ ಮತ್ತು ಅಲ್ಪತೆ, ಮೋಕ್ಷದ ಅನಂತತೆ ಮತ್ತು ಶ್ರೇಷ್ಠತೆ, ಅವಿದ್ಯೆ ಅಥವಾ ಮಾಯೆಯ ಸ್ವಭಾವ, ವ್ಯಾಪಕತೆ ಮತ್ತು ಪರಿಣಾಮ ಅದನ್ನು ನಿವಾರಿಸುವ ಉಪಾಯ, ಶಿವ, ಶಕ್ತಿ ಮುಂತಾದವುಗಳ ಬಗ್ಗೆ ತಿಳಿಸುವ ಶಿಕ್ಷಾಗುರು ಅಗತ್ಯ. ಇಂಥ ಶಿಕ್ಷಣವನ್ನು ಯಾರು ಬೇಕಾದರೂ ತಮ್ಮ ಗುರುಗಳಿಂದ ಅಥವಾ ಗ್ರಂಥಗಳಿಂದ ಪಡೆಯಬಹುದು. ಆದರೆ ಮೋಕ್ಷಕ್ಕೆ ಕೇವಲ ದಾರಿ ತೋರಿಸಿದರೆ ಸಾಲದು, ಮೋಕ್ಷಾರ್ಥಿಯ ಸಾಧನೆಯ ಪ್ರತಿ ಹೆಜ್ಜೆಯಲ್ಲೂ ಮಾರ್ಗದರ್ಶನ ನೀಡಬಲ್ಲ – ಮೋಕ್ಷಗುರು – ಬೇಕು. ನಾವು  ಬಿ.ಎ., ಎಂ.ಎ. ಮುಂತಾದ ಪದವಿಗಳ ಪಠ್ಯಗಳನ್ನು ಕರೆಸ್ಪ್ಪಾಂಡೆನ್ಸ್ ಕೋರ್ಸ್ ಮೂಲಕ ಪಡೆಯಬಹುದು. ಆದರೆ ಅರಿವನ್ನು (ಮೂರನೆಯ ಅರ್ಥದ) ಮತ್ತು ಮೋಕ್ಷವನ್ನು ಕರೆಸ್ಪಾಂಡೆನ್ಸ್ ಕೋರ್ಸಿನಲ್ಲಿ ಪಡೆಯಲು ಸಾಧ್ಯವಿಲ್ಲ. ಅಷ್ಟೇ ಏಕೆ, ಡಾಕ್ಟರು ಆಪರೇಶನ್ ಮಾಡುವುದನ್ನು ಕಲಿಯಲು, ಎಂಜಿನಿಯರ್ ಸೇತುವೆ ಕಟ್ಟುವುದನ್ನು ಕಲಿಯಲು ಕರೆಸ್ಪ್ಪಾಂಡೆನ್ಸ್ ಕೋರ್ಸ್ ಸಾಲದು. ಅವರು, ನುರಿತ ಗುರು ಎಂಬ ವ್ಯಕ್ತಿಗಳ ಪ್ರಾಯೋಗಿಕ ಮಾರ್ಗದರ್ಶನವನ್ನು ಅವಲಂಬಿಸಲೇ ಬೇಕು. ಅದೇ ರೀತಿ, ಅಧ್ಯಾತ್ಮ ಎಂಬ ಪ್ರತ್ಯಕ್ಷವಲ್ಲದ, ಸಂಕೀರ್ಣ ವಿದ್ಯೆಯನ್ನು ಕಲಿಯಲು, ಕಲಿತು ಮುಂದೆ ಹೋಗಿ ಅನುಭಾವವನ್ನು ಪಡೆಯಲು, ಅನುಭಾವದಿಂದ ಮೋಕ್ಷ ಪಡೆಯಲು (ಅಂದರೆ ಎಲ್ಲ ಹಂತಗಳಲ್ಲೂ ಮಾರ್ಗದರ್ಶನ ಪಡೆಯಲು) ಶಿಷ್ಯನು ಗುರು ಎಂಬ ಅರಿವುಳ್ಳ ವ್ಯಕ್ತಿಯ ಬಳಿ ಹೋಗಲೇ ಬೇಕು. ಗುರು ಏನು ಮಾಡುತ್ತಾನೆ, ಹೇಗೆ ಯೋಗ ಮಾಡುತ್ತಾನೆ ಮುಂತಾದುವನ್ನು ಅವನು ಅವರ ಜೊತೆಯಲ್ಲಿದ್ದು ನೋಡಬೇಕು.

ಆದರೆ ಅಲ್ಲಮರಿಗೆ ಅನಿಮಿಷನೇ ಗುರು ಎಂದಾಗ ಅದಕ್ಕೆ ಬೇರೆಯೇ ಆದ ಅರ್ಥವಿದೆ. ಅನಿಮಿಷ ಯೋಗಿ ಅಲ್ಲಮರಿಗೆ ದೀಕ್ಷೆಯನ್ನಾಗಲಿ ಬೋಧೆಯನ್ನಾಗಲಿ ಕೊಡಲಿಲ್ಲ. ಆದರೂ ಅಲ್ಲಮ ತಾನು ಅವರಿಗೆ ಶಿಷ್ಯ ಎಂದು ತಿಳಿದುಕೊಳ್ಳುತ್ತಾರೆ. ಏಕೆಂದರೆ, ಗುರುವಿನ (ಅಥವಾ ಅವನ ಬೋಧೆಯ) ಕರ್ತವ್ಯ ಶಿಷ್ಯನಲ್ಲಿ ಅರಿವನ್ನು ಉಂಟುಮಾಡುವುದು. ಈ ಅರಿವು ಉಂಟಾಗಬೇಕಾದರೆ ಗುರುವಿನ ಅನುಗ್ರಹದ ಜೊತೆಗೆ ಶಿವಾನುಗ್ರಹವೂ ಬೇಕು. ಶಿವಾನುಗ್ರಹವೂ ಬೇಕು ಎಂದರೆ (ವಚನಕಾರರ ಪ್ರಕಾರ) ಲಿಂಗೋಪಾಸನೆ ಮಾಡಬೇಕು. ಲಿಂಗೋಪಾಸನೆಗೆ ಬೇಕಾದ ಲಿಂಗವನ್ನು ಅನಿಮಿಷ ಕೊಟ್ಟನಾದ ಕಾರಣ ಅವನು ಅಲ್ಲಮರಿಗೆ ಗುರು. ಅಂದರೆ ಗುರು ಮೋಕ್ಷ ಕೊಡಿಸುವುದಿಲ್ಲ, ಅವನು ಕೇವಲ ಲಿಂಗಕ್ಕೂ ಶಿಷ್ಯನಿಗೂ ಸಂಬಂಧ ಏರ್ಪಡಿಸುವ ಒಂದು ಅಗತ್ಯವಾದ ಕೊಂಡಿ, ಎಂಬುದು-

ಎತ್ತಣ ಮಾಮರ ಎತ್ತಣ ಕೋಗಿಲೆ! ಎತ್ತಣಿಂದೆತ್ತ ಸಂಬಂಧವಯ್ಯಾ!
ಬೆಟ್ಟದ ಮೇಲಣ ನೆಲ್ಲಿಯಕಾಯಿ ಸಮುದ್ರದೊಳಗಣ ಉಪ್ಪು,
ಎತ್ತಣಿಂದೆತ್ತ ಸಂಬಂಧವಯ್ಯಾ!
ಗುಹೇಶ್ವರಲಿಂಗಕ್ಕೆಯೂ ಎನಗೆಯೂ
ಎತ್ತಣಿಂದೆತ್ತ ಸಂಬಂಧವಯ್ಯಾ! (2/59)

ಎಂಬ ವಚನದಿಂದ ಸ್ಪಷ್ಟ್ಟವಾಗುತ್ತದೆ.

ಆದರೆ ಎಲ್ಲರಿಗೂ ಗುರು ಇರಲೇಬೇಕೆಂಬ ನಿಯಮವಿಲ್ಲ. ಬಸವಣ್ಣ ಗುರುವಿಲ್ಲದ ಗುರು. ಸ್ವಲ್ಪ ವಿಚಾರ ಮಾಡಿ ನೋಡಿದರೆ ಮೊಟ್ಟ ಮೊದಲು ಯೋಗವನ್ನು ಮಾಡಿ ಅದನ್ನು ಇತರರಿಗೆ ಬೋಧಿಸಿದ ವ್ಯಕ್ತಿಗೆ ಗುರುವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕೆಲವರು ಶಿವನೇ ಮೊದಲನೆಯ ಯೋಗಗುರು ಎಂದು ಸುಳ್ಳು ಹೇಳುತ್ತಾರೆ.

Comments 14

  1. Vinay Kanchikere
    Jul 2, 2018 Reply

    ಬಿಡಿಬಿಡಿಯಾಗಿ ತಿಳಿಸಿ ಹೇಳಿದ್ದೀರಿ ಗುರುಗಳೇ. ನಿಮಗೂ ನಾನು ಗುರುವೆಂದೇ ಕರೆಯಲು ಬಯಸುತ್ತೇನೆ. ಗುರು, ಯೋಗ್ಯ ಗುರು ಇಂದು ಅಪರೂಪ, ಹುಡುಕಿ ಹುಡುಕಿ ತೆಗೆಯಬೇಕು, ನಿಮ್ಮಂಥ ಗುರುಗಳು ಸಿಗಬೇಕು.

  2. sharada A.M
    Jul 3, 2018 Reply

    Sir, We believed Shiva is Adiyogi, How can you say that it is a lie? please clarify my doubt in your next article.

    • Madapathi.V.V
      Jul 7, 2018 Reply

      Dear madam more information of God and guru you can refer vachana saahitya no need to ask any one.. your doughts will clarify with only Vachna saahitya..
      Sharanu Sharanaarthi madam.

  3. Srinidhi Anjanapur, Belgaum
    Jul 4, 2018 Reply

    Guru is certainly essential for guidance, even in self awareness process guru’s presence is must. i like the article.

  4. dr. Mallesh, mysuru
    Jul 4, 2018 Reply

    The author has genuine intention to tell about ‘guru’, but i feel he contradicts at certain levels. i feel the concept needs some more explanation and clarity

  5. ಬಸವರಾಜ ಹಂಡಿ
    Jul 5, 2018 Reply

    ಗುರು ತತ್ತ್ವವೇ ಅಥವಾ ವ್ಯಕ್ತಿಯೆ?

    ಶರಣ ಶ್ರೀ M G ಮಹಾದೇವಪ್ಪನವರ ಅತಿ ಉತ್ಕೃಷ್ಟವಾದ ಲೇಖನ. ಲೇಖನದಲ್ಲಿ ಬರೆದ ಗುರುವಿನ ಬಗ್ಗೆ 100% ನಿಜ. ಸಂಪೂರ್ಣವಾಗಿ( absolutely ) ಗುರು ಅಂದರೆ ಏನು ಅಂತ ಹೇಳಿದ್ದಾರೆ.
    ವಚನಗಳ ಬಗ್ಗೆ ಬಹಳ ದೀರ್ಘವಾಗಿ ಅಧ್ಯಯನ ಮಾಡಿ ಈ ಲೇಖನವನ್ನು ಬರೆದಿದ್ದಾರೆ.
    ಗುರು ಅರಿವು ಹೌದು.
    ಗುರು ನಿರ್ದಾರ ಹೌದು.
    ಗುರು ವ್ಯಕ್ತಿವು ಹೌದು.

    ಗುರು ಅರಿವು ಹೌದೆ ಹೌದು. ಇದರಲ್ಲಿ ಯಾವದೆ ರಾಜಿ ಇಲ್ಲ.
    ಗುರು ನಿರ್ದಾರ ಸಹ ಹೌದು.
    ಗುರುವು ವ್ಯಕ್ತಿ ಆಗಿರಬಹುದು .

    ಮೇಲಿನ 3 ಅಂಶಗಳನ್ನು ಸಮರ್ಥಿಸಲು ವಚನಗಳ ಹಾಗು ಸಂದರ್ಭಗಳ ಆಯ್ಕೆ ಅದ್ಭುತವಾಗಿದೆ.

    ಅತಿ ವಿರಳವಾದ ಜ್ಞಾನ ದಾಸೋಹಕ್ಕೆ ನಮ್ಮೆಲ್ಲರಿಂದ ಶರಣ ಶ್ರೀ ಮಹಾದೇವಪ್ಪನವರಿಗೆ ಹಾಗು ಬಯಲು ತಂಡಕ್ಕೆ ಧನ್ಯವಾದಗಳು ಹಾಗು ಶರಣು ಶರಣಾರ್ಥಿಗಳು ?

  6. ಡಾ.ಪಂಚಾಕ್ಷರಿ ಹಳೇಬೀಡು
    Jul 5, 2018 Reply

    ಲಿಂಗಾಯತ ಧರ್ಮವು ಅನುಭವ ಜನ್ಯ ವಚನಾಧಾರಿತವಾಗಿದೆ. ವಚನಗಳಲ್ಲಿ ಹುದುಗಿರುವ ನೈಜ ಅರ್ಥವನ್ನು ಓದುಗರು ಸರಿಯಾಗಿ ಅರಿಯಬೇಕು.
    ಕೇವಲ ಕೆಲವು ವಚನಗಳ ಆಧಾರದ ಮೇಲೆ ಕೆಲವರು ಅರಿವೇ ಗುರು, ಬಾಹ್ಯ ಗುರುವಿಲ್ಲ ಎಂದು ವಾದಿಸುತ್ತಾರೆ. ಒಳಗೆ ಅರಿವು ಜಾಗೃತವಾಗಿ ಗುರುವಾಗಲು ಹೊರಗಿನ ಗುರು ಬೇಕು.
    ಮರದೊಳಗೆ ಮಂದಾಗ್ನಿ ಇದೆ ಆದರೆ ಅದು ಹೊತ್ತಿಉರಿದು ಬೆಳಗಲು ಹೊರಗಿನ ಅಗ್ನಿ ಸ್ಪರ್ಷ ಬೇಕು. ಹಾಗೇ ಗುರು ಕೂಡ ಎಂದು ಬಹಳ ಅರ್ಥಗರ್ಭಿತವಾಗಿ ವಿವರಿಸಿದ ಶರಣ ಡಾ. ಎನ್.ಜಿ. ಮಹದೇವಪ್ಪನವರಿಗೆ ಧನ್ಯವಾದಗಳೊಂದಿಗೆ ಶರಣಾರ್ಥಿಗಳು.

  7. r.p.jagadeesh
    Jul 6, 2018 Reply

    ಗುರು ನಿರ್ಧಾರವೂ ಹೌದು ಎನ್ನುವುದು ಹೊಸ ಕಲ್ಪನೆ ಅಥವಾ ಹೊಸ ಸತ್ಯ. ಪ್ರೊಫೆಸರ್, ಗುರುವಿನ ಬಗ್ಗೆ ನಿಮ್ಮ ಅಭಿಪ್ರಾಯ ಒಪ್ಪುವಂಥದುದು.

  8. Vinay Kanchikere
    Jul 7, 2018 Reply

    ಅನಿಮಿಷ ಯೋಗಿ ಮತ್ತು ಅಲ್ಲಮಪ್ರಭುದೇವರ ಕುರಿತ ಗುರು-ಶಿಷ್ಯ ಸಂಬಂಧವನ್ನು ತಿಳಿದು ಖುಷಿಯಾಯಿತು. ಮಾಹಿತಿಗಾಗಿ ದನ್ಯವಾದ.

  9. Madapathi.V.V
    Jul 7, 2018 Reply

    “ಗುರು ತತ್ತ್ವವೇ ಅಥವಾ ವ್ಯಕ್ತಿಯೆ?”
    DR.N.G.ಮಹದೇವಪ್ಪ ಶರಣರಿಗೆ ಅನಂತ ಅನಂತ ಶರಣೂ ಶರಣಾರ್ಥಿಗಳು..

    ಸುಂದರವಾದ ಗುರು ಕಲ್ಪನೆಯನ್ನು ನಮ್ಮೆಲ್ಲರಿಗೆ ತಿಳಿಸಿದ್ದೀರಿ.. ಈ ನಿಮ್ಮ ಆರ್ಟೀಕಲ್ ಓದಿದಮೇಲೆ ನನಗೆ ಒಂದು ಪದ ನೆನಪಾಯಿತು ಅದು ಯಾರದೆಂಬುದು ನನಗೆ ನೆನಪಾಗ್ತಾಯಿಲ್ಲ..
    “ಗುರುವೀನಾಜ್ಞಯ ಮೀರದೇ ನಡೆಯವವನ ನರನೆನ್ನಬೇಡ ಅವನೆ ಪರಮಾತ್ಮ, ನರನೆನ್ನಬೇಡ ಅವನೆ ಪರಮಾತ್ಮ. ಅರಿಯದಾ ಅಜ್ಞಾನಿ ಜನರೇನು ಬಲ್ಲರು ಅರಿಯದಾ ಅಜ್ಞಾನಿ ಜನರೇನು ಬಲ್ಲರು ಪರಕೆಪರ-ತರ ವಸ್ತುವವನು, (ಗು).
    ಮುತ್ತು ನೀರೊಳು ಹುಟ್ಟಿ ಮತ್ತೆನೀರಹುದೇ ಮುತ್ತು ಲಕ್ಷಾಂತರಾ ಬೆಲೆಯಾಯಿತು.. ತತ್ವಜ್ಞಾನಿಯು ತಾನು ಹುಟ್ಟು ಸತ್ತುವನಲ್ಲ ಅತ್ಯಂತ ಆನಂದ ಪರಿಪೂರ್ಣನವನು.”

    ಅಧ್ಭುತವಾದ ಗುರುವಿನ ಪರಿಕಲ್ಪನೆಗೆ ಮತ್ತೊಂಮ್ಮೆ ಅನಂತ ಅನಂತ ಶರಣೂ ಶರಣಾರ್ಥಿಗಳು.

  10. gangadhara Navale
    Jul 9, 2018 Reply

    The concept of guru is complex. real gurus are rare in present day world. allama- animishaiah never seen each other but are fantastic example of true guru and true student. wonderful article.

  11. Karibasappa hanchinamani
    Jul 11, 2018 Reply

    ಎಲ್ಲರಿಗೂ ಗುರು ಇರಲೇಬೇಕೆಂಬ ನಿಯಮವಿಲ್ಲ. ಬಸವಣ್ಣ ಗುರುವಿಲ್ಲದ ಗುರು. ನಿಜ ಸರ್. ಗುರುವಿಲ್ಲದ ಗುಡ್ಡ ಬಸವಣ್ಣನವರು.

  12. Jagannatha Patil
    Jul 16, 2018 Reply

    ಅಲ್ಲಮರು ಮತ್ತು ಅನಿಮಿಷಯೋಗಿಗಳ ಗುರು- ಶಿಷ್ಯ ಸಂಬಂಧ ಪೂರ್ವ ನಿರ್ಧಾರಿತವಿದ್ದಂತೆ ಕಾಣುತ್ತದೆ. ವಿವರಗಳುಳ್ಳ ಲೇಖನ ಸೂಪರ್.

  13. shobhadevi
    Jul 22, 2018 Reply

    ಗುರುವಿನ ಬಗ್ಗೆ ಎಷ್ಟೇ ತಿಳುವಳಿಕೆ ಇದ್ದರೂ ಅಪೂರ್ಣ ಎನಿಸುತ್ತಲೇ ಇರುತ್ತದೆ. ನಿಮ್ಮ ಲೇಖನದಲ್ಲಿನ ಹಲವಾರು ವಿಚಾರಗಳು ತುಂಬಾ ಹಿಡಿಸಿದವು.

Leave A Comment

Your email address will not be published. Required fields are marked *