
ಹುಚ್ಚು ಖೋಡಿ ಮನಸು
ಕಪ್ಪು ಕೌದಿಯ ಹೊದ್ದು
ತನ್ನ ಬಣ್ಣವನೇ ಮರೆತು
ಮಲಗಿಬಿಟ್ಟಿದೆ ನೀಲಿಯಾಗಸ
ಒಳ-ಹೊರಗು ಮಬ್ಬಾಯ್ತು…
ಕತ್ತಲೆಯ ನಂಜೇರಿ
ಕಣ್ಣು ಹರಿಸಿದುದ್ದಕ್ಕೂ
ಎಲ್ಲೆಲ್ಲೂ ಮಸುಕು
ನಿಂತಲ್ಲೇ ಯುಗಯುಗಕು ನಿಂತು
ಜೋಮುಗಟ್ಟಿತು ಕಾಲು
ನಡೆಯ ಮರೆತು…
ಮೇಘಗಳ ಆರ್ಭಟದಲಿ
ಆಗೀಗ ಸಿಡಿಯುತಿದೆ
ಮಿಂಚು-ಗುಡುಗು
ಕೊರೆವ ಚಳಿಯಲ್ಲೂ
ಬಿಟ್ಟ ನಿಟ್ಟುಸಿರ ಬಿಸಿ ಹಬೆಯು
ಸುರುಳಿಸುರುಳಿಯಾಗಿ
ಮೇಲೆ ಸರಿದು ಹೋಗುತಿದೆ…
ಎಡಬಿಡದೆ ಸುರಿಯುತಿಹ
ಮಳೆಯ ಹನಿಗಳಾ ಹಿಡಿದು
ಮುಗಿಲನೇರುವ ಕಿಚ್ಚು…
ಹಾಡುಹಗಲೇ ಕಾಣೆಯಾದ
ರವಿಯ ಹುಡುಕಿ ತರುವಾ ಹುಚ್ಚು
ಕಲ್ಪನೆಯ ಕುದುರೆಗೆ
ಎಣೆಯುಂಟೆ? ಕೊನೆವುಂಟೆ?
ನಿಜದತ್ತ ನಡೆಸುವ ಶಕ್ತಿಯುಂಟೆ?
ದೇಹ ಕಾವನು ಕಾಪಿಟ್ಟ ಜೀವಕೆ
ಎಲ್ಲಿಂದ ಬಂತಿದು
ಗಗನ ತಡಕುವ ಕನಸು!?
ನಿನ್ನೊಳಗೆ ನಿನ್ನಲ್ಲೇ
ಇಳಿದು ನೋಡೆಂದು
ತಲೆಗೆ ಮೊಟಕಿದ ಗುರು ಬೆನ್ನ ಬಳಿ ನಿಂತು
ಒಳಗಿದ್ದರೂ ಒಳಗ ನೋಡದೇ
ಹೊರಗೆ ಸುತ್ತುವ ಚಟ
ಭ್ರಮೆ ಬಿಡದ ಹಟ
ಮನಕಂಟಿ ಕಾಲಗಳೇ ಸರಿದವು…
ಗುರು ಕೊಟ್ಟ ಸುಳಿವುಗಳು
ಸಿಕ್ಕು ಕಣ್ಮರೆಯಾಗಿ ಕಾಡುತಿಹವು
ದೌರ್ಬಲ್ಯವೆನಲೇ, ಸೋಲೆನಲೆ
ಗೊಂದಲಗಳ ಬೀಡೆನಲೇ?
ಗೊತ್ತು ಗುರಿಯಿಲ್ಲದೆ ಅಲೆವ
ತುಂಡು ಮೋಡದ ತೆರದಿ
ತಳಮಳಿಸುತಿದೆ ಎದೆಯು
ಎಂದಿಗೋ ಎಂದಿಗೋ…
ನನ್ನಿರಿವಿನ ಅರಿವನರಿಯುವ ಗಳಿಗೆ
ಒದಗಿ ಬರುವುದೆಂದಿಗೋ…?