Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹೀಗೊಂದು ತಲಪರಿಗೆ…
Share:
Articles June 5, 2021 ಸ್ಮಶಾನವಾಸಿ

ಹೀಗೊಂದು ತಲಪರಿಗೆ…

ಹೀಗೆ ಒಂದು ದಿನ ಆಕಸ್ಮಿಕವಾಗಿ ನನಗೊಬ್ಬ ವ್ಯಕ್ತಿ ಪರಿಚಯವಾದರು. ಆತ ಸ್ಮಶಾನವಾಸಿ. ಹಾಗೆಂದು ಬೂದಿ ಮೆತ್ತಿಕೊಂಡು ಸುಡುಗಾಡಿನಲ್ಲಿ ಬೀಡಿ ಸೇದುತ್ತಾ, ಗಾಂಜಾ ಹೊಡೆಯುತ್ತಾ ಲೋಕದಿಂದ ದೂರವಾದವರಲ್ಲ. ಸಾಮಾನ್ಯರಲ್ಲಿ ಸಾಮಾನ್ಯನಂತೆ ತೋರುತ್ತಿದ್ದ ಆತನ ನುಡಿ, ನಡೆ ಎಲ್ಲವೂ ಭಿನ್ನವಾಗಿದ್ದವು. ಮಾತುಗಳಲ್ಲಿ ನೈಜತೆ, ಗಹನ ವಿಚಾರಗಳಲ್ಲಿ ಸಹಜತೆ. ಆತ ನೆಲದ ನಡೆಕಾರರ ಬಗೆಗೆ ಮಾತಾಡುತ್ತಿದ್ದರೆ ಮೈಯೆಲ್ಲಾ ಕಿವಿಯಾಗುತ್ತಿತ್ತು. ಎದುರಿಗೆ ಕಂಡುದನ್ನು ತೆರೆದು, ತೆಗೆದು ಹೇಳುತ್ತಿರುವಂತೆ ಯಾವುದೇ ಆಧ್ಯಾತ್ಮದ ಸೋಗಿಲ್ಲದ, ಗೂಡಾರ್ಥಗಳ ಹಂಗಿಲ್ಲದ ಮಾತುಗಳು… “ಅರಸುವ ನಿಧಿ ಕಾಲ ಬಳಿಯೇ ಸಿಕ್ಕಂತೆ” ಶರಣರ ಪಥವನ್ನು ಹುಡುಕುತ್ತಿರುವ ಸಂದರ್ಭದಲ್ಲಿ ಆತನ ಭೇಟಿಯೊಂದು ಅಪೂರ್ವ. ಆ ಸನ್ನಿವೇಶ ಸೃಷ್ಟಿಸಿದ ಅವಕಾಶದಲ್ಲಿ ಕೇಳಲಾದ ಪ್ರಶ್ನೆಗಳು- ಪಡೆದ ಉತ್ತರಗಳು ಇಲ್ಲಿವೆ-

ಮಂಗಳಾ: ಶರಣರು ಆಧ್ಯಾತ್ಮಜೀವಿಗಳೇ, ಕಾಯಕಯೋಗಿಗಳೇ? ಅವರನ್ನು ಹೇಗೆ ಗ್ರಹಿಸುವುದು?
ಸ್ಮಶಾನವಾಸಿ: ಮೊದಲು ಅವರನ್ನು ಗ್ರಹಿಸಬೇಕೆಂಬ ಅತಿಯಾದ ಚಟವನ್ನು ಬಿಟ್ಟುಬಿಡಿ. ಅವರ ಬಗ್ಗೆ ನಿಮಗೆ ಗೌರವವಿದ್ದರೆ ಅವರು ನಡೆದಾಡಿದ ಹಾದಿಯನ್ನು ಅನುಸರಿಸಿ ಎರಡು ಹೆಜ್ಜೆಯನ್ನಾದರೂ ಮೂಡಿಸಿ. ಶರಣರ ಕಾಯಕವೇ ಅವರ ಆಧ್ಯಾತ್ಮ. ಕಾಯಕ ಎಂದರೆ ಕೊನೆ ಉಸಿರಿರುವ ತನಕ ಪ್ರತಿಯೊಬ್ಬರೂ ದುಡಿಯಬೇಕು. ದುಡಿದದ್ದನ್ನು ಹಂಚಿ ತಿನ್ನಬೇಕು. ಹಂಚಿ ತಿನ್ನುವ ಅವರ ತಿಳುವಿನಲ್ಲಿ ಸಚರಾಚರವೆಲ್ಲವೂ ನನ್ನ ಕುಟುಂಬ ಎಂಬ ಅತ್ಯುತ್ಕೃಷ್ಟ ಆಧ್ಯಾತ್ಮವಿದೆ. ಇದನ್ನು ನಿಮಗೆ ತಿಳಿಯಲು ಸಾಧ್ಯವಿಲ್ಲದಿದ್ದ ಪಕ್ಷದಲ್ಲಿ ನೀವು ‘ಆಧ್ಯಾತ್ಮ’ ಎಂದು ಯಾವುದನ್ನು ಊಹಿಸಿಕೊಂಡಿದ್ದೀರೋ ಅದನ್ನು ತಿಪ್ಪೆಗೆ ಎಸೆಯಿರಿ.

ಮಂ: ಲಿಂಗಾಂಗ ಸಾಮರಸ್ಯ ಎಂದರೇನು? ಬಯಲಿಗೂ ಅದಕ್ಕೂ ಸಂಬಂಧವೇನು?
ಸ್ಮ: ಬಳ್ಳಿ, ಹೂವು, ಹೀಚು, ಕಾಯಿ ಎಂದರೇನು? ಇವಕ್ಕೂ ಬೀಜಕ್ಕೂ ಇರುವ ಸಂಬಂಧವೇನು ಎಂದು ಕೇಳುತ್ತಿದ್ದೀರಿ!

ಮಂ: ಲೌಕಿಕ ಜೀವನದಲ್ಲಿ ಮನಸ್ಸನ್ನು ಶೂನ್ಯಗೊಳಿಸಿಕೊಳ್ಳುವುದು ಹೇಗೆ? ಅಥವಾ ‘ತಾನು’ ಇದರಲ್ಲಿ ಇಲ್ಲವಾಗುವುದು ಹೇಗೆ?
ಸ್ಮ: ಸಾಧ್ಯವಾದರೆ ನೋಡಿಕೊಳ್ಳಿ. ಮನಸ್ಸು ಮೂಲತಃ ಶೂನ್ಯ ಲಕ್ಷಣದಲ್ಲೇ ಇದೆ. ಶೂನ್ಯಗೊಳಿಸಿಕೊಳ್ಳುತ್ತೇನೆ ಎನ್ನುವುದು ಪೂರ್ಣ ಭ್ರಮೆ! ನಿಮ್ಮ ಪ್ರಶ್ನೆಯಲ್ಲಿ ‘ಲೌಕಿಕ’ ಎಂಬ ಶಬ್ದವನ್ನು ಬಳಸಿದ್ದೀರಿ. ಲೋಕದಲ್ಲಿ ತಾನು ನೋಡಿ ತಿಳಿದು ಅನುಭವಿಸಿರುವುದನ್ನು ಸಂಗ್ರಹರೂಪದಲ್ಲಿಟ್ಟುಕೊಂಡು ಸದಾ ಹರಿಯುತ್ತಿರುವ ಅಂತಃಪ್ರವಾಹವಾಗಿ ಮನಸ್ಸು ನಮ್ಮ ಮುಂದಿದೆ. ಈ ಅಂತಃಪ್ರವಾಹ ಇಲ್ಲದಿದ್ದಾಗ ಮನಸ್ಸು ಇದೆಯಾ? ಇದ್ದರೆ ಅದರ ಲಕ್ಷಣವೇನು? ತಾನು ತಿಳಿದು ನೋಡಿ ಅನುಭವಿಸುತ್ತಿರುವುದರಲ್ಲಿ ನಾವು ನಮಗೇ ತಿಳಿಯದಂತೆ ಇಷ್ಟಾ- ಅನಿಷ್ಟಗಳನ್ನು ಏರ್ಪಡಿಸಿಕೊಂಡು ಇಷ್ಟಗಳನ್ನಷ್ಟೇ ಹಿಂಬಾಲಿಸಿರುತ್ತೇವೆ. ಇಷ್ಟಗಳನ್ನು ಸದಾ ಕೋರಿಕೊಳ್ಳುತ್ತೇವೆ. ಇದು ಭವವೆಂದು ಕರೆದರೆ ಕರೆದುಕೊಳ್ಳಿ.
ಬಯಸಿ ಬಂದುದಂಗ ಭೋಗ, ಬಯಸದೆ ಬಂದುದು ಲಿಂಗಭೋಗ.
ಅಂಗಭೋಗ ಅನರ್ಪಿತ, ಲಿಂಗಭೋಗ ಪ್ರಸಾದ,
[ಬೇಕೆಂಬುದು ಕಾಯಗುಣ ಬೇಡೆಂಬುದು ವೈರಾಗ್ಯ
ಬೇಕೆಂಬುದು ಅಲ್ಲ ಬೇಡೆಂಬುದು ಅಲ್ಲ
ಈ ಉಭಯವನತಿಗಳೆದು ಭೋಗಿಸಬಲ್ಲಡೆ]
ಕೂಡಲಚೆನ್ನಸಂಗಾ [ನಿಮ್ಮ ಶರಣನೆಂಬೆ]
ನಿಮ್ಮ ದಿನನಿತ್ಯದ ಇಷ್ಟಗಳಲ್ಲಿ ಇಷ್ಟವಾದ ವ್ಯಕ್ತಿ, ಇಷ್ಟವಾದ ವಿಷಯ, ಇಷ್ಟವಾದ ವಸ್ತು, ಇಷ್ಟವಾದ ಸ್ಥಳ, ಇಷ್ಟವಾದ ಆಟಪಾಟ ಸುಖಲೋಲುಪತೆಗಳಿವೆ. ಇವನ್ನೇ ಸದಾ ಬಯಸುತ್ತಿರುವ ಅಂತದೃಷ್ಟಿ ನಮ್ಮ ಮನಸ್ಸೇ ಇವೆಲ್ಲವುಗಳಿಗೆ ಪ್ರೇರಕ ಶಕ್ತಿಯಾಗಿದೆ. ಶರಣರು ಇದನ್ನೇ ಬಯಸಿ ಬಂದುದು ಅಂಗಭೋಗ ಎಂದರು.
ಬಯಸದೇ ಬಂದುದು ಲಿಂಗಭೋಗ- ಈ ಜೀವ ಶರೀರಗಳ ಸಂಯುಕ್ತ ವಸ್ತುವನ್ನು ಅವರು ಲಿಂಗಭೋಗ, ಪ್ರಾಣಲಿಂಗ ಎಂದರು. ಇದು ಯಾರೂ ಬಯಸಿ ಪಡೆದದ್ದಲ್ಲ, ಬಂದದ್ದಲ್ಲ.
ಅಂಗಭೋಗ ಅನರ್ಪಿತ- ಅಂಗಭೋಗಗಳು ಶರಣರಲ್ಲಿ ಅನರ್ಪಿತ.
ಲಿಂಗಭೋಗ ಪ್ರಸಾದ- ಜೀವ-ದೇಹಗಳ ಸಂಬಂಧದಲ್ಲಿರುವ ಇರುವಿಕೆ ಪ್ರಸಾದ! ಮನಸ್ಸಿನ ರೂಪದಲ್ಲಿರುವ ಬೇಕು-ಬೇಡಗಳ ಉಭಯವನ್ನು ತೊರೆದು, ಗಾಳಿ- ನೀರು- ಆಹಾರಗಳ ಸಂಬಂಧದಲ್ಲಿ ಇರುತ್ತಿರುವ ಪ್ರಾಣ ಮತ್ತು ದೇಹದ ಅಂತಃ ಪ್ರವಾಹದ ನಿಜವನ್ನು ಹೊಕ್ಕಿ, ಅನಂತ ಪ್ರಕೃತಿಯಲ್ಲಿ ತಾನೂ ಒಂದು ಪ್ರಕೃತಿಯಾಗಿರುವ ಬೆಡಗನ್ನು ಬೋಗಿಸಿದೊಡೆ ಅವನನ್ನು ನಿಜವಾದ ಶರಣ ಎಂದು ಹೇಳುತ್ತದೆ ಈ ವಚನ. ಪ್ರಕ್ರಿಯಾ ರೂಪದಲ್ಲಿರುವ ಶರಣದ ಆಧ್ಯಾತ್ಮವನ್ನು ಭಾಷೆಗೆ ತರುತ್ತಿರುವ ನನಗೂ, ನಿಮಗೂ ಕಳಂಕವಂತೂ ಇರುತ್ತದೆ, ಎಚ್ಚರ!!! ಶರಣ ಬದುಕು ಸಾಧನಾ ಪ್ರಪಂಚವೇ (ನಡೆಕಾರ ಪ್ರಪಂಚ) ಹೊರತು ವಾಚ್ಯಾರ್ಥ, ಭಾವಾರ್ಥ, ಲಕ್ಷ್ಯಾರ್ಥ ಪ್ರಪಂಚವಲ್ಲ.
ಮನದ ಕೊನೆಯ ಮೊನೆಯ ಮೇಲೆ
ನೆನೆದ ನೆನಹು ಜನನ ಮರಣವ ನಿಲಿಸಿತ್ತು
ಜ್ಞಾನ ಜ್ಯೋತಿಯ ಉದಯ
ಬಾನುಕೋಟಿಯ ಮೀರಿ ಸ್ವಾನುಭವದ ಉದಯ
ಜ್ಞಾನ ಶೂನ್ಯದೊಳಡಗಿದ ಘನವನೇನೆಂಬೆ ಗುಹೇಶ್ವರಾ.

ಮಂ: ಕಾಲದಿಂದ ಕಾಲಕ್ಕೆ ಅಧಿಕಾರ ಶಕ್ತಿಯನ್ನು ಕ್ರೋಢೀಕರಿಸಿಕೊಳ್ಳಲು ಹೆಣಗಾಡುತ್ತಿರುವ ಆಗಮಶಾಹಿಗೆ ಬಂಡವಾಳ ಯಾವುದು?ರಾಮಾಯಣ, ಮಹಾಭಾರತಗಳೋ, ಪುರಾಣಗಳೋ? ವೇದಗಳೋ? ವೇದಾಂತಗಳೋ? ಬ್ರಹ್ಮಸೂತ್ರಗಳೋ? ಉಪನಿಷತ್ತುಗಳೋ?
ಸ್ಮ: ಅಯ್ಯೋಪಾಪ! ಇವಾವೂ ಅಲ್ಲ. ಮನುಷ್ಯನಲ್ಲಿರುವ ವೈಚಾರಿಕ ಪ್ರಲೋಭನೆ ಮತ್ತು ಮೂರ್ಖತನ ಅವರ ಬಂಡವಾಳ.

ಮಂ: ವೈಚಾರಿಕ ಪ್ರಲೋಭನೆ ಎಂದರೇನು?
ಸ್ಮ: ಯಾವುದೇ ವಿಷಯವನ್ನು ಸ್ವಯಂ ವಿಮರ್ಶೆಗೆ ಒಳಪಡಿಸದೆ ಒಪ್ಪಿಕೊಳ್ಳುವ ಮನೋಪ್ರವೃತ್ತಿಯಾಗಿದೆ. ಅಥವಾ ಸತ್ಯ ಮತ್ತು ಸುಳ್ಳಿನ ಮಧ್ಯೆ ಇರುವ ಅಂತರವನ್ನು ತಿಳಿದುಕೊಳ್ಳಲಾಗದೆ ಸಿದ್ಧಾಂತಗಳ ಹಂಗಿನಲ್ಲಿ ಜೀವಿಸುವುದು ವೈಚಾರಿಕ ಪ್ರಲೋಭನೆ.

ಮಂ: ಅತ್ಯಂತ ಸುಲಭವಾಗಿ ಭಾರತೀಯ ಮನಸ್ಸು ವೈಚಾರಿಕ ಪ್ರಲೋಭನೆಗೆ ಒತ್ತುಕೊಡುತ್ತದೆ, ಏಕೆ?
ಸ್ಮ: “ಶ್ರೇಷ್ಠತೆಯ ಅಹಂಕಾರ”. ಎಲ್ಲಿ ಶ್ರೇಷ್ಠತೆಯ ಅಹಂಕಾರ ಇರುತ್ತದೆಯೋ ಅಲ್ಲಿ ಮನುಷ್ಯ-ಮನುಷ್ಯರ ಮಧ್ಯೆ ಸಹಮತ ಇರುವುದಿಲ್ಲ. ಸಹಜೀವನ ಕಠಿಣವಾಗಿರುತ್ತದೆ. ಸಾಮರಸ್ಯದ ಬದುಕು ಸತ್ತು ಹೋಗಿರುತ್ತದೆ.

************************
ಕೇಳಲು ಪ್ರಶ್ನೆಗಳಿದ್ದವು. ಹೇಳಲು ಅವರಲ್ಲಿ ಯಾವ ಅಡ್ಡಿಯೂ ಇರಲಿಲ್ಲ. ಎಷ್ಟೋ ಹೊತ್ತು ಮಾತಾಡುತ್ತಿದ್ದರೂ ಮುಖದಲ್ಲಿ ಆಯಾಸ ಕಾಣಲಿಲ್ಲ, ದನಿಯಲ್ಲಿ ಸ್ವಲ್ಪವೂ ಅಸಹನೆ ತೋರಲಿಲ್ಲ. ಬಿಡಿಬಿಡಿಯಾಗಿ ಬಿಡಿಸಿ ಹೇಳುತ್ತಲೇ ಇದ್ದರು, ತಾಯಿ ಮಗುವಿಗೆ ಅಕ್ಕರೆಯಿಂದ ಅಕ್ಷರ ಕಲಿಸುವಂತೆ.
(ಮುಂದುವರಿಯುತ್ತದೆ…)

Previous post ತೊತ್ತುಗೆಲಸವ ಮಾಡು
ತೊತ್ತುಗೆಲಸವ ಮಾಡು
Next post ನೆಟ್ಟ ನಂಜು ಹಾಲೀಂಟದು
ನೆಟ್ಟ ನಂಜು ಹಾಲೀಂಟದು

Related Posts

ಪೈಗಂಬರರ ಮಾನವೀಯ ಸಂದೇಶ
Share:
Articles

ಪೈಗಂಬರರ ಮಾನವೀಯ ಸಂದೇಶ

November 7, 2020 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಕಸ ತುಂಬಿದಾಗ ಅದನ್ನು ಗುಡಿಸಿ ಸ್ವಚ್ಛ ಮಾಡಲು ಕಾಲ ಕಾಲಕ್ಕೆ ಅನೇಕ ಧರ್ಮದೀಪಕರು, ಮಹಾತ್ಮರು, ಶರಣರು ಉದಯಿಸಿ ಬರುವರು. ಅವರಲ್ಲಿ ಬುದ್ಧ,...
ಅಚಲ ಕಥಾಲೋಕ
Share:
Articles

ಅಚಲ ಕಥಾಲೋಕ

February 10, 2023 Bayalu
ಅನುಭಾವಿ ಲೇಖಕರಾದ ಶರಣ ಪದ್ಮಾಲಯ ನಾಗರಾಜ ಅವರು ಅಚಲ ಕಥಾಲೋಕ (ಅಚಲ-ಝೆನ್ ಅನುಸಂಧಾನ) ಪುಸ್ತಕದಲ್ಲಿ ಬರೆದ ದೀರ್ಘ ಪ್ರಸ್ತಾವನೆಯ ಮಧ್ಯದಲ್ಲಿ ಬರುವ ಕೆಲವು ಮಾತುಗಳನ್ನು ಮಾತ್ರ...

Comments 19

  1. Rajashekhar N
    Jun 7, 2021 Reply

    ನಮ್ಮನ್ನು ಕರೆದುಕೊಂಡು ಹೋಗಗಬಾರದಿತ್ತೇ? ಸ್ಮಶಾನವಾಸಿ ಎಂದರೆ ಸುಡುಗಾಡು ಸಿದ್ದರೇ? ಅಕ್ಕಾ, ತಲಪರಗಿ ಎಂದರೇನು?

  2. Karna Jadhav
    Jun 7, 2021 Reply

    ವೈಚಾರಿಕ ಪ್ರಲೋಭನೆ ಎನ್ನುವ ಶಬ್ದವನ್ನು ಹಲವಾರು ಬಾರಿ ಓದಿದ್ದೆ, ಆದರೆ ಅದರ ಅರ್ಥ ಈಗಲೇ ಗೊತ್ತಾದದ್ದು ನನಗೆ. ಹಾಗಾದರೆ ಅನೇಕ ವಿಷಯಗಳಲ್ಲಿ ನಮಗೆ ಗೊತ್ತಿಲ್ಲದೆಯೇ ನಾವೂ ವೈಚಾರಿಕ ಪ್ರಲೋಭನೆಗೆ ಬಲಿಯಾದವರೇ ಅಲ್ಲವೇ?

  3. Prasad Patil
    Jun 7, 2021 Reply

    ಲಿಂಗಾಂಗ ಸಾಮರಸ್ಯದ ಬಗ್ಗೆ ಒಗಟಾಗಿಯೇ ಉತ್ತರಿಸಿದ್ದಾರೆ. ನೀವಾದರೂ ವಿವರಿಸುವಿರಾ? ಲಿಂಗ ಮತ್ತು ಅಂಗಗಳಲ್ಲಿ ಸಮರಸ ತರುವುದನ್ನು ಶರಣರು ಹೇಳುತ್ತಿದ್ದಾರೆಂದು ನನ್ನ ವಚನಗಳ ತಿಳುವಳಿಕೆ. ಆದರೆ ಹೇಗೆ, ಯಾಕೆ ಎಂದು ತಲಸ್ಪರ್ಶಿಯಾಗಿ ನನಗೆ ಗೊತ್ತಿಲ್ಲ.

  4. ಪ್ರಭಾಕರ ಇಜೇರಿ
    Jun 8, 2021 Reply

    ಮೂಲತಃ ಶೂನ್ಯ ಲಕ್ಷಣದಲ್ಲೇ ಇದ್ದ ಮನಸ್ಸು ತನ್ನ ಬೇಕು-ಬೇಡಗಳ ಮೂಲಕ ಎಲ್ಲಾ ಕಸಕಡ್ಡಿಗಳನ್ನು ತುಂಬಿಸಿಕೊಳ್ಳುತ್ತದೆ ಎನ್ನುವುದು ಗೊತ್ತಾಯಿತು. ಈ ಕಸಕಡ್ಡಿಯನ್ನು ಹೊರಗೆ ಹಾಕುವುದೆಂದರೆ ನೆನಪುಗಳನ್ನು ಅಳಿಸಿಕೊಳ್ಳುವುದು. ನಿಜಕ್ಕೂ ಇದು ಹೇಗೆ ಸಾಧ್ಯ? ದಯಮಾಡಿ ಉತ್ತರಿಸಿ.

  5. yariswamy
    Jun 9, 2021 Reply

    ಶರಣರು ಕಾಯಕಜೀವಿಗಳೂ ಹೌದು, ಆಧ್ಯಾತ್ಮಜೀವಿಗಳೂ ಹೌದು. ಆಧ್ಯಾತ್ಮ ಎಂದು ಕಾಯಕ ಮರೆಯಲಿಲ್ಲ. ಕಾಯಕದ ಜೊತೆಗೆ ದೈವತ್ವವನ್ನು ಸಾಧಿಸಿದರು. ಆದರೆ ನೀವಿಲ್ಲಿ ಕಾಯಕವೇ ಆಧ್ಯಾತ್ಮವೆಂದು ಹೇಳಿದ್ದೀರಿ. ಇದನ್ನು ಮತ್ತಷ್ಟು ವಿವರಿಸಿ ಕೊಡುವಿರಾ?

  6. Basappa Kalguti
    Jun 9, 2021 Reply

    ಬಯಸಿ ಬಂದುದು ಅಂಗಭೋಗ… ವಚನದ ವ್ಯಾಖ್ಯಾನ ಓದಿ ಬಹಳ ಬಹಳ ಸಂತೋಷವಾಯಿತು. ವಚನದಲ್ಲಿ ಹೊಸ ಗಾಳಿ ಬೀಸಿದ ಅನುಭವ ಪಡೆದೆ. ಥ್ಯಾಂಕ್ಯೂ.

  7. ಷಡಕ್ಷರಿ ಪಾವಟೆ
    Jun 12, 2021 Reply

    ವಿಚಾರಕ್ಕೆ ಹಚ್ಚುವ ಉತ್ತರಗಳು!! ಮನಸ್ಸನ್ನು ಇಲ್ಲವಾಗಿಸಿಕೊಂಡು ಬದುಕುವುದು ನಿಜಕ್ಕೂ ಸಾಧ್ಯವೇ? ಮನಸ್ಸನ್ನ ಇಲ್ಲವಾಗಿಸುವುದೆಂದರೆ ‘ನಾನು’ ಎನ್ನುವ ಅಹಂಕಾರದಿಂದ ಬಿಡಿಸಿಕೊಳ್ಳುವುದು. ಸಂಸಾರಿಗೇ ಆಗಲಿ, ಸನ್ಯಾಸಿಗೆ ಆಗಲಿ ಇದು ಆಗದ ಮಾತು. ಹಾಗೆ ಅಹಂಕಾರದಿಂದ ಮುಕ್ತರಾದವರನ್ನು ನಾನು ಇದುವರೆಗೆ ನೋಡಿಲ್ಲ, ನನ್ನಿಂದಲೂ ಸಾಧ್ಯವಾಗಿಲ್ಲ.

  8. Jyothilingappa
    Jun 13, 2021 Reply

    ಈ ಸ್ಮಶಾನವಾಸಿಗಳು ನಾವು ತಿಣಿಕಾಡುವ ಪದಗಳನ್ನು ಎಷ್ಟು ಸರಳವಾಗಿಸುತ್ತಾರೆ..ಉದಾಹರಣೆಗೆ ಲಿಂಗಾಂಗ ಸಾಮರಸ್ಯ.. ಮತ್ತು ಹೂವು, ಬೀಜ ಸಂಬಂಧ… ಕುತೂಹಲ, ಕಾಯುವೆವು…

  9. ಶಿವಲಿಂಗಯ್ಯ ಎಲಿಗಾರ್
    Jun 15, 2021 Reply

    ಲಿಂಗಭೋಗ ಪ್ರಸಾದ- ಜೀವ-ದೇಹಗಳ ಸಂಬಂಧದಲ್ಲಿರುವ ಇರುವಿಕೆ ಪ್ರಸಾದ! ಅಂಗಭೋಗ ಮತ್ತು ಲಿಂಗಭೋಗಗಳ ಕುರಿತ ಇಷ್ಟು ಸ್ಪಷ್ಟ ಮತ್ತು ಸೈ ಎನಿಸುವ ವ್ಯಾಖ್ಯೆಯನ್ನು ಕೇಳಿಯೂ ಇರಲಿಲ್ಲ, ನೋಡಿಯೂ ಇರಲಿಲ್ಲ… ಸ್ಮಶಾನವಾಸಿಗಳ ಮಾತುಗಳು ಬಲು ಅರ್ಥಪೂರ್ಣವಾಗಿವೆ ಅಕ್ಕಾ.

  10. ಪ್ರವೀಣ್ ಜಂಬಲಗಿ
    Jun 15, 2021 Reply

    ಮನದ ಕೊನೆಯ ಮೊನೆಯ ಮೇಲೆ… ವಚನಕ್ಕೂ ಅರ್ಥವ್ಯಾಖ್ಯಾನ ಬೇಕಾಗಿತ್ತು. ಮನದ ಕೊನೆ ಎಂದರೇನು? ಅದರ ಮೊನೆಯ ಅಂದರೆ ತುದಿಯ ಮೇಲಿರುವುದು ಏನು? ಈ ವಚನದ ಸಾಲು ನನ್ನನ್ನು ಬಹಳ ದಿನಗಳಿಂದ ಕಾಡುತ್ತಿದೆ… ಸಾಧ್ಯವಾದರೆ ತಿಳಿಸುವಿರಾ?

  11. Gurunath Kusthi
    Jun 15, 2021 Reply

    ಲಿಂಗಾಂಗ ಸಾಮರಸ್ಯಕ್ಕೆ ನೀಡಿದ ಉತ್ತರ ಪ್ರಕೃತಿಯ ಕ್ರಿಯೆಯ ಮೂಲಕ ದೊಡ್ಡ ಸತ್ಯವೊಂದನ್ನು ಹೇಳುತ್ತಿರುವ ಹಾಗೆ ಕಾಣಿಸಿತು. ಎಷ್ಟೇ ತಿಣುಕಾಡಿದರೂ ನನಗೆ ಸ್ಪಷ್ಟತೆ ಸಿಗಲಿಲ್ಲ. ನಿಸರ್ಗ ಸಹಜ ಕ್ರಿಯೆಯೇ ಲಿಂಗಾಂಗ ಸಾಮರಸ್ಯ ಎಂದು ತಿಳಿಯುವುದೇ?

  12. Raveesh JK
    Jun 17, 2021 Reply

    ಬಯಸದೇ ಬಂದ ಲಿಂಗಪ್ರಸಾದವೆಂದರೆ ಈ ಭೂಮಿಯ ಮೇಲಿನ ನಮ್ಮ ಅಸ್ತಿತ್ವವೇ ಎನ್ನುವ ಮಾತು ಬಹಳ ಸೂಕ್ತವೆನಿಸಿತು. ಶರಣರು ಅಪರೂಪದಲ್ಲಿ ಅಪರೂಪ ವಿಚಾರವಾದಿಗಳು. ಸ್ಮಶಾನವಾಸಿಗಳ ವಚನ ನಿರೂಪಣೆ excellent!!

  13. ಉದಯಕುಮಾರ್ ಜಾವಗಲ್
    Jun 21, 2021 Reply

    ಕಾಯಕವೇ ಶರಣರ ಆಧ್ಯಾತ್ಮ!! ದುಡಿದು ಗಳಿಸಬೇಕು, ಹಂಚಿ ತಿನ್ನಬೇಕು… ಇದು ಕೇವಲ ನಮ್ಮ ಮಾತುಗಳಲ್ಲಿ ಇರುವುದರಿಂದ ಬಹುಶಃ ಇದು ಆಧ್ಯಾತ್ಮ ಎಂಬುದು ನಮ್ಮ ಅನುಭವಕ್ಕೆ ಸಿಕ್ಕಿರಲಿಕ್ಕಿಲ್ಲ. ಹಾಗಾದರೆ ಕಾಯಕಕ್ಕೂ, ಇಷ್ಟಲಿಂಗಕ್ಕೂ ಇರುವ ಸಂಬಂಧವೇನು? ಆಧ್ಯಾತ್ಮಕ್ಕಾಗಿ ಇಷ್ಟಲಿಂಗ, ಬದುಕಲಿಕ್ಕಾಗಿ ಕಾಯಕ ಎಂದು ನನ್ನ ನಂಬಿಕೆಯಾಗಿತ್ತು. ತಲಪರಿಗೆ ಎಂದರೇನು? ಮೊದಲ ಸಲ ಈ ಶಬ್ದ ನಾನು ಕೇಳಿದ್ದು… ಸಂಭಾಷಣೆ ಬಹಳ ಗಹನವಾಗಿದೆ. ಮುಂದುವರಿಸಿ ಅಕ್ಕಾ.

  14. Sharada A.M
    Jun 21, 2021 Reply

    ನಮ್ಮ ಇಷ್ಟಾನಿಷ್ಟಗಳಲ್ಲೇ ಭವದ ಚಕ್ರ ಸುತ್ತಿಕೊಳ್ಳುತ್ತಿರುತ್ತದೆ ಎಂಬುದು ನಿಜವಾದರೂ ಇಷ್ಟಗಳನ್ನು ಬಿಡುವುದು ಕಷ್ಟದ ಕೆಲಸ. ಶರಣರು ಅಂಗಭೋಗ ಅನರ್ಪಿತ ಎಂದಿದ್ದಾರಲ್ಲಾ… ತಲೆಕೆಡಿಸಿಕೊಳ್ಳಬೇಕಾದ ವಿಷಯ!!!

  15. ಪ್ರಸಾದ್ ಕೋಟಿ
    Jun 21, 2021 Reply

    ಹೀಗೆ ವಚನಗಳನ್ನು ಎಳೆಎಳೆಯಾಗಿ ನೋಡಿದರೆ ಬಸವಣ್ಣನವರು ನಮಗೆ ಏನನ್ನು ಹೇಳಿ ಹೋಗಿದ್ದಾರೆ ಎನ್ನುವುದು ಸ್ಪಷ್ಟವಾದೀತು. ಅಂಗಭೋಗ, ಲಿಂಗಭೋಗದ ವಿವರಣೆ ಓದಿ ಮನಸ್ಸಿಗೆ ಆನಂದವಾಯಿತು. ನಿಜ ಶರಣರೊಂದಿಗೆ ಮಾತನಾಡಿದ ವಿಶಿಷ್ಟ ಅನುಭವ ನೀಡಿತು.

  16. BASAVARAJ. S.
    Jun 21, 2021 Reply

    ಬಯಲಲ್ಲಿ ಬಯಲಾಗಿ, ಶೂನ್ಯದಲ್ಲಿ ಶೂನ್ಯವಾಗಿ ಸಕಲಜೀವರಾಶಿಗಳಿಗೆ ಲೇಸನ್ನು ಬಯಸುತ್ತಾ ಬದುಕುವ ಕಲೆಯೆ, ಬಸವಾದಿಶರಣರ ಆಧ್ಯಾತ್ಮಿಕತೆ.
    ಲೇಖನ ವಿಭಿನ್ನವಾಗಿ ಶುದ್ಧ ನೈಜತೆಯಿಂದ ಮೂಡಿಬಂದಿದೆ. ಇಂತಹ ಅನೇಕ ಲೇಖನಗಳು ಮೂಡಿಬರಲಿ. ಶರಣು ವಂದನೆಗಳು.

  17. ಸದಾಶಿವಯ್ಯ ಹಿರೇಮಠ
    Jun 26, 2021 Reply

    ಅಂಗಭೋಗ ಮತ್ತು ಲಿಂಗಭೋಗಗಳನ್ನು ಬಹಳ ಮಾರ್ಮಿಕವಾಗಿ ವಿವರಿಸಿದ್ದೀರಿ. ನಿಮ್ಮ ಮಾತು ಅಕ್ಷರಶಃ ಸತ್ಯ- ಶರಣರದು ಸಾಧನಾ ಪ್ರಪಂಚ. ಇಂಥ ಬರಹಗಳು ಕಣ್ಣುತೆರೆಸುವಂತಿರುತ್ತವೆ. ಅಪರೂಪದ ವ್ಯಕ್ತಿಯೊಂದಿಗೆ ನಡೆಸಿದ ಸಂವಾದವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಅಕ್ಕಾ ಧನ್ಯವಾದಗಳು.

  18. ಜೀವನ್ ಕುಮಾರ್ ಯಲಹಂಕಾ
    Jun 26, 2021 Reply

    ಭಾರತೀಯ ಮನಸ್ಸು ಗುಲಾಮಿ ಮನಸ್ಸು ಅಂತ ನಾನೊಂದು ಕಡೆ ಓದಿದ್ದೆ. ಈ ಗುಲಾಮಿತನ ಹೇಗೆ ಬಂತು, ಎಲ್ಲಿಂದ ಬಂತು, ಅದರ ಹಿನ್ನೆಲೆ ಏನು ಎಂಬುದು ನಮ್ಮ ಇತಿಹಾಸದಲ್ಲಿ ಅಡಗಿದೆ. ಅದರ ವಿವರಣೆ ನೀಡಿದ್ದರೆ ಹೊಸ ತಲೆಮಾರಿನ ನಮಗೆ ಸ್ಪಷ್ಟ ಚಿತ್ರಣ ಸಿಗುತ್ತಿತ್ತು.

  19. Gurusiddappa Hospet
    Jun 29, 2021 Reply

    ಮನಸ್ಸು ಬಯಸಿ ಪಡೆಯುವುದೆಲ್ಲಾ ಅಂಗಭೋಗ! ಶರಣರು ಇದಕ್ಕೆ ಬ್ರೇಕ್ ಹಾಕಬೇಕು ಎನ್ನುತ್ತಾರೆ. ಬಯಸಿ, ಬೆನ್ನುಹತ್ತಿ ಪಡೆಯುವ ಆಸೆಗಳು ಶರಣರಲ್ಲಿ ವ್ಯರ್ಜ್ಯ ಎನ್ನುವ ಸರಳ ಸತ್ಯವನ್ನು ಹೇಳಿದ ವಚನವಿದು. ಥ್ಯಾಂಕ್ಸ್ ಅಕ್ಕಾ. ಪುಟ್ಟ ಲೇಖನದಲ್ಲಿ ಅಡಗಿದ ರಸಗವಳ!!

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶರಣರು ಕಂಡ ಸಹಜಧರ್ಮ
ಶರಣರು ಕಂಡ ಸಹಜಧರ್ಮ
April 29, 2018
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
December 6, 2020
ಮಿಂಚೊಂದು ಬಂತು ಹೀಗೆ…
ಮಿಂಚೊಂದು ಬಂತು ಹೀಗೆ…
August 6, 2022
ಮನಸ್ಸು
ಮನಸ್ಸು
September 7, 2020
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
February 7, 2021
ಹಾಯ್ಕುಗಳು
ಹಾಯ್ಕುಗಳು
November 10, 2022
ನಾನು… ನನ್ನದು
ನಾನು… ನನ್ನದು
July 4, 2021
ಅಗ್ನಿಯ ಸುಡುವಲ್ಲಿ…
ಅಗ್ನಿಯ ಸುಡುವಲ್ಲಿ…
April 29, 2018
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
April 29, 2018
ದಂಪತಿಗಳಲ್ಲಿ ಅನುಭಾವ ಚಿಂತನ
ದಂಪತಿಗಳಲ್ಲಿ ಅನುಭಾವ ಚಿಂತನ
March 12, 2022
Copyright © 2023 Bayalu