Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹಿರಿಯರ ಹಾದಿ…
Share:
Articles July 4, 2022 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಹಿರಿಯರ ಹಾದಿ…

ಮಾತನ್ನು ಯೋಗ ಎನ್ನುವರು. ಅದು ಪ್ರವಚನ ಯೋಗ. ಕೇಳುಗರು ಸಹ ಮನಸ್ಸಿಟ್ಟು ಕೇಳಬೇಕು. ಅದು ಶ್ರವಣ ಯೋಗ. ಅದನ್ನು ಪ್ರಸಾದವಾಣಿ ಎನ್ನುವರು. ಮಠ ಸಾತ್ವಿಕತೆಯ, ಧರ್ಮದ, ಸುಜ್ಞಾನದ ಕೇಂದ್ರ. ಮಠ ಮಠ ಎಂದರೆ ಅದರ ಕತೆ ಮುಗಿದಂತೆ. ನೀನು ಹೋದರೆ ಅಲ್ಲೇನೂ ಇಲ್ಲ; ಅದು ಮಠ ಮಠ ಎಂದರೆ ಅಲ್ಲಿ ಏನೂ ಇಲ್ಲ ಎಂದೇ ಅರ್ಥ. ಮಠ ಮಠ ಬಿಸಿಲು ಎಂದರೆ ಅಲ್ಲಿ ತಂಪಾದ ವಾತಾವರಣವೇ ಇಲ್ಲ ಎಂದು ತಿಳಿಯಬೇಕು. ಮಠ ಹೀಗೇ ಇರಬೇಕು ಎನ್ನುವ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ನೆಲೆಗಟ್ಟನ್ನು ಹಾಕಿಕೊಟ್ಟವರು ನಮ್ಮ ಹಿರಿಯ ಗುರುಗಳು. ಸುಮಾರು 40 ವರ್ಷಗಳ ಕಾಲ ಹಗಲಿರುಳೆನ್ನದೆ ನಮ್ಮ ಗುರುಗಳು ಹಳ್ಳಿ, ಪಟ್ಟಣಗಳೆನ್ನದೆ ಮನೆ ಮನೆಗೆ ದಯಮಾಡಿಸಿ ಜನರ ಮನಸ್ಸಿಗೆ ಶರಣರ ವಿಚಾರಗಳ ಪರಿಚಯ ಮಾಡಿಕೊಟ್ಟರು. ಸಾಹಿತ್ಯಕ, ಸಾಂಸ್ಕೃತಿಕ, ಧಾರ್ಮಿಕ ನೆಲೆಗಟ್ಟನ್ನು ಒದಗಿಸಿದರು. ಅದರಿಂದ ವ್ಯಷ್ಟಿ ಮತ್ತು ಸಮಷ್ಟಿಯಲ್ಲಿ ಪರಿವರ್ತನೆ ತಂದವರು. ಸಾವು ಯಾರಿಗೂ ಬಿಟ್ಟಿದ್ದಲ್ಲ. ಚಿಕ್ಕವರು, ದೊಡ್ಡವರು, ಭಿಕ್ಷುಕ, ಅಧಿಕಾರಿ, ಗುರು, ಜಗದ್ಗುರು, ಮುಖ್ಯಮಂತ್ರಿ, ಪ್ರಧಾನಿ ಹೀಗೆ ಪ್ರತಿಯೊಬ್ಬರಿಗೂ ಸಾವು ಕಟ್ಟಿಟ್ಟ ಬುತ್ತಿ. ಮನುಷ್ಯ ಎಷ್ಟು ವರ್ಷ ಬದುಕಿದ ಎನ್ನುವುದಕ್ಕಿಂತ ಹೇಗೆ ಬದುಕಿದ ಎನ್ನುವುದು ಮುಖ್ಯ. ಇತ್ತೀಚಿನ ದಿನಗಳಲ್ಲಿ ಅಲ್ಪಾಯುಷಿಯಾದರೆ ಪುನಿತ್ ರಾಜಕುಮಾರನ, ದೀರ್ಘಾಯುಷಿಯಾದರೆ ಸಿದ್ಧಗಂಗಾ ಶ್ರೀಗಳಂತೆ ಬದುಕಬೇಕು ಎಂದು ಸಾಮಾನ್ಯ ಜನರೂ ಮಾತನಾಡುವಂತಾಗಿದೆ.
ನಮ್ಮ ಹಿರಿಯರು ಬಿಟ್ಟುಹೋದ ಮಾರ್ಗವನ್ನು ಕಿರಿಯರು ಮುಂದುವರಿಸಬೇಕು. ಶರಣರ ವಾರಸುದಾರರು ನಾವೆಂದುಕೊಂಡರೆ ಸಾಲದು. ಆ ಶರಣರ ಬದುಕಿನ ವಿಧಾನ ನಮ್ಮ ಬದುಕಿನಲ್ಲಿ ಅಳವಡಬೇಕು. ಹಾಗೆ ಬಾಳುವುದೇ ಪರಂಪರೆಯ ಸಂರಕ್ಷಣೆ. ಅದಕ್ಕಾಗಿ ಬಸವಣ್ಣನವರು ಲೇಸೆನಿಸಿಕೊಂಡು ಒಂದು ದಿನ ಬದುಕಿದರೆ ಸಾಲದೆ ಎಂದು ಕೇಳಿದ್ದಾರೆ. ಶರಣರಂತೆ ಬಾಳುವುದು ಎಂದರೆ ಅವರ ಬದುಕು ಹೀಗಿರಬಹುದು ಎಂದು ಜನರು ಭಾವಿಸುವ ಹಾಗೆ ಬದುಕಿರಬೇಕು. ಬಸವಣ್ಣನವರ ಹಾಗೆ ಆ ಮಗು ಇದೆ ಎಂದರೆ ಅದು ಬಾಹ್ಯ ರೂಪದಲ್ಲಿ ಮಾತ್ರ ಅಲ್ಲ; ಅವನ ಬದುಕಿನ ಪ್ರತಿ ಹಂತದಲ್ಲೂ ಬಸವಣ್ಣನವರ ತತ್ವಸಿದ್ಧಾಂತಗಳನ್ನು ಅಳವಡಿಸಿಕೊಂಡಿದೆ ಎಂದಾಗಬೇಕು. ಅಂದರೆ ಅವನಲ್ಲಿ ಮೇಲೆಂಬ ಭಾವನೆ ಇರಬಾರದು. ಎನಗಿಂತ ಕಿರಿಯರಿಲ್ಲ ಎನ್ನುವ ಭೃತ್ಯಾಚಾರ ಅಳವಡಬೇಕು. ಕಾಯಕದಲ್ಲಿ ನಿರತನಾದರೆ ಆತ ತಂದೆ, ತಾಯಿ, ಗೆಳೆಯ ಯಾರನ್ನೂ ಗಮನಿಸುವುದಿಲ್ಲ ಎಂದು ಜನರು ಭಾವಿಸಬೇಕು. ಅವನು ಯಾರನ್ನೂ ಜಾತಿಯ ದೃಷ್ಟಿಯಿಂದ ನೋಡುವುದಿಲ್ಲ. ಇವನಾರು ಎನ್ನದೆ ಎಲ್ಲರೂ ನಮ್ಮವರೇ ಎನ್ನುವ ವಿಶಾಲ ಹೃದಯಿಯಾಗಿ ತನ್ನ ರಕ್ತಸಂಬಂಧಿಗಳ ಹಾಗೆ ಕಾಣುತ್ತಾನೆ. ದಯವಿಲ್ಲದ ಧರ್ಮ ಯಾವುದು ಎನ್ನುವಂತೆ ಯಾವಾಗಲೂ ತನ್ನ ಬದುಕಿನಲ್ಲಿ ದಯೆ, ಕರುಣೆ, ಪ್ರೀತಿ ಇಂಥ ತತ್ವಗಳನ್ನು ಅಳವಡಿಸಿಕೊಂಡಿದ್ದಾನೆ. ಮತ್ತೊಬ್ಬರ ನೋವಿಗಾಗಿ ಸ್ಪಂದಿಸುತ್ತಾನೆ. ಅಹಂಕಾರ ಕಿಂಚಿತ್ತೂ ಇಲ್ಲ. ನಾನು ಮಾಡಿದೆ, ನೀಡಿದೆ ಎಂದು ಹೇಳದೆ ನಾವು ಎನ್ನುವ ಬಹುವಚನದ ಮೂಲಕ ಎಲ್ಲರನ್ನೂ ಸಮಾನವಾಗಿ ನೋಡುವನು. ಸಕಲ ಜೀವಾತ್ಮರ ಒಳಿತಿನಲ್ಲೇ ನನ್ನ ಒಳಿತೂ ಇದೆ ಎಂದು ಭಾವಿಸುವನು. ಮತ್ಸರ ಮನೋಭಾವ ಕಿಂಚಿತ್ತೂ ಇಲ್ಲ. ಯಾರೇ ಒಳ್ಳೆಯ ಕೆಲಸ ಮಾಡಿದರೂ ಮೆಚ್ಚುವ ಗುಣವಿದೆ. ತಾನು ಅನೇಕರಿಗೆ ಸಹಾಯ ಮಾಡಿದರೂ ಮಾಡಿದೆನೆಂಬ ಭಾವ ಹೆಡೆಯಾಡುವುದಿಲ್ಲ. ಅವನ ಅಂತರಂಗ, ಬಹಿರಂಗ ಬೇರೆ ಬೇರೆ ಆಗಿಲ್ಲ. ನಡೆ ಶುದ್ಧ, ನುಡಿ ಶುದ್ಧ, ಭಾವ ಶುದ್ಧ ಎಂದು ಜನರು ಮಾತನಾಡುವಂತಾಗಬೇಕು. ಶರಣ ಸಂಸ್ಕೃತಿಯ ಪುನರುತ್ಥಾನ ಅವನ ಬದುಕಿನಲ್ಲಿ ಸಾಕಾರಗೊಂಡಿದೆ.

ಏನಿ ಬಂದಿರಿ, ಹದುಳವಿದ್ದಿರೆ ಎಂದಡೆ ನಿ[ಮ್ಮೈ]ಸಿರಿ ಹಾರಿ ಹೋಹುದೆ
ಕುಳ್ಳಿರೆಂದಡೆ ನೆಲ ಕುಳಿಹೋಹುದೆ ಒಡನೆ ನುಡಿದಡೆ ಸಿರ,
ಹೊಟ್ಟೆಯೊಡೆವುದೆ ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ ಮೂಗ
ಕೊಯ್ವುದ ಮಾಬನೆ ಕೂಡಲಸಂಗಮದೇವಯ್ಯಾ.

ಎನ್ನುವ ಬಸವಣ್ಣನವರ ವಚನಕ್ಕೆ ಸಾಕ್ಷಿ ಕೊಡಬೇಕೆಂದರೆ ಅವನೇ ಸಾಕು. ಸರಳವಾದ ಸೂತ್ರ ಇಲ್ಲಿದೆ. ನಮ್ಮೊಳಗಿನ ಒಳ್ಳೆಯತನ ಪ್ರಕಟವಾಗಲು ಪ್ರದರ್ಶನ ಮಾಡಬೇಕಾಗಿಲ್ಲ. ಬದಲಾಗಿ ಮನೆಗೆ ಬಂದವರು ಎಂಥ ದೊಡ್ಡಮನುಷ್ಯ! ಸ್ವಲ್ಪವೂ ಬಿಗುಮಾನವಿಲ್ಲದೆ ಎಷ್ಟು ಚನ್ನಾಗಿ ಮಾತನಾಡಿಸಿದರಲ್ಲ! ಅಲ್ಲಿ ನೀಡಿದ ಆದರಾತಿಥ್ಯ ಬಸವಣ್ಣನವರ ಮತ್ತು ಮಹಾಮನೆಯ ನೆನಪು ತಂತು ಎಂದರೆ ಸಾಕು. ಅವರ ಮನೆಗೆ ಯಾಕಾದರೂ ಹೋಗಿದ್ದೆನೋ ಅನಿಸಿತು. ಹತ್ತು ನಿಮಿಷ ಕೂತರೂ ತಿರುಗಿ ನೋಡಲಿಲ್ಲ. ಒಳಗೆ ಕಾಫಿ ವಾಸನೆ ಬರುತ್ತಿದ್ದರೂ ಕಾಫಿ ಕಪ್ ಹೊರಗೆ ಬರಲೇ ಇಲ್ಲ. ಇನ್ನು ಅಲ್ಲಿ ಕೂರುವುದು ಅವಮಾನ ಅನುಭವಿಸಿದಂತೆ ಎಂದು ಎದ್ದು ಬಂದೆ ಎಂದೇನಾದರೂ ಭಾವನೆ ಮೂಡಿದರೆ ಆ ವ್ಯಕ್ತಿಯ ನಿಜಸ್ವರೂಪ ಎಂತಹುದು ಎಂದು ವಿವರಿಸಲೇಬೇಕಾಗಿಲ್ಲ. ಮನೆಯನ್ನು ಅದರ ಸೌಂದರ್ಯ, ಮಾಡಿರುವ ಕೋಟಿ ಕೋಟಿ ಹಣ, ಒಳಗಿರುವ ಬೆಲೆಬಾಳುವ ಪರಿಕರಗಳಿಂದ ನೋಡಲಾಗುವುದಿಲ್ಲ. ಅಲ್ಲಿ ಸಂಸ್ಕೃತಿ ಜೀವಂತ ಇದೆಯೇ ಇಲ್ಲವೋ ಎನ್ನುವ ಆಧಾರದ ಮೇಲೆ ಮನೆಗೆ ಬೆಲೆ ಬರುತ್ತದೆ. ಮನೆ ಮತ್ತು ಮನಸ್ಸನ್ನು ಶುದ್ಧೀಕರಿಸುವ ನಿಟ್ಟಿನಲ್ಲಿ ವಚನಕಾರರು ಬೇಕಾದಷ್ಟು ಸೂತ್ರಪ್ರಾಯವಾದ ವಿಚಾರಗಳನ್ನು ಕೊಟ್ಟು ಹೋಗಿದ್ದಾರೆ. ಮನೆಗಿಂತ ಮನಸ್ಸು ದೊಡ್ಡದಾಗಿರಬೇಕು ಎನ್ನುವುದು ಎಲ್ಲ ಶರಣರ ಅಭಿಪ್ರಾಯ. `ಮನೆ ನೋಡಾ ಬಡವರು, ಮನನೋಡಾ ಘನ’ ಎನ್ನುವ ಬಸವಣ್ಣನವರ ವಚನ ಏನು ಹೇಳುತ್ತದೆ ಎಂದು ವಿವರಿಸಬೇಕಾಗಿಲ್ಲ. ಮನುಷ್ಯ ಮನೆಯಿಂದ ಬಡವಾಗಿದ್ದರೂ ಮನಸ್ಸಿನಿಂದ ಎಂದಿಗೂ ಬಡವನಾಗಿರದೆ ಘನಮನದವರಾಗಿರಬೇಕಾಗುತ್ತದೆ. ಭೌತಿಕವಾಗಿ ಮನೆ ಎಷ್ಟು ದೊಡ್ಡದು ಎನ್ನುವುದಕ್ಕಿಂತ ಆ ಮನೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಶ್ರೀಮಂತಿಕೆ ಇದೆಯೇ ಎನ್ನುವುದು ಮುಖ್ಯ. ಇದ್ದಲ್ಲಿ ಅದು ಮಹಾಮನೆಯಾಗುವುದು. ಈ ಪ್ರಜ್ಞೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲೇ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಸರ್ವಶರಣ ಸಮ್ಮೇಳನ ಪ್ರಾರಂಭಿಸಿದ್ದು.
ನಮ್ಮ ಹಿರಿಯರಿಗೆ ಪರಿಸರಪ್ರಜ್ಞೆ ಇಂದಿನಂತೆ ಇಲ್ಲದಿರಬಹುದು. ಆದರೆ ಅವರು ಪರಿಸರ ಮಾಲಿನ್ಯ ಆಗದಂತೆ ನೋಡಿಕೊಳ್ಳುವ ವಿಧಾನವನ್ನು ತಮ್ಮ ಬದುಕಿನಲ್ಲೇ ಜಾರಿಗೆ ತಂದಿದ್ದು ತಿಳಿದುಬರುತ್ತದೆ. ಅವರು ಮನೆಯ ಹಿಂದೆ ಮುಂದೆ, ಕಣದಲ್ಲಿ, ಹೊಲದ ಬದುವಿನಲ್ಲಿ ಸಾಕಷ್ಟು ಗಿಡಮರಗಳನ್ನು ಬೆಳೆಯುತ್ತಿದ್ದರು. ಅವರಿಗೆ ಸಹಜವಾಗಿಯೇ ನಿಸರ್ಗಪ್ರೇಮವಿತ್ತು. ಯಾವ ಯಾವ ಕಾಲದಲ್ಲಿ ಎಂಥ ಮರದಡಿಗೆ ಕೂರಬೇಕು ಎನ್ನುವ ಅರಿವು ಅವರಿಗಿತ್ತು. ನಮ್ಮ ಜನಪದ ಕವಿಯೊಬ್ಬ ‘ಬ್ಯಾಸಗಿ ದಿವಸಕ್ಕ ಬೇವಿನ ಮರ ತಂಪು’ ಎನ್ನುವ ಮೂಲಕ ಬೇವಿನ ಮರ ಬೆಳೆಸುವ ಗುಣ ಅವರಲ್ಲಿತ್ತು. ಬಸವಣ್ಣನವರಿಗೂ ಮರದ ಬಗ್ಗೆ ಎಷ್ಟೊಂದು ಪ್ರೇಮ ಇತ್ತೆಂಬುದು ಅವರ ವಚನಗಳಿಂದ ತಿಳಿದು ಬರುತ್ತದೆ.

ಅಕಟಕಟಾ, ಶಿವ ನಿನಗಿನಿತು ಕರುಣವಿಲ್ಲ,
ಅಕಟಕಟಾ ಶಿವ ನಿನಗಿನಿತು ಕೃಪೆಯಿಲ್ಲ,
ಏಕೆ ಹುಟ್ಟಿಸಿದೆ, ಇಹಲೋಕ ದುಃಖಿಯ
ಪರಲೋಕದೂರನ ಏಕೆ ಹುಟ್ಟಿಸಿದೆ
ಕೂಡಲಸಂಗಮದೇವಾ ಕೇಳಯ್ಯಾ,
ಎನಗಾಗಿ ಮತ್ತೊಂದು ತರುಮರನಿಲ್ಲವೆ?

ಮನುಷ್ಯನನ್ನಾಗಿ ಹುಟ್ಟಿಸುವ ಬದಲು ಒಂದು ಮರವನ್ನಾಗಿ ಹುಟ್ಟಿಸಬೇಕಿತ್ತು ಎಂದು ದೇವರಲ್ಲಿ ಬೇಡಿಕೊಳ್ಳುವರು. ಹೆಣ್ಣಾಗಿ ಹುಟ್ಟುವುದಕ್ಕಿಂತ ಮಣ್ಣಾಗಿದ್ದರೆ ಆ ಮಣ್ಣಿನಲ್ಲಿ ಮರವಾಗಿ ಹುಟ್ಟಿ ಪುಣ್ಯವಂತರಿಗೆ ನೆರಳಾಗುತ್ತಿದ್ದೆ ಎನ್ನುವಳು. ಇದು ಅಜ್ಜಿಯ ಆಸೆ. ಆದರೆ ನಾಗರಿಕ ಲೋಕ ಇದ್ದಬದ್ದ ಮರಗಳನ್ನು ಕಡಿಯುವಲ್ಲಿ, ಅವುಗಳನ್ನು ತಮಗೆ ಬೇಕಾದಂತೆ ಬಳಕೆ ಮಾಡಿಕೊಳ್ಳುವಲ್ಲಿ ಖುಷಿಪಡುವುದು. ಪರಿಸರದ ಮೇಲಿನ ದಾಳಿಯ ಬಗ್ಗೆ ಅವರಿಗೆ ಅರಿವಿಲ್ಲ. ಹಿರಿಯರು ‘ವೃಕ್ಷ ಕಡಿದು ಭಿಕ್ಷೆ ಬೇಡುವಂತಾಗಬೇಡ’ ಎನ್ನುತ್ತಿದ್ದರು. ಮರ ಇದ್ದರೆ ವರ. ಕಡಿದರೆ ಬರ. ಈ ದಿಸೆಯಲ್ಲಿ ಪರಿಸರ ಪ್ರೀತಿ ಬೆಳೆಸುವಲ್ಲಿ ಸಹ ನಮ್ಮ ಗುರುಗಳು ಅಪಾರ ಪರಿಶ್ರಮ ಹೊಂದಿದ್ದರು. ನಮ್ಮ ಗುರುಗಳು ಬೇರೆಯವರನ್ನು ನೋಡಿ ಬದುಕುತ್ತಿರಲಿಲ್ಲ. ಏನು ಮಾಡುವುದರಿಂದ ಜನರಿಗೆ ಒಳ್ಳೆಯದಾಗುತ್ತದೆ ಎಂದು ಮಾತ್ರ ಯೋಚಿಸುತ್ತಿದ್ದರು. ಕಾಯಕದಲ್ಲಿ ತಲ್ಲೀನರಾಗುವ ಪರಿಯನ್ನು ಅವರು ಭಕ್ತರಿಗೆ ಕಲಿಸಿದವರು.

ಗಿಳಿಯೋದಿ ಫಲವೇನು
ಬೆಕ್ಕು ಬಹುದ ಹೇಳಲರಿಯದು.
ಜಗವೆಲ್ಲವ ಕಾಬ ಕಣ್ಣು,
ತನ್ನ ಕೊಂಬ ಕೊಲ್ಲೆಯ ಕಾಣಲರಿಯದು.
ಇದಿರ ಗುಣವ ಬಲ್ಲೆವೆಂಬರು, ತಮ್ಮ ಗುಣವನರಿಯರು,
ಕೂಡಲಸಂಗಮದೇವಾ.

ಗಿಳಿ ಬೇರೆಯವರಿಗೆ ಭವಿಷ್ಯ ಹೇಳುತ್ತದೆ. ಆದರೆ ಬೆಕ್ಕು ಬಂದು ಯಾವಾಗ ತನ್ನನ್ನು ಹಿಡಿದು ಕೊಲ್ಲುತ್ತದೆ ಎನ್ನುವ ಭವಿಷ್ಯ ಅದಕ್ಕೆ ತಿಳಿದಿಲ್ಲ. ಹಾಗಾಗಿ ಗಿಳಿ ಓದಿದರೆ ಫಲವೇನು? ತನಗೆ ಯಾವಾಗ ವಿಪತ್ತು ಬರುತ್ತದೆ ಎನ್ನುವ ಅರಿವೇ ಅದಕ್ಕಿಲ್ಲ ಎನ್ನುವರು. ಜಗತ್ತನ್ನು ಕಾಣುವ ಕಣ್ಣಿಗೆ ತನಗೆ ಯಾವಾಗ ಸಾವು ಬರುತ್ತದೆ ಎನ್ನುವುದನ್ನು ನೋಡಲು ಸಾಧ್ಯವೇ. ಇಂಥ ಉದಾಹರಣೆಗಳ ಮೂಲಕ ಇದಿರ ಗುಣವನರಿವರು, ತಮ್ಮ ಗುಣವನರಿಯರು ಎನ್ನುವರು. ಇದೇ ಇಂದಿನ ದೊಡ್ಡ ದೋಷ. ಬೇರೆಯವರು ಏನೇನು ತಪ್ಪು ಮಾಡುವರು ಅಥವಾ ಅವರ ತಪ್ಪನ್ನು ಹೇಗೆ ಕಂಡುಹಿಡಿಯಬೇಕು ಎನ್ನುವ ಕುಶಲತೆ ಅವರಿಗೆ ಇದೆ. ಆದರೆ ತಮ್ಮ ಸ್ವಭಾವವನ್ನೇ ಅರಿಯುವ ಗೊಡವೆಗೇ ಹೋಗುವುದಿಲ್ಲ. ವಚನಸಾಹಿತ್ಯದ ಅಧಿಪತಿಗಳು, ಆ ಕ್ಷೇತ್ರದಲ್ಲಿ ಬಹುದೊಡ್ಡ ಸೇವೆ ಮಾಡುವ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಸನ್ಯಾಸಿಗಳು ಹೇಗಿರಬೇಕೆಂದು ಹೇಳುವರು. ಯೋಗಿಗೆ ಕೋಪ, ರೋಗಿಗೆ ಅಪಥ್ಯ ಮಾಯೆ ಎನ್ನುವರು. ಸಿದ್ಧರಾಮೇಶ್ವರರು ಯಾಕೆ ಯೋಗಿಗೆ ಕೋಪ ಇರಬೇಕು ಎಂದು ಪ್ರಶ್ನಿಸುವರು. ಇಂಥ ವಚನಗಳು ನಮಗೇ ಕ್ಷಣಕಾಲ ಪ್ರಶ್ನೆ ಮಾಡಿಕೊಳ್ಳುವಂತೆ ಪ್ರೇರಣೆ ನೀಡುತ್ತವೆ. ಬೇರೆಯವರ ಗುಣ ಗೊತ್ತಿದೆ, ನಮ್ಮ ಗುಣ ಗೊತ್ತಿಲ್ಲ ಎನ್ನುವ ಚಿಂತೆ ವ್ಯಕ್ತಿಗೆ ಕಾಡಬೇಕು. ವಿ ಆರ್ ದಿ ಬೆಸ್ಟ್ ಲಾಯರ್ಸ್ ಫಾರ್ ಅವರ್ ಓನ್ ಮಿಸ್ಟೇಕ್ಸ್ (We are the best lawyers for our own mistakes) ನಾವು ವಾದ ಮಾಡುವುದರಲ್ಲಿ ನಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುವಲ್ಲಿ ನಮಗಿಂತ ದೊಡ್ಡ ವಕೀಲರು ಸಿಗುವುದಿಲ್ಲ. ಅಟ್ ದಿ ಸೇಮ್ ಟೈಮ್ ವಿ ಆರ್ ದಿ ಬೆಸ್ಟ್ ಜಡ್ಜಸ್ ಫಾರ್ ಅದರ್ಸ್ ಮಿಸ್ಟೇಕ್ಸ್ (At the same time we are the best judges for others mistakes) ನಮ್ಮ ಪರವಾಗಿ ವಾದ ಮಾಡುವಾಗ ದೊಡ್ಡ ವಕೀಲರು, ಆದರೆ ಬೇರೆಯವರ ವಿಚಾರ ಬಂದಾಗ ನಾವೇ ನ್ಯಾಯಾಧೀಶರಾಗಿ ತೀರ್ಮಾನ ಕೊಡುತ್ತೇವೆ. ಇದೇ ದೊಡ್ಡ ದುರಂತ. ಜನಪದರಲ್ಲಿ ಒಂದು ಅಪರೂಪದ ಕತೆ ಬರುತ್ತದೆ:
ಅವನೊಬ್ಬ ಬಡವ. ಅವನು ಊರ ಗೌಡನ ಬಳಿ ಒಂದು ದೂರು ತಂದ. ಸ್ವಾಮಿ ನಮ್ಮ ಎತ್ತು ನಿಮ್ಮ ಎತ್ತನ್ನು ಹಾಯ್ದು ಸಾಯಿಸ್ಬಿಡ್ತು ಎಂದ. ಗೌಡ ತಕ್ಷಣ ಒಂದು ತೀರ್ಮಾನ ಕೊಟ್ಟ- ನಿಮ್ಮ ಎತ್ತು ನಮ್ಮ ಎತ್ತನ್ನು ಸಾಹಿಸಿಬಿಡ್ತ! ಇನ್ನೇನ್ ಮಾಡದು? ನಿಮ್ಮ ಎತ್ತನ್ನು ತಂದು ನಮ್ಮ ಕೊಟ್ಟಿಗೆಗೆ ಕಟ್ಟು ಎಂದ. ಸ್ವಾಮಿ ತಪ್ಪಾಗಿ ಹೇಳ್ಬಿಟ್ಟೆ. ನಿಮ್ಮ ಎತ್ತು ನಮ್ಮ ಎತ್ತಿಗೆ ಹಾಯ್ದು ನಮ್ಮ ಎತ್ತನ್ನು ಸಾಯಿಸಿದೆ ಎಂದ. ಹಂಗ! ಸಾಯಂಕಾಲ ಪಂಚಾಯ್ತಿ ಸೇರ್ಸಣಂತೆ ನಡಿ ಎಂದ. ಗೌಡಪ್ಪನದಾದರೆ ತಕ್ಷಣ ತೀರ್ಮಾನ. ಬೇರೆಯವರದಾದರೆ ನೋಡೋಣ, ಮಾಡೋಣ. ಇಂಥ ವಿಚಿತ್ರ ಕಾಲಘಟ್ಟದಲ್ಲಿ ಬದುಕ್ತಾ ಇದ್ದೇವೆ. ನಾವು ನಮ್ಮ ಬದುಕಿನ ಓರೆ ಕೋರೆಗಳನ್ನು ತಿದ್ದಿಕೊಳ್ತಾ ಸಮಸಮಾಜವನ್ನು, ಶಾಂತಿ, ನೆಮ್ಮದಿಯ ಸಮಾಜ ಕಟ್ಟಿಕೊಡುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಾಗಿದೆ. ಮನುಷ್ಯ ಪ್ರಾಣಿಗಳಿಗಿಂತ ಭಿನ್ನ. ಏಕೆಂದರೆ ದೇವರು ನಮಗೆ ವಿವೇಕ ಎನ್ನುವ ವರ ನೀಡಿದ್ದಾನೆ. ಯಾವುದು ಸತ್ಯ, ಯಾವುದು ಸುಳ್ಳು; ಯಾವುದು ಸರಿ, ಯಾವುದು ತಪ್ಪು ಇವುಗಳನ್ನು ನಿರ್ಣಯಿಸುವ ಪ್ರಜ್ಞೆ ಮಾನವನಿಗೆ ಇದೆ. ಅದು ಯಾವತ್ತೂ ಮಲಿನವಾಗಬಾರದು. ಆ ರೀತಿಯಲ್ಲಿ ನಮ್ಮ ನಮ್ಮ ಪ್ರಜ್ಞೆಯನ್ನು ಜಾಗೃತಗೊಳಿಸಿಕೊಳ್ಳೋಣ. ಎಲ್ಲರೂ ನಮ್ಮವರಾಗಬೇಕೆಂದರೆ ಎಲ್ಲರನ್ನೂ ಪರೀಕ್ಷೆ ಮಾಡುವುದಲ್ಲ. ಹಾಗೆ ಪರೀಕ್ಷೆ ಮಾಡ್ತಾ ಹೋದರೆ ಯಾರೂ ನಮ್ಮವರಾಗಿ ಉಳಿಯುವುದಿಲ್ಲ. ಬೇರೆಯವರನ್ನು ಪರೀಕ್ಷೆ ಮಾಡುವುದಲ್ಲ, ನಿರ್ಣಯಿಸುವುದಲ್ಲ; ಎಲ್ಲರನ್ನೂ ಪ್ರೀತಿಯಿಂದ ನೋಡಿಕೊಳ್ಳುತ್ತ ಅರ್ಥಮಾಡಿಕೊಳ್ಳುತ್ತ ಸಾಗಿದರೆ ಖಚಿತವಾಗಿ ಜಗತ್ತೇ ನಮ್ಮದಾಗುವುದು.
ಭಕ್ತಿ ಎನ್ನುವುದು ತುಂಬಾ ಸುಲಭ ಅಲ್ಲ. ಮಠ, ಗುರು ಎನ್ನುವ ಪ್ರಜ್ಞೆಯನ್ನು ಭಕ್ತರು ತಮ್ಮ ಮನದಲ್ಲಿ, ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. ಅಂಥವರ ಸಂಖ್ಯೆ ಸಹಸ್ರ ಸಹಸ್ರ. ಭಕ್ತಿ ಮನಸ್ಸಿಗೆ ಶಾಂತಿ ನೀಡಬೇಕು. ನೋವನ್ನು ಸಾಂತ್ವನಗೊಳಿಸಬೇಕು. ನೆಮ್ಮದಿ ನೀಡಬೇಕು. ಆದರೆ ಭಕ್ತಿ ಹೋಗುತ್ತಲೂ ಕೊಯ್ಯುವುದು, ಬರುತ್ತಲೂ ಕೊಯ್ಯುವುದು ಎನ್ನುವರು ಬಸವಣ್ಣನವರು. ನೊಂದ ಸಂದರ್ಭದಲ್ಲಿ ಬಸವಣ್ಣನವರ ವಚನ ನಮಗೆ ಆತ್ಮಸ್ಥೈರ್ಯ ಕೊಡುವುದು. ಅಕ್ಕಮಹಾದೇವಿಯವರೂ ಈ ನೆಲೆಯಲ್ಲಿ ಹೇಳುವುದನ್ನು ನೋಡಿ:
ಹೆದರದಿರು ಮನವೆ, ಬೆದರದಿರು ತನುವೆ,
ನಿಜವನರಿತು ನಿಶ್ಚಿಂತನಾಗಿರು.

ಫಲವಾದ ಮರನ ಕಲ್ಲಲಿ ಇಡುವುದೊಂದು ಕೋಟಿ,
ಎಲವದಮರನ ಇಡುವರೊಬ್ಬರ ಕಾಣೆ.
ಭಕ್ತಿಯುಳ್ಳವರ ಬೈವರೊಂದುಕೋಟಿ,
ಭಕ್ತಿಯಿಲ್ಲದವರ ಬೈವರೊಬ್ಬರ ಕಾಣೆ.
ನಿಮ್ಮ ಶರಣರ ನುಡಿಯೆ ಎನಗೆ ಗತಿ, ಸೋಪಾನ, ಚೆನ್ನಮಲ್ಲಿಕಾರ್ಜುನಾ.

ಮನುಷ್ಯ ಹೆದರಬೇಕಾಗಿಲ್ಲ, ಬೆದರಬೇಕಾಗಿಲ್ಲ. ನಿಜ ಏನಿದೆ ಎಂದು ಗೊತ್ತಿರುವಾಗ ನಿಶ್ಚಿಂತೆಯಿಂದ ಇರಬೇಕಂತೆ. ಅವರು ಕೊಡುವ ನಿದರ್ಶನ: ಫಲ ಕೊಡುವ ಮರಕ್ಕೆ ಕಲ್ಲಿನಿಂದ ಹೊಡೆಯುವರು ಸಾಕಷ್ಟು ಜನರು. ಫಲಬಿಡದ ಮರಕ್ಕೆ ಯಾರೂ ಹೊಡೆಯುವುದಿಲ್ಲ. ಅದರಂತೆ ಭಕ್ತಿ ಮಾಡುವವರನ್ನು ಬೈಯುವವರು ಒಂದು ಕೋಟಿ. ಭಕ್ತಿಯಿಲ್ಲದವರನ್ನು ಬೈಯುವವರು ಒಬ್ಬರೂ ಇಲ್ಲ ಎನ್ನುವರು. ಬದುಕಿಗೆ ಚೈತನ್ಯ ತುಂಬುವ, ಸಾಂತ್ವನ ಹೇಳುವ, ಆತ್ಮಬಲ ಹೆಚ್ಚಿಸುವ, ಪ್ರತಿಭಟನಾ ಶಕ್ತಿಯನ್ನು ಪ್ರೇರೇಪಿಸುವ ಶಕ್ತಿ ವಚನ ಸಾಹಿತ್ಯಕ್ಕೆ ಇದೆ. ಯಾರೇನೂ ಸಾವಿರಾರು ವರ್ಷ ಬದುಕುವುದಿಲ್ಲ. ನೂರು ವರ್ಷವೇ ಹೆಚ್ಚಾಯ್ತು. ಹಾಗಾಗಿ ಇರುವ ಅಲ್ಪಾವಧಿಯಲ್ಲಿ ಹೇಗೆ ಬದುಕಬೇಕು ಎನ್ನುವ ಚಿಂತನೆ ಮುಖ್ಯವಾಗಬೇಕು. ಇದು ಹೇಳುವುದಲ್ಲಾ, ಬಾಳುವುದು. ಹಾಗಾಗಿ ನಾವೂ ಬದುಕಿ ಇನ್ನೊಬ್ಬರನ್ನೂ ಬದುಕಿಸುವ ವಿಶಾಲ ಮನಸ್ಸು ನಮ್ಮದಾಗಬೇಕು.
ಹಣ್ಣು ಬಿಡುವ, ನೆರಳು ಕೊಡುವ ಮರದಿಂದ ಪ್ರಯೋಜನ ಪಡೆಯುವವರು ಸಾವಿರಾರು ಜನರು. ಅಂಥ ಮರವನ್ನು ಕಡಿದರೆ ಬಾಗಿಲು, ಕಿಡಕಿ, ತೊಲೆ ಆಗುವುದು. ಯಾವುದಾದರೂ ಹಳೆಯ ಮನೆಗೆ ಹೋದರೆ ಇದು ನಮ್ಮಜ್ಜ ಕಟ್ಟಿಸಿದ್ದು ಎಂದು ಅದಕ್ಕೆ ಹಾಕಿರುವ ತೇಗ ಇತ್ಯಾದಿ ಮರದ ಇತಿಹಾಸವನ್ನೇ ಹೇಳುವರು. ಹಲವಾರು ವರುಷ ನೆರಳಾಗಿ ನಿಂತ ಮರ. ಮಹಾರಾಜನ ಹೆಣವೆಂದು ನಾಲ್ಕು ದಿನ ಮನೆಯಲ್ಲಿಟ್ಟುಕೊಳ್ಳುವರೇನು? ರಾಜನಿರಲಿ, ಮಂತ್ರಿಯಿರಲಿ, ಸೇವಕನಿರಲಿ; ಎಲ್ಲರ ಬದುಕಿನ ವಿಧಾನವೂ ಒಂದೇ. ಸಮಾಧಿ ಎಲ್ಲರದೂ ಒಂದೇ. ಏರಿದರೆ ಗದ್ದುಗೆ ಸಿಂಹಾಸನ, ಸ್ವಲ್ಪ ಅವರ ಕುರ್ಚಿ, ಮಂಚ ಎರಡು ಅಡಿ ಹೆಚ್ಚಿರಬಹುದು. ಏನು ಕಟ್ಟಿದರೂ ಇನ್ನೂರು ಅಡಿ ಆಳಕ್ಕಿಲ್ಲ. ಈ ‘ಮೇಲು-ಕೀಳು, ನಾನು-ನನ್ನದು’ ಎನ್ನುವ ಅಹಂಕಾರದ ಹೊಡೆದಾಟ, ಅಧಿಕಾರ ಅಂತಸ್ತಿನ ಹಪಾಹಪಿತನ ದೂರವಾಗಬೇಕಿದೆ. ಮಲಗಿದ್ದರೆ ಸಾವು, ಕುಂತಿದ್ದರೆ ರೋಗ, ನಿಂತಿದ್ದರೆ ಶಿಕ್ಷೆ-ನೋವು. ನಡೆದಾಡುತ್ತಿದ್ದರೆ ಜೀವನ. ನಮ್ಮ ದೈಹಿಕ ಆಲೋಚನೆ ಮರೆತು ಅರ್ಥಪೂರ್ಣ ಜೀವನ ನಡೆಸಬೇಕು.

Previous post ನಿನ್ನೆ-ಇಂದು
ನಿನ್ನೆ-ಇಂದು
Next post ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ

Related Posts

ನಲುಗಿದ ಕಲ್ಯಾಣ – ನೊಂದ ಶರಣರು
Share:
Articles

ನಲುಗಿದ ಕಲ್ಯಾಣ – ನೊಂದ ಶರಣರು

January 10, 2021 ಡಾ. ಪಂಚಾಕ್ಷರಿ ಹಳೇಬೀಡು
ಹನ್ನೆರಡನೇ ಶತಮಾನದಲ್ಲಿ ಜರುಗಿದ ಸಮಾಜೋದ್ಧಾರ್ಮಿಕ ಚಳುವಳಿಯಲ್ಲಿ ಎಲ್ಲಾ ರೀತಿಯ ಕಾಯಕಗಳಲ್ಲಿ ತೊಡಗಿಸಿಕೊಂಡಿದ್ದ ಸಾಮಾನ್ಯ ಜನರು ಅಂದು ಆಳವಾಗಿ ಬೇರೂರಿದ್ದ ದೇವರು –...
ಸಹಜತೆಯೇ ನಿಜನೆಲೆ
Share:
Articles

ಸಹಜತೆಯೇ ನಿಜನೆಲೆ

February 5, 2020 ಡಿ.ಪಿ. ಪ್ರಕಾಶ್
ಮನುಷ್ಯನ ಅ೦ತರ೦ಗವನ್ನು ಆವರಿಸುವ ಪರಿಕಲ್ಪನೆಗಳು ಮತ್ತು ನ೦ಬಿಕೆಗಳು ವ್ಯಕ್ತಿತ್ವದ ಮೇಲಷ್ಟೇ ಅಲ್ಲದೇ ಸಮಾಜದ ಮೇಲೂ ಗಾಢ ಪರಿಣಾಮ ಬೀರುತ್ತವೆ. ಅ೦ತರ೦ಗದ ಸರಕುಗಳು ಸ್ಪಷ್ಟ ಮತ್ತು...

Comments 12

  1. ಗಂಗಾಧರಯ್ಯಾ ಡಾವಣಗೆರೆ
    Jul 5, 2022 Reply

    ಶರಣರೇ ನಮ್ಮ ಹಿರಿಯರು, ಅವರು ಹಾಕಿಕೊಟ್ಟ ದಾರಿಯಲ್ಲಿ ತಮ್ಮಂಥ ಗುರುಗಳು ಸಿಕ್ಕಿರುವುದೇ ನಮ್ಮ ಭಾಗ್ಯ.

  2. ವಿಶ್ವನಾಥ್ ಬಾಳೆಹೊನ್ನೂರು
    Jul 7, 2022 Reply

    ನಿಮ್ಮ ಸರಳ ಮಾತುಗಳು ಜೀವನಕ್ಕೆ ಅಮೃತದಂತಿರುತ್ತವೆ. ಎಲ್ಲ ಸವಾಲುಗಳನ್ನು ಎದುರಿಸಿ ಬರೆಯುತ್ತಿರುವ ಮನದಾಳದ ಈ ಮಾತುಗಳನ್ನು ಖಂಡಿತಕ್ಕೂ ‘ಯೋಗ’ ಎನ್ನಲೇ ಬೇಕು. ನಿಮ್ಮ ದಿಟ್ಟ ನಡೆ, ನುಡಿ ನಮಗೆ ಯಾವತ್ತಿಗೂ ದಾರಿದೀಪ. ನಿಮ್ಮ ಲೇಖನ ಮತ್ತು ಪ್ರವಚನಗಳನ್ನು ನಾವು ಮನೆಮಂದಿ ಪ್ರಸಾದದಂತೆ ಸ್ವೀಕರಿಸುತ್ತೇವೆ. ಶರಣು.

  3. Sharada Shivanna
    Jul 7, 2022 Reply

    ಕಿರಿಯರು ಹಿರಿಯರ ಹಾದಿಯಲ್ಲಿ ಮುಂದುವರಿಯಬೇಕೆನ್ನುವುದು ಒಪ್ಪುವ ಮಾತು, ಆದರೆ ಹಿರಿಯರು ದಾರಿ ತಪ್ಪಿದರೆ ಏನು ಮಾಡುವುದು? ಯಾರು ರಕ್ಷಿಸುವುದು? ಒಲೆ ಹತ್ತಿ ಉರಿದರೆ… ಬಸವಣ್ಣನವರ ವಚನ ನೆನಪಾಗುತ್ತಿದೆ.

  4. H V Jaya
    Jul 9, 2022 Reply

    “ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ದಿಯ ಕಲಿಸಿದರೆ ಆಗಲೀ ಮಹಾ ಪ್ರಸಾದವೆಂಬೆನಯ್ಯ
    ಎನ್ಮುವಂತಹ ಇಂದಿನ ದಿನ ಮಾನದಲ್ಲಿ ಮತ್ತು,
    ” ಹಿಂದಿನ ಕಾಲದಲ್ಲಿ “ಮುಂದೆ ಗುರಿ ಇತ್ತು ,ಹಿಂದೆ ಗುರುವಿದ್ರು ಸಾಗುತ್ತಿತ್ತು ರಣಧೀರರ ದಂಡು”,’ ಆದ್ರೆ ,ಇಂದು, “ಮುಂದೆ ಗುರಿಯೂ ಇಲ್ಲ ಹಿಂದೆ ಗುರುವೂ ಇಲ್ಲ ಸಾಗುತ್ತಿದೆ ರಣಹೇಡಿಗಳ ಹಿಂಡು” ಎನ್ನುವಂತಹ ಇಂದಿನ ಪರಿಸ್ಥಿತಿಯೊಳಗೆ
    “ಹಿರಿಯರು ನಡೆದ ದಾರಿಯಲ್ಲಿ ಕಿರಿಯರು ನಡೆಯಬೇಕೆಂದು” ಸಮಾಜಕ್ಕೆ ಉತ್ತಮ ಸಂದೇಶವನ್ನು ರವಾನೆ ಮಾಡಿರುವ ಪರಮ ಪೂಜ್ಯರಿಗೆ ಶರಣು ಶರಣಾರ್ಥಿಗಳು.

  5. K.P. Patil
    Jul 10, 2022 Reply

    ಪಠ್ಯ ಪುಸ್ತಕದ ವಿಷಯದಲ್ಲಿ ತಾವು ಸರ್ಕಾರದ ನಡೆಯನ್ನು ಪ್ರಶ್ನಿಸಿ, ಮೊದಲು ದನಿ ಎತ್ತಿ ಎಚ್ಚರಿಕೆಯನ್ನು ನೀಡಿದ್ದನ್ನು ನೋಡಿದರೆ ಶರಣರ ಹಾದಿಯಲ್ಲಿ ಸಾಗುತ್ತಿರುವುದು ಗೊತ್ತಾಗುತ್ತದೆ… ನಿಮ್ಮ ದಾರಿಯೇ ನಮ್ಮದು.👣🙏🏽

  6. ಉದಯ್ ಹೈದರಾಬಾದ್
    Jul 19, 2022 Reply

    ಮನುಷ್ಯನ ನಡವಳಿಕೆಯಲ್ಲೇ ಸಂಸ್ಕೃತಿ ಅಡಕವಾಗಿದೆ. ನಮ್ಮ ವರ್ತನೆಗಳು ನಮ್ಮ ಜಾಯಮಾನವನ್ನು ತೋರಿಸುತ್ತವೆ. ಬಸವಣ್ಣನವರು ನಡವಳಿಕೆಗಳನ್ನು ತಿದ್ದಿ, ನಿಜವಾದ ಸಂಸ್ಕೃತಿಯನ್ನು ಮನುಷ್ಯನಲ್ಲಿ ತಂದರು. ಗುರುಗಳ ಲೇಖನ ಬಹಳ ಮಹತ್ವಪೂರ್ಣವಾಗಿದ್ದು, ಎಲ್ಲರೂ ಇದರಿಂದ ಕಲಿಯುವುದು ಸಾಕಷ್ಟಿದೆ.

  7. Varun Mysore
    Jul 19, 2022 Reply

    This website is really interesting, very good design and perfect subject matter.

  8. ತಿಪ್ಪೇಸ್ವಾಮಿ, ಹರಿಹರ
    Jul 21, 2022 Reply

    ಪ್ರತಿವರ್ಷ ನಿಮ್ಮಿಂದ ನಡೆಯುತ್ತಿರುವ ಮತ್ತೆ ಕಲ್ಯಾಣ ಕಾರ್ಯಕ್ರಮವು ನೀವು ನಮಗೆ ಹಾಕಿಕೊಟ್ಟ ದಾರಿ ಎಂದೇ ಭಾವಿಸಿದ್ದೇವೆ. ಶರಣರನ್ನು ಎತ್ತಿಹಿಡಿದ ನಿಮ್ಮ ಮಾತುಗಳೆಲ್ಲವೂ ಪೂಜನೀಯವಾಗಿವೆ. ಲೇಖನದ ಒಟ್ಟು ಆಶಯ ಮತ್ತೆ ಕಲ್ಯಾಣದ ಆಶಯವೂ ಆಗಿದೆ.

  9. Naresh, USA
    Jul 21, 2022 Reply

    Very decent site, I like the design, it actually stands out. The content is qualitative, Thanks.

  10. ಉಮೇಶ್ ಹಾವನೂರು
    Jul 25, 2022 Reply

    ಮನುಷ್ಯನನ್ನಾಗಿ ಹುಟ್ಟಿಸುವ ಬದಲು ಒಂದು ಮರವನ್ನಾಗಿ ಹುಟ್ಟಿಸಬೇಕಿತ್ತು ಎಂದು ಕೇಳಿಕೊಳ್ಳುವ ಬಸವಣ್ಣನವರ ಮಾತುಗಳಲ್ಲಿ ಮಾನವ ಜನ್ಮಕ್ಕಿಂತ ಸಸ್ಯಲೋಕ ಮಾನವೀಯವಾದುದು ಎನ್ನುವ ಒಳನೋಟವಿದೆ….. ನಿಮ್ಮ ಲೇಖನಗಳು ಎಲ್ಲೇ ಇರಲಿ, ಓದುತ್ತೆನೆ ಗುರುಗಳೇ.

  11. Shivaprakash Bellary
    Jul 31, 2022 Reply

    ‘ಮೇಲು-ಕೀಳು, ನಾನು-ನನ್ನದು’ ಎನ್ನುವ ಅಹಂಕಾರದ ಹೊಡೆದಾಟ, ಅಧಿಕಾರ ಅಂತಸ್ತಿನ ಹಪಾಹಪಿತನ ದೂರವಾಗಬೇಕಿದೆ. ಮಲಗಿದ್ದರೆ ಸಾವು, ಕುಂತಿದ್ದರೆ ರೋಗ, ನಿಂತಿದ್ದರೆ ಶಿಕ್ಷೆ-ನೋವು. ನಡೆದಾಡುತ್ತಿದ್ದರೆ ಜೀವನ… ಎಷ್ಟು ಅಮೂಲ್ಯವಾದ ಮಾತುಗಳು!!

  12. Mahanthesh Mudhol
    Jul 31, 2022 Reply

    Excellent website. A lot of useful info here. I am sharing this to a few of my friends and relatives. Thankyou for your effort.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
July 4, 2022
ಅಷ್ಟವಿಧಾರ್ಚನೆ – ಷೋಡಶೋಪಚಾರ
ಅಷ್ಟವಿಧಾರ್ಚನೆ – ಷೋಡಶೋಪಚಾರ
November 1, 2018
ಗಾಳಿ ಬುರುಡೆ
ಗಾಳಿ ಬುರುಡೆ
June 17, 2020
ನೀರು ನೀರಡಿಸಿದಾಗ
ನೀರು ನೀರಡಿಸಿದಾಗ
September 4, 2018
ಲಿಂಗಾಚಾರ
ಲಿಂಗಾಚಾರ
May 6, 2021
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
December 8, 2021
ಹೀಗೊಂದು ತಲಪರಿಗೆ…
ಹೀಗೊಂದು ತಲಪರಿಗೆ…
June 5, 2021
ಭಾವದಲ್ಲಿ ಭ್ರಮಿತರಾದವರ…
ಭಾವದಲ್ಲಿ ಭ್ರಮಿತರಾದವರ…
July 4, 2022
ಮನವೇ ಮನವೇ…
ಮನವೇ ಮನವೇ…
May 6, 2020
ಶಿವನ ಕುದುರೆ – 2
ಶಿವನ ಕುದುರೆ – 2
June 3, 2019
Copyright © 2023 Bayalu