Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹಳದಿ ಹೂವಿನ ಸುತ್ತಾ…
Share:
Articles November 9, 2021 ಲಕ್ಷ್ಮೀಪತಿ ಕೋಲಾರ

ಹಳದಿ ಹೂವಿನ ಸುತ್ತಾ…

ನಾನು ಕಾಲದ ಸೆಳವಿಗೆ ಉತ್ಕಟವಾಗಿ ಪಕ್ಕಾದವನು. ಹಾಗೆಯೇ ಕಾಲದ ಸೆಳವಿಗೆ ಕಿವುಡಾದವನು ಕೂಡ! ಇದು ದ್ವಂದ್ವವಲ್ಲ. ತಮ್ಮತಮ್ಮ ಪಾಡಿಗವು ಎರಡೂ ನಿಜಗಳೇ. ಯಾವ ಸೆಳವಿಗೆ ಪಕ್ಕಾದೆ, ಮತ್ಯಾವ ಸೆಳವಿಗೆ ಕಿವುಡಾದೆ ಎನ್ನುವುದು ಕಾಲದ ಆಯ್ಕೆಯ ಪ್ರಶ್ನೆಯಾಗಿತ್ತು ಮಾತ್ರ. ಬದುಕಿನ ಈ ಬಗೆಯ ಉತ್ಕಟತೆ ನನ್ನನ್ನು ನಿರುದ್ವಿಗ್ನತೆಯ ತಾವೋ ನೆಲೆಗೆ ತಂದು ಇಳಿಸಿದ್ದು ಮಾತ್ರ ಸೋಜಿಗದ ವಿಚಾರವೇ!

ತಾವೋ ಬಗ್ಗೆ ನನ್ನದು ಅರೆಬರೆ ಜ್ಞಾನ, ಹಾಗಂತ ನನಗೆ ಬೇಸರವಿಲ್ಲ. ಏಕೆಂದರೆ ಜ್ಞಾನವಿರುವ ಕಡೆ ತಾವೋ ಇರುವುದಿಲ್ಲವಂತೆ! ಆದರೂ ಜ್ಞಾನವೆಂದರೇನೆಂಬುದನ್ನು ತಾವೋಯಿಂದಲೇ ಕಲಿತೆ. ಏನನ್ನಾದರೂ ಅರಿಯುವುದು ಅಥವಾ ಸತ್ಯವನ್ನು ತಿಳಿಯುವುದು ಅರ್ಧ ಜ್ಞಾನವಾದರೆ ಆ ಸತ್ಯದಂತೆ ಬದುಕುವುದು ಪೂರ್ಣ ಜ್ಞಾನ. ಸತ್ಯ ಎಂದೊಂದಿದೆ ಎಂಬುದನ್ನೇ ನಂಬಲಿಕ್ಕಾಗದ ಡೋಲಾಯಮಾನ ಮನಃಸ್ಥಿತಿ ನನ್ನದು! ಇನ್ನು ಅರಿಯುವ ಮಾತೆಲ್ಲಿ ಬಂತು? ಹಾಗೆ ಬದುಕುವುದಂತೂ ದೂರವೇ ಉಳಿಯಿತು ಬಿಡಿ. ಆದರೂ ತಾವೋ ಬಗ್ಗೆ ವಿಚಿತ್ರ ಸೆಳೆವು ನನ್ನಲ್ಲಿ ‘ಉತ್ಕಟ’ವಾಗಿಯೇ ಉಳಿದಿದೆ. ತಾವೋ ಮಾತ್ರ ನನ್ನಂತಹ ನಿರುಪಯುಕ್ತ ಜೀವಿಗಳನ್ನು ಕೂಡ ತಿರಸ್ಕರಿಸುವುದಿಲ್ಲ. ಅದು ಕನ್ನಡಿಯಂತೆ ಧೂಳಿನ ಹುಡಿಯನ್ನು ಕೂಡ ಗ್ರಹಿಸುತ್ತದೆ. ಗ್ರಹಿಸಿದ್ದೆಲ್ಲವನ್ನೂ ತೋರುತ್ತದೆ. ಕನ್ನಡಿಯಿಂದ ದೂರ ಹೋದಂತೆಲ್ಲ ಕನ್ನಡಿಯೊಳಗಿನ ಪ್ರತಿಬಿಂಬವೂ ನಮ್ಮಿಂದ ದೂರವಾಗುವಂತೆಯೇ, ಹತ್ತಿರವಾದಂತೆಲ್ಲ ಅದೂ ಹತ್ತಿರವಾಗುತ್ತದೆ.
ಯಾಕೋ ಗೊತ್ತಿಲ್ಲ, ಹಳದಿ ಹೂಗಳನ್ನು ಕಂಡಾಗಲೆಲ್ಲಾ ನನಗೆ ತಾವೋ ನೆನಪಿಗೆ ಬರುತ್ತದೆ. ತಾವೋ ನನ್ನನ್ನ ಮುಟ್ಟಿದರೂ, ನಾನೇ ತಾವೋನ ತಬ್ಬಿದರೂ ಐದು ಸಾವಿರ ವರ್ಷಗಳ ಹಿಂದೆ ನಿಗೂಢವಾದ ಆದಿಮ ಆಚರಣೆಗಳ ಲೋಕವೊಂದನ್ನು ಹೊಕ್ಕ ಪ್ರಾಚೀನತಮ ಅನುಭವವಾಗುತ್ತದೆ. ಉತ್ತರ ಚೀನಾದ ಹಳದಿ ನದಿ ದಂಡೆಯಲ್ಲಿ ನೆಲೆಸಿದ್ದ ಪ್ರಾಚೀನ ಬುಡಕಟ್ಟಿನ ಮುಗ್ಧ ಶ್ರದ್ಧೆಯ ಮಾಂತ್ರಿಕ ಬೀಸು ಮತ್ತು ಬೆಡಗಿನ ಭಾವಕೋಶಗಳು ನನ್ನೊಳಗೆ ಹೊಕ್ಕು ಕಾಲವೇ ಅಲ್ಲೋಲಕಲ್ಲೋಲವಾಗಿ ಎಚ್ಚರದಪ್ಪುವಂತಾಗುತ್ತದೆ. ಈ ಮೈಮರೆವು ನನ್ನ ಉತ್ಕಟತೆಯ ಫಲ. ನನ್ನ ಭಾವುಕ ದೌರ್ಬಲ್ಯದ ದುರಂತವೇ ಹೊರತು ತಾವೋನ ನಿಜಸ್ಥಿತಿ ಅಲ್ಲವೇ ಅಲ್ಲ. ಯಾಕೆಂದರೆ ತಾವೋ ಮೈಮರೆವಿನ ಸ್ಥಿತಿಯದ್ದಲ್ಲ. ನಮ್ಮ ಭಕ್ತಿಪಂಥಗಳಂತಲ್ಲ. ತಾವೋನ ಮಾನಸಿಕ ಆವಸ್ಥೆ, ತಾವೋ ಜತೆ ಐಕ್ಯವಾದರೂ ಅದು ಮೈಮರೆವಿನ ಸ್ಥಿತಿಗೆ, ಪರವಶತೆಯ ಮಧುರ ಸ್ಥಾಯಿಗೆ ನಮ್ಮನ್ನು ಒಯ್ಯುವುದಿಲ್ಲವೆನ್ನುತ್ತಾರೆ ತಿಳಿದವರು. ಭಕ್ತಿಗೆ ಎಂಥದ್ದಾದರೂ ಒಂದು ಅಮಲು ಇರಲೇ ಬೇಕು. ಭಾರತೀಯ ಅಮಲಿನ ಪ್ರತೀಕ್ಷೆ ಮತ್ತು ವ್ಯಸನಗಳಿಗೆ ತಾವೋ ಗಾವುದ ಗಾವುದ ದೂರ. ತಾವೋ ಅಮಲಾಗುವುದು ಸಾಧ್ಯವೇ ಇಲ್ಲ. ಅಮಲು ಇದ್ದ ಕಡೆ ತಾವೋ ಇರುವುದೇ ಇಲ್ಲ. (ಜ್ಞಾನವೂ ಅಹಂನ ಅಮಲಾಗಬಹುದಲ್ಲವೇ?)

ಝೆನ್ ತಾವೋ ಜೊತೆ ಸಂಘರ್ಷಿಸಿತೋ ಅಥವಾ ತಾವೋನೇ ಝೆನ್ ವಿವೇಕದೊಂದಿಗೆ ಸಂಗೋಪಿತಗೊಂಡಿತೋ ಅಂತೂ ಝೆನ್ ಮತ್ತು ತಾವೋಗಳು ಪರಸ್ಪರ ಪ್ರಭಾವ ಮತ್ತು ಸಂಕರದಿಂದ ಚೆಲುವಿನ ಅತ್ಯುನ್ನತಿಯಲ್ಲಿ ಭಾವ ಬೆರಗಿನ ಪರಿಮಳದ ಪುಷ್ಪಗಳಾಗಿ ಅರಳಿನಿಂತಿವೆ. ವಿಚಿತ್ರವೆಂದರೆ ಝೆನ್ ಮತ್ತು ತಾವೋ ಮನಸ್ಥಿತಿಯ ಅರಿವು-ಗುರಿ ಹೊಂದಿರುವ ಸೂಫಿ ಪಂಥದ ಆಚರಣೆಗಳು ಮಾತ್ರ ತಾವೋಗೆ ತದ್ವಿರುದ್ಧ ದಿಕ್ಕಿನಲ್ಲಿ ಸಾಗುವಂಥದ್ದು. ಸೂಫಿಯಲ್ಲಿ ಪ್ರೇಮ- ಉನ್ಮಾದಗಳಿವೆ. ದೈವ ಪ್ರೇಮದ ಅವರ್ಣನೀಯ ಆನಂದಗಳಿವೆ. ರಾಗೋದ್ರೇಕಿತ ಅನುಭವವಿದೆ. ‘ಸಮಾ’ ಎಂಬ ಹಾಡುಗಳ ಗೋಷ್ಠಿಗಳಿವೆ. ‘ಮೆವ್ಲೆವಿ’ ಎಂಬ ಗರಗರನೇ ತಿರುಗುವ ಹಾಡು-ಕುಣಿತದ ದರ್ವೇಷಗಳ ಪಂಥ ಪದ್ಧತಿಗಳಿವೆ. ಇವೆಲ್ಲವೂ ಪಾಂಥಿಕ ಉನ್ಮಾದದ ಅಂಶಗಳೇ. ಸೂಫಿಯ ಇಂತಹ ಆಚರಣೆಗಳೆಲ್ಲವೂ ನಮ್ಮ ಭಕ್ತಿ-ಪಂಥಗಳ ಆಚರಣೆ, ನಂಬಿಕೆಗಳಿಗೆ ತುಂಬಾ ಹತ್ತಿರದಲ್ಲೇ ಇವೆ. ರಾಗೋನ್ಮಾದದ ಪರವಶತೆಯ ಅಮಲಿನ ಮೂಲಕವೇ ದೈವದೊಂದಿಗೆ ಒಂದಾಗಿ ಬೆರೆತು ‘ಫನಾ’ ಅಥವಾ ನಿರ್ವಾಣದ ಸ್ಥಿತಿಯನ್ನು ತಲುಪುವುದು ಅದರ ಉದ್ದೇಶ. ನಮ್ಮ ಭಕ್ತಿ ಪಂಥಗಳು ಕೂಡ ದೈವ ಸ್ಮರಣೆಯಲ್ಲೇ ಮೈಮರೆತು ಐಕ್ಯತೆಯ ಗಾಢ ಭಾವದಲ್ಲೇ ಮುಕ್ತಿಯ ಸೋಪಾನಗಳನ್ನು ಸಾಕ್ಷಾತ್ಕರಿಸಿಕೊಳ್ಳುತ್ತವೆ.

ತಾವೋನಲ್ಲಿ ರಾಗೋನ್ಮಾದಗಳಿಗೆ ಎಡೆಯೇ ಇಲ್ಲ. ಅಲ್ಲಿ ದೈವ ಪರಿಕಲ್ಪನೆಯೆಂಬುದು ‘ಶೂನ್ಯ’. ಹಾಗಾಗಿ ಅದಕ್ಕೆ ಯಾವುದೇ ನಿರ್ದಿಷ್ಟ ಉದ್ದೇಶವೂ ಇಲ್ಲ. ತಾವೋ ಕವಿತೆಗಳನ್ನು ನಾವು ನಿರುಮ್ಮಳವಾಗಿ ಓದಿ ನಿರಾಳ ಆನಂದವನ್ನು ಪಡೆಯಬಹುದು. ತಾವೋ ತತ್ವವನ್ನು ಬಿಡು ಬೀಸಾಗಿ ಎದೆಯೊಳಕ್ಕೆ ಬಿಟ್ಟುಕೊಳ್ಳಬಹುದು. ತಾವೋ ಅನುಭವದ ಖುಷಿಗಳನ್ನು ಹಂಚಿಕೊಳ್ಳಬಹುದು. ಆದರೆ ತಾವೋ ಅಂದರೆ ಇದು, ಹೀಗೆ ಎಂದು ನಿರ್ದಿಷ್ಟವಾಗಿ ಬರೆಯುವುದು/ ಮಾತನಾಡುವುದು ಸಾಧ್ಯವಿಲ್ಲ. ಬೇಕಿದ್ದಲ್ಲಿ ತಾವೋನ್ನೇ ಬರೆಯಬಹುದು! ತಾವೋನ ಈ ತಾತ್ವಿಕ ನಿಗೂಢತೆ ನನ್ನ ಆಸಕ್ತಿ. ಈ ಆಸಕ್ತಿ ವ್ಯಸನವಾದರೆ ನಾನೂ ತಾವೋನಿಂದ ದೂರವಾದಂತೆ. ವೈದಿಕೇತರ ನೆಲೆಗಳ ಭಕ್ತಿಪಂಥಕ್ಕೆ ಎಲ್ಲೋ ಕೊಂಚ ಹತ್ತಿರದಲ್ಲಿರುವಂತೆ ನನ್ನೊಳಗಿನ ಉತ್ಕಟವಾದ ಭಾವಕೋಶಗಳಿಗೆ ಆಗೀಗ ಭಾಸವಾಗುವುದು. ಹಾಗಾಗಿಯೇ ತಾವೋ ಒಂದು ತಣ್ಣಗಿನ ತಾತ್ವಿಕ ಸವಾಲು. ದಕ್ಕಲಾರದ್ದನ್ನು ದಕ್ಕಿಸಿಕೊಳ್ಳುವಂತೆ ಪಂಥಾಹ್ವಾನವೀಯುವ ಸರಳವಾದ ಅರಿವು. ತಾವೋನ್ನ ಪದಗಳು ಮಸಕು ಮಾಡಿಬಿಡುತ್ತವೆ. ಬಚ್ಚಿಟ್ಟು ಬಿಡುತ್ತವೆ. ಶಬ್ದಗಳು ನಿಶ್ಶಬ್ದವನ್ನು ಅವಿತಿಡುವಂತೆ. ಅದರ ಇತ್ಯೋಪರಿಗಳನ್ನು ಹಾಗೊಂದು ವೇಳೆ ಇದ್ದಲ್ಲಿ- ಸ್ಪಷ್ಟವಾಗಿ, ಕರಾರುವಾಕ್ಕಾಗಿ ವ್ಯಾಖ್ಯಾನಿಸಲಾಗಲೀ ಅಥವಾ ವಿವರಿಸಲಾಗಲೀ ಸಾಧ್ಯವೇ ಇಲ್ಲ. ಹೀಗೆ ತಾವೋನ್ನ ನಿಗೂಢವಾಗಿಸುವುದರಲ್ಲೇ ಅದು ಬಯಲಾಗುವಂಥದ್ದು. ತಾವೋ ನಿಸರ್ಗಬದ್ಧವಾದ, ಸಹಜವಾದ, ಸರಿಯಾದ ಹಾದಿ ಎಂದೆಲ್ಲಾ ಹೇಳುತ್ತಾರೆ! ಬದುಕಿನ ಎಲ್ಲದರ ಮೂಲವೆಂದೂ ವ್ಯಾಖ್ಯಾನಿಸುತ್ತಾರೆ! ಪ್ರಕೃತಿಗೂ ಪ್ರಾಚೀನವಾದ ತಿಳುವಳಿಕೆಯೆಂದು ತತ್ವದೆತ್ತರದಲ್ಲಿ ವಿವರಿಸುತ್ತಾರೆ! ವಿಸ್ಮಯಪೂರಿತವಾದ ಏಕತ್ವವೆಂದೂ ಪರಿಭಾವಿಸಿದವರಿದ್ದಾರೆ. ಆದರೆ ಶಬ್ದಗಳ ಉಪಾಧಿಗಳೆಲ್ಲದರಿಂದಲೂ ನುಣುಚಿಕೊಳ್ಳುವ ತಾವೋ “ಶಬ್ದದ ಲಜ್ಜೆಯ ನೋಡಾ…” ಎಂದು ಅಲ್ಲಮನ ದನಿಯಲ್ಲಿ ಪಾಂಡಿತ್ಯದ ಅಹಂಕಾರವನ್ನು ಅಣಕಿಸಬಹುದು. ಶಬ್ದಮುಗ್ಧ ಸ್ಥಿತಿಯ ಅನುಭಾವವನ್ನು ವಿವರಿಸಿ ಹೇಳುವುದಾದರೂ ಹೇಗೆ? ಪ್ರಾಚೀನ ಚೀನಾದ ಆದಿವಾಸಿಗಳ ಮಾಂತ್ರಿಕಾಚರಣೆಗಳ (shamanism) ಒಡಲಿನಿಂದ ಹುಟ್ಟಿದ ಅರಿವೇ ತಾವೋ ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಅದರಿಂದ ಕೇವಲ ಪ್ರಭಾವಿತಗೊಂಡಿದೆಯೆಂದು ಮತ್ತೆ ಕೆಲವರು ವಾದಿಸುತ್ತಾರೆ. ಆದರೆ ತಾವೋ ಎಂಬುದೊಂದು ಇತ್ತು ಎಂದು ಭಾವಿಸುವುದಕ್ಕಿಂತಲೂ ಹಿಂದೆ, ಅಂದರೆ ನಿರ್ಕಾಲದಿಂದಲೂ, ನಿಶ್ಶಬ್ದವಾಗಿ ನಡೆದ ಅದರ ಪಯಣದ ಏಳುಬೀಳಿನ ನಿರಂತರ ಗ್ರಹಿಕೆ- ವ್ಯಾಖ್ಯಾನ ಮತ್ತು ಭಿನ್ನ ಭಿನ್ನ ಅರಿವುಗಳ ಆಚೆಗೂ ತಾವೋ ಅನಾಮಿಕವಾಗಿಯೂ, ಅಗೋಚರವಾಗಿಯೂ, ಅತರ್ಕ-ಅಗ್ರಾಹ್ಯವಾಗಿಯೂ, ನಿಗೂಢವೇ ತಾನೆಂಬಂತೆಯೂ, ತಾನು ನಿಗೂಢವೇ ಅಲ್ಲವೆಂಬಂತೆಯೂ ಬೆಕ್ಕಸ ಬೆಡಗಿನ ನಿಲುವಲ್ಲಿ ಉಳಿದು ಬಂದಿದೆ. ಅದು ನೀಡುವ ಚಕಿತಗಳಿಗೆ, ನಿರುಮ್ಮಳ ಭಾವಗಳಿಗೆ, ಅದು ಇದ್ದಕ್ಕಿದ್ದಂತೆ ತೆರೆದು ತೋರುವ ಸರಳ ವಿವೇಕಗಳಿಗೆ ಕೊನೆಯುಂಟೇ? ವಿಶ್ವದ ಅಂತರ್ನಿಹಿತ ಅನಂತ ನನ್ನಿಯಾಗಿರಬಹುದೇ ಈ ತಾವೋ? ಗೊತ್ತಿಲ್ಲ. ತಾವೋನ ಇಂತಹ ಸ್ವಭಾವದಿಂದಾಗಿಯೇ ಅದರ ಮೂಲವು ನಿಗೂಢಕ್ಕೂ ನಿಗೂಢವಾಗುಳಿದಿದೆ. ಕಾಲದ ಕತ್ತಲಲ್ಲಿನ ಅಮೂರ್ತ ಸತ್ಯದಂತಿದೆ. ಅಜ್ಞಾತದಾಳದ ಜ್ಞಾತದಂತಿದೆ.

ಜಿಗುಪ್ಸಾಕಾರಕ ಬದುಕಿನ ಅಸಹ್ಯ ಅಭಿರುಚಿಗಳಿಂದ ಹೇಸಿದ ಆಯಾಯಾ ಕಾಲದ ವಿರಾಗೀ ಮನಸ್ಸುಗಳು ತಾವೋನನ್ನು ಸರಳ ಸುಂದರ ಸೋಪಾನಗಳ ಮೂಲಕ ಶೂನ್ಯ ಸಿಂಹಾಸನಕ್ಕೇರಿಸಿರಬಹುದು. ಶೂನ್ಯ ತತ್ವವನ್ನೇ ಅನುಭಾವಿಕತೆಯ ಮೌಲ್ಯೋನ್ನತಿಯಲ್ಲಿ ಇಟ್ಟಿರಬಹುದು. ಪಶ್ಚಿಮದ ಅತಿಭೋಗವಾದದ ಬದುಕೇ ಒಂದು ಪ್ರಲೋಭನಾತ್ಮಕ ಮೌಲ್ಯದ ವ್ಯಾಧಿಯಾಗಿ ಇಡೀ ಜಗತ್ತನ್ನು ವ್ಯಾಪಿಸಿಕೊಳ್ಳುತ್ತಿರುವ ಇಂದು ಈ ಅಪೂರ್ವವಾದ ಪೂರ್ವ ತತ್ವದ ಸರಳ ಅರಿವು ಮನುಷ್ಯರಿಗೆ ಅವರ ಮಿತಿಯ ಬದುಕಲ್ಲಿರುವ ಅಮಿತ ಆನಂದಗಳನ್ನು ತೆರೆದು ತೋರಿಸಿಕೊಡುವಂತಿದೆ.

ಪ್ರಾಚೀನ ಪಂಥಗಳ ಗುರುಗಳು ಮೂರ್ಖರಂತೆ ಮಾತನಾಡಿದರೂ ಕೇಳುಗರನ್ನು ಬುದ್ಧಿವಂತರನ್ನಾಗಿಸುತ್ತಿದ್ದರೆಂಬ ಮಾತು ತಾವೋ ಮಟ್ಟಿಗಂತೂ ತದ್ವತ್ತಾಗಿ ಅನ್ವಯಿಸುವಂತಿದೆ. ತಾವೋನ ಅಂತಹ ಮೊದಲ ಗುರು ಲಾ-ಓತ್ಸು (Lao-tzu). ಲಾ-ಓತ್ಸು ಎಂದರೆ ಚೀನೀ ಭಾಷೆಯಲ್ಲಿ ವೃದ್ಧಗುರು ಎಂಬರ್ಥವಿದೆಯಂತೆ. ಭಗವಾನ್ ಬುದ್ಧನ ಹಿಂದಲ ಜನ್ಮವೇ ಈ ಲಾ-ಓತ್ಸು ಎಂದು ಚೀನೀಯರು ಇಂದಿಗೂ ಗಾಢವಾಗಿ ನಂಬುತ್ತಾರೆ. ಆದರೆ ಇತಿಹಾಸಕಾರರ ಪ್ರಕಾರ ಲಾ-ಓತ್ಸೆಯ ಮೂಲ ಹೆಸರು ಲಾ-ಇಯರ್ (Li-Er) ಅಥವಾ ಲಾ-ಓತಾನ್ ಎಂದು. ಕ್ರಿ.ಪೂ. ಏಳನೆಯ ಶತಮಾನದವನೆಂದು ಭಾವಿಸಲಾಗಿರುವ ಲಾ-ಓತ್ಸು ಕನ್ ಫ್ಯೂಷಿಯಸ್ ಗಿಂತಲೂ 50 ವರ್ಷ ಹಿರಿಯವನೆಂದು ವಿದ್ಚಾಂಸರು ಹೇಳುತ್ತಾರೆ. ಚೌ ಸಾಮ್ರಾಜ್ಯದಲ್ಲಿ ಮುಖ್ಯ ಇತಿಹಾಸಕಾರ, ಗ್ರಂಥಪಾಲಕ ಮತ್ತು ಪುರಾತತ್ವ ತಜ್ಞನಾಗಿದ್ದನೆಂದು ಭಾವಿಸಲಾಗಿರುವ ಲಾ-ಓತ್ಸು, ಪತನಗೊಳ್ಳುತ್ತಲಿದ್ದ ತನ್ನ ಸುತ್ತಲ ಬದುಕಿನೊಂದಿಗೇ ಉಳಿಯಲು ಇಚ್ಛಿಸದೆ ನಗರವನ್ನು ಬಿಟ್ಟು ಹೊರಡುವಾಗ, ಪಶ್ಚಿಮ ಭಾಗದ ಗಡಿ ಕಾವಲು ಪಡೆಯವನೊಬ್ಬ ಲಾ-ಓತ್ಸುವನ್ನು ಗುರುತಿಸಿ, ತಾವೋ ಅರಿವನ್ನು ಬರೆದು ದಾಖಲಿಸಬೇಕೆಂದು ಕೋರುತ್ತಾನೆ. ಅವನ ಕೋರಿಕೆಯಂತೆ ಲಾ-ಓತ್ಸು ಐದು ಸಾವಿರ ಚಿತ್ರಲಿಪಿಗಳ ‘ದಾವ್-ದ-ಜಿಂಗ್” (Tao-Te-Ching) ಎಂಬ ಪುಸ್ತಕವನ್ನು (ಮೂಲದಲ್ಲಿ ಎರಡು ಪುಸ್ತಕಗಳು) ಬರೆದನೆಂಬುದು ಐತಿಹ್ಯ. ಅನಂತರ ನಿರ್ಜನ ಪಶ್ಚಿಮದತ್ತ ಹೊರಟ ಲಾ-ಓತ್ಸು ಮತ್ತು ಗಡಿ ಕಾವಲುಗಾರರಿಬ್ಬರೂ ನಿಗೂಢವಾಗಿ ಕಣ್ಮರೆಯಾದರು. ಲಾ-ಓತ್ಸು ನಂತರದಲ್ಲಿ ಚೌವಾಂಗ್-ತ್ಸು, ಲೀ-ತ್ಸು, ಲಿ-ಫೋ, ಲಿಯು-ಲಿಂಗ್ ನಂತಹ ಮೇಧಾವಿ ತಾವೋ ಗುರು ಪರಂಪರೆ ಮುಂದುವರೆಯಿತು. ತಾವೋನ ಈ ಗುರುಗಳ ಚೇತೋಹಾರಿ ಪ್ರಸಂಗಗಳು ಝೆನ್ ಗುರುಗಳ ಪ್ರಸಂಗಗಳನ್ನೇ ಬಹುತೇಕವಾಗಿ ನೆನಪಿಸುವಂತಿದ್ದರೂ ಝೆನ್ ಗಿಂತಲೂ ತಾವೋನೇ ನಿಸರ್ಗಬದ್ಧ ಬದುಕಿಗೆ ಹೆಚ್ಚು ಹತ್ತಿರ ಎನಿಸುತ್ತದೆ. ಕನ್ ಫ್ಯೂಷಿಯಸ್ ವಾದಿಗಳು ಜನರ ಬದುಕಿಗೆ ನೈತಿಕ ನಡಾವಳಿಯೊಂದು ತುಂಬಾ ಅಗತ್ಯವೆಂದು ಪ್ರತಿಪಾದಿಸಿದರೆ ತಾವೋ ವಾದಿಗಳು ಅದನ್ನು ಛೇಡಿಸಿ, ಜನ ನಿಸರ್ಗ ಬದುಕಿನಿಂದ ದೂರವಾಗಿ ತಮ್ಮನ್ನು ಬೇರ್ಪಡಿಸಿಕೊಂಡಿರುವುದಲ್ಲದೆ, ಸಹಜವಾದ, ನಿಸರ್ಗದತ್ತವಾದ ಬದುಕನ್ನೇ ಮರೆತು ಹೋಗಿರುವುದರ ಪರಿಣಾಮವೇ ಈ ಕೃತಕ ನೈತಿಕ ನಡಾವಳಿಯ ಕಟ್ಟುಪಾಡುಗಳ ಆವಸ್ಥೆಯೆನ್ನುತ್ತಾರೆ.

ನನಗಂತೂ ತಾವೋನ ತಾಯ್-ಚಿ (Tai-chi) ಪರಿಕಲ್ಪನೆ ಹಾಗೂ ಶೂನ್ಯ ತತ್ವದ ಬಗ್ಗೆ ಯೋಚಿಸಿದಂತೆಲ್ಲ ಶೈವ ಮೂಲದ ತತ್ವಗಳೇ ನೆನಪಿಗೆ ಬರುತ್ತವೆ. ತಾಯ್-ಚಿ ಎಂಬ ಆದಿಮತ್ವವೇ ತಾವೋನ ಮೂಲ ಪರಿಕಲ್ಪನೆ. ವು-ಚಿ (Wu-Chi) ಎಂಬ ಅನಂತ ಶೂನ್ಯದಿಂದ ಯಾಂಗ್ (yang) ಮತ್ತು (yin) ಎಂಬ ಕ್ರಿಯ ಹಾಗೂ ನಿಷ್ಕ್ರಿಯ ಅಥವಾ ಜಡ ತತ್ವಗಳು ಹುಟ್ಟುತ್ತವೆ. ಯಾಂಗ್ ಎಂಬ ಪುರುಷ ಸಂಕೇತ ಚೈತನ್ಯಶೀಲವಾಗಿದ್ದು, ಯಿನ್ ಎಂಬ ಸ್ತ್ರೀ ಸಂಕೇತದ ಜಡತ್ವದೊಂದಿಗೆ – ಪರಸ್ಪರ ವೈರುಧ್ಯಗಳ ನಡುವೆಯೂ ಸಂಗೋಪಿತಗೊಳ್ಳುವುದೇ ಪ್ರಸಿದ್ಧ ಯಾಂಗ್- ಯಿನ್ ತಾಯ್-ಚಿ ವೃತ್ತ. ಇವುಗಳ ಏಕತೆಯೇ ಇಡೀ ಜಗತ್ತಿನ ಎಲ್ಲ ಚಟುವಟಿಕೆಗಳ ಆಳದ ಅಂತರ್ಗಾಮೀ ಶಕ್ತಿ ಮತ್ತು ಸತ್ಯ. ವ್ಯತ್ಯಾಸವೇನೆಂದರೆ ನಮ್ಮಲ್ಲಿ ಶಿವ ಜಡವಾದರೆ, ಪ್ರಕೃತಿ-ಶಕ್ತಿ-ಶಿವೆ ಚೈತನ್ಯದ ಸಂಕೇತವಾಗಿ ಕಾಣಿಸುತ್ತಾಳೆ, ಅಷ್ಟೇ. ಇರುವಿಕೆ ಮತ್ತು ಇಲ್ಲದಿರುವಿಕೆಗಳೇ ಪರಸ್ಪರ ಪರಿಣಾಮಗಳಿಗೆ ಮೂಲ ಕಾರಣವೆಂಬುದು ದಾವ್-ದ-ಜಿಂಗ್ ನ ಸಂದೇಶ. ಅದ್ವೈತ ಮತ್ತು ಗತಿ ತಾರ್ಕಿಕದಾಚೆಗೂ ವ್ಯಾಪಿಸುವ ತಾವೋ ಶೂನ್ಯದನಂತತೆಯಂತೆ. “ಪ್ರತಿಯೊಂದು ಚಲನೆಗೂ ಅನಿವಾರ್ಯವೆಂಬಂತೆ ವಿರುದ್ಧವಾದ ಪ್ರತಿಚಲನೆ ಹುಟ್ಟುತ್ತದೆ. ಬದುಕಿನಲ್ಲಿ ಆನಂದ ಹುಟ್ಟಲು ಈ ಎರಡು ವಿರುದ್ಧ ಧೃವಗಳ ನಡುವೆ ಸಮತೋಲನವೇರ್ಪಡಲೇ ಬೇಕು. ಸಮತೋಲನಕ್ಕೆ ಒಂದು ಹೆಜ್ಜೆ ಹಿಂದೆ ಸರಿಯುವುದರ ಮೂಲಕ ನಾವೇ ಅವಕಾಶ ಕಲ್ಪಿಸಿದರೆ ಆಗ ಎಲ್ಲವೂ ತಂತಾನೇ ಸುಸೂತ್ರಗೊಳ್ಳುತ್ತದೆ”- ಎಂಬ ಲಾ-ಓತ್ಸೆಯ ನಂಬಿಕೆ ನನಗೆ ಹೆಚ್ಚು ಇಷ್ಟವಾದ ತತ್ವ. ಬಹುಶಃ ಈ ಹಿನ್ನೆಲೆಯಲ್ಲಿಯೇ “ಇಡೀ ಜಗತ್ತಿನ ತತ್ವಜ್ಞಾನದ ಮೌನ ತುದಿ ತಾವೋ” ಎಂಬ ಮಾತು ಹುಟ್ಟಿಕೊಂಡಿದೆಯೆನಿಸುತ್ತದೆ.
ಲಾ-ಓತ್ಸೆಯ ಒಂದೊಂದು ಮಾತೂ ಕಾವ್ಯದ ಅಪರೂಪ ಝಳಕುಗಳಂತಿವೆ. ಪುರಾತನ ಬೆಳಕಿನ ನೆರಳುಗಳಂತಿವೆ. ಅವು ಬೆಳಗಿನ ಚೆಂಡುಮಲ್ಲಿಗೆಗಳಂತೆ ದಳದಳ ಅರಳಿರುವ ಕವಿತೆಗಳು. ಈ ಕವಿತೆಗಳಲ್ಲಿ ಕನ್ಯತ್ವವಿದೆ. ನಿಶ್ಯಬ್ದ ನಿಡುತೋಳುಗಳ ಆಹ್ವಾನವಿದೆ. ಹೊರಳಿ ನೋಡುವ ಜಾವಗಳಿವೆ. ಸ್ವಪ್ನಗಳೇ ಕನವರಿಸುವ ಬದುಕಿದೆ. ಚಲಿಸುವ, ಹಾರುವ ನಿರಾಕಾರಗಳಿವೆ. ಸರಳತೆ-ಮಿತ ಚೆಲುವಿನ ಬೆಳಕು ಚೆಲ್ಲುವ ಕಣ್ಣುಗಳಿವೆ. ಇರುವುದೆಲ್ಲವೂ ಹೇಗಿದೆಯೆಂದರೆ ಏನಿಲ್ಲವೆಂಬಷ್ಟು ನಿರಾಳತೆಯಲ್ಲಿ ಶೂನ್ಯದಾಚೆಗಿನ ನಿಃಶೂನ್ಯದ ಪರಿವೇಶದಲ್ಲಿ, ಧೂಳು ಕೂತ ಗಾಳಿಯಷ್ಟು ಹಗೂರದಲ್ಲಿ. ಅವು ತಮ್ಮಿಂತಾವೇ ದಾರ್ಶನಿಕವಾದವು.
ಖಾಲಿ, ವಿರಾಮ ಮತ್ತು ಮಿತಿಯ ತತ್ವಗಳು ಎಲ್ಲ ಕಾಲದ, ಎಲ್ಲ ದೇಶಗಳ, ಎಲ್ಲ ಜೀವಿಗಳ ಬದುಕನ್ನೂ ಹಸನು ಮಾಡಬಲ್ಲಂಥವು.

ಶೂನ್ಯದ ಸೂಕ್ಷ್ಮ ರೂಪದಂತಿರುವ ‘ಖಾಲಿ’ ಏನನ್ನಾದರೂ ತುಂಬಿಕೊಳ್ಳಲು ಸಾಧ್ಯವಿರುವಂಥದ್ದು. ಆದರೆ ಧರ್ಮವೆನ್ನುವ ಯಾವ ಧರ್ಮವೂ ಈ ಖಾಲಿಯನ್ನು ತುಂಬಲಾರದು ಎಂದಿಗೂ! ಖಾಲಿಯಿಂದಲೇ ಉಪಯುಕ್ತತೆ. ಮಡಿಕೆಯ ಖಾಲಿ ಪ್ರದೇಶವೇ ಅತ್ಯುಪಯುಕ್ತವಾದುದು. ತುಂಬಿದ ಟೀ ಕಪ್ ಉಕ್ಕಿ ಹರಿಯುವ ಝೆನ್ ಪ್ರಸಂಗವಿಲ್ಲಿ ನೆನಪಿಗೆ ಬರುತ್ತದೆ. ಜನಾಂಗವಾದದ ದೆವ್ವವನ್ನು ಹೊಕ್ಕಿಸಿಕೊಂಡ ಹೃದಯಗಳು ಒಮ್ಮೆಲೇ ಖಾಲಿಯಾದರೆ ಜಗತ್ತಿನ ಎಲ್ಲ ಯುದ್ಧಗಳು ನಿಂತು ಹೋಗಬಹುದೇನೋ? ಹಸಿವು- ಬಡತನಗಳು ಮತ್ತು ಉಲ್ಬಣಗೊಂಡಿರುವ ಎಲ್ಲ ಸಮಸ್ಯೆಗಳು ಬಗೆಹರಿದಾವೇನೋ? ಎಲ್ಲರೂ ಸುಖವಾಗಿರಲು ಕೆಲವರು ಯಾಕೆ ಇಷ್ಟಪಡುವುದಿಲ್ಲವೋ? ‘ಆ-ಅದು’ ಶೇಷವೂ ಉಳಿಯದಂತೆ ಖಾಲಿಯಾದರೆ ಎಷ್ಟು ಚೆನ್ನ? ಇವತ್ತಿನ ವೇಗ ಸಂಸ್ಕೃತಿಗೆ ಉತ್ತರ ರೂಪದಂತಿರುವುದೇ ತಾವೋನ ವಿರಾಮ ಪರಿಕಲ್ಪನೆ. ಅನಗತ್ಯ ಶ್ರಮ ಮತ್ತು ಆಯಾಸಗಳ ಆಧುನಿಕ ಮನುಷ್ಯರ ಮನೋಸೌಖ್ಯಕ್ಕೆ ಇರುವ ಏಕೈಕ ಪರಿಹಾರ ಈ ವಿರಾಮ ಪರಿಕಲ್ಪನೆ. ಪ್ರತಿಕ್ಷಣ ಉರುಳು ಹೆಣೆಯುವ ಅಸಹನೀಯ ಹಿಂಸೆಗಿಂತಲೂ ವಿಶ್ರಮಿಸುವುದೇ ಸೊಗಸಲ್ಲವೇ? ಸಾಮ್ರಾಜ್ಯಗಳ ಕನಸು ಕಾಣುವುದಕ್ಕಿಂತಲೂ ಉಚಿತವಾಗಿ ಸಿಗುವ ಕಾಡುಹೂಗಳು, ಸುಂದರ ಮುಂಜಾನೆಗಳು, ಬೆಳದಿಂಗಳು ಹಾಗೂ ಪ್ರಕೃತಿಯ ಬೆರಗುಗಳನ್ನು ಬಿಡುಬೀಸಾಗಿ ಸವಿಯಲು ಒಂದಷ್ಟು ಕಾಲ ಸಿಕ್ಕಿದರೆ ಒಳ್ಳೆಯದೇ ಅಲ್ಲವೇ? ಮಿತಿಯೆಂಬುದನ್ನಂತೂ ನಾವು ಅತಿಯ ಅಪಾಯಗಳಲ್ಲಿ ನಿಂತು ಅರ್ಥೈಸಿಕೊಳ್ಳುತ್ತೇವೆ. ಎತ್ತರ- ದೂರಕ್ಕೆ ಜಿಗಿಯಲು ನಮಗಿರುವ ಮಿತಿಗಳ ಬಗ್ಗೆಯೇ ನಾವು ಅತಿಯಾಗಿ ಯೋಚಿಸುತ್ತೇವೆ. ಮಿತ ಬದುಕಲ್ಲೇ ಇರುವ ಮಹತ್ತು ಮತ್ತು ಆನಂದಗಳಿಂದು ನಮಗೆ ಬೇಡವಾಗಿವೆ. ತಾವೋ ಬಗ್ಗೆ ಯೋಚಿಸುತ್ತಾ ಹೋದಂತೆ ನನ್ನನ್ನು ನನ್ನೊಳಗೇ ಕಟ್ಟಿಹಾಕಿರುವ ಸಾವಿರ ದೌರ್ಬಲ್ಯಗಳು ಕಾಣಿಸುತ್ತಾ ಹೋಗಿ ಲಜ್ಜೆಯಿಂದ ತಲೆ ತಗ್ಗಿಸುತ್ತೇನೆ. ಅವುಗಳನ್ನು ಮೀರಿ ಹೊರಬರಲು ಆತ್ಮಶಕ್ತಿ ಇಲ್ಲದೆ ಸೋಲುತ್ತಾ ಪುನಃ ಪುನಃ ಲಜ್ಜಿತನಾಗುತ್ತೇನೆ. ನನ್ನನ್ನು ಲಜ್ಜಿತನನ್ನಾಗಿಸುವ ತಾವೋ ಒಂದೇ ನನಗೀಗ ಇಷ್ಟವಾಗಿರುವ ಸಂಗತಿಯಾಗಿದೆ. ನನ್ನ ಅಂತರಾಳದ ಆಳವಾಗಿದೆ.

Previous post ಎರಡು ಎಲ್ಲಿ?
ಎರಡು ಎಲ್ಲಿ?
Next post ಪದ, ಬಳಕೆ ಮತ್ತು ಅರ್ಥ
ಪದ, ಬಳಕೆ ಮತ್ತು ಅರ್ಥ

Related Posts

ಕಾಯಕಯೋಗಿನಿ ಕದಿರ ರೆಮ್ಮವ್ವೆ
Share:
Articles

ಕಾಯಕಯೋಗಿನಿ ಕದಿರ ರೆಮ್ಮವ್ವೆ

April 29, 2018 ಡಾ. ಶಶಿಕಾಂತ ಪಟ್ಟಣ
ಕದಿರ ರೆಮ್ಮವ್ವೆ ಅವಿರಳ ವಚನಕಾರ್ತಿ. ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರ ಕಲ್ಯಾಣ ಕ್ರಾಂತಿಯಲ್ಲಿ ಪಾಲ್ಗೊಂಡಿದ್ದ ರೆಮ್ಮವ್ವ, ರಾಟಿಯಿಂದ ಕದಿರು ತೆಗೆದು ನೂಲುವ...
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
Share:
Articles

ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ

April 29, 2018 ಡಾ. ಎಸ್.ಎಮ್ ಜಾಮದಾರ
ಕಳೆದ ಜುಲೈ ತಿಂಗಳಿಂದ ನಡೆಯುತ್ತಿರುವ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ದಿನೆ ದಿನೆ ಪ್ರಬಲಗೊಳ್ಳುತ್ತಿದೆ. ಬೇರೆ ಪಕ್ಷಗಳವರೂ ಈ ಹೊರಾಟವನ್ನು ಸೇರುತ್ತಿದ್ದರಿಂದ ಇದು...

Comments 13

  1. J.K. Patil
    Nov 12, 2021 Reply

    ಲೇಖನ ಚನ್ನಾಗಿ ನಿರೂಪಣೆಯಾಗಿದೆ. ಆದರೆ ತಾವೋ ಏನೂಂತ ನನಗೆ ಗೊತ್ತಾಗಲೇ ಇಲ್ಲ.

  2. Prasanna Kumar
    Nov 12, 2021 Reply

    ತಾವೋ ತತ್ವಜ್ಞಾನದ ಕುರಿತಾಗಿ ನಾನು ಇದೇ ಮೊದಲು ಓದಿದ್ದು, ಅದನ್ನು ಸಂಪೂರ್ಣ ತಿಳಿಯುವ ಕುತೂಹಲ ಹುಟ್ಟಿತು. ಈಗಲೂ ಚೀನಾದಲ್ಲಿ ತಾವೋ ಬಹಳ ಪ್ರಭಾವಶಾಲಿಯಾದ ಚಿಂತನೆ ಎಂದು ಕೇಳಿದ್ದೇನೆ.

  3. Girija K.P
    Nov 14, 2021 Reply

    ತಾವೋ ಲೇಖನ ನನಗೆ ತುಂಬಾ ಆಪ್ಯಾಯಮಾನವೆನಿಸಿತು… ಝೆನ್ ಕುರಿತಾಗಿಯೂ ತಿಳಿಯುವ ಕುತೂಹಲವಿದೆ. ಬಯಲಿನಲ್ಲಿ ಆ ಬಗೆಗೆ ಅಥೆಂಟಿಕ್ ಮಾಹಿತಿ ಸಿಗಬಹುದೆಂಬುದು ನನ್ನ ನಿರೀಕ್ಷೆ ಮತ್ತು ಕೋರಿಕೆ.

  4. ಬಸವರಾಜ ದಿಂಡೂರು
    Nov 14, 2021 Reply

    ಅಲ್ಲಮರಾದಿಯಾಗಿ ಶರಣರೂ ಬದುಕನ್ನು ಅದರ ಅಂತರಂಗ ಹೊಕ್ಕು ನೋಡಿದವರು. ತಾವೋ ಓದುತ್ತಿದ್ದರೆ ಅದು ಅನ್ಯ ತಾತ್ವಿಕ ವಿಚಾರ ಎಂದು ಅನಿಸುವುದೇ ಇಲ್ಲ. ಎಲ್ಲಾ ಕಾಲದಲ್ಲಿ ಎಲ್ಲಾ ಜಾಗಗಳಲ್ಲಿ ಅಲ್ಲಲ್ಲಿ ಇಂತಹ ಮಹಾನ್ ಚಿಂತಕರು ಹುಟ್ಟಿದ್ದು ಮನುಕುಲದ ಪುಣ್ಯ.

  5. Kavyashree
    Nov 15, 2021 Reply

    ದೇವರ ಪರಿಕಲ್ಪನೆ ಶೂನ್ಯವಿರುವ ತಾವೋ ತತ್ವದಲ್ಲಿ ಯಾವ ಉದ್ದೇಶಗಳೂ ಇರುವುದಿಲ್ಲ. ಅದೊಂದು ತಾನು ತಾನಾಗಿರುವಂತೆ ಕಲಿಸುವ ತಾತ್ವಿಕ ಚಿಂತನೆ. ಹಳದಿ ಹೂಗಳು ಲೇಖಕರನ್ನು ತಾವೋನ ಅನೂಹ್ಯ ಲೋಕಕ್ಕೆ ಕೊಂಡೊಯ್ಯುವ ಬಗೆ ವಿಶಿಷ್ಟವೆನಿಸಿತು.

  6. Tipperudrappa G
    Nov 15, 2021 Reply

    ಶೈವ ಮೂಲಕ್ಕೂ ತಾವೋನ ಶೂನ್ಯವಾದಕ್ಕೂ ಸಾಮ್ಯತೆಯನ್ನು ಗುರುತಿಸಿರುವ ಲಕ್ಷ್ಮೀಪತಿ ಶರಣರು ಆ ಚಿಂತನೆಗಳನ್ನು ವಿಸ್ತರಿಸಿ ವಿವರಿಸಿದ್ದರೆ ಚೆನ್ನಾಗಿತ್ತು. ತಾವೋದ ನಿರಪೇಕ್ಷತೆಯನ್ನು ಅಲ್ಲಲ್ಲಿ ಓದಿ ತಿಳಿದ ನನಗೆ ಅದನ್ನು ಮತ್ತಷ್ಟು ಆಳವಾಗಿ ಅಭ್ಯಸಿಸುವ ಬಯಕೆ ಇದೆ. ವಿಶೇಷ ಲೇಖನಗಳನ್ನು ತಂದುಕೊಡುವ ಬಯಲುಗೆ ನನ್ನ ಧನ್ಯವಾದ.

  7. Lingappa Hubli
    Nov 15, 2021 Reply

    ಬುದ್ಧ ಧರ್ಮದ ಒಂದು ಕವಲು ತಾವೋ ಎಂದು ಭಾವಿಸಿದ್ದೆ. ಚೀನಿಯರು ಈಗಲೂ ತಾವೋ ಎಂದರೆ ವಿಶೇಷ ಗೌರವಾದರ ತೋರಿಸುತ್ತಾರೆ. ಬಹುತೇಕ ಝೆನ್ ಮಾರಗವನ್ನೇ ತಾವೋ ಹೋಲುವುದರಿಂದ ನನಗೆ ಈ ಗೊಂದಲವಿತ್ತು. ಅನುಭಾವಿಕ ನೆಲೆಯಲ್ಲಿ ಮಾತ್ರವೇ ತಾವೋ ಎಟುಕಬಲ್ಲದು. ಅದು ಜ್ಞಾನದ, ತರ್ಕದ ಚಮತ್ಕಾರವಂತೂ ಅಲ್ಲವೇ ಅಲ್ಲ.

  8. ರವೀಂದ್ರ, ಬೆಂಗಳೂರು
    Nov 16, 2021 Reply

    ತಾವೋದ ಮೂಲದ ನಿಗೂಢತೆ ಲೇಖಕರು ಬರೆದಂತೆ ಒಂದು ರೀತಿಯಲ್ಲಿ ಅಗಮ್ಯವಾಗಿಯೇ ಇದೆ. ಸನಾತನಕ್ಕೂ ಸನಾತನವಾದ ಅದರ ಹೆಜ್ಜೆಗಳು ಹೇಗೋ ಚೀನಾದ ಬುಡಕಟ್ಟು ಜನಾಂಗದಲ್ಲಿ ಉಳಿದು ಬಂದಿರುವ ಸಾಧ್ಯತೆ ಇದೆ. ತಾವೋ ಹೆಳುವುದೂ, ಝೆನ್ ಬಿಡಿಸಲು ಯತ್ನಿಸುವುದು, ಶೈವ ಮೂಲ ಗ್ರಹಿಕೆಗಳೂ ಎಲ್ಲವೂ ಒಂದಕ್ಕೊಂದು ಭಿನ್ನವಾಗಿಲ್ಲ.

  9. Udaykumar Hunsuru
    Nov 18, 2021 Reply

    ತಾವೋ ಒಂದು ನಿಗೂಢವಾದ ತಾತ್ವಿಕತೆ ಎಂದು ಹೇಳುವ ಲೇಖಕರು ಆ ನಿಗೂಢತೆಯನ್ನು ಬೇಧಿಸಿ ಅದರ ಒಳಗನ್ನು ಸೇರುವುದು ಹೇಗೆಂದು ತಿಳಿಸದೆ ಗೊಂದಲ ಹುಟ್ಟಿಸುತ್ತಾರೆ. ರಮ್ಯವಾದ ಪದಗಳಲ್ಲಿ ಅಮೂರ್ತವನ್ನು ತೋರಿಸುವ ಅವರ ಮಾತುಗಳು ಆಕರ್ಷಕವಾಗಿವೆ, ಕುತೂಹಲದಿಂದ ಓದಿಸಿಕೊಳ್ಳುತ್ತವೆ, ಆದರೆ ತಾವೋನನ್ನು ನಮ್ಮ ಎದೆಗೆ ಮುಟ್ಟಿಸಲು ಇಷ್ಟು ಮಾತ್ರ ಸಾಲುವುದಿಲ್ಲ, ಅಲ್ಲವೇ?

  10. Sharada A.M
    Nov 20, 2021 Reply

    ‘ದಾವ್-ದ-ಜಿಂಗ್- ಐದು ಸಾವಿರ ಚಿತ್ರಕಲೆಗಳ ಪುಸ್ತಕವನ್ನು ಲಾ-ಓತ್ಸು ಬರೆದನೆಂದು ಹೇಳಿದ್ದಾರೆ. ಆ ಪುಸ್ತಕ ಈಗಲೂ ಲಭ್ಯವೇ? ದಯವಿಟ್ಟು ತಿಳಿಸಿರಿ. ಲೇಖನ ತುಂಬಾ ಚೆನ್ನಾಗಿದೆ ಸರ್.

  11. Channabasavappa
    Nov 20, 2021 Reply

    ಪ್ರಕೃತಿಯ ಮಡಿಲಲ್ಲಿ ಅರಳಿದ ತತ್ವ ತಾವೋ ಎಂದು ತಿಳಿದುಕೊಂಡೆ. ಝೆನ್ ಗಿಂತಲೂ ತಾವೋನೇ ನಿಸರ್ಗಬದ್ಧ ಬದುಕಿಗೆ ಹೆಚ್ಚು ಹತ್ತಿರ ಎಂದಿದ್ದೀರಿ, ಅದ್ಹೇಗೆ? ಝೆನ್ ನಮ್ಮನ್ನು ನಮಗೆ ಪರಿಚಯಿಸುವ ಅದ್ಭುತ ಮಾರ್ಗ, ಅಲ್ಲವೇ?

  12. Lalithamma
    Nov 25, 2021 Reply

    ನಿಗೂಢವಾಗಿಸುವಲ್ಲಿಯೇ ಬಯಲಾಗಿಸುವಂತಹ ತಾವೋ ಸಿದ್ದಾಂತವನ್ನು ಶ್ರೀಯುತ ಲಕ್ಷ್ಮೀಪತಿ ಕೋಲಾರ ಅವರು ಅದೇ ಭಾಷೆಯಲ್ಲಿ ಬರೆದಿದ್ದಾರೆ. ಮನುಷ್ಯನ ಹುಡುಕಾಟ, ಅವನ ಮಿತಿ, ಅವನ ಛಲ, ಅಸಹಾಯಕತೆಗಳೆಲ್ಲವೂ ತತ್ವಜ್ಞಾನದ ಆಂತರ್ಯದಲ್ಲಿ ಕಾಣಿಸುತ್ತವೆ. ಆದಿ ಕಾಲದ ಮಾನವನ ಇಂತಹ ಕುತೂಹಲವನ್ನು ತಾವೋನಲ್ಲಿ ಕಾಣುತ್ತೇವೆ. ಲೇಖನ ಚೆನ್ನಾಗಿದೆ.

  13. Chandrashekhar.K.P
    Nov 25, 2021 Reply

    Thank you for the efforts you have put in penning this blog. I really enjoy reading your articles.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನನ್ನೊಳಗಿನ ನೀನು
ನನ್ನೊಳಗಿನ ನೀನು
April 29, 2018
ಆ ದಾರಿಯೇನು ಕುರುಡೇ…
ಆ ದಾರಿಯೇನು ಕುರುಡೇ…
June 5, 2021
ಲಿಂಗಾಯತರ ಅವೈದಿಕ ನಂಬಿಕೆಗಳು
ಲಿಂಗಾಯತರ ಅವೈದಿಕ ನಂಬಿಕೆಗಳು
April 29, 2018
ಬಿಟ್ಟು ಹೋದ ಬಸವಣ್ಣ
ಬಿಟ್ಟು ಹೋದ ಬಸವಣ್ಣ
April 29, 2018
ಅಬದ್ಧ ಆರ್ಥಿಕತೆ
ಅಬದ್ಧ ಆರ್ಥಿಕತೆ
March 5, 2019
ನಾನೆಲ್ಲಿ ಇದ್ದೆ?
ನಾನೆಲ್ಲಿ ಇದ್ದೆ?
April 29, 2018
ಅನುಪಮ ಯೋಗಿ ಅನಿಮಿಷ
ಅನುಪಮ ಯೋಗಿ ಅನಿಮಿಷ
May 6, 2020
ದೇವರು: ಶರಣರು ಕಂಡಂತೆ
ದೇವರು: ಶರಣರು ಕಂಡಂತೆ
April 29, 2018
ಆ ಬಿರುಗಾಳಿ ಹುಟ್ಟಲೊಡನೆ…
ಆ ಬಿರುಗಾಳಿ ಹುಟ್ಟಲೊಡನೆ…
January 8, 2023
ಅಷ್ಟಾವರಣವೆಂಬ ಭಕ್ತಿ ಸಾಧನ
ಅಷ್ಟಾವರಣವೆಂಬ ಭಕ್ತಿ ಸಾಧನ
August 6, 2022
Copyright © 2023 Bayalu