Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹರನು ಮೂಲಿಗನಾಗಿ…
Share:
Articles March 5, 2019 ಕೆ.ಆರ್ ಮಂಗಳಾ

ಹರನು ಮೂಲಿಗನಾಗಿ…

ಶಿವ ಶಿವಾ ಬಸವಾ… ನಮ್ಮಪ್ಪ ಕಾಪಾಡು ತಂದೆ…

ಕರಡಿಗೆಯನ್ನು ಹಣೆಗೊತ್ತಿಕೊಳ್ಳುತ್ತಾ ಅಮ್ಮ ನೆನೆಯುತ್ತಿದ್ದ ಶಿವ-ಬಸವ ನಾಮವು ನಸುಕಿನಲ್ಲೇ ನನ್ನ ಕಿವಿಗೆ ಬೀಳುತ್ತಿದ್ದ ಮೊದಲ ಶಬ್ದ. ಕಾಲಕ್ರಮೇಣ ಯಾವಾಗಲೋ ಅದು ನನ್ನ ನಾಲಿಗೆಯನ್ನೂ ಸೇರಿಕೊಂಡಿತ್ತು. ಶಿವ ಎಂದರೆ ಮಂಗಳ, ಶುಭ, ಕಲ್ಯಾಣ ಎಂದು ಶಾಲೆಯಲ್ಲಿ ಓದಿದ ನೆನಪು. ಹುಚ್ಚು ಭಕ್ತಿ ಎನಿಸುವ ಶಿವನ ಕಥೆಗಳು ಬಾಲ್ಯದಲ್ಲಿ ಕುತೂಹಲ ಹುಟ್ಟಿಸುತ್ತಿದ್ದವು. ಆಕಾಶವನ್ನೇ ಹೊದ್ದಂತಿದ್ದ ಶಿವನ ಭಾವಚಿತ್ರಗಳಲ್ಲಿ ಎಂಥದೋ ಆಕರ್ಷಣೆ. ಯಾವುದೋ ನಿಗೂಢತೆ. ಅದರಲ್ಲೂ ಧ್ಯಾನಸ್ಥ ಶಿವನ ಚಿತ್ರ ಒಂದು ವಿಸ್ಮಯವಾಗಿ ಕಾಡುತ್ತಿತ್ತು. ಸಂಸಾರಿ ಶಿವ ಅದೇಕೆ ಸದಾ ಧ್ಯಾನಮಗ್ನ? ಆತ ತಪಸ್ವಿಯೇ? ಯೋಗಿಯೇ? ದೇವನೇ?… ಅಸಲಿಗೆ ಶಿವ ಯಾರು?

ನಮ್ಮ ದೇಶದ ಮೂಲೆ ಮೂಲೆಯಲ್ಲೂ ಶಿವನ ಹೆಸರು ಅಜರಾಮರ. ಶಿವಾಲಯಗಳಿಲ್ಲದ ಊರೇ ಇಲ್ಲವೇನೋ!  ಶಿವನ ದೊಡ್ಡ ಪರಂಪರೆಯೇ ಈ ನೆಲದಲ್ಲಿ ಆಗಿಹೋಗಿದೆ. ಹೀಗಿದ್ದಾಗ್ಯೂ ಶಿವನ ಮೂಲ ಹುಡುಕುವುದು ಸುಲಭವಲ್ಲ. ಇಂತಿಷ್ಟೇ ಸಾವಿರ ವರ್ಷಗಳ ಹಿಂದೆ ಶಿವ ಸಂಸ್ಕೃತಿ ಆರಂಭವಾಯಿತೆಂದು ನಿಖರವಾಗಿ ಹೇಳಲಾಗದು. ಅಲ್ಲದೆ ಶಿವನೊಂದಿಗೆ ತಳುಕು ಹಾಕಿಕೊಂಡ ನಾನಾ ಹೆಸರುಗಳು ಮತ್ತಷ್ಟು ದಾರಿ ತಪ್ಪಿಸುತ್ತವೆ. ತ್ರಿಮೂರ್ತಿಗಳಲ್ಲಿ ಒಬ್ಬನನ್ನಾಗಿ ಶಿವನನ್ನು ಆರಾಧಿಸುವ ಭಕ್ತರು ಒಂದು ಕಡೆ. ಈ ಪುರಾಣಗಳ ಗೋಜಲುಗಳಲ್ಲಿ ಇತಿಹಾಸದ ಶಿವ ಹುದುಗಿ ಹೋಗಿದ್ದಾನೆಂದು ಅದರಾಚೆ ಅವನನ್ನು ಅರಸುವವರು ಮತ್ತೊಂದು ಕಡೆ.

ಇತಿಹಾಸದ ಹೆಜ್ಜೆಗಳಲ್ಲಿ ಶಿವನ ಮೊದಲ ಗುರುತನ್ನು ತೋರಿಸಿದ್ದು ಸಿಂಧೂ ನದಿಯ ನಾಗರಿಕತೆ. ಅಂದರೆ ವೇದಗಳ ಕಾಲಕ್ಕೂ ಹಿಂದೆ. ಆಕಸ್ಮಿಕವಾಗಿ 1920ರಲ್ಲಿ ದೊರೆತ ಹರಪ್ಪ-ಮೊಹೆಂಜೊದಾರೊ ನಾಗರಿಕತೆಯ ಕುರುಹುಗಳು ಶಿವ ಸಂಸ್ಕೃತಿಯ ಇತಿಹಾಸವನ್ನು 7000 ವರ್ಷಗಳಿಗೂ ಬಹಳ ಹಿಂದಕ್ಕೆ ಒಯ್ದವು. ಅಲ್ಲಿ ಸಿಕ್ಕ ಮೊಹರುಗಳಲ್ಲಿ ಯೋಗಮುದ್ರೆಯ ಪಶುಪತಿ ಎಲ್ಲರ ಗಮನ ಸೆಳೆದಿತ್ತು. ಆ ಉತ್ಖನನದ ಮುಂದಾಳತ್ವ ವಹಿಸಿದ್ದ ಪುರಾತತ್ವ ಶಾಸ್ತ್ರಜ್ಞರಾದ ಜಾನ್ ಮಾರ್ಶಲ್, ಪಶುಪತಿ ಮೊಹರಿನ ಸಂಪೂರ್ಣ ಅಧ್ಯಯನ ನಡೆಸಿ, “ಧ್ಯಾನಸ್ಥನಾಗಿ ಯೋಗ ಮುದ್ರೆಯಲ್ಲಿ ಕುಳಿತ ಆಧುನಿಕ ಪರಿಕಲ್ಪನೆಯ ಶಿವನ ಚಿತ್ರಕ್ಕೆ ಹರಪ್ಪ ನಾಗರಿಕತೆಯ ಉತ್ಖನನದಲ್ಲಿ ಸಿಕ್ಕ ಪಶುಪತಿ ಮುದ್ರೆಯೇ ಮೂಲ ಮಾದರಿ” ಎಂದು ಹೇಳುತ್ತಾರೆ. ಆ ಮೂಲಕ ಇಡೀ ಜಗತ್ತಿನಲ್ಲೇ ಬಹು ದೀರ್ಘ ಕಾಲದಿಂದ ಜೀವಂತವಾಗಿರುವ ನಂಬಿಕೆಯು ಶಿವ ಸಂಸ್ಕೃತಿಯೆಂದು ಸಾಬೀತಾಯಿತು. ಮೊಹರಲ್ಲಿರುವ ಪಶುಪತಿಯು ಮೂಲಬಂಧಾಸನ ಭಂಗಿಯಲ್ಲಿದ್ದು, ಆ ಭಂಗಿಯಲ್ಲಿ ಕೂರುವುದು ವಿದೇಶಿಯರಿಗೆ ಅಸಾಧ್ಯ. ಅಲ್ಲದೆ ಇದೇ ಜಾಗದಲ್ಲಿ ದೊರೆತ ಇತರೆ ಮುದ್ರೆಗಳ ಭಂಗಿಗಳಲ್ಲಿಯೂ ಯೋಗದ ಛಾಯೆ ದಟ್ಟವಾಗಿದ್ದು ಹರಪ್ಪ ಜನರು ಯೋಗ ಬಲ್ಲವರಾಗಿದ್ದರೆಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಶಾಂತಿಪ್ರಿಯರಾಗಿದ್ದ ಆ ಜನ ಪ್ರಬುದ್ಧರೂ, ಪ್ರಗತಿಪರರೂ ಆಗಿದ್ದರು ಎಂದು ಸಾಕ್ಷ್ಯಗಳು ತೋರಿಸಿಕೊಟ್ಟಿವೆ. ಇಡೀ ಹರಪ್ಪಾ ನಾಗರಿಕತೆಯ ಜಾಗದಲ್ಲಿ ಎಲ್ಲಿಯೂ ಯುದ್ಧಕ್ಕೆ ಬಳಸಬಹುದಾದ ಒಂದಾದರೂ ಆಯುಧ ದೊರೆತಿಲ್ಲ.

ದ್ರಾವಿಡ ಜನಾಂಗದ ನಾಯಕನಾಗಿದ್ದನೆಂದು ನಂಬಲಾಗುವ ಶಿವ ಅದ್ಹೇಗೆ ಅಲ್ಲಿ ಉತ್ತರದ ಹರಪ್ಪಾದಲ್ಲಿ? ಹರ ಮತ್ತು ಶಿವ ಒಬ್ಬನೇ ವ್ಯಕ್ತಿಯನ್ನು ಸೂಚಿಸುತ್ತವೆಯೇ?… ಎಂಬ ಪ್ರಶ್ನೆಗಳು ಹಾಗೇ ಉಳಿದಿದ್ದವು. ಇತ್ತೀಚೆಗೆ ಹರಪ್ಪಾ ನಾಗರಿಕತೆಗೆ ಸೇರಿದ ರಾಖ್ಹಿಗರಿಯಲ್ಲಿ ದೊರೆತ ಡಿಎನ್ಎ ವಂಶವಾಹಿಯ ಪರೀಕ್ಷೆ ಈ ದಿಕ್ಕಲ್ಲಿ ಬೆಳಕು ಚೆಲ್ಲಬಹುದಾದ ಕುತೂಹಲಕಾರಿಯಾದ ಸಂಗತಿಯನ್ನು ಹೊರಗೆಡವಿದೆ. ಇವತ್ತು ಪಶ್ಚಿಮ ಘಟ್ಟಗಳ ದಕ್ಷಿಣಕ್ಕೆ ತಮಿಳುನಾಡಿನ ನೀಲಗಿರಿ ಬೆಟ್ಟ ಅರಣ್ಯಗಳಲ್ಲಿ ನೆಲೆಸಿರುವ ಆದಿವಾಸಿ ಇರುಳರು ಮತ್ತು ಸಿಂಧೂ ನಾಗರಿಕತೆಯ ಜನರು ಒಂದೇ ವಂಶದವರೆಂಬ ಮಾಹಿತಿಯನ್ನು ವಂಶವಾಹಿ ಸಂಶೋಧನೆ ಕಂಡುಹಿಡಿದಿದೆ. ಅಲ್ಲಿಗೆ ಹರಪ್ಪ ಜನರು ದ್ರಾವಿಡ ಭಾಷಿಕರಾದ ‘ಆದಿಯ ದಕ್ಷಿಣ ಭಾರತೀಯರು’ ಎಂಬುದು ಸಾಬೀತಾದಂತಾಯಿತು. ಅಂದರೆ ಸುಮಾರು ಕ್ರಿ.ಪೂ 10000 ವರ್ಷಗಳ ಹಿಂದೆ ದ್ರಾವಿಡ ಭಾಷಿಕರು ಭಾರತದ ವಾಯುವ್ಯ ಪ್ರದೇಶದಲ್ಲಿ ನಗರ ಸಂಸ್ಕೃತಿಗೆ ಅಡಿಪಾಯ ಹಾಕಿದ್ದರು.

ಹರಪ್ಪ ನಾಗರಿಕತೆಯ ಕಾಲದಲ್ಲಿ ಶಿವ ಸಂಸ್ಕೃತಿ ಎಷ್ಟರಮಟ್ಟಿಗೆ ಬೇರು ಬಿಟ್ಟಿತ್ತೆಂದರೆ ನಂತರದಲ್ಲಿ ಬಂದ ಆರ್ಯರಿಗೆ ಅದನ್ನು ನಿರ್ಲಕ್ಷಿಸುವುದಾಗಲಿ, ನಿರ್ನಾಮ ಮಾಡುವುದಾಗಲಿ ಸಾಧ್ಯವಾಗಲಿಲ್ಲ. ಶಿವ ಸಂಸ್ಕೃತಿಯ ಅನೇಕ ಅಂಶಗಳನ್ನು ಅವರು ಅಂಗೀಕರಿಸಿಕೊಂಡರು. ವೇದಗಳಲ್ಲಿ ಶಿವನ ಪ್ರಸ್ತಾಪವೇ ಇಲ್ಲ. ಆದರೆ ವೇದಗಳಲ್ಲಿನ ಒಬ್ಬ ದೇವತೆಯಾದ ರುದ್ರನನ್ನೇ ಶಿವನೆಂದು ಕರೆಯತೊಡಗಿದರು. “ಶಿವ ದ್ರಾವಿಡ ಭಾಷಾ ಮೂಲದ ಹೆಸರು. ರುದ್ರ ಎಂಬುದು ಆರ್ಯ ಭಾಷಾ ಮೂಲದ ಹೆಸರು. ರುದ್ರನಿಗೂ ಶಿವನಿಗೂ ಯಾವುದೇ ಸಂಬಂಧವಿಲ್ಲ. ರುದ್ರ ಯಜ್ಞ ದೇವತೆ. ಶಿವ ಯಜ್ಞ ವಿರೋಧಿ. ಇವರಿಬ್ಬರನ್ನು ಹೇಗೆ ಏಕೀಕರಿಸುತ್ತೀರಿ?” ಎನ್ನುತ್ತಾರೆ ಶಿವಸಂಸ್ಕೃತಿಯ ಅನ್ವೇಷಕರಾದ ಲಕ್ಷ್ಮೀಪತಿ ಕೋಲಾರ. ಇತ್ತ ಶಿವಸಂಸ್ಕೃತಿಯ ಬೇರುಗಳನ್ನು ಕಿತ್ತಲಾಗದೇ ಅತ್ತ ವೇದದ ಕರ್ಮಕಾಂಡಗಳಿಗೆ ವಿರುದ್ಧವಾದ ಶಿವತತ್ವವನ್ನು ಒಪ್ಪಲೂ ಆಗದೆ ಶಿವ ಸಂಸ್ಕೃತಿಯನ್ನು ಪುರಾಣೀಕರಿಸಲಾಯಿತು.

ಬಹುಸಂಖ್ಯಾತರಾದ ಅವೈದಿಕರಲ್ಲಿ ಶಿವ ಸಂಸ್ಕೃತಿ ಪ್ರಬಲವಾಗಿತ್ತು. ಕಾಪಾಲಿಕ, ಕಾಳಾಮುಖ ಮತ್ತು ಬಹುಶಃ ಅಜೀವಿಕ ಪಂಥ ಕೂಡ ಇದರ ಶಾಖೆಗಳಾಗಿ ಬೆಳೆದಿದ್ದವು. ಇದರ ಅತ್ಯಂತ ಪುರಾತನ ಮತ್ತು ರಹಸ್ಯಾತ್ಮಕ ಪಂಥಗಳಲ್ಲಿ ಒಂದಾದ ಪಾಶುಪತದ ಬಗೆಗೆ ಮಹಾಭಾರತದಲ್ಲಿ ಉಲ್ಲೇಖ ಬರುತ್ತದೆ. ಮಹಾಕಾವ್ಯಗಳ ಕಾಲದ ಹೊತ್ತಿಗೆ ಶಿವ ಒಬ್ಬ ದೇವತೆಯಾದ. ಅಧಿಕೃತ ಐತಿಹಾಸಿಕ ದಾಖಲೆಯಾಗಿ ಮೆಗಾಸ್ತನೀಸನ ಇಂಡಿಕಾದಲ್ಲಿ ಶಿವನ ಉಲ್ಲೇಖವಿದೆ. ಪತಂಜಲಿಯ ಯೋಗ ಸೂತ್ರ, ಪಾಣಿನಿಯ ಅಷ್ಟಾಧ್ಯಾಯ, ಕಣಾದ ಇವರೆಲ್ಲ ಶಿವ ಸಂಸ್ಕೃತಿಯ ಅನುಯಾಯಿಗಳಾಗಿದ್ದವರು. ಕ್ರಿ.ಪೂರ್ವದಲ್ಲಿದ್ದ ಲಕುಲೀಶ ಶಿವ ಸಂಸ್ಕೃತಿಯನ್ನು ಮತ್ತಷ್ಟು ವ್ಯಾಪಕಗೊಳಿಸಿದ. ಗುಪ್ತರ ಕಾಲಕ್ಕಾಗಲೇ ಈ ಸಂಸ್ಕೃತಿಯು ಶೈವದ ರೂಪ ಪಡೆದಿತ್ತು. ಶಿವ ದೈವವಾಗಿ ಪೂಜೆಗೊಳ್ಳುತ್ತಿದ್ದ. ಭರತ ಖಂಡಕ್ಕೆ ಬಂದ ವಿದೇಶಿ ಮೂಲದ ಶಾಕರು, ಫಾಲವರು, ಕುಶಾನರು ಶಿವನ ಭಕ್ತರಾಗಿದ್ದರು. ಆಗಮಗಳು, ತಂತ್ರಗಳು, ಪುರಾಣಗಳು ಶಿವನ ಸುತ್ತ ಸೃಷ್ಟಿಯಾದವು. ದಕ್ಷಿಣದಲ್ಲೂ ಚೋಳರು, ಚಾಲುಕ್ಯರು, ಪಲ್ಲವರು ಶಿವ ದೇವಾಲಯಗಳನ್ನು ಕಟ್ಟಿದರು.

ಪ್ರಾಚೀನ ಇತಿಹಾಸದ ಇಲ್ಲಿಯ ನೆಲ ಮೂಲದ ಪ್ರಬಲ ಸಂಸ್ಕೃತಿಯೊಂದು ಹೀಗೆ ಪುರಾಣಗಳಲ್ಲಿ, ಮಹಾಕಾವ್ಯಗಳಲ್ಲಿ ಕಥೆ ಹಾಗೂ ಪವಾಡಗಳ ರೂಪದಲ್ಲಿ ಸೇರಿಹೋಗಿ ಅದರ ಇಡೀ ಅಸ್ತಿತ್ವವೇ ಬದಲಾಯಿತು. ಮುಕ್ತ ರೂಪದ ಶಿವ ಸಂಸ್ಕೃತಿಯು ಶೈವ ಧರ್ಮವಾಯಿತು. ಇಲ್ಲಿ ಪ್ರಧಾನವಾಗಿ ಎರಡು ಪ್ರವಾಹಗಳನ್ನು ಗುರುತಿಸಬಹುದು. ವೇದಗಳ ಪೋಷಣೆಯಲ್ಲಿ ಬೆಳೆದ ಶೈವವು ಆಗಮ ಪುರಾಣಗಳ ಮೂಲಕ ಒಂದು ದಿಕ್ಕಿನಲ್ಲಿ ಬೆಳೆಯಿತು, ಇದಕ್ಕೆ ‘ಆಗಮಿಕ ಶೈವ’ ಎನ್ನುತ್ತಾರೆ. ಆಗಮಿಕ ಶೈವದ ಉಪ ವಿಭಾಗಗಳಾಗಿ ಕಾಣಿಸಿಕೊಂಡಂಥವು- ಸಂಸ್ಕೃತ ಶೈವ, ಕಾಶ್ಮೀರ ಶೈವ, ವೀರಶೈವ ಇತ್ಯಾದಿ. ಇನ್ನೊಂದು ಕಡೆ ವೇದ ಪೂರ್ವದ ಶಿವ ಸಂಸ್ಕೃತಿಯು ‘ಪಾಶುಪತ ಶೈವ’ದ ರೂಪ ತಾಳಿತು. ಪಾಶುಪತದ ಉಪವಿಭಾಗಗಳು- ಕಾಪಾಲಿಕ, ನಾಥಪಂಥ, ಗೋರಖ ಪಂಥ ಇತ್ಯಾದಿ .

ಶಿವ ಸಂಸ್ಕೃತಿ ಯಾವುದು?

ಮೊಟ್ಟಮೊದಲ ಬಾರಿಗೆ ಮನಶ್ಶಾಸ್ತ್ರದೊಂದಿಗೆ ಶಾರೀರಿಕ ಶಕ್ತಿನೆಲೆಗಳ ಮೇಲೆ ಪ್ರಯೋಗಗಳನ್ನು ನಡೆಸಿ, ದೇಹ-ಮನಗಳ ಸಂಕೀರ್ಣತೆಯನ್ನು, ಸುಪ್ತ ಶಕ್ತಿಯನ್ನು, ವ್ಯಾಪ್ತಿಯನ್ನು ಆವಿಷ್ಕರಿಸಿಕೊಂಡದ್ದು ಶಿವ ಸಂಸ್ಕೃತಿ. ಇದರ ಉಗಮ ಕಾಲವನ್ನು ನಿಖರವಾಗಿ ಹೇಳುವ ದಾಖಲೆಗಳಾಗಲಿ, ಕುರುಹುಗಳಾಗಲಿ ಸಿಕ್ಕಿಲ್ಲ. ಆದರೆ ಇದರ ಮೂಲಚಹರೆಗಳು ಅರ್ಥವ್ಯಾಪ್ತಿಯಲ್ಲಿ ವಿಕಾಸಗೊಳ್ಳುತ್ತಾ ಸಾಗಿರುವುದಂತೂ ಸತ್ಯ.

ಶಿವ ಒಬ್ಬ ಯೋಗಿ, ಆದಿಯೋಗಿ, ಆದಿಗುರು ಎಂದು ಹೇಳಿಕೊಂಡು ಬರಲಾಗಿದೆ. ಇದಕ್ಕೆ ನಂಬಬಹುದಾದ ಯಾವ ಐತಿಹಾಸಿಕ ದಾಖಲೆಗಳೂ ದೊರೆತಿಲ್ಲ. ಶಿವ ಪೌರಾಣಿಕ ಪುರುಷನೂ ಅಲ್ಲ, ಐತಿಹಾಸಿಕ ವ್ಯಕ್ತಿಯೂ ಅಲ್ಲ. ಅದೊಂದು ಶುದ್ಧ ತಾತ್ವಿಕ ಪರಿಕಲ್ಪನೆ. ಶಿವ ಪದದ ಅಕ್ಷರಶಃ ಅರ್ಥ- ಯಾವುದು ಇಲ್ಲವೋ ಅದು- ಅಂದರೆ ಶೂನ್ಯ. ಸೃಷ್ಟಿಯೊಂದಿಗೆ ಅದರ ಅಸ್ತಿತ್ವ ಶುರುವಾದದ್ದಲ್ಲ, ಬದಲಿಗೆ ಸೃಷ್ಟಿಗೂ ಮುನ್ನವೇ ಇದ್ದ ಅನಾದಿ ತತ್ವ. ಸಮಸ್ತ ಅಸ್ತಿತ್ವದ ಆಧಾರ ಮತ್ತು ಇಡೀ ಬ್ರಹ್ಮಾಂಡದ ಮೂಲಗುಣ, ಅನಂತ ಶೂನ್ಯ. ಏನೂ ಏನೂ ಇಲ್ಲದ ಶೂನ್ಯವೇ ಸೃಷ್ಟಿಯ ಒಡಲೂ ಹೌದು ಮತ್ತು ಎಲ್ಲವನ್ನೂ ತನ್ನೊಳಗೆ ಸೆಳೆದುಕೊಳ್ಳುವ ವಿಸ್ಮೃತಿಯೂ ಹೌದು. ಶಿವ ಅಸ್ತಿತ್ವದಲ್ಲಿಲ್ಲದ ಶೂನ್ಯ!- ಇವು ಶಿವ ಸಂಸ್ಕೃತಿಯ ಮೂಲ ನಂಬಿಕೆಗಳು. ಶಿವಸೂತ್ರಗಳಲ್ಲಿ ಇವುಗಳ ಬಗೆಗೆ ಮಾಹಿತಿ ಸಿಗುತ್ತದೆ. ವೇದ ಮಾರ್ಗಗಳಿಂದ ದೂರ ಉಳಿದು, ಅಲ್ಲಲ್ಲಿ ಚದುರಿ ಹೋಗಿದ್ದ ಶಿವಸೂತ್ರಗಳನ್ನು ವಸುಗುಪ್ತನು 10ನೆಯ ಶತಮಾನದಲ್ಲಿ ಸಂಗ್ರಹಿಸಿದನೆಂದು, ಅದು ಕಾಶ್ಮೀರ ಶೈವದ ಆಧ್ಯಾತ್ಮಿಕ ಮಾರ್ಗಕ್ಕೆ ಅಡಿಪಾಯ ಹಾಕಿತೆಂದು ತಿಳಿದುಬರುತ್ತದೆ. ಶಿವ ಪ್ರತಿಯೊಬ್ಬರಲ್ಲೂ, ಪ್ರತಿಯೊಂದರಲ್ಲೂ ಅಂತರ್ಯಾಮಿಯಾಗಿರುವ ಶಕ್ತಿ. ಈ ಲೋಕದ ಪ್ರತಿ ಕಣದ ಚೇತನ. ಜೀವ, ಜೀವನ, ಜಗತ್ತು ಮತ್ತು ಶಿವನ ನಡುವೆ ಯಾವ ಅಂತರವೂ ಇಲ್ಲ. ಅದು ಶುದ್ಧ ಶೂನ್ಯ ತತ್ವ.

ಶಿವ ಪರಂಪರೆಯು ಹಲವಾರು ಸಾಧಕರನ್ನು ಕಂಡಿದೆ, ಅವರೆಲ್ಲಾ ಶಿವನೆಂದೇ ಖ್ಯಾತರಾದವರು. ಬುದ್ಧತ್ವ ಪಡೆದವರೆಲ್ಲ (ಬುದ್ಧ ಅಂದರೆ ಪರಮ ಜ್ಞಾನಿ) ಹೇಗೆ ಬುದ್ಧರಾಗುವರೋ ಹಾಗೆ ಶಿವತ್ವ ಸಾಧಿಸಿದವರು ಶಿವನೆಂದೇ ಹೆಸರಾಗಿರಬೇಕು. ಹಾಗೆ ಮೊದಲು ಶಿವನಾದವನು ಹರ. ಈ ಅಂಶಗಳು ವಚನಗಳಲ್ಲಿ ಅಲ್ಲಲ್ಲಿ ಉಲ್ಲೇಖವಾಗಿವೆ. ಈ ದಿಶೆಯಲ್ಲಿ ಮತ್ತಷ್ಟು ಹುಡುಕಾಟಗಳು ನಡೆಯಬೇಕಿದೆ.

ಹರನು ಮೂಲಿಗನಾಗಿ, ಪುರಾತರೊಳಗಾಗಿ,
ಬಳಿಬಳಿಯಲು ಬಂದ ಮಾದಾರನ ಮಗ ನಾನಯ್ಯಾ.
ಕಳೆದ ಹೊಲೆಯನೆಮ್ಮಯ್ಯ, ಜಾತಿಸೂತಕ.
ಮಾದಾರನ ಮಗ ನಾನಯ್ಯಾ.
ಪನ್ನಗಭೂಷಣ ಕೂಡಲಸಂಗಯ್ಯಾ,
ಚೆನ್ನಯ್ಯನೆನ್ನ ಮುತ್ತಯ್ಯನಜ್ಜನಪ್ಪನಯ್ಯಾ. 

ಹರನು ಮೂಲಪುರುಷನಾಗಿ ಪುರಾತರ ವಂಶಪರಂಪರೆಯಲ್ಲಿ ಬಂದ ಮಾದಾರನ ಮಗ ತಾವೆಂದು ಬಸವಣ್ಣನವರು ಹೇಳಿಕೊಂಡಿದ್ದಾರೆ. ಜಾತಿಸೂತಕವನ್ನು ಕಳೆದ ನನ್ನ ತಂದೆ ಮಾದಾರ. ಚನ್ನಯ್ಯನು ನನ್ನ ಮುತ್ತಯ್ಯನ ಅಜ್ಜನ ಅಪ್ಪ ಎಂದು ಅವರು ತಮ್ಮ ವಂಶವಾಹಿನಿಯನ್ನು ಗುರುತಿಸಿಕೊಳ್ಳುವ ಬಗೆ ವಿಶಿಷ್ವವಾಗಿದೆ. ವೈದಿಕದ ನಂಟಿಲ್ಲದ ಹರನ ಕುಲದವರು ತಾವೆಂಬ ಅಭಿಮಾನದ ಭಾವವನ್ನು ಇಲ್ಲಿ ಕಾಣಬಹುದು. ಆ ಮೂಲಕ ಇಲ್ಲಿ ಹರನು ಕೆಳಸ್ತರದವರ ಮೂಲಪುರುಷ ಎಂಬ ಅಂಶವನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಇನ್ನೊಂದು ಕಡೆ ವಚನದಲ್ಲಿ ಬಸವಣ್ಣನವರು, “ಹರಬೀಜನಾದಡೆ ಹಂದೆ ತಾನಪ್ಪನೆ?” ಎಂದು ಕೇಳುವಾಗ ಹರನ ಸಂತಾನದವರು ಹೇಡಿಗಳಲ್ಲ ಎನ್ನುವ ಸೂಚನೆಯೂ ಸಿಗುತ್ತದೆ.

ಶಿವನ ಬೇರೆ ಬೇರೆ ಹೆಸರುಗಳೆಂದು ಇಂದಿನ ತನಕ ನಂಬಿಕೊಂಡು ಬರಲಾಗಿರುವವರೆಲ್ಲ ಶೂನ್ಯ ತತ್ವದ ಶಿವ ಸಂಸ್ಕೃತಿಯ ಸಾಧಕರಿರಬೇಕು. ಅವರೆಲ್ಲರನ್ನು ಗಣೇಶ್ವರರೆಂದು ವಚನಕಾರರು ಗುರುತಿಸಿದ್ದಾರೆ: ಅಲ್ಲಮಪ್ರಭುದೇವರ ವಚನ:

ರುದ್ರನೆಂಬಾತನೊಬ್ಬ ಗಣೇಶ್ವರನು, ಭದ್ರನೆಂಬಾತನೊಬ್ಬ ಗಣೇಶ್ವರನು.
ಶಂಕರನೆಂಬಾತನೊಬ್ಬ ಗಣೇಶ್ವರನು, ಶಶಿಧರನೆಂಬಾತನೊಬ್ಬ ಗಣೇಶ್ವರನು.
ಪೃಥ್ವಿಯೆ ಪೀಠ ಆಕಾಶವೆ ಲಿಂಗ_ಅಂತಹ ಆತನೊಬ್ಬ ಗಣೇಶ್ವರನು.
ಬಲ್ಲಾಳನ ವಧುವ ಬೇಡಿದಾತನೊಬ್ಬ ಗಣೇಶ್ವರನು.
ಸಿರಿಯಾಳನ ಮಗನ ಭಿಕ್ಷವ ಬೇಡಿದಾತನೊಬ್ಬ ಗಣೇಶ್ವರನು.
ಬ್ರಹ್ಮಕಪಾಲ ವಿಷ್ಣುಕಂಕಾಳವನಿಕ್ಕಿ ಆಡುವಲ್ಲಿ
ನೀಲಕಂಠನೆಂಬಾತನೊಬ್ಬ ಗಣೇಶ್ವರನು._
ಇವರೆಲ್ಲರು ನಮ್ಮ ಗುಹೇಶ್ವರಲಿಂಗದೊಳಡಗಿಪ್ಪರು.

ಇಲ್ಲಿ ಬರುವ ರುದ್ರ, ಭದ್ರ, ಶಂಕರ, ಶಶಿಧರ… ಎಲ್ಲರೂ ಬೇರೆ ಬೇರೆ ಕಾಲಘಟ್ಟದವರು, ಶಿವತತ್ವ ಸಂಸ್ಕೃತಿಯ ಸಾಧಕರು. ಶೂನ್ಯತ್ವ ಸಾಧಿಸಿ ಶಿವನಾದವರು.

ಶರಣರ ಬಯಲು ರೂಪಿ ಶಿವ

ಶರಣರ ಶಿವ ಹೊರಗಿಲ್ಲ. ಅದು ತನ್ನೊಳಗಿನ ಆತ್ಮಾವಲೋಕನದ ಅರಿವಿನಲ್ಲಿ ಹೊಳೆಯುವ ಬೆರಗು. ಆ ಬೆರಗು ಹೊರಗೂ ಇದೆ, ಪ್ರತಿಯೊಂದರಲ್ಲಿ, ಪ್ರತಿಯೊಬ್ಬರಲ್ಲಿಯೂ ಇದೆ. ಆಗ ಶಿವ ಲೋಕವಾಗುತ್ತಾನೆ, ಅದರಾಚೆಯ ಸಮಸ್ತ ಸೃಷ್ಟಿಯನ್ನು ಹರಡಿಕೊಂಡು ಬಯಲ ರೂಪ ಪಡೆಯುತ್ತಾನೆ. ವಿಶ್ವಾತ್ಮಕ ನೆಲೆಯಲ್ಲಿ ಶಿವನನ್ನು ಪರಿಭಾವಿಸಿದ ಶರಣರು ಆ ವಿರಾಟ್ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ತಮ್ಮ ಪರಿಕಲ್ಪನೆಯನ್ನು ಉಳಿಸಿಕೊಂಡರು. ಅವರ ಅನುಭಾವದ ಕನ್ನಡಿಯಲ್ಲಿ ಎಲ್ಲವೂ ಪರಾಮರ್ಶೆಗೆ ಒಳಪಟ್ಟಿತು. ವೇದಸಮ್ಮತ ಮಾರ್ಗ ಹಿಡಿದ ಈಶ್ವರ, ಸದಾಶಿವ, ರುದ್ರಾಣಿ ಇತ್ಯಾದಿ ದೇವ ದೇವಿಗಳ ಪೂಜಾ-ಆರಾಧನಾ ವಿಧಿಗಳಿಂದ ತುಂಬಿಹೋದ ಶೈವದ ಬಲಪಂಥೀಯ ಧೋರಣೆಯನ್ನು ಶರಣರು ಖಂಡಿಸುತ್ತಾರೆ. ಅದೇ ರೀತಿ ಕಾಪಾಲಿಕ, ಕಾಳಾಮುಖಗಳ ಎಡಪಂಥೀಯ ಶೈವ ತಾಂತ್ರಿಕತೆಯು ಜಟಿಲ ಆಧ್ಯಾತ್ಮ ಸಾಧನೆಗಳನ್ನು, ಮಂತ್ರದೇವತೆಗಳನ್ನು ಒಳಗೊಂಡಿದ್ದು, ವ್ಯಕ್ತಿ ಮತ್ತು ಸಾಮಾಜಿಕ ವ್ಯವಸ್ಥೆಗೆ ಪೂರಕವಾದವುಗಳಲ್ಲವೆಂದು ಶರಣರು ಅವುಗಳನ್ನು ಮನ್ನಿಸುವುದಿಲ್ಲ. ಹೀಗೆ ಶೈವದ ಎಡ ಹಾಗೂ ಬಲ ಪಂಥದ ಧೋರಣೆಗಳೆರಡನ್ನೂ ಶರಣರು ತಿರಸ್ಕರಿಸಿದರು.

ಶರಣರ ಕಾಲದ ಹೊತ್ತಿಗೆ ಶಿವ ಸಂಸ್ಕೃತಿಯು ಸಂಪೂರ್ಣವಾಗಿ ತನ್ನ ಮೂಲಸ್ವರೂಪವನ್ನು ಕಳೆದುಕೊಂಡಿತ್ತು. ಶುದ್ಧ ತತ್ವವನ್ನು, ದಾರ್ಶನಿಕ ಬೆಳಗನ್ನು ಪುರಾಣಗಳು ಮುಚ್ಚಿ ಹಾಕಿದ್ದವು. ಶಿವರಹಸ್ಯ, ಲಿಂಗಪುರಾಣಗಳು ಸಂಸ್ಕೃತ ಪೌರಾಣಿಕ ಮಾರ್ಗದ ಕೃತಿಗಳು. ಇವುಗಳಲ್ಲಿ ಶಿವ ಒಬ್ಬ ವ್ಯಕ್ತಿ, ಭಕ್ತಿಗೆ ಸಿಗುವ ಭೌತಿಕ ಸತ್ಯ. ಅದೇ ನೆಲೆಯಲ್ಲಿ ಆತನನ್ನು ವೈಭವೀಕರಿಸುವ ಇಲ್ಲಿನ ಕಥೆಗಳು ಸಂಪ್ರದಾಯಕತೆಗಳಿಂದ ತುಂಬಿಹೋಗಿವೆ. ಶಿವನ ಮೂರ್ತ ಮತ್ತು ಅಮೂರ್ತದ ಆಯಾಮಗಳು ಶರಣರಲ್ಲಿ ತೀವ್ರ ಶೋಧನೆಗೆ ಒಳಗಾದವು. ಶರಣ ಚಳುವಳಿಯ ತಾತ್ವಿಕ ಗರ್ಭದಲ್ಲಿ ಪುರಾಣಗಳ ಕಲ್ಪನೆಗಳಿಗೆ ಆಸ್ಪದವಿರಲಿಲ್ಲ. ಜನರನ್ನು ದಿಕ್ಕುತಪ್ಪಿಸುವ ಹುಸಿ ಭಾವುಕ ಕಥನಗಳ ಬಾಲಿಶತನವನ್ನು ಅವರು ಖಂಡಿಸಿದರು. ಶರಣರಲ್ಲಿ ಶಿವನಾಗಲಿ, ಲಿಂಗವಾಗಲಿ ಭೌತಿಕ ನೆಲೆಯಲ್ಲಿ ಸಿಗುವ ಸತ್ಯಗಳಲ್ಲ, ವಿಧಿಬದ್ಧ ಆಚರಣೆಗಳಿಗೆ ಒಲಿಯುವ ದರ್ಶನವೂ ಅಲ್ಲ.

ಹರನ ಕೊರಳಲಿಪ್ಪ ಕರೋಟಿಮಾಲೆಯ
ಶಿರದ ಲಿಖಿತವ ಕಂಡು, ಮರುಳ ತಂಡಗಳು ಓದಿ ನೋಡಲು,
ಇವನಜ ಇವ ಹರಿ ಇವ ಸುರಪತಿ ಇವ ಧರಣೇಂದ್ರ
ಇವನಂತಕನೆಂದು ಹರುಷದಿಂದ ಸರಸವಾಡಿತ ಕಂಡು,
ಹರ ಮುಕುಳಿತನಾಗಿ ನಕ್ಕ, ನಮ್ಮ ಕೂಡಲಸಂಗಮದೇವ.

ಹರನ ಕೊರಳಿಗೆ ಹಾಕಿದ ತಲೆಬುರುಡೆಯ ಹಾರ ಕಂಡು ಮರುಳ ಜನರು ಅವನನ್ನು ಬ್ರಹ್ಮ, ಹರಿ, ಇಂದ್ರ, ಯಮ ಎಂದೆಲ್ಲಾ ಹರುಷದಿಂದ ಉನ್ಮಾದಕ್ಕೊಳಗಾಗುವುದನ್ನು ಕಂಡು ಹರನು ಮುಸಿಮುಸಿ ನಗುತ್ತಿದ್ದಾನೆ ಎಂದು ವ್ಯಂಗ್ಯವಾಡಿದ್ದಾರೆ ಬಸವಣ್ಣ. ಆ ಮೂಲಕ ಹರ ಯಾರೆಂಬುದನ್ನು ಅರಿಯದ ಜನರ ಅಜ್ಞಾನವನ್ನು ತೋರಿಸಿದ್ದಾರೆ.

ಹರಹರಾ ನೀವಿಪ್ಪ ಠಾವನರಿಯದೆ,
ಅಷ್ಟವಿಧಾರ್ಚನೆ ಷೋಡಶೋಪಚಾರ ಮಾಡುವರ
ದಿಟ್ಟತನವ ನೋಡಾ !
ಶಿವಶಿವಾ ನಿಮ್ಮ ಶ್ರೀಮುಖವನರಿಯದೆ
ಸಕಲ ಪದಾರ್ಥವ ನಿಮಗರ್ಪಿಸಿ
ಪ್ರಸಾದವ ಕೊಂಡೆವೆಂದೆಂಬವರ ಎದೆಗಲಿತನವ ನೋಡಾ !
ಹಗರಣದ ಹಣ್ಣ ಮೆದ್ದು ಹಸಿವು ಹೋಯಿತ್ತೆಂದಡೆ
ಆರು ಮೆಚ್ಚುವರು ಹೇಳಾ ಗುಹೇಶ್ವರಾ ?

ನಿಜಕ್ಕೂ ಹರ ಯಾರು, ಆತನ ಜಾಗ ಯಾವುದು ಎಂದರಿಯದ ಜನರು ಅಷ್ಟವಿಧಾರ್ಚನೆ, ಷೋಡಶೋಪಚಾರಗಳ ಬೆನ್ನುಹತ್ತಿ ಹರನನ್ನು ಒಲಿಸಿಕೊಳ್ಳಬಹುದೆಂದು ಭಾವಿಸಿದ್ದಾರೆ. ಸೃಷ್ಟಿತತ್ವ (ಶಿವ) ವನ್ನು ಅರಿಯುವ ನಿಜವಾದ ಮಾರ್ಗ(ಮುಖ) ಗೊತ್ತಿಲ್ಲದೆ ಕೇವಲ ತಿಂದುಣ್ಣುವ ಪದಾರ್ಥಗಳನ್ನು ಶಿವನಿಗರ್ಪಿಸಿ ಅದನ್ನು ಪ್ರಸಾದವಾಗಿ ಸ್ವೀಕರಿಸಿದ್ದೇವೆಂಬ ಭ್ರಮೆಯ ಭಂಡತನವನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸುತ್ತಾರೆ ಅಲ್ಲಮರು. ಸುಮ್ಮನೆ ತಿನ್ನುವ ನಾಟಕ ಮಾಡಿ ಹೊಟ್ಟೆ ತುಂಬಿತೆನ್ನುವವರ ಬಂಡವಾಳ ಯಾರಿಗೂ ತಿಳಿಯುವುದಿಲ್ಲವೇ? ಎಂದು ಪ್ರಶ್ನಿಸುತ್ತಾರೆ.

ಹರಿ ಹೊಲಬನರಿಯ, ಬ್ರಹ್ಮ ಮುಂದನರಿಯ,
ರುದ್ರ ಲೆಕ್ಕವ ಮರೆದು ಜಪವನೆಣಸುತ್ತೈದಾನೆ.
ಈಶ್ವರ ಪವನಯೋಗದಲ್ಲಿ ಮಗ್ನನಾದ.
ಸದಾಶಿವ ಭಾವದಲ್ಲಿ ಭ್ರಮಿತನಾದ.
ಒಂದಂಡಜದೊಳಗಣ ಬಾಲಕರೈವರು,
ನಿಮ್ಮನೆತ್ತ ಬಲ್ಲರು ಗುಹೇಶ್ವರಾ.

ಪ್ರಭುದೇವರು ಇಲ್ಲಿ ಹರಿ, ಬ್ರಹ್ಮ, ರುದ್ರ, ಈಶ್ವರ ಮತ್ತು ಸದಾಶಿವರನ್ನು ಒಂದೇ ಮೊಟ್ಟೆಯ ಐವರು ಬಾಲಕರು ಎಂದು ಕರೆದಿದ್ದಾರೆ. ಇವರೆಲ್ಲ ಸೃಷ್ಟಿಯ ಮೂಲವನ್ನರಿಯಲು ವಿಫಲರಾದವರು. ಶರಣರ ಶಿವನಿಗೆ ರೂಪವಿಲ್ಲ, ಇತಿಹಾಸವಿಲ್ಲ, ಕಥೆ- ಪವಾಡಗಳಿಲ್ಲ.

ಶಿವನಿಗೆ ಮೆತ್ತಿಕೊಂಡ ಕಥೆಗಳು, ಅಲಂಕಾರಗಳು, ವೇಷಗಳು ಶರಣರಿಗೆ ಸಹ್ಯವೆನಿಸಲಿಲ್ಲ. “ಪಾರ್ವತಿಯು ಪರಶಿವನ ಸತಿ ಎನ್ನುವವರು ಶಿವದ್ರೋಹಿಗಳು, ಬೆನಕನು ಪರಶಿವನ ಮಗನೆನ್ನುವವರು ಪಾತಕ ದುಃಖಿಗಳು, ಸ್ವಾಮಿ ಕಾರ್ತಿಕೇಯನು ನಮ್ಮ ಹರಲಿಂಗನ ಮಗನೆನ್ನುವವರು ಲಿಂಗದ್ರೋಹಿಗಳು, ಭೈರವನು ಭಯಂಕರಹರನ ಮಗನೆನ್ನುವವರು ಭವಹರಗುರುದ್ರೋಹಿಗಳು….” ಎನ್ನುತ್ತಾರೆ ಪ್ರಭುದೇವರು. ತಮ್ಮ ಕಾಲದಲ್ಲಿ ಶಿವ ಎನ್ನುವ ಶಬ್ದ ಪೌರಾಣಿಕವಾಗಿ ಹೆಚ್ಚು ಪ್ರಚಾರವಿದ್ದುದರಿಂದ ಶರಣರಿಗೆ ತಾವು ನಂಬಿದ ಶಿವ ಬಯಲು ತತ್ವ, ಸಮಷ್ಟಿಯ ಸಂಕೇತ, ಪುರಾಣಗಳಲ್ಲಿ ಇರುವ ಶಿವನಲ್ಲ ಎಂಬುದನ್ನು ಪದೇ ಪದೇ ಸ್ಪಷ್ಟಪಡಿಸುವ ಅನಿವಾರ್ಯತೆ ಸೃಷ್ಟಿಯಾಯಿತು. ಆ ಕುರಿತ ಅನೇಕ ವಚನಗಳನ್ನು ಕಾಣಬಹುದು.

ತ್ರಿಪುರವನುರುಹಿದ ತ್ರಿಣೇತ್ರನಲ್ಲ,
ಅಂಧಕಾಸುರನ ಮೆಟ್ಟಿ ನಾಟ್ಯವನಾಡಿದಾತನಲ್ಲ,
ಖಂಡಕಪಾಲಿಯಲ್ಲ ಮುಂಡಧಾರಿಯಲ್ಲ,
ಮಂಡಲದೊಳಗೆ ಬಂದು ಸುಳಿವಾತನಲ್ಲ,
ಈಶ್ವರನಲ್ಲ ಮಹೇಶ್ವರನಲ್ಲ,
ಗುಹೇಶ್ವರನೆಂಬ ಲಿಂಗ ಅಪಾರ ಮಹಿಮನು.

ಭಕ್ತಿಯೆಂಬ ಪಿತ್ತ ತಲೆಗೇರಿ ಕೈಲಾಸದ ಬಟ್ಟೆಯ ಹತ್ತುವ ವ್ಯರ್ಥರ ಕಂಡು
ಎನ್ನ ಮನ ನಾಚಿತ್ತು, ನಾಚಿತ್ತು.
ಕೈಲಾಸವೆಂಬುದೇನೊ, ಪೃಥ್ವಿಯ ಮೇಲೊಂದು ಮೊರಡಿ,
ಆ ಪೃಥ್ವಿಗೆ ಲಯವುಂಟು, ಆ ಮೊರಡಿಗೆಯು ಲಯವುಂಟು… (ಬಸವಣ್ಣ)

ಕೈಲಾಸವೆಂಬುದೊಂದು ಬೆಳ್ಳಿಯ ಬೆಟ್ಟ,
ಅಲ್ಲಿದ್ದಾತ ರುದ್ರನೊಬ್ಬ.
ಆ ಬೆಟ್ಟಕ್ಕೂ ಆ ರುದ್ರಂಗೆಯೂ
ಪ್ರಳಯವುಂಟೆಂಬುದ
ಗುಹೇಶ್ವರಾ ನಿಮ್ಮ ಶರಣ ಬಲ್ಲನು

ಶರಣರ ಶಿವ ಬಯಲ ರೂಪಿ, ಸಮಷ್ಟಿಯ ಸಂಕೇತ. ಶಿವ ಕಾಲಾತೀತ ತತ್ವ, ಅದಕ್ಕೆ ಆತ ಮಹಾಕಾಲ. ಅಸ್ತಿತ್ವದಲ್ಲಿದ್ದದ್ದು, ಅಸ್ತಿತ್ವದಲ್ಲಿಲ್ಲದೆ ಇದ್ದದ್ದು ಎಲ್ಲವೂ ಶಿವನೇ. ಶಿವನೆಂದರೆ ಅಂತಃಪ್ರಜ್ಞೆ. ಹೊಸ ವಿಚಾರಧಾರೆಗಳ ವೈಜ್ಞಾನಿಕ ಮನೋಭಾವದಿಂದ ಕೂಡಿದ ಶರಣ ಸಂಸ್ಕೃತಿಯಲ್ಲಿ ಶಿವನ ಸ್ವರೂಪವನ್ನು ವಿಸ್ತರಿಸುವ ಅನೇಕ ವಚನಗಳಿವೆ. ಸ್ವತಂತ್ರ ವಿಚಾರಧಾರೆಯ ಶರಣರು ತಮ್ಮ ಅನುಭಾವದಲ್ಲಿ ಶಿವ ಬೆಳಗನ್ನು ಕಂಡು ಸಂಭ್ರಮಿಸಿದವರು. ನುಡಿಯನ್ನು ನಡೆಯಲ್ಲಿ ತಂದು ಬದಲಾವಣೆಗೆ ಮೈಯೊಡ್ಡಿದರು. ವ್ಯಕ್ತಿಯ ಏಳ್ಗೆಯೊಂದಿಗೆ ಸಮಷ್ಟಿಯ ಹಿತವನ್ನು ಮುಖ್ಯವಾಗಿಸಿಕೊಂಡರು. ಶಿವನ ಕಲ್ಪನೆ ಸಮಸ್ತ ವಿಶ್ವವನ್ನೂ, ಸಕಲ ಜೀವರಾಶಿಯನ್ನೂ ಒಳಗೊಂಡಿತು. ಸತ್ಯದ ಶೋಧನೆ ಎನ್ನುವುದು ನಮ್ಮೊಳಗೇ ನಡೆಯುವಂಥದು.. ಯಾರು ತನ್ನಲ್ಲೇ ಶಿವನನ್ನು ಕಂಡುಕೊಳ್ಳುವನೋ ಆತನೇ/ಆಕೆಯೇ ಶಿವಯೋಗಿ. ಈ ಹಾದಿಯಲ್ಲಿ ಶರಣರು ಶಿವನಾದವರು, “ಬಸವಾ ಶಿವನೆ, ಶಿವನೇ ಬಸವಾ” ಎನ್ನುವ ಮಾತು ಮಂತ್ರವಾದದ್ದು ಇದೇ ಹಿನ್ನೆಲೆಯಲ್ಲಿ.

Previous post ಅಬದ್ಧ ಆರ್ಥಿಕತೆ
ಅಬದ್ಧ ಆರ್ಥಿಕತೆ
Next post ಕನ್ನಗತ್ತಿಯ ಮಾರಯ್ಯ
ಕನ್ನಗತ್ತಿಯ ಮಾರಯ್ಯ

Related Posts

ಧಾರ್ಮಿಕ ಮೌಢ್ಯಗಳು
Share:
Articles

ಧಾರ್ಮಿಕ ಮೌಢ್ಯಗಳು

February 5, 2020 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಕೊಲ್ಲೆನಯ್ಯಾ ಪ್ರಾಣಿಗಳ, ಮೆಲ್ಲೆನಯ್ಯಾ ಬಾಯಿಚ್ಛೆಗೆ, ಒಲ್ಲೆನಯ್ಯಾ ಪರಸತಿಯರ ಸಂಗವ, ಬಲ್ಲೆನಯ್ಯಾ ಮುಂದೆ ತೊಡಕುಂಟೆಂಬುದ, ಬಳ್ಳದ ಬಾಯಂತೆ ಒಂದೆ ಮನ ಮಾಡಿ ನಿಲ್ಲೆಂದು...
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
Share:
Articles

ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ

September 7, 2021 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಮನುಷ್ಯ ಯಾವಾಗಲೂ ನೆಮ್ಮದಿ, ಸುಖ, ಶಾಂತಿಯಿಂದ ಬಾಳಬೇಕೆಂದು ಬಯಸುತ್ತಾನೆ. ಸಾಕಷ್ಟು ವೇತನ ಬರುವ ಉದ್ಯೋಗ, ದೊಡ್ಡ ಮನೆ, ಓಡಾಡಲು ವಾಹನ, ರಾಜಕೀಯ ಸ್ಥಾನ-ಮಾನ, ಪ್ರಚಾರ,...

Comments 13

  1. ಶಿವಾನಂದ ಗೋಗಾವ ಅಕ್ಕಲಕೋಟ
    Mar 6, 2019 Reply

    ಮಂಗಳ ಅಕ್ಕನವರು ಶಿವನ ಕುರಿತ ಬರೆದ ಲೇಖನ ಕುತುಹಲ ಮೂಡಿಸುವoತಂದದ್ದು. ಅವರ ಅಭ್ಯಾಸ ಪೂಣ೯ ಲೇಖನ ಇದು. ಬಹಳ ಗಟ್ಟಿಯಾಗಿ, ಅಥ೯ ಪೂಣ೯ನಾಗಿ ಬಂದಿದೆ.

  2. Chinmayi
    Mar 6, 2019 Reply

    ಶಿವನ ಕಲ್ಪನೆ ಕುರಿತ ಈ ಲೇಖನ ಹಲವು ವಿಷಯ ಕುರಿತು ನಮಗೆ ಚಿಂತನೆ ಮಾಡುವಂತೆ ಪ್ರೇರಣೆ ನೀಡುವುದು.

  3. ಗು.ಭಿ.ಪಾಟೀಲ
    Mar 7, 2019 Reply

    “ಶಿವ ಪೌರಾಣಿಕ ಪುರುಷನೂ ಅಲ್ಲ, ಐತಿಹಾಸಿಕ ವ್ಯಕ್ತಿಯೂ ಅಲ್ಲ. ಅದೊಂದು ಶುದ್ಧ ತಾತ್ವಿಕ ಪರಿಕಲ್ಪನೆ. ಶಿವ ಪದದ ಅಕ್ಷರಶಃ ಅರ್ಥ- ಯಾವುದು ಇಲ್ಲವೋ ಅದು- ಅಂದರೆ ಶೂನ್ಯ ಶಿವ ಪದದ ಅಕ್ಷರಶಃ ಅರ್ಥ- ಯಾವುದು ಇಲ್ಲವೋ ಅದು- ಅಂದರೆ ಶೂನ್ಯ. ”

    ಎಂತಹ ಪರಿಕಲ್ಪನೆ ಶೂನ್ಯ ದೊಂದಿಗೆ ಹುಟ್ಟಿ,ಶೂನ್ಯದಲ್ಲಿ ಲಿನವಾಗವ ಇ ದೆಹಕ್ಕೆ ವಿಚಾರವು ಇದರೊಂದಿಗೆ ಇದೆಯಲ್ಲ ಧನ್ಯ.
    “ಅದಿಗೆ ಅದರ ಅಸ್ತಿತ್ವ ಶುರುವಾದದ್ದಲ್ಲ, ಬದಲಿಗೆ ಸೃಷ್ಟಿಗೂ ಮುನ್ನವೇ ಇದ್ದ ಅನಾದಿ ತತ್ವ. ಸಮಸ್ತ ಅಸ್ತಿತ್ವದ ಆಧಾರ ಮತ್ತು ಇಡೀ ಬ್ರಹ್ಮಾಂಡದ ಮೂಲಗುಣ, ಅನಂತ ಶೂನ್ಯ. ಏನೂ ಏನೂ ಇಲ್ಲದ ಶೂನ್ಯವೇ ಸೃಷ್ಟಿಯ ಒಡಲೂ ಹೌದು ಮತ್ತು ಎಲ್ಲವನ್ನೂ ತನ್ನೊಳಗೆ ಸೆಳೆದುಕೊಳ್ಳುವ ವಿಸ್ಮೃತಿಯೂ ಹೌದು. ಶಿವ ಅಸ್ತಿತ್ವದಲ್ಲಿಲ್ಲದ ಶೂನ್ಯ!”

    ಅಧ್ಬುತವಾದ ವಿಚಾರಧಾರೆ,ಮನಮುಟ್ಟುವ ಚಿತ್ರಣ,ತು಼ಂಬಎತ್ತರದ ಲೆಖನ, ಆದರೆ ಶರಣರೊಂದಿಗೆ ಶಿವನನ್ನು ಕೂಡಿಸಿದ್ದು ಆಕಾಶಕ್ಕೆ ಕರೆದೊಯ್ದು ಒಮ್ಮೆಲೆ ಕೈ ಬಿಟ್ಟಂತಾಯಿತು.

  4. Sandesh Tirumala
    Mar 7, 2019 Reply

    ಶಿವನ ಬಗ್ಗೆ ನನ್ನಲ್ಲಿ ಅನೇಕ ಗೊಂದಲಗಳಿದ್ದವು, ಅವುಗಳಲ್ಲಿ ಬಹಳಷ್ಟು ಈ ಲೇಖನ ಓದಿ ದೂರವಾದವು. ಶಿವನನ್ನು ಹೀಗೆ ಎಲ್ಲೆಂದರಲ್ಲಿ ಕಥೆಗಳಲ್ಲಿ ತುರುಕಿರುವುದರ ಮರ್ಮ ಅರ್ಥವಾಯಿತು.
    -ಸಂದೇಶ ತಿರುಮಲ

  5. ಶಂಕರಪ್ಪ ದೇವರಾಯನದುರ್ಗ
    Mar 7, 2019 Reply

    ಅಕ್ಕಾ, ನಿಮ್ಮ ಲೇಖನ ಹಿಡಿಸಿತು. ಸರಳವಾಗಿ, ಸಮಗ್ರವಾಗಿ ಬರೆದಿರುವಿರಿ. ತುಂಬಾ ಧನ್ಯವಾದಗಳು.
    -ಶಂಕರಪ್ಪ ಮಾವಿನತೋಪು

  6. ಶ್ರೀಮತಿ ರುದ್ರಮ್ಮ ಅಮರೇಶ ಹಾಸಿನಾಳ ಗಂಗಾವತಿ.
    Mar 8, 2019 Reply

    ಶರಣೆ ಮಂಗಳಾವರೇ ಬಯಲು ಬ್ಲಾಗ್ ನಲ್ಲಿ ಶಿವನ ಕುರಿತಂತೆ ನಿಮ್ಮ ಲೇಖನವು ಅಮೋಘವಾಗಿ ಮೂಡಿ ಬಂದಿದೆ. ಅನಾದಿ ಕಾಲದಿಂದ ಹಿಡಿದು ಈ ಆಧುನಿಕ ಕಾಲಘಟ್ಟವರೆಗೂ ಋಷಿಮುನಿಗಳು, ಮಹಾಂತರು, ಶರಣರು, ಕವಿಗಳು ಶಿವನನ್ನ ಯಾವ ಯಾವ ರೀತಿ ಕಂಡಿದ್ದಾರೆ ಎಂಬುದನ್ನು ಚೆನ್ನಾಗಿ ನಿರೂಪಿಸಿದ್ದೀರಿ. ಒಟ್ಟಾರೆ ಶಿವಸಂಸ್ಕೃತಿಯ ಮಹಾಬೆಳಕನ್ನೆ ಚೆಲ್ಲಿರುವಿರಿ. ನಿಮ್ಮ ಅರ್ಥಪೂರ್ಣ ಲೇಖನಕ್ಕೆ ಹೃದಯಪೂರಕ ಅಭಿನಂದನೆಗಳು ಸಲ್ಲಿಸುವೆ. ಇದೆ ರೀತಿ ನಿಮ್ಮ ಎಲ್ಲ ಲೇಖನಗಳು ಸ್ವಾರಸ್ಯಕರವಾಗಿ ಮೂಡಿ ಬರಲೆಂದು ಹಾರೈಸುವೆ.
    ಶರಣು ಶರಣಾರ್ಥಿಗಳು.

    ಶ್ರೀಮತಿ ರುದ್ರಮ್ಮ ಅಮರೇಶ ಹಾಸಿನಾಳ ಗಂಗಾವತಿ.

  7. ಶೋಭಿತಾ ಬಾಣಾವರ
    Mar 11, 2019 Reply

    ಶರಣರ ಶಿವ ಬಯಲ ರೂಪಿ. ಸತ್ಯದ ಶೋಧನೆ ನಮ್ಮೊಳಗೇ ನಡೆಯುವಂಥದು. ಯಾರು ತನ್ನಲ್ಲಿ ಶಿವನನ್ನು ಕಂಡುಕೊಳ್ಳುವರೋ ಅವರೆ ಶಿವಯೋಗಿ…… ಲೇಖನ ಚೆನ್ನಾಗಿದೆ. ಅಧ್ಯಯನ ಇಲ್ಲದ ನನಗೆ ಏನು ತಿಳಿಯಿತೋ ಅದನ್ನು ಹೇಳಿದ್ದೆನೆ.

  8. Janaki h.v
    Mar 12, 2019 Reply

    ಆಳ ಅಧ್ಯಯನ ನಿಮ್ಮ ಲೇಖನದ ವಿಶೇಷ ಗುಣ, ಅದನ್ನು ಪರಿಣಾಮಕಾರಿಯಾಗಿ ಬರೆಯುವುದೂ ನಿಮಗೆ ಗೊತ್ತು ಮೇಡಂ.

  9. K S MALLESH
    Mar 15, 2019 Reply

    Your article kept me glued till the end. A good attempt this time too. Self centered notions tied to Shiva are exposed by giving a fairly authentic historical approach. I think this article should be made more exhaustive with appropriate references. You have honestly tried to release Shiva from the clutches of all those self centred people who used their with religious outfit to achieve their ends. You have also tried to put down as mere imaginations all the mythological stories spun around him. You have effectively quoted the vachanas in support of your conclusions. At the same I feel your intense love for Sharana philosophy crreps in while explaining ‘what is really Shiva’. You are quite generous in your description here. It would have been better if you had written only those aspects which one can grasp, and those which are referred to by sharanas. I would appreciate a continuation of this article which will contain sharanas’ approach to understand Shiva via for example shatsthala and others.

    I honestly agree that your article educates the ignorant, refreshes and clarifies the learned mind and encourages the seeker.

  10. Gayathri.N.C
    Mar 18, 2019 Reply

    ನಿಮ್ಮ ಲೇಖನಗಳು ನನಗೆ ಬಹಳ ಹಿಡಿಸುತ್ತವೆ. ವಚನಕಾರರನ್ನು ಅರ್ಥಮಾಡಿಕೊಳ್ಳಲು ನನಗೆ ಸಹಕಾರಿಯಾಗಿವೆ. ಶಿವನ ಲೇಖನವನ್ನು ಒಂದೆರಡು ಬಾರಿ ಓದಿದ್ದೇನೆ, ಇನ್ನೂ ಓದಬೇಕೆನಿಸುತ್ತದೆ.

  11. KALAVATHI J.P
    Mar 20, 2019 Reply

    ಶಿವನ ಕುರಿತು ನಡೆಯಬೇಕೆನ್ನುವ ಹುಡುಕಾಟಗಳಿಗೆ ನಿಮ್ಮ ಲೇಖನ ಉತ್ತಮ ಅಡಿಪಾಯ ಹಾಗೂ ದಿಕ್ಕು ತೋರಿಸುವಂತೆ ಬರೆದಿರುವಿರಿ ಅಕ್ಕಾ. Very informative and thought provoking.

  12. dr. Basappa Bidanuru
    Mar 31, 2019 Reply

    ಶಿವನ ಲೇಖನವನ್ನು ಮೂರ್ನಾಲ್ಕು ಬಾರಿ ಓದಿದೆ. ಒಂದು ಗಂಭೀರ ಅಧ್ಯಯನಕ್ಕಾಗುವ ಮಾಹಿತಿ ಇಲ್ಲಿದೆ. ಶಿವನ ಸಂಸ್ಕೃತಿಯ ಸಂಶೋಧನೆಗೆ ಉತ್ತಮ ಮಾರ್ಗದರ್ಶನ ನೀಡಬಲ್ಲದು. ವಚನಗಳ ಆಯ್ಕೆ ಸಂದರ್ಭೊಚಿತವಾಗಿದೆ, ಬರವಣಿಗೆ ಸುಲಲಿತವಾಗಿದೆ.

  13. ಬಸವರಾಜ ಸೂಳಿಭಾವಿ
    Apr 2, 2020 Reply

    ಸ್ಪಷ್ಟವಾದ, ನಿಖರವಾದ ಹಾಗೂ ಪರಿಪೂರ್ಣವಾದ ಲೇಖನ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನೆಲದ ನಿಧಾನ
ನೆಲದ ನಿಧಾನ
April 29, 2018
ಶಿವನ ಕುದುರೆ – 2
ಶಿವನ ಕುದುರೆ – 2
June 3, 2019
ಕರ್ತಾರನ ಕಮ್ಮಟ  ಭಾಗ-6
ಕರ್ತಾರನ ಕಮ್ಮಟ ಭಾಗ-6
December 22, 2019
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
July 4, 2022
ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
August 6, 2022
ವಚನಗಳಲ್ಲಿ ಖಗೋಳ ವಿಜ್ಞಾನ
ವಚನಗಳಲ್ಲಿ ಖಗೋಳ ವಿಜ್ಞಾನ
September 7, 2020
ನಿಚ್ಚ ನಿಚ್ಚ ಶಿವರಾತ್ರಿ
ನಿಚ್ಚ ನಿಚ್ಚ ಶಿವರಾತ್ರಿ
March 6, 2020
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
January 4, 2020
ಕಣ್ಣ ದೀಪ
ಕಣ್ಣ ದೀಪ
September 7, 2021
ಎರಡು ಎಲ್ಲಿ?
ಎರಡು ಎಲ್ಲಿ?
October 5, 2021
Copyright © 2022 Bayalu