Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
Share:
Articles March 17, 2021 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ

‘ಸ್ವಾಮಿ’ ಎನ್ನುತ್ತಲೇ ಒಂದು ಮಠ, ಅದಕ್ಕೊಬ್ಬ ಗುರು ಎನ್ನುವ ಚಿತ್ರಣ ಕಣ್ಮುಂದೆ ಕಾಣಿಸಿಕೊಳ್ಳುವುದು. ಅದರಂತೆ `ಭಕ್ತ’ ಎಂದಾಗ ಕೇಳಿಬರುವ ಮತ್ತೊಂದು ಶಬ್ದ `ಭವಿ’. ಭಕ್ತ ಎಂದರೆ ಸದಾಚಾರಿ, ಭವಿ ಎಂದರೆ ದುರಾಚಾರಿ ಎಂದು ಸರಳವಾಗಿ ಹೇಳಬಹುದು. ಬಸವಾದಿ ಶಿವಶರಣರು ಭಕ್ತ, ಭವಿ ಪದಗಳನ್ನು ವಚನಗಳಲ್ಲಿ ಸಾಕಷ್ಟು ಬಳಕೆ ಮಾಡಿದ್ದಾರೆ. ಇಷ್ಟಲಿಂಗ ದೀಕ್ಷೆ ಪಡೆದು ಶರಣ ಮಾರ್ಗದಲ್ಲಿ ನಡೆಯುವವ ಭಕ್ತ. ಇದಕ್ಕೆ ವಿರುದ್ಧವಾಗಿ ಬಾಳುವವ ಭವಿ. ಭಕ್ತ ದುಶ್ಚಟ, ದುರಾಚಾರಗಳಿಗೆ ಬಲಿಯಾಗಬಾರದು. ಒಂದುವೇಳೆ ಬಲಿಯಾಗಿದ್ದರೆ ತಕ್ಷಣ ಅವುಗಳಿಂದ ಮುಕ್ತಿಯನ್ನು ಪಡೆಯಬೇಕು. ಭವಿಯನ್ನು ಭಕ್ತನನ್ನಾಗಿ ಮಾಡುವುದು ಸ್ವಾಮಿಗಳ ಕರ್ತವ್ಯ. ಆದರೆ ಎಷ್ಟೋ ಸಂದರ್ಭಗಳಲ್ಲಿ ಭಕ್ತರಲ್ಲದವರಿಗೆ ಉಪದೇಶ ಮಾಡುವುದು ಗಾಳಿ ಗುದ್ದಿ ಮೈ ನೋವು ಮಾಡಿಕೊಂಡಂತೆ. ಮದ್ಯ ಕುಡಿತದ ಅಮಲಿನಲ್ಲಿರುವ ವ್ಯಕ್ತಿಗೆ ಇನ್ನುಮುಂದೆ ಕುಡಿಯಬೇಡ ಎಂದರೆ ಆತ ಕುಡಿತ ಬಿಡುವನೆ? ಕುಡಿಯದಿದ್ದಾಗ ಹಿತವಚನ ಹೇಳಿದರೆ ಆತನ ಕುಡಿತ ಬಿಡಿಸಬಹುದು. ಲಿಂಗಾಯತ ಧರ್ಮದ ಆಧಾರ ಸ್ಥಂಭಗಳು ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲಗಳು. ಷಟ್ಸ್ಥಲಗಳಲ್ಲಿ ಮೊದಲನೆಯದೇ ಭಕ್ತಸ್ಥಲ. ಭಕ್ತನಾಗದೆ ಮುಂದಿನ ಯಾವ ಸ್ಥಲಗಳನ್ನೂ ಮುಟ್ಟಲು ಸಾಧ್ಯವಾಗದು. ಭಕ್ತಸ್ಥಲದಲ್ಲೇ ಎಡವಿದರೆ ಬದುಕು ಮೂರಾಬಟ್ಟೆಯಾಗುವುದು.
ಭಕ್ತರನ್ನು ಸನ್ಮಾರ್ಗದಲ್ಲಿ ಕರೆದೊಯ್ಯುವ ಕಾಯಕ ಜಂಗಮರದು. ಜಂಗಮ ಎಂದಾಕ್ಷಣ ಕಾವಿಧಾರಿ ಎಂದು ಭಾವಿಸಬೇಕಾಗಿಲ್ಲ. ಅರಿವು, ಆಚಾರ ಒಂದಾದವರು ಜಂಗಮರು. ಜಂಗಮತ್ವ ಯಾರೋ ಕೆಲವರಿಗೆ ಮೀಸಲಾದದ್ದಲ್ಲ. ಹೆಣ್ಣು, ಗಂಡು ಭೇದವಿಲ್ಲದೆ ಗೃಹಸ್ಥರು, ಸನ್ಯಾಸಿಗಳು, ಮಠಾಧೀಶರು ಸಹ ಜಂಗಮರಾಗಬಹುದು. ಮಠದ ಸ್ವಾಮಿಗಳಾಗಿ ಅರಿವು, ಆಚಾರ ಒಂದಾಗಿ ಬಾಳದಿದ್ದರೆ ಅವರ ಸ್ವಾಮಿತನಕ್ಕೆ ಕವಡೆಯ ಕಿಮ್ಮತ್ತೂ ಇರುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಹೊಸ ಹೊಸ ಮಠಗಳು ಅಸ್ತಿತ್ವಕ್ಕೆ ಬರುತ್ತಲೇ ಇವೆ. ಮಠ ಅಸ್ತಿತ್ವಕ್ಕೆ ಬಂದಮೇಲೆ ಅದಕ್ಕೊಬ್ಬ ಸ್ವಾಮಿಗಳೂ ಬರುವರು. ಸ್ವಾಮಿಗಳಿಂದ ಮಠಗಳ ಕಟ್ಟಡಗಳು ದೊಡ್ಡದಾಗುತ್ತ ಮಠದ ಆಸ್ತಿ, ಆದಾಯ ವೃದ್ಧಿಯಾಗುವುದು. ಆದರೆ ಆ ಮಠದ ಭಕ್ತರ ಬದುಕು ಏನಾಗುತ್ತಿದೆ? ಮಠದ ಕಟ್ಟಡ ದೊಡ್ಡದೊ ಸಣ್ಣದೋ ಎನ್ನುವುದಕ್ಕಿಂತ ಮಠದ ಭಕ್ತರ ಬದುಕಿಗೆ ಬೆಳಕು ದೊರೆಯಬೇಕು. `ಮನೆ ನೋಡಾ ಬಡವರು, ಮನಘನ ಸಂಪನ್ನರು’ ಎನ್ನುವಂತೆ ಭಕ್ತರು ಸದಾಚಾರಸಂಪನ್ನರಾಗಿ ಘನಮನದವರಾಗಬೇಕು. ಬಸವಾದಿ ಶಿವಶರಣರ ತತ್ವ ಸಿದ್ಧಾಂತಗಳು ಭಕ್ತರ ಬಾಳಬಟ್ಟೆಯಾಗಬೇಕು. ಆದರೆ ಇಂಥ ಕೆಲಸ ಮಠಗಳ ಸ್ವಾಮಿಗಳಿಂದ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಮಠಗಳು ದೊಡ್ಡದಾಗುತ್ತಿದ್ದಂತೆ ಭಕ್ತರು ನೈತಿಕವಾಗಿ, ಧಾರ್ಮಿಕವಾಗಿ ಬಡವರಾಗುತ್ತಿದ್ದಾರೆ. ಇದರಿಂದಾಗಿಯೇ ಸಮಾಜದಲ್ಲಿ ಮೌಲ್ಯಗಳು ಅರ್ಥ ಕಳೆದುಕೊಳ್ಳುತ್ತಿವೆ.
ಭಕ್ತರಲ್ಲಿ ಇರುವ ಕಾಮಾದಿ ದುರ್ಗುಣಗಳನ್ನು ದೂರ ಮಾಡಬೇಕಾದ ಜವಾಬ್ದಾರಿ ಸ್ವಾಮಿಗಳವರದು. ಅದಕ್ಕಾಗಿ ಅವರು ತಮ್ಮ ಮಠವನ್ನು ಮಹಾಮನೆ ಮತ್ತು ಅನುಭವಮಂಟಪ ಮಾಡಬೇಕು. ಹಾಗೆ ಮಾಡಬೇಕೆಂದರೆ ಆ ಮಠದ ಸ್ವಾಮಿಗಳು ಚನ್ನಬಸವಣ್ಣನವರಂತೆ ಸುಜ್ಞಾನಿಗಳು, ಪ್ರಭುದೇವರಂತೆ ಅನುಭಾವಿಗಳು ಆಗುವ ಸದಾಶಯ ಹೊಂದಿ ಆ ದಾರಿಯಲ್ಲಿ ಕ್ರಮಿಸಬೇಕು. ಪ್ರಭುದೇವರು ಅನುಭವಮಂಟಪದ ಅಧ್ಯಕ್ಷರಾಗಿದ್ದರು. ಹಾಗಂತ ಅವರು ಪೀಠಕ್ಕೆ ಅಂಟಿಕೊಂಡು ಕುಳಿತವರಲ್ಲ. ಜಂಗಮರಾಗಿ ಜನರ ಬದುಕನ್ನು ಸಹ ಜಂಗಮತ್ವಗೊಳಿಸಿದವರು. ಕಾಳವ್ವೆ, ಸತ್ಯಕ್ಕ, ಸೂಳೆ ಸಂಕವ್ವೆ, ಆಯ್ದಕ್ಕಿ ಲಕ್ಕಮ್ಮ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ ಇಂಥ ತಳಸಮುದಾಯದ ವ್ಯಕ್ತಿಗಳು ಅನುಭವಮಂಟಪದ ಸದಸ್ಯರಾಗಿದ್ದರು. ಅಲ್ಲಿ ಅವರು ತಮ್ಮ ಬದುಕನ್ನು ಶುದ್ಧವಾಗಿಸಿಕೊಂಡರು. ತಮ್ಮ ಪೂರ್ವದ ಗುಣ, ಸ್ವಭಾವಗಳನ್ನು ತಿದ್ದಿಕೊಂಡು ಶರಣತ್ವದ ದಾರಿಯಲ್ಲಿ ನಡೆದು ಶರಣರೇ ಆದರು. ಅನುಭವಮಂಟಪದ ಎಲ್ಲ ಸದಸ್ಯರೂ ತಮ್ಮ ಬದುಕನ್ನು ಅಪ್ಪಟ ಚಿನ್ನವಾಗಿಸಿಕೊಂಡರು. ಈ ನೆಲೆಯಲ್ಲಿ ಮಠಕ್ಕೆ ಬರುವ ಭಕ್ತರು ಅಪ್ಪಟ ಚಿನ್ನವಾಗಿ ಹೊರಹೊಮ್ಮುವಂತಾಗಬೇಕು. ನಾವು ಮಠದ ಸಂಪರ್ಕಕ್ಕೆ ಬರುವ ಮುನ್ನ ಹೇಗಿದ್ದೆವು, ಬಂದನಂತರ ನಮ್ಮ ಬದುಕು ಹೇಗೆ ಪರಿವರ್ತನೆ ಆಗಿದೆ ಎನ್ನುವ ಆತ್ಮಾವಲೋಕನವನ್ನು ಭಕ್ತರೇ ಮಾಡಿಕೊಳ್ಳುವ ವಾತಾವರಣ ಸೃಷ್ಟಿಯಾಗಬೇಕು.
ಉರಿಲಿಂಗಪೆದ್ದಿ 12ನೆಯ ಶತಮಾನದ ಒಬ್ಬ ಶರಣ. ಶರಣನಾಗುವ ಮುನ್ನ ಅವರ ವೃತ್ತಿ ಸಣ್ಣ-ಪುಟ್ಟ ಕಳವು ಮಾಡಿ ಹೊಟ್ಟೆ ಹೊರೆಯುವುದಾಗಿತ್ತು. ಪೆದ್ದಿಯ ಪತ್ನಿ ಕಾಳವ್ವೆ. ಕದ್ದು ಬಂಡಬಾಳುವೆ ಮಾಡುವುದಕ್ಕಿಂತ ಕೂಲಿ ಮಾಡಿ ಶುದ್ಧ ಜೀವನ ಸಾಗಿಸೋಣ ಎಂದು ಗಂಡನಿಗೆ ಹೇಳುತ್ತಿದ್ದರೂ ಅವನು ತನ್ನ ವೃತ್ತಿಯನ್ನು ಬಿಡುವುದಿಲ್ಲ. ಕೊನೆಗೊಮ್ಮೆ ಅವಳು ರೋಸಿ ಕಳ್ಳತನ ಬಿಡದಿದ್ದರೆ ಹೊಳೆ, ಕೆರೆ ನೋಡಿಕೊಳ್ಳುವೆ ಎನ್ನುವಳು. ಅದಕ್ಕೆ ಆತ: ಇಂದು ಮಾತ್ರ ಕಳವು ಮಾಡಲು ಒಪ್ಪಿಗೆ ಕೊಡು. ಇವತ್ತು ಕಳವು ದಕ್ಕಿದರೆ ಮುಂದೆಂದೂ ಕಳವು ಮಾಡುವ ಪರಿಸ್ಥಿತಿ ಬರುವುದಿಲ್ಲ. ಇವತ್ತೇನಾದರೂ ನೀನು ಅನುಮತಿಸದಿದ್ದರೆ ನಾನೇ ಹೊಳೆ ನೋಡಿಕೊಳ್ಳುವೆ ಎನ್ನುವನು. ಅವತ್ತು ಸೂರಯ್ಯ ಎನ್ನುವ ಶ್ರೀಮಂತನ ಮನೆಗೆ ಕಳವಿಗೆ ಹೋಗುವನು. ಆಗ ಉರಿಲಿಂಗದೇವರು ಭಕ್ತರಿಗೆ ಇಷ್ಟಲಿಂಗ ದೀಕ್ಷೆ ಮಾಡುತ್ತಿರುತ್ತಾರೆ. ಮಾನವ ಜನ್ಮ ಶ್ರೇಷ್ಠವಾದುದು. ದೇವರನ್ನು ಒಲಿಸಲು ಬಂದ ಪ್ರಸಾದ ಕಾಯ ಈ ದೇಹ. ಇದನ್ನು ಕೆಡಿಸಬಾರದು. ಇದರ ಪಾವಿತ್ರ್ಯ ಉಳಿಸಿಕೊಳ್ಳಲು ಮನುಷ್ಯ ಲಿಂಗದೀಕ್ಷೆ ಪಡೆಯಬೇಕು. ಪೂಜೆ, ಕಾಯಕ ಒಂದು ನಾಣ್ಯದ ಎರಡು ಮುಖಗಳಿದ್ದ ಹಾಗೆ. ಕಾಯಕದಿಂದ ನಿಜವಾದ ಸಂತೋಷ ಅನುಭವಿಸಲು ಸಾಧ್ಯ. ಕಾಯಕವೇ ಕೈಲಾಸ ಎಂದೆಲ್ಲ ಹೇಳುವರು.
ದೇವರ ದರ್ಶನಕ್ಕಾಗಿ ಮಂತ್ರಪಠಣ, ಧ್ಯಾನ, ಪೂಜೆ, ಮಾಡಬೇಕಾಗಿಲ್ಲ. ನದಿಯಲ್ಲಿ ಮುಳುಗಬೇಕಾಗಿಲ್ಲ. ಮರ ಸುತ್ತಬೇಕಾಗಿಲ್ಲ. ತೀರ್ಥಕ್ಷೇತ್ರಗಳಿಗೆ ಅಲಿಯಬೇಕಾಗಿಲ್ಲ. ಬದಲಾಗಿ `ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಂಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರು ಹಳಿಯಲುಬೇಡ’ ಎನ್ನುವ ಸಪ್ತಶೀಲಗಳ ತಳಹದಿಯ ಮೇಲೆ ಬದುಕನ್ನು ಕಟ್ಟಿಕೊಂಡರೆ ಸಾಕು. ಆಗ ಮನುಷ್ಯನ ಅಂತರಂಗ, ಬಹಿರಂಗ ಶುದ್ಧಿಯಾಗಿ ದೇವರು ತಾನಾಗಿ ಒಲಿಯುವನು. ದೇವರ ಒಲುಮೆ ಪಡೆಯಲು ಕಾಶಿ, ರಾಮೇಶ್ವರ, ತಿರುಪತಿ, ಧರ್ಮಸ್ಥಳ, ಉಳವಿ ಮತ್ತೆಲ್ಲಿಗೋ ಹೋಗಬೇಕಾಗಿಲ್ಲ. ಸಪ್ತಶೀಲಗಳಂತೆ ನಡೆದುಕೊಂಡರೆ ನಾವಿರುವ ತಾಣವೇ ಕಾಶಿ, ರಾಮೇಶ್ವರ, ಉಳವಿ ಆಗುವುದು. ಅಂತರಂಗ, ಬಹಿರಂಗ ಬೇರೆ ಬೇರೆ ಆಗಬಾರದು. ಮನುಷ್ಯ ತಿಳಿದೊ, ತಿಳಿಯದೆಯೋ ತಪ್ಪು ಮಾಡಿದ್ದರೂ ಪಶ್ಚಾತ್ತಾಪದ ಉರಿಯಲ್ಲಿ ಬೆಂದು ಮುಂದೆ ತಪ್ಪು ಮಾಡುವುದಿಲ್ಲ ಎಂದು ಸಂಕಲ್ಪ ಮಾಡಿದರೆ ಅವನು ಉದ್ಧಾರ ಆಗುವನು. ಪಾಪಿಗೂ ಉದ್ಧಾರದ ಮಾರ್ಗ ತೋರುವುದು ಇಷ್ಟಲಿಂಗದೀಕ್ಷೆ ಎಂದೆಲ್ಲ ಉರಿಲಿಂಗ ದೇವರು ಹೇಳುವರು. ಗುರುಗಳ ಉಪದೇಶಾಮೃತ ಕೇಳಿ, ಅಲ್ಲಿ ನಡೆಯುವ ದೀಕ್ಷಾ ವಿಧಿ ವಿಧಾನಗಳನ್ನು ನೋಡಿ ಪೆದ್ದಿ ತಾನು ಬಂದ ಉದ್ದೇಶವನ್ನೇ ಮರೆತು ಹೊಸ ಮನುಷ್ಯನಾಗಿ ಅಲ್ಲಿಂದ ಹೊರಬರುವನು. ಲಿಂಗವಿಲ್ಲದೆ ಬಾಳಬಾರದು ಎಂದು ಮುಂದೆ ಉರಿಲಿಂಗ ದೇವರಿಂದ ದೀಕ್ಷೆ ಪಡೆಯುವನು. ಪೆದ್ದಿಯಾಗಿದ್ದವ ಉರಿಲಿಂಗ ಪೆದ್ದಿಯಾಗಿ ಶರಣತ್ವ ಪಡೆಯುವರು. ಕೊನೆಗೆ ಉರಿಲಿಂಗ ದೇವರ ಮಠಕ್ಕೆ ಸ್ವಾಮಿಗಳಾಗುವರು. ಇದು ಒಬ್ಬ ಗುರು ಮಾಡಬೇಕಾದ ಕಾರ್ಯ.
ಉರಿಲಿಂಗ ಪೆದ್ದಿಯವರ ಬದುಕು ಮಠದ ಸ್ವಾಮಿಗಳಿಗೆ ಬೆಳಕಾಗಬೇಕು. ಪಾಪಮುಕ್ತಿಗಾಗಿ ಪಶ್ವಾತ್ತಾಪ ಮತ್ತು ಪ್ರಾಯಶ್ಚಿತ್ತ ಎನ್ನುವ ಎರಡು ಮಾರ್ಗಗಳು ಜಾರಿಯಲ್ಲಿವೆ. ಪಟ್ಟಭದ್ರರು, ಪೂಜಾರಿ ಪುರೋಹಿತರು ಹೇಳುವುದು ಪ್ರಾಯಶ್ಚಿತ್ತ ಮಾರ್ಗವನ್ನು. ಶರಣರು ಹೇಳುವುದು ಪಶ್ಚಾತ್ತಾಪ ಮಾರ್ಗವನ್ನು. ಮಾಡಿದ ತಪ್ಪಿಗೆ ಏನೋ ದಾನ ಕೊಟ್ಟು ಆ ತಪ್ಪಿನಿಂದ ಮುಕ್ತವಾಗುವುದೇ ಪ್ರಾಯಶ್ಚಿತ್ತ ಮಾರ್ಗ. ಇದಕ್ಕಾಗಿ ಚಿನ್ನದಾನ, ಭೂದಾನ, ಗೋದಾನ, ವಸ್ತ್ರದಾನ ಹೀಗೆ ಏನೇನೋ ದಾನ ಮಾಡುವರು. ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟು ಬೆಕ್ಕನ್ನು ಸಾಯಿಸಿದ ಪಾಪಕ್ಕಾಗಿ ಚಿನ್ನದ ಬೆಕ್ಕನ್ನು ದಾನವಿತ್ತರೆ ಪಾಪ ಕಳೆದು ಪುಣ್ಯ ಪ್ರಾಪ್ತಿಯಾಗುವುದು ಎನ್ನುವ ಪುರೋಹಿತರ ಮಾತನ್ನೂ ಕೇಳಿರಬಹುದು. ಹೀಗೆ ದಾನ ಮಾಡಿದ ಮಾತ್ರಕ್ಕೆ ಮಾಡಿದ ಪಾಪ ಕಳೆದುಹೋಗುವುದಿಲ್ಲ. ಒಮ್ಮೆ ಪಾಪದ ಕಾರ್ಯ ಮಾಡಿದವ ದಾನ ಮಾಡಿ ಪಾಪ ಕಳೆದುಕೊಳ್ಳಬಹುದು ಎಂದಾದರೆ ಆತ ಮತ್ತೆ ಮತ್ತೆ ಹೊಸ ಪಾಪದ ಕೃತ್ಯಗಳನ್ನು ಮಾಡುತ್ತಲೇ ಸಾಗುವನು. ಆದರೆ ಶರಣರ ಬದುಕಿನ ವಿಧಾನವೇ ಬೇರೆ. ಅವರು ದಾನ ಮಾಡಿ ಪಾಪ ಕಳೆದುಕೊಳ್ಳುವ ಪ್ರಾಯಶ್ಚಿತ್ತ ಮಾರ್ಗ ಹೇಳಿದವರಲ್ಲ. ಬಸವಣ್ಣನವರ ವಚನ ಈ ನೆಲೆಯಲ್ಲಿ ಅರಿವನ್ನು ಮೂಡಿಸುವಂತಿದೆ.
ಎಲವೋ, ಎಲವೋ ಪಾಪಕರ್ಮವ ಮಾಡಿದವನೇ,
ಎಲವೋ, ಎಲವೋ ಬ್ರಹ್ಮೇತಿಯ ಮಾಡಿದವನೇ,
ಒಮ್ಮೆ ಶರಣೆನ್ನೆಲವೋ,
ಒಮ್ಮೆ ಶರಣೆಂದಡೆ ಪಾಪಕರ್ಮ ಓಡುವವು.
ಸರ್ವಪ್ರಾಯಶ್ಚಿತ್ತಕ್ಕೆ ಹೊನ್ನ ಪರ್ವತಂಗಳೈದವು.
ಒಬ್ಬಗೆ ಶರಣೆನ್ನು, ನಮ್ಮ ಕೂಡಲಸಂಗಮದೇವಂಗೆ.

ಮನುಷ್ಯ ಎಷ್ಟೇ ಪಾಪಕರ್ಮಗಳನ್ನು ಮಾಡಿದ್ದರೂ ಚಿಂತೆಯಿಲ್ಲ. ಅದಕ್ಕಾಗಿ ತನ್ನ ಮನದಲ್ಲೇ ನೊಂದು ಪಶ್ಚಾತ್ತಾಪದ ಉರಿಯಲ್ಲಿ ಬೇಯಬೇಕು. ಮುಂದೆಂದೂ ಪಾಪದ ಕಾರ್ಯಗಳನ್ನು ಮಾಡುವುದಿಲ್ಲ ಎನ್ನುವ ಸಂಕಲ್ಪ ತಳೆಯಬೇಕು. ಅಂತರಾತ್ಮನಲ್ಲಿರುವ ಪರಮಾತ್ಮನಿಗೆ ಶರಣಾಗಬೇಕು. ಇದು ನಿಜವಾದ ಪರಿವರ್ತನೆ ಮತ್ತು ಪಾಪಮುಕ್ತಿಯ ಹೆದ್ದಾರಿ. ಇದನ್ನು ಬಿಟ್ಟು ಪ್ರಾಯಶ್ಚಿತ್ತ ಮಾರ್ಗ ತುಳಿದರೆ ಅವನ ಪಾಪಗಳ ಪಟ್ಟಿ ಬೆಳೆಯುತ್ತಲೇ ಹೋಗುವುದು. ಆತ ತನ್ನ ಪಾಪದ ಕಾರ್ಯಗಳಿಗೆ ಹೊನ್ನಿನ ಪರ್ವತವನ್ನೇ ದಾನ ಮಾಡಿದರೂ ಆ ಪರ್ವತ ಕರಗುವುದೇ ಹೊರತು ಅವನ ಪಾಪಗಳು ಕಡಿಮೆ ಆಗುವುದಿಲ್ಲ. ಶರಣರು ತೋರಿದ ಪ್ರಾಯಶ್ಚಿತ್ತ ಮಾರ್ಗವನ್ನೇ ಮಠದ ಸ್ವಾಮಿಗಳು ಭಕ್ತರಿಗೆ ತೋರಿಸಿ ಅವರನ್ನು ಸುಜ್ಞಾನಿಗಳನ್ನಾಗಿಸಿ ಮೌಢ್ಯದಿಂದ ಮುಕ್ತರನ್ನಾಗಿಸಬೇಕು.
ಲಿಂಗದೇವನೆ ಕರ್ತ, ಶಿವಭಕ್ತನೆ ಶ್ರೇಷ್ಠ,
ಕೊಲ್ಲದಿರ್ಪುದೆ ಧರ್ಮ,
ಅಧರ್ಮದಿಂದ ಬಂದುದನೊಲ್ಲದಿರ್ಪುದೆ ನೇಮ.
ಅಳುಪಿಲ್ಲದಿರ್ಪುದೆ ವ್ರತ.
ಇದೇ ಸತ್ಪಥ, ಉಳಿದುದೆಲ್ಲ ಮಿಥ್ಯವೆಂದೆ ಕಾಣಾ
ದೇವರಾಯ ಸೊಡ್ಡಳಾ.

ಸೊಡ್ಡಳ ಬಾಚರಸರ ಈ ವಚನದಲ್ಲಿ ಯಾರು ದೇವರು, ಯಾರು ಭಕ್ತ, ಯಾವುದು ಧರ್ಮ, ಯಾವುದು ನೇಮ, ವ್ರತ, ಸತ್ಪಥ, ಮಿಥ್ಯ ಎನ್ನುವುದನ್ನು ತುಂಬಾ ಸರಳವಾಗಿ ಹೇಳಿದ್ದಾರೆ. ಅವರ ಸಂದೇಶ ಕರಿಯನ್ನು ಕನ್ನಡಿಯಲ್ಲಿ ಹಿಡಿದಂತೆ ಇದೆ. ಇಷ್ಟಲಿಂಗವೇ ದೇವರೆಂದು ನಂಬಿ ಅದನ್ನು ಧರಿಸಿದವನೇ ಶ್ರೇಷ್ಠ ಸದ್ಭಕ್ತನೆಂದು ಭಾವಿಸಬೇಕು. ಆತ ದೈಹಿಕ ಇಲ್ಲವೇ ಮಾನಸಿಕ ಕೊಲೆ ಮಾಡದಿದ್ದರೆ ಅದೇ ಸದ್ಧರ್ಮ. ಕಾಯಕದಿಂದ ಬಂದುದನ್ನು ಮಾತ್ರ ಸ್ವೀಕರಿಸುವುದು ನಿತ್ಯ ನೇಮ. ಯಾವುದಕ್ಕೂ ಆಸೆಪಡದಿರುವುದೇ ವ್ರತ. ಇವು ಭಕ್ತರ ಲಕ್ಷಣಗಳಾಗಬೇಕು. ಭಕ್ತ ಸುಳ್ಳು ಹೇಳಬಾರದು, ವ್ಯಸನಗಳಿಗೆ ದಾಸನಾಗಬಾರದು, ವಿಷಯಗಳನ್ನು ತೃಣವೆಂದು ತಿರಸ್ಕರಿಸಬೇಕು. ಕೋಪವನ್ನು ನೀಗಿ ಕರುಣೆ, ದಯೆ, ಲಿಂಗವ್ಯಸನ-ಜಂಗಮ ಪ್ರೇಮ ಬೆಳೆಸಿಕೊಳ್ಳಬೇಕು. ಕೀರ್ತಿವಾರ್ತೆಗಾಗಿ ಏನನ್ನಾದರೂ ಮಾಡುವವ ಭಕ್ತನಾಗಲಾರ ಎನ್ನುವರು ಪ್ರಭುದೇವರು. ಚನ್ನಬಸವಣ್ಣನವರು ಅಂಗದ ಮೇಲೆ ಲಿಂಗವಿಲ್ಲದವರು ಭವಿ ಎನ್ನುವರು. ಅವರು ತಮ್ಮ ವಚನದಲ್ಲಿ ಭಕ್ತ ಮತ್ತು ಭವಿಯ ಬಗ್ಗೆ ತುಂಬಾ ಪರಿಣಾಮಕಾರಿಯಾಗಿ ಹೇಳಿದ್ದಾರೆ.
ಭಕ್ತನೆದ್ದು ಭವಿಯ ಮುಖವ ಕಂಡರೆ ರೌರವ ನರಕವೆಂಬರು.
ಭಕ್ತನಾವನು? ಭವಿಯಾವನು? ಬಲ್ಲರೆ ಹೇಳಿ, ಅರಿಯದಿದ್ದರೆ ಕೇಳಿ.
ಕಾಮ ಒಂದನೆಯ ಭವಿ, ಕ್ರೋಧ ಎರಡನೆಯ ಭವಿ
ಲೋಭ ಮೂರನೆಯ ಭವಿ, ಮೋಹ ನಾಲ್ಕನೆಯ ಭವಿ
ಮದ ಐದನೆಯ ಭವಿ, ಮತ್ಸರ ಆರನೆಯ ಭವಿ
ಇಂತೀ ಷಡ್ವಿಧ ಭವಿಯ ತಮ್ಮದೆಯೊಳಗೆ ಇಂಬಿಟ್ಟುಕೊಂಡು
ನಾನು ಭವಿಯ ಮೋರೆಯ ಕಾಣಬಾರದು ಎಂದು
ಮುಖದ ಮೇಲೆ ವಸ್ತ್ರವ ಬಾಸಣಿಸಿಕೊಂಡು ತಿರುಗುವ
ಕುನ್ನಿಗಳ ಮೆಚ್ಚುವನೆ ಕೂಡಲಚೆನ್ನಸಂಗಮದೇವ?

ಭಕ್ತ ಮತ್ತು ಭವಿಯ ವಿವರಣೆಯನ್ನು ಈ ವಚನದಲ್ಲಿ ಚನ್ನಬಸವಣ್ಣನವರು ಪರಿಣಾಮಕಾರಿಯಾಗಿ ನೀಡಿದ್ದಾರೆ. ಕಾಮ, ಕ್ರೋಧಾದಿ ಅರಿಷಡ್ವರ್ಗಗಳನ್ನು ಭವಿ ಎಂದು ಗುರುತಿಸಿ ಅಂಥ ಭವಿಗಳನ್ನು ತಮ್ಮ ಎದೆಯೊಳಗೆ ಇಂಬಿಟ್ಟುಕೊಂಡು ಇತರರನ್ನು ಭವಿ ಎನ್ನುವವರ ಮುಖವನ್ನು ನೋಡಬಾರದು, ಅವರು ನಾಯಿ ಕುನ್ನಿಗಳಿದ್ದ ಹಾಗೆ ಎನ್ನುವರು. ಮನುಷ್ಯ ತನ್ನೊಳಗಿನ ದುರ್ಗುಣಗಳನ್ನು ದಮನ ಮಾಡಿಕೊಂಡು ಶರಣ ಮಾರ್ಗದಲ್ಲಿ ನಡೆಯಬೇಕು. ಆಗ ನಿಜಭಕ್ತನಾಗಲು ಸಾಧ್ಯ. ನಾವು ಯಾವಾಗಲೂ ಭಕ್ತರ ಹಿತಚಿಂತನೆ ಮಾಡುತ್ತೇವೆ ಎನ್ನುವ ಸ್ವಾಮಿಗಳ ಎದೆಯೊಳಗೂ ಈ ಭವಿಗಳು ಇದ್ದಾರೆ. ಹಾಗಾಗಿ ಮೊದಲು ಸ್ವಾಮಿಗಳು ಅರಿಷಡ್ವರ್ಗಗಳಿಂದ ಮುಕ್ತರಾಗಿ ನಂತರ ಭಕ್ತರನ್ನು ಶರಣ ಮಾರ್ಗದಲ್ಲಿ ಕರೆದೊಯ್ಯುವ ಕೆಲಸ ಮಾಡಬೇಕಾಗಿದೆ. ಸ್ವಾಮಿಗಳಾಗುವುದು ಎಂದರೆ ಸುಲಭ ಎಂದು ಭಾವಿಸಬೇಕಾಗಿಲ್ಲ. ತಲೆ ಬೋಳಿಸಿ, ಕಾವಿ ಬಟ್ಟೆ ತೊಟ್ಟಮಾತ್ರಕ್ಕೆ ಒಬ್ಬ ಸ್ವಾಮಿಯಾಗಲು ಸಾಧ್ಯವಿಲ್ಲ. ಪ್ರಭುದೇವರು `ಮಂಡೆ ಬೋಳಾದರೇನು, ಮನ ಬೋಳಾಗದನ್ನಕ್ಕ’ ಎನ್ನುವರು. ತಲೆ ಬೋಳಾದಂತೆ ಮನಸ್ಸು ಸಹ ಬೋಳಾಗಬೇಕು. ದೇಹಕ್ಕೆ ಧರಿಸಿದ ಕಾವಿಯನ್ನು ಸಾಂಕೇತಿಕವಾಗಿಸಿಕೊಂಡು ಪಂಚೇಂದ್ರಿಯಗಳಿಗೆ ಕಾವಿಯನ್ನು ತೊಡಿಸಬೇಕು. ಅಂಥವನು ಮಾತ್ರ ಸ್ವಾಮಿತ್ವಕ್ಕೆ ಗೌರವ ತರಬಲ್ಲ. ಚನ್ನಬಸವಣ್ಣನವರು ಅರಿವುಳ್ಳಾತ ಮಾತ್ರ ಜಂಗಮನಾಗಬಲ್ಲ ಎನ್ನುವರು.
ಕೌಪಕಾಷಾಯಾಂಬರವ ಕಟ್ಟಿ,
ಮಂಡೆ ಬೋಳಾದಡೇನಯ್ಯಾ.
ಎನ್ನಲ್ಲಿ ನಿಜವಿಲ್ಲದನ್ನಕ್ಕ?
ಹೊನ್ನು ಹೆಣ್ಣು ಮಣ್ಣು ತ್ರಿವಿಧವ ತೊರೆದಡೇನಯ್ಯಾ
ಮನದಲ್ಲಿ ವ್ರತಿಯಾಗದನ್ನಕ್ಕ?
ಹಸಿವು ತೃಷೆ ವ್ಯಸನಾದಿಗಳ ಬಿಟ್ಟಡೇನಯ್ಯಾ
ಅರ್ಥದಿಚ್ಛೆ ಮನದಲ್ಲಿ ಹಿಂಗದನ್ನಕ್ಕ?
ಆನು ಜಂಗಮವೆ?
ಆನು ಹಿರಿಯನಾದೆನಲ್ಲದೆ ಆನು ಜಂಗಮವೆ?
ಒಡಲಿಲ್ಲದಾತ ಬಸವಣ್ಣ, ಪ್ರಾಣವಿಲ್ಲದಾತ ಬಸವಣ್ಣ.
[ಎನ್ನ] ಬಸವಣ್ಣನಾಗಿ ಹುಟ್ಟಿಸದೆ
ಪ್ರಭುವಾಗಿ ಏಕೆ ಹುಟ್ಟಿಸಿದೆ ಗುಹೇಶ್ವರಾ?

ಪ್ರಭುದೇವರ ಈ ವಚನ ಮಠಾಧೀಶರ ಬದುಕಿಗೆ ಹಿಡಿದ ಕನ್ನಡಿಯಾಗಿದೆ. `ಎನ್ನನ್ನು ಬಸವಣ್ಣನಾಗಿ ಹುಟ್ಟಿಸದೆ ಪ್ರಭುವಾಗಿ ಏಕೆ ಹುಟ್ಟಿಸಿದೆ’ ಎಂದು ಕೇಳುವ ಮಾತಿನಲ್ಲೇ ಬಸವಣ್ಣ ಎಂಥ ಗುರು ಆಗಿದ್ದರು ಎನ್ನುವುದು ವೇದ್ಯವಾಗುವುದು. ಹಾಗಾಗಿಯೇ ನಮ್ಮ ಗುರುಗಳು ಬಸವಣ್ಣನವರವರನ್ನು ಭಕ್ತಿಭಂಡಾರಿ, ಜಗದಣ್ಣ, ಮಹಾಮಂತ್ರಿ, ಪ್ರಥಮಾಚಾರ್ಯ, ಪೂರ್ವಾಚಾರ್ಯ ಎನ್ನದೆ `ಗೃಹಸ್ಥ ಜಗದ್ಗುರು’ ಎಂದು ಕರೆದಿದ್ದಾರೆ. ಬಸವಣ್ಣನವರು ಯಾವ ಮಠದ ಸ್ವಾಮಿಗಳೂ ಆಗಿರಲಿಲ್ಲ. ಒಬ್ಬ ಆದರ್ಶ ಗೃಹಸ್ಥರಾಗಿದ್ದರು. ಆದರೆ ಒಬ್ಬ ಮಠಾಧೀಶರಿಗಿಂತ ಹೆಚ್ಚಿನ ಧಾರ್ಮಿಕ, ಸಾಮಾಜಿಕ ಸೇವಾಕಾರ್ಯಗಳನ್ನು ಮಾಡಿದ ಕಾರಣದಿಂದ ಅವರನ್ನು ಗೃಹಸ್ಥ ಜಗದ್ಗುರು ಎಂದು ಗೌರವಿಸಿರುವುದು ಅರ್ಥಪೂರ್ಣ ಎನ್ನಿಸುವುದು. ಮಠದ ಸ್ವಾಮಿಗಳು ಬಸವಣ್ಣನವರು ಮಾಡಿದ ಕೆಲಸ ಕಾರ್ಯಗಳನ್ನು ಮಾಡಬೇಕಾಗಿದೆ. ಅಂದರೆ ಎಲ್ಲೆಡೆ ಲಿಂಗ ಸಮಾನತೆ ಮತ್ತು ವ್ಯಕ್ತಿ ಗೌರವ ಕಾಪಾಡುತ್ತ ಜಾತ್ಯತೀತ ತತ್ವವನ್ನು ಎತ್ತಿಹಿಡಿಯಬೇಕು. ಭಕ್ತರಲ್ಲಿ ಅಂಥ ಭಾವನೆ ಗಟ್ಟಿಗೊಳ್ಳುವಂತೆ ನೋಡಿಕೊಳ್ಳಬೇಕು. ಕಾಯಕ ಶ್ರದ್ಧೆ, ಇಷ್ಟಲಿಂಗಪೂಜೆ, ದಾಸೋಹ ಪ್ರಜ್ಞೆ ಇಂಥ ಗುಣಗಳನ್ನು ಬೆಳೆಸಿದಾಗ ಆ ಸ್ವಾಮಿಗಳು ಭಕ್ತಹಿತಚಿಂತನೆ ಮಾಡಿದಂತೆ. ಇವತ್ತು ಭಕ್ತಹಿತಚಿಂತನೆಗಿಂತ ಭಕ್ತರಿಂದ ಪಡೆಯುವುದೇ ಹೆಚ್ಚಾಗುತ್ತಿದೆ.
ಸಿದ್ಧರಾಮೇಶ್ವರರು `ಲೋಕದಲ್ಲಿರುವ ನೂರಾರು ಗುರುಗಳ ನೋಡಿ ನಾನು ಬೇಸರಗೊಂಡೆನಯ್ಯಾ’ ಎನ್ನುವರು. ವಿತ್ತಾಪಹಾರಿ ಗುರುಗಳು, ಶಾಸ್ತ್ರಾರ್ಥ ಹೇಳುವ ಗುರುಗಳು, ಮಂತ್ರತಂತ್ರದ ಗುರುಗಳು, ಸ್ವರ್ಗಮತ್ರ್ಯದಲ್ಲಿ ಸುಖವೀವ ಗುರುಗಳು, ವಿಚಾರದಲ್ಲೇ ಷಟ್ಸಾಧನೆ ಹೇಳುವ ಗುರುಗಳು, ವಿಷಯಂಗಳೆಲ್ಲ ಮಿಥ್ಯವೆನ್ನುವ ಗುರುಗಳು, ಶಿವ ಜೀವರ ಏಕತ್ವ ತಿಳಿಸುವ ಗುರುಗಳು ಎಂದು ವರ್ಗೀಕರಣ ಮಾಡುವರು. ಶಿಷ್ಯನ ಸಂಶಯಗಳನ್ನೆಲ್ಲ ಕಳೆದು ಅವನಲ್ಲಿ ಜ್ಞಾನಜ್ಯೋತಿ ಬೆಳಗಿಸುವವ ನಿಜವಾದ ಗುರು. ಅಂಥ ಗುರುತ್ವ ಚನ್ನಬಸವಣ್ಣನವರದಾಗಿತ್ತು ಎನ್ನುವರು. ಇವತ್ತು ಮಠದ ಗುರುಗಳು ಚನ್ನಬಸವಣ್ಣನವರಂತಹ ಗುರುಗಳಾಗಿ ಶಿಷ್ಯರಲ್ಲಿ ಜ್ಞಾನಜ್ಯೋತಿ ಬೆಳಗಿಸಿ ಅವರನ್ನು ಕಾಯಕಶೀಲರನ್ನಾಗಿಸಿ ಶರಣ ಮಾರ್ಗದಲ್ಲಿ ಕರೆದೊಯ್ಯುವ ಸಂಕಲ್ಪ ಮಾಡಬೇಕು. ಆಗಲೇ ಗುರುತ್ವಕ್ಕೆ ಗೌರವ ಬರುವುದು.
ಹುಸಿಯ ನುಡಿಯನು ಭಕ್ತ, ವ್ಯಸನಕ್ಕೆಳೆಸನು ಭಕ್ತ,
ವಿಷಯಂಗಳಾತಂಗೆ ತೃಣವು ನೋಡಾ, ಬಯಸುವವನಲ್ಲ ಭಕ್ತ.
ದಯೆಯೆಂಬುದು ತನ್ನ ಕೈಯಲ್ಲಿ, ಸ್ಮರಣೆಯೆಂಬುದು ತನಗೆ ತೊತ್ತಾಗಿಪ್ಪುದು.
ಕೋಪವೆಂಥದೆಂದರಿಯ, ತಾಪತ್ರಯಗಳು ಮುಟ್ಟಲಮ್ಮವು.
ವ್ಯಾಪ್ತಿಗಳಡಗಿದವು.
ಲಿಂಗವನೊಳಕೊಂಡ ಪರಿಣಾಮಿ.
ಆತನ ಪಥ ಲೋಕಕ್ಕೆ ಹೊಸತು, ಲೋಕದ ಪಥವಾತನಿಗೆ ಹೊಸತು.
ತನಗೊಮ್ಮೆಯು ಲಿಂಗಧ್ಯಾನ, ಲಿಂಗಕ್ಕೊಮ್ಮೆಯು ತನ್ನ ಧ್ಯಾನ.
ಘನಘನಮಹಿಮೆಯ ಹೊಗಳಲೆನ್ನಳವಲ್ಲ.
ಪನ್ನಗಧರ ಕೇಳಯ್ಯಾ, ಚೆನ್ನ ಹಂಪೆಯ ವಿರುಪಯ್ಯಾ
ನಿಮ್ಮ ನಂಬಿದ ಸತ್ಯಶರಣ ಪರಿಣಾಮಿ.

ಅಗ್ಘವಣಿ ಹಂಪಯ್ಯನವರು ಒಬ್ಬ ಭಕ್ತ ಹೇಗಿರಬೇಕೆಂದು ಸೂಚಿಸುವರು. ಈ ದಾರಿಯಲ್ಲಿ ಭಕ್ತರನ್ನು ಕರೆದೊಯ್ಯುವ ಕಾರ್ಯ ಮಾಡಬೇಕಾದವರು ಸ್ವಾಮಿಗಳು.

Previous post ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
Next post ಶರಣರು ತೋರಿದ ಆಚಾರಗಳು
ಶರಣರು ತೋರಿದ ಆಚಾರಗಳು

Related Posts

ಅವಿರಳ ಅನುಭಾವಿ-2
Share:
Articles

ಅವಿರಳ ಅನುಭಾವಿ-2

April 6, 2020 ಮಹಾದೇವ ಹಡಪದ
ಇದುವರೆಗೆ: ಮಹಾಮನೆಯ ಅಂಗಳದಲ್ಲಿ ಬೆಳೆಯುತ್ತಿದ್ದ ಚನ್ನಬಸವನ ತುಂಟಾಟ ಕೆಲವೊಮ್ಮೆ ತಡೆಯಲಸಾಧ್ಯವೆನಿಸುತ್ತಿತ್ತು. ಸದಾ ಏನಾದರೊಂದು ತರಲೆ ಮಾಡುತ್ತಾ ಎಲ್ಲರನ್ನೂ ಗೋಳು...
ಖಾಲಿ ಕೊಡ ತುಳುಕಿದಾಗ…
Share:
Articles

ಖಾಲಿ ಕೊಡ ತುಳುಕಿದಾಗ…

October 5, 2021 ಲಕ್ಷ್ಮೀಪತಿ ಕೋಲಾರ
“Be vacant and you will remain full”- Lao Tsu ತಾವೋನ ‘ಖಾಲಿ’ಯ ಬಗ್ಗೆ ಇತ್ತೀಚೆಗೆ ನನ್ನ ವ್ಯಸನ ಜಾಸ್ತಿಯಾಗುತ್ತಿದೆ. ತಾವೋನ ಖಾಲಿ ಎಷ್ಟು ಖಾಲಿಯಲ್ಲವೆಂದರೆ ಅದು...

Comments 9

  1. Jayakumar Vijaypur
    Mar 20, 2021 Reply

    ಭಕ್ತರ ದುರ್ಗುಣಗಳನ್ನು ಬಿಡಿಸುವುದು ಸ್ವಾಮಿಗಳ ಕರ್ತವ್ಯ ನಿಜ. ಸ್ವಾಮಿಗಳ ದುರ್ಗುಣ ಬಿಡಿಸುವುದು ಯಾರ ಕರ್ತವ್ಯ?

  2. Kavyashree
    Mar 20, 2021 Reply

    ಸೊಡ್ಡಳ ಬಾಚರಸರ ವಚನ ಬಹಳ ಅರ್ಥಪೂರ್ಣವಾಗಿದೆ. ಸ್ವಾಮಿಗಳಿಗೆ ಈಗ ಹಣ ಗಳಿಸುವುದೇ ಗುರಿಯಾಗಿರುವಾಗ ಭಕ್ತರ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆಯೇ.

  3. Gowrishankar
    Mar 22, 2021 Reply

    ಭಕ್ತ ಮತ್ತು ಭವಿಯ ವಿವರಣೆಯ ಚೆನ್ನಬಸವಣ್ಣನವರ ವಚನ ಮತ್ತೆ ಮತ್ತೆ ಓದುವಂತಿದೆ. ಈ ಹಿಂದೆ ಬಯಲು ಬ್ಲಾಗಲ್ಲಿ ಪ್ರಕಟವಾದ ಭವವೆಂಬ ರೋಗಕ್ಕೆ ಲಿಂಗವೆಂಬ ಮದ್ದು ಲೇಖನ ನೆನಪಾಯಿತು.

  4. Umesh Patri
    Mar 23, 2021 Reply

    ಈಗಿನ ಸ್ವಾಮಿಗಳನ್ನು ನೋಡಿದರೆ ನನಗೆ ಅನಿಸುತ್ತದೆ, ಅವರು ಮೊದಲು ತಮ್ಮ ಬಗ್ಗೆ ಚಿಂತನೆ ನಡೆಸಿಕೊಳ್ಳಲಿ, ಆಮೇಲೆ ಭಕ್ತರನ್ನು ರಿಪೇರಿ ಮಾಡಲಿ.

  5. ಲಲಿತಮ್ಮ
    Mar 24, 2021 Reply

    ಇಷ್ಟಲಿಂಗ ದೀಕ್ಷೆಯಿಂದ ಪಾಪಿಗೂ ಮೋಕ್ಷದ ಹಾದಿಯನ್ನು ತೋರಿದ ಶರಣರ ಧರ್ಮವನ್ನು ಬೋಧನೆ ಮಾಡುವಂತ ಸ್ವಾಮಿಗಳು ಇವತ್ತು ಬಹಳ ತುರ್ತಾಗಿ ಬೇಕಿದೆ. ಜಾತಿ ಗುರುಗಳು ಬೇಡ, ಜ್ಯೋತಿ ಗುರು ಬೇಕು.

  6. Arun Biradar
    Mar 24, 2021 Reply

    ಶರಣರಂತೆ ಸ್ವವಿಮರ್ಶೆ ಮಾಡಿಕೊಳ್ಳುವ ಸ್ವಾಮಿಗಳು ಮಾತ್ರ ಸಮಾಜವನ್ನು, ಭಕ್ತರನ್ನು ಮುನ್ನಡೆಸಬಲ್ಲರು, ಅಲ್ಲವೇ ಗುರುಗಳೇ?

  7. ರಾಜೀವ್ ಜಿಗಳಿ
    Mar 27, 2021 Reply

    ವಚನಗಳನ್ನು ಓದುತ್ತಿದ್ದರೆ ಈಗಿನ ಸ್ವಾಮಿಗಳಿಗೂ ಶರಣರ ಧರ್ಮಕ್ಕೂ ಸಂಬಂಧವೇ ಇಲ್ಲವೆನಿಸುತ್ತದೆ. ತಮ್ಮ ವ್ಯಕ್ತಿತ್ವವನ್ನು ಅರಳಿಸಿಕೊಂಡರೆ ಸಾಕು ಸ್ವಾಮಿಗಳು, ತಮ್ಮ ಮಠದ, ತಮ್ಮ ಭಕ್ತರನ್ನು ಸೃಷ್ಟಿಸಿಕೊಳ್ಳುವುದೂ ದ್ರೋಹವಾಗುತ್ತದೆ. ಯಾರೂ ಯಾರ ಭಕ್ತರೂ ಅಲ್ಲ. ಇದು ನನ್ನ ಅಭಿಪ್ರಾಯ, ತಮಗೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ.

  8. Veeresh S, Belgavi
    Mar 28, 2021 Reply

    ತಮ್ಮ ಸುಖಾಪೇಕ್ಷೆಗಳನ್ನು, ಹಿತಾಸಕ್ತಿಗಳನ್ನು ಪಕ್ಕಕ್ಕಿರಿಸಿ ಭಕ್ತರ ಹಿತ ರಕ್ಷಣೆಯ ಬಗೆಗೆ ಚಿಂತಿಸುವ, ಶ್ರಮಿಸುವ ಸ್ವಾಮಿಗಳ ಅವಶ್ಯಕತೆಯನ್ನು ವಿವರವಾಗಿ ತೋರಿಸಿದ ಲೇಖನ ಸಮಯೋಚಿತವಾಗಿ ಮೂಡಿಬಂದಿದೆ.

  9. Shivananda G
    Apr 4, 2021 Reply

    Very helpful advice in this particular article! It is the little changes that make the greatest changes. Thanks for sharing!

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
October 6, 2020
ಇದ್ದ ಅಲ್ಲಮ ಇಲ್ಲದಂತೆ
ಇದ್ದ ಅಲ್ಲಮ ಇಲ್ಲದಂತೆ
April 29, 2018
ಭಕ್ತನೆಂತಪ್ಪೆ?
ಭಕ್ತನೆಂತಪ್ಪೆ?
April 29, 2018
ಗುರುಪಥ
ಗುರುಪಥ
January 4, 2020
ಗಂಟಿನ ನಂಟು
ಗಂಟಿನ ನಂಟು
November 7, 2020
ನಡೆದಾಡುವ ದೇವರು
ನಡೆದಾಡುವ ದೇವರು
April 9, 2021
ಇದ್ದಷ್ಟೇ…
ಇದ್ದಷ್ಟೇ…
January 10, 2021
ನಾನೆಲ್ಲಿ ಇದ್ದೆ?
ನಾನೆಲ್ಲಿ ಇದ್ದೆ?
April 29, 2018
ಧರ್ಮೋ ರಕ್ಷತಿ ರಕ್ಷಿತಃ
ಧರ್ಮೋ ರಕ್ಷತಿ ರಕ್ಷಿತಃ
January 7, 2019
ನಾನು ಕಂಡ ಡಾ.ಕಲಬುರ್ಗಿ
ನಾನು ಕಂಡ ಡಾ.ಕಲಬುರ್ಗಿ
September 7, 2021
Copyright © 2022 Bayalu