Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸಾವಿಲ್ಲದ ಝೆನ್ ಗುರು-2
Share:
Articles May 10, 2022 ಕೆ.ಆರ್ ಮಂಗಳಾ

ಸಾವಿಲ್ಲದ ಝೆನ್ ಗುರು-2

“ಯುದ್ಧದ ಪ್ರತ್ಯಕ್ಷ ಅನುಭವ ಹೇಗಿರುತ್ತೆ ಗೊತ್ತಾ? ಅಲ್ಲಿ ಸಿಟ್ಟು ಇರುತ್ತೆ, ಭಯ ಇರುತ್ತೆ, ಹತಾಶೆ ಇರುತ್ತೆ… ಬೆಳಿಗ್ಗೆ ಎದ್ದವರು ಮಧ್ಯಾಹ್ನದವರೆಗೆ; ಮಧ್ಯಾಹ್ನ ಊಟ ಮಾಡಿದವರು ಸಂಜೆಗೆ, ಸಂಜೆ ಇದ್ದವರು ರಾತ್ರಿಗೆ, ಉಂಡು ಮಲಗಿದವರು ಬೆಳಿಗ್ಗೆ ಏಳುತ್ತಾರೆನ್ನುವ ಗ್ಯಾರಂಟಿ ಇರೋದಿಲ್ಲ… ಶಾಂತಿಯ ಕುರಿತು ಮಾತನಾಡುವುದಲ್ಲ. ಶಾಂತಿಯೇ ನಾವಾಗುವುದು, ಇಲ್ಲೇ, ಈಗಲೇ. ಇದು ಸಾಧ್ಯ. ಶಾಂತಿ ನಿಮ್ಮ ದೇಹದಲ್ಲಿರಬೇಕು. ನಿಮ್ಮ ಭಾವನೆಗಳಲ್ಲಿರಬೇಕು, ನಿಮ್ಮ ಗ್ರಹಿಕೆಗಳಲ್ಲಿರಬೇಕು. ನಿಮ್ಮ ಪ್ರಜ್ಞೆಯಲ್ಲಿರಬೇಕು…” ವಿಯೆಟ್ನಾಂ ಯುದ್ಧದ ವೇಳೆ ಜನರೊಂದಿಗಿದ್ದು, ಅವರ ಸೇವೆಯಲ್ಲಿ ಸಂಪೂರ್ಣ ತೊಡಗಿಕೊಂಡಿದ್ದು, ಮುಂದೆ ಯುದ್ಧ ನಿಲ್ಲಿಸಲು ಅಂತಾರಾಷ್ಟ್ರೀಯ ನಾಯಕರ ಮನವೊಲಿಕೆಗಾಗಿ ದೇಶ-ವಿದೇಶಗಳನ್ನು ಸುತ್ತಿ ತನ್ನ ತಾಯ್ನಾಡಿನಿಂದಲೇ ಗಡೀಪಾರು ಶಿಕ್ಷೆಗೊಳಗಾಗಬೇಕಾಗಿ ಬಂದ ಝೆನ್ ಗುರು ಥಾಯ್ ಯಾವ ಉದ್ವೇಗಗಳಿಲ್ಲದೆ ಹೇಳುವ ಮಾತುಗಳಿವು.

ಪ್ರಾಚೀನ ಶೈಲಿಯ ಬುದ್ಧ ತತ್ವಗಳು ಈಗಿನವರಿಗೆ ನಿಗೂಢವಾಗಿದ್ದು ಗ್ರಹಿಸಲು ಸಾಧ್ಯವೇ ಇಲ್ಲವೆನ್ನುವಾಗ ಥಾಯ್ ಅವಕ್ಕೆ ಮರುಹುಟ್ಟು ನೀಡಿ, ಅವುಗಳ ಮಹತ್ವವನ್ನು ಮತ್ತು ಅನಿವಾರ್ಯತೆಯನ್ನು ಜಗತ್ತಿಗೆ ತೋರಿಸಿಕೊಟ್ಟರು. ಬುದ್ಧ ತತ್ವಗಳನ್ನು ಪ್ರಚಾರಕ್ಕಾಗಿ ಸೀಮಿತಗೊಳಿಸದೇ, ಇಂದಿನ ಸಮಸ್ಯೆಗಳಿಗೆ, ತಳಮಳಗಳಿಗೆ, ಸವಾಲುಗಳಿಗೆ, ಪ್ರಕ್ಷುಬ್ಧ ಸನ್ನಿವೇಶಗಳಿಗೆ ಉತ್ತರವಾಗಿ ಹೇಗೆ ಅನ್ವಯಿಸಿಕೊಳ್ಳಬಹುದೆಂದು ಕ್ರಿಯಾತ್ಮಕ ರೂಪದಲ್ಲಿ ಜಾಗತಿಕ ಚಳುವಳಿಯಾಗಿ- ಎಂಗೇಜ್ಡ್ ಬುದ್ಧಿಸಂ ಅನ್ನು ಹುಟ್ಟುಹಾಕಿದರು. ಜೀವನವೇ ಒಂದು ಪವಾಡ. ಬದುಕಿನಿಂದ ಹೊರತಾದ ಆಧ್ಯಾತ್ಮ ಇನ್ನೊಂದಿಲ್ಲವೆನ್ನುವ ಸತ್ಯವನ್ನು ಪ್ರತ್ಯಕ್ಷ ಧ್ಯಾನ ಮೈಂಡಫುಲನೆಸ್ ತರಬೇತಿಯ ಮೂಲಕ ಜನಮಾನಸಕ್ಕೆ, ತಲುಪಿಸಿದರು. ಸಾಂಪ್ರದಾಯಿಕವಾಗಿದ್ದ ಧ್ಯಾನದ ಅಭ್ಯಾಸಕ್ಕೆ ಆಧುನಿಕ ಸ್ಪರ್ಶ ನೀಡಿದ್ದರಿಂದ ಲಕ್ಷಾಂತರ ಸಂಖ್ಯೆಯಲ್ಲಿ ಯುವಜನರು ಅವರಿದ್ದ ಫ್ರಾನ್ಸನ ಪ್ಲಮ್ ವಿಲೇಜ್ ನತ್ತ ಹೆಜ್ಜೆಹಾಕಿದರು.

ಝೆನ್ ಎನ್ನುವುದು ಜೀವ, ಜೀವನದ ಕುರಿತಾಗಿ ಸ್ಫಟಿಕದಂತಹ ಒಳನೋಟವುಳ್ಳ ಒಂದು ಗಾಢವಾದ ಜೀವನ ಮೀಮಾಂಸೆ, ಗಹನ ತಿಳುವಳಿಕೆ, ನಮ್ಮನ್ನು ಬಾಧಿಸುತ್ತಿರುವ ವಿಷಯಗಳಿಂದ ಮುಕ್ತವಾಗಿ ಹೇಗೆ ಜೀವಿಸುವುದೆಂದು ತೋರುವ ದಾರಿ. ಮನುಷ್ಯರಾರೂ ಒಬ್ಬರಿಂದ ಮತ್ತೊಬ್ಬರು ಬೇರೆಯಾಗಿಲ್ಲ, ಪ್ರಕೃತಿಯಿಂದಲೂ ಭಿನ್ನವಾಗಿಲ್ಲ. ಸಂಪೂರ್ಣವಾಗಿ ಪ್ರಕೃತಿ ಮತ್ತು ಪ್ರತಿಯೊಂದು ಜೀವಿ ಪರಸ್ಪರ ಸಂಬಂಧದಲ್ಲಿಯೇ ಬದುಕುತ್ತಿರುವುದು. ನಮ್ಮ ಕ್ರಿಯೆಗಳೆಲ್ಲವೂ ಒಟ್ಟಾರೆಯಾಗಿ ಎಲ್ಲರ ಮೇಲೂ ಪರಿಣಾಮವುಂಟುಮಾಡುತ್ತಿರುತ್ತವೆ. ಇತರರಿಗೆ ನಾವು ಏನನ್ನು ಮಾಡುತ್ತಿರುತ್ತೇವೆಯೋ ಅದನ್ನು ನಮಗೂ ಮಾಡಿಕೊಳ್ಳುತ್ತಿರುತ್ತೇವೆ. ಪ್ರಕೃತಿಯೊಂದಿಗೆ ಹೇಗೆ ನಡೆದುಕೊಳ್ಳುವೆವೋ ಅದು ನಮ್ಮೊಂದಿಗೆ ನಾವೇ ನಡೆದುಕೊಳ್ಳುತ್ತಿರುವ ಕ್ರಿಯೆಯಾಗಿರುತ್ತದೆನ್ನುವುದು ಝೆನ್ ಆಂತರ್ಯ. ಅದು ವಿಚಾರಗಳ, ತರ್ಕಗಳ ಗೊಡ್ಡು ಕಸರತ್ತಲ್ಲ. ಆಲೋಚನೆಗಳೊಂದಿಗೆ ಝೆನ್ ಗೆ ಯಾವುದೇ ವ್ಯವಹಾರವಿಲ್ಲ. ಭವಗಳಿಂದ ಬಿಡಿಸಿಕೊಂಡು, ನಿಸರ್ಗದೊಂದಿಗೆ ಅವಿನಾಭಾವ ಸಂಬಂಧದಲ್ಲಿರಲು ಪ್ರಸ್ತುತ ಕ್ಷಣದಲ್ಲಿ ಬದುಕಲು ಹಚ್ಚುವುದೇ ಇದರ ಅಂತರಾಳ. ಈ ಕ್ಷಣದಲ್ಲೇ ನಾವು ಎಚ್ಚರಗೊಳ್ಳಬಹುದು ಅಥವಾ ಶಾಶ್ವತವಾಗಿ ಮಲಗಬಹುದು- ಇದು ಪೂರ್ತಿ ನಮ್ಮನ್ನೇ ಅವಲಂಬಿಸಿದೆ. ಉತ್ತಮ ಗುರು ಬಾಗಿಲು ತೆರೆದು ದಾರಿ ತೋರುತ್ತಾನೆ, ಆದರೆ ಒಳಗೆ ಪ್ರವೇಶಿಸಬೇಕಾದದ್ದು ನೀನೇ ಎಂದು ಸಾಧಕರು ಹಾಕಲೇ ಬೇಕಾದ ಪರಿಶ್ರಮಕ್ಕೆ ಝೆನ್ ಚಾಲನೆ ನೀಡುತ್ತದೆ.

ತತ್ವಸಿದ್ಧಾಂತವಾಗಿ ಬೌದ್ಧ ಧರ್ಮವನ್ನು ಆಳವಾಗಿ ಅಧ್ಯಯನ ಮಾಡಿದ್ದ ಥಾಯ್, ಧ್ಯಾನ ಸಾಧನೆಯಿಂದ ಅವುಗಳನ್ನು ತಮ್ಮ ಬದುಕಿನಲ್ಲಿ ಕಂಡುಕೊಂಡ ಕಾಣ್ಕೆಗಳನ್ನು ನೂರಾರು ಪುಸ್ತಕಗಳಲ್ಲಿ ದಾಖಲಿಸಿದ್ದಾರೆ. ಅವುಗಳಲ್ಲಿ ಜನನ-ಮರಣಗಳೆಂಬ ಎರಡು ತುದಿಗಳಲ್ಲಿ ಜೀವನವನ್ನು ಗ್ರಹಿಸಬಾರದೆಂದು, ತಮ್ಮ ಅನುಭಾವದ ಮೂಲಕ, ಸಾಕ್ಷೀಕರಿಸಿಕೊಂಡಿರುವುದಕ್ಕೆ ಉದಾಹರಣೆಯಾಗಿ ಅವರದೇ ಕೆಲವು ಬರಹಗಳ ಸಣ್ಣ ತುಣುಕುಗಳು ಇಲ್ಲಿವೆ:

“ಇವತ್ತು ನನ್ನ ಜೀವನದ ಅತ್ಯಂತ ದುರ್ದೈವದ ದಿನ”- ಎಂದು ತಮ್ಮ ತಾಯಿ ತೀರಿ ಹೋದ ದಿನ ದಿನಚರಿಯಲ್ಲಿ ಬರೆಯುತ್ತಾರೆ. ಬೌದ್ಧ ಸನ್ಯಾಸಿಯಾಗಿದ್ದರೂ ಅಮ್ಮನ ಸಾವು ಒಂದು ವರ್ಷಕ್ಕೂ ಹೆಚ್ಚು ಕಾಲ ಅವರನ್ನು ಇನ್ನಿಲ್ಲದಂತೆ ಬಳಲಿಸಿತ್ತು. ವಿಯೆಟ್ನಾಮಿನ ಎತ್ತರದ ಪ್ರದೇಶದಲ್ಲಿದ್ದ ಆಶ್ರಮದ ಕುಟೀರದಲ್ಲಿ ಮಲಗಿದ್ದ ಒಂದು ರಾತ್ರಿ ಅವರು ಅಮ್ಮನನ್ನ ಕನಸಲ್ಲಿ ಕಾಣುತ್ತಾರೆ. ಅದ್ಭುತವಾಗಿ ಇಬ್ಬರೂ ಮಾತನಾಡುತ್ತಿರುವಂತೆ, ತುಂಬಾ ಆಹ್ಲಾದಕರವೆನಿಸುವ ಅಮ್ಮನ ಸಾನಿಧ್ಯ,.. ಆ ದಿನದ ಅವರ ಅನುಭವ – “ಎಚ್ಚರಾದಾಗ ಬೆಳಗಿನ ಜಾವ ಎರಡುಗಂಟೆ. ನಾನು ಅಮ್ಮನನ್ನು ಕಳೆದುಕೊಂಡಿಲ್ಲ ಎಂಬ ಭಾವ ಬಲವಾಗಿ ಅನಿಸುತ್ತಿದ್ದಂತೆ, ಆಕೆ ಯಾವತ್ತೂ ನನ್ನೊಡನೆ ಇದ್ದಾಳೆನ್ನುವುದು ಸ್ಪಷ್ಟವಾಗತೊಡಗಿತ್ತು. ಅಮ್ಮನನ್ನು ಕಳೆದುಕೊಂಡೆ ಎನ್ನುವುದು ಕೇವಲ ನನ್ನ ಕಲ್ಪನೆ ಎಂದರ್ಥವಾಯಿತು. ನನ್ನಮ್ಮ ನನ್ನಲ್ಲಿ ಸದಾ ಜೀವಂತವಾಗಿರುತ್ತಾಳೆ ಎಂಬುದು ಆ ಕ್ಷಣದಲ್ಲಿ ಸ್ಪಷ್ಟವಾಯಿತು. ಬಾಗಿಲು ತೆರೆದು ಹೊರಹೋದೆ. ಇಡೀ ಬೆಟ್ಟವೇ ಬೆಳದಿಂಗಳ ಬೆಳಕಿನಲ್ಲಿ ಮುಳುಗಿತ್ತು. ಅದು ಚಹಾ ಗಿಡಗಳಿಂದ ತುಂಬಿದ ಬೆಟ್ಟ. ಚಹಾ ಗಿಡಗಳ ಸಾಲುಗಳ ನಡುವೆ ಮೆಲ್ಲನೆ ಬೆಳದಿಂಗಳ ಬೆಳಕಲ್ಲಿ ನಡೆಯುತ್ತಿರುವಾಗ ನನ್ನಮ್ಮ ನನ್ನೊಂದಿಗಿರುವುದನ್ನು ಗಮನಿಸಿದೆ. ಬೆಳದಿಂಗಳ ಬೆಳಕಾಗಿ ನನ್ನನ್ನು ಪ್ರೀತಿಯಿಂದ ಮೃದುವಾಗಿ ನೇವರಿಸುವಂತೆ.., ಎಷ್ಟೊಂದು ಕೋಮಲ, ಎಷ್ಟು ಮಧುರ… ಅದ್ಭುತ! ಪ್ರತಿ ಬಾರಿ ನನ್ನ ಪಾದಗಳು ಭೂಮಿಯನ್ನು ಸ್ಪರ್ಶಿಸಿದಾಗ ಅಮ್ಮ ನನ್ನೊಂದಿಗಿದ್ದಾಳೆ ಎಂದು ಗೊತ್ತಾಗುತ್ತಿತ್ತು. ಈ ದೇಹವು ನನ್ನದಲ್ಲ, ಇದು ನನ್ನ ಅಮ್ಮ, ಅಪ್ಪ, ಅಜ್ಜಿ, ಮುತ್ತಜ್ಜರ ಜೀವಂತ ಮುಂದುವರಿಕೆಯಾಗಿದೆ. ನನ್ನೆಲ್ಲಾ ಪೂರ್ವಜರ ಮುಂದುವರಿಕೆ ನಾನು. ಯಾವುಗಳನ್ನು ನಾನು ‘ನನ್ನ’ ಪಾದಗಳೆಂದುಕೊಂಡಿರುವೆನೋ ಅವು ವಾಸ್ತವವಾಗಿ ‘ನಮ್ಮ’ ಪಾದಗಳಾಗಿವೆ. ನನ್ನಮ್ಮ ಮತ್ತು ನಾನು ಒದ್ದೆಯಾದ ಮಣ್ಣಿನಲ್ಲಿ ಹೆಜ್ಜೆಗುರುತುಗಳನ್ನು ಮೂಡಿಸುತ್ತಾ ಮುಂದೆ ಹೋಗುತ್ತಿದ್ದೆವು. ಆ ಕ್ಷಣದಿಂದ ಅಮ್ಮನನ್ನು ಕಳೆದುಕೊಂಡೆ ಎನ್ನುವ ಯೋಚನೆ ನನ್ನಲ್ಲಿ ಉಳಿಯಲೇ ಇಲ್ಲ. ನನ್ನ ಅಂಗೈ ದಿಟ್ಟಿಸಿದೆ, ನನ್ನ ಮುಖದ ಮೇಲಿನ ತಂಗಾಳಿಯ ಸ್ಪರ್ಶವನ್ನು, ಪಾದಗಳ ಕೆಳಗಿನ ಭೂಮಿಯ ಇರುವಿಕೆಯನ್ನು ಅನುಭವಿಸುತ್ತಾ ನನ್ನಮ್ಮ ನನ್ನೊಂದಿಗಿರುತ್ತಾಳೆ, ಯಾವ ಸಮಯದಲ್ಲಾದರೂ ಆಕೆ ನನಗೆ ಸಿಗುತ್ತಾಳೆ ಎಂಬುದನ್ನು ಕಂಡುಕೊಂಡೆ.
# # #
ಅದು ಎಲೆಗಳೆಲ್ಲಾ ಉದುರುತ್ತಿದ್ದ ಶರತ್ಕಾಲವಾದ್ದರಿಂದ, ನಾನು ಹಾಗೆ ಉದುರುತ್ತಿದ್ದ ಎಲೆಯನ್ನು ನಿನಗೆ ಭಯವಾಗುತ್ತಿದೆಯೇ ಎಂದು ಕೇಳಿದೆ. ಆಗ ಎಲೆ ಹೇಳಿತು- “ಇಲ್ಲ, ಇಡೀ ವಸಂತ ಮತ್ತು ಬೇಸಿಗೆಯಲ್ಲಿ ನಾನು ತುಂಬಾ ಜೀವಂತಿಕೆಯಿಂದಿದ್ದೆ. ಆಗ ನಾನು ಕಷ್ಟಪಟ್ಟು ಕೆಲಸ ಮಾಡಿ ಮರವನ್ನು ಪೋಷಿಸಲು ಸಹಾಯಕವಾದೆ. ನನ್ನಲ್ಲಿ ಹೆಚ್ಚಿನದು ಆ ಮರದಲ್ಲೇ ಇದೆ. ದಯವಿಟ್ಟು ನಾನು ಕೇವಲ ಈ ಎಲೆಯ ರೂಪವೆಂದು ಭಾವಿಸಬೇಡ. ಏಕೆಂದರೆ ಈ ಎಲೆಯ ರೂಪವು ನನ್ನದೊಂದು ಸಣ್ಣ ಅಂಶ ಮಾತ್ರ! ನಾನು ಇಡೀ ಮರ, ಈಗಾಗಲೇ ನಾನು ಮರದೊಳಗಿದ್ದೇನೆ ಎಂಬುದು ನನಗೆ ತಿಳಿದಿದೆ. ಮತ್ತೆ ನಾನು ಮಣ್ಣು ಸೇರಿದಾಗ ಮರಕ್ಕೆ ಪೋಷಕವಾಗುತ್ತೇನೆ, ಆದ್ದರಿಂದ ನಾನು ಚಿಂತಿಸುವುದಿಲ್ಲ. ಕೊಂಬೆಯಿಂದ ಬೇರ್ಪಟ್ಟು ಗಾಳಿಯಲ್ಲಿ ತೇಲುತ್ತಾ ನೆಲವನಪ್ಪುವಾಗ ಮರಕ್ಕೆ ಕೈ ಬೀಸಿ ಹೇಳುತ್ತೇನೆ- ‘ಶೀಘ್ರದಲ್ಲೇ ಮತ್ತೆ ನಿನ್ನ ಸೇರುತ್ತೇನೆ’ ಎಂದು.
ಇಡಿಯಾಗಿ ಬದುಕನ್ನು ಗ್ರಹಿಸಲು ಬರಬೇಕು. ಎಲೆಯ ಜೀವ ಎನ್ನಬಾರದು. ಎಲೆಯಲ್ಲಿ ಜೀವ, ಮರದಲ್ಲಿ ಜೀವ ಎನ್ನಬೇಕು. ನನ್ನ ಜೀವ ಎನ್ನುವುದು ಕೇವಲ ಜೀವವಷ್ಟೇ. ಅದನ್ನು ನೀವು ನನ್ನಲ್ಲೂ ಮತ್ತು ಮರದಲ್ಲೂ ಕಾಣಬಹುದು. ಕೊಂಬೆಯಿಂದ ಕಳಚಿಕೊಂಡು ಎಲೆಯು ತೇಲುತ್ತಾ ಮಣ್ಣ ಸೇರುವುದನ್ನು ನಾನು ಕಂಡೆ, ಅದು ಸಂತೋಷದಿಂದ ನರ್ತಿಸುತ್ತಿದೆ, ಏಕೆಂದರೆ ಅದು ತೇಲುತ್ತಾ ಇಳಿಯುವಾಗ ಮರದಲ್ಲಿರುವ ತನ್ನ ಇರುವನ್ನು ನೋಡಿಕೊಂಡಿದೆ. ಹೀಗಾಗಿ ಅದು ಸಂತೋಷವಾಗಿದೆ. ನಾನು ತಲೆ ಬಾಗಿಸಿದೆ. ಎಲೆಯಿಂದ ನಾವು ಕಲಿಯುವುದು ಬಹಳವಿದೆ ಎಂದು ನನಗೆ ತಿಳಿದಿತ್ತು. ಎಲೆ ಹೆದರುವುದಿಲ್ಲ. ಯಾವುದೂ ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ ಎಂದು ಅದಕ್ಕೆ ತಿಳಿದಿತ್ತು.

ಮೈಂಡಫುಲನೆಸ್ ಎಂದರೇನು?

“ಧ್ಯಾನವೆಂದರೆ ಪಲಾಯನವಲ್ಲ. ಅದು ವಾಸ್ತವದೊಂದಿಗೆ ಪ್ರಶಾಂತವಾದ ಮುಖಾಮುಖಿ. ಮೈಂಡಫುಲನೆಸ್ ಅನ್ನು ಅಭ್ಯಾಸ ಮಾಡುವ ವ್ಯಕ್ತಿ ಕಾರಿನ ಚಾಲಕನಷ್ಟೇ ಜಾಗರೂಕವಾಗಿರಬೇಕು. ಎತ್ತರದ ಕಂಬಗಳ ಮೇಲೆ ಸಮತೋಲನ ಸಾಧಿಸುತ್ತಾ ನಡೆಯುವವನಂತೆ ಎಚ್ಚರವಾಗಿರಬೇಕು, ಯಾವುದೇ ಸಣ್ಣ ತಪ್ಪು ಹೆಜ್ಜೆಯೂ ದೊಪ್ಪನೆ ನಮ್ಮನ್ನು ಬೀಳಿಸಿಬಿಡಬಹುದು. ನಿಧಾನವಾಗಿ, ಮೃದುವಾಗಿ, ದೃಢವಾದ ಹೆಜ್ಜೆಗಳೊಂದಿಗೆ ಸಿಂಹದಂತೆ ಮುಂದುವರಿಯಿರಿ. ಈ ರೀತಿಯ ಜಾಗರೂಕತೆಯಿಂದ ಮಾತ್ರ ಸಂಪೂರ್ಣ ಜಾಗೃತಿಯನ್ನು ಮೈಗೂಡಿಸಿಕೊಳ್ಳಬಹುದು. ಪ್ರಸ್ತುತ ಕ್ಷಣವು ಸಂತೋಷ ಮತ್ತು ಆನಂದದಿಂದ ತುಂಬಿದೆ. ಗಮನ ಹರಿಸಿದರೆ ಖಂಡಿತ ನೀವು ಅದನ್ನು ನೋಡುತ್ತೀರಿ.” ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಇದನ್ನು ಪರಿಶೀಲಿಸಿದರೆ ಈ ಅಭ್ಯಾಸದ ಸೂಕ್ಷ್ಮತೆಗಳು ಮತ್ತಷ್ಟು ಮನದಟ್ಟಾಗುತ್ತವೆ.

ನಮ್ಮ ನಿಜವಾದ ಮನೆ ಭೂತಕಾಲದಲ್ಲಿಲ್ಲ, ನಮ್ಮ ನಿಜವಾದ ಮನೆ ಭವಿಷ್ಯದಲ್ಲೂ ಇಲ್ಲ. ಅದಿರುವುದು ಇರುವುದು ಇಲ್ಲೆ, ಈಗಲೇ. ಜೀವನವು ಇಲ್ಲಿ, ಈ ಕ್ಷಣದಲ್ಲಿ ಮಾತ್ರ ಲಭ್ಯ ಇರುವಂತಹುದು. ಮೈಂಡಫುಲನೆಸ್ ಎಂಬುದು ನಮ್ಮ ಜೀವನದಲ್ಲಿ ಈಗಾಗಲೇ ಇರುವ ಸಂತೋಷವನ್ನು ಗುರುತಿಸಲು ಸಹಾಯ ಮಾಡುವ ಶಕ್ತಿ. ಈ ಸಂತೋಷವನ್ನ ಪಡೆಯಲು ಹತ್ತಾರು ವರ್ಷ ಕಾಯಬೇಕಿಲ್ಲ. ಇದು ನಮ್ಮ ಜೀವನದ ಪ್ರತಿಕ್ಷಣದಲ್ಲೂ ಇರುತ್ತದೆ. ಆದರೆ ನಾವಿಂದು ಬದುಕುವುದನ್ನೇ ಮರೆತುಬಿಟ್ಟಿದ್ದೇವೆ. ಪ್ರಸ್ತುತ ಕ್ಷಣಗಳು ಮಾತ್ರವೇ ನಮ್ಮವು ಎನ್ನುವುದನ್ನು ಓದಿ, ಕೇಳಿ ತಿಳಿದಿದ್ದರೂ ಈ ಕ್ಷಣದಲ್ಲಿ ಬದುಕುವುದು ಹೇಗೆಂದು ಗೊತ್ತಾಗುವುದೇ ಇಲ್ಲ, ಹಾಗೆ ಗೊತ್ತುಮಾಡಿಕೊಳ್ಳಲು ಇರುವ ಅಡಚಣೆಯೂ ನಾವೇ ಆಗಿದ್ದೇವೆ! ಏಕೆಂದರೆ ನಮ್ಮ ದೇಹ ಮತ್ತು ಮನಸ್ಸುಗಳು ಸಾವಿರಾರು ಮೈಲಿ ಅಂತರದಲ್ಲಿವೆ. ಮನಸ್ಸು ಒಂದಲ್ಲಾ ಒಂದು ಚಿಂತೆಗಳಲ್ಲಿ, ಭಯಗಳಲ್ಲಿ, ವಿಷಾದಗಳಲ್ಲಿ, ಕೈಗೆಟುಕದ ಕನಸುಗಳಲ್ಲಿ, ಯಾವುದ್ಯಾವುದೋ ನಿರೀಕ್ಷೆಗಳಲ್ಲಿ, ಲಾಭ-ನಷ್ಟಗಳ ಲೆಕ್ಕಾಚಾರಗಳಲ್ಲಿ ವ್ಯವಹರಿಸುತ್ತಿರುತ್ತದೆ. ಆದರೆ ಜೀವನಕ್ಕೆ ಅಗತ್ಯವಾಗಿ ಬೇಕೇ ಬೇಕಾದ- ಸೌಂದರ್ಯ, ಪ್ರೀತಿ, ಸೃಜನಶೀಲತೆ, ಸಂತೋಷ, ಶಾಂತಿ, ಸ್ವಾತಂತ್ರ್ಯ- ಈ ಎಲ್ಲವೂ ಮನಸ್ಸಿನ ಆಚೆಯಿಂದ ಉದ್ಭವಿಸುತ್ತವೆ. ಮನಸ್ಸಿನ ತುಮುಲಗಳಲ್ಲಿರುವವರಿಗೆ ಇವಾವೂ ಕೈಗೆಟುಕಲಾರವು. ಇನ್ನು ಚಂಚಲರೂಪಿ ಚಿತ್ತದ ಗುಲಾಮನಾಗಿರುವ ದೇಹವು ಒಂದೆಡೆ ಸುಖದ ತೆವಲಿಗೂ, ಮತ್ತೊಂದೆಡೆ ತೀವ್ರ ಒತ್ತಡಗಳಿಗೂ ಸಿಲುಕಿಕೊಂಡು ನಾನಾ ರೋಗಗಳಿಗೆ ಗ್ರಾಸವಾಗುತ್ತಾ ತನ್ನ ಅಗಾಧತೆಯನ್ನೇ ಮರೆತು ಬಿಟ್ಟಿರುತ್ತದೆ. ಹೀಗೆ ದೇಹ-ಮನಸ್ಸುಗಳನ್ನು ನಿನ್ನೆ-ನಾಳೆಗಳಲ್ಲಿ ಕಳೆದುಕೊಂಡಿರುವ ನಮಗೆ ಪ್ರಸ್ತುತ ಗಳಿಗೆಯ ಮಹತ್ವ ತಿಳಿಯುವುದಾದರೂ ಹೇಗೆ? ಇದನ್ನೇ ಶರಣರು ಮರೆವು ಎಂದು ಕರೆದರು. ನಿಜಕ್ಕೂ ಇದೊಂದು ಗಂಭೀರ ಸಮಸ್ಯೆ!! ಆದರೆ ಇದರ ಕಿಂಚಿತ್ ಕಲ್ಪನೆಯೂ ಇಲ್ಲದೆ ಯಾಂತ್ರಿಕವಾಗಿ ಜೀವನ ನಡೆಸುತ್ತಿರುತ್ತೇವೆ. ನಾವು ಬದುಕಿರುತ್ತೇವೆ ಅಷ್ಟೇ, ಆದರೆ ನಿಜದ ನೆಲೆಯಲ್ಲಲ್ಲ… ಈ ಕ್ಷಣದಲ್ಲೇ ಜೀವನ ಲಭ್ಯ ಎನ್ನುವ ಅದ್ಭುತ ಸತ್ಯ ನಮಗೆ ಪ್ರತಿಕ್ಷಣವೂ ಮಿಸ್ ಆಗುತ್ತಿರುತ್ತದೆ!! ಮರೆವಿನ ವಿರುದ್ಧ ಪದವೇ ಮೈಂಡಫುಲನೆಸ್. ಹಾಗೆಂದರೆ ಪ್ರಜ್ಞೆಯಲ್ಲಿ ಬದುಕುವುದು, ಅಲ್ಲಿ ದೇಹ-ಮನಸ್ಸುಗಳೆರಡು ಒಂದಾಗಿರುತ್ತವೆ. ಶರಣರು ಪ್ರಯೋಗಿಸಿದ ಅರಿವು ಎನ್ನುವ ಶಬ್ದವನ್ನು ಇದಕ್ಕೆ ಸಂವಾದಿಯಾಗಿ ಬಳಸಬಹುದು. ದೇಹವನ್ನು ಮನಸ್ಸಿನೊಂದಿಗೆ ಬೆಸೆಯುವುದು ಅರಿವಿನಲ್ಲಿ ನಡೆಸುವ ಉಸಿರಾಟದ ಅಭ್ಯಾಸದಿಂದ. ವಾಸ್ತವಕ್ಕೆ ಹಚ್ಚುವ ಈ ಅಭ್ಯಾಸದಿಂದ ಮನಸ್ಸು ಶಾಂತವಾಗಿರುತ್ತದೆ. ಸುತ್ತಲೂ ಏನು ನಡೆಯುತ್ತದೆನ್ನುವ ಎಚ್ಚರಿಕೆ ತಂತಾನೇ ಸಾಧ್ಯವಾಗುತ್ತದೆ.

ನಿಮ್ಮ ಜೀವನದ ಅದ್ಭುತ ಕ್ಷಣ ಯಾವುದು ಅಂತ ಕೇಳಿದರೆ, ನಾವು ಸಾಮಾನ್ಯವಾಗಿ ಅದಿನ್ನೂ ಬಂದಿಲ್ಲ, ಮುಂದಿನ ದಿನಮಾನಗಳಲ್ಲಿ ಅದನ್ನು ನಿರೀಕ್ಷಿಸಿದ್ದೇನೆ- ಎನ್ನುತ್ತೇವೆ. ಬಹಳ ಜನರಿಗೆ ಆ ಕ್ಷಣ ಕೊನೆ ಉಸಿರಿನ ತನಕ ಸಿಗುವುದೇ ಇಲ್ಲ. “ಪ್ರಸ್ತುತ ಕ್ಷಣವನ್ನು ನಿಮ್ಮ ಜೀವನದ ಅತ್ಯಂತ ಅದ್ಭುತ ಕ್ಷಣವಾಗಿಸಿಕೊಳ್ಳಿ- ಎನ್ನುತ್ತಾನೆ ಬುದ್ಧ. ಇದು ಸಾಧ್ಯ. ಈ ಕ್ಷಣ ನಿಮ್ಮ ನಿಜದ ನೆಲೆಗೆ ಹೋಗಲು ಸಾಧ್ಯವಾದರೆ, ನಿಮ್ಮೊಳಗಿನ ಮತ್ತು ನಿಮ್ಮ ಸುತ್ತಲಿನ ಎಲ್ಲಾ ಅದ್ಭುತಗಳನ್ನು ಸ್ಪರ್ಶಿಬಲ್ಲಿರಿ ನಿಮಗೆ ಸೇರಿದ ಎಲ್ಲವೂ ಅದ್ಭುತವಾಗಿವೆ. ನಿಮ್ಮ ಕಣ್ಣು, ಕಿವಿ, ಮೂಗು, ಬಾಯಿ, ಮನಸ್ಸು, ದೇಹ… ಎಲ್ಲವೂ. ನೀವು ಅರಿವಿಗೆ ಬರದ ಹೊರತು ನಿಮಗೆ ಇವು ಯಾವನ್ನೂ ಆಳವಾಗಿ ಸ್ಪರ್ಶಿಸಲು ಸಾಧ್ಯವಿಲ್ಲ, ಅವೆಲ್ಲಾ ವಿಸ್ಮಯಗಳೆಂದು ಸಾಯುವವರೆಗೆ ಗೊತ್ತಾಗುವುದೇ ಇಲ್ಲ. ಆಗ ಅಯ್ಯೋ ನಾನು ಬದುಕಲೇ ಇಲ್ಲವಲ್ಲ ಎಂದು ಮರುಗುವಿರಿ…” ಎನ್ನುವ ಥಾಯ್, ನಮ್ಮ ನಿಜ ನೆಲೆಗೆ ನಾವು ಇಲ್ಲೇ, ಈಗಲೇ ಮರಳಬಹುದು… ಇಲ್ಲೇ, ಈಗಲೇ ಅದನ್ನು ಸ್ಪರ್ಶಿಸಬಹುದೆಂದು ಅರಿವಿನ ದಾರಿ ತೋರಿಸುತ್ತಾರೆ:

ನಾವ್ಯಾರು, ಅವರು ಯಾರು, ಈ ಜಗತ್ತು ಏನು… ಎನ್ನುವ ಬಗೆಗೆ ನಮ್ಮಲ್ಲಿ ತಪ್ಪು ಗ್ರಹಿಕೆಗಳಿರುತ್ತವೆ. ಗ್ರಹಿಕೆಗಳೇ ನಮ್ಮೆಲ್ಲಾ ಕ್ರಿಯೆಗಳಿಗೆ ಮೂಲವಾಗಿರುವುದರಿಂದ, ಇಂತಹ ತಪ್ಪು ಗ್ರಹಿಕೆಗಳೇ ನೋವು, ದುಃಖ, ಭಯ, ನಾಶಗಳನ್ನುಂಟು ಮಾಡುವ ನಮ್ಮ ಕ್ರಿಯೆಗಳ ಹಿಂದಿನ ಒತ್ತಡಗಳಾಗಿರುತ್ತವೆ. ಈ ಪೂರ್ವಾಗ್ರಹಗಳಿಂದ ಮನಸ್ಸು ತುಂಬಿಹೋಗಿರುವುದರಿಂದ ವಸ್ತು ಅಥವಾ ವಿಷಯಗಳನ್ನು ಅವು ಇದ್ದಂತೇ ಗ್ರಹಿಸುವುದು ನಮ್ಮಿಂದ ಸಾಧ್ಯವಾಗುವುದಿಲ್ಲ. ಶಾಂತತೆ ಇಲ್ಲದಿರುವುದರಿಂದ ಸ್ಪಷ್ಟತೆಯೂ ಸಿಗುವುದಿಲ್ಲ. ಆದ್ದರಿಂದ ನಿತ್ಯದ ಜೀವನದಲ್ಲಿ ನಾವು ನಾವಾಗಿರುವ ಸಾಧ್ಯತೆಗಳೇ ಬಲು ಕಡಿಮೆ, ಅಂದರೆ ಸಂಚಿತ ಭಾವನೆಗಳಿಂದ, ಮಾನಸಿಕ ರಚನೆಗಳಿಂದ, ಗ್ರಹಿಕೆಗಳಿಂದ ನಮ್ಮ ವರ್ತನೆಗಳು ಮುಕ್ತವಾಗಿರುವುದಿಲ್ಲ, ಸಾಗರದ ಮೇಲಿನ ಎಲೆಯನ್ನು, ಅಲೆಗಳೇ ಹೇಗೆ ದಬ್ಬುತ್ತಿರುತ್ತವೋ, ಎತ್ತಿ ಬಿಸಾಡುತ್ತಿರುತ್ತವೆಯೋ ಹಾಗೆಯೇ ಪರಿಸ್ಥಿತಿಗಳ ಮೇಲೆ ನಮಗೆ ನಮ್ಮದೆ ಆದ ಹಿಡಿತವೇ ಇರುವುದಿಲ್ಲ. ಅವಕ್ಕೆಲ್ಲಾ ನಾವು ಸುಲಭವಾಗಿ ಒಡ್ಡಿಕೊಂಡು, ಎಲ್ಲಕ್ಕೂ ಬಲಿಪಶುವಾಗುತ್ತಿರುತ್ತೇವೆ. ಆದ್ದರಿಂದ ನಮ್ಮ ನಿಜಮನೆಗೆ ವಾಪಸ್ಸಾಗುವುದು, ಸನ್ನಿವೇಶಗಳನ್ನು ಹಿಡಿತಕ್ಕೆ ತೆಗೆದುಕೊಳ್ಳುವುದು ಮತ್ತು ನಮಗೆ ನಾವೇ ಯಜಮಾನರಾಗುವುದು ಸಾಧ್ಯವಾಗದೇ ಹೋಗುತ್ತದೆ. ನಿಜಕ್ಕೂ ನಾವು ನಾವೇ ಆಗಿ ಬದುಕಬಹುದು. ನಮ್ಮ ನಿಜ ನೆಲೆಗೆ ಹೋದರೆ ನಮ್ಮ ಜೀವನವನ್ನು ನಾವೇ ಬರೆದುಕೊಳ್ಳಬಹುದು. ಭಾವನೆಗಳಿಗೆ, ಗ್ರಹಿಕೆಗಳಿಗೆ, ಮಾನಸಿಕ ಸಂರಚನೆಗಳ ಕೈಗೆ ಸಿಕ್ಕು ವಿಲವಿಲ ಒದ್ದಾಡಬೇಕಿಲ್ಲ. ಪ್ರಶಾಂತತೆಯ ಮೂಲ ಅಭ್ಯಾಸ ಇದು. ನಾವು ಪ್ರಶಾಂತತೆಯನ್ನು ಕಂಡುಕೊಂಡರೆ ಬೇರೆಯವರಿಗೂ ಅದನ್ನು ದೊರಕಿಸಿಕೊಡಬಹುದು. ಅದಕ್ಕೆ ಅಭ್ಯಾಸ ಮೊದಲು ನಮ್ಮಿಂದಲೇ ಆರಂಭವಾಗಬೇಕು. ಇದೇನು ಕ್ಲಿಷ್ಟಕರವಲ್ಲ… ಅಲೆಯೊಂದು ಮೇಲೆದ್ದು, ಕೆಳಗಿಳಿದು ಆಯಾಸಗೊಳ್ಳುತ್ತಿದ್ದರೆ, ಅದಕ್ಕೊಂದು ಆಶ್ರಯ ತಾಣವಿದೆ. ಅದು ನೀರು. ಅಲೆಗೆ ತಾನು ನೀರೆಂದು ಗುರುತಾದರೆ ಸಾಗರವನ್ನು ನಿರಾಳವಾಗಿ ಆಶ್ರಯಿಸುತ್ತದೆ. ಆಗದು ಮೇಲೇಳಲು, ಕೆಳಗಿಳಿಯಲು ಭಯಪಡಲಾರದು. ತಾನು ನೀರೆಂದು ಅಲೆ ಅರಿಯುವುದು ಬಹಳ ಮುಖ್ಯ. ತನ್ನಿಂದ ಹೊರತಾಗಿ ಬೇರೆಲ್ಲೋ ನೀರಿದೆ ಎಂದದು ಹುಡುಕಬೇಕಿಲ್ಲ. ಅಲೆಗೆ ನೀರಿನ ಆಶ್ರಯದಂತೆ ನಮಗೆ ಪ್ರಶಾಂತತೆಯೇ ಆಶ್ರಯ ತಾಣ. ಅದನ್ನೇ ದೇವರು ಎನಬಹುದು, ಅಲ್ಲಾ ಎನಬಹುದು, ಜೀಸಸ್ ಎನಬಹುದು, ಬುದ್ಧ ಎನಬಹುದು. ಅಲೆಯಂತೆ ಮೇಲೇರಿ, ಕೆಳಗಿಳಿದು ಬಹಳ ದಣಿದಿದ್ದೇವೆ… ಹುಟ್ಟು- ಸಾವುಗಳ ಭಯದಲ್ಲಿದ್ದೇವೆ. ನಮ್ಮನ್ನ ನಾವು ಕರ್ಮದ ಬಲಿಪಶುಗಳೆಂದು ಆತಂಕಗೊಂಡು ಆಶ್ರಯಿಸಲು ಘನವಾದದ್ದನ್ನ, ದೇವರನ್ನ ಹೊರಗೆ ಹುಡುಕುತ್ತಿದ್ದೇವೆ. ನಮ್ಮಿಂದ ಹೊರತಾದ ಅಂತಿಮ ಸತ್ಯವೆಂಬುದು ಬೇರೆಲ್ಲೂ ಇಲ್ಲ, ಅದು ಇಲ್ಲೇ ನಮ್ಮಲ್ಲೇ ಇದೆ. ಅಲೆ ತಾನೇ ನೀರಾಗಿರುವಂತೆ, ನಾವು ಹುಡುಕುವ ಶರಣತ್ವ, ಬುದ್ಧತ್ವ ನಮ್ಮೊಳಗೇ ಇದೆ, ನಮ್ಮ ಅಂತಿಮ ಮನೆ ನಮ್ಮಲ್ಲೇ ಇದೆ. ಅಲೆಯು ನೀರಿಗಾಗಿ ಪರಿತಪಿಸುತ್ತಾ ಓಡುತ್ತಲೇ ಇದ್ದರೆ ಅದು ಯಾವತ್ತಿಗೂ ನೀರನ್ನು ನೋಡಲಾರದು, ಸೇರಲಾರದು. ತನ್ನ ನೀರಿನ ಮನೆಗೆ ಹೋಗಬೇಕಾದರೆ ಅಲೆಗಿರುವ ಒಂದೇ ದಾರಿಯೆಂದರೆ ತನ್ನೊಳಗೆ ತಾನು ಸೇರುವುದು.

“ದೇಹವೇ ನಮ್ಮ ಮನೆ. ಉಸಿರೆಳೆದುಕೊಳ್ಳುವ ಮೂಲಕ ನಮ್ಮ ಮನೆಗೆ ನಾವು ಮರಳಬೇಕು. ದೇಹದ ಬಗ್ಗೆ ಅರಿವು ಮೂಡಿಸಿಕೊಳ್ಳುವುದೇ ಪ್ರೀತಿಯ ಆರಂಭ. ದೇಹ, ಮನಸ್ಸು ಒಂದಾಗಬೇಕು. ಆಗ ನಿಮಗೆ ಎರಡು ವಿಷಯಗಳು ಗೊತ್ತಾಗುತ್ತವೆ- 1.ದೇಹ ಅದ್ಭುತವಾದದ್ದು. ಜೀವವಿಜ್ಞಾನಿಗಳು ದೇಹವನ್ನು ಅರ್ಥಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಬ್ರಹ್ಮಾಂಡದ ಮೇರುಕೃತಿ (ಮಾಸ್ಟರಪೀಸ್) ನಮ್ಮ ದೇಹ. ದೇಹವೇ ಪ್ರಜ್ಞೆಯ ಆವಾಸಸ್ಥಾನ. ದೇಹದ ಬೆಲೆಯೇ ನಮಗೆ ತಿಳಿದಿರುವುದಿಲ್ಲ. ಬ್ರಹ್ಮಾಂಡದ ಇತಿಹಾಸದ ಎಲ್ಲಾ ಮಾಹಿತಿಯೂ ದೇಹದಲ್ಲಿದೆ. ದೇಹದ ಪ್ರತಿ ಜೀವಕೋಶದಲ್ಲೂ ನಮ್ಮ ಪೂಋ್ವಜರ ಉಪಸ್ಥಿತಿಯನ್ನು ಗುರುತಿಸಬಹುದು. ಕೇವಲ ಮಾನವ ಪೂರ್ವಜರಲ್ಲ, ಪ್ರಾಣಿಗಳ, ಸಸ್ಯಗಳ, ಖನಿಜಗಳ ಪೂರ್ವಜರ ದಾಖಲೆಗಳೆಲ್ಲ ಈ ದೇಹದಲ್ಲಿ ಅಡಕವಾಗಿವೆ. ಈ ಎಲ್ಲಾ ಪೂಋ್ವಜರೂ ತಮ್ಮ ದೌರ್ಬಲ್ಯ ಹಾಗೂ ಸಾಮರ್ಥ್ಯಗಳೊಂದಿಗೆ ನಮ್ಮೊಳಗೆ ಜೀವಂತವಾಗೇ ಇದ್ದಾರೆ, ನಾವು ನಮ್ಮ ದೇಹವನ್ನು ಲಘುವಾಗಿ ತೆಗೆದುಕೊಂಡಿದ್ದೇವೆ. ನಮ್ಮ ಮಿದುಳು ಅತ್ಯಾಧುನಿಕ ವಿನ್ಯಾಸ. ನಮ್ಮ ದೇಹವನ್ನು ಮುಟ್ಟಿದರೆ ಇಡೀ ಬ್ರಹ್ಮಾಂಡವನ್ನೇ ಮುಟ್ಟಿದಂತೆ. ಭೂತಾಯಿಯೂ ನಮ್ಮ ದೇಹದಲ್ಲೇ ಇದ್ದಾಳೆ. ಸೂರ್ಯನ ರಶ್ಮಿಯಿಂದ, ಸ್ವಚ್ಛ ಗಾಳಿಯಿಂದ, ಶುದ್ಧ ನೀರಿನಿಂದ ದೇಹವಾಗಿದೆ. 2. ನೋವು ಮತ್ತು ಒತ್ತಡಗಳು ದೇಹದಲ್ಲಿವೆ. ಯಾಕೆಂದರೆ ದೀರ್ಘ ಕಾಲದಿಂದ ನಾವು ನಮ್ಮೊಳಗೆ ನೋವು-ಒತ್ತಡಗಳನ್ನು ಕೂಡಿಟ್ಟುಕೊಂಡಿದ್ದೇವೆ. ನಾವು ನಮ್ಮ ದೇಹವನ್ನು ಪ್ರೀತಿಸಿಯೇ ಇಲ್ಲ. ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದು ಹೇಗೆಂದರೆ- ಹೀಗೆ. ಉಸಿರೆಳೆದುಕೊಳ್ಳುವಾಗ ದೇಹದ ಬಗೆಗೆ ಜಾಗೃತರಾಗುವುದು, ಉಸಿರು ಬಿಡುವಾಗ ನೋವು-ಉದ್ವೇಗಗಳನ್ನು ಹೊರಚೆಲ್ಲುವುದು. ಮನಸ್ಸನ್ನು ದೇಹಕ್ಕೆ ತಂದುಕೊಂಡಾಗ ಅನೇಕ ಹರ್ಷಕಾರಕ, ತಾಜಾ ಅಂಶಗಳು ಗೊತ್ತಾಗುತ್ತವೆ. ಸಂತೋಷವು ನಮ್ಮೊಳಗಿಂದ ಉಕ್ಕಿ ಹರಿಯುತ್ತದೆ. ನಮ್ಮನ್ನು ಪೋಷಿಸುವ ಸಂತಸದ ಭಾವ ತುಂಬಿಕೊಳ್ಳುತ್ತದೆ. ಪ್ರಸ್ತುತ ಕ್ಷಣದಲ್ಲಿ ನೋವಿನ ಭಾವ ಕಾಣಿಸಿಕೊಂಡಾಗ ಅದನ್ನು ಹೇಗೆ ಅಪ್ಪಿಕೊಳ್ಳಬೇಕೆಂದು ಗೊತ್ತಾಗುತ್ತದೆ. ನಮ್ಮೊಳಗಿನ ದುಃಖವನ್ನು ಎದುರುಗೊಳ್ಳುವುದರಿಂದ, ಅದನ್ನು ಕೇಳಿಸಿಕೊಳ್ಳುವುದರಿಂದ, ದುಃಖದ ಸ್ವಭಾವವನ್ನು ಆಳವಾಗಿ ಗಮನಿಸುವುದರಿಂದ, ನಮ್ಮ ದುಃಖದ ಬೇರುಗಳು ನಮ್ಮ ಗ್ರಹಿಕೆಗಳಲ್ಲಿವೆ ಎಂಬುದನ್ನು ಕಂಡುಹಿಡಿಯಬಹುದು. ಆಗ ದುಃಖವನ್ನು ಅರ್ಥಮಾಡಿಕೊಳ್ಳಲು ಆರಂಭಿಸುತ್ತೇವೆ. ದುಃಖವನ್ನು ಅರ್ಥಮಾಡಿಕೊಂಡಂತೆ ನಾವು ಅನುಭವಿಸುವ ತೀವ್ರತೆ ಕಡಿಮೆಯಾಗುತ್ತಾ ಹೋಗುತ್ತದೆ. ದಯೆ ಕಾಣಿಸಿಕೊಳ್ಳುತ್ತದೆ, ಅದಕ್ಕೆ ನಮ್ಮ ನೋವನ್ನು ಶಮನ ಮಾಡುವ ಅಪಾರ ಶಕ್ತಿ ಇದೆ…” ಹೀಗೆ ಸಾಧನೆಯ ಒಂದೊಂದು ಹೆಜ್ಜೆಯನ್ನೂ ಎಳೆಎಳೆಯಾಗಿ ತೆರೆಯುತ್ತಾ ಸಾಧಕರು ನಡೆಯಬೇಕಾದ ಕ್ರಮವನ್ನು ಥಾಯ್ ವಿವರಿಸಿಕೊಡುತ್ತಾರೆ.

ಅರಿವಿನಲ್ಲಿರುವುದು ಉಸಿರಾಟದಂತೆ ಸಹಜಾತಿ ಸಹಜ ಕ್ರಿಯೆ. ಹಲವಾರು ಪ್ರಾಯೋಗಿಕ ಕ್ರಿಯೆಗಳ ಮೂಲಕ ಇದನ್ನು ಅನುಭಾವಿಕ ನೆಲೆಗೆ ತಲುಪಿಸುವುದು ಥಾಯ್ ಅವರ ಮೈಂಡಫುಲನೆಸ್ ತರಬೇತಿಯ ಉದ್ದೇಶ. ಉಸಿರಾಟದಿಂದ ಹಿಡಿದು, ನಡೆಯುವುದು, ಕುಳಿತುಕೊಳ್ಳುವುದು, ಕಿತ್ತಳೆ ಹಣ್ಣು ಸುಲಿಯುವುದು, ಚಹಾ ಸೇವಿಸುವುದು, ಪಾತ್ರೆ ತೊಳೆಯುವುದು,… ಹೀಗೆ ದಿನನಿತ್ಯದ ಸಣ್ಣಸಣ್ಣ ಸರಳ ಕ್ರಿಯೆಗಳಲ್ಲಿ ಅರಿವಿನಿಂದ ತೊಡಗಿಕೊಳ್ಳುವ ಮೂಲಕ ನಾವೆಲ್ಲರೂ ಬೋಧಿಸತ್ವರಾಗಬಹುದು ಎನ್ನುತ್ತಾರೆ. ಅರಿವು ಜಾಗೃತವಾದಲ್ಲಿ ಜೀವಂತವಾಗಿರುವುದರ ವಿಸ್ಮಯ ಗೊತ್ತಾಗುತ್ತದೆ. ಜೀವನವೇ ಒಂದು ಪವಾಡವೆಂಬ ಸತ್ಯವನ್ನು ಸ್ಪರ್ಶಿಸಲು ಸಾಧ್ಯವಾಗುತ್ತದೆ. ಈ ಕಲಿಕೆಯ ಸಮಯದಲ್ಲಿ ಮಾತಾಡುವುದನ್ನು ನಿಲ್ಲಿಸಬೇಕು… ಹೊರಗಷ್ಟೇ ಅಲ್ಲ, ನಮ್ಮೊಳಗೂ ಮಾತಾಡಿಕೊಳ್ಳಬಾರದು, ನಮ್ಮೊಳಗೆ ಮಾತಾಡಿಕೊಳ್ಳುವುದೆಂದರೆ ಯೋಚಿಸುತ್ತಲೇ ಇರುವುದು, ಮಾನಸಿಕ ಸಂಭಾಷಣೆ ಚಾಲ್ತಿ ಇದ್ದರೆ ಅದು ತರಂಗಗಳನ್ನು ಎಬ್ಬಿಸುತ್ತಲೇ ಇರುತ್ತದೆ.. ನಿಜವಾದ ಮೌನವೆಂದರೆ- ಮಾತು ನಿಲ್ಲಿಸುವುದು, ಬಾಯಿ ಮತ್ತು ಮನಸ್ಸು ಎರಡರಲ್ಲೂ. ಇದು ಅಭಿವ್ಯಕ್ತಿಯನ್ನು ಒತ್ತಾಯಪೂರ್ವಕವಾಗಿ ಅಮುಕಿ ಹಿಡಿವ ಮೌನವಲ್ಲ. ಬದಲಿಗೆ ಅತ್ಯಂತ ಸೊಗಸಾದ ಮೌನ. ಈ ಮೌನಕ್ಕೆ ನಮ್ಮನ್ನು ಗುಣಪಡಿಸುವ, ಪೋಷಿಸುವ ಶಕ್ತಿ ಇದೆ. ಥಾಯ್ ಅವರ ತರಬೇತಿ ವಿಧಾನವು ದಲೈಲಾಮಾ ಅವರು ಬೋಧಿಸುವ ಕಠಿಣತಮ ಧ್ಯಾನಕ್ಕಿಂತ ಭಿನ್ನವಾದುದು. ಬೌದ್ಧ ಧರ್ಮದ ಸರಳ ಆವೃತ್ತಿಯಂತೆ ಇದು ತೋರಿದರೂ, ಆರಂಭಿಕ ಅಭ್ಯಾಸಿಗರಲ್ಲಿ ಇದು ಸತತ ಪ್ರಯತ್ನವನ್ನಂತೂ ಬೇಡುತ್ತದೆ. ಭೂಮಿಯು ತನ್ನ ಅಕ್ಷದಲ್ಲಿ ಸುತ್ತುತ್ತಾ ಸೂರ್ಯನ ಸುತ್ತಾ ಸುತ್ತುತ್ತಿರುವಂತೆ ಸಾವಧಾನವಾಗಿ, ಭವಿಷ್ಯದ ಕಡೆ ಧಾವಿಸದಂತೆ, ಭೂತಕ್ಕೆ ಹಿಮ್ಮೆಟ್ಟದಂತೆ ಮತ್ತು ಎಲ್ಲಿಯೂ ತಟಸ್ಥವಾಗಿ ನಿಲ್ಲದಂತೆ ಒಂದೇ ಗತಿಯಲ್ಲಿ ಸಂತೋಷ, ಉತ್ಸಾಹಗಳಿಂದ ಜೀವನ ನಡೆಸುವ ವಿಧಾನವನ್ನಿದು ಕಲಿಸಿ ಕೊಡುತ್ತದೆ.

ವಜ್ರ ಸೂತ್ರಗಳು:

ಕಲ್ಪನೆಗಳಿಂದ ಹೊರ ಬರದ ಹೊರತು ಬದುಕಿನ ನೈಜತೆಯನ್ನು ಕಾಣಲಾಗುವುದಿಲ್ಲ. ಮುಖ್ಯವಾಗಿ ನಾಲ್ಕು ಕಲ್ಪನೆಗಳು ನಮ್ಮೆಲ್ಲ ದೃಷ್ಟಿಕೋನಗಳಿಗೆ ಕಾರಣವಾಗಿರುವುದರಿಂದ, ಹಾಗೂ ಇವು ಅತ್ಯಂತ ಪ್ರಬಲವಾಗಿ ನಮ್ಮೊಳಗೆ ನಂಬಿಕೆಯ ರೂಪದಲ್ಲಿ ಬೇರುಬಿಟ್ಟಿರುವುದರಿಂದ ಅವುಗಳನ್ನು ಕತ್ತರಿಸಿಹಾಕಲು ಬಲವಾದ ಅಸ್ತ್ರವೇ ಬೇಕು. ಆದ್ದರಿಂದಲೇ ಇವು ವಜ್ರ ಸೂತ್ರಗಳು. ಥಾಯ್ ಡೈಮಂಡ್ ಸೂತ್ರಗಳನ್ನು ಹೀಗೆ ವಿವರಿಸುತ್ತಾರೆ:

1. ಸ್ವಯಂನ ಕಲ್ಪನೆ (ಸೆಲ್ಫ್): ನಾವು ವಾಸ್ತವವನ್ನು ಎರಡು ಭಾಗಗಳಾಗಿ ವಿಂಗಡಿಸಿ ನೋಡುವ ರೂಢಿಗೆ ಬಿದ್ದಿದ್ದೇವೆ, ಒಂದು ನಾನು ಮತ್ತು ಇನ್ನೊಂದು ನಾನಲ್ಲದ, ನನ್ನ ಎದುರಿನ ಜಗತ್ತು. ನಾನು ನನ್ನ ಪಾಡಿಗೆ, ಯಾರ ಹಂಗೂ ಇಲ್ಲದೆ ಇರಬಹುದು ಎಂದು ಅಂದುಕೊಂಡಿರುತ್ತೇವೆ. ಆದರೆ ಆಳವಾಗಿ ಪರಿಶೀಲಿಸಿ ನೋಡಿದರೆ ‘ನಾನು’ ಎಂಬುದು ನಾನಲ್ಲದ ಅಂಶಗಳಿಂದ ಕೂಡಿರುತ್ತದೆ. ನಾನು, ನೀವು, ಎಲ್ಲರೂ ಈ ಬ್ರಹ್ಮಾಂಡದಲ್ಲಿ ಅಂತರ್ಗತರಾದವರು. ಅಂತರ್ಗತ- ಎನ್ನುವುದು ಬಹಳ ಮುಖ್ಯವಾದ ಶಬ್ದ. ನಾನು ಇದ್ದೇನೆ (to be) ಎನ್ನುವ ಪದಕ್ಕಿಂತಲೂ ನಾನು ಎಲ್ಲರೊಂದಿಗೆ, ಎಲ್ಲದರೊಂದಿಗೆ ಅಂತರ್ಗತ (inter being) ವಾಗಿದ್ದೇನೆ ಎನ್ನುವುದು ಸತ್ಯಕ್ಕೆ ಹೆಚ್ಚು ಹತ್ತಿರದ ಶಬ್ದ. ಇಡೀ ವಿಶ್ವದಲ್ಲಿ ‘ನಾನು’ ಪ್ರತ್ಯೇಕ, ಭಿನ್ನ ಎನ್ನುವ ಕಲ್ಪನೆಯನ್ನು ತೆಗೆದು ಹಾಕಿದರೆ ನಾವು ಅನೇಕ ಸಂಕಟಗಳಿಂದ ಬಿಡುಗಡೆಯಾಗಬಹುದು. ನಾನು ಪ್ರತ್ಯೇಕ ಸ್ವಯಂ ಆಗಿದ್ದೇನೆ ಎನ್ನುವುದನ್ನ ನಂಬಿದರೆ ನಮ್ಮನ್ನು ಬೇರೆಯವರೊಂದಿಗೆ ಹೋಲಿಸಿ ನೋಡಿಕೊಳ್ಳುವ ಚಾಳಿ ಅಂಟಿಕೊಳ್ಳುತ್ತದೆ. ಇತರರಿಂದ ದೂರವಾಗುತ್ತೇವೆ. ಶ್ರೇಷ್ಠ- ಕನಿಷ್ಠ ಭಾವಗಳು ಅಮರಿಕೊಳ್ಳುತ್ತವೆ. ನಾವು ಸಮ ಎಂದುಕೊಳ್ಳುವ ಭಾವ ಕೂಡ ಹೋಲಿಕೆಯಿಂದಲೇ ಹುಟ್ಟಿಕೊಳ್ಳುವಂಥದ್ದು. ಆದ್ದರಿಂದ ನಾನು ಭಿನ್ನವಾಗಿದ್ದೇನೆ ಎನ್ನುವ ಭಾವವನ್ನೇ ತೆಗೆದುಹಾಕಿದಲ್ಲಿ ಎಲ್ಲ ಹೋಲಿಕೆಗಳೂ ಬಿದ್ದು ಹೋಗಿ ನಿಚ್ಚಳವಾಗಿ, ಸ್ವತಂತ್ರವಾಗಿ ಬಿಡುತ್ತೇವೆ. ಮೇಲರಿಮೆ- ಕೀಳರಿಮೆಗಳಿಂದ ಮಾತ್ರವಲ್ಲಾ ಸರಿಸಮವಾಗಿಸಿಕೊಳ್ಳುವ ಪೈಪೋಟಿಯಿಂದಲೂ ಮುಕ್ತರಾಗಿ ಬಿಡುತ್ತೇವೆ. ನಿನ್ನ ಸಮಸ್ಯೆ ನನ್ನದಲ್ಲವೆನ್ನುವ ಬೇಧಕ್ಕೂ ಇಲ್ಲಿ ಅವಕಾಶವಿರುವುದಿಲ್ಲ. ಅರಿವಿನ ಧ್ಯಾನದ ಆಳಕ್ಕಿಳಿದವರಿಗೆ ಈ ಸತ್ಯ ತಿಳಿಯುವುದು.

2.ಮನುಷ್ಯನೆಂಬ ಕಲ್ಪನೆ: ಭೂಗ್ರಹದ ಮೇಲೆ ಮನುಷ್ಯ ಹೇಗೆ ಕಾಣಿಸಿಕೊಂಡ ಅಂತ ವಿಜ್ಞಾನವನ್ನು ಕೇಳಿ ನೋಡಿ. ಜೈವಿಕ ಇತಿಹಾಸದಲ್ಲಿ ಮನುಷ್ಯ ತೀರಾ ಇತ್ತೀಚೆಗೆ ಕಾಣಿಸಿಕೊಂಡ ಜೀವ ಪ್ರಭೇದ. ಲಕ್ಷಾಂತರ ಜೀವರಾಶಿಗಳ ಬಳಿಕ ಸೃಷ್ಟಿಕ್ರಿಯೆಯಲ್ಲಿ ರೂಪುಗೊಂಡವ. ಸೃಷ್ಟಿ ಕ್ರಿಯೆಯಲ್ಲಿ ನಾವು ಖನಿಜಗಳು, ಸಸ್ಯಗಳು ಮತ್ತು ಪ್ರಾಣಿಗಳಿಂದ ರೂಪತಳೆದಿದ್ದೇವೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ನಮ್ಮಲ್ಲಿ ಪ್ರಾಣಿ ಪೂರ್ವಜರು, ಸಸ್ಯ ಪೂರ್ವಜರು ಮತ್ತು ಖನಿಜಗಳ ಪೂರ್ವಜರು ಇದ್ದಾರೆ, ನಾವು ಅವೆಲ್ಲವುಗಳ ಮುಂದುವರಿಕೆ. ಅಂದರೆ ಅವೆಲ್ಲವುಗಳನ್ನು ನಾವು ಮುಂದೆ ಸಾಗಿಸುತ್ತಿರುತ್ತೇವೆ. ಉದಾಹರಣೆಗೆ ದೇಹದಿಂದ ಖನಿಜಾಂಶಗಳನ್ನು ತೆಗೆದು ಹಾಕಿದರೆ, ನಾವು ಕುಸಿದೇ ಹೋಗುತ್ತೇವೆ. ಮನುಷ್ಯ, ಮನುಷ್ಯನಲ್ಲದ ಘಟಕಗಳಿಂದ ರೂಪಿತನಾಗಿದ್ದಾನೆಂಬ ಒಳನೋಟ ಸಿಕ್ಕಾಗ ಪರಿಸರವನ್ನು ರಕ್ಷಿಸುತ್ತೇವೆ, ತಾಯಿಯಂತೆ ಪ್ರೀತಿಸುತ್ತೇವೆ, ಭೂಮಿಯನ್ನು ನಾಶಮಾಡುವುದಿಲ್ಲ. ಆದರೆ ಇದಾವುದರ ಪರಿವೇ ಇಲ್ಲದೆ ಮನುಷ್ಯ ಮರಗಿಡಗಳಿಂದ ಮೊದಲುಗೊಂಡು ಜೀವ ಲೋಕವನ್ನು ನಾಶಮಾಡುತ್ತಿದ್ದಾನೆ, ನಿತ್ಯವೂ ಅನೇಕ ಪ್ರಬೇಧಗಳು ಕಣ್ಮರೆಯಾಗುತ್ತಿವೆ. ಹೀಗೇ ಮುಂದುವರಿದಲ್ಲಿ ಮುಂದೊಂದು ದಿನ ಮನುಷ್ಯನೂ ಭೂಮಿಯಿಂದ ಮರೆಯಾಗುವ ಕಾಲ ಬರುತ್ತದೆ. ಭೂಮಿಯ ಬಿಸಿಯನ್ನು ಹೀಗೇ ಏರಿಸುತ್ತಾ ಹೋದರೆ ನೂರು ವರ್ಷಗಳಲ್ಲಿಯೇ ನಾವು ಅಂತ್ಯ ಕಾಣಬೇಕಾಗುತ್ತದೆ. ಮನುಷ್ಯ ಉಳಿಯಬೇಕಾದರೆ ಖನಿಜಗಳನ್ನು, ಸಸ್ಯಗಳನ್ನು, ಪ್ರಾಣಿಗಳನ್ನು ಕಾಪಾಡಿಕೊಳ್ಳಬೇಕೆನ್ನುವ ಸತ್ಯ ಧ್ಯಾನದಿಂದ ಅನುಭವಕ್ಕೆ ಬರುತ್ತದೆ.

3.ಜೀವ ಕಲ್ಪನೆ: ಲಿನ್-ಚಿ-ಝೆನ್ ಗುರು ಪರಂಪರೆಯಲ್ಲಿ ವಾಡಿಕೆಯೊಂದಿದೆ. ಅಲ್ಲಿ ಗುರು ಶಿಷ್ಯನಿಗೆ ಬುದ್ಧನಿಗೆ ಹೇಗೆ ವಂದಿಸಬೇಕೆಂದು ತಿಳಿಸಿಕೊಡುತ್ತಾನೆ. ಆ ತಿಳಿವಳಿಕೆಯಲ್ಲಿ ಬಹು ದೊಡ್ಡ ಪಾಠವೇ ಅಡಕವಾಗಿದೆ. ಬುದ್ಧನಲ್ಲಿ ಜೀವಂತ ವ್ಯಕ್ತಿಯನ್ನು ನೋಡಬೇಕು, ಜೀವಂತ ವ್ಯಕ್ತಿಯನ್ನು ಕಂಡಾಗ ಅಲ್ಲಿ ಬುದ್ಧನನ್ನು ಕಾಣಬೇಕು. ಏಕೆಂದರೆ ನಾನು ನಾನಲ್ಲದ ಅಂಶಗಳಿಂದಾಗಿರುವಂತೆ, ಬುದ್ಧನು ಬುದ್ಧೇತರ ಅಂಶಗಳಿಂದಾದವನು. ಬುದ್ಧನಲ್ಲಿ ಬುದ್ಧೇತರ ಅಂಶಗಳನ್ನು ನೋಡದೇ ಇದ್ದರೆ ನೀವು ಬುದ್ಧನನ್ನು ನೋಡಿಲ್ಲವೆಂದೇ ಅದರಿಂಗಿತ. ಇಂತಹ ಒಳನೋಟದಲ್ಲಿ ಮಾತ್ರವೇ ನಿನ್ನ ಮತ್ತು ಬುದ್ಧನ ನಡುವಿನ ಸಂವಹನವು ಆಳವಾಗಿರುತ್ತದೆ. ಇಲ್ಲದಿದ್ದರೆ ವಾಸ್ತವವಲ್ಲದ ಕಲ್ಪನೆಯಾಗಿ ಬುದ್ಧನ ವಿಗ್ರಹವನ್ನು ಆರಾಧಿಸುತ್ತೀರಿ. ಇದರಿಂದ ಯಾವುದೇ ಪ್ರಯೋಜನವಿರುವುದಿಲ್ಲ. ಬುದ್ಧ ನಿಮ್ಮಿಂದ ಪ್ರತ್ಯೇಕವಾದ ಅಸ್ತಿತ್ವವೆಂದು ಊಹಿಸಬೇಡಿ. ನೀನು ಬುದ್ಧ, ಅರಿವು ಮತ್ತು ಗಮನಿಸುವಿಕೆಯನ್ನು ಅಭ್ಯಾಸ ಮಾಡಿದರೆ ನಿನ್ನಲ್ಲಿರುವ ದುಃಖಗಳನ್ನು, ಹತಾಶೆಗಳನ್ನು ಪರಿವರ್ತಿಸಿಕೊಳ್ಳಬಹುದು. ಬುದ್ಧನನ್ನು ಅರಸಲು ಸುರಕ್ಷಿತವಾದ ಸ್ಥಳ ನಿಮ್ಮಲ್ಲಿಯೇ ಇದೆ. ಆದ್ದರಿಂದ ವಜ್ರ ಸೂತ್ರವು ಜೀವಿಗಳ ಕಲ್ಪನೆಯನ್ನು ತೊಡೆದುಹಾಕಲು ಮಾರ್ಗದರ್ಶನ ನೀಡುತ್ತದೆ.

4.ಜೀವಿತಾವಧಿಯ ಕಲ್ಪನೆ: ಸಾಮಾನ್ಯವಾಗಿ ಸಾವೆಂದರೆ ಎಲ್ಲರಿಗೂ ಭಯ. ನಮ್ಮ ಸಾವನ್ನು ಕಲ್ಪಿಸಿಕೊಳ್ಳಲೂ ಭಯಬೀಳುತ್ತೇವೆ. ಸಾವಿನ ವಿಷಯ ಮಾತನಾಡುವುದು ಅಪಶಕುನ ಎಂದು ಅನೇಕರ ನಂಬಿಕೆ. ಆದರೆ ಸಾವಿಲ್ಲದೆ ಜೀವನ ಹೇಗೆ ಸಾಧ್ಯ? ಜೀವನದ ಅಡಿಪಾಯವೇ ಸಾವು. ಅಂತೆಯೇ ಜೀವನವು ಸಾವಿನ ಅಡಿಪಾಯ. ಎರಡೂ ಒಟ್ಟೊಟ್ಟಿಗೇ ಸಾಗುತ್ತಿರುತ್ತವೆ. ಸಾವು ನಮ್ಮ ಬದುಕಿನ ಯಾತ್ರೆಯಲ್ಲಿ ಎಲ್ಲೋ ಒಂದೆಡೆ ಕಾದು ಕುಳಿತಿದೆ ಎಂದು ಭಾವಿಸಬೇಡಿ. ಏಕೆಂದರೆ ಜೀವನವು ಇಲ್ಲಿದೆ, ಅದೇ ಸಮಯದಲ್ಲಿ ಸಾವು ಕೂಡಾ ಇಲ್ಲೇ ಇದೆ! ಹುಟ್ಟು, ಜೀವನ ಮತ್ತು ಕೊನೆಯಲ್ಲಿ ಸಾವು ಎಂದುಕೊಳ್ಳುವುದು ಸರಿಯಾದ ಯೋಚನೆಯಲ್ಲ. ಇದನ್ನು ತಿಳಿಯಲು ವಿಜ್ಞಾನವು ನಮಗೆ ಸಹಾಯ ಮಾಡುತ್ತದೆ. ಪ್ರತಿಕ್ಷಣದಲ್ಲಿ ನಮ್ಮ ದೇಹದಲ್ಲಿನ ಅನೇಕ ಜೀವಕೋಶಗಳು ಸಾಯುತ್ತಿರುತ್ತವೆ ಅಲ್ಲವೇ? ಅದೇ ರೀತಿ ಹೊಸ ಜೀವಕೋಶಗಳು ಹುಟ್ಟುತ್ತಿರುತ್ತವೆ. ಇಡೀ ದೇಹವೇ ಜೀವಕೋಶಗಳಿಂದಾಗಿದೆ ಎನ್ನುವ ಸತ್ಯವೂ ನಮಗೆ ಗೊತ್ತಿದೆ. ಹುಟ್ಟು ಮತ್ತು ಸಾವು, ಇಲ್ಲಿ, ಈಗ, ಪ್ರತಿಕ್ಷಣದಲ್ಲಿ, ಪ್ರತಿ ಮಿಲಿಸೆಕೆಂಡಿನಲ್ಲಿ ಸಂಭವಿಸುತ್ತಿರುತ್ತದೆ. ಹೀಗಿರುವಾಗ ನಾವು ಸಾವಿಗೆ ಯಾಕೆ ಅಂಜಬೇಕು? ಪ್ರತಿ ಕ್ಷಣ ಸಾವನ್ನು ಅನುಭವಿಸುತ್ತಿದ್ದೇವೆ, ಏಕೆಂದರೆ ಜೀವನ ಇರುವಲ್ಲಿ ಸಾವು ಇರುತ್ತದೆ. ನಾನು ಅವತ್ತು ಹುಟ್ಟಿದೆ, ಮುಂದೊಂದು ದಿನ ಸಾಯುತ್ತೇನೆ ಎಂದುಕೊಂಡಿದ್ದರೆ, ನಂತರ ಏನೂ ಉಳಿಯುವುದಿಲ್ಲ. ಆಗ ಜೀವಿತಾವಧಿಯ ಕಲ್ಪನೆಯಲ್ಲಿ ಸಿಕ್ಕಿಕೊಂಡುಬಿಡುತ್ತೇವೆ. ಆದರೆ ವಾಸ್ತವ ಹಾಗಿಲ್ಲ!! ಸರಿಯಾದ ದೃಷ್ಟಿಕೋನವು ಇರುವಿಕೆ ಮತ್ತು ಇಲ್ಲದಿರುವಿಕೆ, ಹುಟ್ಟು-ಸಾವುಗಳನ್ನು ಮೀರಿದ್ದು!! ಇವಾವೂ ಅಲ್ಲಿ ಇಲ್ಲವೇ ಇಲ್ಲ! ಈ ಅರಿವು ಸರಿಯಾದ ಆಲೋಚನೆ, ಸರಿಯಾದ ಮಾತು ಮತ್ತು ಸರಿಯಾದ ಕ್ರಿಯೆಯನ್ನು ಮಾಡಲು ಸಹಾಯ ಮಾಡುತ್ತದೆ.

ದುಃಖ ಮತ್ತು ಸುಖದ ವಿಷಯವಾಗಿಯೂ ಇದೇ ನಿಯಮ ಅನ್ವಯವಾಗುತ್ತದೆ. ನಮ್ಮಲ್ಲಿ ಅನೇಕರು ಸಂತೋಷವೊಂದೇ ಸಾಕೆಂದು ಹಾತೊರೆಯುತ್ತಿರುತ್ತಾರೆ. ಸಂಕಟಗಳು ಬೇಡವೆಂದು ಬೇಡಿಕೊಳ್ಳುತ್ತಾರೆ. ಆದರೆ ದುಃಖವು ಸಂತೋಷವನ್ನು ಸೃಜಿಸುತ್ತಿರುತ್ತದೆ. ನಮ್ಮ ಅಥವಾ ಇನ್ನೊಬ್ಬ ವ್ಯಕ್ತಿಯ ನೋವುಗಳನ್ನು ಆಳವಾಗಿ ನೋಡಿದರೆ ದುಃಖದ ಮೂಲವನ್ನು ಅರ್ಥಮಾಡಿಕೊಳ್ಳಬಹುದು. ಹಾಗೆ ದುಃಖದ ಮೂಲವನ್ನು ತಿಳಿದುಕೊಂಡರೆ ಸಹಾನುಭೂತಿ ಮತ್ತು ಪ್ರೀತಿ ತಂತಾನೆ ಎದೆಯೊಳಗೆ ಹುಟ್ಟಿಕೊಳ್ಳುತ್ತವೆ. ಈ ಬಗೆಯ ತಿಳಿವಳಿಕೆ ಮತ್ತು ಪ್ರೀತಿಗಳೇ ಸಂತೋಷದ ಅಡಿಪಾಯ. ಇವಿಲ್ಲದೇ ಹೋದರೆ ಸಂತೋಷವೇನೆಂಬುದೇ ಗೊತ್ತಾಗುವುದಿಲ್ಲ. ಈ ತಿಳಿವಳಿಕೆಯಿಂದಲೇ ನಮ್ಮಲ್ಲಿ ನಿಜವಾದ ಪ್ರೀತಿ ಮತ್ತು ಸಹಾನುಭೂತಿಗಳು ಜನ್ಮ ತಾಳುತ್ತವೆ.

Previous post ಪ್ರಭುಲಿಂಗಲೀಲೆ…
ಪ್ರಭುಲಿಂಗಲೀಲೆ…
Next post ಸಂತೆಯೊಳಗಿನ ಧ್ಯಾನ
ಸಂತೆಯೊಳಗಿನ ಧ್ಯಾನ

Related Posts

ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
Share:
Articles

ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ

April 29, 2018 ಡಾ. ಶಶಿಕಾಂತ ಪಟ್ಟಣ
ಕಲ್ಯಾಣದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಚಳುವಳಿಯ ಅಗ್ರನಾಯಕ ಮಡಿವಾಳ ಮಾಚಿದೇವರು. ಕಲ್ಯಾಣ ಕ್ರಾಂತಿಯು ತನ್ನ ಕೊನೆಯ ದಿನಗಳಲ್ಲಿ ರಕ್ತಸಿಕ್ತವಾಗಿ...
ಲಿಂಗವಾಗುವ ಪರಿ…
Share:
Articles

ಲಿಂಗವಾಗುವ ಪರಿ…

April 29, 2018 ಡಾ. ಪಂಚಾಕ್ಷರಿ ಹಳೇಬೀಡು
ಜಗತ್ತಿನ ಹಲವಾರು ಸಾಂಸ್ಥಿಕ ಧರ್ಮಗಳ ಒಳಹೊಕ್ಕು ನೋಡಿದಾಗ ದೇವರು ಮತ್ತು ಜೀವಾತ್ಮ (ಭಕ್ತ), ಇವರಿಬ್ಬರ ಸಂಬಂಧ ಸಾಮಾನ್ಯವಾಗಿ ಕೊಡು-ಕೊಳ್ಳುವ ವ್ಯಾಪಾರೀ ಮನೋಭಾವದಿಂದ...

Comments 10

  1. Padmalaya
    May 11, 2022 Reply

    ತಾಯ್ ಸತ್ಯವನ್ನ ನುಡಿದು ಸತ್ಯವಾದ.ನಮ್ಮ ನೆಲದಲ್ಲಿ ಸತ್ಯವನ್ನ ನುಡಿಯುವುದೇ ತುಂಬಾ ಕಷ್ಟ.ಏಕೆಂದರೆ ಸತ್ಯವನ್ನ ನುಡಿಯುವವನ ಮುಂದೆ ಸುಳ್ಳು ಕೇಕೆ ಹಾಕಿ ಸಂಭ್ರಮಿಸುತ್ತದೆ. ಲೇಖನ ಚೆನ್ನಾಗಿದೆ.ಭಾಷೆ ವಿಸ್ತಾರ ಸ್ವಲ್ಪ ಜಾಸ್ತಿ ಆಯ್ತು…

  2. ಮಹಾಂತೇಶ ಅಗಡಿ, ದಾವಣಗೆರೆ
    May 11, 2022 Reply

    ಶರಣು ಶರಣಾರ್ಥಿಗಳು. ಸಾವಿಲ್ಲದ-ಝನ್-ಗುರು-2 ಅನ್ನು ಓದಿದೆ, ತುಂಬಾ ಚೆನ್ನಾಗಿದೆ, ಭಾಗ-1 ಈ ಮೊದಲು ಪ್ರಕಟವಾಗಿದ್ದರೆ ಅದರ ಕೊಂಡಿಯನ್ನು ಕಳಿಸಬಹುದೇ?

  3. ಬಸವರಾಜ ಹಂಡಿ
    May 13, 2022 Reply

    “ಸಾವಿಲ್ಲದ ಝೆನ್ ಗುರು-2” ಲೇಖನ ಬಹಳ ಚೆನ್ನಾಗಿ, ಪರಿಣಾಮಕಾರಿ ಹಾಗು ಅದ್ಬುತವಾಗಿ ಮೂಡಿ ಬಂದಿದೆ.
    ಜೀವನದ ಸತ್ಯ ವಸ್ತುಸ್ಥಿತಿ ವಿವೇಕವನ್ನು ಮನ ಮುಟ್ಟುವ ಆಗೆ ಶರಣೆ ಮಂಗಳಾ ಬರೆದಿದ್ದಾರೆ.

    “ನಾವು ಸಮ ಎಂದುಕೊಳ್ಳುವ ಭಾವ ಕೂಡ ಹೋಲಿಕೆಯಿಂದಲೇ ಹುಟ್ಟಿಕೊಳ್ಳುವಂಥದ್ದು. ಆದ್ದರಿಂದ ನಾನು ಭಿನ್ನವಾಗಿದ್ದೇನೆ ಎನ್ನುವ ಭಾವವನ್ನೇ ತೆಗೆದುಹಾಕಿದಲ್ಲಿ ಎಲ್ಲ ಹೋಲಿಕೆಗಳೂ ಬಿದ್ದು ಹೋಗಿ ನಿಚ್ಚಳವಾಗಿ, ಸ್ವತಂತ್ರವಾಗಿ ಬಿಡುತ್ತೇವೆ.”

    ಮೇಲಿನದು ಲೇಖನದಲ್ಲಿ ಬರೆಯಲಾಗಿದೆ. ಇದು ಭಾವನೆಗಳು ಹಾಗು ಕಲ್ಪನೆಗಳು ನಮ್ಮನ್ನು ಯಾವ ರೀತಿ ಬಂಧಿಸಿದ್ದೇವೆ ಎಂಬುದನ್ನು ತೋರಿಸಿ ಕೊಡುತ್ತದೆ.

    ಝೆನ್ ಗುರು ಥಾಯ್ ಎಲ್ಲ ಬಂಧನಗಳಿಂದ ಮುಕ್ತವಾಗಿ ಸ್ವತಂತ್ರವಾಗಿ ಜೀವಿಸುವದನ್ನು ಬರೆ ಶಬ್ದಗಳಲ್ಲಿ ಹೇಳಿಲ್ಲ, ಅವರು ನಡೆಯುವ ದಾರಿಯನ್ನು( ಸಾಧನೆಯನ್ನು) ಸರಳವಾಗಿ ಹೇಳಿಕೊಟ್ಟಿದ್ದಾರೆ.

    ಮಂಗಳಾ ಶರಣೆ ಝೆನ್ ಗುರು ಥಾಯ್ ಬಗ್ಗೆ ಆಳವಾಗಿ ಹಲುವು ವರ್ಷಗಳಿಂದ ಅಧ್ಯಯನ ಮಾಡಿ ಈ ಲೇಖನವನ್ನು ನಮಗೆ ಪ್ರಸಾದ ರೂಪವಾಗಿ ಕೊಟ್ಟಿದ್ದಾರೆ.

    ಮಂಗಳಾ ಅವರಿಗೆ ಹಾಗು ಬಯಲು ತಂಡದವರಿಗೆ ದನ್ಯವಾದಗಳು ಮತ್ತು ಶರಣು ಶರಣಾರ್ಥಿಗಳು.

  4. ಪಂಚಾಕ್ಷರಿ
    May 14, 2022 Reply

    ಮನುಷ್ಯ ಜೀವನವನ್ನು ಜೀವಿಸದೆ ವಸ್ತುಗಳನ್ನು ಜೀವಿಸುವುದರಿಂದಾಗಿ ನಾವು ಪ್ರಸ್ತುತದಲ್ಲಿ ಬದುಕದೇ ಪೂರ್ವ ಮತ್ತು ಉತ್ತರದಲ್ಲಿ ನಿತ್ಯ ಮುಳುಗಿ ನಿಜದಲ್ಲಿ ಅನಿತ್ಯರಾಗುತ್ತಿದ್ದೇವೆ.

    ಬದುಕನ್ನು ಸಾರ್ಥಕಪಡಿಸಿಕೊಳ್ಳುವ ಪಥದ ಕಡೆಗೆ ಬೆಳಕು ಚೆಲ್ಲುವ ಲೇಖನ.

  5. Gopal N
    May 23, 2022 Reply

    ಲೇಖನ ಬಹಳ ಚೆನ್ನಾಗಿದೆ

  6. Ramaprasad H
    May 29, 2022 Reply

    ಸಂಗ್ರಹಯೋಗ್ಯವಾದ ಬರಹ. ಧನ್ಯವಾದಗಳು ಅಕ್ಕಾ.

  7. Jayadevappa R.T
    May 31, 2022 Reply

    ಬಹಳ ಅಪರೂಪದ ಮಾಹಿತಿಗಳಿರುವ ಲೇಖನ… ಈಗಾಗಲೇ ಎರಡು-ಮೂರು ಸಲ ಓದಿದ್ದೇನೆ, ಆ ಝೆನ್ ಗುರುವನ್ನು ನೋಡದಿದ್ದರೂ ನಿಮ್ಮ ಬರವಣಿಗೆಯ ಮೂಲಕ ಅವರ ದರ್ಶನ ನೀಡಿದ್ದು ನಮ್ಮ ಭಾಗ್ಯವೆಂದೇ ತಿಳಿದಿದ್ದೇನೆ, ಶರಣು.

  8. Kavyashree
    Jun 14, 2022 Reply

    ಸಾವಿಲ್ಲದ ಝೆನ್ ಗುರು ಲೇಖನಗಳೆರಡೂ ಸೊಗಸಾಗಿ ಮೂಡಿಬಂದಿವೆ. ಥಾಯ್ ಗುರುವಿನ ಬಗೆಗೆ ಮಾಹಿತಿ ನೀಡಿದ್ದಕ್ಕೆ ವಂದನೆಗಳು. ಸಾಧಕರಿಗೂ, ಯಾವುದೇ ಧರ್ಮದ ಗುರುವಿಗೂ ಮಾರ್ಗದರ್ಶನ ನೀಡಬಲ್ಲ ಹಲವಾರು ಸಂಗತಿಗಳು ಇಲ್ಲಿವೆ.

  9. ಶಂಕರ್ ದೇವನೂರು
    Jun 14, 2022 Reply

    ಈ ಲೇಖನಗಳಿಂದ ಶಾಂತಿಯನ್ನು ಬೋಧಿಸುವುದಲ್ಲಾ, ಶಾಂತಿಯೇ ನಾವಾಗುವುದು- ಎನ್ನುವ ಮೌಲಿಕ ಮಾತುಗಳನ್ನಾಡುವ ಥಾಯ್ ಗುರುವಿನ ಪರಿಚಯವಾದದ್ದು ಬಹಳ ಸಂತೋಷವಾಯಿತು. ಎರಡನ್ನೂ ಒಟ್ಟು ಮಾಡಿ ಕೊಟ್ಟರೆ ಪುಟ್ಟ ಪುಸ್ತಕ ಮಾಡಿ ಎಲ್ಲರಿಗೂ ಹಂಚಬೇಕೆನ್ನುವ ಮನಸ್ಸಾಗಿದೆ. ಎಲ್ಲರೂ ಓದಲೇ ಬೇಕಾದ ಸಂಗತಿಗಳನ್ನು ಬರೆದಿರುತ್ತೀರಿ. ಲೇಖನಗಳನ್ನು ಕಳಿಸಿಕೊಟ್ಟರೆ ಮುದ್ರಿಸುತ್ತೇವೆ.

  10. ಚೇತನ್ ಶಿವಶಂಕರಪ್ಪ
    Jun 14, 2022 Reply

    ಬೌದ್ಧ ಧರ್ಮದ ವಜ್ರ ಸೂತ್ರಗಳು- ಸ್ವಯಂನ ಕಲ್ಪನೆ, ಜೀವ ಕಲ್ಪನೆ, ಮನುಷ್ಯ ಕಲ್ಪನೆಗಳು ಅರಿವಿನ ಪರಿಧಿಯನ್ನು ವಿಸ್ತರಿಸುವಂತಿವೆ. ಇವುಗಳ ಆಳಕ್ಕಿಳಿದು ವಿಚಾರಿಸಿದಾಗ ಝೆನ್ ಎಷ್ಟು ವಿಸ್ತಾರದ ತಿಳಿವೆಂದು, ಅದನ್ನು ಅನುಸರಿಸುವುದು ನಿಜವಾದ ಸಾಧನಾ ಸಿದ್ಧಿಯೆಂದು ಭಾಸವಾಗುತ್ತದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನಕಾರರು ಮತ್ತು ಕನ್ನಡ ಭಾಷೆ
ವಚನಕಾರರು ಮತ್ತು ಕನ್ನಡ ಭಾಷೆ
December 6, 2020
ಧಾರ್ಮಿಕ ಮೌಢ್ಯಗಳು
ಧಾರ್ಮಿಕ ಮೌಢ್ಯಗಳು
February 5, 2020
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
April 29, 2018
ಕರ್ತಾರನ ಕಮ್ಮಟ- ಭಾಗ 3
ಕರ್ತಾರನ ಕಮ್ಮಟ- ಭಾಗ 3
September 5, 2019
ಮನಸ್ಸು
ಮನಸ್ಸು
September 7, 2020
ವಚನಗಳ ಮಹತ್ವ
ವಚನಗಳ ಮಹತ್ವ
October 5, 2021
ಎರಡು ಎಲ್ಲಿ?
ಎರಡು ಎಲ್ಲಿ?
October 5, 2021
ಕನ್ನಡ ಕವಿ ಸಂತರಲ್ಲಿ ಧರ್ಮ…
ಕನ್ನಡ ಕವಿ ಸಂತರಲ್ಲಿ ಧರ್ಮ…
May 10, 2022
ಲಿಂಗಾಯತರ ಅವೈದಿಕ ನಂಬಿಕೆಗಳು
ಲಿಂಗಾಯತರ ಅವೈದಿಕ ನಂಬಿಕೆಗಳು
April 29, 2018
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
June 17, 2020
Copyright © 2022 Bayalu