
ಸವೇಜನಾಃ ಸುಖಿನೋ ಭವಂತು
ನ್ಯಾಯನಿಷ್ಠುರಿ, ದಾಕ್ಷಿಣ್ಯಪರ ನಾನಲ್ಲ.
ಲೋಕವಿರೋಧಿ ಶರಣನಾರಿಗಂಜುವನಲ್ಲ.
ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ.
ಬಸವಣ್ಣನವರ ಈ ವಚನದ ಆಶಯಕ್ಕನುಗುಣವಾಗಿ ತಮ್ಮ ಬದುಕನ್ನು ಕಟ್ಟಿಕೊಂಡವರು ಹಲವರು. ಅಂಥವರಲ್ಲಿ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳೂ ಒಬ್ಬರು. ಇದ್ದದ್ದನ್ನು ಇದ್ದ ಹಾಗೆ ಹೇಳುವ ಸ್ವಭಾವ ಅವರದಾಗಿತ್ತು. ಮಾನವನ ಮನ ನೊಂದೀತೆಂದು ಸತ್ಯಕ್ಕೆ ಅಪಚಾರವೆಸಗುವ ಗುಣ ಅವರಿಗಿರಲಿಲ್ಲ. ಸಂದರ್ಭಾನುಸಾರವಾಗಿ ನಾಲಗೆ ಹೊರಳಿಸುವ ಗೋಸುಂಬೆತನದ ಜನರನ್ನು ಕಂಡರೆ ಅವರು ಕೆಂಡವಾಗುತ್ತಿದ್ದರು. ಸತ್ಯ, ಪ್ರಾಮಾಣಿಕತೆ, ನೀತಿ, ಕಾಯಕ ಅವರ ಬದುಕಿನ ಅವಿಭಾಜ್ಯ ಅಂಗವಾಗಿತ್ತು. ಅಂಥ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ಕಾರಣಕ್ಕೆ ಇನ್ನೊಬ್ಬರಿಗೆ ಹೇಳುವ ನೈತಿಕ ಹಕ್ಕನ್ನು ಸಂಪಾದಿಸಿದ್ದರು. ಅವರು ತರಳಬಾಳು ಗುರುಪರಂಪರೆಯಲ್ಲಿ 20ನೆಯ ಜಗದ್ಗುರುಗಳು. ತರಳಬಾಳು ಗುರುಪರಂಪರೆಯ ಮೂಲ ಪುರುಷ ವಿಶ್ವಬಂಧು ಮರುಳಸಿದ್ಧರು. ಅವರ ತಂದೆ ಕೂಚಿಮಾರ, ತಾಯಿ ಸುಪ್ರಭೆ. ಅವರ ಕಾಯಕ ಚಪ್ಪಲಿ ಹೊಲಿಯುವುದು. ಚಪ್ಪಲಿ ಹೊಲಿಯುವ ಮಾದಿಗ ಜನಾಂಗದ ವ್ಯಕ್ತಿಯೊಬ್ಬ ತಮ್ಮ ಪೀಠದ ಆದ್ಯಗುರು ಎಂದು ಅತ್ಯಂತ ಗೌರವದಿಂದ, ಹೆಮ್ಮೆಯಿಂದ, ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲ; ಜಾತ್ಯತೀತವಾಗಿ ಸಮಾಜವನ್ನು ಕಟ್ಟಬೇಕು ಎನ್ನುವ ತತ್ವಕ್ಕೆ ಅಂಟಿಕೊಂಡು ಅದಕ್ಕನುಗುಣವಾಗಿಯೇ ತಮ್ಮ ಜೀವನದುದ್ದಕ್ಕೂ ನಡೆದುಕೊಂಡದ್ದು ವಿಶೇಷ.
ವಿಶ್ವಬಂಧು ಮರುಳಸಿದ್ಧರ ಇತಿಹಾಸವನ್ನು ನಮ್ಮ ಪೂಜ್ಯರಷ್ಟು ಮನೋಜ್ಞವಾಗಿ ಇನ್ನಾರೂ ಹೇಳಲಾರರು. ಅದಕ್ಕೆ ಅವರ ಮುಂದಿನ ಬರಹವೇ ಸಾಕ್ಷಿ: “ವಿಶ್ವಕಲ್ಯಾಣಕ್ಕಾಗಿ ಹೋರಾಡಿದ ಮಹಾವ್ಯಕ್ತಿಗಳಲ್ಲಿ ಉಜ್ಜಯಿನಿ ಮರುಳಸಿದ್ಧನು ಅಗ್ರಗಣ್ಯನು. ಕಾಯಕದಲ್ಲಿಯ ಕೀಳುಭಾವನೆಯನ್ನು ಅಳಿಸಲು ಕರುಗಳನ್ನು ಕಾದನು. ದಯೆಯೇ ಧರ್ಮದ ಮೂಲವೆಂದು ಹೇಳಿ ಪ್ರಾಣಿವಧೆಯನ್ನು ನಿಷೇಧಿಸಿದನು. ಮಾರಿ, ಮಸಣಿ ಮುಂತಾದ ಕ್ಷುದ್ರದೇವತೆಗಳ ಪೂಜೆಯನ್ನು ನಿಷೇಧಿಸಿ `ಇಬ್ಬರು ಮೂವರು ದೇವರೆಂದು ಉಬ್ಬುಬ್ಬಿ ಮಾತನಾಡಬೇಡಿ, ಒಬ್ಬನೇ ದೇವರು, ಇಬ್ಬರೆಂಬುದು ಹುಸಿ’ ಎಂದು ಬೋಧಿಸಿದನು. ದೀನದಲಿತರಿಗಾಗಿ ಮರುಗಿ ಅವರ ಕಷ್ಟಗಳನ್ನು ಪರಿಹರಿಸಿದನು. ಯಜ್ಞಯಾಗಾದಿಗಳನ್ನು ಮಾಡಿ ಅಗ್ನಿಯಲ್ಲಿ ಹಾಲು ತುಪ್ಪಗಳನ್ನು ಹಾಕಿ ಕಾಣದ ದೇವರನ್ನು ತೃಪ್ತಿಪಡಿಸಬೇಡಿ, ಹಸಿದಿರುವ ದೀನ ದರಿದ್ರರಿಗೆ ನೀಡಿ, ಅವರಲ್ಲಿ ದೇವರನ್ನು ಕಾಣಿರೆಂದನು. ಇದಕ್ಕಾಗಿ ಸತ್ಯಾಗ್ರಹವನ್ನೂ ಮಾಡಿದನು. ಕುಲವಾದವನ್ನು ಖಂಡಿಸಿ, ಹದಿನೆಂಟು ಕುಲಗಳೇಕೆ? ಕುಲದಲ್ಲಿ ತಾವೇ ಶ್ರೇಷ್ಠರೆಂಬುದೇಕೆ? ವಿಶ್ವವೆಲ್ಲಾ ಒಂದೇ ಕುಲವೆಂದು ಹೇಳಿ ಎಲ್ಲರನ್ನೂ ಸಹಪಂಕ್ತಿಯಲ್ಲಿ ಉಣ್ಣಿಸಿದನು. ಮಾನವ ಜೀವನದ ಮಹತ್ವವನ್ನು ಬೋಧಿಸಿ, ನರಬಲಿ ನಿಲ್ಲಿಸಿದನು. ಮದ್ಯ ಮಾಂಸ ಮೊದಲಾದ ತಾಮಸ ಆಹಾರಗಳನ್ನು ನಿಷೇಧಿಸಿದನು. ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲಗಳ ತತ್ವವನ್ನು ಶಿವಯೋಗಿ ರೇವಣಸಿದ್ಧರ ಕಾರುಣ್ಯಕ್ಕೆ ಪಾತ್ರನಾಗಿ ಪಡೆದುಕೊಂಡು ಜಗತ್ತಿಗೆ ಸಾರಿದನು. ಮಾಟ ಮಂತ್ರ ತಂತ್ರಗಳ ವಿಷಯದಲ್ಲಿ ಮೂಢನಂಬಿಕೆಯನ್ನು ಹುಟ್ಟಿಸಿ, ಜನಸಾಮಾನ್ಯರನ್ನು ತಮ್ಮ ಸ್ವಾರ್ಥಕ್ಕೆ ದುರುಪಯೋಗಪಡಿಸಿಕೊಳ್ಳುತ್ತಿದ್ದ ದುಷ್ಟಸಿದ್ಧರನ್ನು ವಾದದಲ್ಲಿ ಸೋಲಿಸಿ, ಜಗತ್ತಿಗೆ ಅವರಿಂದ ಆಗುತ್ತಿದ್ದ ಹಾನಿಯನ್ನು ತಪ್ಪಿಸಿದನು ಮತ್ತು ಜಗತ್ತಿನ ಹಿತಕ್ಕಾಗಿ, ತನ್ನ ಈ ತತ್ವಗಳ ಪ್ರಚಾರವು ಶಾಶ್ವತವಾಗಿ ನಡೆಯಲೆಂಬ ಉದ್ದೇಶದಿಂದ ಉಜ್ಜಯಿನಿಯಲ್ಲಿ ಸದ್ಧರ್ಮಪೀಠವನ್ನು ಸ್ಥಾಪಿಸಿ, ತನ್ನ ಕರ್ತವ್ಯವನ್ನು ನಿರ್ವಹಿಸಲು ತನ್ನ ಕಾರುಣ್ಯದ ಪುತ್ರನಾದ ತೆಲಗುಬಾಳಿನ ಸಿದ್ಧೇಶ್ವರನಿಗೆ ಮಾಘಶುದ್ಧ ಹುಣ್ಣಿಮೆಯ ದಿನ ಉತ್ತರಾಧಿಕಾರವನ್ನು ವಹಿಸಿ, `ತರಳ, ಬಾಳು’ ಎಂದು ಹರಸಿದನು.” ತಮ್ಮ ಪೀಠದ ಆದ್ಯ ಗುರುವಿನ ಸಂದೇಶವನ್ನು ತಮ್ಮ ಬದುಕಿನಲ್ಲಿ ಸಾಕಾರಗೊಳಿಸಿದವರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು.
ತರಳಬಾಳು ಜಗದ್ಗುರು ಬೃಹನ್ಮಠದ ವಾರ್ಷಿಕ ಮಹೋತ್ಸವಗಳಲ್ಲಿ ಬಹುಪ್ರಖ್ಯಾತವಾದುದು `ತರಳಬಾಳು ಹುಣ್ಣಿಮೆ’. ಇದು ಆರಂಭದಲ್ಲಿ ಸಿರಿಗೆರೆಯಲ್ಲೇ ನಡೆಯುತ್ತಿತ್ತು. ಈ ಹುಣ್ಣಿಮೆ ಮಹೋತ್ಸವಕ್ಕೆ ಪ್ರೇರಕರು, ಪೋಷಕರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ತಮ್ಮ ಮಠದ ಮೂಲ ಗುರು ಮರುಳಸಿದ್ಧರ ಹಾಗೂ ಬಸವಾದಿ ಶಿವಶರಣರ ತತ್ವಪ್ರಸಾರಕ್ಕಾಗಿ ಈ ಹುಣ್ಣಿಮೆಯ ಬಳಕೆಯನ್ನು ಮಾಡಿಕೊಂಡರು. ಅದು ಇಂದಿಗೂ ನಾಡಿನ ಜನಮನವನ್ನು ಆಕರ್ಷಿಸಿ ಪ್ರತಿವರ್ಷ ಬೇರೆ ಬೇರೆ ಸ್ಥಳಗಳಲ್ಲಿ ನಡೆಯುತ್ತಲಿದೆ. ತರಳಬಾಳು ಹುಣ್ಣಿಮೆಗೆ ತನ್ನದೇ ಆದ ಇತಿಹಾಸವೂ ಇದೆ. ಮರುಳಸಿದ್ಧ ಏನೇನು ಸಮಾಜಮುಖಿ ಕಾರ್ಯಗಳನ್ನು ಮಾಡಿದರೆಂಬುದು ಮೇಲಿನ ಗುರುಗಳ ಬರಹದಲ್ಲಿ ಅಡಕವಾಗಿದೆ. ತಮ್ಮ ನಂತರವೂ ಈ ಕಾರ್ಯ ನಡೆಯಬೇಕು ಎನ್ನುವ ಸದುದ್ದೇಶದಿಂದ ಅವರು ತಮ್ಮ ಜನ್ಮಭೂಮಿ ಕಗ್ಗಲ್ಲಪುರಕ್ಕೆ (ಈಗ ಅದು ಬೇಚರಾಕ್ ಗ್ರಾಮ. ಕೂಡ್ಲಿಗಿ ತಾಲ್ಲೂಕು ಉಜ್ಜಯಿನಿಯ ಪಕ್ಕದಲ್ಲಿ ಅದರ ಕುರುಹುಗಳಿವೆ.) ಆಗಮಿಸಿ ಕಗ್ಗಲ್ಲಪುರದ ಗೌಡ ಮತ್ತು ತಮ್ಮ ಸಾಕುತಂದೆ ಸಾಧು ಜನಾಂಗದ ಬಾಚನಗೌಡನಲ್ಲಿ ಸದ್ಧರ್ಮ ಪೀಠ ಸ್ಥಾಪಿಸಲು ಬೇಕಾದ ಭೂಮಿಯ ದಾನ ಬೇಡಿದರು. ಬಾಚಣ್ಣಗೌಡರು ಸಂತೋಷದಿಂದ ತಮಗೆ ಬೇಕಾದ ಭೂಮಿಯನ್ನು ಪಡೆಯಬಹುದು ಎಂದು ಪ್ರಾರ್ಥಿಸಿಕೊಂಡ. ಆಗ ವಯೋವೃದ್ಧ ಮರುಳಸಿದ್ಧರು ಒಂಬತ್ತು ಕಡೆ ತಮ್ಮ ಪಾದವನ್ನಿಟ್ಟು ಈ ನಡುವಿನ ಭೂಮಿಯನ್ನು ದಾನವಾಗಿ ಪಡೆಯುವರು. ಇಂದಿಗೂ ಅದರ ಸ್ಮಾರಕವಾಗಿ ಕಗ್ಗಲ್ಲಪುರವನ್ನು ಕೇಂದ್ರವಾಗಿರಿಸಿಕೊಂಡು ಸುತ್ತಮುತ್ತ ಒಂಬತ್ತು ಪಾದಗಟ್ಟೆಗಳಿವೆ. ಕಗ್ಗಲ್ಲಪುರದಲ್ಲಿ ಸದ್ಧರ್ಮ ಪೀಠವನ್ನು ಸಂಸ್ಥಾಪಿಸಿ ಅದರ ಮೇಲೆ ತಮ್ಮ ಕರುಣೆಯ ಕಂದ ತೆಲಗುಬಾಳಿನ ಸಿದ್ಧೇಶ್ವರರನ್ನು ಕೂರಿಸಿ `ತರಳ, ಬಾಳು’ ಎಂದು ಹಾರೈಸಿದರು. ಅಲ್ಲಿಂದ `ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ತರಳಬಾಳು ಜಗದ್ಗುರು’ ಪರಂಪರೆ ಪ್ರಾರಂಭವಾಗಿದೆ.
ತಮ್ಮ ಪರಂಪರೆಯ ನೆನಪು ಮಾಡಿಕೊಳ್ಳಲು ಒಂಬತ್ತು ಪಾದಗಟ್ಟೆಗಳನ್ನು ಆಧಾರವಾಗಿರಿಸಿಕೊಂಡು ಒಂಬತ್ತು ದಿನಗಳ ಕಾಲ ತರಳಬಾಳು ಹುಣ್ಣಿಮೆಯನ್ನು ಪೂಜ್ಯರು ಆಚರಿಸುತ್ತ ಬಂದರು. ಅಂಥ ಹುಣ್ಣಿಮೆ ಪ್ರಪ್ರಥಮವಾಗಿ 1949ರಲ್ಲಿ ಸಿರಿಗೆರೆಯಲ್ಲಿ ನಡೆದ ದಾಖಲೆ ಇದೆ. ಆ ಹುಣ್ಣಿಮೆಯ ಅಂತಿಮ ದಿನದಲ್ಲಿ ಅಂದರೆ 13-2-1949ರಂದು ನೀಡಿದ ಲಿಖಿತ ಆಶೀರ್ವಚನದ ಮಾತುಗಳನ್ನೇ ಮೇಲೆ ಉಲ್ಲೇಖಿಸಿರುವುದು. ಆ ಮಾತುಗಳು ಕೇವಲ ಮಾತುಗಳಲ್ಲ. ಪೂಜ್ಯರು ತಮ್ಮ ಬದುಕಿನುದ್ದಕ್ಕೂ ಸಾಧಿಸಿದ ಸಾಧನೆಗಳ ಸಾಕ್ಷಿಯ ಪ್ರತೀಕಗಳು. ಮರುಳಸಿದ್ಧ ಮತ್ತು ಬಸವಾದಿ ಶಿವಶರಣರ ಧ್ಯೇಯೋದ್ದೇಶಗಳನ್ನೇ ತಮ್ಮ ಬದುಕಿನ ಆಧಾರಸ್ಥಂಬವಾಗಿಸಿಕೊಂಡು ಅವುಗಳನ್ನು ಸಮಾಜದ ಜನರಲ್ಲಿ ಜಾರಿಯಲ್ಲಿ ತರುವ ಸಂಕಲ್ಪ ಮಾಡಿದರು. ಆ ಸಂಕಲ್ಪವನ್ನು ಸಾಧಿಸಿದರು ಕೂಡ. ಜನರು ದಿಕ್ಕುತಪ್ಪಿ ದಿಂಡುರುಳುತ್ತಿರುವುದಕ್ಕೆ ಅವರ ಅಜ್ಞಾನ ಕಾರಣವೆಂದು ಕಂಡುಕೊಂಡ ಪೂಜ್ಯರು ಆ ಅಜ್ಞಾನ ನಿವಾರಣೆಗಾಗಿ ಹತ್ತು ಹಲವು ಮಾರ್ಗಗಳನ್ನು ಕಂಡುಕೊಂಡರು. ಆ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಇರುತ್ತಿದ್ದುದೇ ವಿರಳ. ಗ್ರಾಮೀಣ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುವುದನ್ನು ಮನಗಂಡು 1946ರಲ್ಲೇ ಸಿರಿಗೆರೆಯಲ್ಲಿ `ವಿವಿಧೋದ್ದೇಶ ಪ್ರೌಢಶಾಲೆ’ಯನ್ನು ಪ್ರಾರಂಭಿಸಿದರು. ನಂತರ `ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ’ 1962ರಲ್ಲಿ ನೋಂದಾವಣೆಯಾಯ್ತು. ಸಿರಿಗೆರೆಯಲ್ಲಿ ಆಗ ಸಾವಿರಾರು ವಿದ್ಯಾರ್ಥಿಗಳು ಬೇರೆ ಬೇರೆ ತಾಲ್ಲೂಕು ಮತ್ತು ಜಿಲ್ಲೆಗಳಿಂದ ಬರುತ್ತಿದ್ದರು. ಕಾರಣ ಅವರಿಗೆ ಉಚಿತ ಪ್ರಸಾದ, ವಸತಿ ಮತ್ತು ಶಿಕ್ಷಣ ದೊರೆಯುತ್ತಿದ್ದುದು. ಮೇಲಾಗಿ ಗುರುಗಳೇ ಅವುಗಳ ಜವಾಬ್ದಾರಿ ನಿರ್ವಹಿಸುತ್ತಿದ್ದುದು. ಅಜ್ಞಾನ ನಮ್ಮ ಜನರ ಪರಮ ವೈರಿ. ಆ ವೈರಿಯನ್ನು ಗೆಲ್ಲದೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ ಎನ್ನುತ್ತಿದ್ದ ಪೂಜ್ಯರು ಗ್ರಾಮೀಣ ಪ್ರದೇಶಗಳಲ್ಲಿಯೇ ಪ್ರೌಢಶಾಲೆಗಳನ್ನು ತೆರೆಯುತ್ತ ಬಂದರು. ದೊಡ್ಡವರಿಗಾಗಿ `ಸರ್ವಶರಣರ ಸಮ್ಮೇಳನ’ ಜಾರಿಯಲ್ಲಿ ಬಂತು.
ಜನರು ಮದುವೆ, ಕೈಲಾಸ ಸಮಾರಾಧನೆ, ಗೃಹಪ್ರವೇಶ ಹೀಗೆ ಏನೇನೋ ಕಾರ್ಯಕ್ರಮಗಳನ್ನು ಮಾಡುತ್ತಿದ್ದುದನ್ನು ಗಮನಿಸಿದ ಪೂಜ್ಯರು ಅಂಥ ಸಂದರ್ಭದಲ್ಲಿ ಜನರು ಹಾಳು ಹರಟೆ ಹೊಡೆಯುವುದನ್ನು, ಹೆಚ್ಚೆಂದರೆ ಒಂದೆಡೆ ಕುಳಿತು ಇಸ್ಪೀಟ್ ಆಡುವುದನ್ನು ಗಮನಿಸಿದ್ದರು. ಆ ಜನರಿಗೆ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ `ಸರ್ವಶರಣ ಸಮ್ಮೇಳನ’ ಎನ್ನುವ ವಿಶಿಷ್ಟ ಕಾರ್ಯಕ್ರಮ ರೂಪಿಸಿದರು. ಭಕ್ತರ ಮನೆಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಹೋಗಿ ವಚನಗಳನ್ನು ಹಾಡಿಸುತ್ತಿದ್ದರು. ವಚನ ಸಂಗೀತದಿಂದ ಆಕರ್ಷಿತರಾದ ಜನರು ಅಲ್ಲಲ್ಲಿ ಓಡಾಡುವುದನ್ನು ಬಿಟ್ಟು ವೇದಿಕೆ ಬಳಿ ಬಂದು ಕೂರಲಾರಂಭಿಸಿದರು. ಜನರು ಶಾಂತವಾಗಿ ಕುಳಿತ ಸಂದರ್ಭದ ಸದ್ಬಳಕೆ ಮಾಡಿಕೊಂಡು ಅವರಿಗೆ ಮದುವೆಯ ಮಹತ್ವ, ಶರಣರ ವಿಚಾರಗಳು, ಆದರ್ಶ ಬದುಕನ್ನು ಕಟ್ಟಿಕೊಳ್ಳುವ ಬಗೆ, ಪ್ರಸ್ತುತ ಬದುಕು ಇತ್ಯಾದಿಗಳನ್ನು ಮನಮುಟ್ಟುವಂತೆ ತಿಳಿಸುತ್ತಿದ್ದರು. ಇದನ್ನು ಮನಗಂಡವರು ತಮ್ಮ ತಮ್ಮ ಮನೆಯ ಕಾರ್ಯಕ್ರಮಗಳಿಗೂ ಗುರುಗಳನ್ನು ಆಹ್ವಾನಿಸಲು ಮುಂದಾದರು. ಎಲ್ಲೆಡೆ `ಸರ್ವಶರಣ ಸಮ್ಮೇಳನ’ಗಳಿಗೆ ವಿಶೇಷ ಮನ್ನಣೆ ದೊರೆಯಲಾರಂಭಿಸಿತು. ಗುರುಗಳಿಲ್ಲದ ಮದುವೆ ಮದುವೆಯೇ ಅಲ್ಲ, ಶಿವಗಣಾರಾಧನೆ ಶಿವಗಣಾರಾಧನೆಯೇ ಅಲ್ಲ, ಗೃಹಪ್ರವೇಶ ಗೃಹಪ್ರವೇಶವೇ ಅಲ್ಲ ಎನ್ನುವ ಪರಂಪರೆ ಬೆಳೆಯಿತು. ಆಗ ಗುರುಗಳು ಬಹುಮುಖ್ಯವಾಗಿ ಹೇಳುತ್ತಿದ್ದುದು ಮತ್ತೊಬ್ಬರ ದೋಷಗಳನ್ನು ಎತ್ತಿ ಹೇಳದೆ ವ್ಯಕ್ತಿಗತ ದೋಷಗಳನ್ನು ತಿದ್ದಿಕೊಳ್ಳಬೇಕು. ಮನೆಯ ಯಜಮಾನ ಸರಿಯಾದರೆ ಮನೆಮಂದಿಯೆಲ್ಲ ಸರಿಯಾಗುವರು. ಅದನ್ನೇ ಬಸವಣ್ಣನವರು `ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ’ ಎಂದಿದ್ದಾರೆ ಎಂದು ಆ ವಚನದ ವಿವರಣೆಯನ್ನು ಎಲ್ಲರ ಮನಮುಟ್ಟುವ ಹಾಗೆ ವಿವರಿಸುತ್ತಿದ್ದರು.
ಒಂದು ಊರಲ್ಲಿ ಲಿಂಗಾಯತರ ಮನೆಗಳು ಮಾತ್ರವಿಲ್ಲ. ಊರು ಎಂದರೆ ಹಲವಾರು ಜಾತಿಯ ಜನರು ಇರುವುದು ಸಹಜ. ಊರಲ್ಲಿ ಶಾಂತಿ, ಸೌಹಾರ್ದತೆ ಇದ್ದಾಗ ಮಾತ್ರ ಊರಿಗೆ ಗೌರವ ಎನ್ನುತ್ತ ಅದಕ್ಕೆ ಬಸವಣ್ಣನವರ `ಇವನಾರವ, ಇವನಾರವ’ ಎನ್ನುವ ವಚನ ಹೇಳಿ ಎಲ್ಲರೂ ತಲೆದೂಗುವಂತೆ ಮಾಡುತ್ತಿದ್ದರು. ಯಾರೇನು ಇಂಥದೇ ಜಾತಿಯಲ್ಲಿ ಹುಟ್ಟಬೇಕೆಂದು ಮೊದಲೇ ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ಯಾವುದೋ ಒಂದು ಕುಟುಂಬದಲ್ಲಿ ಹುಟ್ಟಿದ್ದರಿಂದ ಆ ಕುಟುಂಬದ ಜಾತಿ ಹುಟ್ಟಿದ ಮಗುವಿಗೂ ಅಂಟಿಕೊಳ್ಳುವುದು. ಆದರೆ ಮಗುವನ್ನು ಜಾತ್ಯತೀತವಾಗಿ ಬೆಳೆಸುವ ಹೊಣೆಗಾರಿಕೆ ತಂದೆ ತಾಯಿಗಳದು. ಜಾತೀಯತೆಯ ಕೊಳಕನ್ನು ಶುಚಿಗೊಳಿಸಿ ಜಾತ್ಯತೀತರಾಗಿ ಬಾಳಲು ಅವಕಾಶವಿದೆ. ಏಕೆಂದರೆ ಎಲ್ಲರ ಹುಟ್ಟಿನ ಗುಟ್ಟು ಒಂದೇ ರೀತಿಯಾಗಿದೆ. `ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ. ಕರ್ಣದಲ್ಲಿ ಜನಿಸಿದವರುಂಟೆ?’ ಎಂದು ವಚನ ಹೇಳುತ್ತ ಜನರಲ್ಲಿ ಜಾತ್ಯತೀತ ಮನೋಭಾವ ಬೆಳೆಯುವುದಕ್ಕೆ ಪೂರಕವಾದ ನುಡಿಗಳನ್ನು ಆಡುತ್ತಿದ್ದರು. ಮನುಷ್ಯ ತನ್ನ ಸಂಸ್ಕಾರದ ಮೂಲಕ ಜಾತಿಯನ್ನು ಮೆಟ್ಟಿನಿಲ್ಲಬೇಕು. ವಿಶ್ವಮಾನವನಾಗಿ ಬೆಳೆಯಬೇಕು. ನಮ್ಮ ಪೀಠದ ಮೂಲ ಗುರು ಮರುಳಸಿದ್ಧರು ಹೇಳಿದ್ದು ಇದನ್ನೇ. ಅವರು ಹುಟ್ಟಿನಿಂದ ಮಾದಿಗರಾಗಿದ್ದರೂ ತಮ್ಮ ಜೀವಪರ, ಜನಪರ ಕಾಳಜಿಯಿಂದ ವಿಶ್ವಬಂಧುವಾದರು. ಅಂಥ ವಿಶ್ವಬಂಧುತ್ವ ಬೆಳೆಸಿಕೊಂಡಾಗ ಮಾತ್ರ ತರಳಬಾಳು ಪರಂಪರೆಗೆ ಸೇರಲು ಅರ್ಹರಾಗುತ್ತೀರಿ. ತರಳಬಾಳು ಪರಂಪರೆ ಒಂದು ಜಾತಿಗೆ, ವರ್ಗಕ್ಕೆ, ಲಿಂಗಕ್ಕೆ, ಭಾಷೆಗೆ ಸೀಮಿತವಾದುದಲ್ಲ ಎಂದು ಮತ್ತೆ ಮತ್ತೆ ಮನವರಿಕೆ ಮಾಡಿ ಅದರಂತೆ ತಾವೇ ಮೊದಲು ನಡೆದು ತೋರಿಸಿದ ಗುರುಶ್ರೇಷ್ಠರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು.
ಆ ಕಾಲದಲ್ಲಿ ಮಠದಲ್ಲಿ ಎಲ್ಲ ವರ್ಗದ ಜನರು ಕೂಡಿ ಪ್ರಸಾದ ಸ್ವೀಕರಿಸುವುದು ಊಹೆಗೂ ನಿಲುಕದ ವಿಷಯ. ಆದರೆ ಪೂಜ್ಯರು ತಮ್ಮ ಗುರುವಿನ ಆಶಯದಂತೆ ಮಠಕ್ಕೆ ಬರುವವರ ಜಾತಿಯನ್ನು ನೋಡುತ್ತಿರಲಿಲ್ಲ. ಅವರಿಗೆ ಜಾತಿಗಿಂತ ನೀತಿ ಮತ್ತು ಕಾಯಕ ಮುಖ್ಯವಾಗಿತ್ತು. ಸೋಮಾರಿತನವನ್ನು ಅವರೆಂದೂ ಸಹಿಸುತ್ತಿರಲಿಲ್ಲ. ವಿದ್ಯಾರ್ಥಿಗಳಲ್ಲಿ ಸಹ ಕಾಯಕ ಶ್ರದ್ಧೆ ಬೆಳೆಸಲು ಶಾಲಾ ಕಟ್ಟಡದ ಸಂದರ್ಭದಲ್ಲಿ ತಾವೇ ಕಲ್ಲು ಎತ್ತಿ ಕೊಡುತ್ತಿದ್ದರು. ಮಣ್ಣು ತುಂಬಿದ ಪುಟ್ಟಿಯನ್ನು ಮಕ್ಕಳಿಗೆ ಹೊರಿಸುತ್ತಿದ್ದರು. ಸಸಿಗಳನ್ನು ನೆಡಿಸಿ ಬೆಳೆಸುವ ಜವಾಬ್ದಾರಿ ನೀಡುತ್ತಿದ್ದರು. ಶಾಲಾ ಆವರಣದ ಶುಚಿತ್ವ ಸಹ ವಿದ್ಯಾರ್ಥಿಗಳದೇ. ಅಧ್ಯಾಪಕರ ಮನೆಗೆ ನೀರು ತರುವ ಕಾರ್ಯದಲ್ಲೂ ಕೆಲವು ವಿದ್ಯಾರ್ಥಿಗಳು ನಿರತರಾಗಿರುತ್ತಿದ್ದರು. ಯಾವ ಕೆಲಸವೂ ಕೀಳಲ್ಲ, ಯಾವುದೂ ಮೇಲಲ್ಲ. `ಹೊಟ್ಟೆ ಇದ್ದವನು ಉಣ್ಣಬೇಕು, ರಟ್ಟೆ ಇದ್ದವನು ದುಡಿಯಬೇಕು, ನೆತ್ತಿ ಇದ್ದವನು ಓದಬೇಕು’ ಎಂದು ಪದೇ ಪದೇ ಹೇಳುತ್ತಿದ್ದರು. ಹೊಟ್ಟೆ, ರಟ್ಟೆ, ನೆತ್ತಿಯ ಸಮಾನ ಬಳಕೆಯೇ ವ್ಯಕ್ತಿಯಲ್ಲಿ, ಸಮಾಜದಲ್ಲಿ ಪರಿವರ್ತನೆ ತರಲು ಸಾಧನ ಎನ್ನುತ್ತ ಎಲ್ಲರನ್ನೂ ದುಡಿಯಲು, ಖುಷಿಯಿಂದ ಉಣ್ಣಲು, ಅಷ್ಟೇ ಆಸಕ್ತಿಯಿಂದ ಓದಲು ಪ್ರೋತ್ಸಾಹಿಸುತ್ತಿದ್ದರು. ಹಾಸ್ಟಲ್ಗಳಲ್ಲಿರುವ ಮಕ್ಕಳು ಕೃಷಿಕ, ಕ್ಷೌರಿಕ, ಕುಂಬಾರ, ನೇಕಾರ, ಉಪ್ಪಾರ, ಲಂಬಾಣಿ, ಹರಿಜನ, ಮುಸಲ್ಮಾನ, ಬ್ರಾಹ್ಮಣ ಎನ್ನುವ ಭೇದವಿಲ್ಲದೆ ಒಂದಾಗಿ ಬಾಳುತ್ತಿದ್ದರು. ಒಂದಾಗಿ ಓದುತ್ತಿದ್ದರು. ಒಂದಾಗಿ ಪಂಕ್ತಿಯಲ್ಲಿ ಕೂತು ಪ್ರಸಾದ ಸ್ವೀಕರಿಸುತ್ತಿದ್ದರು. ಇದನ್ನು ಕಂಡ ಕೆಲವು ಸಂಪ್ರದಾಯವಾದಿ ಲಿಂಗಾಯತರು ತಮ್ಮ ಮುಖಂಡರ ಮೂಲಕ ಈ ಪದ್ಧತಿಯನ್ನು ಬದಲಾಯಿಸಲು ಒತ್ತಡ ತಂದುದೂ ಉಂಟು. ಕೆಲವು ಮುಖಂಡರು ಗುರುಗಳಲ್ಲಿಗೆ ಬಂದು, “ಬುದ್ಧಿ ವಿದ್ಯಾಸಂಸ್ಥೆ ಬೆಳೆಯಲು, ಹಾಸ್ಟಲ್ ನಡೆಯಲು ಬೇಕಾದ ಹಣ, ದವಸ ಇತ್ಯಾದಿ ಕೊಡುವವರು ಲಿಂಗಾಯತರು. ಆದರೆ ತಾವು ಎಲ್ಲ ವರ್ಗದ ಮಕ್ಕಳನ್ನು ಒಂದೇ ಪಂಕ್ತಿಯಲ್ಲಿ ಕೂರಿಸಿ ಊಟ ಮಾಡಿಸುತ್ತಿರುವುದು, ಮಾದಿಗ ಹುಡುಗರು ಮುದ್ದೆ ಕಟ್ಟುತ್ತಿರುವುದು, ಲಿಂಗಾಯತ ಹುಡುಗರು ಊಟಕ್ಕೆ ನೀಡುವುದು ಸಮಾಜದ ಜನರಿಗೆ ತುಂಬಾ ವೇದನೆಯನ್ನುಂಟುಮಾಡಿದೆ. ತಾವು ದೊಡ್ಡ ಮನಸ್ಸು ಮಾಡಿ ಲಿಂಗಾಯತರಿಗೆ ಬೇರೆ, ಅನ್ಯ ಜಾತಿಯ ಹುಡುಗರಿಗೆ ಬೇರೆ ಊಟದ ವ್ಯವಸ್ಥೆ ಮಾಡಬೇಕು” ಎಂದು ಮನವಿ ಮಾಡಿದ್ದುಂಟು.
ಮುಖಂಡರ ಮಾತುಗಳನ್ನು ಅತ್ಯಂತ ತಾಳ್ಮೆಯಿಂದಲೇ ಆಲಿಸಿದ ಗುರುಗಳು ಇದಕ್ಕೆ ನಮ್ಮ ವಿದ್ಯಾರ್ಥಿಗಳೇ ಉತ್ತರ ಹೇಳುತ್ತಾರೆ ಎಂದು ಹಾಸ್ಟಲ್ನ ಕೆಲವು ವಿದ್ಯಾರ್ಥಿಗಳನ್ನು ಕರೆಸಿ ವಿಚಾರಿಸಿದ ರೀತಿ ಮುಖಂಡರ ಕಣ್ಣು ತೆರೆಸುವಂತಿತ್ತು. “ಏನಪ್ಪ ಎಲ್ಲರೂ ಚನ್ನಾಗಿ ಓದುತ್ತಿದ್ದೀರಾ? ಹಾಸ್ಟಲ್ನಲ್ಲಿ ಊಟ ಹೇಗಿರುತ್ತೆ? ಶಾಲೆಯಲ್ಲಿ ಹೇಗೆ ಪಾಠ ಮಾಡುತ್ತಾರೆ? ನಿಮಗೆ ಇಲ್ಲೇನಾದರೂ ತೊಂದರೆ ಇದೆಯೇ…” ಎಂದೆಲ್ಲ ಪ್ರಶ್ನಿಸಿದರು. “ಯಾವ ತೊಂದರೆಯೂ ಇಲ್ಲ ಬುದ್ಧಿ, ಎಲ್ಲರೂ ಚನ್ನಾಗಿ ಓದುತ್ತಿದ್ದೇವೆ. ಊಟ ಶುಚಿ ರಚಿಯಾಗಿರುತ್ತದೆ, ಶಾಲೆಯಲ್ಲಿ ಅರ್ಥವಾಗುವ ಹಾಗೆ ಪಾಠ ಮಾಡುವರು…” ಎಂದೆಲ್ಲ ಹೇಳಿದಾಗ `ನಿಮ್ಮ ರೂಮಿನಲ್ಲಿ, ಊಟಕ್ಕೆ ಬಂದಾಗ ಆ ಜಾತಿ, ಈ ಜಾತಿ ಎಂದು ಜಗಳ ಆಡುವುದಿಲ್ಲವೇ?’ ಎನ್ನುವ ಮತ್ತೊಂದು ಪ್ರಶ್ನೆ ಗುರುಗಳದು. “ಇಲ್ಲಿ ಜಾತಿಯ ಮಾತೇ ಇಲ್ಲ ಬುದ್ಧಿ. ನಾವೆಲ್ಲರೂ ಒಂದೇ ಕುಟುಂಬದ ಸಹೋದರರಂತೆ ಇದ್ದೇವೆ. ಹಾಸ್ಟಲ್ನಲ್ಲಿ ಒಂದು ದಿನ ನಾನು ಊಟಕ್ಕೆ ಬಡಿಸಿದರೆ ಮತ್ತೊಂದು ದಿನ ಇಸ್ಮಾಯಿಲ್, ಇನ್ನೊಂದು ದಿನ ದುರ್ಗಪ್ಪ, ಮತ್ತೊಂದು ದಿನ ರೇಖ್ಯಾನಾಯ್ಕ ಹೀಗೆ ಹಂಚಿಕೊಂಡು ಬಡಿಸುತ್ತೇವೆ. ಯಾರಲ್ಲೂ ಅವನು ಆ ಜಾತಿ, ಇವನು ಈ ಜಾತಿ ಎನ್ನುವ ಭಾವನೆಗೆ ಅವಕಾಶವೇ ಇಲ್ಲ” ಎಂದು ಹೇಳಿದ್ದಾರೆ.
ಅವರನ್ನೆಲ್ಲ ಕಳಿಸಿದ ಗುರುಗಳು ಮುಖಂಡರಿಗೆ, “ತಿಳಿಯಿತೇನ್ರಿ? ಬೆಳೆಯುವ ಮಕ್ಕಳಲ್ಲಿ ಜಾತಿಯ ವಿಷ ಬೀಜ ಬಿತ್ತಬಾರದು. ಇದರ ಮೇಲೂ ನಿಮಗೆ ನಿಮ್ಮ ಜಾತಿಯೇ ಮುಖ್ಯ ಎನ್ನುವುದಾದರೆ ನಾವು ಈ ಪೀಠವನ್ನು ತ್ಯಜಿಸುತ್ತೇವೆಯೇ ಹೊರತು ನಮ್ಮ ಜಾತ್ಯತೀತ ನಿಲವನ್ನು ಬದಲಾಯಿಸಿಕೊಳ್ಳುವುದಿಲ್ಲ. ನಾವು ಬೇಕೋ, ನಿಮ್ಮ ಜಾತಿ ಬೇಕೋ ನೀವೇ ತೀರ್ಮಾನ ತೆಗೆದುಕೊಳ್ಳಿ” ಎಂದಾಗ ಮುಖಂಡರು ತಪ್ಪಾಯ್ತು ಬುದ್ಧಿ ಎಂದು ನಮಸ್ಕರಿಸಿ ಅಲ್ಲಿಂದ ಮರೆಯಾಗಿದ್ದಾರೆ. ಗುರುಗಳದು ದಿಟ್ಟ ನಿಲವು. ಧೀರ ಹೆಜ್ಜೆ. ಅವರು ತತ್ವಗಳಿಗೆ ಬದ್ಧರೇ ಹೊರತು ಸಂದರ್ಭಾನುಸಾರ ತಮ್ಮ ಮಾತು ಬದಲಾಯಿಸುವವರಾಗಿರಲಿಲ್ಲ. ಇದಕ್ಕೆಲ್ಲ ನಮಗೆ ದಿಕ್ಸೂಚಿ ಮರುಳಸಿದ್ಧ ಮತ್ತು ಬಸವಾದಿ ಶಿವಶರಣರು ಎಂದು ಪದೇ ಪದೇ ಹೇಳುತ್ತಿದ್ದರು.
ಶಿಷ್ಯರು ಸರಿಯಾದರೂ ಕೆಲವು ಮಠಾಧೀಶರೇ ಗುರುಗಳ ಈ ನೀತಿಯನ್ನು ವಿರೋಧಿಸಿದಂತೆ ಕಾಣುವುದು. ಅದಕ್ಕಾಗಿ ಗುರುಗಳು 1950ರಲ್ಲಿ ಜಗಳೂರಲ್ಲಿ ನಡೆದ ತರಳಬಾಳು ಹುಣ್ಣಿಮೆಯ ಸಂದೇಶದಲ್ಲಿ ಪ್ರಸ್ತಾಪಿಸಿರುವುದು `ನಮಗೆ ತಿಳಿದಿರುವ ಮಟ್ಟಿಗೆ ಇಂದಿನ ವಿದ್ಯಾರ್ಥಿವೃಂದದಲ್ಲಿ ಯಾರು ಜಾತಿಗಳ ಕಟ್ಟುಪಾಡಿಗೆ ಒಳಗಾಗಿದ್ದಾರೆಂದು ಹೇಳುವಂತಿಲ್ಲ. ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಜಾತ್ಯತೀತ ವಿದ್ಯಾರ್ಥಿ ನಿಲಯಗಳಲ್ಲೂ, ಉಪಾಹಾರ ಮಂದಿರಗಳಲ್ಲೂ ನಮ್ಮ ವಿದ್ಯಾರ್ಥಿಗಳೆಲ್ಲಾ ಬೆರೆತು ಊಟ ಉಪಾಹಾರಗಳನ್ನು ನಡೆಯಿಸುತ್ತಿಲ್ಲವೇ? ಇವರ ವಿಷಯವಾಗಿ ಈವರೆಗೆ ಯಾವ ಮಠಾಧಿಪತಿಗಳೂ ಗೊಂದಲವನ್ನು ಎಬ್ಬಿಸಿರಲಿಲ್ಲ. ಇದು ಎಲ್ಲರಿಗೂ ತಿಳಿದ ವಿಷಯ. ಆದರೆ ಕೆಲವು ಕಾಲದಿಂದ ನಮ್ಮ ಸಿರಿಗೆರೆಯ ವಿದ್ಯಾರ್ಥಿ ನಿಲಯದಲ್ಲಿ ಎಲ್ಲ ಮತಗಳಿಗೆ ಸೇರಿದ ನಾನ್ನೂರು ಮಂದಿ ವಿದ್ಯಾರ್ಥಿಗಳು ಸಹಪಂಕ್ತಿ ಭೋಜನ ಮಾಡುತ್ತಿರುವುದಕ್ಕೆ ಕೆಲವರು ಅಪಪ್ರಚಾರ ಪ್ರಾರಂಭಿಸಿದ್ದಾರೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ನಮ್ಮ ಒಳ್ಳೆಯ ನಡವಳಿಕೆಯಿಂದ ಮಠದ ಅಸ್ತಿತ್ವ ಉಳಿಯಬೇಕಲ್ಲದೆ, ಕೇವಲ ಒಣ ಆಚಾರದಿಂದಲ್ಲ ಎಂಬುದು ನಮ್ಮ ಖಚಿತಾಭಿಪ್ರಾಯ’ ಎಂದು. ಗುರುಗಳು ಎಂದೂ ಸ್ವಜಾತಿ, ಪರಜಾತಿ ಎಂದು ಆಡಿದವರೇ ಅಲ್ಲ. ಅವರದು ಯಾವಾಗಲೂ ಜಾತ್ಯತೀತ ನಿಲವು. `ವಿಪ್ರ ಮೊದಲು, ಅಂತ್ಯಜ ಕಡೆಯಾಗಿ ಶಿವಭಕ್ತರಾದವರನ್ನೆಲ್ಲಾ ಒಂದೇ ಎಂಬೆ, ಹಾರವ ಮೊದಲು ಶ್ವಪಚ ಕಡೆಯಾಗಿ ಭವಿಯಾದವರನ್ನೆಲ್ಲ ಒಂದೇ ಎಂಬೆ’ ಎನ್ನುವ ಬಸವ ಸಿದ್ಧಾಂತದಲ್ಲಿ ಅಪಾರ ನಂಬಿಕೆ ಗುರುಗಳಿಗೆ. ಅದಕ್ಕಾಗಿ ಸಾರ್ವಜನಿಕ ವೇದಿಕೆಗಳಲ್ಲಿ `ಶರಣರು ಗುಣಕ್ಕೆ ಪ್ರಾಶಸ್ತ್ಯ ಕೊಡುತ್ತಿದ್ದರೇ ವಿನಾ ಜಾತಿಗಲ್ಲ. ಗುಣವುಳ್ಳವರನ್ನು ಭಕ್ತರೆಂದೂ, ದುರ್ಗುಣಿಗಳನ್ನು ಭವಿಗಳೆಂದೂ ಕರೆಯುತ್ತಿದ್ದರು’ ಎಂದು ಹೇಳುತ್ತಿದ್ದರು.
`ಶರಣ ಧರ್ಮ ಜಾತ್ಯತೀತವಾದುದು ಇದರಲ್ಲಿ ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ, ಮಡಿವಾಳ ಮಾಚಿದೇವ, ಮಚ್ಚೆ ಕಾಯಕದ ಹರಳಯ್ಯ, ಹಡಪದ ಅಪ್ಪಣ್ಣ, ನುಲಿಯ ಚಂದಯ್ಯ, ಮೇದಾರ ಕೇತಯ್ಯ, ಕುಂಬಾರ ಗುಂಡಯ್ಯ, ದೇವರ ದಾಸಿಮಯ್ಯ, ಶಿವನಾಗಮಯ್ಯ, ಅಲ್ಲಮ, ಬಸವ, ಚನ್ನಬಸವ, ಸಿದ್ಧರಾಮ, ಕಿನ್ನರಿ ಬೊಮ್ಮಯ್ಯ, ಕೆಂಬಾವಿ ಭೋಗಣ್ಣ, ಮಧುವರಸ, ರೇವಣಸಿದ್ಧ, ಮರುಳಸಿದ್ಧ ಈ ಮುಂತಾದವರೆಲ್ಲರೂ ಸಮಾನ ಸ್ಥಾನಮಾನವುಳ್ಳವರಾಗಿದ್ದರು’ ಎನ್ನುತ್ತ `ಸೆಟ್ಟಿ ಎಂಬೆನೆ ಸಿರಿಯಾಳನ, ಮಡಿವಾಳನೆಂಬೆನೆ ಮಾಚಯ್ಯನ, ಡೋಹರನೆಂಬೆನೆ ಕಕ್ಕಯ್ಯನ, ಮಾದಾರನೆಂಬೆನೆ ಚನ್ನಯ್ಯನ, ಆನು ಹಾರುವನೆಂದಡೆ ಕೂಡಲಸಂಗಯ್ಯ ನಗುವನಯ್ಯ’ ಎನ್ನುವ ವಚನವನ್ನು ಪದೇ ಪದೇ ಹೇಳುತ್ತಿದ್ದರು. ಮನುಷ್ಯನಿಗೆ ಗೌರವ ಬರುವುದು ಅವನ ಜಾತಿಯಿಂದ ಅಲ್ಲ; ಮಾಡುವ ಕಾಯಕದಿಂದ ಎಂದು ಭಕ್ತರನ್ನು ಕಾಯಕ ಜೀವಿಗಳನ್ನಾಗಿಸಿದರು. ಕಾಯಕ ಮಾಡುವುದಷ್ಟೇ ನಿಮ್ಮ ಹೊಣೆಗಾರಿಕೆಯಲ್ಲ; ಅದರಿಂದ ಬಂದ ಪ್ರತಿಫಲವನ್ನು ದಾಸೋಹ ರೂಪದಲ್ಲಿ ಸಮಾಜಕ್ಕೆ ಕೊಡಬೇಕು ಎಂದು ಬಸವಣ್ಣನವರ ವಚನವನ್ನು ತುಂಬಾ ಪರಿಣಾಮಕಾರಿಯಾಗಿ ವಿವರಿಸುತ್ತಿದ್ದರು. ಅವರು ಹೇಳುತ್ತಿದ್ದ ವಚನ:
ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು?
ಕೋಳಿ ಒಂದು ಕುಟುಕ ಕಂಡಡೆ ಕೂಗಿ ಕರೆಯದೆ ತನ್ನ ಕುಲವನೆಲ್ಲವ?
ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ ಕಾಗೆ ಕೋಳಿಯಿಂದ ಕರಕಷ್ಟ
ಕೂಡಲಸಂಗಮದೇವಾ.
ಕಾಗೆ, ಕೋಳಿಗಳು ಆಹಾರ ಕಂಡಕೂಡಲೇ ತಾವೇ ತಿನ್ನದೆ ತಮ್ಮ ಸಮೂಹವನ್ನು ಕೂಗಿ ಕರೆದು ಜೊತೆಯಲ್ಲಿ ತಿನ್ನುತ್ತವೆ. ಅವು ಸೌಹಾರ್ದದ ಪಾಠವನ್ನು ಮಾನವನಿಗೆ ಹೇಳಿಕೊಡುತ್ತಿವೆ. ಪ್ರಪಂಚದಲ್ಲೇ ತಾನು ಮೇಲೆಂದು ಬೀಗುವ ಮಾನವ ಇಂಥ ಕಾಗೆ ಕೋಳಿಗಳಿಂದಲೂ ಪಾಠ ಕಲಿಯಬೇಕು. ಅವುಗಳಂತೆ ಹಂಚಿ ಉಣ್ಣುವ ದಾಸೋಹ ಭಾವನೆಯನ್ನು ಬೆಳೆಸಿಕೊಳ್ಳಬೇಕು. ಕಾಯಕ ಮತ್ತು ದಾಸೋಹ ಪ್ರಜ್ಞೆ ಸಮಾಜದಲ್ಲಿ ಜಾಗೃತವಾದರೆ ಬಡತನಕ್ಕೆ ಅವಕಾಶವೇ ಇರುವುದಿಲ್ಲ. ಎಲ್ಲರೂ ಸಮೃದ್ಧಿಯಿಂದ ಬಾಳಲು ಸಾದ್ಯವಾಗುವುದು. ಸಮಾಜಮುಖಿ ಕೆಲಸ ಕಾರ್ಯಗಳೂ ಸುಗಮವಾಗಿ ನಡೆಯುವವು ಎಂದು ಹೇಳುತ್ತ ತಮ್ಮ ಪರಿಧಿಯಲ್ಲಿ ಬಂದ ಭಕ್ತರಿಗೆ ಕಾಯಕ, ದಾಸೋಹ ಪ್ರಜ್ಞೆ ಮೂಡಿಸಿದ್ದು ಮರೆಯದ ಅನುಭವ. ಇತರ ಸಮಾಜದ ಕಣ್ಣಲ್ಲಿ ಅತ್ಯಂತ ನಿಕೃಷ್ಠವಾಗಿದ್ದ, ದುಗ್ಗಾಣಿ ಮಠ ಎನಿಸಿಕೊಂಡು ಅವಹೇಳನಕ್ಕೆ ಕಾರಣವಾಗಿದ್ದ ಸಿರಿಗೆರೆ ಶ್ರೀಮಠ ಭಕ್ತರ ಕಾಯಕ ಮತ್ತು ದಾಸೋಹ ಪ್ರಜ್ಞೆಯಿಂದಾಗಿ ಎಲ್ಲರ ಮೆಚ್ಚುಗೆ ಪಡೆಯಲು, ದುಡಿಯುವ ಮಠವಾಗಲು ಕಾರಣವಾಯಿತು.
ಶ್ರೀಮಠದ ಸೇವಾಕಾರ್ಯಗಳಿಗೆ ಭಕ್ತರು ಹಿಂದೆ ಮುಂದೆ ನೋಡದೆ ಆರ್ಥಿಕ ನೆರವನ್ನು ನೀಡಲಾರಂಭಿಸಿದರು. ಅದು ಕಾರಣವಾಗಿಯೇ ತುತ್ತು ಅನ್ನಕ್ಕೂ ಗತಿಯಿಲ್ಲದ ಮಠ 3-4 ದಶಕಗಳಲ್ಲೇ ಅತ್ಯಂತ ಶ್ರೀಮಂತ ಮಠ ಎನಿಸಿಕೊಳ್ಳಲು ಸಾಧ್ಯವಾಯಿತು. ಹಾಗಂತ ಮಠದಲ್ಲಿ ಕೋಟಿ ಕೋಟಿ ಹಣ ಇತ್ತು ಎಂದಲ್ಲ. ಪೂಜ್ಯರ ಆದೇಶದಂತೆ ಅವರ ಆಶೀವಾದದ ಫಲವಾಗಿ ನಾವು 1977ರಲ್ಲಿ ಸಾಣೇಹಳ್ಳಿ ಮಠಕ್ಕೆ ಪಟ್ಟಾಭಿಷಿಕ್ತರಾದೆವು. ಸಾಣೇಹಳ್ಳಿ ಮಠದ ಸ್ವಾಮಿಗಳಾಗಿದ್ದರೂ ಪೂಜ್ಯರ ಸಂಕಲ್ಪದಂತೆ ನಾವು ಸಿರಿಗೆರೆಯ ಮಠದಲ್ಲಿದ್ದೇ ವಿದ್ಯಾಸಂಸ್ಥೆ, ಶ್ರೀಮಠದ ಆಡಳಿತದ ನಿರ್ವಹಣೆ ಮಾಡುತ್ತಿದ್ದೆವು. ಆಗ ಅನೇಕ ಭಕ್ತರು ಸಿರಿಗೆರೆ ಮಠ ಕೋಟ್ಯಾಧಿಪತಿಗಳ ಮಠವೆಂದು ಕರೆಯುತ್ತಿದ್ದರು. ಅದಕ್ಕೆ ಗುರುಗಳು ಸಹ ತಲೆದೂಗುತ್ತಿದ್ದರು. ನಾವು ಬಲ್ಲಂತೆ ಆಗ ಮಠದ ಸಾಲ ಏಳೆಂಟು ಲಕ್ಷ ಇತ್ತು. ಇಷ್ಟು ಸಾಲ ಇಟ್ಟುಕೊಂಡು ಕೋಟ್ಯಾಧಿಪತಿಗಳಾಗಲು ಹೇಗೆ ಸಾಧ್ಯ ಎನ್ನುವ ಅನುಮಾನ ನಮ್ಮನ್ನು ಕಾಡುತ್ತಲೇ ಇತ್ತು.
ಒಮ್ಮೆ ಗುರುಗಳ ಜೊತೆ ಮಾತನಾಡುವಾಗ ಭಕ್ತರೇನೋ ಹಣಕಾಸಿನ ಪರಿಸ್ಥಿತಿಯನ್ನರಿಯದೆ ಸಿರಿಗೆರೆ ಮಠವನ್ನು ಕೋಟ್ಯಾಧಿಪತಿಗಳ ಮಠ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವರು. ಆದರೆ ತಾವು ಸಹ ಹೌದು ಎನ್ನುವಿರಲ್ಲ! ಹೇಗೆ? ಎಂದು ಕೇಳಿದಾಗ ಗುರುಗಳು ಹೇಳಿದ್ದು: “ಮಠದ ಶ್ರೀಮಂತಿಕೆಯನ್ನು ಹಣದಿಂದ ಅಳೆಯಬಾರದು. ಭಕ್ತರ ಸಂಖ್ಯೆಯಿಂದ ನೋಡಬೇಕು. ನಮ್ಮ ಮಠಕ್ಕೆ ಹರಿಜನರಿಂದ ಹಿಡಿದು, ಬ್ರಾಹ್ಮಣರವರೆಗೆ; ಸಿರಿಗೆರೆಯಿಂದ ಪ್ರಾರಂಭಿಸಿ ಅಮೆರಿಕೆ, ಇಂಗ್ಲೆಂಡ್ ಹೀಗೆ ಬೇರೆ ಬೇರೆ ದೇಶಗಳಲ್ಲಿ ಭಕ್ತರಿದ್ದಾರೆ. ಅವರ ಸಂಖ್ಯೆ ಕೋಟಿಯನ್ನು ದಾಟುವುದು. ಭಕ್ತರ ಕಾರಣದಿಂದ ನಾವು ಕೋಟ್ಯಾಧಿಪತಿಗಳಲ್ಲವೇ? ಇಷ್ಟೊಂದು ಭಕ್ತ ಸಂಪತ್ತು ಇನ್ನಾವ ಮಠಕ್ಕೆ ಇದೆ ಎಂದು ಹಸನ್ಮುಖಿಗಳಾಗಿ ಹೇಳಿದ್ದರು. ಹೌದು ಒಂದು ಮಠದ ನಿಜವಾದ ಆಸ್ತಿ ಆ ಮಠದ ಭಕ್ತರು. ಆ ಮಠ ಒಂದು ಜಾತಿಗೆ ಸೀಮಿತವಾಗಿ ಹುಟ್ಟಿಕೊಂಡಿದ್ದರೂ ಅಲ್ಲಿರುವ ಸ್ವಾಮಿಗಳು ತಮ್ಮ ಜೀವಪರ ಕಾಳಜಿಯಿಂದ ಆ ಮಠವನ್ನು ಜಾತ್ಯತೀತ ಮಠವನ್ನಾಗಿಸಲು ಸಾಧ್ಯ ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದವರು ನಮ್ಮ ಗುರುಗಳು. ಹಾಗಾಗಿ ಅವರು ಹೇಳುತ್ತಿದ್ದುದು: ಪೀಠವು ಎಂದಿಗೂ ಶಾಶ್ವತವಲ್ಲ. ಸೇವೆಗೆ ಅದೊಂದು ಸಾಧನ ಎಂದು. ಅವರಿಗೆ ತಾವು ಮಾಡುವ, ಮಾಡಿರುವ ಕೆಲಸಗಳ ಬಗ್ಗೆ ಸಂತೃಪ್ತ ಮನೋಭಾವನೆ ಇತ್ತು. ಹಾಗಾಗಿಯೇ ತಮ್ಮ ನಿವೃತ್ತಿಯ ನಂತರ ಸಿರಿಗೆರೆಯಿಂದ 9 ಮೈಲಿ ದೂರದಲ್ಲಿರುವ ತರಳಬಾಳು ವೃತ್ತದ ಗುರುಶಾಂತ ನಿಕೇತನದ ಆವರಣದಲ್ಲಿ ಒಬ್ಬ ಋಷಿಯಂತೆ ಬಾಳಿದರು. 1979 ಫೆಬ್ರುವರಿ 11 ರಂದು ನೂತನ ಜಗದ್ಗುರುಗಳ ಪಟ್ಟಾಭಿಷೇಕ ಸಂದರ್ಭದಲ್ಲಿ `ಒಟ್ಟಿನಲ್ಲಿ ನಮ್ಮ ಕನಸಿನಂತೆ ಎಲ್ಲವೂ ನಡೆದಿದೆ. ಉಳಿದುದೂ ನಡೆಯುತ್ತದೆ. ಸಹಸ್ತಾರು ಜನರು ನಮ್ಮಲ್ಲಿ ನಂಬಿಕೆಯಿಟ್ಟು ನಮ್ಮೊಂದಿಗೆ ದುಡಿದಿದ್ದಾರೆ. ದುಡಿದವರ ಸ್ಮರಣೆ ಪ್ರಕೃತ. ನಮ್ಮಿಂದ ಯಾರಿಗಾದರೂ ನೋವಾಗಿದ್ದಲ್ಲಿ ಅದಕ್ಕೆ ನಾವು ಕಾರಣರಲ್ಲ. ಮಠಾಧಿಪತಿಗೆ ಬಹುಜನರ ಹಿತ ಮುಖ್ಯವೇ ವಿನಾ ವ್ಯಕ್ತಿಯ ಹಿತ ಮುಖ್ಯವಲ್ಲ. ಎಲ್ಲರೂ ಸಮಾಜದಲ್ಲಿ ಸರಿಸಮಾನರು. ಶ್ರೀಮಂತರಿರಬಹುದು, ಧೀಮಂತರಿರಬಹುದು. ಇದು ನಮ್ಮ ಶಿಷ್ಯಸಮೂಹದಲ್ಲಿ ಇನ್ನೂ ಹೆಚ್ಚಾಗಿ ಬೆಳೆದು ಬರಬೇಕು’ ಎಂದು ಸೂಚಿಸಿದ್ದರು. ಇಂಥ ಗುರುಗಳ ಶಿಷ್ಯರಾಗಿ ಅವರ ಜೊತೆ ನಾವಿದ್ದೆವಲ್ಲಾ ಎನ್ನುವುದೇ ಅವಿಸ್ಮರಣೀಯ ನೆನಪು.
ಬಾಯೊಳು ಸರ್ವೇ ಜನಾಃ ಸುಖಿನೋ ಭವಂತು ಎಂಬಿರಿ,
ಕೈಯೊಳು ಸರ್ವರ ಸುಖವನು ಕಸಿದುಕೊಂಬಿರಿ,
ಅದೇತರ ಸರ್ವ! ಅದೇತರ ಸುಖ! ನಡೆನುಡಿ ಸಮವಾಗದನ್ನಕ್ಕ?
ಜಾತಿಯೊಳು, ಕುಲದೊಳು, ಧರ್ಮದೊಳು, ಕರ್ಮದೊಳು,
ವೇದದೊಳು, ಶಾಸ್ತ್ರದೊಳು, ಹೊನ್ನಿನೊಳು, ಮಣ್ಣಿನೊಳು,
ಅಶನದೊಳು, ವಸನದೊಳು, ಹೆಣ್ಣಿನೊಳು, ಗಂಡಿನೊಳು,
ಇಂತೀಪರಿಯಲ್ಲಿ ಸರ್ವ ವಿಷಯಗಳೊಳು ಸಮತೆಯಾಗದನ್ನಕ್ಕ?
ಅದೇತರ ಸರ್ವ! ಅದೇತರ ಸುಖ!
ಇದು ಕಾರಣ ನಡೆನುಡಿಯೊಳು ಸಮತೆಯನಾಚರಿಪುದೇ
ತರಳಬಾಳು ಸಿದ್ಧೇಶ್ವರನಲ್ಲಿ
`ಸರ್ವೇ ಜನಾಃ ಸುಖಿನೋ ಭವಂತು’ ಎಂಬುದರ ನಿಜಾರ್ಥವು.
Comments 9
Shivakumar Patil
Aug 3, 2020ತರಳುಬಾಳು ಮಠದ ಹಿನ್ನೆಲೆ ಗೊತ್ತಿರಲಿಲ್ಲ, ಬಹಳ ಸೊಗಸಾಗಿ ವಿವರಿಸಿದ್ದೀರಿ. ಗುರುಗಳಿಗೆ ಶರಣು.
Satish Kumar Badadale
Aug 4, 2020Thank you.
for the giving such a wonderful information About tarabalu . sharanu sharanarthigalu
Shubha
Aug 4, 2020ತರಳುಬಾಳು ಮಠದ ಬಗ್ಗೆ ಕೇಳಿ ಅಚ್ಚರಿಯ ಜೊತೆಗೆ ಸಂಭ್ರಮವೂ ಆಯಿತು. ಇಷ್ಟೊಂದು ಘನ ಇತಿಹಾಸವಿರುವುದು ಗೊತ್ತಿರಲಿಲ್ಲ. ಪೂಜ್ಯರಿಗೆ ಶರಣಾರ್ಥಿಗಳು.
Vidya D.K
Aug 6, 2020ಎಲ್ಲಾ ಮಠಗಳಿಗಿಂತ ಭಿನ್ನವಾಗಿ, ವಿಶೇಷವಾಗಿ ತತ್ವ ಹಾಗೂ ಸತ್ಯನಿಷ್ಟತೆಯಲ್ಲಿ ಗುರುತಿಸಿಕೊಂಡ ತರಳಬಾಳು ಮಠದ ಹಿನ್ನೆಲೆ ತಿಳಿಸಿದ ಬಯಲುಗೆ ವಂದನೆಗಳು.
Nandeesh Harihara
Aug 9, 2020ತರಳುಬಾಳು ಮಠದ ಹುಟ್ಟು, ಬೆಳವಣಿಗೆಯನ್ನು ವಿವರಿಸಿದ ಶ್ರೀಗಳು ಹಿರಿಯ ಸ್ವಾಮಿಗಳು ಹಾಕಿಕೊಟ್ಟ ಆದರ್ಶದಲ್ಲೇ ಸಾಗುತ್ತಿರುವುದು ಹೆಮ್ಮೆಯ ಸಂಗತಿ. ನೇರ ಮಾತುಗಳಿಂದ ಹಾಗೂ ಬಸವಣ್ಣನವರ ವಚನಗಳ ಆಶಯದಂತೆ ಅವರು ಮಠವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಮತ್ತೆ ಕಲ್ಯಾಣವನ್ನು ಆರಂಭಿಸಿ ಹೊಸ ವಿಚಾರಗಳ ಸಂಚಲನವನ್ನುಂಟು ಮಾಡುತ್ತಿದ್ದಾರೆ.
Lingaraj Patil
Aug 17, 2020ತರಳುಬಾಳು ಮಠ ನಿಜಕ್ಕೂ ಕೋಟ್ಯಾಧಿಪತಿಗಳ ಮಠ- ಹಿರಿಯ ಶ್ರೀಗಳ ತ್ಯಾಗ, ಪರಿಶ್ರಮಗಳು ರೋಮಾಂಚನಕಾರಿಯಾಗಿವೆ.
Nagappa Deshmukh
Aug 17, 2020ಮಠಗಳೆಂದರೆ ನನಗೆ ಅಲರ್ಜಿ, ಸ್ವಾಮಿಗಳೆಂದರೆ ಅಷ್ಟಕ್ಕಷ್ಟೆ. ಆದರೆ ಮಠಗಳು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ನೆನೆಯಲೇ ಬೇಕು. ತರಳುಬಾಳು ಪೀಠ ಮತ್ತು ಸಾಣೆಹಳ್ಳಿ ಶಾಖಾಮಠ ಸುತ್ತಲಿನ ಗ್ರಾಮಸ್ಥರಿಗೆ ಹಲವಾರು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಬಂದಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ.
Deveerappa Katagi
Aug 23, 2020ಶಿಷ್ಯರಿಗೆ ಬೋಧಿಸಲು ಗುರುವಿನಲ್ಲಿ ನೈತಿಕ ಹಕ್ಕಿರಬೇಕು. ಅಂತಹ ಮೌಲ್ಯಗಳನ್ನಿಟ್ಟುಕೊಂಡು ಬೆಳೆದ ಮಠ ತರಳುಬಾಳು… ಇಂಥ ಗುರುಗಳ ಪರಂಪರೆಯಿಂದಾಗಿ ಮಠದ ಸುತ್ತ ಸಾತ್ವಿಕ, ಶಾಂತ ವಾತಾವರಣವಿದೆ.
Naganna D
Sep 1, 2020ತರಳುಬಾಳು ಹುಣ್ಣಿಮೆಯನ್ನು ಈ ಸಲ ಜಾಲತಾಣದಲ್ಲೇ ಏರ್ಪಡಿಸಿದರೆ ಮತ್ತೆ ಕಲ್ಯಾಣದಂತೆ ಕಾರ್ಯಕ್ರಮವನ್ನು ಸವಿಯುವ ಅವಕಾಶ ಒದಗಿಸಿದಂತಾಗುತ್ತದೆ. ಸ್ವಾಮಿಗಳ ಪ್ರತಿನಿತ್ಯದ ಜ್ಞಾನದಾಸೋಹ ಅದ್ಭುತವಾಗಿತ್ತು. ಬಯಲು ಬ್ಲಾಗಿನಲ್ಲಿ ನಿಮ್ಮ ಲೇಖನಗಳನ್ನು ನಾವು ಪ್ರತಿ ಸಲ ತಪ್ಪದೆ ಓದುತ್ತೇವೆ. ಮಠದ ವಿಚಾರಗಳನ್ನು ಹಂಚಿಕೊಂಡಿದ್ದಕ್ಕೆ ವಂದನೆಗಳು.