Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
Share:
Articles April 29, 2018 ಡಾ. ಶಶಿಕಾಂತ ಪಟ್ಟಣ

ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ

ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದ ನೆಲದಲ್ಲಿ ಅಭೂತಪೂರ್ವ ಕ್ರಾಂತಿಯೊಂದು ನಡೆದು ಹೋಯಿತು. ಸಮತಾವಾದಿ ಬಸವಣ್ಣನವರ ನೇತೃತ್ವದಲ್ಲಿ ವರ್ಗ ವರ್ಣ ಲಿಂಗ ಭೇದ, ಆಶ್ರಮ ಭೇದಗಳನ್ನು ಕಿತ್ತೊಗೆದು ಸಾರ್ವಕಾಲಿಕ ಸಮಕಾಲೀನ ಸಮಾನತೆಯ ಸಿದ್ಧಾಂತದ ಅಡಿಯಲ್ಲಿ ಲಿಂಗಾಯತ ಅಥವಾ ಶರಣ ಧರ್ಮವನ್ನು ಶರಣರು ಸ್ಥಾಪಿಸಿದರು. ಯಾವುದೇ ಶ್ರೇಣೀಕೃತವಿಲ್ಲದ ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ ಎಂಬ ಸುಂದರ ಸೂತ್ರದಡಿಯಲ್ಲಿ ಜನಸಾಮಾನ್ಯರ ಬಡವರ ಅಸ್ಪೃಶ್ಯರ ದಲಿತರ ಮಹಿಳೆಯರ ಕಾರ್ಮಿಕರ ಶ್ರಮಿಕರ ಅನುಭಾವದಿಂದ ಸ್ಥಾಪಿಸಿಲ್ಪಟ್ಟ ಮೊದಲ ಮುಕ್ತ ಧರ್ಮ ಬಸವ ಧರ್ಮ.

ಅನುಭವ ಮಂಟಪವು ಅಂದಿನ ಅತ್ಯಂತ ಕೆಳವರ್ಗದ ದಲಿತರಿಂದ ಹಿಡಿದು ಸಮಾಜದ ಎಲ್ಲಾ ಸ್ತರದ ಜನರು ಕೂಡಿದ ಆಧ್ಯಾತ್ಮಿಕ ಕೂಟವಾಗಿತ್ತು. ಲಿಂಗಾಯತ ಹೊಸ ಚಳುವಳಿಯಲ್ಲಿ ಅಸ್ಪೃಶ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ನಂತರದ ಹೆಚ್ಚಿನ ಸಂಖ್ಯೆಯಲ್ಲಿ ಇದ್ದವರೇ ಸವಣರು ಶ್ರವಣರು.
ಆದಯ್ಯ, ಮನಮುನಿ ಗುಮ್ಮಟದೇವ, ಬಳ್ಳೇಶ ಮಲ್ಲಯ್ಯ ಮುಂತಾದ ಅನೇಕ ಜನರು ಜೈನ ಧರ್ಮವನ್ನು ಬಿಟ್ಟು ಲಿಂಗಾಯತ ಧರ್ಮದ ಪರಿಪಾಲಕರಾಗಿ ವಚನ ರಚಿಸಿ ಅನುಭಾವ ಗೋಷ್ಠಿಯಲ್ಲಿ ಪಾಲ್ಗೊಂಡು ಲಿಂಗಾಯತ ಧರ್ಮ ಪ್ರಚಾರದಲ್ಲಿ, ವಚನ ರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಅಂತಹ ಶರಣರ ಗುಂಪಿನಲ್ಲಿ ಕಂಡು ಬರುವವರೇ ಶ್ರವಣ ಸವಣ ಸಾಧಕ ಮುಂದೆ ಶರಣರಾದ ಬಳ್ಳೇಶ ಮಲ್ಲಯ್ಯ.

ಬಳ್ಳೇಶ ಮಲ್ಲಯ್ಯ ಮೂಲತಃ ಬಳ್ಳಾರಿಯ ಒಂದು ಪುಟ್ಟ ಗ್ರಾಮದವರು. ಬಳ್ಳ ಅಂದರೆ ಕಾಳು ಕಡಿ ದವಸ ಧಾನ್ಯಗಳನ್ನು ಅಳೆಯುವ ಸಾಧನ. ಅದನ್ನು ದೇಶೀಯ ಭಾಷೆಯಲ್ಲಿ ‘ಸೇರು’ ಎಂದೆನ್ನುತ್ತಾರೆ. ಬಳ್ಳಯ್ಯನವರಿಗೆ ತಾನು ಹೊತ್ತು ಸಾಗುವ ಸರಕು ಸಾಗಾಣಿಕೆಯ ಜೊತೆಗೆ ಬಳ್ಳ ಒಯ್ಯಲೇ ಬೇಕಾದ ಮಾಪನ. ಹೀಗೆ ಊರಿಂದ ಊರಿಗೆ ಅಲೆದಾಡಿ ದವಸ ಧಾನ್ಯಗಳನ್ನು ಮಾರಿ ಉಪಜೀವನ ನಡೆಸುವ ಮಲ್ಲಯ್ಯ, ತಾನು ವ್ಯಾಪಾರದಲ್ಲಿ ಬಳಸುವ ಬಳ್ಳವನ್ನೇ ದೇವರೆಂದು ಗುಪ್ತವಾಗಿ ಅದನ್ನು ಪೂಜಿಸುತ್ತಿದ್ದರು. ಬಳ್ಳಾರಿಯ ಗುಡ್ಡದ ಗುಹೆಯಲ್ಲಿ ಗುಡಿಯ ಆವರಣದಲ್ಲಿ ಅವರ ಈ ಬಳ್ಳದ ಪೂಜೆ ನಡೆಯುತ್ತಿತ್ತು. ತನ್ನ ದುಡಿಮೆಗೆ ಪೂರಕವಾಗಿ ಬೆಲೆ ತರುವ ಬಳ್ಳವು ಮಲ್ಲಯ್ಯನವರಿಗೆ ಆಪ್ತವಾಗಿತ್ತು. ಅದೇ ಕಾರಣಕ್ಕೆ ಜನಪದಿಗರು, ಶರಣರು ಇವರನ್ನು ‘ಬಳ್ಳೇಶ ಮಲ್ಲಯ್ಯ’ ಎಂದೇ ಕರೆಯತೊಡಗಿದರು. ಶರಣರ ಸಮೂಹದೊಳಗೆ ಕೂಡಿಕೊಂಡು ತನ್ನ ಆಧ್ಯಾತ್ಮಿಕ ಸಾಧನೆ ಮಾಡಲು ಹಂಬಲಿಸಿದ ಮಲ್ಲಯ್ಯನವರು ಮುಂದೆ ಲಿಂಗ ದೀಕ್ಷೆ ಪಡೆದು ಕಲ್ಯಾಣದಲ್ಲಿಯೇ ನೆಲೆಸಿದರು.

ವರ್ಣ ಸಂಕರದಿಂದ ಕಂಗೆಟ್ಟ ವೈದಿಕರು ಹೇಗಾದರೂ ಮಾಡಿ ಶರಣ ಧರ್ಮವನ್ನು ಹೊಸಕಿ ಹಾಕಬೇಕೆಂದು ವಚನಗಳ ತಾಡೋಲೆಯಿರುವ ಅನುಭವ ಮಂಟಪಕ್ಕೆ ಕೊಳ್ಳಿ ಇಟ್ಟರು. ಶರಣರ ಮಾರಣ ಹೋಮ ನಡೆಯಿತು. ಮುಗ್ದ ವಚನಕಾರರ ರುಂಡ ಚೆಂಡಾಡಿದರು. ವಚನಗಳನ್ನು ಉಳಿಸಿಕೊಳ್ಳಬೇಕೆಂದು ಶರಣರು ವಚನಗಳ ತಾಡೋಲೆ ಗಂಟನ್ನು ಹೊತ್ತುಕೊಂಡು ಬೇರೆ ಬೇರೆ ಕಡೆಗೆ ಚದುರಿದರು. ದಿಟ್ಟ ಬಳ್ಳೇಶ ಮಲ್ಲಯ್ಯ ಕಲ್ಯಾಣ ಕ್ರಾಂತಿಯ ನಂತರ ಮಡಿವಾಳ ಮಾಚಿದೇವರ ನೇತೃತ್ವದಲ್ಲಿ ನಡೆದ ಘೋರ ಕಾಳಗದಲ್ಲಿ ಪಾಲ್ಗೊಂಡು ವಚನಗಳ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.

ಬಳ್ಳೇಶ ಮಲ್ಲಯ್ಯನವರ ಸಮಾಧಿಯ ಜಾಡು ಹಿಡಿದು

ಎರಡು ವರ್ಷಗಳ ಹಿಂದೆ 2015ರ ಶ್ರಾವಣದಲ್ಲಿ ನಮ್ಮೂರು ರಾಮದುರ್ಗದಿಂದ ಹದಿನೆಂಟು ಕಿಲೋ ಮೀಟರ್ ಅಂತರದಲ್ಲಿ ‘ಬೆಳ್ಳೇರಿ’ ಎಂಬ ಗ್ರಾಮಕ್ಕೆ ನನ್ನನ್ನು ಅತಿಥಿ ಉಪನ್ಯಾಸಕರನ್ನಾಗಿ
ಅಲ್ಲಿನ ಬಸವನಾನಂದ ಶ್ರೀಗಳು ಕರೆದಿದ್ದರು. ಶರಣು ಸಹೋದರ ಎಂ ಬಿ ಕಡಕೋಳ ಮತ್ತು ಸಂಜೆ 6 ಕ್ಕೆ ಅಲ್ಲಿಗೆ ಹೋದೆವು. ಕಾರ್ಯಕ್ರಮವು ಬಳ್ಳಾಲಲಿಂಗೇಶ್ವರ ಗುಡಿಯಲ್ಲಿ ನಡೆಯಿತು.

ಆಗೊಂದು ಕುತೂಹಲಕಾರಿ ವಿಷಯ ನನ್ನ ಗಮನಕ್ಕೆ ಬಂದಿತು. ನಮ್ಮ ಕಾರ್ಯಕ್ರಮ ನಡೆಯುತ್ತಿದ್ದ ಗುಡಿಯ ಗರ್ಭಗುಡಿಯಲ್ಲಿ ಸಮಾಧಿಯಾಕಾರದ ಕಟ್ಟೆಯಿದೆ. ನನ್ನ ಗಮನ ಪದೇಪದೇ ಅಲ್ಲಿಗೇ ಹೋಗುತ್ತಿತ್ತು. ಅಲ್ಲಿದ್ದ ಸ್ಥಳೀಯರೊಬ್ಬರನ್ನು ಈ ಗರ್ಭಗುಡಿಯ ವಿಶೇಷವೇನು ಎಂದು ಕೇಳಿದೆ. ಆಗ ಆ ಹಳ್ಳಿಯ ರೈತರು, “ಸರ್ ನೂರಾರು ವರ್ಷಗಳ ಹಿಂದ ಒಬ್ಬ ಶರಣ ಇಲ್ಲಿ ಆಗಿ ಹೋಗ್ಯಾನ್ರೀ, ಅವನು ಕಾಳು ಕಡಿ ಅಳೆಯುವ ಬಳ್ಳವನ್ನು ಇಲ್ಲಿಯೇ ಬಿಟ್ಟು ಐಕ್ಯ ಆಗ್ಯಾನ್ರೀ” ಎಂದನು. ಕಲ್ಯಾಣದ ಶರಣರಿಗೂ ಈ ಬಳ್ಳೇಶ ಲಿಂಗ ಗುಡಿಗೂ ಸಂಬಂಧವಿದೆಯೆಂದು ನನಗೆ ತೀವ್ರವಾಗಿ ಅನಿಸತೊಡಗಿತು. ಅಲ್ಪ ಸ್ವಲ್ಪ ಸಿಕ್ಕಷ್ಟು ಮಾಹಿತಿಗೆ ಮನಸ್ಸು ಸುಮ್ಮನಾಗಲಿಲ್ಲ. ವಚನಗಳ ನಿರಂತರ ಓದು ಮತ್ತು ಶರಣರ ಸಮಾಧಿಗಳ ಹುಡುಕಾಟದ ಗೀಳಿಗೆ ಬಿದ್ದಿದ್ದ ನನ್ನನ್ನು ಬಳ್ಳಾಲ ಲಿಂಗ ಗುಡಿಯಲ್ಲಿರುವ ಬಳ್ಳಾಕಾರದ ಕಟ್ಟೆ ಮತ್ತೆ ಮತ್ತೆ ಕಾಡ ಹತ್ತಿತು. ಇಂತಹ ಒಬ್ಬ ಶರಣ ಆಗಿ ಹೋಗಿರುವನೇ ಎಂದು ವಚನಗಳ ಸಮಗ್ರ ಸಂಪುಟ ತಿರುವಿ ಹಾಕಿದಾಗ ನನಗೆ ಅಲ್ಲೊಂದು ರೀತಿಯ ಖುಷಿ ಮತ್ತು ಆಶ್ಚರ್ಯದ ಸಂಗತಿ ಕಾದಿತ್ತು.

ಬಳ್ಳೇಶ ಮಲ್ಲಯ್ಯ ಎಂಬ ಅಪರೂಪದ ಜೈನ ಮೂಲದ ಸಾಧಕನೊಬ್ಬನ ಪರಿಚಯ ಕಣ್ಣಿಗೆ ಬಿತ್ತು. ಆತನೇ ಬಳ್ಳಾಲ ಲಿಂಗ ಅಥವಾ ಬಳ್ಳೇಶ ಮಲ್ಲಯ್ಯನೆಂಬ ಶರಣ. ಅಲ್ಲಿಂದ ಮುಂದೆ ನನ್ನ ತರ್ಕಕ್ಕೆ ಉತ್ತರಗಳು ಸಿಕ್ಕವು.

ಗೊಡಚಿಯಲ್ಲಿ ಮಡಿವಾಳ ಮಾಚಿದೇವರು ಐಕ್ಯವಾದ ನಂತರ ಅವರ ಆಪ್ತ ಬಳ್ಳೇಶ ಮಲ್ಲಯ್ಯ ಮುಂದೆ ಕಲಹಾಳದ ಮಾರ್ಗವಾಗಿ ಒಂದು ಪುಟ್ಟ ಗ್ರಾಮಕ್ಕೆ ಬಂದು ನೆಲೆಸಿ ಅಲ್ಲಿಯೇ ಐಕ್ಯರಾಗುತ್ತಾರೆ. ಬಳ್ಳೇಶ ಮಲ್ಲಯ್ಯನವರ ಒಟ್ಟು ಒಂಬತ್ತು ವಚನಗಳು ಸಿಗುತ್ತವೆ. ಬಹುತೇಕ ವಚನಗಳು ಶಿವಾನುಭಾವ ಬೆಡಗಿನಲ್ಲಿ ಹೆಣೆದುಕೊಂಡಿವೆ. ಕಾವ್ಯ ಲಕ್ಷಣ ಭಾಷೆ ಅಷ್ಟಾಗಿ ಕಂಡು ಬಂದಿಲ್ಲ. ಈತನ ವಚನಗಳು ಬದುಕಿನ ಪಾರಮಾರ್ಥಿಕ ವಿಷಯ ಅನುಭಾವದ ಕೊಂಡಿ ಎಂದೇ ಹೇಳಬಹುದು.

ಧರೆಯೊಳಗೆ ಚೋದ್ಯವ ನೋಡಿರೆ:
ಒಂದು ಹರಿಣಿಯ ಮೃಗವು ಓದು ಬಲ್ಲುದಾ?
ಚೆಲುವ ಗಿಳಿಯಲ್ಲಿ ವಿಪರೀತ ಕೊಂಬು ಕೊಂಬುಗಳುಂಟು.
ಇಂಬು ಕಾಲಲ್ಲಿ ಮುಖವು.
ಜಂಬುದ್ವೀಪದ ಬೆಳಗಿನುದಯದಾಹಾರವದಕೆ.
ಸಂಭ್ರಮವ ನುಡಿವ ಕವಿಗಳ ಮುಖವ ಝಳಪಿಸಿತ್ತು
ಶಂಭು ಬಳ್ಳೇಶ್ವರನ ಕೊರಳಹಾರವ ನೋಡಿ ನಗುತ.
ಇಲ್ಲಿ- ಜಿಂಕೆ ಒಂದು ಮೃಗ, ಅಂದರೆ ಮನುಷ್ಯನ ಮಾಯಾ ಮನಸು, ಚಂಚಲ ಸ್ವಭಾವದ ಸ್ಥಿತಿ. ಸುಂದರವಾದ ಗಿಳಿಯಲ್ಲಿ ಜಿಂಕೆಯ ಚಂಚಲತೆಯ ಕೊಂಬು ಮೈತುಂಬಾ ಕಾಣುತ್ತವೆ. ಇಂಬು ಕಾಲಲ್ಲಿ ತನ್ನ ಮುಖವನಿಟ್ಟಾಗ ಆ ಆಮಿಷದ ಪಕ್ಷಿ ಜಂಬೂ ದ್ವೀಪದ ಸೂರ್ಯೋದಯದ ವೇಳೆಗೆ ಬೇಟೆಗಾರನ ಬೇಟೆಗೆ ಆಹಾರವಾಗುತ್ತದೆ. ಆ ಸಂಭ್ರಮವ ನುಡಿವ ಕವಿಗಳ ಮುಖವ ಝಳಪಿಸಿತ್ತು, ಶಂಭು ಬಳ್ಳೇಶ್ವರನ ಕೊರಳಹಾರವ ನೋಡಿ ನಗುತ. ಇಲ್ಲಿ ಅತಿಯಾದ ಸ್ವಾಭಿಮಾನ, ವೈಯಾರ, ಬಿಂಕಿನಿಂದ ಬದುಕುವ ಗಿಳಿ ಎಂಬ ಸಾಂಕೇತಿಕ ಜೀವಕ್ಕೆ ಉದ್ದೇಶಿಸಿ ಇಂತಹ ಮನಸ್ಥಿತಿಯು ಶಾಶ್ವತವಲ್ಲ. ಗಿಳಿಯ ನೋಡಿ ಸಂಭ್ರಮಿಸುವ ಕವಿಗಳು ಕೊನೆಗೆ ಸೃಷ್ಟಿಯ ಕೃತ್ಯಕ್ಕೆ ನಗದೇ ಇರಲಾರರು ಎಂದಿದ್ದಾರೆ.
ಇದೇ ರೀತಿ ಬಳ್ಳೇಶ ಮಲ್ಲಯ್ಯನವರು ಸುಂದರ ಬೆಡಗಿನಿಂದ ಬದುಕಿನ ಸಾರವನ್ನು ಈ ಕೆಳಗಿನ ವಚನದಲ್ಲಿ ತಿಳಿಯಪಡಿಸಿದ್ದಾರೆ.

ಆರು ಬಣ್ಣದ ಹಕ್ಕಿ, ತೋರಿದ ಗುರಿಯ ನುಂಗಿ
ಮೀರಿ ನಿಂದುದು ಗಗನ ಮಂಡಲದಲ್ಲಿ.
ಸಾರುತೈದೂದೆ ಹೋಗಿ ಮೀರಿ ಬರಬೇಡಾ ಎಂದು
ಬೇರೆ ಮತ್ತೊಂದು ದಿಕ್ಕ ತೋರುತ್ತದೆ.
ಮೂರುಕೋಣೆಯೊಳಗೆ ಈರೈದು ತಲೆಯುಂಟು.
ನೋಡಿ ಬಂದಾ ಶಿಶು ಬೆಸಗೊಂಬುದು.
ಪ್ರಾಣವಿಲ್ಲದ ಸೇನೆ ಪದ್ಮಸಂಖ್ಯೆಯು ಕೋಟೆದಾಳಿವರಿದುದು
ಎಂಟುಜಾವದೊಳಗೆ.
ಜಾಲಗಾರನ ಕೈಯ ಮಾಣಿಕ್ಯ ಸಿಕ್ಕದೆ ಆಳಿಗೊಂಡಿತ್ತು.
ಜಗವ ಬೆಳುಮಾಡಿ, ಜಾಣ ಕವಿಗಳಿಗೆ ಎದೆ ದಲ್ಲಣ.
ಬಳ್ಳೇಶ್ವರನ ಕನ್ನಡವು ಹೇಳುವಡೆ ಯುಗಸಂಖ್ಯೆ ಶಿವ ಶಿವಾ

ಕಾಮ ಕ್ರೋಧ ಮೋಹ ಲೋಬಾಧಿಗಳೆಂಬ ಅರಿಷಡ್ವರ್ಗಗಳು ಬಣ್ಣಬಣ್ಣದ ರೆಕ್ಕೆ ಪಕ್ಕದ ಹಕ್ಕಿ (ಅಂದರೆ ಮನುಷ್ಯ ಜೀವಿ). ಅದನ್ನು ಪಡೆಯಬೇಕೆಂಬ ಇಟ್ಟ ಗುರಿಯನ್ನು ಹಕ್ಕಿ ನುಂಗಿ ಮೀರಿದ ಗಗನದಲ್ಲಿ ಸ್ವಚ್ಛಂದವಾಗಿ ಹಾರಾಡ ಹತ್ತಿತು. ಇನ್ನೊಂದೆಡೆ ಹೋಗಿ ಮತ್ತೆ ಮರಳಿ ಬರಬೇಡ ಎಂದು ತಿಳಿದು ಮತ್ತೊಂದು ದಿಕ್ಕು ತೋರುತ್ತದೆ ಜೀವ . ಸೃಷ್ಟಿ ಸ್ಥಿತಿ ಲಯ ,ಅಂಗ ಪ್ರಾಣ ಆತ್ಮವೆಂಬ ಶರೀರದ ಕೋಣೆಯೊಳಗೆ ಪಂಚೇಂದ್ರಿಯ ಅನೇಕ ತಲೆಯುಂಟು ,ಇಂತಹ ಶರೀರವನ್ನು ನೋಡ ಬಂದ ಶಿಶು ಬೆಸಗೊಂಡಿತು. ಪ್ರಾಣವಿಲ್ಲದ ಸ್ನೇ ಪದ್ಮ ಸಂಖ್ಯೆಯ ಕೋಟೆ ದಾಳಿಗೆ ಅರಿಯುತ್ತದೆ. . ಕಾಲದ ಚಕ್ರದಲಿ ಬದುಕಿದ ಪಕ್ಷಿ ಬೆಳಗಿನ ಎಂಟರ ಜಾವದಲ್ಲಿ ಜಾಲಗಾರನ ಕೈಯಲ್ಲಿ ಸಿಕ್ಕು ಆಳಿಗೊಂಡಿತ್ತು. ಜಗತ್ತಿಗೆ ಈ ಸತ್ಯವ ಬೆರಳು ಮಾಡಿ ತೋರಿಸಿ, ಜನ ಕವಿಗಳಿಗೆ ಎದೆ ತಲ್ಲಣಗೊಂಡಿತ್ತು. ಬಳ್ಳೇಶ್ವರನ ಭಾಷೆಯು ಕನ್ನಡವ ಹೇಳುವೊಡೆ ಯುಗಸಂಖ್ಯೆ ಶಿವಾ ಶಿವಾ ಎಂದು ಮಾಯವಾಯಿತ್ತು.

ಬಳ್ಳೇಶ ಮಲ್ಲಯ್ಯನವರ ವಚನಗಳಲ್ಲಿ ಬೆಡಗು ಒಗಟುಗಳು ಕಂಡು ಬರುವುದರಿಂದ ಬಾಹ್ಯವಾಗಿ ಪ್ರಾಪಂಚಿಕ ವಿಷಯಾದಿಗಳ ಬಗ್ಗೆ ಹೇಳಿದರೂ ಅದರೊಳಗಿನ ಅಂತರಂಗದ ಆಶಯ ಆಧ್ಯಾತ್ಮ��� ಅನುಭವಕ್ಕೆ ಸಂಬಂಧಪಟ್ಟಿರುತ್ತದೆ.
ಇಂದಿನ ಗದಗ ಜಿಲ್ಲೆಯ ನರಗುಂದ ತಾಲೂಕಿನ ಪುಟ್ಟ ಗ್ರಾಮ ಬೆಳ್ಳೇರಿ -ಬಳ್ಳೇಶ ಮಲ್ಲಯ್ಯನವರ ಐಕ್ಯ ಸ್ಥಾನ. ಬಳ್ಳಾರಿಯವರಾದ ಬಳ್ಳೇಶ ಮಲ್ಲಯ್ಯ ನೆಲೆಗೊಂಡ ಸ್ಥಳವು ಬೆಳ್ಳೇರಿ ಎಂದು ಹೆಸರಾಯಿತು. ಆತನು ಐಕ್ಯಗೊಂಡ ಸ್ಥಳ ಬಳ್ಳೇಶ್ವರ ಲಿಂಗವೆಂದು ಪ್ರತೀತಿ ಪಡೆದಿದೆ.
ಇಂತಹ ಅನೇಕ ಶರಣರ ಸಮಾಧಿಯ ಶೋಧನೆಯ ಅಭಿಯಾನಕ್ಕೆ ನಿರಂತರವಾಗಿ ಪ್ರೋತ್ಸಾಹಿಸುತ್ತಿರುವವರು ಮತ್ತು ನನ್ನ ಅಧ್ಯಯನದಲ್ಲಿ, ಸಂಶೋಧನೆಯಲ್ಲಿ ಪ್ರಶ್ನೆಗಳು ಸಂಶಯಗಳು ಉಂಟಾದಾಗ ಪರಿಹರಿಸುವವರು, ಮೆಚ್ಚುಗೆ ವ್ಯಕ್ತಪಡಿಸುವವರು ಹಿರಿಯ ಶರಣರಾದ ಸಾಹಿತಿ ಡಾ ವೀರಣ್ಣ ರಾಜೂರ ಅವರು. ವಚನಗಳನ್ನು ರಕ್ಷಿಸಿ ಕೊಟ್ಟು ಹೋದ ಶರಣರ ಸಮಾಧಿಗಳ ಅಧ್ಯಯನ ಇಂದಿನ ಅಗತ್ಯ ಎಂಬುದು ನನ್ನ ಭಾವನೆ. ಸಮಾಧಿಗಳೆಂಬ ಸ್ಥಾವರದ ಒಳಗೆ ಹೂತಿರುವ ಅಗಮ್ಯ ಜಂಗಮ ಚೈತನ್ಯವನ್ನು ಅಧ್ಯಯನದ ಮೂಲಕ ಪಡೆದುಕೊಳ್ಳೋಣ.

Previous post ಭ್ರಾಂತಿಯೆಂಬ ತಾಯಿ…
ಭ್ರಾಂತಿಯೆಂಬ ತಾಯಿ…
Next post ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ

Related Posts

ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
Share:
Articles

ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ

December 8, 2021 ಡಾ. ಕೆ. ಎಸ್. ಮಲ್ಲೇಶ್
ಫ್ರಿಜೋ ಕಾಪ್ರ- ಆಸ್ಟ್ರಿಯಾ ಮೂಲದ ಅಮೆರಿಕದ ಭೌತಶಾಸ್ತ್ರಜ್ಞ. ಕಣ ಭೌತವಿಜ್ಞಾನದಲ್ಲಿ ಅವರದು ಗಮನಾರ್ಹ ಸಾಧನೆ. ‘ದಿ ತಾವೋ ಆಫ್ ಫಿಸಿಕ್ಸ್’ ಸೇರಿದಂತೆ ಮಹತ್ತರ...
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
Share:
Articles

ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ

April 29, 2018 ಡಾ. ಶಶಿಕಾಂತ ಪಟ್ಟಣ
ಹನ್ನೆರಡನೆಯ ಶತಮಾನದಲ್ಲಿ ನಡೆದ ಅಪೂರ್ವ ವೈಚಾರಿಕ ಕ್ರಾಂತಿ ಒಂದು ಪವಾಡವೇ ಎನ್ನಬಹುದು. ಶತಮಾನದಿಂದ ಜಿಡ್ಡು ಗಟ್ಟಿ ಮೃತಪ್ರಾಯವಾಗಿದ್ದ ಸಾಮಾಜಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಪ್ಪನಿಲ್ಲದ ಮನೆ
ಅಪ್ಪನಿಲ್ಲದ ಮನೆ
January 10, 2021
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
January 7, 2022
ಶರಣನಾಗುವ ಪರಿ
ಶರಣನಾಗುವ ಪರಿ
June 3, 2019
ಯೋಗಿಯಾದರೆ ಸಿದ್ಧರಾಮನಂತಾಗಬೇಕು
ಯೋಗಿಯಾದರೆ ಸಿದ್ಧರಾಮನಂತಾಗಬೇಕು
April 29, 2018
ಕಾದಿ ಗೆಲಿಸಯ್ಯ ಎನ್ನನು
ಕಾದಿ ಗೆಲಿಸಯ್ಯ ಎನ್ನನು
April 29, 2018
ಮನಕ್ಕೆ ಮನ ಸಾಕ್ಷಿಯಾಗಿ…
ಮನಕ್ಕೆ ಮನ ಸಾಕ್ಷಿಯಾಗಿ…
October 2, 2018
ವಚನ ಸಾಹಿತ್ಯದ ಸಂಕೀರ್ಣತೆ
ವಚನ ಸಾಹಿತ್ಯದ ಸಂಕೀರ್ಣತೆ
April 29, 2018
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
January 7, 2022
ಭವಸಾಗರ ದಾಂಟಿಪ ಹಡಗು-ಬಸವಣ್ಣ
ಭವಸಾಗರ ದಾಂಟಿಪ ಹಡಗು-ಬಸವಣ್ಣ
May 1, 2018
ದಿಟ್ಟ ಹೆಜ್ಜೆಯ ಗುರುವಿನ ವಾಣಿಗಳು
ದಿಟ್ಟ ಹೆಜ್ಜೆಯ ಗುರುವಿನ ವಾಣಿಗಳು
June 17, 2020
Copyright © 2023 Bayalu