Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸಕಾರವೋ… ನಕಾರವೋ…
Share:
Articles July 5, 2019 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಸಕಾರವೋ… ನಕಾರವೋ…

ಒಂದು ಕಲ್ಯಾಣ ಮಹೋತ್ಸವ. ವಧು ಮತ್ತು ವರ ಇಬ್ಬರೂ ಎಂ ಇ ಪದವೀಧರರು. ಸರ್ಕಾರಿ ಅಥವಾ ಖಾಸಗಿ ಉದ್ಯೋಗಕ್ಕೆ ಹೋಗದೆ ಇಬ್ಬರೂ ಅಪ್ಪಟ ಕೃಷಿಕರಾಗಲು ತೀರ್ಮಾನಿಸಿದ್ದರು. ವರ ಈಗಾಗಲೇ ಕೃಷಿಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾನೆ. ಕೃಷಿಯನ್ನೇ ಮಾಡುವುದಾಗಿದ್ದರೆ ಅಷ್ಟೊಂದು ಓದುವ ಅಗತ್ಯ ಇತ್ತೇ ಎನ್ನುವ ಪ್ರಶ್ನೆ ಹಲವರದು. ಏಕೆಂದರೆ ಕೃಷಿ ಮಾಡುವವರಿಗೆ ವಿದ್ಯೆ, ಉನ್ನತ ಪದವಿಯ ಅಗತ್ಯವಿಲ್ಲ; ದಡ್ಡರು, ಓದಲು ಆಸಕ್ತಿ ಇಲ್ಲದವರು ಕೃಷಿಗೆ ಬರಬೇಕು ಎನ್ನುವ ತಪ್ಪು ಕಲ್ಪನೆ. ಓದಿ ಪದವಿ ಪಡೆಯುವುದೇ ವ್ಯವಸಾಯ, ಮನೆ, ದೇಶ ತ್ಯಜಿಸಿ ಎಲ್ಲೋ ನೌಕರಿ ಮಾಡಲು ಎನ್ನುವ ಭಾವನೆ. ವರ ತನ್ನ ಮದುವೆಗೆ ನಮ್ಮನ್ನು ಆಹ್ವಾನಿಸಲು ಬಂದಾಗ ಏನು ಮಾಡುತ್ತಿರುವೆ ಎಂದಾಗ `ನಾನು ಎಂ ಇ ಪದವೀಧರ. ಸರ್ಕಾರಿ ಇಲ್ಲವೆ ಖಾಸಗಿ ಉದ್ಯೋಗಕ್ಕೆ ಹೋಗುವ ಮನಸ್ಸು ಬರಲಿಲ್ಲ. ಹಿರಿಯರು ಮಾಡಿದ ಜಮೀನು ಇದೆ. ನನ್ನನ್ನು ಬಿಟ್ಟರೆ ವ್ಯವಸಾಯ ಮಾಡುವವರು ಬೇರಾರೂ ಇಲ್ಲ. ಹಾಗಾಗಿ ಅಪ್ಪಟ ಕೃಷಿಕನಾಗಿ ಅದರಲ್ಲೇ ಸಂತೋಷ ಕಂಡುಕೊಂಡಿದ್ದೇನೆ. ಈಗ ಕೃಷಿಯಿಂದ ಆದಾಯವೂ ಸಾಕಷ್ಟು ಬರುತ್ತಿದೆ’ ಎಂದ. ಆತನ ಕಾಯಕನಿಷ್ಠೆ ಮತ್ತು ಜೀವನೋತ್ಸಾಹ ನಿಜಕ್ಕೂ ಮೆಚ್ಚುವಂತಹುದು.

ಸಮಾಜ ಕೃಷಿಕರನ್ನು ಹೇಗೆ ನೋಡುತ್ತಿದೆ? `ವ್ಯವಸಾಯ, ನೀ ಸಾಯ, ನಿಮ್ಮಪ್ಪ ಸಾಯ, ಮನೆ ಮಂದಿಯೆಲ್ಲ ಸಾಯ’ ಎನ್ನುವರು. ವ್ಯವಸಾಯದಿಂದ ಉದ್ಧಾರವಾಗಲು ಸಾಧ್ಯವಿಲ್ಲ. ವ್ಯವಸಾಯ ಕಟ್ಟಿಕೊಂಡು ಮಾಡುವುದೇನಿದೆ? ನಾವು ಅನುಭವಿಸಿದ್ದೇ ಸಾಕು. ಬೇಕಾದರೆ ಒಂದೆರಡು ಎಕರೆ ಭೂಮಿಯನ್ನು ಮಾರಿ ಡೊನೇಶನ್ ಕೊಟ್ಟು ಯಾವುದಾದರೂ ಶಾಲೆ ಇಲ್ಲವೆ ಸರ್ಕಾರಿ ಕಚೇರಿಯಲ್ಲಿ ಜವಾನನಾದರೂ ತಿಂಗಳ ತಿಂಗಳ ಸಂಬಳ ಎಣಿಸಿಕೊಂಡು ಸುಖವಾಗಿರಬಹುದು ಎಂದು ಹೇಳುವ ತಂದೆ ತಾಯಿಗಳೂ ಇದ್ದಾರೆ. ಆದರೆ ಆ ಪದವೀಧರ ವ್ಯವಸಾಯವನ್ನೇ ತನ್ನ ಅನ್ನದ ದಾರಿಯನ್ನಾಗಿ ಕಂಡುಕೊಂಡನಲ್ಲ ಅದು ಅವನ ಸಕಾರಾತ್ಮಕ ಚಿಂತನೆಯ ಸತ್ಫಲ. ದುಡಿಯುವ ಮನಸ್ಸಿದ್ದರೆ ಯಾವ ಕ್ಷೇತ್ರದಲ್ಲಾದರೂ ಸಾಧನೆ ಮಾಡಿ ಸುಖವಾಗಿರಬಹುದು. ಅದೇ ಸೋಮಾರಿ ಯಾವ ಕ್ಷೇತ್ರದಲ್ಲಿ ಕೈ ಹಾಕಿದರೂ ಯಶಸ್ವಿಯಾಗುವುದಿಲ್ಲ. `ಪಾಪಿ ಸಮುದ್ರ ಮುಳುಗಿದರೂ ಮೊಣಕಾಲುದ್ದ ನೀರು’ ಎನ್ನುವಂತಾಗುವುದು. ಒಂದು ತಮಾಷೆಯ ಕತೆ:

ಒಬ್ಬ ಊರಮುಂದಿನ ಬೇವಿನ ಕಟ್ಟೆಯ ಮೇಲೆ ಮಲಗಿದ್ದ. ಅದೇ ದಾರಿಯಲ್ಲಿ ಹಲವರು ಹೋಗುವುದನ್ನು ಕಂಡು ಎಲ್ಲಿಗೆ ಎಂದು ಪ್ರಶ್ನಿಸಿದ. ಸಂತರ ಹಿತೋಪದೇಶವಿದೆ; ಕೇಳಲು ಹೋಗುತ್ತೇವೆ, ನೀನೂ ಬರಬಹುದು ಎಂದರು. ಕೇಳುವುದರಿಂದ ಏನು ಪ್ರಯೋಜನ? ಸಂತರ ದರ್ಶನ ಪಡೆಯುವುದೇ ಒಂದು ಪುಣ್ಯ. ಅವರ ಅಮೃತವಾಣಿಯಿಂದ ನಮ್ಮ ಜ್ಞಾನ ಹೆಚ್ಚುತ್ತೆ. ಬದುಕಿಗೆ ಸ್ಪೂರ್ತಿ ದೊರೆಯುತ್ತೆ. ಮುಂದೆ? ಮುಂದೇನು? ಕಾರ್ಯಕ್ರಮ ಮುಗಿದನಂತರ ಪ್ರಸಾದದ ವ್ಯವಸ್ಥೆ ಇದೆ. ಬರುವಾಗ ಒಂದೊಂದು ಬಾಳೇ ಹಣ್ಣನ್ನು ಕೊಡುತ್ತಾರೆ. ಅದನ್ನು ಸವಿಯುತ್ತ ಸುಖವಾಗಿ ಮನೆಗೆ ಬರುತ್ತೇವೆ. ಬಾಳೆ ಹಣ್ಣನ್ನು ಸುಲಿದು ಕೊಡುವರೋ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆ. ಅಷ್ಟು ಸುಖಕ್ಕಾಗಿ ಅಷ್ಟು ದೂರ ಏಕೆ ಬರಲಿ? ಇಲ್ಲೇ ಸುಖವಾಗಿ ಮಲಗಿಲ್ಲವೇ ಎಂದನಂತೆ. ಇಂಥ ಸೋಮಾರಿಗಳು ಹೆಚ್ಚಾಗುತ್ತಿರುವುದರಿಂದ ಅವರು ತಮ್ಮ ಸುಖದ ಜೊತೆ ಇತರರ ಸುಖಕ್ಕೂ ಕಲ್ಲು ಹಾಕುವರು. ಸಂತೋಷ, ಸುಖ ಹೊರಗಿನ ವಸ್ತು, ಒಡವೆಗಳಲ್ಲಿಲ್ಲ. ಅದಿರುವುದು ವ್ಯಕ್ತಿಗತ ಬದುಕಿನ ವಿಧಾನದಲ್ಲಿ. ಚನ್ನಾಗಿ ಬದುಕಬೇಕು ಎಂದು ಸಂಕಲ್ಪ ಮಾಡಿದರೆ ಯಾರು ಬೇಕಾದರೂ ಚನ್ನಾಗಿ ಬದುಕಲು ಸಾಧ್ಯ. ಅದನ್ನು ಬಿಟ್ಟು ನಾನು ಅವರಂತೆ ಬದುಕಲು ಸಾಧ್ಯವೇ? ನಾನು ಅವರಷ್ಟು ಬುದ್ಧಿವಂತನಲ್ಲ. ಏನಾದರೂ ಮಾಡೋಣ ಎಂದರೆ ನನ್ನ ಹತ್ತಿರ ಬಂಡವಾಳವಿಲ್ಲ. ಹೀಗಿರುವಾಗ ನಾನೇನು ಮಾಡಲಿ ಎಂದು ಎಷ್ಟೋ ಜನರು ನಿರಾಶಾವಾದ ತಳೆದು ಯಾವ ಸಾಧನೆಯನ್ನೂ ಮಾಡದೆ ಕ್ಷುದ್ರ ಜೀವಿಯಂತೆ ಬದುಕುವರು.

ಒಬ್ಬ ಗುರುಗಳ ಬಳಿ ಬಂದವ ನಾನು ತುಂಬಾ ಬಡವ. ನನ್ನಲ್ಲಿ ಹಣವಿಲ್ಲ. ನಾನು ಉದ್ಧಾರವಾಗುವುದೆಂತು? ತಾವು ನನ್ನ ಉದ್ಧಾರಕ್ಕೆ ಮಾರ್ಗದರ್ಶನ ಮಾಡಿ ಎಂದು ಬೇಡಿಕೊಂಡ. ನೋಡಪ್ಪ ನನಗೆ ಒಂದು ಕಿಡ್ನಿಯ ಅಗತ್ಯವಿದೆ. ನಿನ್ನ ಕಿಡ್ನಿ ಕೊಟ್ಟರೆ ಐದು ಲಕ್ಷ ಹಣ ಕೊಡುವೆ ಎಂದರು. ಗುರುಗಳೆ ಕಿಡ್ನಿ ಕೊಟ್ಟರೆ ನಾನು ಬದುಕುವುದು ಹೇಗೆ? ನಿನಗೆ ಎರಡು ಕಿಡ್ನಿಗಳಿವೆ. ಒಂದು ಕೊಟ್ಟರೆ ಬದುಕಲು ತೊಂದರೆ ಇಲ್ಲ. ಕಿಡ್ನಿ ಮಾರುವುದರಿಂದ ನಿನಗೆ ಹಣವೂ ಬರುತ್ತದೆ, ಜೀವನವೂ ಸಾಗುತ್ತದೆ ಎಂದರು. ಆತ ಸಾಧ್ಯವಿಲ್ಲ ಎಂದಾಗ ನನ್ನ ಸ್ನೇಹಿತನಿಗೆ ಒಂದು ಕಣ್ಣಿನ ಅಗತ್ಯವಿದೆ. ನಿನಗೆ ಎರಡು ಕಣ್ಣುಗಳಿರುವುದರಿಂದ ಅವುಗಳಲ್ಲಿ ಒಂದನ್ನು ಕೊಟ್ಟರೆ ಮೂರು ಲಕ್ಷ ಹಣ ಕೊಡಿಸುವೆ ಎಂದರು. ಅದಕ್ಕೂ ಆತ ಒಪ್ಪದೆ ನಿಮ್ಮಿಂದ ಏನೂ ಪ್ರಯೋಜನವಿಲ್ಲ ಎಂದು ನಿರಾಶನಾಗಿ ಹೊರಟ. ಆಗ ಗುರುಗಳು ಆತನನ್ನು ಕರೆದು ಅಯ್ಯೋ ದಡ್ಡ ನಿನ್ನ ದೇಹದಲ್ಲೇ ಅಮೂಲ್ಯ ಸಂಪತ್ತಿದೆ. ಕಣ್ಣು, ಕಿಡ್ನಿ, ಹೃದಯ ಹೀಗೆ ಅಂಗಾಂಗಗಳನ್ನು ಮಾರಿದರೆ ಬೇಕಾದಷ್ಟು ಹಣ ಸಿಗುವುದು. ಇದನ್ನು ಅರ್ಥ ಮಾಡಿಕೊಂಡು ದೇಹ ದಂಡಿಸಿ ದುಡಿದರೆ ಬೇಕಾದಷ್ಟು ಶ್ರೀಮಂತನಾಗಬಹುದು. ಆದರೆ ನಿನ್ನ ಮನಸ್ಸಿಗೆ ಬಡತನ ಬಂದಿದೆ. ಮನಸ್ಸಿನ ಬಡತನವನ್ನು ಕಿತ್ತೆಸೆದರೆ ನೀನೇ ದೊಡ್ಡ ಶ್ರೀಮಂತ ಎಂದು ಉಪದೇಶ ಮಾಡುವರು. ಪ್ರಸ್ತುತ ದಿನಮಾನಗಳಲ್ಲಿ ಪ್ರತಿಯೊಬ್ಬರೂ ಮಾಡಬೇಕಾದ್ದು ಮನಸ್ಸಿನ ಬಡತನ ಕಿತ್ತೆಸೆಯುವ ಕಾರ್ಯವನ್ನು. ವ್ಯಕ್ತಿ ಮನೆಗಿಂತ ಮನಸ್ಸಿನಿಂದ ಶ್ರೀಮಂತನಾಗಬೇಕು. ಬಸವಣ್ಣನವರು ತಮ್ಮ ವಚನದಲ್ಲಿ ಹೇಳುತ್ತಾರೆ:

ಮನೆ ನೋಡಾ ಬಡವರು: ಮನ ನೋಡಾ ಘನ.

ಸೋಂಕಿನಲ್ಲಿ ಶುಚಿ: ಸರ್ವಾಂಗ ಕಲಿಗಳು.

ಪಸರಕ್ಕನುವಿಲ್ಲ: ಬಂದ ತತ್‍ಕಾಲಕೆ ಉಂಟು,

ಕೂಡಲಸಂಗನ ಶರಣರು ಸ್ವತಂತ್ರಧೀರರು.

ಒಬ್ಬ ವ್ಯಕ್ತಿ ಮನೆಯಿಂದ ಬಡವನಾಗಿದ್ದರೂ ಮನಸ್ಸಿನಿಂದ ಶ್ರೀಮಂತನಾಗಲು ಅವಕಾಶವಿದೆ. ದುರ್ದೈವದ ಸಂಗತಿ ಎಂದರೆ ಕೆಲವರು ಮನಸ್ಸು ಮತ್ತು ಮನೆ ಎರಡರಿಂದಲೂ ಬಡವರು. ಹಾಗಾಗಿ ಅವರು ತಮ್ಮ ಬದುಕಿನಲ್ಲಿ  ಅನುಭವಿಸಬೇಕಾಗಿದ್ದ ಸಂತೋಷದಿಂದ ವಂಚಿತರಾಗುವರು. ಈ ನೆಲೆಯಲ್ಲಿ ಮನುಷ್ಯ ಯಾವಾಗಲೂ ಸಕಾರಾತ್ಮಕ ಚಿಂತನೆ ಮಾಡಬೇಕೇ ಹೊರತು ನಕಾರಾತ್ಮಕವಾಗಿ ಅಲ್ಲ. ಅದು ನನ್ನಿಂದ ಸಾಧ್ಯವೇ? ನಾನು ಅವನಂತಾಗಲು ಸಾಧ್ಯವಿಲ್ಲ. ಅವನು ಪಡೆದು ಹುಟ್ಟಿದವ. ನಾನು ಬಡತನವನ್ನೇ ಬೆನ್ನಿಗೆ ಅಂಟಿಸಿಕೊಂಡು ಬಂದವ. ಇದೆಲ್ಲ ನನ್ನ ಕರ್ಮ ಎಂದು ತಮಗೆ ತಾವೇ ಸಣ್ಣವರೆಂದು ಭಾವಿಸುವುದು ನಕಾರಾತ್ಮಕ ಚಿಂತನೆ. ಬದಲಾಗಿ ಅವರಿಗೆ ಸಾಧ್ಯವಾದುದು ನನಗೇಕೆ ಸಾಧ್ಯವಿಲ್ಲ? ದೇವರು ನನಗೂ ಕೈ, ಕಾಲು, ಆರೋಗ್ಯ ಎಲ್ಲವನ್ನೂ ಕರುಣಿಸಿರುವಾಗ ನಾನು ಆತನಿಗಿಂತ ಮಹತ್ವದ ಕೆಲಸ ಮಾಡಬಲ್ಲೆ ಎನ್ನುವ ಆಶಾಭಾವನೆ ತಳೆಯುವುದೇ ಸಕಾರಾತ್ಮಕ ಚಿಂತನೆ. ಅವರ ಮಗ ರ್ಯಾಂಕ್ ಬಂದಿದ್ದಾನೆ. ನನ್ನ ಮಗ 35 ಅಂಕಗಳನ್ನೂ ಪಡೆಯಲಾಗಿಲ್ಲ. ಇವನನ್ನು ಓದಿಸಿ ಪ್ರಯೋಜನವಿಲ್ಲ. ದಡ್ಡ ಎಂದು ಹೀಯಾಳಿಸುವ ಹಿರಿಯರಿದ್ದಾರೆ. ಫೇಲಾದರೆ ಜೀವನ ಮುಗಿಯಿತೇ? ಫೇಲಾದರೆ ಅನುಭವ ಬರುತ್ತದೆ. ಎಲ್ಲರೂ ಪಾಸಾದರೆ ಫೇಲಾಗುವವರು ಯಾರು? ಫೇಲಾಗುವುದೇ ಪಾಸಾಗಲು. ಮತ್ತೆ ಕಟ್ಟಿ ಓದು ಎನ್ನುವ ಆಶಾದಾಯಕ ಮಾತುಗಳನ್ನು ಆಡಿದರೆ ಆ ವಿದ್ಯಾರ್ಥಿ ಮುಂದೆ ಖಂಡಿತ ಹೆಚ್ಚು ಅಂಕಗಳನ್ನು ಪಡೆಯುವ ಸಂಕಲ್ಪ ಮಾಡಿ ಯಶಸ್ಸು ಪಡೆಯುವನು. ಇಂಥ ಸಕಾರಾತ್ಮಕ ಚಿಂತನೆ ಇದ್ದರೆ ಯಾವ ಮಕ್ಕಳೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಆದರೆ ಎಷ್ಟೋ ಜನರು ಹೇಳುವುದೇನು? ನೀನು ಓದಲು ಅನರ್ಹ. ದನ ಕಾಯಲು ಯೋಗ್ಯ! ನಿನ್ನ ಜೊತೆಗೇ ಓದುತ್ತಿದ್ದ ಆ ಹುಡುಗಿ ಎಷ್ಟೊಂದು ಅಂಕ ತೆಗೆದಿದ್ದಾಳೆ ಎಂದು ಹೀಯಾಳಿಸುವರು. ಆಗ ಆ ಮಕ್ಕಳು ಬದುಕೇ ಸಾಕೆಂದು ಆತ್ಮಹತ್ಯೆಗೆ ಶರಣಾಗಬಹುದು. ಹಾಗಾಗಿ ಯಾವಾಗಲೂ ಒಳ್ಳೆಯ ಸಕಾರಾತ್ಮಕ ಮಾತುಗಳ ಮೂಲಕ ಮಕ್ಕಳಲ್ಲಿ ಮನೋಬಲ ಹೆಚ್ಚಿಸುವ ಕಾರ್ಯ ಮಾಡಬೇಕು. ಇಲ್ಲವಾದರೆ ಅವರು ಆತ್ಮಹತ್ಯೆ ಮಾಡಿಕೊಳ್ಳದಿದ್ದರೂ ಸಮಾಜಘಾತುಕ ಕಾರ್ಯಗಳಲ್ಲಿ ಮಗ್ನರಾಗಬಹುದು.

ಸುಮಾರು ವರ್ಷಗಳ ಹಿಂದೆ ನಡೆದ ಘಟನೆ. ಆಗ ನಾಡಿಗೆ ಬರಗಾಲ ಬಂದಿತ್ತು. ಶ್ರೀಮಂತರು, ಅಡಕೆ ತೋಟದ ಮಾಲಿಕರು, ನೀರಾವರಿ ಜನರು ಕಂಗಾಲಾಗಿದ್ದರು. ಒಬ್ಬ ರೈತನಿಗೆ ಇದ್ದದ್ದೇ ಮೂರು ಎಕರೆ ಬೆದ್ದಲು ಭೂಮಿ. ಆತ ನಮ್ಮ ಬಳಿ ಹೇಳಿದ್ದು: ಬುದ್ದಿ ತಮ್ಮ ಆಶೀರ್ವಾದದಿಂದ 18 ಚೀಲ ರಾಗಿ ಬೆಳೆದಿದ್ದೇನೆ. ಮುಂದಿನ ವರ್ಷ ಬರಗಾಲ ಬಂದರೂ ನನಗೇನೂ ಭಯವಿಲ್ಲ. ಸುಖವಾಗಿ ಬದುಕಬಲ್ಲೆ ಎಂದು. ಶ್ರೀಮಂತರ ನಕಾರಾತ್ಮಕ ಚಿಂತನೆ ಎತ್ತ? ಬಡ ರೈತನ ಸಕಾರಾತ್ಮಕ ಚಿಂತನೆ ಎತ್ತ? ಆತ ತನ್ನ ಆಶೋತ್ತರಗಳಿಗೆ ಕಡಿವಾಣ ಹಾಕಿಕೊಂಡು ಬದುಕಲು ಬೇಕಾದ ವಸ್ತುಗಳ ಕಡೆಗಷ್ಟೇ ಗಮನ ಹರಿಸುವನು. ಆದರೆ ಬಹುತೇಕ ಶ್ರೀಮಂತರಿಗೆ `ಹೊಟ್ಟೆ, ಬಟ್ಟೆಗಿಂತ ಜುಟ್ಟಿಗೆ ಮಲ್ಲಿಗೆ ಹೂ ಬೇಕು’. ಪಕ್ಕದವರು ಒಂದು ಫ್ಯಾನ್, ಫ್ರಿಜ್, ಟಿವಿ, ಗ್ರೈಂಡರ್ ಇತ್ಯಾದಿ ತಂದಿದ್ದಾರೆ. ನನ್ನಲ್ಲಿ ಅವು ಇಲ್ಲವಲ್ಲ ಎಂದು ಕೊರಗುತ್ತ ಇರುವ ಸುಖವನ್ನು ಅನುಭವಿಸದೆ ನರಳುವ ಶ್ರೀಮಂತರೇ ಹೆಚ್ಚು. ಬದಲಾಗಿ ಬಯಲಿನಲ್ಲಿ ಮರದ ಕೆಳಗೆ ಕುಳಿತು ಇಲ್ಲವೇ ಮಲಗಿ `ಆಹಾ ದೇವರು ಕರುಣಿಸಿದ ಫ್ಯಾನ ಗಾಳಿ ಎಷ್ಟೊಂದು ಸೊಗಸಾಗಿದೆಯಲ್ಲ!’ ಎಂದು ಆನಂದಿಸಬಹುದಲ್ಲವೆ? ಹೀಗೆ ಚಿಂತನೆಯ ವಿಧಾನ ಬದಲಾದರೆ ಬದುಕು ಸುಂದರವಾಗುವುದು.

ಪ್ರತಿ ಭಾನುವಾರ ಅನೇಕ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಬಯಸಿ ನಮ್ಮಲ್ಲಿಗೆ ಬರುವರು. ಕಳೆದ ಭಾನುವಾರ ಒಬ್ಬ ಯುವಕ ಬಂದಿದ್ದ. ಆತ ಹಳ್ಳಿಯಿಂದ ಬೆಂಗಳೂರಿಗೆ ಹೋದವ. ಅಲ್ಲೊಂದು ಫ್ಯಾಕ್ಟರಿ ಪ್ರಾರಂಭಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದಾನೆ. ಪ್ರತಿವರ್ಷ ಬಡವಿದ್ಯಾರ್ಥಿಗಳಿಗೆ ನೆರವು ನೀಡುವುದಾಗಿ ಹೇಳಿದ. ಯಾಕೆ ನೆರವು ನೀಡುವೆ ಎಂದಾಗ ಆತ ಹೇಳಿದ್ದು ಚಿಂತನಾರ್ಹವಾಗಿತ್ತು. ಬೆಂಗಳೂರಿಂದ ಹೆಂಡತಿ, ಮಗ, ತಾಯಿಯೊಂದಿಗೆ ಕಾರಿನಲ್ಲಿ ಊರಿಗೆ ಬರುತ್ತಿದ್ದೆ. ಆಗ ಹಿಂದಿನಿಂದ ಒಂದು ಟ್ರಕ್ ವೇಗವಾಗಿ ಬಂದು ನಮ್ಮ ಗಾಡಿಗೆ ಗುದ್ದಿತು. ಸುಮಾರು ದೂರ ನಮ್ಮ ಗಾಡಿಯನ್ನು ತಳ್ಳಿಕೊಂಡು ಹೋಯ್ತು. ಗಾಡಿ ಪೂರ್ಣ ಹಾಳಾದರೂ ಗಾಡಿಯಲ್ಲಿ ಕೂತವರಿಗೆ ಕಿಂಚಿತ್ತೂ ತೊಂದರೆ ಆಗಲಿಲ್ಲ. ಆಗ ನಾನು ಯೋಚಿಸಿದೆ; ಭಗವಂತ ನಮ್ಮನ್ನು ಉಳಿಸಿದ್ದಾನೆ ಎಂದರೆ ನಮ್ಮಿಂದ ಏನೋ ಒಳಿತಾಗಬೇಕು ಎನ್ನುವ ಸದಾಶಯ ಇರಬೇಕು. ನಾವೆಲ್ಲರೂ ಸತ್ತಿದ್ದರೆ ನನ್ನ ಫ್ಯಾಕ್ಟರಿ ನೋಡಿಕೊಳ್ಳುವವರು ಇರಲಿಲ್ಲ. ನಾನು ಸಂಪಾದಿಸಿದ ಹಣ ನನ್ನೊಂದಿಗೆ ಬರುತ್ತಿರಲಿಲ್ಲ. ಆ ಕ್ಷಣವೇ ಸಂಕಲ್ಪ ಮಾಡಿದೆ: ನನ್ನ ಆದಾಯದಲ್ಲಿ ಸ್ವಲ್ಪ ಭಾಗವನ್ನು ವಿದ್ಯಾರ್ಥಿಗಳಿಗೆ ಮತ್ತಿತರ ಒಳ್ಳೆಯ ಕಾರ್ಯಗಳಿಗೆ ವಿನಿಯೋಗಿಸಬೇಕು ಎಂದು.

ನಮ್ಮ ಪಕ್ಕದಲ್ಲಿ `ಮತ್ತೆ ಕಲ್ಯಾಣ’ ಎನ್ನುವ ಕರಪತ್ರವಿತ್ತು. ಅದು ಅವನ ಗಮನಕ್ಕೆ ಬರುತ್ತಲೇ ಬುದ್ಧಿ ಏನಿದು `ಮತ್ತೆ ಕಲ್ಯಾಣ’ ಎಂದ. ಸಮಾಜ ಇಂದು ಹಲವು ರೋಗಗಳಿಂದ ಬಳಲುತ್ತಿದೆ. ಆ ರೋಗಗಳಿಗೆ ಸರಿಯಾದ ಮದ್ದನ್ನು ಕಂಡು ಹಿಡಿದವರು 12ನೆಯ ಶತಮಾನದ ಬಸವಾದಿ ಶಿವಶರಣರು. ಆ ಮದ್ದು ವಚನಸಾಹಿತ್ಯದಲ್ಲಿ ಅಡಕವಾಗಿದೆ. ಅಂಥ ಸಾಹಿತ್ಯದ ಪರಿಚಯ ಮಾಡಿಸುವುದೇ `ಮತ್ತೆ ಕಲ್ಯಾಣ’ದ ಉದ್ದೇಶ ಎಂದೆವು. ಆಗಷ್ಟ್ 1ರಿಂದ 30ರವರೆಗೆ 30 ಜಿಲ್ಲೆಗಳ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕ್ರಮ ನಡೆಯುವುದು. ಪ್ರತಿದಿನ ಬೆಳಗ್ಗೆ ಕಾಲೇಜು ವಿದ್ಯಾರ್ಥಿಗಳ ಜೊತೆಗೆ ವಚನಸಾಹಿತ್ಯದ ಬಗ್ಗೆ ಸಂವಾದ, ಸಂಜೆ ಸೌಹಾರ್ದ ಪಾದಯಾತ್ರೆ, ಸಾರ್ವಜನಿಕ ಸಮಾರಂಭ, ಕೊನೆಯಲ್ಲಿ ನಾಟಕ, ಪ್ರಸಾದ ಎಂದು ವಿವರ ನೀಡಿದೆವು. ಬುದ್ಧಿ ನಾನು ಇದಕ್ಕೆ ಸಹಾಯ ಮಾಡಬಹುದೆ ಎಂದ. ಏನು ಸಹಾಯ ಮಾಡುವೆ ಎಂದಾಗ ಪ್ರಚಾರ ಸಾಮಗ್ರಿಗೆ ಬೇಕಾದ ಆರ್ಥಿಕ ನೆರವು ನೀಡುವೆ. ಈ ಕಾರ್ಯಕ್ರಮ ಎಲ್ಲ ಜನರಿಗೆ ಮುಟ್ಟಬೇಕು ಎಂದರೆ ಗೋಡೆಗೆ ಅಂಟಿಸುವ ಭಿತ್ತಿ ಪತ್ರಗಳು, ವಾಹನಗಳಿಗೆ ಅಂಟಿಸುವ ಸ್ಟಿಕ್ಕರ್ಸ್, ಆಹ್ವಾನ ಪತ್ರಿಕೆ ಬೇಕು. ಅವುಗಳಿಗೆ ಎಷ್ಟೇ ಖರ್ಚಾದರೂ ನಾನು ಕೊಡುವೆ ಎಂದ. ಸುಮಾರು ಎರಡು ಲಕ್ಷ ಬೇಕಾಗಬಹುದು ಎಂದಾಗ ಆಗಲಿ ಎಂದ. ಈ ರೀತಿ ಸಕಾರಾತ್ಮಕ ಚಿಂತನೆ ಬದುಕಿನಲ್ಲಿ ಬಂದರೆ ನೋವಿಗೆ ಅವಕಾಶವೇ ಇರದೆ ಸದಾ ನಕ್ಕು ನಲಿಯಬಹುದು.

ವ್ಯಾಪಾರದಲ್ಲಿ ನಷ್ಟವಾಯ್ತು, ಮಳೆ ಹೋಯ್ತು, ಮಗ ಪಾಸಾಗಲಿಲ್ಲ, ಮಗಳಿಗೆ ಗಂಡು ಸಿಗಲಿಲ್ಲ ಎಂದು ಕೊರಗದೆ ಇದಕ್ಕೆ ಹೊರತಾಗಿ ಯೋಚಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಆಗ ಬದುಕಿನಲ್ಲಿ ಆಶಾವಾದ ಚಿಗುರುವುದು. ಅದರಿಂದ ಪ್ರಗತಿಯ ಮೆಟ್ಟಿಲನ್ನು ಏರಬಹುದು. ಏನು ಬೇಕಾದರೂ ಸಾಧನೆ ಮಾಡಬಹುದು. ಆದರೆ ಬಹುತೇಕರು ಸದಾ ಕೆಟ್ಟದ್ದನ್ನೇ ಯೋಚಿಸುವರು. ಇದರಿಂದಾಗಿಯೇ ಕೆಲವೊಮ್ಮ ಯೋಗಿಯೂ ಭೋಗಿಯಾಗಬಹುದು. ಅದೇ ಒಳ್ಳೆಯ ಚಿಂತನೆ ಮಾಡುತ್ತಿದ್ದರೆ ಭೋಗಿಯೂ ಯೋಗಿಯಾಗಬಹುದು. ವ್ಯಕ್ತಿತ್ವ ವಿಕಾಸವಾಗುವುದು ವ್ಯಕ್ತಿಯ ಆಲೋಚನಾ ಮಟ್ಟವನ್ನು ಅವಲಂಬಿಸಿದೆ. ಒಳ್ಳೆಯ ದೃಷ್ಟಿಕೋನವಿದ್ದರೆ ನಮಗೆ ಎಲ್ಲರೂ ಒಳ್ಳೆಯವರಾಗಿಯೇ ಕಾಣುವರು. ಅದೇ ಹಸಿರು ಕನ್ನಡಕ ಹಾಕಿಕೊಂಡಿದ್ದರೆ ಜಗತ್ತೆಲ್ಲ ಹಳದಿಯಾಗಿ ಕಾಣುವುದು. ದೋಷವಿರುವುದು ಹಾಕಿರುವ ಕನ್ನಡಕದಲ್ಲೇ ಹೊರತು ಜಗತ್ತಿನಲ್ಲಿ ಅಲ್ಲ. ಹಾಗಾಗಿ ವ್ಯಕ್ತಿ ಸರಿಯಾದರೆ ಜಗತ್ತೇ ಸರಿಯಾಗುವುದು. ಪರಮಹಂಸರ ಪುಟ್ಟ ಕತೆ ಎಲ್ಲರಿಗೂ ಗೊತ್ತು. ಬೆಲ್ಲ ತಿನ್ನುವ ಮಗುವನ್ನು ಪರಮಹಂಸರ ಬಳಿ ಕರೆತಂದ ತಾಯಿ ಬೆಲ್ಲ ತಿನ್ನದಂತೆ ಉಪದೇಶ ಮಾಡಿ ಎಂದು ಬೇಡಿಕೊಳ್ಳುವಳು. ಒಂದು ವಾರ ಬಿಟ್ಟು ಕರೆದುಕೊಂಡುಬರಲು ಸೂಚಿಸುವರು. ವಾರದ ನಂತರ ಬಂದಾಗ `ಮಗು ಬೆಲ್ಲ ಅತಿಯಾಗಿ ತಿಂದರೆ ಹೊಟ್ಟೆಯಲ್ಲಿ ಜಂತುಗಳಾಗಿ ಆರೋಗ್ಯ ಕೆಡುವುದು. ಬೇಗ ಸಾವು ಬರುವುದು. ಇನ್ನುಮುಂದೆ ಬೆಲ್ಲ ತಿನ್ನಬೇಡ. ಬೇಕಾದರೆ ಪಾಯಸ ಉಣ್ಣಬಹುದು’ ಎಂದು ಮೈದಡವಿ ಹೇಳಿ, ‘ನೀವಿನ್ನು ಹೋಗಬಹುದು’ ಎಂದರು. ಇಷ್ಟು ಹೇಳಲು ಒಂದು ವಾರ ಏಕೆ ಬೇಕಿತ್ತೆನ್ನುವ ಅನುಮಾನ ಆ ತಾಯಿಗೆ.

ಮನೆಗೆ ಹೋದರೆ ತಾಯಿಗೆ ಮತ್ತೊಂದು ಆಶ್ಚರ್ಯ. ಬೆಲ್ಲ ಎದುರಿಗೇ ಇದ್ದರೂ ಮಗು ಮುಟ್ಟುತ್ತಿಲ್ಲ. ಆ ತಾಯಿ ಮತ್ತೆ ಪರಮಹಂಸರ ಬಳಿ ಬಂದು ತಮ್ಮ ನುಡಿ ಪರುಷ ಎನ್ನುವ ಅನುಭವ ಆಯ್ತು. ನನ್ನ ಮಗು ಬೆಲ್ಲ ತಿನ್ನುತ್ತಿಲ್ಲ. ಆದರೆ ನನಗೆ ಒಂದು ಪ್ರಶ್ನೆ ಕಾಡುತ್ತಿದೆ. ಮೊದಲ ಸಲ ಬಂದಾಗಲೇ ಆಶೀರ್ವಾದ ಮಾಡಬಹುದಿತ್ತು. ವಾರ ಬಿಟ್ಟು ಬರಲು ಹೇಳಿದಿರಲ್ಲ! ಕಾರಣವೇನು? ಆಗ ಪರಮಹಂಸರು ಹೇಳುತ್ತಾರೆ: ಅಮ್ಮ ನನಗೆ ಬೆಲ್ಲ ಎಂದರೆ ತುಂಬಾ ಇಷ್ಟ. ನಾನೇ ಬೆಲ್ಲ ತಿಂದು ನೀನು ತಿನ್ನಬೇಡ ಎಂದರೆ ನನ್ನ ವಾಕ್ ಪರುಷ ಆಗುತ್ತಿರಲಿಲ್ಲ. ಅದಕ್ಕಾಗಿ ಒಂದು ವಾರ ಬೆಲ್ಲ ತಿನ್ನುವುದನ್ನು ಬಿಟ್ಟೆ. ಅದರಿಂದ ನನ್ನ ಮಾತು ಮಗುವಿನ ಮನಸ್ಸಿನ ಮೇಲೆ ಪರಿಣಾಮ ಬೀರಲು ಸಾಧ್ಯವಾಯಿತು ಎಂದು. ಇಂಥ ಪುಟ್ಟ ಕತೆಗಳೇ ವ್ಯಕ್ತಿತ್ವ ಕಟ್ಟಿಕೊಳ್ಳಲು ಸಹಾಯವಾಗಬಲ್ಲವು. ಆದುದರಿಂದ ಮೊದಲು ನಾವು ಒಳ್ಳೆಯವರಾಗಬೇಕು. ಕೇವಲ ಆದರ್ಶಗಳನ್ನು ಹೇಳಿದರೆ ಸಾಲದು. ಅವುಗಳನ್ನು ಅಳವಡಿಸಿಕೊಳ್ಳುವುದು ನಿಜವಾದ ಮೌಲ್ಯ. ಸತ್ಯವನ್ನೇ ನುಡಿಯಬೇಕು ಎನ್ನುವುದು ಆದರ್ಶ. ಅದರಂತೆ ಬಾಳುವುದು ಮೌಲ್ಯ. ಹರಿಶ್ಚಂದ್ರ ಆದರ್ಶದಂತೆ ಬಾಳಿದ್ದರಿಂದ ಅವನ ಮೌಲ್ಯ ಹೆಚ್ಚಾಯ್ತು. ಸತ್ಯಹರಿಶ್ಚಂದ್ರ ಎನ್ನುವ ಗೌರವ ಬಂತು. ಇವತ್ತು ಆದರ್ಶ ಹೇಳುವವರಿಗೆ ಕೊರತೆ ಇಲ್ಲ. ಅದನ್ನು ಮೌಲ್ಯವಾಗಿ ಬದುಕಿನಲ್ಲಿ ಸಾಕಾರಗೊಳಿಸಿಕೊಳ್ಳುವವರು ವಿರಳ.

12ನೆಯ ಶತಮಾನದಲ್ಲಿ ಮಾದಾರ ಚೆನ್ನಯ್ಯನವರು ಹೇಳಿದ್ದು: “ನಡೆ ನುಡಿ ಸಿದ್ಧಾಂತವಾದಲ್ಲಿ ಕುಲ ಹೊಲೆ ಸೂತಕವಿಲ್ಲ” ಎಂದು. ಕುಲ, ಹೊಲೆ, ಸೂತಕ ಇರುವುದು ನಮ್ಮ ನಡೆ ನುಡಿ ಬೇರೆ ಬೇರೆ ಆಗಿರುವುದರಿಂದ. ಶರಣರು ಇಂದಿಗೂ ಶ್ರೇಷ್ಠ ವ್ಯಕ್ತಿಗಳಾಗಿ ಉಳಿದುಕೊಳ್ಳಲು ಕಾರಣ ಅವರ ನಡೆ, ನುಡಿ ಒಂದಾಗಿದ್ದು. ಶರಣರು ನುಡಿದಂತೆ ನಡೆದರು, ನಡೆದಂತೆ ನುಡಿದರು. ನಡೆ ನುಡಿಯ ನಡುವೆ ಕಿಂಚಿತ್ ವ್ಯತ್ಯಾಸವಿದ್ದರೂ ನನ್ನನ್ನು ತುಳಿದು ನೀನೆದ್ದು ಹೋಗು ಎಂದು ದೇವರಿಗೇ ಸವಾಲು ಹಾಕುವರು. ಇಂಥ ಸವಾಲು ಹಾಕಲು ಕಾರಣ ಅವರಿಗೆ ನಡೆದಂತೆ ನುಡಿಯುವೆ, ನುಡಿದಂತೆ ನಡೆಯುವೆ ಎನ್ನುವ ಆತ್ಮಸ್ಥೈರ್ಯ ಇದ್ದದ್ದು. ಅದರಿಂದಾಗಿ ಅವರು ಸಿದ್ಧಪುರುಷರಾದರು. ಅವರ ವಾಕ್ ಪರುಷವಾಯ್ತು. ಬಸವಣ್ಣನವರನ್ನು ಪಂಚಪರುಷ ಮೂರುತಿ ಎನ್ನುವರು. ಮಕ್ಕಳನ್ನು ಅಂಥ ಪರುಷಮೂರ್ತಿಗಳನ್ನಾಗಿಸುವ ಪ್ರಯತ್ನ ಮನೆಯಿಂದ, ತಂದೆ ತಾಯಿಗಳಿಂದ ನಡೆಯಬೇಕಾಗಿದೆ. `ನೂಲಿನಂತೆ ಸೀರೆ’, `ತಾಯಿಯಂತೆ ಮಗು’, `ಗುರುವಿನಂತೆ ಶಿಷ್ಯ’ ಎನ್ನುವ ನುಡಿಗಟ್ಟುಗಳು ಈ ಹಿನ್ನೆಲೆಯಲ್ಲೇ ಹುಟ್ಟಿಕೊಂಡಿರಬೇಕು. ಸೀರೆಯ ಗಟ್ಟಿತನ ಅದಕ್ಕೆ ಬಳಸುವ ನೂಲನ್ನು, ಮಗುವಿನ ಸಂಸ್ಕಾರ ತಾಯಿಯನ್ನು, ಶಿಷ್ಯನ ಸಂಸ್ಕಾರ ಗುರುವನ್ನು ಅವಲಂಬಿಸಿರುತ್ತದೆ. ಇವತ್ತು ಮಕ್ಕಳು ಸರಿದಾರಿಯಲ್ಲಿ ಇದ್ದಾರೆ ಎಂದರೆ ತಂದೆ ತಾಯಿಗಳು ಸರಿದಾರಿಯಲ್ಲಿದ್ದಾರೆ ಎಂದರ್ಥ. ಮಕ್ಕಳು ದಾರಿ ಬಿಟ್ಟಿದ್ದರೆ ಅದಕ್ಕೆ ಕಾರಣ ತಂದೆ ತಾಯಿಗಳೂ ಹೌದು. ಹಾಗಾಗಿ ಮಕ್ಕಳನ್ನು ತಿದ್ದುವ ಮುನ್ನ ತಂದೆ ತಾಯಿಗಳು, ಶಿಷ್ಯರನ್ನು ತಿದ್ದುವ ಮುನ್ನ ಗುರುಗಳು ತಿದ್ದಿಕೊಳ್ಳಬೇಕಾಗಿದೆ. ಇವತ್ತು ಆಧುನಿಕ ಮಾಧ್ಯಮಗಳಾದ ಟಿವಿ, ಮೊಬೈಲ್, ಇಂಟರ್‍ನೆಟ್, ಫೇಸ್‍ಬುಕ್ ಇತ್ಯಾದಿಗಳಿಂದ ಮಕ್ಕಳನ್ನು ಆದಷ್ಟೂ ದೂರವಿಟ್ಟು ಅವರಿಗೆ ಶರಣರ, ಸಂತರ ಸಾಹಿತ್ಯದ ಪರಿಚಯ ಮಾಡಿಕೊಡಬೇಕು.

ಟಿವಿ ಮುಂದೆ ಕುಳಿತು ವ್ಯರ್ಥವಾಗಿ ಕಾಲ ಕಳೆಯುವ ಬದಲು ಒಂದು ಉತ್ತಮ ಪುಸ್ತಕ ಓದುವುದರಿಂದ, ಒಂದು ಒಳ್ಳೆಯ ಉಪನ್ಯಾಸ ಕೇಳುವುದರಿಂದ ಬದುಕಿನಲ್ಲಿ ಸಾಕಷ್ಟು ಸುಧಾರಣೆಯಾಗಲು ಸಾಧ್ಯ. ಒಂದು ಅಪರೂಪದ ಕತೆ: ತಂದೆಗೆ ಇಬ್ಬರು ಮಕ್ಕಳು. ವಯಸ್ಸಿಗೆ ಬರುತ್ತಲೇ ಇಬ್ಬರೂ ವಿಭಾಗವಾದರು. ಮುಂದೆ ಅಣ್ಣ ದೊಡ್ಡ ಕುಡುಕನಾಗಿ ಇದ್ದಬದ್ದ ಆಸ್ತಿ ಕಳೆದುಕೊಂಡು ಬೀದಿಯ ಭಿಕಾರಿಯಾದ. ತಮ್ಮ ಆದರ್ಶ ವ್ಯಕ್ತಿಯಾಗಿ ಸಮಾಜದಲ್ಲಿ ತಲೆ ಎತ್ತಿ ಬಾಳುತ್ತಿದ್ದ. ಅವರಿಬ್ಬರನ್ನೂ ಕಂಡವರೊಬ್ಬರು ನಿಮ್ಮಿಬ್ಬರ ಗುಣಗಳಲ್ಲಿ ಇಷ್ಟೊಂದು ವ್ಯತ್ಯಾಸವಾಗಲು ಏನು ಕಾರಣ ಎಂದು ಕೇಳಿದರು. ನಾನು ಕುಡುಕನಾಗಲು ನನ್ನ ತಂದೆಯೇ ಕಾರಣ. ಅವನು ಕುಡಿದು ಕುಡಿದು ನಾನೂ ಕುಡುಕನಾಗಲು ಕಾರಣನಾದ ಎಂದ ಅಣ್ಣ. ಅದೇ ಪ್ರಶ್ನೆಗೆ ತಮ್ಮ ಹೇಳಿದ್ದು: ನಾನು ತಲೆ ಎತ್ತಿ ಬಾಳಲು ಕಾರಣ ನನ್ನ ತಂದೆ ಎಂದು. ಹೇಗೆ ಎಂದಾಗ ನಮ್ಮಣ್ಣ ಹೇಳಿದಂತೆ ತಂದೆಯ ಕುಡಿತ ನೋಡಿ ನೋಡಿ ನಾನು ಆಗಲೇ ಒಂದು ತೀರ್ಮಾನಕ್ಕೆ ಬಂದೆ. ನಾನೆಂದೂ ನಮ್ಮಪ್ಪ, ಅಣ್ಣನಂತೆ ಕುಡುಕನಾಗಿ ಸಮಾಜದಲ್ಲಿ ಗೌರವ ಕಳೆದುಕೊಳ್ಳಬಾರದು ಎಂದು. ನನ್ನ ಬದುಕಿನ ಬದಲಾವಣೆಗೆ ಅವರೇ ಕಾರಣ ಎನ್ನುವನು. ಈ ನೆಲೆಯಲ್ಲಿ ಯಾವಾಗಲೂ ಸಕಾರಾತ್ಮಕ ಚಿಂತನೆ ಮಾಡಬೇಕು. ಜಗತ್ತಿನಲ್ಲಿ ನಕಾರಾತ್ಮಕ ಅಂಶಗಳು ಬೇಕಾದಷ್ಟಿವೆ. ಅವುಗಳನ್ನು ಕಟ್ಟಿಕೊಂಡು ನಮಗೇನಾಗಬೇಕು ಎನ್ನುವ ಉದಾಸೀನ ತಳೆಯಬೇಕು. ಜಗತ್ತು ಕೆಟ್ಟಿದೆ, ಕಾಲ ಕೆಟ್ಟಿದೆ ಎಂದು ಬಹುತೇಕರು ಹೇಳುವರು. ಕೆಟ್ಟಿರುವುದು ಜಗತ್ತು ಮತ್ತು ಕಾಲ ಅಲ್ಲ. ಅದಿರುವಂತೆಯೇ ಇದೆ. ಕೆಟ್ಟಿರುವವರು ನಾವು. ಹಾಗಾಗಿ ಜಗತ್ತನ್ನು ಇಲ್ಲವೇ ಕಾಲವನ್ನು ಬದಲಾವಣೆ ಮಾಡುತ್ತೇವೆ ಎನ್ನುವುದಕ್ಕಿಂತ ನಮ್ಮನ್ನು ನಾವು ಬದಲಾವಣೆ ಮಾಡಿಕೊಂಡರೆ ಜಗತ್ತು ಮತ್ತು ಕಾಲ ತನ್ನಷ್ಟಕ್ಕೆ ತಾನೇ ಸರಿಯಾಗುವುದು.

ನಡೆಯಲರಿಯದೆ, ನುಡಿಯಲರಿಯದೆ

ಲಿಂಗವ ಪೂಜಿಸಿ ಫಲವೇನು? ಫಲವೇನು?

ಅವರ ದುಃಖವೆನ್ನ ದುಃಖ, ಅವರ ಸುಖವೆನ್ನ ಸುಖ.

ಕೂಡಲಸಂಗನ ಶರಣರ ಮನನೊಂದಡೆ

ಆನು ಬೆಂದೆನಯ್ಯಾ.

Previous post ಗಮ್ಯದೆಡೆಗೆ ಗಮನ
ಗಮ್ಯದೆಡೆಗೆ ಗಮನ
Next post ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ

Related Posts

ಆತ್ಮಹತ್ಯೆ-ಆತ್ಮವಿಶ್ವಾಸ
Share:
Articles

ಆತ್ಮಹತ್ಯೆ-ಆತ್ಮವಿಶ್ವಾಸ

January 10, 2021 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಕಟ್ಟಬೇಕು ಮನವ, ಮೆಟ್ಟಬೇಕು ಮದವ, ಸುಟ್ಟರುಹಬೇಕು ಸಪ್ತವ್ಯಸನಂಗಳ. ಆ ತೊಟ್ಟಿಲ ಮುರಿದು, ಕಣ್ಣಿಯ ಹರಿದು, ಆ ಬಟ್ಟಬಯಲಲ್ಲಿ ನಿಂದಿರೆ, ಬಸವಪ್ರಿಯ ಕೂಡಲಚೆನ್ನಬಸವಣ್ಣ. ಮನುಷ್ಯನ...
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
Share:
Articles

ವಚನಗಳು ಮತ್ತು ವ್ಯಕ್ತಿತ್ವ ವಿಕಸನ

May 6, 2021 ಪ್ರೊ.ಸಿದ್ದು ಯಾಪಲಪರವಿ
ಮನುಷ್ಯನ ಮನಸ್ಸಿನ ಮೇಲೆ ಸಾವಿರಾರು ವರ್ಷಗಳಿಂದ ಅಧ್ಯಯನ ಸಾಗಿಯೇ ಇದೆ. ಆದರೆ ಇನ್ನೂ ನೆಲೆ ನಿಂತಿಲ್ಲ, ನಿಲ್ಲುವುದೂ ಇಲ್ಲ. ಬುದ್ಧನ ವಿಪಶ್ಶನ, ಆಯುರ್ವೇದ ಶಾಸ್ತ್ರದ ಕಾಯ...

Comments 18

  1. ಶೋಭಾದೇವಿ ಕಮಲಾಪುರ
    Jul 7, 2019 Reply

    ಬದುಕಿನ ನೈಜ ಉದಾಹರಣೆಗಳ ಮೂಲಕ ಸಾಣೆಹಳ್ಳಿ ಶ್ರೀಗಳು ಸಕಾರ ಮತ್ತು ನಕಾರಗಳ ಪರಿಣಾಮಗಳನ್ನು ತುಂಬಾ ಚನ್ನಾಗಿ ವಿವರಿಸಿದ್ದಾರೆ.

  2. SIDDHALINGAIAH TUMKUR
    Jul 7, 2019 Reply

    ಶ್ರೀಗಳ ಬರಹಗಳು ಸರಳ, ಸುಂದರವಾಗಿ ಮನಮುಟ್ಟುವಂತಿರುತ್ತವೆ. ನಮ್ಮ ಜೊತೆಗೇ ಇದ್ದು ನಮ್ಮನ್ನು ಪ್ರೀತಿ, ಮಮತೆಗಳಿಂದ ಮಾತನಾಡಿಸುವ ಇಂಥ ಸ್ವಾಮಿಗಳು ಬಹಳ ಅಪರೂಪ. ಅವರ ಜನಪರ ಕಾಳಜಿಯು ಜನಜನಿತವಾಗಿದೆ.

  3. Revanasiddhaiah
    Jul 7, 2019 Reply

    ಇವತ್ತಿನ ಸಮಾಜದಲ್ಲಿ ಮೌಲ್ಯಗಳನ್ನು ಬದುಕುವವರ ಸಂಖ್ಯೆಯನ್ನು ದುರ್ಬೀನು ಹಚ್ಚಿ ಹುಡುಕಬೇಕು. ಮಾತನಾಡುವವರಿಂದ ಏನೂ ಪ್ರಯೋಜನವಿಲ್ಲ. ಅಂಥ ಜನ ಅಪಾಯಕಾರಿಗಳು. ನಮ್ಮನಮ್ಮ ಬದುಕಿನಲ್ಲಿ ಯಾವ ತಾಪತ್ರಯಗಳಿದ್ದರೂ ಕುಂದಬಾರದೆಂದು ಹೇಳಿದ ಸ್ವಾಮಿಗಳ ನುಡಿಗಳು ಮಾರ್ಗದರ್ಶಕದಂತಿವೆ.

  4. ಪಂಚಾಕ್ಷರಿ ಹಳೇಬೀಡು
    Jul 7, 2019 Reply

    ಲಿಂಗ ಪೂಜೆಯ ಘನ ಉದ್ದೇಶವನ್ನು ಅರುಹಿದ ಶ್ರೀಗಳಿಗೆ ಶರಣು. ನಡೆಯಲರಿಯದೆ, ನುಡಿಯಲರಿಯದೆ ಲಿಂಗವ ಪೂಜಿಸಿ ಫಲವೇನು? ಫಲವೇನು?
    ಅವರ ದುಃಖವೆನ್ನ ದುಃಖ, ಅವರ ಸುಖವೆನ್ನ ಸುಖ. ಕೂಡಲಸಂಗನ ಶರಣರ ಮನನೊಂದಡೆ ಆನು ಬೆಂದೆನಯ್ಯಾ.

  5. Jagadeesh anekal
    Jul 9, 2019 Reply

    “ಶರಣರು ಇಂದಿಗೂ ಶ್ರೇಷ್ಠ ವ್ಯಕ್ತಿಗಳಾಗಿ ಉಳಿದುಕೊಳ್ಳಲು ಕಾರಣ ಅವರ ನಡೆ, ನುಡಿ ಒಂದಾಗಿದ್ದು. ಶರಣರು ನುಡಿದಂತೆ ನಡೆದರು, ನಡೆದಂತೆ ನುಡಿದರು. ನಡೆ ನುಡಿಯ ನಡುವೆ ಕಿಂಚಿತ್ ವ್ಯತ್ಯಾಸವಿದ್ದರೂ ನನ್ನನ್ನು ತುಳಿದು ನೀನೆದ್ದು ಹೋಗು ಎಂದು ದೇವರಿಗೇ ಸವಾಲು ಹಾಕುವರು.” ನಾವು ಇವತ್ತು ಮರೆತುಹೋದದ್ದು ಇದನ್ನು. ಸ್ವಾಮಿಗಳ ನುಡಿಗಳು ನಮ್ಮನ್ನು ಎಚ್ಚರಿಸುವಂತೆ ಇವೆ. ಶರಣು.

  6. ರಾಮಲಿಂಗಪ್ಪ ಆನೇಕಲ್
    Jul 10, 2019 Reply

    ಸ್ವಲ್ಪ ತೊಂದರೆಯಾದರೂ ಮುಗಿಲೇ ತಲೆ ಮೇಲೆ ಬಿದ್ದಂತೆ ಮಾಡುತ್ತೇವೆ, ನಿಜವಾದ ಶ್ರಮಜೀವಿಗಳು ಹಾಗಲ್ಲ. ಅವರು ಪರಿಸ್ಥಿತಿಗೆ ಹೊಂದಿಕೊಂಡು ಏನನ್ನಾದರೂ ಸಾಧಿಸುತ್ತಾರೆ. ಶ್ರೀಗಳ ಮಾರ್ಗದರ್ಶನ ಇವತ್ತಿನ ಯುವಜನರಿಗಂತೂ ಅವಶ್ಯ ಬೇಕು.

  7. Arun Naik
    Jul 11, 2019 Reply

    ನಗರಕ್ಕೆ ವಲಸೆ ಹೋಗುವ ನಮ್ಮ ಯುವಕರು ಈ ಲೇಖನ ಓದಲೇ ಬೇಕು. ಬೆಳೆಯುವ ಹೊಲ ಮಾರಿ ಪಟ್ಟಣ ಸೇರುವ ಜನ ನೆಮ್ಮದಿ ಕಳೆದುಕೊಳ್ಳುತ್ತಾರೆ. ಇದರ ಬಗ್ಗೆ ಎಚ್ಚರಿಕೆ ಕೊಡುವ ಕೆಲಸ ತುರ್ತಾಗಿ ಆಗಲೇಬೇಕಾಗಿದೆ. ನಗರದಲ್ಲಿ ಎಷ್ಟೇ ದೊಡ್ಡ ಕೆಲಸ ಇರಲಿ ಅವರದು ನಾಯಿಯ ಪಾಡು.

  8. Sharadamma B
    Jul 12, 2019 Reply

    ಜೀವನದಲ್ಲಿ ಒಂದಲ್ಲಾ ಒಂದು ಸಮಸ್ಯೆಗಳು ಎಲ್ಲರಿಗೂ ಇದ್ದದ್ದೇ. ಅವುಗಳಲ್ಲಿ ಕಳೆದುಹೋಗದಂತೆ ಎಂತಹ ಸ್ಥಿತಿಯನ್ನೂ ನಗುನಗುತ್ತಾ ನಿಭಾಯಿಸಿದರೆ ಬೆಟ್ಟದಂಥ ಕಷ್ಟಗಳೂ ಹತ್ತಿಯಂತೆ ಹಗುರಾಗುತ್ತವೆ. ಅದರಲ್ಲೂ ವಿಷಮ ಗಳಿಗೆಗಳಲ್ಲಿ ವಚನಗಳನ್ನು ಓದಿದರೆ ಮನಸ್ಸಿಗೆ ದೊಡ್ಡ ಬಲ ಸಿಗುತ್ತದೆ. ಇದು ನನ್ನ ವಯಕ್ತಿಕ ಅನುಭವವೂ ಹೌದು.

  9. Madhakar Bannuru
    Jul 14, 2019 Reply

    ಮನುಷ್ಯ ತನ್ನ ಉದ್ಧಾರ ತಾನೇ ಮಾಡಿಕೊಳ್ಳಬಲ್ಲ, ತಾನೇ ಮಾಡಿಕೊಳ್ಳಬೇಕು ಎನ್ನುವ ಸತ್ಯವನ್ನು ಶ್ರೀ ಗುರುಗಳು ಮನಮುಟ್ಟುವಂತೆ ಉದಾಹರಣೆಗಳ ಸಮೇತ ತಿಳಿಸಿದ್ದಾರೆ, ಶರಣು.

  10. Prabhavathi m
    Jul 14, 2019 Reply

    ಶರಣರ ವಚನಗಳಲ್ಲಿ ವ್ಯಕ್ತಿತ್ವ ವಿಕಾಸಕ್ಕೆ ಸಂಬಂದಿಸಿದ ಲೇಖನಗಳನ್ನು ಸ್ವಾಮೀಜಿಯವರು ಬರೆದರೆ ಅನೇಕರಿಗೆ ಮಾರ್ಗದರ್ಶನವಾದಂತಾಗುತ್ತದೆ. ಈಗಿನ ಯುವಜನರಿಗೆ ನಾಟುವಂತೆ ವಚನಗಳಲ್ಲಿ ಬದುಕಿನ ಮಾರ್ಗ ಮತ್ತು ವ್ಯಕ್ತಿತ್ವ ವಿಕಾಸದ ಬಗ್ಗೆ ಬರೆಯಬೇಕೆಂದು ನನ್ನ ಪ್ರಾರ್ಥನೆ. ಬಯಲು ನಮಗೆ ಗುರುವಾಗಲಿ.

  11. mahadevi katagi
    Jul 14, 2019 Reply

    “ಕೆಟ್ಟಿರುವುದು ಜಗತ್ತು ಮತ್ತು ಕಾಲ ಅಲ್ಲ. ಅದಿರುವಂತೆಯೇ ಇದೆ. ಕೆಟ್ಟಿರುವವರು ನಾವು. ಹಾಗಾಗಿ ಜಗತ್ತನ್ನು ಇಲ್ಲವೇ ಕಾಲವನ್ನು ಬದಲಾವಣೆ ಮಾಡುತ್ತೇವೆ ಎನ್ನುವುದಕ್ಕಿಂತ ನಮ್ಮನ್ನು ನಾವು ಬದಲಾವಣೆ ಮಾಡಿಕೊಂಡರೆ ಜಗತ್ತು ಮತ್ತು ಕಾಲ ತನ್ನಷ್ಟಕ್ಕೆ ತಾನೇ ಸರಿಯಾಗುವುದು…..” ಸ್ವಾಮಿಗಳ ಮಾತು ನೂರಕ್ಕೆ ನೂರು ಸತ್ಯ.

  12. ದೇವೀರಯ್ಯ ಹೊನ್ನಾಪುರ
    Jul 15, 2019 Reply

    ಸಕಾರಾತ್ಮಕ ಹಾಗೂ ನಕಾರಾತ್ಮಕ ಯೋಚನೆಗಳು ನಾವು ಬೆಳೆದು ಬಂದ ಪರಿಸರವನ್ನು ಅವಲಂಬಿಸಿರುತ್ತವೆಯೇ? ಇಲ್ಲವೆ ನಮ್ಮ ಸ್ವಭಾವದ ಮೇಲೆ ನಿರ್ಧಾರಿತವಾಗಿದ್ದಾವೆಯೇ? ಈ ಆಲೋಚನೆಗಳ ಮೂಲಕ್ಕೆ ಇಳಿದಿದ್ದರೆ ಲೇಖನ ಮತ್ತಷ್ಟು ಮೆರಗುಗಟ್ಟುತ್ತಿತ್ತು. ಶರಣು.

  13. ಗಾಯತ್ರಿ ಗಾಯಕವಾಡ
    Jul 16, 2019 Reply

    ಇವತ್ತಿನ ಜನಾಂಗ ಯಾಕೆ ಹೀಗಿದೆ ಎಂದರೆ `ನೂಲಿನಂತೆ ಸೀರೆ’, `ತಾಯಿಯಂತೆ ಮಗು’, `ಗುರುವಿನಂತೆ ಶಿಷ್ಯ’ – ಗುರುಗಳೇ ಅಕ್ಷರಶ ಸತ್ಯ. ದೊಡ್ಡ ದುರಂತವೆಂದರೆ ಇದೇ.
    -ಗಾಯತ್ರಿ ಗಾಯಕವಾಡ

  14. Phalakshaiah Salimath
    Jul 16, 2019 Reply

    ಸೋಮಾರಿಗಳನ್ನು ಎಚ್ಚರಿಸೋದು ಹ್ಯಾಗೆ, ನಮ್ಮ ಮನೆಯಲ್ಲಿ ಇಂತಹ ದಂಡಪಿಂಡರಿದ್ದಾರೆ. ಯಾವುದರಲ್ಲೂ ಕೊಂಕು, ‘ನೂಲೊಲ್ಯಾಕ ಚೆನ್ನಿ’ ಎಂಬ ಹಾಡಿತ್ತು ನಾವು ಸಣ್ಣವರಿದ್ದಾಗ. ಆ ಕುಲಕ್ಕೆ ಸೇರಿದವರು ಇವರು. ದೊಡ್ಡ ತಲೆನೋವಾಗಿದೆ ಗುರುಗಳೇ. ನಾನಂತೂ ಬುದ್ಧಿ ಹೇಳಿ ಸೋತುಹೋಗಿದ್ದೇನೆ. ನಿಮ್ಮ ಬಳಿ ಕರೆತರುತ್ತೇನೆ, ನೀವೇ ದಾರಿ ತೋರಬೇಕು.

  15. Umesh Sunkapura
    Jul 17, 2019 Reply

    ನಡೆಯಲರಿಯದೆ, ನುಡಿಯಲಿಯದೆ ಲಿಂಗವ ಪೂಜಿಸಿ ಫಲವೇನು? ಶರಣರ ನಿಲುವು ಅದಮ್ಯ. ನಡೆಯಲು, ನುಡಿಯಲು ಕಲಿಸಿದವರು. ಉತ್ತಮ ಲೇಖನ.

  16. Prasanna Kumar
    Jul 21, 2019 Reply

    AGRICULTURE IS BACKBONE OF HUMAN SOCIETY. WE ARE NEGLECTING IT IN THE NAME OF DEVELOPMENT. SWAMIJI, PLEASE GUIDE THE YOUTH TO GOBACK TO OUR ROOTS, VILLAGES.

  17. Karibasappa hanchinamani
    Jul 23, 2019 Reply

    ಅನುಭವಗಳ ಮೂಲಕ ಉಪದೇಶ ನೀಡಿದ ಪೂಜ್ಯ ಸ್ವಾಮಿಗಳಿಗೆ ಶರಣು.

  18. Jahnavi Naik
    Jul 24, 2019 Reply

    ಕೆಟ್ಟಿರುವವರು ನಾವು. ಹಾಗಾಗಿ ಜಗತ್ತನ್ನು ಇಲ್ಲವೇ ಕಾಲವನ್ನು ಬದಲಾವಣೆ ಮಾಡುತ್ತೇವೆ ಎನ್ನುವುದಕ್ಕಿಂತ ನಮ್ಮನ್ನು ನಾವು ಬದಲಾವಣೆ ಮಾಡಿಕೊಂಡರೆ ಜಗತ್ತು ಮತ್ತು ಕಾಲ ತನ್ನಷ್ಟಕ್ಕೆ ತಾನೇ ಸರಿಯಾಗುವುದು- ತನ್ನನ್ನು ತಾನು ಸರಿಪಡಿಸಿಕೊಳ್ಳಲು ಸಿದ್ದವಿಲ್ಲದ ಜಗತ್ತಿಗೆ ಬುದ್ದಿ ಹೇಳುವುದು ಅಸಾದ್ಯ. ಶ್ರೀಗಳ ಬರಹ ದಾರಿ ದೀಪದಂತಿದೆ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶಿವಾಚಾರ
ಶಿವಾಚಾರ
April 9, 2021
ಶರಣರು ಕಂಡ ಆಹಾರ ಪದ್ಧತಿ
ಶರಣರು ಕಂಡ ಆಹಾರ ಪದ್ಧತಿ
April 29, 2018
ಧೀಮಂತ ಶರಣ ಬಹುರೂಪಿ ಚೌಡಯ್ಯ
ಧೀಮಂತ ಶರಣ ಬಹುರೂಪಿ ಚೌಡಯ್ಯ
April 29, 2018
ಶೂನ್ಯ ಸಂಪಾದನೆ ಎಂದರೇನು?
ಶೂನ್ಯ ಸಂಪಾದನೆ ಎಂದರೇನು?
January 8, 2023
ಭಕ್ತನೆಂತಪ್ಪೆ?
ಭಕ್ತನೆಂತಪ್ಪೆ?
April 29, 2018
ಧಾರ್ಮಿಕ ಮೌಢ್ಯಗಳು
ಧಾರ್ಮಿಕ ಮೌಢ್ಯಗಳು
February 5, 2020
ಲಿಂಗವಾಗುವ ಪರಿ…
ಲಿಂಗವಾಗುವ ಪರಿ…
April 29, 2018
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
April 29, 2018
ತತ್ವಪದಗಳ ಜಾಡು ಹಿಡಿದು…
ತತ್ವಪದಗಳ ಜಾಡು ಹಿಡಿದು…
October 6, 2020
ಕಣ್ಣ ದೀಪ
ಕಣ್ಣ ದೀಪ
September 7, 2021
Copyright © 2023 Bayalu