Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸಂದೇಹ ನಿವೃತ್ತಿ…
Share:
Articles October 6, 2020 ಪದ್ಮಾಲಯ ನಾಗರಾಜ್

ಸಂದೇಹ ನಿವೃತ್ತಿ…

ಗುರು-ಶಿಷ್ಯ ಪ್ರಶ್ನೋತ್ತರ ಮಾಲಿಕೆ
ಮೂಲ: ಬೃಹದ್ವಾದಿಷ್ಠ (ಅಚಲ ಗ್ರಂಥ)
ಕನ್ನಡಕ್ಕೆ: ಪದ್ಮಾಲಯಾ ನಾಗರಾಜ್

ಶಿಷ್ಯ: ಮನಸ್ಸು ಮತ್ತು ದೇಹ ಬೇರೆ ಬೇರೆ ಆಗಿವೆಯೇ? ಇಲ್ಲವೆ ಅವೆರಡೂ ಒಂದೇನಾ? ಇವುಗಳಲ್ಲಿ ಯಾವುದು ಶಾಶ್ವತ, ಯಾವುದು ಅಶಾಶ್ವತ? ಯಾವುದು ಶ್ರೇಷ್ಠ, ಯಾವುದು ಗುಲಾಮ?
ಗುರು: ಈ ಪ್ರಶ್ನೆಯೇ ಅಸಂಬದ್ಧವಾದುದು. ಇವೆರಡೂ ಬೇರೆ ಬೇರೆ ಎನ್ನುವುದಾಗಲಿ, ಒಂದೇ ಎನ್ನುವುದಾಗಲಿ ಅಸಂಬದ್ಧ. ಏಕೆಂದರೆ ಮನಸ್ಸಿಲ್ಲದಿದ್ದರೆ ದೇಹವನ್ನು ಯಾರೂ ಅರಿಯಲಾಗದು. ಶರೀರವಿಲ್ಲದಿದ್ದರೆ ಮನಸ್ಸಿಗೆ ಯಾವ ಅಸ್ತಿತ್ವವೂ ಇಲ್ಲ. ಆದ್ದರಿಂದ ಜೀವಂತ ಶರೀರವನ್ನು ಬಿಟ್ಟು ಮನಸ್ಸಾಗಲಿ, ಮನಸ್ಸನ್ನು ಬಿಟ್ಟು ಶರೀರವಾಗಲಿ ಇರಲಾರದು. ಆದ್ದರಿಂದ ಇವೆರಡೂ ಸಂಬಂಧದಲ್ಲಿ ಇರುವಂತಹವು. ಸಂಬಂಧ ಭಂಗಗೊಂಡಾಗ ಎರಡೂ ಇಲ್ಲವಾಗುವಂತಹವು. ಈ ಸಂಬಂಧವನ್ನು ನಿರಾಕರಿಸಿ ಪ್ರತ್ಯೇಕವಾಗಿ ಇವೆರಡನ್ನೂ ಗ್ರಹಿಸಲಾಗದು.
ನಮ್ಮ ನೈಜ ಜೀವನದ ವ್ಯವಹಾರಗಳಲ್ಲಿ ಅರಿವು-ಮರೆವು; ಮನಸ್ಸು- ದೇಹ; ಪ್ರಕೃತಿ-ಪುರುಷ; ದೃಕ್-ದೃಶ್ಯ; ವ್ಯಷ್ಠಿ-ಸಮಷ್ಠಿ; ಜ್ಞಾನ-ಅಜ್ಞಾನಗಳು ಒಂದೇ ಉಪಾದಿಯಾಗಿದ್ದರೂ ಎರಡು ಭ್ರಮೆಗಳಾಗಿ ತೋರಿಬರುತ್ತಿವೆ. ಇವೆರಡರ ಸಂಬಂಧದಿಂದ ಇವು ಒಂದಿದ್ದರೆ ಮತ್ತೊಂದು ಇದೆಯೇ ವಿನಾ, ಒಂದಿಲ್ಲದಿದ್ದರೆ ಮತ್ತೊಂದು ಇರಲು ಸಾಧ್ಯವಿಲ್ಲ. ಹೇಗೆಂದರೆ… ಬೆಲ್ಲ ಮತ್ತು ಸಿಹಿ; ಪುಷ್ಪ ಮತ್ತು ಪರಿಮಳ; ಅಗ್ನಿ ಮತ್ತು ಜ್ವಾಲೆ ಇವು ಒಂದನ್ನು ಬಿಟ್ಟು ಇನ್ನೊಂದು ಇರಲಾರವು. ಆದ್ದರಿಂದ ಇವುಗಳನ್ನು ಪ್ರತ್ಯೇಕಿಸಿ ನೋಡುವ ಜ್ಞಾನ ಕೇವಲ ಕಾಲ್ಪನಿಕ ಮಾತ್ರ!!! ಆದ್ದರಿಂದ ಮನಸ್ಸು ಮತ್ತು ದೇಹ ಇವೆರಡರ ಅನೂಹ್ಯ ಸಂಬಂಧದಲ್ಲಡಗಿರುವ ಸಾಮರಸ್ಯ ಅಪ್ರಮೇಯವಾದುದು. ನಾವು ಈ ಸಂಬಂಧವನ್ನು ತೀರಾ ನಿರ್ಲಕ್ಷಿಸಿ ನಮ್ಮ ಮನಸ್ಸು ಆಜ್ಞೆ ಮಾಡುವ ಅಭ್ಯಾಸಕ್ಕೆ ಬಿದ್ದಿದೆ. ಈ ಆಜ್ಞೆಯನ್ನು ಮನ್ನಿಸಿ ನಮ್ಮ ದೇಹವು ಮನಸ್ಸಿಗೆ ಗುಲಾಮವಾಗಿದೆ. ಈ ಅಸಮಾನತೆ ಕಾಲ್ಪನಿಕ, ಭ್ರಮೆ ಆಗಿದೆ. ಇದಕ್ಕೆ ಮೂಲವೇನೂ ಇಲ್ಲ.

ಶಿಷ್ಯ: ಗುರುವೇ, ಕಾಲವೆಂದರೆ ಏನದು? ಎಂದಿಗೆ ಅದು ಹುಟ್ಟುತ್ತದೆ, ಎಂದಿಗೆ ಅದು ಇಲ್ಲವಾಗುತ್ತದೆ?… ವಿವರಿಸಿ ಹೇಳಿ.
ಗುರು: ಕಾಲವೆಂದರೆ… ಎರಡು ಘಟನೆಗಳ ಮಧ್ಯೆ ಘಟಿಸುವ ಸಮಯವನ್ನು ಕಾಲವೆಂದರು. ಕಾಲಕ್ಕೆ ಕಾಲಮಾನ… ಕ್ಷಣಗಳಿವೆ. ಅಥವಾ ನಿಮಿಷ, ಘಟನೆ, ವರ್ಷ ಎಂದು ನಮ್ಮ ಅನುಭವದಲ್ಲಿ ಇದೆ.
ಕೆಲವು ಉಪಮಾನಗಳನ್ನು ಪರಿಶೀಲಿಸೋಣ-
1. ಒಬ್ಬಾತ ತನ್ನ ತಾಯಿಯ ಗರ್ಭದಲ್ಲಿ ಬಿದ್ದ ಕಾಲದಿಂದ ತನ್ನ ಕೊನೆಯ ಶ್ವಾಸದವರೆಗೂ ಇರುವ ಕಾಲವನ್ನು ಜೀವಿತಕಾಲ ಎಂದ.
2. ಒಬ್ಬ ಒಂದು ಸ್ಥಳದಿಂದ ಮತ್ತೊಂದು ಸ್ಥಳವನ್ನು ಸೇರಲು ತೆಗೆದುಕೊಂಡ ಸಮಯವನ್ನು ಪ್ರಯಾಣ ಕಾಲ ಎಂದ.
3. ಕ್ರಿಸ್ತನು ಹುಟ್ಟದ ಮುನ್ನ ಕಾಲದಲ್ಲಿ ಎಲ್ಲಿಂದ ಎಲ್ಲಿಗೆ ಒಬ್ಬ ರಾಜ ಆಳಿದನೋ ಅಲ್ಲಿನ ಕಾಲವನ್ನು ಕ್ರಿಸ್ತಪೂರ್ವ ಎನ್ನಲಾಯಿತು.

ಎರಡನೇ ಪಕ್ಷದಲ್ಲಿ ವಿಚಾರಿಸಿ ನೋಡಿದರೆ, ಪುರಾಣಗಳಲ್ಲಿ ಕಾಲವನ್ನು ಕೆಳಗಿನಂತೆ ನಿರ್ಣಯಿಸಲಾಗಿದೆ-
1. ಕೃತಯುಗ- 17.28 ಲಕ್ಷ ಸಂವತ್ಸರಗಳು
2. ತ್ರೇತಾಯುಗ- 12.96 ಲಕ್ಷ ಸಂವತ್ಸರಗಳು
3. ದ್ವಾಪರಯುಗ- 8.64 ಲಕ್ಷ ಸಂವತ್ಸರಗಳು
4. ಕಲಿಯುಗ- 4.32 ಲಕ್ಷ ಸಂವತ್ಸರಗಳು
5. ಇವೆಲ್ಲಾ ಸೇರಿ ಒಟ್ಟು43.20ಲಕ್ಷ ಸಂವತ್ಸರಗಳು ಕೂಡಿದರೆ ಒಂದು ಮಹಾಯುಗ
6. 71 ಮಹಾಯುಗಗಳು ಒಂದು ಮನ್ವಂತರ
7. 14+14= 28 ಮನ್ವಂತರಗಳು – ಬ್ರಹ್ಮನಿಗೆ ಒಂದು ವರ್ಷ
8. ಇಂತಹ 9880 ಮನ್ವಂತರಗಳು ಬ್ರಹ್ಮನಿಗೆ ಒಂದು ವರ್ಷ
9. ಇಂತಹ ಬ್ರಹ್ಮನಿಗೆ 100 ಸಂವತ್ಸರಗಳು ವಿಷ್ಣುವಿಗೆ ಒಂದು ದಿನ
10. ಇಂತಹ ವಿಷ್ಣುವಿಗೆ 100 ಸಂವತ್ಸರಗಳು ರುದ್ರನಿಗೆ ಒಂದು ದಿನ
11. ಇಂತಹ ದಿನಗಳು 360 ಕಳೆದರೆ ರುದ್ರನಿಗೆ ಒಂದು ವರ್ಷ
12. ಇಂತಹ ರುದ್ರನ ಕಾಲ ಸದಾಶಿವನಿಗೆ ಮೂರು ಗಳಿಗೆ ಮಾತ್ರ
13. ಇಂತಹವು ಮೂರು ಗಳಿಗೆಗಳಾದರೆ ಸದಾಶಿವನಿಗೆ ಒಂದು ದಿನ
14. ಇಂತಹ ಒಬ್ಬ ಸದಾಶಿವನಿಗೆ ಇರುವ ಜೀವಿತ ಕಾಲ ವಿರಾಟ್ ಪುರುಷನಿಗೆ ಕಣ್ಣು ಮಿಟುಕಿಸುವಷ್ಟು ಕಾಲ ಮಾತ್ರ
15. ಅಂದರೆ 60*60*24 ಕ್ಷಣಗಳು ಒಂದು ದಿನವಾಗುತ್ತದೆ. ಇದನ್ನು ಒಂದು ಪ್ರಳಯಕಾಲವೆನ್ನುತ್ತಾರೆ. ಇದು ಬ್ರಹ್ಮ ವೈವರ್ತ ಪುರಾಣ ಮತ್ತು ಮತ್ಸ್ಯ ಪುರಾಣದಲ್ಲಿ ಹೇಳಲ್ಪಟ್ಟಿರುವ ಕಾಲ ನಿರ್ಣಯ.
ಈಗ ಹೇಳು ಶಿಷ್ಯ ಯಾವುದನ್ನು ಸರಿಯೆಂದು ಹೇಳೋಣ?
ಮೇಲ್ಕಂಡ ವಿವರಣೆಗಳಲ್ಲಿ ಯಾವುದನ್ನು ಹೇಳಿದರೂ… ಅಥವಾ ನಂಬಿದರೂ ಜ್ಞಾನದ ವ್ಯವಹಾರ ಅಥವಾ ಚೇಷ್ಠೆಯಿಂದಲೇ ಹೇಳಲಾಗುತ್ತಿದೆ. ಸರ್ವ ಪುರಾಣಗಳೂ ಕಲ್ಪಿತ ಜ್ಞಾನದಿಂದಲೇ ನಡೆಯುತ್ತಿವೆ ಎಂದು ಸುಲಭವಾಗಿ ಹೇಳಬಹುದು.
ಎಲ್ಲಿ ಜ್ಞಾನದ ಭ್ರಮೆ ಇರುತ್ತೋ ಅಲ್ಲಿ ಕಾಲ, ದೇಶ, ವಸ್ತು ಭೇದಗಳು ತೋರಲಾರಂಭಿಸುತ್ತವೆ. ಎಲ್ಲಿ ಜ್ಞಾನವು ಬಯಲಾಗುತ್ತದೋ ಅಲ್ಲಿ ಕಾಲ, ದೇಶ, ಭಾಷೆಯ ಐಡೆಂಟಿಟಿ ಹೇಳಲು ಏನೂ ಇಲ್ಲ. ಜ್ಞಾನಕ್ಕಾಗಲಿ, ಕಾಲ, ದೇಶಕ್ಕಾಗಲಿ ಯಾವ ಆಧಾರಗಳೂ ಇಲ್ಲ. ಅವೆಲ್ಲವೂ ಕಲ್ಪಿತ ಜ್ಞಾನದ ಅತಿರೇಕಗಳು.
ಅಚಲ ಸಂಪ್ರದಾಯವು ಕಾಲಾತೀತವೆಂದು ಹೇಳಲಾಗುತ್ತದೆ. ದೇಶ, ಕಾಲ, ವಸ್ತು ಪರಿಚ್ಛಿನ್ನವಾಗದೇ ಇರುವುದು ಯಾವುದಿದೆಯೋ ಅದೇ ಪರಿಪೂರ್ಣ ಎನ್ನಲಾಗುತ್ತದೆ. ಪರಿಪೂರ್ಣವೇ ಸರ್ವಭ್ರಾಂತಿ ನಿವೃತ್ತಿಯಾಗಿದೆ.

ಶಿಷ್ಯ: ಗುರುಸ್ವಾಮಿಯೇ, ಪರಿಪೂರ್ಣಜ್ಞರೆಂದರೆ ಯಾರು? ಅವರ ಜಾಡನ್ನು ಗುರುತಿಸುವುದಾದೂ ಹೇಗೆ?
ಗುರು: ಪರಿಪೂರ್ಣ ಬೋಧೆಯನ್ನು ಗುರುಗಳಿಂದ ಸ್ವೀಕರಿಸಿದ್ದೇನೆ ಎಂದು ಹೇಳಿಕೊಳ್ಳುವ ಎಲ್ಲರೂ ಪರಿಪೂರ್ಣ ಪ್ರಜ್ಞೆಯನ್ನು ಸಾಧಿಸಿಕೊಂಡಿರಲಾರರು. ಆರೂಢದಿಂದ ಗುರುವಚನವನ್ನು ಸಾಧ್ಯವಾಗಿಸಿಕೊಂಡವರನ್ನು ಪರಿಪೂರ್ಣಜ್ಞರೆಂದು ಹೇಳಲಾಗುತ್ತದೆ. ಅವರು ಎಲ್ಲರಂತೆ ಸಾಮಾನ್ಯ ವ್ಯಕ್ತಿಗಳಂತೆಯೇ ಕಾಣುತ್ತಿರುತ್ತಾರೆ. ಅವರಿಗೆ ತಮ್ಮ ಜಾತಿ, ಅಧಿಕಾರ, ವೇಷ, ಕುಲ, ದೇಶ, ಭಾಷೆಗಳಲ್ಲಿ ಯಾವುದೇ ಅತಿರೇಕಗಳಿರುವುದಿಲ್ಲ. ಅವರು ಜಗತ್ತಿನ ಎಲ್ಲಾ ವ್ಯವಹಾರಗಳನ್ನೂ ಗುರು ತೋರಿದ ಎಚ್ಚರದಲ್ಲೇ ವ್ಯವಹರಿಸುತ್ತಿರುತ್ತಾರೆ. ಅವರ ವಿಚಾರಶೀಲತೆ ಅಪರಿಮಿತವಾಗಿರುತ್ತದೆ. ಅವರ ಅಂದ-ಚೆಂದಗಳನ್ನು ಮತ್ತು ಸಹಜ ಸಿದ್ಧ ವಿವೇಕವನ್ನು ಅವರಂತಹದ್ದೇ ವಿವೇಕಿಗಳು ಮಾತ್ರ ತಿಳಿಯಬಲ್ಲರೇ ಹೊರತು ಅನ್ಯರಿಗದು ತಿಳಿಯಲಾಗದು.

ಶಿಷ್ಯ: ಆರೂಢ, ಆರೂಢವೆಂದು ನುಡಿಯುತ್ತಿದ್ದಿರಲ್ಲ, ಆರೂಢವೆಂದರೆ ಏನು ಗುರುವೇ?
ಗುರು: ನಿಜಗುರುವಿನ ಮೂಲಕ ಪೂರ್ಣವಾಗಿ ಸಂಶಯ ನಿವೃತ್ತಿಯಾಗುವ ತನಕವೂ ವಿವೇಕದಿಂದ ತನ್ನನ್ನೂ ಜಗತ್ತನ್ನೂ ಎಚ್ಚರದಿಂದ ಪರಿಶೀಲಿಸಿಕೊಳ್ಳುವ ಧೀರತನವನ್ನು ಆರೂಢವೆನ್ನಲಾಗುತ್ತದೆ. ಹೇಗೆಂದರೆ… ಗುರು ಸಂಜ್ಞೆಯ ಮೂಲಕ ತನಗೆ ತಾನು ನಿಶ್ಚಲತ್ವದಿಂದ ನಿರವಯ ನಿರಾಲಂಬಿಯಾಗಿ ಸ್ವತಃ ಸಿದ್ಧವಾಗಿರುವ ಬಟ್ಟ ಬಯಲೊಳಗೆ ತಾನಿದ್ದು ಕೊಂಡು, ಅದರೊಳು ಮೂಲವಿಲ್ಲದೇ ತೋಚುತ್ತಿರುವ ಈ ಮನಸ್ಸಿಗೆ ಅಥವಾ ಭ್ರಾಂತಿಗೆ ಬಯಲೊಳು ಯಾವುದೇ ತಾವು, ಸ್ಥಳ, ಅವಕಾಶ ಏನೂ ಇಲ್ಲವೆಂದು ಅರಿತು… ಪಂಚದಶಿ ಎಂಬ ಗುರುಸೂತ್ರದಿಂದ “ಕನಸಿನಲ್ಲಿ ತೋರುವ ಕನಕಾಭರಣಗಳು ಕನಸು ಮುಗಿದ ನಂತರ ಇಲ್ಲವಾಗುವ ರೀತಿಯಲ್ಲಿ ಈ ಭ್ರಮೆ ಏನೂ ಇಲ್ಲ ಎಂದು ದೃಢವಾಗುವಿಕೆಯೇ ಆರೂಢ! ಹೀಗೆ ದೃಢನಾದವನನ್ನು ಶೃತಿಗಳಾಗಲಿ, ಸ್ಮೃತಿಗಳಾಗಲಿ, ಶಾಸ್ತ್ರಗಳಾಗಲಿ, ಮತಗಳಾಗಲಿ, ಪುರಾಣಗಳಾಗಲಿ ಪ್ರಭಾವಿಸಲಾರವು. ಅಂದರೆ ಅವುಗಳ ಪ್ರಮಾಣವನ್ನಾಗಲಿ, ಶ್ರವಣ, ಮನನ, ಆಚರಣೆಗಳಿಗಾಗಲಿ ಅವನು ಪ್ರಭಾವಗೊಳ್ಳುವುದಿಲ್ಲ. ಆಗಮಿ, ಸಂಚಿತ, ಪ್ರಾರಬ್ಧವೆಂಬ ಭ್ರಮೆ ನಶಿಸಿ ಹೋದ ಧೀರನವ. ಆದ್ದರಿಂದ ಅವನನ್ನು ಅಚಲನೆನ್ನಲಾಗುತ್ತದೆ.

ಶಿಷ್ಯ: ಗುರು ಮಾರ್ಗವನ್ನು ಪರಿಪೂರ್ಣ ಜ್ಞಾನ ಮಾರ್ಗ ಎನ್ನುತ್ತಿದ್ದೀರಲ್ಲಾ, ಈ ಕುರಿತು ನನ್ನಲ್ಲಿ ಕೆಲವು ಅನುಮಾನಗಳು ಕಾಡುತ್ತಲಿವೆ. ಅವುಗಳನ್ನು ಶಮನಗೊಳಿಸುತ್ತೀರೆಂದು ಇಲ್ಲಿಗೆ ಬಂದಿದ್ದೇನೆ. ಆತ್ಮಜ್ಞಾನ ಅಥವಾ ಬ್ರಹ್ಮಜ್ಞಾನ ಮತ್ತು ಪರಿಪೂರ್ಣ ಜ್ಞಾನ ಎರಡೂ ಒಂದೇನಾ? ಅಥವಾ ಇವೆರಡೂ ಬೇರೆ ಬೇರೇನಾ?
ಗುರು: ಆತ್ಮಜ್ಞಾನ (ಅಥವಾ ಬ್ರಹ್ಮವಿದ್ಯೆ) ಹಾಗೂ ಪರಿಪೂರ್ಣ ಜ್ಞಾನ ಒಂದೇನಾ ಎಂದು ಕೇಳುತ್ತಿದ್ದೀಯಯ್ಯಾ! ಉತ್ತರಿಸುವೆ-
ಇವೆರಡೂ ಒಂದಲ್ಲ. ಆತ್ಮಜ್ಞಾನವು ತಾನು ಮಾನವ ಪರಂಪರೆ ಸಂಗ್ರಹಿಸಿಟ್ಟುಕೊಂಡಿರುವ ಜ್ಞಾನದ ಹಸ್ತಾಂತರದಿಂದ ಲಭಿಸಿದ ಜ್ಞಾನ ಮಾತ್ರ. ಅಂದರೆ ಇದು ಮನುಷ್ಯ ಕುಲದ ನೆನಪಿಗೆ ಸಂಬಂಧಿಸಿದ ಜ್ಞಾನ. ಆತ್ಮಜ್ಞಾನ ಅಥವಾ ಬ್ರಹ್ಮ ವಿದ್ಯೆಯು ಜ್ಞಾನಾಧಾರಿತವಾದದ್ದು. ಜ್ಞಾನವು ಕಲ್ಪನಾಧಾರಿತವಾದದ್ದು. “ಆತ್ಮಜ್ಞಾನವು ನಾನೆಂಬುದು ಆತ್ಮ ಅಥವಾ ಪರಮಾತ್ಮನ ಸ್ವಸ್ವರೂಪನಾಗಿದ್ದೇನೆ ಎಂಬುದನ್ನ ಹೇಳಿ, ಸರ್ವ ಪ್ರಪಂಚವನ್ನು ತಿಳಿಯಲಾಗುತ್ತಿರುವ ಚೇತನಾ ಸ್ವರೂಪಿ ಜ್ಞಾನವೇ ತಾನೆಂದು ಹೇಳಿ, ಇದೇ ಅಂತಿಮವಾಗಿ ಶಾಶ್ವತ ಎಂದು ಬೋಧಿಸಿ ನನ್ನಿಂದ ಕಾಣಲಾಗುತ್ತಿರುವ ಸಕಲ ಭೂತ ಜಗತ್ತು ಅಥವಾ ದೃಶ್ಯ ಜಗತ್ತು, ಅಶಾಶ್ವತ, ಕ್ಷಣಿಕ ಎಂದು ಹೇಳಲ್ಪಡುವ ಜ್ಞಾನ ಆತ್ಮಜ್ಞಾನ ಎನಿಸಿಕೊಂಡಿದೆ.
ಹಾಗೆ ನೋಡಿದರೆ ಪಂಚೇಂದ್ರಿಯಗಳ ಮೂಲಕ ಮನಸ್ಸೇ ಎಲ್ಲವನ್ನೂ ತಿಳಿಯಲಾಗುತ್ತಿದೆ ಎಂಬುದು ಸರ್ವಜನರ ಅನುಭವವಾಗಿದೆ. ಮನಸ್ಸಿನ ಸೋಪಾನದಲ್ಲಿ ಚಲನಾತ್ಮಕ ಮಾಯೆಯಾಗಿರುವ ಮನಸ್ಸಿನೊಳಗೆ ಕೇಡಿನ ಜ್ಞಾನವೇ ಹೆಚ್ಚಾಗಿ ತುಂಬಿರುವಾಗ ಆ ಕೇಡು ಸಹ ಪರಮಾತ್ಮನೆಂದು ಒಪ್ಪಿಕೊಳ್ಳಬೇಕಾಗುತ್ತದೆ. ಅದು ಶಾಶ್ವತ ಎಂದು ಹೇಳುವುದು ಹೇಗೆ ಸತ್ಯವಾದೀತು? ಒಂದು ಕ್ಷಣ ಇದ್ದ ಜ್ಞಾನ ಇನ್ನೊಂದು ಕ್ಷಣಕ್ಕೆ ಮರೆತುಹೋಗುತ್ತಿರುತ್ತದೆ. ಒಂದು ಕ್ಷಣಕ್ಕೆ ಇದ್ದು ಇನ್ನೊಂದು ಕ್ಷಣಕ್ಕೆ ಇಲ್ಲವಾಗುವ ಜ್ಞಾನವನ್ನು ಶಾಶ್ವತ ಎಂದು ಹೇಗೆ ತಿಳಿಯುವುದು? ಜೀವಿ ಸತ್ತರೆ ಮನಸ್ಸೂ ಸಾಯುತ್ತದೆ, ಮನಸ್ಸು ಸತ್ತಾಗ ಜ್ಞಾನವು ನಶಿಸುತ್ತದೆ. ಹಾಗಾದರೆ ಇದೊಂದು ಮಹಾಸುಳ್ಳು. ಈ ಮನಸ್ಸನ್ನು ನಾವು ನಂಬುವುದಿಲ್ಲ. ಏಕೆಂದರೆ ಅದಕ್ಕೆ ಮೂಲವಿಲ್ಲ. ಅದನ್ನು ಸರ್ವ ಶುದ್ಧ ಪರಮಾತ್ಮ ಎಂದು ನಂಬುವುದು ಮೂರ್ಖತನ.
ಪರಿಪೂರ್ಣ ಜ್ಞಾನ:
ಪರಿಪೂರ್ಣವು ಜ್ಞಾನಾತೀತವಾದದ್ದು. ಅಂದರೆ ಇದು ಇಂದ್ರಿಯ ಮತ್ತು ಮನಸ್ಸಿನಿಂದ ತಿಳಿಯಲಾಗುವ ಜ್ಞಾನವಲ್ಲವಾದ್ದರಿಂದ ಇದು ಜ್ಞಾನಾತೀತ. ಪರಿಪೂರ್ಣ ಸಿದ್ಧಿ ಜ್ಞಾನವೂ ಅಲ್ಲ, ಅಜ್ಞಾನವೂ ಅಲ್ಲ. ಜ್ಞಾನ ಮತ್ತು ಅಜ್ಞಾನಗಳೆರಡೂ ನಮ್ಮದೇ ಆದ ತಿಳಿವಿನ ದೋಷಗಳಾಗಿವೆ ಅಥವಾ ಲೀಲಾ ವಿಲಾಸಗಳಾಗಿವೆ. ತನಗೆ ತಿಳಿದ ವಿಷಯವಿದ್ದಾಗ ‘ಜ್ಞಾನಿ’ ಎನ್ನಲಾಗುತ್ತದೆ. ತಿಳಿಯದಾ ವಿಷಯವಿದ್ದಾಗ ‘ಅಜ್ಞಾನ’ ಎನ್ನಲಾಗುತ್ತದೆ. ಆದ್ದರಿಂದ ‘ವಿಷಯ’ ಎಂಬುದರ ಎರಡು ಕೋಡುಗಳು ಜ್ಞಾನ * ಅಜ್ಞಾನ; ಅಂದರೆ ಒಂದೇ ರೋಗದ ಎರಡು ನೋವುಗಳಿವು. ಜ್ಞಾನವು ಶಬ್ದ ಪ್ರಮಾಣವನ್ನು ಅವಲಂಬಿಸಿದೆ. ಪರಿಪೂರ್ಣವು ಪ್ರತ್ಯಕ್ಷ ಪ್ರಮಾಣ. ಪರಿಪೂರ್ಣವು ಊಹಾತೀತ, ಕಲ್ಪನಾತೀತ, ಇಂದ್ರಿಯಾತೀತ. ‘ನಾನು’ ಎಂಬ ಪದಾರ್ಥವೇ ಕೇವಲ ಭ್ರಾಂತಿಯೆಂಬುದನ್ನು ತೋರಿ, ಸರ್ವ ಭ್ರಾಂತಿರಹಿತವಾದ ಬಯಲಿನಲ್ಲಿ ‘ನಾನು’ ಎಂಬುದಕ್ಕೆ ಸ್ಥಾನವಾಗಲಿ, ಗತಿಯಾಗಲಿ, ಗಮ್ಯವಾಗಲಿ ಇಲ್ಲವೆಂದು ಹೇಳಿ ಗುರುಸ್ವಾಮಿಯು ಜನನ- ಮರಣ ಭ್ರಾಂತಿರಹಿತನನ್ನಾಗಿಸುವುದು ಪರಿಪೂರ್ಣ ಜ್ಞಾನ. ಇವೆರಡಕ್ಕು ಯಾವುದೇ ಸಂಬಂಧವಿಲ್ಲ.

ಶಿಷ್ಯ: ಪರಿಪೂರ್ಣವು ಇಂದ್ರಿಯಾತೀತವೆಂದಿರಲ್ಲಾ, ಹಾಗಾದರೆ ಪರಿಪೂರ್ಣವನ್ನು ತಿಳಿಯುವವರು ಯಾರು?
ಗುರು: ನೀನು ಬಯಲು; ನಾನು ಬಯಲು; ಸರ್ವವೂ ಬಯಲು. ಅನಂತವಾದ ಬಯಲೊಳು ಬಯಲಾಗುವ ಗುರು ಗೌಪ್ಯವಿದು. ಅದನ್ನು ಗುರುಗಳು ವಾಚ್ಯಾತೀತವಾಗಿಯೂ, ಸಂಜ್ಞೆಯ ಮೂಲಕ ಪ್ರತ್ಯಕ್ಷವಾಗಿಯೂ ತೋರುತ್ತಾರೆ. ಅದನ್ನ ನೀನು ತಿಳಿಯುವ ಮೊದಲು ಸರ್ವಜ್ಞಾನಗಳಿಗೂ ಮಾಯೆಯಾಗಿರುವ ಈ ಮನಸ್ಸನ್ನು ದಾಟಬೇಕು. ದಾಟದಿದ್ದರೆ ಬಯಲು ಗಮ್ಯ ತಿಳಿಯಲಾಗದು.

ಶಿಷ್ಯ: ಇನ್ನೊಂದು ಅನುಮಾನ ಗುರುವೇ, ಆತ್ಮಜ್ಞಾನವನ್ನು ಹೊಂದದ ಜನ್ಮ/ ಜೀವನ ವ್ಯರ್ಥವೆಂದು ಶಾಸ್ತ್ರಗಳು ಹೇಳುತ್ತವಲ್ಲಾ?
ಗುರು: ಆತ್ಮಜ್ಞಾನದಲ್ಲೇ ನೀನು ಮುಳುಗಿ ಹೋಗಿದ್ದೀಯಾ, ಸದಾ ಅದರಲ್ಲೇ ಇದ್ದು ಅದಕ್ಕಾಗಿಯೇ ಹವಣಿಸಿದ ಹಾಗಾಯ್ತು ನಿನ್ನ ಅನುಮಾನ!
ಹೇಳುತ್ತೇನೆ ಕೇಳು- ಎಲ್ಲಾ ಶಾಸ್ತ್ರಗಳ ಜ್ಞಾನವನ್ನು ತಿರುಗಿಸಿ ನೋಡಿದಾಗ ಸರ್ವಾವಸ್ಥೆಗಳಲ್ಲೂ ತನ್ನ ಅಸ್ತಿತ್ವವನ್ನು “ನಾನು”, “ನನ್ನಿಂದ” ಎಂಬ ಅನುಭವದ ಅನುಭೂತಿಯನ್ನೇ ಆತ್ಮಜ್ಞಾನವೆಂದು ತಿಳಿಯಲಾಗಿದೆ. ಈ ಕ್ಷಣಿಕ ಅನುಭವದ ಅನುಭೂತಿಯಿಂದ “ನಾನು ಆತ್ಮ”, “ನಾನು ಬ್ರಹ್ಮ” ಎಂಬ ಭ್ರಾಂತಿ ಹುಟ್ಟಿಕೊಳ್ಳಲಾಯಿತು. “ನಾನು ಆತ್ಮನಾಗಿದ್ದೇನೆ ಎಂಬ ಅನುಭೂತಿಯಾಗದಾ ಮುನ್ನ ನಾನು ಜೀವನಾಗಿದ್ದೆ ಎಂದಾಯಿತು. “ನಾನು ಬ್ರಹ್ಮನಾಗಿದ್ದೇನೆ” ಎಂಬ ಅನುಭೂತಿಯಾದ ನಂತರ ಜೀವನು ಬ್ರಹ್ಮನಾದ ಎಂದಾಯ್ತು. ಅನುಭೂತಿ ಉಂಟಾದರೂ, ಉಂಟಾಗದಿದ್ದರೂ ಈ ಎರಡು ತಾರತಮ್ಯಗಳು ಇಲ್ಲದೇ ಒಂದೇ ಆಗಿರಬೇಕಿತ್ತು. ಒಂದು ವೇಳೇ ಉಂಟಾದ ನಂತರ ಜೀವನಿಗೆ ಜನನ-ಮರಣಗಳು ಬರಬಾರದಾಗಿತ್ತು. ಏಕೆಂದರೆ, ಬ್ರಹ್ಮನು ಜನನ-ಮರಣಗೀಂದಲ್ಲದವ… ಆದರೆ ಹೀಗೆ ನಡೆಯಲಾರದು. ಅನುಭೂತಿ ಉಂಟಾದರೂ, ಉಂಟಾಗದಿದ್ದರೂ ಸಾಯಲೇ ಬೇಕು. ಏಕೆಂದರೆ ಅಲ್ಲಿ ಬ್ರಹ್ಮ ಕೇವಲ ಕಾಲ್ಪನಿಕ, ಜೀವನೇ ಸತ್ಯ! ಜೀವಿ ಸಾಯುವುದು ಅನಿವಾರ್ಯ
ಇನ್ನೊಂದು ಉದಾಹರಣೆ- ಚಿನ್ನವನ್ನು ಕಂಡಾಗ “ಇದು ಚಿನ್ನ” ಎಂದು ತಿಳಿಯದಾ ಮುನ್ನ ಅದು ಕಬ್ಬಿಣವಾಗಿರಲು ಸಾಧ್ಯವಿದೆಯೇ? ಮೊದಲು ಅಜ್ಞಾನದಿಂದ ತಿಳಿಯಲಾಗಲಿಲ್ಲವೆಂದುಕೊಳ್ಳೋಣ, ಈಗ ಜ್ಞಾನದಿಂದ ತಿಳಿಯಿತು ಎಂದುಕೊಂಡಾಗ ಹೇಗೆ ಚಿನ್ನವು ಚಿನ್ನವಾಗಿಯೇ ಇರುತ್ತದೋ ಹಾಗೆಯೇ ಇದು ಕೇವಲ ಜೀವನು ಮಾತ್ರವೇ ವಿನಾ ಬ್ರಹ್ಮವಲ್ಲ. ಆದ್ದರಿಂದ ಜ್ಞಾನ * ಅಜ್ಞಾನ ಎಂದು ನೀನು ಯಾವುದಕ್ಕೆ ಆರೋಪಿಸುತ್ತಿದ್ದೀಯೋ ಅದು ನಿನ್ನ ಅರಿವು, ಅಥವಾ ಮನಸ್ಸು, ಅದು ನಿನ್ನ ಸಂಕಲ್ಪ, ಅದು ನೀನು ಭ್ರಾಂತಿಯಿಂದಾಗಿ ತಿಳಿದುಕೊಂಡ ಜ್ಞಾನ ಎಂದು ಹೇಳಬಹುದು. ಈ ಮನಸ್ಸಿನಲ್ಲಿ ಉದ್ಭವಿಸಿದ ಜ್ಞಾನವನ್ನು ಚೇತನಾ ಸ್ವರೂಪಿ ಎಂದು ಹೇಳಲಾಗದು. ಏಕೆಂದರೆ ಮನುಷ್ಯನ ಜ್ಞಾನ ಜಗತ್ತಿನ ಆಗುವಿಕೆಗಳನ್ನು ನಿರ್ಧರಿಸುತ್ತಿಲ್ಲ. ಅಥವಾ ಜ್ಞಾನದಿಂದ ಆಗುವಿಕೆಯನ್ನು ಒಂದು ಕ್ಷಣವೂ ತಡೆಯಲಾಗುವುದಿಲ್ಲ. ಆದ್ದರಿಂದ ಇದನ್ನು ಪವನಸ್ಥಾನ ಎನ್ನಲಾಗುತ್ತದೆ. ಭ್ರಾಂತಿ ಎನ್ನಲಾಗುತ್ತದೆ. ಆದ್ದರಿಂದ ಆತ್ಮಜ್ಞಾನವನ್ನು ತಿಳಿಯದವನ ಜನ್ಮ ವ್ಯರ್ಥವಲ್ಲ. ಒಂದು ವೇಳೆ ತಿಳಿದ ಮಾತ್ರಕ್ಕೆ ಜೀವನ ಸಾಫಲ್ಯತೆಯನ್ನು ಹೊಂದುವುದಿಲ್ಲ. ಆತ್ಮಜ್ಞಾನದ ಮೂಲಕ ಪ್ರತ್ಯಕ್ಷ ಪ್ರಮಾಣವಾಗಿರುವ ಬಯಲನ್ನು ತಿಳಿಯಲಾಗುವುದಿಲ್ಲ. ಆದ್ದರಿಂದ ಆತ್ಮಜ್ಞಾನವನ್ನು ಪರಿಪೂರ್ಣ ಜ್ಞಾನವೆಂದು ತಪ್ಪಾಗಿ ಭಾವಿಸುವವರ ಜನ್ಮ ವ್ಯರ್ಥವೆಂದು ತಿಳಿ!!!

ಶಿಷ್ಯ: ಗುರುವೇ… ಹಾಗಾದರೆ ಪರಿಪೂರ್ಣ ಜ್ಞಾನವನ್ನು ತಿಳಿಯದಾ ಜನ್ಮ ವ್ಯರ್ಥವೇ?
ಗುರು: ಪರಿಪೂರ್ಣ ಸತ್ಯವು ಗುರುಮುಖೇನ ಸೂಚ್ಯವಾದಾಗ ಜನ್ಮ ಸಫಲವಾಗುತ್ತದೆ. ಇಲ್ಲದಿದ್ದರೆ ವ್ಯರ್ಥವೇ ಸರಿ. ನಿನಗೂ, ಜಗತ್ತಿಗೂ ಇರುವ ಅಂತಃಸಂಬಂಧವನ್ನು ಅದು ತಿಳಿಸಿಕೊಡುತ್ತದೆ. ಸತ್ಯಕ್ಕೂ ಸುಳ್ಳಿಗೂ ಇರುವ ವ್ಯತ್ಯಾಸವನ್ನು ತೋರಿ ಇವೆರಡೂ ಭ್ರಾಂತಿಗಳಿಂದ ನಮ್ಮನ್ನು ದಾಟಿಸುತ್ತದೆ. ಅತಿ ಗೌಪ್ಯವಾಗಿ ಗುರು ಸೂಚಿಸಲ್ಪಡುವ ಬಯಲನ್ನು ಪ್ರತ್ಯಕ್ಷವಾಗಿ ಕಂಡು ದೈವ ರಹಸ್ಯವನ್ನು ಬಟ್ಟಬಯಲುಗೊಳಿಸುವ ಎಚ್ಚರದಲ್ಲಿದ್ದು, ಎಲ್ಲವೂ ಬಯಲೇ ತುಂಬಿದೆ ಎಂದು ತಿಳಿದು, ಈ ಬಯಲೊಳಗೆ ‘ನಾನೆಂಬ’, ‘ನೀನೆಂಬ’ ಅರಿವು ದೊಡ್ಡ ಮೋಸವೆಂದು ತಿಳಿದು, ಈ ಮೋಸವನ್ನು ನಿಶ್ಶೇಷವಾಗಿಸಿದಾಗ ‘ನಾನು’, ‘ನೀನೆಂಬ’ ಅರಿವು ಎಂದಿಗೂ ಹುಟ್ಟಲೇ ಇಲ್ಲ. ಅಲೆಗಳು ಎಂದಿಗೂ ಸಾಗರವಲ್ಲ ಎಂಬ ಉಕ್ತಿಯಂತೆ ಈ ಮನಸ್ಸು ನಾನಲ್ಲವೆಂಬ ನಿಶ್ಚಯವನ್ನು ಸ್ವತಃ ಸಿದ್ಧವಾಗಿಸಿಕೊಂಡ ಸಿದ್ಧ ಪುರುಷನು ಜನ್ಮರಹಿತನಾಗುತ್ತಾನೆ. ಇಂತಹವನು ಜ್ಞಾನಿಯಲ್ಲ, ಅಜ್ಞಾನಿಯಲ್ಲ; ಅಜ್ಞಾನಿ ಕಲ್ಲನ್ನು ದೇವರೆಂದುಕೊಳ್ಳುತ್ತಾನೆ, ಜ್ಞಾನಿ ತನ್ನನ್ನು ದೇವರೆಂದುಕೊಳ್ಳುತ್ತಾನೆ. ಪರಿಪೂರ್ಣನಿಗೆ ಇವೆರಡೂ ಇಲ್ಲ. ತಾನು ಸರ್ವ ಶುದ್ಧ ಪ್ರಾಣಾಂಗವಾಗಿದ್ದೇನೆ, ಪ್ರಾಣವೇ ಈ ಜಗತ್ತಿನ ಸರ್ವ ಶುದ್ಧಾಂಗ, ಇದು ಅನಂತವಾದುದು ಎಂಬ ಏಕೋಭಾವದ ಅಭಾವದಲ್ಲಿ ಇದ್ದೂ ಇಲ್ಲದಂತೆ ಇದ್ದು ಈ ಜನ್ಮದ ಸಂಕಟಗಳನ್ನು ದಾಟಿಕೊಳ್ಳುತ್ತಾನೆ. ಈ ಮಾರ್ಗದ ವಿನಾ ಯಾವ ಮಾರ್ಗದಿಂದಲೂ ಜನನ-ಮರಣ ರಹಿತವು ಸಾಧ್ಯವಿಲ್ಲಾ. ಪರಿಪೂರ್ಣನಿಗೆ ದೇಹ-ಮನಸ್ಸುಗಳು ಬೇರೆಯಲ್ಲ; ಅರಿವು-ಮರೆವುಗಳು ಬೇರೆಯಲ್ಲ, ವ್ಯಷ್ಟಿ-ಸಮಷ್ಟಿಗಳು ಬೇರೆಯಲ್ಲ, ಕ್ಷರ-ಅಕ್ಷರಗಳು ಬೇರೆಯಲ್ಲ; ದೃಕ್-ದೃಶ್ಯಗಳು ಬೇರೆಯಲ್ಲ; ಪಿಂಡ-ಬ್ರಹ್ಮಾಂಡಗಳು ಬೇರೆಯಲ್ಲ… ಎಂದು ತಿಳಿದು, ತಾನು ತಿಳಿದ ಜ್ಞಾನವನ್ನು ತ್ಯಾಗ ಮಾಡಿ, ಪ್ರಾಣಾಂಗದ (ಲಿಂಗದ) ಸ್ವಸ್ಥಾನದಲ್ಲಿ ಅನುಪಮ ಸುಖಿಯಾಗಿರಬಲ್ಲನು.

Previous post ತತ್ವಪದಗಳ ಜಾಡು ಹಿಡಿದು…
ತತ್ವಪದಗಳ ಜಾಡು ಹಿಡಿದು…
Next post ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2

Related Posts

ತನ್ನ ಪರಿ ಬೇರೆ…
Share:
Articles

ತನ್ನ ಪರಿ ಬೇರೆ…

February 5, 2020 ಪ್ರೊ. ಎನ್ ರೇವಣಸಿದ್ದಪ್ಪ
ಈಳೆ ನಿಂಬೆ ಮಾವು ಮಾದಲಕೆ ಹುಳಿನೀರನೆರೆದವರಾರಯ್ಯಾ? ಕಬ್ಬು ಬಾಳೆ ಹಲಸು ನಾರಿವಾಳಕ್ಕೆ ಸಿಹಿನೀರನೆರೆದವರಾರಯ್ಯಾ? ಕಳವೆ ರಾಜಾನ್ನ ಶಾಲ್ಯನ್ನಕ್ಕೆ ಓಗರದ ಉದಕವನೆರೆದವರಾರಯ್ಯಾ?...
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
Share:
Articles

ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ

February 7, 2021 ಪದ್ಮಾಲಯ ನಾಗರಾಜ್
(ಗುರು-ಶಿಷ್ಯ ಸಂವಾದ) ಶಿಷ್ಯ: ಹಿರಿಯರಿಗೆ ಹಿರಿಯಣ್ಣನೆನಿಸಿದ ಗುರು ಮಹರಾಜರ ಸನಿಹ ಸೇರಿದೆನಯ್ಯಾ… ನನ್ನನ್ನು ಪಾರುಮಾಡು ತಂದೆ! ಕೆಲವರು ಜೀವಾತ್ಮ- ಪರಮಾತ್ಮನೆನ್ನುತ್ತಾರೆ....

Comments 22

  1. Dr. Nandeesh Hiregowdar
    Oct 9, 2020 Reply

    ಪ್ರಶ್ನೋತ್ತರ ಮಾಲಿಕೆ ತುಂಬಾ ಚನ್ನಾಗಿದೆ….. ಸಾಧಕರಿಗೆ ದಾರಿದೀಪವಾಗಿದೆ.

  2. Mahanthesh B.G
    Oct 9, 2020 Reply

    ಪದ್ಮಾಲಯ ನಾಗರಾಜ ಶರಣರ ಸಂದೇಹ ನಿವೃತ್ತಿ… ಲೇಖನ ಹೊಸ ದಾರಿಯೊಂದರ ಅನಾವರಣದಂತೆ ಕಂಡಿತು. ಗುರುವಿನ ಒಂದೊಂದು ಮಾತೂ ಮನನ ಯೋಗ್ಯ. ಮನಸ್ಸು ಮತ್ತು ದೇಹದ ಎರಡೂ ಸಂಬಂಧದಲ್ಲಿ ಇರುವಂತಹವು. ಇವುಗಳ ಸಾಮರಸ್ಯವನ್ನು ಗುರು ಮನದಟ್ಟು ಮಾಡಿದ ರೀತಿ ಅನನ್ಯವಾಗಿದೆ.

  3. ಮಹಾದೇವಪ್ಪ ಬೋರಗಂಟಿ
    Oct 10, 2020 Reply

    ಹುಬ್ಬಳ್ಳಿಯ ಸಿದ್ಧಾರೂಢರು ಆರೂಢರೇ? ಆರೂಢರು ಪರಿಪೂರ್ಣ ಜ್ಞಾನ ಪಡೆದವರೇ?… ಗುರು-ಶಿಷ್ಯರ ಸಂಭಾಷಣೆ ಆರ್ಡಿನರಿ ಮಾತುಕತೆಯಲ್ಲ. ಸಾಧಕನನ್ನು ಸರಿ ದಾರಿಯಲ್ಲಿ ನಡೆಸಲು ಗುರು ಕೊಡುವ ಉತ್ತರಗಳು ಬಹಳ ವಿಚಾರಪೂರ್ಣವಾಗಿವೆ. ಮತ್ತೊಮ್ಮೆ ಮತ್ತೊಮ್ಮೆ ಅರ್ಥ ಮಾಡಿಕೊಳ್ಳುತ್ತಾ ಓದಬೇಕು. ಪದ್ಮಾಲಯ ಶರಣರನ್ನು ನಮಗೆ ಪರಿಚಯಿಸಿದ ಬಯಲು ಬ್ಲಾಗಿಗೆ ಶರಣಾರ್ಥಿಗಳು.

  4. Naveen JK
    Oct 10, 2020 Reply

    ಏನು ಆತ್ಮಜ್ಞಾನ ಪರಿಪೂರ್ಣ ಜ್ಞಾನ ಅಲ್ಲವಾ? ನನಗೆ ಗೊಂದಲವಾಗುತ್ತಿದೆ. ಹಾಗಾದರೆ ನಮ್ಮ ಶರಣರು ಯಾರು? ಆತ್ಮದ ಸ್ವರೂಪ ತಿಳಿಯುವುದು ಎಷ್ಟು ಕಷ್ಟವಿದೆ, ಅದಕ್ಕಾಗಿ ಜನ್ಮವೊಂದು ಸಾಲದು, ಪೂರ್ವಜನ್ಮದ ಪುಣ್ಯಫಲ ಇರಬೇಕು, ಎಲ್ಲರಿಗೂ ಅದು ಸಾಧ್ಯವಾಗಲಾರದು, ನಮ್ಮ ಋಷಿಮುನಿಗಳು ಇಡೀ ಜೀವನ ಅದಕ್ಕಾಗಿ ಸವೆಸಿದರಲ್ಲಾ… ಲೇಖನವನ್ನು ಇನ್ನೆರಡು ಬಾರಿ ಓದಿ ಚರ್ಚಿಸುತ್ತೇನೆ.

  5. Pro. Siddhaiah
    Oct 14, 2020 Reply

    ಜ್ಞಾನ- ಅಜ್ಞಾನಗಳು ಒಂದಿದ್ದರೆ ಮತ್ತೊಂದು, ಒಂದಿಲ್ಲದಿದ್ದರೆ ಇನ್ನೊಂದು ಇರಲು ಸಾಧ್ಯವಿಲ್ಲ ಎನ್ನುವ ಮಾತೇ ವಿನೂತನವಾಗಿದೆ. ನಮ್ಮ ಸಿದ್ದ ಜ್ಞಾನದಲ್ಲಿ, ಅರಿವಿನಲ್ಲಿ ಎಷ್ಟೊಂದು ದೋಷಗಳಿವೆ… ಕಾಲದ ತಿಳುವಳಿಕೆಯಲ್ಲಿ ಇತಿಹಾಸದ ಪ್ರಕಾರ ಶಿಲಾಯುಗ, ಲೋಹ ಯುಗ… ಎನ್ನುವುದು ವೈಜ್ಞಾನಿಕವಾಗಿ ಸರಿ. ಕೃತಯುಗ, ದ್ವಾಪರಯುಗಗಳೆಲ್ಲಾ ಪುರಾಣಗಳ ಸೃಷ್ಟಿ. ನಮ್ಮ ವೈಚಾರಿಕತೆಗೆ ಪುರಾಣಗಳು ರಾಹುವಿನಂತಾಗಿವೆ. ಅತ್ಯುತ್ತಮ ಲೇಖನ.

  6. Halappa Bhavi
    Oct 14, 2020 Reply

    ಆತ್ಮಜ್ಞಾನ, ಪರಿಪೂರ್ಣ ಜ್ಞಾನಗಳ ನಡುವಣ ವ್ಯತ್ಯಾಸ ಕಣ್ಣು ತೆರೆಸುವಂತಿದೆ.

  7. Ravindra Desai
    Oct 14, 2020 Reply

    ಪರಿಪೂರ್ಣಜ್ಞರು, ಆರೂಢರು ಈ ಕಾಲದಲ್ಲೂ ಇದ್ದಾರೆಯೇ? ಅವರೂ ಲಿಂಗಾಯತ ಧರ್ಮಕ್ಕೆ ಸೇರಿದವರೇ ಅಥವಾ ಶರಣರ ಪ್ರಭಾವಕ್ಕೆ ಒಳಗಾದವರೇ? ಅಚಲದ ಧರ್ಮಗ್ರಂಥದಿಂದ ಆಯ್ದ ಈ ಸಂವಾದ ತುಂಬಾ ಚನ್ನಾಗಿದೆ. ಸಾಧಕರ ಕೈಪಿಡಿಯಂತಿರುವ ಇದನ್ನು ಕನ್ನಡಕ್ಕೆ ಅನುವಾದಿಸಿಕೊಟ್ಟ ಪದ್ಮಾಲಯ ಶರಣರಿಗೆ ಶರಣಾರ್ಥಿಗಳು. ಕನ್ನಡದಲ್ಲಿ ಈ ಪುಸ್ತಕ ಲಭ್ಯವಿದೆಯೇ?

  8. ಪದ್ಮಾಲಯ ನಾಗರಾಜ
    Oct 14, 2020 Reply

    ನವೀನ್ ರವರೇ… ತಾವು ಆತ್ಮಜ್ಞಾನವನ್ನ ತಿಳಿಯಲು ಪೂರ್ವಜನ್ಮದ ಪುಣ್ಯ ಬೇಕು ಎಂದು ಹೇಳಿದ್ದೀರಿ. ಆತ್ಮಜ್ಞಾನಕ್ಕೆ ಪೂರ್ವ ಜನ್ಮದ ಪುಣ್ಯ ಬೇಕಿಲ್ಲ. ಮಂಡೂಕ ಮತ್ತು ಕಠೋಪನಿಷತ್ತನ್ನ ಕರಗತ ಮಾಡಿಕೊಳ್ಳಿ ಇದೇ ಜನ್ಮದಲ್ಲಿ ಅದುಸಿಗುತ್ತೆ. ಆದರೆ ಶರಣರ ಪರಿಪೂರ್ಣ ಮಾರ್ಗ ಬೇಕೆಂದರೆ ವಚನಗಳನ್ನ ಶೋಧನೆ ಮಾಡಬೇಕು.ಒಂದು ನಿಮಗೆ ನೆನಪಿರಲಿ… ಶರಣರದ್ದು ಋಷಿಮಾರ್ಗವೇ ಆಗಿದ್ದ ಪಕ್ಷದಲ್ಲಿ ಶರಣರನ್ನ ಹುಡುಕಿ ಹುಡುಕಿ ಕೊಂದದ್ದು ಯಾಕೆ? ಯಾರು? ಈ ಚರಿತ್ರೆಯನ್ನಾದರೂ ತಿಳಿದುಕೊಳ್ಳಿ ದಯವಿಟ್ಟು coNfuse ಮಾಡಿಕೊಳ್ಳಬೇಡಿ.

  9. Ramesh Saligrama
    Oct 16, 2020 Reply

    ವ್ಯಕ್ತಿಯೊಬ್ಬನ ದೇಹ ಮತ್ತು ಮನಸ್ಸಿನ ಸಾಮರಸ್ಯ ಯಾವಾಗ ಕೆಟ್ಟಿತು? ಯಾವುದು ದೇಹದ ಬಯಕೆ, ಯಾವುದು ಮನಸ್ಸಿನ ಆಸೆ… ನಮಗಂತೂ ದೇಹ ಮತ್ತು ಮನಸ್ಸಿನ ಅಂತರವೇ ಗೊತ್ತಾಗದಷ್ಟು ಅಸ್ಪಷ್ಟತೆ ಇದೆ. ‘ನಾನು ಯಾರು?’ ಲೇಖನ ಮಾಲೆಯಲ್ಲಿ ಮನಸ್ಸಿನ ಕುರಿತಾದ ಸ್ಪಷ್ಟ ವಿಚಾರಗಳು ಸಿಕ್ಕರೂ ಮನಸ್ಸು ಮತ್ತು ದೇಹದ ಬ್ಯಾಲೆನ್ಸ್ ಹೇಗೆ ಸಾಧಿಸುವುದು ಗೊತ್ತಾಗಲಿಲ್ಲ.

  10. Lingaraj Patil
    Oct 17, 2020 Reply

    ಪರಿಪೂರ್ಣವು ಪ್ರತ್ಯಕ್ಷ ಪ್ರಮಾಣ. ಪರಿಪೂರ್ಣವು ಊಹಾತೀತ, ಕಲ್ಪನಾತೀತ, ಇಂದ್ರಿಯಾತೀತ… ಎನ್ನುವ ವ್ಯಾಖ್ಯಾನವು ಶರಣರ ವಚನಗಳ ಆಶಯವನ್ನೇ ಹೇಳುತ್ತದೆ. ನೀವು ಹೇಳುವುದು ನಿಜ, ಆತ್ಮಜ್ಞಾನವನ್ನು ಊಹಿಸಿಕೊಳ್ಳಬಹುದು. ಊಹೆಗೆ ಸಿಲುಕುವಂತೆಯೇ ಆತ್ಮ ಸಾಕ್ಷಾತ್ಕಾರದ ವಿವರಗಳು ಬರುತ್ತವೆ. ನಾನು ಓದಿದ ಆಧ್ಯಾತ್ಮಿಕ ಉತ್ತುಂಗ ಸ್ಥಿತಿಗಳೆಲ್ಲವನ್ನೂ ನಾನು ಹೀಗ್ಹೀಗೆ ಇರಬಹುದೆಂದು ಊಹಿಸಿಕೊಂಡಿದ್ದೇನೆ… ಗುರು ಮಾರ್ಗದ ಪರಿಪೂರ್ಣತೆಯನ್ನು ನನ್ನಿಂದ ಊಹಿಸಿಕೊಳ್ಳಲಾಗುತ್ತಿಲ್ಲ.

  11. Naveen JK
    Oct 19, 2020 Reply

    ಪದ್ಮಾಲಯ ಸರ್, ನಾನು ಆತ್ಮಜ್ಞಾನ, ಪರಿಪೂರ್ಣ ಜ್ಞಾನ ಎರಡೂ ಒಂದೇ, ಆಧ್ಯಾತ್ಮ ಸಾಧನೆಯಲ್ಲಿ ಆತ್ಮಜ್ಞಾನವೇ ಅತ್ಯುನ್ನತ ಸ್ಟೇಜ್ ಹಾಗೂ ಅದೇ ದಾರಿ ಎಂದು ತಿಳಿದುಕೊಂಡಿದ್ದೆ. ಸಂದೇಹ ನಿವೃತ್ತಿಯಲ್ಲಿ ಎರಡಕ್ಕೂ ವ್ಯತ್ಯಾಸ ತಿಳಿಸಿದ್ದೀರಿ. ಇದು ನನಗೆ ಸಂಪೂರ್ಣ ಹೊಸ ವಿಚಾರ. ಹೊಸ ವಿಷಯ. ಮಂಡೂಕ, ಕಠೋಪನಿಷತ್ತುಗಳಲ್ಲಿ ಏನಿದೆ ಎನ್ನುವುದು ನನಗೆ ಗೊತ್ತಿಲ್ಲ. ಋಷಿ ಮುನಿಗಳ ಅನುಭವದ ಸಾರ ಉಪನಿಷತ್ತುಗಳು, ಅವೇ ಆಧ್ಯಾತ್ಮದ ಅಂತಿಮ ಸತ್ಯಗಳಿರಬೇಕೆಂಬುದು ನನ್ನ ಎಣಿಕೆಯಾಗಿತ್ತು. ಋಷಿ ಮಾರ್ಗ ಶರಣರ ಮಾರ್ಗ ಖಂಡಿತವಾಗಿಯೂ ಅಲ್ಲ. ಆದರೆ ನನಗೆ ಈ ವಿಷಯ ಹೊಳೆಯಲೇ ಇಲ್ಲ.

  12. ಮುರುಗೇಶ್ ನಿಪ್ಪಾಣಿ
    Oct 19, 2020 Reply

    ಲೇಖನ ಬಹಳ ಚನ್ನಾಗಿದೆ. ಶಿಷ್ಯ-ಗುರುವಿನ ಪ್ರಶ್ನೋತ್ತರ ಮಾಲಿಕೆ ಅನೇಕರ ಸಂಶಯಗಳನ್ನು ನಿವೃತ್ತಿ ಮಾಡುವುದರಲ್ಲಿ ಸಂದೇಹವೇ ಇಲ್ಲ.

  13. Jayadevappa
    Nov 5, 2020 Reply

    ಪಂಚದಶಿ ಎಂಬ ಗುರು ಸೂತ್ರದಿಂದ ಎಂದು ಪ್ರಶ್ನೋತ್ತರದಲ್ಲಿ ಹೇಳಲಾಗಿದೆ. ಆ ಪಂಚದಶಿ ಯಾವುದೆಂದು ಉಲ್ಲೇಖಿಸಿಲ್ಲ. ದಯವಿಟ್ಟು ಆ ಗುರು ಸೂತ್ರ ತಿಳಿಸುವಿರಾ?

  14. Basappa Kalguti
    Nov 5, 2020 Reply

    ಪರಿಪೂರ್ಣ ಜ್ಞಾನವನ್ನು ತಿಳಿಸಿಕೊಡುವ ಗ್ರಂಥ ಅಚಲರಲ್ಲಿ ಸಿಗುತ್ತದೆಯೇ? ಅದನ್ನು ಓದಿ ಅರ್ಥಮಾಡಿಕೊಂಡರೆ ಪರಿಪೂರ್ಣರಾಗಬಹುದೇ? ನವೀನ್ ಅವರಿಗೆ ಬರೆದ ಪ್ರತಿಕ್ರಿಯೆಯಲ್ಲಿ ಶರಣರ ಪರಿಪೂರ್ಣ ಮಾರ್ಗ ತಿಳಿಯಬೇಕೆಂದರೆ ವಚನಗಳನ್ನು ಶೋಧಿಸಬೇಕೆಂದು ಹೇಳಿದ್ದೀರಿ… ಹೇಗೆ?

  15. Gangadharaiah
    Nov 5, 2020 Reply

    ಇಂತಹ ಪ್ರಶ್ನೋತ್ತರ ಮಾಲಿಕೆಯು ಪ್ರತಿ ತಿಂಗಳು ಬಯಲಿನಲ್ಲಿ ಬರಲಿ. ಓದುಗರಿಂದ ಪ್ರಶ್ನೆಗಳನ್ನು ಪಡೆದು ಹೀಗೆ ಸ್ಷ್ಯಾಂಡರ್ಡ್ ಆಗಿ ಉತ್ತರ ಕೊಟ್ಟರೆ ಬಹಳ ಜನರಿಗೆ ಉಪಯೋಗವಾಗುತ್ತದೆ. ಅನೇಕ ಪ್ರಶ್ನೆಗಳು ನಮ್ಮಲ್ಲಿವೆ. ಸರಿಯಾದ ಶರಣ ದೃಷ್ಟಿಕೋನದ ಪರಿಹಾರಗಳನ್ನು ಅವುಗಳಿಗೆ ನೀಡಿದರೆ ತಮ್ಮಿಂದ ಮಹದುಪಕಕಾರವಾದಂತಾಗುತ್ತದೆ. ನಮ್ಮ ಪ್ರಸ್ತುತ ಬದುಕಿಗೆ ಅನ್ವಯವಾಗುವ ಪ್ರಶ್ನೆಗಳನ್ನು ಕೇಳುತ್ತೇವೆ, ಪ್ರ್ಯಾಕ್ಟಿಕಲ್ಲಾಗಿ ಅವುಗಳಿಗೆ ಉತ್ತರ ತಿಳಿಸುವ ವ್ಯವಸ್ಥೆ ಮಾಡಿ ಕೊಡುತ್ತೀರಾ? ಈ ಸಲ ಬಂದ ಸಂದೇಹ ನಿವೃತ್ತಿ ಅದ್ಭುತವಾದ ಪ್ರಶ್ನೋತ್ತರಗಳ ಸರಣಿ. ನನಗಂತೂ ಬಹಳ ಹಿಡಿಸಿತು. ಪದ್ಮಾಲಯ ನಾಗರಾಜ ಅವರು ಸ್ವಾಮಿಗಳೇ?

  16. ರವಿ ಚಿನಿವಾರ್
    Nov 5, 2020 Reply

    ಬೃಹದ್ವಾದಿಷ್ಟ ಅಚಲ ಗ್ರಂಥದ ಪರಿಚಯ ಮಾಡಿಸಿದ ತಮಗೆ ಅನಂತ ಶರಣುಗಳು. ಈ ಗ್ರಂಥ ಎಲ್ಲಿ ಲಭ್ಯವಿದೆ?

  17. ಯಲ್ಲಪ್ಪ ಶೆಟ್ಟಿ
    Nov 8, 2020 Reply

    ಅಬ್ಬಾ ಎಷ್ಟೊಂದು ತಿಳಿಬೇಕಲ್ಲಾ. ಎಷ್ಟು ಜನ್ಮ ಬೇಕೋ, ಗುರು ಯಾವಾಗ್ ಸಿಕ್ತಾನೋ, ಗೊತ್ತಿಲ್ಲಾ.
    ಇನ್ನೂ ದೇಹದ ಮತ್ತೆ ಇಂದ್ರಿಯಗಳ ಚಟಗಳೇ ಸಿಕ್ಕಾಬಟ್ಟೆ ಪೆಂಡಿಂಗ್ ಇದಾವ. ದಾರಿ ಭಾಳಾ ದೂರ ಇದೆ.

  18. Vivek chalyal
    Nov 11, 2020 Reply

    ಮನಸ್ಸು ಮತ್ತು ದೇಹಗಳು ಬೇರೆ ಬೇರೆ ಎಂದು ಭಾವಿಸುವುದು ಕಾಲ್ಪನಿಕವಾದರೆ ಇವೆರಡರದು ಅನೂಹ್ಯ ಸಂಬಂಧ ಎಂದರೆ ಏನು? ಅವುಗಳ ಸಂಬಂಧವನ್ನು ವಿವರಿಸಿದ್ದರೆ ಚೆನ್ನಾಗಿತ್ತು ಶರಣರೇ.

  19. kalavathi Harsha
    Nov 12, 2020 Reply

    ಕಾಲ. ಮನಸ್ಸು ಮತ್ತು ಪರಿಪೂಋ್ಣ ಜ್ಞಾನದ ಚಿಂತನೆಗಳನ್ನು ಓದಿ ಬಹಳ ಸಂತೋಷವಾಯಿತು.

  20. Kalyan V.M
    Nov 16, 2020 Reply

    ದೇಹಕ್ಕೆ ಮನಸ್ಸು, ಮನಸ್ಸಿಗೆ ದೇಹ ಅನಿವಾರ್ಯ- ಗುರೂಪದೇಶ ಮಂತ್ರ ವೈದ್ಯ!

  21. Kiran Varad
    Nov 16, 2020 Reply

    ಪರಿಪೂರ್ಣ ಮಾರ್ಗ ಭಕ್ತಿ ಮಾರ್ಗವೇ? ಇದಕ್ಕೂ ಜ್ಞಾನ ಮಾರ್ಗಕ್ಕೂ ಏನು ವ್ಯತ್ಯಾಸ?

  22. Jagannatha Patil
    Nov 19, 2020 Reply

    ಮನಸ್ಸು- ದೇಹ; ಪ್ರಕೃತಿ-ಪುರುಷ; ದೃಕ್-ದೃಶ್ಯ; ವ್ಯಷ್ಠಿ-ಸಮಷ್ಠಿ; ಜ್ಞಾನ-ಅಜ್ಞಾನಗಳು ಒಂದೇ ಉಪಾದಿಯಾಗಿದ್ದರೂ ಎರಡು ಭ್ರಮೆಗಳಾಗಿ ತೋರಿಬರುತ್ತಿವೆ…. ಅಕ್ಷರಶಃ ಸತ್ಯ! ಮನಸ್ಸು-ದೇಹಗಳನ್ನು ಬೇರ್ಪಡಿಸಿ ನೋಡುವುದು ಅಸಾಧ್ಯದ ಮಾತು!

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನಕಾರರು ಮತ್ತು ಕನ್ನಡ ಭಾಷೆ
ವಚನಕಾರರು ಮತ್ತು ಕನ್ನಡ ಭಾಷೆ
December 6, 2020
ಧರ್ಮೋ ರಕ್ಷತಿ ರಕ್ಷಿತಃ
ಧರ್ಮೋ ರಕ್ಷತಿ ರಕ್ಷಿತಃ
January 7, 2019
ನಡೆದಾಡುವ ದೇವರು
ನಡೆದಾಡುವ ದೇವರು
April 9, 2021
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
April 29, 2018
ಶರಣ- ಎಂದರೆ…
ಶರಣ- ಎಂದರೆ…
March 6, 2020
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
February 11, 2022
ಗುರುವೇ ತೆತ್ತಿಗನಾದ
ಗುರುವೇ ತೆತ್ತಿಗನಾದ
April 29, 2018
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
December 6, 2020
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
June 17, 2020
ಸಂದೇಹ ನಿವೃತ್ತಿ…
ಸಂದೇಹ ನಿವೃತ್ತಿ…
October 6, 2020
Copyright © 2023 Bayalu