Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಶೂನ್ಯ ಸಂಪಾದನೆ ಎಂದರೇನು?
Share:
Articles January 8, 2023 ಡಾ. ಎನ್.ಜಿ ಮಹಾದೇವಪ್ಪ

ಶೂನ್ಯ ಸಂಪಾದನೆ ಎಂದರೇನು?

ಶೂನ್ಯ ಸಂಪಾದನೆ ಎಂಬ ಗ್ರಂಥದ ಶೀರ್ಷಿಕೆಯಲ್ಲಿರುವ ‘ಶೂನ್ಯ’ ಮತ್ತು ‘ಸಂಪಾದನೆ’ ಎಂಬ ಎರಡು ಪದಗಳು ನಮ್ಮ ಗಮನವನ್ನು ಸೆಳೆಯುತ್ತವೆ. ಶೂನ್ಯ ಎಂದರೆ ಏನೂ ಇಲ್ಲ ಎಂದರ್ಥ. ಏನೇನೂ ಇಲ್ಲದ ಒಂದು ಕಾಲವಿತ್ತು. ಪ್ರಪಂಚದ ವಿವಿಧ ವಸ್ತುಗಳಾಗಲಿ, ಅವುಗಳನ್ನು ಸೃಷ್ಟಿಸಲು ಅಗತ್ಯವಾದ ಶಕ್ತಿ ಎಂಬ ಉಪಾದಾನ ಕಾರಣವಾಗಲಿ, ಅವುಗಳನ್ನು ಬಳಸಿಕೊಂಡು ಜಗತ್ತನ್ನು ಸೃಷ್ಟಿಸುವ ಸಾದಾಖ್ಯ ಎಂಬ ನಿಮಿತ್ತ ಕಾರಣಗಳಾಗಲಿ ಇರಲಿಲ್ಲ. ಆಗ ಪರಮಾತ್ಮ ಒಬ್ಬನೇ ಇದ್ದ. ಅವನಿಗೆ ಸೃಷ್ಟಿಸಬೇಕೆಂಬ ಇಚ್ಛೆಯಾಗಲಿ, ಸ್ವಪ್ರಜ್ಞೆಯಾಗಲಿ ಇರಲಿಲ್ಲ. ಅಲ್ಲಮರು ಹೇಳುವಂತೆ ಅವನು ಇದ್ದ, ಇಲ್ಲದಂತೆ! ಪರಮಾತ್ಮನ ಇಂಥ ಸೃಷ್ಟಿಪೂರ್ವಸ್ಥಿತಿಯನ್ನು ಶರಣರು ಶೂನ್ಯ, ಶೂನ್ಯಲಿಂಗ, ಬಯಲು (ಚಿದ್ಬಯಲು), ನಿರವಯ, ಎಂದು ಮುಂತಾಗಿ ಕರೆದರೆ, ಉಪನಿಷತ್ಕಾರರು ಅಸತ್ ಎಂದು ಕರೆದಿದ್ದಾರೆ.

ಬೌದ್ಧರೂ ಶೂನ್ಯದ ಬಗೆಗೆ ಬಹಳ ಗಮನಾರ್ಹವಾದ ಚಿಂತನೆ ಮಾಡಿದ್ದಾರೆ. ಅವರಲ್ಲಿ ಶೂನ್ಯವಾದ ಎಂಬ ಒಂದು ಪಂಥವೇ ಇದೆ. ಶರಣರು ಶೂನ್ಯ ಎಂಬುದು ಒಂದು ಕಾಲದಲ್ಲಿ ಇತ್ತು ಎಂದು ಹೇಳಿದರೆ, ಬೌದ್ಧರು ಯಾವಾಗಲೂ ಏನೂ ಇರಲಿಲ್ಲ, ಎಂದು ವಾದಿಸುತ್ತಾರೆ ಎಂಬುದು ಒಂದು ತಪ್ಪು ಕಲ್ಪನೆ. ಈ ತಪ್ಪು ಕಲ್ಪನೆಯ ಆಧಾರ ಮೇಲೆ ಶಂಕರಾಚಾರ್ಯರು ಏನೂ ಇಲ್ಲ ಎಂದು ಹೇಳುವವನಾದರೂ ಇರಬೇಕಲ್ಲ, ಎಂದು ವಾದಿಸಿ ಶೂನ್ಯವಾದವನ್ನು ಖಂಡಿಸಿದ್ದಾರೆ. ಶೂನ್ಯವಾದಿಗಳ ಪ್ರಕಾರ ಶೂನ್ಯ ಎಂಬುದು ಇದೆ, ಆದರೆ ಅದರ ಬಗ್ಗೆ ನಾವು ಏನನ್ನೂ ಹೇಳುವಂತಿಲ್ಲ. ಅದೊಂದು ವಸ್ತುವಲ್ಲ. ಅದು ವಸ್ತುವಲ್ಲದ್ದರಿಂದ, ಅದು ಅಲ್ಲಿದೆ, ಇಲ್ಲಿದೆ, ಅದು ಚೈತನ್ಯವಸ್ತು, ಭೌತವಸ್ತು ಮುಂತಾಗಿ ಏನನ್ನೂ ಅದರ ಬಗ್ಗೆ ಹೇಳಲು ಸಾಧ್ಯವಿಲ್ಲ. ಇಷ್ಟಾದರೂ, ಇದರ ಬಗ್ಗೆ ಮೊದಲು ಗ್ರಂಥವನ್ನು ರಚಿಸಿದ ನಾಗಾರ್ಜುನ ಒಂದು ಮಾತನ್ನು ಹೇಳುತ್ತಾನೆ. ಅದೆಂದರೆ, ಶೂನ್ಯ ನಿರ್ವಾಣ, ನಿರ್ವಾಣ ಎಂದರೆ ಪರಮ ಶಾಂತಿ, ಪರಮ ಶಾಂತಿಯು ಶಿವ (ಶುಭ ಅಥವಾ ಒಳ್ಳೆಯದು). ಹೀಗೆ ನೋಡಿದಾಗ ಶೂನ್ಯವನ್ನು ಸಂಪೂರ್ಣವಾಗಿ ಅಭಾವಾತ್ಮಕವಾಗಿ ಪರಿಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಬೌದ್ಧರ ಶೂನ್ಯ ಪರಿಕಲ್ಪನೆಗೂ ಲಿಂಗಾಯತರ ಶೂನ್ಯ ಪರಿಕಲ್ಪನೆಗೂ ಒಂದು ಪ್ರಬಲವಾದ ವ್ಯತ್ಯಾಸವಿದೆ. ಶರಣರು ಶೂನ್ಯವನ್ನು ಅರಿವು ಅಥವಾ ಚಿತ್ತು ಎಂದು ಕರೆದಿದ್ದಾರೆ. ಆ ಅರಿವು ಅಥವಾ ಚಿತ್ತಿನಿಂದಲೇ ಪ್ರಪಂಚದ ಎಲ್ಲಾ ಚರಾಚರ ವಸ್ತುಗಳು ವಿಕಾಸವಾಗಿವೆ ಎಂಬುದು ಶರಣರ ನಿಲುವಾದರೆ, ಶೂನ್ಯವಾದಿಗಳು ಜಗತ್ತು ಸತ್ಯ ಎಂದಾಗಲಿ, ಶೂನ್ಯವು ಜಗತ್ತಿನ ಮೂಲ ಎಂದಾಗಲಿ ಹೇಳುವುದಿಲ್ಲ. ಅಷ್ಟೇ ಏಕೆ, ಅದು ಚಿತ್ತು ಎಂದೂ ಹೇಳುವುದಿಲ್ಲ. ಶೂನ್ಯವು ಚತುಷ್ಕೋಟಿ ವಿನಿರ್ಮುಕ್ತ – ಎಂದರೆ, ಅದರ ಬಗ್ಗೆ ಅಸ್ತಿ, ನಾಸ್ತಿ, ಅಸ್ತಿ-ನಾಸ್ತಿ, ಅಸ್ತಿ ನಾಸ್ತಿ ಎರಡೂ ಅಲ್ಲ, ಎಂದು ಹೇಳಲು ಸಾಧ್ಯವಿಲ್ಲ.

ಈಗ ‘ಸಂಪಾದನೆ’ ಬಗ್ಗೆ ಒಂದೆರಡು ಮಾತು. ನಾಗಾರ್ಜುನನ ಶೂನ್ಯದ ಅಭಾವಾತ್ಮಕ ನಿರ್ವಚನದಲ್ಲಿ ಅಪ್ರತಿಹೀನಂ ಮತ್ತು ಅಸಂಪಾಪ್ತಂ ಎಂಬ ಮುಖ್ಯವಾದ ಎರಡು ಪದಗಳು ನಮ್ಮ ಗಮನ ಸೆಳೆಯುತ್ತವೆ. ‘ಅಪ್ರತಿಹೀನಂ’ ಎಂದರೆ ಶೂನ್ಯವು ವರ್ಜಿಸಬೇಕಾದ ಹೀನ ವಸ್ತುವಲ್ಲ, ಎಂದು. ಅದು ವಸ್ತುವೇ ಅಲ್ಲದ್ದರಿಂದ ಅದನ್ನು ವರ್ಜಿಸಲು ಸಾಧ್ಯವೇ ಇಲ್ಲ. ಇದಕ್ಕಿಂತ ಮುಖ್ಯವಾದ ಪದವೆಂದರೆ ‘ಅಸಂಪ್ರಾಪ್ತಂ’ ಎಂಬುದು. ಅದರ ಅರ್ಥ ಪಡೆಯಲಾರದುದು ಎಂದು. ಅದು ವಸ್ತು, ಹಣ, ಕೀರ್ತಿ, ಮುಂತಾದ ವಸ್ತುವಲ್ಲದ್ದರಿಂದ ಅದನ್ನು ಪಡೆಯಲು ಸಾಧ್ಯವಿಲ್ಲ. ಇದನ್ನು ಮನಗಂಡದ್ದರಿಂದಲೇ ನಾಗಾರ್ಜುನ ಅದನ್ನು ಅಸಂಪ್ರಾಪ್ತಂ ಎಂದು ಕರೆದುದು. ಬೌದ್ಧರ ಶೂನ್ಯ ಎಂದರೆ ನಿರ್ವಾಣವೆಂದೂ ಲಿಂಗಾಯತರ ಶೂನ್ಯವೆಂದರೆ ಲಿಂಗವಾಗುವುದು, ಬಯಲಾಗುವುದು (ನಿರ್ವಾಣ) ಎಂದೂ ಅರ್ಥವಿರುವುದರಿಂದ ಲಿಂಗಾಯತರ ಶೂನ್ಯವನ್ನೂ ಅಸಂಪ್ರಾಪ್ತಂ ಎಂದೇ ವರ್ಣಿಸಬೇಕು. ಈ ಅಪೇಕ್ಷೆ ಸಾಧುವಾದರೆ, ಶೂನ್ಯಸಂಪಾದನೆ ಎಂದರೆ ಲಿಂಗತ್ವ ಅಥವಾ ಶೂನ್ಯವನ್ನು ಗಳಿಸುವುದು ಎಂದು ಅರ್ಥೈಸಲು ಸಾಧ್ಯವಾಗುವುದಿಲ್ಲ. ವಸ್ತು, ಹಣ, ಕೀರ್ತಿ, ಯಶಸ್ಸನ್ನು ಸಂಪಾದಿಸಬಹುದು; ಆದರೆ ಇಂತಹ ಯಾವುದೇ ವಸ್ತುವಲ್ಲದ ಶೂನ್ಯವನ್ನು ಸಂಪಾದಿಸಲು ಸಾಧ್ಯವಿಲ್ಲ ಎಂಬುದೇ ಈ ತೀರ್ಮಾನದ ಅರ್ಥ.

ಬಂಧನದಲ್ಲಿರುವ ಕೆಲವರಿಗಾದರೂ ನಿರ್ವಾಣವನ್ನು ಗಳಿಸಲು ಸಾಧ್ಯವಿದೆ, ಆದುದರಿಂದ ಅದು ಅಸಂಪ್ರಾಪ್ತಂ ಹೇಗಾದೀತು? ಎಂದು ಕೆಲವರು ಪ್ರಶ್ನಿಸಬಹುದು. ಅದೇ ರೀತಿ, ಶೂನ್ಯವನ್ನು (ನಿರ್ವಾಣವನ್ನು) ಗಳಿಸುವ ವಿಧಾನವನ್ನು ಬೋಧಿಸುವ ಶೂನ್ಯ ಸಂಪಾದನೆ ಎಂಬ ಗ್ರಂಥವೇ ಇರುವಾಗ ಶೂನ್ಯ ಅಥವಾ ಲಿಂಗೈಕ್ಯವನ್ನು ಪಡೆಯಲು ಏಕೆ ಸಾಧ್ಯವಿಲ್ಲ? ಎಂದು ಕೇಳಬಹುದು. ಈ ಆಕ್ಷೇಪಣೆಗೆ ನಾವು ಈ ಕೆಳಗಿನ ಉತ್ತರಗಳನ್ನು ನೀಡಬಹುದು.

ಶೂನ್ಯಸಂಪಾದನೆ ಎಂದರೆ ಗಳಿಕೆ ಅಥವಾ ಸಂಪಾದನೆ ಅಲ್ಲ. ನಾವು ಹಣ, ವಸ್ತುಗಳನ್ನು, ಅಂದರೆ ನಾವಲ್ಲದ ವಸ್ತುಗಳನ್ನು ಗಳಿಸುತ್ತೇವೆ. ಆದರೆ ಶೂನ್ಯ ಅಥವಾ ಚಿದ್ಬಯಲಿನಲ್ಲಿ ನಾವು ಆಗಲೇ ಇದ್ದೇವೆ. ಅಥವಾ ನಮ್ಮ ಮೂಲ ಸ್ವರೂಪ ಈ ಚಿದ್ಬಯಲೇ ಆಗಿದೆ. ನಾವು ಮತ್ತೆ ಮೊದಲಿನಂತೆ ಬಯಲಾಗಬಹುದೇ ಹೊರತು, ನಾವಲ್ಲದ ಬಯಲಾಗಲು ಸಾಧ್ಯವೇ ಇಲ್ಲ. ನಾವಲ್ಲದ ಬಯಲು ಇಲ್ಲ. ಎಷ್ಟೋ ಸಾರಿ ನಾವು ಬಯಲನ್ನು ಪಡೆಯಬೇಕು ಎಂಬ ನಮ್ಮ ಬಯಕೆಯನ್ನು ಅಲ್ಲಮ ‘ಬಯಲ ಭ್ರಮೆ’ ಎನ್ನುತ್ತಾರೆ. ಹೀಗಿರುವಾಗ ಅದನ್ನು ಪಡೆಯುವ ಅಗತ್ಯವೇನಿದೆ? ಅಲ್ಲದೆ, ಚಿದ್ಬಯಲು ಅಥವಾ ಶೂನ್ಯವನ್ನು ಗಳಿಸಬಹುದು ಎಂಬುದಾದರೆ ಅಪರಿಮಿತ ಚಿದ್ಬಯಲನ್ನು ಪರಿಮಿತ ವ್ಯಕ್ತಿಯೊಬ್ಬ ಪಡೆಯಲು ಸಾಧ್ಯವೇ? ಎಂಬ ಪ್ರಶ್ನೆಯೂ ಇಲ್ಲಿ ಏಳುತ್ತದೆ. ಆದುದರಿಂದ ಲಿಂಗಾಯತರ ಶೂನ್ಯವೂ ಬೌದ್ಧರ ಶೂನ್ಯದಂತೆ ಅಸಂಪ್ರಾಪ್ತಂ. ಈ ವಾದ ಸಾಧುವಾದುದಾದರೆ ಶೂನ್ಯಸಂಪಾದನೆ ಎಂಬ ಶೀರ್ಷಿಕೆ ಅಸಂಬದ್ಧವೆನಿಸುವುದಿಲ್ಲವೆ?

ಸಂಪಾದನೆ ಎಂಬ ಪದಕ್ಕೆ ಗಳಿಕೆ ಎಂಬ ಸರ್ವಮಾನ್ಯವಾದ ಅರ್ಥ ಇರುವಾಗ ಅಸಂಪ್ರಾಪ್ತಂ ಎಂಬ ಅತಿವ್ಯಾಪ್ತಿ ದೋಷದ ಅರ್ಥವೇಕೆ? ಎಂಬ ಆಕ್ಷೇಪಣೆಯೂ ಶೂನ್ಯವಾದಿಗಳಿಗೆ ಅದು ಸಾಧುವಿರಬಹುದು, ಲಿಂಗಾಯತದಲ್ಲೂ ಅದು ಸಾಧು ಏಕೆ? ಎಂಬ ಆಕ್ಷೇಪಣೆಯೂ ಇಲ್ಲಿ ಪ್ರಸ್ತುತ.

ಹಾಗಾದರೆ ಶೂನ್ಯಸಂಪಾದನೆಕಾರ ತನ್ನ ಗ್ರಂಥಕ್ಕೆ ಶೂನ್ಯಸಂಪಾದನೆ ಎಂಬ ಹೆಸರನ್ನೇಕೆ ಇಟ್ಟ? ಆ ಶೀರ್ಷಿಕೆಯ ಔಚಿತ್ಯವೇನು? ಇದಕ್ಕೆ ಉತ್ತರ ಹೇಳಬೇಕೆಂದರೆ ನಾವು ಶೂನ್ಯಸಂಪಾದನೆಕಾರರಿಗಿಂತ ಹಿಂದಿನ ವಚನಕಾರರು ‘ಸಂಪಾದನೆ’ ಎಂಬ ಪದವನ್ನು ಯಾವ ಅರ್ಥದಲ್ಲಿ ಬಳಸಿದ್ದಾರೆಂಬುದನ್ನು ನೋಡಬೇಕು. ಜೊತೆಗೆ ಶೂನ್ಯಸಂಪಾದನೆಕಾರ ಸಂಪಾದನೆ ಎಂಬ ಪದವನ್ನು ಯಾವ ಅರ್ಥದಲ್ಲಿ ಬಳಸಿದ್ದಾನೆ ಎಂಬುದನ್ನು ಪರೀಕ್ಷಿಸಬೇಕಾಗುತ್ತದೆ.

‘ಎನ್ನ ಗುಣಾವಗುಣವ ಸಂಪಾದಿಸುವೆ ಏಕೆ?’ ಎಂದು ಶಿವನನ್ನು ಕೇಳುವ ಬಸವಣ್ಣನವರ (ವ.27) ಪ್ರಶ್ನೆಗೆ ‘ನನ್ನ ಮನಸ್ಸು ಅತ್ತಿಯ ಹಣ್ಣಿನಂತೆ ಕೊಳಕಾಗಿರುವುದು ನಿನಗೆ ಗೊತ್ತೇ ಇದೆ, ಮತ್ತೇಕೆ ನನ್ನನ್ನು ಪರೀಕ್ಷೆ ಮಾಡುತ್ತೀಯಾ?’ ಎಂಬ ಅರ್ಥವಿದೆ. ಅದೇ ರೀತಿ ‘ನೇಮವೆಂದೇನು, ನಿತ್ಯವೆಂದೇನು, ಆಗಮವೆಂದೇನು, ಆಚಾರವೆಂದೇನು, ಲಿಂಗಜಂಗಮದ ಕುಳವೊಂದೇ ಎಂದು ಸಂಪಾದಿಸಲರಿಯದೆ ನಾಲ್ಕು ಯುಗಂಗಳು ಇಂತೆ ಹೋದವು’ ಎಂಬ ಚೆನ್ನಬಸವಣ್ಣನವರ (3/402) ವಚನದಲ್ಲಿ ‘ಸಂಪಾದನೆ’ ಎಂಬ ಪದಕ್ಕೆ ‘ವಿಚಾರ ಮಾಡು, ಪರೀಕ್ಷಿಸು’ ಎಂಬ ಅರ್ಥವಿದೆ. ಹಾಗೆಯೇ ‘ಲಾಂಛನದೆಡೆಯಲ್ಲಿ ಹುಸಿಯ ಸಂಪಾದಿಸುವವ ಭಕ್ತನಲ್ಲ’ (3/703) ಎಂಬುದಕ್ಕೆ ಹುಸಿಯನ್ನು ಗಳಿಸಬೇಕು ಎಂಬರ್ಥವಿರದೆ, ಜಂಗಮರು ಹುಸಿ ನುಡಿಯುತ್ತಾರೆಯೆ ಎಂಬುದನ್ನು ಪರೀಕ್ಷಿಸುವವನು ಭಕ್ತನಲ್ಲ ಎಂಬ ಅರ್ಥವಿದೆ. ಗುರುವಿನಲ್ಲಿ ಗುಣ ಸಂಪಾದನೆ, ಲಿಂಗದಲ್ಲಿ ಸ್ಥಲ ಸಂಪಾದನೆ, ಜಂಗಮದಲ್ಲಿ ಜಾತಿ ಸಂಪಾದನೆ, ಪ್ರಸಾದದಲ್ಲಿ ರುಚಿ ಸಂಪಾದನೆ (3/1219) ಮಾಡುವವನು ಗುರು ಸಂಬಂಧಿಯಲ್ಲ. ಪರವಾದಿ ಬಿಜ್ಜಳನು ಒರೆಗಲ್ಲ ಹಿಡಿದು ಬಸವಣ್ಣನವರ ಶಿವಭಕ್ತಿ ಸಂಪಾದನೆ ಮಾಡಿದನು ಎಂದರೆ ಶಿವಭಕ್ತಿಯನ್ನು ಪರೀಕ್ಷಿಸಿದನು ಎಂಬ ಅರ್ಥವಿದೆ (3/1470). ತೋಂಟದ ಸಿದ್ಧಲಿಂಗ ಯತಿಗಳು (11/9) “ಇಂತು ಶೈವ ವೀರಶೈವದ ಆದ್ಯಂತವನು ಸಂಪಾದಿಸಿ, ಶೈವ ಭಾಗೆಯನು ನಿವೃತ್ತಿ ಮಾಡಿ…” ಎನ್ನುವಾಗ ‘ಸಂಪಾದಿಸಿ’ ಎಂದರೆ ‘ಪರೀಕ್ಷಿಸಿ’ ಎಂದರ್ಥವಿದೆ. ಹಾಗೆಯೇ ಇತರ ಕೆಲವು ವಚನಕಾರರೂ ‘ಸಂಪಾದನೆ’ ಎಂಬ ಪದವನ್ನು ‘ಪರೀಕ್ಷೆ ಮಾಡುವುದು’ ಎಂಬ ಅರ್ಥದಲ್ಲಿ ಬಳಸಿದ್ದಾರೆ. ಉದಾಹರಣೆಗೆ: 5/191, 6/409, 6/615, 6/1584, 7/57, 7/495, 8/281. ಇತ್ಯಾದಿ. ವಚನಕಾರರು ಸಂಪಾದನೆ ಎಂಬ ಪದವನ್ನು ಕೆಲವು ಸಂದರ್ಭಗಳಲ್ಲಿ ಗಳಿಸುವುದು ಎಂಬರ್ಥದಲ್ಲಿ ಬಳಸಿರುವುದು ನಿಜ. ಉದಾಹರಣೆಗೆ ‘ಶೀಲಸಂಪಾದನೆ’ (12/308, 14/88, 14/740, ಇತ್ಯಾದಿ). ಸಂಪಾದನೆ ಎಂಬ ಪದ ಮತ್ತೊಂದು ಅರ್ಥದಲ್ಲಿ ಬಳಕೆಯಾಗಿರುವುದು ನಮ್ಮ ಗಮನವನ್ನು ಸೆಳೆಯುತ್ತದೆ. ಉದಾಹರಣೆಗೆ, “ಮಹಾಸಂಪಾದನೆಯಲ್ಲಿದ್ದ ಬಸವಣ್ಣನವರಿಗೆ ನಮಸ್ಕರಿಸುತ್ತೇನೆ” ಎನ್ನುತ್ತಾರೆ, ಮಡಿವಾಳ ಮಾಚಯ್ಯ (ಶೂಸಂ. 8/741).

ಪರೀಕ್ಷೆ ಎಂಬ ಅರ್ಥದಲ್ಲಿ ಬಳಸಿದ ಸಂಪಾದನೆಗೂ ಶೂನ್ಯಸಂಪಾದನೆಗೂ ಏನು ಸಂಬಂಧ ಎಂಬುದು ನಮ್ಮ ಮುಂದಿನ ಪ್ರಶ್ನೆ. ಪ್ರಥಮೋಪದೇಶದ ಮೂರನೆಯ ಕಂದದಲ್ಲಿ ಗೂಳೂರು ಸಿದ್ಧವೀರಣ್ಣ ತಾನು ಬೋಳ ಬಸವೇಶ ದೇಶಿಕನ ಕೃಪೆಯಿಂದ ಅಲ್ಲಮಪ್ರಭುವಿನ ಪರಮಾನುಭವ ಬೋಧೆಯನ್ನು ತಿಳಿಸುವುದಾಗಿ ಹೇಳಿಕೊಳ್ಳುತ್ತಾನೆ. ತಾನು ಹೇಳುತ್ತಿರುವುದು ಇಂದ್ರಿಯ ಪ್ರತ್ಯಕ್ಷದ ಅಥವಾ ಲೌಕಿಕದ ಬೋಧೆ ಅಲ್ಲ, ಪರಮಾರ್ಥ ಅಥವಾ ಪರಮಾನುಭವ ಬೋಧೆ ಎಂಬುದನ್ನು ನಾವು ಇಲ್ಲಿ ಗಮನಿಸಬೇಕು. ಇದನ್ನೇ ಮುಂದಿನ ಗದ್ಯದಲ್ಲಿ (ಪು.2) ‘ಅಲ್ಲಮಪ್ರಭುದೇವರು ಸಮಸ್ತ ಮಹಾಗಣಂಗಳಿಗೆ ದಿವ್ಯಜ್ಞಾನ ಪ್ರಸಂಗಮಮ್’ ಬೋಧಿಸಿದುದನ್ನು ಪ್ರಸ್ತಾಪಿಸುತ್ತಾನೆ. ಅಂದರೆ ‘ಪರಮಾನುಭವಬೋಧೆ’ ಮತ್ತು ‘ದಿವ್ಯಜ್ಞಾನ’ ಪರ್ಯಾಯ ಪದಗಳು ಎಂಬುದು ಸ್ಪಷ್ಟ. ಮತ್ತೆ (ಪು. 4) ‘ಅಸಂಖ್ಯಾತ ಮಹಾಗಣಂಗಳೊಡನೆ ಮಹಾನುಭಾವಪ್ರಸಂಗಮಂ ಮಾಡಿದ ಶೂನ್ಯಸಂವಾದದ ಸದ್ಗೋಷ್ಠಿ ಕಥಾಪ್ರಸಂಗವನು ವಚನಗಳನ್ನು ಉತ್ತರ-ಪ್ರತ್ಯುತ್ತರ ಸಂಬಂಧವಾಗಿ ಸೇರಿಸಿ’ ಸಮರ್ಪಿಸುವುದಾಗಿ ಸಿದ್ಧವೀರಣ್ಣ ಹೇಳಿಕೊಳ್ಳುತ್ತಾನೆ. ಅಂದರೆ, ಇಲ್ಲಿ ಸಿದ್ಧವೀರಣ್ಣ ‘ಪರಮಾನುಭವ ಬೋಧೆ’ ಗೆ ‘ಶೂನ್ಯಸಂವಾದ’ ಎಂಬ ಪದವನ್ನು ಪರ್ಯಾಯವಾಗಿ ಬಳಸುತ್ತಾನೆ. ಪರಮಾನುಭವಬೋಧೆ ಮತ್ತು ದಿವ್ಯಜ್ಞಾನವೆಂದರೆ ಶೂನ್ಯದ ಬಗೆಗಿನ ಜ್ಞಾನ. ‘ಪರಮಾನುಭವ ಬೋಧೆ’, ‘ಅನುಭಾವ ಸದ್ಗೋಷ್ಠಿ’ ಎಂಬ ಪದಗಳನ್ನು ಸಿದ್ಧವೀರಣ್ಣ ಮರುಳಶಂಕರ ದೇವರ ಸಂಪಾದನೆಯ ಮೊದಲನೆಯ ಪ್ಯಾರಾದಲ್ಲಿಯೂ, ಚನ್ನಬಸವಣ್ಣನ ಸಂಪಾದನೆಯ ಮೊದಲನೆಯ ಪ್ಯಾರಾದಲ್ಲಿಯೂ, ಮಡಿವಾಳಯ್ಯನ ಸಂಪಾದನೆಯ ಮೊದಲನೆಯ ಪ್ಯಾರಾದಲ್ಲಿಯೂ, ಸಿದ್ದರಾಮೇಶ್ವರ ಗುರುಕರಣದ ಮೊದಲನೆಯ ಪ್ಯಾರಾದಲ್ಲಿಯೂ ಮತ್ತು ಇತರ ಕಡೆಗಳಲ್ಲಿಯೂ ಬಳಸಿರುವುದು ಸ್ಪಷ್ಟವಿದೆ.

ಶೂನ್ಯಸಂಪಾದನೆ ಸಂವಾದರೂಪದ ಗ್ರಂಥ. ಅಲ್ಲಮಪ್ರಭು ಅದರ ಕೇಂದ್ರ ವ್ಯಕ್ತಿ. ಅಲ್ಲಮ ಇತರ ಶರಣರೊಡನೆ ಸಂವಾದ ಮಾಡುವುದು ಅವರ ಆಧ್ಯಾತ್ಮಿಕ ನಿಲವು ಮತ್ತು ಎತ್ತರಗಳನ್ನು ಪರೀಕ್ಷಿಸುವುದಕ್ಕೆ ಎಂಬುದನ್ನು ಗಮನಿಸಿದರೆ ‘ಸಂಪಾದನೆ’, ‘ಪರೀಕ್ಷಣೆ’ ಸಾಪೇಕ್ಷ ಪದಗಳಾಗುತ್ತವೆ. ಆಗ ‘ಶೂನ್ಯಸಂಪಾದನೆ’ ಎಂದರೆ ಶೂನ್ಯದ ಬಗೆಗಿನ ಶರಣರ ಅಭಿಪ್ರಾಯಗಳನ್ನೂ ಅವುಗಳಲ್ಲಿರುವ ಗುಣದೋಷಗಳನ್ನೂ ಸಂವಾದ ಮಾಡಿ ಪರೀಕ್ಷಿಸುವುದು ಎಂದಾಗುತ್ತದೆ.

ಇಲ್ಲಿ ಅನುಭಾವ ಎಂಬ ಪದದ ಅರ್ಥವನ್ನೂ ನಾವು ಗಮನಿಸಬೇಕು. ವಚನಕಾರರು ಆ ಪದವನ್ನು ಎರಡು ಅರ್ಥಗಳಲ್ಲಿ ಬಳಸಿದ್ದಾರೆ. ‘ಅತೀಂದ್ರಿಯ ಮತ್ತು ಅತಿಬೌದ್ಧಿಕ ಅನುಭವ’ ಎಂಬುದು ಒಂದು ಅರ್ಥವಾದರೆ, ‘ಆ ಅನುಭವದ ಬಗ್ಗೆ ಸಾಧಕರು ಚರ್ಚಿಸುವುದು’ ಎಂಬುದು ಮತ್ತೊಂದು ಅರ್ಥ. ಈ ಎರಡನೆಯ ಅರ್ಥವನ್ನು ‘ಅನುಭಾವ ಸದ್ಗೋಷ್ಠಿ’ ಎಂಬ ಪದ ಸಮರ್ಪಕವಾಗಿ ಸೂಚಿಸುತ್ತದೆ. ಅನುಭಾವಸದ್ಗೋಷ್ಠಿ ಎಂಬ ಪದ ಶೂನ್ಯಸಂಪಾದನೆಯಲ್ಲಿ ಬಹಳಷ್ಟು ಸಾರಿ ಬಳಕೆಯಾಗಿದೆ. ಬಸವಣ್ಣನವರು ಮಹಾಸಂಪಾದನೆಯಲ್ಲಿದ್ದರು ಎನ್ನುವ ಮಡಿವಾಳ ಮಾಚಯ್ಯನವರ ಮಾತಿಗೆ (ಶೂ.ಸಂ. 8/741) ಅವರು ಶೂನ್ಯದ ಬಗೆಗಿನ ಸಂಪಾದನೆ ಮಾಡುವ ಅನುಭಾವಸದ್ಗೋಷ್ಠಿಯಲ್ಲಿದ್ದರು ಎಂಬ ಅರ್ಥವಿದೆ.

ಪ್ರಥಮೋಪದೇಶದಲ್ಲಿ ಗೊಗ್ಗಯ್ಯನ ಪ್ರಸಂಗವಿದೆ. ಅದನ್ನು ಗೊಗ್ಗಯ್ಯನ ಸಂಪಾದನೆ ಎಂದರೂ ತಪ್ಪಿಲ್ಲ. ಅಲ್ಲಿ, ಗೊಗ್ಗಯ್ಯ ತಾನು ಒಂದು ತೋಟವ ಮಾಡುತ್ತಿರುವುದಾಗಿ ಹೇಳಿದಾಗ ಅಲ್ಲಮರು ಅದನ್ನು ವಿಡಂಬಿಸಿ ತನುವನ್ನೇ ತೋಟ ಮಾಡಿ, ಆ ಮೂಲಕ ಪಾರಮಾರ್ಥಿಕ ಫಲಗಳನ್ನು ಪಡೆಯಬೇಕು ಎಂದು ಬೋಧಿಸುತ್ತಾರೆ. ಈ ಅಧ್ಯಾಯದಲ್ಲಿ ಅಲ್ಲಮರು ಅನಿಮಿಷನಿಂದ ಲಿಂಗವನ್ನು ಪಡೆದುದು, ಷಟ್ಸ್ಥಲ ವಿವೇಚನೆ, ಮುಂತಾದ ವಿಷಯಗಳಿರುವುದರಿಂದ ಅದನ್ನು ಸಂಪಾದನೆ ಎಂದು ಕರೆದಿಲ್ಲ. ಆದರೆ ಎರಡನೆಯ ಅಧ್ಯಾಯವನ್ನು ಮುಕ್ತಾಯಕ್ಕಗಳ ಸಂಪಾದನೆ ಎಂದು ಕರೆದಿರುವುದು ಸೂಕ್ತವೇ ಆಗಿದೆ. ಅದರಲ್ಲಿ ಗುರು, ಅರಿವು, ಮುಕ್ತನ ಮನೋಸ್ಥಿತಿ, ಸಾವು, ಅಂಗಲಿಂಗಗಳ ಸಂಬಂಧದ ಬಗೆಗಿನ ಮುಕ್ತಾಯಕ್ಕಗಳ ಅಭಿಪ್ರಾಯಗಳನ್ನು ತಿಳಿದುಕೊಂಡು, ಅವುಗಳನ್ನು ತಿದ್ದುತ್ತಾರೆ. ಕೊನೆಯಲ್ಲಿ ನಿರವಯ ಸಮಾಧಿಯನ್ನು ತಿಳಿಸಿಕೊಡುತ್ತಾರೆ.

ಅದೇ ರೀತಿ ಸಿದ್ಧರಾಮಯ್ಯನ ಸಂಪಾದನೆಯಲ್ಲಿ ಅಲ್ಲಮರು ಆಧ್ಯಾತ್ಮಿಕ ಜೀವನದ ಗುರಿ, ಸಾಧನಾಮಾರ್ಗ, ಪರಮಾತ್ಮ, ಮೋಕ್ಷ, ಮುಕ್ತನ ಸ್ಥಿತಿ, ಮುಂತಾದ ವಿಷಯಗಳ ಬಗೆಗೆ ಸಿದ್ಧರಾಮರೊಡನೆ ಚರ್ಚಿಸಿ ಅವರ ಅಭಿಪ್ರಾಯಗಳನ್ನು ತಿಳಿದುಕೊಂಡು, ಅವುಗಳ ಬಗೆಗೆ ಶರಣರಿಂದ, ಅದರಲ್ಲೂ ಮುಖ್ಯವಾಗಿ ಬಸವಣ್ಣನವರಿಂದ, ಇನ್ನೂ ಹೆಚ್ಚು ಕಲಿಯಲು ಕಲ್ಯಾಣಕ್ಕೆ ಕರೆದುಕೊಂಡು ಬರುತ್ತಾರೆ.

ಬಸವೇಶ ಚನ್ನಬಸವೇಶಂಗನುಗ್ರಹವ ಮಾಡಿದ ಸಂಪಾದನೆಯಲ್ಲೂ ಶೂನ್ಯದ ಬಗೆಗೆ ಸಂವಾದನೆ ಇದೆ. ವಾಸ್ತವವಾಗಿ ಅನುಗ್ರಹ ಮಾಡಿದ ಬಸವಣ್ಣನವರಿಗೆ ಅಂಗಲಿಂಗಗಳ ಸಂಬಂಧ ಕುರಿತು ಚನ್ನಬಸವಣ್ಣ ಸ್ಪಷ್ಟವಾಗಿ ತಿಳಿಸಿದರು. ಮಡಿವಾಳಯ್ಯ, ಆಯ್ದಕ್ಕಿ ಮಾರಯ್ಯ, ಮೋಳಿಗೆ ಮಾರಯ್ಯ, ನುಲಿಯ ಚಂದಯ್ಯ, ಘಟ್ಟಿವಾಳಯ್ಯ, ಮಹಾದೇವಿಯಕ್ಕ, ಗೋರಕ್ಷರ ಸಂಪಾದನೆಗಳಲ್ಲೂ ಪ್ರಭು ಶೂನ್ಯದ ಬಗೆಗೆ ಚರ್ಚಿಸುತ್ತಾರೆ. ಹೀಗೆ ‘ಶೂನ್ಯಸಂಪಾದನೆ’ ಎಂದರೆ ಶೂನ್ಯವನ್ನು ಗಳಿಸುವುದು ಎಂದಾಗದೆ ಶೂನ್ಯದ ಬಗೆಗೆ ಚರ್ಚೆ (ಸಂವಾದನೆ) ಮಾಡುವುದು ಎಂದಾಗುತ್ತದೆ.

ಶೂನ್ಯಸಂಪಾದನೆ ಗ್ರಂಥವು ಶೂನ್ಯವನ್ನು ಗಳಿಸಿಕೊಳ್ಳುವ ವಿಧಾನವನ್ನು ತಿಳಿಸುತ್ತದೆ ಎಂಬುದನ್ನು ಈ ಅರ್ಥ ವಿವರಣೆ ನಿರಾಕರಿಸುವುದಿಲ್ಲ. ಆದರೆ ಆ ಗ್ರಂಥದಲ್ಲಿನ ಸಂಪಾದನೆ ಎಂಬ ಪದಕ್ಕೆ ಗಳಿಸಿಕೊಳ್ಳುವುದು ಎಂಬ ಅರ್ಥವಿರದೆ, ಶೂನ್ಯದ ಬಗೆಗೆ ಸಂವಾದಿಸುವುದು ಮತ್ತು ಪರೀಕ್ಷಿಸುವುದು ಎಂಬ ಅರ್ಥವಿದೆ ಎನ್ನುವುದು ಈ ವಾದದ ತಿರುಳು.
ಮೇಲೆ ಕಂಸಗಳಲ್ಲಿ ಉಧೃತವಾಗಿರುವ ಸಂಖ್ಯೆಗಳಲ್ಲಿ ಮೊದಲನೆಯದು ಸಮಗ್ರ ವಚನಮಹಾಸಂಪುಟದ (2016) ಸಂಖ್ಯೆಗೂ, ಎರಡನೆಯದು ಆ ಸಂಪುಟದಲ್ಲಿರುವ ವಚನದ ಅನುಕ್ರಮ ಸಂಖ್ಯೆಗೂ ಅನ್ವಯಿಸುತ್ತವೆ.

Previous post ಅನಾದಿ ಕಾಲದ ಗಂಟು…
ಅನಾದಿ ಕಾಲದ ಗಂಟು…
Next post ಸಾವಿನ ಸುತ್ತ…
ಸಾವಿನ ಸುತ್ತ…

Related Posts

ಶರಣರ ಚರಿತ್ರೆಯ ಮೇಲೆ ಹೊಸಬೆಳಕು
Share:
Articles

ಶರಣರ ಚರಿತ್ರೆಯ ಮೇಲೆ ಹೊಸಬೆಳಕು

April 29, 2018 ಡಾ. ಶಶಿಕಾಂತ ಪಟ್ಟಣ
ಕಲ್ಯಾಣದಲ್ಲಿ ಕಂಬದ ಮಾರಿ ತಂದೆ ಎಂದು ಪ್ರಸಿದ್ಧಗೊಂಡ ವಚನಕಾರ ಕದಂಬರ ರಾಜ್ಯದ ಇಂದಿನ ಪೊಂಡ ತಾಲೂಕಿನ ಕಾವಳೆ ಪುಟ್ಟ ಹಳ್ಳಿಯ ಮೀನುಗಾರ. ಬಸವಾದಿ ಶರಣರ ಅನುಭಾವ ಕ್ರಾಂತಿಗೆ...
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
Share:
Articles

ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ

May 1, 2019 ಪದ್ಮಾಲಯ ನಾಗರಾಜ್
ಇಂದಿಗೂ ನಮ್ಮ ದೇಶದಲ್ಲಿ ಪ್ರಚಲಿತವಿರುವ ಸಾಮಾಜಿಕತೆ, ಆರ್ಥಿಕತೆ ಹಾಗೂ ರಾಜಕೀಯ ವಿದ್ಯಮಾನಗಳನ್ನು ಮತನಿಷ್ಠ (ಅಥವಾ ಧರ್ಮನಿಷ್ಠ) ಮೂಲಭೂತವಾದದ ಸಾಂಸ್ಕೃತಿಕ ಧೋರಣೆಗಳೇ...

Comments 6

  1. ಸತ್ಯಪ್ರಕಾಶ್ ಬೇಲೂರು
    Jan 16, 2023 Reply

    ಶೂನ್ಯ ಸಂಪಾದನೆ ಗ್ರಂಥದ ಕುರಿತಾಗಿ ತಿಳಿವಳಿಕೆ ನೀಡುವ ಲೇಖನ. ಆದರೆ ಅನುಭಾವದ ನೆಲೆಯುಳ್ಳವರಿಗೆ ಮಾತ್ರ ತಿಳಿಯುವ ಶಬ್ದ ಶೂನ್ಯ ಮತ್ತು ಬಯಲು… ಅದನ್ನು ಯಾವ ತತ್ವಜ್ಞಾನದ ಲಾಜಿಕ್ ವಿವರಿಸಲಾರದು…

  2. ಶಿವರಾಜು ರಾಣೆಬೆನ್ನೂರು
    Jan 16, 2023 Reply

    ಸಂಪಾದನೆ ಎನ್ನುವ ಶಬ್ದ ವಚನಗಳಲ್ಲಿ ನಾನಾ ಅರ್ಥಗಳಲ್ಲಿ ಬಳಕೆಯಾಗಿರುವುದನ್ನು ಓದಿ ಬಹಳ ಆಶ್ಚರ್ಯವೆನಿಸಿತು. ಶೂನ್ಯ ಸಂಪಾದನೆ ಎನ್ನುವುದು ಎಲ್ಲರಲ್ಲೂ ಕುತೂಹಲ ಹುಟ್ಟಿಸುವ ಪದನಾಮ. ನೀವು ಹೇಳಿದ ಅರ್ಥವ್ಯಾಖ್ಯಾನಗಳ ಹಿನ್ನೆಲೆಯಲ್ಲಿ ಶೂನ್ಯ ಸಂಪಾದನೆ ಎನ್ನುವುದನ್ನು ಮತ್ತಷ್ಟು ವಿವರಿಸಬೇಕಿತ್ತು ಸರ್, ನಿಜಕ್ಕೂ ಕುತೂಹಲಕರವಾದ ವಿವರಣೆ.

  3. Gurubasappa Balligave
    Jan 25, 2023 Reply

    ಬುದ್ಧಧರ್ಮೀಯನಾದ ನಾಗಾರ್ಜುನ ಶೂನ್ಯಕ್ಕೆ ಕೊಡುವ ಅರ್ಥವ್ಯಾಖ್ಯಾನವೂ ಶರಣರ ಶೂನ್ಯಕ್ಕೆ ಇರುವ ಅರ್ಥವೂ ಬೇರೆಬೇರೆಯೇ ಅಥವಾ ಒಂದೆಯೇ? ಇಬ್ಬರೂ ಅನುಭಾವಿಗಳೇ ಆದ್ದರಿಂದ ಅವರು ಕಂಡ ಸತ್ಯ ಶೂನ್ಯ ಸತ್ಯ ಒಂದೇ ಇರಬೇಕಲ್ಲವೇ ಎಂಬುದು ನನ್ನ ಸಂದೇಹ.

  4. ಗಂಗಾಧರ ಸ್ವಾಮಿ
    Jan 30, 2023 Reply

    ಶೂನ್ಯ ಸಂಪಾದನೆ ಮತ್ತು ಬಯಲು ಎರಡು ಸಮಾನ ಪದಗಳೇ ಅಥವಾ ಬೇರೆ ಬೇರೆ ಶಬ್ದಗಳೇ…

  5. ರಮೇಶ ಆಲಮಟ್ಟಿ
    Jan 30, 2023 Reply

    ಶೂನ್ಯದ ಬಗೆಗೆ ಸಂವಾದಿಸುವುದು ಮತ್ತು ಪರೀಕ್ಷಿಸುವುದು… ಈ ಮಾತುಗಳ ಅರ್ಥ ತಿಳಿಸಿ ಕೊಡಿ

  6. Sathish Patil
    Jan 31, 2023 Reply

    ಬೌದ್ಧರ ಶೂನ್ಯ ಪರಿಕಲ್ಪನೆಗೂ ಲಿಂಗಾಯತರ ಶೂನ್ಯ ಪರಿಕಲ್ಪನೆಗೂ ಬಹಳ ಸಾಮ್ಯತೆ ಇದೆ ಎಂದು ತಿಳಿದಿದ್ದೆ, ನೀವು ಸೂಚಿಸಿದ ಪ್ರಬಲ ವ್ಯತ್ಯಾಸ ನನಗೆ ಗೋಚರಿಸಿರಲಿಲ್ಲ. ಶೂನ್ಯದಿಂದಲೇ ಎಲ್ಲವೂ ಸೃಷ್ಟಿಯಾದದ್ದು ಎಂದು ಲಿಂಗಾಯತ ಧರ್ಮದಲ್ಲಿ ಎಲ್ಲಿ ಹೇಳಿದ್ದಾರೆ?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ತೋರಲಿಲ್ಲದ ಸಿಂಹಾಸನದ ಮೇಲೆ…
ತೋರಲಿಲ್ಲದ ಸಿಂಹಾಸನದ ಮೇಲೆ…
December 22, 2019
ದೂಷಕರ ಧೂಮಕೇತು
ದೂಷಕರ ಧೂಮಕೇತು
August 8, 2021
ಬಯಲಾದ ಬಸವಯೋಗಿಗಳು
ಬಯಲಾದ ಬಸವಯೋಗಿಗಳು
April 3, 2019
ಈ ಕ್ಷಣದ ಸತ್ಯ
ಈ ಕ್ಷಣದ ಸತ್ಯ
March 12, 2022
ವೀರ
ವೀರ
April 29, 2018
ಶರಣರು ಕಂಡ ಆಹಾರ ಪದ್ಧತಿ
ಶರಣರು ಕಂಡ ಆಹಾರ ಪದ್ಧತಿ
April 29, 2018
ಲಿಂಗಾಯತರ ಅವೈದಿಕ ನಂಬಿಕೆಗಳು
ಲಿಂಗಾಯತರ ಅವೈದಿಕ ನಂಬಿಕೆಗಳು
April 29, 2018
ಭಕ್ತನೆಂತಪ್ಪೆ?
ಭಕ್ತನೆಂತಪ್ಪೆ?
April 29, 2018
ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ
ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ
December 6, 2020
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
September 7, 2021
Copyright © 2023 Bayalu