Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಶರಣ ಕುಂಬಾರಣ್ಣನ ಸರಸ ದಾಂಪತ್ಯ
Share:
Articles May 1, 2019 ಡಾ. ಕೆ. ಎಸ್. ಮಲ್ಲೇಶ್

ಶರಣ ಕುಂಬಾರಣ್ಣನ ಸರಸ ದಾಂಪತ್ಯ

ಮೂಡಣ ದಿಕ್ಕಲ್ಲಿ ಹೊಂಬಣ್ಣದೋಕುಳಿ. ರವಿ ಮೆಲ್ಲಗೆ ಮೇಲೇರಿದ್ದ. ಹಕ್ಕಿಗಳಿಂಚರ, ಕಾಗೆಯ ಕಾ ಕಾ, ಕೋಳಿಯ ಕೊಕ್ಕೋಕೋ. ಜಗವನೆಬ್ಬಿಸಲು, ಏರುದನಿಯ ಕಾಗುಣಿತ. ಕುಂಬಾರಣ್ಣನೂ ನಿದ್ದೆ ತಿಳಿದೆದ್ದ. ಹೊರಗೆ ಬಂದು ಕಣ್ಣಾಡಿಸಿದ. ಮಡಕೆ ಕುಡಿಕೆಗಳು ಹೊತ್ತಾರೆಯ ಬೆಳಕಿನಲ್ಲಿ ಲಕಲಕ ಹೊಳೆಯುತ್ತಿದ್ದವು. ಅವಕ್ಕೂ ಮಣ್ಣಿಗೂ ಸೂರ್ಯನಿಗೂ ನಮಿಸಿದ. “ಜಳಕ ಮಾಡೋ ಭಾರ್ಗವ” ಮಡದಿಯ ಕರೆಗೆ ಸೋಜಿಗಗೊಂಡ. “ನಿನಗ ನೀನೆ ನಮಸ್ಕಾರ ಮಾಡ್ಕೋತಿ?” ಒಳಸುಂಟಿಯಂತೆ ಮತ್ತೊಂದು ಒಗಟಿನ ಮಾತು. ಕುಂಬಾರಣ್ಣನಿಗೆ ಅರ್ಥವಾಗಲಿಲ್ಲ. ನೋಟದಲ್ಲೇ ಪ್ರಶ್ನೆ ಬೀರಿದ. ತುಟಿಯಂಚಿನಲ್ಲಿ ನಗು ಬೀರುತ್ತ ಮಡದಿ ಇಂತೆಂದಳು: “ಮೊನ್ನಿ ಶಾನುಭೋಗ ಅಯ್ಯನೋರು ಈ ಕಡೆ ಹಾಸಿ ಹೊಂಟಿದ್ರ. ‘ಭಾರ್ಗವ ಪಟ್ಟಣಕ್ ಹೋಗ್ಯಾನೇನಮ್ಮಾ?’ ಅಂತ ಕೇಳಿದ್ರು. ಹೂಂ ಅಂತ ಹೇಳಿ, ‘ಅಯ್ಯನೋರ, ಐರಾಣಿ ಒಡೆಯನಿಗೆ ಹಂಗೂ ಅಂತಾರೇನು?’ ಅಂದೆ”

“ಹೂಂ, ನಿನ್ನ ಒಡೆಯ ಅಂದ್ರೆ ಯಾರು ಅನ್ಕೊಂಡಿದ್ದೀ? ಮಡಕೆ ಸೃಷ್ಟಿ ಮಾಡೋ ಬ್ರಹ್ಮ ಅವನು, ಆ ಘಟಬ್ರಹ್ಮನಿಗೆ ಮೃತ್ಕರ, ಕುಂಭಕಾರಕ, ಘಟಕಾರ, ಚಕ್ರಜೀವಕ, ಚಾಕ್ರಿಕ, ಘಟಿಂಧಮ, ಕುಲಾಲ, ಚಕ್ರಿನ್, ಸೂಕರ, ಕೌಲಾಲ, ಕಾಕೋಲ, ದಂಡಧರ, ಪವನ, ಭ್ರಮರ, ಹೀಗೆ ಒಂದೇ ಎರಡೆ? ಅದೆಷ್ಟೋ ಹೆಸರಿವೆ. ಭಾರ್ಗವ ಅಂದ್ರೆ ಅವನು ಅವನ ಪಾಳಿ, ಅವನ ಪಾಡು, ಯಾರ ಹಂಗೂ ಇಟಕೊಳದೆ ತನ್ನ ಕೆಲಸ ಮಾಡೊವ್ನು ಅಂತ್ಲೂ ಅರ್ಥ,” ಅಂದ್ರು. “ಅದಕ್ಕೆ ನಾ ಹಾಗಂದದ್ದು.”

“ರಾತ್ರಿ ಊಟ ಆದ ಬಳಿಕ ತಾಂಬೂಲ ಕೊಡ್ತೀಯಲ್ಲ ಆಗ ಬಿಡಿಸಿ ಹೇಳಿ ನನಗ ಅರ್ಥ ಮಾಡ್ಸೋವಂತಿ, ಈಗ ಮಣ್ಣ ಕಲಸೋ ಕೆಲಸ ಕರೀತೈತಿ” ಅಂತ ಒಳಹೊರಟ.

ನಿತ್ಯಕರ್ಮ ಮುಗಿಸಿ ಪೂಜೆಗೆ ಕುಳಿತ ಕುಂಬಾರಣ್ಣ. ಮನಸ್ಸಿನಲ್ಲಿ ಗುರು ಬಸವಣ್ಣನನ್ನು ಸ್ಮರಿಸಿ ಇಷ್ಟಲಿಂಗಕ್ಕೆ ಪೂಜೆ ಸಲ್ಲಿಸಿದ. ಹೊರಗೆ ಬಂದು ಮಣ್ಣು ಮಡಿಕೆ ಕುಡಿಕೆ ಕೋಲು ತಿಗರಿ ಗುದ್ದಲಿಗಳಿಗೂ ನಮಿಸಿದ. ಒಳಬಂದು ಕುಳಿತವನಿಗೆ ಗಡಗೀಲಿ ನೀರು, ಗಂಗಾಳದಲ್ಲಿ ರೊಟ್ಟಿ, ಎಣ್ಣೆಗಾಯಿ, ತುಪ್ಪ, ಹಾಲು, ಅನ್ನ, ಮೊಸರು ತಂದಿಟ್ಟು ಬಡಿಸುತ್ತ, “ಮಣ್ಣು ಹದಮಾಡೋದು ಅಗದಿ ಶ್ರಮದ ಕೆಲಸ. ಹೊಟ್ಟೀ ತುಂಬ ಉಂಬೋ ಗೆಳೆಯಾ”ಅಂತ ತುಸು ಹೆಚ್ಚಾಗಿ ಬಡಿಸಿದಳು ಮಡದಿ. ಸರಸಗಾತಿ ಆಕೆ. “ನಿನಗೋ ಸದಾ ನಿನ್ನ ಮಣ್ಣು ಮಡಿಕೆ ಮೇಲೇ ಗಮನ. ನಾ ನಿನಗೆ ಹೊಟ್ಟೀ ತುಂಬಿಸಿದಂಗ, ಹೇ ಕುಡಿಕೀ ಅಪ್ಪ, ನೀನ್ ಯಾವಾಗ್ಲೋ…?” ಎಂದು ಅರ್ಧಕ್ಕೆ ನಿಲ್ಲಿಸಿ ನಾಲಗೆಯನ್ನು ಹಲ್ಲಿನಿಂದ ತುಸು ಕಚ್ಚಿದಳು.

ಊರೊಳಗೆ ಮನೆಯೊಂದರ ಅಂಗಳದಲ್ಲಿ ಅಜ್ಜಿ ಮೊಮ್ಮಕ್ಕಳಿಗೆ ಪದ ಹೇಳುತ್ತಿತ್ತು.

ಮುಂಜಾನೆದ್ದು ಕುಂಬಾರಣ್ಣ ಹಾಲು ಬಾನುಂಡಾನ
ಹಾರ್ಯಾರಿ ಮಣ್ಣ ತುಳಿದಾನ, ಹಾರ್ಯಾರಿ ಮಣ್ಣ ತುಳಿಯುತ್ತ ಮಾಡ್ಯಾನ
ನಾರೇರು ಹೊರುವಂತ ಐರಾಣಿ

“ನೀ ಮಾಡಿದ ಹರವಿ ಕೊಳ್ಳಾಕ ಹ್ಯಾಂಗ್ ಮುಗಿ ಬೀಳ್ತಾರ ನಂ ಹೆಣ್ಮಂದಿ. ಅಂತಾದ್ದೇನೈತಿ ನೀನು ಮಾಡುದ್ರಾಗ? “

“ಅದರಾಗ ನಾನ್ ಮಾಡೂದು ಏನೈತಿ. ತಿಗರಿ ತಿರುಗತೈತಿ. ಮಣ್ಣು ಮುದ್ದಿ ಕೆಳಗ ಬೀಳಬಾರದಲ್ಲ. ಅದಕ ನಾ ಹಿಡಿದಿರತೀನಿ. ಹರವಿ ತನಪಾಡಗ ತಾನ ಆಗ್ತೈತಿ. ಬಿಸಲ್ಯಾಗ ಒಣಗತೈತಿ. ಮತ್ತ ಭಟ್ಟೀ ಒಳಗ ಬೆಂಕೀಲಿ ಕಾದು ತಾನ ಗಟ್ಟಿಯಾಗ್ತೈತಿ.”

“ಚಕ್ಕಡೀಗ ಎತ್ತುಗೋಳ ಕಟಗೊಂಡು ಕೆರೀ ಹೊಲಗಳಿಗ ಸಾಗಿ ಕಪ್ಪು ಮಣ್ಣ, ಜಿಗಟ ಮಣ್ಣ, ಹರಳ ಮಣ್ಣ ಅಂತ ಮಣ್ಣ ತರೂದು. ಆ ಮಣ್ಣನ್ನ ಗುಂಡೀ ಒಳಗ ಹಾಕಿ ರುಬ್ಬಿ ಜರಡಿ ಹಿಡಿದು ಹಸನು ಮಾಡೂದು. ನೆಲದ ಮ್ಯಾಲ ಹರಡಿ ನೀರ ತುಂಬಿ ಹಾರಿ ಹಾರಿ ಕಾಲಲ್ಲಿ ತುಳದು ಕಲಸೂದು, ಮಣ್ಣ ಮುದ್ದಿ ಇಟ್ಟು ಜೋರಾಗಿ ತಿಗರಿ ತಿರಗಸೋದು, ಸೊಂಟ ಬಾಗಿಸಿ ಮುದ್ದಿ ಹೊರಗ ಒಳಗ ಕೈ ಒತ್ತಿ ಮಡಕಿ ಆಕಾರ ಬರಸಿ ತೆಗದು ಬಿಸಲಲ್ಲಿ ಒಣಗಸೂದು, ಭಟ್ಟೀಗೆ ಸೌದಿ ಹಾಕಿ ಉರಸಿ ಒಳಗ ಮಡಕೆ ಕುಡಿಕೆ ಹಾಕಿ ಸುಡೂದು ಇಷ್ಟೆಲ್ಲ ಕೆಲಸ ಹಗೂರೇನು?”

“ನಾನು ದಿನಾ ಹಾಂಗ ಮಾಡದನ್ನ ನೋಡಿ ನೋಡಿ ನಿಂಗ ಹೀಗ ಅನಸತಾ ಹ್ಯಾಂಗ?”

“ಹೌದೋ ಗೆಳೆಯಾ, ನೀ ಅಷ್ಟ್ ಕೆಲಸ ಒಬ್ಬನೇ ಮಾಡ್ತೀಯಲ್ಲ. ನಾ ಕುಸರೀ ಮಾಡೊದರ ಜೊತಿ ನಿನ ಕೆಲಸ ಒಂದಿಷ್ಟ್ ಮಾಡದರ ಹ್ಯಾಂಗ ಅನಸ್ತೈತಿ. ಅದಕ ಮೊನ್ನೀ ನೀ ಪ್ಯಾಟೀಗ ಹೋಗಿದ್ಯಲ್ಲ ಆಗ ಸಣದೊಂದು ಕುಡಿಕೀ ಮಾಡೋಣು ಅನ್ನಸ್ತು.  ಕೋಲಿಂದ ತಿಗರಿ ಆಡಸದ್ರ ತಿರುಗಲೇ ಒಲ್ದು. ಸರೀ ತಿರಗ ಬೇಕಂದ್ರ ರಟ್ಟೀಲಿ ಬಲಾನೂ ಬೇಕ ಅಂಗ ಒಂದು ಲಯಾನೂ ಬೇಕು ಹೌದಲ್ಲೋ.  ಉಸಿರು ಕಟ್ಟಿ ಬರೋಬ್ಬರಿ ಜೋರು ತಿರಗಸ್ದೆ. ನಿಂತಾಗೆ ಬಾಗಿ ಸಣ ಮುದ್ದಿ ಇಟಗಂಡು ಅಂಗ ಇಂಗ ಕೈಯಾಡಿಸ್ದೆ. ಆ ಕಡಿ ಈ ಕಡಿ ಮುದ್ದಿ ಹೊರಳಾಡ್ತು. ಎಡಕ್ಕ ಬಲಕ್ಕ ನಾನೂ ಬಾಗಿ ಅದು ಬೀಳದಾಂಗ ತಿಣಕಾಕ ಹತ್ತಿದ್ದೆ. ಅದೇನಾತೊ ಗೊತ್ತಿಲ್ಲ, ಅಂಗಾತ ತಿಗರಿ ಮ್ಯಾಲ ಬಿದ್ದೆ. ಮನಿ ಮರ ಎಲ್ಲ ಸುತ್ತಾಡತಿದ್ದೊ. ಮೂರ್ನಾಕ ಸುತ್ತಾಕಿ ತಿಗರಿ ನಿಲ್ತು. ಕೈಗೆ ಮಯ್ಗೆಲ್ಲ ಮಣ್ಣಂಟಗೋತು. ಅಂತಾ ನೋವ ಏನೂ ಆಗಲಿಲ್ಲ. ನೀ ನಗ್ತೀ ಅಂತ ಹೇಳಲಿಲ್ಲ. ಮಡಕೀ ಮಾಡಕ ನೀನೇ ಸರಿ. ನಾ ಕುಸರಿ ಅಷ್ಟೇ ಮಾಡೋಣು ಅನ್ನೋ ತಿಳವಳಕಿ ಅಂತೂ ಬಂತಪಾ.”

“ತಿಗರೀ ಮ್ಯಾಲ ಬಿದ್ದೀ? ಗಾಯ ಏನಾರ ಮಾಡ್ಕೊಂಡೀ? ನಾನಿಲ್ದಿರೋ ವ್ಯಾಳೆ ನೀ ಹೀಂಗೆಲ್ಲ ಸಾಹಸ ಯಾಕ್ ಮಾಡ್ತೀ? ನಿಂಗ ಏನಾರ ಆದರ ನನ ಗತಿ ಏನ? ನಿನ ಕೈಲಿ ಆಗಲ್ಲ ಅಂತಲ್ಲ. ಕಸಬು ಕಲಿತಿರೋವ್ರ ಸಂಗಟ ಇದ್ದು ನಾವು ಇಷ್ಟಿಷ್ಟೇ ಕಲೀಬೇಕ. ಎಳೀ ಹುಡಗಾ ಆದಾಗಿಂದ ನನ್ನ ಅಪ್ಪ ಮುತ್ತ್ಯಾ ಎಲ್ಲ ಇದನ್ನ ನನಗ ಕಲಿಸ್ಯಾರ. ಬಿದ್ದು ಎದ್ದು ಕಲತೇನಿ.”

“ಏನಾಗಿಲ್ಲ ಬಿಡು ಗೆಳೆಯಾ. ಮನದಾಗೊಂದು ಹೊಸ ಚಿತ್ರ ಮೂಡಿತ್ತ. ಅದನ್ ಬಿಡಸಾಕ ಕುಡಕೀ ಸಿಗಲಿಲ್ಲ. ಹೊಸಾ ಕುಡಕೀ ನಾನ ಮಾಡೊಣು ಅಂದಕೊಂಡ್ ಧಡಕ್ಕನ ಬಿದ್ದೀನಿ ನೋಡ.”

“ನಾವು ಸುರೂ ಮಾಡೂ ಮುಂದ ಕೆಲಸ ಅಂತೇವಿ. ಉಸಾಬರಿಯಿಂದ ಕಲಿತು ಅದರೊಳಗ ಕಾಯ ವಾಚಾ ಮನಸಾ ಬೆರೀತೀವಿ ನೊಡು ಆಗ ಅದು ಕಸಬಾಗ್ತೈತಿ. ಸತ್ಯ ಶುದ್ಧರಾಗಿ ಅದನ್ನ ಮಾಡ್ತಾ ತ್ರಿವಿಧ ಸೇವೆ ಅಂತೇನೋ ಮಾಡಬೇಕಂತ. ಆಗ ಅದು ಕಾಯಕ ಆಗ್ತೈತಿ. ಇದು ನನ ಮಾತಲ್ಲ. ಅಣ್ಣ ಬಸವಣ್ಣ ನುಡಿದು ನಡೆದು ಬದುಕಿದ್ದ ಹೀಂಗಂತ. ಈಗ ನಿನ ಕುಸುರೀನೆ ತಗೋ. ಅದನ್ನ ಮಾಡೋದು ನಿನಗ ಹುಟ್ಟಿನಿಂದಲೇ ಬಂದೈತಿ ಅನಿಸುತ್ತ ನನಗ. ಅದೇನ್ ಚಂದ ಗೆರೀ ಎಳೀತಿ. ಬ್ಯಾರೆ ಬ್ಯಾರೆ ಹೂವು ಎಲೀ ಸೊಪ್ಪು ಹಣ್ಣು ಸುಣ್ಣ ಎಲ್ಲ ಕೂಡಿಸಿ ಎಂತೆಂಥ ಬಣ್ಣ ಮಾಡ್ತೀ. ಎಳೀಮಗೂಗೆ ಸಿಂಗರಿಸೋ ಹಾಂಗ ಕಣ್ಣಲ್ಲೇ ಕಣ್ಣಿಟ್ಟು ಗೆರೀ ತಪ್ಪದಾಂಗ ಬಣ್ಣ ಹಚ್ತೀ.  ಯಾರು ಯಾ ಚಿತ್ರ ಬರಕೊಡು ಅಂತಾರ ಅವರಿಗೇ ಅಚ್ಚರಿ ಆಗೋ ಹಂಗ ಚಿತ್ರ ಬರದು ಖುಷೀ ಪಡೊಹಂಗ ಮಾಡ್ತೀ. ಇದರಿಂದಾನ ಮನೀ ಕೆಲಸದ ಜೊತಿ ನಂ ಬದುಕು ಸಾಗಾಕೂ ನೆರವಾಗೈತಿ.  ನಿನ ಹಾಂಗ ಕುಸುರಿ ಮಾಡಾಕ ನನಗ ಆಗ್ತದೇನು? ಹೆಂಗಸರೆಲ್ಲ ಓಡೋಡಿ ಯಾಕ ಬರತಾರ ಅಂತ ಕೇಳಿದ್ಯಲ್ಲ. ಈಗ ಖರೇ ಮಾತು ಹೇಳತೀನಿ ಕೇಳ, ನಿನ್ನ ಕೈಯಾಗಿನ ಕುಸುರೀ ಅಗದೀ ಛಲೋ ಅದ. ಅದಕ ಮನ ಸೋತು ಬರ್ತಾರ. ನಿಂದು ಕುಸುರಿಯಲ್ಲ. ಅದು ನಿನ ಕಾಯಕ ಆಗೈತಿ.”

“ಹೌದೇನೂ, ನಂದು ಕಾಯಕ ಅಂತೀ. ನೀನು ನಿನ್ನ ಕಾಯಕ ಸೇವೆನ ಲಿಂಗ ಮೆಚಬೇಕು ಅಂತೀ ಹೌದಲ್ಲ. ನನಗ ನೀ ಮೆಚ್ಚಿದರ ಸಾಕು.”

“ನನ ಬಗ್ಗೆ ನೀ ಹೇಳಿದ್ದು ಖರೇ ಆದರ ಛಲೋ. ಬಸವಾದಿ ಪ್ರಮಥರು ಹಂಗಾ ಹೇಳ್ಯಾರ, ಶರಣ ಅಂದ್ರೆ ಅಂವ ಸತಿ, ಅವನ ಲಿಂಗವೇ ಪತಿ ಅಂತ. ನನಗೂ ಆ ದಾರಿಯಾಗ ಸಾಗೋ ಬಯಕೆ.”

ಕುಂಬಾರಣ್ಣ ಮಣ್ಣನ್ನು ಕಲಸಿ ತಿಗರಿ ಇಟ್ಟು ದೊಣ್ಣೆಯಿಂದ ತಿರುಗಿಸಲು ಅಣಿಯಾದ. ಕಾಯಕನಿರತನಾದವನನ್ನು ಕೆಣಕಬೇಕೆನ್ನಿಸಿತು ಮಡದಿಗೆ.

“ನೀನು ನನಗ ಪತಿ, ಲಿಂಗಕ್ಕ ಸತಿ, ಹಂಗಾದ್ರ ಶರಣ, ನೀನು ಪುಲ್ಲಿಂಗಾನೋ ಸ್ತ್ರೀಲಿಂಗಾನೋ?”

“ನನ ಕೈಯಾಗಿರೋದು ದೊಣ್ಣಿ, ಅದು ನಪುಂಸಕ ಲಿಂಗ, ಆದ್ರೂನು ಅದರ ಕೈಲೆ ಉತ್ತರ ಕೊಡಿಸಲೇನ? ಸಾಕೋ ಮಾರಾಯ ಅನ್ನೋ ತನಕ ಜವಾಬು ಸಿಗತೈತಿ…”

“ಹಾಂಗೇನು? ಸ್ವಲ್ಪ ಇರು” ಅಂತ ಒಳಗೆ ಓಡಿದವಳು ಒಂದೆರಡು ಗಳಿಗೆ ಆದಮೇಲೆ ಬಂದಳು. ಕುಂಬಾರಣ್ಣ ಕಂಡದ್ದೇನು? ಚಂಡಿ, ಚಾಮುಂಡಿ, ದುರ್ಗಿ, ಕಾಳಿ ಎಲ್ಲ ಒಟ್ಟಿಗೆ ಒಂದೇ ರೂಪ ತಾಳಿ ಎದುರು ನಿಂತ ಹಾಗಿತ್ತು. ಕಚ್ಚೆಯಾಗಿ ಮಾರ್ಪಟ್ಟಿದ್ದ ಸೀರೆ, ಬಲಗೈಯಲ್ಲಿ ಒನಕೆ, ಎಡಗೈಯಲ್ಲಿ ಹಿಟ್ಟಿನ ಕೋಲು, ಸೊಂಟಕ್ಕೆ ಸಿಕ್ಕಿಸಿದ ಕುಡುಗೋಲು, ತಲೆಯ ಸುತ್ತಲೂ ವೃತ್ತಾಕಾರದಲ್ಲಿ ಸಿಕ್ಕಿಸಿದ್ದ ಚಮಚಗಳು.

“ಅಹಹಹಹೋ ರುದ್ರ, ಎಲೈ ನೂರೆಂಟು ಹೆಸರಿನ ಕುಲಾಲನೇ, ಕೌಲಾಲನೇ, ಕಾಕೋಲನೇ, ಧೈರ್ಯವಿದ್ದರೆ ನಿನ್ನ ದೊಣ್ಣೆಯಿಂದ ಉತ್ತರ ಕೊಡಿಸು ನೋಡೋಣ. ನನ್ನನ್ನು ಯಾರೆಂದು ತಿಳಿದಿರುವೆ ನಾನು ಚಂಡಿ ಚಾಮುಂಡಿ ಕಾಳಿ ದುರ್ಗಿ. ಮೂರುಲೋಕಕ್ಕೂ ನಾನೇ ಪ್ರತಿನಿಧಿ. ಈಗ ನನಗೆಷ್ಟು ಕೋಪಬಂದಿದೆಯೆಂದರೆ… ಅಹಹಹಹೋ ರುದ್ರ.”

“ತಾಯಿ ಶಾಂತಳಾಗು. ಬರಿ ನನ್ನ ಮಾತಿಗೇ ಇಂಥ ರುದ್ರ ರೂಪ… ಇನ್ನು ನುಡಿದಂತೆ ನಡೆದಿದ್ದರೆ ಏನಾಗುತ್ತಿತ್ತೋ ಏನೋ. ದೇವಿ ನೀನು ಈ ಭಯಾನಕ ರೂಪದಲ್ಲಿಯೂ ಅದೆಷ್ಟು ಚಂದ ಕಾಣುತ್ತೀ?”

“ಯಾವ ಆಯುಧವನ್ನು ಈಗ ಪ್ರಯೋಗಿಸಲಿ ಎಂದು ನಾನು ಯೋಚಿಸುತ್ತಿದ್ದರೆ ಬಣ್ಣದ ಮಾತುಗಳಿಂದ ನನ್ನ ಕೋಪ ಇಳಿಸಲು ಹವಣಿಸುತ್ತೀಯಾ. ಹೇಳಿದ್ದು ತಪ್ಪಾಯಿತು ಎಂದು ಒಪ್ಪಿಕೊ, ಇಲ್ಲವಾದಲ್ಲಿ, ಹೇ ದಂಡಧರನೇ, ನನ್ನ ಕೈಯಲ್ಲಿರುವ ದಂಡವನ್ನು ನಿನ್ನ ಘಟದ ಮೇಲೆ ಪ್ರಯೋಗಿಸಲೋ ಅಥವಾ ನೀನು ಮಾಡಿರುವ ಘಟಗಳನ್ನು ಬಾರಿಸಿ ತಕಿಟ ತೋಂ ತದಿಕಿಟ ಎನಿಸಲೋ?”

“ಮಹಾದೇವಿ, ಆಯುಧವನ್ನು ಪ್ರಯೋಗಿಸುವುದಾದರೆ ನನ್ನ ಮೇಲೆ ಪ್ರಯೋಗಿಸು. ದಂಡವನ್ನು ನನಗೇ ವಿಧಿಸು. ನಿನ್ನ ಕೆಂಗಣ್ಣು ನನ್ನ ಕುಡಿಕೆ ಮಡಿಕೆಗಳ ಮೇಲಂತೂ ಬೀಳದಿರಲಿ. ಈ ಬಡಪಾಯಿಗೈದ ಅಪರಾಧಕ್ಕೆ ಅವುಗಳಿಗೆ ಶಿಕ್ಷೆ ವಿಧಿಸಬೇಡ ಮೂದೇವಿ…”

“ಏನು? ಮೂದೇವಿಯೆಂದು ನನ್ನನ್ನೇ ಹೀಯಾಳಿಸುವೆಯಾ? ಅಹಹಹಹೋ ರುದ್ರ, ನನ್ನ ಕೋಪ ಇಮ್ಮಡಿಯಾಗಿದೆ. ತಕಧೀಂ ಥೈ ತಕ. ಧೀಂ ಧೀಂ ತಕಧೀಂ.”

“ಮೂಲೋಕದ ಒಡತಿಯಾಗಿದ್ದಕ್ಕೆ ನಾನು ಹಾಗೆ ಕರೆದೆ ದೇವಿ, ಅಪಾರ್ಥ ಮಾಡಿಕೊಳ್ಳದೆ ಶಾಂತಳಾಗು. ಇದೋ ನನ್ನ ಕೈಗಳಿಂದ ಬಂಧಿಸುತ್ತೇನೆ. ಅಯ್ಯೋ ಬಾಯಿ ತಪ್ಪಿತು, ವಂದಿಸುತ್ತೇನೆ. ನಿನ್ನ ಭಕ್ತನೆಂದು ನನ್ನನ್ನು ಅಪ್ಪಿಕೋ, ಅಯ್ಯೋ ಬಾಯಿ ತಪ್ಪಿತು, ಒಪ್ಪಿಕೋ.”

ಆ ಕ್ಷಣಕ್ಕೆ “ಕುಂಬಾರಣ್ಣಾ, ಓ ಕುಂಬಾರಣ್ಣಾ”ಅಂತ ಯಾರೋ ಕೂಗಿದಂತಾಗಿ ದಂಪತಿಗಳ ಬಯಲಾಟಕ್ಕೆ ತೆರೆ ಬಿತ್ತು. ಊರ ಮಠದಲ್ಲಿ ಅನ್ನ ದಾಸೋಹ ಸೇವೆಗಾಗಿ ಅಡುಗೆ ಕಾಯಕ ಮಾಡುತ್ತಿದ್ದ ಶರಣ ಶಂಕರಪ್ಪ ಹಳ್ಳದ ದಾರಿಯಿಂದ ಮೇಲೇರಿ ಅವರ ಮನೆ ಸಮೀಪಿಸತೊಡಗಿದ್ದರು. ಅವರ ಕೂಗು ಕೇಳುತ್ತಲೇ ಕುಂಬಾರಣ್ಣನ ಮಡದಿ “ಹೇ ಘಟೀಕಾರಿ, ನಾಳೆ ಬಂದು ನಿನ್ನನ್ನೂ ನಿನ್ನ ಮಡಕೆಗಳನ್ನೂ ವಿಚಾರಿಸಿಕೊಳ್ಳುತ್ತೇನೆ” ಎನ್ನುತ್ತ ಗಂಡನತ್ತ ಓರೆನೋಟ ಬೀರಿ ತನ್ನ ವೇಷ ಕಾಣದಂತೆ ನೇಪಥ್ಯಕ್ಕೆ ಸರಿದಳು. ಕುಂಬಾರಣ್ಣ ಬಂದ ಅತಿಥಿಗೆ ನಮಿಸಿ ಕೂರಲು ಅನುವುಮಾಡಿಕೊಟ್ಟ. ಶಂಕರಪ್ಪ ಬರದೇ ಇದ್ದಿದ್ದರೆ ರಸಭರಿತವಾಗಿ ಸಾಗಿದ್ದ ಅವರ ವಾಕ್ಸರಣಿ ಇನ್ನೂ ಹೃದ್ಯವಾಗಿ ಮುಂದುವರೆಯುತ್ತಿತ್ತು.  ಅವರ ದಿನನಿತ್ಯದ ಕಾಯಕದ ಬಿಡುವಿನ ವೇಳೆ ಒಂದಲ್ಲ ಒಂದು ರೀತಿ ಹೀಗೆ ಸರಸ ಸಲ್ಲಾಪ ನಡೆಯುತ್ತಲೇ ಇತ್ತು. ಇಬ್ಬರ ನಡುವಿದ್ದ ಅನ್ಯೋನ್ಯತೆ ಅಷ್ಟು ಮೇರು ಮಟ್ಟದ್ದಾಗಿತ್ತು. ಇಬ್ಬರೂ ಬಸವಯುಗದ ಬಹುಕಾಲದ ನಂತರದ ಪೀಳಿಗೆಯವರು. ಚಿಕ್ಕಂದಿನಿಂದ ತಮ್ಮ ತಮ್ಮ ಊರ ಮಠಗಳ ಶಾಲೆಗಳಲ್ಲಿ ಓದಿದವರು. ಓದಿದವರೆನ್ನುವುದಕ್ಕಿಂತ ಕಲಿತವರೆನ್ನಬೇಕು. ಬಸವಣ್ಣ ಪ್ರತಿಪಾದಿಸಿದ ಧರ್ಮದ ತಿರುಳನ್ನು ಕಲಿತದ್ದೂ ಅಲ್ಲೆ. ಕಳಬೇಡ ಕೊಲಬೇಡ ಇವೇ ಮುಂತಾದ ಅಂತರಂಗ ಬಹಿರಂಗ ಶುದ್ಧ ಬದುಕಿನ ಸಪ್ತನಿಯಮಗಳು.  ಕಾಯಕನಿಷ್ಠೆ, ದಾಸೋಹ ಭಾವ ಇವುಗಳನ್ನು ಕೇಳಿ ಓದಿ ತಿಳಿದಿದ್ದರು. ಇವುಗಳ ಜೊತೆ ಅಲ್ಲಿನ ಗುರುಗಳು ಕಲಿಸಿದ್ದು ಕೊಟ್ಟ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕೆಂಬುದನ್ನು. ಸಂತೋಷ ಹೆಮ್ಮೆ ನಿಷ್ಠೆಯಿಂದ ನಿರ್ವಹಿಸಬೇಕೆಂಬುದನ್ನು. ಹೆಣ್ಣು ಗಂಡೆಂಬ ಬೇಧತೋರದೆ ಸಮಾನ ಗೌರವ ಕೊಡುವುದನ್ನು. ನೋವಿನಲ್ಲಿರುವವರಿಗೆ ದುರ್ಬಲರಿಗೆ ನೆರವಾಗುವುದನ್ನು. ಮೇಲು ಕೀಳೆನ್ನದೆ ಎಲ್ಲ ಕೆಲಸವನ್ನೂ ಸಮಾನವಾಗಿ ಕಾಣುವುದನ್ನು. ಪ್ರಕೃತಿಯನ್ನು ಹಾಳುಮಾಡದೆ ಸಕಲ ಜೀವಾತ್ಮರಲ್ಲಿ ಲೇಸ ಬಯಸುವದನ್ನು. ಜಾತಿ ಉಪಜಾತಿಯವರೆನ್ನದೆ ಶರಣರೆಂದು ಗುರುತಿಸುವುದನ್ನು. ಮೂರು ವರ್ಷದ ಹಿಂದೆ ತಾನೆ ಸತಿ ಪತಿಯಾಗಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟನಂತರ ಮೇಲಿನ ಎಲ್ಲ ಸದ್ಗುಣಗಳ ಜೊತೆಗೆ ಸತ್ಯಶುದ್ಧ ಕಾಯಕದಲ್ಲಿ ನಿರತರಾಗಿ ಅದರ ಮೂಲಕವೇ ತಮ್ಮ ಬದುಕಿನ ನಿರ್ವಹಣೆಯನ್ನೂ ಗುರು ಲಿಂಗ ಜಂಗಮ ಸೇವೆಯನ್ನೂ ಮಾಡಹತ್ತಿದ್ದರು.

ಕುಂಬಾರಣ್ಣನ ಮಡದಿ ಕುಡಿಕೆಯಲ್ಲಿ ತಣ್ಣೀರನ್ನೂ ಮಣ್ಣಿನ ಮುಚ್ಚಳದಲ್ಲಿ ಕಲ್ಲುಸಕ್ಕರೆ, ಬೆಲ್ಲ ಮತ್ತು ಕೊಬ್ಬರಿ ಚೂರುಗಳನ್ನೂ ತಂದು ಗುರುಮಠದ ಅತಿಥಿಯ ಮುಂದಿರಿಸಿ ನಮಸ್ಕರಿಸಿ ಪತಿಯ ಸನಿಹ ನಿಂತಳು. ಚಣ ಹಿಂದೆ ರೌದ್ರವೇಷತಾಳಿದವಳು ಈಗ ನಮ್ರತೆಯೇ ಮೂರ್ತವೆತ್ತಂತೆ ನಿಂತಿರುವುದನ್ನು ನೋಡಿ ಕುಂಬಾರಣ್ಣನಿಗೆ ಒಳಒಳಗೇ ನಗು. ಆದರೂ ಅದನ್ನು ತೋರಗೊಡದೆ “ಶಂಕರಣ್ಣಾ ಶರಣು, ತಾವು ಹ್ಯಾಂಗದೀರಿ, ಗುರು ಮಹಾಂತ ಶಿವಯೋಗಿಗಳು ನಮ್ಮನ್ನ ವಿದ್ಯಾ ಬುದ್ಧಿ ಕಲಿಸಿ ತಿದ್ದಿ ಬೆಳಸದೋರು. ಅವರು ಹೆಂಗದಾರ, ಮಠದಲ್ಲಿ ಪಾಠ ಪ್ರವಚನ, ದಾಸೋಹ ಎಲ್ಲ ಚೆಂದಾಗಿ ನಡದೈತಿ ಅಲ್ಲ?” ಎಂದದ್ದಕ್ಕೆ “ಓ ಹೌದಪಾ, ನಂಮ ಗುರುಗಳು, ಮಠದಲ್ಲಿ ಕಾಯಕ ಮಾಡೋ ನಾವು, ಎಲ್ಲ ಕ್ಷೇಮ. ನೀವು ಹೆಂಗದೀರಿ, ನಿಂಮ ಕಾಯಕ ಛಲೋ ನಡದೈತಿ ಅಲ್ಲ?” ಎಂದು ಶಂಕರಣ್ಣ ಕೇಳಿದರು. “ಗುರುಗಳ ಆಶೀರ್ವಾದ, ನಿಂಮ ಹಾರೈಕಿಯಿಂದ ಆರಾಮಿದೀವಿ ಶಂಕರಣ್ಣ” ಎನ್ನುತ್ತ ಕುಂಬಾರಣ್ಣ ಮುಂದುವರೆದು “ಶಂಕರಣ್ಣ, ಸ್ವಾಮಿಗಳ ಪ್ರವಚನ ಐತೇನೂ. ಅವರ ಪ್ರವಚನ ಅಂದ್ರ ನನಗಂತೂ ಬಾಳ ಖುಷಿ. ಅವರು ಹೇಳೋ ನಮೂನಿ, ಸೂಕ್ಷ್ಮ ವಿಚಾರಗಳನ್ನ ಕತಿ ಉಪಕತಿಗಳ ಮೂಲಕ ಮನದಟ್ಟು ಮಾಡೋ ರೀತಿ. ಒಮ್ಮೆ ಕೇಳಿದರ ಮತ್ತ ಮತ್ತ ಕೇಳಬೇಕು ಅನಸ್ತದ” ಎಂದದ್ದಕ್ಕೆ ಅವನ ಮಡದಿಯೂ ದನಿಗೂಡಿಸಿದಳು “ಗುರುಗಳ ಪ್ರವಚನ ಅಂದ್ರ ನನಗೂ ಚಂದ ಶಂಕರಣ್ಣ, ಅವರಿಗೆ ಹೂಗಳ ಅಂದ್ರ ಎಷ್ಟ್ ಪ್ರೀತಿ. ಪ್ರವಚನ ಕೊಡೂ ಮುಂದ ಅವರ ಎದುರಾಗ ಜೋಡಿಸಿರೋ ಹೂಗಳ್ನ ನೋಡಿ ಆನಂದ ಪಡ್ತಾರ.  ‘ಈ ಹೂವ ನೋಡಿ, ಅಲ್ಲೆಲ್ಲೋ ದೂರದಲ್ಲಿ ಗಿಡದ ಮ್ಯಾಲ ಇದ್ದದ್ದು ನನ್ನನ್ನ ಇಲ್ಲಿಗೆ ಕರತನ್ನಿ, ಇಕೊ ಇಲ್ಲಿ ತಂದಿಡಿ ಅಂತ ಕೇಳಿತ್ತೇನೂ? ಹೂಗಳ್ನ ತಂದು ಜೋಡಿಸಿದವ್ರು ಇಲ್ಲಿ ನಾ ಜೋಡ್ಸೇವಿ, ಅಲಂಕಾರ ಮಾಡೇವಿ ಅಂತ ಹೇಳ್ಯಾರೇನು? ನಾವೂ ಈ ಹೂವಿನಂಗ ಇರಬೇಕ್ ನೋಡ್ರಿ, ಸದ್ದು ಗದ್ದಲ ಇಲ್ಲದೇನೆ ನಮ್ ಕಾಯಕಾನ ಮಾಡಕೊಂಡ್ ಹೋಗಬೇಕ ಅಂತ ಹೇಳಿದ್ದು ನನಗ ಸದಾ ನೆನಪಿಗ ಬರತೈತಿ.”

“ಕುಂಬಾರಣ್ಣ, ಅಕ್ಕಾ, ಇಬ್ಬರೂ ಎಷ್ಟ್ ಚಂದ ಮಾತಾಡ್ತೀರಿ, ಗುರುಗಳ ಬಗ್ಗೆ ನಿಂಮ ಪ್ರೀತಿ ಕಂಡು ನನಗ ಬಾಳ ಪಸಂದನ್ನಸ್ತು”ಎನ್ನುತ್ತ ಶಂಕರಪ್ಪ “ಕುಂಬಾರಣ್ಣ, ಮಹಾಂತ ಶರಣರು ಈ ಸಾರಿ ಯುಗಾದಿಗೆ ಹೊನ್ನೇರು ಕಟ್ಟಲಿಕ್ಕ ನಿನಗ ಹೇಳಿದಾರಂತಲ್ಲಪ್ಪ. ಅದನ್ನ ನೆನಪಿಸು ಅಂತ ಹೇಳ್ಯಾರ. ಅದಕ್ಕ ನಾ ಬಂದೀನಿ. ಹಾಗೇ ಅವರ ಪ್ರವಚನಗಳನ್ನೆಲ್ಲ ಸೇರಿಸಿ ಒಬ್ಬ ಶರಣರು ತಾಳೆಗರಿಗಳ ಮ್ಯಾಲೆ ಬರಸ್ಯಾರ. ನೀನೇನೋ ಒಮ್ಮೆ ಪ್ರಶ್ನೆ ಕೇಳಿದ್ಯಂತಲ್ಲಪ್ಪಾ, ಅದಕ್ಕ ಅವ್ರು ಅದರ ಬಗ್ಗೀ ವಿಚಾರ ಮಾಡೇನಿ. ನೀಂಗ ಇಷ್ಟರಲ್ಲೇ ಅದನ್ನ ತಿಳಿಸ್ತೀನಿ ಅಂತ ಹೇಳಿದ್ರಂತಲ್ಲಪ್ಪಾ. ಅದಕ್ಕೇ ಅದರ ಒಂದು ಕಟ್ಟನ್ನೂ ನನ್ನ ಕಡಿ ಕೊಟ್ಟ್ಯಾರ. ತಗೊ, ನಿನಗ ಏನು ಉತ್ತರಕೊಡಾಕಿತ್ತೊ ಅದು ಇದರೊಳಗ ಐತಿ ಅಂತ ಹೇಳ್ಯಾರ. ಅಂದ ಹಾಂಗ ನೀ ಕೇಳಿದ್ದ ವಿಚಾರ ಏನ್ ಕುಂಬಾರಣ್ಣ?” ಎಂದಾಗ ಕುಂಬಾರಣ್ಣ ಸಂತೋಷದಿಂದ ತಾಳೆಗರಿಯ ಕಟ್ಟನ್ನು ತೆಗೆದುಕೊಂಡು ಕಣ್ಣಿಗೊತ್ತಿಕೊಂಡು ನಂತರ ಅದನು ಬಿಚ್ಚುತ್ತ, “ತ್ರಿವಿಧ ದಾಸೋಹ ಅಂದ್ರೇನು ತಿಳಸಿಕೊಡಿ, ಅಂತ ಕೇಳಿದ್ದೆ ಶಂಕರಣ್ಣ.”

“ತ್ರಿವಿಧ ದಾಸೋಹ ಅಂದ್ರ ನಮಗ ದೀಕ್ಷೀ ಕೊಟ್ಟ ಗುರೂನ ಸೇವೆ ಮಾಡೂದು, ಇಷ್ಟಲಿಂಗಕ್ಕ ತಪ್ಪದ ನಿತ್ಯ ಪೂಜೀ ಸಲ್ಲಿಸೋದು, ಮನೀ ಕಡೀ ಬಂದಂತ ಜಂಗಮರಿಗೆ ಊಟ ಉಪಚಾರ ಮಾಡಿ ಸತ್ಕರಿಸೋದು, ಅಷ್ಟೇ ಅಲ್ಲೇನಪಾ”

“ನಾನು ತಿಳಕೊಂಡಿದ್ದು ಹಾಗೇನ. ಅದನ್ನ ಸ್ವಾಮಿಗಳ ಎದುರು ಹೇಳಿದಾಗ ‘ಭಕ್ತ ಸ್ಥಲದಲ್ಲಿ ಮೊದಮೊದಲು ಅಷ್ಟು ಮಾಡಿದರ ಸಾಕು. ಆದರ ನಿಜಕ್ಕೂ ನೋಡಿದರ ಅದಕ್ಕ ದೊಡ್ಡ ಅರ್ಥ ಐತಿ. ಬಸವಾದಿ ಶರಣರು ಬದುಕಿದ ರೀತಿಯನ್ನ ಅವರ ವಚನಗಳನ್ನ ಸಾಕಷ್ಟು ಬಾರಿ ಪುನರಾವಲೋಕಿಸಿ ವಿಚಾರ ಮಾಡೇನಿ. ಅದಕ್ಕಿರೋ ಅರ್ಥ ಏನೈತಿ ಅರಿಯಲಿಕ್ಕೆ ಪ್ರಯತ್ನಿಸೀನಿ. ಷಟ್ಸ್ಥಲಗಳ ಮೆಟ್ಟಲನ್ನ ಏರಲಿಕ್ ಹತ್ತಿದಾಗ ಅದರ ಅರ್ಥ ಆಚರಣೆಗಳೂ ವಿಶಾಲ ರೂಪ ತಾಳ್ತಾವು. ಇದನ್ನೆಲ್ಲ ಮುಂದೊಮ್ಮೆ ತಿಳಿಸ್ತೀನಿ’ ಅಂದಿದ್ರಣ್ಣಾ ನಮ್ಮ ಶಿವಯೋಗಿಗಳು”

“ಹಂಗಾದ್ರ ಕುಂಬಾರಣ್ಣ, ಅದರ ಬಗಿ ಏನು ಬರದಾರ ಓದಪಾ. ಕೇಳಾಕ ನನಗೂ ಮನಸಾಗೈತಿ.”

“ಹಾಂ, ಮೂರನೇ ಪ್ರವಚನಕ್ಕೆ ತ್ರಿವಿಧ ದಾಸೋಹ ಅಂತ ಹೆಸರಿಟ್ಯಾರ, ಕೇಳು ಶಂಕರಣ್ಣ”ಎನ್ನುತ್ತ ಕುಂಬಾರಣ್ಣ ಓದತೊಡಗಿದ:

“ತ್ರಿವಿಧ ದಾಸೋಹವೆಂದರೆ ಗುರು ಲಿಂಗ ಜಂಗಮಸೇವೆ ಎಂದು ಎಲ್ಲರೂ ತಿಳಿದಿದ್ದಾರೆ. ಬಸವಣ್ಣನವರಿಂದ ಆರಂಭಗೊಂಡ ಈ ಸೇವೆಯನ್ನು ಎಲ್ಲರೂ ಅನುಸರಿಸಿ ಇದೊಂದು ಶರಣ ಪರಂಪರೆಯ ಭಾಗವೇ ಆಗಿದೆ. ಕೌಟುಂಬಿಕ ಬದುಕಿನ ವ್ಯಾಪ್ತಿಯಲ್ಲಿ ಅರ್ಥಮಾಡಿಕೊಂಡು ಶರಣ ಸಮಾಜ ಇದನ್ನು ಅನುಸರಿಸುವುದನ್ನು ಕೇಳಿದ್ದೇವೆ, ಕಂಡಿದ್ದೇವೆ. ಆದರೆ ಶರಣ ಪಥದಲ್ಲಿ ಸಾಗಿದ ಬಸವಾದಿ ಮಹನೀಯರ ನಡೆನುಡಿಗಳನ್ನು ಗಮನಿಸಿದರೆ ಈ ತ್ರಿವಿಧಸೇವೆಗೊಂದು ವಿಶಾಲ ಅರ್ಥವಿದೆ ಎನ್ನಿಸುತ್ತದೆ.  ಅವರ ವಿಚಾರಧಾರೆಗಳನ್ನು ಓದುತ್ತ ಪುನರ್ಮನನ ಮಾಡುತ್ತ ಆಲೋಚಿಸ ಹೊರಟ ನನ್ನ ವಿಚಾರಮತಿಗೆ ಹೊಳೆದದ್ದು ಹೀಗೆ.

ನಮ್ಮ ಬದುಕು ಮೂರು ನೆಲೆಗಳಲ್ಲಿ ಪ್ರಕಟಗೊಳ್ಳುತ್ತದೆ. ಆಧ್ಯಾತ್ಮಿಕ ನೆಲೆಯಲ್ಲಿ ನಾನೂ ಈ ಸೃಷ್ಟಿಯ ಒಂದು ಭಾಗ. ಪೂರ್ಣದ ಒಂದು ಖಂಡ. ಪೂರ್ಣವೆಂಬ ಮೂಲದ್ರವ್ಯದ ಭಾಗವಾಗಿ ಖಂಡ ಸಾಂತ, ಪೂರ್ಣ ಅನಂತ. ಪೂರ್ಣದ ಸ್ವರೂಪ ಖಂಡಕ್ಕೆ ಅಗಮ್ಯ ಅಗೋಚರ ಅನೂಹ್ಯ. ಪೂರ್ಣವೆಂಬ ಆ ಪರಮಸತ್ಯದೆಡೆಗೆ ನನ್ನ ಬದುಕು ಸಾಗಬೇಕು. ಆ ಸತ್ಯವೇ ನನ್ನ ಗುರುವಾಗಿ ಅದರೊಡನೆ ಬೆರೆಯುವುದೇ ನನ್ನ ಗುರಿಯಾಗಬೇಕು.

ವೈಯಕ್ತಿಕ ನೆಲೆಯಲ್ಲಿ ನಾನು ನನ್ನ ಉದ್ಧಾರಕ್ಕಾಗಿ ಹೇಗೆ ವರ್ತಿಸಬೇಕು? ನಿನ್ನೆಯಷ್ಟು ಅಥವಾ ಸ್ವಲ್ಪ ಮಿಗಿಲಾಗಿ ಇಂದು ಉತ್ತಮನಾಗಿರಲು ನಾನು ಹೇಗಿರಬೇಕು? ಆತ್ಮಸಾಕ್ಷಿಯೊಡನೆ ಸಾಮರಸ್ಯದಿಂದಿರಲು ಹೇಗಿರಬೇಕು? ಈ ಪ್ರಶ್ನೆಗಳಿಗೆ ವಿಚಾರ ಮತ್ತು ವಿಜ್ಞಾನಗಳೆರಡನ್ನು ಮೇಳವಿಸಿ ಸಮರ್ಪಕ ಉತ್ತರಗಳನ್ನು ಕಂಡುಕೊಂಡು ಲಿಂಗ ಮೆಚ್ಚುವಂತೆ ನುಡಿದು ಅಂತೆ ನಡೆಯಬೇಕು.

ಸಾಮಾಜಿಕ ನೆಲೆಯಲ್ಲಿ ನಾನು ಚರಾಚರದ ಒಂದು ಭಾಗ. ಒಬ್ಬ ಸದಸ್ಯ. ನನ್ನ ವೈಯಕ್ತಿಕ ನಡೆ ನುಡಿ ಸಮಾಜದ ಒಟ್ಟು ನಡೆಗೆ ಪೂರಕವಾಗಿರಬೇಕು. ಸಮಾಜದ ಹಿತದಲ್ಲೇ ನನ್ನ ಹಿತವೂ ಇದೆ ಎನ್ನುವುದನ್ನು ಮನಗಂಡು ಸಕಲ ಜೀವಾತ್ಮಗಳಿಗೆ ಲೇಸಬಯಸುವ ದಾಸೋಹಿಯಾಗಿ ಸೃಷ್ಟಿಯ ಜಂಗಮತ್ವದಲ್ಲಿ ಭಾಗಿಯಾಗಬೇಕು.

ಮೇಲಿನ ಮೂರೂ ನೆಲೆಗಳಲ್ಲಿ ನಮ್ಮನ್ನು ಗುರುತಿಸಿಕೊಂಡು ಕಾಯಕದ ಮೂಲಕ ವ್ಯಕ್ತಿ, ಸಮಾಜ ಮತ್ತು ಪ್ರಕೃತಿಯ ರಕ್ಷಣೆ ಮತ್ತು ಏಳ್ಗೆಗೆ ಅನುವಾಗುವಂತೆ ಸೇವೆಗೈಯಬೇಕು. ಇದು ನಮ್ಮ ಕರ್ತವ್ಯವೇ ಹೊರತು ಇದರಲ್ಲಿ ಯಾವ ಹೆಚ್ಚುಗಾರಿಕೆಯೂ ಇಲ್ಲ. ಹೀಗೆ ಮಾಡುವುದರ ಮೂಲಕ ಮರ್ತ್ಯರಾದ ನಾವೂ ನಮ್ಮ ಸುಕೃತ್ಯದಿಂದ ಅಮರತ್ವ ಪಡೆದಂತಾಗುತ್ತದೆ. ಮುಂದಿನ ಪೀಳಿಗೆಯವರು ನಮ್ಮ ಬಗ್ಗೆ ಅಭಿಮಾನ ತಳೆಯುವುದಲ್ಲದೆ ಅವರೂ ಈ ತೆರನಾದ ಕಾಯಕವನ್ನು ಮುಂದುವರೆಸಿ ಎಲ್ಲರ ಬದುಕನ್ನು ಹಸನು ಮಾಡಿಕೊಳ್ಳುವಂತಾಗುತ್ತದೆ. ತ್ರಿವಿಧ ದಾಸೋಹಮಾಡುವುದೆಂದರೆ ನನ್ನ ಚಿಂತನೆಯ ಇತಿಮಿತಿಯಲ್ಲಿ ನಾವು ಈ ರೀತಿ ಕಾರ್ಯಪ್ರವೃತ್ತರಾಗುವುದೆಂದೇ ನನ್ನ ಭಾವನೆ.”

ಕುಂಬಾರಣ್ಣ ಓದಿದ್ದನ್ನು ಅವನ ಮಡದಿ ಮತ್ತು ಶಂಕರಣ್ಣ ತದೇಕಚಿತ್ತದಿಂದ ಆಲಿಸಿದರು. “ಶಿವಯೋಗಿಗಳು ಎಲ್ಲರೊಟ್ಟಿಗೆ ಮಾತಾಡುವಾಗ ಆಡುಭಾಷೆ ಬಳಸ್ತಾರ. ಆದರ ಬರೆಯೂ ಮುಂದ ಏನ ಚಂದ ಬರೀತಾರ” ಅಂತ ಶಂಕರಣ್ಣ ಹೇಳಿದರ ಕುಂಬಾರಣ್ಣನ ಮಡದಿ “ನನಗ ಅಲ್ಲಲ್ಲಿ ತುಸು ತುಸು ಅರ್ಥ ಆದಂಗಾತು. ಆದ್ರೂ ಓದ್ತಾ ಇದ್ರ ಕೇಳ್ತಾನೆ ಇರಬೇಕು ಅನಸತೈತಿ”ಅಂತ ದನಿಗೂಡಿಸಿದಳು. “ಸಾಧನಾ ಮಾಡಿರೋ ನಂ ಗುರುಗೋಳಿಂದ ಕೇಳಿ ತಿಳಿಯೋದು ಮೇಲು ನೋಡವ್ವಾ. ಹೊನ್ನೇರು ಕಟ್ಯಾಕ ಕುಂಬಾರಣ್ಣ ಬಂಡೀ ಕಟ್ಕೋಂಡು ಬರ್ತಾನಲ್ಲವ್ವ, ಆಗ ನೀನೂ ಬಾರವ್ವ, ಗುರುಗೋಳ್ನು ಮಠಾನೂ ದರ್ಶನ ಮಾಡಬೋದು. ಆಗ್ಲೆ ಗುರುಗೋಳ್ನ ಕೇಳಿ ಅರ್ಥನೂ ಮಾಡಕೊಬೋದು. ಬರ್ತೀನವ್ವಾ, ಬರತೇನಿ ಕುಂಬಾರಣ್ಣ”ಅಂತ ಶಂಕರಪ್ಪ ಹೊರಟರು. ಅಷ್ಟಕ್ಕೆ ಕುಂಬಾರಣ್ಣನ ಮಡದಿ “ಶಂಕರಣ್ಣಾ, ಹೋಗೂ ಮುಂದ ಒಂದ್ ಒಗಟ ಬಿಡಸರಿ, ಕಂದು ಗದ್ದೆ, ಕರೀ ಬತ್ತ, ಕೈಯಾಗ ಆಕಬೇಕ ಬಾಯಾಗ ತೆಗೀಬೇಕ, ಅದೇನ ಹೇಳರೀ” ಅಂದಾಗ, ಅಲ್ಲೇ ನಿಂತ ಶಂಕರಣ್ಣ ಯೋಚಿಸುತ್ತ ಬಾಯಿ ಸೊಟ್ಟಗೆ ಮಾಡಿದರು, ತುಟಿಗಳನ್ನು ಮುದುರಿ ಮೂಗಿನ ಹತ್ತಿರ ತಂದರು. ಅಂಗೈ ಕೆರೆದರು, ತಲೆ ಕೆರೆದರು, ಆಕಾಶ ಭೂಮಿ ನೋಡಿದರು, ಏನೂ ಗೊತ್ತಾಗಲಿಲ್ಲ. ಕಂಕುಳಲ್ಲಿ ನೇತುಹಾಕಿದ್ದ ತಾಳೆಗರಿ ಕಟ್ಟಿನ ಚೀಲ ಕೆಳಗೆ ಬೀಳೋ ಹಾಗಾಗಿ ಅದನ್ನು ಮತ್ತೆ ಕಂಕುಳಿಗೆ ಸೇರಿಸುತ್ತಲೇ “ಗೊತ್ತಾಗವಲ್ದು, ನೀನೇ ಹೇಳಕ್ಕಾ” ಎಂದರು. “ಕಂದು ಬಣ್ಣದ ತಾಳೆಗರಿ ಮ್ಯಾಲ ಕಪ್ಪು ಬಣ್ಣದಾಗ ಕೈಯಿಂದ ಬರದ್ದನ್ನ ಬಾಯಾಗ ಓದತೇವಿ, ಹೌದಲ್ಲ, ಅದೇ” ಎಂದಾಗ “ಅಕ್ಕ ಎಂತ ಒಗಟ, ಎಷ್ಟ್ ಚಂದದ ಉತ್ತರ”ಎನ್ನುತ್ತ ಶಂಕರಣ್ಣ ಕುಂಬಾರಣ್ಣನತ್ತ ತಿರುಗಿ “ನಿನ ಮಡದಿ ಎಷ್ಟ್ ಶಾಣ್ಯಾ ಅದಾಳೋ ಅಣ್ಣ. ನನ ಪಾಡಂತೂ ಕಂಕುಳಲ್ಲಿ ಕೂಸೊತಗೊಂಡು ಊರಾಗೆಲ್ಲ ಹುಡುಕಾಡಿದ ಹೆಣ್ಮಗಳ ತರ ಆತು, ಬರತೇನಿ”ಎನ್ನುತ್ತ ಆ ಕ್ಷಣದಲ್ಲುಂಟಾದ ಆನಂದವನ್ನೇ ಮೆಲುಕು ಹಾಕುತ್ತ ಊರ ಕಡೆ ಮುಖ ಮಾಡಿದರು. ಓರೆನೋಟ ಬೀರಿ ತನ್ನ ಕಡೆಗೆ ನೋಡುತ್ತಿದ್ದ ಮಡದಿಯ ಸಮಯಸ್ಫೂರ್ತಿಗೆ ಮೆಚ್ಚುಗೆ ಸೂಚಿಸುವ ಮುಖಭಾವದೊಡನೆ ಮಂದಹಾಸ ಬೀರುತ್ತ ಕುಂಬಾರಣ್ಣ ತಿಗರಿ ತಿರುಗಿಸಿ ಮಡಿಕೆಗೆ ರೂಪಕೊಡುವುದನ್ನು ಮುಂದುವರೆಸಿದ.

ಊರೊಳಗೆ ಅಜ್ಜಿಯ ಜೊತೆ ದನಿಗೂಡಿಸಿ ಪಲ್ಲವಿಯನ್ನು ತುಸು ಬದಲಾಯಿಸಿ ಮಕ್ಕಳೂ ಹಾಡತೊಡಗಿದ್ದರು:

ಹೊತಾರೆದ್ದು ಕುಂಬಾರಣ್ಣ ತುಪ್ಪ ಬಾನುಂಡಾನ
ಘಟ್ಟೀಸಿ ಮಣ್ಣ ತುಳಿದಾನ, ಘಟ್ಟೀಸಿ ಮಣ್ಣ ತುಳಿಯುತ್ತ ಮಾಡ್ಯಾನ
ಮಿತ್ರೇರು ಹೊರುವಂತ ಐರಾಣಿ

ಶಂಕರಪ್ಪ ಏರಿ ಹತ್ತಿ ಕೆಳಗೆ ಇಳಿಯುತ್ತಿದ್ದಂಗೆ ಹಳ್ಳದ ದಾರಿಯಲ್ಲಿ ಏಳೆಂಟು ಮಂದಿ ಹೆಂಗಸರು ಎದುರಾದರು. ಎಲ್ಲರೂ ಶಂಕರಣ್ಣನನ್ನು ಬಲ್ಲವರು. ಮಠಕ್ಕೆ ಬಂದಾಗಲೆಲ್ಲ ಶಂಕರಣ್ಣ ಮಾಡಿದ ಪ್ರಸಾದದ ರುಚಿಕಂಡವರು. “ಶಂಕರಣ್ಣಾ, ಆರಾಮಿದೀರಿ?” ಅಂತ ಕೇಳಿದರು.  ಉಭಯ ಕುಶಲೋಪರಿಯಾಗಿ ಶಂಕರಣ್ಣನನ್ನು ಬೀಳ್ಕೊಟ್ಟ ನಂತರ ಕುಂಬಾರಣ್ಣನ ಮನೆಯ ಬಳಿ ಬಂದರು. ಅವರನ್ನು ನೋಡಿದ ದಂಪತಿಗಳಿಬ್ಬರಿಗೂ ಆನಂದವೋ ಆನಂದ.  “ಕುಂಬಾರಣ್ಣಾ, ನೀನು ನಿನ ಅಂದದ ಮಡದಿ ಹ್ಯಾಂಗಿದೀರಿ.  ಎಲ್ಲಾ ಸೌಖ್ಯವೇನು?” ಎಂದು ಅವರಲ್ಲಿ ಹಿರಿಯಳಾಗಿದ್ದ ನಿಂಗಕ್ಕ ಕೇಳಿದಳು.

“ಎಲ್ಲಾ ಚಲೋ ಐತಿ ನಿಂಗಕ್ಕಾ. ಬಿಸಿಲ ಝಳ ಒಂದ ಬಾಳೈತಿ. ಮುಂಜಾನಿ ಎದ್ದು ಮಣ್ಣ ತುಳಿದು ಕಲಸಿದರ ಕಲಸಿದಾಂಗ. ಹೊತ್ತು ನೆತ್ತೀ ಮ್ಯಾಲ ಬಂತಂದ್ರ ತ್ರಾಸ ಆಗ್ತೈತಿ.” ಅಂದ. ಗಿರಿಜಕ್ಕ ಕುಂಬಾರಣ್ಣನ ಮಡದಿ ಬಳಿ ಹೋಗಿ “ತಂಗೀ, ನಿಂಗಕ್ಕ ಹೇಳೂ ಅಂಗ ನೀನೂ ಚಂದ ಅದೀ, ನಿನ ಕುಸುರೀನೂ ಅಷ್ಟೇ ಚಂದ ಅದ. ಸ್ವಲ್ಪ ಸೊರಗಿದ್ದೀ ಯಾಕ. ಮೈಯಾಗ ಹುಷಾರಿಲ್ಲೇನು?” ಅಂದದ್ದಕ್ಕ “ಗಿರಿಜಕ್ಕ, ಬೆಳಗಿನಿಂದ ಒಂದೇ ಸಮನ ಕೆಲಸ ಮಾಡೇನಿ. ಅದಕ ತುಸು ಸುಸ್ತಾದಂಗ ಅನ್ನಸ್ತೈತಿ” ಎನ್ನುತ್ತ “ನೀವೆಲ್ಲ ಮಡಕೀ ಕುಡಕೀ ಎಲ್ಲ ತಗೋಂಡ ಮ್ಯಾಲೆ ಒಳಗ ಬರ್ರೀ. ನಿಂ ಕೂಡೆ ಏನೋ ಕೇಳ್ಬೇಕು ಅನಸ್ತದ” ಅಂದಳು. “ಆಯ್ತವ್ವ, ನನಗ ಲಿಂಗ ಬಸವ ಇರೂ ಚಿತ್ರ ಬರಕೊಡವ್ವ”ಎನ್ನುತ್ತ ಅಂಗಡಿ ಬಸಪ್ಪನ ಮಡದಿ ನೀಲಕ್ಕ ಅವಳ ಕೈಗೆ ಅಕ್ಕಿ ಹಿಟ್ಟು ತುಂಬಿದ ಚೀಲ ಕೊಟ್ಟರೆ, ವೀರಾಚಾರಿ ಮಡದಿ ಚಂದ್ರಕ್ಕ ಬೆಲ್ಲ ತುಂಬಿದ್ದ ಚೀಲ ಕೊಟ್ಟಳು.  ಮೂಲಿಮನಿ ಗಿರಿಜಕ್ಕ ಅವಳ ಕೈಯಲ್ಲಿ ತುಪ್ಪದ ಗಿಂಡಿ ಕೊಟ್ಟು ಉಳಿದವರೊಡನೆ ಕುಂಬಾರಣ್ಣನ ಬಳಿ ಸಾರಿ “ಅಣ್ಣಾ, ನೀ ಈ ಸಾರಿ ನಮಗ ಚಂದದ ಐರಾಣಿ ಮಾಡಿಕೊಡಬೇಕ. ನಂಗ ತುಪ್ಪಾ ಅಂದ್ರ ಆಸೆ ಅಂತ ಹಿಂದಿನ ಸಾರಿ ಅಂದಿದ್ಯಲ್ಲ ಅದಕ್ಕ ತುಪ್ಪಾ ತಂದೇನಿ. ನಿನ ಚೆಲ್ವೀ ಕೈಲಿ ಕೊಟ್ಟೇನಿ. ತುಪ್ಪಾ ತಿಂದು ಈ ಸಾರಿ ಹಬ್ಬಕ್ಕ ಚಂದನ ಮಡಕೀ ಮಾಡಕೊಡು”ಎಂದಳು.

ಊರೊಳಗೆ ಮೊಮ್ಮಕ್ಕಳಿಗೆ ಅಜ್ಜಿ ಹಾಡು ಮುಂದುವರೆಸಿತ್ತು.

ಅಕ್ಕೀ ಹಿಟ್ಟು ಬೆಲ್ಲ ತಕ್ಕೊಂಡು ಬಂದೀವ್ನಿ
ಗಿಂಡೀಲಿ ತಂದಿವ್ನಿ ತಿಳಿದುಪ್ಪ, ಗಿಂಡೀಲಿ ತಂದಿವ್ನಿ ತಿಳಿದುಪ್ಪ ಕುಂಬಾರಣ್ಣ
ತಂದೀಡು ನಮ್ಮ ಐರಾಣಿ

“ನಿಮಗ ನಾ ಐರಾಣಿ ಮಾಡ್ಕೊಡೋದು ಖರೇ. ಆದರ ಮಾಡಕೊಡೋ ನನ ಬಗ್ಗೆ ಏನೂ ಅನಲಿಲ್ಲ. ಇವಳನ್ನ ಎಷ್ಟ್ ಹೊಗಳ್ತೀರಿ. ಅದೇನು ಚೆಂದ ಅದಾಳು, ಕಪ್ಪೀ ಮೂಗು, ಮೊಸಳೀ ಬಾಯಿ, ಆನೀ ಕಿವಿ. ಈಕೀನ ಮೊದಲು ನೋಡಿದಾಗ ಎಂಗಪಾ ಹಿಂಗ ಇರೋವಳನ್ನ ಲಗನ ಆಗೋದು ಅನಸಿತ್ತು. ಹೆಂಗಾರ ಇರಲಿ, ನಾನು ಮಾಡೋ ಮಡಕಿ ಕುಡಕೀ ಮ್ಯಾಲೆ ಒಂದಷ್ಟು ಕುಸರೀ ಮಾಡಿದರ ಸಾಕಂತ ಅನಸಿ ಮದವೀ ಆದಿ. ಗೊತ್ತೇನು?” ಅಂದ ಕುಂಬಾರಣ್ಣ ಹುಸಿನಗೆ ಬೀರುತ್ತ.

ಕುಸುರೀ ಮಾಡ್ತಿದ್ದ ಅವನ ಮಡದಿ ಕತ್ತೆತ್ತಿ ಒಮ್ಮೆ ಅವನನ್ನು ನೋಡಿದಳು. ಅವನ ಸರಸದ ಮಾತಿಗೆ ತಿರುಗೇಟು ಕೊಡಬೇಕೆನ್ನಿಸಿತು. “ನೋಡ್ರಕ್ಕಾ, ನಾ ಚಂದಿಲ್ಲೇನು. ಏನ ಕಡಮಿಯಾಗೈತಿ. ಇವ್ರು ನನ್ನನ್ನ ನೋಡಾಕ್ ಬಂದು ಹೋದ ಮ್ಯಾಗ ಅಪ್ಪ ನನ ಕೂಡೆ ಬಂದು, ಹ್ಯಾಂಗಂತೀಯವ್ವ, ಹುಡುಗ ಸಣಕಲು ಕಡ್ಡಿ ಹಂಗದಾನ. ನೀ ಚೆಂದಿದ್ದೀ, ಹಾಡ ಹಾಡ್ತೀ, ಚಿತ್ರ ಬಿಡಿಸ್ತೀ, ಅವಂಗ ಮಡಕೀ ಮಾಡೂದು ಬಿಟ್ರ ಬ್ಯಾರೆ ಏನೂ ಬರಾಕಿಲ್ಲ ಅನಸ್ತೈತಿ. ನೀ ಹೂಂ ಅಂದ್ರನ ನಾ ಮುಂದುವರಿಯೋದು ಅಂದಿದ್ರು.  ನನಗ ಎಲ್ಲದಕಿಂತ ಇವರ ಸಜ್ಜನಿಕೆ ಸರಳ ನಡೆ ಇಷ್ಟ ಆತು. ಒಪಗೊಂಡೆ. ಇಲ್ಲಿ ನೋಡಿದರ ಮನೀ ಕೆಲಸ ಕುಸುರೀ ಕೆಲಸ ಬಾಳ ಅನಸ್ತೈತಿ” ಎನ್ನುವಷ್ಟರಲ್ಲಿ ಸರಸ ದೂರ ಸರಿದು ದುಃಖದ ಎಳೆಯೊಂದು ಮುಂದಿನ ಮಾತನ್ನು ನುಡಿಸಿತ್ತು. “ನಾನು ಚಂದ ಇಲದಿದ್ರ ಚಂದಾಗಿರಾಕೀನ ಲಗನ ಮಾಡಕೊ ಅಂತೇಳ್ರಿ. ನಾನು ಬರೇ ಕುಸುರೀ ಮಾಡ್ಕೊಂಡ್ ಇರತೇನಿ”ಎಂದು ನುಡಿದಾಗ ಎಲ್ಲ ಹೆಂಗಸರೂ ಕುಂಬಾರಣ್ಣನ ಮೇಲೆ ಮುಗಿಬಿದ್ದರು. ನಿಂಗಕ್ಕ ಅವನ ಸಮೀಪ ಬಂದು “ಏನಂದೀ ಕುಂಬಾರಣ್ಣ, ಇನ್ನೊಮ್ಮೆ ಹೇಳ. ನಂ ಹುಡುಗಿ ತಿದ್ದಿದ ಗೊಂಬೀ ಹಂಗ ಎಷ್ಟು ಚೆಂದ ಅದಾಳ. ನಮ್ಮ ಎದರೇ ಹೀಂಗಂತಿ. ಇಂದೇ ಕೊನೀ, ಇನ್ನೆಂದೂ ಹಾಗನಬ್ಯಾಡ”ಎಂದು ತಿಳಿಹೇಳಿದರು. ಅಷ್ಟು ಹೊತ್ತಿಗಾಗಲೇ ಅವನ ಮಡದಿಯ ಕಣ್ಣುಗಳ ಅಂಚಿನಿಂದ ಎರಡು ಹನಿಗಳು ಕುಸುರಿಯ ಮೇಲೆ ಬಿದ್ದು ಗೆರೆ ಮಸಕಾದುದು ಯಾರ ಕಣ್ಣಿಗೂ ಬೀಳಲಿಲ್ಲ.

ಆನಂತರ ಎಲ್ಲರನ್ನೂ ಒಳಗೆ ಕರೆದು ಕುಂಬಾರಣ್ಣನ ಮಡದಿ ಕೂರಿಸಿ ಹಾಲು ಹಣ್ಣು ತಂದು ಮುಂದಿಟ್ಟು ತಾನೂ ಅವರ ಬಳಿ ಕುಳಿತು ತಿಂಗಳಿಂದೀಚೆಗೆ ತನಗೆ ಮೊದಲಿನಂತೆ ಲವಲವಿಕೆಯಿಂದ ಕೆಲಸ ಮಾಡಲು ಆಗದೆ ಬೇಗ ಸುಸ್ತಾಗುತ್ತಿರುವುದಾಗಿಯೂ ತಾನು ಊಟ ತಿಂಡಿ ರುಚಿಸದೆ ಸಂಕಟಪಡುತ್ತಿರುವುದಾಗಿಯೂ ತಿಳಿಸಿದಳು. ಆಗ ಅಲ್ಲಿದ್ದ ಎಲ್ಲರೂ ದೇಹಕ್ಕೆ ಸಂಬಂಧಪಟ್ಟಂತೆ ಕೆಲವು ಪ್ರಶ್ನೆಗಳನ್ನು ಕೇಳಿ ಮುಗಿಸಿದ ಮೇಲೆ ಕುಂಬಾರಣ್ಣನ ಮಡದಿಗೆ ನಿಂಗಕ್ಕ “ತಂಗ್ಯವ್ವ, ಈ ಲಕ್ಷಣಗಳನ್ನು ಕೇಳಿದರ ಸಂತೋಷಪಡೋ ವಿಚಾರ ಅನಸತದ. ನೀ ತಾಯಿಯಾಗೋ ಅಂಗ ಕಾಣಸತೈತಿ” ಎಂದಾಗ ಅವಳ ಮುಖ ಅರಳಿತು. “ಇನ್ನೊಂದೆರಡು ತಿಂಗಳಿನೊಳಗ ಎಲ್ಲ ಬರೋಬ್ಬರಿ ಗೊತ್ತಾಗತ್ತ. ಯಾವುದಕ್ಕೂ ಹೆಚ್ಚು ಶ್ರಮದ ಕೆಲಸ ಮಾಡಬ್ಯಾಡ. ಹಾಗಂತ ಸುಮ್ಮನ ಕೂರಲೂ ಬ್ಯಾಡ. ಸ್ವಾಮಿಗೋಳ ಮಠಕ್ಕ ಹೋಗಿ ಅವರ ಆಶೀರ್ವಾದ ಪಡಿ, ಬಿಡುವಾದಾಗೆಲ್ಲ ಶರಣರ ಕತೀ ಓದು. ಊಟ ರುಚಿಸದ ಇದ್ರ ಹಣ್ಣು ಹಂಪಲು ಆಗಾಗ ತಿನ್ನವ್ವ. ಬಾಯಿ ಹುಳಿ ಕೇಳಸ್ತದ. ಹಾಗಂತ ಮಡಕೀ ಮಾಡೋ ಮಣ್ಣ ತಿನಬ್ಯಾಡ. ಹಿಂದ ಕೆಲವರು ಹಾಗ ಮಾಡತಿದ್ರಂತ. ನಾವು ಇನ ಮುಂದ ವಾರಕ್ಕೊಮ್ಮಿ ನಿನ ನೋಡಾಕ ಬರ್ತೇವ”ಅಂತ ಹೇಳಿ ಎಲ್ಲರೂ ಮನೆಯಿಂದ ಹೊರಗೆ ಕುಂಬಾರಣ್ಣನ ಬಳಿ ಬಂದು “ನೋಡಪಾ ಕುಂಬಾರಣ್ಣಾ, ನಿನ ಹೆಂಣ್ತಿಗೆ ನೀ ತುಂಬಾ ಕೆಲಸ ಹಚ್ತೀಯಂತ, ಅವಳಿಗೆ ತ್ರಾಸ ಆಗ್ತದಂತ. ಸ್ವಲ್ಪ ಬಿಡುವು ಕೊಡು. ಕೆಲಸ ಹೆಚ್ಚಿದ್ದರ ಯಾರ ಕೈಯಾಗಾದ್ರೂ ಕೂಲಿಕೊಟ್ಟು ಮಾಡಿಸ್ಕೋಳಪಾ”ಅಂತ ಗುಟ್ಟು ಬಿಟ್ಟುಕೊಡದೇ ಹೇಳಬೇಕಾದದ್ದನ್ನು ಹೇಳಿ ಎಲ್ಲರೂ ತಮಗೆ ಬೇಕಿದ್ದ ಐರಾಣಿಗಳನ್ನು ಕಾಸು ಕೊಟ್ಟು ಕೊಂಡು ಹಿಂತಿರುಗಿದರು.

ಎಲ್ಲರೂ ಹೊರಡುವುದನ್ನೇ ಕಾಯುತ್ತಿದ್ದ ಕುಂಬಾರಣ್ಣ ಮಡದಿ ಹತ್ತಿರ ಮೆಲ್ಲಗೆ ಹೆಜ್ಜೆ ಇಡುತ್ತಾ ಬಂದ. ಹೆಂಡತಿ ಸರಸಿಯಾದರೂ ತಾನು ಅವಳನ್ನು ಅಂದವಿಲ್ಲದೋಳು, ಕಪ್ಪೀ ಮೂಗು ಆನೀ ಕಿವಿ ಅಂತೆಲ್ಲ ಹೆಂಗಸರೆದುರಿಗೆ ಅಂದದ್ದು ಅವಳಿಗೆ ನೋವುಂಟುಮಾಡಿದೆ ಎಂದು ಅವನಿಗೆ ಅದಾಗಲೇ ಅರಿವಾಗಿತ್ತು. “ಏನ್ ಚಿತ್ರ ಬರೀಲಿಕ್ಕ ಹೊಂಟಿದ್ದಿ”ಅಂದ. ಸದ್ದಿಲ್ಲ, ಮೌನ ಆವರಿಸಿತ್ತು, “ನನ ಮ್ಯಾಲ ಕೋಪ ಮಾಡ್ಕಂಡಿದೀ?” ಪ್ರತ್ಯುತ್ತರವಿಲ್ಲ. ಆಕೆ ತಲೆ ಬಗ್ಗಿಸಿಕೊಂಡೇ ಚಿತ್ರ ಬರೆಯುವುದನ್ನು ಮುಂದುವರೆಸಿದ್ದಳು. “ಕಡಗ ಹಾಕಿದ ನಿನ ಕೈ ನೋಡಾಕ ಎಷ್ಟ್ ಚಂದ ಕಾಣತೈತಿ” ಅಂದ. “ಚಂದ ಅಂತ ಚಂದ, ಯಾಕ, ಕೈ ನೋಡಿ, ಮಂಗ ಕರಡಿ ಒಂಟೀ ಯಾವುದು ನೆನಪಾಗಲಿಲ್ಲೇನು?  ಎಲ್ಲ ಹೊಂಟ ಮ್ಯಾಲ ಬಂದೀ? ಊರೆದುರಿಗೆ ಮಾರಿ ಅಂದು ಮನೀ ಒಳಗ ನಾರಿ ಅನ್ನಾಕ. ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ಅಂತ ಬಸವಣ್ಣ ಹೇಳ್ಯಾರ ಅಂತೀ. ಅದನ್ನ ನೀನೇ ಮರತೀ ನೋಡ. ಈಗ ನಾನು ಆ ಮಹಾತ್ಮನ ಚಿತ್ರ ಬರೀಲಿಕ್ಕ ಹೊಂಟೀನಿ. ಅಡ್ಡೀ ಮಾಡಬ್ಯಾಡ, ನಿನ ಕೆಲಸ ನೀ ನೋಡು” ಅಂದಳು. “ತಪ್ಪಾತ ತಪ್ಪಾತ, ಕೈ ಮುಗೀತೇನ, ಕಾಲ ಕಟತೇನ, ನೀನು ನನ ಬಾಳ ಬಂಗಾರ ಅದೀ. ನಗಸಾಕ ಆಗ ಏನೋ ಅಂದದ್ದು ಆಮ್ಯಾಲೆ ವಿಚಾರ ಮಾಡಿದಾಗ ಸರಿ ಅನಸಲಿಲ್ಲ. ನಾನು ಮಾಡಿದ್ದನ್ನ ನಿನ ಹೊಟ್ಟೀಗಾಕಂಡು ಮರೆತುಬಿಡ. ಇನ್ಮುಂದ ನಿನ ಮನಸಿಗೆ ನೋವ ಮಾಡೂ ಹಾಂಗ ಮಾತಾಡಲ್ಲ” ಅಂತ ಕುಂಬಾರಣ್ಣ ತನ್ನ ಸರಳತೆಯನ್ನು ಮಾತಿನಲ್ಲಿ ತಿಳಿಸುತ್ತಿದ್ದಂತೆ ಅವನ ಮಡದಿಯ ಮುಖ ಪ್ರಶಾಂತವಾಗಿ ತುಟಿಯಂಚಿನಲ್ಲಿ ನಗು ಮೂಡಿತ್ತು.  ಅವಳ ಕಡಗದ ಕೈ ಅಣ್ಣ ಬಸವಣ್ಣನನ್ನು ಚಿತ್ರಿಸುವಲ್ಲಿ ಮಗ್ನವಾಗಿತ್ತು.

ಅಜ್ಜಿಯ ಪದ ಮುಂದುವರೆದಿತ್ತು. ಮಕ್ಕಳು ತಾವೂ ದನಿಗೂಡಿಸುವುದ ಬಿಟ್ಟು, ಬಾಯಿ ಬಿಟ್ಟ ಹಾಗೆ ಕೇಳುತ್ತಿದ್ದರು.

ಕುಂಬಾರಣ್ಣನ ಮಡದಿ ಕಡಗಾದ ಕೈಯಿಕ್ಕಿ
ಕೊಡದಾ ಮ್ಯಾಲೇನ ಬರೆದಾಳ, ಕೊಡದಾ ಮ್ಯಾಲೇನ ಬರೆದಾಳ್ ಕಲ್ಯಾಣದ
ಶರಣಾ ಬಸವನಾ ನಿಲಿಸ್ಯಾಳ

ರಾತ್ರಿ ಊಟ ಮಾಡಿ ಚಾಪೀ ಮ್ಯಾಲ ಮಲಗಿದ್ದ ಕುಂಬಾರಣ್ಣ. ಆತನ ಮಡದಿ ತಾಂಬೂಲದ ತಟ್ಟೆ ದೀಪ ಎರಡನ್ನೂ ಹಿಡಿದುಕೊಂಡು ಬಂದು ಬಳೀ ಕುಳಿತು “ಗೆಳೆಯಾ, ಅಜ್ಜೀ ಮತ್ತು ಮಕ್ಕಳು ಹಾಡ್ ಹಾಡ್ತಿದ್ದು ನಿಂಗ್ ಕೇಳಿಸ್ತೇನ, ಗಮನಿಸಿದಿಯಾ ಹ್ಯಾಂಗ? ಅವರು ನಂ ಬದುಕನ್ನೇ ಹಾಡ್ಯಾಗಸಾರ ಅನಸುತ್ತ” ಅಂದಳು. ಮುಂದುವರೆದು “ದಿನ ಬೆಳಗಾದ್ರ ಸೂರ್ಯ ತನ್ನ ಕಾಯಕ ತಾನು ಮಾಡ್ಕೊಂಡ್ ಹೋಗೂ ಅಂಗ ನೀ ಕೂಡ ಸದಾ ನಿನ ಪಾಡಿಗೆ ಕಾಯಕ ಮಾಡಕೊಂಡ್ ಹೋಗ್ತಿ. ಅದಕ್ಕ ಆಗ, ನೀನು ಮತ್ತ ಆ ಸೂರ್ಯ ಒಂದೇ ಅನಸಿ, ನಿನಗ ನೀನೇ ನಮಸ್ತೀ ಹೌದಲ್ಲೋ ಅಂದೆ” ಎಂದಾಗ ಕುಂಬಾರಣ್ಣ “ನೀ ಶಾಣ್ಯಾ ಇದೀ ನೋಡ. ಎಷ್ಟು ಚಂದ ವಿಚಾರ ಮಾಡ್ತೀ. ನನಗ ನೆನಪೈತಿ. ನಾವಿಬ್ಬರು ಮದುವೀ ಆದಮ್ಯಾಲ ಕೂಡಲಸಂಗಮಕ್ಕ ಹೋಗಿದ್ದಾಗ ಬಸವಣ್ಣನವರ ಐಕ್ಯಸ್ಥಳಾನೇ ನೋಡತ ಗಂಟೆಗಟ್ಲೆ ಸುಮ್ನೆ ಕುಂತುಬಿಟ್ಟಿದ್ದೀ. ನಿನ್ನನ್ನು ನೋಡ್ತಾ ನಾನೂ ಹಾಂಗ ಕೂತಿದ್ದಿ. ಆಮ್ಯಾಲ ನೀನು “ನನ ಮನಸೊಳಗ ಒಂದು ವಿಚಾರ ಐತಿ. ಏನಂದರ ನಾವಿಬ್ಬರೂ ಕೂಡಿ ಕುಂಬಾರಿಕೀ ಕಾಯಕ ಮಾಡೂಣು. ನಂ ಕಾಯಕದಿಂದ ನಾವು ಗುರುತಿಸಿಕೊಳ್ಳೋಣು. ನಮಗ ಹೆಸರೇ ಬ್ಯಾಡ ಅನಸತೈತಿ”ಅಂದಿ. ಆಗ ನನ ಮನಸಿಗೆ ಅದು ಅಗದೀ ಛಲೋ ವಿಚಾರ ಅನಸ್ತು…” ಅಂದಾಗ ಅವಳು ಮುಗುಳ್ನಕ್ಕಳು. ಮತ್ತೆ ಮುಂದುವರೆದು ಕುಂಬಾರಣ್ಣ ಹೇಳಿದ, “ನಾವು ಸತ್ಯ ಶುದ್ಧ ಕಾಯಕ ಮಾಡಕೊಂಡು ತ್ರಿವಿಧ ದಾಸೋಹದಲ್ಲಿ ತೊಡಗಬೇಕ. ಮಹಾಂತ ಶಿವಯೋಗಿಗಳು ‘ಕುಂಬಾರಿಕಿಗಿ ಬಾಳ ದೊಡ್ಡ ಇತಿಹಾಸನೇ ಅದ ನೋಡ. ಮಣ್ಣು ನೀರು ಬೆಂಕಿ ಗಾಳಿ ಆಕಾಶ ಹೀಗ ಎಲ್ಲ ಪಂಚಭೂತಗಳನ್ನ ಅಳವಡಿಸಿಕೊಂಡ ಒಂದೇ ಕಾಯಕ ಅಂದ್ರ ಕುಂಬಾರಿಕಿ. ನಿನ ಹತ್ತರ ಮಡಿಕೆ ಕುಡಿಕೆಗಳನ್ನ ಕೊಳ್ತೇವಿ ಅಂತ ಮಂದಿ ಅಂತಾರ. ಆದರ ನನಗನಸತೈತಿ ಅವರು ಕೊಳ್ಳೋದು ಬಯಲನ್ನ. ಒಂದಪಾ ನೀನು ಮಣ್ಣ ಮುದ್ದೀನೇ ಕೊಟ್ಟರ ತಗೋತಾರೇನೂ? ಮಂದಿಗ ಬಯಲು ಹಿಡಿದು ಕೊಡಾಂವ ನೀನು. ಇಹದ ಅರ್ಥ ಒಂದಾದರ ಪರದ ಅರ್ಥಾನೇ ಬ್ಯಾರಿ ನೋಡ. ಅಂತಾ ಪರಮ ಕಾಯಕಾನಪಾ ಕುಂಬಾರಿಕಿ. ಏನ ಇತಿಹಾಸ ಐತಿ. ಗೋರಾ ಕುಂಬಾರ, ಕುಂಬಾರ ಗುಂಡಯ್ಯನಂತೋರು ಈ ಕಾಯಕಾನ ಹಿಡಿದು ಶರಣರಾದರಪಾ. ಗೋರಾ ಕುಂಬಾರ ಎಲ್ಲರ ಬುರುಡೇ ತಟ್ಟೀನೇ ಭಕ್ತ ಹೌದೋ ಅಲ್ಲವೋ ಅಂತ ಅರುಹಿದ ಅಂತಾರ. ಗುಂಡಯ್ಯ ಮಡಕೀ ತಟ್ಟಿ ತಟ್ಟಿ ಹೊರಡಿಸಿದ ತಾಳಬದ್ದ ನಾದಕ್ಕ ನಟರಾಜನೇ ಬಂದು ನಟನ ಮಾಡಿದ ಅಂತಲೂ ಹೇಳತಾರ. ನಂಮ ಶರೀರಕ್ಕೂ ಘಟ ಅಂತಾರ, ನಿನ ಮಡಕೇಗೂ ಘಟ ಅಂತಾರೋ ಕುಂಬಾರಣ್ಣ’ ಹೀಂಗ ಒಂದೊಂದ ವಿಚಾರಾನ ನಾನು ಅವರ ಬಳಿ ಹೋದಾಗೆಲ್ಲ ಕೂರಿಸಿಕೊಂಡ ಹೇಳ್ಯಾರ. ಮಂದಿಯ ಬದುಕಲ್ಲಿ ಹುಟ್ಟಿನಿಂದ ಸಾವಿನತನಕ ನಾವು ಮಾಡೋ ಮಡಕೀ ಕುಡಕೀಗಳು ಬೇಕಾಗ್ತವ ಹೌದಲ್ಲೋ. ಆಕಾರ ಸರಿಯಾಗಿ ಕೊಟ್ಟು ಅದಕ್ಕ ತಕ್ಕಂತ ಬಾಯಿಮಾಡಿ ನುಣ್ಣಗ ಹದ ಮಾಡಿದ ಮಡಕಿಗಳು ಮಂದಿ ಮೆಚ್ಚೋವಂತ ನಾದ ಹೊರಡಸ್ತಾವ. ನೀನು ತಿದ್ದಿ ನುಣ್ಣಗ ಸವರಿ ಕುಸುರೀ ಮಾಡಿ ಕೊಡೋ ಹಣತಿಗಳು ಬೆಳಕ ಹರಡತಾವ. ಇಂಥ ಕಾಯಕದಾಗ ನಮ್ಮನ್ನ ತೊಡಗಿಸಿಕೊಳ್ಳೂದು, ಎಂತೆಲ್ಲ ಪರಂಪರಿ ಐತಿ ಅದರೊಳಗ ನಾವೂ ಭಾಗೀ ಆಗಬೇಕ ಅನ್ನೂದು ನನಗ ಅಗದೀ ಚಲೋ ಅನಸತೈತಿ” ಅನ್ನುತ್ತ “ಬದುಕಿಗ ಬೇಕಾದಂತ ಇಂತ ಕಾಯಕಾ ಮುಂದುವರೀಬೇಕ. ಮಂದೀನೂ ಕೈಜೋಡಿಸಬೇಕ. ನಮ ಕಾಯಕ ಚಲೋ ಅನ್ನಿಸಿದರ ಅವರೇ ಕತೀ ಕಟ್ತಾರ, ಹಾಡ್ತಾರ ಅದರಾಗ ನಾವಿರ್ತೇವಿ, ನಂ ಕಾಯಕವಿರತೈತಿ. ನಂಮ ಬದುಕಿನ ಮ್ಯಾಲ ಯಾರೋ ಒಬ್ಬ ಒಂದು ಒಕ್ಕಣೇನು ಬರಿಬೋದ. ನಾನ್ ನಿನ್ನನ್ನ ಹಂಗಿಸಿದ್ದನ್ನೂ ಬರೀತಾನ ಅಂವ. ನಿನ ಕಣ್ಣಿಂದ ಎರಡು ಹನಿ ಬಿದ್ದದ್ದು ಯಾರಿಗೂ ಕಾಣಲಿಲ್ಲ ಅಂತಾನೂ ಆತ ಬರಿಬೋದು. ಆದರ ಕುಂಬಾರಣ್ಣನ ಒಳಗಣ್ಣಿಗೆ ಆ ಎರಡು ಹನಿ ಕಂಡವು ಅನ್ನೋದು ಆ ಮನಿಷ್ಯಾನಿಗೆ ಗೊತ್ತಿರೋದಿಲ್ಲ ನೋಡ” ಅಂತ ಪರದಿಂದ ಇಹಕ್ಕೆ ತನ್ನ ಮಾತನ್ನು ತಂದು ನಿಲ್ಲಿಸಿದ.

ತಕ್ಷಣ ಅವನ ಮಡದಿ “ಹೈ ತೆಗೀ, ಅಷ್ಟು ಒಳ್ಳೇದನ್ನ ಹೇಳಿ ಕಡೀಲಿ ಯಾಕ ಹೀಗಂತಿ. ಒಳಗಣ್ಣಿಗೆ ಏನೇನೆಲ್ಲ ಕಾಣುತದ ಅಂತ ಮೂರನೆವಯರಿಗೆ ಗೊತ್ತಾಗೋದು ಅಷ್ಟು ಸುಲಭ ಏನಲ್ಲ. ಮುಂದಿನ ಪೀಳಗೀ ಮಂದಿ ಶಾಣ್ಯಾರಿರ್ತಾರ. ನಂ ಬದುಕಿನಾಗಿರೋ ಒಳ್ಳೇದನ್ನೆಲ್ಲ ಅವರೂ ಅನುಸರಿಸಲಿ ಅಂತ ಹಾರೈಸೊದು ಒಳ್ಳೆದಪಾ”ಎನ್ನುತ್ತ ಆಕೆ “ಸಂಜೀ ಮುಂದ ‘ನಾನು ಮಾಡಿದ್ದನ್ನ ಹೊಟ್ಯಾಗ ಹಾಕೊಂಡು ಮರೆತುಬಿಡು’ ಅಂದ್ಯಲ್ಲ ಅದು ಮರಿಯೋ ವಿಚಾರ ಅಲ್ಲಪಾ. ನನ್ನ ಹೊಟ್ಟೀ ಮಡಕಿ ಒಳಗ ಒಂದು ಕುಡಕೀ ಆಗೋ ಹಂಗೈತಿ” ಎಂದು ಹೇಳಿದಾಗ ಕುಂಬಾರಣ್ಣ ಹಿರಿ ಹಿರಿ ಹಿಗ್ಗಿದ. ತಮ್ಮ ಮನೆಯ ಬಳ್ಳಿಯಲ್ಲೊಂದು ಹೂ ಬಿಡುತ್ತದೆನ್ನುವ ಸುಳಿವು ಆತನ ಆನಂದವನ್ನು ಇಮ್ಮಡಿಗೊಳಿಸಿತ್ತು. ಆ ಸಂತಸದಲ್ಲಿ ಹೆಂಡತಿಯನ್ನು ಪ್ರೀತಿಯಿಂದ ಹತ್ತಿರಕ್ಕೆ ಸೆಳೆದು ಆಕೆಯ ಹೊಟ್ಟೆಯನ್ನು ನೇವರಿಸುತ್ತ ಆತ ಮುತ್ತಿನ ಮಳೆಗರೆಯುತ್ತಿದ್ದಂತೆ ಪಕ್ಕದಲ್ಲೇ ಇದ್ದ ಹಣತೆ ತಾನೂ ನಾಚಿ ಬೆಳಕನ್ನು ಮಂದಗೊಳಿಸಿಕೊಂಡಿತು.

ಕುಂಬಾರಣ್ಣ ಮತ್ತು ಆತನ ಮಡದಿಯ ನಡುವಿನ ಆನ್ಯೋನ್ಯ ದಾಂಪತ್ಯದ ದಿನನಿತ್ಯದ ಬದುಕಿನಲ್ಲಿ ಸರಸವೂ ಆಧ್ಯಾತ್ಮವೂ ಸಮರಸದಲ್ಲಿ ಬೆರೆತಿರುವುದನ್ನು ಕಂಡು ಲೇಖಕನ ಹೃದಯ ತುಂಬಿ ಬಂತು. ಅವನಿಗರಿವಾಗುವುದಕ್ಕೆ ಮುಂಚೆಯೇ ಆ ಅನಾಮಿಕ ಆ ಅನನ್ಯ ಕಾಯಕ ಜೀವಿಗಳಿಗೆ ತುಂಬುಹೃದಯದ ಹಾರೈಕೆ ಸಲ್ಲಿಸಿದ್ದು ಹಾಳೆಯ ಮೇಲೆ ಹಾಡಿನ ಚರಣವಾಗಿ ಮೂಡಿಬಂತು.

ಕುಂಬಾರಣ್ಣನ ಮನಿ ತುಂಬಾ ಚಂದಾಗಿರಲಿ
ಗೊಂಬೀಯಂತೀರೋ ಮಗು ಬರಲಿ, ಗೊಂಬೀಯಂತೀರೋ ಮಗು ಬರಲಿ ಮನಿಯೊಳಗ
ಅಂಬೀಗಾಲಿಕ್ಕುತ ನಲಿಯಾಲಿ.

 

Previous post ಶಿವನ ಕುದುರೆ…
ಶಿವನ ಕುದುರೆ…
Next post ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ

Related Posts

ದಿಟ್ಟ ನಿಲುವಿನ ಶರಣೆ
Share:
Articles

ದಿಟ್ಟ ನಿಲುವಿನ ಶರಣೆ

April 29, 2018 ಡಾ. ಶಶಿಕಾಂತ ಪಟ್ಟಣ
ಹನ್ನೆರಡನೆಯ ಶತಮಾನದಲ್ಲಿ ಅನೇಕ ಶರಣರು, ಸಾಧಕರು ತಮ್ಮ ಅನುಭಾವದಿಂದ ಕಲ್ಯಾಣ ಕ್ರಾಂತಿಗೆ ಕೊಡುಗೆಯಾದರು. ಅವರಲ್ಲಿ ವಿಶಿಷ್ಟ, ಪ್ರಮುಖ ಚಿಂತಕಿ, ಅನುಭಾವಿ ದಿಟ್ಟ ನಿಲುವಿನ ಶರಣೆ...
ಧರ್ಮೋ ರಕ್ಷತಿ ರಕ್ಷಿತಃ
Share:
Articles

ಧರ್ಮೋ ರಕ್ಷತಿ ರಕ್ಷಿತಃ

January 7, 2019 ಡಾ. ಪಂಚಾಕ್ಷರಿ ಹಳೇಬೀಡು
ಆಗ ತಾನೇ ಹುಟ್ಟಿದ  ಮಗು ಸ್ವತಃ ದೈವೀ ಸ್ವರೂಪವೇ ತಾನಾಗಿರುವುದು. ಕಾರಣ, ಅದಕ್ಕೆ ಈ ಇಹಲೋಕದ ಯಾವ ಗುಣ ನಡತೆಗಳ ಕಲೆಯೂ ಅಂಟಿರುವುದಿಲ್ಲ. ಪರಮಾತ್ಮನ ಕಳೆಯೇ ಚಿತ್ಕಳೆಯಾಗಿ ಈ...

Comments 11

  1. Mrutyunjaya Revadi
    May 6, 2019 Reply

    ಜಾನಪದ ಗೀತೆಗೆ ಅತಿ ಸುಂದರ, ಮಧುರ ಕತೆ ಹೇಳಿದ ಲೇಖಕರಿಗೆ ವಂದನೆ. ಶರಣ ದಾಂಪತ್ಯವನ್ನು ಕುಸುರಿಯಂತೆ ಕೆತ್ತಿದ ಕತೆಗೆ ಒಪ್ಪುವ ಚಿತ್ರಗಳಿವೆ. ಕುಂಬಾರಣ್ಣ ಮತ್ತು ಅವನ ಹೆಂಡತಿ ಕಲ್ಯಾಣದಲ್ಲೇ ಇದ್ದಂತೆ ಭಾಸವಾಯಿತು.

  2. Sharada A.M
    May 6, 2019 Reply

    ಮುಂಜಾನೆದ್ದು ಕುಂಬಾರಣ್ಣ…… ನ ಹಿಂದೆ ಇಂತಹ ಕತೆ ಇರೋದು ನನಗೆ ತಿಳಿದಿರಲಿಲ್ಲ. ನನ್ನ ಮೆಚ್ಚಿನ ಜನಪದ ಗೀತೆಗಳಲ್ಲಿ ಇದೂ ಒಂದು. ಕುಂಬಾರಣ್ಣನ ಕತೆಯ ಉದ್ದಕ್ಕೂ ನೀವು ಅಳವಡಿಸಿರುವ ಗೀತೆ ವಿನೂತನವಾದದ್ದು.

  3. Chandarashekhar Kavali
    May 6, 2019 Reply

    ಕುಂಬಾರಣ್ಣ ಸಾಮಾನ್ಯನಲ್ಲ, ಶರಣ, ಕಾಯಕಯೋಗಿ. ಅವನ ವ್ಯಕ್ತಿತ್ವ ಭಾಳ ಚನ್ನಾಗಿ ಬರೆದಿದ್ದೀರಿ.

  4. P.L.Raveesh
    May 6, 2019 Reply

    ಕುಂಬಾರಣ್ಣನ ಕತೆಯ ಮೂಲಕ ಶರಣ ಸಂದೇಶಗಳನ್ನು ತಲುಪಿಸಿದ ಮಲ್ಲೇಶ್ ಅವರಿಗೆ ಧನ್ಯವಾದಗಳು. ಕುಂಬಾರಿಕೆಯ ಕಸರತ್ತನ್ನು, ಕುಸುರಿ ಕೆಲಸವನ್ನು ವರ್ಣಿಸಿದ ಬಗೆ ಚೆನ್ನಾಗಿದೆ. ಭಾಷೆ ಬದಲಿಸಬಹುದಿತ್ತು, ನನಗೆ ಓದಲು ಸ್ವಲ್ಪ ಕಷ್ಟವಾಯಿತು.

  5. ಕಾವ್ಯ ಜಗನ್ನಾಥ
    May 8, 2019 Reply

    ಕುಂಬಾರಣ್ಣನ ಸಂಸಾರ ಸರಸಮಯವಾಗಿಯೂ, ಶರಣಮಯವಾಗಿಯೂ ಇದೆ. ಅನೇಕ ಕಡೆ ನಾಟಕೀಯ ಶೈಲಿ ಎನಿಸಿದರೂ ಸ್ವಾರಸ್ಯಕರವಾಗಿ ಲೇಖಕರು ಬರೆದಿದ್ದಾರೆ.

  6. Geetha Jayraj
    May 10, 2019 Reply

    ಅಜ್ಜಿ ಮೊಮ್ಮಕ್ಕಳಿಗೆ ಹಾಡುವ ಹಾಡಿನಲ್ಲಿ ಶರಣ ದಾಂಪತ್ಯದ ಕತೆ ತಿಳಿಸಿದ ರೀತಿ ಹೃದಯಕ್ಕೆ ಮುಟ್ಟುವಂತಿದೆ. ಮಲ್ಲೇಶ ಸರ್ ಧನ್ಯವಾದಗಳು.

  7. mahadev hadapad
    May 10, 2019 Reply

    ಇಂಟ್ರಸ್ಟಿಂಗ್ ಆಗಿದೆ… ಮನಮುಟ್ಟಿತು.

  8. Mariswamy Gowdar
    May 13, 2019 Reply

    ಲೇಖಕರು ಹೇಳಿದಂತೆ ಸರಸವೂ, ಆಧ್ಯಾತ್ಮವೂ ಬರೆತರೆ ಸಂಸಾರ ಸಸಾರವೆನಿಸುತ್ತದೆ. ಕುಂಬಾರಣ್ಣ ಶರಣ ದಂಪತೆಗಳು ಭವ ಸಾಗರ ದಾಟಬಲ್ಲ ಹಡಗನ್ನು ಏರಿದಂತೆ ಭಾಸವಾಗುತ್ತದೆ. ಸುಂದರ ದಾಂಪತ್ಯ ಚಿತ್ರಣ ಹೊಸ ಅನುಭವ ಕೊಟ್ಟಿದೆ.

  9. Sheela Shankar
    May 15, 2019 Reply

    ಕುಂಬಾರ ವೃತ್ತಿಯ ವಿವರದ ಮೂಲಕ ಕುಂಬಾರಣ್ಣನ ಜೀವನವನ್ನು ರೂಪಿಸಿದ ಕತೆಗಾರರು ಸರಸ, ಸಮರಸ, ಧರ್ಮಗಳನ್ನು ಬೆಸೆದಿದ್ದಾರೆ. ನೂತನ ಪ್ರಯತ್ನ ಬಹಳ ಆಪ್ಯಾಯವೆನಿಸಿತು. ಕುಂಬಾರಣ್ಣನಂತಹ ಬೆರೆ ಬೆರೆ ಕಾಯಕದ ಶರಣರ ಜೀವನವನ್ನು ಹೀಗೆ ಒಳಹೊಕ್ಕು ನೋಡುವುದು ವಿಬಿನ್ನ ಅನುಭವ.

  10. Chinmayi
    May 24, 2019 Reply

    Very romantic conversation.

  11. Mahadevi Kollapur
    May 26, 2019 Reply

    ಶರಣರ ದಾಂಪತ್ಯದ ಚಿತ್ರಣ ಮನಮುಟ್ಟುವಂತಿದೆ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹಿರಿಯರ ಹಾದಿ…
ಹಿರಿಯರ ಹಾದಿ…
July 4, 2022
ಅಮುಗೆ ರಾಯಮ್ಮ (ಭಾಗ-3)
ಅಮುಗೆ ರಾಯಮ್ಮ (ಭಾಗ-3)
November 10, 2022
ಮನ ಉಂಟೇ ಮರುಳೇ, ಶಿವಯೋಗಿಗೆ?
ಮನ ಉಂಟೇ ಮರುಳೇ, ಶಿವಯೋಗಿಗೆ?
November 10, 2022
ಸಾವಿನ ಸುತ್ತ…
ಸಾವಿನ ಸುತ್ತ…
January 8, 2023
ಅರಸೊತ್ತಿಗೆಯಿಂದ ಅರಿವಿನೆಡೆಗೆ
ಅರಸೊತ್ತಿಗೆಯಿಂದ ಅರಿವಿನೆಡೆಗೆ
April 29, 2018
ಭಕ್ತನಾಗುವುದೆಂದರೆ…
ಭಕ್ತನಾಗುವುದೆಂದರೆ…
January 10, 2021
ಅಲ್ಲಮಪ್ರಭುವಿನ ಶೂನ್ಯವಚನಗಳು
ಅಲ್ಲಮಪ್ರಭುವಿನ ಶೂನ್ಯವಚನಗಳು
October 13, 2022
ಅರಿವು ಕಣ್ತೆರೆಯದವರಲಿ….
ಅರಿವು ಕಣ್ತೆರೆಯದವರಲಿ….
August 5, 2018
ಇದ್ದಷ್ಟೇ…
ಇದ್ದಷ್ಟೇ…
January 10, 2021
ಕಾಯೋ ಗುರುವೇ…
ಕಾಯೋ ಗುರುವೇ…
February 11, 2022
Copyright © 2023 Bayalu