ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
Share:

ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ

ವಚನ ಎಂದೊಡನೆ ಥಟ್ಟೆಂದು ನೆನಪಾಗುವುದು ಹನ್ನೆರಡನೇ ಶತಮಾನ, ಅನುಭವ ಮಂಟಪ, ಬಸವಣ್ಣನವರು ಮತ್ತು ಅಂದಿನ ಶರಣರು. ವಚನ ಎಂಬ ಶಬ್ದಕ್ಕೆ ವಿಶೇಷ ಅರ್ಥವಿದೆ. ವಚನ ಎಂದರೆ ಸತ್ಯವಾದ ನುಡಿ, ಪ್ರಮಾಣ, ನಡೆದಂತೆ ನುಡಿದ ಮಾತು. ಆದ್ದರಿಂದ ವಚನಗಳು ಶರಣರ ಕನ್ನಡಿಯಾದರೆ ಅವರ ವ್ಯಕ್ತಿತ್ವ ವಚನದಲ್ಲಿ ಪ್ರತಿಫಲಿತವಾಗುತ್ತದೆ.

ವಚನಗಳು ಶರಣರ ಆತ್ಮಗೀತೆಗಳು, ಅವರ ಸತ್ಪಥ, ಸದ್ಭಾವದಿಂದ ರಚಿತವಾದ ವಚನಗಳು ಜಗತ್ತಿಗೆಆಕಾಶ ದೀಪದಂತೆ ಸದಾ ಜ್ಞಾನದ ಬೆಳಕನ್ನೀಯಬಲ್ಲವು. ಮಾನವರ ಅಜ್ಞಾನವನ್ನು ಕಳೆದು ಸುಜ್ಞಾನದ ಬೆಳೆ ತೆಗೆಯುವಲ್ಲಿ ವಚನಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಇಂಥ ವಚನಗಳನ್ನು ಓದುಗರು, ಸಾಧಕರು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಆದರೆ ವಚನಗಳೇ ದಾರಿತಪ್ಪಿಸುವಂತಿದ್ದರೆ ಏನು ಮಾಡುವುದು? ಹೀಗೆ ಹಾದಿ ತಪ್ಪಿಸುವ ವಚನಗಳೇ ಪ್ರಕ್ಷಿಪ್ತ ವಚನಗಳು.ಇದಕ್ಕೆ ಬಸವಣ್ಣನವರ ವಚನದಲ್ಲೇ ಉತ್ತರವಿದೆ: “ಒಲೆಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು. ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ, ನಾರಿ ತನ್ನ ಮನೆಯಲ್ಲಿ ಕಳುವಡೆ, ತಾಯ ಮೊಲೆವಾಲು ನಂಜಾಗಿ ಕೊಲುವಡೆ, ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ!” ಎಂಬಂತಾಯಿತಲ್ಲವೇ?

ಎರಡು ರೀತಿಯ ಪ್ರಕ್ಷಿಪ್ತ ವಚನಗಳನ್ನು ನಾವು ಕಾಣಬಹುದು. ೧) ಮೂಲ ಶರಣರಿಂದ ರಚಿತವಾದ ವಚನಗಳ ಮಧ್ಯ ಕೃತ್ರಿಮವಾಗಿ ಕೆಲ ಸಾಲು ಸೇರಿಸಿರುವುದು. ೨) ಇಡೀ ವಚನವನ್ನು ಹೊಸದಾಗಿ ಸೃಷ್ಟಿಸಿ ಶರಣರ ವಚನವೆಂಬಂತೆ ಬಿಂಬಿಸಿ ಮೂಲ ವಚನಗಳೊಳಗೆ ಸೇರಿಸುವುದು. ಈ ಬಗೆಯ ವಚನಗಳು ಶರಣರ ಮೂಲ ಆಶಯಗಳಿಗೆ ವಿರುದ್ಧವಾಗಿದ್ದು ಓದುಗರಿಗೆ/ಸಾಧಕರಿಗೆ ತಪ್ಪು ಸಂದೇಶಗಳನ್ನು ಕೊಡುತ್ತವೆ.
ವಚನಗಳ ಪ್ರಕ್ಷಿಪ್ತತೆಗೆ ಕಾರಣವೇನು?

ಕಲ್ಯಾಣ ಕ್ರಾಂತಿಯ ತರುವಾಯ ನಾಡಿನಾದ್ಯಂತ ಚೆದುರಿದ ಶರಣರು, ಹಾಗೂ ಧರ್ಮ ಪ್ರಚಾರಕ್ಕೆಂದುನಿಯೋಜನೆಗೊಂಡಿದ್ದ ಚರ ಜಂಗಮರು ಅಲ್ಲಲ್ಲಿ ಮಠಗಳನ್ನು ಸ್ಥಾಪಿಸಿಕೊಂಡು ನೆಲೆಯೂರಿ ಸ್ಥಿರ ಜಂಗಮರಾದರು. ಕಾಲಾನುಕ್ರಮದಲ್ಲಿ ಇಂಥಾ ಕೆಲವರು ಶರಣರ ಆಶೋತ್ತರಗಳನ್ನು ಬದಿಗೊತ್ತಿ ಸ್ವಹಿತಾಸಕ್ತರಾಗಿ ತಮ್ಮ ಉಪ ಜೀವನಕ್ಕಾಗಿ ಸಮಾಜದ ಹಿತಾಸಕ್ತಿಗಳನ್ನು ಬಲಿಕೊಟ್ಟು ವಚನಗಳ ವಿರೂಪಕ್ಕೆ ಕಾರಣರಾದರು. ಇವರುಗಳು ಸಮಾಜದಲ್ಲಿ ತಮ್ಮ ಸ್ಥಾನವನ್ನು ಭದ್ರವಾಗಿ ನೆಲೆಗೊಳಿಸಿ ಕೊಳ್ಳಲು ಸಮಷ್ಟಿ ಚಿಂತನೆಯನ್ನು ಬದಿಗೊತ್ತಿ ವ್ಯಷ್ಟಿ ಚಿಂತನೆಯನ್ನು ಜನಮಾನಸದಲ್ಲಿ ಬಿತ್ತಿ ಬೆಳೆದರು. ಬಸವಯುಗದಲ್ಲಿರದ ಮಠಗಳು ಬಸವೋತ್ತರ ಯುಗದಲ್ಲಿ ಅಸ್ತಿತ್ವಕ್ಕೆ ಬಂದವು. ಶರಣರು ಬಳಸದ ವಸ್ತ್ರ ಸಂಹಿತೆ (ಕಾವಿ ಬಟ್ಟೆ) ತದನಂತರದಲ್ಲಿ ಚಾಲ್ತಿಗೆ ಬಂದಿತು. ಸ್ವತಃ ಬಸವಣ್ಣನವರೇ ಮಾಡಿಸಿ ಕೊಳ್ಳದ ಪಾದಪೂಜೆ ಹಾಗೂ ಪಾದೋದಕಗಳು, ಪಾದನಮಸ್ಕಾರ ಹಾಗೂ ಪ್ರಸಾದಗಳು ಮಹತ್ವ ಪಡೆದುಕೊಂಡವು. ಇವೆಲ್ಲವುಗಳನ್ನು ವಚನಗಳ ಮೂಲಕ ಪುಷ್ಠೀಕರಿಸುವ ಅವಶ್ಯಕತೆ ಮಠ ಪೀಠಗಳ ಅಧಿಕಾರಿಗಳಿಗೆ ಎದುರಾಯಿತು. ಹಾಗಾಗಿ ಶರಣರ ವಚನಗಳನ್ನು ವಿರೂಪಗೊಳಿಸುವ ಕಾರ್ಯ ಸದ್ದಿಲ್ಲದೇ ನಡೆಯಿತು. ಅಚ್ಚ ಕನ್ನಡದಲ್ಲಿ ರೂಪಿತಗೊಂಡ ವಚನಗಳೊಳಗೆ ಸಂಸ್ಕೃತ ಶ್ಲೋಕಗಳು ತುರುಕಲ್ಪಟ್ಟವು, ಕೆಲವು ವಚನಗಳ ಮಧ್ಯದಲ್ಲಿ ತಮಗೆ ಬೇಕಾದ ಸಾಲುಗಳನ್ನು ಸೇರಿಸಿದರು. ಮತ್ತೆ ಕೆಲವು ವಚನಗಳನ್ನು ತಾವೇ ಸೃಷ್ಟಿಸಿ ಕೊನೆಯಲ್ಲಿ ಶರಣರ ಅಂಕಿತನಾಮಗಳನ್ನು ಸೇರಿಸಿ ವಚನಗಳ ಕಟ್ಟುಗಳೊಳಗೆ ತೂರಿಸಿದರು. ಬಸವೋತ್ತರ ಯುಗದಲ್ಲಿ, ಕರ್ಮಠ ವ್ಯವಸ್ಥೆಯನ್ನು ಸಮಾಜದಲ್ಲಿ ಮರು ಸ್ಥಾಪಿಸುವ ಹುನ್ನಾರ, ಮುಗ್ಧ ಭಕ್ತರನ್ನು ತಮ್ಮ ಪರಿಧಿಯಲ್ಲಿ ಹಿಡಿದಿಡುವ, ಶೋಷಿಸುವ, ಸ್ವತಂತ್ರವಿಚಾರಗಳಿಗೆ ಅವಕಾಶವಿಲ್ಲದಿರುವ ವ್ಯಕ್ತಿ ಕೇಂದ್ರಿತ (ಮಠ ಕೇಂದ್ರಿತ) ಧಾರ್ಮಿಕ ವ್ಯವಸ್ಥೆಯು ಲಿಂಗಾಯತ ಧರ್ಮದೊಳಗೆ ಸದ್ದಿಲ್ಲದೇ ಸೇರಿಕೊಂಡಿತು.

ಇದು ಪ್ರವಾದಿ ಬಸವಣ್ಣನವರಿಗೆ, ಅವರ ಆಶಯಗಳಿಗೆ ಬಗೆದ ದ್ರೋಹ. ಈಗ ಮತ್ತೆ ಜನರು ಎಚ್ಚರ ಗೊಳ್ಳಬೇಕಾಗಿದೆ. ನಿಜವಾದ ಬಸವ ವಿಚಾರಗಳೇನು, ಆಚಾರಗಳೇನು ಎಂಬುದನ್ನು ಅರಿತು ನಡೆಯಬೇಕಿದೆ. ಮಠಾಧಿಪತಿಗಳು ಈ ವಿಚಾರಗಳನ್ನು ಅವರ ಭಕ್ತರಿಗೆ ತಿಳಿಸಿಕೊಡಲು ತಯಾರಿಲ್ಲ. ಏಕೆಂದರೆಅವರ ಉಪ ಜೀವನ ನಡೆಯಬೇಕಲ್ಲ! ಹಾಗಾಗಿ ವಚನಾಸಕ್ತರು ವಚನಗಳನ್ನು ತಾವೇ ಸರಿಯಾಗಿ ಅರಿತು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಪ್ರಕ್ಷಿಪ್ತ ವಚನಗಳನ್ನು ಕಂಡುಹಿಡಿಯುವುದು ಹೇಗೆ?

ಇದು ಅಷ್ಟೇನು ಕಷ್ಟಕರವಲ್ಲ. ಇದಕ್ಕೆ ಬೇಕಾಗಿರುವುದು ಶರಣರ ಮೇಲೆ ಶ್ರದ್ಧೆ, ಗೌರವ ಹಾಗೂ ವಚನಗಳ ಮೇಲೆ ಪ್ರೀತಿ. ಇವಿಷ್ಟಿದ್ದರೆ ಸುಲಭವಾಗಿ ಪ್ರಕ್ಷಿಪ್ತ ವಚನಗಳನ್ನು ಕಂಡುಹಿಡಿಯಬಹುದು. ಮೊದಲು ನಮಗೆ ಹನ್ನೆರೆಡನೇ ಶತಮಾನದ ಶರಣರ ಮೂಲ ಆಶಯ ಮತ್ತು ವಚನ ಚಳುವಳಿಯ ಸ್ಪಷ್ಟ ಅರಿವು ಇರಬೇಕಾಗುತ್ತದೆ. ಬಸವಾದಿ ಶರಣರ ಉಗಮವಾಗಿದ್ದೇ ಅಂದು ಸಮಾಜದಲ್ಲಿ ಬೇರೂರಿದ್ದ ಜನಾಂಗೀಯ ಅಸಮಾನತೆ, ವರ್ಣಭೇದ, ವರ್ಗಭೇದ, ಜಾತೀಯತೆ, ಸ್ತ್ರೀ ಅಸಮಾನತೆ, ಸೋಮಾರಿತನ, ದೇವರ ಹೆಸರಲ್ಲಿ ನಡೆಯುತ್ತಿದ್ದ ಅತ್ಯಾಚಾರ, ಅನಾಚಾರ, ಪ್ರಾಣಿಬಲಿ, ದೇವದಾಸಿ ಮುಂತಾದ ಅನೇಕ ರೀತಿಯ ಕೊಳಕನ್ನು ತೊಳೆದು ಆ ಜಾಗದಲ್ಲಿ ಅರಿವನ್ನು, ಸದಾಚಾರವನ್ನು, ಸತ್ಕ್ರಿಯೆ ಹಾಗೂ ಸುಜ್ಞಾನವನ್ನು ಜನಮನದಲ್ಲಿ ಬಿತ್ತಿ ಬೆಳೆಯಲೆಂದು. ಹೀಗೆ ಯಾವ ಉದ್ದೇಶಕ್ಕಾಗಿ ವಚನಗಳ ರಚನೆಯಾಯಿತೆಂದು ಮೊದಲು ಅರಿತಾಗ, ಕೆಲವು ವಚನಗಳಲ್ಲಿ ಇಂದು ಕಾಣಸಿಗುವ ಹಲವು ಆಚಾರ ವಿಚಾರಗಳು ಶರಣರ ಆಚಾರ ವಿಚಾರಗಳಿಗೆ ತಾಳೆಯಾಗುವುದಿಲ್ಲ ಎಂಬ ಅರಿವು ನಮ್ಮಲ್ಲಿ ಮೂಡುವುದು.

ಶರಣರು ನಮಗೆ ವಿಚಾರ ಸ್ವಾತಂತ್ರ್ಯವನ್ನು ಕಲಿಸಿ ಕೊಟ್ಟಿದ್ದಾರೆ. ಅವರು ಕಲಿಸಿದ ವಿಚಾರ ಸ್ವಾತಂತ್ರ್ಯವನ್ನು ವಚನಗಳ ಮೇಲೆ ನಾವು ಶುದ್ಧ ಪ್ರಾಂಜಲ ಮನಸ್ಸಿನಿಂದ ಪ್ರಯೋಗಿಸಬೇಕು. ಆಗ ನಮಗೆ ಶರಣರು ಇಂತಹ ವಿಚಾರಗಳನ್ನು ಹೀಗೆ ಹೇಳಿರಲು ಸಾಧ್ಯವೇ ಇಲ್ಲ, ನಿಸ್ಸಂಶಯವಾಗಿ ಇದು ಕೃತ್ರಿಮವಾಗಿ ವಿರೂಪಗೊಳಿಸಿರುವ ವಚನ ಎಂದು ಮನವರಿಕೆಯಾಗುವುದರಲ್ಲಿ ಯಾವುದೇ ಸಂಶಯ ಬೇಡ. ಅದಕ್ಕಾಗಿಯೇ ಬಸವಣ್ಣನವರು “ನಿನ್ನರಿವೇ ನಿನಗೆ ಗುರು” ಎಂದಿರುವರು. ಅಲ್ಲಮಪ್ರಭುದೇವರು ಅರಿವಿನ ಸಂಪಾದನೆ ಕುರಿತು ಹೇಳುತ್ತಾರೆ, “ಗುರುವಿಡಿದ ಅರಿವು ಅರಿವಲ್ಲ, ಲಿಂಗವಿಡಿದ ಅರಿವು ಅರಿವಲ್ಲ. ಇಲ್ಲದ ಗುರು ಇಲ್ಲದ ಲಿಂಗ! ಕಲ್ಪಿತಕ್ಕೆ ಅರಿವಹುದೆ? ತನ್ನಿಂದ ತಾನರಿವುದೆ ಅರಿವು ಗುಹೇಶ್ವರಾ.”
“ನಿಮ್ಮಲ್ಲಿ ನೀವು ತಿಳಿದು ನೋಡಿದರೆ ಅನ್ಯವಿಲ್ಲ ಕಾಣಿರಣ್ಣಾ. ಅರಿವು ನಿಮ್ಮಲ್ಲಿಯೆ ತದ್ಗತವಾಗಿದೆ. ಅನ್ಯಭಾವವ ನೆನೆಯದೆ ತನ್ನೊಳಗೆ ತಾನೆಚ್ಚರಬಲ್ಲಡೆ ತನ್ನಲ್ಲಿಯೆ ತನ್ಮಯವು ಗುಹೇಶ್ವರಲಿಂಗವು.”

ಅರಿವೆಂಬುದೇ ಪರಶಿವತತ್ವ. ಅದು ಪ್ರತಿಯೊಬ್ಬ ಮಾನವನೊಳಗೂ ಹಾಸುಹೊಕ್ಕಾಗಿದೆ, ಅಂಥಾ ಅವಿರಳ ವಸ್ತುವನ್ನು ತನ್ನಿಂದ ತಾನೇ ಅರಿಯಬೇಕೆಂಬುದಾಗಿ ತಿಳಿಸಿದ್ದಾರೆ. ಹೆಚ್ಚಾಗಿ ಪ್ರಕ್ಷಿಪ್ತತೆ ಕಂಡುಬರುವುದು ಚೆನ್ನಬಸವಣ್ಣನವರ ವಚನಗಳಲ್ಲಿ. ಚೆನ್ನಬಸವಣ್ಣನವರನ್ನು ಚಿನ್ಮಯ ಜ್ಞಾನಿ, ಷಟ್ಸ್ಥಲ ಬ್ರಹ್ಮಿ, ಅವಿರಳ ಜ್ಞಾನಿ ಎಂದೆಲ್ಲಾ ಗುರುತಿಸುತ್ತಾರೆ. ಹಾಗಾಗಿ ಚೆನ್ನಬಸವಣ್ಣನವರ ವಚನಗಳನ್ನೇ ಹೆಚ್ಚು ಪ್ರಕ್ಷಿಪ್ತತೆಗೆ ಒಳಪಡಿಸಲಾಗಿದೆ ಎನ್ನಬಹುದು.

ಚೆನ್ನಬಸವಣ್ಣನವರ ಈ ಕೆಳಗಿನ ವಚನವನ್ನು ಗಮನಿಸಿ, ಆರಂಭದಲ್ಲಿ ಪಾದಪೂಜೆ ತೀರ್ಥ ಪ್ರಸಾದ ಗಳನ್ನು ಕುರಿತು ಬಹಳ ಅರ್ಥಗರ್ಭಿತವಾಗಿ ಹೇಳಿದ್ದಾರೆ. “ಅಯ್ಯಾ ಪಾದಪೂಜೆಯೆಂಬುದು ಅಗಮ್ಯ ಅಗೋಚರ ಅಪ್ರಮಾಣ ಅಸಾಧ್ಯ. ಶ್ರೀಗುರು ಬಸವೇಶ್ವರದೇವರು ತಮ್ಮ ಅಂತರಂಗದೊಳಗಣಪಾದಪೂಜೆಯಿಂದಾದ ತೀರ್ಥಪ್ರಸಾದವ ಗಣಸಮೂಹಕ್ಕೆ ಸಲ್ಲಲಿ’ ಎಂದು ನಿರ್ಮಿಸಿ, ಭಕ್ತಿಯ ತೊಟ್ಟು ಮೆರೆದರು. ಇಂತಪ್ಪ ತೀರ್ಥಪ್ರಸಾದವ ಸೇವಿಸುವ ಕ್ರಮವೆಂತೆಂದಡೆ, ಗ್ರಾಮಸೇವಾದಿಸಂರಂಭನೃತ್ಯಗೀತಾದಿ ವರ್ಜಿತಃ ಅನಾಚಾರವಿಹೀನೋ ಯೋ ತಸ್ಯ ತೀರ್ಥಂ ಪಿಬೇತ್ ಸದಾ ಇಂತೆಂದುದಾಗಿ, ತಂಬೂರಿ ಕಿನ್ನರಿವಿಡಿದು ಮನೆಮನೆಯ ಬೇಡುವಾತ ಹಲವು ವೇಷವ ತೊಟ್ಟು ಆಡುವಾತ, ನಗಾರಿ ಸಮ್ಮೇಳ ಕರಣೆ ಕಹಳೆ ಶಂಖ ಬಾರಿಸುವಾತ ಅಷ್ಟಾವರಣ ಪಂಚಾಚಾರದಲ್ಲಿ ಅಹಂಕರಿಸುವಾತ ಅನಾಚಾರಿ. ಪರ್ವತದ ಕಂಬಿ ಮಹಾಧ್ವಜವ ಹೊರುವಾತ ರಾಜಾರ್ಥದಲ್ಲಿ ಅಹುದ ಅಲ್ಲವ ಮಾಡಿ, ಅಲ್ಲವಅಹುದ ಮಾಡುವಾತ ಅನಾಚಾರವ ಹೇಳುವಾತ ಸದಾಚಾರದಲ್ಲಿ ತಪ್ಪುವಾತ ಭಕ್ತಗಣಂಗಳ ನಿಂದೆಯ ಮಾಡುವಾತ ಸದಾಚಾರ ಸದ್ಭಕ್ತಗಣಂಗಳ ಕಂಡಡೆ ಗರ್ವಿಸುವಾತ ಧಾನ್ಯ ಅರಿವೆ ಬೆಳ್ಳಿ ಬಂಗಾರಂಗಳ ಕ್ರಯ ವಿಕ್ರಯದಲ್ಲಿ ವಂಚಿಸುವಾತ ಗುರುಹಿರಿಯರಲ್ಲಿ ಹಾಸ್ಯ ರಹಸ್ಯವ ಮಾಡುವಾತ ಪರದೈವ ಪರಧನ ಪರಸ್ತ್ರೀ ಗಮಿಸುವಾತ ಸೂಳೆ ಬಸವಿಯರ ಗೃಹದಲ್ಲಿ ಇರುವಾತ ಆಚಾರಭ್ರಷ್ಟ ಮಾನಹೀನರ ಸಂಗವ ಮಾಡುವಾತ, ದುರುಳು ಮಂಕು. ಅವರ ಗುರುಲಿಂಗಜಂಗಮವೆಂದು ನುಡಿಯಲಾಗದು. ಅದೆಂತೆಂದಡೆ: ಖೇಟಕೋ ದಂಡಚಕ್ರಾಸಿಗದಾತೋಮರಧಾರಿಣಃ ಜಂಗಮಾ ನಾನುಮಂತವ್ಯಾಃಸ್ವೀಯಲಕ್ಷಣಸಂಯುತಾಃ ಆಶಾತೋ ವೇಷಧಾರೀ ಚ ವೇಷಸ್ಯ ಗ್ರಾಸತೋಷಕಃ ಗ್ರಾಸಶ್ಚ ದೋಷವಾಹೀ ಚ ಇತಿ ಭೇದೋ ವರಾನನೇ ಅನಾಚಾರವಿಭಾವೇನ ಸದಾಚಾರಂ ನ ವರ್ಜಯೇತ್ ಸದಾಚಾರೀ ಸುಭಕ್ತಾನಾಂ ಪಾದತೀರ್ಥಪ್ರಸಾದಕಃ ಮಹಾಭೋಗಿ ಮಹಾತ್ಯಾಗೀ ಲೋಲುಪೋ ವಿಷಯಾತುರಃಯಸ್ತ್ವಂಗವಿಹೀನಃ ಸ್ಯಾತ್ತಸ್ಯ (ಪಾದ) ತೀರ್ಥಂ[ನ]ಸೇವಯೇತ್ ಕುಷಿ ಕರಣಹೀನಶ್ಚ ಬಧಿರಃ ಕಲಹಪ್ರಿಯಃ ವ್ಯಾಧಿಭಿಸ್ತ್ವಂಗಹೀನೈಶ್ಚತೈರ್ನ ವಾಸಂ ಚ ಕಾರಯೇತ್ ಇಂತೀ ದುರ್ಮಾರ್ಗ ನಡತೆಗಳಿಲ್ಲದೆ, ಅಯೋಗ್ಯವಾದ ಜಂಗಮವನುಳಿದು, ಯೋಗ್ಯಜಂಗಮವ ವಿಚಾರಿಸಿ ತನು ಮನ ಧನವಂಚನೆಯಿಲ್ಲದೆ ಸಮರ್ಪಿಸಿ ಅವರ ತೀರ್ಥಪ್ರಸಾದವ ಕೈಕೊಳ್ಳಬೇಕಲ್ಲದೆ ದುರ್ಮಾರ್ಗದಲ್ಲಿ ಆಚರಿಸುವಾತನಲ್ಲಿ ತ್ರಿಣೇತ್ರವಿದ್ದಡೆಯೂ ತೀರ್ಥಪ್ರಸಾದ ಉಪದೇಶವ ಕೊಳಲಾಗದು ಕಾಣಾ. ಕೂಡಲಚೆನ್ನಸಂಗಮದೇವ ಸಾಕ್ಷಿಯಾಗಿ ಗುರುವಚನವ ತಿಳಿದು ನೋಡಾ ಸಂಗನ ಬಸವಣ್ಣಾ.”

ಪಾದಪೂಜೆ ಎಂಬುದು ಅಂತರಂಗದಲ್ಲಿ ವೇದ್ಯವಾಗುವ ಅನುಭಾವ, ಅಂಥಾ ಪಾದಪೂಜೆ ಯಾರ ಗಮನಕ್ಕೂ ಬಾರದು, ಪ್ರಮಾಣಿಸಲು ಬಾರದು. ಇದು ಬಸವಣ್ಣನವರು ತಮ್ಮೊಳಗೇ ಹೊಂದಿದ ಅನುಭಾವ, ಇಂಥಾ ಅನುಭಾವವನ್ನು ಪ್ರತಿಯೊಬ್ಬ ಮಾನವನೂ ತನ್ನೊಳಗೇ ಪಡೆಯಬೇಕೆಂಬುದು ಬಸವಣ್ಣನವರ/ಶರಣರ ನಿಲುವು. ಆದರೆ ಈ ವಚನದಲ್ಲಿ ಪಾದೋದಕ, ಪ್ರಸಾದಗಳನ್ನು ಬೇರೊಬ್ಬ ವ್ಯಕ್ತಿಯ ಪಾದಗಳನ್ನು ಪೂಜಿಸುವ ಮೂಲಕ ಪಡೆಯಬೇಕೆಂದು ನಿರೂಪಿಸಿದ್ದಾರೆ. ಈ ವಿಚಾರ ಶರಣರ ನಿಲುವಿಗೆ ವಿರುದ್ಧವಲ್ಲವೇ? ವಚನದ ಕೊನೆಯ ಸಾಲು ನಮಗೆ ಇನ್ನೂ ಅಚ್ಚರಿಯನ್ನುಂಟು ಮಾಡುವುದು. ಏಕೆಂದರೆ, “ಕೂಡಲಚೆನ್ನಸಂಗಮದೇವ ಸಾಕ್ಷಿಯಾಗಿ ಗುರುವಚನವ ತಿಳಿದು ನೋಡಾ ಸಂಗನಬಸವಣ್ಣಾ” ಎಂದು ಹೇಳಲಾಗಿದೆ.

ಪ್ರಾರಂಭದ ಸಾಲಿನಲ್ಲಿ ಬಸವಣ್ಣನವರು ಈ ಸಿದ್ಧಿಯನ್ನು ಸಾಧಿಸಿದವರು ಎಂದು ಹೇಳಿ, ಕೊನೆಯಲ್ಲಿ ಬಸವಣ್ಣನವರಿಗೇಚೆನ್ನಬಸವಣ್ಣನವರು ಉಪದೇಶ ನೀಡಿರುವಂತಿದೆ! ಈ ವಚನದಲ್ಲಿ ಕನ್ನಡ ಪದಗಳಿಗಿಂತ ಸಂಸ್ಕೃತ ಪದಗಳೇ ಹೆಚ್ಚಾಗಿ ಕಾಣಸಿಗುತ್ತವೆ. ಜಾತಿ ಜಂಗಮವನ್ನು ಪುಷ್ಠೀಕರಿಸಲು ಆಗಮಗಳ ಸಂಸ್ಕೃತ ಶ್ಲೋಕಗಳನ್ನು ಯಥೇಚ್ಚವಾಗಿ ಬಳಸಲಾಗಿದೆ. ಸ್ವತಃ ಬಸವಣ್ಣನವರೇ ತಮ್ಮನ್ನು ತಾವು ಗುರು ಎಂದು ಕರೆದುಕೊಂಡವರಲ್ಲ, ಜಂಗಮ ಎಂದುಕೊಂಡವರಲ್ಲ, ನಾನೊಬ್ಬ ಸಾಮಾನ್ಯ ಭಕ್ತ, ಇಡೀ ಜಗತ್ತು ಲಿಂಗ ಜಂಗಮವೆಂದವರು ಅವರು. ಅವರೆಂದೂ ತಮ್ಮ ಪಾದಗಳನ್ನು ಇತರರ ಮನೆಗಳಿಗೆ ಹೋಗಿ ತೊಳೆಸಿಕೊಂಡು ಪೂಜಿಸಿಕೊಂಡವರಲ್ಲ, ಕಾಲು ತೊಳೆದ ನೀರನ್ನು ಜನರಿಗೆ ಕುಡಿಸಿದವರಲ್ಲ. “ಶರಣರ ಚಮ್ಮಾವುಗೆಗೆ ನಾನು ಸಮವಲ್ಲ” ಎಂದು ಹರಳಯ್ಯನವರು ಕೊಟ್ಟ ಪಾದರಕ್ಷೆಗಳನ್ನು ತಮ್ಮ ತಲೆಯ ಮೇಲೆ ಹೊತ್ತವರು ಅವರು. ತಾವು ಏರಿದ ಎತ್ತರಕ್ಕೆ ಲೋಕದ ಇತರ ಎಲ್ಲಾ ಮಾನವರನ್ನೂ ಏರಿಸಬೇಕೆಂಬುದು ಬಸವಣ್ಣನವರ ಮಹದಾಶೆಯಾಗಿತ್ತು. ಅವರು ಯಾರಿಗೂ ಎಂದೂ ತೀರ್ಥಪ್ರಸಾದಗಳನ್ನು ಕೊಟ್ಟವರಲ್ಲ, ನಿಮ್ಮ ಅಂತರಂಗದಲ್ಲಿಯೇ ಅವುಗಳನ್ನು ಪಡೆಯಿರಿ ಎಂದು ತಿಳಿಸಿದವರು ಅವರು. ಆದರೆ ಇಂದಿನ ಮಠಪತಿಗಳು ತಮ್ಮ ಕಾಲು ತೊಳೆಸಿ ಭಕ್ತರಿಗೆ ಕುಡಿಸಿ ಅವರ ಹೆಗಲಮೇಲೆ ಸವಾರಿಮಾಡಿ ಇದರಿಂದ ದಾರಿದ್ರ್ಯ ನಿವಾರಣೆಯಾಗುತ್ತದೆಂದು ಸುಳ್ಳು ಹೇಳಿ ಮುಗ್ಧ ಜನರನ್ನುನಂಬಿಸಿ ವಂಚಿಸುತ್ತಿದ್ದಾರೆ. ಶರಣರ ಮನದಿಂಗಿತವನ್ನು, ವಚನಗಳು ಹುಟ್ಟಿದ ಹಿನ್ನೆಲೆಯನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಯಾವ ವಚನ ನಿಜವಾಗಿಯೂ ಬಸವಾದಿ ಶರಣರದ್ದು, ಯಾವ ವಚನ ಖೊಟ್ಟಿ ಎಂದು ನಿರ್ಧರಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ವಚನಾಸಕ್ತರು ವಚನಗಳನ್ನು ಸರಿಯಾದ ನೆಲೆಯಲ್ಲಿ ಅರ್ಥಮಾಡಿಕೊಳ್ಳುವ ಮೂಲಕ ಮತ್ತು ಹಾಗೆ ನಡೆದುಕೊಳ್ಳುವುದರ ಮುಖೇನ ಶರಣರಿಗೆ ಗೌರವ ಸಲ್ಲಿಸಬಹುದು ಎಂದು ನನ್ನ ಅಭಿಮತ.

ಈ ವಚನವನ್ನೊಮ್ಮೆ ಓದಿ ನೋಡಿ, ಅತ್ಯಂತ ವಿಚಾರಶೀಲರೂ, ಪ್ರಗತಿಪರ ಚಿಂತಕರೂ, ಮಹಾ ಜ್ಞಾನಿಯೂ, ಷಟ್ಸ್ಥಲಬ್ರಹ್ಮಿ ಎಂದೆಲ್ಲಾ ಬಿರುದು ಬಾವಲಿಗಳನ್ನು ಹೊಂದಿದ್ದ ಚೆನ್ನಬಸವಣ್ಣನವರು ಇದನ್ನು ಬರೆದಿರಲು ಸಾಧ್ಯವಿದೆಯೇ ಎಂಬುದನ್ನು ನಾವು ವಿಮರ್ಶೆ ಮಾಡಬೇಕಾಗಿದೆ.
“ವೀರಶೈವಸಂಪನ್ನರಾದ ಸದ್ಭಕ್ತ ಶರಣಗಣಂಗಳಾದಡೆಯೂ ವೀರಮಾಹೇಶ್ವರರಾದಡೆಯೂ ಕ್ರಿಯಾಪಾದೋದಕ ಮಾಡಬೇಕಾದಡೆ, ತನ್ನ ಎರಡು ಅಂಗುಲಗಳಿಂದ, ಆ ಮಾಹೇಶ್ವರರ ಅಂಗುಷ್ಠ ಎಂಟು ಅಂಗುಲಗಳಲ್ಲಿ ತರ್ಜನಿ ಬೆರಳಿನಿಂದ ಬಲದ ಪಾದಾಂಗುಷ್ಠದ ಮೇಲೆ ಮೂರು ವೇಳೆ ಸ್ಪರ್ಶನವ ಮಾಡಿ, ನಾಲ್ಕನೆಯ ವೇಳೆಗೆ ಅದೇ ಬಲಪಾದದ ನಾಲ್ಕು ಬೆರಳುಗಳನ್ನು ಒಂದು ವೇಳೆ ಸ್ಪರ್ಶನ ಮಾಡಿದಡೆ ಗುರುಪಾದೋದಕವೆನಿಸುವುದು. ಇದೇ ರೀತಿಯಲ್ಲಿ ಎಡದ ಪಾದವ ಮಾಡಿದಡೆ ಲಿಂಗೋದಕವೆನಿಸುವುದು. ಈ ಎರಡರ ಕೂಟವೆ ಜಂಗಮಪಾದೋದಕವೆನಿಸುವುದು. ತನ್ನ ಹಸ್ತದಿಂದ ಪಾದವಮುಟ್ಟಿ ಮಾಡಿದಂತಹದೆ ಸ್ಪರ್ಶನೋದಕವೆನಿಸುವುದು. ಆ ಪಾದದ ಮೇಲಣ ದ್ರವವ ತೆಗೆದಂತಹದೆ ಅವಧಾನೋದಕವೆನಿಸುವುದು. ಅದರ ಮೇಲಣ ಅಪೇಕ್ಷೆ ಮುಂದುಗೊಂಡು ತಾನು ಮಾಡಿಕೊಂಡಂತಹದೆ ಅಪ್ಯಾಯನೋದಕವೆನಿಸುವುದು. ಹಸ್ತದಿಂದ ಮುಟ್ಟಿ ಮಾಡಿದಂತಹದೆ ಹಸ್ತೋದಕವೆನಿಸುವುದು.ಆ ಭಾಜನವ ತನ್ನ ಕೈಯಲ್ಲಿ ತೆಗೆದುಕೊಂಡು ಆ ಜಂಗಮಕ್ಕೆ ನಮಸ್ಕರಿಸುವಂತಹದೆ ನಿರ್ಣಾಮೋದಕವೆನಿಸುವುದು. ಆ ಜಂಗಮಕ್ಕೆ ನಮಸ್ಕರಿಸಿ ಆ ಭಾಜನವನ್ನು ತನ್ನ ಕ್ರಿಯೆಗೆ ಇಟ್ಟುಕೊಂಡಂತಹುದೆ ಸತ್ಯೋದಕವೆನಿಸುವುದು. ಈ ಪ್ರಕಾರದಲ್ಲಿ ಹತ್ತು ಪಾದೋದಕವು, ಶಿಕ್ಷಾಪಾದೋದಕದಲ್ಲಿ ಆಗುವುದೆಂದು ಅರಿದು ಆಚರಿಸುವುದು. ಆಚರಿಸಲಾಗದೆಂಬ ಹುಚ್ಚಮಾನವರನೇನೆಂಬೆನಯ್ಯಾ ಕೂಡಲ ಚೆನ್ನಸಂಗಮದೇವಾ.”

ಎಂಥಾ ಅವೈಚಾರಿಕ, ಅಬದ್ಧ, ಕರ್ಮಠ ಆಚರಣೆಯನ್ನು ಈ ವಚನದಲ್ಲಿ ತಿಳಿಸಲಾಗಿದೆ ನೋಡಿ. ಜಾತಿ ಜಂಗಮನೊಬ್ಬನನ್ನು ಮನೆಗೆ ಕರೆತಂದು ಆತನ ಕಾಲುಗಳನ್ನು ತೊಳೆದು ಮೇಲೆ ವಚನದಲ್ಲಿ ಹೇಳಿದಂತೆ ಮಾಡಿದರೆ ಗುರುಪಾದೋದಕ, ಲಿಂಗೋದಕ, ಜಂಗಮ ಪಾದೋದಕ ಪ್ರಾಪ್ತಿಯಾಗುವುದಂತೆ! ಇನ್ನೂ ಮುಂದೆ ಸ್ಪರ್ಶನೋದಕ, ಅವದಾನೋದಕ, ಆಪ್ಯಾಯನೋದಕ ಮುಂತಾದವುಗಳನ್ನು ಹೇಗೆ ಪಡೆಯಬೇಕೆಂದು ತಿಳಿಸಲಾಗಿದೆ. ಈ ರೀತಿ ಮಾಡದವರನ್ನು ಹುಚ್ಚಮಾನವರೆಂದೂ ಕರೆಯಲಾಗಿದೆ!

ಇಂಥಾ ಅಜ್ಞಾನಯುಕ್ತವಾದ, ವಿವೇಚನಾರಹಿತ ಆಚರಣೆಗಳಿಗೆ ಲಿಂಗಾಯತ ಧರ್ಮದಲ್ಲಿ ಬಸವಾದಿ ಶರಣರು ಅವಕಾಶ ಮಾಡಿಕೊಟ್ಟಿಲ್ಲ. ಶರಣಧರ್ಮವು ಅತ್ಯಂತ ಸರಳ ಹಾಗೂ ಆಚರಣಾಯೋಗ್ಯ ವಿಚಾರಗಳುಳ್ಳದ್ದಾಗಿದ್ದು, ಅಂಧಾನುಕರಣೆಗಳನ್ನು ಮೆಟ್ಟಿನಿಲ್ಲುವಂತೆ ಪ್ರೋತ್ಸಾಹಿಸುತ್ತದೆ. ಹೀಗಾಗಿ ಮೇಲಿನ ವಚನವು ಸಂಪೂರ್ಣ ಕೃತ್ರಿಮವಾಗಿ ಅವಿಚಾರಿಗಳಿಂದ, ಪಟ್ಟಭದ್ರ ಹಿತಾಸಕ್ತಿಗಳಿಂದ ಸೃಷ್ಟಿಸಲ್ಪಟ್ಟಿದ್ದು ಶರಣವಿರೋಧಿ ನಿಲುವಿನದಾಗಿದ್ದು ಇದೊಂದು ಅಶುದ್ಧ ಹಾಗೂ ಪ್ರಕ್ಷಿಪ್ತ ವಚನವೆಂದು ನಿಸ್ಸಂದೇಹವಾಗಿ ಹೇಳಬಹುದು.

Comments 1

  1. Padmalaya
    Aug 28, 2021 Reply

    ವಿರೂಪಗೊಂಡಿರುವ ಬಸವತತ್ವ ವನ್ನ ಪುನರ್ರೂಪಿಸುವಲ್ಲಿ ಸಣ್ಣ ಪ್ರಯತ್ನ .thanqu

Leave A Comment

Your email address will not be published. Required fields are marked *