Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಶರಣರು ತೋರಿದ ಆಚಾರಗಳು
Share:
Articles March 17, 2021 ಡಾ. ಪಂಚಾಕ್ಷರಿ ಹಳೇಬೀಡು

ಶರಣರು ತೋರಿದ ಆಚಾರಗಳು

೧. ಸದಾಚಾರ
ಶರಣ ಪಥದಲ್ಲಿ ಸಾಗುವ ಪಥಿಕನು ಶೂನ್ಯವನ್ನು ಗುರಿಯಾಗಿರಿಸಿಕೊಂಡು ಷಟ್ಸ್ಥಲವೆಂಬ ಆರು ಹಂತಗಳ ಪಥವಿಡಿದು ಗಮ್ಯದೆಡೆಗೆ ಪಯಣಿಸುತ್ತಾನೆ. ಹೀಗೆ ಸಾಧಕಜೀವಿ ಸಾಗುವ ಪಥದಗುಂಟ ಅನೇಕ ಆಚಾರಗಳನ್ನು ಮೈಗೂಡಿಸಿಕೊಳ್ಳುತ್ತಾ ಅವುಗಳೊಡನೆ ತಾದಾತ್ಮ್ಯ ತಾಳುತ್ತ ಅಭಿನ್ನವಾಗಿ ಅಳವಡಿಸಿಕೊಂಡು ಗಮ್ಯಸ್ಥಾನವಾದ ಶೂನ್ಯವನ್ನು ತಲುಪಬೇಕಾಗುತ್ತದೆ. ಅಂಥಾ ಆಚಾರಗಳಲ್ಲಿ ಶರಣರು ಪ್ರಮುಖವಾಗಿ ಐದು ಆಚಾರಗಳನ್ನು ಗುರುತಿಸುತ್ತಾರೆ. ಈ ಐದೂ ಆಚಾರಗಳನ್ನು ಅಳವಡಿಸಿಕೊಂಡಾತನೇ ಪರಿಪೂರ್ಣನು. ಈ ಐದು ಆಚಾರಗಳೆಂದರೆ: ೧. ಲಿಂಗಾಚಾರ ೨. ಸದಾಚಾರ ೩. ಶಿವಾಚಾರ ೪. ಗಣಾಚಾರ ೫. ಭೃತ್ಯಾಚಾರ ಒಂದೊಂದು ಆಚಾರವೂ ಒಂದೊಂದು ವಿಭಿನ್ನ ನೆಲೆಯಲ್ಲಿ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಐದು ವಿಭಿನ್ನ ಆಚಾರಗಳು ಒಂದಕ್ಕೊಂದು ಪೂರಕವಾಗಿ ನಮ್ಮಲ್ಲಿ ಆಳವಾಗಿ ಬೇರುಬಿಟ್ಟಿರುವ ದುರ್ನಡತೆಗಳನ್ನು ಪಲ್ಲಟಗೊಳಿಸಿ ಸನ್ನಡತೆಯುಳ್ಳವರನ್ನಾಗಿಸುತ್ತವೆ.
ಆಚಾರವೆಂದರೇನು? – ಮಾನವ ಸಂಘಜೀವಿ, ಸಮಾಜಜೀವಿ. ಸಮಾಜದಲ್ಲಿ ಜೀವಿಸುವಾಗ ಜೀವನ ಪರ್ಯಂತರ ಇತರರೊಡನೆ ವ್ಯವಹರಿಸಬೇಕಾಗುತ್ತದೆ. ಹೀಗೆ ವ್ಯವಹರಿಸುವಾಗ ನಾವು ಬಳಸುವ ಭಾಷೆ, ನಡೆಯುವ ರೀತಿನೀತಿ, ಬೆರೆಯುವ ಸಂಗ, ಕೂಡುವ ಕೂಟ, ನೋಡುವ ನೋಟ, ಮಾಡುವ ವೃತ್ತಿ, ಹಾವಭಾವಗಳೇ ಆಚಾರದ ಅಂಗಗಳು. ದೇಹವು ಪ್ರಮುಖವಾಗಿ ಸ್ಥೂಲ ಸೂಕ್ಷ್ಮ ಹಾಗೂ ಕಾರಣತನುವೆಂಬ ಮೂರು ಪದರಗಳನ್ನು ಹೊಂದಿರುತ್ತದೆಂದು ಹೇಳಲಾಗುತ್ತದೆ, ಪ್ರಮುಖವಾಗಿ ಸ್ಥೂಲತನುವಿನಿಂದ ನಡೆಯುವ ಎಲ್ಲಾ ಬಗೆಯ ವ್ಯವಹಾರಗಳು ಹೊರಮುಖವಾಗಿದ್ದು ಜಗತ್ತಿನೊಂದಿಗೆ ಸಂಪರ್ಕ ಕಲ್ಪಿಸುತ್ತವೆ. ಹೊರಜಗತ್ತಿನೊಂದಿಗೆ ನಾವು ಮಾಡುವ ವ್ಯವಹಾರವೇ ಆಚಾರವೆನಿಸುತ್ತದೆ, ಈ ಆಚಾರಕ್ಕೆ ಬೆಂಬಲವಾಗಿ ನಿಲ್ಲುವುದು ಸೂಕ್ಷ್ಮಶರೀರದಲ್ಲಿ ಉಂಟಾಗುವ ಚಿಂತನೆಗಳು ಅಥವಾ ವಿಚಾರಗಳು. ಸ್ಥೂಲ ಹಾಗೂ ಸೂಕ್ಷ್ಮತನುವಿನಲ್ಲಿ ಉಂಟಾಗುವ ವಿಚಾರ ಹಾಗೂ ಆಚಾರಗಳು ಅತ್ಯಂತ ಒಳಪದರಾದ ಕಾರಣ ಶರೀರದ ಮೇಲೆ ಪ್ರಭಾವ ಬೀರುತ್ತದೆ. ಒಟ್ಟಾರೆ ನಮ್ಮ ಆರೋಗ್ಯ ಅನಾರೋಗ್ಯ, ಜಗತ್ತಿನ ಸುಸ್ಥಿತಿ ಹಾಗೂ ದುಃಸ್ಥಿತಿಗಳು ನಮ್ಮ ಆಚಾರವನ್ನೇ ಅವಲಂಬಿಸಿವೆ. ನಮ್ಮ ಕಣ್ಣು ಹಳದಿಯಾಗಿದ್ದರೆ ನಮಗೆ ಇಡೀ ಜಗತ್ತು ಹಳದಿಯಾಗಿ ಕಾಣುವುದು. (ಕಾಮಾಲೆ ಕಣ್ಣವನಿಗೆ ಕಾಣುವುದೆಲ್ಲಾ ಹಳದಿ ಎಂಬುದು ಕನ್ನಡದ ಸುಪ್ರಸಿದ್ದ ಗಾದೆಮಾತು) ಆಚಾರಗಳು ವಯಕ್ತಿಕವಾಗಿ ನಮ್ಮ ಮೇಲೂ ಹಾಗೂ ಸಮಾಜದ ಮೇಲೂ ಹಲವು ರೀತಿಯ ಪರಿಣಾಮಗಳನ್ನು ಬೀರುತ್ತವೆ. ಸನ್ನಡತೆಯು ಸತ್ಪರಿಣಾಮ ಬೀರಿದರೆ ದುರ್ನಡತೆಯು ದುಷ್ಪರಿಣಾಮವನ್ನುಂಟು ಮಾಡುತ್ತದೆ. ಈ ಐದು ಆಚಾರಗಳು ಕೇವಲ ಇಷ್ಟಲಿಂಗ ಧರಿಸಿದ ಲಿಂಗಾಯತರಿಗೆ ಎಂದು ಯಾರೂ ಭಾವಿಸಬಾರದು. ಇವು ಇಡೀ ಮಾನವ ಕುಲಕ್ಕೆ ಬೇಕಾಗಿರುವಂಥಾ ಆಚಾರಗಳು.
ಅಕ್ಕಮಹಾದೇವಿ ತಾಯಿಯವರು ತಮ್ಮ ಒಂದು ವಚನದಲ್ಲಿ ಆಚಾರ ಮತ್ತು ಲಿಂಗ ಬೇರೆಯಲ್ಲ, ಆಚಾರವೇ ಲಿಂಗ ಎಂದು ಪ್ರತಿಪಾದಿಸಿರುವುದನ್ನು ನಾವು ಈ ವಚನದ ಮೂಲಕ ಅರಿಯಬಹುದು.
“ಅಂಗದಲ್ಲಿ ಆಚಾರವ ತೋರಿದ ಆ ಆಚಾರವೇ ಲಿಂಗವೆಂದರುಹಿದ. ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ; ಅರಿವೆ ಜಂಗಮವೆಂದು ತೋರಿದ. ಚೆನ್ನಮಲ್ಲಿಕಾರ್ಜುನನ ಹೆತ್ತ ತಂದೆ ಸಂಗನಬಸವಣ್ಣನು ಎನಗೀ ಕ್ರಮವನರುಹಿದನಯ್ಯ ಪ್ರಭುವೆ.”
ಚನ್ನಬಸವಣ್ಣನವರು ಈ ಐದೂ ಆಚಾರಗಳನ್ನು ಸಂಕ್ಷಿಪ್ತವಾಗಿ ತಮ್ಮ ಒಂದು ವಚನದಲ್ಲಿ ಅತ್ಯಂತ ಸರಳವಾಗಿ ವಿವರಿಸುತ್ತಾರೆ.
“ಲಿಂಗಾಚಾರ ಸದಾಚಾರ ಶಿವಾಚಾರ ಗಣಾಚಾರ ಭೃತ್ಯಾಚಾರವೆಂಬ ಪಂಚಾಚಾರದ ಆಚರಣೆಯೆಂತೆಂದಡೆ: ಲಿಂಗವಲ್ಲದೆ ಅನ್ಯವನರಿಯದಿಹುದೆ ಲಿಂಗಾಚಾರ. ಸಜ್ಜನ ಕಾಯಕದಲ್ಲಿ ತಂದು ಗುರು-ಲಿಂಗ-ಜಂಗಮಕ್ಕೆ ನೀಡಿ ಸತ್ಯಶುದ್ಧನಾಗಿಹುದೆ ಸದಾಚಾರ. ಶಿವಭಕ್ತರಲ್ಲಿ ಕುಲ ಗೋತ್ರ ಜಾತಿ ವರ್ಣಾಶ್ರಮವನರಸದೆ ಅವರೊಕ್ಕುದ ಕೊಂಬುದೆ ಶಿವಚಾರ. ಶಿವಚಾರದ ನಿಂದೆಯ ಕೇಳದಿಹುದೆ ಗಣಾಚಾರ. ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ ಭಯಭಕ್ತಿಯಿಂದ ಆಚರಿಸುವುದೆ ಭೃತ್ಯಾಚಾರ – ಇಂತೀ ಪಂಚಾಚಾರವುಳ್ಳ ಪರಮಸದ್ಭಕ್ತರ ಒಕ್ಕುದನಿಕ್ಕಿ ಸಲಹಯ್ಯಾ ಪ್ರಭುವೆ, ಕೂಡಲಚೆನ್ನಸಂಗಮದೇವಾ.”
ಒಂದೊಂದು ಆಚಾರವೂ ಒಂದೊಂದು ಕ್ರಿಯೆಗೆ ಸಂಬಂಧಿಸಿದ್ದಾಗಿದೆ.
೧. ಲಿಂಗಾಚಾರ : ಲಿಂಗವೆಂಬ ಪರಮ ಸತ್ಯ ಗಂಡೂ ಅಲ್ಲ ಹೆಣ್ಣೂ ಅಲ್ಲ ಅದು ನಿರಾಕಾರ ಚೈತನ್ಯ ಅದಿಲ್ಲದ ಅಣುಮಾತ್ರ ಜಾಗವೂ ಇಲ್ಲ ಎಂದು ಅರಿತು ಅದರಂತೆ ನಡೆಯುವುದೇ ಲಿಂಗಾಚಾರ.
೨. ಸದಾಚಾರ : ಸದಾಚಾರ ಪದವು ಸತ್ + ಆಚಾರ ಎಂಬ ಪದಗಳಿಂದ ಉಂಟಾಗಿದೆ. ಸತ್ ಎಂದರೆ ಸತ್ಯದಿಂದ ಕೂಡಿದ, ನಿತ್ಯವಾದ, ಸಜ್ಜನಿಕೆಯುಕ್ತ ಎಂಬ ಅರ್ಥ. ಸತ್ಯ ಹಾಗೂ ಸಜ್ಜನಿಕೆಯ ಆಚಾರವೇ ಸದಾಚಾರ.
೩. ಶಿವಾಚಾರ : ಶಿವಭಕ್ತರಲ್ಲಿ ಕುಲ ಗೋತ್ರ ಜಾತಿ ವರ್ಣಾಶ್ರಮವನರಸದೆ ಅವರೊಡನೆ ಸಹಪಂಕ್ತಿಯಲ್ಲಿ ಪ್ರಸಾದ ಸ್ವೀಕರಿಸುವುದೇ ಶಿವಾಚಾರ.
೪. ಗಣಾಚಾರ : ಶಿವಚಾರದ ನಿಂದೆಯ ಕೇಳದಿಹುದೆ ಗಣಾಚಾರ,
೫. ಭೃತ್ಯಾಚಾರ : ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ ಭಯಭಕ್ತಿಯಿಂದ ಆಚರಿಸುವುದೆ ಗಣಾಚಾರ. ಪಂಚ ಆಚಾರಗಳ ಕುರಿತು ಬಹಳ ಸರಳ ಸುಂದರವಾಗಿ ಚಿನ್ಮಯ ಜ್ಞಾನಿ ಚನ್ನಬಸವಣ್ಣನವರು ನಿರೂಪಿಸಿರುವರು.
ಈ ಲೇಖನದಲ್ಲಿ ಅನೇಕ ಶರಣರು ಪ್ರತಿಪಾದಿಸಿರುವ ಸದಾಚಾರದ ವಚನಗಳನ್ನಷ್ಟೇ ಅಧ್ಯಯನಕ್ಕೆ ಆಯ್ದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನುಳಿದ ಆಚಾರಗಳ ವಚನಗಳನ್ನು ಅರಿಯಲು ಪ್ರಯತ್ನಿಸೋಣ.
ಸದಾಚಾರ ಬೋಧನೆಯ ವಚನಗಳು
“ಸಮಯೋಚಿತದಲ್ಲಿ ಲಿಂಗಾರ್ಚನೆಯ ಮಾಡುತಿಪ್ಪನಾ ಭಕ್ತನು. ಮಾಡಿದಡೆ ಮಾಡಲಿ, ಮಾಡಿದಡೆ ತಪ್ಪೇನು ಆ ಜಂಗಮದ ಶಬ್ದವ ಕೇಳಿ ಪ್ರಸಾದಕ್ಕೆ ಕೈದುಡುಕಿದಡೆ ಅದು ಪ್ರಸಾದವಲ್ಲ, ಕಿಲ್ಬಿಷ. ಆ ಸಮಯೋಚಿತದಲ್ಲಿ ಬಂದ ಜಂಗಮದ ಶಬ್ದವ ಕೇಳಿ ಪ್ರಸಾದಕ್ಕೆ ಕೈದೆಗೆದಡೆ, ಅದು ಲಿಂಗಕ್ಕೆ ಬೋನ. ಇದು ಕಾರಣ, ಕೂಡಲಸಂಗಮದೇವಾ, ಇಂತಪ್ಪ ಸದಾಚಾರಿಗಳನೆನಗೆ ತೋರಾ” ಈ ವಚನದಲ್ಲಿ ಗುರುಬಸವಣ್ಣನವರು ಬರೀ ಲಿಂಗಾರ್ಚನೆ ಧ್ಯಾನಗಳು ಆಚಾರವಲ್ಲ, ಲಿಂಗವು ಸರ್ವವ್ಯಾಪಕವಾದುದು, ಸರ್ವಜೀವಿಗಳಲ್ಲಿಯೂ ಲಿಂಗವಿರುವುದನ್ನರಿತು ಅದನ್ನು ತೃಪ್ತಿಪಡಿಸಿ ನಂತರ ತಾನು ಭೋಗಿಸಿದರೆ ಅದು ಪ್ರಸಾದವಾಗುವುದು. ಉಣ್ಣದ ಲಿಂಗಕ್ಕೆ ಬೋನವನಿಟ್ಟರೆ ಅದೇನು ಉಂಡು ತೃಪ್ತಿಪಡುವುದೇ? ಉಣ್ಣುವ ಜೀವಕ್ಕೆ ಬಡಿಸಿ ತೃಪ್ತಿಪಡಿಸಿದರೆ ಲಿಂಗ ತಾನೇ ತೃಪ್ತಿಹೊಂದುವುದು. ಇದು ಸದಾಚಾರವೆಂದು ತಿಳಿಸಿರುವರು.
“ಏನಿ ಬಂದಿರಿ, ಹದುಳಿದ್ದಿರೆ ಎಂದಡೆ ನಿಮ್ಮ ಮೈಸಿರಿ ಹಾರಿ ಹೋಹುದೆ ಕುಳ್ಳಿರೆಂದಡೆ ನೆಲ ಕುಳಿಹೋಹುದೆ ಒಡನೆ ನುಡಿದಡೆ ಸಿರ, ಹೊಟ್ಟೆಯೊಡೆವುದೆ ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ ಮೂಗ ಕೊಯ್ವುದ ಮಾಬನೆ ಕೂಡಲಸಂಗಮದೇವಯ್ಯ” ಮನೆಗೆ ಬಂದ ಅತಿಥಿಗಳೊಡನೆ ನಾವು ಯಾವರೀತಿ ನಡೆದುಕೊಳ್ಳಬೇಕೆಂಬುದನ್ನು ಬಸವಣ್ಣನವರು ಬಹಳ ಮನಮುಟ್ಟುವಂತೆ ಅರುಹಿದ್ದಾರೆ. ಬಂದ ಅತಿಥಿಗಳನ್ನು ಸ್ವತ: ತಾನೇ ಹೋಗಿ ಸ್ವಾಗತಿಸುವುದು, ಅವರ ಯೋಗ ಕ್ಷೇಮ ವಿಚಾರಿಸುವುದು, ಆತ್ಮೀಯವಾಗಿ ಮಾತನಾಡಿಸುವುದು ಸದಾಚಾರ, ಹೀಗಲ್ಲದೆ ಬಂದವರೊಡನೆ ಮಾತನಾಡದೆ ಮುಖತಿರುಗಿಸಿಕೊಂಡು ದರ್ಪದಿಂದ ವರ್ತಿಸುವುದು, ಅಹಂಕಾರ ತೋರಿಸುವುದು, ತನ್ನ ಸಿರಿವಂತಿಕೆ ಪ್ರದರ್ಶನ ಮಾಡುವುದು ದುರಾಚಾರವೆನಿಸುವುದು. ಬಡವನೇ ಆಗಿರಲಿ, ಬಂದವರಿಗೆ ಕೊಡಲು ನಿನ್ನ ಬಳಿ ಏನೂ ಇಲ್ಲದಿದ್ದರೂ ಸವಿಯಾದ ಮಾತು, ಮೃದುವಾದ ನಡವಳಿಕೆ ನಯವಿನಯದ ವರ್ತನೆಗಳಿಗೆ ಹಣದ ಬಡತನ ಅಥವಾ ಸಿರಿತನ ಅಡ್ಡಬರಬಾರದು, ಇದುವೇ ಸದಾಚಾರ.
“ಈರೇಳುಭುವನವನು ಒಡಲೊಳಗೆ ಇಂಬಿಟ್ಟುಕೊಂಡು ಲಿಂಗರೂಪನಾಗಿ ಭಕ್ತನ ಕರಸ್ಥಲಕ್ಕೆ ಬಂದು ಪೂಜೆಗೊಂಡಿತ್ತು ನೋಡಾ! ಅಂತಹ ಅಗಮ್ಯ ಅಗೋಚರ ಲಿಂಗವೆಂದರಿದು ಭಕ್ತನು ತಾನು ಹಿಂದೆ ನಡೆದ ಜೂಜು ಬೇಂಟೆ ಚದುರಂಗ ಲೆತ್ತ ಪಗಡೆಯಾಟಂಗಳಂ ಪರಿಹಾಸಕರ ಕೂಡಿಕೊಂಡು ಕೆಲೆದಾಡುವದಂ ಬಿಟ್ಟು ಬಂಧುವ ತೊರೆದು ಮುಂದೆ ಶಿವಪಥದಲ್ಲಿ ನಡೆಯಬಲ್ಲಾತನೇ ಸದ್ಭಕ್ತನಲ್ಲದೆ, ಹಣದಾಸೆಗೆ ಹಂಗಿಗನಾಗಿ ಗುಣದಾಸೆಗೆ ಅಮೇಧ್ಯವ ತಿಂದು ಬಂಧುಗಳ ಬಿಟ್ಟು ಭಕ್ತಿಯಿಲ್ಲವೇ ಉಂಟೇ ಎಂಬ ಪಂಚಮಹಾಪಾತಕರ ಮುಖವ ನೋಡಲಾಗದು ಅವರ ಮಾತ ಕೇಳಲಾಗದು, ಅದೆಂತೆಂದಡೆ; ಕತ್ತೆ ಭಕ್ತನಾದರೆ ಕಿಸುಕುಳವ ತಿಂಬುದ ಮಾಂಬುದೆ? ಬೆಕ್ಕು ಭಕ್ತನಾದರೆ ಇಲಿಯ ತಿಂಬುದ ಮಾಂಬುದೆ? ಹಂದಿ ಭಕ್ತನಾದರೆ ಹಡಿಕೆಯ ತಿಂಬುದ ಮಾಂಬುದೆ? ಶುನಕ ಭಕ್ತನಾದರೆ ಮೂಳೆ ಮಾಂಸವ ತಿಂಬುದ ಮಾಂಬುದೆ? ಕೋಳಿಯ ತಂದು ಪಂಜರವ ಕೂಡಿ ಅಮೃತಾನ್ನವನಿಕ್ಕಿ ಸಲಹಿದರೆ ಅದು ತಾನೆ ಮತ್ತೆ ತಿಂಬ ಹಡುವಿಂಗೆ ಚಿತ್ತವನಿಕ್ಕುದುಂ ಮಾಂಬುದೆ? ಇಂತೀ ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಅನಾಚಾರವ ಬಿಟ್ಟು ಸದಾಚಾರದಲ್ಲಿ ನಡೆಯಬೇಕು. ಗುರುವಾದಡೂ ಆಗಲಿ ಭಕ್ತನಾದಡೂ ಆಗಲಿ ತಾನು ಹಿಂದೆ ಭವಿಯಾಗಿದ್ದಾಗ ಭುಂಜಿಸುತ್ತಿದ್ದ ಸುರೆ ಮಾಂಸ ಭಂಗಿ ಭವಿಸಂಗ ಭವಿಪಾಕ ಇಂತಿವ ಬಿಡದಿರ್ದವರುಗಳು ಆ ಕತ್ತೆ ಬೆಕ್ಕು ಸೂಕರ ಸೊಣಗ ಕೋಳಿಗಿಂದತ್ತತ್ತ ಕಡೆ ನೋಡಿರೇ. ಚಿನ್ನದ ಬೆಟ್ಟವನೇರಿದವನು ಕಣ್ಣುಕಾಣದಿಪ್ಪಂತೆ ಗಣೆಯನೇರಿದ ಡೊಂಬ ಮೈ ಮರೆದಿಪ್ಪಂತೆ ನಡುನೀರಿಗೆ ಹೋದ ಹರಿಗೋಲು ತಲೆ ಕೆಳಗಾದಂತೆ ಕಾಣಾ ಕೂಡಲಚೆನ್ನಸಂಗಮದೇವಾ.”
ಚನ್ನಬಸವಣ್ಣನವರ ಈ ವಚನದಭಾಷೆ ಕಾಠಿಣ್ಯವೆನಿಸಿದರೂ ಅಲ್ಲಿ ಅಡಕವಾಗಿರುವುದು ಹಾದಿ ತಪ್ಪಿದ ಜನರನ್ನು ಸರಿಹಾದಿಗೆ ತರುವ ಮಮತಾಭಾವ ಎಂಬುದನ್ನು ಅರಿಯಬೇಕು. ಹಿಂದಣ ಅನಾಚಾರಗಳನ್ನು ಬಿಟ್ಟು ಗುರುಕರುಣೆ ಹೊಂದಿ ಭಕ್ತನಾದ ಮೇಲೆ ಪುನಃ ತನ್ನ ಪೂರ್ವದ ಅವಗುಣಗಳೆಡೆಗೆ ಮನಸ್ಸು ಹರಿಯದಂತಿರಬೇಕು. ಅಂಥಾ ಕೆಲವು ಅವಗುಣಗಳನ್ನು ಚನ್ನಬಸವಣ್ಣನವರು ಇಲ್ಲಿ ಪಟ್ಟಿಮಾಡಿದ್ದಾರೆ, ಜೂಜು ಬೇಂಟೆ ಚದುರಂಗ ಲೆತ್ತ ಪಗಡೆಯಾಟಂಗಳಂ ಪರಿಹಾಸಕರ ಕೂಡಿಕೊಂಡು ಕೆಲೆದಾಡುವದು, ಹಣದಾಸೆಗೆ ಹರಿಯುವುದು, ಅಮೇಧ್ಯವ ತಿನ್ನುವುದು, ಇತ್ಯಾದಿ. ಒಮ್ಮೆ ಲಿಂಗಭಕ್ತನಾದ ಬಳಿಕ ತನ್ನ ಪೂರ್ವದ ಅವಗುಣಗಳನ್ನು ಸಂಪೂರ್ಣವಾಗಿ ಅಳಿದುಕೊಂಡು ಅಲ್ಲಿ ಮಂಗಳಮಯವಾದ ಸದ್ಗುಣಗಳ ಬೆಳೆತೆಗೆಯಬೇಕು. ಅವಗುಣಗಳ ಕಳೆ ಸದ್ಗುಣಗಳ ಬೆಳೆಯನ್ನು ನಾಶಮಾಡದಂತೆ ಸದಾ ಎಚ್ಚರವಹಿಸಿ ಅದರಂತೆ ನಡೆಯುವುದೇ ಸದಾಚಾರ.
“ಸತ್ಯ ಸದಾಚಾರ ಸಮ್ಯಜ್ಞಾನವೆಂಬುವು ಮೂರು. ನಾಮವೊಂದೇ ರೂಪವೊಂದೇ ಕ್ರೀವೊಂದೇ ಕಾಯವೊಂದೇ ಕರಣವೊಂದೇ ಆತ್ಮವೊಂದೇ ಪರಮಾತ್ಮವೊಂದೇ ನೀರು ಗಟ್ಟಿಗೊಂಡ ಆಣೆಕಲ್ಲು ನೀರೇ ಆಯಿತಲ್ಲದೇ ಕಲ್ಲಾಗಲಿಲ್ಲಾ. ಇದರಂತೆ ಶರಣ ಒಳಹೊರಗೆಂಬ ಸಂಶಯ ಅಳಿದು ಸರ್ವವೂ ತಾನೆಂಬ ಸತ್ಯವೇ ಸತ್ಯವಾಗಿಹನು”. ಕಡಕೋಳ ಮಡಿವಾಳಪ್ಪ ಶರಣರು ಸದಾಚಾರ ಅಳವಟ್ಟಾತನಿಗೆ ಒಳಗೆ-ಹೊರಗೆ, ತಾನು ಮತ್ತು ಅನ್ಯರು ಎಂಬ ಭಾವ ಅಳಿದು ಸತ್ಯದ ಸ್ವರೂಪವೇ ತಾನಾಗುವನು ಎನ್ನುವರು.
ಹಾವಿನಹಾಳ ಕಲ್ಲಯ್ಯ ಶರಣರು, “ಶ್ರೀರುದ್ರಾಕ್ಷಿಯ ಹಸ್ತ ತೋಳು ಉರ ಕಂಠ ಮೊದಲಾದ ಸ್ಥಾನಂಗಳಲ್ಲಿ ಧರಿಸಿ, ಶಿವಾರ್ಚನೆಯ ಮಾಡುವುದು ಸದಾಚಾರ” ಎಂದಿರುವರು. ಉಪಾದಿಕ ರುದ್ರಾಕ್ಷಿಯನ್ನು ಅಂಗದಲ್ಲಿ ಧರಿಸಿ ಅದರ ನಿರುಪಾದಿಕ ಸ್ವರೂಪವನ್ನು ಆಚಾರದಲ್ಲಿ ಅಳವಡಿಸಿಕೊಳ್ಳಬೇಕೆಂಬುದು ಶರಣರ ಆಶಯ. ಇಲ್ಲಿ ರುದ್ರಾಕ್ಷಿ ಎಂದರೆ ಚಿತ್ಸ್ವರೂಪದ ಅರಿವಿನಿಂದೊದಗಿದ ಆಚಾರ. ಇಂತಹ ಆಚಾರವನ್ನು (ನಿರುಪಾದಿಕ ರುದ್ರಾಕ್ಷಿ) ದೇಹದ ಕರ್ಮೇಂದ್ರಿಯ ಮತ್ತು ಜ್ಞಾನೇಂದ್ರಿಯಗಳಲ್ಲಿ ಧರಿಸಿದಾತನು ಸಚ್ಚಾರಿತ್ರ್ಯವಂತನೂ, ನಿರಹಂಕಾರಿಯೂ, ನಿಸ್ಸಂಸಾರಿಯೂ ಆಗಿ ನಿತ್ಯನ್ಮುಕ್ತನಾಗುವನು ಎಂದು ಅರುಹಿದ್ದಾರೆ.
“ಲಿಂಗಪ್ರಸಾದವ ಜಂಗಮಕ್ಕೆ ಕೊಡುವ ಕರ್ಮಿಗಳು ನೀವು ಕೇಳಿರೆ. ಜಂಗಮಪ್ರಸಾದವ ಲಿಂಗಕ್ಕೆ ಕೊಡುವ ಧರ್ಮಿಗಳು ನೀವು ಕೇಳಿರೆ. ಲಿಂಗಪ್ರಸಾದವ ಜಂಗಮಕ್ಕೆ ಕೊಡುವುದು ಅನಾಚಾರ. ಜಂಗಮಪ್ರಸಾದವ ಲಿಂಗಕ್ಕೆ ಕೊಡುವುದು ಸದಾಚಾರ” ಎಂದು ಹಡಪದ ಅಪ್ಪಣ್ಣ ಶರಣರು ತಿಳಿಸುತ್ತಾರೆ. ಇದು ಬಹಳ ಮಹತ್ತರ ವಿಚಾರ. ಲಿಂಗಪ್ರಸಾದವ ಜಂಗಮಕ್ಕೆ ಕೊಡುವುದು ಅನಾಚಾರ: ಇಲ್ಲಿ ಲಿಂಗಪ್ರಸಾದವೆಂದರೆ ತನ್ನ ಇಷ್ಟಲಿಂಗಕ್ಕೆ ಅರ್ಪಿಸಿ ಪಡೆದುಕೊಳ್ಳುವುದು. ಇಷ್ಟಲಿಂಗವೇ ತಾನಾದ ಬಳಿಕ ತನಗೆ ತಾನು ಅರ್ಪಿಸಿಕೊಂಡು ನಂತರ ಜಂಗಮಕ್ಕೆ (ತನ್ನ ಬಿಟ್ಟು ಉಳಿದುದೆಲ್ಲಾ ಜಂಗಮ) ಕೊಡುವುದು ಅನಾಚಾರ. ಜಂಗಮಪ್ರಸಾದವ ಲಿಂಗಕ್ಕೆ ಕೊಡುವುದು ಸದಾಚಾರ.” ಮೊದಲು ಜಂಗಮಕ್ಕೆ ಅರ್ಪಿಸಿ ನಂತರ ತಾನು ಕೊಳ್ಳುವುದು ಸದಾಚಾರ.
ಬಾಲಸಂಗಯ್ಯ ಶರಣರು “ಸದಾಚಾರದಲ್ಲಿ ನಡಹ, ಶಿವನಲ್ಲಿ ಭಕ್ತಿಯಾಗಿಹ, ಲಿಂಗಜಂಗಮ ಒಂದೆಯೆಂಬ ಬುದ್ಧಿಯಾಗಿಹ, ಲಾಂಛನಧಾರಿಗಳ ಕಂಡಡೆ ವಂದಿಸುವುದೀಗ ಭಕ್ತಸ್ಥಲ ನೋಡಾ”. “ಕಂಡಭಕ್ತರಿಗೆ ಕೈಮುಗಿವಾತನೇ ಭಕ್ತ” ಎಂದು ಬಸವಣ್ಣನವರ ವಚನದಲ್ಲೂ ಹೇಳಲಾಗಿದೆ, ಲಿಂಗಜಂಗಮ ಒಂದೇ ಎಂದು ನಂಬುವುದು ಇವೆಲ್ಲವೂ ಸದಾಚಾರಗಳೇ ಆಗಿವೆ.
ಎಲ್ಲಾ ವಚನಗಳೂ ತಿಳಿಗನ್ನಡದಲ್ಲಿ ಸರಳಭಾಷೆಯಲ್ಲಿರುವುದರಿಂದ ಇನ್ನುಳಿದ ಈ ಕೆಳಗಿನ ವಚನಗಳಿಗೆ ಅರ್ಥೈಸುವ ಪ್ರಯತ್ನ ಮಾಡಿಲ್ಲ.
ಲಿಂಗವಂತ ಲಿಂಗಭಕ್ತ ಲಿಂಗಾಚಾರಿಯೆನಿಸಿಕೊಂಡ ಬಳಿಕ, ಲಿಂಗದ ನಚ್ಚು, ಲಿಂಗದ ಮಚ್ಚು, ಲಿಂಗವೇ ಪ್ರಾಣವಾಗಿರಬೇಕಲ್ಲದೆ, ಮತ್ತೆ ತಪ್ಪಿ ನಡೆದು, ತಪ್ಪಿ ನುಡಿದು, ಪರಧನ ಪರಸ್ತ್ರೀಯರ ಸಂಗವ ಮಾಡಿ, ದುರ್ಗುಣ ದುರಾಚಾರದಲ್ಲಿ ನಡೆದು, ಮತ್ತೆ ತಾವು ಲಿಂಗವಂತರೆನಿಸಿಕೊಂಬ ಪರಿಯ ನೋಡಾ. ಇದು ಲಿಂಗದ ನಡೆಯಲ್ಲ, ಲಿಂಗದ ನುಡಿಯಲ್ಲ. ಇದ ನಮ್ಮ ಶಿವಶರಣರು ಮೆಚ್ಚರು. ಲಿಂಗವಂತನ ಪರಿ ಬೇರೆ ಕಾಣಿರೆ. ಲಿಂಗಕ್ಕೆ ಲಿಂಗವೆ ಪ್ರಾಣವಾಗಿರಲು ಬಲ್ಲ. ಲಿಂಗಕ್ಕೆ ಲಿಂಗವೆ ಭೋಗವಾಗಿರಲು ಬಲ್ಲ. ಲಿಂಗಕ್ಕೆ ಲಿಂಗವೆ ಸಂಗವಾಗಿರಲು ಬಲ್ಲ, ಇಂತಪ್ಪ ಲಿಂಗವಂತನ ಸದಾಚಾರಿಯೆಂಬೆನು. ಇಂತಪ್ಪ ಲಿಂಗವಂತನ ಸರ್ವಾಂಗಲಿಂಗಿಯೆಂಬೆನು. ಇಂತಪ್ಪ ಲಿಂಗವಂತನ ಸರ್ವಕರಣ ನಿರ್ಮುಕ್ತನ ಸರ್ವನಿರ್ವಾಣಿಕಾಯೆಂಬೆನು. ಇಂತಪ್ಪ ಮಹಾಮಹಿಮನ ನಿಲವು ಎಲಗಳೆದ ವೃಕ್ಷದಂತೆ, ಉಲುಹಡಗಿಪ್ಪ ಶರಣನ ಪರಿಯ ನೀವೇ ಬಲ್ಲಿರಲ್ಲದೆ, ಮತ್ತೆ ಉಳಿದಾದ ಅಜ್ಞಾನ ಸಂದೇಹಿಮಾನವರೆತ್ತ ಬಲ್ಲರಯ್ಯಾ. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ. ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ ನಿಮ್ಮ ಲಿಂಗಾವಧಾನಿಯ ಪರಿಯ ನೀವೇ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ. (ಮರುಳಶಂಕರದೇವ)
ಹುಟ್ಟಿದಾಕ್ಷಣವೆ ಲಿಂಗಸ್ವಾಯತವ ಮಾಡಿ, ಶಿಶುವ ತನ್ನ ಶಿಶುವೆಂದು ಮುಖವ ನೋಡುವದು ಸದಾಚಾರ. ಅದಲ್ಲದೆ, ಬರಿಯ ವಿಭೂತಿಯ ಪಟ್ಟವ ಕಟ್ಟಿ, ಗುರುಕಾರುಣ್ಯವಾಯಿತ್ತೆಂದು ಅನುಸರಣೆಯಲ್ಲಿ ಆಡಿಕೊಂಬುದು ಕ್ರಮವಲ್ಲ. ಅದೇನು ಕಾರಣವೆಂದಡೆ, ತಾ ಲಿಂಗದೇಹಿಯಾದುದಕ್ಕೆ ಕುರುಹು. ಲಿಂಗವುಳ್ಳವರೆಲ್ಲರ ತನ್ನವರೆನ್ನಬೇಕಲ್ಲದೆ, ಲಿಂಗವಿಲ್ಲದವರ ತನ್ನವರೆಂದಡೆ, ತನ್ನ ಸದಾಚಾರಕ್ಕೆ ದ್ರೋಹಬಹುದು, ಸಮಯಾಚಾರಕ್ಕೆ ಮುನ್ನವೇ ಸಲ್ಲ. ಇದು ಕಾರಣ, ಲಿಂಗಸ್ವಾಯತವಾಗಿಹುದೆ ಪಥವಯ್ಯಾ, ನಾಗಪ್ರಿಯ ಚೆನ್ನರಾಮೇಶ್ವರಾ. (ಶಿವನಾಗಮಯ್ಯ)
ಉದಕ ಮಜ್ಜನವಲ್ಲ ಪತ್ರೆ ಪೂಜೆಯಲ್ಲ. ಧೂಪ ಪರಿಮಳವಲ್ಲ, ಕಂಚು ಬೆಳಗಲ್ಲ, ಸಯಧಾನ ಅರ್ಪಿತವಲ್ಲ! ಅದೆಂತೆಂದಡೆ: ಸಜ್ಜನವೆ ಮಜ್ಜನ, ಸತ್ಯಸದಾಚಾರವೆ ಪತ್ರೆ ಪುಷ್ಪ. ಅಷ್ಟಮದಂಗಳ ಸುಟ್ಟುದೆ ಧೂಪ, ನಯನವೆ ಸ್ವಯಂ ಜ್ಯೋತಿ, ಪರಿಣಾಮವೆ ಅರ್ಪಿತ ಕಾಣಾ ಗುಹೇಶ್ವರಾ. (ಅಲ್ಲಮಪ್ರಭುದೇವರು)
ದೇವರ ಪಾದಕ್ಕೆ ಸಂದಲ್ಲಿ ಆತನ ಶರೀರವ ಸಮಾದ್ಥಿಯಲ್ಲಿ ನಿಕ್ಷೇಪವಂ ಮಾಡಿ ಲಿಂಗಭಕ್ತರಿಗೆ ವಿಭೂತಿವೀಳೆಯವಂ ಕೊಡುವುದೆ ಸದಾಚಾರ. ಹೀಂಗಲ್ಲದೆ, ಹೆಣ ಶೃಂಗಾರವ ಮಾಡಿಸಿ, ಹರೆ ಕಹಳೆ ಸಹಿತ ವಿಮಾನದಲ್ಲಿ ಕೊಂಡುಹೋಗಿ, ಹೂಳಿ, ಶ್ರಾದ್ಧ ಕೂಳ ಮಾಡುವರು ಸದಾಚಾರಕ್ಕೆ ದೂರವಯ್ಯಾ ಕೂಡಲಸಂಗಮದೇವಾ. (ಬಸವಣ್ಣ)
ಭಕ್ತ ಭಕ್ತನ ಮನೆಗೆ ಬಂದಡೆ, ಭೃತ್ಯಾಚಾರವ ಮಾಡಬೇಕು. ಕರ್ತನಾಗಿ ಕಾಲ ತೊಳೆುಸಿಕೊಂಡಡೆ ಹಿಂದೆ ಮಾಡಿದ ಭಕ್ತಿಗೆ ಹಾನಿ. ಲಕ್ಕಗಾವುದ ದಾರಿಯ ಹೋಗಿ ಭಕ್ತನು ಭಕ್ತನ ಕಾಂಬುದು ಸದಾಚಾರ. ಅಲ್ಲಿ ಕೂಡಿ ದಾಸೋಹವ ಮಾಡಿದಡೆ ಕೂಡಿಕೊಂಬನು ನಮ್ಮ ಕೂಡಲಸಂಗಯ್ಯ. (ಬಸವಣ್ಣ)
ದಾಸಿಯ ಸಂಗವ ಮಾಡಿದಡೆ ಸೂಕರನ ಮಾಂಸವ ತಿಂದ ಸಮಾನ, ವೇಶಿಯ ಸಂಗವ ಮಾಡಿದಡೆ ಮಾಂಸವ ತಿಂದ ಸಮಾನ, ಮುಂಡೆಯ ಸಂಗವ ಮಾಡಿದಡೆ ಅಮೇಧ್ಯವ ತಿಂದ ಸಮಾನ, ಗಂಡನ ಬಿಟ್ಟವಳ ಸಂಗವ ಮಾಡಿದಡೆ ನರಮಾಂಸವ ತಿಂದ ಸಮಾನ, ಗಂಡನುಳ್ಳವಳ ಸಂಗವ ಮಾಡಿದಡೆ ಸತ್ತ ಹೆಣದ ಬೆನ್ನ ಮಲವ ತಿಂದ ಸಮಾನ, ಚೋರ ಕನ್ನಿಕೆಯ ಸಂಗವ ಮಾಡಿದಡೆ ಸುರಾಪಾನವ ಕೊಂಡ ಸಮಾನ. ಇದು ಕಾರಣ ಗುರುವಾಗಲಿ, ಜಂಗಮವಾಗಲಿ, ಭಕ್ತನಾಗಲಿ ದಾಶಿ ವೇಶಿ ವಿಧವೆ ಪರಸ್ತ್ರೀ ಚೋರಕನ್ನಿಕೆ ಬಿಡಸ್ತ್ರೀ ಮೊದಲಾದ ಹಲವು ಪ್ರಕಾರದ ರಾಶಿಕೂಟದ ಸ್ತ್ರೀಯರ ಬಿಟ್ಟು ಶುದ್ಧಕನ್ಯೆಯ ಭಕ್ತಗಣ ಸಾಕ್ಷಿಯಾಗಿ ವಿಭೂತಿಪಟ್ಟ ಪಾಣಿಗ್ರಹಣ ಏಕಪ್ರಸಾದಭುಕ್ತನಾಗಿ ಭಕ್ತಿಕಲ್ಯಾಣವಾಗಿ ಸತ್ಯಸದಾಚಾರದಲ್ಲಿ ವರ್ತಿಸುವ ಭಕ್ತಾರಾಧ್ಯರಿಗೆ ಗುರುವುಂಟು ಲಿಂಗವುಂಟು ಜಂಗಮವುಂಟು ಪಾದೋದಕವುಂಟು ಪ್ರಸಾದವುಂಟು; ಆತಂಗೆ ನಿಜಮೋಕ್ಷವುಂಟು. ಇಂತಲ್ಲದೆ_ ತನ್ನಂಗವಿಕಾರಕ್ಕೆಳಸಿ ದುರ್ವಿಷಯಾಸಕ್ತನಾಗಿ ಆರು ಪ್ರಕಾರದ ಸ್ತ್ರೀಯರು ಮುಂತಾದ ರಾಶಿಕೂಟದ ಸ್ತ್ರೀಯರಿಗೆ ಹೇಸದೆ ಆಸೆ ಮಾಡುವ ಪಾಠಕರಿಗೆ; ಗುರುವಿಲ್ಲ; ಲಿಂಗವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲ; ಅವ ಭಕ್ತನಲ್ಲ ಜಂಗಮವಲ್ಲ, ಅವರಿಗೆ ಮುಕ್ತಿಯಿಲ್ಲ, ಮುಂದೆ ನರಕ ತಪ್ಪದು ಕಾಣಾ ಕೂಡಲಚೆನ್ನಸಂಗಮದೇವಾ.
ಗುರುಹಸ್ತದಲ್ಲಿ ಉತ್ಪತ್ಯವಾಗಿ, ಜಂಗಮಾನುಭವ ಶರಣರ ಸಂಗದಲ್ಲಿ ಬೆಳೆದು, ನಿಜಲಿಂಗದಲ್ಲಿ ಲೀಯವಾದ ಗುರುಚರ ಭಕ್ತರು ತಮ್ಮ ಸ್ಥೂಲಕಾಯವೆಂಬ ನರಕಂಥೆಯ ಕಳೆದರೆ, ಭಕ್ತ ಬಂಧುಗಳಾದ ಆಪ್ತ ಗಣಂಗಳು ಬಂದು ಸಮಾಧಿಯಂ ತೆಗೆದು, ಆ ಕಾಯವೆಂಬ ಕಂಥೆಯ ನಿಕ್ಷೇಪವಂ ಮಾಡುವುದೆ ಸದಾಚಾರ. ಇಂತಲ್ಲದೆ ಮೃತವಾದನೆಂದು ಗೂಟವಂ ಬಲಿದು, ಗುಂಟಿಕೆಯನಿಕ್ಕಿ, ಶೋಕಂಗೆಯ್ದು, ಪ್ರೇತಸೂತಕ ಕರ್ಮವಿಡಿದು, ತದ್ದಿನವಂ ಮಾಡುವದನಾಚಾರ, ಪಂಚಮಹಾಪಾತಕ. ಅವಂಗೆ ಗುರು ಲಿಂಗ ಜಂಗಮ ಪ್ರಸಾದವಿಲ್ಲ ಅದೆಂತೆಂದೊಡೆ: “ಯೋ ಗುರುಂ ಮೃತಭಾವೇನ ತದ್ದಿನಂ ಯಸ್ಯ ಶೋಚ್ಯತೇ ಗುರುಲಿಂಗಪ್ರಸಾದಂ ಚ ನಾಸ್ತಿ ನಾಸ್ತಿ ವರಾನನೇ ಎಂದುದಾಗಿ, ಪ್ರೇತಸೂತಕದ ಪಾತಕರಿಗೆ ಅಘೋರನರಕ ತಪ್ಪದು. ಇಂತಪ್ಪ ಅಘೋರನರಕಿಗಳ ಮುಖವ ನೋಡಲಾಗದು ಕಾಣಾ ಕೂಡಲಚೆನ್ನಸಂಗಯ್ಯ. (ಚನ್ನಬಸವಣ್ಣ)
ಅಯ್ಯಾ, ಗುರುಶಿಷ್ಯರಿಬ್ಬರು ಪುಣ್ಯಪಾಪ, ಇಹಪರಂಗಳಿಗೆ ಒಳಗಾದ ವಿಚಾರವೆಂತೆಂದಡೆ ಸತ್ಯಸದಾಚಾರಸಂಪತ್ತೆಂಬ ಶಿವಭಕ್ತರ ಹೃದಯದಲ್ಲಿ ಜನಿತನಾಗಿ ಸತ್ಯನಡೆ ನಡೆಯದೆ, ಲೋಕದ ಜಡಜೀವಿಯಂತೆ ಪಂಚಮಹಾಪಾತಕಂಗಳಲ್ಲಿ ವರ್ತಿಸುವುದ ಕಂಡು ಅದ ಪರಿಹರಿಸದೆ, ದ್ರವ್ಯದಭಿಲಾಷೆಯಿಂದ ತ್ರಿವಿಧದೀಕ್ಷೆಯ ಮಾಡುವನೊಬ್ಬ ಗುರು ಹುಟ್ಟಂಧಕನೆಂಬೆನಯ್ಯಾ. ಅಂತಪ್ಪ ಪರಮಪಾತಕಂಗೆ ಜಪವ ಹೇಳಿ, ಪಾದೋದಕದಲ್ಲೇಕಭಾಜನವ ಮಾಡಿ, ಪ್ರಸಾದವ ಕೊಟ್ಟು, ಷಟ್ಸ್ಥಲವ ಹೇಳುವನೊಬ್ಬ ಜಂಗಮ ಕೆಟ್ಟಗಣ್ಣವನೆಂಬೆನಯ್ಯಾ. ಇಂತೀ ಅಧಮ ಗುರುಶಿಷ್ಯಜಂಗಮಕ್ಕೆ ಭವಬಂಧನ ತಪ್ಪದು ನೋಡಾ, ಶಂಭುಕೇಶ್ವರದೇವಾ, ನೀನೊಲಿಯದೆ ಕೆಟ್ಟಿತ್ತೀ ಜಗವೆಲ್ಲ. (ಸತ್ಯಕ್ಕ)
ಆ ಜಾತಿ ಈ ಜಾತಿಯವರೆನಬೇಡ. ಹದಿನೆಂಟುಜಾತಿಯೊಳಗಾವ ಜಾತಿಯಾದಡೂ ಆಗಲಿ, ಗುರು ಕಾರುಣ್ಯವ ಪಡೆದು, ಅಂಗದ ಮೇಲೆ ಲಿಂಗವ ಧರಿಸಿ, ಪುನರ್ಜಾತರಾದ ಬಳಿಕ, ಭಕ್ತರಾಗಲಿ ಜಂಗಮವಾಗಲಿ, ಗುರುವಿನ ವೇಷವಿದ್ದವರ ಗುರುವೆಂದು ನಂಬಿ, ದಾಸೋಹವ ಮಾಡುವುದೆ ಸದಾಚಾರ. ಗುರುವನತಿಗಳೆದು, ಗುರುವಾಜ್ಞೆಯ ಮೀರಿ, ಗುರು ಕೊಟ್ಟ ಪಂಚಮುದ್ರೆಗಳ ಮೇಲೆ ಅನ್ಯಸಮಯ ಮುದ್ರೆಯ ಲಾಂಛನಾಂಕಿತರಾಗಿ, ಗುರುದ್ರೋಹಿಗಳಾಗಿ ಬಂದವರ ಜಂಗಮವೆಂದು ಕಂಡು, ನಮಸ್ಕರಿಸಿ ಆರಾಧಿಸಿ, ಪ್ರಸಾದವ ಕೊಂಡವಂಗೆ ನಾಯಕನರಕ ತಪ್ಪದೆಂದ ಕಲಿದೇವಯ್ಯ.
ಅಯ್ಯಾ, ನಿತ್ಯನಿಃಕಳಂಕ ಸತ್ಯಸದಾಚಾರ ಭಕ್ತಜಂಗಮದ ಆಚರಣೆಸಂಬಂಧವ ಒಳಗು ಹೊರಗು ಎನ್ನದೆ, ಸಾಕಾರ ನಿರಾಕಾರವಾದ ಒಂದೆ ವಸ್ತುವೆಂದು ತಿಳಿದು, ಚಿದಂಗಕ್ಕೆ ಇಷ್ಟಲಿಂಗ ಚಿದ್ವಿಭೂತಿ ಚಿದ್ರುದ್ರಾಕ್ಷಿ ಸದ್ಭಕ್ತಿಯ ಸಂಬಂಧಿಸಿ, ಚಿತ್ಪ್ರಾಣಕ್ಕೆ ಪಾದೋದಕ ಪ್ರಸಾದ ಶಿವಮಂತ್ರ ಸಮ್ಯಜ್ಞಾನವ ಸಂಬಂಧಿಸಿ, ಭಕ್ತ ಧವಳಾಂಬರಧಾರಕನಾಗಿ, ಜಂಗಮ ಶಿವಲಾಂಛನಧಾರಕನಾಗಿ, ಪರದೈವ ಪರಪಾಕ ಪರಶಾಸ್ತ್ರ ಪರಬೋಧೆ ಪರದ್ರವ್ಯ ಪರಸ್ತ್ರೀ ಪರಜಪ ಪರನಿಂದೆ ಅತಿಯಾಸೆ ಕಾಂಕ್ಷೆ ಮಲತ್ರಯದಲ್ಲಿ ಮೋಹಿಸದೆ, ಮಥನದಲ್ಲಿ ಕೂಡದೆ ಭವಿಮಾರ್ಗ ಸಂಗವ ಬಳಸಿದ ಶಿಷ್ಯ ಪುತ್ರ ಸ್ತ್ರೀ ಬಂಧು ಬಳಗ ಒಡಹುಟ್ಟಿದವರು ಪಿತ ಮಾತೆ ಗುರುವೆಂದು ಒಡಗೂಡಿ ಬಳಸಿದಡೆ ಭಕ್ತಜಂಗಮಸ್ಥಲಕ್ಕೆ ಸಲ್ಲ ಕಾಣಾ, ಕಲಿದೇವರದೇವ.
ಕೆಸರಲ್ಲಿ ಬಿದ್ದ ಪಶುವಿನ ದೇಹವ ತೊಳೆವರಲ್ಲದೆ, ಲೋಕದೊಳಗೆ ಗಂಜಳದೊಳಗಣ ಹಂದಿಯ ದೇಹವನಾರೂ ತೊಳೆಯರು. ಗುರುಕಾರುಣ್ಯವುಳ್ಳ ಭಕ್ತರ ನಡೆವ ಗುಣದಲ್ಲಿ ಎಡಹಿದ ಶಬ್ದಕ್ಕೆ ಪ್ರಾಯಶ್ಚಿತವಂ ಕೊಟ್ಟು, ವಿಭೂತಿಯನಿಟ್ಟು, ಒಡಗೂಡಿಕೊಂಡು ನಡೆಸುವದೆ ಸದಾಚಾರ. ಗುರುಚರಲಿಂಗವನರಿಯದ ದುರಾಚಾರಿಗಳಿಗೆ ಪ್ರಾಯಶ್ಚಿತವಂ ಕೊಟ್ಟು, ವಿಭೂತಿಯನಿಟ್ಟು, ಒಡಗೂಡಿಕೊಂಡ ತೆರನೆಂತೆಂದಡೆ, ಶೂಕರನ ದೇಹವ ತೊಳೆದಡೆ, ಕೂಡೆ ಪಾಕುಳದೊಳಗೆ ಹೊರಳಿದ ತೆರನಾಯಿತ್ತೆಂದ ಕಲಿದೇವಯ್ಯ. (ಮಡಿವಾಳ ಮಾಚಿದೇವ)
ವೇದವನೋದಿದಡೇನು? ಶಾಸ್ತ್ರವ ಕಲಿತಡೇನು? ಮಾಘವ ಮಿಂದಡೇನು? ಮೂಗ ಹಿಡಿದಡೇನು? ಹಲ್ಲ ಕಿರಿದಡೇನು? ಬಾಯ ಹುಯ್ದುಕೊಂಡಡೇನು? ಉಟ್ಟುದನೊಗೆದಡೇನು? ಮಟ್ಟಿಯನಿಟ್ಟಡೇನು? ಮಂಡೆಯ ಬಿಟ್ಟಡೇನು? ತಿಟ್ಟನೆ ತಿರುಗಿದಡೇನು? ಕಣ್ಣು ಮುಚ್ಚಿದಡೇನು? ಕೈಗಳ ಮುಗಿದಡೇನು? ಬೊಟ್ಟನಿಟ್ಟಡೇನು? ಬಯಲಿಂಗೆ ನೆನೆದಡೇನು? ಮುಸುಡ ಹಿಡಿದಡೇನು? ಮೌನದಲ್ಲಿರ್ದಡೇನು? ಅವಕ್ಕೆ ಶಿವಗತಿ ಸಿಕ್ಕದು. ಕುಲವಳಿದು ಛಲವಳಿದು ಮದವಳಿದು ಮತ್ಸರವಳಿದು, ಗುರುಕಾರುಣ್ಯವ ಪಡೆದು, ಅಂಗದ ಮೇಲೆ ಲಿಂಗವ ಧರಿಸಿ, ಗುರುಲಿಂಗಜಂಗಮಕ್ಕೆ ಭಕ್ತಿಯ ಮಾಡಬಲ್ಲಡೆ, ಶಿವಗತಿ ಸಿಕ್ಕುವುದು. ಶಿವಭಕ್ತನಾಗಿ ಸತ್ಯ ಸದಾಚಾರ ಭಕ್ತಿವಿಡಿದು ನಡೆಯಬಲ್ಲಡೆ, ಕೈಲಾಸದ ಬಟ್ಟೆ ಬೇರಿಲ್ಲವೆಂದ, ಕಲಿದೇವಯ್ಯ. (ಮಡಿವಾಳ ಮಾಚಿದೇವ)
ಅಯ್ಯ ಸತ್ಕ್ರಿಯಾಸಮ್ಯಜ್ಞಾನವುಂಟಾದಡೆ ಸದಾಚಾರಸದ್ಭಕ್ತಿ ಉಂಟೆಂಬೆ. ಸದಾಚಾರ ಸದ್ಭಕ್ತಿ ಸತ್ಕ್ರಿಯಾ ಸಮ್ಯಜ್ಞಾನ ಸತ್ಯ ನಡೆನುಡಿ ಒಂದಾದಡೆ ಆದಿ_ಅನಾದಿಯಿಂದತ್ತತ್ತ ಮೀರಿ ತೋರುವ, ಪರಿಪೂರ್ಣ ಪರಮಾನಂದ ಪರಬ್ರಹ್ಮ ಗುರುಲಿಂಗಜಂಗಮವೆಂಬೆ ನೋಡಾ. ಇಂತು_ಸದಾಚಾರ, ಸದ್ಭಕ್ತಿ, ಸತ್ಕ್ರಿಯಾ, ಸಮ್ಯಜ್ಞಾನ, ಸತ್ಯನಡೆ ನುಡಿಯಿಲ್ಲವಾದಡೆ ಗುಹೇಶ್ವರಲಿಂಗಕ್ಕೆ ದೂರ ಕಾಣಾ ಚೆನ್ನಬಸವಣ್ಣ. (ಅಲ್ಲಮಪ್ರಭುದೇವರು)
ಈರೇಳು ಭುವನವನೊಳಕೊಂಡ ಮಹಾಘನಲಿಂಗವು ಶಿವಭಕ್ತನ ಕರಸ್ಥಲದಾಲಯಕ್ಕೆ ಬಂದು, ಪೂಜೆಗೊಂಬ ಪರಿಯ ನೋಡ! ಅಪ್ರಮಾಣ-ಅಗೋಚರವಾದ ಲಿಂಗದಲ್ಲಿ ಸಂಗವ ಬಲ್ಲಾತನೆ ಸದಾಚಾರಸದ್ಭಕ್ತನು! ಹೀಂಗಲ್ಲದೆ ಹಣವಿನಾಸೆಗೆ ಹಂಗಿಗನಾಗಿ, ಜಿಹ್ವಾಲಂಪಟಕ್ಕೆ ಅನಾಚಾರದಲ್ಲಿ ಉದರವ ಹೊರದು ಬದುಕುವಂಥ ಭಂಡರು ಭಕ್ತರಾದವರುಂಟೆ? ಹೇಳ! ಅಂಥ ಅನಾಚಾರಿ ಶಿವದ್ರೋಹಿಗಳ ಮುಖವ ನೋಡಲಾಗದು! ಅದೆಂತೆಂದಡೆ: ಕತ್ತೆ ಭಕ್ತನಾದಡೆ ಕಿಸುಕಳವ ತಿಂಬುದ ಮಾಣ್ಬುದೆ? ಹಂದಿ ಭಕ್ತನಾದಡೆ ಹಡಿಕೆಯ ತಿಂಬುದ ಮಾಣ್ಬುದೆ? ಬೆಕ್ಕು ಭಕ್ತನಾದಡೆ ಇಲಿಯ ತಿಂಬುದ ಮಾಣ್ಬುದೆ? ಸುನಕಗೆ ಪಂಚಾಮೃತವ ನೀಡಲು ಅಡಗ ತಿಂಬುದ ಮಾಣ್ಬುದೆ ? ಇಂತೀ ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಮರಳಿ ತನ್ನ ಜಾತಿಯ ಕೂಡಿದಡೆ ಆ ಕತ್ತೆ-ಹಂದಿ-ಬೆಕ್ಕು-ಸುನಕಗಿಂದತ್ತತ್ತ ಕಡೆ ಕಾಣಿರೊ! ಹೊನ್ನಬೆಟ್ಟವನೇರಿ ಕಣ್ಣುಕಾಣದಿಪ್ಪಂತೆ,ಗಣಿಯನೇರಿದ ಡೊಂಬ ಮೈಮರದಿಪ್ಪಂತೆ, ಅಂಕವನೇರಿದ ಬಂಟ ಕೈಮರದಿಪ್ಪಂತೆ! ಇಂತಿವರು ಮಾಡುವ ಭಕ್ತಿಯೆಲ್ಲವು ನಡುನೀರೊಳು ಹೋಗುವ ಹರುಗೋಲು ಹೊಡಗೆಡದಂತಾಯಿತ್ತೆಂದಾತನಂಬಿಗರ ಚೌಡಯ್ಯನು! (ಅಂಬಿಗರ ಚೌಡಯ್ಯ)
ಐಶ್ವರ್ಯ ದುಃಖದಲ್ಲಿ ಬೇಯುವ ಹೊಲೆ ಸಂಸಾರವನೆ ಕಚ್ಚಿ ಕೊಲೆಗೀಡಾಗದೆ, ಸಲೆ ಸತ್ಯ ಸದಾಚಾರದಲ್ಲಿ ನಡೆ. ಸಟೆಯನು ಬಿಡು, ದಿಟವನೆ ಹಿಡಿ. ಈ ಘಟವುಳ್ಳನಕ ಕಾಲದಲ್ಲಿ ಶಿವಭಕ್ತಿಯ ನಟಿಸಿ ನಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ.
ಆಯುಷ್ಯವ ಹಿರಿದಾಗಿ ಕೊಟ್ಟಡೆ, ಲಿಂಗ ಒಲಿದುದಲ್ಲ. ಭಾಷೆಯ ಹಿರಿದಾಗಿ ಕೊಟ್ಟಡೆ, ಲಿಂಗ ಒಲಿದುದಲ್ಲ. ಅಷ್ಟಮಹದೈಶ್ವರ್ಯವ ಹಿರಿದಾಗಿ ಕೊಟ್ಟಡೆ ಲಿಂಗ ಒಲಿದುದಕ್ಕೆ ಕುರುಹಲ್ಲ. ಕಾಯ ಬೆರಸಿ ಕೈಲಾಸಕ್ಕೆ ಕೊಂಡು ಹೋದರೂ ಲಿಂಗ ಒಲಿದುದಲ್ಲ. ಇವೆಲ್ಲಾ ಪೂಜಾ ಫಲಂಗಳು, ಕೈಕೂಲಿಕಾರತನವೈಸೆ. ಲಿಂಗ ಒಲಿದ ಪರಿ: ಗುರುಲಿಂಗಜಂಗಮ ಒಂದೆಂದು ಅರಿದು ನಿಶ್ಚಯ ಭಾವದಿಂ ತನು ಮನ ಧನವಲ್ಲಿಯೇ ಅರ್ಪಿಸುವುದು ಲಿಂಗ ಒಲಿದುದು. ಕಾಯಭಾವವಳಿದು ಲಿಂಗವೆಂದು ಭಾವಿಸಿ ಭಾವಸಿದ್ಧಿಯಾದುದು ಲಿಂಗ ಒಲಿದುದು. ಲಿಂಗವಲ್ಲದೆ ಇನ್ನಾವುದು ಘನ? ಎದರಿದುವೆ ಲಿಂಗ ಒಲಿದುದು. ಲಿಂಗವಂತನೆ ಲಿಂಗವೆಂದರಿದುದು ಲಿಂಗ ಒಲಿದುದು. ಸದಾಚಾರ ಲಿಂಗ ಒಲಿದುದು. ನಿರ್ವಂಚನೆ ಲಿಂಗ ಒಲಿದುದು.ಸರ್ವಭೋಗವನು ಲಿಂಗವಂತರಿಗೆ ಭೋಗಿಸಲಿತ್ತು ಸಮಭೋಗವಲ್ಲದೆ ಲಿಂಗವಂತಗೆ ವಿಶೇಷ ಭೋಗ ತಾತ್ಪರ್ಯ ಮೋಹವಾಗದಡೆ ಲಿಂಗ ಒಲಿದುದು. ಪರಧನ ಪರಸ್ತ್ರೀ ಪರದ್ರವ್ಯ ಪರದೈವದಲ್ಲಿ ವರ್ತಿಸದಿದ್ದಡೆ ಲಿಂಗ ಒಲಿದುದು. ಲಿಂಗದಲ್ಲಿ ಭಕ್ತನಲ್ಲಿ ಅವಿನಾಭಾವವಳವಟ್ಟು ಭಾವಶುದ್ಧವಾಗಿ ಸರ್ವಕ್ರೀ ಲಿಂಗಕ್ರೀಯಾದಡೆ ಲಿಂಗ ಒಲಿದುದು ದೃಷ್ಟವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. (ಉರಿಲಿಂಗಪೆದ್ದಿ)
ಈ ಲೇಖನದಲ್ಲಿ ಸದಾಚಾರಕ್ಕೆ ಸಂಬಧಿಸಿದ ಕೆಲವೇ ಕೆಲವು ವಚನಗಳನ್ನು ಸಂಗ್ರಹಿಸಲಾಗಿದೆ. ಇನ್ನೂ ಬಹುಸಂಖ್ಯೆಯ ವಚನಗಳು ವಚನಭಂಡಾರದಲ್ಲಿವೆ, ನಾವುಗಳು ಆ ಎಲ್ಲಾ ವಚನಗಳನ್ನು ಸಾಧ್ಯವಾದ ಮಟ್ಟಿಗೆ ಓದಿ ಅರ್ಥೈಸಿಕೊಂಡು ಸದಾಚಾರ ಮಾರ್ಗದಲ್ಲಿ ನಡೆದು ಜೀವನಸಾರ್ಥಕ ಮಾಡಿಕೊಳ್ಳಬೇಕು.

Previous post ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
Next post ಬಯಲಾಟ
ಬಯಲಾಟ

Related Posts

ಲಿಂಗಾಯತ ಧರ್ಮದ ನಿಜದ ನಿಲುವು
Share:
Articles

ಲಿಂಗಾಯತ ಧರ್ಮದ ನಿಜದ ನಿಲುವು

April 29, 2018 ಡಾ. ಎಸ್.ಎಮ್ ಜಾಮದಾರ
ಪ್ರಜಾವಾಣಿ ದಿನಪತ್ರಿಕೆಯ ಸಂಪಾದಕೀಯ ಪುಟದಲ್ಲಿ ‘ಲಿಂಗಾಯತವು ಪ್ರತ್ಯೇಕ ಸ್ವತಂತ್ರ ಧರ್ಮವೇ?’ ಎಂಬ ನನ್ನ ಲೇಖನಕ್ಕೆ ಪ್ರತಿಕ್ರಿಯೆ ಎನ್ನುವಂತೆ ಡಾ ಚಿದಾನಂದ ಮೂರ್ತಿಯವರು 13...
ಕಾಯವೇ ಕೈಲಾಸ
Share:
Articles

ಕಾಯವೇ ಕೈಲಾಸ

April 29, 2018 ಕೆ.ಆರ್ ಮಂಗಳಾ
ದೇಹಕ್ಕೂ ಮತ್ತು ನನಗೂ ಸಂಬಂಧವೇನು? ಇಂಥದೊಂದು ಪ್ರಶ್ನೆ ಯಾರಾದರೂ ಕೇಳಿದರೆ ತಲೆ ಸರಿ ಇದೆಯೇ? ಎಂಬ ಮರುಪ್ರಶ್ನೆ ಬಾಣದಂತೆ ತೂರಿ ಬರುವುದು ನಿಶ್ಚಿತ. ಆದರೆ ಆಧ್ಯಾತ್ಮ ಲೋಕದಲ್ಲಿ...

Comments 11

  1. Dayashankara R
    Mar 20, 2021 Reply

    ಪಂಚಾಚಾರಗಳ ಕುರಿತು ವಚನಗಳ ಆಧಾರದಲ್ಲಿ ಲೇಖನ ಸಿದ್ದಪಡಿಸಿರುವುದು ಸಂತಸದ ವಿಷಯ. ಶಾಲೆಯಲ್ಲಿ ಮಕ್ಕಳಿಗೆ ಈ ಆಚಾರಗಳ ತಿಳಿವಳಿಕೆ ಕೊಡುವುದು ಅಗತ್ಯವೆನಿಸುತ್ತದೆ. ಕೊನೆಪಕ್ಷ ಲಿಂಗಾಯತ ಸಮಾಜದ ಶಾಲೆಗಳಲ್ಲಾದರೂ ಪಂಚಾಚಾರಗಳ ಪಠ್ಯವನ್ನು ಕಡ್ಡಾಯವಾಗಿಡುವುದು ಒಳ್ಳೆಯದು.

  2. Manjula Tippeswamy
    Mar 20, 2021 Reply

    ಸದಾಚಾರಕ್ಕೆ ಶರಣರು ನೀಡಿದ ಮಹತ್ವ ಅವರ ವಚನಗಳ ಸಾಲು ಸಾಳುಗಳಲ್ಲಿ ವ್ಯಕ್ತವಾಗಿದೆ. ಸದಾಚಾರಿಯಾದವನು ಸಮಾಜಕ್ಕೆ ದ್ರೋಹ ಬಗೆಯಲಾರ.

  3. Indira Bidar
    Mar 20, 2021 Reply

    ಸದಾಚಾರವನ್ನು ಅಳವಡಿಸಿಕೊಂಡವ ಮಾತ್ರ ಬಸವಣ್ಣನವರ, ಶರಣರ ದಾರಿಗೆ ಬರಲು ಸಾಧ್ಯ. ಸದಾಚಾರಕ್ಕೂ ಸಮಯಾಚಾರಕ್ಕೂ ಏನು ಅಂತರ ಶರಣರೇ?

  4. Andanappa
    Mar 22, 2021 Reply

    ಭ್ರಷ್ಟಾಚಾರ ತುಂಬಿದ ಜಗತ್ತಿನಲ್ಲಿ ಸದಾಚಾರದಿಂದ ಬಾಳುವುದು ಹೇಗೆ ಸರ್?

  5. Naganna D
    Mar 23, 2021 Reply

    ಸದಾಚಾರದ ಲಕ್ಷಣಗಳನ್ನು ತಿಳಿಸಿದ ವಚನಗಳನ್ನು ಒಂದೆಡೆ ನೀಡಿದ್ದಕ್ಕೆ ಶರಣಾರ್ಥಿಗಳು ಅಣ್ಣಾ.

  6. ವೀಣಾ ಆನೆಕಲ್
    Mar 24, 2021 Reply

    ಅಂಗದಲ್ಲಿ ಆಚಾರವ ತೋರಿದ ಆ ಆಚಾರವೇ ಲಿಂಗವೆಂದರುಹಿದ… ಇಲ್ಲಿ ಆಚಾರ ಎಂದು ಹೇಳಿದ್ದು ಯಾವುದನ್ನು? ಆ ಆಚಾರವೇ ಲಿಂಗವೆನ್ನುತ್ತಿದ್ದಾರೆ… ಹೀಗೆ ವಚನಗಳನ್ನು ಸವಿಸ್ತಾರವಾಗಿ ಬಿಡಿಸಿ ಬರೆದರೆ ಶರಣರ ಮಾರ್ಗ ಗೊತ್ತಾಗಬಹುದು. ಸದಾಚಾರದ ನಡೆಯನ್ನು ವಿವರಿಸಿದಂತೆ ಇಂತಹ ಅವಲೋಕನಗಳೂ ಅವಶ್ಯವೆನಿಸುತ್ತವೆ.

  7. Jagannatha Patil
    Mar 26, 2021 Reply

    ಶರಣರಲ್ಲಿ ಇದ್ದದ್ದು ಸತ್ಯ ಸದಾಚಾರದ ಸಂಪತ್ತು, ಈ ಸಂಪತ್ತು ಗಳಿಸಲು ಮನೋಬಲ ಬೇಕು. ನೈತಿಕತೆಯೇ ಸದಾಚಾರದ ಅಡಿಗಲ್ಲು. ಪಂಚಾಚಾರಗಳನ್ನು ನಮ್ಮ ಬದುಕಿಗೆ ಹತ್ತಿರವಾಗುವಂತೆ ಬರೆಯಬೇಕೆಂದು ನನ್ನ ಪ್ರಾರ್ಥನೆ. ಧನ್ಯವಾದಗಳು ಅಣ್ಣಾ.

  8. Mahesh
    Mar 27, 2021 Reply

    ಲಿಂಗವೆಂದರೆ ಸದಾಚಾರ, ಲಿಂಗವೆಂದರೆ ನಿರ್ವಂಚನೆ ಎನ್ನುವ ವಚನಗಳು ನೈತಿಕತೆಗೆ ಮೊದಲ ಆದ್ಯತೆ ನೀಡುತ್ತವೆ. ನೀತಿವಂತ ಮಾತ್ರವೇ ದೇವರ ಕೃಪೆಗೆ ಯೋಗ್ಯನಾಗಬಲ್ಲ, ಪೂಜೆ-ವ್ರತ-ತಪಸ್ಸುಗಳೆಲ್ಲ ನಿಮಿತ್ತ ಮಾತ್ರ.

  9. Deveerappa Katagi
    Mar 28, 2021 Reply

    ಸತ್ಯ ಮತ್ತು ಸಜ್ಜನಿಕೆಗಳಿಂದ ಕೂಡಿದ ಆಚಾರವೇ ಸದಾಚಾರ ಎನ್ನುವ ವಿಶ್ಲೇಷಣೆ ಸರಿಯಾಗಿದೆ. ಸತ್ಯ ಮತ್ತು ಸಜ್ಜನಿಕೆಗಳನ್ನು ಅಳವಡಿಸಿಕೊಳ್ಳಲು ವಚನಗಳು ನಿತ್ಯ ಮಾರ್ಗದರ್ಶಿ ಸೂತ್ರಗಳಾಗಿವೆ.

  10. ಲಕ್ಷ್ಮೀ ಕಲಘಟಗಿ
    Mar 29, 2021 Reply

    ಶಿವಭಕ್ತನಾಗಿ ಸತ್ಯ ಸದಾಚಾರ ಭಕ್ತಿವಿಡಿದು ನಡೆಯಬಲ್ಲಡೆ, ಕೈಲಾಸದ ಬಟ್ಟೆ ಬೇರಿಲ್ಲವೆಂದ, ಕಲಿದೇವಯ್ಯ… ಮಾಚಿತಂದೆಗಳ ಮಾತು ಅಕ್ಷರಶಃ ಸತ್ಯ. ಸತ್ಯ ಸದಾಚಾರ ಹಿಡಿದು ನಡೆಯುವುದೇ ಭಕ್ತನ ನಿಜವಾದ ದಾರಿ ಎನ್ನುವ ಸಂದೇಶವನ್ನು ಮರೆತು ನಾವು ಬಾಹ್ಯಾಡಂಬರಕ್ಕೆ ಬಿದ್ದಿದ್ದೇವೆ.

  11. Indudhar
    Apr 4, 2021 Reply

    ಹುಟ್ಟಿದಾಕ್ಷಣವೆ ಲಿಂಗಸ್ವಾಯತವ ಮಾಡಿ, ಶಿಶುವ ತನ್ನ ಶಿಶುವೆಂದು ಮುಖವ ನೋಡುವದು ಸದಾಚಾರ…… ಎನ್ನುವ ವಚನದಲ್ಲಿ ಸದಾಚಾರವನ್ನು ಬಾಲ್ಯದಿಂದಲೇ ವ್ಯಕ್ತಿಯಲ್ಲಿ ಮೂಡಿಸಬೇಕೆಂಬ ಸೂಚನೆ ಓದಿ ನನಗೆ ಆಶ್ಚರ್ಯವೆನಿಸಿತು. ಶರಣರು ಮುಂದಾಲೋಚನೆಯುಳ್ಳವರು. ಮನುಷ್ಯನೊಬ್ಬ ಶರಣನಾಗಿ ಹೊರಹೊಮ್ಮಬೇಕಾದರೆ ಬಾಲ್ಯದಲ್ಲಿಯೇ ಸದಾಚಾರಗಳನ್ನು ಬೆಳೆಸುತ್ತಾ ಹೋಗಬೇಕು. ಇದು ಲಿಂಗಾಯತ ಧರ್ಮದ ಸಂಸ್ಕಾರ ಎನ್ನುವುದರಲ್ಲಿ ಯಾವ ಅನುಮಾನಗಳೂ ಇಲ್ಲ. ಧನ್ಯವಾದಗಳು ಶರಣರೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶಿವಯೋಗ
ಶಿವಯೋಗ
July 4, 2021
ನಾನು ಕಂಡ ಡಾ.ಕಲಬುರ್ಗಿ
ನಾನು ಕಂಡ ಡಾ.ಕಲಬುರ್ಗಿ
September 7, 2021
ಬಸವೋತ್ತರ ಶರಣರ ಸ್ತ್ರೀಧೋರಣೆ
ಬಸವೋತ್ತರ ಶರಣರ ಸ್ತ್ರೀಧೋರಣೆ
April 29, 2018
ನೀರಬೊಂಬೆಗೆ ನಿರಾಳದ ಗೆಜ್ಜೆ
ನೀರಬೊಂಬೆಗೆ ನಿರಾಳದ ಗೆಜ್ಜೆ
April 29, 2018
ಶರಣನಾಗುವ ಪರಿ
ಶರಣನಾಗುವ ಪರಿ
June 3, 2019
ನೆಲದ ಮರೆಯ ನಿಧಾನದಂತೆ…
ನೆಲದ ಮರೆಯ ನಿಧಾನದಂತೆ…
April 29, 2018
ಇದ್ದ ಅಲ್ಲಮ ಇಲ್ಲದಂತೆ
ಇದ್ದ ಅಲ್ಲಮ ಇಲ್ಲದಂತೆ
April 29, 2018
ಲಿಂಗಾಯತ ಧರ್ಮದ ನಿಜದ ನಿಲುವು
ಲಿಂಗಾಯತ ಧರ್ಮದ ನಿಜದ ನಿಲುವು
April 29, 2018
ನಾನು ಯಾರು? ಎಂಬ ಆಳ ನಿರಾಳ-3
ನಾನು ಯಾರು? ಎಂಬ ಆಳ ನಿರಾಳ-3
May 6, 2020
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
April 29, 2018
Copyright © 2022 Bayalu