Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಶರಣನಾಗುವ ಪರಿ
Share:
Articles June 3, 2019 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಶರಣನಾಗುವ ಪರಿ

ವ್ಯಕ್ತಿಯ ವ್ಯಕ್ತಿತ್ವ ವಿಕಸನ ಅವನ ಪಂಚೇಂದ್ರಿಯಗಳು, ಮನಸ್ಸು, ಬುದ್ಧಿ ಮತ್ತು ಹೃದಯದ ಸದ್ಭಾವನೆಗಳನ್ನು ಅವಲಂಬಿಸಿದೆ. ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ ಇವೇ ಪಂಚೇಂದ್ರಿಯಗಳು. ಪಂಚೇಂದ್ರಿಯಗಳ ಉರುಳಿಗೆ ಸಿಲುಕಿದ ಮಾನವ ಮೇಲೇಳುವುದು ಕಷ್ಟಸಾಧ್ಯ. ಈ ಇಂದ್ರಿಯಗಳು ಕೆಲವೊಮ್ಮೆ ಮದಿಸಿದ ಆನೆಯಂತೆ ಕೆಲಸ ಮಾಡಬಲ್ಲವು. ಅದಕ್ಕೆ ಕಾರಣ ಮನಸ್ಸಿನ ವಿಕಾರ ಭಾವನೆಗಳು. ಮನಸ್ಸು ಕಣ್ಣಿಗೆ ಕಾಣದಿದ್ದರೂ ಅದರ ಚೇಷ್ಟೆಗಳು ಅವರ್ಣನೀಯ. ಮನವೆಂಬ ಮರ್ಕಟನ ಮೇಲೆ ಬುದ್ಧಿ ಮತ್ತು ಹೃದಯ ಹತೋಟಿಯನ್ನಿಟ್ಟುಕೊಂಡರೆ ಮನುಷ್ಯ ಪಂಚೇಂದ್ರಿಯಗಳನ್ನು ಸಕಾರಾತ್ಮಕವಾಗಿ ಸದ್ಬಳಕೆ ಮಾಡಿಕೊಂಡು ವಿಕಾಸದ ಮೆಟ್ಟಿಲನ್ನು ಏರಬಲ್ಲ. ಈ ನಿಟ್ಟಿನಲ್ಲಿ ಶರಣರ ಆಲೋಚನೆಗಳು ಚಿಂತನಾರ್ಹವಾಗಿವೆ. ಬಸವಾದಿ ಶಿವಶರಣರು ಮನಸ್ಸನ್ನು ಮಂಗ, ಓತಿಕ್ಯಾತ, ಗೋಸುಂಬೆ, ನಾಯಿ ಮುಂತಾದವುಗಳಿಗೆ ಹೋಲಿಸುವರು. ಅದರಲ್ಲೂ ಮಂಗನಿಗೆ ಮದ್ಯ ಕುಡಿಸಿ ಮೇಲೊಂದು ಚೇಳು ಕಡಿಸಿದರೆ ಅದು ಹೇಗೆ ಆಡಬಹುದು? ಅದಕ್ಕಿಂತಲೂ ವಿಚಿತ್ರವಾಗಿ ಆಡುವ ಗುಣ ಮನಸ್ಸಿನದು. ಬಸವಣ್ಣನವರು ಮನಸ್ಸನ್ನು ಕುರಿತು ಹೇಳಿರುವ ಅಭಿಪ್ರಾಯಗಳನ್ನು ಗಮನಿಸಿ: ಓತಿ ಬೇಲಿವರಿವಂತೆ ಎನ್ನ ಮನವಯ್ಯಾ, ಹೊತ್ತಿಗೊಂದು ಪರಿನಪ್ಪ ಗೋಸುಂಬೆಯಂತೆನ್ನ ಮನವು, ಬಾವುಲ ಬಾಳುವೆಯಂತೆನ್ನ ಮನವು.

ಮನುಷ್ಯನ ಉದ್ಧಾರ, ಅವನತಿ ಮನಸ್ಸನ್ನೇ ಅವಲಂಬಿಸಿದೆ. ಮನಸ್ಸು ಅಹಂಕಾರಕ್ಕೆ ತುತ್ತಾದರೆ ವ್ಯಕ್ತಿಯ ಅವನತಿ ಕಟ್ಟಿಟ್ಟ ಬುತ್ತಿ. ಬದಲಾಗಿ ಮನಸ್ಸನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಂಡರೆ ಅಹಂಕಾರ ಅಡಗಿ ಅದ್ಭುತ ಸಾಧನೆಯನ್ನೂ ಮಾಡಬಹುದು. ಮನಸ್ಸಿನ ಹತೋಟಿಗೆ ಬಸವಣ್ಣನವರು ಹೇಳುವುದು: `ಗುರುವಿಂಗೆ ತನುವ ಕೊಟ್ಟು, ಲಿಂಗಕ್ಕೆ ಮನವ ಕೊಟ್ಟು, ಜಂಗಮಕ್ಕೆ ಧನವ ಕೊಟ್ಟು, ಇಂತೀ ತ್ರಿವಿಧಕ್ಕೆ ತ್ರಿವಿಧವ ಕೊಟ್ಟು ನಾನು ಶುದ್ಧನಾದೆನು‘ ಎಂದು. ಅಂದರೆ ತನು, ಮನ, ಧನವನ್ನು ಗುರು, ಲಿಂಗ, ಜಂಗಮ ಸೇವೆಗೆ ಮೀಸಲಿಡುವುದು. ದೇಹವನ್ನು ಗುರುವಿನ ಸೇವೆಗೆ, ಮನಸ್ಸನ್ನು ಲಿಂಗ ಪೂಜೆಗೆ, ಧನವನ್ನು ಜಂಗಮ ಸೇವೆಗೆ ಸವೆಸಬೇಕು. ಹೀಗೆ ಮಾಡಲು ಬಾಲ್ಯದಿಂದಲೇ ಮನೆ, ಮಠ, ಸಮಾಜದಿಂದ ಸಂಸ್ಕಾರ ದೊರೆಯಬೇಕು. ಇಂದು ಎಲ್ಲಿಯೂ ಇಂಥ ವಾತಾವರಣ ಕಾಣುತ್ತಿಲ್ಲ. ದೇಹವಿರುವುದೇ ಉಂಡು, ತಿಂದು, ಮಜಾ ಉಡಾಯಿಸಲು ಎನ್ನುವ ಭಾವನೆ ಬಹುತೇಕರ ಮನದಲ್ಲಿ ಮನೆಮಾಡಿದೆ. ಇಂತಿರುವಾಗ ಗುರುವಿಗೆ ಸೇವೆ ಸಲ್ಲಿಸುವ ಚಿಂತನೆ ತುಂಬಾ ವಿರಳ. ಲಿಂಗಪೂಜೆಯಂತೂ ಬೇಕಿಲ್ಲ. ಬಹಳವೆಂದರೆ ಗುಡಿಗೆ ಹೋಗಿ, ತೀರ್ಥಕ್ಷೇತ್ರಗಳನ್ನು ಸುತ್ತಿ ಕೈ ಮುಗಿದರೆ ಅದೇ ದೊಡ್ಡ ಪೂಜೆ. ಶರಣರು ಹೇಳಿದ್ದು; ದೇಹವನ್ನೇ ಗುಡಿಯನ್ನಾಗಿ, ತೀರ್ಥಕ್ಷೇತ್ರವನ್ನಾಗಿ ಮಾಡಿಕೊಳ್ಳಲು.

ಜಂಗಮ ಅಥವಾ ಪುರೋಹಿತರ ಪಾದಪೂಜೆ, ರುದ್ರಾಭಿಷೇಕ, ಹೋಮಾದಿ ಕ್ರಿಯೆಗಳನ್ನು ಮಾಡಿಸುವುದೇ ಜಂಗಮ ಸೇವೆ ಎಂದು ಬಹುಜನರು ಭಾವಿಸಿದ್ದಾರೆ. ಜಂಗಮ ಎಂದರೆ ಚಲನೆಯುಳ್ಳುದು, ಅರಿವುಳ್ಳುದು. ಅರಿವು, ಆಚಾರ ಒಂದಾಗಿರುವ ಜನರೇ ಜಂಗಮ. ಮತ್ತೊಂದರ್ಥದಲ್ಲಿ ಸಮಾಜವೇ ಜಂಗಮ. ವ್ಯಕ್ತಿ ಕಾಯಕ ಶ್ರದ್ಧೆಯುಳ್ಳವನಾಗಿ ಆ ಕಾಯಕದಿಂದ ಬಂದ ಆದಾಯವನ್ನು ತಾನೊಬ್ಬನೇ ಬಳಸದೆ ಸಮಾಜದ ಸತ್ಕಾರ್ಯಗಳಿಗೆ ಸ್ವಲ್ಪ ಭಾಗವನ್ನಾದರೂ ವಿನಿಯೋಗಿಸುವುದು ಜಂಗಮ ಸೇವೆ. ಅದನ್ನು ಶರಣರು ದಾಸೋಹ ಎನ್ನುವರು. ಶರಣರ ಪರಿಭಾಷೆಯಲ್ಲಿ ಕಾಯಕ, ದಾಸೋಹ, ಇಷ್ಟಲಿಂಗ ಪೂಜೆ ಇವು ಮನಸ್ಸಿನ ಮಾಲಿನ್ಯ ನಿವಾರಿಸುವ ಸಿದ್ಧೌಷಧಿಗಳು. ಇಂಥ ಸಿದ್ಧೌಷಧಿಗಳು ಇಂದು ಆಡಳಿತಗಾರರಿಗೂ ಬೇಕಾಗಿಲ್ಲ, ಅವರನ್ನು ಅಧಿಕಾರ ಸ್ಥಾನದಲ್ಲಿ ಕೂರಿಸುವವರಿಗೂ ಬೇಕಾಗಿಲ್ಲ. ಎಲ್ಲವೂ ಸುಲಭವಾಗಿ, ಪರಿಶ್ರಮವಿಲ್ಲದೆ ಬರಬೇಕು. ಕೂತು ತಿನ್ನಬೇಕು. ಹೀಗಾದರೆ ವ್ಯಕ್ತಿಯ ಬೆಳವಣಿಗೆ, ದೇಶದ ಪ್ರಗತಿ ಸಾಧ್ಯವಿಲ್ಲ. `ಕೈ ಕೆಸರಾದರೆ ಬಾಯಿ ಮೊಸರು‘, `ಕೂತುಂಡರೆ ಕುಡಿಕೆ ಹೊನ್ನಿದ್ದರೂ ಸಾಲದು‘. ಈ ಸತ್ಯವನ್ನು ಪ್ರತಿಯೊಬ್ಬರೂ ಮನವರಿಕೆ ಮಾಡಿಕೊಳ್ಳಬೇಕು. ಕೈ ಕೆಸರು ಮಾಡಿಕೊಳ್ಳದೆ ಅಂದರೆ ಕಾಯಕಶೀಲರಾಗದೆ ಸೋಮಾರಿಯಾದರೆ ಅವನ ಮನಸ್ಸು ದೆವ್ವದ ಆಗರವಾಗುವುದು. ದೆವ್ವ ಏನೇನು ಮಾಡುತ್ತದೆಂದು ವಿವರಿಸುವ ಅಗತ್ಯವಿಲ್ಲ. ಅದನ್ನೇ ಬಸವಣ್ಣನವರು ತಮ್ಮ ವಚನದಲ್ಲಿ ಬಹು ಮಾರ್ಮಿಕವಾಗಿ ಮನಗಾಣಿಸಿದ್ದಾರೆ.

ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು,
ನಿಂದಲ್ಲಿ ನಿಲಲೀಯದೆನ್ನ ಮನವು,
ಹೊಂದಿದಲ್ಲಿ ಹೊಂದಲೀಯದೆನ್ನ ಮನವು
ಕೂಡಲಸಂಗಮದೇವಾ
ನಿಮ್ಮ ಚರಣಕಮಲದಲ್ಲಿ ಭ್ರಮರನಾಗಿರಿಸು, ನಿಮ್ಮ ಧರ್ಮ.

ಮನಸ್ಸು ಕೊಂಬೆಯಿಂದ ಕೊಂಬೆಗೆ ನೆಗೆಯುವ ಮಂಗನಿದ್ದಂತೆ. ಅದು ಒಂದೆಡೆ ನಿಲ್ಲದು. ಹಾಗೆ ನಿಲ್ಲಬೇಕು ಎಂದರೆ ನಿಮ್ಮ ಚರಣದಲ್ಲಿ ಭ್ರಮರನಾಗಿಸು ಎಂದು ಲಿಂಗಯ್ಯನನ್ನು ಬೇಡುವರು. ಅವರು ಮತ್ತೆ ಮತ್ತೆ ಮನಸ್ಸಿನ ಚಂಚಲ ಸ್ವಭಾವವನ್ನು ವಿವರಿಸಿ ಮನುಷ್ಯನನ್ನು ಎಚ್ಚರಿಸುವ ಕಾರ್ಯ ಮಾಡಿದ್ದಾರೆ.

ಅಂದಣವನೇರಿದ ಸೊಣಗನಂತೆ
ಕಂಡಡೆ ಬಿಡದು ತನ್ನ ಮುನ್ನಿನ ಸ್ವಭಾವವನು.
ಸುಡು, ಸುಡು, ಮನವಿದು ವಿಷಯಕ್ಕೆ ಹರಿವುದು,
ಮೃಡ ನಿಮ್ಮನನುದಿನ ನೆನೆಯಲೀಯದು.
ಎನ್ನೊಡೆಯ ಕೂಡಲಸಂಗಮದೇವಾ
ನಿಮ್ಮ ಚರಣವ ನೆನೆವಂತೆ ಕರುಣಿಸು–
ಸೆರಗೊಡ್ಡಿ ಬೇಡುವೆ, ನಿಮ್ಮ ಧರ್ಮ.

ಮನಸ್ಸನ್ನು ಪಲ್ಲಕ್ಕಿಯನೇರಿದ ನಾಯಿಗೆ ಹೋಲಿಸುವರು. ಕೆಲವರು ನಾಯಿಯನ್ನು ಹೇಗೆ ಮುದ್ದಿಸುವರು, ಆರೈಕೆ ಮಾಡುವರು, ಎಲ್ಲೆಲ್ಲಿ ಮಲಗಿಸಿಕೊಳ್ಳುವರು ಎಂದು ವಿವರಿಸುವ ಅಗತ್ಯವಿಲ್ಲ. ಅವರೆಷ್ಟೇ ಪ್ರೀತಿಸಿದರೂ ಹೇಸಿಗೆ ಇಲ್ಲವೆ ಎಲಬಿನ ಚೂರು ಕಂಡರೆ ಆ ನಾಯಿ ಪಲ್ಲಕ್ಕಿಯ ಮೇಲಿದ್ದರೂ ಠಣ್ಣನೆ ನೆಗೆದು ಬಾಯಿ ಹಾಕುವುದು. ಅದರಂತೆಯೇ ಮನುಷ್ಯನ ಮನಸ್ಸು. ಅದು ವಿಷಯ ವಾಸನೆಗಳಿಗೆ ತುತ್ತಾಗಿ ಮನುಷ್ಯನ ಅವನತಿಗೆ ಕಾರಣವಾಗುವುದು. ಹಾಗಾಗಿ ವಿಷಯ ವಾಸನೆಯನ್ನು ಸುಟ್ಟು ಮನಸ್ಸು ಲಿಂಗಯ್ಯನಲ್ಲಿ ಲೀನವಾಗುವಂತೆ ಮಾಡು ಎಂದು ಪ್ರಾರ್ಥಿಸುವರು. `ಮನಸ್ಸಿದ್ದಲ್ಲಿ ಮಾರ್ಗ‘ ಎನ್ನುವ ಹಾಗೆ ಮನುಷ್ಯ ಮನಸ್ಸು ಮಾಡಿದರೆ ಬೇಕಾದ್ದನ್ನು ಸಾಧಿಸಬಹುದು. ಮನಸ್ಸೇ ಮನುಷ್ಯನ ಬಂಧನ ಮತ್ತು ಮೋಕ್ಷಗಳಿಗೆ ಕಾರಣ. ಮನಸ್ಸು ಇಂದ್ರಿಯಗಳ ಗುಲಾಮನಾಗದೆ ಇಂದ್ರಿಯಗಳನ್ನು ತನ್ನ ಗುಲಾಮನಾಗಿಸಿಕೊಂಡರೆ ಅದ್ಭುತ ಪ್ರಗತಿ ಸಾಧ್ಯ. ಒಂದು ವೇಳೆ ಮನಸ್ಸೇ ಇಂದ್ರಿಯಗಳ ಗುಲಾಮನಾದಲ್ಲಿ ಆ ವ್ಯಕ್ತಿಯನ್ನು ಯಾರೂ ಉದ್ಧಾರ ಮಾಡಲು ಸಾಧ್ಯವಿಲ್ಲ. ಆತನ ಸ್ಥಿತಿ ಬಸವಣ್ಣನವರೇ ಹೇಳುವಂತೆ `ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗನಂತೆ‘ ಆಗುವುದರಲ್ಲಿ ಅನುಮಾನವಿಲ್ಲ.

ಒಂದು ಮೊಲಕ್ಕೆ ನಾಯನೊಂಬತ್ತು ಬಿಟ್ಟಂತೆ,
ಎನ್ನ ಬಿಡು ತನ್ನ ಬಿಡು ಎಂಬುದು ಕಾಯವಿಕಾರ,
ಎನ್ನ ಬಿಡು, ತನ್ನ ಬಿಡು ಎಂಬುದು ಮನೋವಿಕಾರ.
ಕರಣೇಂದ್ರಿಯಂಗಳೆಂಬ ಸೊಣಗ ಮುಟ್ಟದ ಮುನ್ನ
ಮನ ನಿಮ್ಮನೈದುಗೆ, ಕೂಡಲಸಂಗಮದೇವಾ.

ಬಸವಣ್ಣನವರು ಮನದ ಸ್ವಭಾವ ಕುರಿತು ಬಳಸುವ ನಿದರ್ಶನಗಳು ಗಮನಾರ್ಹ. ಮೊಲ, ನಾಯಿ, ಕಾಯವಿಕಾರ, ಮನೋವಿಕಾರ, ಕರಣೇಂದ್ರಿಯ ಇವೆಲ್ಲ ಮನಸ್ಸು, ವಿಷಯಗಳಿಗೆ ಸಂಬಂಧಿಸಿದವು. ಮನಸ್ಸು ಯಾವಾಗಲೂ ನಾಯಿಯ ಸ್ವಭಾವದ್ದು. ಮಾಂಸ ಕಾಣುತ್ತಲೇ ಅತ್ತ ನೆಗೆಯುವುದು. ಆ ನಾಯಿತನವನ್ನು ನಿವಾರಿಸಿ ಮನಸ್ಸು ಲಿಂಗಯ್ಯನಲ್ಲಿ ಲೀನವಾದಾಗಲೇ ಕಾಯವಿಕಾರ, ಮನೋವಿಕಾರ ದೂರವಾಗಿ ಮನುಷ್ಯತ್ವಕ್ಕೆ ಬೆಲೆ ಬರುವುದು. ಈ ನೆಲೆಯಲ್ಲಿ ಅಕ್ಕ ಹೇಳುವ ವಚನವನ್ನು ಗಮನಿಸಬೇಕು:

ಲೋಕದ ಚೇಷ್ಟೆಗೆ ರವಿ ಬೀಜವಾದಂತೆ,
ಕರಣಂಗಳ ಚೇಷ್ಟೆಗೆ ಮನವೇ ಬೀಜ.
ಎನಗುಳ್ಳುದೊಂದು ಮನ.
ಆ ಮನ ನಿಮ್ಮಲ್ಲಿ ಸಿಲುಕಿದ ಬಳಿಕ
ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನಾ?

ಜಗತ್ತಿನ ಎಲ್ಲ ವ್ಯಾಪಾರ, ವ್ಯವಹಾರಗಳಿಗೆ ಸೂರ್ಯೋದಯವೇ ಕಾರಣ. ಸೂರ್ಯ ಉದಯಿಸುತ್ತಲೇ ಹಕ್ಕಿ ಪಕ್ಷಿಗಳು ಸಂತೋಷದಿಂದ ಉಲಿಯುವವು. ಪ್ರಾಣಿಗಳು ಆಹಾರ ಅರಸಿಕೊಂಡು ಸುತ್ತುವವು. ಮಾನವ ಹಲವು ಕ್ರಿಯೆಗಳಲ್ಲಿ ತೊಡಗುವನು. ಒಟ್ಟಾರೆ ಜಗತ್ತಿಗೇ ಜೀವ ಬಂದಂತಾಗುವುದು. ಇಲ್ಲಿ ಮಹಾದೇವಿಯಕ್ಕನವರು ಮನಸ್ಸನ್ನು ಸೂರ್ಯನಿಗೆ ಹೋಲಿಸುವರು. ಮಾನವನ ಎಲ್ಲ ವ್ಯವಹಾರಗಳಿಗೂ ಕಾರಣ ಮನಸ್ಸು. ಅದು ಸಕಾರಾತ್ಮಕವಾಗಿ ಇಲ್ಲವೇ ನಕಾರಾತ್ಮಕವಾಗಿ ವರ್ತಿಸಬಹುದು. ಮನಸ್ಸಿನ ಮೇಲೆ ಹೊತೋಟಿ ಇದ್ದರೆ ಆ ವ್ಯಕ್ತಿ ಶರಣನಾಗಬಲ್ಲ, ಮಹಾತ್ಮನಾಗಬಲ್ಲ, ಅದ್ಭುತ ಸಾಧನೆ ಮಾಡಬಲ್ಲ. ಹತೋಟಿ ತಪ್ಪಿದರೆ ಅವನ ಸ್ಥಿತಿ ಎತ್ತರದ ಪರ್ವತದಿಂದ ಆಳವಾದ ಪ್ರಪಾತಕ್ಕೆ ತಳ್ಳಿದಂತಾಗಬಹುದು. ಅವನು ಬದುಕಿನಲ್ಲಿ ಯಾವ ಸಾಧನೆಯನ್ನೂ ಮಾಡಲಾರ. ಆತ ಹುಟ್ಟಿದ್ದಕ್ಕೂ, ಸತ್ತಿದ್ದಕ್ಕೂ ದಾಖಲೆ ಇರುವುದಿಲ್ಲ. ಮನಸ್ಸು ಲಿಂಗ ಧ್ಯಾನದಲ್ಲಿ ಲೀನವಾದರೆ ಹುಟ್ಟು ಸಾವನ್ನು ಸಹ ಮೆಟ್ಟಿ ನಿಲ್ಲಬಹುದು ಎನ್ನುವ ವಿಶ್ವಾಸ ಅಕ್ಕನದು. ಪ್ರಭುದೇವರು `ನಿರ್ಣಯವನರಿಯದ ಮನವೆ, ದುಗುಡವನಾಹಾರಗೊಂಡೆಯಲ್ಲಾ!’ ಎಂದು ಉದ್ಘಾರವೆತ್ತುವರು. ಮನಸ್ಸು ಚಂಚಲವಾಗಿದ್ದರೆ ಯಾವ ನಿರ್ಣಯವನ್ನೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕಾರಣ ಅದಕ್ಕೆ ದುಗುಡವೇ ಆಹಾರವಾಗಿರುವುದು. ಮನಸ್ಸಿಗೆ ಆಹಾರವಾಗಬೇಕಾದುದು ದುಗುಡವಲ್ಲ; ಶಾಂತಿ, ಸಮಾಧಾನ, ಸಂತೃಪ್ತಿ.

ಮನುಷ್ಯನ ಬದುಕಿನಲ್ಲಿ ಬದ್ಧತೆ ಬಹುಮುಖ್ಯ. ಬದ್ಧತೆ ಇಲ್ಲದಿದ್ದಾಗ ಆತನ ಮನದಲ್ಲಿ ಅನುಮಾನದ ಭೂತ ಹೊಕ್ಕು ಯಾವ ಕೆಲಸವನ್ನೂ ಸಮರ್ಥವಾಗಿ ಮಾಡಲಾರ. ಖಚಿತ ನಿರ್ಣಯ ತೆಗೆದುಕೊಳ್ಳುವಲ್ಲೂ ಸೋಲುವನು. ಸಕಾಲಕ್ಕೆ ಸರಿಯಾಗಿ ಯಾವ ಕಾರ್ಯಗಳನ್ನೂ ಮಾಡಲಾರ. ಅವನ ಮನಸ್ಸು ತುಂಬಾ ಗಟ್ಟಿ ಎಂದು ಕೆಲವರ ಬಗ್ಗೆ ಹೇಳುವುದುಂಟು. ಅದಕ್ಕೆ ಕಾರಣ ಆತನ ಬದ್ಧತೆ. ಏನೇ ಮಾಡಬೇಕಾದರೂ ಹಿಂದೆ ಮುಂದೆ ನೋಡುವುದಿಲ್ಲ. ತಾನು ಇಂಥ ಗುರಿಯನ್ನು ಮುಟ್ಟಬೇಕೆಂದು ಸಂಕಲ್ಪ ಮಾಡಿದರೆ ಮುಗಿಯಿತು. ಅವನ ಸಂಕಲ್ಪವನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಾಗದು. ಎಷ್ಟೋ ಜನರು ಸಂಕಲ್ಪ ಮಾಡುವಲ್ಲಿ, ಯಾವುದು ಹಿತ, ಯಾವುದು ಅಹಿತ ಎನ್ನುವ ನಿರ್ಣಯ ತೆಗೆದುಕೊಳ್ಳುವಲ್ಲೇ ಸೋಲುವರು. ಈ ಕ್ಷಣ ಮಾಡಬೇಕಾಗಿದ್ದನ್ನು ಇಂದು, ನಾಳೆ, ಮುಂದೆ ಎನ್ನುತ್ತ ಕಾಲ ತಳ್ಳುವರು. ಇದರಿಂದ ತೊಂದರೆ ತೊಡಕುಗಳು ಹೆಚ್ಚುತ್ತಲೇ ಹೋಗುವವು. ವಿದ್ಯಾರ್ಥಿ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸದೆ ಇನ್ನೂ ಪರೀಕ್ಷೆ ದೂರವಿದೆ, ಈಗಲೇ ಓದುವ ಅಗತ್ಯವಿಲ್ಲ ಎಂದುಕೊಂಡರೆ ಆತ ಶಾಲಾ–ಕಾಲೇಜಿಗೂ ಸರಿಯಾಗಿ ಹೋಗುವುದಿಲ್ಲ. ಓದು ಕನಸಿನ ಮಾತಾಗುವುದು. ಅಂಥವನು ಪರೀಕ್ಷೆಯಲ್ಲಿ ಇನ್ನೆಂತು ಪಾಸಾಗಬಲ್ಲ? ಅದಕ್ಕಾಗಿ ಮನುಷ್ಯ ಸಬಲ ಇಚ್ಛಾಶಕ್ತಿಯನ್ನು ಹೊಂದಿ ಅದನ್ನು ಸಾಧಿಸುವಲ್ಲಿ ಸತತ ಪ್ರಯತ್ನಶೀಲನಾಗಬೇಕು. ಆಗಲೇ ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯ.

ಮನಸ್ಸಿನ ಹೊಯ್ದಾಟವೇ ಆಸೆ, ಆಮಿಷ, ತಾಮಸ, ಹುಸಿ, ವಿಷಯ, ಕುಟಿಲ, ಕುಹಕ, ಕ್ರೋಧ, ಕ್ಷುದ್ರ, ಮಿಥ್ಯೆಗಳಿಗೆ ಕಾರಣವಾಗುವುದು. ಹಾಗಾಗಿ ಇವುಗಳನ್ನು ಕಳೆಯಯ್ಯಾ ಎಂದು ಮತ್ತೆ ಮತ್ತೆ ದೇವರಲ್ಲಿ ಬೇಡಿಕೊಳ್ಳುವರು ಬಸವಣ್ಣನವರು. ಹಾಗಂತ ಬಸವಣ್ಣನವರು ಈ ಎಲ್ಲ ಅವಗುಣಗಳಿಗೆ ಒಳಗಾಗಿದ್ದರು ಎಂದಲ್ಲ. ಬಸವಣ್ಣನವರದು ತಾಯಿಯ ಹೃದಯ. ಮಗು ಮಾಡುವ ಎಲ್ಲ ತಪ್ಪುಗಳನ್ನೂ ತಾಯಿ ತನ್ನ ಮೇಲೆ ಹಾಕಿಕೊಂಡು ಮಗುವನ್ನು ಸನ್ಮಾರ್ಗದೆಡೆ ಕರೆದೊಯ್ಯುವ ಕೆಲಸ ಮಾಡುವಳು. ಅದೇ ಕಾರ್ಯವನ್ನು ಬಸವಣ್ಣನವರು ತಮ್ಮ ಹಲವು ವಚನಗಳ ಮೂಲಕ ಮಾಡಿದ್ದಾರೆ. ಹಾಗಾಗಿಯೇ ಅವರು `ಎನ್ನ ತಪ್ಪು ಅನಂತ ಕೋಟಿ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ‘ ಎನ್ನುವರು. `ಮಾವಿನ ಕಾಯೊಳಗೊಂದು ಎಕ್ಕೆಯ ಕಾಯಿ‘ ನಾನೆನ್ನುವರು. ಬಹುಶಃ ಬಸವಣ್ಣನವರ ಮನಸ್ಥಿತಿ ಮಾನವರಿಗೆ ಬಂದರೆ ಅವರ ಉದ್ಧಾರ ಅಂಗೈ ನೆಲ್ಲಿಯಾಗುವುದು. ಹಾಗೆ ನೋಡಿದರೆ ಯಾರು ಯಾರನ್ನೂ ಉದ್ಧಾರ ಮಾಡಲು ಸಾಧ್ಯವಿಲ್ಲ. ಅವರವರ ಉದ್ಧಾರ ಅವರವರ ಕೈಯಲ್ಲೇ ಇದೆ. ಏಕೆಂದರೆ ಮನವರಿಯದ ಕಳ್ಳತನವಿಲ್ಲ. ನಾವೇನು ಎನ್ನುವುದು ಇನ್ನೊಬ್ಬರಿಗೆ ಗೊತ್ತಾಗದಿದ್ದರೂ ನಮ್ಮ ಮನಸ್ಸಿಗೆ ಮಾತ್ರ ಗೊತ್ತಿರುತ್ತದೆ. ಆಗಾಗ ಅದು ಎಚ್ಚರಿಸುವ ಕಾರ್ಯ ಮಾಡುವುದು. ತಪ್ಪು ಹೆಜ್ಜೆ ಇಡುವ ಸಂದರ್ಭದಲ್ಲಿ ನೀನು ಹೋಗುವ ದಾರಿ ಸರಿಯಿಲ್ಲ ಎಂದು ಸೂಚಿಸುವುದು. ಆದರೆ ಎಷ್ಟೋ ಜನರು ಈ ಸೂಚನೆಯನ್ನು ಉದಾಸೀನ ಮಾಡಿ ತಮ್ಮ ದಾರಿಯನ್ನು ತಾವು ತುಳಿಯುವರು. ಅದರಿಂದಾಗಿ ಅವರು ತಾವೇ ತಮ್ಮ ತಲೆಯ ಮೇಲೆ ಚಪ್ಪಡಿ ಎಳೆದುಕೊಳ್ಳುವರು.

ಯಾವುದೇ ಕ್ಷೇತ್ರದಲ್ಲಿ ಒಬ್ಬ ಅದ್ಭುತ ಸಾಧನೆ ಮಾಡಿದ್ದರೆ ಆತ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿದ್ದಾನೆ ಎಂದೇ ಅರ್ಥ. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವುದಾಗಲಿ, ಆಟದಲ್ಲಿ ಮೇಲೆ ಬರುವುದಾಗಲಿ, ಅಂದುಕೊಂಡದ್ದನ್ನು ಸಾಧಿಸುವಲ್ಲಾಗಲಿ ಅವನಿಗೆ ಮುಖ್ಯವಾಗಿ ಸಹಾಯ ಮಾಡುವುದು ಅವನ ಮನಸ್ಸು. ಮನಸ್ಸು ಹೇಸಿ ಮನವೂ ಹೌದು, ಸುಮನವೂ ಹೌದು. ಮನಸ್ಸು ಹತೋಟಿಯಲ್ಲಿಲ್ಲದೆ ಓತಿಯಂತೆ ಆಡುತ್ತಿದ್ದರೆ ಏಸು ಬುದ್ಧಿಯ ಹೇಳಿದರೂ ಪ್ರಯೋಜನವಾಗದು. ಅದೇ ಹೇಸಿ ಮನಸ್ಸು. ಮನಸ್ಸನ್ನು ಸುಮನವನ್ನಾಗಿ ಮಾಡಿಕೊಳ್ಳುವುದು ಆಯಾ ವ್ಯಕ್ತಿಗಳ ಸಂಸ್ಕಾರ, ಪರಿಸರ, ಪ್ರಯತ್ನವನ್ನು ಅವಲಂಬಿಸಿದೆ. ಮನಸ್ಸಿಗೂ ಒಂದು ಶಿಕ್ಷಣ ಬೇಕು. ಅದೆಂದರೆ ಇಷ್ಟಲಿಂಗ ನಿಷ್ಠೆಯನ್ನು ಬೆಳೆಸಿಕೊಳ್ಳುವುದು. ಅದನ್ನೇ ಪ್ರಭುದೇವರು ಮನವೆಂಬುದನ್ನು ಅರಿವಿನ ಮುಖಕ್ಕೊಪ್ಪಿಸಬೇಕು ಎನ್ನುವರು. ಹೌದು; ಅರಿವು ಬಹುಮುಖ್ಯ. ಅರಿವಿದ್ದಾಗ ಅನಾಚಾರ ತಾನಾಗಿ ದೂರವಾಗುವುದು. ಅರಿವು ಕೇವಲ ಬುದ್ಧಿವಂತಿಕೆ ಅಲ್ಲ. ಅದು ವಿವೇಕ. ಸುಜ್ಞಾನ. ಕರ್ಮಯೋಗಿ ಸಿದ್ಧರಾಮೇಶ್ವರರು ಕೆರೆ ಕಟ್ಟುವುದೇ ಮಹತ್ವದ ಸಾಧನೆ, ಅದೇ ಪರಮಾತ್ಮನ ಸೇವೆ ಎಂದು ತಿಳಿದಿದ್ದವರು. ಅಂಥವರ ಅರಿವಿನ ಕಣ್ಣು ತೆರೆಸುವ ಕಾರ್ಯವನ್ನು ಪ್ರಭುದೇವರು ಮಾಡುವರು.

ತನುವೆಂಬ ಏರಿಗೆ ಮನವೆಂಬ ಕಟ್ಟೆಯ ಮಾಡಿ
ಬಲಿದು ಷಡ್ವಿಧ ಭಕ್ತಿ ಎಂಬ ಸೋಪಾನದಿಂದ
ಪರಮಾನಂದವೆಂಬ ಜಲವ ತುಂಬಿ
ಕೆರೆಯ ಕಟ್ಟಬಲ್ಲವರನಾರನೂ ಕಾಣೆ!
ನಾನು ಕಟ್ಟಿದ ಕೆರೆ ಸ್ಥಿರವಾಯಿತ್ತು ಗುಹೇಶ್ವರಾ ನಿಮ್ಮಾಣೆ.

ಇಲ್ಲಿ ಪ್ರಭುದೇವರೂ ಒಂದು ಕೆರೆಯನ್ನು ಕಟ್ಟಿದ್ದಾರೆ. ಆ ಕೆರೆ ಹೊರಗೆ ಕಾಣುವಂತಹುದಲ್ಲ. ಅವರೇ ಹೇಳುವಂತೆ ದೇಹ, ಮನಸ್ಸುಗಳೇ ಆ ಕೆರೆ. ಷಡ್ವಿಧ ಭಕ್ತಿಯೇ ಮೆಟ್ಟಿಲುಗಳು. ಪರಮಾನಂದವೇ ಜಲ. ಇಂಥ ಕೆರೆಯನ್ನು ಮನುಷ್ಯ ಕಟ್ಟಿದಾಗ ಆ ಕೆರೆ ಸ್ಥಿರವಾಗಿರುವುದು ಎನ್ನುವ ಸಂದೇಶ ಮತ್ತೆ ಮತ್ತೆ ಮೆಲಕು ಹಾಕುವಂತಹುದಾಗಿದೆ. ಹೊರಗೆ ಕೆರೆ ಕಟ್ಟುವುದು ಸುಲಭ. ಒಳಗೆ ಕೆರೆ ಕಟ್ಟುವುದು ಕಷ್ಟವಾದರೂ ಅದರಿಂದ ಆಗುವ ಪ್ರಯೋಜನ ಅಪರಿಮಿತವಾದುದು. ಹಾಗಾಗಿ ಮನೆ, ಮಂದಿರ, ಮಠ ಇತ್ಯಾದಿ ಕಟ್ಟುವ ಬದಲು ಜನರ ಮನಸ್ಸುಗಳನ್ನು ಕಟ್ಟುವ ಕಾರ್ಯ ಮಾಡಬೇಕಾಗಿದೆ. ಮನಸ್ಸು ಕಟ್ಟುವ ಕ್ರಿಯೆಯಲ್ಲಿ ಯಶಸ್ವಿಯಾದರೆ ಎಂಥ ಮನೆಯನ್ನಾದರೂ ಕಟ್ಟಬಹುದು, ಮಠವನ್ನಾದರೂ ಕಟ್ಟಬಹುದು, ದೇಶವನ್ನಾದರೂ ಕಟ್ಟಬಹುದು. ಮನಸ್ಸನ್ನೇ ಕಟ್ಟದೆ ಉಳಿದವುಗಳನ್ನು ಕಟ್ಟಿದರೆ ಅವು ಮನುಷ್ಯನಿಗೆ ಸಂತೋಷ, ಸಂತೃಪ್ತಿ, ಸಮಾಧಾನ ತಂದುಕೊಡಲಾರವು. ಬಸವಾದಿ ಶಿವಶರಣರು ಕಟ್ಟಿದ್ದು ಮಠ–ಮಂದಿರಗಳನ್ನಲ್ಲ; ಅನುಭವಮಂಟಪವನ್ನು. ಅದರ ಮೂಲಕ ಅವರು ಜನರ ಮನಸ್ಸನ್ನು ಕಟ್ಟುವಲ್ಲಿ ಯಶಸ್ವಿಯಾದರು. ಆ ಕಾರಣದಿಂದಾಗಿಯೇ ಇಂದಿಗೂ ಅವರು ಜನಮನದಲ್ಲಿ ನೆಲೆಯಾಗಿರುವುದು. ಜನರು ಹೊನ್ನು ಮಾಯೆ, ಹೆಣ್ಣು ಮಾಯೆ, ಮಣ್ಣು ಮಾಯೆ ಎನ್ನುವರು. ಇದಕ್ಕೆ ಹೊರತಾದುದು ಪ್ರಭುದೇವರ ಅಭಿಪ್ರಾಯ. ಅವರು `ಮನದ ಮುಂದಣ ಆಸೆಯೇ ಮಾಯೆ‘ ಎನ್ನುವರು. ಆಸೆಯನ್ನು ಗೆದ್ದವನೇ ಈಶನಾಗುವನು. ಅದಕ್ಕೆ ಬೇಕಾದುದು ಮನೋನಿಯಂತ್ರಣ. ಅದಕ್ಕೆ ಸಹಕಾರಿ ಇಷ್ಟಲಿಂಗಾರಾಧನೆ, ಕಾಯಕ, ದಾಸೋಹ ತತ್ವಗಳು.

ಇನ್ನೇವೆನಿನ್ನೇವೆನಯ್ಯಾ?
ಎನ್ನ ಮನವೆಂಬ ಮರ್ಕಟನ ದಾಳಿ ಘನವಾಯಿತ್ತು,
ಎನ್ನ ನಿಂದಲ್ಲಿ ನಿಲ್ಲಲೀಯದು,
ಎನ್ನ ಕುಳಿತಲ್ಲಿ ಕುಳ್ಳಿರಲೀಯದು,
ಕ್ಷಣದಲ್ಲಿ ಪಾತಾಳಕ್ಕೆ ಐದುತ್ತಿದೆ,
ಕ್ಷಣದಲ್ಲಿ ಆಕಾಶಕ್ಕೆ ಐದುತ್ತಿದೆ,
ಕ್ಷಣದಲ್ಲಿ ದಿಗ್ದೆಸೆಗೆ ಐದುತ್ತಿದೆ,
ಕೂಡಲಸಂಗಮದೇವಾ
ಈ ಮನವೆಂಬ ಮರ್ಕಟನ ದಾಳಿಯನೆಂದಿಗೆ ನೀಗಿ,
ಎಂದು ನಿಮ್ಮನೊಡಗೂಡುವೆನಯ್ಯಾ.

ಲೋಕದಲ್ಲಿ ಮನವೆಂಬ ಮರ್ಕಟನ ದಾಳಿಯಿಂದಾಗಿಯೇ ಏನೆಲ್ಲ ಅನಾಹುತಗಳು ಘಟಿಸುತ್ತಲಿವೆ. ಮಂಗಗಳ ಗುಂಪು ಊರು ಸೇರಿದರೆ ತೋಟದ ಬೆಳೆ ಹಾಳಾಗುವುದು. ಮಕ್ಕಳು, ದೊಡ್ಡವರೆನ್ನದೆ ಅವರ ಮೇಲೆ ದಾಳಿ ಮಾಡುವವು. ಅವುಗಳ ಉಪಟಳ ಹೇಳತೀರದು. ಅದೇ ಕಾರ್ಯವನ್ನು ಮನಸ್ಸು ಎನ್ನುವ ಮಂಗ ಕೂಡ ಮಾಡುವುದು. ಈ ಮನವೆಂಬ ಮರ್ಕಟನ ದಾಳಿಯನ್ನು ನೀಗಬೇಕಾದರೆ ಸತ್ಸಂಗ ಬೇಕು. ದುರ್ಜನರಿಂದ ದೂರವಿರಬೇಕು. ನಾವಾಡುವ ಮಾತು, ಮಾಡುವ ಕಾರ್ಯ, ಜನರ ಒಡನಾಟ ಮನಸ್ಸನ್ನು ಅರಳಿಸಬಲ್ಲುದು, ಇಲ್ಲವೇ ಕೆರಳಿಸಬಲ್ಲುದು. ಮನಸ್ಸು ಅರಳಲು ಭಕ್ತಿಸುಭಾಷೆಯ ನುಡಿ, ಸಜ್ಜನರ ಸಂಗ, ಲಿಂಗಪೂಜೆ, ಕಾಯಕ, ದಾಸೋಹ ಅನಿವಾರ್ಯ. ಆಗಲೇ ಮನುಷ್ಯನಿಗೆ ಘನತೆ ಬರುವುದು. ಆತ ಶರಣನಾಗುವುದು. ಇದಕ್ಕೆ ವಿರುದ್ಧವಾಗಿ ಬಿರುನುಡಿಗಳನ್ನಾಡುತ್ತ, ದುರ್ಜನರ ಒಡನಾಟ ಬೆಳೆಸಿಕೊಂಡರೆ ಮನೋವಿಕಾರಗಳು ಹೆಚ್ಚಿ ಮನುಷ್ಯತ್ವ ಮರೆಯಾಗುವುದು. ಮನಸ್ಸಿನ ಕಾರಣದಿಂದಲೇ ಮನುಷ್ಯ ಮೃಗವಾಗುವುದು, ಶರಣನಾಗುವುದು. ಮಾನವ ಏನಾಗಬೇಕೆಂಬುದು ಅವನ ಮನಸ್ಸಿನ ಸಂಸ್ಕಾರವನ್ನು ಅವಲಂಬಿಸಿದೆ.

Previous post ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
Next post ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ

Related Posts

ವಚನಗಳು ಮತ್ತು ವ್ಯಕ್ತಿತ್ವ ವಿಕಸನ
Share:
Articles

ವಚನಗಳು ಮತ್ತು ವ್ಯಕ್ತಿತ್ವ ವಿಕಸನ

May 6, 2021 ಪ್ರೊ.ಸಿದ್ದು ಯಾಪಲಪರವಿ
ಮನುಷ್ಯನ ಮನಸ್ಸಿನ ಮೇಲೆ ಸಾವಿರಾರು ವರ್ಷಗಳಿಂದ ಅಧ್ಯಯನ ಸಾಗಿಯೇ ಇದೆ. ಆದರೆ ಇನ್ನೂ ನೆಲೆ ನಿಂತಿಲ್ಲ, ನಿಲ್ಲುವುದೂ ಇಲ್ಲ. ಬುದ್ಧನ ವಿಪಶ್ಶನ, ಆಯುರ್ವೇದ ಶಾಸ್ತ್ರದ ಕಾಯ...
ಕುಂಬಾರ ಲಿಂಗಾಯತರು
Share:
Articles

ಕುಂಬಾರ ಲಿಂಗಾಯತರು

April 9, 2021 Bayalu
-ಬಸವರಾಜ ಕುಂಚೂರು ಲಿಂಗವಂತ ಕುಂಬಾರರ ಎಲ್ಲ ಆಚರಣೆಗಳೂ ಮಿಕ್ಕ ಲಿಂಗವಂತರಂತೆಯೇ ಇವೆ. ಅಂದರೆ ಹೆರಿಗೆಯಾದ ಮೇಲೆ ಬಾಣಂತಿ ಮತ್ತು ಕೂಸಿಗೆ ತಿಂಗಳೊಪ್ಪತ್ತು ಬೇವಿನ ಎಲೆ ಹಾಕಿ...

Comments 13

  1. Karibasappa hanchinamani
    Jun 9, 2019 Reply

    ಶರಣನಾಗುವುದು ಹೇಗೆ ಎಂಬುದನ್ನು ಸ್ವಾಮೀಜಿ ವಿವರಿಸಿದ ರೀತಿ ಚನ್ನಾಗಿದೆ. `ಗುರುವಿಂಗೆ ತನುವ ಕೊಟ್ಟು, ಲಿಂಗಕ್ಕೆ ಮನವ ಕೊಟ್ಟು, ಜಂಗಮಕ್ಕೆ ಧನವಕೊಟ್ಟು, ಇಂತೀ ತ್ರಿವಿಧಕ್ಕೆ ತ್ರಿವಿಧವ ಕೊಟ್ಟು ನಾನು ಶುದ್ಧನಾದೆನು‘ ಇದೇ ಮೂಲ ಬುನಾದಿ ಎನಿಸುತ್ತದೆ.

  2. ವನಶ್ರೀ ಕಡಕೋಟಿ
    Jun 9, 2019 Reply

    ಮನುಷ್ಯನ ಉದ್ಧಾರ, ಅವನತಿ ಮನಸ್ಸನ್ನೇ ಅವಲಂಬಿಸಿದೆ. ಮನಸ್ಸು ಅಹಂಕಾರಕ್ಕೆ ತುತ್ತಾದರೆ ವ್ಯಕ್ತಿಯ ಅವನತಿ ಕಟ್ಟಿಟ್ಟ ಬುತ್ತಿ. ಬದಲಾಗಿ ಮನಸ್ಸನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಂಡರೆ ಅಹಂಕಾರ ಅಡಗಿ ಅದ್ಭುತ ಸಾಧನೆಯನ್ನೂ ಮಾಡಬಹುದು… ಎನ್ನುವ ಸ್ವಾಮಿಗಳ ಮಾತು ನೂರಕ್ಕೆ ನೂರು ಸತ್ಯ. ಆದರೆ ಮನಸ್ಸು ಪಳಗಿಸೋದು ಹೇಗೆ?

  3. Jayadev Jawali
    Jun 9, 2019 Reply

    ಶರಣರಲ್ಲಿ ಮನೋನಿಯಂತ್ರಣಕ್ಕೆ ಸಹಕಾರಿ ಇಷ್ಟಲಿಂಗಾರಾಧನೆ, ಕಾಯಕ, ದಾಸೋಹ ತತ್ವಗಳು ಎನ್ನುವ ಮಾತು ಅರ್ಥಪೂರ್ಣವಾಗಿದೆ. ಮನಸ್ಸನ್ನು ನಿಯಂತ್ರಿಸಿದರೆ ಆ ನಿಯಂತ್ರಣ ಕಳೆದುಕೊಳ್ಳುವ ಅಪಾಯ ಇದ್ದೇ ಇರುತ್ತದೆ. ಮನಸ್ಸನ್ನು ನಿಯಂತ್ರಿಸುವುದಕ್ಕಿಂತ ಅದನ್ನು ಉದಾತ್ತೀಕರಿಸುವುದು ಸರಿಯಾದ ಮಾರ್ಗ ಎನ್ನವುದು ನನ್ನ ಅಭಿಪ್ರಾಯ.

  4. govindappa Gawate
    Jun 10, 2019 Reply

    ಶರಣನಾಗುವುದು ಸಾಮಾನ್ಯವೇ? ನಾನು ಎನ್ನುವುದು ಕರಗಬೇಕು. ಆಟದ ವಸ್ತುವಿನಂತೆ ಇಂದು ಎಲ್ಲರನ್ನೂ ಶರಣ ಎಂದು ಕರೆಯುವುದನ್ನು ಕಂಡು ನನಗೆ ನಗು ಬರುತ್ತದೆ. ಶರಣ ಕೋಟಿಗೊಬ್ಬ ಸಿಗಬಹುದು ಅಷ್ಟೇ!

  5. Mariswamy Gowdar
    Jun 10, 2019 Reply

    ಮನಸ್ಸೇ ಇಂದ್ರಿಯಗಳಗುಲಾಮನಾದಲ್ಲಿ ಆ ವ್ಯಕ್ತಿಯನ್ನು ಯಾರೂ ಉದ್ಧಾರ ಮಾಡಲು ಸಾಧ್ಯವಿಲ್ಲ ಎನ್ನುವುದು ಎಷ್ಟು ಸತ್ಯವೋ, ಮನಸ್ಸು ಇಂದ್ರಿಯಗಳ ಗುಲಾಮನಾಗಿಯೇ ಇರುವಂತಹುದು ಎನ್ನುವುದು ಕೂಡ ಅಷ್ಟೇ ಸತ್ಯ. ಮನಸ್ಸನ್ನು ಗೆಲ್ಲುವುದು ಹೇಗೆಂಬ ವಿವರಣೆಯನ್ನು ಸ್ವಾಮಿಗಳಿಂದ ನಿರೀಕ್ಷಿಸುತ್ತೇವೆ.

  6. ನಿರ್ಮಲಾ ಪಡವೂರು
    Jun 13, 2019 Reply

    ಲೇಖನ ಚೆನ್ನಾಗಿದೆ, ಆದರೆ ಸ್ವಾಮೀಜಿ ಅವರು ವಿಷಯದ ಇನ್ನಷ್ಟು ಆಳಕ್ಕೆ ಹೋಗಿದ್ದರೆ ಚೆನ್ನಾಗಿರುತ್ತಿತ್ತು.

  7. ಫಾಲಾಕ್ಷಯ್ಯ ಬೂದಿಹಾಳ್
    Jun 16, 2019 Reply

    ಮನಸ್ಸು ಚಂಚಲ, ಕಪಿ, ಅಸ್ಥಿರ, ಸೊಣಗ, ಎಲ್ಲವೂ ಹೌದು. ಈ ಮನಸ್ಸನ್ನು ಹಿಡಿಯಲು ತಿಳಿದವನೇ ಶರಣ. ಅದನ್ನು ಹಿಡಿಯುವುದು ಹೇಗೆ? ಪಂಚೇಂದ್ರಿಯಗಳನ್ನು ಸಕಾರಾತ್ಮಕವಾಗಿ ಸದ್ಬಳಕೆ ಮಾಡಿಕೊಳ್ಳುವುದು ಹೇಗೆ? ಕಾಯಕ, ದಾಸೋಹದ ಮಾರ್ಗಗಳು ಮನಸ್ಸಿನ ಮೂಲ ಗುಣವನ್ನು ಬದಲಾಯಿಸಬಲ್ಲವೇ, ಹೇಗೆ… ಪೂಜ್ಯ ಸ್ವಾಮಿಗಳು ಈ ವಿಷಯದಲ್ಲಿ ಮಾರ್ಗ ತೋರಿಸಬೇಕು.

  8. Kashinatha shasthri
    Jun 18, 2019 Reply

    ‘ಜಂಗಮ ಎಂದರೆ ಚಲನೆಯುಳ್ಳುದು, ಅರಿವುಳ್ಳುದು. ಅರಿವು, ಆಚಾರ ಒಂದಾಗಿರುವ ಜನರೇ ಜಂಗಮ.’ ನಿಮ್ಮ ಮಾತು ನಿಜ ಗುರುಗಳೇ, ನಾವೂ ಯಾವುದೋಮೌಢ್ಯದಲ್ಲಿದ್ದೆವು. ಈಗಲೂ ಅನೇಕರು ಜಂಗಮವನ್ನು ಜಾತಿ ಎಂದೇ ತಿಳಿದಿದ್ದಾರೆ. ಶರಣರ ವಚನಗಳನ್ನು ಓದುವ ಅಭ್ಯಾಸ ಬೆಳೆಯುವವರೆಗೆ ಇಂಥ ಅಜ್ಞಾನ ಸಮಾಜದಲ್ಲಿ ಹಾಗೇ ಮುಂದುವರಿಯುತ್ತದೆ.
    ಕಾಶೀನಾಥ ಶಾಸ್ತ್ರಿ ನಂಜನಗೂಡು

  9. gowrisha mavalli
    Jun 21, 2019 Reply

    ಶರಣನಾಗುವುದು ಸರಳವಲ್ಲ, ನೀತಿ-ನಿಯಮಗಳ ಕಟ್ಟುಪಾಡುಗಳನ್ನು ನೋಡಿದರೆ ನಾವು ಶರಣರಾಗಲು ಸಾಧ್ಯವೇ? ಈ ಕಾಲದಲ್ಲಿ ಪ್ರ್ಯಾಕ್ಟಿಕಲಿ ಇದೆಲ್ಲ ನಮ್ಮಿಂದ ಸಾಧ್ಯವಾಗಬಹುದೇ? ಗುರುಗಳೇ, ನೀವೇ ದಾರಿ ತೋರಬೇಕು.

  10. ವೀರಭದ್ರಯ್ಯ ಸಾಲೀಮಠ
    Jun 24, 2019 Reply

    ಮನೋ ನಿಯಂತ್ರಣಕ್ಕೆ ಅನೇಕ ಮಾರ್ಗಗಳನ್ನು ತೋರಿಸಿಕೊಟ್ಟ ಸ್ವಾಮೀಜಿಯವರಿಗೆ ಶರಣು ಶರಣಾರ್ಥಿಗಳು

  11. Prasanna Kumar
    Jun 24, 2019 Reply

    ಚಂಚಲ ಮನಸ್ಸಿನಲ್ಲಿ ಶಾಂತಿ, ಸಮಾದಾನಗಳು ಇಲ್ಲದೆ ಹೋದರೆ ದುಗುಡ ತುಂಬಿಕೊಂಡು ಬಾಳಿನ ಬಂಡಿ ಅಪಘಾತ ಮಾಡಿಕೊಳ್ಳುತ್ತದೆ. ಮನಸ್ಸಿನ ಮೇಲೆ ನಮ್ಮ ಸಾಧನೆ ನಿಂತಿದೆ. ಸರಳ, ಸುಂದರ ಲೇಖನ.

  12. ರಾಧಾ ನಿರಂಜನ
    Jun 25, 2019 Reply

    ಶರಣನಾಗುವ ಪರಿ ಲೇಖನ ಬಹಳ ಚೆನ್ನಾಗಿ ಮೂಡಿಬಂದಿದೆ.

  13. ಪ್ರಭುದೇವ ತಪಶೆಟ್ಟಿ
    Jun 26, 2019 Reply

    ಬಸವಾದಿ ಶಿವಶರಣರುಕಟ್ಟಿದ್ದು ಮಠ–ಮಂದಿರಗಳನ್ನಲ್ಲ; ಅನುಭವಮಂಟಪವನ್ನು. ಅದರ ಮೂಲಕ ಅವರು ಜನರ ಮನಸ್ಸನ್ನು ಕಟ್ಟುವಲ್ಲಿಯಶಸ್ವಿಯಾದರು. ಆ ಕಾರಣದಿಂದಾಗಿಯೇ ಇಂದಿಗೂ ಅವರು ಜನಮನದಲ್ಲಿ ನೆಲೆಯಾಗಿರುವುದು…. ಸ್ವಾಮಿಗಳಲ್ಲಿ ನನ್ನದೊಂದು ಪ್ರಾರ್ಥನೆ, ಅವತ್ತು ಬಸವಾದಿ ಶರಣರು ಸಾಧಿಸಿದಂತೆ ಇವತ್ತೂ ಅನುಭವ ಮಂಟಪ ಕಟ್ಟುವುದು, ಶರಣರಾಗುವ ದಾರಿಯನ್ನು ತೋರಿಸುವುದು ಸಾಧ್ಯವಿಲ್ಲವೇ? ಇದರ ನಾಯಕತ್ವ ನೀವು ವಹಿಸಿಕೊಳ್ಳಬಹುದಲ್ಲವೇ?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನು ಯಾರು? ಎಂಬ ಆಳ-ನಿರಾಳ-5
ನಾನು ಯಾರು? ಎಂಬ ಆಳ-ನಿರಾಳ-5
August 2, 2020
ಪೂರ್ವಚಿಂತನೆಯಿಂದ ಕಂಡು…
ಪೂರ್ವಚಿಂತನೆಯಿಂದ ಕಂಡು…
November 7, 2020
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
April 29, 2018
ನೂರನೋದಿ ನೂರಕೇಳಿ…
ನೂರನೋದಿ ನೂರಕೇಳಿ…
April 29, 2018
ಬಯಲುಡುಗೆಯ ಬೊಂತಾದೇವಿ
ಬಯಲುಡುಗೆಯ ಬೊಂತಾದೇವಿ
February 6, 2019
ಈ ಕ್ಷಣದ ಸತ್ಯ
ಈ ಕ್ಷಣದ ಸತ್ಯ
March 12, 2022
ಒಳಗನರಿವ ಬೆಡಗು
ಒಳಗನರಿವ ಬೆಡಗು
September 10, 2022
ವಚನಗಳ ಮಹತ್ವ
ವಚನಗಳ ಮಹತ್ವ
October 5, 2021
ಸಾವಿನ ಸುತ್ತ…
ಸಾವಿನ ಸುತ್ತ…
January 8, 2023
ನದಿಯನರಸುತ್ತಾ…
ನದಿಯನರಸುತ್ತಾ…
October 6, 2020
Copyright © 2023 Bayalu